ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

ಪ್ರಿಯ ಭೂಮಿ

‘ನಾಟಕ’ ನಮ್ಮ ಇರುವಿಕೆಯ ಅಭಿವ್ಯಕ್ತಿ. ನಾಟಕವನ್ನು ನಾವು ಪಡೆದುಕೊಳ್ಳುವುದು ನಮ್ಮ ಬದುಕಿನಿಂದಲೇ. ನಾಟಕ ಮಾಡುವುದು, ಮಾಡಿಸುವುದು ನನ್ನ ಕೆಲಸವೇ ಆಗಿದ್ದರೂ ಇದಕ್ಕೆ ಬೇಕಾದ ಸಾರ, ದ್ರವ್ಯ, ಒದಗಿ ಬರುವುದು ನಮ್ಮ ಬದುಕಿನಿಂದ, ಅಲ್ಲಿನ ಅನುಭವಗಳಿಂದ, ನೆನಪುಗಳಿಂದ, ಬದುಕಿನ ಬಗೆಗಿನ ಒಳನೋಟಗಳಿಂದ ಮತ್ತು ಕಾಳಜಿಗಳಿಂದ. ಇವೆಲ್ಲವುಗಳಿಂದ ನಾವು ಕಾಣುತ್ತೇವೆ; ಕಂಡದ್ದನ್ನು ಕಾಣಿಸಲು ಪ್ರಯತ್ನಿಸುತ್ತೇವೆ. ಬದುಕಿನ ನಮ್ಮ ಹಲವು ಇರುವಿಕೆಗಳಲ್ಲಿ ರಾಜಕೀಯ ಇರುವಿಕೆಯೂ ಒಂದು. ಅದು ನಮ್ಮ ಅಸ್ಥಿತ್ವದ ಭಾಗವಾಗಿಯೇ ಇರುತ್ತದೆ.

‘ಆರ್ಯಕ’ ನಮ್ಮ ನಾಟಕದಲ್ಲಿನ ಒಂದು ಪಾತ್ರ. ಆರ್ಯಕ ಎನ್ನುವ ಗೊಲ್ಲರ ಹುಡುಗ ಉಜ್ಜಯಿನಿಯಲ್ಲಿ ಆಗುವ ರಾಜಕೀಯ ಕ್ರಾಂತಿಯ ಬಂಡುಕೋರ ನಾಯಕ. ಇವನು ತನ್ನ ಸಮಾನ ಮನಸ್ಕರೊಡಗೂಡಿ ಸಂಚು ರೂಪಿಸುತ್ತಾನೆ. ಅಲ್ಲಿನ ರಾಜ ‘ಪಾಲಕ’ ಮತ್ತು ಅವನ ಭಾವ ಮೈದುನ ‘ಶಕಾರ’ನ ದುರಾಡಳಿತ, ಮೂರ್ಖತನ, ಲೋಲುಪತೆಗಳಿಂದ ಅರಾಜಕವಾಗಿದ್ದ ರಾಜ್ಯವನ್ನು ರಕ್ಷಿಸಲು ರಾಜ ಪಾಲಕನನ್ನು ಕೊಂದು ತಾನು ರಾಜನಾಗುತ್ತಾನೆ. ತಳ ಸಮುದಾಯಗಳ ದಂಗೆಯೆಂಬಂತೆ ನಡೆದ ಈ ರಾಜಕೀಯ ಕ್ರಾಂತಿಯಲ್ಲಿ ಆರ್ಯಕನೊಂದಿಗೆ ಸೇರಿದ ಎಲ್ಲರೊಳಗೂ ಜಾಗೃತವಾದ ಪ್ರಜ್ಞೆಯಲ್ಲಿ ಪ್ರಭುತ್ವದ ಬಗೆಗಿನ ಇಡೀ ಉಜ್ಜಯಿನಿಯ ಅಸಹನೆ ಸ್ಪೋಟವಾಗುತ್ತದೆ. ಪ್ರಭುತ್ವದ ಆದರ್ಶವೆಂಬಂತೆ ಆರ್ಯಕ ರಾಜನಾಗುತ್ತಾನೆ. ಇದು ಈ ನಾಟಕದಲ್ಲಿ ಬರುವ ರಾಜಕಾರಣದ ಕಥೆ.

ನಮ್ಮ ಗ್ರಾಮ ಪಂಚಾಯಿತಿಯಿಂದ ಪ್ರಧಾನಿಯವರೆಗೂ, ವಿಕೇಂದ್ರೀಕೃತ ಕಿರು ಘಟಕಗಳಿಂದ ದೇಶದ ಲೋಕಸಭೆಯವರೆಗೂ ಪ್ರಭುತ್ವವನ್ನು ಪ್ರತಿನಿಧಿಸುವ ನಾಯಕರ ಬಗೆಗೆ ಸಮುದಾಯಗಳು ಕೆಲವು ಆದರ್ಶ ಕಲ್ಪನೆಗಳನ್ನು ಇರಿಸಿಕೊಂಡಿರುತ್ತವೆ. ಅವರವರ ಭಾವ ಭಕುತಿಗೆ, ತಿಳುವಳಿಕೆಗಳಿಗೆ ಅನುಗುಣವಾಗಿ ಇರುವ ತಾತ್ವಿಕ ಗುಂಪುಗಳೊಂದಿಗೆ ಅಥವಾ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುತ್ತವೆ. ವ್ಯಕ್ತಿಗೆ ತನ್ನ ಇರುವಿಕೆಯ ಗುರುತುಗಳಲ್ಲಿ ತಾನು ಪಾಲಿಸುವ ರಾಜಕೀಯ ನಡೆಯೂ ಒಂದು. ಪ್ರಜಾಪ್ರಭುತ್ವದಲ್ಲಿನ ಎಲ್ಲರಂತೆ ನಾವೂ ನಮ್ಮ ತಾತ್ವಿಕತೆಯನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಒಬ್ಬ ನಾಯಕನನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ.

ನಾಟಕದ ಉಜ್ಜಯಿನಿಯಲ್ಲಿದ್ದಂತೆಯೇ ನಮ್ಮೂರಿನಲ್ಲೂ ನಮ್ಮ ರಾಜಕೀಯ ನಡೆಗಳನ್ನು ಕಂಡುಕೊಳ್ಳಲು ತವಕಿಸುವ ಸಮಾನಾಸಕ್ತರ ಗುಂಪೊಂದು ಆಗಾಗ ಚರ್ಚೆ, ಕೂಟ, ಸಂವಾದಗಳನ್ನು ಮಾಡುತ್ತಿರುತ್ತದೆ. ನಮ್ಮೊಳಗೂ ಒಬ್ಬ ‘ಆರ್ಯಕ’ನಿದ್ದಾನೆ. ನಮ್ಮ ಮನೆಯ ಮೇಲಿನ ಕಛೇರಿಯಲ್ಲಿ ನಾಟಕದ ‘ರೇಭಿಲ’ನ ಮನೆಯಲ್ಲಿ ಸೇರುವಂತೆ ಇವರೆಲ್ಲರೂ ಅಲ್ಲಿ ಆಗಾಗ ಕಲೆಯುವುದುಂಟು. ಇವರಲ್ಲಿ ರೈತಸಂಘದವರು, ಡಿ.ಎಸ್.ಎಸ್‌ನವರು, ಕಾರ್ಮಿಕ ಸಂಘಟನೆಯವರು, ಅಲೆಮಾರಿ ಸಂಘಟನೆಯವರು, ಲೇಖಕರು, ಪತ್ರಕರ್ತರು, ಕವಿಗಳು, ನಾಟಕದವರೂ ಸೇರಿದಂತೆ ಪ್ರಗತಿಪರರೆಂದು ಕರೆಸಿಕೊಳ್ಳುವ ಎಲ್ಲರೂ ಅಲ್ಲಿ ಸೇರುವುದುಂಟು. ಈಗ ಆರೇಳು ವರ್ಷಗಳ ಹಿಂದೆ ಓದುವ ಹವ್ಯಾಸ, ನಾಟಕ ನೋಡುವ ಅಭಿರುಚಿಯಿಂದ ಈ ಗುಂಪಿನೊಂದಿಗೆ ಸೇರಿದ ‘ಆರ್ಯಕ’ ಈಗ ಎರಡನೇ ಸಾಲಿನ ರಾಜಕೀಯ ನಾಯಕನಾಗಿ ಬೆಳೆದಿದ್ದಾನೆ.

ಬಿಡುವಿನ ಸಂಜೆಗಳಲ್ಲಿ ನಮ್ಮ ಕಛೇರಿಯ ಮುಂದೆ ವಾಕಿಂಗ್ ಮಾಡುವ ಅಭ್ಯಾಸವುಂಟು ನಮಗೆ. ಒಂದು ದಿನ ನಾನು ಮತ್ತು ಆರ್ಯಕ ವಾಕ್ ಮಾಡುತ್ತಿದ್ದೆವು. ಹೀಗೆ ಮಾತನಾಡುತ್ತಾ ನಮ್ಮ ದೇಶದಲ್ಲಿ ಮಕ್ಕಳು, ಯುವಜನರು ಸರ್ವಾಂಗೀಣವಾಗಿ ವಿಕಾಸವಾಗುತ್ತಿರುವ ಹಂತಗಳಲ್ಲಿ ನಾವು ಅವರ ನಿಜವಾದ ಅಭಿವ್ಯಕ್ತಿ ಸಾಧ್ಯತೆಗಳನ್ನು ಗುರುತಿಸಿ ಆ ಆಯ್ಕೆಗಳಿಗೆ ದಾರಿಮಾಡಿಕೊಡುವುದರಲ್ಲಿ ಸೋತಿದ್ದೇವೆ; ಅದರಲ್ಲೂ ಮುಖ್ಯವಾಗಿ ಕುಗ್ರಾಮಗಳ ಕೇರಿಗಳಲ್ಲಿ ವಾಸಿಸುತ್ತಿರುವ ಕೌಶಲ್ಯಾಧಾರಿತ ತಳ ಸಮುದಾಯಗಳ ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗಿ ಮುಖ್ಯವಾಹಿನಿಯಿಂದ ದೂರವುಳಿಯುತ್ತಿದ್ದಾರೆ ಎಂದು ಹೇಳುತ್ತಿದ್ದೆ.

ಇದಕ್ಕೆ ಪೂರಕವಾಗಿ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ನೀನಾಸಮ್ ಹಾಗು ನಮ್ಮ ಭೂಮಿ ಸಂಸ್ಥೆಯ ಸಹಯೋಗದಲ್ಲಿ ನಡೆದ ರಂಗ ತರಬೇತಿ ಶಿಬಿರಕ್ಕೆ ಆಕಸ್ಮಿಕವಾಗಿ ಅವಕಾಶ ಪಡೆದು ಬಂದ ದಲಿತ ಕೇರಿಯ ಚಂದ್ರಶೇಖರ, ಲಕ್ಷ್ಮಣ ಹಾಗು ಚಿಕ್ಕಂದಿನಲ್ಲೆ ನಮ್ಮ ಮನೆಗೆ ಬಂದ ಜಾ಼ಹಿದಾ, ಮತ್ತು ನಮ್ಮ ಭೂಮಿ ರಂಗಶಾಲೆಯ ವಿದ್ಯಾರ್ಥಿಗಳಾದ ಶೃತಿ, ನವೀನ್ ಇವರುಗಳ ಬದುಕಿನಲ್ಲಾದ ಬಹು ದೊಡ್ಡ ಪಲ್ಲಟವನ್ನು ಕುರಿತು ಹೇಳುತ್ತಿದ್ದೆ…

ಚಂದ್ರು ರಂಗಭೂಮಿಯಲ್ಲಿ ಉನ್ನತ ಶಿಕ್ಷಣ ಪಡೆದು ಜಪಾನ್, ಜರ್ಮನಿ, ಇಂಡೋನೇಷ್ಯ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡುತ್ತಾ ಅಂತರಾಷ್ಟ್ರೀಯ ರಂಗಭೂಮಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಲಕ್ಷ್ಮಣ್ ಸಿಂಗಪೂರ್‌ನ ಅಂತರಾಷ್ಟ್ರೀಯ ವಿದ್ಯಾಲಯದಲ್ಲಿ ರಂಗಭೂಮಿಯ ಉನ್ನತ ಶಿಕ್ಷಣ ಪಡೆದು ಬೇರೆ ಬೇರೆ ದೇಶಗಳ ನಟನಟಿಯರ, ನಿರ್ದೇಶಕರ ತಂಡದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಜಾ಼ಹಿದಾ ರಂಗಭೂಮಿ ಹಾಗು ಸಮಾಜಕಾರ್ಯಗಳಲ್ಲಿ ಉನ್ನತ ಶಿಕ್ಷಣ ಪಡೆದು ‘ಜೈಲಿನಲ್ಲಿರುವ ಖೈದಿಗಳ ಮನ ಪರಿವರ್ತನೆಯಲ್ಲಿ ರಂಗಭೂಮಿಯ ಪಾತ್ರ’ ಈ ಕುರಿತು ‘ಪಿಹೆಚ್‌ಇಡಿ’ ಅಧ್ಯಯನ ಮುಗಿಸಿದ್ದಾರೆ. ಮಾವಿನತೋಪಿನ ಜವಾರಿ ಹುಡುಗಿ ಶೃತಿ ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ ದಲ್ಲಿ ತನ್ನ ಅಧ್ಯಯನ ಮುಂದುವರೆಸಿದ್ದಾರೆ. ಇಂಗ್ಲೀಷ್ ಭಾಷೆಯನ್ನು ದಕ್ಕಿಸಿಕೊಳ್ಳಲಾರದೆ ಕಾಲೇಜು ಓದನ್ನು ಅರ್ಧಕ್ಕೆ ನಿಲ್ಲಿಸಿ ನೇಕಾರಿಕೆ ಮಾಡಿಕೊಂಡು ಮನೆಮನೆಗೆ ದಿನಪತ್ರಿಕೆ ಹಾಕುತ್ತಿದ್ದ ನವೀನ್ ಈಗ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೌಶಲ್ಯಾಧಾರಿತ ತಳ ಸಮುದಾಯಗಳಿಂದ ಬಂದ ಈ ಎಲ್ಲರಿಗೂ ರಂಗಭೂಮಿಯ ಸಂಪರ್ಕದಿಂದಾದ ಅವರ ಬದುಕಿನ ‘ಟರ್ನಿಂಗ್ ಪಾಯಿಂಟ್’ ಬಗೆಗೆ ಹೆಮ್ಮೆ ಇದೆ ಎಂದು ಹೇಳುತ್ತಿದ್ದೆ.

ಈ ಎಲ್ಲರ ಹಿನ್ನೆಲೆ ಮತ್ತು ಬೆಳವಣಿಗೆಗಳನ್ನು ಕೇಳಿದ ಆರ್ಯಕನಿಗೆ ಸಂತೋಷ ಮತ್ತು ಆಶ್ಚರ್ಯಗಳೆರಡೂ ಒಟ್ಟಿಗೆ ಆದವು. ಆರ್ಥಿಕವಾಗಿ ಬೆಳೆಯುತ್ತಾ ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಾ ಅಧ್ಯಯನದಲ್ಲಿ ಇರುವ ಇವರುಗಳು ನಿಮ್ಮೊಂದಿಗೆ ಮೊದಲಿದ್ದ ಬಾಂಧವ್ಯದಲ್ಲಿಯೇ ಇದ್ದಾರೆಯೇ? ಎಂದು ಪ್ರಶ್ನಿಸಿದರು.

ರಂಗಭೂಮಿಯಲ್ಲಿ ತೊಡಗಿಕೊಂಡವರ ಬದುಕು ಅನಿಶ್ಚಿತತೆಯಿಂದ ಕೂಡಿರುತ್ತದೆ. ಸೃಜನಶೀಲವಾಗಿರಲು ನಾವು ಆಯ್ಕೆ ಮಾಡಿಕೊಂಡ ಬದುಕು ಇದು. ನಮ್ಮ ಸ್ಥಿತಿಗಳೆಲ್ಲವೂ ನಾಟಕದಲ್ಲಿನ ಸನ್ನಿವೇಶಗಳಂತೆ ಬದಲಾಗಬಹುದು. ಈ ಅರಿವೂ ಕೂಡ ನಮಗೆ ಇರುತ್ತದೆ. ಗಾಢವಾದ ಸ್ಮೃತಿಗಳಲ್ಲಿ ಬೇರುಬಿಟ್ಟಿರುವವರೆಗೂ ನಮಗೆ ಹಣ, ಅಂತಸ್ತು, ಪ್ರಭಾವಳಿಗಳಾವುವೂ ವಿಚಲಿತರನ್ನಾಗಿ ಮಾಡದು. ಅದರಲ್ಲೂ ಈ ಇಬ್ಬರು ಹುಡುಗರು ದಲಿತ ಕುಟುಂಬಗಳಲ್ಲಿನ ಬಡತನ, ಶೋಷಣೆ, ತಾರತಮ್ಯ, ಅವಮಾನಗಳ ನೋವುಂಡು ಬೆಳೆದವರು. ಇವರ ಈ ಗಾಢವಾದ ಸ್ಮೃತಿಗಳೇ ಇವರನ್ನು ಅಹಂನಿಂದ ರಕ್ಷಿಸಬಲ್ಲದು ಎಂಬ ಭರವಸೆ ಇದೆ ನನಗೆ ಎಂದು ಹೇಳಿದೆ. ಅಷ್ಟಲ್ಲದೆ ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು. ಹೀಗೆ ಜೀರ್ಣಿಸಿಕೊಳ್ಳಲು ವಿಫಲವಾಗಿ ಭ್ರಷ್ಟರಾದ ಹಲವು ಅಧಿಕಾರಿಗಳನ್ನು, ರಾಜಕಾರಣಿಗಳನ್ನೂ, ಹೋರಾಟಗಾರರನ್ನೂ ನಾವು ಚರಿತ್ರೆಯಲ್ಲಿ ಕಂಡಿದ್ದೇವೆ ಮತ್ತು ಈಗಲೂ ಕಾಣುತ್ತಿದ್ದೇವೆ ಎಂದು ಹೇಳಿದೆ.

ಹಾಗಾದರೆ; ನನ್ನ ಬಗೆಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದರು. ಈ ಪ್ರಶ್ನೆಯ ಸಂಭವನೀಯತೆಯನ್ನು ಊಹಿಸಿದ್ದ ನಾನು ‘ಇತ್ತೀಚಿನ ಏಳೆಂಟು ವರ್ಷಗಳಲ್ಲಿ ನೀವು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮತ್ತು ರಾಜಕೀಯ ಅಧಿಕಾರದಲ್ಲಿಯೂ ಸಾಕಷ್ಟು ಬೆಳೆದಿದ್ದೀರಿ. ಆದರೆ ನನಗೆಲ್ಲೂ ನಿಮ್ಮೊಳಗೆ ಆ ಭಾವ ಕಂಡಿಲ್ಲ; ಆದರೆ ಮುಂದೆ ಒದಗಿ ಬರಬಹುದಾದ ಹಣ, ಪ್ರತಿಷ್ಠೆ, ಅಧಿಕಾರದ ವಿಷಯದಲ್ಲಿ ಗೊತ್ತಿಲ್ಲ’ ಎಂದು ಹೇಳಿದೆ.

ಪ್ರಿಯ ಭೂಮಿ; ನಮ್ಮ ನಾಟಕದ ಆದರ್ಶ ನಾಯಕ ‘ಆರ್ಯಕ’ ರಾಜನಾದ ಮೇಲೆ ಮುಂದೇನು ಆಗುತ್ತಾನೆ ಎಂದು ನಾಟಕದಲ್ಲಿ ಇಲ್ಲ. ಆದರೂ ಅಂದು ನಾನು ಆರ್ಯಕನಿಗೆ ಹೇಳಬಹುದಾಗಿದ್ದ ಕೆಲವು ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.

ಅಧಿಕಾರದ ಬಯಕೆಯ ಭಾಗವಾಗಿ ರೂಪುಗೊಂಡ ಮಾನವೀಯ ಕಾಳಜಿಗಳು ದುರ್ಬಲವಾಗಿರುತ್ತವೆ. ಅವು ಮೇಲ್ಪದರದಲ್ಲಿ ತೆಳುವಾಗಿದ್ದು ದೀರ್ಘಕಾಲ ಬಾಳುವುದಿಲ್ಲ. ಆತ್ಮಶೋಧದ, ಆತ್ಮವಿಕಾಸದ ಹುಡುಕಾಟದಲ್ಲಿ ಕಂಡುಕೊಂಡ ಮಾನವೀಯ ಕಾಳಜಿಗಳು ನಾವು ಕಂಡುಕೊಂಡಷ್ಟೂ ವಿಸ್ತರಿಸುತ್ತಲೇ ಇರುತ್ತದೆ. ಮಾನವೀಯ ಕಾಳಜಿಗಳ ತೀವ್ರತೆಯು ಕ್ರಿಯೆಯಾಗುವ ಅವಕಾಶವಾಗುವಲ್ಲಿ ಮಾತ್ರ ಅಧಿಕಾರದ ಹಂಬಲ ಇರಬೇಕು. ಈ ಕಾಳಜಿಗಳು ನಮ್ಮ ನಡೆ ನುಡಿಗಳಲ್ಲಿ ವ್ಯಕ್ತವಾಗುತ್ತಿರುವವರೆಗೂ ಅಧಿಕಾರ, ಹಣ, ಪ್ರಭಾವಳಿಗಳು ನಮಗೆ ಸಮುದಾಯದ ಶಕ್ತಿಯಾಗಿ ಒದಗಿಬರುತ್ತದೆ. ಹೀಗೆ ಬಂದದ್ದನ್ನು ಸಮುದಾಯಕ್ಕೆ ಮರಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಇದೊಂದು ನೈಸರ್ಗಿಕ ಪ್ರಕ್ರಿಯೆಯಂತಾಗಬೇಕು. ಮಣ್ಣಿನಿಂದ ಪಡೆದ ಎಲ್ಲವನ್ನೂ ಗಿಡಮರಗಳು ಮಣ್ಣಿಗೆ ಮರಳಿಸುವಂತೆ.

ನನಗೆ ಇಲ್ಲಿ ನಮ್ಮ ನಾಟಕದಲ್ಲಿನ ಶರ್ವಿಲಕ ನೆನಪಾಗುತ್ತಿದ್ದಾನೆ. ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಇವನು ವೇಶ್ಯಾಗೃಹದಲ್ಲಿ ದಾಸೀವೃತ್ತಿಯಲ್ಲಿದ್ದ ಮದನಿಕೆಯಲ್ಲಿ ಅನುರಕ್ತನಾಗುತ್ತಾನೆ. ಅವಳನ್ನು ಆ ವೃತ್ತಿಯಿಂದ ಬಿಡಿಸಿಕೊಂಡು ಪತ್ನಿಯಾಗಿ ಸ್ವೀಕರಿಸುವ ಹಂಬಲದಲ್ಲಿ ಕಳ್ಳತನದಂತಹ ಕೃತ್ಯದಲ್ಲಿ ತೊಡಗುತ್ತಾನೆ. ಅವನ ಪ್ರಿಯ ಗೆಳೆಯ ಗೊಲ್ಲ ಆರ್ಯಕನು ಸೆರೆಯಲ್ಲಿರುವ ವಿಷಯ ತಿಳಿದು ಮದನಿಕೆಯನ್ನು ವರಿಸಿದ ದಿನವೇ ಅವಳನ್ನು ತನ್ನ ಸ್ನೇಹಿತ ರೇಭಿಲನ ಮನೆಯಲ್ಲಿ ಬಿಟ್ಟು, ಗೆಳೆಯ ಆರ್ಯಕನನ್ನು ಸೆರೆಯಿಂದ ಬಿಡಿಸಿ ಪಾಲಕನ ದುರಾಡಳಿತವನ್ನು ಕೊನೆಗಾಣಿಸಲು ಜನರನ್ನು ಸಂಘಟಿಸಲು ಭೂಗತನಾಗುತ್ತಾನೆ. ಪಾಲಕನನ್ನು ಕೊಂದು ಆರ್ಯಕನೆಂಬ ಗೊಲ್ಲನೊಬ್ಬನನ್ನು ಉಜ್ಜಯಿನಿಯ ರಾಜನನ್ನಾಗಿಸುವ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ.

(ಸತೀಶ್‌ ತಿಪಟೂರು)

ನಾಟಕದ ಆರ್ಯಕನಂತೆಯೇ ಸಮಾಜದ ಪರಿಗಣನೆಯಲ್ಲಿ ಮೇಲ್ಜಾತಿ, ಮೇಲ್ವರ್ಗಗಳ ಪರಿಸರದಲ್ಲಿ ಹುಟ್ಟಿ ತಳ ಸಮುದಾಯಗಳ ನೋವು, ಶೋಷಣೆ, ಅಸಮಾನತೆಗಳನ್ನು ತಮ್ಮದೇ ಎಂದು ತೀವ್ರವಾಗಿ ಭಾವಿಸಿದವರು ನಮ್ಮ ನಡುವೆ ಇದ್ದಾರೆ. ಇವರು ಹಲವು ಶತಮಾನಗಳಿಂದ ಮೇಲ್ವರ್ಗಗಳು ಪ್ರಭುತ್ವದಲ್ಲಿನ ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ರೂಪಿಸಿರುವ ಸಾಮಾಜಿಕ ರಚನೆಗಳನ್ನು, ಮತ್ತು ಅವು ಕಾಲಕಾಲಕ್ಕೆ ರೂಪಾಂತರಿಸಿಕೊಳ್ಳುವ ಶೋಷಣೆಯ ಮಾದರಿಗಳನ್ನು ಅರಿತು ಶೋಷಿತ ಸಮುದಾಯಗಳ ಪರವಾಗಿ ನಿಂತು ಹೋರಾಟಗಳನ್ನು ಮಾಡಿದವರು. ಇವರೆಲ್ಲರೂ ಸಮುದಾಯಗಳ ನೋವು-ನಲಿವುಗಳಲ್ಲಿ ಬೆರೆತು ಮಾನವೀಯ ಕಾಳಜಿಗಳನ್ನು ವಿಸ್ತರಿಸುತ್ತಲೇ ತಮ್ಮ ಗುರುತುಗಳನ್ನು ಕಳಚಿಕೊಂಡು ಅಂತಃಸತ್ವವನ್ನು ಪಡೆದವರು.

ಅಂತಃಸತ್ವವನ್ನು ಪಡೆದುಕೊಳ್ಳುವುದು ಬದುಕಿನುದ್ದಕ್ಕೂ ಇರುವ ಪ್ರಕ್ರಿಯೆ. ಹೀಗೆ ಸಮುದಾಯ ಕಾಳಜಿಗಳ ಚಳುವಳಿ, ಹೋರಾಟ, ತಾತ್ವಿಕ ಜಿಜ್ಞಾಸೆ, ಸಂಘಟನೆ, ಕಲೆ, ರಾಜಕೀಯ ಮುಂತಾಗಿ ಸಮಾಜ ಸುಧಾರಣೆಯ ಕನಸುಗಳನ್ನು ಹೊತ್ತ ಅನೇಕರು ಕಾಲಕಾಲಕ್ಕೆ ಬರುತ್ತಲೇ ಇರುತ್ತಾರೆ. ಇವರಲ್ಲಿ ಕೆಲವರು ಬದುಕು ಒಡ್ಡುವ ಪ್ರಲೋಭನೆಗಳಿಗೆ ತಮ್ಮ ಅಂತಸತ್ವವನ್ನು ಬಿಟ್ಟುಕೊಟ್ಟವರು. ಇನ್ನೂ ಕೆಲವರು ತಮ್ಮ ಹೋರಾಟಗಳಿಂದ ಪಡೆದ ಅಧಿಕಾರ, ಪ್ರತಿಷ್ಠೆ, ಪ್ರಭಾವಳಿಗಳಲ್ಲಿ ಮತ್ತು ಅನಾಯಾಸವಾಗಿ ಹರಿದು ಬರುವ ಹಣಕ್ಕೆ ತಮ್ಮ ಕಾಳಜಿಗಳನ್ನು ಮಾರಿಕೊಂಡವರು. ಮತ್ತೆ ಕೆಲವರು ತಮ್ಮ ಚಳುವಳಿ ಹೋರಾಟಗಳು ಕಾಲದಿಂದ ಕಾಲಕ್ಕೆ ಪಡೆದುಕೊಳ್ಳಬೇಕಾದ ದೂರ ದೃಷ್ಠಿ, ಆಯಾಮಗಳ ಕೊರತೆಯಲ್ಲಿ ಹಿಂದುಳಿದು ತಮ್ಮ ನಡೆನುಡಿಗಳಲ್ಲಿ ಏಕತಾನತೆ ಅನುಭವಿಸುತ್ತಿರುವವರು. ಈ ಎಲ್ಲವನ್ನೂ ದಾಟಿಕೊಳ್ಳಬಲ್ಲ ಅಂತಃಸತ್ವವುಳ್ಳ ನಾಯಕರು ಮಾತ್ರ ಅಧಿಕಾರದ ಸಂಭವನೀಯತೆಯು ಹತ್ತಿರಾದಂತೆಲ್ಲಾ ತಮ್ಮ ನಡೆನುಡಿಗಳಲ್ಲಿ (ಧ್ವನಿ, ದೇಹ, ಚಹರೆಗಳ ಭಾಷೆಗಳಲ್ಲಿ) ಆಗಬಹುದಾದ ಅಸಹಜ ಬದಲಾವಣೆಗಳ ಬಗೆಗೆ ಎಚ್ಚರವಹಿಸಬಲ್ಲರು ಮತ್ತು ಆಯಾ ಕಾಲದ ಮಾನವೀಯ ಕಾಳಜಿಗಳನ್ನು ಧಾರಣೆ ಮಾಡಿಕೊಳ್ಳುತ್ತಾ ತಮಗೆ ಒದಗಿ ಬಂದ ಅಧಿಕಾರದ ಫಲವನ್ನು ಸಮುದಾಯಕ್ಕೆ ಮರಳಿಸಬಲ್ಲರು.


ಇಂತಹ ಸನ್ನಿವೇಶಗಳಲೆಲ್ಲಾ ನಾಟಕದಲ್ಲಿನ ಪಾತ್ರಗಳು ನಮ್ಮ ಬದುಕಿನ ಭಾಗವಾಗಿ ಅರಳಿಕೊಳ್ಳುವ ಬಗೆ ಮತ್ತು ಬದುಕಿನಲ್ಲಿ ಕಂಡುಕೊಂಡ ಸತ್ಯಗಳು ನಾಟಕದಲ್ಲಿನ ಪಾತ್ರ ಪ್ರಜ್ಞೆಯನ್ನು ಅರಿಯುವಲ್ಲಿ ಸಹಕರಿಸುವ ಬಗೆ; ಈ ಬದುಕು ನಾಟಕಗಳೆರಡು ಒಂದಕ್ಕೊಂದು ಕನ್ನಡಿಯಾಗುವ ಈ ಪ್ರಕ್ರಿಯೆಯ ಬಗೆಯೇ ಸೋಜಿಗವೆನಿಸುತ್ತದೆ.