Advertisement
ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ

ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ

ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ‌ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ. ಇದ್ನೆಲ್ಲಾ ನಿಭಾಯ್ಸಾಕೆ ಏಳೂರುಗ್ಳ ಮುಖ್ಯಸ್ಥರೂ ಇರಾ ಕಮಿಟಿ ಇರ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

ನಮ್ಮೂರ್ನಾಗೆ ಅಂಗೇ ಸುತ್ತೂರುಗ್ಳಾಗೆ ನಡೀತಿದ್ದ ಪರಿಸೆಗೋಳು ಬೋ ಖುಸಿ ಕೊಡ್ತಿದ್ವು. ನಾವೂ ಪರಿಸೇ ಅಂದ್ರೆ ಸಾಕು ಥಕತೈ ಅಂಬ್ತಿದ್ವಿ. ಬೆಂಡು ಬತ್ತಾಸು, ಬಣ್ಣಬಣ್ಣುದ್ ಟೇಪು, ಬಳೆ, ಬೊಂಬಾಯಿ ಮಿಠಾಯಿ, ಅಜ್ಜಿ ಕೂರ್ಲು, ಪಾಡೂ ಪರದೇಸೀ ತಿಂಡಿ ತೀರ್ಥ ಸಿಕ್ತಿತ್ತು. ಗೆಳತೀರ್ ಕೂಟಾ ಹೊಸಬಟ್ಟೆ ಹಾಕ್ಕಂಡು(ಇದ್ದಿದ್ದರಾಗೆ ಹೊಸವು ಆಟೇಯಾ. ಹೊಸಾದೇನೂ ಹೊಲುಸ್ತಿರ್ಲಿಲ್ಲ ಬುಡಿ) ಮೆರೆದಾಡೊ ಐನಾತಿ ಭಾಗ್ಯೇವು ಪಾಲಿಗೆ ಬತ್ತಿತ್ತಲ್ಲ ಅದ್ಕೇಯಾ. ನಮ್ಮೂರ್ನಾಗೆ ನಡಿಯಾ ದೊಡ್ಡ ಪರಿಸೆ ಕದಿರಪ್ಪನ ಪರಿಸೆ. ಅದ್ರ ಕತೇನೆಲ್ಲಾ ಆಲೇ ಬಲ್ ಇವರವಾಗಿ(ವಿವರ) ಬರ್ದಿವ್ನಿ. ಇನ್ನಾ ಮೊಹರಂ ಹಬ್ದಾಗೆ ನಡಿಯಾ ಬಾಬಯ್ಯನ ಪರಿಸೆ ಕತೇನೂ ಆಲೇ ಯೋಳಿವ್ನಿ. ಇನ್ನಾ ಉಳ್ದಿರಾ ನಾಕೈದು ಪರಿಸೇ ಇಸ್ಯಾವಾ ಒಟ್ಗೇನೆ ಈಗ್ ಯೋಳ್ತಿವ್ನಿ.

ಕಾಟುಮಲಿಂಗೇಶ್ವರ ಪರಿಸೆ

ಇನ್ನೇನು ಸಿವರಾತ್ರಿ ಅತ್ರ ಬರ್ತಾ ಐತಲ್ಲ ಅದ್ಕೇ ಮದ್ಲು ಸಿವರಾತ್ರಿ ಪರಿಸೇನೇ ಯೋಳ್ ಬುಡ್ತೀನಿ. ನಮ್ಮೂರು ಮಗ್ಗುಲಾಗಿರೋ ಕೊಂಡವಾಡಿನಾಗೆ ಬಂಗಾರು ಕಾಟುಮಲಿಂಗೇಶ್ವರ ಗುಡಿ ಐತೆ. ತಾತರಾಯನ ಕಾಲ್ದಾಗೆ ಯಾರೋ ಪುಣ್ಯಾತ್ಮುರು ಬಂಗಾರುದ್ದ ಕವಚ ಮಾಡ್ಸಿ ಹಾಕ್ಸೌರೆ. ಅಲ್ಲಿ ಎಲ್ಡು ಕಾಟುಮ ಲಿಂಗೇಸ್ವರುಂದು ಗುಡಿಗ್ಳು ಅವ್ವೆ. ಅದೆಂಗಪ್ಪಾ ಆಯ್ತು ಅಂತಂತಂದ್ರೆ ಊರಾಚೆ ಇರಾ ಗುಡಿ ಮೂಲುದ್ದು. ಅಲ್ಲಿ ಮದ್ಲಿಗೆ ಒಂದು ಮನೆ ಇತ್ತಂತೆ. ಆ ಮನೆನಾಗಿರಾ ಒಬ್ಳು ಹೆಂಗ್ಸು ಮಜ್ಜಿಗೆ ಕಡೀತಾ ಇದ್ಲಂತೆ. ಇದ್ಕಿದ್ದಂಗೇಯಾ ಮಜ್ಜಿಗೆ ಅರವಿ ಕೆಳೀಕ್ ವಾಲ್ಕಂತಂತೆ. ಇದ್ಯಾಕಿಂಗಾಯ್ತು ಅಂಬ್ತ ಇಚಾರ್ಸಿದ್ದುಕ್ಕೆ ಅಲ್ಲಿ ನೆಲ್ದಾಗೆ‌ ಕಾಟುಮರಾಯ ಹುಟ್ಟೌನೆ ಅಂಬ್ತ ಬಂತಂತೆ. ಆಮ್ಯಾಕೆ ನೋಡೀರೆ ಲಿಂಗುದ್ ರೂಪ್ದಾಗೆ ಕಾಟುಮರಾಯ ಹುಟ್ಕಂಡಿದ್ದ. ಅಲ್ಲೆ ಒಂದು ಗುಡೀ ಮಾಡಿದ್ರು. ಇಂಗೇ ನಡೀತಾ ಇರ್ಬೇಕಾರೆ ಯಾರೋ ಬಂಗಾರುದ್ದ ಕವಚಾನೂ ಮಾಡ್ಸುದ್ರು.‌ ಊರು ಬೆಳ್ದಂಗೇಯಾ ಆ ಗುಡೀ ಊರಾಚೇಗಾಯ್ತು. ಮದ್ಲೇ ಬಂಗಾರುದ್ದು ಕಾಟುಮಲಿಂಗೇಶ್ವರ. ಅದ್ನ ಕಾಪಾಡಾದೆಂಗೆ ಅಂಬ್ತ ಜನುಕ್ಕೆ ದಿಗಿಲು ಹತ್ಕಂತು. ಏನಾರಾ ಹೆಚ್ಚೂ ಕಮ್ಮಿ ಆದ್ರೆ ಊರೂರ್ಗೇ ಕೇಡಾಯ್ತದೆ. ಇಚಾರಾ ಮಾಡಿ ಊರಿನ್ ನಡೂಮಧ್ಯದಾಗೆ ಇನ್ನೊಂದು ಸಣ್ದು ಗುಡೀಯಾ ಕಟ್ಟಿದ್ರು. ಬಂಗಾರುದ್ ಲಿಂಗಾನಾ ತಕಾಬಂದು ಅಲ್ಲಿ ಮಡಗುದ್ರು. ವರ್ಸದಾಗೆ ಎರಡೆ ಕಿತ ಆ ಬಂಗಾರುದ್ ಲಿಂಗ್ವ ತಕಂಡೋಗಿ ಊರಾಚೇನಾಗಿರಾ ದೊಡ್ಡ ಗುಡೀಲಿಕ್ಕಿ ಪೂಜೆ ಗೀಜೆ ಮಾಡಿ ವಾಪ್ಸು ತಕಾಬಂದು ಇಲ್ಲೇ ಇಕ್ತಾರೆ. ಬ್ಯಾರೆ ದಿನುಗ್ಳಾಗೆ ಜನ್ವೆಲ್ಲಾ ಮೂಲುದ್ ಗುಡೀಗೆ ವಾಗಾದು. ಅಲ್ಲೇ ನಿತ್ಯ ಪೂಜೆ ಸುತ ನಡೀತೈತೆ. ಸುತ್ತಾ ಏಳು ಊರುಗ್ಳಾಗೆ ಈ ಕಾಟುಮಲಿಂಗೇಸ್ವರನ ಒಕ್ಕಲು ಅವ್ರೆ.‌ ಅದೆಂಗೋ ಬರೇ ನಾಯಕರು (ನಾಯಕ ಜನಾಂಗ) ಮಾತ್ರ ಈ ದ್ಯಾವ್ರ ಒಕ್ಕಲು. ಅದ್ರಾಗೂ ನಮ್ಮೂರ್ನಾಗೇ ಹತ್ರತ್ರ ನೂರಿಪ್ಪತ್ತು ಮನೆಗ್ಳು ಒಕ್ಕಲು ಮನೇತನದವು. ಬ್ಯಾರೇ ಊರುಗ್ಳಾಗೆ ಆಟು ಮನೆ ಇಲ್ಲ.

ಈ ಪರಿಸೇಗೆ ಬಲ್ ದೊಡ್ಡ ಇಸ್ಯಾ ಅಂದ್ರೆ ಹುವ್ವಿನ ಪುಟಿಗೆ(ಪುಟ್ಟಿ, ಬುಟ್ಟಿ, ಗಂಪ ಬಿದಿರ್ನಾಗೆ ಮಾಡಿರ್ತಾರೆ) ಎಲ್ಲಾ ಊರಿಂದ್ಲೂ ಹೊಂಡಬೇಕು(ಹೊರಡಬೇಕು). ನಾಗಮ್ಮ ಇದ್ದಾಗ ಆಟೂ ಜನ್ರ ಪರ್ವಾಗಿ ಬುಟ್ಟಿ ಹೊತ್ಕಂಡು ಹೋಗ್ತಿದ್ಲು. ಈಗ್ಲೂ ಅವ್ರ ಮನೆತನದವ್ರೇ ಬುಟ್ಟಿ ಹೊರ್ಬೇಕು. ನಮ್ಮೂರಿನ ಒಕ್ಕಲ ಪರವಾಗಿ ನಾಗಮ್ಮ‌ ಹೊತ್ಕೋ ಓಯ್ತಿದ್ರೆ ಹಿಂದ್ಲ ನಾಕೈದು ಹಿರೇ ತಲೇಗ್ಳು ಹೋಗ್ತಿದ್ವು.

ಸಿವರಾತ್ರಿ ಟೇಮ್ನಾಗೆ ಮೂರು ದಿಸ ಪರಿಸೆ

ಸಿವರಾತ್ರಿ ದಿಸ ಉಪಾಸ ಇರ್ತಾರೆ. ನಮ್ ನಾಗಮ್ಮನ(ನಾಗಮ್ಮಜ್ಜಿ) ಕಾಲದಾಗೆ ನಿಟ್ಟುಪವಾಸ ಇರ್ತಿದ್ರು. ಈಗ್ಲೂ ಭಯುಕ್ಕೆ ಮನ್ಯಾಗಿರಾ ದೊಡ್ಡೋರು ಮಾತ್ರ ಉಪಾಸ ಇರ್ತಾರೆ. ಮಕ್ಳು ಮರಿ ಇರಾಕಿಲ್ಲ. ಅವ್ರವ್ರ ಶಕ್ತಿಗೆ ತಕ್ನಂಗೆ ಉಪಾಸ ನಡೀತೈತೆ. ನಿಟ್ಟುಪವಾಸ ಮಾಡಾರು ಒಂದ್ ಕಡೀಕ್ಕಾದ್ರೆ, ತಂಬಿಟ್ಟು ಬಾಳೇಹಣ್ಣಿನ ರಸಾಯ್ನ ತಿನ್ ಕಂಡು ಮಾಡಾರು… ಹಿಂಗೇ ಅವುರ್ಗೆ ಬಿಟ್ಟಂಗೆ. ಅದೂ ಒಂದೂವರೆ ದಿಸ ಉಪ್ವಾಸ ಇರ್ಬೇಕು. ಬೋ ಕಷ್ಟಾನೇಯಾ. ಕೊನೇ ಪಕ್ಸುಕ್ಕೆ ಮನೆಗೆ ಒಬ್ರಾನಾ ಉಪಾಸ ಇರಾಕೇ ಬೇಕು.

ಸಿವರಾತ್ರಿ ಮಾರನೇ ದಿನ ಮದ್ಯಾನ ಮೂರು ನಾಕು ಗಂಟೆ ಅಂಗೆ ಹುವ್ವಿನ ಪುಟ್ಟಿ ಹೊಂಡುತೈತೆ. ಅದ್ರಾಗೆ ಅಡಿಕೆ ಹೊಂಬಾಳೆನಾಗ ಕಳಶ ಇಕ್ತಾರೆ. ಇದ್ಕೆ ಗುಡಿಕಟ್ಟು ಅಂಬ್ತಾಲೂ ಕರೀತಾರೆ. ಮನೆ ಮಂದಿ ಅಂಗೇಯಾ ಊರಿನ ಒಕ್ಕಲು ಮಕ್ಕಳು ಪೂಜೆ ಮಾಡಿ ಕಳುಸ್ ಕೊಡ್ತಾರೆ. ಹುವ್ವಿ‌ನ ಬುಟ್ಟಿನಾ ಊರಾಚೇಗಂಟ ಸಾಗಾಕಿ ಬಂದು ಉಪಾಸ ಮುರೀತಾರೆ. ನಾಕೈದು ಹಿರೇ ತಲೇಗ್ಳು ಅದ್ರಿಂದ್ಲೇ ಹೋಯ್ತಾರೆ. ಅವುರ್ನ ಬುಟ್ಟಿ ಉಳ್ದೋರು ಹೊಟ್ಟೇಗಾಕ್ಕಂತಾರೆ. ಉಂಡಾದ್ ಮ್ಯಾಗೆ ಸಂಜೇ ಹೊತ್ಗೆ ಇವ್ರೂ ನಡ್ಕಂಡೋಗಿ ಕೊಂಡಾಪ್ರ(ಕೊಂಡಾಪುರ) ಸೇರ್ಕಂತಾರೆ. ನಮ್ಮೂರಿಂದ ಒಂದು ನಾಕು‌ ಕಿಲೋಮೀಟ್ರು ಆತೈತೇನೋಪ್ಪ. ಉಪಾಸಾ ಇರೋರು ಒಂದೂವರೆ ದಿಸ ಉಪಾಸ್ವಿದ್ದೂ ಆಸು ದೂರ ಅಂಗೇ ನಡ್ಕೋ ಓಯ್ತಾರೆ.

ಸಿವರಾತ್ರಿ ಮಾರ್ನೇ ದಿಸ ಜಾಗರ್ಣೆ ಮಾಡಾ ಇಚಿತ್ರ

ಇಂಗೇ ಏಳು ಊರಾಗ್ಳಿಂದ ಒನ್ನೊಂದು ಹುವ್ವಿನ ಪುಟ್ಟಿ ಬಂದ್ ಸೇರ್ತೈತೆ. ಊರಿನ್ ಮಧ್ಯದಾಗಿರಾ ಬಂಗಾರುದ್ ಕಾಟುಮಲಿಂಗೇಶ್ವರ ಗುಡೀ ತಾವ್ಕೆ ಪರಿಸೆ ನೆರೀತಾರೆ.

ಎಲ್ಲಾ ಆದ್ ಮ್ಯಾಗೆ ರಾತ್ರೆ ಒಂಬತ್ತು ಹತ್ತು ಗಂಟೆ ಹೊತ್ಗೆ ಅಲ್ಲಿಂದ ಬಂಗಾರುದ್ ವಿಗ್ರಹ ತಕಂಡಿ ಹುವ್ವಿನ ಪುಟ್ಟಿ(ಗುಡಿಕಟ್ಟು) ಹೊತ್ಕಂಡಿ, ಏಳೂರ್ಲ (ಊರುಗಳ) ಜನ ಮೆರವಣಿಗೆ ಹೊಂಟು ಊರಾಚೇನಾಗಿರಾ ಗುಡಿ ಸೇರ್ಕಂತಾರೆ. ಆ ಗುಡಿಗೂ ಈ ಗುಡಿಗೂ ಸ್ಯಾನೇ ದೂರ್ವೇನಿಲ್ಲ. ಒಂದು ಕಿಲೋಮೀಟ್ರು ದೆಕ್ಲು ಆತೈತೋ ಇಲ್ವೋ ಕಾಣೆ. ಆದ್ರೂ ಇಡೀ ರಾತ್ರೆ ಮೆರೋಣ್ಗೆ(ಮೆರವಣಿಗೆ) ನಡೀತಾಲೇ ಇರ್ತೈತೆ. ಹೊತ್ತು ಹುಟ್ಟಿದ್ ಮ್ಯಾಗೇ ಅಂದ್ರೆ ಸೂರಪ್ಪ ಆಕಾಸ್ದಾಗೆ ಕಣ್ ಬುಟ್ ಮ್ಯಾಗೇಯಾ ಆ ಗುಡೀ ತಲುಪ್ ಬೇಕು. ಇಂಗೇ ರಾತ್ರಿ ಪೂರ್ತಿ ಜಾಗರ್ಣೆ ನಡೀತೈತೆ. ರಾತ್ರೇನಾಗೆ ದ್ಯಾವ್ರನ್ನ ಕರ್ಕೋ ಓಗೋಕೆ ಬೆಳಕು ಎಲ್ಲಿಂದ ತಂದೀರಿ. ಆಗಿನ್ ಕಾಲ್ದಾಗೆ ಬೀದಿ ದೀಪ ಇರ್ಲಿಲ್ಲ. ಬುಡ್ಡಿ ದೀಪ ಇತ್ತು. ಆದ್ರೂ ದ್ಯಾವ್ರಿಗೇ ಬುಡ್ಡೀ ದೀಪ್ದಾಗೆ ಕರ್ಕೋ ಓಗಾಕೆ ಆಯ್ತದಾ? ಇಸೇಸ ಬ್ಯಾಡ್ವೇ? ಅದ್ಕೇಯಾ ಒಂದು ಉದ್ದುದ್ ಮೊಳೇಗೆ ಒಣಗಿರಾ ಕೊಬ್ಬರಿ ಬಟ್ಲ ಸಿಕ್ಸಿ ಬೆಂಕಿ ಹಚ್ಚಿ, ಅದ್ನ ಸುಟ್ಕಂತಾ ಅದ್ರ ಬೆಳಕ್ನಾಗೇ ದ್ಯಾವ್ರ ಮೆರೋಣಿಗೆ ಸಾಗ್ತೈತೆ. ಈಗೀಗ ಬೀದಿ ದೀಪ್ಗೋಳೂ ಅವ್ವೆ. ಜತೇಗೆ ದ್ಯಾವರಿಗೇಂತಾಲೇ ವಿಸೇಸವಾಗಿ ಸೀರಿಯಲ್ ಲೈಟ್ ಗೋಳ್ನೂ ಹಾಕುಸ್ತಾರೆ. ಆದ್ರೂ ಆ ಕಾಲ್ದಿಂದ ಬಂದಿರಾ ಸಂಪ್ರದಾಯ್ವ ಬಿಡಾಕಾಯ್ತದೇ ಅಂತ ಕೊಬ್ರಿನೂ ಸುಟ್ಟು ಆ ಬೆಳುಕ್ನೂ ದ್ಯಾವ್ರ ಮಕಕ್ಕೆ ಹಿಡೀತಾರೆ. ಜತ್ಗೇಯಾ ಒಂದೂರ್ಗೆ ಎಲ್ಡು ಅರೆ ಮತ್ತೀಗ ಒಂದು ತಮಟೆ ಸೈತ ಅಲ್ಲಿಗೆ ಹೋಗ್ಬೇಕು.

ಹಿತ್ತಾಳೆ ಅರೆ ಹೊಡ್ಕಂಡು, ತಮಟೆ ಬಡ್ಕಂಡು ಬರಾ ಹೊಲೇರ ಜನಾಂಗದವ್ರೂ ಪರಿಸೇನಾಗೆ ಬೋ ಮುಖ್ಯ. ಅದು ಕಡ್ಡಾಯವಾಗಿ ಇರ್ಲಿಕ್ಕೇ ಬ್ಯಾಕು. ಏಳೂರುಗ್ಳ ಅರೆ ತಮಟೆ ಹುವ್ವಿನ ಬುಟ್ಟಿ ಜತ್ಗೆ ಮೆರವಣಿಗೆ ಸಾಗ್ತೈತೆ. ಒನ್ನೊಂದೇ ಹೆಜ್ಜೆ ಇಕ್ಬೇಕು. ಹೆಜ್ಜೆ ಹೆಜ್ಜೇಗೂ ಅಗುಸ್ರು(ಅಗಸರು) ನಡೆಮುಡಿ ಹಾಸ್ತಾರೆ. ಮಡಿ ಮಾಡಿರಾ ಬಿಳೇ ಪಂಚೆ ಹಾಸುದ್ರೆ ಅದ್ರ ಮ್ಯಾಗೇ ನಡೀಬೇಕು. ಒನ್ನೊಂದೇ ಹೆಜ್ಜೆ ಇಕ್ಕಂಡು ಬರಾ ಹೊತ್ಗೆ ಬೆಳಗಾನಾ ಆಗ್ತೈತೆ. ಅದ್ರಾಗೂ ಕಾಯ್ಲೆ ಕಸಾಲೆ ಆದಾಗ ಮೊಕ್ಕೊಂಡಿರ್ತಾರಲ್ಲ(ಹರಕೆ ಹೊತ್ತವರು, ಮೊಕ್ಕು ಮಾಡ್ಕಂಡವರು) ಅವ್ರೂ ದ್ಯಾವ್ರ ಅಡೀಗೆ ತೂರ್ತಾ, ಹೊರಳ್ತಾ ಬತ್ತಾರೆ. ಇಂಗಾಗಿ ಮೆರವಣಿಗೆ ಬಲ್ ನಿದಾನುಕ್ಕೆ ಮುಂದ್ಕೋಗ್ತೈತೆ. ರಾತ್ರೆ ಒಂಬತ್ತು ಹತ್ತು ಗಂಟೇಗೆ ಸುರು ಆದ್ರೆ ಬೆಳ್ಗೆ ಐದು ಆರು ಗಂಟೆ ಹೊತ್ಗೆ ಗುಡೀ ಸೇರ್ತೈತೆ. ರಾತ್ರೆ ಪೂರ್ತಿ ಜಾಗರಣೇಯಾ. ನಮ್ಮೂರಿನ್ ಜಾತ್ರೆ ಇಸೇಸ ಅದೇಯಾ. ಸಿವರಾತ್ರಿ ಮಾರನೇ ದಿಸ ಜಾಗರಣೆ. ಸಿವರಾತ್ರಿ ದಿಸ ಸುರು ಆಗಾ ಪರಿಸೆ ಖುಸಿ ಎರುಡ್ನೇ ದಿಸಾನೂ ನಡ್ದು, ಮೂರ್ನೇ ದಿಸ ಮುಕ್ತಾಯ ಆಗ್ತೈತೆ. ಬೆಳುಗ್ಗೆ ಗುಡೀ ಸೇರಿದ್ ಮ್ಯಾಕೆ ಪೂಜೆ ನಡ್ದು, ಥೇಟ್ ನಮ್ ಕದರಪ್ಪನ ಪರಿಸೇ ತರುಕ್ಕೇ ನಡೀತೈತೆ. ನೂರೊಂದು ಎಡೆ, ಬೂತಪ್ಪಗಳ ಕುಣ್ತ, ದಾಸಪ್ಪಗಳ ಶಂಖ ಊದಾಟ ನಡೀತೈತೆ. ಅಲ್ಲೇ ಸಮಾರಾಧ್ನೆ ಊಟಾನೂ ಆಗ್ತೈತೆ.

ಸಿವರಾತ್ರಿ ಪೆಸಲ್ ತಂಬಿಟ್ಟು

ಅಕ್ಕಿ ಹಿಟ್ನಾಗೆ ತಂಬಿಟ್ಟು ಮಾಡ್ತಾರೆ. ಬೆಲ್ಲದ್ ಪಾಕ ಹಿಡ್ದು, ಕಳ್ಳೆಪಪ್ಪು ಕಳ್ಳೆಬೀಜ, ಎಳ್ಳು, ಒಣಕೊಬ್ರಿ ಹಾಕಿ ಗಟ್ಟಿಯಾಗಿ ಉಂಡೆ ಕಟ್ಟುದ್ರೆ ಅದ್ನ ಕಡ್ಕಂಡು ತಿಂಬಾಕೆ ಆಗ್ದು. ಹಲ್ಲು ಉದುರೋಗ್ತವೆ. ಆದ್ರೂ ಸುತ ಆಗಿನ್ ಕಾಲ್ದಾಗೆ ಹಲ್ಲಾಗೇ ಕಡ್ದು ತುಂಡು ಮಾಡ್ಕಂಡು ತಿಂಬ್ತಿದ್ರಂತೆ. ಈಗ ಆಗವಲ್ದು. ಕಲ್ನಾಗೆ ಕುಟ್ಟಿ ಸಣ್ಣ ಚೂರು ಮಾಡ್ಕಂಡು ಚಪ್ಪರಿಸ್ಕಂಡು ತಿಂತಿದ್ವಿ. ಸಿವರಾತ್ರಿ ಯಾವಾಗ್ ಬತ್ತೈತೋ ಅಂಬ್ತ ಕಾಯ್ಕಂಡಿದ್ದು, ನಾಗಮ್ಮನ ಮನೇತಾವ್ಕೆ ಓಡೋಯ್ತಿದ್ದೆ. ದ್ಯಾವ್ರ ಮುಂದ್ಕೆ ಇಕ್ಕಿದ್ ತಕ್ಸುಣ ನಂಗೇಯಾ ಕೊಡ್ತಿದ್ದು. ನಂಗೇತ್ಲೇ ವಸಿ ಮೆತ್ಗೆ ಮಾಡಿ ನಾಕೈದು ಉಂಡೆ ಕಟ್ತಿದ್ಲು. ನಮ್ಮಮ್ಮುಂಗೆ ಬ್ಯಾರೇವು ಗಟ್ಟಿಗಿರೋದ್ನ ಕೊಟ್ಟು, ಮಗೀಗೆ ಬ್ಯಾರೇ ಮಡ್ಗಿ ಕೊಡಮ್ಮ ಅಂಬ್ತ ಯೋಳೀನೇ ಓಯ್ತಿದ್ಲು. ಆಮ್ಯಾಕೆ ನಮ್ಮಕ್ಕ ಜಗ್ಳ ಆಡಿ ನನ್ ಪಾಲಿಂದುಕ್ಕೆ ಬತ್ತಿದ್ಲು.

ಇಂಗೇ ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ‌ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ. ಇದ್ನೆಲ್ಲಾ ನಿಭಾಯ್ಸಾಕೆ ಏಳೂರುಗ್ಳ ಮುಖ್ಯಸ್ಥರೂ ಇರಾ ಕಮಿಟಿ ಇರ್ತೈತೆ. ಇವುರ್ ಮುಂದೇಲೇ ಎಲ್ಲಾ ನಡೀಬೇಕು. ಇವ್ರಾಗೇ ಒಬ್ರು ಅಧ್ಯಕ್ಸರು, ಖಜಾಂಚಿ, ಕಾರ್ಯದರ್ಶಿ ಇರ್ತಾರೆ. ಊಟ ಪರಿಸೆ ಮೆರೋಣಿಗೆ ಲೆಕ್ಕಾ‍ಚಾರ್ವೆಲ್ಲಾ ಅವುರ್ದೇಯಾ. ಹಿಂದ್ಲ ದಿಸ ಹುವ್ವಿನ ಬುಟ್ಟಿ ಬಂದಾಗ್ಲಿಂದಾ ಊಟ ಸುರು. ಮಾರನೇ ದಿನವೂ ಎಡೆ ಮುಗುದ್ ತಕ್ಸನ ಸುರು ಆಗಿ ದ್ಯಾವ್ರನ್ನ ವಾಪಸ್ ತರಾಗಂಟ ಸಮಾರಾಧ್ನೆ ನಡೀತಾಲೇ ಇರ್ತೈತೆ.

ಬೀರಲಿಂಗೇಶ್ವರನ ಜಾತ್ರೆ

ನಮ್ಮೂರ್ನಾಗೆ ಹಳೆ ಬಸ್ಟಾಂಡಿನ ಹತ್ರ ಬೀರಲಿಂಗೇಶ್ವರುನ್ ಗುಡಿ ಐತೆ. ಇದು ಕುರುಬರ ಮನೆದ್ಯಾವ್ರು. ಈ ದ್ಯಾವ್ರಿಗೆ ವರ್ಸುಕ್ಕೊಂದು ಆಟ(ದಪ) ಪರಿಸೆ ನಡಿಯಲ್ಲ. ಇಪ್ಪತ್ತು ವರ್ಸುಕ್ಕೋ ಇಪ್ಪತೈದು ವರ್ಸುಕ್ಕೋ ಒಂದಾಟ ನಡೀತೈತೆ. ಅದ್ಯಾಕೆ ಅಂಬ್ತಂದ್ರೆ ಸ್ಯಾನೇ ಆಚಾರಗ್ಳು ಇದ್ರ ಹಿಂದ್ಲ ಅವ್ವೆ. ಬೋ ಕಷ್ಟ ಅವುನ್ನ ತೀರ್ಸಾದು.‌ ಜತ್ಗೇ ಸಿಕ್ಕಾಪಟ್ಟೆ ಕಾಸು ಕರ್ಚಾಗ್ತೈತೆ. ಸೀರಾಮ್ ನೋಮಿ(ಶ್ರೀರಾಮನವಮಿ) ದಿಸ ಪರಿಸೆ ಕಲೀತೈತೆ(ಸೇರ್ತೈತೆ). ಕುರುಬರು ಮನೆಗ್ಳು ಇವಾಗ ನಮ್ಮೂರ್ನಾಗೆ ಬರೇ ಮೂರೇ ಮನೆ ಇರಾದು. ಆದ್ರೆ ಊರು ಬಿಟ್ ಹೋಗಿರೋರು, ಅದೇ ಮನೆತನದೋರು ಎಲ್ಲಾ ಕೂಡ್ಕಂಡೆ ಮಾಡ್ತಾರೆ. ಪರಿಸೇ ಮಾಡ್ಬೇಕಾರೆ ಇವುರ್ ದ್ಯಾವ್ರು ಒಪ್ಗೆ ಕೊಡ್ಬೇಕು. ಅಷ್ಟು ಸಲೀಸಾಗಿ ಅವ್ನು ಒಪ್ಕಳಾಕಿಲ್ಲ. ಅದ್ಕೇಯಾ ಆಟು ವರ್ಸುಕ್ಕೊಂದಾಟ ನಡೀತೈತೆ.

ಸ್ಯಾನೇ ಇಚಿತ್ರದ ಕಂಡೀಸನ್ನುಗೋಳು ನಮ್ ಬೀರಪ್ಪುಂದು

ಪರಿಸೇ ನಡಿಯಾ ಮುಂದ್ಲ ಎಲ್ಡು ಪರೀಕ್ಸೆ ನಡೀತೈತೆ. ಎಲ್ಡೂ ಸರ್ಯಾಗಿ ಆ‍ದ್ರೆ ಮಾತ್ರಾನೇ ದ್ಯಾವ್ರು ಒಪ್ಗೆ ಕೊಟ್ಟ ಅಂತ ಲೆಕ್ಕ.

ಮಸಾಣದಾಗೆ(ಸ್ಮಶಾನ) ಎಲ್ಡು ಕಲ್ಲು ಹೂಣಿ(ಹೂತು) ಬೊಮ್ಮಪ್ಪ ಅಂತ ಮಾಡ್ತಾರೆ. ಅದ್ಕೂ ಮುಂದಾಗಿ ಒಂದು ಬಸಿರಿ ಕುರಿ ಹುಡುಕ್ತಾರೆ. ಅದೂ ದಿನದ ಕುರೀನೇ ಆಗ್ಬೇಕು. ಅಂದ್ರೆ ಇನ್ನೆಲ್ಡು ಮೂರು ದಿನದಾಗೆ ಈಯಾ ಅಂತ ಕುರೀನೇ ಆಗ್ಬೈಕು. ಅದ್ನ ತಂದು ಸಾಯಿಸ್ತಾರೆ. ಅದ್ರ ಹೊಟ್ಟೆನಾಗಿರಾ ಮರೀನ ಆಚಿಕ್ ತೆಗೀತಾರೆ. ಆ‌ ಮರೀನ ಬೊಮ್ಮಪ್ಪುಂಗೆ ಬಲಿ ಕೊಡ್ತಾರೆ. ಪರಿಸೇಗಿರಾ ತೊಂದ್ರೆ ಕಳ್ದು ಚೆಂದಾಗಿ ಆಗ್ಲೀಂತ ವರ ಬೇಡ್ಕಂತಾರೆ. ಇಲ್ಲಿ ಬಲಿ ಕೊಡೋ ಮುಂದೆ ಇನ್ನೊಂದು ಆಚಾರ್ವೂ ಸೇರ್ಕಂಡೈತೆ. ಯಾರ್ದಾನಾ ಮನ್ಯಾಗೆ ಯಾರೋ ತಪ್ಪುಸ್ಕಂಡು ಹೋಗಿರ್ತಾರೆ. ಇನ್ನೇನೋ ಆಗಿ ಎಲ್ಲೋ ಸಾಯ್ತಾರೆ. ಅವುರ್ಗೆ ಸರ್ಯಾಗಿ ಶಾಸ್ತ್ರ ಗೀಸ್ತ್ರ ಆಗಿರಲ್ಲ. ಆವಾಗ ಸೂತಕ ಕಳೆದಿರಲ್ಲ ಅಂಬ್ತ ಅವುರ್ ನಂಬ್ಕೆ. ಅದ್ಕೇ ದ್ಯಾವ್ರ ಪರಿಸೇ ಮುಂದ್ಲ ಸೂತಕ ಪಾತಕ ಕಳ್ಕಂತಾರೆ. ಆಮ್ಯಾಕೆ ದ್ಯಾವ್ರನ್ನ ಬೇಡ್ಕಂತಾರೆ. ವಂಸುದ್ ಸೂತಕ ಎಲ್ಲಾ ಕಳ್ಕಂಡೀವಿ, ಪರಿಸೇಗೆ ದಾರಿ ಕೊಡು ಅಂತಾವ. ಎಲ್ಲಾ ಸಲೀಸಾಯ್ತು ಅಂದ್ರೇನೇ ಮುಂದುಕ್ ದಾರಿ‌. ಈಯಾಕೆ ಬಂದಿರಾಂತ ದಿನುಗ್ಳ ಕುರಿ ಸಿಗ್ಬೇಕು. ಅದ್ರ ಹೊಟ್ಟೇಗ್ಳ ಮರಿ ಆಚಿಕ್ ತೆಗೆಯಾವಾಗ ಸಾಯ್ಬಾರ್ದು. ಅಥವಾ ಹುಟ್ತಾಲೇ ತಪುಕ್ಕಂತ ನೆಲುಕ್ ಬಿದ್ದು, ಪೆಟ್ ಗಿಟ್ಟಾಗಿ ಸುಮ್ಕೆ ಮಲಗಿರ್ಬಾರ್ದು. ಅದು ಮಾಮೂಲಿ ಕುರಿ ಪಿಳ್ಳೆ ತರ ಓಡಾಡ್ಬೇಕು. ಆಗ್ಲೇ ಅದು ಸೆಂದಾಕದೆ ಅಂಬ್ತ ಲೆಕ್ಕ. ಅದು ಮಾತ್ರಾನೇ ಬಲಿಗೆ ಸರಿಯಾಗಿರಾ ಕುರಿ ಪಿಳ್ಳೆ.

ಇದೊಂತರಾ ಆಚಾರ್ವಾದ್ರೆ, ಇನ್ನೂ ಒಂದು ಐನಾತಿ ಆಚಾರ ಅದೆ ಕಣ್ರಪ್ಪ. ಕುರಿ ಹಾಲು ತರ್ಬೇಕು. ಅದ್ನ ಕಾಸ್ದೆ ಅಂಗೇ ಹಸೀದೇಯಾ ತಕಂಡು ಅದ್ರಾಗೆ ಬೆಣ್ಣೆ ತೆಗೆಯಬೇಕು. ಹಸೀ ಹಾಲಾಗೆ ಬೆಣ್ಣೆ ತೆಗೆಯಾದೇ ಒಂದು ಕಷ್ಟ. ಅಂತಾದ್ರಾಗೆ ಯಾರಾರೋ ತೆಗ್ಯಾದಲ್ಲ. ಅದುಕ್ಕೇಂತ್ಲೇ ಒಂದು ಮನೆತನದೋರು ಇರ್ತಾರೆ. ಆ ವಂಸುದ್ ಹಿರೇಳು(ಹಿರಿ ಹೆಂಗಸು) ಆ ಬೆಣ್ಣೇಯಾ ತೆಗೀಬೇಕು. ಅದ್ಕೂ ಮುಂಚಿತ್ವಾಗಿ ಮೂರು ದಿಸ ಉಪಾಸ ಇರ್ಬೇಕು. ಆಮ್ಯಾಕೆ ಬೆಣ್ಣೆ ಸರ್ಯಾಗಿ ಬಂತೋ ಪಾಸಾದಂಗೆ. ಇಲ್ಲವೋ ಪೇಲಾದಂಗೆ. ಇವೆಲ್ಲಾ ಪರೀಕ್ಸೇನಾಗೆ ಪ್ಯಾಸಾದ್ರೆ ಬೀರಪ್ಪ ಒಪ್ಗೆ ಕೊಟ್ಟೌನೆ ಅಂತ. ತಂಟೆ ತಾಪತ್ರಯವಿಲ್ದೆ ಬೇಸಾಗಿ ನಡೀತೈತೆ ಅಂತ ನಂಬ್ಕೆ.

ಈಟೊಂದ್ ರಾಮಾಣ್ಯ ಮುಗುದ್ ಮ್ಯಾಗೇ ಪರಿಸೇ ಇಸ್ಯ ಮಾತುಕತೆ ನಡೀತೈತೆ. ಯಾವಾಗ ಎಂಗೆ ಅಂಬ್ತೆಲ್ಲಾ ಕುಂತು ಮಾತಾಡ್ತಾರೆ. ಬ್ಯಾರೇ ಊರುಗ್ಳಾಗಿರಾರೆಲ್ಲಾ ಬಂದು ಸೇರ್ಕಂತಾರೆ. ಆವಾಗೆಲ್ಲಾ ಗುಡಾರ(ಟೆಂಟ್) ಹಾಕ್ಕಂಡು ಬಿಡಾರ ಹೂಡ್ತಿದ್ರು. ಈವಾಗೀವಾಗ ಯಾವ್ದಾನಾ ಖಾಲಿ ಇರಾ ಮನೇಗ್ಳನ್ನ‌ ಬಾಡ್ಗೆ ತಕಂಡು ಒಂದು ಎಲ್ಡು ಮೂರು ದಿಸ ಇದ್ದು ಪರಿಸೆ ಮುಗುಸ್ಕಂಡು ಓಯ್ತಾರೆ. ಇಲ್ಲಾ ಇಸ್ಕೂಲ್ ನಾಗೋ ಇಲ್ಲಾತ್ತಂದ್ರೆ ಜಗಲಿ ಮ್ಯಾಗೇ ಮಲಗಿ ಕತೆ ಕಳೀತಾರೆ.

ಮನೆ ಮಂದೀಗೆಲ್ಲಾ ಹೊಸ ಬಟ್ಟೆ

ಈ ಪರಿಸೇ ಕತೆ ಏಟು ದೊಡ್ದು ಅಂತ ಉಸುರ್ ಬಿಡ್ಬ್ಯಾಡಿ. ಇನ್ನಾ ಐತೆ. ಪರಿಸೇ ಮಾಡೋ ಕುರುಬರೆಲ್ಲಾ ಅವ್ರವ್ರ ನೆಂಟ್ರುನ್ನ ಕರೀಬೇಕು. ನಂಟ್ರು ಹಬ್ಬ ಮಾಡ್ತಾರೆ, ಉಂಡು ಹೋಗಾಮ ಅಂಬ್ತ ಖುಸೀಲಿ ಖಾಲಿ ಕೈ ಬೀಸ್ಕಂಡು ಬರಾದಲ್ಲ. ಮನ್ಯಾಗಿರಾ ದೊಡ್ಡೋರ್ಗೆ‌ ಮಾತ್ರಾ ಅಲ್ಲ, ಚಳ್ಳೆ ಪಿಳ್ಳೆಗೆ ದೆಕ್ಲೂ ಹೊಸ ಬಟ್ಟೆ ತರ್ಲಿಕ್ಕೇ‌ಬೇಕು. ಐದು ಜನ ಮಕ್ಳಿದ್ರೆ ಆಟೂ ಜನುಕ್ಕೆ ತರ್ಬೇಕು. ಪುಣ್ಯುಕ್ಕೆ‌ ಮನ್ಯಾಗಿರಾ ಜೀವದನುಕ್ಕೆಲ್ಲಾ ಹೊಸ ಬಟ್ಟೆ ತರಾ ಆಚಾರ‌ ಇಲ್ಲ. ಅಂಗಾಗಿ ಅವ್ರು ಬದೀಕ್ಕೊಂಡ್ರು. ಇಂತಾ ಹಬ್ಬುಕ್ಕೆ ಯಾವ ನಂಟ್ರು ಬಂದಾರು. ಆದ್ರೂ ಬೀಗರು, ಅಕ್ಕ ತಂಗೀರು, ಅವ್ರೂ ಇವ್ರೂ ಹತ್ತಿರ್ದೋರು, ಭಾಗಸ್ಥರು ಬರ್ಲೇ ಬೇಕು. ಬಂದೋರು ಹೊಸ ಬಟ್ಟೆ ತರ್ಲೇ ಬೇಕು. ಊಟ ಮಾತ್ರ ಸೀ ಊಟ ಅಷ್ಟೇ. ಬೀರಪ್ಪುಂಗೆ ಬಾಡೂಟ ಇಲ್ಲ. ಬರೇ ಕುರಿ ಪಿಳ್ಳೆ ಬಲಿ ಕೊಟ್ರಾಯ್ತು. ಆಮ್ಯಾಕೆ ಹೋಳ್ಗೆ ಊಟ. ಜಯಮಂಗಲಿ ತೊರೇ ತಾವ ಪರಿಸೇ ಮಾಡೋ ಕುರುಬರೆಲ್ಲಾ ಸೇರ್ತಾರೆ. ಅಲ್ಲಿ ಬೀರಲಿಂಗೇಶ್ವರನ ವಿಗ್ರಹ ತಕಂಡೋಗಿರ್ತಾರೆ. ನದೀಯಾಗೆ ನೀರಿದ್ರೆ ಸೈ. ಇಲ್ಲಾ ಒಣಿಕ್ಕೋ ಹೋಗಿದ್ರೂ ಸೈತ ನೀರ್ ಬರಾಗಂಟ ಹಳ್ಳ ತೋಡ್ತಾರೆ. ಆ‌ ನೀರ್ನಾಗೇ ವಿಗ್ರಹ ತೊಳ್ದು ಪೂಜೆ ಮಾಡ್ತಾರೆ. ಆಮ್ಯಾಕೆ ಒನ್ನೊಂದು ‌ಮನೇಗ್ಳೋರು ಒನ್ನೊಂದು ಜಾಗದಾಗೆ ಕುಂತ್ಕಂತಾರೆ. ನದೀ ಬಯಲು ಇಸ್ರಾಮಾಗೈತೆ.‌(ವಿಶಾಲ) ಅಲ್ಲಲ್ಲೇ ಕುಂತು ಅವ್ರವ್ರ ನಂಟ್ರು ತಂದಿರಾ ಹೊಸ ಬಟ್ಟೆ ಓದಿಸಿದ ಮ್ಯಾಲೆ ವಾಪ್ಸು ಮನೇಗೋಗಿ ಸೀ ಊಟ ತಿಂದು ಪರಿಸೆ ಮುಗುಸ್ತಾರೆ.

ಇದು ಸ್ಯಾನೆ ಅಪ್ರೂಪುದ್ದು ಪರಿಸೆ. ಅದ್ಕೇಯಾ ವರ್ಸುಕ್ಕೊಂದು ಕಿತ ಸ್ರೀರಾಮ‌ನೋಮಿನಾಗೆ ಬೀರಲಿಂಗೇಶ್ವರನ ಪೂಜೆ ಇಸೇಸವಾಗಿ ಮಾಡ್ತಾರೆ. ನಮ್ಮ ಬೀರಲಿಂಗೇಶ್ವರುಂಗೂ ಎಲ್ಡು ಗುಡಿ ಅವ್ವೆ. ಒಂದು ಹಳೆ ಬಸ್ಟಾಂಡಿನ್ ತಾವ ಐತೆ. ಅಲ್ಲೇ ಮೂಲ ವಿಗ್ರಹಗಳು ಅವ್ವೆ. ಇನ್ನೊಂದು ಗುಡಿ ಕೆಂಪಾಪುರುದ್ ದಾರೀನಾಗೈತೆ. ಇಲ್ಲಿಂದ ದ್ಯಾವುರುನ್ನ ಆ ಗುಡೀಗಂಟ ಮೆರವಣಿಗೆ ಕರ್ಕೋಂಡೋಗಿ ಅಲ್ಲಿ ಪೂಜೆ ಮಾಡಿ, ಪಾನಕ ಕೋಸಂಬ್ರಿ ಪಂಡಾರ(ಪಣಿವಾರ) ಹಂಚಿ ಪರ್ಸಾದ ತಿಂದ್ಕಂಡು, ವಾಪ್ಸು ದ್ಯಾವುರ್ನ ಮೂಲ ಗುಡೀಗೇ ಬುಟ್ಟು ಓಯ್ತಾರೆ. ಅಲ್ಲಿಗೇ ವರ್ಸೊರ್ಸ ಅವುರ್ ಬೀರಲಿಂಗೇಶ್ವರನ ಪೂಜೆ ಈಟುಕ್ಕೇ ಮುಗೀತದೆ. ಸ್ಯಾನೇ ರಾಮಾಣ್ಯದ ಪರಿಸೇನಾ‌ ಅವ್ರಾನಾ ಎಂಗೆ ವರ್ಸೊರ್ಸ ಮೈಮ್ಯಾಕೆ ಎಳ್ಕಂಡಾರು? ಬೀರಪ್ಪ ಒಪ್ಪಿಗೇ ಕೊಡಾದೇ ಬಲ್ ಕಷ್ಟ ಅಂಬ್ತ ಅವುನ್ ನೆತ್ತೀ ಮ್ಯಾಗೇ ಭಾರ ಹೊರುಸ್ತಾರೆ. ಇನ್ನೊಂದೆಲ್ಡು ವಿಸೇಸವಾದ ಜಾತ್ರೆಗೋಳ್ನ‌ ಮುಂದಿನ ಕಿತ ಬರೀತಿವ್ನಿ.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ