ಜುಗ್ರ

ಎಲ್ಲೋ ಹುಟ್ಟಿ
ಇಲ್ಲಿ
ಬಂಧಿಯಾದ,

ನೂರರ ಮುದುಕನಿಗೆ
ಮೈ ತುಂಬ
ಚರಿತ್ರೆಯ ಸುಕ್ಕುಗಳು!


ಮಳೆಗಾಲದ
ಕೆಂಪುಸಂಜೆಯ ಮೌನ.
ಬಿರುಸುಯ್ಯುವ ಕಡಲು!

ಮಲಯ ದ್ವೀಪಗಳ
ಶಾಂತ ಬದುಕು.
ಎಂದಿಗೂ ಬಿಡುಗಡೆಯಿಲ್ಲದ
ನನ್ನೂರ
ಮಣ್ಣಿನ ವಾಸನೆ!

ದೂರದೇಶದ ಹಡಗನೇರಿ
ದೇಶಬಿಟ್ಟವನಿಗೆ
ಕಡಲ ತೆರೆಯ
ಆಸರೆ!
ಮಲಯ ದ್ವೀಪಗಳ
ಮಾಯೆ!

ನನ್ನೊರ ಸ್ವಾತಂತ್ರ್ಯಕ್ಕೆ
ಸುಭಾಶ್ಚಂದ್ರ ಬೋಸರು
ಇನ್ನಿಲ್ಲದೆ ಕರೆದಾಗ!
ಬರ್ಮಾ ದೇಶದ ದಟ್ಟ ಕಾಡಲ್ಲಿ
ಹೋರಾಡಿದ ನೆನಪು!
ಕುಂಡೆಯಲ್ಲೇ ಉಳಿದುಹೋದ
ಬ್ರಿಟಿಶ್ ಸಾಮ್ರಾಜ್ಯದ
ಕಾಡತೂಸ ಗುರುತು!


ಮಳೆಗಾಲದ ಸಂಜೆಗಳಿಗೆ
ನೆನಪುಗಳ ದಾಳಿ!
ಅವ್ವನ ಗಂಜಿಯ ನೆನಪು.
ಘಮಲು!
ಎದುರಿಗೆ ಕಡಲು.
ದೂರದಲ್ಲಿ!
ದೇಶದೇಶ ಹುಡುಕುತ್ತಾ ಹಡಗುಗಳು.
ಬಿಡುಗಡೆಗೆ
ಕಾಯುತ್ತಾ, ಬದುಕು!