ಮೊನ್ನೆ ಪಾರ್ಟಿಯೊಂದರಲ್ಲಿ ಯಾರೋ ಕಣ್ಣಿಗೆ ಬೆಳದಿಂಗಳೆರೆದುಕೊಂಡರೆ ದೃಷ್ಟಿ ಚೆನ್ನಾಗುತ್ತೆ ಅಂದರು. ಹೌದೇನು ಅಂತ ಸುಮ್ಮನೆ ಕೇಳಿ ಅವರಿಂದ ಇನ್ನಷ್ಟು ಮಾತು ಕುದುರಿಸಿ ಕಿವಿಗೊಡದೆ ನನ್ನಷ್ಟಕ್ಕೇ ನಕ್ಕೆ. ಅವರು ಏಕ್‌ದಮ್ ಉತ್ತೇಜಿತರಾಗಿ ಹೇಳುತ್ತಲೇ ಹೋದರು. ನಡುವೆ ಮತ್ತೊಂದು ಡ್ರಿಂಕಿನ ಸಬೂಬು ಹೇಳಿ ಗುಂಪಿನಿಂದ ಕಳಚಿಕೊಂಡೆ. ಅವರು ಮತ್ತೊಬ್ಬರ ಜತೆ ಅಷ್ಟೇ ತಾದಾತ್ಮ್ಯದಿಂದ ಮಾತು ಮುಂದುವರಿಸಿದರು. ಹತ್ತಿಪ್ಪತ್ತು ನಿಮಿಷಗಳ ಬಳಿಕ ಮತ್ತದೇ ಗುಂಪು ಹೊಕ್ಕಾಗಲೂ ಮಾತು ಅಲ್ಲೇ ಗಿರಕಿ ಹೊಡೆಯುತ್ತಿತ್ತು. ಅವರ ಸುತ್ತಲಿದ್ದ ನಾಕು ಮಂದಿ ಅಷ್ಟೇ ಗಂಭೀರವಾಗಿ ಕಿವಿ ತೊಡಗಿಸಿದ್ದರು. ಒಂದು ಕ್ಷಣ ಅದು ನಿಜವಿರಬಹುದೆ ಅನಿಸಿತು. ಅಥವಾ ಇದೊಂದು ನಗರ ಪುರಾಣ ಅರ್ಬನ್ ಮಿಥ್ ಇರಬಹುದೆ? ನಗು ಬಂತು. ಉಡಾಫೆ ಅಂದುಕೊಂಡರೋ ಏನೋ… ಹೂ ಕೇರ್ಸ್! ಎಷ್ಟಾದರೂ ಬರೇ ಇಟ್ಟಿಗೆ ಗಾರೆಯಷ್ಟೇ ಅರ್ಥವಾಗುವ ಸ್ಥಾವರ ಮನಸ್ಸು ನನ್ನದು. ಇಂಥದೆಲ್ಲ ಕೇಳಲಿಕ್ಕೆ ಎಲ್ಲಿಲ್ಲದ ರೇಜಿಗೆ. ನಿಜ ಹೇಳುತ್ತೇನೆ. ಈ ಸೂರ್ಯ, ಚಂದ್ರ, ನಕ್ಷತ್ರ, ನೀಹಾರಿಕೆಗಳ ಬಗ್ಗೆ ಯಾರಾದರೂ ರೊಮ್ಯಾಂಟಿಕಾಗಿ ಮಾತಾಡಿದರೆ ಅಸಾಧ್ಯ ಪಿರಿಪಿರಿಯಾಗುತ್ತದೆ. ಈ ಉದಯಾಸ್ತಗಳ ಮಹಾನುಭೂತಿಯನ್ನು ತೆಗೆದು ಗುಜರಿಗೆ ಹಾಕಬೇಕೆನಿಸುತ್ತದೆ.
ಅವತ್ತು ಅಲ್ಲಿಂದ ಹೊರಬಂದಾಗ ಹನ್ನೊಂದರ ಸುಮಾರು. ಪಾರ್ಟಿ ಇನ್ನೂ ಮುಗಿದಿರಲಿಲ್ಲ. ರಸ್ತೆಗಳು ಖಾಲಿಯಿದ್ದವು. ಮನೆಯ ದಾರಿಯಲ್ಲಿ ತುಂಬು ಚಂದಿರ ತೂಗುತ್ತಿತ್ತು. ಅಂದು ಹುಣ್ಣಿಮೆಯಿದ್ದಿರಬಹುದು. ಅಷ್ಟು ದೊಡ್ಡದೂ ಪೂರ್ಣವೂ ಇದ್ದ ಚಂದ್ರವನ್ನು ಈ ಊರಿನಲ್ಲಿ ನೋಡಿರುವುದೇ ಕಡಿಮೆ. ಊರಿನ ಎತ್ತರದ ಒತ್ತುವರಿಯಲ್ಲಿ ಆಕಾಶ ತೋರುವುದೂ ಕಡಿಮೆ… ಯಾಕೋ ಫಿನ್‌ಲ್ಯಾಂಡಿನ ಹುಣ್ಣಿಮೆ ಚಂದ್ರದ ಬಗ್ಗೆ ಯಾರೋ ಹೇಳಿದ್ದು ನೆನಪಾಯಿತು. ಅಲ್ಲಿ ಕಾಣುವಷ್ಟು ದೊಡ್ಡದಾಗಿ ಚಂದ್ರ ಇನ್ನೆಲ್ಲೂ ಕಾಣಸಿಗುವುದಿಲ್ಲವಂತೆ. ಅದರಲ್ಲೂ ಅಲ್ಲಿನ ಚಳಿಗಾಲದ ಚಂದ್ರಕ್ಕೆ ಸಾಟಿಯೇ ಇಲ್ಲವಂತೆ… ಕೂಡಲೇ ಆಲ್ವರ್ ಆಲ್ಟೋ ಎಂಬ ಫಿನಿಷ್ ಆರ್ಕಿಟೆಕ್ಟ್ ನೆನಪಾದ. ಅವನು ತನ್ನ ನೆಲದ ಚಂದ್ರಕ್ಕೆ ಜಹಗೀರು ಕೊಟ್ಟಿರುವ ಹಾಗೆ ವಿನ್ಯಾಸ ಮಾಡಿರುವ ಎ ಟ್ರಿಬ್ಯೂಟ್ ಟು ದಿ ಫಿನ್ನಿಶ್ ಮೂನ್ -ಪ್ರಾಜೆಕ್ಟ್ ನೆನಪಾಯಿತು.
ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ಸೂರ್ಯಕ್ಕೆಂದೇ ಕಟ್ಟಿರುವ ಕಟ್ಟಡಗಳಿವೆ. ನಮ್ಮಲ್ಲಂತೂ ಸೂರ್ಯದ ಬೆಳಕನ್ನು ಬೆರಗಿನಿಂದ ಬೆಡಗಿನಿಂದ ಆಚರಿಸುವ ಕಟ್ಟಡಗಳು ಆಗಿವೆ. ಮೊಧೇರ ಮತ್ತು ಕೊನಾರ್ಕದ ಸೂರ್ಯಾಲಯಗಳನ್ನು ಉದಾಹರಿಸಲೇಬೇಕಿಲ್ಲವಷ್ಟೆ? ಆಕಾಶದಲ್ಲಿನ ಸೂರ್ಯಪಥವನ್ನು ನಿಗದಿ ಮಾಡಿ ಅಲ್ಲಿ ಹೊಮ್ಮುವ ಬೆಳಕಿಗೆ ಹೊಂದುವ ಹಾಗೆ ಗುಡಿ ಕಟ್ಟಡವನ್ನು ಹೊಂದಿಸುತ್ತಿದ್ದ ಸಾಕಷ್ಟು ಪುರಾವೆಗಳು ನಮ್ಮಲ್ಲಿವೆ. ಇಲ್ಲಿ ಗವಿಪುರದ ಒಂದು ಸಾಧಾರಣ ಗುಡಿಯಲ್ಲಿ ಸಂಕ್ರಾಂತಿಯಂದು ಇಳಿಸಂಜೆಯ ಬಿಸಿಲುಕೋಲು ಮೂರು ದ್ವಾರಗಳನ್ನು ತೂರಿ ಒಳಗುಡಿ ಬೆಳಗುವುದನ್ನು ನೋಡಲು ಜನ ಮುಗಿಬೀಳುತ್ತಾರೆ. ತಂಜಾವೂರಿನ ಪೆರಿಯಕೊಯಿಲ್ ಎಷ್ಟು ದೊಡ್ಡದೆಂದರೆ ಅಲ್ಲಿನ ಕಲಶದ ನೆರಳು ದೇಗುಲದ ವಿಮಾನದ ಮೇಲಷ್ಟೇ ಚೆಲ್ಲುತ್ತದೆ. ಈ ತನಕ ನೆಲ ಮುಟ್ಟಿಲ್ಲ! -ಇಂತಹ ಸೋಜಿಗದ ಉದ್ಗಾರಗಳು ಸ್ಥಳಕ್ಕೆ ಮಹಾತ್ಮೆಯ ಗ್ರಾಸವಾಗುತ್ತವೆ. ಸಿಮೆಂಟು, ಕಾಂಕ್ರೀಟಿನ ನಶ್ವರಗಳನ್ನು ದಿನಂಪ್ರತಿ ಕಟ್ಟುವ ನನಗೆ ಇವೆಲ್ಲ ರೋಚಕವೆನಿಸುವುದಿಲ್ಲ. ಆದರೆ ನನ್ನನ್ನು ಇನ್ನಿಲ್ಲದಂತೆ ಕೆಣಕುವುದು ನಮ್ಮ ಪುರಾತನದ ಮಂದಿ ಆಕಾಶವನ್ನು ಈ ನೆಲಕ್ಕಿಂತ ಹೆಚ್ಚು ಅಂತ ಯಾವತ್ತೂ ಇಟ್ಟಿದ್ದ ನಂಬಿಕೆ. ಅವರ ನಿರ್ಮಿತಿಗಳೆಲ್ಲ ಆಕಾಶವನ್ನು- ಮಳೆಗಾಳಿಯನ್ನೂ ಒಳಗೊಂಡ ಅದರೆಲ್ಲ ಅಂಶವನ್ನು, ಎಲ್ಲಕ್ಕಿಂತ ಈ ಸೂರ್ಯವನ್ನು ನಂಬಿ ಆಚರಿಸುತ್ತಿದ್ದ ರೀತಿ. ಅವತ್ತಿನ ನಿರ್ಮಿತಿಗಳು ಆಕಾಶದೊಟ್ಟಿಗೆ ಹಣಾಹಣಿ ನಡೆಸಿದ್ದರೆ ಅದರ ನಿಸ್ಸೀಮೆಯನ್ನು ಆಚರಿಸಲಿಕ್ಕೆ ಮಾತ್ರ!
ಇಷ್ಟಿದ್ದೂ ಚಂದ್ರವನ್ನು ಉದ್ದೇಶಿಸಿ ಮಾಡಿದ ಕಟ್ಟಡಗಳು ಇತಿಹಾಸದಲ್ಲಿ ಸಿಗುವುದಿಲ್ಲ. ಕೂಡಲೇ ನಮಗೆ ತಾಜ್ ನೆನಪಾಗಬಹುದಾದರೂ ಅದು ಚಂದ್ರವನ್ನು ಮೆರೆಸಲಿಕ್ಕೆಂದೇ ಆದ ಕಟ್ಟಡವೇನಲ್ಲ. ಆದರೂ ಜಮುನೆಯ ತಟಕ್ಕೆ ಹುಣ್ಣಿಮೆಯ ಹಿನ್ನೆಲೆಯಲ್ಲಿಟ್ಟು ತಾಜ್ ನೋಡುವ ಅನುಭವವೇ ಬೇರೆ. ಇನ್ನು ತಾಜ್ ಎದುರಿಗಿರುವ ಅಥವಾ ಸುತ್ತಲೂ ಇರುವ ಉದ್ಯಾನವನವಿದೆಯಲ್ಲ- ಅದು ಚಂದ್ರನನ್ನು ಹೆಚ್ಚು ಸಂಬೋಧಿಸುತ್ತದೆ ಎಂಬುದು ಒಪ್ಪತಕ್ಕ ಮಾತು. ಕೊಳದಲ್ಲಿ ಚಂದ್ರಬಿಂಬವನ್ನು ಫಲಿಸಿ ನೋಡುವುದಿದೆಯಲ್ಲ ಅದರ ಅನುಭವವೇ ವಿಶಿಷ್ಟ! ಮುಘಲ್ ಉದ್ಯಾನವನಗಳು ಕಟ್ಟಿಕೊಡುವ ಅನುಭವ ಇಂಥದ್ದು. ಆಳವಿರದ ನೀರಿನ ಹಾಳೆಯ ಮೇಲೆ ಜೀಕುವ ಚಂದ್ರದ ಬೆಳಕು ಉನ್ಮಾದ ಹುಟ್ಟಿಸೀತು. ಒಂದು ಮಾಸವನ್ನು ಎರಡು ಪಕ್ಷಗಳಲ್ಲಿ ಪಂಗಡಿಸಿ ಹದಿನೈದು ದಿನಗಳಿಗೆ ಪಾಡ್ಯ, ಬಿದಿಗೆ, ತದಿಗೆ ಅಂತ ಕರೆದಿದ್ದು ಚಾಂದ್ರಮಾನ. ಒಂದು ಪಾಡ್ಯದಿಂದ ಹುಣ್ಣಿಮೆಯವರೆಗೆ ಹಿಗ್ಗುತ್ತ, ಮತ್ತೊಂದು ಪಾಡ್ಯದಿಂದ ಕುಗ್ಗುತ್ತ ಸಾಗುವ ಈ ಚಂದ್ರದ ಕಕ್ಷೆ ನಮಗೆ ತಿಂಗಳುಗಳನ್ನು ರೂಢಿಸಿದೆ ಅನ್ನುವುದನ್ನು ಬಿಟ್ಟರೆ ಈ ಲೆಕ್ಕಾಚಾರ ಕಟ್ಟಡವಾಗಿ ಎಲ್ಲೂ ಮೂರ್ತಯಿಸಲೇ ಇಲ್ಲವೇನೋ. ಇವತ್ತಿನ ನಾಗರಿಕತೆಯಲ್ಲಿ ಹುಣ್ಣಿಮೆ ಅಮಾವಾಸ್ಯೆಗಳು ಕಣ್ಣೆದುರಿದ್ದೂ ಕಾಣದ ಗೌಣವೇ ಆಗಿವೆ.
ಕಾರಿನಿಂದಿಳಿದು ಅಗರ ಕೆರೆ ಬದಿಯಲ್ಲಿರುವ ಏರಿಯ ಮೇಲೆ ನಡೆಯತೊಡಗಿದೆ. ಚಂದ್ರವೆಂದರೆ ಸದ್ದಿರದ ಮೌನ, ನುಣ್ಣಗೆ ತಣ್ಣಗೆ ತನ್ನಷ್ಟಕ್ಕಿರುವ ಬಿಂಬ ಅಂತ ಈ ಊರಿನಲ್ಲಿ ಮೊದಲ ಸಲ ಅನಿಸಿತು. ಚಂದ್ರ ಮತ್ತು ಭೂಮಿಗಳ ನಡುವಿನ ಕಾಸ್ಮಿಕ್ ಕೋನಗಳ ಮಾಹಿತಿ ಸಿಕ್ಕಿದರೆ ಇದೇ ಕೆರೆಯ ಬದಿಯಲ್ಲಿ ಬೆಳದಿಂಗಳಿಗೆ ತೆರೆಯುವ ಹಾಗೆ ಏನಾದರೂ ಕಟ್ಟಬಹುದೆ ಅನಿಸಿತು. ಕೂಡಲೇ ಈ ಊರಿನಲ್ಲಿ ಕಟ್ಟಿದ್ದು ಸಾಕೆನ್ನುವ ಎಚ್ಚರವೂ ಕಾಡಿತು. ಕೆರೆಯ ಬದುವಿನ ಸುತ್ತ ಎರಡು ಸುತ್ತು ಬಂದೆ. ಮೊಬೈಲು ರಿಂಗಾಯಿತು. ಅದು ಬಿಜಾಯ್. ಇನ್ನೂ ಪಾರ್ಟಿಯಲ್ಲೇ ಇರಬೇಕು! ‘ನ್ಯಾಗ್ಸ್! ಸಹಸ್ರ ಚಂದ್ರದರ್ಶನ ಶಾಂತಿ ಅಂದರೇನು?’ -ಅಂತ ಕೇಳಿದ. ಅವರೆಲ್ಲ ಇನ್ನೂ ಅದೇ ವಿಷಯಕ್ಕೆ ಕಚ್ಚಿಕೊಂಡಿರಬೇಕು ಅನಿಸಿ ನಗು ಒತ್ತರಿಸಿತು. ಬದುಕಿನಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು ನೋಡಿದ್ದರ ಸಂಭ್ರಮದ ಅಚರಣೆ ಎಂದು ಸಾವಿರ ಹುಣ್ಣಿಮೆಗಳು ಮನುಷ್ಯ ಜೀವಿತದ ಎಂಭತ್ತು ವರ್ಷಗಳೊಟ್ಟಿಗೆ ತಾಳೆಯಾಗುತ್ತದೆಂದು ವಿವರಿಸಿದೆ. ಒಬ್ಬ ಮನುಷ್ಯ ಈ ಬೆಂಗಳೂರಂತಹ ಊರಿನಲ್ಲಿದ್ದರೆ ಒಂದು ಹುಣ್ಣಿಮೆಯನ್ನೂ ಸರಿಯಾಗಿ ನೋಡಿರಲಿಕ್ಕಿಲ್ಲವಲ್ಲವೆ ಅಂತಲೂ ಫೋನು ಕಡಿಯುವ ಮೊದಲು ಹೇಳಿದೆ. ನನ್ನಂಥವರು ದಿನವೂ ಪೂರ್ಣ ಚಂದ್ರ ದರ್ಶನ ಮಾಡುತ್ತೇವೆ ಎಂದು ಅವನು ಹೇಳಿ ನಗುವಾಗ ಕೈಯಲ್ಲಿರುವ ಬಿಯರ್ ಮಗ್ ಕುರಿತಾಗಿ ಹೇಳುತ್ತಿದ್ದಾನೆಂದು ಕೂಡಲೇ ಹೊಳೆಯಿತು.
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.