Advertisement
ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ

ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ

ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು. ಕಣ್ಮುಚ್ಕಂಡು ಕೇಳೋದು. ಕಣ್ಮುಂದೆ ಕಲ್ಪನೆ ಮಾಡ್ಕಣಾದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತು ಬರೆದಿದ್ದಾರೆ

ಇತ್ತಿತ್ಲಾಗೆ ಈ ಟಿ ಬಿ (ಟಿ ವಿ)ಮೊಬೈಲು ಬಂದ್ ಮ್ಯಾಗೆ ಜನುರ್ಗೆ ಟೇಮು ಹೋಗಾದೆ ಗೊತ್ತಾಗಾಕಿಲ್ಲ. ನಾವ್ ಚಿಕ್ಕೋರಿದ್ದಾಗ ಊರ್ನಾಗೆ ಟೆಂಟೂ ಇರ್ಲಿಲ್ಲ. ಹೋಬಳಿ ಕೇಂದ್ರದಾಗೆ ಟೆಂಟು.‌ ತಾಲೂಕು ಕೇಂದ್ರದಾಗೆ ಸಿನಿಮಾ ಟಾಕೀಸು ಆಟೇಯಾ. ಅದ್ಕೇ ವರ್ಸುಕ್ಕೆ ಒಂದು ದಪವೋ ಎಲ್ಡು ದಪವೋ ಊರ್ನಾಗೆ ನಾಟಕ ಕಾಯಮ್ಮಾಗಿ ಆಡ್ತಿದ್ರು. ಅದೇ ನಮಗೆ ಬೋ ಕುಸಿ. ಸಾಮಾನ್ಯುಕ್ಕೆ ಬ್ಯಾಸ್ಗೆ ಕಾಲ್ದಾಗೆ ಉಳುಮೆ ಕೆಲ್ಸ ಇರ್ತಿರ್ಲಿಲ್ಲ. ಆವಾಗ ನಾಟಕ ಕಾಯಮ್ಮು.

ನಾಟಕ ಕಲಿಯಾದೇ ದೊಡ್ಡ ನಾಟಕ

ನಾಟಕ ಆಡೋದು ಒಂದೇ ದಿನ್ವೇಯಾ. ಆದ್ರೆ ಮೂರ್ನಾಕು ತಿಂಗ್ಳ ತನ ಅದ್ಕೆ ಪ್ರಾಕ್ಟೀಸು ಮಾಡ್ತಿದ್ರು. ನಮ್ ಮನೆ‌ ಮುಂದ್ಲ ಚಾವಡೀನಾಗೆ ಎಲ್ಲಾ ಕಲೀತಿದ್ರು(ಸೇರ್ತಿದ್ರು). ರಾತ್ರೆ ಹೊತ್ನಾಗೆ, ಹೊಲುದ್ ಕೆಲ್ಸ ಮುಗುಸ್ಕಂಡಿ, ಹಿಟ್ಟು ಉಂಡು ಆದ್ ಮ್ಯಾಗೆ ಈ ನಾಟಕ ಆಡಾ ಗಂಡು ಹೈಕ್ಳೆಲ್ಲಾ ಅಲ್ಲಿ ಸೇರೋರು. ಸರೊತ್ತಿನ್ ತಕ ಇವ್ರ ಗಲಾಟೆ. ಹಾರ್ಮೋನಿಯಂ ಸಬ್ದ, ಜೋರ್ ಜೋರಾಗಿ ಮೇಷ್ಟ್ರು ನಾಟಕದ ಮಾತು ಯೋಳ್ಕಡಾದು, ಅದ್ನ ವದರಾಕೆ ಬಾಯ್ ತಿರುಗ್ದೇ ಇವ್ರ ಪರ್ದಾಟ. ಕುಣೀಲಾರ್ದವ್ಳು ನೆಲನೇ ಸರೀಗಿಲ್ಲ ಕಣಮ್ಮಿ ಅಂದಂಗೆ, ಆ ಪಾಲ್ಟು ಬ್ಯಾಡ, ನಂಗೆ ಆಗ್ ಬರಾಕಿಲ್ಲ. ಬ್ಯಾರೆ ಪಾಲ್ಟು ಕೊಡಿ ಅಂಬ್ತ ಗಲಾಟಿ. ಅವ್ರ ಹೆಂಡ್ರು ಮಕ್ಳು ಉಳ್ದೋರು ನಮ್ ಮನೆ ಮುಂದ್ಲ ದೋಡ್ಡ ಅಂಗಳದಾಗೆ ಒತ್ತುರ್ಸ್ಕಂಡು ಕುಂತು ಅಲ್ಲಿ ನಡಿಯಾ ತಮಾಸಿ ಇಸ್ಯಾ, ಜಗ್ಳದ ಇಸ್ಯಾ ಎಲ್ಲಾ ನೋಡ್ತಾ ಕೂಕಂಬಾರು. ಇದೆಲ್ಲಾ ಬೆಳಕರಿದ್ ಮ್ಯಾಗೆ ಊರಾಗ್ಳ ಸುದ್ದಿ ಆಗ್ತಿತ್ತು. ಒಂದಿಬ್ರು ಮುಪ್ಪಿನ್ ಮುದುಕ್ರು ಅಶ್ವತ್ತ ಕಟ್ಟೆ ಮ್ಯಾಕೆ ಕುಂತು ಹೊಗೆಸೊಪ್ಪು ಆಕ್ಕಂತಾ ಅದ್ರ ಜತೇನಾಗೆ ಈ ಇಸ್ಯಾನೂ ಅಗಿಯಾರು. ಒಬ್ಬೊಬ್ರೇ ಸೇರ್ಕಂತಾ ಹೊತ್ತು ಏರೋ ಹೊತ್ಗೆ ಕಟ್ಟೆನೂ ಹೊತ್ಗಂಡು ಉರೀತಿತ್ತು. ಸಂಜೆ ಮಟುಕ್ಕೆ‌ ಎಲ್ಲ ಅಲ್ಲೇ ಬುಟ್ಟಿ ನಾಟಕದ ತಾಲೀಮಿಗೆ ಟೇಮು ಆತು ಅಂಬ್ತ ದಡದಡನೆ ಎದ್ದು ಓಡೋರು. ಇಂಗೇಯಾ ನಾಟಕ ಮುಗಿಯಾ ಗಂಟ, ಮುಗುದ್ ಮ್ಯಾಗೂ ಒಂದು ತಿಂಗ್ಳ ತಕ ಅದೇ ಗುಂಗೇಯಾ. ಎಲ್ರ ಕಿವಿಗ್ಳೂ ಬಾಯ್ಗ್ಳೂ ಸಿಕ್ಕಾಪಟ್ಟೆ ಕೆಲ್ಸ ಮಾಡೋವು.

ಬಯಲು ನಾಟಕ

ಯಕ್ಷಗಾನುಕ್ಕೆ ನಮ್ಮೂರ್ನಾಗೆ ಬಯಲು ನಾಟಕ ಅಂತಿದ್ರು.‌ ಇದ್ನ ಕಲ್ಸೋರು ಬೆಂಗ್ಳೂರಿಂದ ಬತ್ತಿದ್ರು. ಅದ್ರಾಗೆ ಮಣ ಭಾರುದ್ ಕಿರೀಟ ಹೊತ್ಕಂಡಿ ಥಕಥೈ ಅಂಬ್ತ ಕುಣಿಯಾಕೆ ಸ್ಯಾನೆ ಸಕ್ತಿ ಬೇಕು. ಅದ್ರಾಗೂ ಘೋರ ಪಾಲ್ಟು, ಅಂಗಂದ್ರೆ ರಾವಣಾಸ್ರ, ಕಂಸಾಸ್ರ ಇಂಥಾ ಘನವಾದ ರಾಕ್ಸಸರ ಯಾಸ‌ ಹಾಕ್ಬೇಕಾರೆ ಯಾಪಾಟಿ ತಾಕತ್ತು ಬೇಕಿತ್ತು. ಮಾದಿಗರ ನರಸಿಂಹಪ್ಪ ಅದ್ರಾಗೆ ಫ್ರೇಮಸ್ಸು. ಆವಯ್ಯಂಗೆ ಮಾಯಲ ಮರಾಠಿ ಅಂಬ್ತಲೇ ಅಡ್ಡೆಸ್ರು ಬಿದ್ದಿತ್ತು. ಜತ್ಯಾಗೆ ಗಿರಿಯಪ್ಪನವರ ಲಿಂಗಪ್ಪನೂ ಸೇರ್ಕಂತಿದ್ದ. ಇಬ್ರೂ ಕೂಡೀರೆ ಭಳೀರೆ ಅಂಬಂಗೆ ಆಟ ಕುಣೀತಿದ್ರು. ಯಪ್ಪಾ ಸಿವ್ನೇ ಅವುರ್ದು ಅದೇನ್ ಆರ್ಭಟ, ಆಟಾಟೋಪ, ಅಬ್ಬರ. ಯವ್ವಿ ಯವ್ವಿ ನೋಡಾಕ್ ಎಲ್ಡು ಕಣ್ಣು ಸಾಲವಲ್ದು. ಸಣ್ಣ ಮಕ್ಳು ಉಚ್ಚೆ ಹೊಯ್ಕಂತಿದ್ವು. ನಾವೂ ಎದ್ರಿ ಎಳ್ಳೀಕಾಯಾಗಿ ಅವುರ್ದು ಅಗಾಗಂಟ ಕಂಬಳಿ ಗುಬುರಾಕ್ಕಂತಿದ್ವಿ. ಸಂದೀನಾಗೆ ಮೆಲ್ಲುಕೆ ಬಗ್ಗಿ ನೋಡೋದು. ಅದ್ಕೇಯಾ ಅಂತಾ ಪಾಲ್ಟುಗ್ಳೆಲ್ಲಾ ಅವ್ರಿಗೇ ಮೀಸ್ಲು. ಅಗಸರ ಮಲ್ಲಪ್ಪ, ನಾಯಕರ ಗೋವಿಂದಪ್ಪ ಇನ್ನೂ ವಸಿ ಜನ ಇದ್ರು, ನಾಟ್ಕ ಅಂದೇಟ್ಗೆ ಧಿಂರಂಗ ಅಂಬ್ತ ನಿತ್ಕಂಬಾರು. ಬಯಲು ನಾಟುಕಕ್ಕೆ ಸ್ಯಾನೆ ಕಾಸು ಆಗ್ತಿರಲಿಲ್ಲ. ಕಮ್ಮಿ ಸೀನ್ ಇರ್ತಿದ್ವು. ಹಿಂದೊಂದು ಮುಂದೊಂದು ಪರ್ದೆ ಆದ್ರೆ ಮಸ್ತು. ಬ್ಯಾರೆ ಸಾಮಾನು ಸರಂಜಾಮು ಹೆಚ್ಚೂ ಕಮ್ಮಿ ನಡ್ದೋಗ್ತಿತ್ತು. ಅದ್ಕೇ ಕಮ್ಮಿ ಚಾರ್ಜು. ಆದ್ರೆ ಆಟ ರಾತ್ರೆ ಸುರುವಾದ್ರೆ ಬೆಳಕರಿಯಾ ತಕ ನಡೀತಿತ್ತು.

ಪೌರಾಣಿಕ ನಾಟಕದ ಕಾರುಬಾರು

ಪೌರಾಣಿಕ ನಾಟಕಗಳೆ ಸ್ಯಾನೆ ನಡೀತಿದ್ವು. ಸಾಮಾಜಿಕ ಕಮ್ಮೀಂದ್ರೆ ಬಲ್‌ ಕಮ್ಮಿ.

ಇದ್ನ ಯೋಳ್ಕೊಡ್ತಿದ್ದಿದ್ದು ನಮ್ಮೂರಿನ್ ಅಕ್ಕಸಾಲಿಗ್ರ ಮುನಿಯಾಚಾರ್ರೇಯಾ. ಅದೇ ನಮ್ ಮಗ್ಗುಲ ಮನೆ ಈಶ್ವರಮ್ಮುನ್ ಗಂಡ. ಜಿನಾ ರಾತ್ರೆ ಒಂದೂವರೆ ಎಲ್ಡು ಗಂಟೆ ಪಾಟಾ ಮಾಡಾರು. ಗಂಡಸ್ರು ಪಾಲ್ಟು ಊರೋರೇ ಮಾಡ್ತಿದ್ರು. ಮುಖ್ಯ ಪಾಲ್ಟು ಮಾಡೋ ಹೆಂಗುಸುನ್ನ ತುಮಕೂರಿನಾಗಿಂದ ಕರ್ಸೋರು. ಸಣ್ಣ ಪುಟ್ಟ ಪಾಲ್ಟಿಗೆ ಯಾರಾನಾ ಹುಡುಗ್ರೆ ಬಣ್ಣ ಹಚ್ಚೋರು. ಅದ್ರಾಗೂ ಆ ದರ್ಜಿ ಮೂರ್ತಿ ಹೆಂಗುಸ್ರ ಪಾಲ್ಟು ಮಾಡಾಕೆ ಮದ್ಲು ನಿಂತಿರ್ತಿದ್ದ. ಅವುನ್ ಬೆನ್ನಿಗೆ ವಸಿ ಜನ ವಯಸ್ಸಿಗೆ ಬಂದ ಹುಡುಗ್ರೂ ಬತ್ತಿದ್ರು. ಸೀರೆ ಉಟ್ಕಂಡು ಮಾಡ್ತಿದ್ದ ಅವುರ್ ವೈಯ್ಯಾರ ಹೆಂಗುಸ್ರಿಗೂ ಬರವಲ್ದು. ಬ್ರಾಂಬ್ರ ನಾಗಣ್ಣ ಬಲ್ ಚಂದಾಗಿ ಹಾಡು ಯೋಳ್ತಿದ್ದ. ನಾರದನ್ ಪಾಲ್ಟು ಮಾಡೋದ್ರಾಗೆ ಪಸ್ಟ್ ಬತ್ತಿದ್ದ. ಅವಪ್ಪನ ಜತ್ಯಾಗೆ ಜನ್ವೂ ಭಜನೆ ಸುರು ಹಚ್ಕಂತಿದ್ರು. ದಿನಾ ಕ್ಯೋಳೀ ಕ್ಯೋಳೀ ಎಲ್ರಿಗೂ ಬಾಯ್ ಪಾಟ ಆಗಿರ್ತಿತ್ತಲ್ಲ. ರಾಮಾಣ್ಯಾ, ಮಾಬಾರ್ತ, ಕೃಷ್ಣ ಲೀಲೆ, ದ್ರೌಪದಿ ಸ್ವಯಂವರ, ಇಂತಾ ನಾಟಕಗಳೆ ಜಾಸ್ತಿ. ವೀರಬ್ರಮ್ಮಯ್ಯ ಅನ್ನೋ ತೆಲುಗು ನಾಟಕವೂ ಮಾಡಿದ್ರು. ನಮ್ಮೂರ್ನಾಗೆ ತೆಲುಗೇ ಎಲ್ರ ಮನೆ ಮಾತು. ಮುನಿಯಾಚಾರ್ರ ಜತ್ಯಾಗೆ ತಬ್ಲ, ಹಾರ್ಮೋನಿಯಂ ಬಾರ್ಸೋರು ಎಲ್ರೂ ನಮ್ ಊರೋರೇಯಾ. ರಾಮ, ಕೃಷ್ಣ ಇಂತಾ ಪಾಲ್ಟಿಗೆ ಮಾತೇ ಮಾಣಿಕ್ಯ ಅಲ್ಲುವ್ರಾ. ಅದ್ರಾಗೆ ಅಗಸರ ಮಲ್ಲಪ್ಪ ಎತ್ತಿದ್ ಕೈ.

ಬ್ಯಾಲ್ಯದ ಗೋವಿಂದಪ್ಪ

ಬಾಯಿ ತಿರುಗ್ದೇ ಇರೋರ್ಗೆ ಬಾಯಿ ಪಾಟ ಮಾಡ್ಸಾಕೆ ಗೋವಿಂದಪ್ಪ ನಿಂತ್ಕತಿದ್ದ. ಉರು ಹೊಡ್ಸೀ ಹೊಡ್ಸೀ ಎಲ್ಲಾರ್ ಮಾತೂ ಈವಯ್ಯುನ್ ಬಾಯಾಗೇ ಇರ್ತಿದ್ವು. ಪರದೆ ಹಿಂದೆ ನಿತ್ಕಂಡು ಮರೆತೋರಿಗೆ ಯೋಳ್ಕಡೋ ಕೆಲ್ಸವೂ ಚೆಂದಾಗಿ ಮಾಡ್ತಿದ್ದ. ಒಟ್ನಾಗೆ ಎರಡ್ನೇ ಮೇಷ್ಟ್ರು. ಆವಪ್ಪನೂ ಪಾಲ್ಟೂ ಮಾಡ್ತಿದ್ದ. ಪಂಚಾಯ್ತಿ ಜವಾನುನ್ ಕೆಲ್ಸಾ ಕೊಡ್ಸಿತ್ತಾ ನಮ್ಮಪ್ಪ. ನಮ್ಮಪ್ಪುನ್ ಹಿಂದೆ ಮುಂದೆ ಸುತ್ತುತಿದ್ದ. ಅದೇ ನಾಟುಕದ ಪದವೇ ಯೋಳ್ಕಂತಾ ಬತ್ತಿದ್ರೆ ನಾವೆಲ್ಲಾ ಕಣ್ ಬುಟ್ಕಂಡು ನಿಂತು ನೋಡೀವಿ.

ಚಂದಾ ವಸೂಲಿ

ಸುಗ್ಗಿ ಕಾಲ್ದಾಗೆ ಎಲ್ರ ಕೈಯಾಗೂ ಕಾಸಿರ್ತಿತ್ತು. ಆಗ ಚಂದಾ ವಸೂಲಿ ಮಾಡ್ತಿದ್ರು. ಪಾಲ್ಟು ಮಾಡೋರು ಅರ್ಧ ಹಾಕೀರೆ, ಊರಿನ್ ಜನವೆಲ್ಲಾ ಸೇರಿ ಇನ್ನರ್ಧ ಹಾಕೋರು. ಒನ್ನೊಂದು ಕಿತ ನಾಟಕ ಪೊಗದಸ್ತಾಗಿ ಆಡಿ ಎಲ್ಲಾರ್ ಮನ್ಸೂ ಗೆದ್ರೆ, ಊರಿನ್ ಮುಖ್ಯಸ್ಥರು ಶಾಬಾಸ್ ಅಂಬ್ತ ಏ ಇನ್ನೊಂದು ನಾಟಕ ಆಡ್ರಲೆ, ನಾನು ಸಾಮಾನು (ನಾಟಕದ ಸೀನುಗಳು. ತುಮಕೂರಿಂದ ಕಂಪನಿ ನಾಟಕದವ್ರ ತಾವ ಮಾತಾಡ್ಕಂಡು ಲಾರಿನಾಗೆ ಹಾಕ್ಕಂಡು ಬರೋರು.) ಕೊಡ್ಸ್ತೀನಿ ಅಂಬ್ತ ಒಬ್ರು ಯೋಳೀರೆ, ಇನ್ನೊಬ್ರು ಇನ್ನೊಂದು ಯೋಳೋರು. ಅಂಗಾದಾಗ ಬಿರ್ನೆ ಇನ್ನೊಂದು ನಾಟಕದ ತಯಾರಿ ನಡೀತಿತ್ತು. ಮದ್ಲಿಗೆ 1500 – 2000 ರೂಪಾಯಿ ಇದ್ದಿದ್ದು ಎಂಟು ಹತ್ತು ಸಾವ್ರ ಆಗಿ ಕೊನೇಗೆ ಹದಿನೈದು ಸಾವ್ರದ ತಂಕ ಬರ್ತಿತ್ತು. ತಲಾಕೊಂದೊಂದು (ಒಬ್ಬೊಬ್ರು ಒಂದೊಂದು) ವಯಿಸ್ಕಂಡು ನಾಟಕ ಸಲೀಸಾಗಿ ಆಗಾಕೆ ಸಾಯಾ ಮಾಡ್ತಿ‍ದ್ರು.

ನಾಟಕದ ಪರಿಷೆ

ನಾಟಕದ ಜಿನ ಬೆಳಗಿಂದ್ಲೆ ಅಕ್ಕಪಕ್ಕದೂರಿಂದ ಅಂದ್ರೆ ಕೆಂಪಾಪ್ರ, ಅಳ್ಳಾಪ್ರ, ಈರಾಪ್ರಗಳಿಂದ( ಕೆಂಪಾಪುರ, ಅರಳಾಪುರ, ವೀರಾಪುರ) ಜನ ಬಂದ್ ಸೇರೋರು. ಎತ್ತಿನ್ ಗಾಡಿ ಕಟ್ಕೊಂಡು ಮಕ್ಳು ಮರೀ ಸಮೇತ ಇಳಿಯೋರು. ನಡ್ಕಂಡು ಬರೋರು, ಸೈಕಲ್ ಮ್ಯಾಗೆ ಬರೋರು, ಟ್ರ್ಯಾಕುಟ್ರಾಗೆ ಬರೋರು..

ನಮ್ ವಾಸದ ಮನೆ ಮಗ್ಗುಲಿಗೆ ನಮ್ದು ಹಳೆಮನೆ ಇತ್ತು. ಅದ್ನ ಹಳೆ ಸಾಮಾನು, ಧಾನ್ಯ ಒಟ್ಟೊ ಕಣಜ ತರ ಮಾಡ್ಕಂಡಿದ್ವಿ. ಅದ್ರ ಮುಂದೆ ದೊಡ್ಡ ಸ್ಟೇಜಿನ್ ತರ ಜಾಗ ಇತ್ತು. ಸೊಲ್ಪು ಎತ್ರ ಇದ್ದಿದ್ದು ಅನುಕೂಲ್ವಾಗಿತ್ತು. ಮುಂದೆ ಎಂಗೂ ಒಂದೈನೂರು ಜನ ಕುಂತ್ಕಳಾಕೆ ಜಾಗ ದಂಡಿ ಇತ್ತು. ಅಲ್ಲೇಯಾ ನಾಟಕ ನಡೀತಿತ್ತು. ರಾಮ್ರ ದೇವಸ್ಥಾನದಾಗೆ ಬಣ್ಣ ಬಳ್ಕೊಳೋ ತಯ್ಯಾರಿ. ನಮ್ ಹಳೆ ಮನೇನಾಗೆ ಒನ್ನೊಂದು ಕಿತ ಜಾಗ ಕೊಡೋರು.

ಜನ ಕುಂತ್ಕಳಾಕೆ ಮದ್ಲೇ ಜಾಗ ಹಾಕೋರು. ಚಾಪೆ, ಗೋಣಿಚೀಲ, ದುಪ್ಪಟಿ(ಬೆರ್ಸೀಟು), ಟವ್ಲು( ಟವೆಲ್) ಹಾಸೋರು. ನಾವು ಚಳ್ಗಾಲಾ ಆದ್ರೆ ಒಂದು ಹಳೆ ಕಂಬ್ಳಿ ಹೊಚ್ಚಿಕೊಂಡು ಕೂಕಂಬೋದು. ಮಣ್ಣಾಗೆ ಗಲೀಜಾಗ್ತದಲ್ಲ ಅದುಕ್ಕೆ. ಏಸೋ ಕಿತ ಅಂಗೇ ನಾಗಮ್ಮನ ತೊಡೇ ಮ್ಯಾಗೆ ಮಲಿಕ್ಕಂಬಿಡೀವೆ. ಎಚ್ಚರಾದಾಗ ನಾಟಕ ಮುಂದೋಗಿರ್ತಿತ್ತು. ಅಮ್ಯಾಕೇನಾಯ್ತು ಅಂಬ್ತ ತಲೆ ತಿಂಬೋದು.

ಒಂದು ಮಗ್ಗುಲಾಗೆ ಬೋಂಡಾ ಮಾರೋರು, ಕಳ್ಳೆಪುರಿ, ಬೆಂಡು ಬತ್ತಾಸು, ಬಾಂಬೆ ಮಿಠಾಯಿ, ಅಜ್ಜಿ ಕೂರ್ಲು, ಐಸ್ ಕ್ಯಾಂಡಿ ಅದೂ ಇದೂ ಮಣ್ಣು ಮಸಿ ಮಾರೋರು ಎಲ್ಲಾ ಅಮರಿಕೊಳ್ಳೋರು.(ಮೇಲೆ ಬೀಳೋರು) ಒಳ್ಳೆ ಮಾರಮ್ಮುನ್ ಪರಿಸೇ ತರುಕ್ಕೆ ಆಗೋಗೋದು. ಭಾಸ್ಕರಪ್ಪನ ಅಕ್ಕಿ ಮಿಲ್ ಮುಂದೆ ಲಾಟರಿ ಮಾರೋನು ಕುಂತಕಂತಿದ್ದ. ಇದೊಂತರಾ ಲಾಟ್ರಿ. ಒಂದು ಡಬ್ಬದಾಗೆ ಕವಡೆ ಹಾಕಿ ಕುಲುಕಿ ಕೆಳೀಕ್ಕಾಗಿದ್ರೆ, ನಾವು ಯೋಳಿದ್ ನಂಬರ್ ಏ‌ನಾರಾ ಬಿದ್ರೆ ಆ ಸಾಮಾನು ನಮ್‌ನಮ್ಗೇಯಾ. ಪೆನ್ಸಿಲ್ಲು, ರಬ್ರು, ಪೆನ್ನು, ಬಾಚಣ್ಗೆ, ಮೆಂಡ್ರು, ತಲೆಗಾಕ್ಕಣಾ ಬಣ್ಣುದ್ ಟೇಪು ಇಕ್ಕಿರ್ತಿದ್ದ. ಬೆಳಗಿಂದ್ಲೇ ಇವೆಲ್ಲಾ ಭರಾಟೆ ಜೋರಾಗಿ ನಡಿಯೋವು.

ನಮ್ಮಪ್ಪ ಅಣ್ಣ ನಾಟಕದಾಗೆ ಪಾಲ್ಟು ಮಾಡಿದ್ದು

ನಮ್ಮಪ್ಪ ಒಂದೇ ಒಂದು ನಾಟಕದಾಗೆ ಪಾಲ್ಟು ಮಾಡಿದ್ದು. ಅದೋ ಬೋ ಇಚಿತ್ರ. ನಮ್ಮಪ್ಪುಂಗೆ ಹಾಡು ಬರಾಕಿಲ್ಲ. ನಾರದ ವಿಜಯ ನಾಟಕದಾಗೆ ನಾರದನ ಪಾಲ್ಟು. ಅದೇ ಮೇನ್ ಪಾಲ್ಟು. ನಾರದ ಅಂದ್ರೆ ಹಾಡೇ ಮುಖ್ಯ. ನಮ್ಮಪ್ಪ ಹಾಡ್ ಬರಾಕಿಲ್ಲಾ ಬ್ಯಾಡಾ ಅಂದ್ರೂ ಬುಡ್ದೆ ಊರಿನ್ ಮುಖ್ಯಸ್ಥರು ಅಂಬ್ತ ನೀವೇ ಮಾಡಿ ಅಂತ ಹಠ ಕಟ್ಟಿ ಮಾಡ್ಸಿದ್ರು. ಅದೂವರ್ಗೂ ಹಾಡು ಯೋಳಾ ಸಂದರ್ಭದಾಗೆ ಆಯಾ ಪಾತ್ರಧಾರಿಗ್ಳೆ ಹಾಡು ಯೋಳ್ತಿದ್ದಿದ್ದು. ನಮ್ಮಪ್ಪುನ್ ಇಸ್ಯದಾಗೆ ಮದುಲ್ನೇ ಕಿತ ರೂಲಿಸ್(ರೂಲ್ಸ್) ಬ್ಯಾರೆ ಆಯಿತು. ಅಪ್ಪ ಸಂಭಾಷ್ಣೆ ಯೋಳೋದು. ಹಾಡು ಬಂದಾಗ ಸುಮ್ಕೆ ಬಾಯಿ ಆಡ್ಸಾದು. ಪರ್ದೇ ಹಿಂದೆ ಒಬ್ಬ ನಿಂತು ಹಾಡು ಯೋಳೋದು. ಇಂತಾ ಇಚಿತ್ರದ ನಾಟಕಾನೂ ನಡೆದೋಯ್ತು.

ನಮ್ಮಣ್ಣಯ್ಯ ಕೃಷ್ಣ ಲೀಲಾ ನಾಟಕದಾಗೆ ಒಂದು ಕಿತ ಬಾಲ ಕೃಷ್ಣನ ಪಾಲ್ಟು ಹಾಕಿದ್ದ. ಇನ್ನೊಂದು ದಪ ಇಸ್ಕೂಲಾಗೆ ದಶಾವತಾರ ನಾಟಕದಾಗೆ ವಿಷ್ಣು ಪಾಲ್ಟು. ನಂಗೆ ಈಗ್ಲೂ ಗ್ಯಪ್ತಿ ಐತೆ. ಬಲಿ ಮಾರಾಜುಂಗೆ, ಭಕ್ತಾ ನನ್ನ ಮೂರನೇ ಪಾದ ಎಲ್ಲಿ ಇಡಲಿ ಅಂಬ್ತ ಕೇಳಿದ್ದು. ಅವನು ನನ್ನ ತಲೆಯ ಮೇಲಿಡು ತಂದೆ ಅಂತ ಕಾಲಿನ್ ದಸೀಲಿ ಕುಕ್ಕರಿಸಿದ್ದು. ನಮ್ಮಣ್ಣ ತಲೆ ಮ್ಯಾಗೆ ಕಾಲಿಕ್ಕಿದ್ದು.. ಇವತ್ಗೂ ಕಣ್ಣಿಗೆ ಕಟ್ದಂಗೆ ಐತೆ.

ಕಣ್ಕಟ್ಟು – ಮೋಡಿ

ನಾಟಕ ಬುಟ್ರೆ ಅಂಗೇ ನಮ್ಗೆ ಕುಸೀ ಕೊಡ್ತಿದ್ದ ಇಸ್ಯಾ ಅಂದ್ರೆ ಕಣ್ಕಟ್ಟು, ಮೋಡಿ ಆಟ. ಗೊಲ್ಲರ ರಾಮಯ್ಯ, ಹಾವಾಡಿಗ್ರ ಯಂಕ್ಟಪ್ಪ (ವೆಂಕಟಪ್ಪ) ಇನ್ನಾ ಯಾರಾರೋ ಬರೋರಪ್ಪ. ಬುಟ್ಯಾಗೆ ಹಾವು ಮಡಗಿ ತೋರ್ಸೋದು. ಆಮ್ಯಾಗೆ ಬುಟ್ಯಾಗೆ ಹಾವೇ ಮಾಯ. ಒಂದು ಪುಟಿಗೇನಾಗೆ(ಬುಟ್ಟಿ) ಬಟ್ಟೆ ಮುಚ್ಚಿ, ಅದ್ರ ಮ್ಯಾಗೆ ಕೋಲು ತಕಂಡು ಮಂತ್ರ ಹಾಕ್ತಾ ಹಾವು, ಚೇಳು, ಮಂಡರಗಪ್ಪೆ ಕೈಯಾಕಿ ತೆಗಿಯೋರು. ಅವು ಅವ್ರನ್ನ ಕಚ್ತಲೇ ಇರ್ಲಿಲ್ಲ. ನೋಡಾಕೆ ಬಂದಿರಾ ಜನುರ್ ಗುಂಪಿನಾಗಿಂದ ಒಬ್ಬುನ್ನ ಕರ್ದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ಅವುಂಗೆ ಸಕ್ತಿ ತುಂಬಾಕೆ ಮಣಮಣ ಮಂತ್ರ ಹಾಕಿ ಕೋಲು ತಕಂಡು ಮೂರು ಸುತ್ತು ಸುತ್ತೀರೆ ಸಾಕು. ಕ್ಯೋಳಿದ್ ಪ್ರಶ್ನೇಗೆಲ್ಲ ರೈಟಾಗೆ ಯೋಳ್ತಿದ್ರು. ಯಾರ್ನಾರಾ ತೋರಿ ಇವುರ್ ಗಂಡ್ಸೋ ಹೆಂಗ್ಸೋ ಅಂತ ಕೇಳೋದು, ಹೆಸ್ರು ಕೇಳೋದು. ನಮ್ಗಂತೂ ಸ್ಯಾನೆ ಸೋಜಿಗ ಆಗ್ತಿತ್ತು. ಅದೆಂಗೇ ಅಂಬ್ತ ತಲ್ಯಾಗೆ ಹುಳ ಬುಟ್ಕಣಾದು.

ನಮ್ಮನೇನಾಗೆ ನಾಟಕದ ಹುಚ್ಚು

ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು. ಕಣ್ಮುಚ್ಕಂಡು ಕೇಳೋದು. ಕಣ್ಮುಂದೆ ಕಲ್ಪನೆ ಮಾಡ್ಕಣಾದು. ನಾವು ಆ ನಾಟಕ ನೋಡಿರೋದೇ ಸೈ ಅನ್ಸಂಗೆ ಅದುನ್ನ ಅ ಯಿಂದ ಳ ತಕ ಯೋಳ್ತಿದ್ವಿ.

ಇನ್ನೊಂದು ಕಡೆ ಗುರುರಾಜುಲು ನಾಯ್ಡು ಅವುರ್ದು ಎಲ್ಲಾ ಹರಿಕತೇ ಕ್ಯಾಸೆಟ್ಗಳು. ಅವುರ ಹರಿಕತೆ ಎಂಗಿರ್ತಿತ್ತು ಅಂದ್ರೆ ಕಣ್ಮುಂದೆ ನಡ್ಯಾ ಅಂಗೇ ಯೋಳ್ತಿದ್ರಾ. ನಾವು ಕಣ್ಮುಚ್ಕಂಡು ಕುಂತು ಕ್ಯೋಳ್ತಿದ್ರೆ ಪರ್ಪಂಚ ತಲೆಕೆಳ್ಗಾದ್ರೂ ಗ್ಯಾನ ಇರ್ತಿರ್ಲಿಲ್ಲ. ಏಸೋ ದಪ ನಮ್ಮಮ್ಮ ಒಲೆ ಮ್ಯಾಗೆ ಹಾಲಿಕ್ಕಿವ್ನಿ ನೋಡ್ಕಳಮ್ಮಿ ಅಂದು ಹೋಗಿದ್ರೆ, ಹಾಲೆಲ್ಲಾ ನೆಲುದ್ ಮ್ಯಾಗೇಯಾ. ಪಾತ್ರೆ ಸೀದು ಸುಣ್ಣ ಆಗಿರ್ತಿತ್ತು. ಥೋ ಒಂದ್ ಕೆಲ್ಸನಾರಾ ನೆಟ್ಗೆ ಮಾಡಾಕಿಲ್ಲ ಅಂಬ್ತ ಅಮ್ಮ ರೇಗ್ತಿದ್ರೆ ನಂಗಲ್ಲ ಅನ್ ಕಂಡು ಕಿವೀನ ಟೇಪ್ ರೆಕಾರ್ಡರ್‌ಗೆ ಅಂಟ್ಸಿ ಕುಂತು ಕೇಳೋ ಆಟ.

ಹಿರಣ್ಣಯ್ಯನ ನಾಟಕ ಬರೇ ಕೇಳೋದಲ್ಲ, ನಮ್ಮಪ್ಪ ಅದುನ್ನ ನನ್ ತಾವ ಇವರ್ಸಿ ಯೋಳೋರು. ಅದು ಇವಾಗಿನ ಸಮಾಜುಕ್ಕೆ, ರಾಜಕೀಯುಕ್ಕೆ ನ್ಯಾರವಾಗೇ ಯೋಳಾಂತ ನಾಟಕಗ್ಳು. ಯಾವ್ಯಾವ ಘಟನೇಗೆ ಎಂಗೆಂಗೆ ತಿರುಗ್ಸಿ ಏಟ್ ಕೊಟ್ಟವ್ರೆ. ಆ ತಾಕತ್ತು ಹಿರಣ್ಣಯ್ಯುಂಗೆ ಎಂಗದೆ ಅಂಬ್ತ ಚರ್ಚೆ ಮಾಡೋರು. ಇದೇ ತರುಕ್ಕೆ ಲಂಕೇಶ್ ಪತ್ರಿಕೆ ತರೋರು. ಅದ್ರ ಇಚಾರ್ಗ್ಳನ್ನೂ ಇಂಗೇ ಚರ್ಚೆ ಮಾಡೋರು.

ಇಂಗೇ ಊರ್ನಾಗೆ ನಾಟಕ ನೋಡೀ, ಕ್ಯಾಸೆಟ್ ನಾಟ್ಕ ಕ್ಯೋಳ್ಕಂತಾಲೆ ನಾಟಕ ಬರಿಯೋದೂ, ಆಡೋದೂ, ಇವಾಗಿನ್ ಸಾಮಾಜಿಕ ಸಮಸ್ಯೆ ಇಟ್ಗಂಡು ಸಂಭಾಷ್ಣೆ ಬರ್ದು, ಏಕಪಾತ್ರಾಭಿನಯ ಮಾಡೋದು ನಂಗೂ ಸಲೀಸಾಗಿ ರೂಢಿ ಆಯ್ತೂಂತ ಕಾಣ್ತದೆ.

ನಾಟಕ ಅಂಬೋದು ನಮ್ ಪಾಲಿಗೆ ಬರೇ ನಾಟಕ ಆಗಿರ್ದೆ ಇಡೀ ಬದುಕ್ನೇ ಆವರಿಸ್ಕಂಡು ನಡೆಯಾ ಆಟ ಆಗ್ತಿತ್ತು. ಒಂದು ದಿನುದ್ ನಾಟುಕ್ದ ಹಿಂದೆ ತಿಂಗ್ಳುಗಟ್ಲೆ ಕತೆ ಇರ್ತಿತ್ತು. ಗೊತ್ತಿರಾ ರಾಮಾಣ್ಯ ಮಾಬಾರ್ತದ ಕತೆಗಿಂತ, ತಾಲೀಮಿನಾಗೆ ನಡ್ಯಾ ಜಗ್ಳಾ, ಗುದ್ದಾಟ, ತಮಾಸಿ, ಅದು ಅಮಾಸಿ ಆಗಿದ್ದು ಇಂತಾ ರಸವತ್ತಾಗಿರಾ ಇಸ್ಯಗ್ಳೆ ನೂರೆಂಟು ಇದ್ವು. ಬ್ಯಾರೇನೂ ಕ್ಯಾಮೆ ಇಲ್ದೆ ಇರಾ ಸಣ್ಣ ಸಣ್ಣ ಇಚಾರಗಳನ್ನೂ ಮನಸ್ಸಿನಾಗೆ ತುಂಬ್ಕಂಡು ಕುಸೀ ಪಡೋ ಮಗೀ ತರ ಮನ್ಸು ಆವಾಗ ನಮ್ದಾಗಿತ್ತು. ಬದುಕಿನ ನಾಟಕದಾಗೆ ಇಂತಾ ನಾಟಕದ ಕತೆಗ್ಳು ಬೇಜಾನ್ ಅವ್ವೆ.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

1 Comment

  1. ಅನಂತ ರಮೇಶ್

    ಬಹು ಸೊಗಸಾಗಿ ಕಟ್ಟಿಕೊಟ್ಟಿರುವ ಹಳ್ಳಿಯ ಚಿತ್ರ. ಭಾಷೆ ಯಥಾವತ್‌, ಬಹಳ ಚಂದ. ಲವಲವಿಕೆಯ ಬರಹ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ