ನಾನು ಪಂಡಿತ ಪುತ್ರ. ನನ್ನ ತಂದೆಯವರು ಶಾಲೆಯ ಉಪಾಧ್ಯಾಯರಾಗಿದ್ದರಿಂದ ಅವರು ಶಾಲೆಯ ಮಕ್ಕಳಿಗೆ ಕಲಿಸಲೆಂದು ಬರೆದಿಟ್ಟ ಒಂದು ಕವನ ಸಂಕಲನ ನಾನು ಓದಿದ ಮೊದಲ ಪುಸ್ತಕ. ಆಗ ನನಗೆ ಕೇವಲ ಐದು ಇಲ್ಲ ಆರು ವರ್ಷ. ಕೈ ಬರಹದಲ್ಲಿಯೇ ಇದ್ದ ಈ ಪುಸ್ತಕದಲ್ಲಿ ರಾಜರತ್ನಂ, ಹೊಯ್ಸಳ, ನಾ. ಕಸ್ತೂರಿ, ಕುವೆಂಪು ಅವರು ಬರೆದ ಹಲವು ಪದ್ಯಗಳು ಇದ್ದವು. ಈ ಪದ್ಯಗಳಲ್ಲಿ ಕೆಲವನ್ನು ನಾನು ಬಾಯಿ ಪಾಠ ಮಾಡಿದ್ದೆ. ಹೀಗೆ ನಾನು ಕಲಿತ ಒಂದು ಪದ್ಯ ಇಂದಿಗೂ ನನ್ನ ನೆನಪಿನಲ್ಲಿ ಇದೆ, ಅದು…
ತೆಂಗಿನ ಮರಗಳು ಕುಳ್ಳಾಗಿದ್ದು
ಕಾಯ್ಗಳು ಕೈಗೆ ಸಿಗುವಂತಿದ್ದು
ಕೊಬ್ಬರಿ ಎಲ್ಲ ಮೇಲ್ಗಡೆ ಇರಲು
ಎಳನೀರಿನ ಮುಚ್ಚಳ ತೆಗೆದಿರಲು
ಇನ್ನೂ ಚೆನ್ನಾಗಿರುತಿತ್ತು
ಎಷ್ಟೋ ಚೆನ್ನಾಗಿರುತ್ತಿತ್ತು.
ಇದು ನನ್ನಲ್ಲಿ ಹಲವು ಕಲ್ಪನೆಗಳನ್ನ ಭಾವನೆಗಳನ್ನ ಚಿಗುರಿಸಿದ ಪದ್ಯ. ಅಂದು ತೆಂಗಿನ ಮರಗಳೆಲ್ಲ ನೂರು ನೂರೈವತ್ತು ಅಡಿ ಎತ್ತರಕ್ಕೆ ಬೆಳೆಯುತ್ತಿದ್ದವು. ಕಾಯಿ ಕೀಳಬೇಕು ಅನ್ನುವುದಾದರೆ ಆ ಎತ್ತರಕ್ಕೆ ಏರ ಬಕಿತ್ತು. ಕಾಯಿ ಕಿತ್ತ ನಂತರವಾದರೂ ಸುಖವಿದೆಯೇ? ಕತ್ತಿಯಿಂದ ಅದನ್ನ ಹೆರೆಯಬೇಕು. ನೀರಿಗಾಗಿ ತಡಕಾಡಬೇಕು. ಒಳಗೆ ಇರುವ ಕೊಬ್ಬರಿಯನ್ನ ಪಡೆಯುವುದೂ ಒಂದು ಕಷ್ಟವೇ. ಈ ಎಲ್ಲ ರಗಳೆ ಇಲ್ಲವಾದರೆ ಎಷ್ಟು ಚೆನ್ನಾಗಿ ಇರುತ್ತಿತ್ತಲ್ಲ ಅನ್ನುವುದು ಈ ಪದ್ಯದ ಸಾರಾಂಶ.
ಮಗುವಾಗಿ ನಾನು ಬಯಸುತ್ತಿದ್ದುದು ಇದನ್ನೇ. ಹೀಗೆ ಬಯಸಲು ನನ್ನ ಮನಸ್ಸು ಸದಾ ಫ್ಯಾಂಟಸಿಯನ್ನ ನಿರೀಕ್ಷಿಸುತ್ತಿತ್ತು ಅನ್ನುವುದರ ಜೊತೆಗೆ ಅಂದಿನ ದಿನ (ಸುಮಾರು 1945 ರ ಕಾಲ) ಆಧುನಿಕತೆ ಅನ್ನುವುದು ನಮ್ಮನ್ನ ಮರಳು ಮಾಡಿತ್ತು. ಯಂತ್ರಗಳು ಎಲ್ಲೆಲ್ಲೂ ಕಾಣಿಸಿಕೊಂಡು ವೇಗವನ್ನ ಮೀರಿ, ಕಾಲವನ್ನ ಮುಂದಕ್ಕೆ ತಳ್ಳಿ, ಎಲ್ಲ ಸುಖ ಸೌಲಭ್ಯಗಳನ್ನ ತಂದು ಕೊಡಲು ಕಾದು ನಿಂತಿದ್ದವು.
ಈ ಪದ್ಯದ ರಚನೆಯ ಹಿಂದೆ ಕೂಡ ಇಂತಹಾ ಒಂದು ಮನೋಭಾವ ಇರುವುದನ್ನ ನಾವು ಗಮನಿಸಬಹುದು. ಕವಿ ಮಕ್ಕಳಿಗೆ ಮನರಂಜನೆ ನೀಡಬೇಕು ಅನ್ನುವ ಉದ್ದೇಶದಿಂದ ನಿಸರ್ಗಕ್ಕೆ ವಿರುದ್ಧವಾದ ಒಂದು ಪ್ರಕ್ರಿಯೆಗೆ ಒತ್ತು ಕೊಟ್ಟು ಈ ಪದ್ಯವನ್ನ ರಚಿಸಿದ್ದಾನೆ. ತೆಂಗಿನ ಮರ ಎತ್ತರಕ್ಕೆ ಬೆಳೆಯುವುದು, ಅದರ ಕಾಯಿ ಸಿಪ್ಪೆ ಗಟ್ಟಿಯಾಗಿರುವುದು, ಎಳನೀರು ಕೊಬ್ಬರಿ ಒಳಗೆ ಅಡಗಿಕೊಂಡು ಇರುವುದು, ಎಲ್ಲ ಪ್ರಕೃತಿ ನಿಯಮ. ಇದನ್ನು ಮೀರಿದ ಒಂದು ಕೆಲಸ ಆಗಬೇಕು ಎಂದು ಕವಿ ಹೇಳುತ್ತಾನೆ. ಹೀಗೆ ಹೇಳುವುದರ ಮೂಲಕ ಆತ ಮಕ್ಕಳ ಮನಸ್ಸಿನಲ್ಲಿ ಒಂದು ಕುತೂಹಲ, ಅಚ್ಚರಿ, ಬೆರಗನ್ನ ಉಂಟು ಮಾಡುತ್ತಾನೆ. ಮಕ್ಕಳಲ್ಲಿ ಒಂದು ನಿರೀಕ್ಷೆಯನ್ನ ಹುಟ್ಟು ಹಾಕುತ್ತಾನೆ. ಹೀಗಾದರೆ ಎಷ್ಟು ಚೆನ್ನಾಗಿ ಇರುತ್ತಿತ್ತಲ್ಲ ಎಂದು ಮಕ್ಕಳು ಆಶಿಸುವಹಾಗೆ ಮಾಡುತ್ತಾನೆ.
ಇಂದಿನ ದಿನ ಈ ಪದ್ಯವನ್ನು ಎದಿರು ಇರಿಸಿಕೊಂಡು ವಿಚಾರ ಮಾಡಿದಾಗ ಎಲ್ಲವೂ ಸುಲಭವೂ ಸರಳವೂ ಆಗಬೇಕೆ ಅಂದೆನಿಸುತ್ತದೆ. ಹೀಗೆ ಆದರೆ ಬದುಕಿನ ಒಂದು ಥ್ರಿಲ್ ಹೊರಟು ಹೋಗುತ್ತದಲ್ಲ ಎಂದು ಗಾಬರಿ ಕೂಡ ಆಗುತ್ತದೆ. ಆದರೆ ಹೀಗೆ ಅನಿಸುವುದರ ಜೊತೆಗೆ ಈ ಪದ್ಯ ತನ್ನ ಸರಳತೆ, ನೇರ ದೃಷ್ಟಿ, ಕಲ್ಪನೆ, ಸೊಗಸುಗಾರಿಕೆಗಳಿಂದಾಗಿ ತನ್ನ ಆಕರ್ಷಣೆಯನ್ನ ಉಳಿಸಿಕೊಳ್ಳುತ್ತದೆ.
ಇವತ್ತು ತೆಂಗಿನ ಮರಗಳೆಲ್ಲ ತಮ್ಮ ಎತ್ತರವನ್ನ ಕಳೆದುಕೊಂಡು ಕಿರಿದಾಗಿವೆ. ನಾಳೆ ಎಳನೀರಿನ ಮುಚ್ಚಳ ತೆರೆದ, ಕೊಬ್ಬರಿ ಎಲ್ಲ ಮೇಲ್ಗಡೆ ಇರುವ ತೆಂಗಿನ ಮರಗಳು ಬರಬಹುದು, ಆಗ ಈ ಪದ್ಯ ತನ್ನ ಆಕರ್ಷಣೆಯನ್ನ ಕಳೆದುಕೊಳ್ಳುತ್ತದೆ. ಆದರೂ ಈ ಸಂದರ್ಭ ಬರುವವರೆಗೆ ಈ ಪದ್ಯಕ್ಕೆ ಸಾವಿಲ್ಲ ಎಂದು ನನಗೆ ಅನಿಸುತ್ತದೆ.
ಹಾಗೆಯೇ ಒಂದು ಪದ್ಯ ಬಾಲ್ಯದಲ್ಲಿ ಒಂದು ಅನುಭವ ನೀಡಿ ನಾವು ಬೆಳೆದಾಗ ಆ ಅನುಭವಕ್ಕೆ ವ್ಯತಿರಿಕ್ತವಾದ ಮತ್ತೊಂದು ಅನುಭವದ ಕಡೆ ನಮ್ಮನ್ನ ಕರೆದೊಯ್ಯುತ್ತದೆ ಅಂದರೆ ಅದು ಆ ಪದ್ಯದ ದೋಷವೋ ಇಲ್ಲ ನಮ್ಮ ಬೆಳವಣಿಗೆಯ ಫಲವೋ ನಾವು ವಿಚಾರ ಮಾಡಬಹುದು. ಜೊತೆಗೇನೆ ಈ ಎರಡೂ ಅನುಭವಗಳಿಗೆ ಒಂದೇ ಪದ್ಯ ಕಾರಣವಾಯಿತಲ್ಲ ಅನ್ನುವುದು ಕೂಡ ಗಮನಿಸಬೇಕಾದ ವಿಷಯವೇ. ಅಲ್ಲದೆ ಪದ್ಯ ಅದೇ ಆಗಿ ಅದನ್ನ ನೋಡುವ ನನ್ನ ದೃಷ್ಟಿ ಬೇರೆಯಾಗಿದೆ ಅನ್ನುವುದು ಕೂಡ ಇಲ್ಲಿ ಮುಖ್ಯ. ಇದಕ್ಕಿಂತ ಅಂದು ಓದಿ ಮೆಚ್ಚಿಕೊಂಡ ಪದ್ಯವೇ ಇಂದಿನ ನನ್ನ ಬದಲಾದ ಅಭಿಪ್ರಾಯಕ್ಕೂ ಕಾರಣ ಅನ್ನುವುದು ಮತ್ತೊಂದು ವಿಶೇಷ ಎಂದು ನಾನು ತಿಳಿಯುತ್ತೇನೆ. ಇಷ್ಟಾದರೂ ಆ ಪದ್ಯವನ್ನ ನಾನು ಬಿಡಲಾರೆ. ಆಗಾಗ್ಗೆ ನಾನದನ್ನ ಗುಣಗುಣಿಸುತ್ತಿರುತ್ತೇನೆ. ಸಭೆ ಸಮಾರಂಭಗಳಲ್ಲಿ ಮಕ್ಕಳಿಗೆ ಹೇಳುತ್ತಿರುತ್ತೇನೆ. ಚಪ್ಪಾಳೆಗಳೂ ಬೀಳುತ್ತವೆ. ಅಂದರೆ ಇಂದಿನ ಮಕ್ಕಳೂ ಆ ಪದ್ಯವನ್ನ ಮೆಚ್ಚಿಕೊಂಡಿದ್ದಾರೆ.
ಬದುಕಿನ ಒಂದು ವಾಸ್ತವತೆ ತಟ್ಟನೆ ಬೇರೊಂದು ಅವಾಸ್ತಿಕತೆಯತ್ತ ಕರೆದೊಯ್ಯುವುದು ಕೆಲ ಬಾರಿ ಮಕ್ಕಳ ಸಾಹಿತ್ಯದ ವಿಷತೆ ಆಗುತ್ತದೆ. ಈ ಪದ್ಯ ಈ ಮಾತಿಗೆ ಒಂದು ಉದಾಹರಣೆಯಾಗಿದೆ.
ಹಿರಿಯ ಕಥೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತಿ. ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ಡಾ.ನಾರ್ಬರ್ಟ್ ಡಿಸೋಜ.