ಅದರ ಚಿತ್ರವನ್ನೇ ಮನದಲ್ಲಿ ತುಂಬಿಕೊಂಡು ಮನೆಗೆ ವಾಪಸ್ಸಾದೆ. ಯಾವ ಜೀವ ವಿಜ್ಞಾನಿಗಳ ಕಣ್ಣಿಗೂ ಕಾಣಿಸಿಕೊಳ್ಳದೇ ನಿಗೂಢವಾಗಿದ್ದ ಈ ಪ್ರಾಣಿ, ಕಾಡು ಬಿಟ್ಟು ನನ್ನ ತೋಟಕ್ಕೆ ಬರಲು ಕಾರಣವೇನಿರಬಹುದೆಂದು ಚಿಂತಿಸುತ್ತಾ ಹಾಸಿಗೆಯ ಮೇಲೆ ಮಲಗಿದೆ. ಹಾಗೆಯೇ ಅದರ ಆಹಾರ ಪದ್ಧತಿಗಳನ್ನು ಜ್ಞಾಪಿಸಿಕೊಳ್ಳತೊಡಗಿದೆ. ಮಲಬಾರ್ ಸೀವೆಟ್ ಕೆಲ ಚಿಕ್ಕ ಪ್ರಾಣಿಗಳನ್ನೂ, ಮೊಟ್ಟೆಗಳನ್ನೂ ಇಷ್ಟಪಟ್ಟು ತಿನ್ನುತ್ತದೆಂದು ಎಲ್ಲೋ ಓದಿದ್ದು ನೆನಪಾಯಿತು. ಸಂಜೆ ಹೆಗ್ಗಾಲುವೆಯ ಬಳಿ ಕಟ್ಟ ಹಾಕಲು ಹೋಗಿದ್ದಾಗ ಒಂದೆರಡು ಹುಂಡುಕೋಳಿಗಳು ಸರ‍್ರೆಂದು ಸದ್ದು ಮಾಡುತ್ತಾ, ನನ್ನನ್ನೇ ಗಾಬರಿಗೊಳಿಸಿ ಓಡಿಹೋಗಿದ್ದವು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವೇಣುಗೋಪಾಲ್ ಗಾಂವ್ಕರ್ ಕತೆ ‘ಅಡಿಯಪ್ಪ ಮತ್ತು ಸಿವೆಟ್’ ನಿಮ್ಮ ಈ ಭಾನುವಾರದ ಓದಿಗೆ
ಬೆಳಿಗ್ಗೆ ಕಣ್ಣುಜ್ಜಿಕೊಂಡು ಏಳುವಾಗಲೇ ಗಂಟೆ ಎಂಟಾಗಿತ್ತು. ಹಸ್ತಗಳನ್ನು ಒಂದಕ್ಕೊಂದು ಉಜ್ಜಿಕೊಂಡು “ಕರಾಗ್ರೇ ವಸತೇ ಲಕ್ಷ್ಮೀ….” ಹೇಳುತ್ತಿರುವಾಗಲೇ ಮಸುಕು ಮಸುಕಾಗಿ, ಮಂಜಿನೊಳಗಣ ರಸ್ತೆಯಂತೆ ನಿನ್ನೆಯ ಘಟನೆ ಮನಃಪಟಲದಲ್ಲಿ ಮೂಡಲಾರಂಭಿಸಿತು.
ರಾತ್ರಿ 9ಕ್ಕೆ ಊಟ ಮುಗಿಸಿ ನಾಯಿಯನ್ನು ಗೂಡಿನಲ್ಲಿ ತುಂಬಿ, ಕೈ ಕಾಲು ತೊಳೆದು ಹಾಸಿಗೆಯಲ್ಲಿ ಪವಡಿಸಬೇಕೆಂದಾಗ ಕೆಳಗೆ ತೋಟದಲ್ಲಿ ಏನೋ ‘ಜರಬರ’ ಸದ್ದು. ಹಿಂದೆಯೇ ಗೂಡಿನಲ್ಲಿ ನನ್ನ ನಾಯಿ ಅಡಿಯಪ್ಪ ಬೊಗಳಿದ ಸದ್ದು. ಹೈಸ್ಕೂಲು ದಿನಗಳಿಂದಲೂ ತೇಜಸ್ವಿಯವರ ಬರಹಗಳ ಅಭಿಮಾನಿಯಾದ ನಾನು, ಅವರ ಬೇಟೆಕಥೆಗಳಿಂದ ಪ್ರೇರಿತನಾಗಿ ನನ್ನ ಪ್ರೀತಿಯ ನಾಯಿಗೆ ‘ಅಡಿಯಪ್ಪ’ ಎಂದೇ ಹೆಸರಿಟ್ಟಿದ್ದೆ. “ಹಾಳಾದ್ದು ಹಂದಿ ಇಷ್ಟು ಬೇಗ ಬಂದಿತೇ?” ಎಂದು ಬೈದುಕೊಳ್ಳುತ್ತಾ ಟಾರ್ಚನ್ನು ಕೈನಲ್ಲಿಡಿದು ಅಂಗಳದಿಂದ ತೋಟಕ್ಕೆ ಶಬ್ದ ಬಂದತ್ತ ಬೆಳಕು ಬಿಟ್ಟೆ. ಫೋಟಾನ್‌ಗಳ ಪ್ರವಾಹವೇ ಕ್ಷಣಮಾತ್ರದಲ್ಲಿ ಗುರಿಯತ್ತ ದಾಂಗುಡಿ ಇಟ್ಟಿತು. ಬೆಳಕಿನ ಕೋಲಿನ ಇನ್ನೊಂದು ತುದಿಯಲ್ಲಿ ಎರಡು ಕಣ್ಣುಗಳು ಮಿಣ ಮಿಣ ಮಿನುಗಿದವು.
“ಅರೆ!!! ಹಂದಿಯ ಕಂಗಳ ನಡುವಿನ ಅಂತರ ಹೀಗಿರುವುದಿಲ್ಲವಲ್ಲ!!!!” ಎಂದು ಯೋಚಿಸುತ್ತಿರುವಾಗಲೇ ಅಡಿಯಪ್ಪನ ಬೊಗಳುವ ದಾಟಿ ಬದಲಾಯಿತು.
ಯೋಚಿಸುತ್ತಿದ್ದವನಿಗೆ ಸಣ್ಣಗೆ ಗುರುಗುಟ್ಟುವ ಶಬ್ದ ಕಿವಿಯ ಮೇಲೆ ಬಿದ್ದ ಕೂಡಲೇ ಇದು ಯಾವುದೋ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ ಎಂದು ಅರಿವಾಯಿತು. ಫಕ್ಕನೆ ಎರಡು ವಾರದ ಹಿಂದೆ ನಡೆದ ಘಟನೆ ನೆನಪಾಯಿತು.
ಅಂದು ಸಂಜೆ ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್ಸಾಗುತ್ತಿದ್ದೆ. ಇವಳು ತುಳಸಿಕಟ್ಟೆಯ ಮುಂದೆ ದೀಪ ಹಚ್ಚಿ ಹಿಂದೆ ತಿರುಗಿದ್ದಳಷ್ಟೆ. ಅದೆಲ್ಲಿತ್ತೋ ಹುಲಿಕಿರುಬ, ಅಂಗಳದಲ್ಲಿದ್ದ ಅಡಿಯಪ್ಪನ ಮೇಲೆರಗಿ ಕಣ್ಣೆವೆ ಮಿಟುಕುವಷ್ಟರಲ್ಲಿ ಹೊತ್ತೊಯ್ದಿತ್ತು. ಅನತಿ ದೂರದಲ್ಲೇ ಬರುತ್ತಿದ್ದ ನಾನು ಫಕ್ಕನೆ ಅದರ ದಾರಿಗೆದುರಾದಾಗ ಗಾಬರಿಗೊಂಡು ಅದರ ಹಿಡಿತ ತಪ್ಪಿ ಅಡಿಯಪ್ಪ ಅರೆಜೀವದೊಂದಿಗೆ ಪಾರಾಗಿದ್ದ. ಮುಂದಿನ ಒಂದು ವಾರ ನಾಟಿಮದ್ದು, ಇಂಗ್ಲೀಶ್ ಮದ್ದುಗಳೆಲ್ಲವನ್ನೂ ಪ್ರಯೋಗಿಸಿ ಅಡಿಯಪ್ಪನನ್ನು ಉಳಿಸಿಕೊಂಡಿದ್ದೆ. ಅದೇ ದಿನವೇ ಆಚಾರಿ ಅಬ್ದುಲ್ಲನಿಗೆ ಹೇಳಿಸಿ ಒಂದು ನಾಯಿಗೂಡನ್ನು ಮಾಡಿಸಿದ್ದೆ.
ಇವೆಲ್ಲವೂ ನೆನಪಾಗಿ, ಹಾಗೆಯೇ ನಾಯಿಯನ್ನು ಗೂಡಿನಲ್ಲಿ ಹಾಕಿದ್ದು ನೆನಪಾಗಿ, ಸಮಾಧಾನದ ನಿಟ್ಟುಸಿರು ಬಿಟ್ಟೆ. ಆದರೆ ಇದು ಬಾಳೆಹಿಂಡಿನಲ್ಲಿ ಅಡಗಿದ್ದರಿಂದ ಕಿರುಬನೇ ಅಥವಾ ಇನ್ನಾವುದೋ ಪ್ರಾಣಿಯೇ ಎಂದು ಖಾತರಿಯಾಗಿರಲಿಲ್ಲ.
ಬೆಳಕು ಬಿದ್ದ ಎರಡೇ ಕ್ಷಣದಲ್ಲಿ ಅದು ಫಕ್ಕನೆ ಹೊರಬಂದು ಕಾಡಿನತ್ತ ಓಡಲು ಉದ್ಯುಕ್ತವಾಯಿತು. ಆಗ ಅದರ ಸಂಪೂರ್ಣ ದೇಹ ನನ್ನ ನಿಲುಕಿಗೆ ದಕ್ಕಿತು. ಅದು ಏನೆಂದು ತಿಳಿದು ಚಕಿತಗೊಂಡೆ. ಅದು ಕಿರುಬನಾಗಿರದೇ ಒಂದು ಬೆಕ್ಕಾಗಿತ್ತು. ಮಲಬಾರ್ ಸೀವೆಟ್ ಬೆಕ್ಕು!!! ಸಂಪೂರ್ಣವಾಗಿ ನಶಿಸಿ ಹೋಗಿದೆ ಎಂದೇ ನಂಬಲಾದ ಸಸ್ತನಿಯೊಂದು ನನ್ನ ತೋಟದಲ್ಲಿ ಪ್ರತ್ಯಕ್ಷವಾದಾಗ ಸಖೇದಾಶ್ಚರ್ಯಗೊಂಡೆ. ನನಗೆ ಸಂಪೂರ್ಣ ದರ್ಶನ ಕೊಟ್ಟ ಮರುಕ್ಷಣವೇ ಅದು ಕಾಡಿನತ್ತ ಓಟ ಕಿತ್ತಿತು.
ಅದರ ಚಿತ್ರವನ್ನೇ ಮನದಲ್ಲಿ ತುಂಬಿಕೊಂಡು ಮನೆಗೆ ವಾಪಸ್ಸಾದೆ. ಯಾವ ಜೀವ ವಿಜ್ಞಾನಿಗಳ ಕಣ್ಣಿಗೂ ಕಾಣಿಸಿಕೊಳ್ಳದೇ ನಿಗೂಢವಾಗಿದ್ದ ಈ ಪ್ರಾಣಿ, ಕಾಡು ಬಿಟ್ಟು ನನ್ನ ತೋಟಕ್ಕೆ ಬರಲು ಕಾರಣವೇನಿರಬಹುದೆಂದು ಚಿಂತಿಸುತ್ತಾ ಹಾಸಿಗೆಯ ಮೇಲೆ ಮಲಗಿದೆ. ಹಾಗೆಯೇ ಅದರ ಆಹಾರ ಪದ್ಧತಿಗಳನ್ನು ಜ್ಞಾಪಿಸಿಕೊಳ್ಳತೊಡಗಿದೆ. ಮಲಬಾರ್ ಸೀವೆಟ್ ಕೆಲ ಚಿಕ್ಕ ಪ್ರಾಣಿಗಳನ್ನೂ, ಮೊಟ್ಟೆಗಳನ್ನೂ ಇಷ್ಟಪಟ್ಟು ತಿನ್ನುತ್ತದೆಂದು ಎಲ್ಲೋ ಓದಿದ್ದು ನೆನಪಾಯಿತು. ಸಂಜೆ ಹೆಗ್ಗಾಲುವೆಯ ಬಳಿ ಕಟ್ಟ ಹಾಕಲು ಹೋಗಿದ್ದಾಗ ಒಂದೆರಡು ಹುಂಡುಕೋಳಿಗಳು ಸರ‍್ರೆಂದು ಸದ್ದು ಮಾಡುತ್ತಾ, ನನ್ನನ್ನೇ ಗಾಬರಿಗೊಳಿಸಿ ಓಡಿಹೋಗಿದ್ದವು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲೇ ಜರೀಗಿಡಗಳ ಸಂದಿಯಲ್ಲಿ ಗೂಡು ಮಾಡಿಕೊಂಡ ಕೋಳಿ, ಎರಡು ಮೊಟ್ಟೆ ಇಟ್ಟದ್ದು ಕಂಡಿತ್ತು. ಆ ಮೊಟ್ಟೆಗಳನ್ನು ದಿನವೂ ಗಮನಿಸಿ, ಹುಂಡು ಕೋಳಿಗಳ ಜೀವನಶೈಲಿಯನ್ನು ಅಭ್ಯಸಿಸಬೇಕೆಂದುಕೊಂಡಿದ್ದೆ. ಬಹುಶಃ ಆ ಮೊಟ್ಟೆಗಳ ಜಾಡು ಹಿಡಿದೇ ಸೀವೆಟ್ ಬೆಕ್ಕು ಬಂದಿರಬಹುದೆಂದು ತೋಚಿ, ಮೊಟ್ಟೆಗಳ ಬಗ್ಗೆ ದುಗುಡವೂ, ಅಪರೂಪದ ಬೆಕ್ಕು ಬಂದಿರುವುದರ ಬಗ್ಗೆ ಸಂಭ್ರಮವೂ ಏಕಕಾಲಕ್ಕೆ ಉಂಟಾಯಿತು. ನಾಳೆ ಆ ಮೊಟ್ಟೆಗಳನ್ನು ಪರಿಶೀಲಿಸಬೇಕೆಂದು ನಿರ್ಧರಿಸಿ, ಕಣ್ಣೆವೆಗಳನ್ನು ಮುಚ್ಚಿದೆ.
ಈಗ ಎದ್ದವನೇ ಇವಳ ತಿಂಡಿಗೂ ಕಾಯದೇ ತೋಟಕ್ಕೆ ಓಡಿದೆ. ಜರೀಗಿಡವನ್ನು ದೂರದಿಂದಲೇ ಅವಲೋಕಿಸಿದೆ. ಅಲ್ಲೇನೂ ಅಸಹಜವಾದ, ಸಂಘರ್ಷದ ಚಿಹ್ನೆಗಳು ಕಾಣಿಸಲಿಲ್ಲ. ಇನ್ನೂ ಸ್ವಲ್ಪ ಹತ್ತಿರದಿಂದ ಪರಿಶೀಲಿಸಿದಾಗ, ಹುಂಡುಕೋಳಿ ಆಹಾರಕ್ಕೆ ಹೊರ ಹೊರಟಿದ್ದೂ, ಗೂಡಿನಲ್ಲಿ ಎರಡು ಸುಲಿಯದ ಅಡಿಕೆ ಗಾತ್ರದ ಕೆಂಪು ಚಿಕ್ಕೆಗಳಿಂದೊಡಗೂಡಿದ ಮೊಟ್ಟೆಗಳು ಕಂಡವು. ಸಮಾಧಾನದ ನಿಟ್ಟುಸಿರು ಬಿಡುತ್ತ, ಹುಂಡುಕೋಳಿಗೆ ಗೊತ್ತಾಗದಂತೆ ಜಾಗೃತೆಯಿಂದ ಮರಳಿ ಬಂದೆ.

ಯಾಕೋ ಏನೋ, ಸೀವೆಟ್ ಬೆಕ್ಕು ಮೊಟ್ಟೆಗಳಿಗಾಗಿ ಇಂದು ರಾತ್ರಿಯೂ ಬರಬಹುದೆಂದು ಗಾಢವಾಗಿ ಅನಿಸತೊಡಗಿತು. ಯಾರ ಗಮನಕ್ಕೂ ಸಿಗದೇ, ಪ್ರಾಣಿ ಪ್ರಪಂಚದಲ್ಲೇ ನಶಿಸಿ ಹೋಗಿದೆಯೆಂದು ನಂಬಲಾದ ನಿಗೂಢ ಜೀವಿಯೊಂದು, ನನ್ನ ತೋಟದಲ್ಲಿ ಕಾಣಿಸಿಕೊಂಡದ್ದೇ ನನಗೆ ಹೆಮ್ಮೆಯೆನಿಸಿತು. ಅದರ ಜೀವನಶೈಲಿ, ಪಥ್ಯಗಳ ಬಗ್ಗೆ ಎಲ್ಲೂ ಅಷ್ಟಾಗಿ ಉಲ್ಲೇಖವಿರಲಿಲ್ಲ. ಕಾಲೇಜು ಜೀವನದಲ್ಲಿ ಪ್ರಾಣಿಶಾಸ್ತ್ರ ಅಭ್ಯಾಸ ಮಾಡಿದ್ದ ನಾನು, ಆ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದೆ. ಆದರೆ ಕಾಲಕ್ರಮೇಣ ಕೃಷಿ, ಮದುವೆ, ಮಕ್ಕಳು, ದನಕರುಗಳ ಚಾಕರಿಗಳಲ್ಲಿ ಎಲ್ಲ ಆದರ್ಶಗಳೂ, ಹೆಗ್ಗುರಿಗಳೂ ಹೇಳಹೆಸರಿಲ್ಲದಂತೆ ಮಾಯವಾಗಿದ್ದವು. ಈಗ ಆ ಎಲ್ಲ ಬಯಕೆಗಳು, ಆಕಾಂಕ್ಷೆಗಳು ಧುತ್ತನೆ ಹೊರಬಿದ್ದು ಕಣ್ಣೆದುರು ನರ್ತಿಸತೊಡಗಿದವು. ತಮ್ಮ ಮುಖಾರವಿಂದಗಳನ್ನು ನನ್ನೆಡೆಗೆ ಚಾಚಿ ಕಥಕ್ಕಳಿ ಶೈಲಿಯಲ್ಲಿ ಹುಬ್ಬು ಹಾರಿಸುತ್ತಾ ಮುಗುಳ್ನಗೆ ಬೀರಿದವು.
ಮೊಟ್ಟೆಗಳನ್ನೂ, ಮೊಟ್ಟೆ ಕದಿಯಲು ಬರಬಹುದಾದ ಬೆಕ್ಕನ್ನೂ ಜಾಗರೂಕತೆಯಿಂದ ರಾತ್ರಿಯಿಡೀ ಗಮನಿಸಲು ಜರೀಗಿಡಗಳ ಹತ್ತಿರದ ಏಲಕ್ಕಿ ಹಿಂಡಿನ ಪಕ್ಕದಲ್ಲಿ ಒಂದು ಮಚಾನನ್ನು ನಿರ್ಮಿಸತೊಡಗಿದೆ. ನನ್ನೆಲ್ಲ ಅಪಸವ್ಯಗಳನ್ನೂ, ಹುಚ್ಚಾಟಗಳನ್ನೂ ಇನ್ನಿಲ್ಲದಂತೆ ಸಹಿಸಿಕೊಂಡಿದ್ದ ನನ್ನವಳಿಗೆ ನನ್ನ ಖುಷಿ, ಉದ್ವೇಗ ಇನ್ನೊಂದು ಹುಚ್ಚಾಟದಂತೆ ಕಂಡು ಅವಳಿಂದ ಇನ್ನೂ ಸಹಿಸಿಕೊಳ್ಳಲಾಗಲಿಲ್ಲ.
“ಏನ್ರೀ… ಈಗ ಮತ್ತೆ ಇದಿನ್ನೇನನ್ನ ಶುರು ಹಚ್ಕೊಂಡ್ರಿ????”
“ಅಪರೂಪದ ಬೆಕ್ಕೊಂದು ಬರ್ತಾ ಇದೆ ನಮ್ ತೋಟಕ್ಕೆ. ಅದನ್ನು ಗಮನಿಸಿ ಅಭ್ಯಾಸ ಮಾಡೋಣ ಅಂತಾ.”
“ಸರಿ ಹೋಯ್ತು. ಹೋದ್ವಾರ ತಾನೇ, ಅದ್ಯಾವ್ದೋ ಓತಿಕ್ಯಾತನ ಬೆನ್ನು ಹತ್ತಿ, ಹಾರುವ ಓತಿ ಅಂದ್ಕೊಂಡು ಮರ ಹತ್ತಿ ಬಿದ್ದು ಕಾಲು ಮುರ್ಕೊಂಡ್ರಿ. ಈಗ ಇನ್ನೇನ್ ಮುರ್ಕೊಳಕ್ಕೆ ಹೊರಟಿದ್ದೀರೋ???”
“ಬಾಯ್ತೆಗೆದ್ರೆ ಬರೀ ಅಪಶಕುನಾನೇ ನುಡೀತಿಯಲ್ಲೇ? ಅದೇನೋ ಹಂಗಾಯ್ತು ಬಿಡು. ಆದ್ರೆ ಇದು ಅತೀ ಅಪರೂಪದ ಬೆಕ್ಕು. ಇಡೀ ಜಗತ್ನಲ್ಲೇ ನಾಮಾವಶೇಷ ಆಗೋಗಿದೆ ಅಂತ ಅಂದ್ಕೊಂಡಿದಾರೆ ಎಲ್ರೂ… ಈಗ ನಾನಿದನ್ನ ಕಂಡು ಹಿಡಿದು ಜಗತ್ತಿಗೆ ತೋರ್ಸಿ ಕೊಟ್ರೆ, ನಾನು ತುಂಬಾ ಫೇಮಸ್ ಆಗ್ತೀನಿ. ಜಗತ್ತಿನ ಎಲ್ಲ ಪ್ರಮುಖ ವಿಜ್ಞಾನ ಪತ್ರಿಕೆಗಳಲ್ಲಿ ನನ್ನ ಸಂಶೋಧನೆ ಮುಖಪುಟದ ಸುದ್ದಿಯಾಗಿ ಬರುತ್ತೆ. ನಿಂಗೇನ್ ಗೊತ್ತಾಗುತ್ತೆ ಇವೆಲ್ಲಾ??”
“ನನ್ ಕರ್ಮ. ನಿಮಗ್ಯಾವಾಗ ಬುದ್ಧಿ ಬರುತ್ತೋ, ಆ ದೇವ್ರಿಗೇ ಗೊತ್ತು. ಈ ನಾಯಿನೂ ಜೊತೆಗೆ ಸೇರಿಸ್ಕೊಂಡು ಅದನ್ನೂ ಹಾಳು ಮಾಡ್ತಿದ್ದೀರಿ. ಮೊನ್ನೆ ಮೊನ್ನೆ ಕಿರುಬ ಅದ್ರ ಮೇಲೆ ದಾಳಿ ಮಾಡಿದ್ದು ಮರ್ತೇ ಬಿಟ್ಟಿದ್ದೀರಿ ಅನ್ಸುತ್ತೆ. ನೋಡಿ ಈಗ, ಬೆಳಗಿನ ಜಾವಕ್ಕೇ ಮನೆ ಬಿಟ್ಟಿರೋ ನಾಯಿ ಇನ್ನೂ ಬಂದಿಲ್ಲ.”
`ಈ ಹಾಳಾದ ಅಡಿಯಪ್ಪ ಎಲ್ ಹೋದ್ನೋ. ಅವನ ಕಾರಣಕ್ಕೆ ನಾನು ಬಯ್ಯಿಸಿಕೊಳ್ಳಬೇಕು’ ಎಂದುಕೊಳ್ಳುತ್ತಾ ಹೆಂಡತಿಯ ಮಾತಿನೆಡೆಗೆ ಗಮನ ಕೊಡದೇ ನನ್ನ ಕೆಲಸ ಮುಂದುವರಿಸಿದೆ. ಸಂಜೆಯಾಗುತ್ತಿದ್ದಂತೆಯೇ ಅನತಿ ದೂರದಲ್ಲಿ ಬೆಳಿಗ್ಗೆ ಹಸಿರೆಲೆಗಳಿಂದ ನಿರ್ಮಿಸಿಕೊಂಡಿದ್ದ ಮಚಾನನ್ನು ಹೊಕ್ಕೆ.
ಹಗಲಿನ ಕಲರವವೆಲ್ಲ ಮುಗಿದ ಮೇಲೆ, ರಾತ್ರಿ ಹನ್ನೊಂದು ಮುಕ್ಕಾಲರ ಸುಮಾರಿಗೆ ನನ್ನಿರವಿನಿಂದ ಬಲಕ್ಕೆ ಸುಮಾರು ನೂರು ಮೀಟರ್ ದೂರದಲ್ಲಿ, ಯಾವುದೋ ಜೀವಿ ಹಳ್ಳದ ದಿಬ್ಬ ಹತ್ತಿದ್ದು ಸ್ಪಷ್ಟವಾಗಿ ಕೇಳಿಸಿತು. ಹೆಜ್ಜೆ ಸಪ್ಪಳ ನಿಧಾನಕ್ಕೆ ನನ್ನನ್ನು ಸಮೀಪಿಸತೊಡಗಿತು. ಆದರೆ ಎಷ್ಟು ಹೊತ್ತು ಕಾದರೂ ಬೆಕ್ಕು ಮೊಟ್ಟೆಗಳೆಡೆಗೆ ಬರಲೇ ಇಲ್ಲ. ಬದಲಾಗಿ ಸುಮಾರು ಐವತ್ತು ಮೀಟರ್ ದೂರದಲ್ಲಿ ನನ್ನ ಹಿಂದೆ ಜರಬರ ನೆಲ ಕೆದರುವ ಸದ್ದು. ನಮ್ಮನೆಯ ನಾಡಬೆಕ್ಕುಗಳು ಗುಳಿ ತೋಡಿ ಮಲ ಮೂತ್ರ ವಿಸರ್ಜಿಸುವುದರ ಅರಿವಿದ್ದ ನಾನು ಈ ಬೆಕ್ಕು ಅದೇ ರೀತಿ ಮಾಡುತ್ತಿದೆಯೆಂದೆಣಿಸಿದೆ. ಆದರೆ ಇನ್ನೂ ಒಂದು ಗಂಟೆ ಕಾದರೂ ಅದು ಹತ್ತಿರ ಬರುವ ಸುಳಿವೇ ಕಾಣಲಿಲ್ಲ. ನಾನು ಹೊರಬಿದ್ದರೆ ಅದು ಗಾಬರಿಯಾಗಿ ಓಡಿ ಹೋದೀತೆಂದು ಬಗೆದು ನಾನೂ ಹೊರಬರಲಿಲ್ಲ.
ಒಂದೇ ಕೋನದಲ್ಲಿ ಗಂಟೆಗಟ್ಟಲೆ ಕುಳಿತಿದ್ದರಿಂದ ಕಾಲು ಜೋಮು ಹಿಡಿದು ಅಸಹಕಾರ ತೋರಲಾರಂಭಿಸಿತು. ಹಾಗೆಯೇ ಶಬ್ದ ಮಾಡದೇ ಕಾಲನ್ನು ನೀಳವಾಗಿ ಚಾಚಿ ಆರಾಮಾಸನದಲ್ಲಿ ಪವಡಿಸಿದೆ. ಕಣ್ಣಿಗೆ ಜೊಂಪು ಹತ್ತಿದ್ದು ತಿಳಿಯಾದದ್ದು ಬೆಳಗ್ಗಿನ ಮಂಗಟ್ಟೆಗಳ ‘ಘರ್ ಘೊಕ್, ಘರ್ ಘೊಕ್’ ಹಾಗೂ ಕಾಡುಕೋಳಿಗಳ ‘ತೆಕ್ ತೆಕ್ ತೆಕೋ ತೆಕ್’ ಧ್ವನಿಗಳನ್ನು ಕೇಳಿದಾಗಲೇ.
ಒಡನೆ ಎದ್ದು ಮಚಾನಿನ ಹಿಂಭಾಗಕ್ಕೆ ಹೋಗಿ ಪರೀಕ್ಷಿಸಿದವನಿಗೆ ಕಾಡುಹಂದಿಯೊಂದು ಸಿಹಿಗೆಣಸು, ಕೆಸುವಿನ ಗಡ್ಡೆಗಳಿಗಾಗಿ ನೆಲವನ್ನು ಯರ‍್ರಾಬಿರ‍್ರಿಯಾಗಿ ಉತ್ತಿದ್ದು ಕಾಣಿಸಿತು. ಒಡನೆ ಹಂದಿಗಳನ್ನು ದೂರವಿರಿಸಲು ತೋಟದ ಪಕ್ಕದಲ್ಲಿ ದಿನವೂ ದೊಡ್ಡ ಒಣಮರದ ಕುಂಟೆಗೆ ಬೆಂಕಿ ಹಾಕುವ ಪದ್ಧತಿಗೆ ಆ ದಿನ ಬೆಕ್ಕಿನ ನೆಪವೊಡ್ಡಿ ವಿನಾಯಿತಿ ಘೋಷಿಸಿದ್ದು ನೆನಪಾಗಿ ತಲೆ ಚಚ್ಚಿಕೊಂಡೆ. ಇನ್ನೂ ನನ್ನವಳಿಂದ ಸಹಸ್ರನಾಮಾರ್ಚನೆ ಗ್ಯಾರಂಟಿ ಎಂದು ಎದುರಿಸಲು ಸಿದ್ಧನಾಗಿ ಮನೆಗೆ ಹೋದೆ.
ಆದರೆ ಬೆಕ್ಕಿನ ಮೋಡಿ ನನ್ನನ್ನು ಒಂದಿನಿತೂ ಬಿಟ್ಟು ಹೋಗಿರಲಿಲ್ಲ. ಮರುದಿನ ಸಂಜೆ ಮತ್ತದೇ ಮಚಾನಿನಲ್ಲಿ ಕಾದು ಕುಳಿತೆ. ಆದರೆ ಆ ರಾತ್ರಿಯೂ ನಿರಾಶೆಯೇ ಕಾದಿತ್ತು. ನಶಿಸಿಹೋಗಲಿರುವ ಜೀವತಳಿಯೊಂದನ್ನು ಅಭ್ಯಸಿಸಿ, ಪುನರುತ್ಥಾನಗೊಳಿಸಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಜೀವ ವಿಜ್ಞಾನಿಗಳಿಂದ ಪ್ರಶಂಸೆ, ಹೆಸರು ಗಳಿಸಬೇಕೆಂದು ಕಂಡಿದ್ದ ಕನಸಿಗೆ ಅಲ್ಲೇ ಎಳ್ಳು ನೀರು ಬಿಟ್ಟು, ಮನೆಗೆ ಹೊರಟೆ. ಆಗಲೇ ಅದೆಲ್ಲಿಂದಲೋ ಜಿಗಿಯುತ್ತ ಬಂದ ಅಡಿಯಪ್ಪ ಬಾಲವನ್ನಾಡಿಸಿ ಪ್ರೀತಿ ಸೂಚಿಸಿದ. “ಎಲಾ ಇವನ!!ಇಷ್ಟೊತ್ತಿಗೆ ನೀರೊಲೆಯಲ್ಲಿ ಹಂಡೆಯ ಅಡಿಯಲ್ಲಿ, ಬೂದಿ, ಭಸ್ಮಾರ್ಚಿತನಾಗಿ ನಿದ್ರಾದೇವಿಯ ಉಪಾಸನೆ ಮಾಡುತ್ತಿರುತ್ತಿದ್ದ ಇವನು ಬೆಳ್ಳಂಬೆಳಿಗ್ಗೆ ಈ ನಸುಕಿನಲ್ಲಿ ತೋಟಕ್ಕೆ ಬರುವ ಬುದ್ಧಿ ಹೇಗೆ ತೋರಿದ?” ಎಂದು ಚಕಿತನಾದೆ. ಹಾಗೆ ಬಲಕ್ಕೆ ತಿರುಗಿ ಅವನು ಓಡಿ ಬಂದ ದಿಕ್ಕಿಗೆ ದೃಷ್ಟಿ ಬೀರಿ ಕಾಡು-ಕೊತ್ತಂಬರಿಯನ್ನು ಕೀಳಲು ಬಂದ ನನ್ನವಳನ್ನು ಕಂಡು ಅವಳತ್ತ ಎರಡೆಜ್ಜೆ ಎತ್ತಿಟ್ಟೆ.
ನನ್ನಿಂದ ಮುಂದೆ ಓಡಿದ ಅಡಿಯಪ್ಪ ಅನತಿದೂರದಲ್ಲೇ ಅಡಿಕೆ ಮರದ ಬುಡವನ್ನು ಮೂಸಿದ್ದೂ, ಹಲವು ಹೊನ್ನೊಣಗಳು ಜೊಯ್ಯೆಂದು ಹಾರಿದ್ದೂ, ನನ್ನವಳು ಆ ಕಡೆ ನೋಡಿ ಪರೀಕ್ಷಿಸುತ್ತಿರುವುದೂ, ಆ ನಂತರ ನನ್ನೆಡೆಗೆ ನೋಡಿ ವ್ಯಂಗ್ಯದ ನಗೆ ಬೀರುತ್ತಿರುವುದೂ ಕಾಣಿಸಿತು.
“ಇಲ್ನೋಡಿ ನಿಮ್ಮ ಅಪರೂಪದ ಪ್ರಾಣಿ, ನಿಮಗಾಗಿ ಕಾದು ಕೂತಿದೆ” ಎಂಬ ಆಕೆಯ ವ್ಯಂಗ್ಯೋಕ್ತಿಗಳಿಗೆ ಕಿವಿಗೊಡದೇ ಲಗುಬಗೆಯಿಂದ ಆ ಅಡಿಕೆ ಮರದತ್ತ ದಾಪುಗಾಲು ಹಾಕುತ್ತಿದ್ದಂತೆಯೇ ರಪ್ಪೆಂದು ಮೂಗಿಗೆ ದುರ್ವಾಸನೆ ಬಡಿಯಿತು. ಅದೇನೆಂದು ಹತ್ತಿರ ಹೋಗಿ ನೋಡಿದರೆ, ಸತ್ತಿರುವ ‘ಸೀವೆಟ್ ಬೆಕ್ಕು!!!’. ಬೆಕ್ಕನ್ನು ಈ ಸ್ಥಿತಿಯಲ್ಲಿ ನೋಡಿ ನನಗೆ ಬಹಳ ಆಘಾತವಾಯಿತು. ಬೆಕ್ಕಿನ ಅವಸ್ಥೆ ನೋಡಿದರೆ, ಅದು ಸತ್ತು ಅದಾಗಲೇ ಎರಡು ದಿನವಾಗಿರಬಹುದು. ಬಹುಶಃ ನನ್ನ ಕಣ್ಣಿಗೆ ಮೊದಲ ಬಾರಿಗೆ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅದು ತನ್ನ ಪ್ರಾಣ ತೊರೆದಿತ್ತು.
ಚೆಂಡೆ ಬಾಲದ, ಮನೆಬೆಕ್ಕಿಗೆ ಹೋಲಿಸಿದರೆ ಕೊಂಚ ಉದ್ದವೆಂದೇ ಹೇಳಬಹುದಾದ ಮೂತಿಯನ್ನು ಹೊಂದಿದ, ಪಟ್ಟೆ ಮೈಯ ಬೆಕ್ಕನ್ನು ಬೇಟೆಯಾಡಿದ ಅಡಿಯಪ್ಪ ಅದನ್ನೇಕೋ ತಿಂದಿರಲಿಲ್ಲ. ಬಹುಶಃ ಸತ್ತ ಬೆಕ್ಕಿಗೆ ಮುತ್ತಿಕೊಂಡಿದ್ದ ಆಕ್ರಮಣಕಾರಿ ಕೆಂಪಿರುವೆಗಳು, ಅದನ್ನು ಮುಟ್ಟಗೊಟ್ಟಿರಲಿಲ್ಲ.
ಬಹಳೇ ಆಘಾತಗೊಂಡಿದ್ದ ಮನಸ್ಸನ್ನು ತಹಬಂದಿಗೆ ತರಲು ನನಗೆ ತುಸು ಹೆಚ್ಚೇ ಸಮಯ ಹಿಡಿಯಿತು. ಅತ್ಯಪರೂಪದ ಜೀವಿಯ ಕೊನೆಯ ಕುಡಿಯನ್ನೂ ಕಾಪಾಡಿಕೊಳ್ಳಲಾಗದ ನೋವು ನನ್ನ ಮನಸ್ಸನ್ನು ಕಿತ್ತು ತಿನ್ನಲಾರಂಭಿಸಿತು. ನಿರಾಶನಾಗಿ ಮನೆಗೆ ಹೊರಟವನಿಗೆ ಜರೀಗಿಡಗಳೆಡೆಯಿಂದ ಹುಂಡುಕೋಳಿಯು ಹೊರಹೊರಟಿದ್ದೂ, ಹಾಗೆಯೇ ಗೂಡಿನಲ್ಲಿ ಆಗತಾನೆ ಜನಿಸಿದ ಎರಡು ಮರಿಗಳು ‘ಚಿಂವ್ ಚಿಂವ್’ ಎನ್ನುತ್ತಿರುವುದೂ ಕಾಣಿಸಿ ಮನಸ್ಸಿಗೆ ತುಸು ಸಮಾಧಾನವೆನಿಸಿತು. ಹೊಸಜೀವ ಸೃಷ್ಟಿಯಾದ ಸಮಾಧಾನದಿಂದ ಮನೆಯೆಡೆಗೆ ಕಾಲು ಹಾಕುತ್ತಾ, ಮೊದಲ ದಿನ ಸೀವೆಟ್ ಬೆಕ್ಕು ಕಾಣಿಸಿಕೊಂಡಿದ್ದ ಬಾಳೆಹಿಂಡಿನತ್ತ ವಿಷಾದದಿಂದ ದೃಷ್ಟಿ ಹಾಯಿಸಿದೆ. ಅಲ್ಲೇನೋ ಅಸಹಜ ಚಲನೆ ಕಾಣಿಸಿದಂತಾಗಿ, ಹಾಗೇ ನಿಂತು ತದೇಕಚಿತ್ತದಿಂದ ನೋಡಿ, ನನ್ನವಳೆಡೆಗೆ ವಿಜಯದ ನಗೆ ಹಾರಿಸಿದೆ. ನಾನು ನಕ್ಕಿದ್ದು ನೋಡಿ ಗೊಂದಲಗೊಂಡು ಬಾಳೆಹಿಂಡಿನಲ್ಲಿ ಅರ್ಥ ಹುಡುಕಿದ ನನ್ನವಳಿಗೆ ಫಕ್ಕನೆ ಹೊರಚಾಚಿದ ಎರಡು ಬೆಕ್ಕಿನ ಮರಿಗಳ ತಲೆಗಳು ಉತ್ತರ ಹೇಳಿದವು.
*****
ನನ್ನ ಕಥೆ, ನನ್ನ ಅಭಿಪ್ರಾಯ
ನನ್ನ ಇಷ್ಟದ ಕಥೆ ‘ಅಡಿಯಪ್ಪ ಮತ್ತು ಸಿವೆಟ್’. ಈ ಕಥೆಯನ್ನು ನಾನು ಇಷ್ಟಪಡಲು ಕಾರಣಗಳೆಂದರೆ, ಈ ಕಥಾಹಂದರ ನಾನು ಹುಟ್ಟಿಬೆಳೆದ ಮಲೆನಾಡು ಪ್ರದೇಶದ್ದು. ಕಥೆಯಲ್ಲಿ ಬರುವ ಆ ಅಡಿಕೆ ತೋಟಗಳು, ಹುಂಡು ಕೋಳಿಗಳು ಹಾಗೂ ಕಥೆಯ ಮುಖ್ಯಪ್ರಾಣವಾದ ಮಾನವ-ಕಾಡುಪ್ರಾಣಿ ಸಂಘರ್ಷ, ಇವನ್ನೆಲ್ಲ ನೋಡುತ್ತಲೇ ನಾನು ಬೆಳೆದಿದ್ದು. ಈ ಕಥೆಯನ್ನು ಬರೆಯುವಾಗ ಏಕಾಂತದಲ್ಲಿ ಆ ಅಡಿಕೆ ಹಿಂಗಾರದ ಸುವಾಸನೆ, ಹೆಗ್ಗಾಲುವೆಯಲ್ಲಿ ಜುಳು ಜುಳು ಹರಿಯುವ ನೀರು ಇವುಗಳನ್ನೆಲ್ಲ ಮನಸ್ಸಲ್ಲೇ ಅನುಭವಿಸಿ ಬರೆದಿದ್ದೇನೆ. ಹಾಗಾಗಿ ಇದನ್ನು ಮತ್ತೆ ಮತ್ತೆ ಓದುವಾಗಲೆಲ್ಲಾ ಆ ಸುಮಧುರ ನೆನಪುಗಳು ಉಮ್ಮಳಿಸಿ ಬಂದು ನನ್ನನ್ನು ಚೇತೋಹಾರಿಯನ್ನಾಗಿಸುತ್ತವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
