ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ ಮತ್ತೊಂದಕ್ಕ ಪ್ಯಾಟೀ ಬಸ್ಸು ಹತ್ತಂಗಾದಾವರು ಅಲ್ಲೇ ಮಾಡರ್ನ್ ಟೇಲರ್ ಹಂತ್ಯಾಕ ಹೊಲಸ್ಕೋತಿದ್ರು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ ‘ರಾಟಿ’

 

ಸುಖವು ಬೀದಿಯ ನೆರಳ
ದುಃಖವು ದೂಡುವ ಬಿಸಿಲ
ಸುಖ ದುಃಖ ನಮಗ ಸರಿಸಮನ/ ತಂಗೆಮ್ಮ
ಒಂದ ಬಿಟ್ಟೊಂದ ದೊರೆಯಾವ?
-ಮಧುರ ಚೆನ್ನ

ಕಿಟಕಿಯಿಂದ ತೂರಿ ಬಂದ ಮಳೆಯ ಗಾಳಿಗೆ ಥಂಡಿಯಾದಂತಾಗಿ ಮೈತುಂಬ ಹೊದಿಕೆಯನ್ನು ಎಳೆದುಕೊಂಡು ಹೊಳ್ಳಿ ಮಕ್ಕಂಡರೂ ಸಾವಕ್ಕಗ ನಿದ್ದಿ ಬರಲಿಲ್ಲ. ಮಗಾ ಮನಿ ಕಟ್ಟಿಸ್ಯಾನ ಅಂತ ಬಂದಾಳ, ಇಲ್ಲಂದ್ರ ಅಕೀಗೆ ಪ್ಯಾಟಿ ತಟುಗುನೂ ಹೊಂದಿಕಿಯಾಗದೇ ಇಲ್ಲ. ಮನಿಯೊಳಗನ ಮೆಟ್ಲು ಇರಂಗ ಮಾಡ್ಯಾನಂದ್ರೂ ಹತ್ತ ಸರ್ತಾ ಹತ್ತಿ ಇಳೀಬೇಕಂದ್ರ ಜೀವ ಹೋಗಿ ಹೊಳ್ಳಿ ಬಂದಂಗಾಗಿರ್ತೇತಿ. ಎರಡೂ ಹೆಣ್ಣು ಮಮ್ಮಕ್ಳು ಎಂಥಾ ಚೆಂದಾದವು ಆದರ ಹಂತ್ಯಾಕ ಬಂದು ಮಕ್ಕಣದೇ ಇಲ್ಲ ಖೋಡಿಗಳು. ತನಗರೇ ಅವಕ್ಕ ಬೇಕಾದಂಗ ಹೇಳಾಕ ಕತಿ ಪತಿ ಬರೂದಿಲ್ಲ ಮತ್ತೊಂದಲ್ಲ. ಹೇಳಿದ್ರ ಹೊಲದ್ ಸುದ್ದಿ, ದನೀ ಕರೀ ಸುದ್ದಿ ಹೇಳಬೋದು. ಬರೇ ಅವರವ್ವಗ ಅಂಟಿಕೆಂಡು ಇರತಾವು. ಇನ್ನ ಮ್ಯಾಲ ಹಂತೇಕ ಬಂದ್ರ ಮಾತ್ ಸಮೇಕ ಆಡಸಬಾರದು ಅನಕಂಡ್ಲು. ಊರಾಗರ ಇದ್ರ, ಮಳೀ ಆತೋ ಹೆಂಗೋ ಹರಗಸಾಕ ಹನುಮಣ್ಣಗ ಹೇಳಿ ಬಂದಿದ್ರ ಬೇಷಿತ್ತು ಅನ್ನಸ್ತು.

ಮಲಗೂ ಕೋಣಿವಳಗ ನೀಲಿ ಬಣ್ಣದ ಲೈಟು ಇದ್ರ ನಿದ್ದಿ ಬೇಷ್ಯಗ ಬರತತಿ ಅಂತ ಕಟ್ಟಿಸಿದ ಎಲ್ಲಾ ರೂಮಿನ್ಯಾಗೂ ನೀಲಿ ಬಲ್ಪು ತಂದು ಹಾಕ್ಯಾನರೆ ಹೌದು. ಆದರ ನೆಗದು ಬೀಳ್ಲಿ ಅಕಡೇ! ಕಣ್ಣು ಉರೀತಾವು ಖರೆ ನಿದ್ದಿ ಹತ್ತವಲ್ದು ಅಂತ ಗುಣು ಗುಣು ಮಾಡಿಕೆಂತ ಎದ್ದು ಹೋಗಿ ನೀರು ಕುಡದು ಕಾಲಮಡದು ಬಂದು ಮಕ್ಕಂಡ್ರ ಮತ್ತ ಯೋಚನಿ ಸುರುವಾದ್ವು. ಎಷ್ಟೊತ್ತನಾ ಹಿಂಗ ನೂರಾಎಂಟು ದ್ಯಾಸದೊಳಗ ಹೊಳ್ಳೀಮಳ್ಳೀ ಒದ್ದ್ಯಾಡಿ ಕಡೀಕ ಬೆಳಗಿನ ಜಾವದಾಗ ನಿದ್ದಿ ಹತ್ತಿತ್ತೋ ಏನೋ ಮಗಾ ಬಡದು ಬಡದು “ಯವಾ ಏಳಬೇ. ಎಂಟಾಗೇತೀ, ಇನ್ನಾ ಮಕ್ಕಂಡಿಯಲ್ಲ” ಅಂತ ಎಬಸಾಣ ಎಚ್ಚರಾತು. ಕೂಸುಗುಳು ಆಗಲೇ ಸಾಲೀಗೆ ಹೊಂಟ ನಿಂತಿದ್ವು. ಯಾಕೋ ಬಾಳಾ ಬ್ಯಾಸರ ಅನ್ನಸ್ತು ಸಾವಕ್ಕಗ. “ತಮ್ಮಾ, ಹೇಮಣ್ಣ, ಇಗಾ ಇವತ್ತು ರಾತ್ರಿ ಬಸ್ಸಿಗೆ ಕುಂದ್ರಿಸಿಬಿಡೆಪ್ಪ, ಜೀವಕ್ಕ ಸುಧಾರಸವಲ್ಲದಾಗೇತಿ” ಅಂದು ಸೀರೀ ಚುಂಗೀಲೇ ಕಣ್ಣ ವರಿಸಿಕೆಂಡ್ಳು.

“ಯವಾ, ಏನಾತಬೇ ಮುಂಜ್ ಮುಂಜೇಲೆ ಕಣ್ಣೀರು ಹಾಕಾಕ, ನೋಡಾಮೇಳು, ಲಗೂ ಬಂದೆ ಅಂದ್ರ ಹಚ್ಚಿಸಿ ಬರ್ತೀನಿ. ಈಗ ಏಳು, ಜಳಕಾ ಮಾಡಿ ಉಣ್ಣ ನಡೀ” ಅಂದು ಮಕ್ಕಳನ್ನ ಸಾಲೀಗೆ ಬಿಡಾಕ ಹೋಗಿಬಿಟ್ಟ. ಸಾವಕ್ಕ ಸೊಸೀ ಕಡೆ ತಿರುಗಿ “ತಂಗೀ ಇವತ್ತ ಹುರಕಡ್ಲಿ, ಬೆಲ್ಲಾ ತಗದಿಡು. ಕರದಂಟು ಮಾಡಿ ಇಟ್ಟು ಹೊಕ್ಕೀನಿ. ಯಾಕ ಏನ ಮನಿ ನೆನಸತೈತೆವ್ವಾ ಜೀಂವಾ. ಅಲ್ಲಿ ನಿಮ್ ಮಾವ ಒಬ್ಬಂವ ಮಾಡಿಕೆಂಡು ಉಂಡರ ಉಂಡ ಇಲ್ಲಂದ್ರ ಇಲ್ಲ” ಅಂದು ಬಚ್ಚಲಮನೀಗೆ ನಡದ್ಲು.

ಕಾಲೆಲ್ಲಿಟ್ರ ಜಾರತಾವೋ ಅನ್ನುವಂಗಿದ್ದ ಸಾಪ ನೆಲಾ. ದರಾಸಲ ಜಳಕಕ್ಕ ಹೋದ್ರೂ ಸಾವಕ್ಕಗ ಜೀವ ಬಾಯಿಗೆ ಬಂದಂಗಾಗತಿತ್ತು. ಎಲ್ಲೆರೆ ಬಿದ್ದು ಬೆನ್ನು ಮುರದ್ರ ಸುಮ್ಮ ಮಗನ ಜೀವಕ್ಕ ಮೂಲಾದ್ರ ಹೆಂಗ ಅಂತ ಹಗಲೆಲ್ಲ ಅನ್ನಿಸತಿತ್ತು. ಆದ್ರ ಅವತ್ತು ಅಂಥಾದ್ದೇನೂ ಆಗಲಿಲ್ಲ. ತನ್ನ ಸೀರಿ ತಾನ ತೊಳಕಣುವಂಗ ಅವತ್ತೂ ತೊಳದು ಸೀರಿನ್ನ ನೀರಿಳಿಲಿ ಅಂತ ಇದ್ದ ಒಂದ ಮಳೀಗೆ ಸಿಗೇ ಹಾಕಲಿಕ್ಕೆ ಹೋದಳೋ ಇಲ್ಲೋ, ಹಸೀ ಸೀರಿ ಮಳೀಗೆ ಸಿಕ್ಕಂಡು ಉಳದದ್ದು ಹರಕಂಡು ಕೆಳಗ ಬಿತ್ತು. ಮನ್ನಿನ್ನೂ ಮನೀ ಪ್ರವೇಶಕ್ಕ ಚೊಲೋ ಸೀರಿ ಜತೀಗೆ ದಿನಾ ಉಡಾಕ ಇರ್ಲಿ ಅಂದು ಎರಡು ಕಾಟನ್ ಸೀರಿ ಕೊಡಿಸಿದ್ದ. ಹರದ ಹೋತಲ್ಲ ಅಂತ ಒಂದು ನಮೂನಿ ಕಜೀಲ ಅನ್ನಸ್ತು. ಯಾಕನ ಕಣ್ಣಾಗ ದಳದಳ ನೀರು ಇಳದುಬಿಟ್ವು. ಊರಿಗೆ ಹೋಗದೋ ಇರದೋ ಎರಡು ಮನಸು ಅನಕೊಂಡಾಕಿಗೆ ಈಗ ಕರೇನೂ ಹೋಗಿಬಿಡಾದು ವಾಸಿ ಅನ್ನಿಸಿಬಿಡ್ತು. ಸೊಸೀನ್ನ ಕೂಗಿ ಕರದು ವಸ್ತ್ರಾ ಇಸ್ಗಂಡು, ಹೊರಗ ಬಂದು ಬ್ಯಾರೆ ಸೀರಿ ಸುತಿಗೆಂಡ್ಲು. “ತಂಗೀ ಇಲ್ಲಿ ಯಾರರೇ ಹರದ ಬಟ್ಟೀ ರಿಪೇರಿ ಮಾಡಿಕೊಡತಾರೇನ ಕೇಳಬೇ?” ಅಂದು ಸೀರಿ ಹರದ ಕತಿ ವಿವರಿಸಿದ್ಲು. “ಇಲ್ಲ ಬಿಡ್ರೆತ್ತಿ.. ಇಲ್ಲಿ ಹಂಗ ಯಾರೂ ಹರದ ಬಟ್ಟಿ ಹೊಲದು ಕೊಡಾದಿಲ್ಲ. ಬಿಟ್ಟು ಬಿಡ್ರಿ ಅದನ್ನ. ಎದಕರೆ ಬರ್ತತಿ” ಅಂದಕಂತ ಸೊಸಿ ಅದನ್ನ ಒಣೆ ಹಾಕಿ ಬಂದು ತಾಟಿನ್ಯಾಗ ನಾಷ್ಟಾ ಹಚ್ಚಿಟ್ಳು.

ನಾಷ್ಟಾ ತಿಂದು ಸಕ್ರಿ ಇಲ್ಲದಂಗ ಚಾ ಮಾಡಿಸಿಕೆಂಡು ಕುಡದು ಜ್ವಾಳಾ ಹಸನು ಮಾಡಿಕೆಂತ ಕುಂತಾಕಿಗೆ ಝಗ್ಗನ್ನಂಗ ಊರಾಗ ಕರಬಸ್ಸಿಗೆ ಕೊಟ್ಟಿದ್ದ ರಾಟಿ ನೆನಪಾಗಿ ಬಿಡ್ತು. ಅಲ್ಲಾ ಯಾ ಮಾಯದಾಗ ಮುಳುಗಿದ್ನೇನ, ರಾಟೀನ್ನ ಮರ್ತ ಬಿಟ್ಟೀನಲಾ ಅನಿಸಿ ಅಕೀಗೆ ಒಮ್ಮೆಟಿಗೆ ಎಂಥಾ ನೆಮ್ಮದಿ ಅನಿಸಿಬಿಡ್ತು ಅಂದ್ರ, ಅಲ್ಲೀವರೆಗೂ ತಮ್ಮನಿ ಒಳಗ ಒಂದು ಹೊಲಿಗೀ ಮಶೀನ ಇಲ್ಲದ್ದ ಕೊರತಿ ಅಕೀಗೆ ಈಗ ಕಾಣಿಸಿಬಿಡ್ತು. ಅಪ್ಪ ತಾ ಗಂಡನ ಮನೀಗೆ ಬರಾಗ ಕೊಡಿಸಿಕಳಿಸಿದ್ದ ಡರ್ಬಿ ರಾಟಿ ಎಷ್ಟು ದಿವಸ ತನಿಗೆ ಆಸರಿ ಆಗಿತ್ತು. ಬಸರು ಬಾಣಂತನ ಎಲ್ಲಾ ಮುಗದುವಂದ್ರ ತನ್ನ ಕಾಲು ಕೈಯಿಗೆ ಹಬ್ಬ. ಬಟ್ಟಿ ತರಾದೂ, ಕತ್ತರಸದು, ಜಂಪರ್ ಹೊಲಿಯಾದು. ಅವಾಗಿನ ದಿನದಾಗ ಈಗ ಇರೂ ಅಷ್ಟು ಅರಿವಿ ದುಬಾರಿ ಇರಲಿಲ್ಲ. ಏನಿಲ್ಲ. ಕೇಳಿದವರಿಗೆ ಹೊಲದು ಹೊಲದು ಕೊಡತಿದ್ದೆ. “ಹಬ್ಬ ಹುಣಿವಿ ಬಂದ್ರ ಸಾಕು ಮನ್ಯಾಗ ಬರೇ ರಾಟಿ ಸೌಂಡು ಬಿಟ್ರ ಮತ್ಯಾವದರೇ ಆವಾಜೇ ಇರಂಗಿಲ್ಲ” ಅಂತ ಯಜಮಾನ ಎಷ್ಟು ಮಾತನತಿದ್ದ. ಹತ್ತಿಪ್ಪತ್ತು ವರ್ಸ ಬಳಸಿಕೆಂಡು ಕಡೀಗೆ ಮಕ್ಕಳು ಮರೀ ಜ್ವಾಪಾನ ಮಾಡದ್ರಾಗ ವಜ್ಜಿ ಆಗಿ ಆಗಿ ಮೂಲಿಗೆ ಸೇರಿಸಿಬಿಟ್ಟಿದ್ಲು. ಈಗ ಒಂದು ಹತ್ತು ವರ್ಷದ ತೆಳಗ ಕರಬಸ್ಸಿ ಬಂದು “ಬೇ ಸಾವಕ್ಕ, ನೀನೂ ಮಾವ ನಮಗ ಬೇಕಾದ್ದು ಟೈಮಿನ್ಯಾಗ ಬೇಕಾದಷ್ಟು ಮಾಡೀರೆ ಬೇ, ನಾ ಇಲ್ಲ ಅನ್ನಂಗಿಲ್ಲ. ಈಗ ಹೊಲದಾಗೂ ಮಳಿ ಇಲ್ಲದ್ದಕ್ಕ ಏನಂದ್ರ ಏನೂ ಬೆಳೆಯಾದಾಗವಲ್ತು. ಉಣ್ಣಾದು ಸಮೇಕ ತ್ರಾಸಾಗೇತಿ. ಹೋದ್ರ ಗೋವಾದ ಕಡೀ ಕೂಲಿ ಕೆಲಸಕ್ಕ ಹೋಗಬೇಕು. ಮಕ್ಕಳು ಸಾಲೀಗೆ ಹೊಕ್ಕಾವು. ಬಿಟ್ಟ ಹ್ವಾದೆಂದ್ರ ಇಕೀ ಒಬ್ಬಾಕಿನ ಆಗತಾಳ. ಅಲ್ಲೇ ಊರಾಗ ಹೊಲಿಗೀ ಕಲತಾಳಲ್ಲ. ಸಾವಕ್ಕನ ಹೊಲಿಗಿ ಮಶೀನ್ ಇಸ್ಕೊಂಡು ಬರ್ರಿ. ಮನಿಯಾಗನ ಹೊಲದು ಹೊಲದು ರೊಕ್ಕಾ ದುಡದರಾತು ಅಂತಾಳ. ಕೊಟ್ರ ಭಾಳಾ ಉಪ್ಕಾರಕ್ಕೇತಿ ನೋಡಬೇ” ಅಂದು ಮೈಯೆಲ್ಲ ದೀನನಾಗಿ ಕೇಳಿದ್ದ.

ಸಾವಕ್ಕಗ ಖರೇನೂ ಇಲ್ಲ ಅನ್ನಾಕ ಬಾಯಿ ಬರಲಿಲ್ಲ. “ಅಲ್ಲೋ ಹೊಸಾದು ತಗಂಬುಟ್ರಾತಪ” ಅಂತ ನಡುಕ ಮಾತಾಡಕ ಬಂದ ಗಂಡಗ ಕಣ್ಣಾಗ ಸನ್ನಿ ಮಾಡಿ ಚಾ ಮಾಡಾಕ ಎದ್ದು ಒಳಾಗ ಹೋಗಿದ್ಲು. “ಹೊಸಾದು ತಗಣಕ ಎಲ್ಲಿ ಆಕ್ಕತಿಪಾ, ಏನ ನಮ್ಮ ಸಾವಕ್ಕ ಒಂದ ನಾಕ ವರ್ಷಕ್ಕ ಅದನ್ನು ಕೊಟ್ಟಳಂದ್ರ ಹರದು ಹೋಗಂಗಿರ ನಮ್ಮ ಬಾಳಿವಿಗಳೂ ನೆಟ್ಟಗಾಗತಾವು. ಹರದ ಬಟ್ಟಿ ಹೊಲಿಯಾಕೂ ಆತು. ನಾಕೈದ ವರ್ಷದಾಗ ತಂದು ಕೊಟ್ಟಬಿಡ್ತನಪಾ” ಅನ್ನುತ್ತಿದ್ದದ್ದು ಸಾವಕ್ಕನಿಗೆ ಕೇಳಿಸಿತ್ತು. ತಟ್ಟಿ ತುಂಬಾ ಖಾರಮಂಡಕ್ಕಿನೂ ಚಾನೂ ತಂದು ಅವನ ಮುಂದ ಇಟ್ಟು “ತಗಂಡು ಹೋಗಯಪ್ಪಾ, ಯಾರ ಬ್ಯಾಡಂದಾರು. ಹೊಸಾದು ಅನ್ನೂ ಅಷ್ಟತ್ತಿಗೆ ರೊಕ್ಕ ಭಾಳಾ ಆಗ್ತಾವು. ಸ್ವಲ್ಪ ಸಣ್ ಪುಟ್ ರಿಪೇರಿ ಅದಾವು. ಹೋಗಮುಂದಾಗ ಅಲ್ಲೇ ಬಸ್ಟಾಂಡಿನ್ಯಾಗ ಐತೆಲ್ಲ ರಾಟೀ ಅಂಗಡಿ ಮಾಡಿಸಿಕೆಂಡ ಹೋಗಿಬಿಡು” ಅಂದು ಅದನ್ನ ಹೊತಗಂಡು ಹೋಗಾಕ ಗೋಣೀ ಚೀಲ ಸೈತ ಮುಂದ ತಂದಿಟ್ಟಿದ್ಲು. ತವರ ಮನ್ಯಾವರು ಯಾರರೆ ಬಂದು ಏನು ಕೇಳಿದ್ರೂ ಗಂಡ ಚುಚ್ಚಿ ಮಾತಾಡದು ಏನ ಹೊಸಾದಲ್ಲ ಅಕೀಗೆ. ಕೊಡಾಕ ಅವ್ರಿಗೇನೂ ಯಾವತ್ತೂ ಕಮ್ಮಿಯಾಗಿರಲಿಲ್ಲ. ಆದರ ಗಂಡಗ ಮನಸು ಸಣ್ಣದಿತ್ತು. ಅವನಿಗೆ ಆಗೀಗ ಬಂದು ಕೈಗಡದ ರೂಪದಲ್ಲಿ ಬಾಯಿತೆರೆಯುತ್ತಿದ್ದ ಹೆಂಣ್ತಿ ಮನ್ಯಾವರು ಅಂದ್ರ ಕಿರಿಕಿರಿಯಾಗುವುದಿತ್ತು. ತಾನರೇ ಏನು ಬಂಧು ಬಳಗಾ ಅಂತ ಹಚ್ಚಿಕೊಂಡಾವರೆ ಅಲ್ಲ ಮತ್ತೊಂದಲ್ಲ. ಎಲ್ಲಾರ್ನೂ ದೂರ ಇಟ್ಟು ಬಿಟ್ಟಿದ್ದ. ಸಾವಕ್ಕಗ ಬರಹೋಗಾವರು ಅಂದ್ರ ಜೀವ. ಯಾರರೆ ಎಷ್ಟ ಹೊತ್ತಿನ್ಯಾಗ ಯಾಕ ಬರಲಿ ಬ್ಯಾಸರಿಕಿ ಇಲ್ಲದಂಗ ಮಾಡಿ ನೀಡಿ ಕಳಸತಿದ್ಲು. ಹೆಚ್ಚೂ ಕಡಿಮಿ ಯಾರಿಗರೆ ಕೈ ಬಿಚ್ಚಿ ಏನರೆ ರೊಕ್ಕ ಪಕ್ಕ ಮತ್ತೊಂದು ಏನರೆ ಸಾವಕ್ಕ ಕೊಟ್ಟಾಗೆಲ್ಲಾ, “ನಿನಿಗೇನ ಗೊತ್ತಾಗತೈತಿ ಖೋಡಿ. ಎಷ್ಟ ಬೇಕ ಅಷ್ಟರಾಗ ಇರಬೇಕು. ಐತಿ ಅಂತ ಹೇಳಿ ಮಾಡಿ ಮಾಡಿ ನೀಡಾಕ ನಿಮ್ಮಪ್ಪನ ಗಂಟಲ್ಲ ಅದು” ಅಂದು ಬಿಡುತ್ತಿದ್ದ.

“ರೊಟ್ಟಿ ತಣ್ಣಗಾಗತಾವು ಉಣ್ಣಾಕ ಬರ್ರಿ” ಅಂತ ಕರದ ಸೊಸಿ ದನೀ ಕೇಳಿ ಸಾವಕ್ಕಗ ಯೋಚನೀ ಮಾಡಿಕೆಂತ ಹತ್ತಿದ ಜೊಂಪು ಸರ್ರಂತ ಇಳದು ಮ್ಯಾಕೆದ್ದು ಮಕಾ ತೊಳಕಂಡು ಒಲ್ಲದ ಮನಸಿಲೆ ನಾಕು ತುತ್ತು ಉಂಡು ಹುರಕಡ್ಲಿ ಹಸನು ಮಾಡಿಕೆಂತ ಹೊರಗಿನ ಕಟ್ಟಿಗೆ ಕುಂತ್ಲು. ಆ ರಾಟಿ ಕೊಟ್ಟ ಮ್ಯಾಗರೆ ಏನು ಗಂಡ ಆಗೀಗ ಅನ್ನಾದು ಕಮ್ಮಿ ಆಗಿರಲಿಲ್ಲ.

ಒಮ್ಮಿ ಅಂತ್ರೂ ದೊಡ್ಡ ಹುಡುಗನ್ನ ಕರದು “ಹೇಮ್ಯಾ, ಇಲ್ಲಿ ನೋಡು, ಆ ಕರಬಸ್ಸಿ ಹಂತ್ಯಾಕ ಹೋಗಿ ತಿಂಗ್ಳಾ ತಿಂಗ್ಳಾ ಇಪ್ಪತ್ತೈದು ರೂಪಾಯಿ ಬಾಡಿಗಿ ಕೊಡಂತಂದಾನ ಅಪ್ಪ ಅಂತ ಹೇಳಿ ಇಸ್ಗಂಡು ಬಾ” ಅಂತ ಕಳಿಸಿದ್ದಾಗ ಸಾವಕ್ಕಗ ಕಣ್ಣಾಗನ ನೀರು ಬಂದಿದ್ವು.

“ಅಲ್ಲಾ, ಎಲ್ಲಾ ಬಿಟ್ಟು ದುಡಕಂಡು ತಿನ್ನಾಕಂತ ಒಯ್ದಾನ. ಅವನ ಹೊಟ್ಟಿಗೆ ಆದರ ಸಾಕಾಗೇತಿ. ಮತ್ತ ಅದರಾಗ ಬೇಡೂದಂದ್ರ ಯಪ್ಪಾ, ದೇವರು ಮೆಚ್ಚತಾನೇನ್ರೀ?”

“ಯಾರಿಗೆ ಬೇಕ ನಿನ ನಿನ್ನ ದೇವರ ಕತೀ? ಅಂವಾ ಏನು ಸುಮ್ನ ಕೊಡೂದಿಲ್ಲ. ಈಗೇನು ಒಂದು ಜಂಪರ್ ಹೊಲದ್ರ ಇಪ್ಪತ್ತು ಬರತಾವು, ಅಂಗೀ ಹೊಲದ್ರ ಐವತ್ತಾಗತಾವು. ಮ್ಯಾಗ ಆಕಳಾ ಬ್ಯಾರೆ ಕಟಗೊಂಡಾನ. ಹಾಲಿಂದೂ ಮಸರಿಂದೂ ಎಲ್ಲಾ ಮಾಡ್ಕೊಂತಾನೋ ಇಲ್ಲೋ!? ಯಾರಿಗೇನೂ ಕಮ್ಮಿ ಆಗಿರೂದಿಲ್ಲ. ಎಲ್ಲಾ ನಿಂದ ನೀ ದೊಡ್ಡಸ್ತಿಕೀ ತೋರಿಸ್ಕೋಬೇಕಂತ ಹಂಗ ಮಾಡತೀ ನೋಡೂ. ನಮಗ ಇಲ್ಲಂದ ಕಾಲಕ್ಕ ಯಾರೂ ಬರಾಂಗಿಲ್ಲ ತಿಳಕೋ!”

ಕಾಲೆಲ್ಲಿಟ್ರ ಜಾರತಾವೋ ಅನ್ನುವಂಗಿದ್ದ ಸಾಪ ನೆಲಾ. ದರಾಸಲ ಜಳಕಕ್ಕ ಹೋದ್ರೂ ಸಾವಕ್ಕಗ ಜೀವ ಬಾಯಿಗೆ ಬಂದಂಗಾಗತಿತ್ತು. ಎಲ್ಲೆರೆ ಬಿದ್ದು ಬೆನ್ನು ಮುರದ್ರ ಸುಮ್ಮ ಮಗನ ಜೀವಕ್ಕ ಮೂಲಾದ್ರ ಹೆಂಗ ಅಂತ ಹಗಲೆಲ್ಲ ಅನ್ನಿಸತಿತ್ತು. ಆದ್ರ ಅವತ್ತು ಅಂಥಾದ್ದೇನೂ ಆಗಲಿಲ್ಲ.

“ಇಲ್ಲಂದ ಕಾಲ ಬರತಾವಂತರೆ ಯಾಕ ಬಗಸೀರೀ! ನಮಿಗೆ ಇಟಗೊಂಡು ನಾಕು ಮಂದೀಗೆ ಹಂಚೂವಷ್ಟ ಕೊಟ್ಟಾನ ಆ ದೇವ್ರು.” ಒಳಗೊಳಗೇ ಹಲುಬಿದ್ದಳು ಸಾವಕ್ಕ. ಹುಡುಗ ಅಪ್ಪಗ ಹೆದರಿ ಹೊಗಾ ಬರಾ ನಾಕ್ ರೂಪಾಯಿ ಬಸ್ ಚಾರ್ಜ್ ಕೊಟ್ಟು ಬಾಡಿಗಿ ಕೇಳಾಕ ಹೋಗಿಬರತಿತ್ತು. ಕರಬಸ್ಸಿಗೂ ಹಲ್ಲು ಕಟಕಟ ಕಡಿಯಂಗಾದ್ರುನೂ ಕೇಳಿದ ಕೂಡಲೇ ರಾಟಿ ಕೊಟ್ಟ ಸಾವಕ್ಕನ ಮಕಾ ನೆನಪಾಗಿ, ತನಗ ಬಂದಿದ್ದ ನೂರೈವತ್ತರಾಗ, ಇಪ್ಪತೈದು ಕೊಟ್ಟ ಕಳಿಸಿದ್ದ. ಆತನ ಹೆಂಣ್ತಿ “ಬ್ಯಾಸ್ರ ಮಾಡಿಕ್ಯಾ ಬ್ಯಾಡ ಬಿಡು, ಸಾವಕ್ಕ ಏನ ಹಂಗ ಹೇಳಿರೂದಿಲ್ಲ, ಚಿಗಪ್ಪಗ ಗನಾ ರೊಕ್ಕದ ಮಾರಿ ಬಡಕಂಡಾದ ಕಾಣ್ತತಿ. ಇಂದಲ್ಲ ನಾಳಿಗಿ ಬ್ಯಾಡ ಅಂತ ಅಂದ್ರೂ ಅನಬೋದು” ಅನಕಂತ ಸಮಾಧಾನ ಮಾಡಿ ಅಚ್ಚೇರು ಹಾಲು, ಕಾಲ ಕೇಜಿ ಕಾಸಿಟ್ಟಿದ್ದ ಎಮ್ಮೀ ತುಪ್ಪಾ, ಹಕ್ಕರಿಕಿ ಸೊಪ್ಪು, ಕೊತ್ತಂಬ್ರಿ ಸಿವುಡುನೂ ಹೆಮ್ಯಾನಗೂಡಾ ಕಳಿವಿಕೊಟ್ಟಿದ್ಲು.

ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ ಮತ್ತೊಂದಕ್ಕ ಪ್ಯಾಟೀ ಬಸ್ಸು ಹತ್ತಂಗಾದಾವರು ಅಲ್ಲೇ ಮಾಡರ್ನ್ ಟೇಲರ್ ಹಂತ್ಯಾಕ ಹೊಲಸ್ಕೋತಿದ್ರು. ತಾ ಉಡಾದು ವರ್ಷಕ್ಕೆರಡೇ ಕಚ್ಚೀಪಂಜಿ, ಧೋತರ ಮ್ಯಾಗೊಂದು ಮೈಯಂಗಿ ಆಗಿದ್ರೂನೂ ಸಾವಕ್ಕನ ಗಂಡ ಕರಬಸ್ಸಿ ದುಡಿಮೀ ಮ್ಯಾಗ ಹತ್ತಿ ಕುಂತದ್ದು ಸಣ್ಣ ಮಾತೇನೂ ಆಗಿರಲಿಲ್ಲ.

ಈಗ ಹೇಮಣ್ಣ ಇಷ್ಟು ಚೆಂದ ದುಡೀತಾನ. ದೆವ್ವನಂತಾ ಮನೀ ಕಟ್ಟಿಸ್ಯಾನ. ಬಂದು ನಾಕು ದಿನಾ ಇದ್ದು ಮಮ್ಮಕ್ಕಳಗೂಡಾ ಚೆಂದಗೆ ನಾಕು ದಿನಾ ಇದ್ದು ಹೋಗ ಅಂತ ಮಗಾ ಸೊಸೀ ಇಬ್ರೂ ಕರದು ಕರದು ಗಪ್ಪಾದ್ರು, ಆದರ ಅಕೀ ಗಂಡ ಮನಿ ಬಿಟ್ಟು ಯಕಡಿನೂ ಹೊಳ್ಳಿರಲಿಲ್ಲ. ಯಾರುವರೆ ಶ್ರಮಕ್ಕ ಹೋಗಬೇಕಂದ್ರೂ ಸಾವಕ್ಕ ಸಾವರ ಮಾತು ಕೇಳಿಸಿಕೋಬೇಕಾಗತಿತ್ತು.

“ನಾ ಮಣ್ಣಿಗೆ ಹೋದ್ರ ಹೋದಾವ್ರೇನು ಹೊಳ್ಳೀ ಬರ್ತಾರೇನು? ನನಗ ಅಲ್ಲಿ ರಂದಿ, ರವದಿ, ಅಳು, ಕರಕರಿ ನೋಡಾಕ ಆಗೂದಿಲ್ಲ” ಅನ್ನುತ್ತ ಯಾರ ಮಣ್ಣಿಗೂ ಹೋಗುತ್ತಲೇ ಇರಲಿಲ್ಲ. ಯಾರರೆ ಅಕ್ಕಿಕಾಳಿಗೆ ಕರದ್ರ ಎಷ್ಟ ಪ್ರೀತಿಲೆ ಹಚಿಗೊಂಡು ಹೋಗತಿದ್ಲೋ, ಮಣ್ಣಿಗೂ ಹಂಗ ಎದೀ ತುಂಬಾ ಧುಕ್ಕಾ ತುಂಬಿಕೆಂಡೇ ಹೋಗಿಬರತಿದ್ಲು ಸಾವಕ್ಕ.

“ಸತ್ತಾವರ ಮಣ್ಣಿಗೆ ರೊಕ್ಕ ಖರ್ಚು ಮಾಡೂದ ಒಂದ ಬಿಟ್ರ ಮತ್ತೇನೂ ಕಲಿಸಿಲ್ಲ ನೋಡು ನಿಮ್ಮಪ್ಪ” ಅಂದು ಚುಚ್ಚಿಯೇ ಬಿಡುವ. ತಿನ್ನಾಕ ಉಣ್ಣಾಕ ಸಮೇಕ ಕೈಯಾಗಿನ ರೊಕ್ಕಾ ಖರ್ಚು ಮಾಡಲಾರದಂಗ ಆತ ಬೆಳದ ಬಂದದ್ದರ ಗ್ಯಾನಿದ್ದ ಸಾವಕ್ಕ ಅತನಗೂಡಾ ಏನಂದ್ರ ಏನೂ ಕೇಳ್ತಿರಲಿಲ್ಲ. ಆಲೀಮಟ್ಟಿ ಸಂತೀಗೆ ಒಮ್ಮಿ ತಪ್ಪಿ ಕರಕೊಂಡು ಹೋಗಿಬಿಟ್ಟಿದ್ದ ಸಾವಕ್ಕನ್ನ. ಅಲ್ಲೇ ಯಲಗೂರು ಸನೇವ ಐತಂತ ಹೋಗಿಬರಾಮು ನಡಿ ಅಂತ ಗರ್ರಗರ್ರ ಕೇಳಿದ್ರೂ ಜಪ್ಪಂದಿರಲಿಲ್ಲ. ಕಡೀಕೆ ನಿಡಗುಂದ್ಯಾಗ ಚಾ ಕುಡಸು ಅಂದ್ರ ಸಮೇಕ ಅಕೀ ಕಡೆ ಹೊಳ್ಳಿ ನೋಡಿರಲಿಲ್ಲ ಅಂವಾ.

ಇದೆಲ್ಲಾ ನೆನಪಾಗಿ ಜಲುಮಕ್ಕ ಎಷ್ಟಿದ್ರೂ ಸಾಲದು ನೋಡು ಇತನಂಗ ಬಾಳಿವಿ ಮಾಡಿದ್ರ ಅನಿಸಿ ಒಳಗ ಗಡದಪ್ಪ ನೋವಿದ್ರೂನೂ ನಕ್ಕುಬಿಟ್ಲು ಸಾವಕ್ಕ. ಅಂಗಳ ಕಸಾ ಅಂದು ಗಿಡಕ್ಕ ನೀರು ಹಾಕತಿದ್ದ ಕೆಲಸದಾಕಿ ಸೊಸಿ ಮುಂದ “ಅಜ್ಜಿ ಯಾಕೋ ಒಬ್ರೆ ನಗ್ತಾ ಇದಾರೆ ನೋಡಿ ಅಕ್ಕಾ” ಅಂದು ಮನಿಗೆ ಹೋದ್ಲು.

“ಅತ್ತೀ ಯಾಕ ಏನ ನೆನಪಾತು. ನಗಾಕತ್ತೀರಿ?”

ಏನಿಲ್ಲ ಬಿಡವಾ. ನಿಮ್ಮ ಮಾವಂದು ಗದ್ದಲ ನೆನಪಾತು. ನಮ್ಮ ಕಾಕಾನ ಮಗ ಕರಬಸ್ಸಿಗೆ ನಮ್ ರಾಟಿ ಕೊಟ್ಟೀವಲಾ, ಅದನ್ನ ಯಾಕ ಕೊಟ್ಟಿ, ಹೊಳ್ಳಿ ಇಸಗೊಂಡ ಬಿಡು ಅಂತ ಹತ್ತಾರು ಹುಣಿವಿ ಅಮಾಸಿ ಮುಗಿಯೂಮಟಾ ಗುದ್ದ್ಯಾಡಿದ್ದ ನೋಡು. ಇವತ್ತು ಸೀರಿ ಹರೀತಲ್ಲ, ಎಲ್ಲಿ ಹೊಲಸಬೇಕು, ಎಂಥಾ ಚೆಂದನ ಸೀರಿ ಅನಕಂತ ಕುಂತಿದ್ದೆ. ಹೇಮಣ್ಣಗ ಹೇಳಿ ಒಂದ ಹೊಸಾ ರಾಟೀ ತರಿಸ್ಕೊಬೇಕ ನೋಡವಾ. ಹಿಂಗ ಸಣ್ಣಪುಟ್ಟ ಹರದುವಂದ್ರ ಊರಾಗ ಸಮೇತ ಯಾರೂ ಹೊಲದು ಕೊಡೂದಿಲ್ಲ ಈಗ. ಎಲ್ಲಾ ಬದಲಿ ಆಗಿಬಿಟ್ಟೇತಿ ಮಂದೀ” ಅನ್ನುತ್ತ ಎದ್ದು ಒಳನಡೆದಳು.

“ಅಲ್ಲತ್ತೀ, ಕೊಟ್ಟೇ ಮನಗಂಡ ಎಂಟತ್ತು ವರ್ಷ ಆತು ಅಂತೀರಿ. ಮತ್ತ್ಯಾಕ ಕೇಳೀರಿ ಬಿಡ್ರೆಲಾ. ನಿಮಗ ಇನ್ನಾ ಹೊಲಿಯೂ ಆಸಿ ಇದ್ರ ಇಲ್ಲೇ ಮನಾರ ಶಾಪ್ ಅದಾವು. ಇವ್ರನ್ನ ಕರ್ಕೊಂಡು ಹೋಗಿ ತಂದ್ರಾತು”

“ನಿಮ್ಮಾವ ರೊಕ್ಕ ಎಲ್ಲಿಂದ ಉದುರತಾವು ಅಂತ ಬಯ್ತಾನವಾ. ನಾ ಊರಿಗೆ ಹೋಗಿಂದ ಮ್ಯಾಲ ನೀವು ಗಾಡಿ ಮಾಡಕೊಂಡು ಊರಕಡೀ ಬಂದರ ಹೆಂಗರೆ ಯಾಕ ಆಗಲಿ ಒಂದ ತಂದ ಬಿಡು, ನೀನೂ ಒಂದು ತೊಗೋರ ಬೇ. ನೀ ಹೊಲೀ ಬಿಡು ಮನ್ಯಾಗ ರಾಟಿ ಅನ್ನೂದು ಇರಬೇಕ ತಿಳೀತೇನ. ಸಣ್ಣ ಸಣ್ಣ ಅರಿವಿ ಹರದ ಕೂಡಲೆ ಎಲ್ಲೆರ ಒಗದುಬಿಡ್ತೀರಿ. ಇಲ್ಲಾ ಹಂಗ ಹಿಂದಕ ಉಳದುಬಿಡತಾವು. ನಮ್ಮಗತೆ ಕೌದೀ ಮತ್ತೊಂದರೆ ಇಲ್ಲಿ ಹೊಲಿಯಾವರು ಸಿಗೂದಿಲ್ಲ. ನೀ ಹೇಳೂ ಹಂಗ ರಾಟಿ ಮತ್ತ ಹೊಳ್ಳಿ ಕೇಳೂದು ಚೊಲೊ ಆಗಂಗಿಲ್ಲ. ಇನ್ನ ಸ್ವಲ್ಪ ದಿವಸಕ್ಕ ಅವ್ನಿಗೂ ತನ್ನ ಮಕ್ಕಳ ಮದಿವಿಗಿದವಿ ಮಾಡದು ಬಂತಂದ್ರ ಆಸರಿ ಆಕೇತಿ” ಅನ್ನುತ್ತ ಹುರಕಡ್ಲಿ ಪುಡಿ ಮಾಡಲು ಅಣಿಮಾಡಿಕೊಳ್ಳತೊಡಗಿದಳು. ಮಮ್ಮಕ್ಕಳು ಸಾಲಿಯಿಂದ ಮನೀಗೆ ಬರೂದರೊಳಗ ಕರದಂಟು ಖಾರಮಂಡಕ್ಕಿ ರೆಡಿಯಾಗಿದ್ವು. ಬಟ್ಟಿ ಜೋಡಿಸಿಕೆಂಡ್ರಾತು ಅಂತ ಎದ್ದು ಒಳಗ ಬಂದ ಸಾವಕ್ಕಗ ಮತ್ತ ಮತ್ತ ಕರಬಸ್ಸಿ ನೆನಪಾಗತೊಡಗಿದ್ದ.

“ಪ್ಯಾಲಿ, ಸಾಲಿ ಚೆಂದಾಗಿ ಕಲತಿತ್ತಂದ್ರ ಬರೇ ಒಂದು ರಾಟಿ ಮ್ಯಾಗ ಬಾಳಿವಿ ಮಾಡಿಕೆಣಾ ಪರಿಸ್ಥಿತಿ ಬರ್ತಿರಲಿಲ್ಲ. ಚಿಗಪ್ಪ ಎಷ್ಟು ಆತನ್ನ ದಾರಿಗೆ ಹಚ್ಚಾಕ ನೋಡಿದ್ರೂ, ಹಚ್ಚಿದ ದಗದಾ ಎಲ್ಲಾ ಬಿಟ್ಟು ಬಿಟ್ಟು ಬಂದು ಮನೀ ಸೇರಿಕೆಂತಿದ್ದ ಮಂಗ. ಮದಿವಿ ಮಾಡಿದರರೆ ಸರಿ ಹೋದಾನು ಅಂತಂದು ಬಾಜೂಕಿನ ಹಳ್ಳ್ಯಾಗ ಹೆಣ್ಣು ನೋಡಿ ಮದಿವಿ ಮಾಡಿದ್ರು ಖರೆ, ಅದೂ ಬಂದು ಹೊಂದಿಕೆಣಾಕಾಗಲಾರದ ನಾಕಾರು ಸರ್ತೆ ತವರಮನೀಗೆ ಹೊಳ್ಳಿ ಹೊಳ್ಳಿ ಹೋಗಿತ್ತು. ಏಸು ಸಲ ಪಂಚಾಯತಿ ಮಾಡೂದು, ಹೊಳ್ಳಿ ಕರಕಂಬರಾದು ಮಾಡಿ ಮಾಡಿ ಸೋತ ಹೋಗಿದ್ದ ಚಿಗಪ್ಪ. ಚಿಗವ್ವ ಇದ್ದಿದ್ರ ಇಷ್ಟು ತ್ರಾಸ ಆಗಿರ್ತಿರ್ಲಿಕ್ಕಿಲ್ಲ. ದುಡಿಯೂ ಮಗಾ ಮನ್ಯಾಗ ಉಂಡುಉಂಡು ಮಕ್ಕೊಂಡ್ರ ಬಾಳಿವಿ ನಡದೀತರೆ ಹೆಂಗ ಅನಕಂತ ಅನಕಂತನ ಚಿಗಪ್ಪ ಮಣ್ಣಾಗಿ ಹೋಗಿದ್ದ. ಇದು ಮೂಳ ಇದ್ದ ಮೂರೆಕರೀ ಹೊಲಾ ಸಮೇಕ ಉಳಿಸಿಕೆಣಕಾಗಲಾರದಂಗ ತಿರುತಿರುಗಿ ಹೆಡ್ಡಾಗಿ ತನ್ನ ರಾಟೀ ಕೇಳಾಕ ಬಂದಾಗನ ಜರಾ ಜವಾಬ್ದಾರೀಲೇ ಮಾತಾಡಿದ್ದ. ಗಂಡನ ಮಾತೆಲ್ಲ ಕೇಳಿಸಿಕೆಂಡ ಮ್ಯಾಲೂ ಕರಬಸ್ಸಿಗೆ ರಾಟೀ ಕೊಡಾಕ ಇದ್ದ ಉದ್ದೇಶ ಅಂದ್ರ ಅವನ ಬಾಳಿವಿ ಸುದ್ದ ಆಗ್ಲಿ ಅನ್ನೂದಷ್ಟೇ ಆಗಿತ್ತು ತನಿಗೂ. ಕಡೀಗೆ ಹೇಮಣ್ಣಂದು, ಯಶುಂದು ಮದಿವಿ ಹತ್ರ ಬಂದಾಗ ಬಂದ ಸೊಸ್ತೇರು ಈಗೂ ಹೊಲಿಗೀ ಮಶಿನದ್ದು ತಿಂಗ್ಳಾ ತಿಂಗ್ಳಾ ರೊಕ್ಕಾ ತೊಗೊಂತಾರ ತಮ್ಮ ಮಾವ ಅಂದ್ರ ಸುಮಾರಾಗತೈತಿ ಅಂತ ಸಾವಕ್ಕ ಪರಿಪರಿಯಾಗಿ ಕೇಳಿಕೆಂಡು ರೊಕ್ಕ ಇಸಗಂಬರಾದು ಬಿಡಿಸಿದ್ಲು. ಇತ್ತಿತ್ತಲಾಗ ರೊಕ್ಕದ್ದು ಗರಾ ಜರಾ ಕಮ್ಮಿ ಆಗೇತಿ ಅಂದ್ರೂನೂ ಸೊಸೆಯಂದಿರ ಎದಿರಿಗೆ ಏನರ ಒಂದ ಮಾತಾಡಿ ಸಾವಕ್ಕಗ ಸಾಕು ಸಾಕು ಮಾಡಿಬಿಡತಿದ್ದ. ಅವನು ಮಾತಾಡದು ನೋಡಿಕೇಶಿ ಅವರೂ ಬರೂದು ಹೋಗೂದು ಅಪರೂಪ ಮಾಡಿಬಿಟ್ಟಿದ್ರು.

“ಇವತ್ತೇನು ಊರಿಗೆ ಹೋದಂಗನ, ಹೇಮಣ್ಣ ಇನ್ನೂತನಾ ಬಂದಿಲ್ಲ ಅಂದ್ರ ಬಸ್ಸಿಗೆ ಹಚ್ಚಿಬರಾವರರೆ ಯಾರು” ಅನಿಸಿ ರಾತ್ರೀ ಊಟಾ ವಲ್ಲ್ಯಂತ ಅಳಾಕತ್ತಿದ್ದ ಮಮ್ಮಕ್ಕಳನ್ನ ಸಮಾಧಾನ ಮಾಡಿ ಮಲಗಿಸಿ ಬಂದ ಸೊಸೀಗೆ ಅಂದ್ಲು “ತಂಗೀ ನಿಮ್ಮ ಮಾವಗ ಜರಾ ಫೋನ ಹಚ್ಚಿ ಕುಡ ಬೇ. ಏನ ಉಂಡನೋ ಯಾರ ಬಲ್ರೋ?”

ಎಷ್ಟು ಹೊತ್ತು ಹಚ್ಚಿದ್ರೂ ಯಾರೂ ಫೋನ್ ತಗೀಲಿಲ್ಲ. ಮೊಬೈಲ್ ಸಮೇಕ ಹೊಡಕೊಂಡ್ರೂ ಮಾವ ಫೋನ ಎತ್ತಲಾರದ್ದ ನೋಡಿ ಸಾವಕ್ಕಗೂ ಸೊಸೀಗೂ ಕೂಡೆ ಗಾಭರಿ ಆತು. ಹೇಮಣ್ಣಗ ಮಾಡಿದ್ರ ಅವನೂ ಮೀಟಿಂಗದಾಗ ಇದ್ದನೋ ಏನೋ ಎತ್ತಲೇ ಇಲ್ಲ. ಮನಿಗೆ ಬಂದ “ಮ್ಯಾಗ ಇಲ್ಲ ಬಿಡಬೇ ಮದ್ದ್ಯಾನದಾಗ ಅಪ್ಪ ಹಚ್ಚಿದ್ದ ಖರೆ, ಆದರ ನನಗ ಸವಡ ಸಿಗಲಿಲ್ಲ ಅಂತ ನಾ ಮಾತಾಡಿರಲಿಲ್ಲ ಅಂದ ಮಗ. ಬೆಳಗಾಗೂಮಟಾ ಯಾರಿಗೂ ನೆಟ್ಟಗ ನಿದ್ದಿ ಹತ್ತಲಿಲ್ಲ. ಸಾವಕ್ಕಗನ ಜೀವಕ್ಕ ಸಮಾಧಾನ ಇಲ್ಲ್ಯಾಗಿತ್ತು. ಮುಂಜಾನಿ ಎದ್ದಾಂವನ ಕಾಕಾನ ಮನಿಗೆ ಫೋನ್ ಹಚ್ಚಿದ್ರ ಅವರು ಹೇಳಿದ ಸುದ್ದಿ ನಂಬಾಕ ಆಗಲಿಲ್ಲ ಹೇಮಣ್ಣಗ. ಅವ್ವಗ ಹೆಂಗ ಹೇಳಾದು ಅನಕಂತ ಹೊರಗೂ ಒಳಗೂ ಅಡ್ಡಾಡಿ ಕಡೀಗೆ “ನಡೂ ಯವಾಗರೆ ಕರಬಸ್ಸಿ ಮಾಮಾ ಬಂದಿದ್ದನೇನು ಮನೀ ಕಡೆ. ನಿನ್ನಿ ಮುಂಜಾನಿ ಹೋಗಿಬಿಟ್ಟನಂತ ನೊಡು! ಅಪ್ಪ ಮಣ್ಣಿಗೆ ಹೋಗಿದ್ದನಂತ” ಅನ್ನೂದಕ್ಕೂ “ಆಂ ಹೇಮಣ್ಣಾ” ಅನಕೋಂತ ಸಾವಕ್ಕ ಕುರ್ಚೇದ ಮ್ಯಾಗ ಬಿದ್ದುಬಿಟ್ಳು. ಅಕೀನ್ನ ಸುಧಾರಸೂದು ಯಾರ ಕೈಯಿಂತಾನೂ ಆಗಲಿಲ್ಲ.

“ನಿನ್ನಿ ಸೀರಿ ಹರೀತು ಹರೀತು ಬರೇ ಅವಾಂನೆ ಮನಸಿನ್ಯಾಗ ತುಂಬಿಕೆಂಡಿದ್ದ. ಮತ್ತ ಯವಾಗೂ ಆತನ್ನ ನೆನಪು ತನಿಗೆ ಅಷ್ಟು ಕಾಡಿರಲಿಲ್ಲ. ಹೆಂತಾ ಪ್ರಮಾದ ಆತ ದೇವ್ರೇ. ಮಕ್ಕಳು ಇನ್ನಾ ಸಣ್ಣುವದಾವು. ಲಗ್ನ ಬ್ಯಾರೆ ಗೊತ್ತಾಗಿರಲಿಲ್ಲ. ಆರಾಮ ಇದ್ದನಲ್ಲ. ಏನಾಗಿದ್ದಿರಬಹುದು ಏಕದಂ ಹೋಗಿಬಿಟ್ಟ ಅಂತಂದ್ರ! ಯಾರ ಮಣ್ಣಿಗೂ ಹೋಗಲಾರದ ಗಂಡ, ಕರಬಸ್ಸಿಗೆ ರಾಟೀ ಯಾಕ ಕೊಟ್ಟಿ ಅಂತ ವರ್ಷಾನುಗಟ್ಲೆ ಬಯ್ದಾಡಿದ್ದ ಗಂಡ ತನಿಗೆ ಹೇಳಿದರ ಎಲ್ಲಿ ಎದೀ ಒಡೀತಾಳೋ ಅಂತ ಹೇಳಲೇ ಇಲ್ಲ ನೋಡು. ಕಡೀಕ ಒಮ್ಮಿ ಮಾರೀ ನೋಡತಿದ್ದೆನಲ್ಲ ದೇವರೇ” ಅಂದು ಬೆಳತನಾ ಕಣ್ಣೀರು ಹಾಕಿದ್ಲು.

ಹೊಳ್ಳಿ ಊರಿಗೆ ಬಂದ ಸಾವಕ್ಕಗ ಗಂಡನ ಮಾರೀ ನೋಡಾಕ ಆಗಲಿಲ್ಲ. ಯಾರ ಸತ್ರೂ ಎದಿ ವಡಿಲಾರದಂವ, ಕಣ್ಣೀರು ಹಾಕಲಾರದಂವ ಕರಬಸ್ಸಿ ಹೋಗಿದ್ದು ನೋಡಿ ಮಂಕಾಗಿಬಿಟ್ಟಿದ್ದ. ಮಾತಾಡಸಾಕ ಮನಿಗೆ ಹೋದ್ರ ಕರಬಸ್ಸಿ ಹೆಂಣ್ತಿ ಎದಿ ಬಡ್ಕಂಡು ಬಡ್ಕಂಡು ಹೊಯಿಕೆಂಡ್ಳು. “ಬೇ ಚಿಗವ್ವಾ, ನೋಡಬೇ. ನಿಮ್ಮ ತಮ್ಮ ಹೋಗಿಬಿಟ್ಟ, ನಾ ಒಬ್ಬಾಕಿನ ಹೆಂಗ ಸುಧಾರಿಸಲೆವ್ವಾ”.

ಆಕಿ ರೋದನ ಸುಮ್ಮಾಗಿದ್ದ ಸಾವಕ್ಕನ ಕಣ್ಣನ್ನ ಮತ್ತ ತ್ಯಾವ ಮಾಡಿದ್ವು. ಮ್ಯಾಗಿಂದ ಮ್ಯಾಗ ಚಿಗಪ್ಪ ರೊಕ್ಕಾ ಬಿಡದಂಗ ಕೇಳಿದ್ದ ಬ್ಯಾನಿ ಎದ್ಯಾಗ ಎಲ್ಲಿ ಅವಿತಿತ್ತೋ, ಎದ್ದು ದಡಾಬಡಾ ಒಳಗಿಂದ ಹಳೇ ಅಲುಮಿನಿಯಮ್ ಡಬ್ಬಿ ತಂದು ಅದರಾನ ರೊಕ್ಕಾ ಎಲ್ಲ ಸಾವಕ್ಕನ ಗಂಡನ ಮುಂದ ಸುರುವಿ, “ಯಪ್ಪಾ, ತೊಗೊಂಡ ಹೋಗಿಬಿಡ ನಿನ್ನ ರೊಕ್ಕಾ, ನಮಗೂ ಭಾಳ ವಜ್ಜ ಆಗಿದ್ವೋ ನಿನ್ನ ರೊಕ್ಕ. ತೊಗೊ ಎಲ್ಲಾನೂ ನಿನ್ನ ಮುಂದ ಸುರುವೀನಿ ನೋಡ! ಬರೋಬ್ಬರ ಅದಾವಿಲ್ಲ ಆರಾಮ ಕುಂತಕೇಶಿ ಎಣಸ್ಗೋ. ಬೇ ಸಾವಕ್ಕ, ಆಯಿತವಾರ ಹುಡುಗರ ಕಳಿವಿಕೇಶಿ ರಾಟೀ ತಂದು ಹಚ್ಚತೀನಿ ನಮ್ಮವ್ವಾ. ನಿನ್ನ ಉಪಕಾರ ನಾ ಸಾಯೂಮಟಾ ಮರಿಯೂದಿಲ್ಲ. ಹಿಂಗ ಮಾತಾಡತಾಳ ಅಂತ ಬಯ್ಕೋಬ್ಯಾಡ” ಅಂದ್ಲು.

“ಅಯ್ಯ ನಿನ ಮಂಗ್ಯಾ ಒಯ್ದು. ಹಂಗ್ಯಾಕ ಅಂದೀ ಬಿಡ ನಮ್ಮವ್ವಾ. ಸಮಾಧಾನ ಮಾಡಕೋವಾ. ಹಿಂಗ ಆಕ್ಕೈತಿ ಅಂತ ಯಾರಿಗೆ ಗೊತ್ತಿತ್ತ? ನಿನ್ನ ಈಗ ರೊಕ್ಕಾ ಯಾರು ಕುಡಂದ್ರು? ಹೋಗ ವಳಗ ಒಯ್ದಿಡು. ಹಂಗೆಲ್ಲಾ ದೊಡ್ಡಾವ್ರಿಗೆ ಅನಬಾರದು ತಂಗೀ” ಅಂದು ಸಾವಕ್ಕ ಅಕೀ ಕೈ ಗಚ್ಚ ಹಿಡದ ಸಮಾಧಾನ ಮಾಡಾಕ ನೋಡಿದ್ಲು.

“ಇಲ್ಲ ಬೇ, ಹೋದ ಆಯಿತವಾರ ಚಿಗಪ್ಪ ಸಂತ್ಯಾಗ ನಿಂದ್ರಿಸಿಗೊಂಡು ರೊಕ್ಕ ಕೊಡಲಾರದಂಗ ಕಣ್ಣುಮರಿವ್ಯಾಗಿ ಅಡ್ಡ್ಯಾಡತೀಯೇನಲೇ ಕರಬಸ್ಸಿ. ನಿಮ್ಮಕ್ಕ ಬಿಟ್ರೂ ನಾ ಬಿಡೂದಿಲ್ಲ ಏನಪಾ. ಎಲ್ಲಾ ಲೆಕ್ಕ ಹಚ್ಚಿ ಇಟ್ಟೀನೋ. ಐದು ಸಾವರ ಆಕ್ಕಾವು. ಮತ್ತ ನಾ ಏನೂ ಬಡ್ಡಿ ಹಿಡದಿಲ್ಲ. ನಿಮ್ಮಕ್ಕಗೇನ ತಿಳಿತೈತಿ. ರೊಕ್ಕದ ಗಿಡಾ ಹಚ್ಚ್ಯಾಳ ಅನ್ನೂವಂಗ ಮಾತಾಡ್ತಾಳಪಾ. ನಿಮ್ಮ ದೊಡಪ್ಪ ಏನರೆ ನಾಕಕ್ಷರ ಹೆಚಿಗಿ ಕಲಿಸಿದ್ರ ಇಂದ್ರಾಗಾಂದೀನೇ ಆಗತಿದ್ಲು ನೊಡು. ನಾ ಹಂಗಲ್ಲ ನೋಡಪಾ. ನಮಗ ಕೊಡೂದು ತೊಗೋಳ್ಳೊದ್ರೊಳಗ ಎಲ್ಲ ಲೆಕ್ಕ ನೆಟ್ಟಗ ಇದ್ರನ ಛೊಲೋ. ನಿಮ್ಮಗತೆ ಪುಗಸ್ಸಟ್ಟಿ ಮುದ್ದೀ ಮುರಿಯವರಲ್ಲಪಾ ನಾವು” ಅಂತ ನಗಿಚಾಟಿಕಿ ಮಾಡಕೊಂತಾನ ಇರದು ಮಾತಾಡಿ ಕಳಿಸಿದ್ದನಂತವಾ. ಸಂತ್ಯಾಗ ಮಂದೀ ನಡೂ ಅಂದದ್ದನ್ನ ನನ್ನ ಗಂಡಗ ಅರಿಗಿಸಿಕೊಳ್ಳಾಕ ಆಗಲಿಲ್ಲ ನೋಡಬೇ! ನನ್ನ ಹಣೀಬಾರ ಹೆಂಥಾದ್ದೈತಿ. ಅಲ್ಲಿಂದ ಬಂದಾಂವ ಛಳಿ ಬಂದು ಮಕ್ಕೊಂಡಬಿಟ್ಟ. ಸಲಾಯನ್ ಹಚ್ಚಿಸಿದೆ. ಗುಳಿಗೀ ನುಂಗಿಸಿದೆ. ಗಂಜಿ ಮಾಡಿಮಾಡಿ ಕುಡಿಸಿದೆ. ಅಂತ್ರಾ ಸೈತ್ ಕಟ್ಟಿಸಿದ್ನಿ. ಆದರೂ ನಿಮ್ಮ ತಮ್ಮಗ ಯಾದೂ ಬ್ಯಾಡಾತ ನೋಡ ಸಾವಕ್ಕಾ” ಅಂದು ಎದಿ ಬಡಕಂಡು ಬಡಕಂಡು ರೋದಿಸಿದ್ಲು ಕರಬಸ್ಸಿ ಹೆಂಣ್ತಿ.

ಸಾವಕ್ಕಗ ಗಂಡನ ಮಾರೀ ನೋಡಾದೂ ಹೇಸಿಗಿ ಅನ್ನಿಸಿಬಿಡ್ತು. ಆಗಿಂದಾಗನ ಏನಾರೆ ದೊಡ್ಡ ಆವಾಜದಾಗ ಕೆಟ್ಟ ಕೆಟ್ಟ ಮಾತ ಅಂದುಬಿಡಬೇಕಂತ ನೋಡಿದ್ಲು. ಆಗಲಿಲ್ಲ. ಸುಮ್ಮ ತೊಡೀ ಮ್ಯಾಗ ಬಿದ್ದ ಮಗಳ ಬೆನ್ನ ಸವರಿಕೆಂತ ಕುಂತಬಿಟ್ಲು. ಅಳಬೇಕು ಅನಿಸಿದ್ರೂ ಬರೇ ಗಂಟಲು ಬಿಗದು ಬಂತ ಖರೆ, ಕಣ್ಣಾಗ ಒಂದ ಹನಿ ನೀರು ಉದುರಲಿಲ್ಲ. ದುಡದ ಸುಖಾ ಅನುಬೋಸಾಕ ಆಗಲಾರದಂಗ ಎದ್ದು ಹೋಗಿಬಿಟ್ಟನಲ್ಲ ತಮ್ಮ ಅನ್ನುವ ದುಃಖವೂ, ಗಂಡನ ಮ್ಯಾಗಿನ ಆಕ್ರೋಶವೂ ಅಕೀ ಹೊಟ್ಟೆಯೊಳಗ ಹೇಳಾಕಾಗಲಾರದ ಸಂಕಟ ಹುಟ್ಟಿಸಿಬಿಟ್ವು. ಪಡಸಾಲ್ಯಾಗ ಇಟ್ಟಿದ್ದ ಡರ್ಬಿ ರಾಟೀ ಸಮೇಕ ತನ್ನೂ, ತನ್ನ ಗಂಡನ್ನೂ ನೋಡಿ ಕಟಕಟ ಹಲ್ಲು ಕಡದಂಗಾತು ಅಕೀಗೆ.

ಛಾಯಾ ಭಗವತಿ
ಒಂದಷ್ಟು ವರ್ಷಗಳ ಕೆಳಗೆ ಆತ್ಮೀಯರೊಬ್ಬರು ಭೆಟ್ಟಿಯಾದಾಗ ಮಾತಿನಲ್ಲಿ ಅವರೂರಲ್ಲಿ ರಾಟಿಯನ್ನು ಬಾಡಿಗೆ ಕೊಡುತ್ತಾರೆ ಎಂಬ ಕುತೂಹಲದ ಅಂಶವನ್ನು ಹಂಚಿಕೊಂಡಿದ್ದರು. ಅದು ಯಾಕೋ ಮನಸನ್ನು ಹೊಕ್ಕು ಬಿಟ್ಟಿತ್ತು. ವೈಯಕ್ತಿಕವಾಗಿ ನನಗೂ ಹೊಲಿಯುವ ಕೆಲಸವೆಂದರೆ ತುಂಬಾ ಇಷ್ಟ. ಹಾಗೆಂದೇ ಹಿರಿಯ ಗೆಳತಿಯೊಬ್ಬರು ಅವರ ನೆನಪಾಗಿ ತಮ್ಮ ಹೊಲಿಗೆ ಮಷಿನನ್ನು ನನಗೆಂದೇ ಕೊಟ್ಟುಬಿಟ್ಟಾಗ ಭಯಂಕರ ಹಿಗ್ಗಿಬಿಟ್ಟಿದ್ದೆ. ಆದರೂ ಎಲ್ಲೋ ಈ ಬಾಡಿಗೆಯ ವಿಷಯ ಮನಸ್ಸನ್ನು ಕೊರೆಯುತ್ತಲೇ ಇರುತ್ತಿತ್ತು. ಬದುಕಿನ ಸಂಬಂಧಗಳಲ್ಲಿ ಕೆಲವರ ವರ್ತನೆಗಳೂ ಅಷ್ಟೇ ಕಾಡುತ್ತಿದ್ದವು. ಒಳಗಿನ ಸಂಕಟವೆಲ್ಲ ಭಾವನೆಗಳಾಗಿ, ಪಾತ್ರಗಳು ಅವವೇ ಕಣ್ಣೆದಿರು ಬಂದು ತೆರೆದುಕೊಳ್ಳತೊಡಗಿದವು. ಒಂದು ದಿನದಲ್ಲಿ ಕತೆಯನ್ನು ಹೊಲಿಯುವ ಕೆಲಸ ಮುಗಿದಿತ್ತು. ಮನಸಿಗೆ ನಿರಾಳತೆಯ ಅಂಗಿ ತೊಟ್ಟಂತಾಗಿತ್ತು.
ಇದು ಪ್ರಕಟವಾದಾಗ ಓದುಗರು ತೋರ್ಪಡಿಸಿಕೊಂಡ ಭಾವಗಳ ಮಹಾಪೂರ ನನ್ನನ್ನು ಇವತ್ತಿಗೂ ಮೂಕಳನ್ನಾಗಿಸುತ್ತದೆ. ಕೆಲವರು ‘ಅವರ ಬದುಕಿನಲ್ಲಿ ಥೇಟು ಹಾಗೆಯೇ ನಡೆದಿತ್ತು, ಹೇಳಿಕೊಳ್ಳಲು ಆಗಿರಲಿಲ್ಲ. ನೀವು ಬರೆದು ನಮ್ಮ ಭಾವಕ್ಕೆ ಕನ್ನಡಿ ಹಿಡಿದು ಬಿಟ್ಟಿರಿ’ ಎಂದಾಗಲಂತೂ ನನಗೆ ಅಚ್ಚರಿಯೋ ಅಚ್ಚರಿ. ಅಕ್ಷರಗಳು ಬದುಕುಗಳನ್ನು ಎಲ್ಲೆಲ್ಲಿಂದಲೋ ತಂದು ಮುಂದಿರಿಸಿ ಜೋಡಿಸುತ್ತವೆ ಎಂಬುದಕ್ಕೆ ಇದಕ್ಕಿಂತ ಸುಂದರ ಉದಾಹರಣೆ ಸಿಕ್ಕುವುದುಂಟೆ? ಆ ಪತ್ರಗಳು, ಪ್ರಾಮಾಣಿಕ ಮೆಚ್ಚುಗೆಯ ಮಾತುಗಳು ಇವತ್ತಿಗೂ ಕತೆ ಹೆಣೆಯುವ, ಪಾತ್ರಗಳನ್ನು ಸೃಷ್ಟಿಸುವ, ಹರಿದು ಹೋಗುವಂತಿರುವ ಬದುಕುಗಳನ್ನು ಹೊಲಿಯುವ ನನ್ನ ಕೆಲಸಕ್ಕೆ ಇಂಬಾಗಿ ನಿಂತಿವೆ. ಅದಕ್ಕೆಂದೇ, ನನಗೆ ನನ್ನ ಈ ಕತೆ ತುಂಬಾನೇ ಇಷ್ಟ.