ಈ ಮನು ಹಾಗೇನೆ ತಲೆಗೇನಾದ್ರೂ ಬಂತಂದ್ರೇ ಪಟ್ಟು ಹಿಡಿದು ಮಾಡದೆ ಬಿಡೋನಲ್ಲ. ಅಷ್ಟೇ ಜಲ್ದಿನೂ ಯಾವಾಗ್ಲೂ. ಅವನು ಹೋದಲ್ಲೆಲ್ಲಾ ನಗುವಿನ ಬುಗ್ಗೆ. ಅವನಿದ್ದಲ್ಲೆಲ್ಲಾ ಗದ್ದಲ, ಖುಷಿ, ಸಂಭ್ರಮ ಯಾವತ್ತೂ. ಸಾಮಾನ್ಯ ನಾವಿಬ್ರೂ ಬೈಕ್ನಲ್ಲಿ ಹೊರಟರೆ ತನಗಿಷ್ಟವಾದ ಸಿನಿಮಾದ್ದೋ ಇಲ್ಲ ನಾಟಕದ್ದೋ ಡೈಲಾಗ್ಸ್ ಹೇಳ್ತಿರ್ತಾನೆ. ಇಲ್ಲಾಂದ್ರೆ ಆಯಾ ಸಿಚುಯೇಷನ್‌ಗೆ ತಕ್ಕನಾಗಿ ಹಾಡ್ತಾ ಇರ್ತಾನೆ, ಅದೂ ಇಲ್ಲ ಅಂದ್ರೆ ದಾರೀಲಿ ಹೋಗೋ ಬರೋರ್ನೆಲ್ಲಾ ಕಾಡೋಕೆ ಶುರು ಮಾಡ್ತಾನೆ. ಇದ್ಯಾವ್ದೂ ಇಲ್ಲಾಂದ್ರೆ ಅವನ ಗರ್ಲ್‍ಫ್ರೆಂಡ್‌ನ ಫೋನಲ್ಲಿ ಬೈತಿರ್ತಾನೆ ಇಲ್ಲ ನನ್ಜೊತೆ ಜಗಳ ಆಡ್ತಿರ್ತಾನೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕಥೆ “ನೆರೆ ಹಾವಳಿ” ನಿಮ್ಮ ಈ ಭಾನುವಾರದ ಓದಿಗೆ
‘ಹಾಯ್ ಡುಮ್ಸ್.. ವೇರ್ ಆರ್ ಯೂ…..’ ಅಂತ ಮನು ಮೆಸೇಜ್ ಬಂದಾಗ ನಾನು ಆಗ್ತಾನೆ ಕ್ಲಾಸ್ ಮುಗ್ಸಿ ಕಾಲೇಜಿಂದ ಹೊರಬರ್ತಿದ್ದೆ. ಅವ್ನ ಮೆಸೇಜ್ ನೋಡಿದ್ದೇ ನಿನ್ನೆ ಅವ್ನು ಹೇಳಿದ ವಿಷ್ಯ ನೆನಪಾಯ್ತು. ಅವನ ಸ್ನೇಹಿತ ಗೋಪಾಲ್ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್ ಅಂತೆ. ವಾರದ ಹಿಂದೆ ಪಿ.ಯು.ಸಿ. ಮಕ್ಕಳಿಗೆ ನೆರೆ ಹಾವಳಿ ಬಗ್ಗೆ ಪ್ರಬಂಧ ಬರೆಯೋಕೆ ಕೊಟ್ಟಿದ್ನಂತೆ. ಅನಿತಾ ಅನ್ನೊ ಹುಡುಗಿಯೊಬ್ಳು ‘ನೆರೆಹಾವಳಿ ಎಂದರೆ ನೆರೆಹೊರೆಯ ಹಾವಳಿ. ಅದು ಬಲಿಷ್ಠರ, ಶ್ರೀಮಂತರ ಹಾವಳಿ. ಅದು ಹಸಿವಿನ, ಆಸೆಗಳ ಹಾವಳಿ’ ಅಂತ ಬರೆದಿದ್ದಳಂತೆ. ಇಷ್ಟೇ ಎರಡೇ ಸಾಲು. ತುಂಬಾ ಕುತೂಹಲ ಹುಟ್ಟಿ ಗೋಪಾಲ್ ಆ ಪೇಪರನ್ನ ರೂಂಗೆ ತಂದು ಇವ್ನಿಗೂ ಹೋದಾಗ ತೋರಿಸಿದ್ನಂತೆ. ಅದನ್ನ ನೋಡಿದಾಗಿನಿಂದ ಡಿಸ್ಟರ್ಬ್ ಆಗ್ಬಿಟ್ಟಿದ್ದನೇನೋ ಓದಿದಾಕ್ಷಣ ಓಡಿ ಬಂದಿದ್ದ ನನ್ನ ಬಳಿಗೆ.
‘ಸ್ವಲ್ಪ ಜಾಸ್ತಿ ತಲೆ ಓಡಿಸ್ತಿಯಲೇ ನೀನ್ಯಾವಾಗ್ಲು….’ ಅಂತ ಬೈದಿದ್ದೆ ನಾನು ಅವ್ನ ಮಾತು ಕೇಳಿ.
ಅವನ ಪ್ರಕಾರ ಆ ಹುಡುಗಿಗೆ ಏನೋ ತೊಂದ್ರೆಯಿದೆ. ಯಾವ್ದೋ ಕಷ್ಟಕ್ಕೆ ಸಿಲುಕಿದ್ದಾಳೆ ಅಂತ. ಇದು ನೆರೆಯ ಅರ್ಥ ಗೊತ್ತಿಲ್ದೇ ಸುಮ್ನೆ ಏನೇನೋ ಬರ್ದಿದ್ದಾಳೆ ಅಂತ ಕಡೆಗಾಣಿಸೋ ಹಗುರವಾದ ಸಂಗತಿ ಅಲ್ಲ ಅನ್ನೋದೇ ಅವನ ವಾದ.
‘ಅವಳ ಆ ಬರಹದಲ್ಲಿ ಇರೋ ಹಾಗೇ ನೆರೆಹೊರೆ, ಬಲಿಷ್ಠ, ಶ್ರೀಮಂತ, ಆಸೆ, ಹಸಿವು ಇವೆಲ್ಲಾ ತುಂಬಾ ಕಾಡ್ತಿದವ್ರಿ ಅವ್ಳನ್ನ ಯಾವ್ದೊ ರೀತಿ…..’ ಅಂದಿದ್ದ.
ನಾನದನ್ನ ಅಷ್ಟು ಸೀರಿಯಸ್ಸಾಗಿ ತಗಂಡಿರ್ಲಿಲ್ಲ. ‘ಈ ಹುಡುಗೀರು ಯಾವ್ದ್ಯಾವ್ದೊ ಕೆಟ್ಟ ಕೆಟ್ಟ ಸಿನಿಮಾ ನೋಡ್ತಾರೆ. ಪ್ರತಿದಿನ ಟಿವಿಯಲ್ಲಿ ಆ ದರಿದ್ರ, ಕೊಳೆತೋಗಿರೋ ಕೆಟ್ಟ ಸೀರಿಯಲ್‌ಗಳನ್ನು ನೋಡ್ತಿರ್ತಾರೆ. ಅಂತಹ ಯಾವುದೋ ಪ್ರಭಾವದಿಂದ್ಲೇ ಇಂತಹ ದೊಡ್ಡ ಪದಗಳನ್ನು ಜೋಡಿಸಿ, ಏನೋ ಒಂದು ಹೆಣೆಯೋಕೆ ಪ್ರಯತ್ನಿಸಿ ಕೈಬಿಟ್ಟಿದ್ದಾಳೆ…..’ ಅಂದಿದ್ದೆ.
ಆದರವ್ನು ಅಷ್ಟು ಸುಲಭಕ್ಕೆ ಬಿಡೋ ಆಸಾಮಿಯಲ್ಲ. ‘ಆಯ್ತಪ್ಪ ಬೆಟ್ಟೂ. ನಿಮ್ಮ ಮಾತಲ್ಲಿ ನಿಜ ಇತ್ತು ಅಂದ್ರೆ ನಾನು ನಿಮ್ಮನ್ನ ದುರ್ಗಕ್ಕೆ ಕರ್ಕೊಂಡೋಗಿ ನಿಮ್ಮ ಫೇವರೆಟ್ ಬಿರಿಯಾನಿ ಕೊಡಿಸ್ತೀನಿ. ನನ್ನ ಮಾತು ಸತ್ಯ ಅಂತಾದ್ರೆ ನೀವು ನನಗೆ ಗ್ರೀನ್ ಪಾರ್ಕ್‌ನಲ್ಲಿ ಟ್ರೀಟ್ ಕೊಡಿಸ್ಬೇಕು. ನಾನು ಗೋಪಾಲಂಗೆ ಹೇಳ್ತಿನಿ ನಾವೇ ಹೋಗಿ ಆ ಹುಡುಗೀನ ಮಾತಾಡ್ಸನ. ಏನಂತೀರಿ ಓ.ಕೆ.ನಾ….?’ ಅಂತ ಒಂದೇ ಪಟ್ಟು ಹಿಡಿದು ಲಂಚದ ಆಸೆ ತೋರಿಸಿಯಾದರೂ ನನ್ನ ಒಪ್ಪಿಸುವ ಹುನ್ನಾರ.
‘ಹೇ ವೈ ಯಾ ನೋ ರಿಪ್ಲೈ……… ಹೊಟ್ಟೆ ಹಸೀತಿದೆ…..’ ಅಂತ ಇನ್ನೊಂದು ಮೆಸೇಜು ಬಂದಾಗ್ಲೇ ನಂಗೆ ನೆನಪಾದ್ದು ಅವ್ನಿಗೆ ರಿಪ್ಲೈ ಮಾಡಿಲ್ಲಾಂತ. ಫೋನೇ ಮಾಡಿದೆ.
‘ಯಾಕ್ಲೆ ಕೋತಿ, ನಿಮ್ ಕಟ್ಟೆ ಕ್ಯಾಂಟೀನು ಇವತ್ತೇನು ಬಂದಾ….?’ ಅಂದೆ ಅತ್ಲಾಗಿಂದ ಧಮಕಿ.
‘ಯಾಕೆ ಏನು? ಏನ್ ಮಹಾ ಸಿಗುತ್ತಲ್ಲೀ…… ಮಾಮೂಲು ಒಂದು ಪ್ಯಾಕ್ ಬಿಸ್ಕತ್ತು, ನಾಲ್ಕು ಕೋಡುಬಳೆ, ಎರಡು ಚಕ್ಲಿ, ನಾಲ್ಕು ಬಾಳೆಹಣ್ಣು……’
ನಾನು ಮಧ್ಯಕ್ಕೆ ಬಾಯಿ ಹಾಕಿ ‘ಎಷ್ಟೊತ್ತಾಯ್ತು ತಿಂದೂ…..’ ಅಂದೆ.
‘ಹಹಹತ್ತು…..’ ನಿಮಿಷ ಅಂತ ಏನೋ ಮಹಾ ಬಹಳ ಹೊತ್ತಾಗಿದೆ ಅನ್ನೊ ಹಾಗೆ ಹತ್ತನ್ನ ಎಳೆದೆಳೆದು ಒತ್ತೊತ್ತಿ ಅವ್ನು ಹೇಳ್ದಾಗ ನಾನೂ ಅದೇ ದಾಟೀಲಿ ‘ಹೌದಾ ಹಹಹತ್ತು ನಿಮಿಷ ಆಯ್ತಾ….’ ಅಂದು ನಗ್ತಾ ‘ಅದೇನು ಹೊಟ್ಟೆನೋ ಏನೋ ಮಾರಾಯ ಒಂದು ಪ್ಯಾಕ್ ಬಿಸ್ಕತ್ ತಿಂದ್ರೆ ಹೊಟ್ಟೆ ಪ್ಯಾಕ್ ಆಗೋಗುತ್ತೆ. ನಿನಗಿನ್ನೂ ಜಾಗ ಉಳಿದೈತಲ್ಲಾ ಆಶ್ಚರ್ಯ…..’ ಅಣಕಿಸಿದೆ.
‘ಅಲಲಲ್ಲ ನೀವೇಳೋದೇನೋ ಸರೀನೆಪ. ಆದ್ರೆ ಒಂದು ಮಿಸ್ಟೇಕ್ ಮಾಡ್ಬಿಟ್ಟೆ. ನಾನು ಮೊದ್ಲು ನಾಲ್ಕು ಬಾಳೆಹಣ್ಣು ತಿಂದ್ನಾ. ಆಮೇಲೆ ಉಳಿದಿದ್ದೆಲ್ಲಾ ತಿಂದದ್ದೆ ಬಂತು ನೋಡ್ರಿ…..’ ಅಂದ. ‘ಅಲೆ ಇವ್ನ ಅದುಕ್ಕೇನಾತು….’ ಕೇಳಿದೆ ಆಶ್ಚರ್ಯದಿಂದ.
‘ಅಯ್ಯೋ ಬಾಳೆಹಣ್ಣು ಜಾರಲ್ವೇನ್ರೀ….. ಮೊದ್ಲು ಬಾಳೆಹಣ್ಣು ತಿಂದು ಆಮೇಲೆ ಬಿಸ್ಕತ್ತು ತಿಂದಿದ್ದಕ್ಕೆ ಎಲ್ಲಾ ಸರ್ರಂತ ಕೆಳಕ್ಕೆ ಜಾರ್ಬಿಟ್ಟೆದೆಪ….’ ಅವನ ಮಾತು, ಹೇಳಿದ ಧಾಟಿಗೆ ನಗು ತಡೆಯಲಿಲ್ಲ.
‘ಥೂ ಕೋತಿ ಇದಕ್ಕೇನು ಕಮ್ಮಿಯಿಲ್ಲ.’ ಅಂದು ನಗ್ತಿದ್ದೆ. ‘ಸ್ಸರಿ…’ ಅಂದು ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ…..?’ ಹಾಡಿನ ಧಾಟಿಯಲ್ಲೇ ನಾನೆಲ್ಲಿದೀನಿ ಅಂತ ಕೇಳಿದ.
‘ಲೇ ಕೋತಿ ಅಲ್ಲಿ ಅಕ್ಕಪಕ್ಕ ಯಾರು ಇಲ್ಲ ತಾನೆ. ಈಗ ಹೊರಟೆ ಕಾಲೇಜಿನಿಂದ. ಇನ್ನರ್ಧ ಗಂಟೆ ಬಿಟ್ಟು ಬಾ ಮನೆಗೆ ಆಯ್ತಾ….’ ಅಂದೆ. ‘ತೆರೆದಿದೆ ಮನೆ ಓ ಬಾ ಅತಿಥಿ….’ ಬೇರೆ ಹಾಡು ಶುರು ಮಾಡಿದ.
‘ಹೇ ಮಂಗ ಇಡು ಫೋನು…..’ ಅಂತನೇ ಸ್ವಲ್ಪ ದೂರ ಹಾಗೆ ನಡೆದು ಆಟೋ ಕರೆದು ‘ಎಸ್.ಎಸ್.ಲೇಔಟ್ ಬರ್ತೀರಾ…?’ ಕೇಳ್ದೆ.
‘ಉಹೂಂ ಬರಲ್ಲ….’ ಅಂದ ಹಾಡು ನಿಲ್ಲಿಸಿ. ‘ಕಪಿ ಸ್ವಲ್ಪ ಸುಮ್ನಿರು….’ ಅಂದು ಮತ್ತೆ ಕೇಳಿದೆ ಡ್ರೈವರ್‍ಗೆ.
‘ಉಹೂಂ ಬರಲ್ಲ ಅಂತ ಹೇಳ್ಲಿಲ್ವಾ….’ ಅವನ್ದೇ ದನಿ ಹೆಂಗಸಿನ ದಾಟಿಯಲ್ಲಿ.
ಡ್ರೈವರ್ ನಕ್ತಾ ಇದ್ದದ್ದು ನೋಡಿ ಯಾಕೋ ಅನುಮಾನ ಬಂದು ತಲೆಯೆತ್ತಿದರೆ ಅವರ ಪಕ್ಕದಲ್ಲೇ ಇನ್ನೊಂದು ಬದೀಲಿ ಬೈಕ್ ಮೇಲೆ ಕೂತಿದ್ದ ಅತ್ತ ಕಡೆಯಿಂದ ಆಟೋದೊಳಕ್ಕೆ ಮುಖ ತೂರಿಸಿ,
ಹಣೆ ಚಚ್ಕೊಂಡು ‘ಸ್ಸಾರಿ ನಿಮ್ಮನ್ನ ಸುಮ್ನೆ ನಿಲ್ಲಿಸ್ದೆ..’ ಅಂತ ಡ್ರೈವರ್‍ಗೆ ಹೇಳಿ ಅವನತ್ತ ಹೊರಟೆ. ‘ಲಕ್ಷಣವಾಗಿ ಬರ್ತೀನಿ ಕಾಯ್ರಿ ಅಂತ ಹೇಳಿದ್ರೆ ಆಗ್ತಿರ್ಲಿಲ್ವೇನೋ…..’ ಹುಸಿಮುನಿಸಿನಿಂದ ಅಂದು ಬೈಕ್ ಹತ್ತಿದೆ.
‘ಲಕ್ಷಣವಾಗಿ ಹೇಳಿದ್ರೆ ಈ ಖುಷಿ ಸಿಗ್ತಿತ್ತೇನೋ……’ ನನ್ನೆ ಅನುಕರಿಸಿ ಹೇಳಿ ‘ನಾನೀಗ ಎಲ್ಲಿಗೊರ್ಟಿನ್ ಹೇಳ್ರಿ ನೋಡನ….’ ಅಂದ ಅವ್ನು. ‘ನಮ್ಮನೆಗೆ…..’ ಅಂದೆ. ‘ಅಲ್ಲಿಂದ….’ ಅಂದ’.‘ನಿಮ್ಮನೆಗೆ’ ಅಂದೆ.
‘ಹೂಂನಪ ಗೊತ್ತಾತು. ನಿಮ್ಮನ್ ಬಿಟ್ಟಂಗೆ ಹೋಗ್ತಿನ್ ಬಿಡ್ರೀ. ತಿಂಡಿ ಕಾಫಿ ಅಂತ ಕುಂದ್ರಲ್ಲ. ನಮ್ಮನಿಗೇ ಹೋಗ್ತೀನಿ…’ ಅಂತ ಶುರು ಹಚ್ಕಂಡ ಕೊರಕೊರ.‘ಆತು ಸರ್, ಗೊತ್ತಾತು. ತಮ್ಮದಿನ್ನು ತಿಂಡಿ ಕಾಫಿ ಆಗಿಲ್ಲ ಅಂತ ಗೊತ್ತಾತು. ಈಗ ತಾವು ವಿಷಯಕ್ಕೆ ಬಂದು ಎಲ್ಲಿಗೆ ತೊಲಗ್ತೀರಿ ನೇರವಾಗಿ ಹೇಳ್ಬಿಟ್ರೇ….’ ಅಂತ ನಾನು ಮುಖ ಕೆಡಿಸಿಕೊಂಡರೆ ಅವನು ‘ಹ್ಹಿ ಹ್ಹಿ ಹ್ಹಿ…..’ ಅಂತ ಕಿಸಿಯುತ್ತಾ ಹೊಟ್ಟೆ ಸವರಿಕೊಳ್ಳುತ್ತಾ ‘ಅನಿತ ಮನೆಗೆ….’ ಅಂದು ಒಮ್ಮೆಲೆ ಗಂಭೀರನಾಗಿ ‘ಆ ಹುಡುಗೀನ ಒಮ್ಮೆ ಮಾತಾಡಿಸ್ಬೇಕು, ನೋಡ್ಬೇಕು, ಅನಿಸ್ತಿದೆಪ ಯಾಕೋ ನಂಗೆ’ ಅಂದ. ‘ಭಾಳ ಮನಸ್ಸಿಗೆ ಹಚ್ಕಂಡಿಲೆ ನೀನು….’ ಅಂತಿದ್ದೆ. ‘ತಪ್ಪಾ….’ ಅಂತ್ಕೇಳ್ದ ಮಧ್ಯಕ್ಕೆ. ‘ತಪ್ಪು ಅಂತ ಅಲ್ವೊ, ಅನಾವಶ್ಯ ತಲೆ ಕೆಡಿಸ್ಕಂತದಿ ಅನ್ಸಕತ್ತೇತಿ….’ ಅಂತ ಮಾತಿಗೆ ಹೇಳಿದ್ರೂ ಅವ್ನು ಹೇಳಿದಾಗಿಂದ ಆ ವಿಷಯ ಒಳಗೇ ಕೊರಿಯಕೆ ಶುರು ಮಾಡೇತಿ ಅಂತ ಮೆಲ್ಲಗೆ ಮನವರಿಕೆ ಆಗ್ತಿತ್ತು ನಂಗೂ.
‘ನಮ್ಗೆ ಕಾಣ್ಸದು ಕಾಣಸ್ದೆ ಇರದು ಎಲ್ಲನೂ ಅನಾವಶ್ಯ ಅಂತ ನಮ್ ಪಾಡಿಗೆ ನಾವು ಏನೂ ನಾಟಿಸ್ಕಳ್ದೆ ಇದ್ಬಿಟ್ರೆ ಇಲ್ಬಿದ್ದಿರೋ ಕಲ್ಲು ಮಣ್ಣು ಕಸಕಡ್ಡಿಗೂ ನಮ್ಗೂ ಏನ್ ವ್ಯತ್ಯಾಸರಿ. ಹೋಗ್ಲಿ ಹಾಗಾದ್ರೆ ನಮ್ಗೆ ಏನ್ ಅವಶ್ಯನಪ….’ ಮನು ಇಷ್ಟು ಗಂಭೀರವಾಗಿ ಮಾತಾಡ್ಬಹುದು, ಯೋಚಿಸ್ಬಹುದು ಅಂತ ಈ ಒಂದು ವರುಷದ ನಮ್ಮ ಒಡನಾಟದಲ್ಲಿ ಮೊದಲ ಸಲ ಬಂತು ಅನುಭವಕ್ಕೆ. ಈ ಹೊಸ ಮನು ನನ್ ತಪ್ಪಿನ ಅರಿವು ಮಾಡಿಸಿದ ನಂಗೆ.
ಅವನೆಷ್ಟು ಗಂಭೀರವಾಗಿ ಈ ವಿಷಯ ಪ್ರಸ್ತಾಪಿಸ್ತಿದ್ನೋ ಅಷ್ಟೇ ಉಡಾಫೆಯಿಂದ ಅದನ್ನ ನಾ ತಳ್ಳಿ ಹಾಕ್ತಿದ್ದೆ. ಒಪ್ಗಂಡೆ.
‘ಹೂಂನ್ಲೆ ನಿನ್ ಮಾತು ನಿಜ. ಅಷ್ಟರಮಟ್ಟಿಗೆ ಅದು ನನ್ನ ಸ್ವಾರ್ಥ ಮತ್ತೆ ಸ್ವಾರ್ಥಮಗ್ನತೆ. ಮತ್ತೆಲ್ಲೊ ನಾನು ತುಂಬಾ ಸ್ವಾಕ್ರಮಿತಳಾಗೀನಿ. ಅದಕ್ಕೆ ನನ್ನ ಹೊರತು ಅನ್ಯ ವಿಷಯ ಏನೇ ಇರ್ಲಿ ಒಂದೋ ಅದು ತುಂಬಾ ಹಗುರವಾಗಿ ಕಾಣ್ತೇತಿ, ಇಲ್ಲಾ ಅದು ನಂಗೆ ಲೆಕ್ಕಕ್ಕೆ ಇಲ್ಲ ಅಂತಾಗೇತಿ. ಅದಕ್ಕೆ ಇಷ್ಟು ಉಢಾಫೆ. ಸ್ಸಾರಿಲೇ, ನೀ ಹೋಗಿ ಏನಂತ ತಿಳ್ಕಂಡ್ಬಾ. ವಿಷಯ ತಿಳದ್ಮೇಲೆ ವಿಚಾರ ಮಾಡನ’ ಅಂದೆ. ಅವ್ನು ಮಾತಾಡ್ಲಿಲ್ಲ.
‘ಓ ನನ್ನ ಚೇತನ ಆಗು ನೀ ಅನಿಕೇತನ….’ ಅಂತ ಹಾಡಾಕತ್ತಿದ.
ಪಟ್ಟಂತ ತಲೆಗೆ ಒಂದು ಬಿಟ್ಟೆ ‘ಯಾಕೋ ಸ್ವಲ್ಪ ಜಾಸ್ತಿ ಆತು….’ ಅಂತ. ತಕ್ಷಣ ಪೂರ ಹಿಂದಕ್ಕೆ ವಾಲುತ್ತ ‘ಸಜನರೇ ಜೂಟ್ ಮತ್ ಬೋಲೊ’ ಅಂತ ಶುರು ಹಚ್ಕಂಡ. ‘ಏಯ್ ಡಿಸ್ಟೆನ್ಸನ ಮೇನ್‍ಟೇನ್ ಮಾಡು ಜನತಪ್ ತಿಳ್ಕಂತರೆ….’ ಅಂದೆ ನಾನು. ‘ಓಹ್ ಸಾರಿ ಮೇಡಂ….’ ಅಂದವನೇ ಸೀದಾ ಮುಂದೆ ಜಾರಿ ಟ್ಯಾಂಕಿನ ಮೇಲೆ ಹೋಗಿ ಕುಂತ. ಈಗ ಜನ ನಿಜವಾಗಲು ನೊಡೋಕೆ ಶುರು ಮಾಡಿದರು. ಮುಂದೆ ಬಗ್ಗಿ ಅವನ ಕಾಲರಿಡಿದು ಹಿಂದಕ್ಕೆಳೆಯುತ್ತ ‘ಹಿಂದಕ್ಕೆ ಬಾರೋ ಕಪಿ ಅಸಹ್ಯ ಮಾಡ್ಬೇಡ ಪ್ಲೀಸ್…’ ಗೋಗರೆದೆ ನಾನು. ‘ಬೇಡಪ್ಪ ಜನ ತಪ್ ತಿಳ್ಕಂತರೆ’ ಅಂದ ಮಳ್ಳನಂಗೆ. ‘ಆತೋ ತಪ್ಪಾತು ಹಿಂದಕ್ಕೆ ಬಾ…’ ಅಂದೆ ಎಳೆಯುತ್ತಾ. ‘ಲೋಕವ ಮೂಟೆ ಕಟ್ಟು….. ಯಾತಕೆ ದೂಸರ ಮಾತು…. ಎಲ್ಲಾ ಟೈಮ್ ವೇಸ್ಟ್…..’ ಅಂತ ಹಾಡುತ್ತಾ ಹಿಂದಕ್ಕೆ ಬಂದು ‘ಈಗ ದೂಸರ ಮಾತಾಡದೆ ನೀವೂ ಬರ್ಬೇಕು ಅನಿತ ಮನೆಗೆ ನನ್ಜತಿಗೆ ಅಷ್ಟೆ’ ಅಂದ.
‘ಲೋಕವ ಮೂಟೆ ಕಟ್ಟು….. ಯಾತಕೆ ದೂಸರ ಮಾತು….. ಎಲ್ಲಾ ಟೈಮ್ ವೇಸ್ಟ್…..’
ಈ ಮನು ಹಾಗೇನೆ ತಲೆಗೇನಾದ್ರೂ ಬಂತಂದ್ರೇ ಪಟ್ಟು ಹಿಡಿದು ಮಾಡದೆ ಬಿಡೋನಲ್ಲ. ಅಷ್ಟೇ ಜಲ್ದಿನೂ ಯಾವಾಗ್ಲೂ. ಅವನು ಹೋದಲ್ಲೆಲ್ಲಾ ನಗುವಿನ ಬುಗ್ಗೆ. ಅವನಿದ್ದಲ್ಲೆಲ್ಲಾ ಗದ್ದಲ, ಖುಷಿ, ಸಂಭ್ರಮ ಯಾವತ್ತೂ. ಸಾಮಾನ್ಯ ನಾವಿಬ್ರೂ ಬೈಕ್ನಲ್ಲಿ ಹೊರಟರೆ ತನಗಿಷ್ಟವಾದ ಸಿನಿಮಾದ್ದೋ ಇಲ್ಲ ನಾಟಕದ್ದೋ ಡೈಲಾಗ್ಸ್ ಹೇಳ್ತಿರ್ತಾನೆ. ಇಲ್ಲಾಂದ್ರೆ ಆಯಾ ಸಿಚುಯೇಷನ್‌ಗೆ ತಕ್ಕನಾಗಿ ಹಾಡ್ತಾ ಇರ್ತಾನೆ, ಅದೂ ಇಲ್ಲ ಅಂದ್ರೆ ದಾರೀಲಿ ಹೋಗೋ ಬರೋರ್ನೆಲ್ಲಾ ಕಾಡೋಕೆ ಶುರು ಮಾಡ್ತಾನೆ. ಇದ್ಯಾವ್ದೂ ಇಲ್ಲಾಂದ್ರೆ ಅವನ ಗರ್ಲ್‍ಫ್ರೆಂಡ್‌ನ ಫೋನಲ್ಲಿ ಬೈತಿರ್ತಾನೆ ಇಲ್ಲ ನನ್ಜೊತೆ ಜಗಳ ಆಡ್ತಿರ್ತಾನೆ. ಒಟ್ಟಾರೆ ಸದಾ ಎಂಗೇಜ್ ಆಸಾಮಿ. ಹಾಡಂದ್ರೆ ಪ್ರಾಣ. ಸಂಗೀತ ಗೊತ್ತಿಲ್ಲ. ಆದರೆ ಹಾಡುವ ಹಂಬಲಕ್ಕೆ ಕೊರತೆಯಿರ್ಲಿಲ್ಲ. ನನಗೋ ಹಾಡೆಂದರೆ ಹುಚ್ಚು. ಈ ಹುಚ್ಚಿಗೇ ಅವನು ಹುಟ್ಟಿದಂತಿದ್ದ. ನಾಟಕದಿಂದ ಅಂಟಿದ ನಂಟು ಇದಾಗಿದ್ರೂ ನಾವಿಬ್ರೂ ಆಪ್ತರಾದ್ದು ಹಾಡಿನಿಂದಲೇ.
ನಮ್ಮ ಮೊದಲ ಪರಿಚಯದ ಸನ್ನಿವೇಶವೇ ತುಂಬಾ ತಮಾಷೆಯಾಗಿತ್ತು. ಅವನ ಬಗ್ಗೆ ಕೇಳಿದ್ದೆ ಅಷ್ಟೆ. ಎಂ.ಟೆಕ್ ಮಾಡಿ ಅದೇ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ರೂ ಸೈತ ನಾಟಕದ ಗೀಳು ಬಿಟ್ಟಿಲ್ಲ. ಒಳ್ಳೆಯ ಆರ್ಗನೈಸರ್. ಕಾಸ್ಟೂಮ್ಸ್‌ನಿಂದ ಹಿಡಿದು ನಟ-ನಟಿಯರನ್ನ ಹೊಂದಿಸುವುದರಲ್ಲೂ ಒಳ್ಳೆ ನಿಪುಣ ಅಂತ. ವರುಷದ ಹಿಂದೆ ನಮ್ಮ ನಾಟಕಕ್ಕೆ ತುರ್ತಾಗಿ ಒಬ್ಬ ಹುಡುಗಿ ಬೇಕಿತ್ತು. ನಾಟಕದ ಐದು ಸಣ್ಣ ಸಣ್ಣ ಪಾತ್ರದಲ್ಲಿ ಮಾಡ್ತಿದ್ದಾಕೆ ಏನೋ ಕಾರಣಕ್ಕೆ ಅಸಮಾಧಾನಗೊಂದು ಇನ್ನು ಶೋ ಐದು ದಿನ ಇರೋವಾಗ ಬರಕಾಗಲ್ಲ ಅಂತ ಬಿಟ್ಟಿದ್ಲು. ಏನು ಬೇಕಾದ್ರೂ ನಾಟಕಕ್ಕೆ ಹೊಂದಿಸ್ಬಹುದು. ಆದ್ರೆ ಒಬ್ಬ ಹುಡುಗಿಯನ್ನ ಪಾತ್ರಕ್ಕೆ ಹೊಂದಿಸುವಷ್ಟರಲ್ಲಿ ಹೆಣ ಬಿದ್ದೋಗಿರತ್ತೆ. ಇಂತಹ ಸಂಕಷ್ಟದ ಸಮಯದಲ್ಲೇ ಮನು ನಂಬರ್ ಅವನ ತಂಡದ ಒಬ್ಬ ಸದಸ್ಯನಿಂದ ಸಿಕ್ಕಿತ್ತು. ಅವತ್ತೆ ರಾತ್ರೆ ಹನ್ನೊಂದಾಗಿದ್ರೂ ಹಿಂದೆ ಮುಂದೆ ನೋಡದೆ ಫೋನ್ ಮಾಡೇಬಿಟ್ಟಿದ್ದೆ. ತಗೊಂಡ ಸಧ್ಯ! ನಾನ್ಯಾರಂತ ಹೇಳಿದ್ಮೇಲೆ ‘ಏನ್ ಮೇಡಂ ಇಷ್ಟೋತ್ನಲ್ಲಿ, ಏನ್ವಿಷ್ಯ’ ಅಂದ.
ಒಮ್ಮೆಲೆ ಗಂಭೀರನಾಗಿ ‘ಆ ಹುಡುಗೀನ ಒಮ್ಮೆ ಮಾತಾಡಿಸ್ಬೇಕು, ನೋಡ್ಬೇಕು, ಅನಿಸ್ತಿದೆಪ ಯಾಕೋ ನಂಗೆ’ ಅಂದ. ‘ಭಾಳ ಮನಸ್ಸಿಗೆ ಹಚ್ಕಂಡಿಲೆ ನೀನು….’ ಅಂತಿದ್ದೆ. ‘ತಪ್ಪಾ….’ ಅಂತ್ಕೇಳ್ದ ಮಧ್ಯಕ್ಕೆ. ‘ತಪ್ಪು ಅಂತ ಅಲ್ವೊ, ಅನಾವಶ್ಯ ತಲೆ ಕೆಡಿಸ್ಕಂತದಿ ಅನ್ಸಕತ್ತೇತಿ….’ ಅಂತ ಮಾತಿಗೆ ಹೇಳಿದ್ರೂ ಅವ್ನು ಹೇಳಿದಾಗಿಂದ ಆ ವಿಷಯ ಒಳಗೇ ಕೊರಿಯಕೆ ಶುರು ಮಾಡೇತಿ ಅಂತ ಮೆಲ್ಲಗೆ ಮನವರಿಕೆ ಆಗ್ತಿತ್ತು ನಂಗೂ.
‘ರೀ ಮನೋಜ್ ನಂಗೆ ಅರ್ಜೆಂಟಾಗಿ ಒಬ್ಬ ಹುಡುಗಿ ಬೇಕ್ರಿ ಈಗ….’ ಅಂದಿದ್ದೆ ಒಂದೇ ಆತುರದಲ್ಲಿ. ‘ಹಾಂ!’ ಅನ್ನೋ ಬೆಚ್ಚಿ ಬಿದ್ದ ಉದ್ಗಾರದೊಂದಿಗೆ ‘ಏನು ಮೇಡಂ ಏನ್ಬೇಕು ಅಂದ್ರೀ….’ ಅಂತ ಮತ್ತೆ ಅವ್ನು ಕೇಳಿದಾಗ್ಲೂ ನಾನಷ್ಟೇ ಆತುರದಿಂದ ಮತ್ತೆ ಅದನ್ನೇ ಹೇಳಿದಾಗ ಅವ್ನು ಜೋರಾಗಿ ನಕ್ಕಿದ್ದ. ನಾನು ಪೆಚ್ಚಾಗಿ ‘ಯಾಕ್ರಿ ಮನೋಜ್ ತುಂಬಾ ಅರ್ಜೆಂಟಿತ್ತು ರೀ ಪ್ಲೀಸ್’ ಅಂದಿದ್ದೆ ಮೆತ್ತಗೆ. ಕಷ್ಟಪಟ್ಟು ನಗು ತಡೆಯುತ್ತಾ ‘ಅಲ್ರೀ ಮೇಡಂ ರಾತ್ರಿ ಹನ್ನೊಂದಕ್ಕೆ ಫೋನ್ ಮಾಡಿ ಅರ್ಜೆಂಟು ಹುಡುಗಿ ಬೇಕ್ರಿ ಅಂತ ನನ್ನ ಕೇಳಿದ್ರೆ ಹೆಂಗಪ್ಪ…. ನಿಮ್ಮ ಅಕ್ಕ ಪಕ್ಕ ಯಾರೂ ಇಲ್ಲ ತಾನೇ? ಹೂಂನಪ ಮತ್ತೆ ನನ್ನ ಬಗ್ಗೆ ತಪ್ಪು ತಿಳ್ಕಂತರ್ರೀ….’ ಅಂತ ಅವ್ನು ಹೇಳ್ದಾಗಲೇ ನಾನು ಆತುರದಲ್ಲಿ ಏನು ಮಾತಾಡಿದೀನಿ ಅಂತ ಅರಿವಾಗಿದ್ದು. ಆಮೇಲೆ ನನ್ನಿಂದಾನೂ ನಗು ತಡೆಯೋಕಾಗ್ಲಿಲ್ಲ. ಇಬ್ರೂ ನಕ್ಕು ಸಾಕಾದ್ಮೇಲೆ ವಿಷಯವನ್ನು ಅವನಿಗೆ ವಿವರಿಸಿದ್ದೆ.
ಮರುದಿನ ಬೆಳಿಗ್ಗೆನೆ ಒಬ್ಬ ಹುಡುಗಿಯೊಡನೆ ಹಾಜರು ಅವನು. ಅವತ್ತಿನಿಂದ ಹಾಗೆ ನಮ್ಮ ತಂಡದ ಓರ್ವ ಸದಸ್ಯನೇ ಆಗಿಹೋಗಿದ್ದ. ದಿನವೂ ಬರ್ತಿದ್ದ, ಹಾಗಾಗಿ ನಮ್ಮ ಪ್ರಾಕ್ಟೀಸ್‌ಅನ್ನು ಮಾನಿಟರ್ ಮಾಡ್ಲಿಕ್ಕೆ ಅವನಿಗೆ ಹೇಳಿದಿವಿ. ತುಂಬಾ ಶಿಸ್ತು ಕಮಕ್‍ಕಿಮಕ್ ಅನ್ನೋಕೆ ಬಿಡ್ತಿರ್ಲಿಲ್ಲ ನಮ್ಮನ್ನ. ಹಾಗಾಗಿ ನಾವೂ ಸೀರಿಯಸ್ಸಾಗಿ ಇನ್ವಾಲ್ವ್ ಆಗ್ತಿದ್ವಿ.
ನನ್ನ ಮನೆಗೆ ಹತ್ತಿರ ಅವನ ಮನೆ ಆದ್ದರಿಂದ ದಿನವೂ ಮನೆಗೆ ಬಿಡ್ತಿದ್ದ ಅವನ ಬೈಕ್ನಲ್ಲಿ. ಮನೆ ತಲುಪುವ ತನಕ ಹಾಡಿದ್ದೇ ಹಾಡಿದ್ದು ದಾರಿಯುದ್ದಕ್ಕೂ. ಮೊದಮೊದಲು ಒಬ್ಬನೇ ಬರಬರುತ್ತಾ ಅವನ ಜೊತೆಗೆ ನಾನೂ. ಹಾಗೆ ಶುರುವಾಯಿತು ಒಟ್ಟಿಗೆ ಊಟ, ಸುತ್ತಾಟ. ಅದು ಮುಂದುವರೆದು ಗಟ್ಟಿಗೊಂಡ ಸ್ನೇಹ. ನನಗಿಂತಲೂ ಹದಿನೈದು ವರ್ಷ ಚಿಕ್ಕವನಾದ್ರೂ ಒಂದೇ ಓರಗೆಯವರು ಅನ್ನಿಸುವಷ್ಟು ಚೆನ್ನಾಗಿ ನಮ್ಮ ಫ್ರಿಕ್ವೆನ್ಸಿ ಮ್ಯಾಚ್ ಆಗ್ತಿತ್ತು. ನೋಡೋಕೆ ಒರಟನಂತೆ ಕಂಡರೂ ಹೆಂಗರುಳಿನವ. ಅವನೊಂದಿಗಿರುವಾಗ ನನ್ನ ವಯಸ್ಸು, ಸ್ಥಾನಮಾನ, ಹೆಸರು ಎಲ್ಲ ಮರಿತಿತ್ತು. ನನಗೇನೇ ಸಹಾಯ ಬೇಕಿದ್ದರು ನಾನೆಲ್ಲೇ ಹೋಗ್ಬೇಕಿದ್ದರು ಎಷ್ಟೊತ್ತಿನಲ್ಲಾದರೂ ಅವನು ಸದಾ ಸಿದ್ಧ. ಅವನೊಂದಿಗೆ ಎಷ್ಟೊತ್ತಿನಲ್ಲಾದ್ರೂ, ಎಲ್ಲಿಗೆ ಬೇಕಾದ್ರೂ ಹೋಗುವಷ್ಟು ನಂಬಿಕೆ, ವಿಶ್ವಾಸ, ಧೈರ್ಯ ನನಗೂ ಅವನಲ್ಲಿ. ಆದರೆ ಈ ಸ್ನೇಹ ಇತರರಿಗೆ ಬಿಸಿ ತುಪ್ಪ. ಬಲು ಕೌತುಕ. ಒಂದು ಮಿತಿಯೊಳಗೆ ಇರುಕಿಸಿಕೊಂಡು ಅದರಾಚೆಗೆ ಯೋಚಿಸದ ಮನಸ್ಸುಗಳು. ನಮಗದರ ಪರಿವೆಯಾಗಲಿ ಅಂಥವರ ನಡೆ ನುಡಿಯ ಕಾಳಜಿಯಾಗಲಿ ಇರ್ಲಿಲ್ಲ. ಅಂತೆಯೇ ನಮ್ಮನ್ನು ಅಣುಕುವ, ಕಾತರದಿಂದ ಕಾಯುವ ಕಣ್ಣುಗಳಿಗೆ ಸದಾ ಸಲ್ಲುವವರು ನಾವು.
ಎಂದಿನಂತೆ ಹಾಡ್ಕಂತ ನಲ್ಕಂತ ಅನಿತಳ ಸಣ್ಣ ಗ್ರಾಮ ಬಟ್ಟಲಕಟ್ಟಿನ ನಾವು ತಲುಪಿದಾಗ ಮಧ್ಯಾಹ್ನ ಒಂದೂವರೆ. ಅದೊಂದು ಕುಗ್ರಾಮ. ಸಣ್ಣ ತಿಪ್ಪೆಗುಂಡಿಯಂತೆ ಇತ್ತು. ಪ್ರಾರಂಭಕ್ಕೆ ಮತ್ತೆ ನಡು ಊರಿನಲಿ ಒಂದ್ನಾಕು ದೊಡ್ಡ ಹಂಚಿನ ಮನೆ ಇದ್ದುವಷ್ಟೇ. ಗೋಪಾಲ್ ಕೊಟ್ಟಿದ್ದ ವಿಳಾಸ ಹಿಡಿದು ಅನಿತ ಮನೆ ಹುಡ್ಕಂಡು ಹೊರಟ್ವಿ. ಚರಂಡಿನೇ ಇರದ ಕಾರಣ ಕಾಲ್ಕಾಲಲ್ಲೇ ಕೊಚ್ಚೆ ರಾಡಿ. ಅದರಲ್ಲಿ ಬಿದ್ದು ಉಲ್ಡಾಡ್ತಿದ್ದ ವಿವಿಧ ಸೈಜಿನ ಹಂದಿಗಳು. ಅವುಗಳ ಪಕ್ಕಕ್ಕೆ ಕುಂತು ಕೈಯಲ್ಲಿ ರೊಟ್ಟಿ ಚೂರು ಹಿಡಿದ ಮಕ್ಕಳು. ನಗ್ಗಿನಗ್ಗಿ ಹೋಗಿ ಅಲ್ಲಿನ ಜನಜೀವನದ ಪ್ರತೀಕವೋ ಎಂಬಂತ್ತಿದ್ದ ಹರಕಲು ಮುರುಕಲು ಆಕಾರ ವಿಕಾರಗೊಂಡಿದ್ದ ಸಿಲುವಾರದ ತಟ್ಟೆಯಲ್ಲಿ ಆರಿ ಕುಳ್ಳಾಗಿ ಸೆಟಗಂಡಿದ್ದ ರಾಗಿ ಮುದ್ದೆಯ ಗುಕ್ಕುಗಳೊಂದಿಗೆ ಆಡ್ಕಂಡು ಕುಂತಿದ್ದ ಚಡ್ಡಿಯಿಲ್ಲದ ಕೆದರಿದ ತಲೆಯ ಸಿಂಬಳಬುರುಕ ಮಕ್ಕಳು ಕೇಕೆ ಹಾಕ್ತಿದ್ವು. ಅವರನ್ನೆಲ್ಲಾ ಸೂಪರ್ವೈಸ್ ಮಾಡ್ತಿದ್ದ. ಚೂರು ದೊಡ್ಡ ಮಕ್ಕಳು ನಮ್ಮನ್ನ ನೋಡಿದವರೆ ಸಜ್ಜಾದಂತೆ ಎದ್ದು ಕಾದು ನಿಂತರು. ಅವರಲ್ಲೆ ದೊಡ್ಡವಳೊಬ್ಬಳನ್ನು ಕರೆದು ‘ಇಲ್ಲಿ ಅನಿತ ಅಂತ….’ ಅಂತಿದ್ದೆ ಅಷ್ಟರಲ್ಲಿ ‘ಅಗೋ ಆ ನೆರ್ಕಪಕ್ಕದಗಿರ ಗುಡ್ಲು….’ ಅಂದಳಾಕೆ.
ಒಂದು ನಾಲ್ಕು ಮಂದಿ ಕಾಲುಚಾಚಿ ಮಲಗುವಷ್ಟು ಜಾಗವಿತ್ತು ಒಳಗಡೆ ಅಷ್ಟೆ. ಹೊಗೆ ಸುತ್ತಿಕೊಂಡಂತೆ ಒಳಗೆಲ್ಲಾ ಘಾಟು. ಹೊರಗೆ ಪಕ್ಕಕ್ಕೆ ನಾಕು ಕೋಲು ನೆಟ್ಟು ದುಪಡಿ ಕಟ್ಟಿ ಟೆಂಟಿನಂಗೆ ಮಾಡಿಕಂಡಿದ್ದರು. ಗೋಡೆಯ ಪಕ್ಕಕ್ಕೆ ಅತ್ತ ಕಡಿಗೆ ಮುಖಮಾಡಿ ಮುದುಕನೊಬ್ಬ ಮುದುರಿ ಮಲಗಿದ್ದ. ಪಕ್ಕದಲ್ಲೇ ಅರೆಪ್ರಜ್ಞಾವಸ್ಥೆಯಲ್ಲಿ ಮೈಮೇಲಿನ ಬಟ್ಟೆ ಅಸ್ತವ್ಯಸ್ತಗೊಂಡಿದ್ದರೂ ಎಚ್ಚರವಿಲ್ಲದಂತೆ ಕುಂತು ಏನೋ ಬಡಬಡಾಯಿಸ್ತಿದ್ದ ಮುದುಕಿ. ಆಕೇನ ನೋಡಿದ್ದೇ ‘ಓ ಅಜ್ಜಿ ಆಗ್ಲೆ ದೇವ್ರಾಗ್ಯಳರೀ….’ ಅಂದ ಮನು. ಇನ್ನೊಂದು ಮೂಲೇಲಿ ಹತ್ತು ಹನ್ನೆರಡು ವರ್ಷದ ಹುಡುಗನೊಬ್ಬ ಗೋಣಿ ತಟ್ಟಿನ ಮೇಲೆ ದುಪಡಿಯೊಳಗೆ ಕವಚಿ ಮಲಗಿದ್ದ ಕಣ್ಣು ಪಿಳಿಪಿಳಿ ಬಿಟ್ಕಂಡು. ಇನ್ಯಾರೂ ಕಾಣ್ಲಿಲ್ಲ ಅಲ್ಲಿ. ನಮ್ಮನ್ನೆ ನೋಡ್ತಿದ್ದ ಆ ಹುಡುಗ ಕಡೆಗೂ ಬಾಯ್ಬಿಟ್ಟು ಕೇಳಿದ ‘ಯಾರ್ಬೇಕ್ರೀ….’ ಅಂತ.
‘ಅನಿತ ಇಲ್ಲೇನಪ್ಪ…’ ಕೇಳಿದ ಮನು. ‘ಬೆಳಿಗ್ಗೆ ವೋದಕಿ ಇನ್ನ ಬಂದಿಲ್ರಿ…’ ಅಂದ ಹುಡುಗ. ‘ಇವರ್ಯಾರು….?’ ಅಂತ ಆ ಮುದುಕ ಮುದುಕಿನ ತೋರಿಸಿ ಕೇಳಿದೆ ನಾನು. ‘ನಮ್ಮಜ್ಜ ನಮ್ಮಜ್ಜಿ….’ ಅಂದ. ಹುಷಾರಿಲ್ಲವಾ ಅವ್ರಿಗೆ….?’ ಕೇಳಿದೆ ನಾನು ಮುದುಕನತ್ತ ಕೈ ಮಾಡಿ. ‘ಅವ್ನಿಗೇನಾಗೆತಿ ಧಾಡಿ ಕುಡ್ದು ಬಿದ್ದನಂಗೆ….’ ಅಂತ ಅವ್ನು ಮಲಗಿದ್ದಲ್ಲಿಂದ ಮಿಸುಗದೆ ಹೇಳಿದ. ‘ಎದ್ದು ಕುತ್ಗಳ, ಏನ್ ಮಕ್ಕಂಡೆ ಮಾತಾಡ್ತಿ….’ ಅಂದು ಮನು ‘ಅಮ್ಮ ಎಷ್ಟೊತ್ತಿಗ್ಬರ್ತರೆ….?’ ಅಂತ ಕೇಳಿದ. ‘ಒಮ್ಮೆಟಿಗೆ ರಾತ್ರಿಕೆ…..’ ಮಲ್ಕಂಡೇ ಹೇಳ್ದ ಅವ್ನು ಮತ್ತೆ. ‘ಅಪ್ಪ…’ ಅಂತ ಕೇಳಿದ್ರೇ ‘ಗೊತ್ತಿಲ್ಲ….’ ಅಂದ. ಮನು ಮುಖ ನೋಡಿದೆ. ಚೂರು ರೇಗಿತ್ತು ಅವನಿಗೆ. ‘ಹೌದೋ ನಿನಿಗೇನಾಗೆತಿ….? ಏನ್ ಖಾಯ್ಲೆ….?’ ಅಂತ ಕೇಳ್ದ. ಅದಕ್ಕೂ ಅವನು ಮಾತಾಡ್ಲಿಲ್ಲ. ಆದರೆ ಮೈಮೇಲಿನ ಹೊದಿಕೆಯನ್ನ ಸರಕ್ಕನೆ ಸರಿಸಿದ. ನಾವಿಬ್ರೂ ಹೌಹಾರಿ ನಿಂತುಬಿಟ್ವಿ. ಮೊಣಕಾಲಿನವರೆಗೆ ಎರಡೂ ಕಾಲುಗಳನ್ನ ಕತ್ತರಿಸಿ ತಗೆದಿದ್ದರು. ‘ಅಕ್ಸಿಡೆಂಟ್ನಗೆ ವೋದ್ವು ಅಂಕಲ್ ಎರಡು ಕಾಲು….’ ಅಂದ ಆ ಹುಡುಗ ಯಾವದೇ ಏರಿಳಿತ ಇಲ್ಲದೆ. ಮನು ಅಲ್ಲೆ ಕುಂತುಬಿಟ್ಟ ಅವನ ಪಕ್ಕದಲ್ಲೆ ಕಾಲು ಮೆಲ್ಲನೆ ನೇವರಿಸುತ್ತ, ಕೊರಳು ಕಟ್ಟಿ ಮಾತುಗಳು ಮೂವಾದ್ವು. ಅವನ ಕೈಯಲ್ಲಿ ಒಂದಷ್ಟು ದುಡ್ಡು ಇಟ್ಟು ತಿರುಗಿ ಬಂದುಬಿಟ್ವಿ ಇಬ್ರೂ.
ಮರುದಿನ ಹನ್ನೆರಡರ ನಂತರ ಅನಿತಾ ಮತ್ತು ಗೋಪಾಲ್ ಕರ್ಕಂಡು ಮನೆಗೇ ಬಂದ್ಬಿಟ್ಟಾ ಮನು. ಎತ್ತರಕ್ಕೆ ಸ್ವಲ್ಪ ಕಪ್ಪೇ ಎನ್ನಿಸುವ ಚೂಟಿಗಣ್ಣಿನ, ಎರಡು ಜಡೆಯ, ಕಡ್ಡಿ ಎನಿಸುವಷ್ಟು ತೆಳ್ಳಗಿನ ದೇಹ ಅನಿತಾಳದ್ದು. ಬಿಗಿದ ಮುಖ ಅವಳಿಗೆ ಮೆಚ್ಯೂರ್ಡ್ ಕಳೆ ಕೊಟ್ಟಿತ್ತು. ನಮ್ಮನ್ನ ಪರಿಚಯಿಸಿದ ಗೋಪಾಲ್ ‘ನೋಡಿ ಮೇಡಂ ನೆರೆ ಅಂದ್ರೆ ಅಕ್ಕ ಪಕ್ಕ ಸುತ್ತ ಮುತ್ತ ಅಂತನೂ ಆಗತ್ತೆ. ನಾನ್ ಬರ್ದಿರದೆ ಸರಿ ಅಂತಳೆ ಇವ್ಳು….’ ಅಂದ್ರು. ಕಾತರದ ನೋಟ ನನ್ನತ್ತ ಎಸೆದು ಕಾಯುತ್ತಿದ್ದಳು, ಆ ಹುಡುಗಿ ನನ್ನ ಉತ್ತರಕ್ಕೆ. ‘ಹೌದು, ಅವ್ನು ಹೇಳೋದು ಸರೀನೆ ಇದೆ’ ಅಂದು ನೆಮ್ಮದಿಗೊಂಡ ಅವಳ ಭಾವ ಗಮನಿಸುತ್ತಾ ‘ಬಾ ಇಲ್ಲಿ ಕುತ್ಕೋ’ ಅಂತ ಪಕ್ಕದಲ್ಲಿ ಕೂರಿಸ್ಕಂಡು ‘ನಿನ್ನೆ ನಿಮ್ಮನೆಗೆ ಬಂದಿದ್ವಿ….’ ಅಂದೆ.
‘ಹೂಂ ಮಿಸ್ ಯೇಳ್ದ ನನ್ ತಮ್ಮ….’ ಅಂದು ಸುಮ್ನಾದ್ಲು.
ನಾನೇ ಮಾತಾಡಿದೆ ‘ಅಪ್ಪ ಏನ್ಮಾಡ್ತಾರೆ…?’ ಅಂತ ಕೇಳಿದೆ.
‘ಅಮ್ಮ ಮನಿ ಕೆಲ್ಸ ಮಾಡ್ತಾರೆ ಮಿಸ್. ಇಲ್ಲಿಗೆ ಬರ್ತಾರೆ ದಿನಾಲು. ನಾಲಕ್ಮನಿ ಮಾಡ್ತಾರೆ. ಒಂದೂವರೆ ಸಾವ್ರ ಸಿಗ್ತತೆ. ಅಜ್ಜ, ಅಜ್ಜಿ ಇದ್ದಾರೆ. ಅವ್ರ ಖರ್ಚಿಗೆ ಅವ್ರೆ ನೋಡ್ಕಂತರೆ. ಅಜ್ಜಿ ಸೊಪ್ಮಾರ್ತಾಳೆ. ಅಜ್ಜ ಹಣ್ಣು ಮಾರ್ತನೆ. ಅವ್ರು ದುಡ್ದಿದ್ದು ದಿನಾಲು ಅವ್ರ ಪಾಕೆಟ್ಟಿಗೆ, ಉರಿದ ಮೀನು, ಮೊಟ್ಟಿಗೆ ಆಕತಿ. ನಾವು ಒಟ್ಟು ಆರು ಜನ ಮಿಸ್ ಮಕ್ಳು’ ಅಂತ ತನ್ನ ಮನೆ ಡೀಟೆಲ್ಸ್‌ನ ಬಡಬಡಾಂತ ಹೇಳಿದ್ಲಾಕೆ, ತನ್ನಪ್ಪನೊಬ್ಬನ ಹೊರತು. ಮತ್ತೆ ಅವನ ಬಗ್ಗೆ ಕೇಳೋಕೆ ಬಾಯ್ಬರ್ಲಿಲ್ಲ ನನಗೆ. ಪ್ರತಿ ಮನೆಗಳಲ್ಲೂ ಈಗ ಹೆಣ್ಮಕ್ಕಳು ದುಡೀತಾ ಇದ್ದರೂ ಕೆಲವೆಡೆ ಅದೇ ಪ್ರಧಾನ ಆಗಿರೋದು ಸಾಮಾನ್ಯವಾಗಿದ್ದರು, ಇವತ್ತ ಗಂಡಿನ ದುಡಿಮೆ, ಅವನ ಕೆಲಸಕ್ಕೇ ಮೊದಲ ಆದ್ಯತೆ ನೀಡುವ ರೂಢಿಗೆ ನಾವೂ ಎಷ್ಟರಮಟ್ಟಿಗೆ ಬದ್ಧರಾಗಿದ್ದೇವಲ್ಲಾ ಎನಿಸಿ ಪೆಚ್ಚೆನಿಸಿತು ಅವಳು ಉತ್ತರಿಸಿದ ರೀತಿಗೆ.
ಅದನ್ನ ಮರೆಮಾಚಲು ‘ಹೋಗ್ಲಿ ಬಿಡು ಇಂಥ ಕಷ್ಟದಲ್ಲೂ ನಿನ್ನ ಓದಿಸ್ತಿದಾಳಲ್ಲ ನಿಮ್ಮಮ್ಮ ತುಂಬಾ ಖುಷಿ ಆಯ್ತು’ ಅಂದೆ. ‘ಉಹೂಂ ನಾನೋದ್ತಿದೀನಿ ನಂದೇ ಸಂಪಾದ್ನೆಲಿ…’ ಅಂದಳಾಕೆ. ಅದುವರೆಗೂ ಇರದ ಸೆಡವು ಇದ್ದಕ್ಕಿದ್ದಂಗೆ ಕಾಣಿಸಿತ್ತು ಅವಳ ಮಾತಲ್ಲಿ. ನಾನು ಅದನ್ನ ಗಮನಿಸದವಳಂತೆ ಅದೇ ಧಾಟಿಯಲ್ಲಿ ‘ಓ ವೆರಿಗುಡ್ ವೆರಿಗುಡ್’ ಅಂದು ‘ಏನ್ಮಾಡ್ತಿ….’ ಅಂತ ಕೇಳ್ದೆ. ತಟ್ಟನೆ ಹೇಳಿದಳು ‘ವ್ಯಾಪಾರ’ ಅಂತ.
ನಾನು ನಕ್ಕೇ ‘ಗೊತ್ತಾಯ್ತು ಬಿಡು ಅಜ್ಜಿ ಸೊಪ್ಪು ಮಾರ್ತಾರೆ, ಅಜ್ಜ ಹಣ್ಣು ಮಾರ್ತಾರೆ, ನೀನೇನು ಮಾರ್ತಿ…?
‘ಮೈಯ್ಯಿ…’ ತುಂಬಾ ನಿರ್ಲಿಪ್ತವಾಗಿ, ಅಷ್ಟೇ ಸಲೀಸಾಗಿ, ಬಹಳ ಸಹಜವಾಗಿ, ತಣ್ಣಗೆ ಬಂದ ಉತ್ತರ ನನ್ನ ಎತ್ತಿ ಕುಕ್ಕಿ ಬಿಸಾಡಿತು. ಇದ್ದಂತೆ ಇದ್ದಲ್ಲೇ ಹಾಗೇ ಸ್ಟಿಲ್ಲಾದೆ. ಬಾಯಿನ ತೇವ ಆರಿ ಹೋದಂತಾಗಿ ಗಂಟಲು ಒಣಗಿ ಉಸಿರು ಸಿಕ್ಕಿಕೊಂಡ ಅನುಭವ. ಕಣ್ಣು ಬಾಯಿಬಿಟ್ಟು ಸುಮ್ಮನೇ ಕೂತುಬಿಟ್ಟೆ. ನಮ್ಮಿಬ್ಬರನ್ನೇ ಅಲ್ಲಿ ಬಿಟ್ಟು ನಮ್ಮ ಮಾತುಗಳನ್ನ ಅಲಿಸುತ್ತಾ ಒಳಗಿನ ಕೋಣೆಯಲ್ಲಿ ಕೂತಿದ್ದ ಗೋಪಾಲ್ ಮತ್ತು ಮನು ಇಬ್ರೂ ಒಂದೇಟಿಗೆ ಓಡಿ ಬಂದು ಅಲ್ಲಾಡದೆ ನಿಂತುಬಿಟ್ಟರು ಅವಳ ಹಿಂದೆ ಹಾಗೆ.
ಒಂದು ಚೂರೂ ಅಳುಕು, ಭಯ, ಯಾವ ಭಾವೋದ್ವೇಗವೂ ಇಲ್ಲದ ಅವಳ ಇರುವು ನನ್ನೊಳಗೆ ಚಳಿ ಹುಟ್ಟಿಸತೊಡಗಿತು. ನನ್ನ ಸ್ಥಿತಿ ಅರ್ಥವಾಯಿತೋ ಎಂಬಂತೆ ಅವಳೇ ಮಾತಾಡಿದಳು. ‘ನಮ್ಮನಿ ಹತ್ರ ಇರೋ ಶಾಲೆನಗೆ ನಮ್ಮಮ್ಮನ್ಕೂಡ ಮನಿ ಕೆಲ್ಸ ಮಾಡ್ಕಂತನೆ ಎಳ್ನೆ ಕ್ಲಾಸ್‍ವರ್ಗೂ ವೋದ್ದೆ ಮಿಸ್. ಅಮ್ಯಕ್ನಂಗ ಮನಿ ಕೆಲ್ಸ ಅಂದ್ರೆ ಆಗ್ಬರ್ದಂಗಾತು. ನಮ್ಮವ್ವಗೆ ನಾನ್ಮುಂದಕ್ಕೆ ವೋದದು ಆಗ್ಬರ್ಲಿಲ್ಲ. ನಮ್ಮಮ್ಮಗೆ ನನ್ನ ವರಗ್ಕಳ್ಸದೆ ಇಷ್ಟಿರ್ಲಿಲ್ಲ. ಆಕಿಗೆ ಯದ್ರಿಕಿ. ದನದ್ಬಡ್ದಂಗೆ ಬಡಿತಿದ್ಲು ದಿನಾಲು ಮನಿ ಕೆಲ್ಸಕ್ಕೆ ಬಾ ಅಂತ. ನಾನೋಗ್ತಿದ್ದಿಲ್ಲ. ಒಂದ್ವರ್ಷ ಹಂಗೇ ಮನ್ಯಾಗೆ ಸುಮ್ನೆ ಕುಂತೇ ಕಳ್ದೆ. ಉಪವಾಸ ಕೆಡವಿದ್ಲು. ವಡದ್ಲು ಯಾವುದಕ್ಕೂ ಜಗ್ಗಲಿಲ್ಲ ನಾನು. ನೀನು ಸಾಯ್ಬಡದ್ರೂ ಮನಿಕೆಲ್ಸ ಮಾಡಲ್ಲ. ನಾನು ವೋದ್ಬೆಕು ಅಂತ ನಂದೂ ವಂದೇ ಹಟ.
ಇದನ್ನೆಲ್ಲಾ ನೋಡ್ತಾನೆ ಇತ್ತು ನಾಗರಾಜಪ್ಪ ಅಂತ ನಮ್ಮೂರ್ನಗೈತೆ ಒಬ್ಬಾತ. ಬರ್ತಿ ದುಡ್ಡದವೆ ಮಿಸ್. ಬಡ್ಡಿ ಕೊಡ್ತತೆ ಯಲ್ರಿಗೂ. ನಮ್ಮವ್ವಗೂ ಕೊಟ್ಟತೆ. ಅವ್ನತಕೆ ವಮ್ಮೆ ಸಾಲ ಮಾಡುದ್ರೆ ಅದು ಸಾಯಮಟ ತೀರಂಗಿಲ್ಲ. ಕೊಟ್ಕೊಟ್ಟಂಗೂ ಬಡ್ಡಿ ಬೆಳಿತನೇ ಇರ್ತತಿ. ಅವ್ನೇಣ್ತಿಗೆ ಯಂತದೋ ಖಾಯ್ಲೆ. ಅವಕ್ಕ ಯಾವಾಗ್ನೋಡ್ಲಿ ಹಾಸ್ಗೆಗೆ ಬಿದ್ಕಂಡಿರ್ತತೆ. ಅವಕ್ಕನ್ನ ನಾನೋಗಿ ದಿನಾಲು ನೋಡ್ಕಂಡ್ರೆ ದುಡ್ಡೂ ಕೊಟ್ಟು, ಬಡ್ಡೀನು ಬಿಡ್ತೀನಿ ಅಂತ ನಮ್ಮವ್ವಗೆ ಆಸೆ ಹುಟ್ಟುಸ್ತು.
ಅದೇ ವತ್ನಗೆ ನನ್ನ ತಮ್ಮಗೆ ಆಕ್ಸಿಡೆಂಟಾಗಿ ಕಾಲೇ ಮುರೀತು. ನಾನು ಅವ್ನ ಮನಿ ಸೇರ್ದೆ. ಮೊದ್ಲು ಬರೀ ಅವಕ್ಕನ್ನ ನೋಡ್ಕಬೇಕಿತ್ತು. ಅದುನ್ನೇ ಮಾಡತಿದ್ದೆ. ಒಂದಿನ ನಾನೇ ಕೇಳ್ದೆ ಮಿಸ್. ನೀವೇನು ಕೆಲಸ ಯೇಳಿದ್ರೂ ಮಾಡ್ತೀನಿ ನನ್ನ ಶಾಲೆಗೆ ಕಳಿಸ್ರಿ ಅಂತ.
‘ಏನಂದ….’ ನಾನು ಕಾತರದಿಂದ ಕೇಳಿದೆ ಮಧ್ಯಕ್ಕೆ ತಡೆದು.
‘ಅವತ್ತೇನೂ ಹೇಳ್ಲಿಲ್ಲ. ಎರಡ್ದಿನ ಬಿಟ್ಟು ನಾನು ಕರ್ದಂಗೆಲ್ಲಾ ಬಂದು ನನ್ಜತೆ ಮಕ್ಕಂತೀಯಾ ಶಾಲೆಗೆ ಸೇರಿಸ್ತೀನಿ ಅಂತ ಕೇಳ್ತು.’ ನಾನು ಥಟ್ಟನೆ ‘ನೀನೇನಂದೇ?’ಅಂತ ಕೇಳಿದೆ.
ನನಗೆ ಗೊತ್ತಾಗುವಷ್ಟು ನನ್ನ ದನಿ ನಡುಗ್ತಿತ್ತು.
‘ಹೂಂ ಅಂದೆ. ಆ ಅವಕಾಶ ಬಿಟ್ರೆ ನಂಗ್ಮತ್ತೆ ವೋದಕೆ ಛಾನ್ಸೆ ಇರ್ಲಿಲ್ವಲ್ಲ ಮಿಸ್’. ಅವಳ ಉತ್ತರ ಕೇಳಿದ್ದೆ ಮನು ಕುರ್ಚಿಯಲ್ಲಿ ಕುಸಿದು ಕೂತ.
‘ಅಮ್ಮಾ….?’ ಕೇಳಿದೆ ನಾನು ಕಷ್ಟಪಟ್ಟು ಸಾವರಿಸಿಕೊಂಡು. ‘ಏನ್ಮಾಡ್ತಳೆ ಮಿಸ್ ಆಕಿ ಪಾಪ. ಅವ್ಳ ತರೋ ದುಡ್ಡು ನಮ್ ಅರೆವಟ್ಟಿಗೂ ಸಾಲ್ದು. ಜತೀಗೆ ಆಸ್ಪತ್ರೆ ಖರ್ಚು ಬ್ಯಾರೆ. ಈವಪ್ಪ ಒಂದೀಟು ಕೈ ಬಿಚ್ಚಿ ಕೊಡ್ತಿತ್ತ ಅಂಗೂ ಯಿಂಗೂ. ಅದಕ್ಕೆ ಕಂಡೂ ಕಾಣ್ದಳಂಗೆ ಇದ್ಬಿಟ್ಲು.
ತಡೀಲಾರದೆ ಮನು ಎದ್ದು ಬಂದು ನನ್ನ ಪಕ್ಕಕ್ಕೆ ಕೂತು ‘ನೀನೆ ದೊಡ್ಡವಳಾ…? ಹೌದು. ನಿನ್ನ ಹೊರಗ್ಕಳ್ಸಕೆ ನಿಮ್ಮಮ್ಮಂಗೆ ಯಾಕೆದ್ರಿಕೆ….?’ ಅಂತ ಕೇಳಿದ.
‘ಇಲ್ಲ. ಅಕ್ಕ ಒಬ್ಳಿದ್ಲು ಸರ್. ಅವಳಿಂದನೆ ನಮ್ಮಮ್ಮ ನಮ್ನ ವರಗ್ಕಳ್ಸಕೆ ಯದರ್ತಿದ್ಲು.’ ಅಂದಳು.
‘ಈಗೆಲ್ಲಿದಳೆ ಯಾಕೆ ಏನಾತು…?’ ಕುತೂಹಲದಿಂದ ಕೇಳಿದ ಮನು.
‘ಇಲ್ಲಾ ಸರ್ ಅವ್ಳೆಲ್ಲಿದಳೋ ಗೊತ್ತಿಲ್ಲ. ಸುನೀತ ಅವ್ಳ ಹೆಸರು. ನಮ್ಮವ್ನಂಗೆ ಕೆಂಪಗೆ ನೋಡಕೆ ಚೆನ್ನಾಗಿದ್ಲು ಸರ್. ನಾಕೈದು ವರ್ಷದ್ಕೆಳಗೆ ಆದ್ಕತೆ ಸರ್ ಇದು. ನಮ್ ಓಣಿನಗೊಬ್ಳು ಹೆಂಗ್ಸಿದ್ಲು. ಅವ್ಳ ಜತಿಗೆ ಭತ್ತದ ಮಿಲ್ಲಿಗೋಗ್ತಿದ್ಲು ಸುನೀತ. ಒಂದ್ತಿಂಗ್ಳಾಗಿತಟೆ. ನಮ್ ಸುನೀತನು, ಆ ಹೆಂಗ್ಸು ಇಬ್ರೂ ಎತ್ಲಾಗೋ ವೋಗ್ಬಿಟ್ರು ವಂದಿನ. ಏಟುಡ್ಕಿದ್ರೂ ಸಿಗ್ಲಿಲ್ಲ. ಪೋಲೀಸ್ ಕಂಪ್ಲೇಂಟೂ ಕೊಟ್ಲು ಅಮ್ಮ.
ಒಂದೆಂಟು ತಿಂಗ್ಳಾಗಿತ್ತೇನೋ ವಂದಿನ ರೇಲ್ವೆ ದಾಟಿ ಆ ಕಡಿಗೆ ವೊಗತ್ಗೆ ಮರೆ ಆಗ್ಬಿಟ್ಲಂತೆ. ಸರೋತ್ತಿನ್ತನ ವುಡುಕ್ಯಾಡಿ ಬಂದ್ಲು ಅಮ್ಮ ಅವತ್ತು. ಅಕೀದು ಪತ್ತೇನೆ ಇಲ್ಲಂತ್ ಸರ್. ಅದಾಗಿ ಮೂರ್ತಿಂಗ್ಳಿಗೆ ನಮ್ ಓಣಿಯರೊಬ್ರು ಬಂದು ನಿಮ್ಮ ಮಗ್ಳು ಯಳೇಮಗಿನಕ್ಕೆಂಡು ಅಂಡರ್ಬಿಡ್ಜತ್ರ ಪುಟ್‍ಪಾತ್ನೆಗೆ ಬಿಕ್ಸೆ ಬೇಡ್ತಿದ್ಲು ಬೆಳಿಗ್ಗೆ ಅಂತ ಯೇಳಿದ್ರು. ಎದ್ವೊ ಬಿದ್ವೊ ಅಂತ ಮನಿಮಂದ್ಯಲ್ಲಾ ವೋಡಿದ್ವಿ. ನಾವೊಗವತ್ಗೆ ಅಲ್ಯಾರೂ ಇರ್ಲಿಲ್ಲ. ಅದೇ ಕೊನಿ ಸರ್ ಆಮ್ಯಾಲಿಂದ ಆಕಿ ಸುದ್ದೀನೇ ಇಲ್ಲ. ಅದಕ್ಕೆ ಅವಾಗಿಂದ ನಮ್ಮಮ್ಮಗೆ ನಮ್ನೂ ವರಗೆ ಕಳ್ಸಕೆದ್ರಿಕಿ.
ಒಳಗಿಂದೆಲ್ಲಾ ಖಾಲಿ ಆದಂತೆ ಅನಿತಾ ಸುಮ್ನೆ ಕೂತ್ಬಿಟ್ಟಳು ಅಷ್ಟು ಹೇಳಿ. ನನಗೇನಾದ್ರೂ ಬಿಸಿ ಬೇಕನಿಸಿ ಹೋಗಿ ಟೀ ಮಾಡಿ ತಂದೆ. ಕುಡಿದು ಮುಖ ಕಿವುಚಿದ ಮನು. ಯಾಕೆ ಅನ್ನುವಂತೆ ಅವನತ್ತ ನೋಡಿದೆ. ಯಾಕೋ ಬಾಯೆಲ್ಲಾ ಕಹಿ ಅಂದ. ಇಷ್ಟು ಗಂಭೀರವಾಗಿ ಅವ್ನಿದ್ದದ್ದು ಮೊದಲ ಬಾರಿಗೆ ನೋಡ್ತಿದ್ದೆ ನಾನು.
ಅದುವರೆಗೂ ಸುಮ್ಮನಿದ್ದ ಗೋಪಾಲ್ ‘ಎಷ್ಟು ದಿವಸಂತ ಹೀಗೆ ಇರ್ತೀಯಮ್ಮಾ’ ಅಂತ ಕೇಳಿದ್ರು.
‘ಗೊತ್ತಿಲ್ಲ ಸರ್’ ಅಂದ್ಲು ತಲೆ ತಿರುವುದತ್ತಾ.
‘ಹೌದು ನಾಳೆ ಏನಾದ್ರೂ ಹೆಚ್ಚುಕಮ್ಮಿ ಆದ್ರೆ…? ಅವ್ನಿಂದೇನಾದ್ರೂ ತೊಂದ್ರೆಗಿಂದ್ರೆ ಆದ್ರೆ ಏನ್ಮಾಡ್ತೀ…?’ ಗೋಪಾಲ್ ಮತ್ತೆ ಕೇಳಿದ್ರು.
‘ತೊಂದ್ರೆ ಯಾಕ್ಮಾಡ್ತತೆ ಸರ್ ಸುಮ್ ಸುಮ್ನೆ ನಾನೇನು ಮೋಸ ಮಾಡಲ್ವಲ್ಲಾ… ಮತ್ ನನಿಗೇನು ಯಚ್ಚುಕಮ್ಮಿ ಆಗತ್ತೇ ಸರ್. ಆತ್ನೆ ಯಚ್ಚುಕಮ್ಮಿ ಆಗ್ಬೇಕಟೆ. ಆಗ್ಲೇ ಐವತ್ತೊರ್ಷ ಮ್ಯಾಲಾಗೈತೆ. ಇನ್ನೆಷ್ಟು ದಿನ ಬದುಕೀತು. ವಂದ್ವೇಳೆ ಬದುಕಿದ್ರೂ ನನ್ನೇನು ಮಾಡಂಗೈತೆ. ನಾನೇನು ಆತ ಕಟ್ಕಂಡಿರ ಯೆಣ್ತಿ ಅಲ್ವಲ್ಲಾ ಕಟ್ಟಾಕಕೆ’ ಅಂತ ಒಳ್ಳೆ ಜಬರದಸ್ತಿನಿಂದಲೇ ಅನಿತ ಹೇಳಿದಾಗ ಅವಳ ಮನೋಭಾವ, ಅವಳ ಧೈರ್ಯ ನನಗೊಂಥರ ಗಾಬರಿ ಹುಟ್ಟಿಸಿದವು ಯಾಕೋ.
‘ಅದೇನೋ ಸರಿ ಬಿಡು ಆಯ್ತು. ಈ ವಿಷ್ಯ ಯಾರ್ಗೂ ಗೊತ್ತಿಲ್ವಾ….?’ ಮನು ಕೇಳ್ದ.
‘ಇಲ್ಲ ಅಂತ ನಾವಂದ್ಕಂಡಿದೀವಿ ಸರ್ ಯಾರಿಗೊತ್ತು…?’ ಅಂದ್ಲಾಕೆ ಅದೇ ತಣ್ಣನೆ ದನಿಯಲ್ಲಿ.
ಯಾರಾದ್ರೂ ಎಂಥವರಾದ್ರೂ ಒಮ್ಮೆ ಮೈ ಕೊಡವಿ ಗಾಬರಿಗೊಳ್ಳುವಂಥ ಅಸಹ್ಯಿಸಿಕೊಳ್ಳುವಂತ ಸಂಗತಿಯನ್ನು ಆಕೆ ಅರಗಿಸಿಕೊಂಡಿರುವ ರೀತಿಯೇ ಒಂದು ವಿಸ್ಮಯ. ಏನನ್ನಾದರೂ ಮಾಡಿಸಿ, ಎಲ್ಲಾನೂ ಕಲಿಸಿ ಯಾವುದನ್ನ ಬೇಕಾದ್ರೂ ಅರಗಿಸಿಕೊಳ್ಳುವಂತ ಗುಣ ಈ ಬಡತನಕ್ಕಲ್ಲದೆ ಬೇರೆಲ್ಲಿದ್ದೀತು ಅಂದುಕೊಂಡೆ ನಿಟ್ಟುಸಿರಿಟ್ಟು.
‘ಅದೇನೋ ಸರಿ ನಾಳೆ ನಿನ್ನ ಯಾರು ಮದ್ವೆ ಆಗ್ತಾರೆ ಹೀಗಾದ್ರೆʼ ಮನು ಹೇಳಿದ. ಅವನ ದನಿಯಲ್ಲಿ ನಿಜಕ್ಕೂ ಕಳಕಳಿಯಿತ್ತು.
‘ಮದ್ವೆ ಆಗದೊಂದೇ ಉದ್ದೇಶ ಏನ್ಸಾರ್ ಜೀವ್ನಕ್ಕೆ….?’ ಅವನಿಗೇ ಮರುಪ್ರಶ್ನೆ ಹಾಕಿದಳು ಅನಿತ. ಮನು ಅಂತ ಮನುನೇ ತಡವರಿಸಿದ ಮಾತಿಗೆ.
‘ಮದ್ವೆ ಆಗಕೇ ಅಂತ ನಾನು ಶುದ್ಧವಾಗಿದ್ದು, ಮನೆಕೆಲ್ಸ ಮಾಡ್ಕಂಡು, ಒಂದು ಇನ್ನೂರ್ಗೋ ಮುನ್ನೂರ್ಗೋ ಕತ್ತೆ ಚಾಕರಿ ಮಾಡ್ಕಂಡಿದ್ರೆ ನಂದೂ ನಮ್ಮಮ್ಮನ ಕಥೇನೇ ಆಗ್ತೈತಿ ಸರ್. ಕೊನಿಗೆ ಯಾವನನ ಒಬ್ಬ ಕೂಲಿನೋ ಹಮಾಲಿನೋ ಕುಡುಕನೋ ಜೂಜುಕೋರನೋ ನನ್ನ ಗಂಡ ಆಗ್ತಾನೆ. ಒಂದೈದಾರು ಮಕ್ಳೂ ಆಗ್ತವೆ. ಅಷ್ಟಕ್ಕೆ ನಾನುಟ್ಟಿದ್ದು ಸಾರ್ಥಕಾತು ಅಂತ ಪಡಬಾರ್ದು ಪಾಡ್ಪಟ್ಟು ಜೀವ್ನಯಿಡೀ ನರಕದಾಗೆ ಕೊಳೆಯಕೆ ನನಗಿಷ್ಟ ಇಲ್ಲ ಸರ್. ನಾನೋದ್ತೀನಿ ಸರ್. ಅಷ್ಟಕ್ಕೂ ನಾನು ಈಗ ಮಾಡ್ತಿರದ್ನ ಮದ್ವೆಯಾದ್ಮೇಲೂ ಮಾಡದಲ್ವಾ ಸರ್ ಏನು ವ್ಯತ್ಯಾಸ…?’ ಅಂದು ನಮ್ಮೊಳಗೊಂದು ಸಮರವನ್ನೇ ಸಾರಿ ತಾನು ಮಾತ್ರ ಶಾಂತವಾಗಿ ಕೂತು ಬಿಟ್ಟಳಾಕೆ.
ಮದುವೆ ಮತ್ತು ಅದಕ್ಕೆ ಬೇಕಾದ ಹೊಂದಾಣಿಕೆಯನ್ನೇ ಗುರಿಯಾಗಿಟ್ಕಂಡು ಹೆಣ್ಣು ಜನ್ಮ ತಾಳಿದ ಕ್ಷಣದಿಂದ ಅದಕ್ಕೇ ತಕ್ಕನಾದ ನಡೆನುಡಿ, ಓದುಬರಹ, ಸಂಸ್ಕಾರದಿಂದ ಆಕೆನ ಕಡೆದು ಕೆತ್ತುವ ಒಪ್ಪಿತ ರೂಢಿತ ವ್ಯವಸ್ಥೆಗೆ ಎದುರಾಗಿ ನಿಂತಿದ್ದಳಾಕೆ. ಈ ವಯಸ್ಸಿಗೆ ಇವಳಲ್ಲಿ ಈ ಗಟ್ಟಿತನ ಒಟ್ಟಾಗಿ ಮೈಗೂಡಿಕೊಳ್ಳುವ ನಿಟ್ಟಿನಲ್ಲಿ ಈಕೆ ಒಳಗೊಂಡಿರಬಹುದಾದ ಸಂಘರ್ಷ ನಡೆಸಿರಬಹುದಾದ ಹೋರಾಟ ಕಲ್ಪನೆಗೆ ನಿಲುಕದ್ದು. ಹೌದು ದಿನಬೆಳಗಾದರೆ ಬಡವರಿಗೆ ಉಚಿತ ಶಿಕ್ಷಣ, ಎಲ್ಲರಿಗೂ ಶಿಕ್ಷಣ ಕಡ್ಡಾಯ ಅಂತ ಸಂಬಂಧಪಟ್ಟವರೆಲ್ಲ ಬಡ್ಕಂತನೆ ಇರ್ತರೆ. ಅವರುಗಳಿಗೆ ಇಂಥವರೇಕೆ ನಿಲುಕುವುದಿಲ್ಲ. ಸಹಜವಾಗಿ ಸಿಗಬೇಕಾದ್ದನ್ನ ಪಡೆಯೋಕೆ ಎಳೆಯ ಮನಸೊಂದು ಜೀವವೊಂದು ಹೀಗೆ ನಲುಗಿ ವಿಲವಿಲ ಒದ್ದಾಡುವ ಪರಿಸ್ಥಿತಿಗೆ ಏನು ಹೊಣೆ? ಯಾರು ಹೊಣೆ? ಯೋಚಿಸುತ್ತಲೇ ಮನಸೊಂದು ನಿರ್ಧಾರಕ್ಕೆ ಬರುತ್ತಿತ್ತು. ಹೇಳಬೇಕೆನ್ನುವಷ್ಟರಲ್ಲಿ ಮನು ನನ್ನತ್ತ ಬಾಗಿ ಕಿವಿಯೊಳಗೆ
‘ನಮ್ಮ ಅನುಕಂಪ ಉಪದೇಶ ಯಾವ್ದುಕ್ಕೂ ಅವಕಾಶನೇ ಇಲ್ದಂಗೆ ಇದೆಯಲ್ವಾ ಇವ್ಳ ಮಾತುಕತೆ….. ಸ್ವಲ್ಪನಾದ್ರೂ ಗೊಂದಲ ಗಲಿಬಿಲಿ ಇದ್ದಿದ್ರೂ ನಾಲ್ಕು ಮಾತು ಹೇಳ್ಬಹುದಿತ್ತು. ಹೋಗ್ಲಿ ಸ್ವಲ್ಪ ಅಳುಕು ಭಯ…. ಉಹೂಂ ಅದೂ ಇಲ್ಲ. ಪ್ರಶ್ನೇನು ಹಾಕಿ ಉತ್ತರನೂ ಅವಳೇ ಹೇಳ್ತಿದ್ದಾಳೆ..’ ಅಂತ ಪಿಸುಗುಟ್ಟಿದ.
‘ಮನು ಅವ್ಳು ಪ್ರಜ್ಞೆಯಿಟ್ಕಂಡೇ ಎಲ್ಲಾ ಮಾಡ್ತಿದಾಳೆ ಪ್ರಜ್ಞೆ ಕಳ್ಕಂಡಲ್ಲ. ಮತ್ತೆ ಯಾಕ್ಮಾಡ್ತಿದಳೆ ಆಕಿಗೇನ್ ಬೇಕು ಅದರ ಸ್ಪಷ್ಟ ಅರಿವೂ ಇದೆ ಎಚ್ಚರಿಕೇನೂ ಇದೆ. ಅದಕ್ಕೆ ಅಲ್ಲಿ ಯಾವ ಕನ್‍ಫ್ಯೂಷನ್ನು ಇಲ್ಲ ಕನ್‍ಫೆಷನ್ನೂ ಇಲ್ಲ…’ ಅಂದು ‘ನನ್ಜೊತೆ ಬಂದು ಇರ್ತಿಯಾ ನೀನು’ ಅಂತ ಕೇಳ್ದೆ ಅನಿತನ್ನ.
‘ಏನಂದ್ರಿ ಮಿಸ್…! ನಿಜವಾಗ್ಲೂ….! ನಿಜವಾಗ್ಲೂ ಇಟ್ಗಂತೀರ ಮಿಸ್’ ಕಣ್ಣರಳಿಸಿ ಎದ್ದು ಓಡಿ ಬಂದು ನನ್ನ ಕೈ ಹಿಡಿದು ಸಣ್ಣ ಹುಡುಗಿಯಂತೆ ಮುದ್ದಾಗಿ ಕೇಳಿದಳಾಕೆ.
ಈಗ ಬೇರೆಯೇ ಅನಿತನ್ನ ನೋಡುತ್ತಿದ್ದೆ ನಾನು. ಒಮ್ಮೆಲೆ ಕಣ್ಣಲ್ಲಿ ಆ ಎಳೆತನ, ಜೀವಸಂಚಾರವಾದಂತೆ ದೇಹದಲ್ಲಿ ಲವಲವಿಕೆ. ಮಾತಲ್ಲಿ ಮುಗ್ಧತೆ, ‘ಮಿಸ್, ಕವಿತ ಅಂತ ಇನ್ನೊಬ್ಳು ತಂಗಿಯಿದಳೆ. ತುಂಬಾ ಚೂಟಿ ಮಿಸ್. ನನಗಿಂತಲೂ ಜಾಣೆ. ನೋಡಕೂ ತುಂಬಾ ಚೆನ್ನಾಗಿದ್ದಾಳೆ. ಬೆಳ್ಳಗಿದ್ದಾಳೆ. ತುಂಬಾ ಒಳ್ಳೆವ್ಳು ಮಿಸ್. ನೀವೆಂಗೇಳ್ತೀರೋ ಹಂಗ್ಕೇಳ್ತಾಳೆ. ಮಿಸ್ ಅವ್ಳನಾ….’ ಅಂದು ಮಾತು ನಿಲ್ಲಿಸಿ ನನ್ನ ಮುಖ ನೋಡಿದಳು.
ಅದುವರೆಗೂ ಕಾಣದ ದೈನ್ಯತೆ ಇತ್ತು ಆ ನೋಟದಲ್ಲಿ. ಮಾತು ಅಷ್ಟೇ ಮೆದು. ಅವಳ ಇಂಗಿತ ನಾನರಿತೆ. ಅವಳ ಬಗ್ಗೆ ಒಮ್ಮೆಲೇ ಎಲ್ಲಿಲ್ಲದ ಅಕ್ಕರೆ, ಗೌರವ ಉಕ್ಕಿ ಬಂದವು ನನ್ನಲ್ಲಿ.
‘ಅಮ್ಮನತ್ರ ಮಾತಾಡು ನೀನ್ಯಾವಾಗ ಬೇಕಾದ್ರೂ ಕರ್ಕಂಡು ಬಾ…’ ಅಂದೆ.
‘ನೋ ನೋ ನೋ….’ ಅಂತ ಮನು ಮಧ್ಯ ಪ್ರವೇಶಿಸಿದ. ‘ಅಪ್ಪ, ಅಮ್ಮ ಹಳ್ಳೀಲಿ ಇಬ್ರೆ ಇರ್ತಾರೆ. ಅಪ್ಪ ತೋಟಕ್ಕೋದ್ರೆ ಅಮ್ಮ ಒಬ್ಳೆ. ಅಮ್ಮನ್ಜತೆ ಕವಿತ ಇರ್ತಾಳೆ. ಮನೆಯದುರ್ಗೆ ಶಾಲೆನೂ ಇದೆ. ಅಲ್ಲೇ ಕಲೀತಾಳೆ. ‘ಡನ್ನಾ…’ ಅಂದ ಹೆಬ್ಬೆಟ್ಟತ್ತಿ.
‘ಓ ಡನಾಡನ್’ ಅಂತ ಜೋರಾಗಿ ಚಪ್ಪಾಳೆ ತಟ್ಟುತ್ತಾ ‘ಏನನಿತಾ’ ಅಂತ ಅವಳ ಕಡೆ ತಿರುಗಿದೆ.
ಅವಳು ಓಡಿಬಂದು ಸಣ್ಣ ಮಗುವಂತೆ ನನಗೆ ತೆಕ್ಕೆ ಬಿದ್ದಳು. ‘ಮತ್ತೆ ನೀನು….?’ ಅಂದೆ.
‘ಇಲ್ಲ ಮಿಸ್ ನಂದೇನ್ ತಲಿ ಕೆಡಿಸ್ಕಾಬ್ಯಾಡ್ರಿ ನಾನ್ ಮನಿ ಬಿಟ್ ಇರಕೆ ಬರಂಗಿಲ್ಲ ಮಿಸ್. ನೀವೆ ನೋಡಿರಲ್ಲ ನಮ್ಮನಿ ಪರಿಸ್ಥಿತಿ. ಮತ್ ನಾಗರಾಜಪ್ಪನ ಯೇಣ್ತಿನೂ ನಾನೆ ನೋಡ್ಬೇಕು. ಮಿಸ್ ನೀವು, ಸರ್ರು ನನ್ ಜತಿಗೆ ಇರ್ತರಲ್ಲ ಮಿಸ್….’ ಅಂತ ಸಣ್ಣ ಮಗುವಂತೆ ನನ್ನ ಕೊರಳು ತಬ್ಬಿ ಮುದ್ದಾಗಿ ಆಕೆ ಕೇಳಿದಾಗ ಉಕ್ಕಿ ಬಂದ ಅಳುವನ್ನು ಕಷ್ಟಪಟ್ಟು ತಡೆದು ಮಾತಾಡದೆ ಬಿಗಿಯಾಗಿ ಅವಳನ್ನ ನನ್ನೆದೆಗವಚಿಕೊಂಡು ಮನುವಿನತ್ತ ನೋಡಿ ‘ಹ್ಯಾಟ್ಸ್ ಆಫ್’ ಅಂದೆ ಸನ್ನೆಯಲ್ಲೇ. ಅವನು ಕಣ್ಣಂಚಲಿ ಜಿನುಗಿದ ನೀರು ಒರೆಸುತ್ತ ನಗುತ್ತ ‘ಗ್ರೀನ್ ಪಾರ್ಕ್…’ ಅಂತ ಪಿಸುಗುಟ್ಟಿದ.
ಜಾಹ್ನವಿ ಬಿ.ಟಿ.
ನನ್ನ ಯಾವಾಗಲೂ ಕಾಡುವ ನನ್ನ ಮೆಚ್ಚಿನ ಕಥೆ ಅಂದ್ರೆ ನಾ ಬರೆದ ಕಥೆ ನೆರೆಹಾವಳಿ. ಕಥೆ ಬರೆಯುತ್ತಾ ಹೋದ ಹಂಗೇ ನನ್ನಾಳಕ್ಕೆ ಇಳಿದು ನನ್ನೊಳಗೆ ಬೇರು ಬಿಟ್ಟ ಕಥೆ ಇದು. ಮುಗಿಯುವ ಹೊತ್ತಿಗೆ ನೆರೆಹಾವಳಿಯ ಅನಿತಾಳ ಹಾವಳಿ ಅದೆಷ್ಟು ಮಿತಿಮೀರಿತ್ತು ಅಂದ್ರೆ ನಾನು ಸಂಪೂರ್ಣವಾಗಿ ಅವಳ ಪ್ರೀತಿಯಲ್ಲಿ ಬಿದ್ದು ಹೋಗಿದ್ದೆ. ಬೇರೆಯಲ್ಲಾ ಕಥೆಗಳನ್ನು ಶುರು ಮಾಡಿ ಅವು ಮುಗಿಯೋ ಹೊತ್ಗೆ “ಯಪಾ ಮುಗಿಸ್ದೆ! “ಅಂತ ನಿರಾಳವಾಗಿ ಉಸಿರು ಬಿಡ್ತಿದ್ದೆ. ಆದ್ರೆ ನೆರೆಹಾವಳಿ ಬರ್ಬರ್ದಂಗೇ ಬರೀತನೇ ಇರ್ಬೇಕು ಅನ್ನಿಸ್ತಿತ್ತು. ಮುಗಿಸಿ ದೇಶಕಾಲಕ್ಕೆ ಕಳಿಸ್ಬೇಕಿತ್ತು, ಅದಕ್ಕೊಂದು ಡೆಡ್ ಲೈನ್ ಇತ್ತು ಹಾಗಾಗಿ ಮುಗಿಸಲೇಬೇಕಿತ್ತು. ಅಯ್ಯೋ ಮುಗ್ದೇ ಹೋಯ್ತಲ್ಲಾ ಅನ್ನೋ ದುಃಖದಿಂದ ಮನಸ್ಸು ತಳಮಳಗೊಂಡಿತ್ತು. ಈ ಭಾವನೆ ಒಂದು ಹೊಸ ಅನುಭವ ನನಗೆ.
ದಿನಗಳು ಕಳೆದು ಹೋದಂಗೇ, ಕ್ಷಣಕ್ಷಣವೂ ಕಾಲ ಕ್ರಮ ಬದಲಾಗುತ್ತಾ ಕಳೆದುಹೋಗುವ ಜೀವನಪ್ರೀತಿ, ಬದುಕಲ್ಲಿ ಮಾಧುರ್ಯವನ್ನು ಉಳಿಸಿಕೊಂಡು ಹೋಗುವ ಒಡನಾಟ ಒಂದೆಡೆ.
ಹೆಣ್ಣು ಹುಟ್ಟಿದ ಕ್ಷಣದಿಂದಲೇ ಅವಳಿಗೆ ತಕ್ಕನಾದ ನಡೆನುಡಿ, ಕಟ್ಟುಪಾಡು, ಸಂಸ್ಕಾರಗಳನ್ನೆರೆದು ಆಕೆಯನ್ನು ಕಡೆದು ಕೆತ್ತುವ ಒಪ್ಪಿತ ರೂಢಿಗೆ ಎದುರಾಗಿ ನಿಂತ, ಸಾಮಾನ್ಯ ನಡವಳಿಕೆಗಳಿಗೆ ವ್ಯತಿರಿಕ್ತವಾದ ವ್ಯಕ್ತಿತ್ವದ ಪಿಯುಸಿ ಓದುವ ಹುಡುಗಿ; ಆ ವಯಸ್ಸಿಗೇ ತನ್ನ ಇಡೀ ಕುಟುಂಬದ ಹೊಣೆಯೊತ್ತು ಯಾವ ಅಪರಾಧಿ ಭಾವವೂ ಇಲ್ಲದೆ, ಒಂಚೂರೂ ಕೀಳರಿಮೆ ಹೊಂದದೆ ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡ ಆ ಎಳೆತನದ ದಿಟ್ಟತನ, ತಾನೇನು ಮಾಡುತ್ತಿರುವೆನೆಂಬುದರ ಕುರಿತು ಸ್ಪಷ್ಟತೆ, ಎಚ್ಚರಿಕೆ ಇನ್ನೊಂದೆಡೆ.
ಇಂತಹ ನಿಲುವುಗಳಿರುವ ಪಾತ್ರಗಳನ್ನು ಸೃಷ್ಟಿಸುವಾಗ ಸಾಮಾನ್ಯವಾಗಿ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಡಿಲ ನಡವಳಿಕೆಗಳು, ಅಸೂಕ್ಷ್ಮತೆ, ಒರಟುತನ, ನಿರ್ಭಾವುಕತೆ ಇವುಗಳಿಂದ ಹೊರತಾದ ಬಲು ಸೂಕ್ಷ್ಮ ಸಂವೇದನೆಗಳಿಂದ ಕೂಡಿದ ಸೌಮ್ಯತೆ, ನಾಜೂಕು, ನವುರು, ಅರಿವು, ಪ್ರಜ್ಞೆಯ ಭಿನ್ನ ಸ್ವರೂಪಗಳ ಸೃಷ್ಟಿಯು ನಿಜಕ್ಕೂ ಬಹಳ ಸವಾಲಿನದಾಗಿತ್ತು ಹಾಗೂ ಸಾಹಸವೂ ಆಗಿತ್ತು. ಹದಿನೆಂಟರ ಒಳಗಿನ ಅನಿತಾಳ ಪ್ರಬುದ್ಧತೆ ಮತ್ತು ಮೂವತ್ತರ ಆಚೀಚೆಯ ಮನೋಜ್ ಮತ್ತು ಮೇಡಮ್ಮರ ಹುಡುಗುತನ ಈ ವೈರುಧ್ಯದಲ್ಲಿ ಜೀವನದ ಕೌರ್ಯ, ಅಸಾಮಾನತೆ ಹುದುಗಿಕೊಂಡಿದ್ದು ಅದರ ಮುಸುಕೆಳೆದು ಅದನ್ನ ಹೊರಕ್ಕೆಳೆಯುವ ನಿಟ್ಟಿನಲ್ಲಿ ನನಗೆ ಎದುರಾದ ಸಂಕಷ್ಟಗಳನ್ನು ಮತ್ತು ಸವಾಲುಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ; ಧನ್ಯತೆಯನ್ನೂ ಪಡೆದಿದ್ದೇನೆ. ಅಂತೆಯೇ ಇದು ನನ್ನ ಮೆಚ್ಚಿನ ಕತೆಯೂ ಹೌದು!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ