ಅಲಾ.. ಒಂದ್ ಜಾಕೀಟ್ ಬಟ್ಟೆ ಅರ‍್ಸಕ್ಕೆ ವರ್ಸ ಪೂರ‍್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ‍್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ!
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕಥೆ “ತಲೆ ಮ್ಯಾಕೆ ವೂದ ನೀರು” ನಿಮ್ಮ ಈ ಭಾನುವಾರದ ಓದಿಗೆ
ಮನೆಗೆಲಸದ ೧೨ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ಪೋಷಕರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎಡ್ವರ್ಡ್ ಡಿಕಾಸ್ಟ ಅಲಿಯಾಸ್ ಎಡ್ಡಿ ಎಂಬ ಐವತ್ತನಾಲ್ಕು ವರ್ಷ ವಯಸ್ಸಿನ ವ್ಯಕ್ತಿಯನ್ನು ಪೋಕ್ಸೋ ಕಾಯಿದೆಯ ಅಡಿಯಲ್ಲಿ ಬಂಧಿಸಿದ್ದಾರೆ. ಅತ್ಯಾಚಾರ ನಡೆದ ಸಂದರ್ಭದಲ್ಲಿ ಉದ್ಯೋಗಸ್ಥ ಪತ್ನಿ ಮತ್ತು ಇಂಜಿನಿಯರಿಗ್ ಓದುವ ಪುತ್ರ ಹಾಗೂ ಮೆಡಿಕಲ್ ಓದುವ ಮಗಳು ಮನೆಯಲ್ಲಿ ಇರಲಿಲ್ಲ. ಪೊಲೀಸರು ಅತ್ಯಾಚಾರಿ ಮತ್ತು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ತನ್ ಮಗ ಚಂದ್ರ ಗಟ್ಟಿಯಾಗಿ ವೋದೇಳ್ತಿದ್ದಂಗೆ ಪೇಪರನ್ನು ಕಿತ್ಗ್ಯಂದು ಪಟದಲ್ಲಿ ಪೋಲಿಸರ ಮಧ್ಯ ನಿಂತ ಎಡ್ಡಿಯನ್ನೇ ನೋಡ್ತಾ ನಾಗಿ ‘ಈ ಎಡ್ಡಿಗೆ ಐವತ್ನಾಕು ಅಂದ್ರೆ ಬರ‍್ಬಾರದ ಜಾಗ್ದಿಂದ ನಗ ಬತ್ತೀತೆ.. ನೀನೇ ಏಳು ಒಂದರವತ್ತಾದ್ರೂ ಆಗ್ನಿಲ್ವಾ? ಸುಳ್ಳೇಳಕ್ಕೂ ಒಂದ್ಲಿಮಿಟ್ ಬೇಕು’ ಅಂತಿದ್ದಂಗೆ ಚಂದ್ರ ಇದ್ದೋನು ‘ಏ ಬಿಡಮ್ಮಾ ಮಾಡಿರ ಸೆಗ್ಣಿ ತಿನ್ನ ಕ್ಯಲ್ಸಕ್ಕೆ ಎಷ್ಟ್ ವಯಸ್ಸಾದ್ರೇನಂತೆ!’ ಅಂದ. ‘ಆದ್ರೂ ನೀನೇ ಲೆಕ್ಕ ಆಕ್ಯ.. ನಿನ್ ಮಂಜ್ ಮಾವಾ ಇಸ್ಕೂಲ್ ಬಿಡಷ್ಟೊತ್ತಿಗೆ ಯೋಳ್ನೇ ಕಾಲಾಸು. ಅನ್ನೆಲ್ಡ್ ವರ್ಸ. ನಾನು ಅವ್ನಿಗಿಂತ ಒಂದ್ವರ್ಸ ದ್ವಡ್ಡಳು. ಆವಾಗ್ಲೇ ಈ ಎಡ್ಡ ಎಮ್ಮೆ ಪಾಸ್ಮಾಡಿ ಊರಿಗ್ ಬಂದಿದ್ದಲ್ವ? ಈಗ ನಿನ್ ಮಂಜ್ ಮಾವ್ನಿಗೇ ಐವತ್ತಾಗೀತೆ ಅಂತಿದ್ದ.. ಅಂಗಾರೆ ಇವ್ನಿಗೆ ಎಷ್ಟಾಗರ‍್ಬೋದು?’ ನಾಗಿ ಅನ್ನುತ್ತಿದ್ದಂತೆ ‘ಏ ಸುಮ್ನಿರಮ್ಮ ಅವ್ನ್ ವಯಸ್ ತಗಂದು ನಾವೇನ್ಮಾಡಾನಾ..’ ಅಂತಂದು ಅಂಡು ಒರೆಸಿಕೊಂತ ಚಂದ್ರ ಎದ್ದೋಗಿಬುಟ್ಟ. ನಾಗಿ ಪೇಪರಲ್ಲಿನ ಎಡ್ಡಿಯ ಪಟ ನೋಡಿಕೊಂತ ಕುಂತಲ್ಲೇ ಕುಂತುಬುಟ್ಟಳು! ಆವಾಗ ಅವುಳಿಗೆ ಎಲ್ಲಾ ಗ್ಯಾಪ್ಕ ಬರಾಕೆ ಸುರುವಾತು.
*****
ಆವತ್ತು ಬೆಳಿಗ್ಗೆ ಅತ್ತನ್ನೊಂದ್ ಗಂಟೆ ಸುಮಾರಿಗೆ ನಾಗಿ ವಯರ್ ಬುಟ್ಟಿ ಇಡ್ಕಂದು ಅಳ ಮಕ ಮಾಡ್ಕ್ಯಂದು ಮನಿಗ್ ಬರ‍್ವಾಗ ಅವ್ವ ಅಪ್ಪ ಜಗ್ಳ ಮಾಡ್ಕ್ಯಂತ ಇದ್ರು. ಕೇರಿಗೆ ಕೇಳದಂಗೆ ಆಡಬೇಕಾದ ಮಾತನ್ನೂ ಗಟ್ಟಿಯಾಗಿ ಕೂಗಾಟ ಬೈದಾಟ ಮಾಡ್ತ ಆಡ್ತಾ ಇದ್ರೂ ಕೇರಿಯ ಯಾರೊಬ್ರೂ ಇವ್ರುದ್ದು ಇದ್ದಿದ್ದೇ ಅನ್ಕಂದು ಯಾವ್ದೇ ಇಂಟ್ರಸ್ ತೋರುಸ್ದಲೆ ಸುಮ್ಮುನ್ ಅವ್ರವ್ರ್ ಪಾಡಿಗೆ ಇದ್ದುಬುಟ್ಟಿದ್ರು. ಎಡ್ತಿ ಬಾಕಲಮ್ಮ ಬಾಯಿಗೆ ಬಂದಂಗೆ ಬೋದ್ರೂನೂವೆ ಪಿಳ್ಳೆಯ ಪೌರುಸ ಕಡಿಮೆಯಾಗದಲೆ ಬಾಕಲಮ್ಮ ಇದ್ದೋಳು ಸಿಟ್ಟಾಗಿ ‘ಕೈಲರಿದೋನೇ.. ದುಡಿಯಕ್ಕಾಗ್ದರು ಬೀಜ್ದಿಲಿ ಬಾಡು ಬೇಕು ಅನ್ನನು ನೀನು.. ಆದ್‌ಬಾದುದೆಲ್ಲವ ಬಾದಪ್ಪಂಗಿಕ್ಕಿ ಬಾದಪ್ಪಂದ ಮನೆಮಂದ್ಯಲ್ಲ ತಿಂದ್ರು ಅಂದಂಗೆ.. ನಿನ್ ವಳ್ಳೆದುಕ್ಕಾಗಿ ನಾವೆಲ್ಲ ಸಾಯ್ಬೇಕಾ ಮೂದೇವಿ? ನಿನ್ನಂತನು ಇದ್ರೆಷ್ಟು ಸತ್ರೆಷ್ಟು’ ಅಂತ ಬೈತಾ ಗಂಡ ಅನ್ನದ್ನೂ ನೋಡದಂಗೆ ಅವನ ತಲೆ ಕೂದ್ಲಿಗೆ ಕೈಯಾಕಿ ನಾಯಿಮರಿನ ಹಿಡ್ಕಂದಂಗೆ ಇಡ್ದು ಎಳೆದಾಡಿ ಗರಗರ ತಿರುಗ್ಸಿ ಚಚ್ಚಾಕಿಬುಟ್ಲು. ಅಷ್ಟಾದ್ರೂ ಸುಮ್ಕಿರಲರ‍್ದಲೆ ಪಿಳ್ಳೆ ‘ನಾನೇನ್ ಮಾಡ್ಲಡಗ್ಯಾ.. ದುಡ್ಡಿಸ್ಕಂದ್ ರ‍್ಚ್ ಮಾಡ್ಬುಟ್ಟಿದೀನಿ. ಇವಾಗ ನಾವೇನೇ ಅಂದ್ರೂ ರುದ್ರೇಗೌಡ್ರು ಕೇಳಕುಲ್ಲ. ನಾನೂ ಏಳಿದ್ದೆ.. ಬಾಕ್ಲಮ್ಮುನ್ನ ಕಳುಸ್ತೀನಂತ.. ನೀನಿರ ಚಂದುಕ್ಕೆ ಅವ್ನೂ ಬ್ಯಾಡಂದ್ಬುಟ್ಟ ವೋಗತ್ತಗೆ..!’ ಅಂತವ ಏಳಿ ಮುಗ್ಸದ್ರಲ್ಲಿ ಬಾಕಲಮ್ಮ ಇದ್ದೋಳು ‘ಅಂಗಂತ ನಾಗಿನ ಕಳುಸ್ತೀನಿ ಅಂತ ದುಡ್ಡಿಸ್ಕಂದು ಕುಡ್ದು ಬಂದ್ಬುಟ್ಟಿದೀಯ? ನಾನಾಗಿದ್ರೆ ಇಂತಾ ಮಾತು ಹೇಳೋತ್ಗೆ ಅವ್ನ್ ಮಕ ಕೆಚ್ಚಾಕಿ ಬತ್ತಿದ್ದೆ. ನೀನು ಎಂತನು ಅಂದ್ರೆ ಎತ್ ಮಗ್ಳುನ್ನೇ ತಲೆ ಇಡ್ಯನು.. ನಾನ್ ಜೈಲ್ಗೋದ್ರೂ ಪರ‍್ವಾಗಿಲ್ಲ ನಿನ್ ಸಾಯಿಸ್ದೆ ಬುಡಕುಲ ನೋಡ್ಕ್ಯ’ ಅಂದೋಳೇ ಮುಷ್ಟಿ ಕಟ್ಟಿ ಪಿಳ್ಳೆ ಮಕ್ ಮಕುಕ್ಕೇ ಗುದ್ದಾಕ್ಬುಟ್ಲು. ಪಿಳ್ಳೆ ಕಂಯ್ ಕುಂಯ್ ಅನ್ನದಲೆ ಮೂಲೆಲ್ಲಿ ಬಿದ್ಕ್ಯಂದ. ಇಷ್ಟಾದ್ರೂನೂವೆ ಬಾಕ್ಲಮ್ಮನ ಸಿಟ್ಟು ಇಳೀದಲೆ ಬಾಯಿಗೆ ಬಂದಂಗೆ ಬಯ್ತಾ ಇದ್ರೆ ಪಿಳ್ಳೆ ಬಿದ್ದ್ ಜಾಗ್ದಲ್ಲೇ ಬಿದ್ಕಂದು ಅಲ್ಲೇ ನಿದ್ದೆ ಮಾಡ್ತಿದ್ದ. ಗಂಡಯೆಡ್ತಿಯ ಈ ವೊಡ್ದಾಟ್ದಲ್ಲಿ ಪಿಳ್ಳೆಯ ಕಾಲಿನ ಇಸಬಿನ ಗಾಯ ಕಿತ್ಗಂದು ಕ್ಯಟ್ರಕ್ತ ಇಳಿಯಕ್ಕೆ ಸುರುವಾಗಿತ್ತು.
ಬಾಕಲಮ್ಮ ಇದ್ದೋಳು ನಾಗಿಯ ಕಡಿಗೆ ನೋಡ್ತ ‘ಈಗೇಮ್ಮಾಡ್ಲಿ? ನಿಮ್ಮಪ್ಪಿದ್ದಿದ್ದು ದಿನ್ನ ಇಂಗೆ ಅವ್ರಿವ್ರತ್ರ ದುಡ್ಡಿಸ್ಕಂದು ಕುಡ್ದು ಉಚ್ಚೆ ಊದ್ಬುಡ್ತೀತೆ. ನಾವು ಎಷ್ಟಂತ ಸಾಯಾನಾ? ನನ್ನ ಬಾ ಅಂದಿದ್ರೂ ಊಂ ವೋಗ್ಲಿ ಬುಡತ್ಲಗೆ ನನ್ನಣೆಬರ ಅಂದ್ಕಂದು ವೋಗಿ ಬತ್ತಿದ್ದೆ. ಇದಿದ್ದಿದ್ದು ನಿನ್ನ ಕಳುಸ್ಕೊಡ್ತೀನಿ ಅಂತ ಹೇಳ್ಕ್ಯಂದ್ ಬಂದ್ಬುಟ್ಟೀತೆ… ನಿಮ್ಮಪ್ಪನ್ ಕೈಯಲ್ಲಿ ನಯಾ ಪೈಸ ದುಡ್ಯಕ್ಕಾಗಕುಲ್ಲ, ಸಾಯತಂಕ ಕುಡ್ಯದು ಮಾತ್ರ ಬುಡದಿಲ್ಲ.. ಕಾಲ್ ನೋಯ್ತೀತೆ ನಿದ್ದೆ ಬರಕುಲ ಅಂದ್ಕ್ಯಂತ ದಿನಾ ಇಂಗೇಯಾ ಬ್ಯಾಡದ್ ಉಸಾಪರಿ ಗಂಟಾಕ್ಯಂದ್ ಮನಿಗ್ ಬತ್ತೀತೆ..’ ಅಂದ್ಲು. ಆವಾಗ ಮದ್ಲೇ ಯಾದೋ ಬೇಜಾರು ತಲೆಗಾಕ್ಯಂದು ಮಕ ಚಿಕ್ಕುದು ಮಾಡ್ಕ್ಯಂದು ಕುಂತಿದ್ದ ನಾಗಿ, ‘ಊಂ.. ನಾನೂ ಯೇಳಿ ಯೇಳಿ ಸಾಕಾಗಿದಿನಿ. ಕುಡೀಬೇಡ ಅಂತ. ಕೇಳಕುಲ್ಲ. ಇಸಬು… ನೋವಾತೀತೆ. ಕುಡೀದಿದ್ರೆ ರಾತ್ರಿ ಇಡೀ ನಿದ್ದೆ ಬರಕುಲ ಅಂತೀತೆ ಅಪ್ಪ’ ಅಂದ್ಲು. ‘ಊಂ ನಿದ್ದೆ ಬರಕುಲ ಅಂತ ದುಡ್ಡಿಸ್ಕಂದು ಈಗ ಅಗ್ಲೊತ್ತಿಗೇ ಕುಡ್ದು ಮನ್ಕ್ಯಂದ್ರೆ ಎಂಗಾತೀತೆ? ರಾತ್ರಿ ನಿದ್ದೆ ಬತ್ತೀತಾ? ಕುಡ್ಯಕ್ಕಾಗಿ ವೋಗೀ ವೋಗೀ ಆ ಗೌಡ್ನತ್ರ ದುಡ್ ಕೇಳೀತೆ. ಅವ್ನು ನಿನ್ ಬರಕ್ಕೇಳ್ ಕಳಸವ್ನೆ. ಈಗೇನ್ಮಾಡಾನ..?’ ಅಂತವ ತಾಯಿ ಬಾಕ್ಲಮ್ಮ ಕಣ್ಣೀರಾಕದ್ನ ನೋಡಕ್ಕಾಗ್ದಲೆ ನಾಗಿ ಇದ್ದೋಳು ‘ನಾ ವೋಗ್ದಿದ್ರೆ ಏನಾತೀತೆ?’ ಅಂತ ಕೇಳಿದ್ಲು. ಆವಾಗ ಬಾಕ್ಲಮ್ಮ ಇದ್ದೋಳು, ‘ಅದು ಅಂದಷ್ಟು ಸಲೀಸಲ್ಲ ಕನವಾ.. ಎಲ್ಡ್ ವರ್ಸುದ್ ಇಂದೆ ರತ್ನಿಗೆ ಉಳ ಮುಟ್ಟಿ ಸಾಯ್ತಿದ್ದಾಗ ದೊಡ್ಡಾಸ್ಪತ್ರಿಗೆ ತಗಂದೋಗಕ್ಕೆ ತಗಂದಿದ್ ಸಾಲ ತೀರುಸ್ನಿಲ್ಲ ಅಂತ ಗುತ್ಯಮ್ಮುನ್ನೂ ಇಂಗೇ ಕಳ್ಸು ಅಂದಿದ್ದ ಅವ್ನು. ಈರ ಇದ್ದನು ನಾನ್ ಸತ್ರೂ ಪರವಾಗಿಲ್ಲ ಮಗಿನ್ ಕಳ್ಸಕುಲ. ಅದೇನ್ ಮಾಡ್ತೀಯೋ ಮಾಡ್ಕ್ಯ ಅಂತ ಕುಂತುಬುಟ್ಟಿದ್ದ. ಆವಾಗ ಗೌಡಿದ್ದೋನು ಸಂಗುಕ್ ಸೇರ್ಕ್ಯಂದು ಕಳ್ಸಕುಲ ಅಂದ್ರೆ ಅದ್ರು ಅದ್ಯಕ್ಸ ನಿಮ್ ವಟ್ಟೆ ತುಂಬಕುಲ್ಲ. ಕೆರೆ ಅತ್ರ ಮುನಿಸ್ಗ್ಯಂದ್ರೆ ನಾರದು ನಿಮ್ ತಿಕನೇಯ. ನೀನು ಇನ್ ಮ್ಯಾಕಿಂದ ಕ್ಯಲ್ಸುಕ್ಕೇ ಬರದ್ಬ್ಯಾಡ ಅಂದುಬುಟ್ಟ. ಕ್ರಿಸ್ಸೆನ್ಸ್ ಕೇರಿಯಾಗೂ ನಮಿಗೀಗ ಕ್ಯಲ್ಸುಕ್ ಇರ ಜನನೇ ಜಾಸ್ತಿ ಆಗಿದರೆ ನೀವ್ಯಾರೂ ಬರದ್ ಬ್ಯಾಡ ಅಂತನ್ನೋವೊತ್ಗೆ ಈರ ಇದ್ದನು ಉಪ್ವಾಸ ವನ್ವಾಸ ಮಾಡಿ ಊರ್ ಬುಟ್ಟೋಗಿ, ಬಿಕ್ಸ ಬೇಡಿದ್ರೂನೂ ನಯಾ ಪೈಸ ಸಿಗದಂಗಾಗಿ ಕ್ವನೀಗೆ ಇದೇ ಗೌಡನ್ ಕಾಲಿಡ್ಕನ ಪರಿಸ್ತಿತಿ ಬಂದಿತ್ತು. ನಾವೇನೇ ಅಂದ್ರೂ ವಟ್ಟೆ ನಮ್ ಮಾತ್ ಕೇಳ್ತೀತಾ? ನಾಳಿಕೆ ಏನೇ ಕಸ್ಟ ಬಂದ್ರೂ ಒಂದ್ರುಪಾಯ್ ಕೊಡರು ಯಾರಿದರೆ?’ ಅಂತ ಬಾಕ್ಲಮ್ಮ ಏಳಿದ್ಕೆ ನಾಗಿ ‘ಸರಿ ಓಯ್ತೀನಿ ಬುಡು ಇನ್ನೇನ್ ಮಾಡಾಕ್ಕಾತೀತೆ’ ಅಂದುಬುಟ್ಲು.
ಬಾಕಲಮ್ಮ ಇದ್ದೋಳು ‘ಇನ್ನೇಮ್ಮಾಡಾಕ್ಕಾತೀತೆ.. ನಂಗೇನ್ ಶೇಕ್ದಾರುನ್ ಆಪೀಸ್ನಾಗೆ ಪೀವನ್ ಕೆಲಸ ಐತಾ ಬೇಕಂದಂಗೆ ಸಂಬ್ಳ ಎಣಿಸ್ಕ್ಯಂದು ತಗಂದೋಗಿ ನಿಮ್ಮಪ್ಪ ಮಾಡಿರ ಸಾಲ ತರ‍್ಸಕ್ಕೆ? ನೀನಾದ್ರೂ ಇನ್ನೇನ್ಮಾಡ್ತೀಯ? ವೋಗತ್ಲಾಗೆ. ವಳ್ಳೇದು ಕ್ಯಟ್ಟುದ್ದೆಲ್ಲ ಆ ಜೇನಕಲ್ಲಮ್ಮನೇ ನೋಡ್ಕ್ಯಳ್ಳಿ’ ಅಂದ್ಲು. ಸಲ್ಪ ವೊತ್ತು ಪಿಳ್ಳೆಯ ತೊಡೆಗಂಟ ಅಬ್ಕ್ಯಂದಿದ್ದ ಇಸುಬಿಂದ ಇಳೀತಿದ್ದ ಕೆಟ್ರಕ್ತಕ್ಕೆ ಮುತ್ಕತಿದ್ ನೊಣಗಳನ್ನೇ ನೋಡ್ಕ್ಯಂತ ಕುಂತಿದ್ದ ನಾಗಿ ಕಲ್ ತಗಂದ್ ವಡ್ದಂಗೆ ‘ಅವ್ವಾ.. ಅಲ್ಲೋಗಿ ನಾ ಏಮ್ಮಾಡ್ಲಿ?’ ಅಂತವ ಕೇಳ್ಬುಟ್ಲು. ಮಗಿನ್ ಮಾತು ಬಾಕಲಮ್ಮನ ಕಳ್ಳಿಗೇ ಕತ್ತಿಹಾಕಿ ಕುಯ್ದಂಗಾಗಿ ಮಾಡಿನ ಕಡೆ ನೋಡ್ತ ದೊಡ್ಡ ಉಸುರು ಬುಟ್ಟು ‘ಇನ್ನೇಮ್ಮಾಡದು? ಅವ್ರೇಳ್ದಂಗೆ ಕೇಳದು ಅಷ್ಟೇಯ!’ ಅಂದುಬುಟ್ಟಳು.
ಮಟಮಟ ಮದ್ಯಾನ, ತಮ್ಮ ಮಂಜನೂ ಸಾಲೆ ಬುಟ್ಕಂದು ಗೌಡ್ರು ದನ ಕಾಯಕ್ಕೆ ವೋಗಿದ್ರಿಂದ ನಾಗಿ ವಬ್ಳೇಯ ವೊಂಟು ಕೇರಿಯ ಕ್ವನೆಯ ಸಿಲ್ವರ್ ಪ್ಯಾಕ್ಟರಿ ದಾಟಿ ಬೀದಿಯ ಕ್ವನೇಲಿದ್ದ ಮಲ್ಲಿಕಣ್ಣನ ನಾಯಬೆಲೆ ಅಂಗಡಿ ಅತ್ರ ಬರಷ್ಟೊತ್ತಿಗೆ ಅಂಗಡಿ ಬಾಗಲಲ್ಲಿ ಗಟ್ಟಿಯಾಗಿ ಮಾತಾಡ್ಕ್ಯಂತ ಕುಂತಿದ್ದ ಗೌಸು ಸಾಬರ ಮಗ ಸಾದಿಕ, ಯಂಕ್ಟಮ್ಮನ ಮಗ ಕುಮಾರ, ಟೀಕಪ್ಪನ ಮಗ ಲಿಂಗ, ಪುಟ್ಟಣ್ಣನ ಮಗ ರಾಗು ಇವಳ್ಯಾಕಿಂಗೆ ಇಷ್ಟೊತ್ನಲ್ಲಿ ಗೌಡರ ಪಂಪ್ಸೆಟ್ ಮನೆಕಡೆ ವೋಯ್ತ ಇದಳೆ ಅನ್ನಂಗೆ ಮಕ ಮಾಡ್ಕ್ಯಂದು ದುರ್ಗುಟ್ಟಿ ನೋಡಕ್ಕೆ ಸುರುಮಾಡಿದ್ರು. ನಾಗಿಯ ಯದೆ ಡಬಡಬ ವಡ್ಕಂತ ಇದ್ರೂ ತಡ್ಕಂದು ಆಕಡಿಕೆ ಮಕ ತಿರುಗಿಸ್ಕ್ಯಂದು ವೋದ್ಲು.
ದಾರಿ ಉದ್ದುಕ್ಕೂ ಗಂಗಾದರಣ್ಣನ ಬಟ್ಟೆ ಅಂಗಡೀಲಿ ಎಡ್ಡಣ್ಣ ಮಾಡಿದ್ ಮೋಸನೇ ಗ್ಯಾಪ್ಕ ಆಗಿ.. ಅದೂ ಎಂಗೆ ಅಂದ್ರೆ.. ವರ‍್ಸ ಪೂರ‍್ತಿ ದುಡ್ ವಟ್ಮಾಡಿ ತಗನಕ್ ವೋಗಿದ್ದು ಬರೇ ಒಂದು ಜಾಕೀಟ್ ಬಟ್ಟೆ…, ವಯರ್ ಬುಟ್ಟಿ ಈಚಿಗ್ ಇಟ್ಕಂದು ಅತ್ಲಾಗೆ ಬಟ್ಟೆ ನೋಡ್ತಿದ್ದಂಗೆ ಈ ಎಡ್ಡಣ್ಣ ಹಿಂದಗಡೀಕೇ ನಿಂತ್ಕಂದಿದ್ದ. ಜಾಕಿಟ್ ಬಟ್ಟೆ ಅರ‍್ಸಿ ದುಡ್ ಕೊಟ್ಟು ನಡ್ಕ್ಯಂದು ಕೆರೆ ಏರಿ ಮ್ಯಾಲೆ ಬತ್ತಾ ಇದ್ರೆ ಇಂದಗಡೀಕೆ ಬಂದ ಎಡ್ಡಣ್ಣ ‘ಏನೇ.. ಬಾಕ್ಲಿ ಮಗಳಲ್ವೇನೇ ನೀನು? ದ್ವಡ್ಡಳಾಗ್ಬುಟ್ಟಿದೀಯಾ?’ ಅಂತ ಕೇಳೋವೊತ್ಗೆ ನಾಗಿ ‘ಓ ಎಡ್ಡಣ್ಣ ಯಾವಾಗ್ ಬಂದ್ರಿ? ಚೆನಗಿದಿರಾ? ಮೈಸೂರಗೆ ಎಮ್ಮೆ ಕಟ್ಟಿದೀರಿ ಅಂದಿದ್ರು ಬಾಯಮ್ಮ. ಪಾಸಾತಾ?’ ಅಂತ ಕೇಳಿದ್ಲು. ಅವ್ನಿದ್ದೋನು ‘ಊಂ ಎಮ್ಮೆ ಕಟ್ಟಿದ್ದೆ’ ಅಂದೋನೇ.. ‘ಬಟ್ಟೆ ಅಂಗ್ಡೀಲಿ ಏನೇನ್ ತಗಂದೆ ತೋರ‍್ಸು’ ಅಂತ ವಯರ್ ಬುಟ್ಟಿಗೆ ಕೈಯಾಕಿ ‘ಏನೇ ಸೀರೆ ಕದ್ಕಂದ್ ಬಂದ್ಬುಟ್ಟಿದೀಯ?’ ಅಂದುಬುಟ್ಟಿದ್ದ! ನಾಗಿಗೆ ಯದೆ ಡಬ್ಬಂತ ವಡ್ದ್ ವೋಯ್ತದೇನೋ ಅನ್ನಂಗಾಗಿ, ಇದೆಲ್ಲಿಂದ ಬಂತು? ಅಂತ ಗಾಬ್ರಿ ಮಾಡ್ಕ್ಯಂದಿದ್ರೆ ಎಡ್ಡಣ್ಣ ಸಿಟ್ಟು ಮುಖ ಮಾಡ್ಕ್ಯಂದು, ‘ಕದಿಯ ಬುದ್ದಿ ಯಾಕೆ ನಿಮ್ಗೆಲ್ಲ? ನೀನು ಕದ್ದಿರದು ನಾನ್ ನೋಡೋವೊತ್ಗೆ ಸರ‍್ವೋಯ್ತು. ಬ್ಯಾರೆ ಯಾರಾನಾ ಆಗಿದ್ದಿದ್ರೆ ಯಳ್ಕಂದೋಗಿ ಪೋಲೀಸಿಗೆ ಇಡ್ಕೊಡ್ತಿದ್ರು.. ಈಗ ಆಗಿದ್ದು ಆಯ್ತು. ಸಾಂಯ್ಕಾಲ ಕುನ್ನಿವೊಳೆ ಅತ್ರ ನಮ್ ಗದ್ದೆಲ್ಲಿರೋ ಅಕ್ಕೆಮನೆಗೆ ಬಾ. ನೀನ್ ಬಂದ್ರೆ ಸೀರೆ ಕದ್ ಇಷ್ಯ ನಾನ್ ಯಾರಿಗೂ ಏಳಕುಲ್ಲ. ಇಲ್ಲಾಂದ್ರೆ…..! ಮತ್ತೆ ಅಕ್ಕೆಮನೆಗೆ ಬರ‍್ಬೇಕಾರೆ ಸಾನಾ ಮಾಡ್ಕ್ಯಂದು ಸಲ್ಪ ನೀಟಾಗಿ ಬಾ. ಹಿಂಗೇ ಸಗ್ಣಿವಾಸ್ನೆ ವೊಡೀತ ಬಂದ್ಬಿಟ್ಟೀಯ ಮತ್ತೆ!’ ಅಂತ ಜೋರ‍್ಮಾಡಿದ್ದ. ‘ಅಕ್ಕೆಮನೆಗ್ ಬಂದೇನ್ಮಾಡ್ಲಿ?’ ಅಂತ ಕೇಳೋವೊತ್ಗೆ.. ‘ಮದ್ಲು ಬಾ ಆಮ್ಯಾಕೆ ಗೊತ್ತಾತೀತೆ’ ಅಂತಂದು ರಪರಪ ನಡ್ಕ್ಯಂದು ವೋಗಿಬುಟ್ಟಿದ್ದ.
ಅಲಾ.. ಒಂದ್ ಜಾಕೀಟ್ ಬಟ್ಟೆ ಅರ‍್ಸಕ್ಕೆ ವರ್ಸ ಪೂರ‍್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ‍್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ! ಇಂಗೇ ಯೋಚ್ನೆ ಮಾಡ್ತ ಗೌಡನ ತ್ವಾಟದ ಉಣುಗೋಲು ದಾಟೋ ವೊತ್ತಿಗೆ ರುದ್ರೇಗೌಡ ಮಾವಿನಮರದ ಬುಡದಾಗೆ ಕುಂತ್ಗಂದು ಕಬ್ ತಿಂತಾ ಇದ್ದ.
ನಾಗಿ ಅತ್ಲಾಗೆ ವೋದ್ಮ್ಯಾಕೆ ಬಾಕ್ಲಮ್ಮ ಬಟ್ರುಮನೆ ಅಂಗ್ಳ ಸರ‍್ಸಿ ಕೆರೆ ತಾವ್ ವೋಗಿ ಬಟ್ಟೆ ಸೆಣ್ಕಂದು ಅಲ್ಲೇ ವೊಷ್ಟು ಸಾನಾ ಮಾಡ್ಕ್ಯಂದು ಮನೆಗ್ ಬಂದು ಬೋರ‍್ವೆಲ್ಲಿಂದ ನೀರ್ ವಡ್ಕಂದ್ ಬಂದು ಬಾನಿ ತುಂಬಿ ಬಟ್ರುಮನೆ ನೀರ್‌ಮಜ್ಗೆ ಆಕ್ಯಂದು ಒಂದು ಮುಷ್ಟಿ ಉಂಡು ಇಸ್ಟೊತ್ತಾದ್ರೂ ನಾಗಿ ಮನೆ ಸೇರಿಲ್ವಲ್ಲಾ ಅಂದ್ಕಂದು ಅಟ್ಟಿಬಾಕ್ಲಾಗೇ ಕಾಯ್ತಾ ನಿಂತಿದ್ಲು. ಆವಾಗ ಮೈದ್ನ ಆಲನ್ ಏಡ್ತಿ ಬೈರಿ ಕಡ್ಡಿಪುಡಿ ಹಾಕ್ಯಂದು ಜಗ್ಲಿ ಮ್ಯಾಲೆ ಕುಂತಿದ್ಲು. ಬೈರಿ ವಳ್ಳೆವ್ಳೇಯ ಅಂಗಂತ ನಾಗಿ ಎಲ್ಲೋಗಿದಳೆ ಇನ್ನೂ ಯಾಕ್ ಮನೆ ಸೇರಿಲ್ಲ ಅನ್ನದ್ನ ಯೋಳ್ಕಳಂಗಾರೂ ಐತಾ? ನಾಗಿ ಇಂಗಿಂಗೆ ವೋಗವ್ಳೆ ಅನ್ನದು ಇವ್ಳಿಗೇನಾರಾ ಗೊತ್ತಾಗಿಬುಟ್ರೆ ಯಮ್ಮೆ ಸಗ್ಣಿ ಕಲ್ಡಿ ಕಣ ಸರ‍್ಸಿದಂಗೆ ಊರ್ ತುಂಬ ಏಳ್ಕ್ಯಂದ್ ಬತ್ತಳೆ. ಆಮೇಕಿಂದ ಊರ್ ನಾಯ್ಗೊಳೆಲ್ಲ ನಾಗಿ ಮ್ಯಾಲ್ ಬೀಳಕ್ ಸುರು ಮಾಡ್ಕ್ಯತ್ತವೆ. ಅದೂ ಅಲ್ದೆ ಎತ್ತ ತಾಯಾಗಿ ಮಗ್ಳುನ್ನೇ ಕಳ್ಸಿದಿಯಲ್ಲ ಅಂತ ಕೇರಿ ಜನ ಮಕ್ಕುಗ್ಯಕುಲ್ವ?’ ಅಂದ್ಕಂದು ಬೈರಿ ಎದ್ದೋಗೋ ತಂಕ ಬಾಕ್ಲಮ್ಮ ಬಾಕ್ಲಾಗೆ ಅಂಗೇ ನಿಂತಿದ್ಲು. ಯಾವಾಗ ಬೈರಿ ಎದ್ದೋದ್ಲೋ ಬಾಕ್ಲಮ್ಮ ಸೀದಾ ಗೌಡನ ಪಂಪ್ಸೆಟ್ ಮನೆ ಅತ್ರ ವೋದ್ಲು.
ಸಲ್ಪ ವೊತ್ತು ಪಿಳ್ಳೆಯ ತೊಡೆಗಂಟ ಅಬ್ಕ್ಯಂದಿದ್ದ ಇಸುಬಿಂದ ಇಳೀತಿದ್ದ ಕೆಟ್ರಕ್ತಕ್ಕೆ ಮುತ್ಕತಿದ್ ನೊಣಗಳನ್ನೇ ನೋಡ್ಕ್ಯಂತ ಕುಂತಿದ್ದ ನಾಗಿ ಕಲ್ ತಗಂದ್ ವಡ್ದಂಗೆ ‘ಅವ್ವಾ.. ಅಲ್ಲೋಗಿ ನಾ ಏಮ್ಮಾಡ್ಲಿ?’ ಅಂತವ ಕೇಳ್ಬುಟ್ಲು. ಮಗಿನ್ ಮಾತು ಬಾಕಲಮ್ಮನ ಕಳ್ಳಿಗೇ ಕತ್ತಿಹಾಕಿ ಕುಯ್ದಂಗಾಗಿ ಮಾಡಿನ ಕಡೆ ನೋಡ್ತ ದೊಡ್ಡ ಉಸುರು ಬುಟ್ಟು ‘ಇನ್ನೇಮ್ಮಾಡದು? ಅವ್ರೇಳ್ದಂಗೆ ಕೇಳದು ಅಷ್ಟೇಯ!’ ಅಂದುಬುಟ್ಟಳು.
ಅಲ್ಲಿ ಯಲ್ಲೆಲ್ಲ ಉಡ್ಕಿದ್ರೂನೂವೆ ನಾಗಿನೂ ಇಲ್ಲ ಗೌಡನೂ ಇಲ್ಲದಂಗಾಗಿ ಉಣುಗೋಲು ದಾಟಿ ನಾಗೀ ನಾಗೀ ಅಂತ ಕರೀತಾ ನಡ್ಕ್ಯಂದ್ ಬತ್ತಿದ್ರೆ ನಾಗಿ ಪತ್ತೇನೇ ಇಲ್ಲ. ಹಂಗೇ ಆಚೀಗೀಚಿಗ್ ಕಾಡೆಲ್ಲ ಹುಡುಕ್ಯಾಡಿ ವಾಪಸ್ ಬರ ದಾರೀಲಿ ಕಾಳಕ್ಕನ ಗುಡುಸ್ಲು ಪಕ್ಕ ನಾಗಿ ಬಟ್ಟೆ ಕಂಡಂಗಾಗಿ ಅತ್ರ ವೋದ್ರೆ ‘ಅವ್ವಾ ಅವ್ವಾ’ ಅಂತ ನರಳ್ತಾ ಬಿದ್ದವಳೆ ನಾಗಿ! ನಾಗಿ ಬಿದ್ದ ಜಾಗದ್ ತುಂಬ ರಕ್ತ ರಂಪಾಟ ಆಗಿ ಬಾಕ್ಲಮ್ಮನ್ ಯದೆ ಗುಂಡ್ಗೆನೇ ಪುಗ್ಗ ವಡದಂಗೆ ಡಬ್ಬಂತ ವಡದೋದಂಗಾಗಿ ‘ನಾಗೀ ನಾಗೀ ಏನಾತೇ? ಇಲ್ಯಾಕ್ ಬಂದ್ ಬಿದ್ಕಂದಿದಿಯಾ?’ ಅಂದ್ಕ್ಯಂತ ನಾಗಿನ ಎತ್ತಿ ತೊಡೆಮ್ಯಾಲೆ ಮನ್ಗುಸ್ಕ್ಯಂದು ಕೇಳೋವೊತ್ಗೆ ‘ಅವ್ವಾ.. ಆ ಗೌಡ ಏನೋ ಕ್ಯಲ್ಸ ಯೇಳ್ತನೆ ಅಂತ ವೋದ್ರೆ.. ನನ್ ಮೈಮ್ಯಾಲೆ ರಾಕ್ಸಸನಂಗೆ ಬಿದ್ದು ಮುರ್ದ್ ಮುದ್ದೆ ಮಾಡಾಕಿ, ನನ್ನ ಅಲ್ಲೇ ಬುಟ್ಬುಟ್ಟು ಅಂಗೇ ಗದ್ದೆ ದಾರಿ ಇಡ್ಕಂದು ಮನಿಗೆ ವೋಗ್ಬುಟ್ಟ. ನನಿಗೆ ಎದ್ ನಿತ್ಕಣಕ್ಕೂ ಸಕ್ತಿ ಇರ‍್ನಿಲ್ಲ. ಅಂಗಾದ್ರೂ ಕಸ್ಟ ಪಟ್ಟು ಬಟ್ಟೆ ಆಕ್ಯಂದು ನಡೀಲರ‍್ದಂಗೆ ನಡ್ಕ್ಯಂತ ಬಂದ್ ಉಣುಗೋಲ್ ದಾಟಿದ್ದಷ್ಟೇ.. ಸಾದಿಕನೂ ಕುಮಾರನೂ, ರಾಗುನೂ ಲಿಂಗಾನೂ ‘ಏನೇ ನಾಗೀ ನಿಂಗೆ ಗೌಡ ಮಾತ್ರ ಬೇಕಾ? ನಾವು ಬೇಡ್ವಾ? ಅಂದೋರೇ ನನ್ ಬಾಯ್ ಮುಚ್ಚಿ ಇಡ್ಕಂದು ಕಾಳಕ್ಕನ ಗುಡುಸ್ಲು ತಂಕ ವತ್ಕ ಬಂದೂ.. ಕೊಡಬಾರದಂಗೆ ಇಂಸೆ ಕೊಟ್ಬುಟ್ರು ಕನವಾ’ ಅಂತ ಗಟ್ಟಿಯಾಗಿ ವಯ್ಕಂದು ಅತ್ಬುಟ್ಲು.
ಬಾಕ್ಲಮ್ಮ ಎಂಗೆಂಗೋ ನಾಗಿನ ಸುದಾರ‍್ಸಿ ಎತ್ತಿ ಇಡ್ಕಂದು ನಿದಾನುಕ್ಕೆ ನಡಡ್ಕ್ಯಂದು ಮನಿಗ್ ಬಂದ್ರೂ ಪಿಳ್ಳೆ ಗೊರ್ ಗೊರ್ ಸೌಂಡ್ ಮಾಡ್ತ ಇನ್ನೂ ನಿದ್ದೆ ಮಾಡ್ತನೇ ಇದ್ದ. ನೋಡ್ದಾ? ಅಗ್ಲಿಡೀ ನಿದ್ದೆ ಮಾಡಿ ರಾತ್ರೆ ಗಲಾಟೆ ಸುರು ಮಾಡ್ಕತ್ತೀತೆ ನಿಮ್ಮಪ್ಪ. ಇದ್ ಬದ್ಕಿರ ಗಂಟ ನಾವಿಂಗೇ ಸಾಯ್ಬೇಕು.. ನಾಯ್ ನನ್‌ಮಕ್ಳು ನನ್ ಮಗೀನ ಅರ‍್ದು ತಿಂದ್ಹಾಕಿಬುಟ್ಟವೆ ಅನ್ನದಾದ್ರೂ ತಿಳ್ಕಣ್ದಲೆ ದಾತಿಲ್ದಂತೆ ಬಿದ್ಕಂದೀತೆ..’ ಎಂದು ಅಳ್ತಲೇ ಬಾಕ್ಲಮ್ಮ ನಾಗಿಯ ಮೈ ರಕ್ತನೆಲ್ಲಾ ಹಸೀ ಬಟ್ಟೆ ಮಾಡ್ಕ್ಯಂದು ವರ‍್ಸಿ ಚೆರಿಗೆ ನೀರ್ ಕಾಸಿ ಸಾನಾ ಮಾಡ್ಸಿ ಯದೆ, ಮಕ ಎಲ್ಲಾ ಆಗಿರ ಗಾಯಕ್ಕೆ ಅರುಸ್ಣ ಅಚ್ಚಿ ‘ನಿದ್ದೆ ಮಾಡವ್ವಾ ಯೆಲ್ಲಾ ಸರ‍್ವೋಯ್ತದೆ’ ಅಂತವ ಕೌದಿ ವೊಚ್ಚಿ ಮನುಗ್ಸಿ ಎದ್ದೇಳ್ತೀನಿ ಅಂತ ವೋದ್ರೆ ನಾಗಿ ಇದ್ದೋಳು ತಾಯಿ ಕೈನ ಗಟ್ಟಿಯಾಗಿ ಇಡ್ಕಂದು ‘ಅವ್ವಾ..!’ ಅಂದ್ಲು. ‘ಏನವಾ?’ ಅಂತ ಬಾಕ್ಲಮ್ಮ ಕೇಳತಂಕ ನಾಗಿ, ತಾಯಿ ಕೈಯಾಗೆ ಮಕ ಇಟ್ಕಂದು ಗೊಳೋ ಅಂತ ಅಳಕ್ಕೆ ಸುರು ಮಾಡ್ಕ್ಯಂದ್ಲು. ‘ಅದ್ಯಾಕವಾ ಅಂಗಳ್ತೀ? ಜಾಸ್ತಿ ನೋಯ್ತೀತಾ?’ ಅಂತ ಕೇಳೋತ್ಗೆ.. ‘ಅವ್ವಾ ನಾನೀಗ ಏನ್ಮಾಡ್ಲಿ? ಆ ಎಡ್ಡಣ್ಣ ಇಂಗಿಂಗೆ ಮಾಡ್ಬುಟ್ಟವ್ನೆ. ಅವ್ನ್ ಅಕ್ಕೆಮನಿಗ್ ವೋಗ್ದೆ ಇದ್ರೆ ಸುಮ್ಮುನ್ ಬುಡ್ತಾನಾ ಅವ್ನು? ಅವ್ವಾ ನಾನೀಗ ಏನ್ ಮಾಡ್ಲಿ ಯೇಳು..?’ ಅಂತ ನಡ್ದಿದ್ ಸ್ಟೋರಿನೆಲ್ಲಾ ಯೇಳ್ಕನವೊತ್ಗೆ ಬಾಕ್ಲಮ್ಮ ಇದ್ದೋಳು ಏನ್ ಯೋಳಕ್ಕೂ ತಿಳೀದಲೆ ಸಲ್ಪ ವೊತ್ತು ಬಾಯಿ ಕಳ್ಕಂದು ಅಂಗೇ ಕುಂತಿದ್ದು ಏನೋ ನಿರ‍್ದಾರ ಮಾಡ್ಕ್ಯಂದಂಗೆ, ‘ನೀನೀಗ ಸುಮ್ಮುನ್ ಮನಿಕ್ಯ. ಅದೇನಾಯ್ತೀತೋ ಆಗ್ಲಿ. ನಾನೇ ಓಗ್ ಬತ್ತೀನಿ. ಆ ಸೀರೆ ಎಲ್ಲೈತೆ ತತ್ತಾ. ತಗೊಂದೋಗಿ ಎಡ್ಡಣ್ಣನ ಕೈಯಿಗ್ ಕೊಟ್ಟು ಇದನ್ನ ಎಂಗಾನಾ ಆ ಬಟ್ಟೆ ಅಂಗ್ಡಿಗೆ ವಾಪಸ್ ಕೊಟ್ಟುಬಿಡಣ್ಣ.. ಯಾದೋ ಕೆಟ್ಟ್ ಗಾಳಿ ಬಡ್ಕಂದೀತೆ ಅಂತ ಕಾಣ್ತೀತೆ.. ನಾಗಿ ಮೈತುಂಬ ಜರ ಸುಡ್ತಿದಾವೆ. ಅಂಗಾಗಿ ನಾನೇ ಬಂದಿದಿನಿ ಅಂತ ಯೋಳ್ಬುಟ್ಟು ಅವ್ನ್ ಕೈಕಾಲಾದ್ರೂ ಇಡ್ದು ಏನಾರಾ ಸರ‍್ಮಾಡಾಕಾಯ್ತದಾ ನೋಡ್ತೀನಿ’ ಅಂದವಳೇ ವಯರ್ ಬುಟ್ಟೀಲಿದ್ದ ಸೀರೆನ ಸೆರಗಲ್ಲಿ ಮುಚ್ಚಿಟ್‌ಕ್ಯಂದು ಕತ್ತಲಲ್ಲೇ ಬಿರಿಬಿರಿ ನಡಕೊಂತ ಕೇರಿ ದಾಟಿ, ಟಾರ್ ರಸ್ತೆ ಇಡದು ಒಂದು ರ‍್ಲಾಂಗ್ ದೂರ ವೋಗಿ ಬಲಕ್ಕೆ ತಿರುಗಿ ರೈಲ್ ಅಳಿ ದಾಟಿ ಕುನ್ನಿವೊಳೆ ತಂಕ ನಡದು ಗೇರುಬೀಸಿನ ಏರಿ ಅತ್ತಿ ಎಡ್ಡಣ್ಣನ ಅಕ್ಕೆಮನೆಗೆ ವೋದ್ಲು. ಎಡ್ಡಣ್ಣನ ಮನೆ ಪ್ಯಾಟೆಲ್ಲೇ ಇರದಾದ್ರೂ ಗೇರುಬೀಸಲ್ಲಿರಾ ಅವರ ಗದ್ದೆಗೆ ನಾಗಿ ಬಂದೇಬತ್ತಳೆ ಅಂತ ಅವುನಲ್ಲಿ ಕಾಯ್ತ ಕುಂತ್ಕಂದಿದ್ದ!
*****
ಇದಾಗಿ ಎಸ್ಟು ವರ್ಸ ಆಗಿರ‍್ಬೌದು…??
ನಾಗಿ ಮದುವೆ ಆಗಿ, ಚಿಕ್ಕ ಮಗ ಚಂದ್ರ ದುಡಿಮೆ ಮಾಡೋ ಗಣ್ಸಾಗಿದನೆ. ಆ ದಿನ ಗೌಡ ಮಾಡಿದ್ನೂ, ನಾಯಬೆಲೆ ಅಂಗ್ಡಿ ಎದ್ರಿನ ಉಡುಗ್ರು ಮಾಡಿದ್ನೂ, ಎಡ್ಡಣ್ಣನ ಅತ್ರ ವೋದ ತನ್ನ ತಾಯಿ ಬಾಕ್ಲಮ್ಮ ಸುಸ್ತಾಗಿ ಮಾರ‍್ನೆದಿನ ಮನೆ ಸೇರಿದ್ನೂ, ಎಡ್ಡಣ್ಣನ ತಾಯಿ ಅದೇ ಸೀರೆ ಉಡ್ಕ್ಯಂದು ಊರುತುಂಬ ತಿರುಗ್ತಿದ್ದಿದ್ನೂ ಕಣ್ಣಿಂದ ಕೀಳಕ್ಕಾಯ್ತಿಲ್ಲ, ಗ್ಯಾಪ್ಕ ಮರೆಯಕ್ಕಾಯ್ತಿಲ್ಲ….
‘ಇನ್ನೆಷ್ಟು ಕಾಲ ಇಂಗೇ ಮೋಸ ಮಾಡಕ್ಕಾತೀತೆ? ಒಂದಿನ ಶಿಕ್ಷೆ ಆಗೇ ಆತೀತೆ. ತಲೆ ಮ್ಯಾಕೆ ಊದ್ ನೀರು ಕಾಲಿಗ್ ಬರ‍್ಲೇಬೇಕು. ನಮ್ಮಂತರಿಗೆಲ್ಲ ಅನ್ಯಾಯ ಮಾಡಿ ನೀವ್ ಅದೆಂಗೆ ಉದ್ದಾರ ಆಯ್ತೀರಾ? ನೋಡ್ದಾ? ನಾನು ಸವುಸ್ಕಂದು ಸುಮ್ನಿರಬೌದು. ಎಲ್ಲರೂ ನನ್ನಂಗೇ ಇರಕುಲ. ಇವತ್ತು ಜೈಲಿಗೆ ನೀನೋಗಿದೀಯ! ನಾಳೆ ನಿನ್ನಂಗೇ ಅವ್ರೂ ವಬ್ಬೊಬ್ರೇ ವೋಗೇ ವೋಯ್ತರೆ. ನಾವ್ ಬೆಟ್ಟದಷ್ಟ್ ಅನ್ಬವ್ಸಿದ್ರೂ ಅವ್ರ್ ಉಗ್ರಿನಷ್ಟಾದ್ರೂ ಅನ್ಬವ್ಸೇ ಅನ್ಬವ್ಸ್ತಾರೆ. ತಡ ಆಗ್ಬೋದಷ್ಟೇಯ..! ನಿನ್ ಮಕ ನಾಯ್ ತಿನ್ನ. ಥೂ!’ ಎಂದು ಪಟದಲ್ಲಿನ ಎಡ್ಡಿಯ ಮಕುಕ್ಕೆ ಉಗುದವಳೇ ಕಯ್ಯಾಗಿನ ಪೇಪರನ್ನು ಮುದುರಿ ಮುದ್ದೆ ಮಾಡಿ ಮೂಲೆಗೆಸ್ತು ಒಳೀಕೆ ಎದ್ದೋದ್ಲು.
‘ಇನ್ನೆಷ್ಟು ಕಾಲ ಇಂಗೇ ಮೋಸ ಮಾಡಕ್ಕಾತೀತೆ? ಒಂದಿನ ಶಿಕ್ಷೆ ಆಗೇ ಆತೀತೆ. ತಲೆ ಮ್ಯಾಕೆ ಊದ್ ನೀರು ಕಾಲಿಗ್ ಬರ‍್ಲೇಬೇಕು. ನಮ್ಮಂತರಿಗೆಲ್ಲ ಅನ್ಯಾಯ ಮಾಡಿ ನೀವ್ ಅದೆಂಗೆ ಉದ್ದಾರ ಆಯ್ತೀರಾ? ನೋಡ್ದಾ? ನಾನು ಸವುಸ್ಕಂದು ಸುಮ್ನಿರಬೌದು. ಎಲ್ಲರೂ ನನ್ನಂಗೇ ಇರಕುಲ. ಇವತ್ತು ಜೈಲಿಗೆ ನೀನೋಗಿದೀಯ! ನಾಳೆ ನಿನ್ನಂಗೇ ಅವ್ರೂ ವಬ್ಬೊಬ್ರೇ ವೋಗೇ ವೋಯ್ತರೆ. ನಾವ್ ಬೆಟ್ಟದಷ್ಟ್ ಅನ್ಬವ್ಸಿದ್ರೂ ಅವ್ರ್ ಉಗ್ರಿನಷ್ಟಾದ್ರೂ ಅನ್ಬವ್ಸೇ ಅನ್ಬವ್ಸ್ತಾರೆ. ತಡ ಆಗ್ಬೋದಷ್ಟೇಯ..! ನಿನ್ ಮಕ ನಾಯ್ ತಿನ್ನ. ಥೂ!’ ಎಂದು ಪಟದಲ್ಲಿನ ಎಡ್ಡಿಯ ಮಕುಕ್ಕೆ ಉಗುದವಳೇ ಕಯ್ಯಾಗಿನ ಪೇಪರನ್ನು ಮುದುರಿ ಮುದ್ದೆ ಮಾಡಿ ಮೂಲೆಗೆಸ್ತು ಒಳೀಕೆ ಎದ್ದೋದ್ಲು.
ಕಾದಂಬಿನಿ
ನಾನು ಬರೆದ ಕಥೆಯನ್ನೇ ನಾನು ಇಷ್ಟಪಟ್ಟಿದ್ದೇನೆಂದು ಹೇಳಿಕೊಳ್ಳಲು ಒಂದು ರೀತಿ ಮುಜುಗರ ಅಡ್ಡಬರುತ್ತದೆ. ಆದರೂ ನಾವೇ ಬರೆದುದರಲ್ಲಿ ನಮಗೇ ಇಷ್ಟವಾಗುವ, ಇಷ್ಟವಾಗದ ಬರಹ, ಕಥೆ, ಕಾವ್ಯ ಇದ್ದೇ ಇರುತ್ತದೆ ಎನ್ನುವುದೂ ಸುಳ್ಳಲ್ಲ. ಇತರರ ಎದುರು ಮುಚ್ಚುಮರೆಯಿಲ್ಲದೆ ನಮ್ಮದೇ ಸೃಜನಶೀಲ ಕೆಲಸಗಳ ಕುರಿತು ಮಾತಾಡುವುದು ಖಂಡಿತ ಸಾಧ್ಯವಿದೆ. ಅದು ಸಾಧ್ಯವಾಗುವುದು ಆತ್ಮರತಿಯ ಎಲ್ಲೆಗಳನ್ನು ಉಲ್ಲಂಘಿಸದೆ ಇರುವ ಹಂತದವರೆಗೂ ಮಾತ್ರ. ನಾನು ಈತನಕ ಬರೆದ ಕಥೆಗಳಲ್ಲಿ ಈ ಕಥೆ ನನಗೆ ಹೆಚ್ಚು ತೃಪ್ತಿ ಕೊಟ್ಟ ಕಥೆ ‘ತಲೆ ಮ್ಯಾಕ್ ವೂದ ನೀರು’ ಎಂಬುದು.
ನಮ್ಮ ಪುಟ್ಟ ಊರಿನಲ್ಲಿ ನಮ್ಮ ಮನೆಯ ಸಮೀಪವೇ ತಳ ಸಮುದಾಯದವರ ಒಂದು ಕೇರಿಯಿತ್ತು. ಆ ಕೇರಿಯ ಜನಗಳನ್ನು ಊರಿನ ಯಾರೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಇವರ ಬದುಕು ಬವಣೆಗಳನ್ನು ಹತ್ತಿರದಿಂದ ಕಂಡವಳು ನಾನು. ನಮ್ಮದು ದಟ್ಟ ಮಲೆನಾಡಾದರೂ ಮಲೆನಾಡಿನ ಭಾಷೆ ಮಾತಾಡದೆ ಹಾಸನದ ಕಡೆಯ ಗ್ರಾಮೀಣ ಭಾಷೆಯಂತಹದ್ದನ್ನು ಅವರು ಮಾತಾಡುತ್ತಿದ್ದರು. ನಡುವೆ ಒಂದುಚೂರು ಮಲೆನಾಡಿನ ಭಾಷೆಯೂ ಬೆರೆತಿರುತ್ತಿತ್ತು. ಯಾವುದೋ ಕಾಲದಲ್ಲಿ ಅತ್ತ ಬದಿಯಿಂದಲೇ ಅವರು ವಲಸೆ ಬಂದಿದ್ದರೋ ಏನೋ.
ನಾನು ಕಾಲೇಜಿಗೆ ಹೋಗಿಬರುತ್ತಾ ಒಂದು ಸಮಾಜ ಸೇವಾ ಸಂಸ್ಥೆಯಲ್ಲಿ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದೆ. ಆಗಂತೂ ಈ ಕೇರಿಯ ಜನರ ಮನೆಗಳಿಗೆ ಹೋಗುವುದು ಬರುವುದು ಅವರ ಜೊತೆ ಸ್ನೇಹ, ಸಲ್ಲಾಪ ಎಲ್ಲ ಆರಂಭವಾಗಿದ್ದವು. ಈ ಮೂಲಕ ಕೇರಿಯ ಜನಗಳ ಬದುಕಿನ ಘೋರ ಚಿತ್ರಣವನ್ನು ಕಾಣಲು ನನಗೆ ಸಾಧ್ಯವಾಗಿತ್ತು. ಮೇಲ್ವರ್ಗದವರ ಅನೇಕಾನೇಕ ದೌರ್ಜನ್ಯಕ್ಕೆ ತುತ್ತಾಗಿದ್ದ ಆ ಜನರ ಶ್ರಮ ಮಾತ್ರ ಮೇಲ್ವರ್ಗದವರಿಗೆ ಬಳಕೆಯಾಗುತ್ತಿರಲಿಲ್ಲ. ಅವರ ಹೆಣ್ಣು ದೇಹಗಳು ಮೇಲ್ವರ್ಗದ ಗಂಡುಗಳ ಆಡುಂಬೊಲವಾಗಿದ್ದು ಜೀವದ ಕಿಮ್ಮತ್ತಿಲ್ಲದಂತೆ ಅವು ಬಳಕೆಯಾಗುತ್ತಿದ್ದವು. ಅದಕ್ಕಾಗಿ ಅವರು ಹೆಣೆಯುವ ಮೋಸದ ಉರುಲುಗಳು ನಾನಾ ಬಗೆಯವು. ಪ್ರತಿನಿತ್ಯ ಅಂಥ ನೂರಾರು ಘಟನೆಗಳು ನನ್ನ ಕಣ್ಣಿಗೆ ಬೀಳುತ್ತಿದ್ದವು. ಆಗಷ್ಟೇ ಬಿರಿಯುವ ಕೇರಿಯ ಅಂಗಳದ ಮುಗುಳನ್ನು ಕುಟಿಲ ಬಲೆ ಹರವಿ ಹರಿದು ಮುಕ್ಕಿದ ದಾರುಣ ಚಿತ್ರಣವನ್ನು ಅವರದೇ ಭಾಷೆಯಲ್ಲಿ ಈ ಕಥೆಯ ಮೂಲಕ ಕಟ್ಟಿಕೊಡುವ ಯತ್ನವೊಂದು ನನ್ನಿಂದ ಸಾಧ್ಯವಾಗಿದೆ ಎಂದು ಭಾವಿಸುತ್ತೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ