ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ” ನಿಮ್ಮ ಓದಿಗೆ
ಆ ಜನ ಆ ಮಳೆಯ ದಿನದಲ್ಲಿ ಅಲ್ಲಿಗೆ ಅದು ಹೇಗೆ ಬಂದು ಕುಂತರೊ, ಯಾರಿಗೂ ಗೊತ್ತಾಗಲಿಲ್ಲ. ಯಾವಾಗಲಿಂದ ಹಾಗೆ ಕಾಯುತ್ತಿದ್ದರೊ ಏನೋ, ಇರುವೆಗಳಂತೆ ಸಾಲು ಸಾಲಾಗಿ ಬಂದು ಸೇರಿಕೊಂಡಿದ್ದರು. ಎಸ್.ಸಿ. ಮೋರ‍್ಸನ ಆಚೆ ಬೆಳಗಾವಿಯಿಂದ ಬಾಗಲಕೋಟೆಗೆ ಹೋಗುವ ರಸ್ತೆಯ ಎಡಬದಿಗಿದ್ದ ಫುಟ್‌ಪಾತಿನ ಮೇಲೆ ತೋಯ್ಸಿಕೊಂಡ ಗುಬ್ಬಚ್ಚಿಗಳಾಗಿ ಕುಂತಿದ್ದ ಅವರ ಪರಿ ಉದ್ದೋಉದ್ದು ರೇಖೆಯನ್ನು ನಿರ್ಮಿಸಿತ್ತು. ಮಾರುತಿನಗರದ ಅಂಚಿನ ಚಹಾದಂಗಡಿಯಿಂದ ಹಿಡಿದು ಅತ್ತ ಭವಾನಿ ಬಾಡಿ ಬಿಲ್ಡರ್ಸ್‌ನ ಗ್ಯಾರೇಜಿನವರೆಗೂ ಅವರೇ ವ್ಯಾಪಿಸಿಕೊಂಡುಬಿಟ್ಟಿದ್ದರು. ಅದೆಷ್ಟೋ ಹೊತ್ತಿನಿಂದ ಕುಂತಿದ್ದ ಅವರಲ್ಲಿ ಶತಮಾನಗಳ ನಿರೀಕ್ಷೆಯೊಂದು ಮಾತುಕತೆಗಳ ಗದ್ದಲದಲ್ಲೂ ಧ್ಯಾನವಾಗಿ ಆವರಿಸಿಕೊಂಡಿತ್ತು. ಬಾಗಲಕೋಟೆಯತ್ತ ಹೋಗುವ ಯಾವುದೇ ವಾಹನ ಬಂದರೂ ಸಾಕು, ಧ್ಯಾನ ಭಂಗಗೊಂಡವರಾಗಿ ಎದ್ದು ವಾಹನದತ್ತ ಹೋಗಿ ಏನೂ ಜಮಾಯಿಸದೆ ಮತ್ತೆ ಬಂದು ಕುಂತುಬಿಡುತ್ತಿದ್ದರು. ಅವರು ಹಾಗೆ ಎದ್ದು ಕುಂತಾಗೊಮ್ಮೆ ಸಮುದ್ರದ ಅಲೆಯೊಂದು ಎದ್ದು ಸರಿದಂತಾಗುತ್ತಿತ್ತು. ನಗೆ ಮಾತುಕತೆಗಳ ಗೌಜಿನೊಂದಿಗೆ ಏಳುವುದೂ ಕೂರುವುದೂ ನಡೆಸಿದ್ದ ಅವರನ್ನು ಅಲ್ಲಿನ ಜನ ವಿಚಿತ್ರವಾಗಿ ನೋಡಹತ್ತಿದರು. ಅತ್ತ ಕುಡುಚಿ, ಸಾಂಬ್ರಾ, ನೇಸರಗಿಯ ಕಡೆಗೆ ವಾಹನಗಳಲ್ಲಿ ಹೋಗುವವರೂ ಆ ಕಡೆಯಿಂದ ಬೆಳಗಾವಿಗೆ ಬರುವವರೂ ಅವರನ್ನು ಕಂಡು ಒಂದು ಕ್ಷಣ ನಕ್ಕೊ, ಅಚ್ಚರಿಯಿಂದ ಕಣ್ಣು ಮಿಟುಕಿಸಿಯೋ ಮುಂದೆ ಸಾಗುತ್ತಿದ್ದರು. ಆ ಪರಿಸರದಲ್ಲಿ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗಿಬಿಟ್ಟಿತ್ತು.
ಎಣಿಸಿದರೆ ಸುಮಾರು ನೂರು ನೂರಾಹತ್ತು ಜನ ಆಗಬಹುದು. ಮಕ್ಕಳು ಮರಿಗಳೂ, ಹದಿಹರೆಯದ ಹುಡುಗ ಹುಡುಗಿಯರೂ, ಪುರುಷರೂ ಮಹಿಳೆಯರೂ, ವೃದ್ಧ ವೃದ್ಧೆಯರಾದಿಯಾಗಿ ಎಲ್ಲ ವಯೋಮಾನದವರೂ ಇದ್ದರು. ಹಳೆಯ ಹರಕಲು ಅರಿವೆಗಳನ್ನೆ ನೀಟಾಗಿ ತಿದ್ದಿ ತೊಟ್ಟುಕೊಂಡು ನಿದ್ದೆಗಣ್ಣಿಂದ ಎದ್ದು ಬಂದವರಂತೆ ಕಾಣುತ್ತಿದ್ದರು. ಎಲ್ಲೊ ಕೆಲವರಷ್ಟೆ ಸ್ವಲ್ಪ ಹಸನಾದ ಹೊಸದಾಗಿ ಕಾಣುವ ಬಟ್ಟೆ ತೊಟ್ಟಿದರು. ಎಲ್ಲರ ತಲೆಗೂದಲೂ ಮುದ್ದಾಂ ಕೆದರಿಕೊಂಡಂತ್ತಿದ್ದವು. ಮೂತಿಗಳು ಎಣ್ಣೆ ಬಳಿದುಕೊಂಡಂತೆ ಮಿರಿ ಮಿರಿ ಮಿಂಚು ಸೂಸಿದ್ದವು. ಬಟ್ಟೆಯ ಗಂಟುಗಳು, ಬುಟ್ಟಿಗಳು, ಹಳೆಯ ಬಣ್ಣ ಮಾಸಿದ ಹೋಲ್ಡಾಲುಗಳು, ಚೀಲಗಳು, ತುಕ್ಕು ಹಿಡಿದು ಮತ್ತೆ ಬಣ್ಣ ಬಳಿಸಿಕೊಂಡ ಟ್ರಂಕುಗಳು, ಕೆಲವರ ಕಂಕುಳುಗಳಲ್ಲಿಯ ಮಕ್ಕಳು ಅವರ ಸಕಲೈಶೈರ್ಯದಂತೆ ವಿಜೃಂಭಿಸುತ್ತಿದ್ದವು.
ಅಸಲಿಗೆ ಅವರು ಯಾರು, ಯಾವ ಮಂದಿ, ಎಲ್ಲಿಂದ ಬಂದರು, ಎಲ್ಲಿಗೆ ಹೊರಟರು ಎಂಬಿತ್ಯಾದಿ ವಿವರಗಳು ಮೊದಮೊದಲು ಅಲ್ಲಿನ ಯಾರಿಗೂ ದಕ್ಕಲಿಲ್ಲ. ಫುಟ್‌ಪಾತಿನ ಒಳಮಗ್ಗುಲಿನ ಧೋಂಡಿಬಾನ ಪಾನ್ ಶಾಪ್ ಮತ್ತು ರಾಜಸ್ಥಾನಿ ಭೈಯ್ಯಾನ ಅಂಬಾ ಸ್ವೀಟ್ಸ್ ದುಕಾನಿನ ಬಳಿಯಲ್ಲಿ ನಿಂತಿದ್ದ ಸ್ಥಳೀಕರಲ್ಲಿ ಯಾರೋ, “ಲಂಬಾಣಿ ಮಂದಿ ಇರಬಹುದು. ಬಾಗಲಕೋಟಿ ಕಡೆ ತಾಂಡಾಗೋಳು ಭಾಳಲ್ಲ. ಜಾತ್ರಿಗಿ ಹೊಂಟಾರೇನೊ” ಎಂದರು. ಆದರೆ ಲಂಬಾಣಿಯವರಂಥ ಯಾವುದೇ ಲಕ್ಷಣಗಳು ಅವರಲಿಲ್ಲರಲ್ಲ. ಅವರು ಕನ್ನಡ, ಮರಾಠಿ, ಹಿಂದಿ ಭಾಷೆಗಳನ್ನು ತಮ್ಮದೇ ಎಳೆದುಚ್ಚರಿಸುವ ಶೈಲಿಯಲ್ಲಿ ಆಡುತ್ತಿದ್ದರು.
ಸಮಯ ಸರಿದಂತೆ ಆ ಮಂದಿ ಧೋಂಡಿಬಾ ಮತ್ತು ರಾಜಸ್ಥಾನಿ ಭೈಯ್ಯಾನ ಅಂಗಡಿಗಳಲ್ಲಿ ವ್ಯಾಪಾರ ಸುರುಮಾಡಿಕೊಂಡ ಕ್ಷಣದಿಂದ ಒಂದಿಷ್ಟು ಮಾಹಿತಿಗಳು ಲಭ್ಯವಾಗತೊಡಗಿದವು. ಅವರೆಲ್ಲ ದುಡಿಯುವವರಾಗಿದ್ದರು. ನಗರದ ಚೈತನ್ಯಮಾಳ, ಉದ್ಯಮಭಾಗ, ರೈಲ್ವೆ ಗೂಡ್‌ಶೆಡ್ ಪ್ರದೇಶಗಳಲ್ಲಿನ ಗುಡಿಸಲುಗಳಿಂದಲೋ, ತಗಡಿನ ಗೂಡುಗಳಿಂದಲೋ ಬಂದಿದ್ದರು. ಅವರಲ್ಲಿ ಬಹುತೇಕರು ರಸ್ತೆ ಕೆಲಸ, ಹಮಾಲಕಿ, ಫ್ಯಾಕ್ಟರಿಗಳಲ್ಲಿ ದಿನಗೂಲಿ ಕೆಲಸಮಾಡುತ್ತಾ ಬದುಕಿನ ನಿಧಾನ ಕಂಡುಕೊಂಡವರಿದ್ದರು. ಯಾವುದೋ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದರು. ಮಾರನೆಯ ದಿನ ಬಾಗಲಕೋಟೆಯಲ್ಲಿ ಅವರ ಸಮಾಜದವರೆಲ್ಲರೂ ಸೇರುವ ಕಾರ್ಯಕ್ರಮವಿತ್ತು. ಯಾರೋ ಮಂತ್ರಿಯೊಬ್ಬರು ಸಾಮೂಹಿಕ ವಿವಾಹ ನಡೆಸಿಕೊಡುತ್ತಿದ್ದರಂತೆ. ಇವರಲ್ಲೂ ಒಂದೆರಡು ಜೋಡಿ ವಧು-ವರರಿದ್ದು ಅಲ್ಲಿಗೆ ಹೋಗುವ ತುರ್ತು ಒದಗಿ ಬಂದಿದ್ದರಿಂದ ಮಕ್ಕಳು-ಮರಿ ಸಂಸಾರಾದಿಯಾಗಿ ಹೀಗೆ ಹೊರಟೆದ್ದು ನಿಂತಿದ್ದರು.
ಅವರು ಆವರಿಸಿದ್ದ ಜಾಗೆ ನಗರದ ಕೊನೆಯಲ್ಲಿತ್ತು. ಇದಿರಿನಿಂದ ಬಂದರೆ ನಗರಕ್ಕೆ ತೆರೆದುಕೊಳ್ಳುವ ದಾರಿ. ಅಲ್ಲೆ ಸ್ವಲ್ಪ ದೂರದಲ್ಲಿ ಎರಡೂ ಕಡೆಗೆ ಹೋಗುವ ಸಿಟಿ ಬಸ್ಸುಗಳು ನಿಲುಗಡೆಯಾಗಿ ಮುಂದೆ ಸಾಗುತ್ತವೆ. ಎಡ ಮಗ್ಗಲಲ್ಲಿ ಪಂಕ್ಚರ್ ಅಂಗಡಿಗಳೂ, ಸಣ್ಣ ಪುಟ್ಟ ಚಹಾದಂಗಡಿಗಳು, ಪಾನ್‌ಶಾಪ್‌ಗಳೂ ಇವೆ. ಮುಂದೆ ಬಲಕ್ಕೆ ಪೆಟ್ರೋಲ್ ಪಂಪು ಸಹ ತಲೆಯತ್ತಿ ನಿಂತಿದೆ. ಯರಗಟ್ಟಿ, ಲೋಕಾಪೂರ, ಬಾಗಲಕೋಟೆಗಳತ್ತ ಹೋಗುವ ಟ್ರಕ್ಕುಗಳು ಅಲ್ಲಿ ನಿಂತು ಪಂಕ್ಚರ್ ತಗೆಯಿಸಿಕೊಂಡೊ, ಹವಾ ಚಕ್ ಮಾಡಿಕೊಂಡೊ ಇಲ್ಲ ಡೀಜೆ಼ಲ್ ತುಂಬಿಸಿಕೊಂಡೊ ಮುಂದೆ ಚಲಿಸುತ್ತವೆ. ಹಾಗೆಯೆ ಯಾರಾದರೂ ಪ್ಯಾಸೆಂಜರ್ ಇದ್ದರೆ ಡ್ರೈವರುಗಳು ತಮ್ಮ ಖರ್ಚಿಗೆ ಅನುವಾಗಲು ಅವರನ್ನು ಕೂರಿಸಿಕೊಂಡು ಹೋಗುವುದಿದೆ.
ಆ ಮಂದಿಯೂ ಅಷ್ಟೆ, ಟ್ರಕ್ಕಿಗಾಗಿಯೇ ಕಾಯುತ್ತಿದ್ದರು. ಟ್ರಕ್ಕಿನಲ್ಲೆಂದರೆ ಬಸ್ಸಿಗಿಂತ ಕಡಿಮೆಯೆನಿಸುವ ಗಾಡಿ ಖರ್ಚು; ಸ್ವಲ್ಪ ಉಳಿತಾಯ! ಆದರೆ ಅವರ ಸಂಖ್ಯೆಯನ್ನು ಕಂಡು ಯಾವ ಟ್ರಕ್ಕಿನವರೂ ತರುಬುತ್ತಿರಲಿಲ್ಲ. ತರುಬಿದರೂ ಇವರ ಚೌಕಾಸಿ ವ್ಯವಹಾರ ಕುದುರದೆ ಸುಮಾರು ಮೂವತ್ತು-ನಲ್ವತ್ತು ಟ್ರಕ್ಕುಗಳ ಡ್ರೈವರುಗಳು ನಿಂತು ಇವರೊಂದಿಗೆ ಗುದ್ದಾಡಿ ಹಾದಿ ಹಿಡಿದಿದ್ದರು.
ಬಸ್ಸಿಗಾದಲ್ಲಿ ಬರೋಬ್ಬರಿ ನೂರು ರೂಪಾಯಿ. ಟ್ರಕ್ಕಿಗಾದರೆ ಅಜಮಾಸು ಎಂಭತ್ತು ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಇವರು ಸಂಖ್ಯೆಯಲ್ಲಿ ಹೆಚ್ಚಿರುವದರಿಂದ ಸೀಟಿಗೆ ನಲ್ವತ್ತು ಇಲ್ಲವೆ ಮುವ್ವತ್ತು ರೂಪಾಯಿ ಕಡಿಮೆ ಮಾಡಿ ಒಯ್ಯಬೇಕೆಂಬ ಕೋರಿಕೆಯಿಡುತ್ತಿದ್ದರು. ಎಷ್ಟೇ ಖಟಿಪಿಟಿ ಮಾಡಿದರೂ ಯಾರೂ ಒಪ್ಪದವರಾಗಿ ಅಂದಾಜು ನಾಲ್ಕು ತಾಸು ಅದಾಗಲೇ ಕಳೆದಿದ್ದಾಗಿತ್ತು. ಹತ್ತು ಗಂಟೆಗೆಲ್ಲ ಬಂದಿರಬಹುದು ಕಾಯುತ್ತ ಕಾಯುತ್ತ ಮಧ್ಯಾಹ್ನ ಒಂದು ಗಂಟೆ ಹೊಡೆದಿತ್ತು. ಅದೇ ಹೊತ್ತಿಗೆ ಎಸ್.ಸಿ. ಮೋರ್ಸ್‌ನ ಸೈರನ್ “ಸ್ಯೊಂಯ್” ಎಂದು ಕೂಗಿಕೊಂಡಿತು. ಅದರೊಟ್ಟಿಗೆ ಆ ಗುಂಪಿನಲ್ಲಿಯ ಮಕ್ಕಳೂ ದನಿಗೂಡಿಸಿ ಸಂಭ್ರಮಿಸಿದರು. ಮಕ್ಕಳ ಆಟ ಮಕ್ಕಳಿಗಾದರೆ ಉಳಿದವರ ಪಾಡು ಸಂಕಟಕ್ಕಿಳಿದಿತ್ತು. ಎದ್ದೂ, ಕುಂತೂ, ಓಡಾಡಿ, ಆಗಾಗ ಹನಿವ ಜಿಬರು ಜಿಬರು ಮಳೆಯಿಂದ ತೋಯ್ಸಿಕೊಂಡು ಥಂಡಿ ಮತ್ತು ಹಸಿವಿನಿಂದ ಕಂಗಾಲಾಗಿ ಫಜೀತಿಗೆ ಬಿದ್ದರು.
ನೆತ್ತಿಯ ಮೇಲೆ ಒಂದಿಷ್ಟೂ ಬಿಸಿಲಿನ ಸುಳಿವಿರಲಿಲ್ಲ. ಮೋಡಗಳ ಗೂಡಿಂದ ಸೂರ‍್ಯ ಒಂದೆರಡು ಕ್ಷಣ ಇಣುಕಿಣುಕಿ ಹೋಗುತ್ತಿದ್ದನಷ್ಟೆ. ಮೋಡಗಳಿಗೋ ಹರಿದುಕೊಂಡು ಬೀಳುವ ಧಾವಂತ. ಒಂದಕ್ಕೊಂದು ಬೆಸೆದುಕೊಂಡು ಸುರಳಿಸುರಳಿಯಾಗಿ ಸುತ್ತಿ ಇನ್ನೇನು ಹನಿಯುದುರಿಸಿ ತಣ್ಣಗಾಗುವ ಆಟ ಹೂಡಿದ್ದವು.
“ಬಂತ್ರ‍್ಯೋ…” ಎಂದು ಹುಡುಗನೊಬ್ಬ ಕೂಗಿದಾಗ ಎಲ್ಲರೂ ಗಡಬಡಿಸಿ ತಮ್ಮ ಸಾಮಾನು ಹಿಡಿದೆದ್ದು ಗಾಡಿಗಾಗಿ ಕಣ್ಣಾಡಿಸಿದರು. ಯಾವುದೇ ಗಾಡಿ ಕಾಣದಾದಾಗ ಹುಡುಗನನ್ನು ಗದರಿಸಿದರು. ಆತ ದೂರ ಮಳೆಯ ಸರವು ಗರಿ ಬಿಚ್ಚಿಕೊಂಡು ಬರುತ್ತಿದ್ದುದನ್ನು ತೋರಿಸಿದನು. ಸರುವು ಜೋರಾಗಿತ್ತು. ಹನಿಗಳು ‘ರಪ್‌ರಪ್’ ಎಂದು ಹೊಡೆಯಲನುವಾದಾಗ ಎಲ್ಲರೂ ಕಿತ್ತು ಎದ್ದೂ ಬಿದ್ದೂ ಸಿಕ್ಕ ಸಿಕ್ಕಲ್ಲಿ ಆಸರೆಗೆ ಓಡಿದರು. ಮುಸ್ತಫಾನ ಚಹಾದಂಗಡಿಯೊಳಕ್ಕೆ, ಧೋಂಡಿಬಾನ ಪಾನ್‌ಶಾಪಿನೆದರು, ಭೈಯ್ಯಾನ ಸ್ವೀಟ್ ದುಕಾನಿನ ಮತ್ತದರ ಅಕ್ಕ ಪಕ್ಕದ ಗೋಡೆಗಳಲ್ಲಿ ಜನ ತೂರಿಕೊಂಡರು.
ಮಳೆಯ ಮಧ್ಯೆಯೂ ಅವರೊಳಗಿನ ಒಬ್ಬ ಒಂದೆರಡು ಬಾರಿ ರಸ್ತೆಯಂಚಿಗೆ ಬಂದು ಟ್ರಕ್ಕಿನವರೊಡನೆ ಮಾತಾಡಿಕೊಂಡು ಹೋಗಿದ್ದ. ಆತ ಎತ್ತರಕ್ಕೂ ತೆಳ್ಳಗೂ ಇದ್ದು ತೂರಿಕೊಂಡೇ ನಡೆದಾಡುತ್ತಿದ್ದ. ಆತನನ್ನು ಎಲ್ಲರೂ ‘ಪಕ್ಕೂ…’ ಎಂದೇ ಕೂಗುತ್ತಿದ್ದರು. ಅವನ ಬಾಯಿ ವಾಸನೆ ಹೊಡೆಯುತ್ತಿತ್ತು. ವಾಸನೆಯ ತೀವ್ರತೆ ಎಷ್ಟಿತ್ತೆಂದರೆ ಆತನ ಪಕ್ಕಕೆ ಯಾರಾದರೂ ನಿಂತರೆ ಅಸಹ್ಯಪಟ್ಟುಕೊಳ್ಳುವಷ್ಟಿತ್ತು. ಆ ಮಂದಿಗೆ ‘ಪಕ್ಕೂ’ ಯಾಕೋ ಕಿರಿಕಿರಿಯಾದಂತನಿಸಿತು. ಗಾಡಿ ಸಿಗದ ತಮ್ಮ ಈ ಸಂಕಟಕ್ಕೆ ಕುಡಿದ ಆತನೆ ಕಾರಣ ಎನ್ನುವ ಅರಿವಿನ ಅಲೆ ಅವರೊಳಗೆ ಮೂಡಿ ಹೆಂಗಸೊಬ್ಬಳು, “ಪಕ್ಕೂ ನೀ ಯಾನ ಗಾಡಿಯವರ ಕಡೆ ಹೋಗಬ್ಯಾಡ. ಸುಮ್ಮ ಯಾಕ್ ತ್ರಾಸ್ ತಗೋಂತಿ? ಬ್ಯಾರೆ ಯಾರರ ಹೋಗ್ಲಿ” ಎಂದಳು. “ಹೋಯಿಂದು” ಎಂದು ಮತ್ತೊಂದಿಬ್ಬರು ದನಿಗೂಡಿಸಿದ್ದರು. ಪಕ್ಕೂನ ತಲೆಯೊಳಗೆ ಹುಳ ಹೊಕ್ಕಂತಾಗಿ ಒಮ್ಮೆ ತನ್ನ ಹೆಂಡತಿಯ ಕಡೆ ನೋಡಿ ಮರುಕ್ಷಣ ತನಗುಪದೇಶಿಸಿದ ಹೆಂಗಸ್ಸಿನ ಕಡೆ ನೋಡಿ ರಸ್ತೆಯತ್ತ ಬಿರಬಿರನೆ ಹೆಜ್ಜೆ ಹಾಕುತ್ತ ಹೊರಟ. ತಾನು ಇವರಿಗೆ ತೊಡಕಿನ ಮನುಷ್ಯನಾಗಿ ಕಂಡಿದ್ದು ತನ್ನ ಬಗೆ ತನಗೇ ಹೆಮ್ಮೆಯೂ ತಾತ್ಸಾರವೂ ಹುಟ್ಟಿಕೊಂಡು ವಿಚಿತ್ರಭಾವದಲ್ಲಿ ಸಿಲುಕಿಬಿಟ್ಟಿದ್ದ. ಆತ ಹಾಗೆ ಹೊರಟ ಕ್ಷಣದಲ್ಲೇ ಅವನ ಹೆಂಡತಿಗೆ ಗೊತ್ತಾಯಿತು; ಆತ ಸರಾಯಿ ಅಂಗಡಿಯ ಬೇಟೆಗಿಳಿದನೆಂದು.
ಹೊತ್ತು ಕಳೆದಂತೆಲ್ಲ ತಮ್ಮ ಮುಂದಿನ ಪಯಣ ಕ್ಲಿಷ್ಟಗೊಳ್ಳುತ್ತಿರುವ ಕುರಿತು ಆತಂಕಗ್ರಸ್ಥರಾಗಿದ್ದ ಜನ ಮಳೆ ನಿಂತಾಗ ಕೊಂಚ ನಿರಾಳಗೊಂಡು ಆಸರೆಗಳಿಂದ ಹೊರಬಂದು ಕುಂತರು. ಬರೋಬ್ಬರಿ ಮಳೆ ನಿಲ್ಲುವದಕ್ಕೂ ಟ್ರಕ್ಕೊಂದು ಬಂದು ತರುಬುವುದಕ್ಕೂ ಸರಿ ಹೋಯಿತು. ಹುಡುಗನೊಬ್ಬ ಅಕ್ಷರಗಳನ್ನು ಜೋಡಿಸಿ ಟ್ರಕ್‌ನ ಬೋರ್ಡನ್ನು ‘ಶ್ರೀ ಗಜಾನನ’ ಎಂದು ಓದಿದ. ಈ ಸಲ ಹಿರಿಯನಂತಿದ್ದ ಗಡ್ಡದ ವ್ಯಕ್ತಿ ಡ್ರೈವರೊಂದಿಗೆ ಮಾತನಾಡಲು ಸಿದ್ಧಗೊಂಡ. ಅವನಿಗೆ ಒಂದಿಬ್ಬರು “ದಾಜಿ… ಏನರೆ ಮಾಡಿ ಹೊಂದಿಸಿಬಿಡೊ ಮಾರಾಯಾ” ಎಂದರು. ಇನ್ನುಳಿದವರು ಹೂಂಗುಟ್ಟಿದರು.
ದಾಜಿ ದಂಡಯಾತ್ರೆಗೆ ಹೊರಟ ಶೂರನ ಗಾಂಭೀರ್ಯದಲ್ಲಿ ಎದ್ದು ಗಾಡಿಯ ಕಡೆಗೆ ಹೋದ. ಮಾತುಕತೆಯಾಯಿತು. ಫಲಪ್ರದಗೊಂಡ ಕಾರಣಕ್ಕೆ ತನ್ನವರತ್ತ ತಿರುಗಿ ಒಂದು ದೀರ್ಘ ಮುಗುಳುನಗೆ ನಕ್ಕು, “ಗಾಡಿ ಹತ್ರ್ಯೋ…” ಎಂದು ಕೂಗಿದ. ಎಲ್ಲರೂ ಗಡ್ಡದ ದಾಜಿಯನ್ನು ಒಂದು ಕ್ಷಣ ಹರಿಕಾರನನ್ನು ಕಂಡಂತೆ ಭಾವಗೊಂಡು ‘ಹೋಯ್’ ಎಂದು ಗಾಡಿಯೇರತೊಡಗಿದರು.
“ಮದುಮಕ್ಕಳೆಲ್ಲ ಕ್ಯಾಬಿನ್‌ದಾಗ ಕುಂದರ‍್ಲಿ. ಅವರ ಜತಿ ಲಸಮವ್ವಾಯಿ, ಗಿರೆವ್ವಾಯಿ ಇರಲಿ ಉಳಿಕಿದಾವರೆಲ್ಲ ಹಿಂದ್ ಕುಂದರ್ಯಪ್ಪೊ” ಎಂದು ಯಾರೋ ಒಬ್ಬಾತ ಕೂಗಿದ. ಅವನ ಹೇಳಿಕೆಯಂತೆಯೇ ಮದುಮಕ್ಕಳು ಕ್ಯಾಬಿನ್ನಿನೊಳಕ್ಕೆ ಏರಿ ಕೂತರು. ಆ ಇಬ್ಬರೂ ಮುದುಕಿಯರೂ ಆಯಾಸಗೊಂಡು ಏರಿದ್ದರು. ಕ್ಯಾಬಿನ್ನಿನೊಳಕ್ಕೆ ಕೂರುವ ಗೌರವ ಸಿಕ್ಕಿ ಮದುಮಕ್ಕಳೂ ಮುದುಕಿಯರೂ ಪರಮಾನಂದಗೊಂಡರು. ಲಸಮವ್ವಾಯಿಯು ಮದುಮಗಳಾಗಿದ್ದ ಚೆನ್ನಿಯ ಕಿವಿಯಲ್ಲಿ ಏನೋ ಉಸುರಿದಳು. ಆ ಹುಡುಗಿ ಕಿಸ್ ಎಂದು ನಕ್ಕಳು. ಅದಕ್ಕೆ ಗಿರೆವ್ವಾಯಿ ಎಲ್ಲರನ್ನು ಒಮ್ಮೆ ಕಣ್ಣಗಲಿಸಿ ನೋಡಿದಳು. ಅದು ಮದುಮಕ್ಕಳಿಗೆ ತಮ್ಮ ಘನತೆ ಗೌರವವನ್ನು ಕಾಪಾಡಿಕೊಳ್ಳಬೇಕೆಂಬ ಸೂಚನೆಯಂತಿತ್ತು.
ಡ್ರೈವರ್ ಮತ್ತವನ ಕ್ಲೀನರ್ ಕೂಡಿ ಎರಡೆರಡು ಸಲ ಎಣಿಸಲು ಮಕ್ಕಳನ್ನುಳಿಸಿ ಬರೋಬ್ಬರಿ ನೂರಾಎಂಟು ಜನರಿದ್ದರು. ಲೆಕ್ಕ ಮುಗಿಸಿ ಡ್ರೈವರ್ ಸ್ಟೀಯರಿಂಗ್ ಹಿಡಿಯಲು ಗಾಡಿಯೇರುತ್ತಿರಬೇಕಾದರೆ ಸಿಂಗಳೀಕನಂತಿದ್ದ ಕ್ಲೀನರ್ “ಏ ನಿಲ್ಲೋ ಮಾರಾಯಾ… ಇನ್ನೂ ಒಬ್ಬಾಕಿ ಬಾಯಿ ಹತ್ತಿಲ್ಲ” ಅಂತಂದ.
ಹಿಂದೆ ಎಲ್ಲರೂ ಗದ್ದಲ ಸುರುಮಾಡಿದ್ದರು. “ ಏ… ಪಾರವ್ವಾ ಲಗೂನ ಹತ್ತಿ ಬಾ…” ಎಂದು ಕೆಳಗೆ ಉಳಿದಿದ್ದ ಪಕ್ಕೂನ ಹೆಂಡತಿಯನ್ನು ಕರೆದರು. ಸಿಂಬಳ ಸೋರಿಸುತ್ತಿದ್ದ ಮಗುವನ್ನೆತ್ತಿಕೊಂಡಿದ್ದ ಪಾರವ್ವ “ಅಯ್ಯ ಇಂವಾ ಒಬ್ಬಾಂವ್ ಎಲ್ಲಿ ಹ್ವಾದ್ನೊ ಏನೋ…. ಅಂವನ್ ಬಿಟ್ ನಾ ಹ್ಯಾಂಗ್ ಬರಲಿ” ಎಂದು ಹುಚ್ಚಿಯಂತೆ ಕೂಗಾಡಿದಳು. ಎಲ್ಲರೂ ಪಕ್ಕೂನನ್ನು ಶಪಿಸತೊಡಗಿದರು.
“ಎಣ್ಣಿ ಹೊಡ್ಯಾಕ್ ಹೋಗರ‍್ಬೇಕ್… ತಗೋ !” ಎಂದು ಯುವಕನೊಬ್ಬ ನಕ್ಕು ನುಡಿದ.
“ಆತೇಳು ನಾವ್ ಹ್ವಾದ್ಹಂಗ… ಇನ್ನು” ಎಂದು ಮತ್ತೊಬ್ಬ ಹೇಳಿದ.
ಒಳಗಿದ್ದ ಗಿರೆವ್ವಾಯಿ “ಆ ಭಾಡ್ಯಾನ ಬಿಟ್ ಹೋಗೋಣ ನಡೀರಿ” ಎಂದಳು. ಡ್ರೈವರ್ ಗಾಡಿ ಹತ್ತಿ ಸ್ಟಾರ್ಟರ್ ಆನ್ ಮಾಡುತ್ತಿದ್ದಂತೆಯೇ ದಾಜಿ ಕ್ಯಾಬಿನ್‌ನನ್ನು ಬಡಿದು “ಇನ್ನೊಂದೀಟ್ ತಡಿಯೋ ತಮ್ಮ್ಯಾ, ಆ ಹುಡುಗ ಬರ‍್ಲಿ” ಎಂದ. ಡ್ರೈವರ್ ಗೊಣಗುತ್ತ ಆನ್ ಮಾಡಿದ್ದ ಸ್ಟಾರ್ಟರನ್ನು ಆಫ್ ಮಾಡಿದ. ಪಾರವ್ವ ನಿಧಾನಕ್ಕೆ ಗಾಡಿ ಹತ್ತಿದ್ದಳಾದರೂ ಮನಸ್ಸೆಲ್ಲ ಪಕ್ಕೂನ ಬರುವನ್ನು ಜಪಿಸಿತ್ತು.
ಹತ್ತು… ಹದಿನೈದು ನಿಮಿಷ… ಅರ್ಧ ತಾಸು -ಒಂದು ತಾಸಾದರೂ ಪಕ್ಕೂನ ಸುಳಿವೇ ಇಲ್ಲ. ಈ ನಡುವೆ ಡ್ರೈವರ್‌ನ ಮೊಬೈಲಿಗೆ ಕರೆಯೊಂದು ಬಂದು ‘ಝಳಕ್ ದಿಖಲಾ ಜಾ…’ ಅನ್ನೂ ರಿಂಗ್‌ಟೋನ್ ರಿಂಗಣಿಸಿತು. ಬಹುಶಃ ಆ ಕಡೆಯಿಂದ ಗಾಡಿಮಾಲೀಕ ಮಾತನಾಡಿರಬಹುದು. ಮಾಲೀಕನೊಂದಿಗೆ ಮಾತನಾಡಿದ ಆತ ಫೋನ್‌ನನ್ನು ಕಿಸೆಗಿಳಿಸುತ್ತಾ “ಇಳೀರಿನ್ನ ನನಗೆ ಅರ್ಜಂಟ್ ಹೋಗೋದೈತಿ. ಮುಂದ್ ಕೆಲಸೈತಿ. ನಿಮ್ಮನಷ್ಯಾನ ಹಾದಿ ಕಾಕೋಂತ ಕುಂತ್ರ ಅಲ್ಲಿ ಮಾಲಕ್ ಹೋಯ್ಕೋಂತಾನ…” ಅಂದ. ಜನರೆಲ್ಲ ಸಿಡಿಲು ಬಿದ್ದಂತೆ ಬೆಚ್ಚಿದರು.
ದಾಜಿ “ಇನ್ನೊಂದ್ಹತ್ ನಿಮಿಷ ಇರ್ ಮಾರಾಯ” ಅಂದ.
“ಆಗೋದಿಲ್ ಕಾಕಾ… ಲಗೂನ ಇಳೀರಿ” ಎಂದು ಡ್ರೈವರ್ ಒತ್ತಾಯ ಮಾಡಿದ.
ಜನರಲ್ಲಿ ಕೆಲವರು ಪಕ್ಕೂನನ್ನು ಬಿಟ್ಟು ಹೋದರಾಯಿತೆಂದು ತೀರ್ಮಾನಿಸಿದರಾದರೂ ಮತ್ತೆ ಕೆಲವರು ಇಳಿದು ಇನ್ನೊಂದು ಗಾಡಿ ನೋಡೋಣ ಎಂದರು. ಕೊನೆಗೆ ಈ ಹಗ್ಗ ಜಗ್ಗಾಟಕ್ಕೆ ಮಂಗಳವೆಂಬಂತೆ ದಾಜಿ ಎಲ್ಲರಿಗೂ ಇಳಿಯಲು ಹೇಳಿದ. ಜನ ಪಕ್ಕೂನನ್ನು ತರಹೇವಾರಿ ಬೈಗಳುಗಳಿಂದ ಸನ್ಮಾನಿಸುತ್ತ ಕೆಳಗಿಳಿದರು. ಡ್ರೈವರ್‌ನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯಾದರೆ ಜನರಲ್ಲಿ ಸಿಕ್ಕ ಗಾಡಿಯಿಂದ ಗಮ್ಯ ತಲುಪಲಾರದೆ ಹೋದೆವಲ್ಲ ಎಂಬ ನೋವಿನಲೆ ಸುತ್ತಾಡಿಕೊಂಡಿತ್ತು.
ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು. ‘ಗಾಡಿ ಖರ್ಚಿನ್ಯಾಗ ಒಂದೀಸ್ ರೂಪಾಯಿ ಉಳಿಸೋದ ಬಿಟ್ಟು ಇಲ್ಲೇ ರೊಕ್ಕ ಕಳಕೊಳ್ಳಾಕ್ಹತ್ಯೂ’ ಎಂದು ಕೆಲವರು ಚಿಂತಿಸಿದರು.
ಉಂಡಾದ ಮೇಲೆ ಹೆಂಗಸರು ತಂತಮ್ಮ ಮನೆಗಳ ಕಷ್ಟ ಸುಖಗಳ ಹಾಡುಪಾಡುಗಳನು ಬಿಚ್ಚಿ ಮಾತಿಗಿಳಿದಿದ್ದರು. ಮುಸರೆಯ ಚೂರು ಪಾರುಗಳನ್ನು ಎಸೆದಿದ್ದರಿಂದ ಒಂದೆರಡು ನಾಯಿಗಳು ಅವರ ಸುತ್ತ ಬಾಲ ಅಲ್ಲಾಡಿಸುತ್ತ ತಿರುಗುತ್ತಿದ್ದವು. ಇಂಥ ಹೊತ್ತಲ್ಲಿ ಚೆನ್ನಿಗೂ ಮತ್ತು ಇನ್ನೊಬ್ಬ ಹುಡುಗಿಗೂ ಒಂದಕ್ಕೆ ಹೋಗಬೇಕಾಗಿ ಬಂದಿದ್ದರಿಂದ ಅವರು ಭವಾನಿ ಬಾಡಿ ಬಿಲ್ಡರ್ಸ್‌ನಾಚೆಗಿನ ಹಸಿರು ತುಂಬಿದ ಹೊಲಗಳಲ್ಲಿ ಫುಟ್‌ಪಾತಿನಿಂದಿಳಿದು ಹೋಗಿದ್ದರು. ಅವರು ಹಾಗೆ ಹೋಗುತ್ತಿದ್ದುದನ್ನು ಮುಸ್ತಫಾನ ಅಂಗಡಿಯಲ್ಲಿ ಕೂತಿದ್ದ ಇಬ್ಬರು ಹರೆಯದ ಹುಡುಗರು ಮುಸಿಮುಸಿಗುಡುತ್ತ ನೋಡುತ್ತಿದ್ದರು. ಇದನ್ನು ಗಮನಿಸಿದ ಗಿರೆವ್ವಾಯಿ ನಾಯಿಗಳನ್ನು ಹೊಡೆಯುತ್ತ,
“ಹಚ್ಚಾ… ಬಿಡಾಡಿಗೋಳ್ಯ್ರೋ” ಎಂದು ಮುಸ್ತಫಾನ ಅಂಗಡಿಯ ಕಡೆ ಮುಖ ಮಾಡಿದ್ದಳು. ಆ ಹುಡುಗರು ಗಕ್ಕನೆ ದಿಕ್ಕು ಬದಲಾಯಿಸಿ ಕೂತುಕೊಂಡರು.
ಹೊಟ್ಟೆ ತಣ್ಣಗಾಗಿ ಮಾತಿನಲೆಗಳಲಿ ತಮ್ಮನ್ನು ತೇಲಿಸಿಕೊಂಡು ಸಾಗುತ್ತ ಫುಟ್‌ಪಾತಿನ ಮೇಲೆ ಕಾಲುಗಳನ್ನು ಉದ್ದಕ್ಕೆ ಚಾಚಿಕೊಂಡು ಜನ ಬಾಗಲಕೋಟೆಗೆ ಹೋಗುವದನ್ನೆ ಮರೆತುಬಿಟ್ಟಿಂತಿತ್ತು. ನೆತ್ತಿಯ ಮೇಲೆ ಮತ್ತೆ ಮೋಡಗಳು ಹಣಕಿ ಹಾಕಿಕೊಳ್ಳುತ್ತಿದ್ದವು. ಮೇಲೆ ನೋಡಿದ ಎಣ್ಣೆ ಮುಖಗಳಲ್ಲಿ ‘ಸುರಿಯದಿರಲಿ’ ಎಂಬ ದಯಾರ್ದ್ರತೆ ತುಂಬಿತ್ತು.
“ಮಳಿ ಬರೋಹಂಗ್ ಕಾಣಾತೇತಿ… ಎಲ್ಲಾರೂ ಆಸರಿಗಿ ನಿಲ್ರಿ” ಎಂದು ದಾಜಿ ಕೂಗಿಕೊಳ್ಳುವಷ್ಟರಲ್ಲಿ ಮದುಮಗನೊಬ್ಬನ ಕಿಸೆಯಲ್ಲಿನ ಮೊಬೈಲ್ ರಿಂಗಣಿಸಿತು. ಆ ಯುವಕ ಕಣ್ಣರಳಿಸಿ “ಪಕ್ಕೂ ದಾದಾನ ಫೋನ್ ಬಂದೈತಿ” ಅಂದಾಗ ಎಲ್ಲರೂ ಒಲ್ಲದ ಮನಸ್ಸಿನಿಂದ ಯುವಕನತ್ತ ಸರಿದರು. ಆತ ಪಕ್ಕೂನೊಂದಿಗೆ ಮಾತನಾಡುತ್ತಾ “ಹ್ಞಾಂ… ಹ್ಞಾಂ….” ಎಂದು ಮುಖವಗಲಿಸಿದಾಗ ಎಲ್ಲರ ನೋಟಗಳೂ ಅವನತ್ತ ಮುತ್ತಿಕೊಂಡವು.
ಯುವಕ ಮೊಬೈಲಲ್ಲಿ ಮಾತನಾಡುವುದನ್ನು ಮುಗಿಸಿ ಇದ್ದಕ್ಕಿದ್ದಂತೆ ಸಂತಸ ಪಡುತ್ತ “ಪಕ್ಕೂ ದಾದಾ ಒಂದ್ ಮಿನಿ ಬಸ್ ಮಾಡ್ಕೊಂಡು… ಬರತಾನಂತ” ಎಂದ. ಜನರು ಒಳಗೊಳಗೆ ಹರ್ಷಗೊಂಡರು. ಪಾರವ್ವ ತನ್ನ ಗಂಡನ ಸಾಧನೆಯನ್ನು ಕೊಚ್ಚಿಕೊಳ್ಳಬೇಕೆಂದಳಾದರೂ ನಿಶೆದಾವರ ಮಾತು ಕಿಸೆದಾಗ ಎಂಬುದು ನೆನಪಾಗಿ ತುಟಿ ಕಚ್ಚಿಕೊಂಡಳು.
ನೆತ್ತಿಯ ಮೇಲೆ ಒಂದಿಷ್ಟೂ ಬಿಸಿಲಿನ ಸುಳಿವಿರಲಿಲ್ಲ. ಮೋಡಗಳ ಗೂಡಿಂದ ಸೂರ‍್ಯ ಒಂದೆರಡು ಕ್ಷಣ ಇಣುಕಿಣುಕಿ ಹೋಗುತ್ತಿದ್ದನಷ್ಟೆ. ಮೋಡಗಳಿಗೋ ಹರಿದುಕೊಂಡು ಬೀಳುವ ಧಾವಂತ. ಒಂದಕ್ಕೊಂದು ಬೆಸೆದುಕೊಂಡು ಸುರಳಿಸುರಳಿಯಾಗಿ ಸುತ್ತಿ ಇನ್ನೇನು ಹನಿಯುದುರಿಸಿ ತಣ್ಣಗಾಗುವ ಆಟ ಹೂಡಿದ್ದವು.
ಜನರೆಲ್ಲ ಪಕ್ಕೂ ತರುವ ಗಾಡಿಯ ರೂಪವನ್ನು ತರಹೇವಾರಿಯಾಗಿ ಮನದಲ್ಲಿ ನೆನಸಿಕೊಂಡು ರಸ್ತೆಯ ಕಡೆ ನೋಡುತ್ತ ಕನಸು ಕಾಣತೊಡಗಿರಬೇಕಾದರೆ ಮಳೆ ಜಡಿಯತೊಡಗಿತ್ತು. ಮತ್ತೆ ಸಿಕ್ಕ ಸಿಕ್ಕಲ್ಲಿ ಜನ ಆಸರೆಗೆ ನಿಂತರು.
ಬರೋಬ್ಬರಿ ಮಳೆ ಅರ್ಧ ತಾಸು ಜಡಿದು ನಿಂತಾದ ಮೇಲೆ ಪಕ್ಕೂ ಮ್ಯಾಕ್ಸಿಕ್ಯಾಬೊಂದನ್ನು ತಂದು ನಿಲ್ಲಿಸಿದ. ಸದ್ಯ ಕಾಯುವ ಫಜೀತಿ ತಪ್ಪಿತು ಎಂದುಕೊಂಡು ಜನ ಗಾಡಿಯೊಳಕ್ಕೆ ತೂರಿಕೊಳ್ಳಲು ಸುರುಮಾಡಿದರು. ಬುದುಬುದು ಎಂದು ಜಾಗ ಸಿಕ್ಕ ಸಿಕ್ಕಲ್ಲಿ ಒತ್ತೊತ್ತಾಗಿ ಸೇರಿಕೊಂಡಿರಲು ನೋಡನೋಡುತ್ತಲೆ ಗಾಡಿ ತುಂಬಿಹೋಯಿತು. ಗಾಡಿಯ ಡ್ರೈವರ್ ಗಂಡು ಮಕ್ಕಳನ್ನೆಲ್ಲ ಟಾಪ್‌ನ ಮೇಲೆ ಕೂರಲು ತಿಳಿಸಿದ. ಟಾಪ್ ಸಹ ತುಂಬಿ ಹೋಯಿತಾದರೂ ಕೆಳಗೆ ಇನ್ನೂ ನಲ್ವತ್ತು ನಲ್ವತ್ತೈದು ಜನ ಉಳಿದುಕೊಂಡರು. ಈ ಮಧ್ಯೆ ದಾಜಿ ಪಕ್ಕೂನ ಕಿವಿಯಲ್ಲಿ “ಸೀಟಿಗಿ ಎಷ್ಟೊ ಮಾರಾಯ?” ಎಂದ. ಪಕ್ಕೂ ನಗುತ್ತಲೆ “ಎಪ್ಪತೈದು…!” ಎಂದ. ದಾಜಿಗೆ ಕ್ಷಣಹೊತ್ತು ನಿರಮ್ಮಳವೆನಿಸಿತಾದರೂ ಕೆಳಗೆ ನಿಂತೇ ಇದ್ದ ಜನರನ್ನು ಕಂಡು ಮುಖದ ಮೇಲೆ ಆತಂಕದ ಗೆರೆಯೊಂದು ಮೂಡಿ ನಿಂತಿತು. ಇದನ್ನು ಗಮನಿಸಿದ ಪಕ್ಕೂ ಡ್ರೈವರ್‌ನ್ನು ಕೂಗಿದ. ಡ್ರೈವರ್ ಇನ್ನೊಂದು ಗಾಡಿಯನ್ನು ತರಿಸುತ್ತೇನೆಂದು ಫೋನ್ ಮಾಡಲು ತಯಾರಾದಾಗ ಉಳಿದಿದ್ದ ಜನ ಉಸಿರು ಸಡಿಲಿಸಿ ಬರಲಿರುವ ಇನ್ನೊಂದು ಗಾಡಿಗಾಗಿ ಕಾಯಹತ್ತಿದರು.
ಅಷ್ಟಕ್ಕೂ ಆ ಇನ್ನೊಂದು ಗಾಡಿ ಇಷ್ಟೇ ವೇಳೆಯಲ್ಲಿ ಬರುತ್ತದೆ ಎನ್ನುವ ಯಾವುದೇ ಖಾತ್ರಿಗಳು ಇರಲಿಲ್ಲವಾದರಿಂದ ಹೊರಗೆ ಉಳಿದವರು ಮತ್ತೆ ಫುಟ್‌ಪಾತಿನ ಮೇಲೆ ಕೂತು ಕಾಲಹರಣಕ್ಕೆ ಸಿದ್ಧಗೊಂಡರು. ಧೋಂಡಿಬಾನ ಅಂಗಡಿಯಿಂದ ಗುಟಕಾದ ಒಂದು ಸರವನ್ನು ಖರೀದಿಸಿದ ಪಕ್ಕೂ ತನ್ನ ಮಗ ಮತ್ತಿತರ ಹುಡುಗರಿಗೂ ಚಾಕಲೇಟ್‌ಗಳನ್ನು ಕೊಡಿಸಿದ. ಆಗ ಆತ ಜನನಾಯಕನಂತೆ ಕಂಡುಬಂದ.
ಸುಮಾರು ಒಂದು ತಾಸು ಆ ಇನ್ನೊಂದು ಗಾಡಿಯ ನೆಪದಲ್ಲಿ ಕಾಲವನ್ನು ತಳ್ಳಿ ಹಾಕಿದ್ದಾಯಿತು. ಕೊನೆಗೆ ದಾಜಿ “ಇದೊಂದು ಗಾಡಿಯರೆ ಮುಂದ್ ಹೋಗಲಿ… ಹಿಂದಿನ ಗಾಡಿಯಾಗ ನಾವೆಲ್ಲ ಬರತೀವಿ” ಅಂದ. ಉಳಿದವರೆಲ್ಲ ಏಕಪಕ್ಷೀಯವಾಗಿ ಈ ನಿರ್ಧಾರವನ್ನು ತಿರಸ್ಕರಿಸಿದರು. ಎರಡೂ ಗಾಡಿಗಳು ಒಟ್ಟಿಗೆ ಹೋದರಾಯಿತೆಂದು ತೀರ್ಮಾನಿಸಿದರು.
ದಾಜಿ ತನ್ನ ಹಳೆಯ ಮಾಸಿದ ಡಯಲ್‌ನ ಗಡಿಯಾರ ನೋಡಿಕೊಂಡ. ಐದಕ್ಕೆ ಎರಡು ನಿಮಿಷ ಕಡಿಮೆಯಿತ್ತು. ಎಸ್. ಸಿ. ಮೋರ್ಸ್‌ನ ಸೈರನ್ ಕೂಗು ಹಾಕಿತ್ತು.
ಆ ಕಡೆ ಇದಿರಿನಿಂದ ಬಂದ ಗಾಡಿಯೊಂದರ ಡ್ರೈವರ್‌ನು ಮ್ಯಾಕ್ಸಿಕ್ಯಾಬಿನ ಡ್ರೈವರ್‌ನಿಗೆ “ಲೋಕಾಪೂರದಾಗ ಆರ‍್ಟಿಯೊ ನಿಂತಾನೋ….” ಎಂದು ಉಸುರಿ ಹೋಗಿದ್ದ. ಆಯಿತು ಈ ಮಂದಿಯನ್ನು ಬಾಗಲಕೋಟೆಗೆ ಮುಟ್ಟಿಸುವುದು ತನ್ನ ಕೈಲಿಂದಾಗದು ಎಂಬ ಸತ್ಯದ ಅರಿವಾಗಿ ಪಕ್ಕೂನಿಗೆ ಹೇಳಿ ಬಿಟ್ಟ. ಜನ ಸಂಕಟದಲ್ಲಿ ಸಿಕ್ಕಿಬಿದ್ದರು.
ಪಕ್ಕೂ ಡ್ರೈವರ್‌ನಲ್ಲಿ ವಿನಮ್ರತೆಯಿಂದ ವಿನಂತಿಸಿಕೊಂಡ. ಡ್ರೈವರ್ ತಾನು ಮೊನ್ನೆಯೇ ಸರಕಾರಕ್ಕೆ ಮೂರು ಸಾವಿರ ರೂಪಾಯಿ ದಂಡ ತುಂಬಿದ ವೃತ್ತಾಂತ ಬಿಡಿಸಿ ಹೇಳಿದ. ಸಧ್ಯಕ್ಕೆ ಟಾಪ್ ಸರ್ವೀಸ್ ಬೇರೆ, ತನ್ನ ಬದುಕು ದಂಡ ತುಂಬುವುದರಲ್ಲೆ ಮುಗಿದುಬಿಡಬಹುದು ಎಂದು ನಕ್ಕು ಬರಲಿರುವ ಆ ಇನ್ನೊಂದು ಗಾಡಿಯವನಿಗೂ “ಬರಬ್ಯಾಡ ಲೋಕಾಪೂರ ಹಂತೇಕ ಆರ್ ಟಿ ಓ ನಿಂತಾನಂತೊ…” ಎಂದು ಹೇಳಿದ.
ಜನರು ಈ ಸಲ ಬೇಸತ್ತಿದ್ದರು. ಎಷ್ಟೋ ವರುಷಗಳ ತಪಸ್ಸೊಂದು ಛಿದ್ರಗೊಂಡ ವೇದನೆಯಲ್ಲಿ ಭಾರವಾದ ಮನಸ್ಸುಗಳನ್ನು ಹೊತ್ತು ನಿರಾಸೆಯಿಂದ ಗಾಡಿಯಿಳಿದರು.
‘ಬುಡರ್…’ ಎಂದು ಗುಟರು ಹಾಕಿ ತಿರುಗಿ ಮರೆಯಾಗಿ ಹೋದ ಗಾಡಿ ನೋಡುತ್ತ ಕೈಚೆಲ್ಲಿ ಕೂತರು.
ಒಬ್ಬರಿಗೊಬ್ಬರು ಮಾತನಾಡಿಕೊಳ್ಳಬೇಕೆನಿಸಿದರೂ ಆಸಕ್ತಿ ಕಳಕೊಂಡವರಂತೆ ತಮ್ಮ ತಮ್ಮಲ್ಲೇ ಮೌನವಾಗಿಯೇ ಉಳಿದರು. ಪಕ್ಕೂ ಅಂಥದರಲ್ಲೂ ತಾನು ಜಪ್ಪಿಸಿಟ್ಟುಕೊಂಡು ತಂದಿದ್ದ ಕುಪ್ಪಿಯೊಳಗಿನ ಶೆರೆಯನ್ನು ಕಂಠಕ್ಕಿಳಿಸಿ ಬಂದು ಅತ್ತ ನಿಲ್ಲಲೂ ಆಗದೆ ಇತ್ತ ಕೂರಲೂ ಆಗದೆ ಪಾರವ್ವಳ ಪಕ್ಕ ಉರುಳಿ ಬಿಟ್ಟ.
ಪಾರವ್ವ “ಅಯ್ಯ.. ಇದೇನವ್ವಾ ಎಂದಿಲ್ಲ ಒಮ್ಮಿ ಊರಿಗೆ ಹೊಂಟರ ಇದೆಂಥ ಟೈಮ್ ಬಂತ… ಯವ್ವಾ… ದಿನ್ ಬೆಳಗಾದರ ದಗದ್‌ದಾಗ ಹುಗ್ಕೊಂಡ ಸಾಯೋದೇತಿ….. ಒಂದಿವ್ಸ ಹೊರಗ ಬಿದ್ದರ ಹಿಂಗಾತಲ್ಲ…” ಎಂದು ಮನದೊಳಗಿನದನ್ನು ತೋಡಿಕೊಂಡಳು.
ಧೋತರದ ಹಿರಿಯನೊಬ್ಬ ದಾಜಿಯೊಡನೆ ತನ್ನ ಇತ್ಯೋಪರಿ ಬಿಚ್ಚಿಕೊಳ್ಳುತ್ತ “ಯಾನ್ ಮಾಡ್ತೀಯೋ ಮಾರಾಯಾ… ಇವತ್ ದಗದಕ್ಕ ಹೋಗಿದ್ದರ ಒಂದ್ ದಿವಸದ ಪಗಾರರೆ ಬರ‍್ತಿತ್ತು… ಮಾಲಕ್ ಮೊದಲ ಸೂಟಿ ಕೊಡಾಕ್ ತಯಾರಿರಕ್ಕಿಲ್ಲ… ಮದವಿ ದಿವಸ ಹೋಗು ಅಂತ ಗಂಟ್ ಬಿದ್ದಿದ್ದ. ಹ್ಯಾಂಗೊ ಅವನ್ ಒಪ್ಪಿಸಿ ಸೂಟಿ ತಂದೇನಿ… ಇಲ್ಲ್ಯರೆ ಯಾವ್ ಗಾಡೀನೂ ಸಿಗವೊಲ್ಲೂ” ಎಂದನು.
ದಾಜಿ ತನ್ನ ಗಡ್ಡ ಕೆರೆದು “ಯಣ್ಣಾ ನೋಡೋಣು ತಡಿ… ಹ್ಯಾಂಗೂ… ದಿವಸಂತೂ ಮುಗೀತು…! ಏನರೆ ಮಾಡಿ ಹೋಗೋಣಂತ ಎಲ್ಲಾರ್ ಪಾಡೂ ನಿನ್ಹಂಗ್ ಐತಿ. ಏನ್ ಮಾಡೋದು… ಲಕ್ಕಣ್ಣ ಒಂದ್ ಗಾಡಿಯರೆ ಕಳಿಸಿದ್ರ ಆಗ್ತಿತ್ತು… ಖರೆ ಅವನ್ ಲೆಕ್ಕಾಚಾರ ಏನೈತೋ… ಏನೊ?!” ಎಂದು ಕಾಲು ನೀವಿಕೊಂಡು ಕೂತ. ಲಕ್ಕಣ್ಣ ಎಂಬಾತ ಮಂತ್ರಿ ಕಡೆಯ ಮನುಷ್ಯ. ಈ ಮದುವೆಯ ವಿಚಾರ ತಿಳಿಸಿ ಸಜ್ಜಾಗಲು ಹೇಳಿದ್ದವನೂ ಆತನೆ.
“ಲಕ್ಕಣ್ಣ ಯಾಕ್ ಗಾಡಿ ಕಳಿಸತಾನೊ… ಎಲೆಕ್ಷನ್ನಿದ್ರ ಕಳಿಸ್ತಿದ್ದ… ಈಗ ನಮದ ಆಚ್ ಐತಿ. ನಾವ್ ಹ್ಯಾಂಗರ ಮಾಡಿ ಹೋಗಾಕ ಬೇಕು” ಎಂದು ಧೋತರದ ಹಿರಿಯ ಖಾರವಾಗಿ ನುಡಿದು ಏನೋ ನಿರ್ಧಾರಕ್ಕೆ ಬಂದವರಂತೆ “ನಾವ್ ಹಿಂಗ ಕುಂತರ ನಡಿಯೋದಿಲ್ಲ. ಯರ‍್ಯಾರಿಗಿ ಯಾವ್ಯಾವ್ ಗಾಡಿ ಸಿಗತಾವೊ ಆ ಗಾಡ್ಯಾಗ ಸೊಲ್ಪಸೊಲ್ಪ ಮಂದಿ ಹೋಗೋಣಂತ” ಎಂದು ಎಲ್ಲರಿಗೂ ಸಣ್ಣ ಸಣ್ಣ ಗುಂಪಾಗಿ ಬೇರೆಬೇರೆ ಗಾಡಿ ಹತ್ತುವುದೆಂಬ ಸಲಹೆ ಕೊಟ್ಟ. ಇದು ಬಹುತೇಕರಿಗೆ ಸರಿಯೆನಿಸಲಿಲ್ಲ. ಹೋದರೆ ಎಲ್ಲರೂ ಒಟ್ಟಾಗಿಯೆ ಹೋಗುವುದು ಎಂದು ನಿಶ್ಚಯಿಸಲಾಯಿತು.
ಹೊತ್ತು ಮುಳಗುವುದರಲ್ಲಿತ್ತು. ಮೋಡಗಳು ಹಿಂಡುಹಿಂಡಾಗಿ ಆಕಾಶವನ್ನು ಆಕ್ರಮಿಸಿಬಿಟ್ಟಿದ್ದವು. ಕತ್ತಲು ಮುಸುಕು ಹಾಕಿದ ದೆವ್ವದಂತೆ ಮೆಲ್ಲಗೆ ಕವುಚಿಕೊಳ್ಳುತ್ತಿತ್ತು. ಸಾವಿನಂಚಿನ ಮುದುಕರಂತೆ ಜೋತು ಬಿದ್ದಿದ್ದ ಬೀದಿದೀಪಗಳು ಮಿಣುಕು ಮಿಣುಕಾಗಿ ಹೊತ್ತಿಕೊಂಡಿದ್ದವು. ಕತ್ತಲಿನೊಂದಿಗೆ ಅವುಗಳ ನಿತ್ಯಹೋರಾಟದ ನಿರಂತರ ಪಯಣ ಮುಂದುವರೆದಿತ್ತು.
ದಾರಿ ಕಾಣದೆ ಗತಿಗೆಟ್ಟು ತಲ್ಲಣಗೊಂಡವರ ಎದೆಗಳಲ್ಲಿ ದುಗುಡಗಳು ಗೂಡು ಕಟ್ಟಿಕೊಳ್ಳುತ್ತಿದ್ದವು. ಚೆನ್ನಿ ತನ್ನ ಅವ್ವ ಕಾಶೆವ್ವನ ತೊಡೆಗಳ ಮೇಲೆ ಹೋಳಾಗಿ ತನ್ನ ಕೈ ಹಿಡಿಯಲಿರುವ ಹುಡುಗನನ್ನು ಧೇನಿಸುತ್ತ ಬದಿಗಿದ್ದ ಚೀಲದಲ್ಲಿ ಕೈ ಹಾಕುತ್ತಾಳೆ. ತೊಯ್ದು ತುಮುಲಾಗಿದ್ದ ಕಾಗದದ ಪುಡಿಕೆಯನ್ನು ಹೊರತಗೆದು ನೋಡುತ್ತಾಳೆ. ಒಂದು ಕ್ಷಣ ಗಡಬಡಿಸಿ ಎದ್ದು, ನೇರ ಕೂತು ತಣ್ಣಗಿನ ಆ ಪುಡಿಕೆಯನ್ನು ಹಿಚಕುತ್ತಾಳೆ; ‘ಪಿಚಕ್…..’ ಎಂದು ಸಿಡಿದ ಸೆಗಣಿ ಬಣ್ಣದ ಮದರಂಗಿ ಅವಳ ಮುಖಕ್ಕೂ ಕಾಶೆವ್ವನ ಗಲ್ಲಕ್ಕೂ ಮೆತ್ತಿಕೊಂಡಿತು.
‘ಮುಂದ್ ಹ್ಯಾಂಗ್… ಬಾಗಲಕೋಟಿ ಮುಟ್ಟೋದ್ ಯಾವಾಗ? ಅರಿಷಿಣದ ತಯಾರಿ ಹ್ಯಾಂಗ?’ ಎಂಬ ಚಿಂತೆಯಲ್ಲಿದ್ದ ಕಾಶೆವ್ವ ಮದರಂಗಿ ಸಿಡಿಯಲು ನಿದ್ದೆಯಿಂದ ಎಚ್ಚರಗೊಂಡಂತೆ ಗಲ್ಲದ ಮೇಲೆ ಬೆರಳಾಡಿಸಿಕೊಂಡು ಚೆನ್ನಿಯತ್ತ ದುರುಗುಟ್ಟಿ ನೋಡಿದಳು.
ಚೆನ್ನಿಯ ಕಣ್ಣಂಚಿನಲ್ಲಿ ಹನಿಯೊಂದು ಮೂಡಿತ್ತು. ರಾತ್ರಿ ಅಂಗೈಗಳನ್ನು ಸಿಂಗರಿಸಲಿದ್ದ ಮದರಂಗಿ ದೈನೇಸಿಯಾಗಿ ಬಿದ್ದು ಹೋದುದಕ್ಕೆ ದುಃಖವಿತ್ತು. ಗಲ್ಲವನ್ನು ಒರೆಸಿಕೊಂಡು ಕಾಶೆವ್ವ ಮಗಳ ತಲೆಯಲ್ಲಿ ಕೈಹಾಕಿ ರಮಿಸುತ್ತ ಆಕಾಶವನ್ನು ದಿಟ್ಟಿಸುತ್ತ ಕೂತಳು.
ಮಳೆಯ ಗಾಳಿ ಬರ‍್ರೆಂದು ಕತ್ತಲಿನೊಂದಿಗೆ ಶ್ರುತಿ ಹಿಡಿಯಲು ಹವಣಿಸಿತ್ತು. ಮತ್ತೊಮ್ಮೆ ಮಳೆ ಹನಿವ ತವಕದಲ್ಲಿತ್ತು. ಗಾಡಿಯ ನಿರೀಕ್ಷೆಯಲ್ಲಿದ್ದ ಜನ ಮಳೆಯ ಯಾವ ಅರ್ಭಟಕ್ಕೂ ಮಣಿಯಬಾರದೆಂಬ ಛಲ ತೊಟ್ಟಂತೆ ಉದರುತ್ತಿದ್ದ ಹನಿಗಳ ಮಧ್ಯೆಯೇ ಉಳಿದರು. ಕ್ರಮೇಣ ಮಳೆಯ ರಭಸ ತೀವ್ರಗೊಳ್ಳುತ್ತಿದ್ದಂತೆ ದೊಡ್ಡ ಹೆಡ್ ಲೈಟುಗಳ ಬೆಳಕನ್ನು ಚೆಲ್ಲುತ್ತ ಇವರನ್ನು ದಾಟಿಕೊಂಡು ವಾಹನವೊಂದು ಮುಂದಕ್ಕೆ ದೂರ ಹೋಗಿ ನಿಂತು ಬಿಟ್ಟಿತ್ತು.
ದಾಜಿ ಮಳೆಯ ಖಬರಿಲ್ಲದೆ ಗಾಡಿಯತ್ತ ಹೆಜ್ಜೆ ಹಾಕಿದ್ದ…
ಅವನ ಹಿಂದೆ ಜನರೂ ತಮ್ಮ ಸರಕುಗಳನ್ನು ಹೊತ್ತು ಓಡುತ್ತಿದ್ದರು…
*****
ಕತೆಯಲ್ಲದೊಂದು ಕತೆ ಮೂಡಿ ಬಂದ ಬಗೆ:
ನನ್ನ ಉದ್ಯೋಗದ ನಿಮಿತ್ಯ ನಾನು ಬೆಳಗಾವಿ ಜಿಲ್ಲೆಯ ಮೂಲೆಮೂಲೆಗಳನ್ನೆಲ್ಲ ಎಡತಾಕುತ್ತಿರುತ್ತೇನೆ. ಹೀಗೆಯೇ ಒಂದು ಕೆಲಸದ ಮೇಲೆ ಬೆಳಗಾವಿಯ ಪಿಬಿ ರೋಡಿಗೆ ಹೋದಾಗ ಬಸ್ಸಿನ ಹಾದಿ ಕಾಯುತ್ತ ಕುಳಿತ ಸುಮಾರು ನೂರು ಜನರ ಗುಂಪು ನನ್ನಲ್ಲಿ ವಿಚಿತ್ರ ಕುತೂಹಲ ಕೆರಳಿಸಿತು. ಕಂಡ ಪ್ರತಿಯೊಂದು ಘಟನೆಯಲ್ಲೂ ಕತೆಯನ್ನು ಹುಡುಕುವ ನನ್ನಲ್ಲಿ ಅವರು ಬರುವ ಪ್ರತಿಯೊಂದು ಟ್ರಕ್ಕು, ಬಸ್ಸು, ಟೆಂಪೋಗಳನ್ನು ತಡೆದು ನಿಲ್ಲಿಸಿ ಕೇಳುವುದು, ವ್ಯವಹಾರ ಕುದುರದ್ದಕ್ಕೆ ಮತ್ತೆ ಕಾಯುತ್ತ ನಿಲ್ಲುವುದು, ಯಾರೋ ಒಬ್ಬರು ನಾನೇ ಹುಡುಕಿಕೊಂಡು ಬರುತ್ತೇನೆಂದು ಹೋಗುವುದು, ಇದನ್ನೊಂದು ಕತೆಯಾಗಿಸುವ ಉಮೇದನ್ನು ಹುಟ್ಟಿಸಿದವು. ಮೊದಮೊದಲಿಗೆ ಕತೆಯಾಗುವ ಯಾವ ಲಕ್ಷಣಗಳೂ ಈ ಘಟನೆಯಲ್ಲಿ ಇಲ್ಲವೆನಿಸಿದರೂ ಅಲ್ಲಿ ನಡೆಯುತ್ತಿದ್ದ ಘಟನಾವಳಿಗಳು ಒಂದು ಹೊಸ ಲೋಕವನ್ನು ಚಿತ್ರಿಸಬಹುದು ಎಂದು ಒಳಗೊಳಗೇ ಅನಿಸಹತ್ತಿತು. ಅಲ್ಲಿ ನೆರೆದ ಜನ ಒಂದು ಜೋಡಿಯನ್ನು ಸಾಮೂಹಿಕ ವಿವಾಹ ಮಾಡಿಸಲು ಹೊರಟದ್ದು, ಅದಕ್ಕಾಗಿ ರಸ್ತೆಯ ಬದಿಯಲ್ಲಿ ನಿಂತು ಗಾಡಿಗಾಗಿ ಕಾಯುವುದು ಹೊಸ ತರಹದ ಅನುಭವವನ್ನು ನೀಡುತ್ತಿತ್ತು.
ನಾನು ಯಾರಿಗಾಗಿಯೋ ಕಾಯುತ್ತ ಎರಡು ಎರಡೂವರೆ ತಾಸು ಅಲ್ಲಿ ನಡೆಯುವ ಮಾತುಕತೆ, ಅವರ ಒದ್ದಾಟ, ಬೈಗುಳ, ಜಗಳಗಳು ಒಳ್ಳೆಯ ಚಿತ್ರ ನೋಡಿದ ಅನುಭವ ನೀಡುತ್ತ ಹೋದವು, ನನ್ನ ಸಿಟ್ಟು, ಆಯಾಸವನ್ನು ಹೊಡೆದೋಡಿಸಿದವು. ಕತೆಯಾಗಿಸುವ ಮನಸ್ಸು ಗಟ್ಟಿಯಾಗುತ್ತ ಹೋಯಿತು. ಆದರೂ ಮನಸ್ಸಿನ ಮೂಲೆಯೊಂದರಲ್ಲಿ ಇದು ಕತೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಂಶಯವೂ ಕೂಡುತ್ತಿತ್ತು. ಅಂಥ ಒದ್ದಾಟದ ಗಳಿಗೆಯಲ್ಲೂ ರಾಜಕೀಯದ ಮಾತುಗಳು ಮತ್ತೂ ಕುತೂಹಲ ಮೂಡಿಸಿದವು. ಬಡತನದ ಜಂಜಾಟಗಳಲ್ಲಿ ಮೂಡುವ ಪ್ರೀತಿ, ಒಬ್ಬರನ್ನೊಬ್ಬರು ಬಿಟ್ಟು ಹೋಗಲಾಗದ ಅಂತಃಕರಣ, ದ್ವೇಷದ ಒಳಗೂ ಜೀವಿಸುವ ಮಾನವೀಯತೆ, ಎಂಥ ಕಠಿಣ ಪರಿಸ್ಥಿತಿಯಲ್ಲೂ ಬಿಡದ ಕುಡಿತದ ಚಟ ಆ ಎರಡೂವರೆ ಗಂಟೆಯಲ್ಲಿ ಒಂದು ಲೋಕವನ್ನೇ ಅನಾವರಣ ಮಾಡಿದವು.
ಈ ಲೋಕವನ್ನು ಓದುಗರ ಮುಂದೆ ತೆರೆದಿಡುವ ನಿರ್ಧಾರ ಗಟ್ಟಿಗೊಂಡಂತೆ ಕತೆ ನಿಧಾನಕ್ಕೆ ಮನಸ್ಸಿನೊಳಗೆ ಮೂಡತೊಡಗಿತು. ಮನೆಗೆ ಮುಟ್ಟಿದ ಕೂಡಲೇ ಲ್ಯಾಪಟಾಪಿನ ಮೇಲೆ ಕತೆಯ ಘಟನೆಗಳು ಸರಾಗವಾಗಿ ಮೂಡಿಬರುತ್ತ ಹೋದವು. ಒಂದು ವಾರದೊಳಗೆ ಕತೆಯಲ್ಲದೊಂದು ಕತೆ ನನ್ನೆದುರಿಗೆ ಮೂಡಿ ನಿಂತಿತು.
***
ವಾರಿಗೆಯ ಗೆಳೆಯ ಕಥೆಗಾರ ಪಿ. ಮಂಜುನಾಥ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ. ಗೆಳೆಯ ಸಂತೋಷ ಗುಡ್ಡಿಯಂಗಡಿಯವರಿಂದ ಮಂಜಣ್ಣನಿಗೆ ಪಾರ್ಶುವಾಯು ಅಟ್ಯಾಕ್ ಸುದ್ದಿ ಮೂರ್ನಾಲ್ಕು ದಿನಗಳ ಹಿಂದಷ್ಟೆ ಮಾತನಾಡಿದ್ದೆ. ಶಬ್ದಗಳನ್ನು ತುಂಡು ತುಂಡಾಗಿ ಮಾತನಾಡುತ್ತಿದ್ದ ಮಂಜು, ಬಾಯಿಂದ ಮಾತಾಡಾಕ್ಕಾಗ್ತಿಲ್ಲ ಸರ್. ಆದ್ರೆ ಕಥೆ ಬರಿಲಿಕ್ಕೆ ಏನು ಅಡ್ಡಿಯಿಲ್ಲ. ಕಥೆ ಬರೀತಾ ಇದ್ದಿನಿ. ಎರಡನೆ ಸಂಕಲನ ತರಬೇಕು ಅಂತ ಆಸೆಯಿಂದ ಹೇಳಿದ್ದ. ಹಣಕಾಸಿನ ತೊಂದ್ರೆ ಬಗ್ಗೆ ವಿಚಾರಿಸಿದಾಗ, ನನ್ನ ತಮ್ಮ ಬ್ಯಾಂಕ್ ಉದ್ಯೋಗಿ ಸರ್. ಯಾವ ಸಮಸ್ಯೆನೂ ಇಲ್ಲ ಎಂದಿದ್ದ.
ವಿಪರ್ಯಾಸವೆಂದರೆ ಇದೆಲ್ಲ ಮಾತಾಡುವ ಮುಂಚಿನ ದಿನವೇ ದಲಿತ ಸಾಹಿತ್ಯ ಪರಿಷತ್ತಿನ ಅರ್ಜುನ್ ಗೊಳಸಂಗಿ ಸರ್ ಫೋನ್ ಮಾಡಿದ್ದರು. ಈ ಸಲ ಧಾರವಾಡದಲ್ಲಿ ದಸಾಪ ಸಮ್ಮೇಳನ ಹನುಮಂತ. ಈ ಸಲದ ಸಮ್ಮೇಳನಕ್ಕೆ ಯುವಕರೇ ಸರ್ವಾಧ್ಯಕ್ಷರು ಮಾಡಬೇಕು ಅಂತಿದ್ದಿವಿ. ಯಾರ ಹೆಸರನ್ನು ಸೂಚಿಸುತ್ತೀರಿ ಅಂದಿದ್ದರು. ನಾನು ಹೆಸರಿಸಿದ ಬೆರಳೆಣಿಕೆಯ ಗೆಳೆಯರಲ್ಲಿ ಪಿ.ಮಂಜುನಾಥನ ಹೆಸರನ್ನು ಹೇಳಿದ್ದೆ. ಇದಿನ್ನು ನಿರ್ಧಾರವಾಗುವ ಮುನ್ನವೇ ಮುಂಜುನಾಥ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟಿದ್ದಾರೆ.
ಮಂಜುನಾಥ ಅವರ ಮುಗಿಲು ಕರುಣೆಯ ಮಾಯೆ ಕಥಾ ಸಂಕಲನದ ಎಲ್ಲ ಕಥೆಗಳನ್ನು ಓದಿ ನಾನು ಹೊಟ್ಟೆಕಿಚ್ಚುಪಟ್ಟಿದ್ದೇನೆ. ನನಗಿಂತಲೂ ನಾಲ್ಕೈ ವರ್ಷ ದೊಡ್ಡವರಾದ ಮಂಜುನಾಥ ತಂದದ್ದು ಕೇವಲ ಒಂದೇ ಸಂಕಲನ. ಅದರಲ್ಲೊಂದು ಕಥೆಯ ಪ್ರಸಂಗ ನನ್ನನ್ನು ಸದಾ ಕಾಡುತ್ತದೆ. ಬೆಳಗಾವಿಯಿಂದ ಬಾಗಲಕೋಟೆ ಕಡೆ ದುಡಿಯಲು ವಲಸೆಹೋಗಬೇಕಿದ್ದ ಮಕ್ಕಳು ಮರಿಗಳೊಂದಿಗ ಕಾರ್ಮಿಕರ ಗುಂಪೊಂದರ ಪ್ರಯಾಣದ ಕಷ್ಟವನ್ನು ಹೇಳುವ ಕಥೆಯದು. ಹೈವೇರೋಡಿನಲ್ಲಿ ಓಡಾಡುವ ಯಾವೊಂದು ವಾಹನಗಳು ರಸ್ತೆಯಂಚಿನಲ್ಲಿದ್ದ ಇವರ ಇರುವನ್ನೆ ಲೆಕ್ಕಿಸದೇ ಬರ‍್ರ್ ಬರ‍್ರ್ ಎಂದು ಓಡಾಡುತ್ತಿದ್ದರೆ, ಇವರೋ ತಮ್ಮ ಬುತ್ತಿಗಂಟುಗಳೆಲ್ಲ ಖಾಲಿಯಾಗಿ ಮುಂದೇನು ಎಂದು ಪರಿತಪಿಸುವ ಪ್ರಸಂಗವದು. ಈ ಕಥೆ ಸದಾ ನನ್ನನ್ನು ಬೆಂಬಿಡದೇ ಕಾಡುತ್ತಿದೆ. (ಹನಮಂತ ಹಾಲಗೇರಿ, ಫೇಸ್‌ಬುಕ್‌ನಿಂದ).
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ