ಮಳೆಗಾಲವಾದ್ದರಿಂದ ಅಂಗಳದಲ್ಲಿ ಜಾರಿಕೆಯಾಗಿತ್ತು. ಎಚ್ಚರಿಕೆಯಿಂದ ನಡೆದು, ಬಾಗಿಲ ಮುಂದೆ ನಿಂತು, ಅತ್ತಿದ್ದ ಕಣ್ಣುಗಳನ್ನೆಲ್ಲ ಚೊಕ್ಕವಾಗಿ ಒರೆಸಿಕೊಂಡು “ಅತ್ತೆ..” ಎಂದು ಕರೆದೆ. ಎಷ್ಟೇ ತಡೆ ಹಿಡಿದಿದ್ದರೂ ಧ್ವನಿ ನಡುಗಿತು. ಬಾಗಿಲ ತೆಗೆದ ಅತ್ತೆ ಒಳಗೆ ಕರೆದು ಒಂದುಸಲ ನನ್ನ ಮೆಲಿಂದ ಕೆಳಗಿನವರೆಗೆ ನೋಡಿದವಳೇ “ಅಪ್ಪ ಹೊಡೆದ್ನಾ..?” ಕೇಳಿದಳು. ಮಾತಾಡಿದರೆ ಎಲ್ಲಿ ಅಳು ಬಂದು ಬಿಡುತ್ತದೇನೋ ಎಂದು `ಹೌದು’ ಎಂಬಂತೆ ತಲೆ ಅಲ್ಲಾಡಿಸಿ ಕೇಪಿನಡಬ್ಬ ಕೊಟ್ಟೆ. ಅದನ್ನು ತೆಗೆದುಕೊಳ್ಳದ ಅತ್ತೆ “ಓ.. ಅದಾ.. ನೀನೇ ಇಟ್ಕಾ ಮರೀ.. ಅಪ್ಪ ಗನಾಕೇ ಹೊಡೆದ್ನಾ? ಉರಿ ಆವ್ತೇನೋ..?” ಕೇಳಿದಳು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪದ್ಮನಾಭ ಭಟ್, ಶೇವ್ಕಾರ ಕತೆ “ಕೇಪಿನ ಡಬ್ಬಿ” ನಿಮ್ಮ ಓದಿಗೆ
ಅಳುತ್ತಳುತ್ತಲೇ ಗೇಟು ತೆರೆದು ತಿರುಗಿ ಮತ್ತೆ ಅದನ್ನು ಹಾಕದೆ ಹೊರನಡೆದೆ. ಸಣ್ಣಗೆ ಪಿರಿ ಪಿರಿ ಮಳೆ ಜಿನುಗುತ್ತಿತ್ತು. ಹಾಕಿಕೊಂಡ ಅಂಗಿ ಬೆನ್ನ ಮೇಲಿನ ಗಾಯದ ರಕ್ತಕ್ಕೆ ಅಂಟಿಕೊಂಡು ಅಸಾದ್ಯ ಉರಿಯಾಗುತ್ತಿತ್ತು. ಮಣ್ಣು ರಸ್ತೆಯಲ್ಲಿ ಮಳೆಗೆ ರಾಡಿಯೆದ್ದು ಚಪ್ಪಲಿಯಿಲ್ಲದ ಕಾಲಿನ ಬೆರಳುಗಳ ಸಂದಿಯಿಂದ ಪಿಚಿಕ್ ಪಿಚಿಕ್‌ನೆ ಹಾರುತ್ತಿತ್ತು. ಅತ್ತೆಮನೆ ನಮ್ಮ ಮನೆಯಿಂದ ಹತ್ತಿರದಲ್ಲೇ, ಅಂದರೆ ಒಂದರ್ಧ ಪರ್ಲಾಂಗು ಅಷ್ಟೇ ಇದ್ದುದರಿಂದ ಹೆದರಿಕೆಯೇನೂ ಇರಲಿಲ್ಲ. ಆದರೆ ನಾಚಿಕೆಯಾಗುತ್ತದಲ್ಲ. ಕೇಪಿನ ಡಬ್ಬಿಯನ್ನು ಪರತ್ ಕೊಟ್ಟು `ತಪ್ಪಾತು’ ಎಂದು ಹೇಳಿ ಬರಬೇಕು. ಅಷ್ಟರಲ್ಲಿ ನನ್ನ ಕೈ ಕಾಲಿನ ಮೇಲಿನ ಈ ಗಾಯದ ಗುರುತುಗಳನ್ನು ನೋಡದೇ ಇರುತ್ತಾರೆಯೇ? ಅದಕ್ಕೊಂದಿಷ್ಟು ಪ್ರಶ್ನೆಗಳು “ಎಂತಾ ಆತೋ..? ಅಪ್ಪ ಹೊಡೆದ್ನಾ..? ಎಂತರಲ್ಲಿ ಹೊಡೆದ..?” ಇದಕ್ಕೆಲ್ಲಾ ನಾನು ಉತ್ತರಿಸಬೇಕು ಛೆ!
ಯೋಚಿಸುತ್ತಾ ನಡೆದವ ಗೊತ್ತಿಲ್ಲದೇ ರಸ್ತೆ ಮಧ್ಯ ತಗ್ಗಿನಲ್ಲಿ ನಿಂತ ನೀರಿನ ಮಡುವಿನಲ್ಲಿ ಕಾಲಿಟ್ಟೆ. `ಪಚ್’ ರಾಡಿ ಅಷ್ಟೆತ್ತರ ಹಾರಿ ಚಡ್ಡಿ ತುದಿಯೂ ಕೊಂಚ ಒದ್ದೆಯಾಯಿತು. ಕಾಲನ್ನು ಎತ್ತದೇ ಹಾಗೇ ನೀರಿನೊಳಗಿಂದಲೇ ಸರಿಸುತ್ತಾ `ಗುಳ್.. ಗುಳ್..’ ಎಂದು ಸದ್ದುಮಾಡುತ್ತಾ ನಡೆದೆ. ನೀರು ದಾಟಿ ಅಳುವುದನ್ನೂ ಮರೆತು ತಿರುಗಿ ನೋಡಿದರೆ ನಾನು ಬಂದ ಜಾಗದಲ್ಲಿ ನೀರು ಕಲಕಿ ಕೆಂಪಾಗಿ ದಾರಿಯಾಗಿತ್ತು.
ಕಿಬ್ಬೊಟ್ಟೆಯ ಬಳಿ ನೋವಾದಂತೆನಿಸಿ ಎಷ್ಟೋಹೊತ್ತು ಮುಂಚಿನಿಂದ ಉಚ್ಚೆಕಟ್ಟಿಕೊಂಡಿದ್ದದ್ದು ನೆನಪಾಯ್ತು. ಚೆಡ್ಡಿ ಎತ್ತುವಾಗ ಕೊಂಚ ಒದ್ದೆಯಾದದ್ದು ಕಂಡು ಇದು ಬಹುಶಃ ಅಪ್ಪ ಹೊಡೆಯುವಾಗಲೇ ಬಂದಿದ್ದಿರಬೇಕು ಅನ್ನಿಸಿತು. ಅಥವಾ ಮಳೆನೀರಿಗೆ ಒದ್ದೆಯಾದದ್ದಾ? ಅನುಮಾನವಾಗಿ ಒದ್ದೆ ಜಾಗಕ್ಕೆ ಬೆರಳು ತಿಕ್ಕಿ ಮೂಸಿನೋಡಿದೆ. ಇದು ಪಕ್ಕಾ ಉಚ್ಚದ್ದೇ ವಾಸನೆ ಎಂದು ಗೊತ್ತುಮಾಡಿಕೊಂಡು ಆ ನೀರಲ್ಲೇ ಉಚ್ಚೆ ಹೊಯ್ದೆ. ಜರ‍್ರನೇ ಸುರಿದದ್ದರಿಂದ ನೀರಿನ ಮೇಲೆ ನೊರೆಗುಳ್ಳೆಗಳು ತೇಲತೊಡಗಿದವು. ಕೊನೆಯ ಕೆಲವು ಹನಿಗಳು ಮೊಣಕಾಲಮೇಲೆ ಬಿದ್ದು ಒದ್ದೆಯಾಯಿತು. ಅದನ್ನು ಒದ್ದೆ ಹಸಿರೆಲೆ ತೆಗೆದುಕೊಂಡು ಒರೆಸಿಕೊಂಡೆ.
ಈಗ ಮನೆಯಲ್ಲಿ ಮೂರು ತುಂಡಾಗಿ ಬಿದ್ದಿದ್ದ ಕೆಂಪುಬೆಲ್ಟು ನೆನಪಾಗಿ ಮರೆತುಹೋಗಿದ್ದ ಅಳು ಮತ್ತೆ ಉಕ್ಕರಿಸಿ ಅಳತೊಡಗಿದೆ.
ಎಷ್ಟು ಚೊಲೋ ಬೆಲ್ಟು ಆಗಿತ್ತು. ಕಳೆದವರ್ಷ ಯಲ್ಲಾಪುರ ಜಾತ್ರೆಯಲ್ಲಿ, ದೇವಿಗದ್ದುಗೆಯ ಬಳಿ ಪೂಜೆಮಾಡಿಸಿ ಪ್ರಸಾದ ತೆಗೆದುಕೊಂಡು, ಚಿಟ್ಟಾಣಿ ಮೇಳದ ಯಕ್ಷಗಾನಕ್ಕೆ ಹೋಗುವುದಕ್ಕೂ ಮುಂಚೆ ವಾಯ್.ಟಿ.ಎಸ್.ಎಸ್ ಎದುರಿನ ಮೈದಾನದಲ್ಲಿ ಅಪ್ಪ ತೆಗೆಸಿಕೊಟ್ಟ ಬೆಲ್ಟು ಅದು. ಕಂಬಳಿ ಸುಂಗಿನಂತೇ ಮಿದುಮಿದುವಾಗಿದ್ದ ಕೆಂಪುಬಣ್ಣದ ಬೆಲ್ಟಿಗೆ ಬಿಗಿದುಕೊಳ್ಳಲು ಲೆಕ್ಕಮಾಡಿ ಆರು ಕನ್ನುಗಳು. ಮೊದಲು ಆ ಬೆಲ್ಟು ಬೇಕೆಂದು ಕೇಳಿದಾಗ ಅಪ್ಪ ತೆಗೆಸಿಕೊಡಲು ಒಪ್ಪಿರಲಿಲ್ಲ. “ಶೀ.. ಅದೆಲ್ಲಾ ನಾವು ತಕಂಬೂದಲ್ಲಾ, ಅದು ಒಕ್ಕಲವು ಹಾಯ್ಕಂಬೂ ಬೆಲ್ಟು” ಎಂದಿದ್ದ. ನಾನು “ನಂಗೆ ಅದೇ ಬೇಕು” ಎಂದು ನೆಲಕ್ಕೇ ಬಿದ್ದು ರಂಪಾಟ ಮಾಡಿದಾಗ ಕಿವಿಹಿಂಡಿ “ಬಾಯಿಮುಚ್ಚು ಮಕಡ್ಯಾ ನೀ ಹಿಂಗೆ ರಗಳೆ ಮಾಡ್ತೆ ಹೇಳೇ ನಿನ್ನ ಎಲ್ಲಿಗೂ ತಕಬತ್ನಿಲ್ಲೆ” ಎನ್ನುತ್ತಾ ತೆಗೆಸಿಕೊಟ್ಟಿದ್ದ. ನಂತರ ಯಕ್ಷಗಾನ ನೋಡಲು ಹೋಗಿದ್ದೆವು.
ಅವತ್ತು `ಸುಧನ್ವಾರ್ಜುನ’ದಲ್ಲಿ ಚಿಟ್ಟಾಣಿ ದೊಡ್ಡ ಕಿರೀಟ ಕಟ್ಟಿಕೊಂಡು `ಸೄಷ್ಟಿಗರ್ಜುನನೇ ನೀನು..’ ಹಾಡಿಗೆ ಕುಣಿಯುವಾಗ, ಅಪ್ಪ “ವ್ಹಾ..ವ್ಹಾ.. ಅವನೇ ನೋಡು ಚಿಟ್ಟಾಣಿ, ಮುಖಕ್ಕೆ ಬಣ್ಣ ಬಡ್ಕಂಡಾಗ ಹಣೆಮೇಲಿನ ಬೊಂಗೆ ಕಾಣ್ತೇಇಲ್ಲೆ ನೋಡು” ಎಂದು ತೋರಿಸುವಾಗ, ಮಧ್ಯರಾತ್ರಿ ಉಚ್ಚೇ ಹೊಯ್ಯಲು ಹೋದಾಗ, ಒಂದು ಪ್ಲೇಟ್ ಬೊಂಡಾಬಜೆಯನ್ನು, ಕಟ್ಟಿಕೊಟ್ಟ ಪೇಪರ್‌ನಲ್ಲಿನ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದುತ್ತಾ ತಿನ್ನುವಾಗ, ಎಲ್ಲ ಸಮಯದಲ್ಲೂ ಬೆಲ್ಟು ಕೈಯಲ್ಲಿ ಭದ್ರವಾಗಿತ್ತು.
ಮನೆಗೆ ಬಂದಮೇಲೂ ಅದನ್ನು ಸುರುಳಿಯಾಗಿ ಸುತ್ತಿ, ಒಳಗೆ ಡಾಂಬರ ಗುಳಿಗೆಯಿಟ್ಟು ಬೆಚ್ಚಗೇ ಪೆಟ್ಟಿಗೆಯಲ್ಲಿಟ್ಟಿದ್ದೆ. ಎಲ್ಲಾದ್ರು ಹೋಗುವಾಗ ಮಾತ್ರ ತೆಗೆಯುವುದು. ಇಂದು ಎಂತಕ್ಕೋ ಹೊರತೆಗೆದಿದ್ದ ಬೆಲ್ಟು ಹಾಗೇ ಉಳಿದುಹೋಗಿತ್ತು. ಅಪ್ಪನಿಗೂ ಹೊಡೆಯಲು ಅದೇ ಸಿಗಬೇಕೆ..?
ಎಲ್ಲಾ ಆದದ್ದು ಆ ಅತ್ತೆಯಿಂದಾನೆ. ಈಗ ಸುಮಾರು ದಿನದ ಹಿಂದೆ ಆಡಲು ಎಂದು ಅತ್ತೆಮನೆಗೆ ಹೋಗಿದ್ದೆ. ಅಲ್ಲಿ ಅತ್ತೆಯ ಮೊಮ್ಮಗ, ನನ್ನಷ್ಟೇ ನೆತ್ತೆಯ ಪಚ್ಚಿ ಬಂದಿದ್ದ. ಅವನ ಜೊತೆ ಆಟ ಆಡಿಕೊಂಡು ಬರುವಾಗ ಅಲ್ಲೇ ಗೋಡೆ ಕಪಾಟಿನಲ್ಲಿದ್ದ ನಾಲ್ಕಾಣೆಯ ಕೇಪಿನ ಡಬ್ಬ ನೋಡಿ, ತುಂಬಾ ಆಸೆಯಾಗಿ ಚಡ್ಡಿ ಕಿಸೆಯಲ್ಲಿ ಹಾಕಿಕೊಂಡು ಬಂದಿದ್ದೆ. ಆದ್ರೆ ಅದು ಹೇಗೋ ಪಚ್ಚಿಗೆ ಗೊತ್ತಾಗಿ ಅವನು ಅತ್ತೆಗೆ ಹೇಳಿಬಿಟ್ಟಿದ್ದ. ಇಂದು ಅಪ್ಪ ಯಾವುದೋ ಕೆಲಸಕ್ಕೆ ಗುಳ್ಳಾಪುರಕ್ಕೆ ಹೋಗಿಬರುವಾಗ ಅಪ್ಪನ ಸೈಕಲ್ ನಿಲ್ಲಿಸಿ ಅತ್ತೆ ಎಲ್ಲಾ ಹೇಳಿದಳಂತೆ.
ಅಪ್ಪ ಮನೆಗೆ ಬಂದವನೇ “ಅತ್ತೆಮನೆಯಿಂದ ಎಂತಾ ತಕಬೈಂದೆ? ಖರೆ ಹೇಳಿದರೆ ಎಂತೂ ಮಾಡ್ತಿನಲ್ಲೆ, ಹೇಳು” ಎಂದು ನಯವಾಗೇ ಕೇಳಿದಾಗ ನಾನು ಅಪ್ಪನ ಬಳಿ ಸುಳ್ಳು ಹೇಳಲು ಭಯವಾಗಿ, ಕಪಾಟಿನಿಂದ ಕೇಪಿನ ಡಬ್ಬಿಯನ್ನು ತೆಗೆದು ಅಪ್ಪನ ಕೈಲಿಟ್ಟಿದ್ದೆ. ಅದನ್ನು ಕಂಡಾಗ ಅಪ್ಪನ ಧರ್ತಿಯೇ ಬದಲಾಗಿ “ಕಳ್ಳತನಾನೂ ಕಲ್ತೆಯಾ..?” ಎನ್ನುತ್ತಾ ಅತ್ತಿತ್ತ ನೋಡಿದವನಿಗೆ ಕಂಡಿದ್ದು ನನ್ನ ಜಾತ್ರೆಯ ಕೆಂಪುಬೆಲ್ಟು. ಬೆಲ್ಟು ಅಪ್ಪನ ಕೈಗೆ ಬರುತ್ತಲೇ ಹೊಡೆತ ಬೀಳುವುದು ಪಕ್ಕಾ ಆಗಿ ಓಡಲು ಎರಡು ಹೆಜ್ಜೆ ಇಡುವಷ್ಟರಲ್ಲಿಯೇ ಅಪ್ಪ “ಓಡಿರೆ ಎರಡು ಹೆಚ್ಚು ಬೀಳ್ತು” ಎಂದು ಗುಡುಗಿದಾಗ ಅಲ್ಲೇ ನಿಂತು ಸಾವಕಾಶವಾಗಿ ಹಿಂದುಕಾಲಲ್ಲೇ ಒಂದೊಂದೇ ಹೆಜ್ಜೆ ಹಿಂದೆ ಹೋಗುತ್ತಾ “ಬ್ಯಾಡ ಅಪ್ಪಾ… ತಪ್ಪಾತು, ಇನ್ನುಮುಂದೆ ಹಂಗೆ ಮಾಡ್ತ್ಯನಲ್ಲೆ ಸತ್ಯ ದೇವರಾಣೆ” ಎಂದ್ರೂ ಕೇಳದೆ ಅಪ್ಪ “ಪೋರಾ ನೀ ನನ್ನ ಕರ್ಮ ತೋಳಿಲೇ ಹುಟ್ಟಿದವ. ಇಷ್ಟು ದಿನ ಅಕ್ಕ ಬಾವನ ಕೈಲಿ ಬೋಳಿಸಿಕೊಂಡದ್ದಾತು ಈಗ ನೀ ಡಾಂಬರ ಹಚ್ಚವ್ನಾ..? ಕಳ್ಳತನ ಮಾಡಿ ಮರ್ಯಾದಿ ತೆಗಿತ್ಯಾ? ಮಾಡ್ತ್ಯಾ ಇನ್ನು… ಮಾಡ್ತ್ಯಾ..?” ಎನ್ನುತ್ತಾ ಬೆನ್ನು ಕೈ ಕಾಲಮೇಲೆ ರಪರಪನೇ ಹೊಡೆದ. ಒಂದೊಂದು ಹೊಡೆತಕ್ಕೂ ಚರ್ಮಕಿತ್ತು `ಚುರ್..’ ಎನ್ನುತ್ತಿತ್ತು. ಕೊನೆಗೆ ನಾನು ತಡೆಯಲಾಗದೇ ಸಾಧ್ಯವಾದಷ್ಟೂ ದೊಡ್ಡ ಬಾಯ್ತೆಗೆದು “ಅಪಾ… ತಪ್ಪಾತೋ, ದಮ್ಮಯ್ಯಾ.. ಹೊಡಿಯಡ್ದೊ..” ಎನ್ನುತ್ತಾ ಗಟ್ಟಿಯಾಗಿ ಅಪ್ಪನ ಕಾಲು ಹಿಡಿದುಕೊಂಡೆ. ಅಪ್ಪನ ಕಾಲಿನ ರೋಮ ನನ್ನ ಬಾಯಲ್ಲಿತ್ತು. ನನ್ನ ಬಾಯಿಯ ಜೊಲ್ಲು ಅಪ್ಪನ ಕಾಲಮೇಲೆ ಬೀಳುತ್ತಿತ್ತು.
ಮೂರು ತುಂಡಾದ ಬೆಲ್ಟಿನ ಚೂರನ್ನು ಒಗೆದ ಅಪ್ಪ ನನ್ನ ಕಿವಿ ಹಿಡಿದು ನನ್ನನ್ನು ಮೇಲೆತ್ತಿ, “ಈ ಕೇಪಿನ ಡಬ್ಬಾನ ಈಗೇ ಪರತ್ ಅತ್ತೆಮನೆಗೆ ಕೊಟ್ಟಿಕ್, ಅವ್ರ ಹತ್ರ ತಪ್ಪಾತು ಹೇಳಿಕ್ ಬಾ ಹೋಗು” ಎಂದು ಕೇಪಿನ ಡಬ್ಬವನ್ನು ನನ್ನ ಕೈಲಿಟ್ಟ. ನಾನು ಅಳುತ್ತಲೇ ಗಿಳಿಗುಟ್ಟಕ್ಕೆ ಇದ್ದ ಅಂಗಿ ಹಾಕಿಕೊಂಡು ಬಾಗಿಲಬಳಿ ಬಂದು ತಿರುಗಿ ನೋಡಿದೆ. ನನ್ನನ್ನೇ ನೋಡುತ್ತಿದ್ದ ಅಪ್ಪ “ಹೋಗ್ತ್ಯಾ ಅಥವಾ…” ಎಂದು ಅತ್ತಿತ್ತ ತಿರುಗಿದಾಗ “ಹೋದ್ನೋ..” ಎಂದವನೇ ಬಾಗಿಲದಾಟಿ ದುಡುದುಡುನೇ ಬಂದಿದ್ದೆ. ಮೊನ್ನೆ ಶಾಲೆಲೇ ಬಿಟ್ಟಿಕ್ ಬಂದಿದ್ದರಿಂದ ಕಾಲಿಗೆ ಚಪ್ಪಲಿಯೂ ಇರಲಿಲ್ಲ.
ಅಳುತ್ತಾ ಯೋಚಿಸುತ್ತಾ ರಸ್ತೆಬದಿಗೆ ನಿಂತವನಿಗೆ `ಟ್ರಿಣ್..ಟ್ರಿಣ್..’ ಎಂಬ ಯಾರದೋ ಸೈಕಲ್ ಬೆಲ್ ಕೇಳಿ ಎಚ್ಚರಾದಂತಾಗಿ ಅತ್ತೆಮನೆ ಕಡೆಗೆ ಓಡಿದೆ.
ಮಳೆಗಾಲವಾದ್ದರಿಂದ ಅಂಗಳದಲ್ಲಿ ಜಾರಿಕೆಯಾಗಿತ್ತು. ಎಚ್ಚರಿಕೆಯಿಂದ ನಡೆದು, ಬಾಗಿಲ ಮುಂದೆ ನಿಂತು, ಅತ್ತಿದ್ದ ಕಣ್ಣುಗಳನ್ನೆಲ್ಲ ಚೊಕ್ಕವಾಗಿ ಒರೆಸಿಕೊಂಡು “ಅತ್ತೆ..” ಎಂದು ಕರೆದೆ. ಎಷ್ಟೇ ತಡೆ ಹಿಡಿದಿದ್ದರೂ ಧ್ವನಿ ನಡುಗಿತು. ಬಾಗಿಲ ತೆಗೆದ ಅತ್ತೆ ಒಳಗೆ ಕರೆದು ಒಂದುಸಲ ನನ್ನ ಮೆಲಿಂದ ಕೆಳಗಿನವರೆಗೆ ನೋಡಿದವಳೇ “ಅಪ್ಪ ಹೊಡೆದ್ನಾ..?” ಕೇಳಿದಳು. ಮಾತಾಡಿದರೆ ಎಲ್ಲಿ ಅಳು ಬಂದು ಬಿಡುತ್ತದೇನೋ ಎಂದು `ಹೌದು’ ಎಂಬಂತೆ ತಲೆ ಅಲ್ಲಾಡಿಸಿ ಕೇಪಿನಡಬ್ಬ ಕೊಟ್ಟೆ. ಅದನ್ನು ತೆಗೆದುಕೊಳ್ಳದ ಅತ್ತೆ “ಓ.. ಅದಾ.. ನೀನೇ ಇಟ್ಕಾ ಮರೀ.. ಅಪ್ಪ ಗನಾಕೇ ಹೊಡೆದ್ನಾ? ಉರಿ ಆವ್ತೇನೋ..?” ಕೇಳಿದಳು. ಅಷ್ಟೊತ್ತಿಗೇ ಹೊರಬಂದ ಅತ್ತೆಯ ಮಗ ಗಜುಬಾವ ನನ್ನ ನೋಡಿ “ಅಪ್ಪನ ಹತ್ರ ಹೊಡ್ತ ತಿಂದ್ಯಾ..? ಸರೀ ಆತು.. ಮತ್ತೆ ಸಿಕ್ಕಿದ್ದೆಲ್ಲಾ ಕದ್ಕಂಡು ಹೋಪು ಕಳ್ಳಂಗೋಕೆ ಹೀಂಗೇ ಅಪ್ಪುದು.” ಎಂದ. ನನಗೀಗ ಬಂದ ಅಳುವನ್ನು ತಡೆಯಲಾಗದೇ “ತಪ್ಪಾತು” ಎಂದು ಅಳುತ್ತಲೇ ಹೇಳಿ ಕೇಪಿನ ಡಬ್ಬ ಕೈಯಲ್ಲೇ ಹಿಡಿದುಕೊಂಡೇ ಹೊರಗೋಡಿದೆ. ಎರಡು ಹೆಜ್ಜೆ ಹಾಕುವಷ್ಟರಲ್ಲೇ ಕಾಲುಜಾರಿ ಬಿದ್ದವ ಮತ್ತೆ ಮೂರು ಮಾರು ದೂರ ಜಾರಿಕೊಂಡೇಹೋದೆ. ಹಿಂದಿನಿಂದ ಬಾವ ನಗುತ್ತಿದ್ದದ್ದು ಮತ್ತು ಅತ್ತೆ “ಜಾರಿಕೆ ಇದ್ದು ಸಾವಕಾಶ ಹೋಗೋ..” ಎನ್ನುತ್ತಿದ್ದದ್ದು ಕೇಳುತ್ತಿದ್ದರೂ ತಿರುಗಿ ನೋಡದೇ ಎದ್ದು ಬಂದುಬಿಟ್ಟೆ. ಚಡ್ಡಿ, ಮೊಣಕಾಲು, ಕೈ ಹಸ್ತ ತೊಳೆದುಕೊಂಡೆ.
“ಆ ಅತ್ತೆಯಾದರೂ ಎಂಥವಳು? ಅಪ್ಪನ ಹತ್ರ ಚಾಡಿ ಹೇಳಿ ಹೊಡೆಸಿದ್ದು ಅವಳೇ, ಈಗ ನೋಡಿದರೆ ಎಷ್ಟು ಚೆನ್ನಾಗಿ ಮಾತಾಡಿಸ್ತು. ಎಲ್ಲಾ ನಾಟಕಾ. ಆ ಗಜುಬಾವನಂತೂ ಕತ್ತೆಗೊಡ್ಡು! ಹೊಡ್ತ ಬಿದ್ದದ್ದು ಸರೀ ಆತು ಹೇಳ್ತ” ನಾನು ಬಿದ್ದಾಗ ಅವ ಹಲ್ಲು ಕಿಸಿದು ನಕ್ಕಿದ್ದು ನೆನಪಾಗಿ ಪರತ್ ಹೋಗಿ ಅವನ ಮುಖದ ಬಳಿ ಹೂಸು ಬಿಟ್ಟಿಕ್ಕಿ ಬರಬೇಕು ಅನ್ನುವಷ್ಟು ಸಿಟ್ಟುಬಂತು.
“ಎಷ್ಟಾದರೂ ಅವ್ರೆಲ್ಲಾ ಮೋಸಗಾರಂಗಳೇಯಾ. ಅತ್ತೆ ಮಾವ ಎಲ್ಲವು ಅಪ್ಪಂಗೆ ಮೋಸ ಮಾಡ್ದವೇಯಾ. ಅಮ್ಮ ಯಾವಗ್ಲೂ ಹೇಳ್ತಾ ಇರ್ತು ಅಪ್ಪಂಗೆ `ನಿಂಗಳ ಅಕ್ಕ ಬಾವನೇ ನಮ್ಮ ಪರಿಹಾರದ ಅಷ್ಟೂ ದುಡ್ಡೂ ನುಂಗಿಹಾಕಿ ನಮ್ಮ ಈ ಸ್ಥಿತಿಗೆ ತಂದಿದ್ದು’ ಅಂತ. ಅಪ್ಪಂಗೆ ಕೊಡಸಳ್ಳಿ ಡ್ಯಾಂ ಕಟ್ಟುವಾಗ ಬರಬಳ್ಳಿ ಜಮೀನು ಮುಳುಗಡೆ ಆವ್ತು ಹೇಳಿ ಮೂರು ಲಕ್ಷ ಪರಿಹಾರ ಕೊಟ್ಟಿದ್ವಡ ಕೆಪಿಸಿಯವರು. ಅಪ್ಪ ಅದು ಪೂರ್ತಿ ಮಾವಂಗೇ ತೆಂಗಿನ ಕಾಯಿ ವ್ಯಾಪಾರಕ್ಕೆ ಹೇಳಿ ಸಾಲಕ್ಕೆ ಕೊಟ್ಟಿದ್ನಡ. ಮಾವ ಅದಷ್ಟೂ ದುಡ್ಡು ನುಂಗಿದ್ನಡ.”
ಇಷ್ಟೆಲ್ಲಾ ವಿಷಯ ನನಗೆ ಅಪ್ಪನಾಗಲೀ, ಅಮ್ಮನಾಗಲೀ ನೇರವಾಗಿ ಹೇಳಿರದಿದ್ದರೂ ಕೂಡ ಆಗಾಗ ಸಂಜೆ ಅಪ್ಪ ತೋಟದಿಂದ ಕೆಲಸ ಮುಗಿಸಿ ಬಂದಾಗ ಅಮ್ಮ ಅಪ್ಪನ ಮಧ್ಯ ಆಗುವ ಜಗಳದಿಂದ ನಾನೇ ತಿಳಿದುಕೊಂಡಿದ್ದೆ.
ಆದರೆ ಮಾವ ಅಷ್ಟೆಲ್ಲಾ ದುಡ್ಡು ನುಂಗಿದ್ದರೂ ಅವನಿಗೆ ಹೊಟ್ಟೆನೋವು ಬರಲಿಲ್ಲ ಯಾಕೆ? ಎಂಬ ಪ್ರಶ್ನೆ ನನ್ನ ಬಹುವಾಗಿ ಕಾಡಿದ್ದರೂ ಅದನ್ನು ಅಪ್ಪ ಅಮ್ಮನ ಬಳಿ ಕೇಳಲು ಧೈರ್ಯವಾಗದೇ, ಮಾವನ ಹೊಟ್ಟೆ ಅಷ್ಟು ದೊಡ್ಡದಿರುವುದೇ ಕಾರಣ ಎಂಬ ಉತ್ತರವನ್ನೂ ನನ್ನಷ್ಟಕ್ಕೇ ಕಂಡುಕೊಂಡಿದ್ದೆ.
ಹಾಗೆಲ್ಲ ಕೇಳುವುದು ಹಾಗಿರಲಿ, ಜಗಳವಾಡುತ್ತಿದ್ದಾಗ ಅಮ್ಮನಿಗೆ ಅನ್ನ ಬಡಿಸು ಎಂದು ಕೇಳಲೂ ಹೆದರುತ್ತಿದ್ದೆ. ಯಾಕೆಂದರೆ ಕೆಲವುಸಲ ಅವರ ಜಗಳದ ಮಧ್ಯೆ ನಾನು ರಗಳೆ ಮಾಡಿದರೆ, ಅಪ್ಪ ಅಮ್ಮ ಇಬ್ಬರೂ ನನ್ನ ಮೇಲೆ ಎಗರಿ ಕೆಲವೊಮ್ಮೆ ಹೊಡೆತ ಬೀಳುವ ಪ್ರಸಂಗಗಳೂ ಇರುತ್ತಿದ್ದವು. ಅಪ್ಪ ಅಮ್ಮನ ಜಗಳ ಈಗ ಅಂತಲ್ಲಾ ಮೊದಲಿನಿಂದಲೂ, ಅಂದರೆ ನಾವು ಇಲ್ಲಿ ಮನೆ ಕಟ್ಟುವುದಕ್ಕಿಂತ ಮುಂಚೆ ಅತ್ತೆಮನೆಯಲ್ಲಿದ್ದಾಗಲೂ ನಡೆಯುತ್ತಿತ್ತು.
ಅಮ್ಮನಿಗೆ ಇಲ್ಲಿ ಬರಲು ಮನಸ್ಸಿರಲಿಲ್ಲ “ನಿಂಗ ಬೇಕಾದ್ರೆ ಅಲ್ಲೇ ಹೋಗಿ ಅರಮನೆ ಕಟ್ಟಿ, ನಾನಂತೂ ಬರಬಳ್ಳಿಯಲ್ಲೇ ಇಪ್ಪವ, ಮುಳುಗಡೆಯಾದ್ರೆ ಇಲ್ಲಿದ್ದ ಎಲ್ಲವ್ಕೂ ಆಗೋ ಹಂಗೇ ನಂಗೂ ಆವ್ತು” ಎಂದು ಪಟ್ಟುಹಿಡಿದು ಕುಂತಿದ್ದ ಅಮ್ಮನನ್ನು ಒಪ್ಪಿಸಿ ಕರೆತರುವಲ್ಲಿ ಅಪ್ಪನಿಗೆ ಸಾಕೋಸಾಕಾಗಿತ್ತು.
ನನಗಂತೂ ಹೊಸಮನೆಗೆ ಹೋಗುವುದು ಖುಷಿಯ ವಿಚಾರವೇ ಆಗಿತ್ತು. ಅಪ್ಪ ಅಮ್ಮ ಸ್ವಂತ ಮನೆ ಕಟ್ಟುವವರೆಗೆ ಅತ್ತೆಮನೆಯಲ್ಲೇ ಉಳಿಯುವುದೆಂದು ನಿರ್ಧರಿಸಿದ್ದರು.
ನನ್ನನ್ನು ಹೋದ ಮೊದಮೊದಲಿಗೆ ಚೆನ್ನಾಗೇ ನೋಡಿಕೊಳ್ಳುತ್ತಿದ್ದ ಅತ್ತೆ, ಒಂದುವಾರಕ್ಕೆಲ್ಲಾ ಪೂರ್ತಿಯಾಗಿ ಬದಲಾಯಿಸಿಬಿಟ್ಟಿದ್ದಳು. ಮೊದಲು “ಊಟಮಾಡುವಾಗ `ಕಚಾ ಕಚಾ’ ಸದ್ದುಮಾಡ್ತಾ ಉಣ್ತಾ. ಕೆಟ್ಟ ಹೇಸಿಗೆ” ಎಂದು ಶುರುಮಾಡಿದವಳು ಕಡೆಗೆ ಇಡೀದಿನ ಯಾವುದಾದರೊಂದು ಕಾರಣ ಹುಡುಕಿ ಬೈಯುವುದು, ಕಿವಿ ಹಿಂಡುವುದು, ತಲೆಮೇಲೆ `ಪಟ್’ನೇ ಹೊಡೆಯುವುದು ಮಾಡುತ್ತಿದ್ದಳು.
ಮಾವ ತೆಂಗಿನಕಾಯಿ ವ್ಯಾಪಾರಕ್ಕೆಂದು ಬಹುದಿನ ಮನೆಯಿಂದ ಹೊರಗಡೆಯೇ ಇರುತ್ತಿದ್ದ. ಗಜುಬಾವ ಬಿಕಾಂ ಮಾಡಲು ಧಾರವಾಡದಲ್ಲಿದ್ದ. ಅತ್ತೆಗೆ ಆಗಾಗ ದಮ್ಮು ಹೆಚ್ಚಾಗುತ್ತಿತ್ತು. ಆದರೆ ದಮ್ಮು ಇಲ್ಲದಿದ್ದ ದಿನವೂ ತಲೆನೋವು, ಸೊಂಟನೋವು ಏನಾದರೊಂದು ನೆವ ಹೇಳಿ ಮಲಗಿಬಿಡುತ್ತಿದ್ದಳು. ಮನೆ ಮತ್ತು ಕೊಟ್ಟಿಗೆಯ ದನದ ಕೆಲಸವೆಲ್ಲ ಅಮ್ಮನೇ ಮಾಡಬೇಕಾಗುತ್ತಿತ್ತು. ಹಾಗೇ ಮಲಗಿರುತ್ತಿದ್ದ ಅತ್ತೆ, ಮಾವ ಮಧ್ಯಾಹ್ನ ಮಾವ ಊಟಕ್ಕೆ ಬರುವ ವೇಳೆ ಎದ್ದು ತಾನೇ ಬಾಳೆ ಹಾಕಿ ಬಡಿಸಿ, “ಉಸ್..! ಈ ಅಡಿಗೆ ಮಾಡಿ ಮುಗ್ಸುವರೆಗೆ ಸಾಕಾಗಿ ಹೋಗ್ತು” ಎನ್ನುತ್ತಿದ್ದಳು.
ಅತ್ತೆಯ ಈ ನಾಟಕ ನನಗೆ ಮೊದಲು ಗೊತ್ತಿರಲಿಲ್ಲ. ಆದರೆ ಒಂದು ರಾತ್ರೆ ಅಮ್ಮ ಮಲಗುವ ಮುನ್ನ ನನ್ನ ಕೂಡಿಸಿಕೊಂಡು “ನೋಡೋ ಪುಟ್ಟು, ನಿನ್ನ ಅತ್ತೆ ನಾಟಕಾನ… ನಿಂಗಿದೆಲ್ಲ ಅರ್ಥವಾಗೋ ವಯಸ್ಸಲ್ಲ, ಆದ್ರೂ ನಿನ್ನತ್ರಲ್ಲದ್ದೇ ಮತ್ಯಾರತ್ರ ಹೇಳಲಿ? ಅವ್ಕಂತೂ ಎಷ್ಟು ಬಡ್ಕಂಡ್ರೂ ಅಷ್ಟೇಯಾ. ಇನ್ನೂ ಎಷ್ಟು ಕರ್ಮ ತೊಳೆಯೂದು ಇದ್ದನ” ಎಂದು ಕಣ್ಣೊರೆಸಿಕೊಂಡಳು.
ಅಪ್ಪ ಇಡೀ ದಿನ ಅತ್ತೆಮನೆ ತೋಟದಲ್ಲಿ ಜಿಗ್ಗು ಸವರುವುದೂ, ತೆಂಗು-ಅಡಿಕೆ ಸಸಿ ನೆಡುವುದು, ನೀರು ಬಿಡುವುದು ಹೀಗೆ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದ.
ಅಪ್ಪ ಯಾವತ್ತಾದರೂ ಯಲ್ಲಾಪುರಕ್ಕೆ ಹೋಗಬೇಕಾದರೂ, ಅಥವಾ ನಂಗೆ ಶಾಲೆಗೆ ಹೆಸರು ಹಚ್ಚುವುದು, ಪಾಟಿಚೀಲ ಪಾಟಿ ತೆಗೆಸಿಕೊಡುವಾಗಲೂ ಮಾವನ ಬಳಿ ದುಡ್ಡು ಕೇಳುತ್ತಿದ್ದ. ನಾನೊಂದು ದಿನ ಅಮ್ಮನ ಬಳಿ “ಅಮ್ಮ ಅಪ್ಪ ಎಂತಕ್ಕೆ ಮಾವ ಹತ್ರಾನೇ ದುಡ್ಡು ಕೇಳ್ತ? ಅಪ್ಪನ ಬಳಿ ದುಡ್ಡಿಲ್ಯಾ?” ಕೇಳಿದ್ದಕ್ಕೆ ಅಮ್ಮ “ಇದ್ದ ಬಿದ್ದದ್ದೆಲ್ಲ ಉದ್ದಾರ ಮಾಡ್ಲೆ ಬಾವಂಗೇ ಕೊಟ್ಟಿಟ್ಟಿದ್ವಲ, ಈಗ ಅವ್ರ ಮುಂದೆ ಬಾಲ ಅಲ್ಲಡಿಸ್ತಾ ನಿಂತ್ಕಂಬೂದೇಯಾ” ಎಂದು ಧಡಕ್ಕನೇ ಎದ್ದು ಹೋಗಿದ್ದಳು.
ಹೀಗೇ ನಾನೊಂದಿನ ಅಪ್ಪನ ಬಳಿ “ಅಪ್ಪಾ ನಮ್ಮ ಶಾಲೆಯಲ್ಲಿ ಎಲ್ಲವರ ಬಳಿಯೂ ಕಂಪಾಸ್ ಪೆಟ್ಟಿಗೆ ಇದ್ದು, ನಂಗೂ ಬೇಕಾಗಿತ್ತು” ಎಂದಿದ್ದೆ.
ಮರುದಿನ ಮಧ್ಯಾನ್ನ ಊಟವಾದ ಮೇಲೆ ಮಾವ ಜಗುಲಿಯ ಆರಾಂ ಕೂರ್ಚಿಯಲ್ಲಿ ಕೂತಿದ್ದಾಗ, ಅಪ್ಪ ಮೆಲ್ಲನೇ ಅವನ ಎದುರಿಗೆ ನಿಂತು ಸಣ್ಣ ದನಿಯಲ್ಲಿ “ಬಾವಾ ಪುಟ್ಟೂಗೆ ಕಂಪಾಸ್ ಪೆಟ್ಟಿಗೆ ಬೇಕಡಾ.. ಅದ್ಕೆ ಒಂದೈವತ್ತು ರೂಪಾಯಿ ಬೇಕಾಗಿತ್ತು” ಎಂದಿದ್ದ. ಅದನ್ನು ಹೆಬ್ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದ ನನಗೆ ಆಶ್ಚರ್ಯವಾಗಿತ್ತು. ನನ್ನೆದುರು, ಅಮ್ಮನೆದುರು ಎಷ್ಟೆಲ್ಲಾ ಜೋರು ಇರುವ ಅಪ್ಪ ಮಾವನೆದುರಿಗೆ ಯಾಕೆ ಇಷ್ಟು ಥಂಡಾ ಎಂದುಕೊಳ್ಳೂತ್ತಿರುವಾಗಲೇ ಮಾವ ತನ್ನ ಗುಡಾಣದಂತಾ ಹೊಟ್ಟೆಯನ್ನು ಸವರಿಕೊಳ್ಳೂತ್ತಾ ` ಒ.. ಡರ‍್ರ್..’ ಎಂದು ದೊಡ್ಡದಾಗಿ ತೇಗಿ “ಆ ಮಕ್ಕ ಹೇಳ್ತ, ಹೇಳಿದ್ದೆಲ್ಲ ತೆಗೆಸಿಕೊಡ್ತಾ ಇಪ್ಲಾಗ್ತನ ಮಾರಾಯಾ? ಈಗಿನ್ನೂ ಒಂದುನೆತ್ತೆ, ಈಗೇ ಎಂತಕ್ಕೆ ಕಂಪಾಸು-ಗಿಂಪಾಸು ಎಲ್ಲಾವ?” ಎಂದು ಕೂರ್ಚಿಯಲ್ಲೇ ಒಂದು ಬದಿ ಕುಂಡೆಯೆತ್ತಿ, ಆಗ ತೇಗಿದ್ದಕ್ಕಿಂತ ದೊಡ್ಡದಾಗಿ ದೀರ್ಘವಾಗಿ `ರ‍್ರ್.. ಪರ್‌ರ್… ಬ್ರೋಂಕ್..’ ಎಂದು ಹೊರಕೆ ಬಿಟ್ಟು ಎದ್ದವನೇ ಗಿಳಿಗುಟ್ಟಕ್ಕೆ ನೇತಾಕ್ಕಿದ್ದ ಅಂಗಿ ಕಿಸೆಯಿಂದ ಎಷ್ಟೋ ದುಡ್ಡು ತೆಗೆದು ಅಪ್ಪನ ಕೈಗೆ ಕೊಟ್ಟು ತನ್ನ ಕೋಣೆಗೆ ಹೊರಟು ಹೋದ. ಆಗಲೇ ಅಡಿಗೆಕೋಣೆಯಲ್ಲಿ, ಉಂಡಜಾಗ ವರೆಸುತ್ತಿದ್ದ ಅಮ್ಮ “ನಮ್ದೇ ದುಡ್ಡು ಆದ್ರೂ ನಮ್ಗೆ ಕೊಡುದಾದ್ರೆ ಬೇಡುವರಿಗೆ ಕೊಟ್ಟಂಗೆ ಮಾಡ್ತ” ಎಂದು ಗೊಣಗಿದ್ದು ಹೆಬ್ಬಾಗಿಲ ಬಳಿ ಇದ್ದ ನನಗೆ ಕೇಳಿಸಿ ಜಗುಲಿಗೆ ಮುಟ್ಟದಿದ್ದರೂ, ನೀರಿನ ಚೊಂಬನ್ನು ನೆಲಕ್ಕೆ ಕುಕ್ಕಿದ ದನಿಯಂತೂ ಮುಟ್ಟೇ ಮುಟ್ಟಿತ್ತು.
ಆಗಲೇ ಇಂದು ರಾತ್ರಿ ಮಲಗುವಾಗ ಅಪ್ಪ ಅಮ್ಮ ಜಗಳ ಹೊಡೆಯುವುದು ಗ್ಯಾರಂಟಿಯೆಂದು ಹೊಳೆದದ್ದೇ, ಊಟವಾದಮೇಲೆ ಬೇಗ ಹೋಗಿ ನಿದ್ರೆ ಮಾಡಬೇಕು ಅಮ್ಮ ಬರುವ ಮೊದಲೇ ಎಂದು ನಿರ್ಧರಿಸಿದೆ.
ಅಪ್ಪ ಅಮ್ಮ ಎಷ್ಟು ಸಿಟ್ಟು ಬಂದರೂ ಜಗಳ ಮಾಡುವುದು ರಾತ್ರಿ ಮಲಗುವಾಗಲೇ. ಅದೂ ಅತ್ತೆ ಮಾವ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಮೇಲೆಯೇ. ಅಮ್ಮ ಯಾವುದಾದರೊಂದು ವಿಷಯ ತೆಗೆದು ಜಗಳ ಶುರುಮಾಡಿ ಕೊನೆಯಲ್ಲಿ “ನಿಂಗೋಕೆ ಜುಟ್ಟು ಹಿಡಿದು ಅಲ್ಲಡಿಸುವ ಹೆಣ್ತಿ ಇದ್ದಿದ್ದೇ ಆಗ ಬುದ್ದಿ ಬತ್ತಿಪ್ಪು. ನಾನೊಬ್ಬ ಸಾಚಾ ಸಿಕ್ಕಿದ್ದೆ ಹೇಳಿ ಹುರಿದು ಮುಕ್ಕಿ” ಎಂದು ತಿರುಗಿ ಮಲಗುತ್ತಿದ್ದಳು. ಆಗೆಲ್ಲ ಕೆಲವೊಮ್ಮೆ ನಾನು ಹಾಸಿಗೆಯಲ್ಲಿ ಸುಮ್ಮನೇ ಕುಳಿತು ನೋಡುತ್ತಿದ್ದರೆ, ಮತ್ತೆ ಕೆಲವು ಸಲ ನಿದ್ರೆ ಬಂದವನಂತೆ ಗಟ್ಟಿಯಾಗಿ ಕಣ್ಣುಮುಚ್ಚಿ ಮಲಗಿಬಿಡುತ್ತಿದ್ದೆ.
ಸಾಮಾನ್ಯವಾಗಿ ದಿನವೂ ರಾತ್ರಿ ಊಟವಾದಮೇಲೆ, ಮೊದಲಿಗೆ ಅಮ್ಮ ಬಂದು ಮೂವರಿಗೂ ಸೇರಿಸಿ ಕಂಬಳಿ ಹಾಸಿ ಅದರ ಮೇಲೆ ಅವಳ ಹಳೆ ಹಸಿರು ಸೀರೆ ಹಾಸಿ ಒಂದೇ ಹಾಸಿಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಅಪ್ಪನೂ ಬಂದಿರುತ್ತಿದ್ದ. ಅಮ್ಮ ದಿನವೂ ಮಲಗುವ ಮುಂಚೆ ಪಲಕವನ್ನು ತೆಗೆದು ಹಾಸಿಗೆ ತಲೆದಿಂಬಿನಡಿ ಇಟ್ಟು, ಎದೆಗೆ ಸೆರಗು ಹೊದ್ದು ಮಲಗುತ್ತಿದ್ದಳು. ನಾನು ಅಪ್ಪ ಅಮ್ಮನ ಮಧ್ಯದಲ್ಲೇ ಮಲಗುತ್ತೇನೆಂದು ಹಠ ಮಾಡಿದರೂ, ಅಪ್ಪ ಅಮ್ಮ ಇಬ್ಬರೂ ಇದಕ್ಕೆ ಒಪ್ಪದೇ “ಗಂಡ ಹೆಂಡತಿ ಮಧ್ಯ ಮಲಗಿದವರು ಮುಂದಿನ ಜನ್ಮದಲ್ಲಿ ಹುಳಿಮಾವಿನಮರವಾಗಿಯೋ, ಕರಿಕುನ್ನಿಯಾಗೋ ಹುಟ್ಟುತ್ವಡ” ಎಂದು ಹೆದರಿಸಿ ಪಕ್ಕದಲ್ಲಿ ಮಲಗಿಸುತ್ತಿದ್ದರು. ಒಂದೊಂದು ಸಲ ಅಪ್ಪ ಅಮ್ಮನ ಮಧ್ಯ ತುಂಬಾ ಜಗಳವಾದ ದಿನ ಮಾತ್ರ ಅಮ್ಮ ಪಲಕ ಹಾಕಿಕೊಂಡೇ ಮಲಗುತ್ತಿದ್ದಳು. ನಾನು ಬದಿಗೇ ಮಲಗಲು ಹೋದರೂ ಜಗ್ಗಿ “ಇಲ್ಲೇ ಬಿದ್ಕಾ” ಎಂದು ಮಧ್ಯದಲ್ಲಿ ಮಲಗಿಸಿಕೊಳ್ಳುತ್ತಿದ್ದಳು. ಅಪ್ಪ ಸುಮ್ಮನೇ `ಹೂಂ’ ಎಂದು ದೊಡ್ಡ ನಿಟ್ಟುಸಿರು ತೆಗೆದು “ರಾಮಾ.. ಶಿವಾ.. ಗೋವಿಂದಾ..” ಎನ್ನುತ್ತಾ ಮಲಗುತ್ತಿದ್ದ.
“ಈ ಕೇಪಿನ ಡಬ್ಬಾನ ಈಗೇ ಪರತ್ ಅತ್ತೆಮನೆಗೆ ಕೊಟ್ಟಿಕ್, ಅವ್ರ ಹತ್ರ ತಪ್ಪಾತು ಹೇಳಿಕ್ ಬಾ ಹೋಗು” ಎಂದು ಕೇಪಿನ ಡಬ್ಬವನ್ನು ನನ್ನ ಕೈಲಿಟ್ಟ. ನಾನು ಅಳುತ್ತಲೇ ಗಿಳಿಗುಟ್ಟಕ್ಕೆ ಇದ್ದ ಅಂಗಿ ಹಾಕಿಕೊಂಡು ಬಾಗಿಲಬಳಿ ಬಂದು ತಿರುಗಿ ನೋಡಿದೆ. ನನ್ನನ್ನೇ ನೋಡುತ್ತಿದ್ದ ಅಪ್ಪ “ಹೋಗ್ತ್ಯಾ ಅಥವಾ…” ಎಂದು ಅತ್ತಿತ್ತ ತಿರುಗಿದಾಗ “ಹೋದ್ನೋ..” ಎಂದವನೇ ಬಾಗಿಲದಾಟಿ ದುಡುದುಡುನೇ ಬಂದಿದ್ದೆ.
ಸಮಯ ಸಿಕ್ಕಾಗಲೆಲ್ಲಾ ಅಮ್ಮ ನನ್ನ ಕೂರಿಸಿಕೊಂಡು ಅತ್ತೆಮಾವ ನಮಗೆ ಮಾಡಿದ ಮೋಸದ ಬಗ್ಗೆ ವಿವರಿಸಿ, ಕೊನೆಗೆ “ನೀನಾದ್ರೂ ಚೋಲೋ ಕಲ್ಕಂಡು, ನೌಕರಿ ಮಾಡಿ ಎನಗೆ ಅನ್ನ ಹಾಕು ಬಿಲ್ಯ” ಎನ್ನುತ್ತಿದ್ದಳು. ಇದು ಅಪ್ಪನಿಗೆಲ್ಲಾದರೂ ಕಂಡರೆ “ಆ ಸಣ್ಣ ಪೋರಂಗೆಲ್ಲ ಈಗ್ಲೇ ಇಲ್ಲದ್ದೊದ್ದ್ ತುಂಬಿ ಇಡಡಾ ಮಾರಾಯ್ತಿ” ಎಂದು ಸಿಡುಕಿದರೆ, ಅಮ್ಮ “ನಿಮ್ಮ ಕೈಲಂತೂ ನಂಗೆ ಕೂರಿಸಿ ಅನ್ನ ಹಾಕ್ಲೆ ಆಯ್ದ್ಲೆ, ಅವನಾದ್ರೂ ಹಾಕ್ಲಿ, ನಿಂಗ ಅದ್ಕೂ ಕಲ್ಲು ಹಾಕಡಿ” ಎನ್ನುತ್ತಿದ್ದಳು.
ಅಪ್ಪ, ಅತ್ತೆ ಮಾವ ಮನೆಯಲ್ಲಿದಿದ್ದಾಗ ಸುಮ್ಮನೇ ಇರುತ್ತಿದ್ದರೂ ಕೂಡ, ಅವರಿಲ್ಲದಿದ್ದಾಗ ಜೋರು ಜೋರಾಗುತ್ತಿದ್ದ. ಮನೆಯ ಜಗುಲಿಯ ಒಂದು ಬದಿಗೆ ಮಾವ ಮಾತ್ರ ಕುಳಿತುಕೊಳ್ಳುವ ಕೂರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತು ದೊಡ್ಡಕ್ಕೆ ಅಮ್ಮನಿಗೆ “ಏ.. ಒಂದು ಲೋಟ ಚಾ ತಕಂಬಾರೇ..” ಎನ್ನುತ್ತಿದ್ದ. ಮತ್ತೆ ಏಳುವಾಗ ಕೂರ್ಚಿಯನ್ನು ಹೆಗಲ ಟವೆಲಿನಲ್ಲಿ ಬಡಿದು ವರಿಸುವುದನ್ನು ಮರೆಯುತ್ತಿರಲಿಲ್ಲ.
ನಂತರ ನಾವು ನಮ್ಮದೇ ಜಮೀನಿನಲ್ಲಿಯೇ ಮನೆಕಟ್ಟಿಕೊಂಡು ಇಲ್ಲಿಯೇ ಬಂದು ಉಳಿಯತೊಡಗಿದ ಮೇಲೂ ಅಪ್ಪ ಅಮ್ಮನ ಜಗಳ ನಿಂತಿರಲಿಲ್ಲ. ಈಗ ರಾತ್ರಿಯಷ್ಟೇ ಅಲ್ಲದೇ ಹಗಲು ಹೊತ್ತಿನಲ್ಲೂ ನಡೆಯುತ್ತಿತ್ತು. ಅತ್ತೆ ಮಾವ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳುವುದನ್ನು ಕಾಯಬೇಕಾದ ಅವಶ್ಯಕತೆ ಇರಲಿಲ್ಲವಲ್ಲ.
ಅಮ್ಮನಿಗೆ ನಾನು, ಅತ್ತೆ ಮಾವನ ಬಗ್ಗೆ ಜೋಕು ಮಾಡಿದರೆ ಖುಷಿಯಾಗುತ್ತಿತ್ತು. ನಾನು ಏನಾದರೂ ಕೇಳಬೇಕಾಗಾದಾಗ ಅಮ್ಮನ ಖುಷಿಪಡಿಸಲು, ಮಾವನ ದಪ್ಪ ಕನ್ನಡಕ, ಡೊಳ್ಳು ಹೊಟ್ಟೆ, ತೇಗುವ, ಹೊರಕೆ ಬಿಡುವ ರೀತಿ, ಅತ್ತೆಯ ದಮ್ಮಿನ ಬಗ್ಗೆ ಜೋಕು ಮಾಡಿದರೆ ಅಮ್ಮ ಜೋರಾಗಿ ನಗುತ್ತಿದ್ದಳು. ಅಪ್ಪ ಮಾತ್ರ ನಗದೇ ಸಿಟ್ಟಿನಿಂದ ನನ್ನೇ ದುರುಗುಟ್ಟಿ ನೋಡುವಾಗ ನಾನು ಸುಮ್ಮನಾಗುತ್ತಿದ್ದೆ. ಅಪ್ಪನಿಗಿನ್ನೂ ಅತ್ತೆ ಮಾವನ ಮೇಲೆ ಪ್ರೀತಿ ಇದ್ದಂತಿತ್ತು.
ಆದರೆ ಆ ದಿನ ಅತ್ತೆ ಮನೆಗೆ ಹೋಗಿ ಬಂದ ಮೇಲೆ ಅಪ್ಪನೂ ಪೂರ್ತಿ ಬದಲಾಗಿದ್ದ. ಆ ದಿನ ಅಪ್ಪ ಅತ್ತೆ ಮನೆಗೆ ಹೋಗಿದ್ದು ಮಾವನಿಗೆ ಕೊಟ್ಟ ಸಾಲದ ಮೂರು ಲಕ್ಷ ರೂಪಾಯಿ ಲೆಕ್ಕ ಕೇಳಿ ಉಳಿದ ಹಣವನ್ನು ತರಲಿಕ್ಕೆ.
ಆವತ್ತು ಅಪ್ಪ ಮನೆಗೆ ಬಂದಾಗ ಕತ್ತಲಾಗಿತ್ತು. ಬಂದವನೇ ಜಗುಲಿ ಮಂಚದ ಮೇಲೆ ಮಲಗಿಬಿಟ್ಟಿದ್ದ. ಅಪ್ಪನನ್ನು ಮಾತಾಡಿಸುವ ಧೈರ್ಯ ನನಗೂ ಆಗಲಿಲ್ಲ. ಸಾಮಾನ್ಯವಾಗಿ ಹೊರಗೆ ಹೋಗಿ ಬಂದ ಕೂಡಲೇ ಸುದ್ದಿ ಕೇಳಲು ಕೂಡುತ್ತಿದ್ದ ಅಮ್ಮನೂ ಸುಮ್ಮನಿದ್ದಳು.
ಸ್ವಲ್ಪ ಹೊತ್ತಿನ ನಂತರ ಅಪ್ಪ, ಒಳಗೆ ಸುಮ್ಮನೇ ಕೂತಿದ್ದ ನನ್ನ “ಪುಟ್ಟು ಬಾ ಇಲ್ಲಿ” ಎಂದು ಹತ್ತಿರಕ್ಕೆ ಕರೆದ. ಎದುರಿಗೆ ಬಂದು ನಿಂತ ನನಗೆ “ಪುಟ್ಟು ನೀನು ಕಲ್ತು ಚೊಲೋ ನೌಕರಿ ಹಿಡಿ. ನಾವು ಈ ತೋಟ, ಮನೆ ಎಲ್ಲಾ ಮಾರಿ ಕೊಟ್ಟಿಕ್ಕಿ ದೂರ ಪ್ಯಾಟೇಲಿ ಎಲ್ಲಾದ್ರೂ ಮನೆ ಮಾಡ್ಕಂಡು ವಳಿವ ಅಡ್ಡಿಲ್ಯಾ?” ಎಂದವನ ದನಿ ನಡುಗುತ್ತಿತ್ತು. ಎದುರಿಗೆ ಸ್ಟೂಲಿನ ಮೇಲಿದ್ದ ಚಿಮಣಿ ದೀಪದ ಬೆಳಕಿನಲ್ಲಿ ಕಣ್ಣಂಚು ಹೊಳೆಯುತ್ತಿತ್ತು.
ಅಪ್ಪನನ್ನು ಇಂಥ ಪರಿಸ್ಥಿತಿಯಲ್ಲಿ ನೋಡೇ ಇರದಿದ್ದ ನನಗೆ ದುಃಖಕ್ಕಿಂತ ಹೆಚ್ಚಾಗಿ ಹೆದರಿಕೆಯಾಗಿ ಬಾಗಿಲಲ್ಲಿ ಬಂದು ನಿಂತಿದ್ದ ಅಮ್ಮನ ಸೊಂಟವನ್ನು ಓಡಿಹೋಗಿ ತಬ್ಬಿಕೊಂಡು ಅಳತೊಡಗಿದೆ. ನನ್ನ ಮುಖವನ್ನು ಹೊಟ್ಟೆಗೆ ಒತ್ತಿಕೊಂಡ ಅಮ್ಮನ ಅಪ್ಪುಗೆ ಎಂದಿಗಿಂತ ಬಿಗಿಯಾಗಿತ್ತು. ಬಿಸಿಯಾಗಿತ್ತು.
ಅವತ್ತು ರಾತ್ರಿ ಅಪ್ಪನೇ ನನ್ನ ಕೈಹಿಡಿದು ಮಧ್ಯದಲ್ಲಿ ಮಲಗಿಸಿಕೊಂಡ. ಅವನ ಕೈಮೇಲೆ ತಲೆಯಿಟ್ಟು ಹೊಟ್ಟೆಮೇಲೆ ಕಾಲು ಹಾಕಿ ಬೇಗನೇ ನಿದ್ರೆ ಮಾಡಿದ್ದೆ.
ಮಧ್ಯರಾತ್ರಿ ಎಷ್ಟೊತ್ತಿಗೋ ಎಚ್ಚರಾದಾಗ ಪಕ್ಕದಲ್ಲಿ ಅಪ್ಪ ಇರಲಿಲ್ಲ. ಅಮ್ಮನೂ ಎದ್ದು ಚಿಮಣೀ ಹಚ್ಚಲು ಬೆಂಕಿಕಡ್ಡಿ ಗೀರುತ್ತಿದ್ದಳು. ನಾನು ನಿದ್ರಿಸಿದವನಂತೇ ಮಲಗೇ ಇದ್ದೆ.
ಅಪ್ಪ “ಬಾವ, ನಾ ಅವಂಗೆ ಕೊಟ್ಟ ದುಡ್ಡಿನ ಲೆಕ್ಕ ಕೊಟ್ಟ. ನನ್ನ ದುಡ್ಡು ಪೂರ್ತಿ ನನಗಾಗೇ ಖರ್ಚು ಮಾಡಿದ್ನಡ. ಎಲ್ಲಾ ಸುಳ್ಳು ಲೆಕ್ಕ ಕೊಟ್ಟು ಪಶಿ ಹಾಕ್ದ. ನಾನು ನಿನಗಿಂತ ಹೆಚ್ಚಾಗಿ ಅವ್ನ ನಂಬಿದ್ದೆ. ಅವ ಮಾತ್ರ ನನ್ನ ಕುತ್ತಿಗೇನೇ ಕೊಯ್ದ್ನಲೇ” ಎಂದ. ಅಮ್ಮ “ಹೋದ್ರೆ ಹೋಗ್ಲಿ, ನಮಗೆ ಈ ತೋಟ, ಮನೆ ಇದ್ದು. ಇದ್ರಲ್ಲೇ ದುಡಿವ. ದೇವ್ರು ನಮ್ಮ ಉಪವಾಸಂತೂ ಬೀಳಿಸ್ತ್ನಿಲ್ಲೆ ಹೇಳಿ ನಂಗೆ ನಂಬಿಕೆ ಇದ್ದು” ಅಂದಳು. ಅಪ್ಪ “ಅದಲ್ಲಾ, ದುಡ್ಡು ಹೋದ್ರೆ ಹೋತು, ಆದ್ರೆ ಆ ಬಾವನ ಮಾಣಿ ಗಜಾನನ ಇಂದು ನಂಗೆ ಹೊಡಿಲೇ ಎದ್ದಿದ್ದ ಮಾರಾಯ್ತಿ, ನಾನು ಅವ್ನ ಇಷ್ಟು ಸಣ್ಣವಿದ್ದಾಗಿಂದ ಹೇಲುಕುಂಡೆ ತೊಳೆಸಿ, ಉಚ್ಚೆ ವಸ್ತ್ರ ತೊಳೆದು, ಹೆಗಲಮೇಲೆ ಹೊತ್ಕಂಡ್ ತಿರ್ಗಿಸಿದ್ದೆ. ನಮ್ಮನೆ ಪುಟ್ಟುಗಿಂತ ಪ್ರೀತಿಂದ ನೋಡ್ಕಂಡಿದ್ದೆ ಅವ್ನ. ಈಗ ಯಾವ್ದೋ ಬಿಕಾಂ ಮುಗ್ಸಿಕ್ಕಿ ಬಂದಮೇಲೆ ನನ್ನ ಮೇಲೇ ಕೈ ಎತ್ತುವಷ್ಟು ದೊಡ್ಡವಾಗೋದ. ಆಗ್ಲೇ ನಾನು ಸಿಡಿಲು ಹೊಡೆದು ಸತ್ತೇ ಹೋಗಕಾಗಿತ್ತು ಅನ್ಸೋತು ಮಾರಾಯ್ತಿ… ನಾ ಸೋತೆ… ಸೊತೆ” ಎನ್ನುತ್ತಾ ಕೈಯಿಂದ ಮುಖ ಮುಚ್ಚಿಕೊಂಡ. ಅಮ್ಮ ಏನೂ ಮಾತಾಡದೇ ಅಪ್ಪನ ಕುತ್ತಿಗೆ ಬಳಸಿ ನಿಧಾನವಾಗಿ ಎದೆಗೊತ್ತಿಕೊಂಡಳು ನಿನ್ನೆ ರಾತ್ರಿ ನನ್ನ ಅಪ್ಪಿಕೊಂಡಂತೇ. ಅದನ್ನು ನೋಡಿ ನಾಚಿಕೆಯಾಗಿ ನಾನು ಬಂದು ಮಲಗಿಬಿಟ್ಟೆ.
ಅದಾದ ನಂತರವೂ ನಂಬಿಕೆ, ಸಂಬಂಧ, ಹಣ, ಪ್ರೀತಿ, ಮೋಸ ಹೀಗೇ ಅಪ್ಪ ಏನೇನೋ ಹೇಳುತ್ತಲೇ ಇದ್ದದ್ದು ಸ್ವಲ್ಪ ಸ್ವಲ್ಪ ಕೇಳುತ್ತಿದ್ದರೂ ಏನೂ ಅರ್ಥವಾಗುತ್ತಿರಲಿಲ್ಲ. ಒಟ್ಟಾರೆ ಗಜುಬಾವ ಅಪ್ಪನಿಗೆ ಹೊಡೆಯಲು ಬಂದಿದ್ದ ಎಂಬುದು ಮಾತ್ರ ಗೊತ್ತಾಗಿತ್ತು. ಅಪ್ಪನಿಗೆ ಗಜುಬಾವನಿಗಿಂತ ಹೆಚ್ಚು ಶಕ್ತಿ ಇದ್ದರೂ ಅಪ್ಪ ಯಾಕೆ ಅವನಿಗೆ ಹೊಡೆಯಲಿಲ್ಲ? ನಾನು ದೊಡ್ಡವನಾದ ಮೇಲೆ ಅತ್ತೆ ಮನೆಯವರನ್ನೆಲ್ಲ `ಡಿಶ್ಯುಂ ಡಿಶ್ಯುಂ’ ನೇ ಹೊಡೆಯಬೇಕು ಎಂದೆಲ್ಲಾ ಯೋಚಿಸುತ್ತಾ ನಿದ್ರೆ ಬಂದಿತ್ತು.
(ಪದ್ಮನಾಭ ಭಟ್, ಶೇವ್ಕಾರ)
ಆ ರಾತ್ರಿ ಕನಸಲ್ಲಿ ಅತ್ತೆ ಮಾವ ಗಜುಬಾವ ಎಲ್ಲರೂ ನಮ್ಮನೆ ಮುಂದೆ ನಿಂತು ಅಪ್ಪನಿಗೆ ಬಯ್ಯುತ್ತಿದ್ದರು. ತುಂಬಾ ದೊಡ್ಡವನೂ ಶಕ್ತಿಶಾಲಿಯೂ ಅಗಿದ್ದ ನಾನು ಹೊರಬಂದು ಮೊದಲು ಗಜುಬಾವನನ್ನೂ, ಕಡೆಗೆ ಮಾವನನ್ನೂ ಹೊಡೆದುಹಾಕಿ, ಅತ್ತೆಗೆ ಹೊಡೆಯುವಷ್ಟರಲ್ಲಿ ಎದ್ದುಬಂದ ಗಜುಬಾವ ಮನೆ ರೀಪಿನ ತುಂಡು ಮುರಿದು ಅಪ್ಪನ ತಲೆಗೆ ಹೊಡೆದಿದ್ದ. ಅದನ್ನು ಕಂಡು ಅಪ್ಪನ ಬಳಿಗೆ ಓಡಿಬರುವಷ್ಟರಲ್ಲಿ ನಾನು ಪಕ್ಕನೇ ಸಣ್ಣವನಾಗಿದ್ದೆ. ಅಪ್ಪ ತಲೆಹಿಡಿದುಕೊಂಡು ನೆಲಕ್ಕೆ ಬಿದ್ದಿದ್ದ. ರಕ್ತ ಸಿಡಿದಿತ್ತು. ಬೆಚ್ಚಿ ಎಚ್ಚರಾಗುವಷ್ಟರಲ್ಲಿ ಹಾಸಿಗೆಯಲ್ಲಿ ನಾನೊಬ್ಬನೇ ಇದ್ದೆ. ಬೆಳಕು ಹರಿದಿತ್ತು.
ಅವತ್ತಿಂದ ಅಪ್ಪನೂ ಅತ್ತೆಮಾವನ ಕುರಿತು ನನ್ನ ಜೋಕಿಗೆ ನಗಲು ಶುರುಮಾಡಿದ್ದ. ಅಮ್ಮ ಯಾವತ್ತಾದರೂ ಅವರ ಸುದ್ದಿ ತೆಗೆದರೂ ಸಿಡುಕುತ್ತಿದ್ದ. ಈಗ ನನಗೆ ಹೊಡೆತಬೀಳಲೂ ನಾನು ಕೇಪಿನ ಡಬ್ಬಿ ಕದ್ದದ್ದು ಅತ್ತೆ ಮನೆಯಿಂದ ಎಂಬುದೇ ಕಾರಣವಾಗಿರಬಹುದೆಂದು ನನ್ನ ಅನುಮಾನ.
ಯೋಚಿಸುತ್ತಾ ಯೊಚಿಸುತ್ತಾ ಗೊತ್ತಿಲ್ಲದೇ ಮನೆ ಗೇಟಿನ ಬುಡಕ್ಕೇ ಬಂದು ನಿಂತಿದ್ದೆ. ಅತ್ತೆ ಮನೆಯಲ್ಲಿ ಕೇಪಿನಡಬ್ಬ ತೆಗೆದುಕೊಂಡಿಲ್ಲ. ಅದು ಕೈಲೇ ಇತ್ತು. ಅದನ್ನು ಕಂಡ ಅಪ್ಪ ಮತ್ತೆ ಹೊಡೆದರೆ? ಭಯವಾಯ್ತು. ಅತ್ತಿತ್ತ ನೋಡಿ ಅಲ್ಲೇ ಪಕ್ಕದಲ್ಲೇ ಇದ್ದ ಬಿದಿರು ಹಿಂಡಿನಒಳಗೆ ಒಗೆದೆ. ಕೈಕಾಲೆಲ್ಲಾ ಒದ್ದೆ ರಾಡಿಯಾಗಿ, ಮೊಣಕಾಲಿನವರೆಗೂ ಕೆಸರು, ಕೊಳೆತ ಎಲೆ ತುಂಡುಗಳು ಅಂಟಿಕೊಂಡಿದ್ದವು. ಬೆರಳಸಂದಿಯಲ್ಲಿ ಜೀಕುತ್ತಿದ್ದ ಉಂಬಳಗಳನ್ನು ಕಿತ್ತೊಗೆದೆ.
ಮತ್ತೆ ಮಳೆ ಸಣ್ಣಗೇ ಜಿನುಗಲು ಶುರುವಾಯ್ತು. ಮಳೆಯಲ್ಲಿ ತೊಯ್ದರೆ ಅಪ್ಪ ಬೈಯುತ್ತಾನೆಂದು ಭಯದಿಂದಲೇ ಅಂಗಳಕ್ಕೆ ಕಾಲಿಟ್ಟೆ. ಮನೆಯೊಳಗೆ ಬಂದು ಜಗುಲಿ ಗಿಳಿಗುಟ್ಟಕ್ಕೆ ಅಂಗಿ ತೆಗೆದು ಸಿಕ್ಕಿಸಿದವನಿಗೆ ಒಳಗೆ ಗೋಡೆಗೆ ಬೆನ್ನು ಆತುಕೊಂಡು ತುದಿಕಾಲಲ್ಲಿ ಕುಳಿತು ನನ್ನೇ ನೋಡುತ್ತಿದ್ದ ಅಪ್ಪ ಕಂಡ. ಅಮ್ಮನೂ ನಾನು ಬಂದದ್ದು ಗೊತ್ತಾದರೂ ಎಂದಿನಂತೇ “ಶೀ.. ಶೀ.. ಮನೆಪೂರ್ತಿ ರಾಡಿಮಾಡಿ ಹಾಕಡಾ, ಅಬ್ಬಿಗೆ ಹೋಗಿ ತಿಕ್ಕಿ ತಿಕ್ಕಿ ಚೊಕ್ಕಮಾಡಿ ಕಾಲು ತೊಳ್ಕಂಡು ಒಳಗೆ ಬಾ ನೆಡಿ” ಎಂದೆಲ್ಲ ಬೈಯಲಿಲ್ಲ.
ನನ್ನೇ ನೋಡುತ್ತಿದ್ದ ಅಪ್ಪ, ನಾನು ಅವನನ್ನು ನೋಡಿದ ಕೂಡಲೇ “ಬಾ..” ಎಂದು ಕೈಸನ್ನೆ ಮಾಡಿ ಕರೆದ. ಅವನ ಕಣ್ಣಿನಲ್ಲಿನ ಯಾವುದೋ ಭಾವಕ್ಕೆ ನನ್ನ ದುಃಖದ ಕಟ್ಟೆಯೊಡೆದು ದೊಡ್ಡದಾಗಿ ಅಳುತ್ತಾ ಓಡಿಹೋಗಿ ಅಪ್ಪನ ಕತ್ತನ್ನು ಅಪ್ಪಿಹಿಡಿದೆ. ಅಪ್ಪನ ಗದ್ದ ನನ್ನ ಹೆಗಲ ಮೇಲೆ ಇತ್ತು. ಸಣ್ಣಗೇ “ಪುಟ್ಟೂ… ನಾವು ಯಾವಾಗ್ಲೂ ಬೇಡಿಕೊಂಡು ತಿಂಬೋ ಪ್ರಸಂಗ ಬಂದ್ರೂ ಕಳ್ಳತನ ಮಾಡಿ ತಿಂಬ್ಲಾಗಾ” ಎಂದ ನಾನು ಮಾತಾಡದೆ “ಹೂಂ” ಎಂದೆ. ಮತ್ತೆ “ಬಾಳ ನೋವಾತೇನೋ” ಕೇಳಿದ. ನಾನು ಮತ್ತೆ “ಹೂಂ” ಅಂದೆ. ಅಪ್ಪನ ಕಣ್ಣಿಂದ ಬಿಸಿಹನಿಯೊಂದು ಬೆನ್ನಮೇಲಿನ ಗಾಯದ ಮೇಲೆ ಬಿದ್ದು `ಚುರ್..’ ಅಂದರೂ, ಅಪ್ಪ ಎಲ್ಲಿ ಅಪ್ಪುಗೆ ತಪ್ಪಿಸುತ್ತಾನೋ ಎಂದು ಹೆದರಿ “ಆಯ್” ಎನ್ನದೇ ತುಟಿಕಚ್ಚಿಕೊಂಡು ಇನ್ನಷ್ಟು ಬಿಗಿಯಾಗಿ ಅಪ್ಪಿದೆ. ಅಳು ನನಗೇ ಗೊತ್ತಿಲ್ಲದೇ ಎಷ್ಟೋ ಹೊತ್ತಿಗೆ ನಿಂತು ಹೋಗಿತ್ತು. ಹೊರಗೆ ಮಳೆ ಕಪ್ಪಿಟ್ಟುಕೊಂಡು `ಧೋ..’ ಎಂದು ಸುರಿಯುತ್ತಿತ್ತು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Such a wonderful story! The helplessness of losing money to a relative. The fear of a kids theft and of the future. The bonding between the father n son.. quite an emotional ….