ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ ‘ಅಪ್ಪ ನೆಟ್ಟ ಸೀತಾಫಲದ ಮರʼ
ಓಣಿಯ ಮೇಲ್ಬದಿಯಲ್ಲಿರುವ ದಿಣ್ಣೆಯ ಮೇಲೆ ಅಡ್ಡಲಾಗಿ ಬೆಳೆದು ಮೇಲ್ಮುಖವಾಗಿ ಚಾಚಿರುವ, ಅಪ್ಪ ನೆಟ್ಟಿರುವ ಸೀತಾಫಲದ ಮರ ಮೆಲ್ಲನೆ ಮೇಲಿನಿಂದ ಕೆಳಭಾಗಕ್ಕೆ ತೂಗುತ್ತಿತ್ತು. ಮರದ ಗೆಲ್ಲುಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲುಗಾಡಿಸುತ್ತಾ, ಖಾಲಿ ಖಾಲಿಯಾಗಿರುವಂತೆ ಭಾಸವಾಗುವ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲವಿತು ಕೊರಗಿ ಕರಗಿಸುವ ಭಾವಗಳನ್ನೊಂದಿಷ್ಟು ಸಾಂತ್ವನಿಸಲೆಂದು ಕಲ್ಪನೆಯ ಕಾಯಕ್ಕೆ ರೆಕ್ಕೆ ಕಟ್ಟಿ ವಿಹರಿಸಹೊರಟಿದ್ದಳು ಕಾವ್ಯ. ಒಂದೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ, ಮತ್ತೊಮ್ಮೆ ವಾಸ್ತವದ ಅರಿವು ಮೂಡಿ ತಟಸ್ಥವಾದಂತೆ….. ಸೀತಾಫಲದ ಮರದ ತೂಗುವಿಕೆಯ ಗತಿಯು ಕೂಡ ಬದಲಾಗುತ್ತಲಿತ್ತು.
ಲವಲವಿಕೆಯ ಎಳೆ ಚಿಗುರು ಬಳ್ಳಿಯಂತಿರುವ ಕಾವ್ಯಳ ಮನಸ್ಸಿನೊಳಭಾವಗಳು ನಲುಗದಿರಲು ಕಾರಣವಿಲ್ಲದಿಲ್ಲ. ಯಾವಾಗಲೂ ಒಂದು ತಿಂಗಳಾದರೂ ಇದ್ದು ಹೋಗುವ ಅಪ್ಪ, ಈ ಬಾರಿ ಹದಿನೈದು ದಿನಗಳಲ್ಲೇ ಕೇರಳಕ್ಕೆ ವಾಪಸ್ಸಾಗಿದ್ದರು. ಭಾನುವಾರವಾಗಿದ್ದರೆ ಬಸ್ಸು ಸ್ಟಾಪಿನವರೆಗಾದರೂ ಅಪ್ಪನೊಂದಿಗೆ ಹೋಗಿ ಬರಬಹುದಿತ್ತು. ಆದರೆ ಇಂದೇ ಹೊರಟರಲ್ಲಾ…!
ಇದೇ ತಳಮಳಗಳ ಭಾವದಲ್ಲೇ ಕಾವ್ಯ ಶಾಲೆಯಿಂದ ಬಂದವಳು ಏನೂ ತಿನ್ನಲು ಮನಸ್ಸಾಗದೆ ಹಿತ್ತಲಲ್ಲಿರುವ ಸೀತಾಫಲದ ಮರವನ್ನೇರಿದ್ದಳು. ಮನೆಯಲ್ಲಿ ಅಪ್ಪನಿರವಿಲ್ಲದ ಬೇಸರವನ್ನು ಹೇಗಾದರೂ ಕಳೆಯಬೇಕಿತ್ತು. ಅಪ್ಪ ಈವಾಗ ನನ್ನನ್ನು ನೆನೆಸಿಕೊಂಡು ರೈಲ್ವೆ ಸ್ಟೇಷನ್ನಲ್ಲಿ ಕೂತಿದ್ದಾರೇನೋ… ನಮ್ಮೊಂದಿಗೆ ಕಳೆದ ನೆನಪುಗಳೆಷ್ಟು ಕಾಡುತ್ತಿದೆಯೇನೋ…!
‘ಇಂದು ನಾನು 6.40ರ ಟ್ರೈನಲ್ಲಿ ಹೋಗೋದು ಮಗಾ’ ಅಂದಿದ್ದರು. ಕೇರಳಕ್ಕೆ ತೆರಳಲಿರುವ ಟ್ರೈನ್ ಬರೋ ಮುಂಚೆ ಅಪ್ಪನಲ್ಲಿ ಮಾತಾಡಿ ಬರಬೇಕು. ರಾತ್ರಿ ಊಟ ಮಾಡುವುದಕ್ಕೆ ಕೈಯಲ್ಲಿ ಕಾಸಿದೆಯೋ ಇಲ್ಲವೋ…! ಪಾಪ ಕೇರಳದಿಂದ ಬಂದಾಕ್ಷಣ ಎಲ್ಲಾ ಹಣವನ್ನೂ ನನ್ನ ಕೈಯಲ್ಲಿಯೇ ಕೊಟ್ಟು ವಾಪಸ್ಸಾಗುವಾಗ ಬರೀ ಟಿಕೇಟಿಗೆ ಬೇಕಾಗುವಷ್ಟೇ ಹಣ ಕೊಂಡುಹೋಗುವ ಅಭ್ಯಾಸ ಅಪ್ಪನಿಗೆ. ಛೆ! ನಾನು ಕಾಲೇಜಿಗೆ ಹೋಗಿದ್ದೆ, ಇಲ್ಲಾಂದ್ರೆ ಅಪ್ಪನ ಪಾಕೆಟ್ ತೆಗೆದು ನೋಡಿ 50 ರೂಪಾಯಿ ಜಾಸ್ತಿನೇ ಇಟ್ಟುಬಿಡ್ತಾ ಇದ್ದೆ. ಏನ್ಮಾಡ್ಲಿ…! ಅಪ್ಪನಿಗೆ ಈವಾಗ ಅದೆಷ್ಟು ಹಸಿವಾಗ್ತಾ ಇದೆಯೋ…! ಒಮ್ಮೆ ನೋಡ್ಕೊಂಡು ಬರ್ಬೇಕು.
ಕಾವ್ಯ ಸೀತಾಫಲದ ಮರವನ್ನು ಜೋರಾಗಿ ತೂಗುತ್ತಾಳೆ. ಮರ ನೆಪವಷ್ಟೆ. ಅವಳ ಮನಸ್ಸಿನಲ್ಲಿ ಅದೊಂದು ವಾಹನ. ತಾನೇ ಚಾಲಕಿ. ಆದಷ್ಟು ಬೇಗ ಅಪ್ಪನನ್ನು ನೋಡಬೇಕೆನುವ ಆತುರ. ಟ್ರಾಫಿಕ್ ಜಾಮ್, ಸಿಗ್ನಲ್ ಅದಾವುದನ್ನೂ ಗಣನೆಗೆ ತೆಗೆದುಕೊಳ್ಳುವಷ್ಟು ತಾಳ್ಮೆ ವ್ಯವದಾನ ಕಾವ್ಯಳಿಗಿರಲಿಲ್ಲ. ಮನೋಗತಿಯ ಅಪರಿಮಿತ ಚಲನಾ ವೇಗದಲ್ಲಿ ಸಾಗಿ, ಇನ್ನೇನು ರೈಲ್ವೆ ಸ್ಟೇಷನ್ ತಲುಪಿದೆಯೆನ್ನುವಷ್ಟರಲ್ಲಿ… 2ನೇ ನಂಬರ್ ಪ್ಲ್ಯಾಟ್ ಫಾರ್ಮ್ ನಲ್ಲಿರುವ ತಿರುವನಂತಪುರಮ್ ಎಕ್ಸ್ಪ್ರೆಸ್ ಹೊರಡಲನುವಾಗಿತ್ತು. ಅಪ್ಪ ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಿ ನೋಡುತ್ತಾ ಟ್ರೈನ್ ಹತ್ತಿದ್ದರು. ಅವರ ಕಣ್ಣಂಚಿನಲಿ ಜಾರಿದ ಕಂಬನಿ ತನ್ನವರ ನೆನಪಿನದಾಗಿತ್ತು. ಕಾವ್ಯಳಿಗೂ ದುಃಖ ತಡೆಯಲಾಗಲಿಲ್ಲ. ಅಷ್ಟೊತ್ತಿಗೆ ಗೆಲ್ಲುಗಳನ್ನು ಹಿಡಿದು ಅಲುಗಾಡಿಸುತ್ತಿದ್ದ ಕೈಗಳಿಗೂ ಸಾಕೆನಿಸಿತ್ತು. ಕಂಬನಿ ಒಂದೇ ಸಮನೆ ಕೆನ್ನೆಯಲ್ಲುರುಳುತ್ತಿತ್ತು. ಅತ್ತು ಕಾವ್ಯಳ ಮನಸ್ಸು ತುಸು ಹಗುರವಾಗುತ್ತಲಿತ್ತು.
*****
ಹದಿಹರೆಯದ ನವಿರುಭಾವಗಳು ಮೊಗ್ಗಾಗಿ ಅರಳುವ ಹೊತ್ತಲಿ ಅದಾವ ಕಾರಣಕ್ಕಾಗಿಯೋ ತುಸು ಘಾಸಿಯಾದರೂ ಸರಿ, ಕಾವ್ಯ ಮೌನಕ್ಕೆ ದಾಸಿಯಾಗುತ್ತಾಳೆ. ಈ ಮೌನಾಂತರಂಗದೊಳು ಅವಳೇಕಾಂಗಿಯಲ್ಲ.
ನಾಳಿನ ಭರವಸೆಯನು ನೀಡಿ, ಪಡುವಣದಾಚೆಗೆ ಸರಿಯುವ ಸಂಜೆಯ ಸೂರ್ಯ…,
ಭೂಮಿಗೆ ಭಾರವಾದರೇನು ಬಾನಿಗೆ ಬಲು ಹಗುರ ಎಂಬಂತೆ, ‘ಹಗುರಾಗಿರಲಿ ಭಾವಗಳು’ ಅನ್ನುತ್ತಾ ಮೆಲ್ಲಗೆ ಸಾಗುವ ಮೋಡ…, ಕಾಡು ಗುಡ್ಡ ಬೆಟ್ಟ ಕಣಿವೆ ಅದಾವ ಅಡೆತಡೆ ನಮಗಿಲ್ಲವೆಂಬಂತೆ ಸ್ವಚ್ಛಂದವಾಗಿ ಹಾರಾಡುತ್ತಾ, “ಅವುಗಳಂತೆ ನಾವಾಗಬಾರದಿತ್ತೇ” ಅನ್ನುವಾಸೆಗೆ ಮನಸ್ಸು ಹಾತೊರೆಯುವಂತೆ ಪ್ರೇರೇಪಿಸುವ ಬಾನಾಡಿಗಳು,
ಏನಿಲ್ಲವೆಂದರೂ ತಿಂಗಳಿಗೆ ಹದಿನೈದು ದಿನವಾದರೂ, ತಣ್ಣಗೆ ನಕ್ಕು ಸೆಳೆಯುವ ತಂಗದಿರನೊಡನೆ ಕಾವ್ಯಳ ತಗಾದೆ ಇದ್ದಿದ್ದೇ. ಅವನ ನೇರಕ್ಕೆ ತಾನೂ ನಡೆಯಬೇಕೆಂದು ಎಷ್ಟೋಡಿ ಸುಸ್ತಾದರೂ, ಹಿಂಬೀಳದವ ಗೆಲುವಾಗಿರುವವ. ಸೋತೆನೆಂದರೂ ಬೆಂಬಿಡದವ ಆ ತುಂಟ ನಗೆಯ ಶಿಶಿರನೆಂದರೆ ಕಾವ್ಯಳಿಗೆ ಜೀವ. ಅವಳೊಳು ಸ್ಫುರಿಸುವ ಭಾವಗಳಿಗೆ ನವಿರಾಗಿ ಗರಿಗೆದರಿ ಅರಳುವ ಹೃನ್ಮನದ ಭಾವಗಳನು ಪಡಿಮೂಡಿಸಿದವನಿವನೇ….. ಅವನಿದಿರು ಕೂತಷ್ಟು ಹೊತ್ತು… ಬರೀ ಕವಿತೆಗಳಲ್ಲೇ ಅವರ ಮಾತು. ಕಾವ್ಯಳ ಭಾವಲಹರಿಯೊಳಗೆ ಮಿಡಿದು ಮೌನವೀಣೆ ನುಡಿಸುವಲ್ಲಿವನೇ ಜೊತೆಗಾರ.
“ದಾರಿ ದೂರವೆನಿಲ್ಲ ನನ್ನ ನಿನ್ನವರೆಗೆ
ಬರೀ ಏಣಿಯಷ್ಟೆ! ಏರಿ ಬರುವೇನಲ್ಲಿ
ಕಾಲವನು ಮೀರಿ ಪ್ರೇಮವನು ಸಾರಿ.
ನಿನ್ನೂರ ತಂಗದಿರೆಯಾಗಿ ಪ್ರೇಮಚಂದ್ರಿಕೆಯಾಗಿ.
ಬೆಳದಿಂಗಳಿರುಳಿನಲ್ಲಿ ಶಿಶಿರ ಮತ್ತು ಕಾವ್ಯಳ ಪ್ರೇಮಾಲಾಪನೆಯಲ್ಲಿ ಅದೆಷ್ಟೋ ಪದಪುಂಜಗಳು ಕಾವ್ಯ ಲಹರಿಯಲ್ಲಿ ಲಾಸ್ಯವಾಡುತ್ತಿರುತ್ತಿದ್ದವು.
ಚಂದದ ಅಂಗಳದ ನಡುವಿರುವ ಸಣ್ಣ ಕಲ್ಲು ಬಂಡೆಯ ಮೇಲೆ ಕೂತು ಒಂದಷ್ಟು ಹೊತ್ತು ಸುತ್ತ ಹಸಿರೆಲೆ ತಂಗಾಳಿಯಲೆಯಲಿ ಮೈಮರೆತು ತಿಂಗಳ ಬೆಳಕಲಿ ತೂಗಿ ಹಾಡುವುದೆಂದರೆ ಕಾವ್ಯಳಿಗೆ ಅದೇನೋ ಉನ್ಮಾದದ ಖುಷಿ ಹಸೆಯೇರಿದ ಭಾವ. ಅಪ್ಪ ಮನೆಯಲ್ಲಿರುವಷ್ಟು ದಿನ, ಕಾವ್ಯ ಎಲ್ಲಿರುವಳೋ ಅಲ್ಲೇ ಅವರು. ತಿಂಗಳ ರಾತ್ರಿಯ ಅಂಗಳದಲಿ ಕೂತು, ಮಗಳನ್ನು ಮಾತಾಡಿಸುತ್ತಾ ನಗಿಸುತ್ತಾ ತಾನೂ ನಗುತ್ತಾ ಅಪ್ಪನಿರುವ ದಿನಗಳೆಲ್ಲಾ ಹಾಯೆನಿಸುವಂತವುಗಳೇ. ಅಲ್ಲಿ ಮೌನವಿಲ್ಲ. ಏಕಾಂತದ ಒಲವಿಲ್ಲ. ಅದೆಷ್ಟೋ ಕತೆಗಳಿಗೆ ವಾಸ್ತವಕ್ಕಿಂತ ಹೆಚ್ಚಾಗಿ ಕಾಲ್ಪನಿಕತೆಯನ್ನು ಸೇರಿಸಿ ಅಪ್ಪ ಹೇಳುವಾಗ, “ಅಪ್ಪಾ ನಾನು ದೊಡ್ಡವಳಾಗಿದ್ದೀನಿ, ನೀನು ಇನ್ನೂ ನನ್ನ ಎಳೆ ಮಗು ಅಂತ ಭಾವಿಸಿದ್ದೀಯಾ?” ಅಂತ ಹೇಳಬೇಕೆನಿಸಿದರೂ, ಸುಮ್ಮನಿದ್ದು ಅಪ್ಪನ ಕತೆಯಲ್ಲಿ ಬರುವಂತಹ ಪಾತ್ರಗಳನ್ನು ಅವರ ಕಲ್ಪನಾ ಶೈಲಿಯನ್ನು ಕುತೂಹಲದಿಂದಲೇ ಆಲಿಸುತ್ತಿದ್ದಳು.
ಕೆಲವೊಮ್ಮೆ ಅಮ್ಮ ನಡುವೆ ಬಂದು, “ಮಗಳಿಗೆ ಕತೆ ಹೇಳಿ ಮುಗಿದಿದ್ದರೆ ಊಟಕ್ಕೆ ಬರುವಿರಾ? ಎಂದು ಹೇಳಿದಾಗ,
“ನನ್ನ ಮುದ್ದಿನ ಮಗಳಿಗೆ ಕತೆ ಹೇಳೋದು ನೋಡಿದ್ರೆ ನಿನಗೆ ಹೊಟ್ಟೆ ಉರಿಯುತ್ತಿದೆಯೇನೇ…?”
ಅಪ್ಪನ ಮಾತಿಗೆ ಆ ಕಡೆಯಿಂದ ಅಮ್ಮಾ, “ನೀವು ಬಂದ್ರೆ ಅವಳು ಮಾಡೋ ಒಂದೆರಡು ಕೆಲಸ ಕೂಡ ನಾನೇ ಮಾಡ್ಬೇಕು. ಇಡೀ ರಾತ್ರಿ ನಿಮ್ಮ ಕತೆ ಪುರಾಣನೇ ಆಗೋಯ್ತು”
“ನನ್ನ ಮಗಳನ್ನು ಕೆಲಸ ಮಾಡಿಸಬೇಡ. ಕಳೆದ ಸಲ ಮನೆ ದೈವಗಳಿಗೆ ತಂಬಿಲ ಮಾಡುವಾಗ ಕಾವ್ಯಳಿಂದ ಖಾರದ ಮಸಾಲೆಯನ್ನು ಕಲ್ಲಿನಲ್ಲಿ ಅರೆಸಿದ್ದೀಯಾ, ಅವಳ ಕೈ ಎಷ್ಟು ಕೆಂಪಾಗಿತ್ತು…! ಪಾಪ ಉರಿಹೋಗಲೆಂದು ಅಂಗೈಗೆ ಬಿಸಿ ನೀರು ಸುರಿಯುತ್ತಾ ಸಂಕಟ ಪಡುತ್ತಿದ್ದಾಗ ನನ್ನೆದೆ ಚುರ್ರ್ ಅಂದಿತ್ತು. ಅದಕ್ಕಾಗಿಯೇ ಈ ಬಾರಿ ಮಿಕ್ಸರ್ ತಂದಿರುವೆ. ಕಾವ್ಯ ಯಾವತ್ತೂ ಕಷ್ಟ ಪಡಬಾರದು” ಅಂದಾಗ, ಅಪ್ಪನಿಗೆ ತನ್ನ ಮೇಲಿರುವ ಅತಿಯಾದ ಪ್ರೀತಿ ಅದನ್ನು ಸಂದರ್ಭಕ್ಕೆ ತಕ್ಕಂತೆ ವ್ಯಕ್ತ ಪಡಿಸುವ ರೀತಿಯನ್ನು ಕಂಡು ಕಾವ್ಯ ಭಾವುಕಳಾಗುತ್ತಿದ್ದಳು.
‘ಕತ್ತಲಾಯಿತು ಮಗಾ ಇನ್ನಾದ್ರೂ ಮನೆಗೆ ಬರ್ಬಾರ್ದಾ’ ಅಮ್ಮಾ ಪ್ರೀತಿಯಿಂದ ಕರೆದಾಗ, ಕಾವ್ಯಳಿಗೆ ತಾನಿನ್ನೂ ಸೀತಾಫಲದ ಮರದಲ್ಲೇ ಇರುವೆನಲ್ಲಾ ಎಂದರಿವಿಗೆ ಬಂದಿದ್ದು. “ಅಯ್ಯೋ ಇವತ್ತು ಸಂಜೆ ಕಾಲೇಜಿನಿಂದ ಬಂದವಳು ನಾನೇನೂ ಕೆಲಸವೇ ಮಾಡಿಲ್ಲ. ಅಮ್ಮಾ ‘ಯಾಕೆ ಮಾಡಿಲ್ಲ’ ಅಂತನೂ ಕೇಳದೆ ತಾನೇ ಎಲ್ಲಾ ಅವರೇ ಮುಗಿಸಿದ್ರು ಪಾಪ, ಅಮ್ಮ ನನ್ನನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸ್ತಾರೆ…! ನನ್ನ ಅಂತರಾಳದ ತುಡಿತ ಅವರಿಗೂ ಅರ್ಥವಾಯಿತೇ…! ತಾಯಿ ಹೃದಯ ಅಂದ್ರೆ ಹೀಗೆನಾ…?
ಅಮ್ಮಾ ರಾತ್ರಿ ಊಟ ಬಡಿಸಿ ಕಾವ್ಯಳ ಎದುರು ತಂದಿಟ್ಟು, ‘ಮಗಾ ಇನ್ನೆರಡು ತುಂಡು ಉಪ್ಪಿನಕಾಯಿ ಹಾಕ್ಲಾ?’ ಅಂದಾಗ, ಕಾವ್ಯಳಿಗೆ ದಿಗಿಲು…!
ಅಪ್ಪಾ ಏನಾದ್ರೂ ಹೇಳಿರಬಹುದೇ…..? ನನ್ನೊಳಗುಟ್ಟು ತಿಳಿದಿರೋದು ಅಪ್ಪ ಮಾತ್ರ….
*****
ನಡುಕೋಣೆಯಿಂದ ಅಡುಗೆಮನೆಗಿಳಿಯುವಲ್ಲಿ ತಿಟ್ಟೆಯಂತೆ ಕಟ್ಟಿರುವ ಮೆಟ್ಟಿಲು. ಅದರ ಎಡಬದಿಯಲ್ಲಿರುವ ಚೌಕಾಕಾರದಲ್ಲಿರುವಂತಹ ಒಂದಿಷ್ಟು ಜಾಗದಲ್ಲಿ ಕೂತೇ ಕಾವ್ಯ ನಿತ್ಯ ಊಟ ಮಾಡುವುದಾಗಿತ್ತು. ಅಪ್ಪ ಮನೆಯಲ್ಲಿರುವಷ್ಟು ದಿನ ಕಾವ್ಯ ಪ್ರತಿಯೊಂದು ತುತ್ತು ಊಟ ಮಾಡುವುದನ್ನು ಅಲ್ಲೇ ಮೆಟ್ಟಿಲಿನಲ್ಲಿ ಕೂತು ನೋಡುವುದೆಂದರೆ ಅವರಿಗೆ ಅದೇನೋ ಖುಷಿ. ಕಾವ್ಯಳ ತಟ್ಟೆಯಲ್ಲಿದ್ದ ಪಲ್ಯ ಒಂಚೂರು ಅವರೂ ತಿಂದು, ಕಾವ್ಯಳಿಗೂ ತಿನ್ನಿಸದೆ ಸಮಾಧಾನವಿಲ್ಲ.
ಉಪ್ಪಿನಕಾಯಿಯೆಂದರೆ ಪಲ್ಯದಷ್ಟೇ ಹಾಕಿ ತಿನ್ನುವ ಕಾವ್ಯಳಿಗೆ ಅವಳಮ್ಮ, ‘ಒಂದು ತುಂಡು ಮಾತ್ರ ತಿನ್ಬೇಕು’ ಎಂದು ಕಟ್ಟಪ್ಪಣೆ ಮಾಡಿದ್ದರು. ಅಮ್ಮನ ಮಾತು ಮೀರುವುದು ಕಾವ್ಯಳಿಗೂ ಇಷ್ಟವಿಲ್ಲ. ಹಾಗಾಗಿ ನಿತ್ಯ ಕಾಲೇಜಿನಿಂದ ಬಂದು ತಟ್ಟೆಗೆ ಅನ್ನ ಹಾಕುವ ಮೊದಲು 4 ಪೀಸು ಉಪ್ಪಿನಕಾಯಿ ಹಾಕಿ ಕಾಣಿಸದಂತೆ ಅದರ ಮೇಲೆ ಅನ್ನ, ಬದಿಯಲ್ಲಿ ಬರೀ ಒಂದು ತುಂಡಷ್ಟೇ ಉಪ್ಪಿನಕಾಯಿ. ಅಮ್ಮನಿಗೂ ಖುಷಿ ‘ಮಗಳು ಹೇಳಿದ ಹಾಗೆ ಕೇಳುತ್ತಿದ್ದಾಳಲ್ಲಾ’ ಅಂತ. ಆದರೆ ಕಾವ್ಯಳ ಈತರದ ಐಡಿಯಾವನ್ನು ಕಂಡು ಹಿಡಿದವರೇ ಅವಳಪ್ಪ.
ಸೋತೆನೆಂದರೂ ಬೆಂಬಿಡದವ ಆ ತುಂಟ ನಗೆಯ ಶಿಶಿರನೆಂದರೆ ಕಾವ್ಯಳಿಗೆ ಜೀವ. ಅವಳೊಳು ಸ್ಫುರಿಸುವ ಭಾವಗಳಿಗೆ ನವಿರಾಗಿ ಗರಿಗೆದರಿ ಅರಳುವ ಹೃನ್ಮನದ ಭಾವಗಳನು ಪಡಿಮೂಡಿಸಿದವನಿವನೇ.
ಆವತ್ತೊಂದು ದಿನ ತೆಂಗಿನ ಮರದ ಬುಡಕ್ಕೆ ಹೋಗಿ ದೋಟಿಯಿಂದ ಸಿಯಾಳ ಕುಟ್ಟಿ ಬೀಳಿಸುತ್ತಿದ್ದಾಗ ಕಾವ್ಯ, ‘ಯಾಕಪ್ಪಾ ಎಳನೀರು ಕುಡಿಯೋಕೆ ಮನಸ್ಸಾಗಿದೆಯಾ’ ಅಂದಾಗ, “ಇಲ್ಲ ಮಗಾ ನಿನ್ನೆ 5 ತುಂಡು ಉಪ್ಪಿನಕಾಯಿ ತಿಂದಿದ್ದಿ ನೋಡು! ನಿನಗೆ ಉಷ್ಣ ಆದೀತು, ಇಗೋ ಮಗಾ ಕುಡಿ” ಅಂತ ಲೋಟದಲ್ಲಿ ಹಾಕಿ ಎಳನೀರು ತಂದು ಕೊಟ್ಟಾಗ ಕಾವ್ಯ, ‘ಅಯ್ಯೋ ಅಮ್ಮನಿಗೆ ಹೇಳ್ಬೇಡಿ ಬೇಜಾರು ಮಾಡ್ಕೊಂಡಾರು’ ಅಂದಾಗ, ‘ಇಲ್ಲ ಮಗಾ ನೀ ನನ್ನ ಮುದ್ದು ಬಂಗಾರು’ ಅಂತ ತಲೆನೇವರಿಸಿದ್ದು…..! ಇಂದು ಕಾವ್ಯಳಿಗೆ ಅಮ್ಮನ ವರ್ತನೆ ನೋಡಿ ತಟ್ಟನೆ ಕಣ್ಮುಂದೆ ಸುಳಿಯಿತು.
ಅಪ್ಪ ಹೇಳಿರಬೇಕು! ಇಲ್ಲವಾದರೆ ಅಮ್ಮ ಇನ್ನಷ್ಟು ಉಪ್ಪಿನಕಾಯಿ ತಂದಿಡಲು ಹೇಗೆ ಸಾಧ್ಯ? ‘ಅಪ್ಪ ಕೇರಳಕ್ಕೆ ಹೋದ ನೆನಪಿನಲಿ ಬೇಸರದಲ್ಲಿರುವ ನನ್ನನ್ನು ತುಸು ಸಾಂತ್ವನಿಸುವ ಕಿರು ಪ್ರಯತ್ನ ಅಮ್ಮನದಾಗಿರಬಹುದು. ಆದರೆ ಆವತ್ತು ಅದಾವುದೂ ಕಾವ್ಯಳಿಗೆ ರುಚಿಸಲಿಲ್ಲ. ಅದರೂ ಊಟ ಮಾಡಲೇ ಬೇಕು. ಇಲ್ಲಾಂದ್ರೆ ಅಮ್ಮನೂ ಉಪವಾಸ ಮಾಡ್ತಾರೆ. ದಿನವಿಡೀ ದುಡಿದು ದಣಿದ ಜೀವವನ್ನು ಉಪವಾಸ ಕೆಡಹುವುದೇ……!
ದಿನವಿಡೀ ಯಾರ್ಯಾರ ಮನೇಲಿ ತೋಟದ ಕೆಲ್ಸ ಮಾಡ್ಕೊಂಡು ಒಣಕಡ್ಡಿಯಂತೆ ಅಮ್ಮ ಸೊರಗಿದ್ದಾರೆ. ಎಲ್ಲಿ ಕೆಲಸಕ್ಕೆ ಹೋಗ್ತಾರೋ ಅಲ್ಲೇನಾದರೂ ತಿನ್ನಲು ಕೊಟ್ರೆ ಸೆರಗಲ್ಲಿ ಕಟ್ಟಿಕೊಂಡು ಬರೋದು ಅಮ್ಮನ ಅಭ್ಯಾಸ. “ಏನಮ್ಮಾ ನೀನು? ನಾನಿಷ್ಟು ದೊಡ್ಡವಳಾಗಿದ್ದೀನಿ, ಯಾಕೆ ಹೀಗೆ ತಗೊಂಡ್ಬರ್ತೀಯಾ…! ಅಲ್ಲೇ ತಿಂದು ಬರ್ಬಾರ್ದಾ?” ಅಂದಾಗ, “ನಿನಗಾದ್ರೂ ಯಾರು ಕೊಡ್ತಾರೆ ಮಗಾ, ಏನಾದ್ರೂ ತಿನ್ಬೇಕು ಅನ್ನುವಾಗ ನೀನೇ ಕಣ್ಮುಂದೆ ಬರ್ತೀಯಾ. ಅಲ್ಲಿ ನಾನೊಬ್ಬಳೇ ತಿನ್ನೋದಕ್ಕಿಂತ ಹೆಚ್ಚಾಗಿ, ನೀನಿಲ್ಲಿ ತಿನ್ನುತ್ತಾ ‘ಅಮ್ಮಾ ಎಲ್ಲಾ ನನಗೇ ಕಟ್ಕೊಂಡು ಬಂದಿದ್ದೀಯಾ, ನೀನೂ ಸ್ವಲ್ಪ ತಿನ್ನು’ ಅಂತ ಕೈಯಾರೆ ಕೊಡ್ತೀಯಲ್ಲಾ ಆ ಸುಖ ಎಲ್ಲೂ ಸಿಗಲ್ಲ ಮಗಾ” ಅಂದಾಗ ಅಮ್ಮನ ಕಷ್ಟವನ್ನು ನೆನೆದು, ಯಾವಾಗ ನಾನು ಇವರನ್ನೆಲ್ಲಾ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಸೋ ಆಸೆ ನನಸಾದೀತು ಎಂದು ಕಾವ್ಯಳ ಮನಸ್ಸು ಹಂಬಲಿಸಲನುವಾಗುತ್ತದೆ.
ಅಪ್ಪ ಯಾವಾಗಲೂ ಕಾವ್ಯಳಿಗೆ ಶಾಲೆಗೆ ರಜೆ ಇರೋ ದಿನಾನೇ ಊರಿಗೆ ಬರೋದು. ತಪ್ಪಿ ಬೇರೆ ದಿನಗಳಲ್ಲೇನಾದರೂ ಬಂದರೆ, ಕಾವ್ಯ ಶಾಲೆಯಿಂದ ಬರೋವರೆಗೂ ಅವರು ತಂದ ಬ್ಯಾಗ್ ಹಾಗೆಯೇ ಇರುತ್ತಿತ್ತು. ಯಾರೂ ಮುಟ್ಟಕೂಡದು. ಅಪ್ಪ ಏನೇನು ತಂದಿರುವರೆಂದು ಆಸೆ ಕಣ್ಣುಗಳಿಂದ ಕಾವ್ಯ ಬ್ಯಾಗ್ ತೆರೆದು ನೋಡುವ ಪರಿಯನ್ನು ನೋಡುವುದೆಂದರೆ ಅಪ್ಪನಿಗೆ ಅದೇನೋ ಖುಷಿ. ತಾನು ಕೂಡಿಟ್ಟ ಹಣವನ್ನೆಲ್ಲಾ, ಮಗಳ ಕೈಯಲ್ಲಿ ಕೊಟ್ಟ ಮೇಲೆಯೇ ಅವರಿಗೆ ತೃಪ್ತಿ. ಅಪ್ಪ ಊರಿಗೆ ಬರುವಾಗ ಸಂತಸ, ಹೋಗುವಾಗ ಬೇಸರ…. “ಅಪ್ಪ ಅಷ್ಟು ದೂರದ ಊರಿಗೆ ಯಾಕಾಗಿ ಹೋಗ್ತಾರೋ…! ಇಲ್ಲೇ ಎಲ್ಲಾದರೂ ಕೆಲಸ ಮಾಡ್ಕೊಂಡು ಇರ್ಬಾರದಿತ್ತಾ? ಎಷ್ಟೊಂದು ಖುಷಿಯಾಗಿರ್ತಿದ್ದೀವಿ.”
ಎಷ್ಟೋ ಬಾರಿ ಕಾವ್ಯ ಅಂದುಕೊಳ್ಳುವುದುಂಟು, ಆದ್ರೆ ಇಲ್ಲಿ ಸಿಗೋ ಸಂಬಳದಲ್ಲಿ ನನ್ನ ಕಾಲೇಜು ಖರ್ಚು, ಮನೆ ಖರ್ಚು ಹೇಗೆ ತಾನೆ ನಿಭಾಯಿಸೋಕೆ ಸಾಧ್ಯ?
“ಬಂಗಾರೂ ನಿನ್ನನ್ನು ರಾಜಕುಮಾರಿ ತರ ನೋಡ್ಕೋಬೇಕು, ಅದಕ್ಕಾಗಿ ನಾನು ಕೇರಳಕ್ಕೆ ಹೋಗ್ಲೇಬೇಕು ಮಗಾ. ಅಲ್ಲಿ ನನ್ನ ಅಣ್ಣ ಇದ್ದಾನಲ್ಲಾ ಅವ ಬೇರೆ ಹೊಟೇಲು ಖರೀದಿಸುವ ಮಾತುಕತೆಯಲ್ಲಿದ್ದಾನೆ. ನಾವೀಗಿರುವ ಹೊಟೇಲು ನನಗೇ ಬಿಟ್ಟು ಕೊಡ್ತಾನಂತೆ. ಆಮೇಲೆ ನಮಗೇನೂ ಕಷ್ಟ ಆಗಲ್ಲ ಮಗಾ” ಅಂದಾಗ, ‘ಹೋಗ್ಬೇಡಿ’ ಅನ್ನೋ ತನ್ನ ಮನದಿಂಗಿತವನ್ನು ಅರುಹಲಾಗದೆ ಕಾವ್ಯ ಸುಮ್ಮನಾಗುತ್ತಾಳೆ.
“ಛೆ! ಅಪ್ಪ ನನ್ನ ಭವಿಷ್ಯದ ಬಗ್ಗೆ ಎಷ್ಟೊಂದು ಆಸೆಯನ್ನು ಇಟ್ಕೊಂಡಿದ್ದಾರೆ! ಅದಕ್ಕಾಗಿಯೇ ತನ್ನ ಖುಷಿಯನ್ನೆಲ್ಲಾ ತ್ಯಾಗ ಮಾಡಿ ದೂರದ ಊರಿನಲ್ಲಿ ಇರಬೇಕಾಯ್ತಲ್ಲಾ. ಆ ಜವಾಬ್ದಾರಿಯನ್ನೆಲ್ಲಾ ನಾನೇ ನಿಭಾಯಿಸುವ ದಿನ ಯಾವಾಗ ಬಂದೀತು?” ಅದೆಷ್ಟೋ ಬಾರಿ ಕಾವ್ಯ ಯೋಚನಾ ಲಹರಿಯೊಳಾಳದಲ್ಲಿ ತನ್ನ ಪರಿವಾರದ ಸಾರಥಿ ತಾನಾಗಬೇಕೆನುವ ಕನಸು ಕಾಣುತ್ತಾಳೆ.
ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ವಡಾ ಚೆಟ್ಟಂಬಡೆ ಆರ್ಡರ್. ಒಲೆ ಮೇಲೆ ದೊಡ್ಡ ಬಾಣಲೆಯಲ್ಲಿ ಕೊತಕೊತನೆ ಕುದಿಯುವ ಎಣ್ಣೆಯಲ್ಲಿ ವಡೆಗಳು ಉರುಟುರುಟಾಗಿ ಹೊರಳಾಡುತ್ತಿದ್ದವು. ಅಪ್ಪನ ಮೈ ಪೂರ ಬೆವರಿಳಿಯುತ್ತಿತ್ತು. ಮುಖ ಕೆಂಪು ಕೆಂಪಾಗಿತ್ತು. ಅಪ್ಪಾ ತೀರಾ ದಣಿದಿದ್ದರು. ಸೊಂಟದಲ್ಲಿ ಕಟ್ಟಿಕೊಂಡ ತುಂಡು ಬೈರಾಸು ತಲೆಗೊಂದು ಮುಂಡಾಸು, ಮುಖ ಒರೆಸಿಕೊಳ್ಳಲು ಹೆಗಲ ಮೇಲೊಂದು ತುಂಡು ಶಾಲು. ಅಪ್ಪ ಥೇಟ್ ಅಡುಗೆ ಭಟ್ಟರ ತರ ಕಾಣಿಸ್ತಾ ಇದ್ದರು. ಬೆಳಗಾತ ನಾಲ್ಕು ಗಂಟೆಯಿಂದ ಉರಿಯ ಮುಂದೆ ನಿಂತು ಕೆಲಸ ಮಾಡಿ ಮೈಯೆಲ್ಲಾ ಬೆಂದು ಹೋಗಿರಬಹುದು. “ಅಪ್ಪಾ ಇಲ್ನೋಡಿ ನಿಮ್ಮ ಕಾವ್ಯ ಬಂದಿದ್ದಾಳೆ, ತುಂಬಾ ಸುಸ್ತಾಗಿದೆಯಾ? ಅಮ್ಮ ಕಡೆದು ಕೊಟ್ಟ ರಾಗಿ ನೀರು ತಂದಿದ್ದೀನಿ ತಗೊಳ್ಳಿ. ಸಾಕಪ್ಪಾ ಎಷ್ಟೂಂತ ಕೆಲ್ಸ ಮಾಡ್ತೀರಾ ಹೋಗಿ ಸ್ನಾನ ಮಾಡ್ಕೊಂಡು ಬನ್ನಿ.” ಊಹೂಂ, ಕಾವ್ಯ ಎಷ್ಟು ಮಾತಾಡಿದರೂ ಅಪ್ಪನಿಗೆ ಕೇಳಲೇ ಇಲ್ಲ.
ದೊಡ್ಡಪ್ಪ ಮಾತ್ರ ಗತ್ತಿನಲ್ಲಿ ಟಿಪ್‌ಟಾಪ್ ಡ್ರೆಸ್ ಮಾಡ್ಕೊಂಡು ಕೌಂಟರ್‌ನಲ್ಲಿ ಕೂತಿದ್ದರು. ‘ಹೌದು ಇಷ್ಟು ಆರಾಮವಾಗಿ ಕೂತಿರೋದರಿಂದಲೇ ಅಪ್ಪನಿಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾಗಿ ಕಾಣೋದು. ಇಷ್ಟು ಕಷ್ಟಪಟ್ಟು ಅಪ್ಪ ಕೆಲ್ಸ ಮಾಡ್ತಾರೆ, ಆದ್ರೆ ತಿಂಗಳಿಗೆ ಬರೀ ಒಂದುಸಾವಿರ ಕೊಡೋ ದೊಡ್ಡಪ್ಪ, ಈ ಹೊಟೇಲ್ ಅಪ್ಪನಿಗೆ ನಡೆಸೋಕೆ ಕೊಡುವರೇ?’ ಹೊಟೇಲಿನಲ್ಲಿ ವ್ಯಾಪಾರ ಚೆನ್ನಾಗಿ ಇರೋದರಿಂದ ಬಂಗಲೆಯ ಮೇಲೊಂದು ಬಂಗಲೆ ಕಟ್ಟಿದ್ದಾರೆ. “ಈ ಬಂಗಲೆ ಮಾರಿದಾಗ ನಿನಗೂ ಸ್ವಲ್ಪ ಪಾಲು ಕೊಡುವೆ” ಅಂತ ದೊಡ್ಡಪ್ಪ ಹೇಳಿದ್ದಾರಂತೆ. ಇದು ನಂಬೋ ಮಾತಾ? ಅಪ್ಪ ಅವರಣ್ಣನ ಮೇಲೆ ಅತಿಯಾಗಿಯೇ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಕಾವ್ಯಳಿಗೆ ಅನಿಸದಿರಲಿಲ್ಲ.
ಅಲ್ಲೇ ಹೊಟೇಲಿನ ಎದುರುಗಡೆ ಬಲಬದಿಯಲ್ಲಿ ಒಂದು ಬಟ್ಟೆ ಅಂಗಡಿ. ಮೂರ್ನಾಲ್ಕು ಗೊಂಬೆಗಳಿಗೆ ಚಂದದ ಬಟ್ಟೆ ತೊಡಿಸಿ ನೇತಾಡಿಸಿದ್ದರು.
“ಬಂಗಾರೂ, ನಾನು ಕೆಲಸ ಮಾಡೋ ಹೊಟೇಲಿನ ಎದುರುಗಡೆ ಒಂದು ಬಟ್ಟೆ ಅಂಗಡಿ ಇದೆ. ಅಲ್ಲಿ ನೇತಾಡಿಸಿದ ಗೊಂಬೆಯ ಜಾಗದಲ್ಲಿ ನಾನು ನಿನ್ನನ್ನು ಊಹಿಸುತ್ತೇನೆ. ಆವಾಗ ಯಾವ ಬಟ್ಟೆ ನಿನಗೆ ಒಪ್ಪುವುದೆಂದು ನನಗನಿಸುವುದೋ ಆ ಕ್ಷಣವೇ ಖರೀದಿಸಿ ತೆಗೆದಿಡುತ್ತೇನೆ,” ಅಪ್ಪ ಹೇಳಿದ ನೆನಪಾಗಿ ಕಾವ್ಯ ಅಲ್ಲೆಲ್ಲಾ ಕಣ್ಣು ಹಾಯಿಸುತ್ತಾ, “ಓಹೋ, ಅವರಂದ ಬಟ್ಟೆ ಅಂಗಡಿ ಇದೇ ಇರ್ಬೇಕು. ಆ ಗೊಂಬೆಗೆ ಚಂದ ಕಾಣಿಸಿದವುಗಳೆಲ್ಲಾ ನನಗೆ ತರುತ್ತಿದ್ದ ಕಾರಣದಿಂದಲೇ ನನಗೂ ಚೆನ್ನಾಗಿ ಒಪ್ಪುತ್ತಿತ್ತು.” ಅಪ್ಪನ ಆಯ್ಕೆ ನಾ ಅನ್ನುವ ಹಾಗಿಲ್ಲ. ಎಲ್ಲಾ ಸೂಪರ್. ಅಲ್ಲೊಂದು ಗೊಂಬೆಗೆ ಉದ್ದ ಲಂಗ ಮತ್ತು ಟೀಶರ್ಟ್ ಹಾಕಿ ನೇತಾಡಿಸಿದ್ದರು. ಮೊನ್ನೆ ತಾನೆ ಕಾಲೇಜಿನಲ್ಲಿ ನವ್ಯ ಈತರದ ಡ್ರೆಸ್ನಲ್ಲಿ ಚಂದ ಕಾಣ್ತಿದ್ದಳು. ಕಾವ್ಯಳಿಗೂ ಟೀಶರ್ಟ್ ಧರಿಸೋ ಮನಸ್ಸು. “ಬೇಡ ಬಂಗಾರೂ ಆ ಮಾಡರ್ನ್ ಸ್ಟೈಲ್. ನೀನು ಉದ್ದ ಜರಿ ಲಂಗ ದಾವಣಿಯಲ್ಲಿ ಅಪ್ಸರೆಯ ಹಾಗೆ ಕಾಣಿಸ್ತೀಯಾ” ಅಪ್ಪ ಹೇಳಿದ ನೆನಪಾಗಿ ಬೇಡವೆನಿಸಿತು. ಕಲ್ಪನೆಗೆ ರೆಕ್ಕೆ ಕಟ್ಟಿ ಹಾರಿ ಹೋಗಿ ಬೇರೊಂದೂರು ಸೇರಿದ್ದ ಮನಸ್ಸು, ಮತ್ತೆ ಕಾವ್ಯಳೊಳು ಸೇರಿದಾಗ ಕತ್ತಲಾಗಿತ್ತು. ಸೀತಾಫಲದ ಮರದಿಂದಿಳಿದು ಮನೆಯತ್ತ ಹೆಜ್ಜೆಯಿಟ್ಟ ಕಾವ್ಯಳಿಗೆ, ಆವರೆಗೆ ಹೊಸದೊಂದೂರ ಸುತ್ತಿ ಬಂದಿರುವ ಹುರುಪು.
ಅಪ್ಪನಿಗೆ ಬರುವ ಒಂದೂವರೆ ಸಾವಿರ ಸಂಬಳದಲ್ಲಿ 500 ರೂಪಾಯಿ ಮನೆ ಖರ್ಚಿಗೆ ಅಮ್ಮನ ಹೆಸರಲ್ಲಿ, ಮತ್ತು ಕಾವ್ಯಳಿಗೆ ಟೈಪಿಂಗ್ ಕ್ಲಾಸ್ ಫೀಸು, ಕಾಲೇಜು ಬಸ್ಸು ಚಾರ್ಜಿಗೆ ಅವಳ ಹೆಸರಿನಲ್ಲಿಯೇ ಮನಿ ಆರ್ಡರ್ ಮಾಡುತ್ತಿದ್ದರು. ಜೊತೆಗೆ ವಾರಕ್ಕೊಂದು ಪತ್ರ ತಪ್ಪದೆ ಬರೆಯುತ್ತಿದ್ದರು. ಮೊದಲಿನ ಮುಕ್ಕಾಲು ಭಾಗ ಕಾವ್ಯಳಿಗೆ ಮೀಸಲಾದರೆ ಎರಡನೇ ಪುಟದಲ್ಲಿ ಉಳಿದ ಒಂದಿಷ್ಟು ಜಾಗದಲ್ಲಿ ಅಮ್ಮನಿಗೆ ನಾಲ್ಕು ಸಾಲು. ಆಕಡೆಯಿಂದ ಈಚೆಗೆ ಮತ್ತು ಈಕಡೆಯಿಂದ ಆಚೆಗೆ ಸುದ್ದಿಗಳೆಲ್ಲವೂ ಪತ್ರದ ಮುಖೇನವೇ ರವಾನೆಯಾಗುತ್ತಿತ್ತು.
*****
“ಅಮ್ಮಾ ಎರಡು ವಾರವಾಯ್ತು ಅಪ್ಪನ ಕಾಗದ ಬರಲಿಲ್ಲ. ಪೋಸ್ಟ್‌ಮ್ಯಾನ್ ಇತ್ತ ಕಡೆ ಬಂದಿಲ್ವಾ?”
“ಇಲ್ಲ ಮಗಾ ನಾನೂ ಅದೇ ಚಿಂತೆಯಲ್ಲಿದ್ದೇನೆ. ಅವರು ಯಾವತ್ತೂ ಹೀಗೆ ಮಾಡಿದವರೇ ಅಲ್ಲ.”
ಕಾವ್ಯಳಿಗೆ ಇನ್ನು ಕಾಯೋದು ಅಸಾಧ್ಯವೆನಿಸಿತು. ಅಪ್ಪ ಯಾಕೆ ಪತ್ರ ಬರೆದಿಲ್ಲ ನೋಡ್ಕೊಂಡು ಬರ್ಬೇಕು. ಬರೆದಿಟ್ಟು ಪೋಸ್ಟ್ ಮಾಡೋಕೆ ಮರೆತಿರಬಹುದೇ…! ಆವತ್ತು ಮಾತ್ರ ಅವಳ ಮನಸ್ಸಿನ ತುಮುಲಗಳ ವೇಗಕ್ಕೆ ಸೀತಾಫಲದ ಮರವೂ ಸ್ಪಂದಿಸದೆ ನಿಧಾನವಾಗಿ ತೂಗುತಿತ್ತು. ಅದಕ್ಕೂ ಸಾಕಾಗಿದೆಯೇನೋ… ಕಣ್ಮುಂದೆ ಅಪ್ಪ ಬರೆದಿರುವ ಪತ್ರ ಪುಟತೆರೆದು ನಿಂತಾಗ ಕಾವ್ಯಳ ಕಣ್ಣರಳಿತು.
“ನನ್ನ ಮುದ್ದು ಬಂಗಾರೂ ಹೇಗಿದ್ದೀಯಾ? ಕ್ಷಮಿಸು ಚಿನ್ನಾ… ಎರಡು ವಾರ ಪತ್ರ ಬರೆಯಲಾಗಲಿಲ್ಲ. ನನಗೊತ್ತು ಪುಟ್ಟಿ ನಿನಗೆ ತುಂಬಾ ಬೇಜಾರಾಗಿದೆ. ನನ್ನ ಉದ್ದುದ್ದಗಿನ ಅಕ್ಷರಗಳಿಂದ ಬರೆದ ಪತ್ರವನ್ನು ಓದದೆ ಮಂಕಾಗಿದ್ದೀಯಾ. ಒಂದು ವಿಷಯ ಹೇಳ್ಬೇಕಿತ್ತು ಬಂಗಾರೂ. ನಾನು ಆಸೆಯಿಂದ ಕಟ್ಟಿಟ್ಟಿದ ಕನಸಿನ ಗೊಪುರ ನುಚ್ಚು ನೂರಾಯಿತು ಮಗಾ.”
ಕೆಳಗಿನ ಪುಟಕ್ಕೆ ಕಣ್ಣು ಹಾಯಿಸಿದಾಗ, ದೊಡ್ಡಪ್ಪ ಹೊಸದೊಂದು ಹೊಟೇಲ್ ಖರೀದಿಸಿದ ಸುದ್ದಿಯೂ ಇತ್ತು. ಕುತೂಹಲದಿಂದ ಮುಂದೆ ಓದಿಕೊಂಡು ಹೋದಾಗ…
“ಮಗಾ ನಾನಿದ್ದ ಹಳೇ ಹೊಟೇಲನ್ನು ಅಣ್ಣ ಆ ಜಾಗದ ಮಾಲಕನಿಗೆನೇ ಬಿಟ್ಟು ಕೊಟ್ಟ. ಜೊತೆಗೆ ನನ್ನನ್ನೂ…..! ಅಣ್ಣ ಮಾಡಿದ ಹೊಸ ಹೊಟೇಲಿಗೆ ಬರ್ತೀಯಾ ಅಂತಾನೂ ಕೇಳಲೇ ಇಲ್ಲ. 25 ವರ್ಷ ಆ ಆಸೆಯನ್ನಿಟ್ಟುಕೊಂಡೇ ಕಡಿಮೆ ಸಂಬಳವಾದರೂ ಯಾವತ್ತೂ ಅಣ್ಣ ಕೈ ಬಿಡುವನಲ್ಲ ಅಂತ ತಿಳ್ಕೊಂಡಿದ್ದೆ. ಆದರೆ ಇಷ್ಟು ವರ್ಷ ದುಡಿದದಕ್ಕೆ ಬೇರೆಯವರಿಗೆ ಸಿಕ್ಕಂತಹ ಬೋನಸ್ ಕೂಡ ನನಗೆ ಸಿಗಲಿಲ್ಲ. ಇಂದು ನಾನು ಬೇರೆ ಯಾರದೋ ಕೈಕೆಳಗೆ ಆಳಾಗಿ ದುಡಿಯುತ್ತಲಿದ್ದೇನೆ. ಹೊಸ ದಣಿ “500 ರೂಪಾಯಿ ಜಾಸ್ತಿ ಕೊಡ್ತೇನೆ ನೀವು ಇಲ್ಲೇ ಇರಿ ಅಂತ ಹೇಳ್ತಿದ್ದಾರೆ ಆದರೆ ಇನ್ನು ನನಗೆ ಈ ಊರಿನಲ್ಲಿರಲು ಮನಸಿಲ್ಲ ಬಂಗಾರೂ. ಊರಲ್ಲಿ ಎಲ್ಲಾದರೂ ಸಣ್ಣ ಹೊಟೇಲಾದರೂ ಸರಿ, ಸಿಕ್ಕಿದರೆ ನಾನು ಊರಲ್ಲೇ ಬಂದಿರ್ತೀನಿ. ಅಮ್ಮನಿಗೂ ವಿಷಯ ತಿಳಿಸು.
ಇಂತೀ ನಿನ್ನ ಅಪ್ಪ”
ಮುಸ್ಸಂಜೆ ತಂಪಿನಲ್ಲಿಯೂ ಕಾವ್ಯಳ ಮುಖ ಬೆವೆತಿತ್ತು. ದೊಡ್ಡಪ್ಪನ ಸ್ವಾರ್ಥ ಬುದ್ದಿಗೆ ಛೀ ಅನ್ನುವಷ್ಟು ಹೇಸಿಗೆಯೆನಿಸಿತು. ‘ಪಾಪ ನನ್ನಪ್ಪ ಇಷ್ಟು ವರ್ಷ ತನ್ನವರಿಂದ, ತನ್ನೆಲ್ಲಾ ಖುಷಿಯಿಂದ ದೂರವಿದ್ದುಕೊಂಡು ದುಡಿದರೂ ಕೊನೆಗೂ ಅವರಿಗೆ ನಿರಾಶೆಯಾಯಿತಲ್ಲಾ…! ಇದು ನಿಜಾನಾ ಸುಳ್ಳಾ…!’ ಕಾವ್ಯ ಕೈಯಲ್ಲಿ ಬಿಗಿಯಾಗಿ ಹಿಡ್ಕೊಂಡಿದ್ದ ಗೆಲ್ಲುಗಳನ್ನು ಜೋರಾಗಿ ಕುಲುಕುತ್ತಾಳೆ. “ಛೆ! ನನಗೇನಾಗಿದೆ? ಈ ಭ್ರಮಾಲೋಕದಲ್ಲಿ ಸುತ್ತಿ ಯಾವಾಗಲೂ ಸಾಂತ್ವನವ ಕರೆತರುವ ನನಗಿಂದು ಅಪ್ಪನ ಬಾಡಿದ ಮುಖ ನಲುಗಿದ ಮನಸ್ಸೇಕೆ ಕಣ್ಮುಂದೆ ಬರುತ್ತಿದೆ…? ನನ್ನ ಕಲ್ಪನೆಯಲ್ಲಿ ಕಂಡಿದ್ದು ನಿಜವಾಗಿದ್ದರೆ………!
ಒಂದು ವೇಳೆ ಹೌದು ಎಂದಾದರೆ, ಇನ್ನಾದರೂ ಅಪ್ಪ ಊರಲ್ಲಿ ಇರಲಿ. ಕಷ್ಟನಾ ಸುಖನಾ ಜೊತೆ ಇದ್ದರೇನೆ ಚೆನ್ನ. ನಾಳೆನೇ ಅಪ್ಪನಿಗೆ ಪತ್ರ ಬರೆಯಬೇಕೆಂದುಕೊಂಡು ಕಾವ್ಯ ಮನೆಯತ್ತ ನಡೆಯುತ್ತಾಳೆ. ಕಣ್ಣು ತೆರೆದಷ್ಟು ಹೊತ್ತು ಕಲ್ಪನೆಯ ತೆರೆಗಳು ರಾಚಿದರೆ, ರೆಪ್ಪೆ ಮುಚ್ಚಿ ನಿದ್ರಿಸಬೇಕೆಂದರೂ ಅಪ್ಪ ಮಾತ್ರ ಕಾವ್ಯಳ ಚಿತ್ತದಿಂದ ಕದಲಲಿಲ್ಲ.
“ನನ್ನನ್ನು ಕಂಕುಳಲ್ಲಿರಿಸಿ ಜೋ ಜೋ ಲಾಲಿ ಹಾಡಿದ ಜೀವ…, ನನ್ನನ್ನೇ ತನ್ನ ಜೀವದುಸಿರೆಂದು ತುಡಿಯುವ ಜೀವ… ಅಪ್ಪಾ ನೀನಿಲ್ಲದೆ ಈ ಬಾಳಿಗೆ ಬಲವಿಲ್ಲ. ಮಾರನೇ ದಿನ ಬೆಳಿಗ್ಗೆ ಕಾವ್ಯ, ಪೆನ್ನು ಮತ್ತು ಇನ್ಲ್ಯಾಂಡ್ ಲೆಟರನ್ನು ಕೈಗೆತ್ತಿಕೊಂಡು ಪತ್ರ ಬರೆಯಲು ಕುಳಿತುಕೊಳ್ಳುತ್ತಾಳೆ. ಕಾವ್ಯ ಅಪ್ಪನಿಗೆ ಪ್ರೀತಿಯಿಂದ ಬರೆದ ದುಂಡಗಿನ ಮುದ್ದಾದ ಅಕ್ಷರಗಳು ಅರ್ಧ ಪುಟ ತುಂಬಿದ್ದವು. ಅಷ್ಟರಲ್ಲಿ ಹೊರಗಡೆ ಒಂದಷ್ಟು ದೂರದಿಂದ, ಡುಗ್ ಡುಗ್ ಡುಗ್… ಆಟೋ ಬರುವ ಸದ್ದು.
‘ಬಾಯಮ್ಮನ ಮನೆಗೆ ಯಾರೋ ಬಂದಿರಬಹುದು’ ಎಂದುಕೊಂಡರೆ, ನಮ್ಮನೆಯ ಜೂಲಿ ಮತ್ತು ಟಾಮಿ ಯಾಕೀತರ ಬೊಗಳುತ್ತಿವೆ…? ಕಾವ್ಯ ಮನೆಯಿಂದ ಹೊರಗಡೆ ಬರುವಷ್ಟೊತ್ತಿಗೆ ಜೂಲಿ ಮತ್ತು ಟಾಮಿ ಆಟೋದ ಸುತ್ತ ಬಾಲ ಅಲ್ಲಾಡಿಸಿಕೊಂಡು ಸುತ್ತು ಹೊಡೆಯುತ್ತಿದ್ದವು. ಯಾರೋ ನಮ್ಮವರಿರಬೇಕೆಂದುಕೊಂಡು ಕುತೂಹಲದಿಂದ ನೋಡಿದಾಗ……
ಅಪ್ಪ್ಪ ಬ್ಯಾಗನ್ನು ಆಟೋದೊಳಗಿನಿಂದ ಕೆಳಗಿಳಿಸುತ್ತಿದ್ದರು. ಈಬಾರಿ ಒಂದೆರಡು ಬ್ಯಾಗ್ ಜಾಸ್ತಿಯೇ ಇತ್ತು. ಕಾವ್ಯ ಓಡೋಡಿ ಬಂದವಳೇ “ಅಪ್ಪಾ ಎರಡು ಬ್ಯಾಗ್ ನಾನೆತ್ಕೋತೀನಿ ಕೊಡಿ” ಅಂದಾಗ, ‘ಬೇಡ ಮಗಾ ತುಂಬಾ ಭಾರ ಇದೆ.’ ಕಾವ್ಯ ನಗುತ್ತಲೇ….. “ಇಲ್ಲಪ್ಪಾ ನನ್ನ ಮನಸ್ಸು ಹಗುರಾಗಿದೆ ಈ ಬ್ಯಾಗೇನು ಮಹಾ” ಅಂದಾಗ ಅಲ್ಲೆರಡು ಮನಸ್ಸುಗಳು ಭಾವುಕಗೊಂಡು ಹೇಳಬೇಕೆನುವುದೆಲ್ಲವೂ ಮೌನದೊಳಗಿನವಾದವು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ