ಆತಂಕದಲ್ಲೋ, ಆಸೆಯಲ್ಲೋ ತಮ್ಮ ಹಾಗೆಯೇ ಕಾಣುವ ಭಾರತೀಯರನ್ನು ಸುರೀನಾಮಿಗಳು ಎಂದು ಭಾವಿಸುತ್ತಾರೆ. ಡಚ್ಚರು ಅವರು ಭಾರತೀಯರಲ್ಲ, ಕೇವಲ ಸುರೀನಾಮಿಗಳು ಎಂದು ಪ್ರವಾಸಿ ಭಾರತೀಯರನ್ನು ಎಚ್ಚರಿಸುತ್ತಾರೆ. ಕೆಲವರನ್ನು ಕಂಡಾಗ ಅವರು ಭಾರತೀಯರಾಗಿದ್ದರೆ ಎಂದು ನಮಗೂ ಆಸೆಯಾಗುತ್ತದೆ. ಇನ್ನು ಎರಡು ಮೂರು ತಲೆಮಾರುಗಳ ನಂತರ ಇವರೆಲ್ಲ ಹೇಗೆ ಕಾಣಬಹುದು?
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹನ್ನೆರಡನೆಯ ಬರಹ

2019ರ ನವೆಂಬರ್ ತಿಂಗಳ ಸಂಜೆ ಅಂದರೆ ಕಗ್ಗತ್ತಲ ರಾತ್ರಿ. ಗಾಳಿ, ಮಳೆ, ಮಂಜು ಎಲ್ಲವೂ ವ್ಯಾಪಕವಾಗಿದೆ, ತೀವ್ರವಾಗಿದೆ. ಬೆಳಿಗ್ಗೆಯಿಂದ ಮನೆಯಲ್ಲೇ ಕುಳಿತು ಬೇಸರವಾಗಿ, ಮನೆಯಿಂದ ಹೊರಗೆ ಬಂದು ಅಕ್ಕಪಕ್ಕದ ಬೀದಿಗಳಲ್ಲಿ ಓಡಾಡಲು ಶುರುಮಾಡಿದೆ. ಯುದ್ಧಕ್ಕೆ ಹೊರಟವನಂತೆ ಸ್ವೆಟರ್, ಮಫ್ಲರ್, monkey cap, ಜರ್ಕಿನ್, ಒಟ್ಟು ಆರೇಳು ಕೆಜಿ ಶಸ್ತ್ರಾಸ್ತ್ರ ಮೈ ಮೇಲೆ. ಒಂದು ಪಿಜ್ಜಾ ಅಂಗಡಿ ಕಾಣಿಸಿತು. ಮೊಮ್ಮಗನಿಗೆ surprise ಮಾಡಲೆಂದು ಪಿಜ್ಜಾ ಪಾರ್ಸಲ್ ತೆಗೆದುಕೊಂಡು ಹೋಗಬಹುದು ಎಂಬ ಯೋಚನೆಯಿಂದ ಅಂಗಡಿಯ ಒಳಗೆ ಹೋಗಿ, ಪಿಜ್ಜಾ ಬೇಡಿಕೆ ಸಲ್ಲಿಸಿ, ಮೂಲೆಯಲ್ಲಿದ್ದ ಟೇಬಲ್ ಬಳಿ ಕುಳಿತುಕೊಂಡೆ. ಮಂಕಾದ ದೀಪ ಉರಿಯುತ್ತಿತ್ತು. ಚಳಿಗೆ ಹಲ್ಲು ಕಡಿಯುತ್ತಿದ್ದೆ. ಓಡಾಡುತ್ತಿದ್ದರೇ ವಾಸಿ, ಮುದುಡಿಕೊಂಡು ಕುಳಿತಿರುವುದು ತುಂಬಾ ಕಷ್ಟ ಎನಿಸಿತು.

ನನ್ನೆದುರಿನ ಟೇಬಲ್‌ನ ಆಚೆ ಬದಿಯಲ್ಲಿ ಇನ್ನೊಬ್ಬ ಕೂತಿದ್ದ. ನನ್ನದೇ ಎತ್ತರ, ನನ್ನ ರೀತಿಯದೇ ವೇಶಭೂಷಣ. ಅವನೂ ಕೂಡ ನನ್ನ ಹಾಗೆ ಪಿಜ್ಜಾಗೆ ಸೂಚನೆ ಕೊಟ್ಟಿರಬೇಕು ಅಥವಾ ಇಲ್ಲೇ ಕೂತು ತಿನ್ನಬಹುದು ಎನಿಸಿತು. ಒಂದೆರಡು ಸಲ ಮೆನು ಕಾರ್ಡ್ ನೋಡಿದ. ಅಂಗಿಯ ಜೇಬಿನಿಂದ tooth pick ತೆಗೆದು ಹಲ್ಲು ಸಂದಿಯಲ್ಲಿ ತೂರಿಸಿದ. ಅದನ್ನು ಹೊರ ತೆಗೆದು ಇನ್ನೊಂದು ತುದಿಯಿಂದ ಕಿವಿಯ ಗುಗ್ಗೆ ತೆಗೆಯಲು ಶುರುಮಾಡಿದ. ಕಿವಿಯ ಒಳಗೆ ಒಂಟಾದ sensation ನಿಂದ ಅನುಭವಿಸುತ್ತಿದ್ದ ಖುಷಿ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ನಂತರ ಕಿವಿಯಿಂದ ಕಡ್ಡಿ ತೆಗೆದು ಮೇಜಿನ ಮೇಲಿರಿಸಿದ. ನನಗೆ ಮೋಜೆನಿಸಿತು.

ನಾನು ಅವನನ್ನು ನೋಡುತ್ತಿರುವುದು ಅವನಿಗೆ ಇಷ್ಟವಾಗಲಿಲ್ಲವೆಂಬ ಮುಖಭಾವ. ಬೇಡ, ಅವನನ್ನು ದೃಷ್ಟಿಸಿ ನೋಡಬಾರದು ಅಂದುಕೊಳ್ಳುವ ಹೊತ್ತಿಗೆ ಅವನೇ ಎದ್ದು ಬಂದು ನನ್ನ ಎದುರಿನ ಕುರ್ಚಿಯಲ್ಲಿ ಕುಳಿತುಕೊಂಡ. ಹಿಂದಿಯಲ್ಲಿ ಮನೆ ಎಲ್ಲಿ ಅಂದ. ನೋಡಲು ಅವನು ಭಾರತೀಯನಂತೆಯೇ ಕಾಣುತ್ತಿದ್ದರಿಂದ ಹಿಂದಿಯಲ್ಲಿ ಮಾತನಾಡಿಸಿದ್ದು ನನಗೆ ಆಶ್ಚರ್ಯವೇನೂ ಆಗಲಿಲ್ಲ. ಮನೆ ಎಲ್ಲಿ ಎಂದು ಕೇಳಿದಾಗ ವಿವರಿಸಿದೆ. ಮಗಳು, ಅಳಿಯ, ಬೆಂಗಳೂರಿನ ಬಗ್ಗೆ ವಿಚಾರಿಸಿದ. Monkey cap ತೆಗೆದು ಟೇಬಲ್ ಮೇಲಿಟ್ಟು ಸಂಭಾಷಣೆ ಮುಂದುವರಿಸುವ ಆಸೆ ತೋರಿಸಿದೆ. ಅಷ್ಟು ಹೊತ್ತಿಗೆ ನನ್ನ ಪಿಜ್ಜಾ ರೆಡಿಯಾಗಿದೆಯೆಂದು ಅಂಗಡಿಯವನ್ನು ಕೈ ಸನ್ನೆ ಮಾಡಿದ. ನಾನು ಗಲ್ಲದ ಹತ್ತಿರ ಹೋದೆ.

ಅರ್ಧ ಇಂಗ್ಲಿಷ್, ಅರ್ಧ ಡಚ್ ಭಾಷೆಯಲ್ಲಿ ನಿಮ್ಮ ಜೊತೆ ಮಾತನಾಡುತ್ತಿದ್ದವನು ಏನು ಹೇಳಿದ ಎಂದು ಅಂಗಡಿಯವನು ಕೇಳುತ್ತಾ, ನನ್ನೆದುರಿಗೆ ಕುಳಿತಿದ್ದವನ ಕಡೆ ವಕ್ರದೃಷ್ಟಿ ಬೀರಿದ. ಏನೂ ವಿಶೇಷವಿಲ್ಲ ಸುಮ್ಮನೆ ಮಾತನಾಡುತ್ತಿದ್ದೆವು ಎಂದು ಬಿಡಿಸಿ ಹೇಳಿದೆ.

ಹುಷಾರಾಗಿರಿ, rascals ಅವರು. ಎಲ್ಲರ ಹತ್ತಿರವೂ ತಾವು Indians ಅಂತ ಹೇಳಿಕೊಳ್ಳುತ್ತಾರೆ. ನೋಡುವುದಕ್ಕೆ ನಿಮ್ಮ ತರವೇ ಕಾಣುತ್ತಾರೆ. ಆದರೆ ಅವರು ಭಾರತೀಯರಲ್ಲ ಸುರೀನಾಮಿಗಳು. ಭಾರತೀಯರು ಎಂದು ನಿಮಗೆ ಹತ್ತಿರವಾಗಿ ನಂತರ ಏನಾದರೂ ಸಹಾಯ ಕೇಳ್ತಾರೆ, ಖಂಡಿತವಾದ ಧ್ವನಿಯಲ್ಲಿ ಎಚ್ಚರಿಸಿದ.

ಸ್ವಲ್ಪ ಉತ್‌ಪ್ರೇಕ್ಷೆ ಮಾಡುತ್ತಿದ್ದಾನೆ ಅನಿಸಿತು. ಆತ ನಮ್ಮ ಸಂಭಾಷಣೆಯ ಪರಿವೆಯೇ ಇಲ್ಲದವನಂತೆ ಮತ್ತೆ ಮೆನು ಕಾರ್ಡ್ ಓದುತ್ತಾ ಕುಳಿತಿದ್ದ.

*****

ಮೊಮ್ಮಗಳ ಶಿಶುಪಾಲನಾ ಕೇಂದ್ರ ಅಂದರೆ ಬಹುಭಾಷಿಕ, ಬಹು ಸಾಂಸ್ಕೃತಿಕ ಕೇಂದ್ರವಿದ್ದಂತೆ. ಮಕ್ಕಳ ದಾದಿಯರು, ಮೇಲ್ವಿಚಾರಕರು, ಎಲ್ಲರೂ ಯಾವ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದರು. ಎಲ್ಲ ಬಣ್ಣ, ಎಲ್ಲ ಆಕೃತಿಗಳೂ ಕಾಣುತ್ತಿದ್ದವು. ಭಿನ್ನವಾಗಿ ಕಾಣುತ್ತಲೇ ನಾವು ಒಂದು ಎಂದು ಕೂಡ ನೆನಪಿಸುತ್ತಿದ್ದರು.

ಆದರೆ ನಾವು ಯಾವಾಗಲೂ ನಮ್ಮ ಹಾಗೆ ಕಾಣುವವರನ್ನೇ ನೋಡುತ್ತೇವೆ. ಬೇರೆಯವರು ಎದುರಿಗೆ ಇದ್ದರೂ ನಮಗೆ ಬೇಕಾದ ರೀತಿಯಲ್ಲೇ, ಬೇಕಾದಷ್ಟನ್ನೇ ಗಮನಿಸುತ್ತೇವೆ. ನಮ್ಮ ಹಾಗೆ ಇರುವವರ ಬಗ್ಗೆ ಮಾತ್ರ ಕುತೂಹಲಿಗಳಾಗಿರುತ್ತೇವೆ. ಒಬ್ಬಾಕೆ ಮೈ ಕೈ ತುಂಬಿಕೊಂಡು, ದಟ್ಟ ಕಪ್ಪ ಕೂದಲು, ಮಿಂಚು ಹೊಳೆಯುವ ಕಣ್ಣುಗಳಿಂದ ಆಕರ್ಷಕವಾಗಿ ಗಮನ ಸೆಳೆಯುತ್ತಿದ್ದಳು. ಪದೇ ಪದೇ ನೋಡಬೇಕು ಎನ್ನುವ ಆಸೆ ಹುಟ್ಟಿಸುವ ಮುಖಭಾವ. ಸೆಲ್ವಾರ್ ಕಮೀಜಿನಲ್ಲಿ ಇದ್ದುದರಿಂದಲೂ ನಾನು ಆಕೆಯನ್ನು ವಿಶೇಷವಾಗಿ ಗಮನಿಸಿರಬಹುದು. ಮನೆಗೆ ಬಂದು ಹಾಗೇ ಹೇಳಿದೆ.

“ಅಯ್ಯೋ, ಬೇಸ್ತು ಬೀಳಬೇಡ. ಆಕೆ ಭಾರತೀಯಳಲ್ಲ. ಸುರೀನಾಮಿ. ನಮ್ಮ ಹಾಗೇ ಕಾಣುತ್ತಾರೆ ಅಷ್ಟೇ, ನಮ್ಮವರಲ್ಲ” ಎಂದು ಮಗಳು ಹೇಳಿದಳು. ನನಗೆ ನಿರಾಶೆಯಾಯಿತು. ಪ್ರತಿಸಲ ಪಾಲನಾ ಕೇಂದ್ರಕ್ಕೆ ಹೋದಾಗಲೂ ಅವಳನ್ನೇ ಗಮನಿಸುತ್ತಿದ್ದೆ. ಮನೆಯಲ್ಲೂ ಕೂಡ ತಮಾಷೆ ಮಾಡುತ್ತಿದ್ದರು.

*****

ಮೊಮ್ಮಗನೊಡನೆ ಒಮ್ಮೆ ಪಾರ್ಕಿಗೆ ಹೋಗಿದ್ದೆ. ಇಲ್ಲಿ ಫುಟ್‌ಬಾಲ್ ಎಷ್ಟರ ಮಟ್ಟಿಗೆ ಜೀವನಶೈಲಿಯ ಭಾಗವೆಂದರೆ, ಮಕ್ಕಳಿಗೆ ಓಡಾಡುವಾಗ ಕಾಲು ಚೆಂಡು ಅವರ ಎದುರಿಗೆ ಇರಲೇ ಬೇಕು. ಅದನ್ನು ಒದೆಯುತ್ತಲೇ, ಅದರೊಡನೆ ಆಟವಾಡುತ್ತಲೇ ಅವರು ಓಡಾಡುವುದು. ಅವರ ಸಮಕ್ಕೆ ನಾವು ಆಡಲು ಸಾಧ್ಯವೇ? ಸರಿ, ಪಾರ್ಕಿನಲ್ಲಿದ್ದ ಅನೇಕ ಹುಡುಗರ ನಡುವೆ ಕಂಡ ಒಬ್ಬ ಭಾರತೀಯ ಹುಡುಗನ ಕಡೆ ಕೈ ತೋರಿಸಿ ಅವನ ಜೊತೆ ನೀನು ಆಡು, ನಾನು ಇಲ್ಲಿ ಕಲ್ಲು ಬೆಂಚಿನ ಮೇಲೆ ಕೂತಿರುತ್ತೇನೆ ಎಂದು ಹೇಳಿ ಕುಳಿತುಕೊಂಡೆ. ಕೆಲ ನಿಮಿಷಗಳಲ್ಲೇ ಅವರಿಬ್ಬರಿಗೂ ಜಗಳವಾಯಿತು. ಮೊಮ್ಮಗ ಕೋಪಗೊಂಡು ನನ್ನ ಬಳಿ ಬಂದ. ಇನ್ನೊಬ್ಬರ ಜೊತೆ ಆಡಲು ಅವನಿಗೆ ಇಷ್ಟವೇ ಇಲ್ಲ. ಆ ಹುಡುಗ ಭಾರತೀಯನಲ್ಲ. ಭಾರತೀಯರ ಹಾಗೆ ಕಾಣುವ ಸುರೀನಾಮಿ, ದರಿದ್ರವನು.

ಮನೆಯ ಬಲಭಾಗದ ರಸ್ತೆಗೆ ಹೊಂದಿಕೊಂಡಿರುವ ಕಾಲುವೆ-ಕೊಳದ ಹತ್ತಿರ ನಿಂತಿದ್ದೆ. ಒಬ್ಬ ಆಜಾನುಬಾಹು ನನ್ನೆಡೆಗೆ ಬರುವಂತೆ ಕಂಡಿತು. ನೋಡಲು ಕೆರೀಬಿಯನ್ ಕ್ರಿಕೆಟ್ ಆಟಗಾರನಂತೆ ಕಾಣುತ್ತಿದ್ದ. ಅದೇ ಮುಖಭಾವ, ಅದೇ ರೀತಿಯ ಮೈ ಕಟ್ಟು. ದಪ್ಪನೆಯ ಒರಟು ಬೂಟು. ಇವನೇಕೆ ನನ್ನ ಕಡೆ ಬರುತ್ತಿದ್ದಾನೆ ಎಂದು ಭಯವೇ ಆಯಿತು.

ನನ್ನ ಹತ್ತಿರ ಬಂದವನೇ ನಕ್ಕ, ಇಲ್ಲ ನಗು ಚೆಲ್ಲಿದ.

“ನೀವು ಸುರೀನಾಮಿ ಅಲ್ಲವೇ” ಎಂದು ಕೇಳಿದ. ತಕ್ಷಣವೇ ಇಲ್ಲ ಅನ್ನಲು ನನಗೆ ಮನಸ್ಸು ಬರಲಿಲ್ಲ. ಅಲ್ಲ ಎನ್ನಲು ನಾಲಿಗೆ ತಡವರಿಸಿತು. ಇಲ್ಲ ಅಂದರೆ ಅವನಿಗೆ ಬೇಜಾರಾಗಬಹುದಲ್ಲವೇ ಎಂದು ಬೇಸರವಾಯಿತು.

“ಇಲ್ಲ ನಾನು ಭಾರತೀಯ” ಎಂದು ಸಪ್ಪೆ ಧ್ವನಿಯಲ್ಲಿ ಹೇಳಿದೆ.

ತಕ್ಷಣ ಅವನ ಮುಖ ಕಪ್ಪಿಟ್ಟಿತು.

“ಇಲ್ಲ ನೀವು ಸುರೀನಾಮಿಯಂತೆ ಕಾಣುತ್ತೀರಿ. ನನಗಂತೂ ಹಾಗೆನಿಸಿತು. ಆದ್ದರಿಂದ ನಿಮ್ಮನ್ನು ನೋಡಿದ ತಕ್ಷಣ ಖುಷಿಯಾಯಿತು.”

ಒಂದು ಕ್ಷಣ ಅವನಿಗೆ ನಿರಾಶೆ ಉಂಟುಮಾಡಿದ್ದಕ್ಕೆ ನನಗೇ ಬೇಸರವಾಯಿತು.

ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಹೆಸರು, ಸ್ವಭಾವ, ಮುಖಭಾವ ನೋಡಿ ನನ್ನನ್ನು ಕೆಲವರು ಅವರವರಿಗೆ ಇಷ್ಟವಾದ ಜಾತಿಯವರೆಂದು ತಿಳಿದುಕೊಂಡಿದ್ದಾರೆ. ನಾನು ಕೂಡ ತಿದ್ದಲು ಹೋಗುತ್ತಿರಲಿಲ್ಲ. ಒಂದೇ ಊರಿನಲ್ಲಿ ಮೂರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರೆ, ಒಂದಲ್ಲ ಒಂದು ಸಂದರ್ಭದಲ್ಲಿ ನಮ್ಮ ಹಿನ್ನೆಲೆ ಗೊತ್ತಾಗುತ್ತದೆ. ಆವಾಗ ಕೆಲವರು ನನ್ನ ಸ್ನೇಹ ಸಂಬಂಧವನ್ನೇ ತೊರೆದರು. ಇನ್ನು ಕೆಲವರು ನಾನು ಮುಂಚೆಯೇ ನನ್ನ ಜಾತಿ ಯಾವುದು ಎಂದು ಹೇಳಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸಂದರ್ಭ ಬೇರೆಯಾಗಿತ್ತು. ನಾನು ಸುರೀನಾಮಿಯಲ್ಲದ್ದಕ್ಕೆ ನನಗೇ ಬೇಸರವಾಯಿತು.

“ನನಗೆ ಭಾರತ ಅಂದರೆ ತುಂಬಾ ಇಷ್ಟ. ಮುಂಬೈ ನನ್ನ ಮೆಚ್ಚಿನ ನಗರ” ಎಂದು ಎದುರಿಗಿದ್ದವನು ಹೇಳಿದ.

ಮಾತನಾಡಲು ಒಂದು ಎಳೆ ಸಿಕ್ಕಿದ್ದಕ್ಕೆ ನನಗೂ ಖುಷಿಯಾಐತು. ಮೂರು ನಾಲ್ಕು ವಾಕ್ಯಗಳ ಕುಶಲ ಸಂಭಾಷಣೆ ನಡೆಸಿದೆ. ಈಗ ಅವನು ನನ್ನ ಸಮೀಪ ಬಂದ.

“ನೋಡು ಈಗ ನಾನು ಒಬ್ಬ girl friend ಜೊತೆ ಸುಖವಾಗಿ ಕಾಲ ಕಳೆಯಲು ಇಲ್ಲಿಗೆ ಬಂದಿದ್ದೇನೆ. ಕೆಲ ದಿನಗಳ ಮಟ್ಟಿಗೆ ಎದುರುಗಡೆ ಫ್ಲಾಟ್‌ನಲ್ಲಿ ಇದ್ದೇನೆ.”

ಸುಮಾರು ಇನ್ನೂರು ಮೀಟರ್ ದೂರದಲ್ಲಿದ್ದ ಅಪಾರ್ಟ್ಮೆಂಟ್ ಕಡೆ ಕೈ ತೋರಿಸಿದ. ಮನುಷ್ಯ ಈ ವಿಷಯವನ್ನು ನನಗೇಕೆ ಹೇಳುತ್ತಿದ್ದಾನೆ! ಇಲ್ಲ ಗೇಲಿ ಮಾಡುವುದಕ್ಕೆ ಹೇಳುತ್ತಿದ್ದಾನೋ ಏನೋ ಅನಿಸಿತು. ಆದರೆ ಅವನ ಮುಖದಲ್ಲೇನು ಕುಹಕ, ದುರುಳತೆ ಕಾಣಲಿಲ್ಲ. ಇಷ್ಟು ಹೇಳಿದವನೇ ದಿಢೀರನೆ ಹೊರಟುಬಿಟ್ಟ. ಒಳ್ಳೆ ಆಸಾಮಿ ಎಂದುಕೊಂಡು ನಾನು ಅವನು ಹೋದ ದಿಕ್ಕನ್ನೇ ನೋಡುತ್ತಾ ಸ್ವಲ್ಪ ಹೊತ್ತು ನಿಂತಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಅವನು ಎದುರು ದಿಕ್ಕಿನಿಂದ ಬಂದ. ನನ್ನ ಬಳಿ ನಿಲ್ಲಲಿಲ್ಲ. ಇಡೀ ಬೀದಿಗೇ ಕೇಳುವಂತೆ ಕೂಗುತ್ತಾ ಹೇಳುತ್ತಿದ್ದ:

“ಭಾರತೀಯರಿಗೆ ನಾನು ತುಂಬಾ ರೀತಿಯಲ್ಲಿ ನೆರವಾಗಿದ್ದೀನಿ. ಯಾವುದೇ ರೀತಿಯ ಸಹಾಯಕ್ಕೆ ಯಾರು ಬೇಕಾದರೂ ನನ್ನ ಬಳಿ ಬರಬಹುದು.”

ಮುಂದಿನ ಎರಡು-ಎರಡೂವರೆ ತಿಂಗಳಲ್ಲಿ ನಾನು ಅದೇ ರಸ್ತೆಯಲ್ಲಿ ನೂರಾರು ಸಲ ಓಡಾಡಿದ್ದೇನೆ. ಆ ದಿನ ನಿಂತ ಸ್ಥಳದಲ್ಲೇ ನಿಂತಿದ್ದೇನೆ. ಮತ್ತೆ ಅವನು ಸಿಗಲಿಲ್ಲ. ನಗರದಲ್ಲೂ ಎಲ್ಲೂ ಕಾಣಲಿಲ್ಲ.

*****

ಮೂರು ಭೇಟಿಗಳನ್ನು, ಪ್ರಸಂಗಗಳನ್ನು ಕುರಿತು ಯೋಚಿಸುತ್ತಿದ್ದಂತೆ “ನಾವು ಯಾರು”, “ನಾನು ಯಾರು” ಎಂಬ ಪ್ರಶ್ನೆಗೆ ನಮಗೆ ನಾವೇ ಕೊಟ್ಟುಕೊಳ್ಳುವ ಉತ್ತರ, ಇನ್ನೊಬ್ಬರಿಗೆ ತಿಳಿಸುವ ಉತ್ತರ, ವಿವರ, ಎಷ್ಟು ಸರಿ ಎಂಬ ಪ್ರಶ್ನೆ ಮೂಡಿತು. ಸುರೀನಾಮಿಗಳಿಗೇ ಅವರ ಬಗ್ಗೆ ನಮಗೆ ತಿಳಿಸಲು ಹೇಳಿದರೆ ಏನೆಂದು ಹೇಳಬಹುದು? ನಾವಾದರೂ ಏನನ್ನು ಕೇಳಲು ಬಯಸುತ್ತೇವೆ?

ಸುರಿನಾಮ್ ಈಗ ದಕ್ಷಿಣ ಅಮೆರಿಕದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಹಿಂದೆ ನೆದರ್‌ಲ್ಯಾಂಡ್ಸ್‌ನ ವಸಾಹತಾಗಿತ್ತು. ಈಗ ಅಲ್ಲಿಯ ಜನಸಂಖ್ಯೆ ಕೇವಲ ಆರೇಳು ಲಕ್ಷ. ಅನೇಕ ಭಾಷೆ, ಧರ್ಮ, ಪಂಗಡಗಳಿವೆ. ಶೇಕಡ ಇಪ್ಪತ್ತಕ್ಕಿಂತ ಹೆಚ್ಚು ಭಾರತೀಯರು. ಅವರೆಲ್ಲ ಉತ್ತರ ಭಾರತದಿಂದ ಕೃಷಿ ಕಾರ್ಮಿಕರಾಗಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಹೋದವರು. ಮಾತನಾಡುವುದು ಹಿಂದಿಯಲ್ಲಿ. ಕೆರೀಬಿಯನ್ ಹಿಂದೂಸ್ಥಾನಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಅದೊಂದು ಪ್ರಭೇದವಂತೆ. ಯಥಾ ಪ್ರಕಾರ ಎಲ್ಲ ವಸಾಹತುಶಾಹಿ ದೇಶಗಳ ನಾಗರಿಕರಂತೆ, ವಸಾಹತು ಪ್ರಭುಗಳ ನಾಡಿಗೆ ಉದ್ಯೋಗಕ್ಕಾಗಿ, ವಿದ್ಯೆಗಾಗಿ ವಲಸೆ ಬರುತ್ತಾರೆ. ಸುರೀನಾಮ್ ದೇಶದ ಒಟ್ಟು ಜನಸಂಖ್ಯೆಯ ಆರೇಳು ಲಕ್ಷದಲ್ಲಿ, ನೆದರ್‌ಲ್ಯಾಂಡ್ಸ್‌ನಲ್ಲಿರುವ ಸುರೀನಾಮಿಗಳ ಸಂಖ್ಯೆಯೇ ಮೂರು ಲಕ್ಷವಂತೆ. ಹೆಚ್ಚಿನವರು ಮೂಲದಲ್ಲಿ ಭಾರತೀಯ ಸಂಜಾತರಂತೆ. ಡಚ್ ಭಾಷೆಯನ್ನು ಕೂಡ ಚೆನ್ನಾಗಿ ಕಲಿತಿದ್ದಾರಂತೆ. ಪ್ರತ್ಯೇಕ ದ್ವೀಪವಾಗಿ ಉಳಿಯದೆ ಸ್ಥಳೀಯ ಜನಾಂಗ, ಜೀವನಶೈಲಿಯೊಡನೆ ಸಾಮರಸ್ಯದಿಂದ ಬೆರೆಯುತ್ತಾರೆ ಅನ್ನುವುದು ಸಾರ್ವತ್ರಿಕ ಅಭಿಪ್ರಾಯ. ಆದರೆ ಅವರ ಬಗ್ಗೆ ಒಂದು ರೀತಿಯ ಕೀಳಾದ ಅಸಡ್ಡೆಯ ಭಾವನೆಯೂ ಇದೆ. ಏನೇ ಆದರೂ ಕೊನೆಗೆ ಅವರು “ಆಶ್ರಿತರು”, ನೆಲೆ ಇಲ್ಲದವರು, ಹೊಟ್ಟೆಪಾಡಿಗಾಗಿ ಬಂದು ಸೇರಿಕೊಂಡವರು ಎಂಬ ಭಾವನೆ ದಟ್ಟವಾಗಿದೆ. ಶೇಕಡ ಹತ್ತರಷ್ಟು ಸುರೀನಾಮಿಗಳು ಮಾತ್ರ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಉಳಿದವರದೆಲ್ಲ ಸಣ್ಣಪುಟ್ಟ ಕೆಲಸಗಳು. ಅದೂ ಅಸಂಘಟಿತ ವಲಯದಲ್ಲಿ. ಕಡಿಮೆ ಕೂಲಿ, ಸಂಬಳ ಇರುವ ವಲಯದಲ್ಲಿ. ಆದರೂ ಅವರ ಬಗ್ಗೆ ಅಸಹನೆ, ಕೀಳು ಭಾವನೆ.

ಆತಂಕದಲ್ಲೋ, ಆಸೆಯಲ್ಲೋ ತಮ್ಮ ಹಾಗೆಯೇ ಕಾಣುವ ಭಾರತೀಯರನ್ನು ಸುರೀನಾಮಿಗಳು ಎಂದು ಭಾವಿಸುತ್ತಾರೆ. ಡಚ್ಚರು ಅವರು ಭಾರತೀಯರಲ್ಲ, ಕೇವಲ ಸುರೀನಾಮಿಗಳು ಎಂದು ಪ್ರವಾಸಿ ಭಾರತೀಯರನ್ನು ಎಚ್ಚರಿಸುತ್ತಾರೆ. ಕೆಲವರನ್ನು ಕಂಡಾಗ ಅವರು ಭಾರತೀಯರಾಗಿದ್ದರೆ ಎಂದು ನಮಗೂ ಆಸೆಯಾಗುತ್ತದೆ. ಇನ್ನು ಎರಡು ಮೂರು ತಲೆಮಾರುಗಳ ನಂತರ ಇವರೆಲ್ಲ ಹೇಗೆ ಕಾಣಬಹುದು?

ಯಾರೊಬ್ಬರೂ ನಾವು ಇಂತಹ ದೇಶದಲ್ಲಿ, ಧರ್ಮದಲ್ಲಿ ಹುಟ್ಟಬೇಕೆಂದು ಕೇಳಿಕೊಂಡು ಹುಟ್ಟುವುದಿಲ್ಲ. ಹುಟ್ಟಿದ ಮೇಲೆ ಅದೊಂದು ಆಯ್ಕೆಯಿಲ್ಲದ ಶಾಪ. ಸುರೀನಾಮಿಗಳಾಗಬೇಕೆಂದು ಅವರ ಆಯ್ಕೆಯೇನೂ ಅಲ್ಲ. ಈ ಸಂದಿಗ್ಧವನ್ನು ನಾವು ಗೌರವಿಸಬೇಕು, ಅರ್ಥ ಮಾಡಿಕೊಳ್ಳಬೇಕು.