ಸಾಹಿತ್ಯದಲ್ಲಿ ಎರಡು ಬಗೆ. ಒಂದು ಓದಿಸಿಕೊಂಡು ಹೋಗಿ ಓದುವ ಸಂತೋಷ, ಉಲ್ಲಾಸ ನೀಡಿ ಯೋಚಿಸಬೇಕಾಗಿಲ್ಲ ಎಂಬ ಬರಹಗಳು. ಇನ್ನೊಂದು ಬಗೆ, ಚಿಂತನೆಗೆ ಹಚ್ಚುವ, ತಾತ್ವಿಕ ಶೋಧಕ್ಕೆ ಇಳಿವ ಕತೆಗಳು. ನಾರಾಯಣ ಯಾಜಿಯವರಿಗೆ ಓದಿಸಿಕೊಂಡು ಹೋಗುವ ಶೈಲಿ ಇದೆ. ತಾತ್ವಿಕ ಶೋಧನೆಯಲ್ಲಿ ಆಸಕ್ತಿ ಇದೆ. ಆದರೆ ತಾತ್ವಿಕತೆ ಇನ್ನೂ ಸ್ಪಷ್ಟವಾಗಬೇಕಾಗಿದೆ. ಬರಹಗಾರನೊಬ್ಬ ನಿರಂತರವಾಗಿ ಯೋಚಿಸುತ್ತಾ, ತನ್ನ ಅರಿವಿನಲ್ಲಿ ಮಾಗುತ್ತಾ ಹೋದ ಹಾಗೆಯೇ ಅಭ್ಯಾಸದ ಮೂಲಕ ಪಕ್ವತೆಯನ್ನು ಸಾಧಿಸುತ್ತಾನೆ. ಸತತವಾಗಿ ಅಭ್ಯಾಸ- ಬರವಣಿಗೆಯಲ್ಲಿ ತೊಡಗಿಕೊಳ್ಳುವುದೂ ಕೆಲವೊಮ್ಮೆ ಅಂತಹ ಪಕ್ವತೆಗೆ ಸಾಗುವ ದಾರಿಯಾಗುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ನಾರಾಯಣ ಯಾಜಿಯವರ “ನೈದಿಲೆಯ ಒಡಲು” ಕಥಾಸಂಕಲನಕ್ಕೆ ಎಸ್.ಆರ್. ವಿಜಯಶಂಕರ ಬರೆದ ಮುನ್ನುಡಿ
‘ನೈದಿಲೆಯ ಒಡಲು’ ನಾರಾಯಣ ಯಾಜಿಯವರ ಮೊದಲ ಕಥಾಸಂಕಲನ. ಆಗಾಗ ಇವರ ಬರಹಗಳನ್ನು ಮತ್ತು ಕತೆಗಳನ್ನು ಆಗ ಈಗ ಪತ್ರಿಕೆಗಳಲ್ಲಿ ಓದಿದ್ದಿದೆ. ಉತ್ಥಾನ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಅವರ ‘ವ್ಯಸ್ತ’ ಕತೆಗೆ ಬಹುಮಾನ ಬಂದಿತ್ತು. ಹವ್ಯಕ ಕವಯತ್ರಿ ಕಿಬ್ಬಚ್ಚಲು ಮಂಜಮ್ಮನವರ ಯಕ್ಷಗಾನ ಪ್ರಸಂಗಗಳು ಹಾಗೂ ಕೀರ್ತನೆಗಳನ್ನು ಸಂಪಾದಿಸಿ ನಾರಾಯಣ ಯಾಜಿ ಸಾಲೆಬೈಲು ಅವರು ಹೊರತಂದ, ‘ವೇದಾಂತ ತತ್ವಸಾರ’ ಎಂಬ ಕಿರು ಪುಸ್ತಕವನ್ನು ನಾನು ಓದಿದ್ದೆ. ನಾರಾಯಣ ಯಾಜಿಯವರು ಯಕ್ಷಗಾನ ಅರ್ಥ ದಾರಿಗಳು. ಅವರ ಯಕ್ಷಗಾನ ಅರ್ಥಗಾರಿಕೆಯನ್ನು ಕೇಳಿ ಪರಿಚಯವಿತ್ತು. ಇದೀಗ ಮುನ್ನುಡಿಯ ನೆಪದಲ್ಲಿ ಅವರ ಕತೆಗಳನ್ನು ಒಟ್ಟಾಗಿ ಓದುವ ಅವಕಾಶವಾಯಿತು.
ಪೌರಾಣಿಕ, ಸಾಮಾಜಿಕ ಹಾಗೂ ಅನುವಾದಿತ ಮೂರೂ ರೀತಿಯ ಕತೆಗಳೂ ಇಲ್ಲಿವೆ. ಕಥನದ ಮನೋಭಾವದಲ್ಲಿ ಅವರು ಆಧುನಿಕರು. ಆಧುನಿಕ ಕಥೆಗಾರರಿಗೆ ಮನುಷ್ಯನ ಮನಸ್ಸಿನೊಳಗಿನ ಚಿಂತನೆಯನ್ನು ಗ್ರಹಿಸುವುದರಲ್ಲಿ ಸದಾ ಆಸಕ್ತಿ ಇರುತ್ತದೆ. ಹಲವು ಸಲ ಬಾಹ್ಯ ನಿರೂಪಣೆಯೂ ಅಂತರಂಗದ ವಿವರಣೆಯನ್ನು ಕಾಣಿಸಿಕೊಡುವ ಒಂದು ಸಾಧನವಾಗಿರುತ್ತದೆ. ಮನಸ್ಸಿನ ಒಳಲೋಕದ ವಿವರಣೆ ಅಭಿಜಾತ ಶೈಲಿಯ ಪ್ರಥಮ ಆದ್ಯತೆಯಲ್ಲ. ಒಟ್ಟು ನಿರೂಪಣೆಯ ಭಾಗವಾಗಿ ಅಂತರಂಗ ಲೋಕ ಗೋಚರಿಸಿದರೆ ಉಂಟು. ಇಲ್ಲವಾದಲ್ಲಿ ಒಳತೋಟಿಯ ವಿವರಣೆಗೆ ಅಭಿಜಾತಕ ಅಥವಾ ಶಾಸ್ತ್ರೀಯ ಕ್ರಮದ ಬರಹಗಳಲ್ಲಿ ಪ್ರಾಶಸ್ತ್ಯವಿಲ್ಲ.
ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪುರಾಣ ಕತೆಗಳ ಬಳಕೆ ಇದ್ದರೂ, ಅಲ್ಲಿನ ಪೀಠಿಕಾ ಕ್ರಮ ಪಾತ್ರಗಳ ಸ್ವಗತಕ್ಕೂ ಮನಸ್ಸಿನ ಒಳಗಿನ ಚಿಂತನಾಶ್ರಮಗಳನ್ನು ವಿವರಿಸುವುದಕ್ಕೂ ಅವಕಾಶ ನೀಡುತ್ತದೆ. ಸಾಕಷ್ಟು ಪೌರಾಣಿಕ ಪಾಂಡಿತ್ಯವುಳ್ಳ ಯಾಜಿಯವರ ಬರಹಗಳಲ್ಲಿ, ಯಕ್ಷಗಾನ ತಾಳಮದ್ದಳೆ ಪಾತ್ರಗಳ ಪೀಠಿಕಾ ವಿವರಣೆಯ ಶೈಲಿಯ ಪ್ರಭಾವವನ್ನು ಗುರುತಿಸಬಹುದು.
‘ಕಥೆಯ ಮುನ್ನಿನ ಪೀಠಿಕೆ’ ಎಂಬ ಕತೆಯಲ್ಲಿ ಅಂಬೆಯ ಅಂತರಂಗ ಲೋಕದ ಚಿತ್ರಣಕ್ಕೆ ಹೊರಗಿನ ವಿವರಣೆಗಳ ಬಳಕೆಯಾಗುತ್ತದೆ. ಸಾಳ್ವನ ಬಗೆಗೆ ಅಂಬೆಯ ಪ್ರೇಮದ ಕತೆ ಮಹಾಭಾರತದ ಪರಮ ಪರೀಕ್ಷೆಗಳಲ್ಲಿ ಒಂದು. ವ್ಯಾಸರಿಗೆ ಭೀಷ್ಮನ ಬ್ರಹ್ಮಚರ್ಯದ ಹಲವು ಪರೀಕ್ಷೆಗಳಲ್ಲಿ ಇದೂ ಒಂದು. ಆದರೆ ಅಭಿಜಾತ ಬರಹದ ಮಹಾಮಾರ್ಗ, ರಸ್ತೆಯ ಬದಿಯ ಸಾವಿರ ಚಿತ್ರಗಳನ್ನು ಕಾಣಿಸುತ್ತದೆ. ಅದರ ಒಂದು ಹೊಳವು ನಾರಾಯಣ ಯಾಜಿಯವರ ಈ ಕತೆಯ ವಸ್ತು. ಅಂಬೆಯ ಅಂತರಂಗದ ಕನಸುಗಳು ಇಂದಿಗೂ ಹೆಣ್ಣು ಮಕ್ಕಳ ಜೀವನದಲ್ಲಿ ಮತ್ತೆ ಹುಟ್ಟಿ ಬರಬಲ್ಲದು ಎಂದು ಬೇರೆ ಹೇಳಬೇಕಾಗಿಲ್ಲ.
‘ವ್ಯಸ್ತ’ ಕಥೆಯ ಮೂಲ ಕುಮಾರವ್ಯಾಸನ ಒಂದು ಭಾಮಿನಿ.
ಮರಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂದೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ
ಉದ್ಯೋಗ ಪರ್ವದ ಹತ್ತನೇ ಸಂದಿಯಲ್ಲಿ ಕೃಷ್ಣ ಕರ್ಣನಿಗೆ ಜನ್ಮವೃತ್ತಾಂತವನ್ನು ಹೇಳಿ, ನೀನು ಚಕ್ರವರ್ತಿಯಾಗು, ಆಗ ಒಂದು ಬದಿಯಲ್ಲಿ ಕೌರವರೂ ಇನ್ನೊಂದು ಕಡೆಯಲ್ಲಿ ಪಾಂಡವರೂ ನಿನ್ನ ಎಡ, ಬಲ ಬದಿಗಳಲ್ಲಿರುತ್ತಾರೆ ಎಂದಾಗ ಕರ್ಣನ ಉತ್ತರವದು.
ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪುರಾಣ ಕತೆಗಳ ಬಳಕೆ ಇದ್ದರೂ, ಅಲ್ಲಿನ ಪೀಠಿಕಾ ಕ್ರಮ ಪಾತ್ರಗಳ ಸ್ವಗತಕ್ಕೂ ಮನಸ್ಸಿನ ಒಳಗಿನ ಚಿಂತನಾಶ್ರಮಗಳನ್ನು ವಿವರಿಸುವುದಕ್ಕೂ ಅವಕಾಶ ನೀಡುತ್ತದೆ. ಸಾಕಷ್ಟು ಪೌರಾಣಿಕ ಪಾಂಡಿತ್ಯವುಳ್ಳ ಯಾಜಿಯವರ ಬರಹಗಳಲ್ಲಿ, ಯಕ್ಷಗಾನ ತಾಳಮದ್ದಳೆ ಪಾತ್ರಗಳ ಪೀಠಿಕಾ ವಿವರಣೆಯ ಶೈಲಿಯ ಪ್ರಭಾವವನ್ನು ಗುರುತಿಸಬಹುದು.
ನಾರಾಯಣ ಯಾಜಿಯವರು ಶುದ್ಧಾಂಗ ಯಕ್ಷಗಾನ ಅರ್ಥಗಾರಿಕೆಯ ಪೀಠಿಕಾ ಕ್ರಮದಲ್ಲಿ ಕರ್ಣನ ಮನಸ್ಸಿನ ಒಳತೋಟಿಯನ್ನು ಚರ್ಚಿಸಿದ್ದಾರೆ.
ಕೆಲವು ಸಾಮಾಜಿಕ ಸಮಸ್ಯೆಗಳು ನಾರಾಯಣ ಯಾಜಿಯವರನ್ನು ಪುನರಪಿ ಕಾಡಿವೆ. ಅವುಗಳಲ್ಲಿ ಒಂದು ಊರಿನಲ್ಲಿ, ಮುಖ್ಯವಾಗಿ ಕೃಷಿಯಲ್ಲಿ ತೊಡಗಿಕೊಂಡಿರುವ ಗಂಡುಗಳಿಗೆ ಮದುವೆಯಾಗಲು ಹೆಣ್ಣುಗಳು ಸಿಗುವುದಿಲ್ಲ ಎಂಬುದು. ‘ಉರುಬು’ ಹಾಗೂ ‘ಅನೀರ್ಷೆ’ ಎಂಬ ಎರಡು ಕತೆಗಳು ಈ ವಸ್ತುವನ್ನು ಚರ್ಚಿಸುತ್ತವೆ. ‘ಉರುಬು’ನಲ್ಲಿ ನಂಬಿಗಸ್ತನೊಬ್ಬ ಮದುವೆ ದಲ್ಲಾಳಿಗೆ ಹಣಕೊಡಲು ಮನೆಯ ಯಜಮಾನರ ಒಪ್ಪಿಗೆ ಪಡೆಯದೆ ಅವರ ಬ್ಯಾಂಕ್ ಖಾತೆಯಿಂದ ಎರಡು ಲಕ್ಷ ರೂಪಾಯಿ ತೆಗೆದು ಆ ತನಕ ಇದ್ದ ನಂಬಿಕೆಗೆ ಭಂಗ ಬಂದು ಗಲಾಟೆಯಾಗುತ್ತದೆ. ‘ಅನೀರ್ಷೆ’ಯಲ್ಲಿ ಮನೆಬಿಟ್ಟು ಓಡಿ ಹೋದ ಹೆಂಡತಿಗೆ ಬೊಂಬಾಯಿಯಲ್ಲಿ ಮೋಸವಾಗಿ ಕೊನೆಗೆ ಗಾರ್ಮೆಂಟ್ ಕೆಲಸದಲ್ಲಿದ್ದು ಪುಟ್ಟ ರೂಮು ಒಂದರಲ್ಲಿ ವಾಸಿಸುತ್ತಿರುತ್ತಾಳೆ. ಗಂಡ ಊರಲ್ಲಿ ಶ್ರೀಮಂತ ಕೃಷಿಕ. ಆದದ್ದಾಯಿತು ಎಂದು ಗಂಡ ಬಂದು ಅವಳನ್ನು ಪುನಃ ಕರೆಯಲು ಕಾರಣ, ಆತನಿಗೆ ಇನ್ನೊಂದು ಮದುವೆಗೆ ಹೆಣ್ಣು ಸಿಗುವುದಿಲ್ಲ. ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದೆ ಅತಂತ್ರವಾಗಿದೆ.
‘ಊಯ್ಜಾ ಬೋರ್ಡ್’ ತೀರಿಕೊಂಡ ಆತ್ಮವನ್ನು ಕರೆದು ಮಾತನಾಡಿಸುವ ಶಕ್ತಿ ಉಳ್ಳದ್ದು. ಅಕಸ್ಮಾತಾಗಿ ಅಪಘಾತದಲ್ಲಿ ತೀರಿಕೊಂಡನೆಂದು ನಂಬಲಾದ ವ್ಯಕ್ತಿಯು ನಿಜವಾಗಿ ಬದುಕಿರುತ್ತಾನೆ. ತೀರಿಕೊಂಡವ ಆತನ ಪಾಕೀಟು ಕದ್ದ ಕಳ್ಳ. ಹೀಗೆ ಓದಿಸಿಕೊಂಡು ಹೋಗುವ ಗುಣವುಳ್ಳ ಕತೆ.
‘ನೈದಿಲೆಯ ಒಡಲು’ ಕತೆ ಸಾಂದರ್ಭಿಕವಾಗಿ, ಗಂಡನ ಶೀಲದ ಬಗ್ಗೆ ಅನುಮಾನ ಬಂದ ಪತ್ನಿ ಪ್ರತಿಭಟನೆಯಾಗಿ ತನ್ನ ಶೀಲವನ್ನು ಉದ್ದೇಶಪೂರ್ವಕ ಕಳಕೊಳ್ಳುವ ಕತೆ. ಅವಳನ್ನು ಆ ಮರುಳಿಗೆ ಒಳಪಡಿಸುವ ಮನೋಭಾವದಲ್ಲಿ ತನ್ನ ಪಾಲೆಷ್ಟು, ಸಂದರ್ಭದ ಶಿಶುವಾಗಿ ವಿವೇಚನೆ ಕಳೆದುಕೊಂಡ ಕಾರಣಗಳೇನು ಎಂಬುದನ್ನು ಆತ್ಮ ನಿವೇದನೆ ರೂಪದಲ್ಲಿ ಚರ್ಚಿಸುವ ಕತೆ ಅದರ ಶೈಲಿಯೂ ಪೀಠಿಕಾ ರೂಪದ ಸ್ವಗತವೆ. ಆದರೆ ಪತ್ರ ಬರೆಯುವ ತಂತ್ರವನ್ನು ಮಾತಿಗೆ ಬದಲಾಗಿ ಬಳಸಿಕೊಳ್ಳಲಾಗಿದೆ.
ಊರಿಗೆ ಬಂದ ಗೇಣಿ ಮಸೂದೆ ಹಿನ್ನೆಲೆಯಲ್ಲಿ ದನಿ-ಒಕ್ಕಲುಗಳ ನಡುವೆ ಕುಸಿದು ಬೀಳುವ ನಂಬಿಕೆ, ಊರಿಗೆ ಪಿಆರ್-8 ಹೊಸ ಭತ್ತ ತಳಿ ಬಂದು ಆಗುವ ಬದಲಾವಣೆ, ಕಾರ್ಪೋರೇಟ್ ಪ್ರಪಂಚದ ಏಳುಬೀಳು, ಫ್ರೆಂಚ್ ಲೇಖಕ ಮೊಪಾಸಾನ ಕತೆಯೊಂದರ ಅನುವಾದ-ಹೀಗೆ ವಸ್ತು ವೈವಿಧ್ಯ ಇಲ್ಲಿನ ಕತೆಗಳಲ್ಲಿವೆ. ಸರಾಗ ಓದಿಸಿಕೊಂಡು ಹೋಗುವ ಕತೆಗಳವು.
ಸಾಹಿತ್ಯದಲ್ಲಿ ಎರಡು ಬಗೆ. ಒಂದು ಓದಿಸಿಕೊಂಡು ಹೋಗಿ ಓದುವ ಸಂತೋಷ, ಉಲ್ಲಾಸ ನೀಡಿ ಯೋಚಿಸಬೇಕಾಗಿಲ್ಲ ಎಂಬ ಬರಹಗಳು. ಇನ್ನೊಂದು ಬಗೆ, ಚಿಂತನೆಗೆ ಹಚ್ಚುವ, ತಾತ್ವಿಕ ಶೋಧಕ್ಕೆ ಇಳಿವ ಕತೆಗಳು. ನಾರಾಯಣ ಯಾಜಿಯವರಿಗೆ ಓದಿಸಿಕೊಂಡು ಹೋಗುವ ಶೈಲಿ ಇದೆ. ತಾತ್ವಿಕ ಶೋಧನೆಯಲ್ಲಿ ಆಸಕ್ತಿ ಇದೆ. ಆದರೆ ತಾತ್ವಿಕತೆ ಇನ್ನೂ ಸ್ಪಷ್ಟವಾಗಬೇಕಾಗಿದೆ. ಬರಹಗಾರನೊಬ್ಬ ನಿರಂತರವಾಗಿ ಯೋಚಿಸುತ್ತಾ, ತನ್ನ ಅರಿವಿನಲ್ಲಿ ಮಾಗುತ್ತಾ ಹೋದ ಹಾಗೆಯೇ ಅಭ್ಯಾಸದ ಮೂಲಕ ಪಕ್ವತೆಯನ್ನು ಸಾಧಿಸುತ್ತಾನೆ. ಸತತವಾಗಿ ಅಭ್ಯಾಸ- ಬರವಣಿಗೆಯಲ್ಲಿ ತೊಡಗಿಕೊಳ್ಳುವುದೂ ಕೆಲವೊಮ್ಮೆ ಅಂತಹ ಪಕ್ವತೆಗೆ ಸಾಗುವ ದಾರಿಯಾಗುತ್ತದೆ. ತನ್ನ ಸತ್ವವನ್ನು ಕಂಡುಕೊಳ್ಳಲು ಪ್ರತಿಯೊಬ್ಬ ಬರಹಗಾರನೂ ತನ್ನದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುವುದು ಅನಿವಾರ್ಯ.
ನಾರಾಯಣ ಯಾಜಿಯವರಿಗೆ ಕುಶಲವಾಗಿ ಹೇಳುವ ಕಲೆ ಸಿದ್ದಿಸಿದೆ. ಅದನ್ನು ತಾತ್ವಿಕ ಆಳಕ್ಕಿಳಿದು ಚರ್ಚಿಸಲು ಬೇಕಾದ ಧ್ಯಾನವನ್ನು ಸಾಧಿಸಬೇಕಾಗಿದೆ. ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ನಾರಾಯಣ ಯಾಜಿಯವರಿಗೆ ಅಂತಹ ಬರವಣಿಗೆಗೆ ಬೇಕಾದ ಏಕಾಗ್ರತೆಯ ಸಮಯ ಕೆಲಸಗಳ ಒತ್ತಡಗಳ ನಡುವೆಯೂ ಸಿಗಲಿ ಎಂಬುದು ನನ್ನ ಆಶಯ.
ನಾರಾಯಣ ಯಾಜಿಯವರ ಯಕ್ಷಗಾನ ಅರ್ಥಗಾರಿಕೆ ಹಾಗೂ ಪತ್ರಿಕಾ ಲೇಖನಗಳು ನನ್ನನ್ನು ಅವರ ಕಡೆ ಆಕರ್ಷಿಸಿದ್ದು. ನಾನು ‘ವಿಜಯವಾಣಿ’ ಪತ್ರಿಕೆಯಲ್ಲಿ ‘ನುಡಿಸಸಿ’ ಅಂಕಣ ಬರೆಯುತ್ತಿದ್ದಾಗ ಹಾಗೂ ಈಗ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ‘ಹೂಬೆರಳು’ ಅಂಕಣ ಬರೆಯುತ್ತಿರುವಾಗ, ಅವರು ನನ್ನ ಅಂಕಣಗಳ ಖಾಯಂ ಓದುಗರಾಗಿ ನನಗೆ ಆಗಾಗ ಉಪಯುಕ್ತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ರೀತಿ ಪ್ರಾರಂಭವಾದ ನಮ್ಮ ಪರಿಚಯದಿಂದ ನಾವು ಸ್ನೇಹಿತರಾದೆವು. ಅಂತಹ ಗೆಳೆತನದ ಪ್ರೀತಿಯಿಂದ ಅವರು ನನ್ನಲ್ಲಿ ಮುನ್ನುಡಿಯ ಮಾತುಗಳನ್ನು ಬರೆಯುವಂತೆ ಕೇಳಿದ್ದಾರೆ. ಇಲ್ಲಿನ ನನ್ನ ಮುನ್ನುಡಿಯ ಮಾತುಗಳು ಕತೆಗಳ ಪ್ರವೇಶಕ್ಕೆ ಸಹಾಯ ಮಾಡೀತು ಎಂಬ ಆಶಯ ನನ್ನದು. ನಾರಾಯಣ ಯಾಜಿಯವರ ಈ ಚೊಚ್ಚಲ ಕಥಾಸಂಕಲನ ಪ್ರಕಟವಾಗುವ ಸಮಯದಲ್ಲಿ, ಅವರಿಂದ ಇನ್ನಷ್ಟು ಸಾಮಾಜಿಕ ಹಾಗೂ ಪೌರಾಣಿಕ ಕತೆಗಳು ಬರಹರೂಪ ಪಡೆದು ಪ್ರಕಟವಾಗಲಿ ಎಂದು ಹಾರೈಸುತ್ತೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ