ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 37ನೆಯ ಕಂತು ಇಲ್ಲಿದೆ.
ವಿಜಾಪುರದ ಶ್ರೀ ಸಿದ್ಧೇಶ್ವರ ಜಾತ್ರೆಯ ವೈಭವ ವರ್ಣಿಸಲಸಾಧ್ಯ. ಈ ಜಾತ್ರೆ ಸಂಕ್ರಮಣದ ಸುತ್ತಮುತ್ತ ಒಂದು ತಿಂಗಳವರೆಗೆ ನಡೆಯುತ್ತಿತ್ತು. ಗಾಂಧೀಚೌಕದಿಂದ ಸಿದ್ಧೇಶ್ವರ ಗುಡಿಯ ಮುಂದೆ ಹಾಯ್ದು ಕೋಟೆಗೋಡೆ ದಾಟಿ ಮುಂದೆ ಈಗಿನ ಬಿ.ಎಲ್.ಡಿ.ಇ. ಹಾಸ್ಪಿಟಲ್ ದಾಟಿದ ನಂತರ ಜ್ಞಾನಯೋಗಾಶ್ರಮದ ಸುತ್ತಮುತ್ತಲ ಪ್ರದೇಶ ಮತ್ತು ಮಧ್ಯಯುಗದ ಚಾಬೂಕ್ ಸವಾರ್ ದರ್ಗಾ ಮುಂತಾದವುಗಳನ್ನೆಲ್ಲ ಸುತ್ತುವರಿದು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಾಣುತ್ತಿತ್ತು.
ಆ ಕಾಲದಲ್ಲಿ ಆಟೋ, ಸಿಟಿಬಸ್, ಮೊಪೆಡ್, ಸ್ಕೂಟರ್ ಮುಂತಾದವು ಇರಲಿಲ್ಲ. ಇಡೀ ವಿಜಾಪುರದ ಕಾರುಗಳನ್ನು ಎಣಿಸಬಹುದಿತ್ತು. ಉಳಿದಂತೆ ಜಿಲ್ಲಾಡಳಿತದ ಕಾರುಗಳು, ಜೀಪುಗಳು ಇರುತ್ತಿದ್ದವು. ಎಲ್ಲೆಂದರಲ್ಲಿ ಸೈಕಲ್ ಮತ್ತು ಟಾಂಗಾಗಳು ಮಾತ್ರ ಕಾಣುತ್ತಿದ್ದವು.
ಸುಮಾರು ಮೂರು ಕಿಲೊ ಮೀಟರ್ ಉದ್ದ ಇರುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಕನಿಷ್ಠ ಒಂದು ತಿಂಗಳವರೆಗೆ ಜಾತ್ರೆಯ ವಾತಾವರಣ ಎದ್ದು ಕಾಣುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಪ್ರಕಾರದ ಜಾತ್ರಾ ಸ್ಪೇಷಲ್ ಅಂಗಡಿಗಳು ತಲೆ ಎತ್ತುತ್ತಿದ್ದವು. ಬಣ್ಣಬಣ್ಣದ ಪರದೆಗಳಿಂದ ಕೂಡಿದ ಚಹಾ ಫರಾಳದ ಅಂಗಡಿಗಳು ದನದ ಜಾತ್ರೆಯ ಬಯಲಲ್ಲಿ ರಾರಾಜಿಸುತ್ತಿದ್ದವು. ರಸ್ತೆಗುಂಟ ಬೆಂಡು ಬತ್ತಾಸಿನ ಅಂಗಡಿಗಳು, ಶೇಂಗಾ ಚುರುಮುರಿ ಅಂಗಡಿಗಳು, ತಿಂಡಿ ತಿನಿಸುಗಳ ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಫ್ಯಾನ್ಸಿ ಸ್ಟೋರ್ಸ್, ಹೂ ಹಣ್ಣು ತೆಂಗಿನಕಾಯಿ ಅರಿಷಿನ ಕುಂಕುಮ ಅಂಗಡಿಗಳು, ಅಡುಗೆ ಸಾಮಾನು, ಆಟದ ಸಾಮಾನು ಮುಂತಾದ ತರಹೇವಾರಿ ಅಂಗಡಿಗಳು, ಕುಸುರೆಳ್ಳಿನ ಅಂಗಡಿಗಳು, ಸಕ್ಕರೆ ಕರಗಿಸಿ ಕಮಲ, ಹಂಸ ಮುಂತಾದ ರೂಪಗಳನ್ನು ಅಚ್ಚಿನಲ್ಲಿ ತಯಾರಿಸಿದ ಸಕ್ಕರೆ ಹಾರದ ಅಂಗಡಿಗಳು, ಸಂಕ್ರಾಂತಿ ಗ್ರೀಟಿಂಗ್ ಕಾರ್ಡ್ ಮಳಿಗೆಗಳು, ಸಣ್ಣ ಸರ್ಕಸ್ ಮತ್ತು ಇಂದ್ರಜಾಲದ ಟೆಂಟ್‌ಗಳು, ಕಬ್ಬಿನ ಗಾಣಗಳು, ಇನ್‌ಸ್ಟಂಟ್ ಫೋಟೊ ಸ್ಟುಡಿಯೊಗಳು ಒಂದೇ ಎರಡೇ ಅದೊಂದು ಜೀವನಜಾತ್ರೆ!
ತಿಂಗಳುಗಟ್ಟಲೆ ದನದ ಜಾತ್ರೆಯೂ ನಡೆಯುತ್ತಿತ್ತು. ದೊಡ್ಡ ಮೈದಾನದಲ್ಲಿ ನಡೆಯುವ ಈ ದನದ ಜಾತ್ರೆಯಲ್ಲಿ ಮಹಾರಾಷ್ಟ್ರದ ಸೊಲ್ಲಾಪುರವೂ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ದನಗಳನ್ನು ಮಾರುವ ಮತ್ತು ಕೊಳ್ಳುವ ರೈತರು ಬರುತ್ತಿದ್ದರು. ಈ ದನದ ಜಾತ್ರೆಯಲ್ಲಿ ಸಾವಿರಾರು ಜೋಡಿ ಎತ್ತುಗಳು ಖರೀದಿಗೆ ಲಭ್ಯವಾಗುತ್ತಿದ್ದವು.
ಈ ಜೋಡಿ ಎತ್ತುಗಳು ಮತ್ತು ಹೋರಿಗಳು ಬರಿ ಮಾರಾಟದ ಪ್ರಾಣಿಗಳಾಗಿರಲಿಲ್ಲ. ಮಾಲೀಕ ಅವುಗಳನ್ನು ಹೇಗೆ ನೋಡಿಕೊಂಡಿದ್ದಾನೆ ಎಂಬುದನ್ನು ಕೂಡ ಕೊಳ್ಳುಗರು ಗಮನಿಸುತ್ತಿದ್ದರು. ಅವು ಮಾರಾಟ ಮಾಡುವ ರೈತನ ಆತ್ಮಗೌರವದ ಪ್ರತೀಕವಾಗಿರುತ್ತಿದ್ದವು. ಅಲ್ಲದೆ ಅಲ್ಲಿ ಕೊಳ್ಳುವವನ ಘನತೆಯ ಪರೀಕ್ಷೆಯೂ ಆಗುತ್ತಿತ್ತು. ಮಾರುವ ರೈತ ಕೊಳ್ಳುವ ರೈತನ ಮನಸ್ಥಿತಿಯನ್ನು ಕೂಡ ಗಮನಿಸುತ್ತಿದ್ದ. ತನ್ನಿಂದ ಪಡೆದ ಎತ್ತುಗಳನ್ನು ಆತ ಹೇಗೆ ನೋಡಿಕೊಳ್ಳಬಲ್ಲ ಎಂದು ಲೆಕ್ಕ ಹಾಕುತ್ತಿದ್ದ. ಆ ಕಾಲದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಮಕ್ಕಳ ಹಾಗೆ ಸಾಕುತ್ತಿದ್ದರು. ಪ್ರತಿ ಸೋಮವಾರ ಎತ್ತುಗಳಿಗೆ ವಾರದ ರಜೆ ಸಿಗುತ್ತಿತ್ತು. ಆ ದಿನ ಯಾವ ರೈತನೂ ಎತ್ತುಗಳನ್ನು ಹೂಡುತ್ತಿರಲಿಲ್ಲ. (ಈಗಲೂ ಹಾಗೇ ಇದೆ.) ಎತ್ತುಗಳಿಗೆ ಜೋರಾಗಿ ಹೊಡೆಯುವುದನ್ನು ನಾನು ಅಲ್ಲೀಬಾದಿಯಲ್ಲಿದ್ದಾಗ ಎಂದೂ ನೋಡಲಿಲ್ಲ.
ಕಿಲಾರಿ ಹೋರಿಗಳು, ಮೌಳಿ ಎತ್ತುಗಳು, ದುಂಡು ಕೋಡಿನವು, ಇಂಗ್ಲಿಷ್ ‘ವಿ’ ಆಕಾರದಲ್ಲಿದ್ದು ಸ್ವಲ್ಪ ಮುಂದೆ ಬಾಗಿದ ಕೋಡುಗಳುಳ್ಳವು, ಎತ್ತರದ ಇಣಿ(ಹಿಣಿಲು)ಯವು, ಉದ್ದನೆಯ ಗಂಗೆದೊಗಲಿನವು, ಎಲ್ಲ ಸರಿಯಿದ್ದೂ ಕಸಬರಿಗೆ ಸುಳಿಯವು, ಇರಕಳು, ಸಂಭಾವಿತ ಹಾಗೂ ಬುಸುಗುಟ್ಟುವ ಸ್ವಭಾವದವು ಹೀಗೆ ವಿವಿಧ ಪ್ರಕಾರದ ಎತ್ತುಗಳನ್ನು ನೋಡಲು ಕೂಡ ಜನಸಾಗರವೇ ಸೇರುತ್ತಿತ್ತು. ಅವು ಬಿಳಿ, ಕರಿ, ಕಂದು ಮತ್ತು ಹಂಡಬಂಡದವು ಆಗಿರುತ್ತಿದ್ದವು.
ದನದ ಜಾತ್ರೆಯ ವಿಶಾಲವಾದ ಮೈದಾನದಲ್ಲಿ ಮಧ್ಯೆಮಧ್ಯೆ ಬಣ್ಣಬಣ್ಣದ ಪರದೆ, ಪರಪರಿ ಮತ್ತು ಬೇಗಡೆ ಹಾಳೆಗಳಿಂದ ಅಲಂಕೃತಗೊಂಡು ಮನಮೋಹಕವಾದ ಸಂಚಾರಿ ಹೋಟೆಲ್‌ಗಳು ದನಗಳ ಜಾತ್ರೆಯಲ್ಲಿ ಎದ್ದು ಕಾಣುತ್ತಿದ್ದವು.
ಸಂಚಾರಿ ಹೋಟೆಲ್‌ಗಳಲ್ಲಿ ಸಿಗುವ ರುಚಿಕರವಾದ ಮಿರ್ಚಿಭಜಿ, ಕಾಂದಾಭಜಿ, ಪೂರಿ ಭಾಜಿಯೊಂದಿಗೆ ಪುಠಾಣಿ ಚಟ್ನಿ, ಬೇಸನ್ ಉಂಡಿ, ಬೂಂದೆ, ಗುಲಾಬ ಜಾಮೂನು, ಸೇವೂ ಚೂಡಾ, ಚಕ್ಕುಲಿ, ಶಂಕರಪಾಳಿ, ಚಹಾದ ಅಂಗಡಿಯಲ್ಲಿ ಸಿಗುವ ಎಲ್ಲ ಖಾರ ಪದಾರ್ಥಗಳನ್ನು ಚೂಡಾದಲ್ಲಿ ಹಾಕುವುದರ ಮೂಲಕ ಸಿದ್ಧವಾಗುವ ‘ಸಂಗೀತ’, ಬಿಸಿಬಿಸಿ ಕೇಟಿ (ಸ್ಪೇಷಲ್ ಚಹಾ) ಮುಂತಾದವುಗಳನ್ನು ಜನ ಇಷ್ಟಪಡುತ್ತಿದ್ದರು. ದನಗಳ ಜಾತ್ರೆ ನೋಡಲು ಬಂದ ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಕೂಡ ಇಂಥ ತಾತ್ಕಾಲಿಕ ಹೋಟೆಲ್‌ಗಳಿಗೆ ಭೇಟಿನೀಡುತ್ತಿದ್ದರು.
ಕಿವಿಗೆ ಇಂಪಾಗಿ ಕೇಳುವ ಹಿಂದೀ ಸಿನಿಮಾ ಹಾಡುಗಳು: ತಕದೀರಕಾ ಫಸಾನಾ, ಏ ಮಾಲಿಕ್ ತೇರೆ ಬಂದೇ ಹಂ, ಮೇರೆ ಮನ ಢೋಲೆ, ಜೋ ವಾದಾ ಕಿಯಾ ತೋ ನಿಭಾನಾ ಪಡೇಗಾ, ಪ್ಯಾರ ಕಿಯಾತೋ ಡರನಾ ಕ್ಯಾ, ಇಂಥ ಕರ್ಣಮಧುರ ಹಾಡುಗಳನ್ನು ಇಡೀ ಜಾತ್ರಾ ವಲಯದಲ್ಲಿ ಎಲ್ಲೆಂದರಲ್ಲಿ ನೂರಾರು ಲೌಡ್ ಸ್ಪೀಕರ್‌ಗಳು ಬಿತ್ತರಿಸುತ್ತಿದ್ದವು.
ಇಂಥ ಟೆಂಟ್ ಹೋಟೆಲ್‌ಗಳಲ್ಲಿನ ವಿವಿಧ ರೀತಿಯ ಕೆಲಸಗಳಲ್ಲಿ ದುಡಿಯುವ ನೂರಾರು ಮಂದಿ ಹುಡುಗರು, ಯುವಕರು ಮತ್ತು ಮಧ್ಯ ವಯಸ್ಕರು ಸೋತು ಸುಣ್ಣವಾಗಿರುತ್ತಿದ್ದರು. ಅವರ ಅಸಹಾಯಕ ಮುಖಗಳು ಇನ್ನೂ ಕಾಣಿಸುತ್ತಿವೆ. ದುಃಖಿಗೊಳಿಸುತ್ತಲೇ ಇವೆ.
ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ಕಬ್ಬು ತಿನ್ನುತ್ತ ದನಗಳ ಜಾತ್ರೆಯಲ್ಲಿ ಎಲ್ಲ ನೋಡುತ್ತ ತಿರುಗುವ ಖುಷಿಯೇ ಖುಷಿ. ನಾನು ಬಹಳ ಸಲ ಅಲ್ಲಿಗೆ ಹೋಗುತ್ತಿದ್ದೆ. ಏಕೆಂದರೆ ನನ್ನ ಸೋದರಮಾವನಾದ ಬಾಬುಮಾಮಾ ಆ ಜಾತ್ರೆಯಲ್ಲಿ ಒಂದು ತಿಂಗಳವರೆಗೆ ಚಿಕ್ಕ ಗುಡಿಸಲು ಹಾಕಿಕೊಂಡು ಬರಿ ಚಹಾ ಮಾಡಿ ಮಾರುತ್ತಿದ್ದ. ಒಬ್ಬ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಆತ ಕಿಟ್ಲಿಯಲ್ಲಿ ಚಹಾ ಹಾಕಿಕೊಂಡು ದನಗಳನ್ನು ಕಟ್ಟಿರುವ ರೈತರ ಬಳಿ “ಚಾಯ್ ಚಾಯ್” ಎಂದು ಹೋಗುತ್ತಿದ್ದ. ಆ ರೈತರು ಅಲ್ಲಿಯೆ ಕುಳಿತು ಚಹಾ ಕೇಳಿದಾಗ ಗ್ಲಾಸಲ್ಲಿ ಹಾಕಿ ಕೊಡುತ್ತಿದ್ದ. ಗುಡಿಸಲ ಬಳಿ ಚಹಾ ಕುಡಿಯಲು ಬರುವವರಿಗೆ ಬಾಬು ಮಾಮಾ ಚಹಾ ಕೊಡುತ್ತಿದ್ದ. ಅವನು ಬಹಳ ಚೆನ್ನಾಗಿ ಚಹಾ ಮಾಡುತ್ತಿದ್ದ. ಕೆ.ಟಿ. ಕುಡಿಯಲು ಶ್ರೀಮಂತ ರೈತರು ಗುಡಿಸಲ ಬಳಿ ಬರುತ್ತಿದ್ದರು. ಒಬ್ಬ ಧಿಮಾಕಿನ ಶ್ರೀಮಂತ ರೈತನೂ ಬರುತ್ತಿದ್ದ. ಆತ ಪದೆ ಪದೆ ಕೆ.ಟಿ.ಗಾಗಿ ಬರುತ್ತಿದ್ದ. ಸಾಲ ಮಾಡುತ್ತಿದ್ದ. ಒಂದು ವಾರವಾದ ಮೇಲೆ ಹಣ ಕೊಡುತ್ತಿದ್ದ. ಕೊನೆಯ ಏಳೆಂಟು ದಿನಗಳ ಲೆಕ್ಕ ತೀರಿಸದೆ ಹೋದ. ಬಡವನಾದ ಬಾಬುಮಾಮಾ ಬಹಳ ಬೇಸರಪಟ್ಟುಕೊಂಡ.
ಕೃಷಿ ಉತ್ಪನ್ನಗಳು, ನೀರಾವರಿ ಪಂಪ್‌ಸೆಟ್‌ಗಳು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಉತ್ತಮ ತಳಿಯ ಬೀಜಗಳು, ಹೀಗೆ ಎಲ್ಲವನ್ನೂ ಉತ್ಪಾದಿಸುವ ಕಂಪನಿಗಳು ವಸ್ತುಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದವು. ಕಿರ್ಲೋಸ್ಕರ್ ಮುಂತಾದ ಕಂಪನಿಗಳ ಪಂಪ್‌ಸೆಟ್‌ಗಳನ್ನು ಮಾರಾಟ ಮಾಡುವ ಅಂಗಡಿಯವರು ಶ್ರೀ ಸಿದ್ಧೇಶ್ವರ ರಸ್ತೆಗುಂಟ ಒಂದು ದೊಡ್ಡ ಕಬ್ಬಿಣದ ಟ್ಯಾಂಕಿನಲ್ಲಿ ನೀರು ತುಂಬಿ ಅದರೊಳಗಿನ ನೀರು ಮತ್ತೆ ಅಲ್ಲೇ ಬೀಳುವ ವ್ಯವಸ್ಥೆ ಮಾಡುತ್ತಿದ್ದರು. ಅದರ ಮಧ್ಯೆ ಕಾರಂಜಿ ನಿರ್ಮಿಸಿ ಅದರಿಂದ ಚಿಮ್ಮುವ ನೀರಿನ ಮೇಲೆ ಟೇಬಲ್ ಟೆನಿಸ್ ಬಾಲ್ ಇಡುತ್ತಿದ್ದರು. ಅದು ನಿರಂತರವಾಗಿ ಕುಣಿಯುವ ದೃಶ್ಯ ನಮ್ಮ ಬಾಲ ಮನಸ್ಸಿಗೆ ಖುಷಿ ಕೊಡುತ್ತಿತ್ತು.
ಜಾತ್ರೆಯಲ್ಲಿ ಮೂರ್ನಾಲ್ಕು ಗೆಳೆಯರು ಕೂಡಿ ಹೋಗುತ್ತಿದ್ದೆವು. ನಮ್ಮೊಳಗೆ ಒಬ್ಬ ಸ್ವಲ್ಪ ದೊಡ್ಡ ಹುಡುಗನಿದ್ದ. ಆತ ಬೀಡಿ ಸೇದೋಣ ಎಂದ. ಅವನ ಜೊತೆಗಿದ್ದ ನಾವಿಬ್ಬರೂ ಒಪ್ಪಲಿಲ್ಲ. ತಂಬಾಕಿನ ಬೀಡಿಯಲ್ಲ, ಬಡೇಸೋಪ್ ಬೀಡಿ ಎಂದ. ಊಟ ಆದ ಮೇಲೆ ತಿಂದಹಾಗೆ ಅಷ್ಟೇ ಎಂದ. ನಾನೇ ಕೊಡಿಸುತ್ತೇನೆ ಎಂದು ಧೈರ್ಯ ಹೇಳಿದ. ಕೊನೆಗೆ ನಾವು ಒಪ್ಪಿದೆವು. ಆತ ಹೋಗಿ ಮೂರು ಬಡೇಸೋಪು ತುಂಬಿದ ಬೀಡಿ ಮತ್ತು ಕಡ್ಡಿಪೆಟ್ಟಿಗೆ ತಂದ. ಕಳ್ಳರ ಹಾಗೆ ಜನಜಂಗಳಿ ದಾಟಿ ಎಸ್.ಎಸ್. ಹೈಸ್ಕೂಲ್ ಗ್ರೌಂಡಿಗೆ ಹೋದೆವು. ಎದೆ ಡವಗುಟ್ಟುತ್ತಿತ್ತು. ಬೀಡಿ ಸೇದುವ ಹೊಸ ಅನುಭವವನ್ನು ಕಲ್ಪಿಸುವ ಭಯ. ತಂಬಾಕು ಇಲ್ಲವಲ್ಲ ಅದು ಬರಿ ಬಡೇಸೋಪು ಎಂಬ ಸಮಾಧಾನ. ಹಾಗೂ ಹೀಗೂ ಎಲ್ಲ ದಾಟಿ ಫುಟ್‌ಬಾಲ್ ಗ್ರೌಂಡಿನ ಗೋಡೆಯ ಮರೆಯಲ್ಲಿ ಕುಳಿತೆವು. ಮೂವರೂ ಒಂದೊಂದು ಬೀಡಿ ಹಿಡಿದೆವು. ಬೀಡಿ ಹಚ್ಚುವುದೇ ದೊಡ್ಡ ಸಮಸ್ಯೆಯಾಯಿತು. ಕೊರೆದ ಕಡ್ಡಿ ಗಾಳಿಗೆ ಆರುತ್ತಿತ್ತು. ಕೊನೆಗೆ ಬೀಡಿ ಕೊಡಿಸಿದವನೇ ಪ್ರಯತ್ನಪಟ್ಟು ಹಚ್ಚಿದ. ಅದನ್ನು ನನ್ನ ಬೀಡಿಯ ತುದಿಗೆ ಹಿಡಿದು ಹಚ್ಚಿದೆ. ಇನ್ನೊಬ್ಬನೂ ಹಾಗೇ ಮಾಡಿದ. ಬೀಡಿ ಸುತ್ತಿದ ಎಲೆಯ ಹೊಲಸು ವಾಸನೆ ಮತ್ತು ಅಸಹ್ಯ ರುಚಿಯಿಂದ ತಲೆ ಸುತ್ತು ಬಂದ ಹಾಗಾಯಿತು. ಬೀಡಿ ಎಳೆಯುವಾಗಿನ ಕೆಮ್ಮು ಬೇರೆ. ಅಂತೂ ದೊಡ್ಡ ಸಾಹಸ ಮಾಡಿ ವಿಚಿತ್ರವಾದ ಮನಸ್ಥಿತಿಯಿಂದ ಮತ್ತೆ ಜನಜಂಗುಳಿಯಲ್ಲಿ ಒಂದಾದೆವು. ಯಾರೂ ನೋಡಲಿಲ್ಲ ಎಂಬ ಸಮಾಧಾನವಿದ್ದರೂ ಗೊತ್ತಿದ್ದವರು ಎದುರಿಗೆ ಬಂದರೆ ಭಯವಾಗ ತೊಡಗಿತು. ಎಲ್ಲಿ ಅವರಿಗೆ ವಾಸನೆ ಬಡಿಯುವುದೋ ಎಂಬ ದುಗುಡ ಮನದಲ್ಲಿ ಮೂಡಿತು. ಮನೆಗೆ ಹೋದ ಕೂಡಲೆ ಐದಾರು ಸಲ ಬಾಯಿ ತೊಳೆದುಕೊಳ್ಳುವಾಗ “ಏನಾಗಿದೆ” ಎಂದು ತಾಯಿ ಕೇಳಿಯೆ ಬಿಟ್ಟಳು. “ಬಾಯಾಗ ಗುಂಗಾಡು ಹೋಗಿತ್ತು” ಎಂದು ಹೇಳುತ್ತಲೇ ಹೊರಗೆ ಓಡಿದೆ.
ಜಾತ್ರೆಗಳು ಹುಡುಗರಿಗೆ, ಯುವಕರಿಗೆ ಮತ್ತು ಯುವತಿಯರಿಗೆ ಒಂದು ರೀತಿಯ ಸ್ವಾಂತಂತ್ರ್ಯ ಕೊಡುತ್ತವೆ. ಎಲ್ಲ ಖುಷಿಗಳ ಜೊತೆ ಇದೂ ಒಂದು ಖುಷಿಯೇ. ಜಾತ್ರಾ ವೈಭವದ ಮಧ್ಯೆ ಇದು ಕೂಡ ಜಾತ್ರೆಗಳ ಆಕರ್ಷಣೆಗೆ ಕಾರಣವಾಗಿರುತ್ತದೆ.
ಬೃಹತ್ತಾದ ಶಿವಾನುಭವ ಮಂಟಪದಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿತ್ತು. ಹಿಂದೆಂದೂ ನೋಡದಂಥ ದಪ್ಪ ದಪ್ಪ ಕುಂಬಳಕಾಯಿ, ಪಪಾಯಿ, ಜೋಳದ ತೆನೆ, ಆಳೆತ್ತರದ ಬಾಳೆ ಗೊನೆ, ಹೊಸ ನೀರಾವರಿ ವ್ಯವಸ್ಥೆಯ ಮಾದರಿ, ಹಳ್ಳಿಗಳ ಮಾಡೆಲ್, ಅರಣ್ಯ ಮತ್ತು ವನ್ಯಜೀವಿಗಳ ಪ್ರತಿಸೃಷ್ಟಿ ಮುಂತಾದವು ಹೊಸ ಮೋಹಕ ಜಗತ್ತನ್ನು ಸೃಷ್ಟಿಸುತ್ತಿದ್ದವು. ಅಪರಾಧಗಳ ಬಗ್ಗೆ ಮಾಹಿತಿ ಒದಗಿಸುವ ಪೊಲೀಸ್ ಮಳಿಗೆಗಳು ಇರುತ್ತಿದ್ದವು. ಮದ್ದುಸುಡುವ ಖಣಿಯಲ್ಲಿ ಕುಸ್ತಿಗಳು ಪ್ರತಿದಿನ ನಡೆಯುತ್ತಿದ್ದವು. ಕೊನೆಯ ದಿನ ಬೆಳ್ಳಿ ಬಂಗಾರದ ಕಡಗ ಗೆಲ್ಲುವ ಜಂಗೀ ನಿಕಾಲಿ ಕುಸ್ತಿಗಳು ನಡೆಯುತ್ತಿದ್ದವು. ಆ ಕುಸ್ತಿಯನ್ನು ನೋಡಲು ಹತ್ತಾರು ಸಹಸ್ರ ಜನ ಖಣಿಯಲ್ಲಿ ಸೇರುತ್ತಿದ್ದರು.
ಈ ಜೋಡಿ ಎತ್ತುಗಳು ಮತ್ತು ಹೋರಿಗಳು ಬರಿ ಮಾರಾಟದ ಪ್ರಾಣಿಗಳಾಗಿರಲಿಲ್ಲ. ಮಾಲೀಕ ಅವುಗಳನ್ನು ಹೇಗೆ ನೋಡಿಕೊಂಡಿದ್ದಾನೆ ಎಂಬುದನ್ನು ಕೂಡ ಕೊಳ್ಳುಗರು ಗಮನಿಸುತ್ತಿದ್ದರು. ಅವು ಮಾರಾಟ ಮಾಡುವ ರೈತನ ಆತ್ಮಗೌರವದ ಪ್ರತೀಕವಾಗಿರುತ್ತಿದ್ದವು. ಅಲ್ಲದೆ ಅಲ್ಲಿ ಕೊಳ್ಳುವವನ ಘನತೆಯ ಪರೀಕ್ಷೆಯೂ ಆಗುತ್ತಿತ್ತು.
ಹೊರತಿ ಒಡ್ಡನಂತಹ ಪೈಲವಾನ್ ಅಖಾಡಾಕ್ಕೆ ಬರುವುದನ್ನು ನೋಡುವುದೇ ಒಂದು ಸಂಭ್ರಮ. (ಆತನ ಹೆಸರು ಮರೆತದ್ದಕ್ಕೆ ವಿಷಾದವಿದೆ. ಆತ ‘ಹೊರ್ತಿ ಒಡ್ಡ’ ಎಂದೇ ಪ್ರಸಿದ್ಧನಾಗಿದ್ದ. ಇದು 60 ವರ್ಷಗಳ ಹಿಂದಿನ ಘಟನೆ) ಹಲಗೆ ಬಾರಿಸುತ್ತ, ಕೊಂಬು ಊದುತ್ತ, ಕೆಂಪು ಬಟ್ಟೆಯನ್ನು ಹಾರಿಸುತ್ತ ಎತ್ತರದ ನಿಲವಿನ, ಆಕರ್ಷಕ ಮೈಕಟ್ಟಿಗೆ ಒಪ್ಪುವ ಹಾಗೆ ಕಿರುದಾಡಿ ಬಿಟ್ಟ ಆ ಕಡುಗಪ್ಪು ಸುಂದರಾಂಗನನ್ನು ಕಂಡು ಜನ ಮುಗಿಲು ಮುಟ್ಟುವ ಹಾಗೆ ಹಷೋದ್ಗಾರ ತೆಗೆದದ್ದು ಇನ್ನೂ ನೆನಪಿದೆ.
ಆತನ ಗತ್ತು, ಗಾಂಭೀರ್ಯ, ಸೆಡ್ಡು ಹೊಡೆದು ಸಮೂಹ ಸನ್ನಿ ಹಿಡಿಸುವ ಚಾಕಚಕ್ಯತೆ ಎಲ್ಲವೂ ನೆನಪಿವೆ. ಆತನ ಕುಸ್ತಿ ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಶಂಕರಲಿಂಗ ದೇವಸ್ಥಾನದ ಎದುರಿಗಿನ ಮದ್ದುಸುಡುವ ವಿಶಾಲವಾದ ಖಣಿಯಲ್ಲೇ ಕುಸ್ತಿಗಳು ನಡೆಯುತ್ತಿದ್ದವು. ಆತ ಅಖಾಡಕ್ಕೆ ಬಂದ. ಎದುರಾಳಿ ಸೆಡ್ಡು ಹೊಡೆದ. ಹೊರ್ತಿ ಒಡ್ಡನೂ ಸೆಡ್ಡು ಹೊಡೆದ. ನೋಡುನೋಡುತ್ತಲೆ ಆತ ಎದುರಾಳಿಯನ್ನು ಚಿತ್ತು ಮಾಡಿ ನಡೆದೇ ಬಿಟ್ಟ. ಜನ ಇನ್ನೂ ನೋಡುವುದಕ್ಕೆ ಸುಧಾರಿಸಿಕೊಳ್ಳುವಾಗಲೆ ಇದೆಲ್ಲ ನಡೆದುಹೋಯಿತು!
ಇಂಥ ಅನೇಕ ಪೈಲವಾನರು ವಿಜಾಪುರ ನಗರ ದೇವತೆ ಸಿದ್ಧರಾಮೇಶ್ವರನ ಜಾತ್ರೆಯಲ್ಲಿ ಅದೃಷ್ಟ ಖುಲಾಯಿಸುವ ಸಂದರ್ಭಕ್ಕೆ ಕಾಯುತ್ತಿದ್ದರು. ಜಾತ್ರೆಯ ಕೊನೆಯ ರಾತ್ರಿ ಮದ್ದಿನ ಖಣಿಯಲ್ಲಿ ಮದ್ದು ಸುಡುವ ಕಾರ್ಯಕ್ರಮವಿರುತ್ತಿತ್ತು. ಆ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಣಬಿರುಸುಗಳನ್ನು ಸುಡುವರು. ಕತ್ತಲೆಯಲ್ಲಿ ಬಣ್ಣ ಬಣ್ಣಗಳಿಂದ ಕೂಡಿದ ಕನಸಿನ ಲೋಕ ಸೃಷ್ಟಿಯಾಗುವುದನ್ನು ನಾ ನೋಡಿದ್ದು ಅಲ್ಲಿಯೇ. ಅವು ಕೆಲವೊಂದು ಸಲ ಹಾರಿ ಹೋಗಿ ಬಡವರ ಗುಡಿಸಲುಗಳ ಮೇಲೆ ಬಿದ್ದದ್ದೂ ಉಂಟು. (ಆಗ ಸರ್ಕಾರ ಪರಿಹಾರ ಕೊಡುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಬಡವರ ಗೋಳು ಮಾತ್ರ ಗೊತ್ತಿದೆ.)
ಜಾತ್ರೆಯ ಸಂದರ್ಭದಲ್ಲಿ ವಾರ ಕಾಲ ಸಿದ್ಧೇಶ್ವರ ಗುಡಿಯ ಮುಂದೆ, ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಮೈದಾನದಲ್ಲಿ ಮತ್ತು ಇತರ ಕಡೆಗಳಲ್ಲಿ ಸಣ್ಣಾಟ ದೊಡ್ಡಾಟ ಪ್ರತಿದಿನ ನಡೆಯುತ್ತಿದ್ದವು. ಶ್ರೀಕೃಷ್ಣ ಪಾರಿಜಾತದ ಪಾತ್ರಧಾರಿ ಜಮಖಂಡಿ ಅಪ್ಪಾಲಾಲನನ್ನು ನೋಡಲು ಸಹಸ್ರಾರು ಜನ ಮುಗಿ ಬೀಳುತ್ತಿದ್ದರು. ಅಪ್ಪಾಲಾಲ ಸಾಹೇಬ್ರು ಶ್ರೀಕೃಷ್ಣನ ಅವತಾರ ಇರಬಹುದೆ ಎನ್ನುವಷ್ಟರಮಟ್ಟಿಗೆ ಆ ಪಾತ್ರದ ಜೊತೆ ಅವರ ತಾದಾತ್ಮ್ಯ ಇತ್ತು. ಮೈಕ್ ಇಲ್ಲದೆ ಸಹಸ್ರಾರು ಜನರಿಗೆ ಕೇಳಿಸುವ ಆ ಧ್ವನಿ, ಆ ತಾದಾತ್ಮ್ಯ, ಆ ನಟನಾ ಕೌಶಲ ಈಗೆಲ್ಲ ಕನಸಿನ ಮಾತು. ಜಮಖಂಡಿ ಕಡೆಯ ಮದರಖಂಡಿ ಗ್ರಾಮದವರ ಹೇಮರಡ್ಡಿ ಮಲ್ಲಮ್ಮ ಎಷ್ಟು ಪ್ರಸಿದ್ಧವಾಗಿತ್ತೆಂದರೆ ಜನ ಅದಕ್ಕೆ ‘ಮದರಖಂಡಿ ಮಲ್ಲಮ್ಮ’ ಎಂದೇ ಕರೆಯುತ್ತಿದ್ದರು. ಆ ನಾಟಕದಲ್ಲಿ ಪ್ರತ್ಯಕ್ಷವಾಗುವ ಶಿವನ ಕೊರಳಲ್ಲಿ ಜೀವಂತ ನಾಗರಹಾವು ಇರುತ್ತಿತ್ತು. ಅದು ಅವನ ತಲೆಯ ಮೇಲೆ ಹೆಡೆ ತೆಗೆದು ಆಡುತ್ತಿತ್ತು.
‘ಹೆಣ್ಣು ಹೆಚ್ಚೊ ಗಂಡು ಹೆಚ್ಚೊ’ ಎನ್ನುವ ಹರದೇಶಿ ನಾಗೇಶಿ ಡಪ್ಪಿನಾಟ ರಾತ್ರಿಯಡೀ ನಡೆಯುತ್ತಿತ್ತು. ಹೆಣ್ಣಿನ ಪರವಾಗಿ ಹೆಣ್ಣು ವಾದಿಸುತ್ತ ಹಾಡುವ ರೀತಿ, ಆ ಧೈರ್ಯ, ಗಾಂಭೀರ್ಯ, ಹಟ ಮತ್ತು ಏಕಾಗ್ರತೆಯಿಂದ ಕೂಡಿದ ಸ್ತ್ರೀವಾದವನ್ನು ಕೇಳುವುದೇ ಒಂದು ಸುಖ.
ಸಂಕ್ರಮಣದ ನಂದಿಕೋಲುಗಳು, ಅವುಗಳ ಮಧ್ಯೆ ಇನ್ನೂ ಎತ್ತರವಾದ, ಭಾರವಾದ ಮತ್ತು ಸುಂದರವಾದ ನಾಗನಂದಿಕೋಲು, ಅವುಗಳನ್ನು ಹೊತ್ತವರು, ಬೆಂಬಲವಾಗಿ ಸುತ್ತ ಇದ್ದವರು ಧೋತ್ರ, ರುಮಾಲು ಮತ್ತು ಬಾರಾಬಂದಿ ನಿಲುವಂಗಿ ಧರಿಸಿ ಚಳ್ಳಂ ಬಾರಿಸುತ್ತ ತಾಳಕ್ಕೆ ತಕ್ಕಂತೆ ಕುಣಿಯುವವರು, ಈ ಆಕರ್ಷಕ ದೃಶ್ಯವನ್ನು ಭಕ್ತಿಭಾವದೊಂದಿಗೆ ನೋಡಲು ಮುಗಿಬಿದ್ದವರು ಮುಂತಾದವರು ನನ್ನೊಳಗೇ ಇದ್ದಾರೆ.
ಸಂಕ್ರಮಣದಲ್ಲಿ ಕುಸುರೆಳ್ಳು ಕೊಡುವುದು ಮತ್ತು ಆ ಸಂಧರ್ಭದಲ್ಲಿ ಕುಸುರೆಳ್ಳಿನ ಚಿಕ್ಕ ಪ್ಯಾಕೆಟ್‌ನಿಂದ ಕೂಡಿದ್ದು ‘ಎಳ್ಳು ಬೆಲ್ಲ ತೊಗೊಳ್ರಿ ಸಿಹಿ ಸಿಹಿ ಮಾತಾಡ್ರಿ’, ‘ಎಳ್ಳು ಬೆಲ್ಲ ಕೊಡೋಣ ಎಳ್ಳು ಬೆಲ್ಲದ್ಹಂಗ ಇರೋಣ’, ಮುಂತಾದ ಸಾಲುಗಳು ಮತು ಮಾನವಸಂಬಂಧಗಳಿಗೆ ಸಂಬಂಧಿಸಿದ ಚೌಪದಿ ಬರಹಗಳನ್ನೊಳಗೊಂಡ ಸಂಕ್ರಮಣ ಶುಭಾಶಯ ಪತ್ರಗಳನ್ನು ಪೋಸ್ಟ್ ಮಾಡುವುದು ಸಂತಸದ ವಿಷಯವಾಗಿತ್ತು.
ಶಾಲೆ ಹೈಸ್ಕೂಲಿನಲ್ಲಿದ್ದಾಗ ಕೆಟ್ಟ ಗಳಿಗೆಯಲ್ಲಿ ಕೆಲವು ಗೆಳೆಯರ ಜೊತೆ ಪಿ (ಮಾತು) ಬಿಡುತ್ತಿದ್ದೆವು. ಆಮೇಲೆ ಮಾತನಾಡುವ ತೀವ್ರತೆ ಬಹಳಷ್ಟಿದ್ದರೂ ಸ್ವಾಭಿಮಾನದ ಕಾಟದಿಂದಾಗಿ ದಾರಿ ಸುಗಮವಾಗುತ್ತಿರಲಿಲ್ಲ. ಆದರೆ ನಮಗೆ ವರ್ಷದಲ್ಲಿ ಎರಡು ದಿನಗಳು ತುಂಬ ಖುಷಿ ಕೊಡುತ್ತಿದ್ದವು. ಅಂದು ನಮಗಾಗಿ ಸ್ವರ್ಗಸುಖದ ಬಾಗಿಲುಗಳು ತೆರೆದಿರುತ್ತಿದ್ದವು. ಅವುಗಳಲ್ಲೊಂದು ಸಂಕ್ರಮಣದಲ್ಲಿ ಕುಸುರೆಳ್ಳು ಹಂಚುವ ದಿನ. ‘ನಾವೂ ನೀವೂ ಎಳ್ಳು ಬೆಲ್ಲದ್ಹಾಂಗ ಇರೂನ್ರಿ’ ಎನ್ನುತ್ತ ಕುಸುರೆಳ್ಳು ಹಂಚುತ್ತಿದ್ದೆವು. ಇನ್ನೊಂದು ದಸರಾದಲ್ಲಿ ಬನ್ನಿ ಮುಡಿಯುವ ದಿನ. ಬನ್ನಿ ಪತ್ರಿಗಳನ್ನು ಒಯ್ದು ‘ನಾವೂ ನೀವೂ ಬಂಗಾರದ್ಹಾಂಗ ಇರೂನ್ರಿ’ ಎಂದು ಕೊಡುತ್ತಿದ್ದೆವು. ಈ ಎರಡೂ ಸಂದರ್ಭಗಳಲ್ಲಿ ಮಾತು ಬಿಟ್ಟ ಗೆಳೆಯರ ಜೊತೆ ಮಾತನಾಡುವ ಕ್ಷಣಗಳು ಸೃಷ್ಟಿಯಾಗುತ್ತಿದ್ದವು. ಮಾತು ಬಿಟ್ಟವರನ್ನು ಕೂಡಿಸುವುದು ಇತರ ಗೆಳೆಯರ ನೈತಿಕ ಜವಾಬ್ದಾರಿಯೂ ಆಗಿತ್ತು. ಅವರು ಒತ್ತಾಯದಿಂದ ತಮ್ಮ ಜೊತೆಗಿದ್ದ ಗೆಳೆಯನನ್ನು, ಆತ ಮಾತು ಬಿಟ್ಟವನ ಮನೆಗೆ ಕರೆದೊಯ್ದು ಕುಸುರೆಳ್ಳು ಕೊಡಿಸುತ್ತಿದ್ದರು. ದಸರೆಯಲ್ಲಿ ಬನ್ನಿ ತೊಪ್ಪಲು ಕೂಡ ಹೀಗೆ ಕೂಡಿಸುವ ಕೆಲಸ ಮಾಡುತ್ತಿತ್ತು. ವರ್ಷವಿಡೀ ಮುಖ ತಿರುಗಿಸಿಕೊಂಡಿರುತ್ತಿದ್ದ ಹಿರಿಯರು ಕೂಡ ಈ ಸಂದರ್ಭಗಳಲ್ಲಿ ಭೇಟಿಯಾಗಿ ಮಾತನಾಡುತ್ತಿದ್ದರು.
ಹೀಗೆ ಆನಂದ, ಸ್ವಾತಂತ್ರ್ಯ, ಹೊಸದನ್ನು ಕಲಿಯುವುದು, ಕಲೆ, ಸಾಹಿತ್ಯ ಪ್ರಜ್ಞೆ ಬೆಳೆಸುವುದು, ಸಂಬಂಧಗಳನ್ನು ಕುದುರಿಸುವುದು, ಹೊಸ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಬಗ್ಗೆ ತಿಳಿವಳಿಕೆ ಪಡೆಯುವುದು, ಮಾರುವುದು, ಕೊಳ್ಳುವುದು, ಅನುಭವಗಳನ್ನು ವಿಸ್ತರಿಸಿಕೊಳ್ಳುವುದು ಜಾತ್ರೆಗಳಲ್ಲಿ ನಡೆಯುತ್ತಿತ್ತು.
ಸಹಸ್ರಾರು ಕುಟುಂಬಗಳು ಒಂದು ಜಾತ್ರೆಯಿಂದ ಇನ್ನೊಂದು ಜಾತ್ರೆಗೆ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಒಯ್ಯತ್ತ ಜೀವಮಾನ ಕಳೆಯುತ್ತಿದ್ದವು. ಆ ನೋವು, ಆ ಸುಖ ಎಲ್ಲವೂ ಬದುಕಾಗಿತ್ತು. ಜಾತ್ರೆಯಲ್ಲಿ ತೆಗೆದುಕೊಂಡ ಸವಾ (1.25) ರೂಪಾಯಿ ಫೋಟೊ ಮಾತ್ರ ನಮ್ಮ ಜೊತೆ ಬಹಳ ದಿನ ಉಳಿಯುತ್ತಿತ್ತು. ಕಾರು, ಸ್ಕೂಟರ್, ದಿಲೀಪಕುಮಾರ, ವೈಜಯಂತಿ ಮಾಲಾ, ಜಾನಿವಾಕರ್ ಮುಂತಾದ ವಸ್ತು ಮತ್ತು ನಾಯಕ ನಾಯಕಿಯರ ಕಟೌಟ್‌ಗಳ ಜೊತೆ ಫೋಟೊ ತೆಗೆಸಿಕೊಂಡು ಮನೆಯಲ್ಲಿ ಹಚ್ಚುತ್ತಿದ್ದರು. ಒಂದು ಗಂಟೆಯಲ್ಲಿ ಈ ಫೋಟೊ ಸಿಗುತ್ತಿತ್ತು. ಕಲರ್ ಬೇಕೆಂದರೆ ಬಣ್ಣ ಕುಂಚದೊಂದಿಗೆ ಆರ್ಟಿಸ್ಟ್ ರೆಡಿ ಇರುತ್ತಿದ್ದ.
ಜಾತ್ರೆ ಎಂಬುದು ಸಂಪ್ರದಾಯ, ಪರಂಪರೆ, ವ್ಯವಹಾರ, ಕಾಲಜ್ಞಾನಗಳಿಂದ ಕೂಡಿದ ನೆನಪಿನ ಆಗರ. ಜನಸಾಮಾನ್ಯರ ವಿಶ್ವವಿದ್ಯಾಲಯ, ಬದುಕಿನ ಆಸರೆ, ಮಾನವನ ಸಾಂಸ್ಕೃತಿಕ ಸಂಬಂಧಗಳ ಬೆನ್ನೆಲಬು. ಆದರೆ ಕಳೆದ ಎರಡು ಮೂರು ದಶಕಗಳಿಂದ ಮನುಷ್ಯನ ಈ ಅನುಭವಕ್ಕೆ, ಪ್ರತಿಭೆಗೆ ಮತ್ತು ನಿಷ್ಠೆಗೆ ಜಾಗತೀಕರಣದ ಮಾರುಕಟ್ಟೆಯಲ್ಲಿ ಕವಡಿ ಕಿಮ್ಮತ್ತೂ ಸಿಗುತ್ತಿಲ್ಲ. ಇಂಥ ಒಂದು ಸುವ್ಯಸ್ಥಿತವಾದ ಜಾತ್ರೆಗೆ ಸಹಸ್ರಾರು ಜನ ಬುದ್ಧಿವಂತರ ಅವಶ್ಯಕತೆ ಇರುತ್ತಿತ್ತು. ಅಲ್ಲಿ ಎತ್ತುಗಳಿಗೆ, ಹೋರಿಗಳಿಗೆ ಬಹುಮಾನ ನೀಡುವಾಗ ಸ್ವಜನಪಕ್ಷಪಾತ ಇದ್ದಿಲ್ಲ. ನಾಲ್ಕು ಜನ ಏನಂದಾರು ಎಂಬ ಪ್ರಜ್ಞೆಗಿಂತಲೂ ಹೆಚ್ಚಾಗಿ ಯೋಗ್ಯತೆ ಇರುವುದನ್ನು ಆಯ್ಕೆ ಮಾಡಬೇಕು ಎಂಬ ಭಾವನೆ ಇರುತ್ತಿತ್ತು. ಜನ ಎಷ್ಟು ಕುಶಾಗ್ರಮತಿಗಳೆಂದರೆ ದನಗಳ ಜಾತ್ರೆಯಲ್ಲಿ ಸುತ್ತಾಡಿದ ನಂತರ ಈ ಜೋಡಿಗೆ ಮೊದಲ ಬಹುಮಾನ, ಈ ಜೋಡಿಗೆ ಎರಡನೇ ಬಹುಮಾನ ಎಂದು ನಿರ್ಧರಿಸಿಬಿಡುತ್ತಿದ್ದರು.
ಹೀಗೆ ಲಕ್ಷಾಂತರ ಜನರ ಜೀವನಾಡಿಯಂತಿದ್ದ ವಿಜಾಪುರದ ಸಂಕ್ರಮಣ, ನಗರ ಬೆಳೆದಂತೆಲ್ಲ ತನ್ನ ವೈಭವವನ್ನು ಕಳೆದುಕೊಳ್ಳತೊಡಗಿತು. ದನದ ಜಾತ್ರೆ ನಡೆವ ವಿಶಾಲ ಜಾಗದಲ್ಲಿ ಮನೆಗಳು ನಿಮಾರ್ಣವಾದವು. ಜಾತ್ರೆ ಎಲ್ಲೋ ದನಗಳ ಜಾತ್ರೆ ಎಲ್ಲೋ ಎನ್ನುವಂತಾಯಿತು. ವಾಹನ ದಟ್ಟಣೆ ವಿಪರೀತವಾಯಿತು. ಜನರಿಂದ ತುಂಬಿರುತ್ತಿದ್ದ ರಸ್ತೆಗಳು ವಾಹನಗಳಿಂದ ತುಂಬತೊಡಗಿದವು. ಸಾಮಾಜಿಕ ಸಂಬಂಧಗಳಲ್ಲಿ ಏರುಪೇರುಗಳಾಗತೊಡಗಿದವು. ವಿಜಾಪುರ ಬಿಟ್ಟ ನಂತರ ನಾನು ಅನೇಕ ವರ್ಷಗಳವರೆಗೆ ಸಂಕ್ರಮಣದಲ್ಲಿ ವಿಜಾಪುರಕ್ಕೆ ಹೋಗುವ ಪರಿಪಾಠವಿಟ್ಟುಕೊಂಡಿದ್ದೆ. ಆ ಸಂದರ್ಭದಲ್ಲಿ ನನ್ನ ಅನೇಕ ಬಾಲ್ಯ ಸ್ನೇಹಿತರು ಸಿಗುತ್ತಿದ್ದರು.
ಒಂದು ಸಲ ಸಂಕ್ರಮಣಕ್ಕೆ ಒಂದೆರಡು ದಿನ ಮುಂಚೆ ವಿಜಾಪುರಕ್ಕೆ ಧಾವಿಸುವಾಗ ಏನಾಯಿತೆಂದರೆ, ಅಂದು ರಾತ್ರಿ ಎಂಟು ಗಂಟೆಗೆ ಬಸ್ ನಿಲ್ದಾಣದಿಂದ ಟಾಂಗಾದಲ್ಲಿ ಕುಳಿತು ಮನೆಯ ಕಡೆಗೆ ಹೊರಟೆ. ದಾರಿಯಲ್ಲಿ ನಂದಿಕೋಲುಗಳು ಕಂಡವು. ಜೊತೆಗೆ ಹತ್ತಾರು ಜನ ಇದ್ದರು. ಆ ಜನರ ಉತ್ಸಾಹವೇಕೆ ಕುಂದಿದೆ, ಯಾವುದೇ ಹುರುಪು ಕಾಣುತ್ತಿಲ್ಲವಲ್ಲಾ ಎಂದು ಮನಸ್ಸು ಅಳುಕಿತು. ನನ್ನ ಬಾಲ್ಯವನ್ನು ಮರಳಿ ತರುತ್ತಿದ್ದ ಈ ಜಾತ್ರೆಯ ಬಗ್ಗೆ ನಾನು ಎಷ್ಟೊಂದು ಹಚ್ಚಿಕೊಂಡಿದ್ದೆ ಎಂದರೆ ನನ್ನ ಕಾಮ್ರೇಡ್‌ಗಳು ನನ್ನ ಈ ಭಾವನಾತ್ಮಕ ಸಂಬಂಧದ ಬಗ್ಗೆ ನಗುವ ಹಾಗಾಗಿತ್ತು.
ಟಾಂಗಾ ಹಾಗೇ ಮುಂದುವರಿಯಿತು. ಟಾಂಗಾವಾಲಾ ನನಗೆ ಬಂಧುವಿನ ಹಾಗೆ ಕಾಣುತ್ತಿದ್ದ. ವಿಜಾಪುರ ಬಡವರ ನಯ ನಾಜೂಕು, ಅಂತಃಕರಣ ಎಲ್ಲವೂ ಮೈವೆತ್ತಿದಂತಿದ್ದ. ಆ ವಿನಮ್ರ ಭಾವದ ಮತ್ತು ನಗುಮುಖದ ಟಾಂಗಾವಾಲಾನ ಜೊತೆ ಅದು ಇದು ಮಾತನಾಡುತ್ತಿದ್ದೆ. ಎದುರಿಗೆ ದೊಡ್ಡದೊಂದು ಕಟ್ಟಡ ಕಾಣಿಸಿತು. ಅದರ ಎದುರು ಸೈಕಲ್‌ಗಳ ಭಾರಿ ರಾಶಿ ಕಂಡಿತು. ಇದೇನು ಎಂದು ಕೇಳಿದೆ. ‘ಅದು ದೊಡ್ಡ ಮನೀರಿ, ಆದರ ಅದರೊಳಗೆ ಥೇಟರ್ ಐತ್ರಿ. ಅದರಾಗ ಅದೇನೋ ಬುಲುಫಿಲಂ ತೋರಸ್ತಾರಂತ್ರಿ. ಜನಾ ಅಲ್ಲೇ ಮುಗಿ ಬೀಳತಾರ್ರಿ. ದಿನಾ ರಾತ್ರಿ ಕೂಡಿ ಹತ್ತ ಆಟಾ ತೋರಸ್ತಾರ ನೋಡ್ರಿ’ ಎಂದ. ಬಹಳ ನೋವಾಯಿತು. ಗಾಢವಾದ ಮೌನ ಆವರಿಸಿತು. ಆ ಮನೆಯ ಮಾಲೀಕನ ತಮ್ಮ ನನ್ನ ಬಾಲ್ಯ ಸ್ನೇಹಿತ. ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ನಾನು ಅವರ ಮನೆಯಲ್ಲಿ ಮಧುರಚೆನ್ನರ ‘ನನ್ನ ನಲ್ಲ’ ಓದಿದ್ದು.
ನಮ್ಮ ಉತ್ಪಾದನಾ ವ್ಯವಸ್ಥೆ, ಉತ್ಪಾದನಾ ಸಾಧನಗಳು, ಉತ್ಪಾದನಾ ಪದ್ಧತಿ ಮತ್ತು ಮಾರುಕಟ್ಟೆ ಪದ್ಧತಿ ಬದಲಾದಂತೆಲ್ಲ ನಮ್ಮ ಸಾಂಸ್ಕೃತಿಕ ನೆಲೆಗಳು ನಮಗರಿಯದಂತೆಯೆ ಸೂಕ್ಷ್ಮವಾಗಿ ಬದಲಾಗುತ್ತ ಹೋಗುತ್ತವೆ. ಒಂದು ಸಾಂಸ್ಕೃತಿಕ ಪರಿಸರದಲ್ಲಿ ಅತಿಮುಖ್ಯವಾದ ವ್ಯಕ್ತಿ, ಬದಲಾದ ಪರಿಸ್ಥಿತಿಯಲ್ಲಿ ನಿರುಪಯುಕ್ತವಾಗಿ ಕಾಣುತ್ತಾನೆ. ಸಾಮ್ರಾಜ್ಯಶಾಹಿ ಸಂಸ್ಕೃತಿಯ ಮುಂದೆ ಬಡದೇಶಗಳ ಸಂಸ್ಕೃತಿಗಳು ನೀರಿನಿಂದ ಹೊರಬಿದ್ದ ಮೀನುಗಳ ಹಾಗೆ ಬಾಯಿ ಬಿಡುತ್ತಿವೆ. ನಾವು ಎತ್ತ ಸಾಗಿದ್ದೇವೆ?
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ವಿಜಾಪುರ ಸಿದ್ದೇಶ್ವರ ಜಾತ್ರೆ ಸುತ್ತಿ ಬಂದಂತೆ ಖುಷಿ ಆಯಿತು. ಜೊತೆಗೆ ನಮ್ಮೂರ ಜಾತ್ರೆಯಲ್ಲಿ ನಾವು ಬಾಲ್ಯದಲ್ಲಿ ಸಂತಸ ಪಟ್ಟ ಸಂಗತಿಗಳು ನೆನಪಾದವು.ತಮ್ಮ ಅದ್ಬುತ ನೆನಪುಗಳನ್ನು ಅಕ್ಷರಗಳ ಮೂಲಕ ನಮಗೆ ಜಾತ್ರೆಯ ಸವಿ ಊಟ ಬಡಿಸಿದ ರಂಜಾನ್ ದರ್ಗಾ ಗುರುಗಳಿಗೆ ನಾವು ಚಿರಋಣಿ.