ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಚಿವ ಮಂಡಳಿಯಲ್ಲಿ ಬಸವ ಲಿಂಗಪ್ಪ ಅವರು ನಗರಾಡಳಿತ ಸಚಿವರು. ಅರಸು ಅವರ ಹಾಗೆಯೇ ಇವರದು ಸಹ ಕೆಲವು ಕ್ರಾಂತಿಕಾರಿ ಯೋಜನೆಗಳಿದ್ದವು. ಅವುಗಳಲ್ಲಿ ಒಂದು ಮಲ ಹೊರುವ ಪದ್ಧತಿಯನ್ನು ನಿಲ್ಲಿಸುವುದು. ಇವರ ಆಡಳಿತ ಅವಧಿಯಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಆಯಿತು. ನಿಷೇಧ ಆದನಂತರ ಒಳಚರಂಡಿ ವ್ಯವಸ್ಥೆ ಬಿರುಸಾಗಿ ನಡೆಯಿತು. ಒಂದೆರೆಡು ವರ್ಷದಲ್ಲಿ ಜಾಡಮಾಲಿ ಗುಂಪು ಮಾಯವಾಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

ಬೆಂಗಳೂರಿನಲ್ಲಿ ಐವತ್ತರ ದಶಕದವರೆಗೆ attached bath ತಲೆ ಹಾಕಿರಲಿಲ್ಲ. ಅದಕ್ಕೆ ಮುಖ್ಯ ಮತ್ತು ಒಂದೇ ಕಾರಣ ಅಂದರೆ ಒಳಚರಂಡಿ ವ್ಯವಸ್ಥೆ ಇಲ್ಲದಿದ್ದುದು. ಐವತ್ತರ ದಶಕದ ಮನೆಗಳು ಮನೆಯ ಹಿಂದೆ ಕಕ್ಕಸು ಮನೆ ಹೊಂದಿರುತ್ತಿತ್ತು. ಒಂದು ಮಧ್ಯಮ ವರ್ಗದವರ ಸ್ವತಂತ್ರ ಮನೆ ವಿನ್ಯಾಸ ಸರಿ ಸುಮಾರು ಹೀಗೆಯೇ.. ಮುಂದೆ ವೆರಾಂಡಾ, ಎರಡೋ ಮೂರೋ ರೂಮು, ದೇವರ ಮನೆ, ಒಂದು ಅಡುಗೆಮನೆ. ಇವಕ್ಕಿಂತ ದೂರದಲ್ಲಿ ಬಚ್ಚಲು ಮತ್ತು ಕೊನೆಗೆ ಕಕ್ಕಸ್ ಮನೆ. ಮಹಡಿ ಮನೆ ಆದರೂ ಕಕ್ಕಸ್ ಕೊನೆಗೆ. ಈ ವ್ಯವಸ್ಥೆ ಮತ್ತು ಪ್ಯಾಟರ್ನ್‌ಗಳಿಗೆ ಎಲ್ಲರೂ(ಗುಡಿಸಲು ವಾಸಿಗಳು ಬಿಟ್ಟು)ಹೊಂದಿಕೊಂಡಿದ್ದರು. ಸರ್ಕಾರಿ ಸೇವೆಯವರು (ಆಗ ಅಂದರೆ ಐವತ್ತರ ಮೊದಲು ಖಾಸಗಿ ಉದ್ಯೋಗ ಅಂದರೆ ಅಂಗಡಿ ಇಡುವುದು ಅಂಗಡಿ ಲೆಕ್ಕ ಬರೆಯೋದು, ಅಡಿಗೆ ಕೆಲಸ, ಟೈಲರ್ ವೃತ್ತಿ, ದೊಡ್ಡವರ ಹತ್ತಿರ ಮಾಡುತ್ತಿದ್ದ ಕೆಲಸಗಳು, ದೇವರ ಪೂಜೆ ಮತ್ತು ಪೌರೋಹಿತ್ಯ ಹಾಗೂ ಮನೆಗೆಲಸ ಮುಂತಾದವು ಇಂತಹವು. ಕೆಲವು ದೊಡ್ಡವರ ಮನೆಯಲ್ಲಿ ದೇವರ ಪೂಜೆ ಮಾಡಲು ಎಂದೇ ಶಾಸ್ತ್ರಿಗಳ ನೇಮಕ ಆಗುತ್ತಿತ್ತು. ನನಗೆ ಗೊತ್ತಿದ್ದ ಒಬ್ಬರ ಮನೆಗೆ ದೇವರ ಪೂಜೆಗೆ ಎಂದೇ ಒಬ್ಬ ಹಿರಿಯರು ಮಡಿಯಲ್ಲಿ ಬರುತ್ತಿದ್ದರು. ಈಗಿನ ಹಾಗೆ ದೊಡ್ಡ ಖಾಸಗಿ ಉದ್ಯಮ ಇನ್ನೂ ಹುಟ್ಟಿರಲಿಲ್ಲ. ಖಾಸಗಿ ಉದ್ಯಮ ಎನ್ನುವ ಪದ ನಂತರ ಬಂದಿದ್ದು) ಮಾಮೂಲಾಗಿ ಹೆಚ್ಚು ಸ್ಥಿತಿವಂತರು. ಅಂತಹವರು ಆಪ್ಪನಿಂದಲೋ ಮಾವನಿಂದಲೋ ಬಂದ ಆಸ್ತಿ ರೂಡಿಸಿಕೊಂಡು ಬದುಕು ಸಾಗಿಸುತ್ತಿದ್ದರು. ಅಪರೂಪಕ್ಕೆ ಕೆಲವರು ಸ್ವಂತ ಆಸ್ತಿ ಮಾಡಿದ್ದರು. ಸುಮಾರಾಗಿ ಇಂತಹ ಆಸ್ತಿಗಳು ಎಂದರೆ ವಠಾರಗಳು. ಇವುಗಳ ಪ್ಯಾಟರ್ನ್ ಹೇಗೆ ಅಂದರೆ ರಸ್ತೆಯ ಮುಂದಕ್ಕೆ ಮಾಲೀಕನ ಮನೆ. ಅದರ ಪಕ್ಕ ಒಂದು ನಾಲ್ಕು ಆಡಿ ಸಂಪೂರ್ಣ ಕತ್ತಲು ಕತ್ತಲೆಯಓಣಿ. ಅದರೊಳಗೆ ನೀವು ಹೋದರೆ ಓಣಿ ಮುಖ್ಯ ಮನೆಯ ಹಿಂಭಾಗಕ್ಕೆ ತೆರೆಯುತ್ತದೆ. ಓಣಿ ಮೂಲಕ ಒಂದು ಸೈಕಲ್‌ ಸಾಗಿಸಬಹುದು ಅಷ್ಟೇ. ಆಗಿನ್ನೂ ಸ್ಕೂಟರು, ಮೋಟಾರ್. ಸೈಕಲ್ ಇರಲಿಲ್ಲ ಮತ್ತು ಕಾರು ಇಡುವಷ್ಟು ಸಾಹುಕಾರರ ಸಂಖ್ಯೆ ತುಂಬಾ ಕಡಿಮೆ. ಕಾರು ಇಟ್ಟವರು ಇಂತಹ ವಠಾರದಿಂದ ದೂರ. ಸೈಕಲ್ ಸಹ ಮದುವೆ ಸಮಯದಲ್ಲಿ ಮಾವ ಕೊಡಿಸಿದ್ದು, ವರದಕ್ಷಿಣೆಯ ಒಂದು ಅಂಗ. ಅಲ್ಲಿ ಎಡ ಸಾಲಿನಲ್ಲಿ ನಾಲ್ಕೋ ಐದೋ ಮನೆಗಳು ಮತ್ತು ಬಲ ಸಾಲಿನಲ್ಲಿಯೂ ಅದರ ಝೆರಾಕ್ಸ್ ಪ್ರತಿಗಳು. ಈ ಸಾಲಿನ ಮನೆಗಳೇ ವಠಾರಗಳು. ಪ್ರತಿಯೊಂದೂ ಪುಟ್ಟ ಪುಟ್ಟವು, ಅರ್ಥಾತ್ ಗುಬ್ಬಚ್ಚಿ ಗೂಡು. ಒಂದು ಚಿಕ್ಕ ಅಂದರೆ ಅತಿ ಚಿಕ್ಕ ಸಂಸಾರಕ್ಕೆ ಎಂದೇ ಕಟ್ಟಿದವು. ಗಂಡ ಹೆಂಡತಿ ಒಂದು ಪುಟ್ಟ ಕೂಸು ಇವು ಇರಬಹುದಾದದ್ದು. ಈ ಮನೆ ಸಾಲಿಗೆ ಮೊದಲು ಒಂದು ಬಾವಿ, ಬಾವಿಗೆ ಎರಡು ಮೂರು ರಾಟೆಗಳು. ಒಂದು ರಾಟೆ ಮನೆ ಓನರ್‌ಗಾದರೆ ಮಿಕ್ಕ ಎರಡು ಎರಡೂ ಸಾಲಿನ ಮನೆಗಳಿಗೆ. ಸುಮಾರು ಮನೆಗಳ ಬಾಡಿಗೆಗೆ ಇದ್ದವರು ಅವರವರದ್ದೇ ಸೇದುವ ಹಗ್ಗ ಇಟ್ಟುಕೊಂಡಿರುತ್ತಿದ್ದರು.

ಸಾಮಾನ್ಯವಾಗಿ ಇಡೀ ವಠಾರಗಳು ಒಂದೇ ಪಂಗಡಕ್ಕೆ (ಜಾತಿಗೆ) ಸೇರಿದವರಿಗೆ ಮೀಸಲು. ಲಕ್ಷಕ್ಕೆ ಒಂದು ಈ ಸಾಮಾನ್ಯ ರೂಲಿಗೆ ಅಪವಾದ ಇರಬಹುದು. ಈ ಎರಡೂ ಸಾಲು ಮನೆಗಳ ನಂತರ ಕಕ್ಕಸ ಮನೆ. ಇಲ್ಲಿ ಇಡೀ ಅಷ್ಟೂ ಮನೆಗಳಿಗೆ ಮೊದಮೊದಲು ಒಂದೇ ಕಕ್ಕಸು ಇರುತ್ತಿತ್ತು. ನಂತರ ಅವು ಎರಡಾದವು. ಒಂದು ಓನರ್‌ಗೆ ಮತ್ತೊಂದು ಬಾಡಿಗೆಗೆ ಇರುವವರಿಗೆ ಅಂತ. ನಂತರ ಇದರ ಸಂಖ್ಯೆ ಮೂರಕ್ಕೆ ಏರಿತು. ಒಂದು ಓನರ್‌ದು ಮಿಕ್ಕ ಎರಡು ಎರಡೂ ಸಾಲಿನ ಬಾಡಿಗೆ ದಾರರಿಗೆ ಈ ಲೆಕ್ಕದಲ್ಲಿ. ಈ ಕಕ್ಕಸದ ವಿನ್ಯಾಸ ಹೇಗಿತ್ತು ಅಂದರೆ ನಾಲ್ಕು ಬೈ ನಾಲ್ಕು ಅಡಿಯ ಪುಟ್ಟ ಚೌಕಾಕಾರದ ರೂಮು. ಅದಕ್ಕೆ ಒಂದು ಜಿಂಕ್ ಶೀಟ್ ಬಾಗಿಲು. ಕಕ್ಕಸು ರೂಮಿಗೆ ಎರಡು ಅಥವಾ ಮೂರು ಮೆಟ್ಟಲು. ಮೆಟ್ಟಲು ಯಾಕೆ ಅಂದಿರಾ? ಅದಕ್ಕೇ ಬಂದೆ.

ಮೆಟ್ಟಲು ಹತ್ತಿ ಬಾಗಿಲು ನೂಕಿ ಒಳಗೆ ಹೋದರೆ ಅಲ್ಲಿ ನೆಲದ ಮೇಲೆ ಒಂದು ಅರ್ಧ ಆಡಿ ವ್ಯಾಸದ ಕಿಂಡಿ ಮತ್ತು ಕಿಂಡಿಯ ಎರಡೂ ಪಕ್ಕ ಪಾದಗಳನ್ನು ಇರಿಸುವ ಪೀಠ. ಆ ಎರಡು ಪೀಠದ ಮೇಲೆ ಕಾಲಿರಿಸಿ ಕುಕ್ಕರಕಾಲಿನಲ್ಲಿ ಕೂತು ಗುಂಡಿಯೊಳಗೆ ಬೀಳುವ ಹಾಗೆ ಕಕ್ಕಸ್ ಮಾಡಬೇಕು. ಅದು ನೇರ ಕೆಳಗೆ ಇರಿಸಿರುವ ಮಂಕರಿಯಲ್ಲಿ ಬೀಳುವ ಹಾಗೆ ಅರೇಂಜ್ ಮಾಡಿರುತ್ತಿದ್ದರು. ಯಾಕೆ ಹೀಗೆ ಅಂದರೆ ಆಗ ಇನ್ನೂ ಈಗಿನ ಒಳಚರಂಡಿ ವ್ಯವಸ್ಥೆ ಬಂದಿರಲಿಲ್ಲ. ಕಕ್ಕಸ್ ಮಂಕರಿ ಇನ್ನಿತರ ಬಿದಿರಿನ ಮಂಕರಿಗಳ ಹಾಗೇ ಇರುತ್ತಿತ್ತು. ಅದರ ನಡುವಿನ ಸಂದಿಗಳಲ್ಲಿ ಮಲ ಹೊರಬರದ ಹಾಗೆ ಅದರಲ್ಲಿ ಮುತ್ತುಗದ ಹಚ್ಚಿದ ಎಲೆಯನ್ನು ಇಡುತ್ತಿದ್ದರು. ಸಾಮಾನ್ಯವಾಗಿ ಇದು ಈ ಎಲೆ ನಮ್ಮ ಊಟದ ಎಲೆಯೇ ಆಗಿರುತ್ತಿತ್ತು. ವಾರಕ್ಕೊ ಅಥವಾ ಹದಿನೈದು ದಿವಸಕ್ಕೆ ಒಮ್ಮೆ ಜಾಡ ಮಾಲಿಗಳು (ಆಗ ಅವರಿಗೆ ಈ ಹೆಸರು ಇತ್ತು. ನಂತರ ಇದು ಒಂದು ಬೈಗುಳ ಆಯಿತು. ಈಗೊಂದು ಇಪ್ಪತ್ತು ಇಪ್ಪತ್ತೈದು ವರ್ಷದ ಈಚೆಗೆ ಈ ಪದ ನಾನು ಕೇಳಿಲ್ಲ) ಬರುತ್ತಿದ್ದರು. (ಈ ಎಲೆ ತೊಳೆದು ಮತ್ತೆ ಮಾರುತ್ತಾರೆ, ಅದನ್ನು ನಾವು ಊಟಕ್ಕೆ ಉಪಯೋಗಿಸುತ್ತೇವೆ ಎಂದು ಕೆಲವರ ಆರೋಪ ಇತ್ತು. ಈ ಆರೋಪವನ್ನು ಸಖತ್ ಬುರುಡೆ ಎಂದು ಸಾರಾಸಗಟಾಗಿ ಮನೆಯ ಹಿರಿಯರು ತಳ್ಳು ಹಾಕುತ್ತಿದ್ದರು) ಅವರು ಮಂಕರಿ ಹೊರತೆಗೆದು ಬೇರೆಯದನ್ನು ಇರಿಸುತ್ತಿದ್ದರು. ತುಂಬಿದ ಮಂಕರಿ ಹೊರತೆಗೆದು ಅದನ್ನು ಗಾಡಿಯಲ್ಲಿ ಕೆಲವು ಸಲ ತಲೆ ಮೇಲೆ ಹೊತ್ತು ಇಡುತ್ತಿದ್ದರು. ಮೊದಮೊದಲು ಈ ಕೆಲಸಕ್ಕೆ ಎಂದೇ ಒಂಟೆತ್ತಿನ ಗಾಡಿಗಳು ಇದ್ದವು. ಹೀಗೆ ಹತ್ತು ನೂರು ಗಾಡಿಗಳು ಈ ತ್ಯಾಜ್ಯವನ್ನು ಆಗ ನಗರದ ಒಳಗೆ ಹರಿಯುತ್ತಿದ್ದ ವೃಷಭಾವತಿ ನದಿಗೆ ಹಾಕುತ್ತಿದ್ದರು. ಅದು ಕೆಂಗೇರಿ ಸೇರುತ್ತಿತ್ತು. ಬೆಂಗಳೂರಿನಿಂದ ಕೆಂಗೇರಿ ಮೂಲಕ ಹೊರಹೋಗುವ ಹಾಗೂ ಬರುವ ವೇಳೆ ಗಬ್ಬು ವಾಸನೆ ಹೊಡೆದು ನರಕಕ್ಕೆ ಬಂದು ಹೋದ ಅನುಭವ ಆಗುತ್ತಿತ್ತು.

ಆಗ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಹಂದಿಗಳು. ಇವು ಈ ಕಲ್ಮಶ ನಿರ್ಮೂಲನೆಯ ಕಾರ್ಯದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಎಷ್ಟೋ ಬಾರಿ ಮಲ ವಿಸರ್ಜನೆಗೆ ಕೂತವರ ಗುದದ್ವಾರದ ಬಳಿ ಸೀದಾ ಬಾಯಿ ಹಾಕುತ್ತಿದ್ದು ಅದು ಸರ್ವೇ ಸಾಮಾನ್ಯ ಅನುಭವ. ಕೆಲವು ಸಲ ಕೆಲವು ಸಲ ಏನು ಎಲ್ಲಾ ವಠಾರಗಳಲ್ಲೂ ಹೊಂದಾಣಿಕೆ ಸಾಮರಸ್ಯ ತಪ್ಪಿದ ಹಾಗೆ ಕಕ್ಕಸ್ ಮನೆ ಸರಿಯಾಗಿ ತೊಳೆದಿಲ್ಲ ಅವರು ಹಾಳು ಮಾಡಿದರು ಇವರು ಸರಿಯಾಗಿ ನೀರು ಹೊಯ್ದಿಲ್ಲ ಎನ್ನುವ ಆರೋಪ ಪ್ರತ್ಯಾರೋಪಗಳು ಹರಿದಾಡಿ ಒಬ್ಬ ಫಟಿಂಗ ಅದರ ಬಾಗಿಲು ಹಾಕಿ ಬೀಗ ಜಡಿಯುವುದು, ಅವನ ವಿರುದ್ಧ ಮಿಕ್ಕವರು ಸೇರಿ ಪೊಲೀಸರವರೆಗೆ ವಿಷಯ ಹೋಗುವುದು ಒಂದು ಸಾಮಾನ್ಯ ಸಂಗತಿ ಆಗಿತ್ತು.

ಈ ಕಕ್ಕಸು ತೆಗೆಯಲು ಜಾಡಮಾಲಿಗಳು ಬರುತ್ತಿದ್ದರು ಅಂತ ಹೇಳಿದೆ. ಈ ರಸ್ತೆಯ ಸಾಲಿನ ಮನೆಗಳ ಹಾಗೆಯೇ ಇದರ ಹಿಂದಿನ ಸಾಲು. ಅಲ್ಲಿನ ಮನೆಗಳು ಈ ಸಾಲಿನ ಮನೆಗಳ ಕನ್ನಡಿ ಬಿಂಬಗಳು. ಅಂದರೆ ಜಾಡಮಾಲಿ ಬಂದಾಗ ಎರಡೂ ರಸ್ತೆಯ ಕಕ್ಕಸು ಅವನು ಒಂದೇ ರಸ್ತೆಯಲ್ಲಿ ತೆಗೆದುಕೊಂಡು ಗಾಡಿಗೆ ಹೇರುವ ವ್ಯವಸ್ಥೆ ಇತ್ತು. ಇದಕ್ಕೆ ತಲೆ ಮೇಲೆ ಮಲ ಹೊರುವ ಪದ್ಧತಿ ಎಂದು ಹೆಸರಿತ್ತು. ಮಲ ಶೇಖರಣೆಯ ಇಂತಹ ರಸ್ತೆಗೆ ಕನ್ಸರ್ವೆನ್ಸಿ ರಸ್ತೆ ಎಂದು ಕರೆಯುತ್ತಿದ್ದರು. ಈ ಕನ್ಸರ್ವೆನ್ಸಿ ರಸ್ತೆ ಎಂದು ಹೆಸರು ಕೇಳಿದ ಕೂಡಲೇ ನನಗೊಂದು ಐವತ್ತು ಅರವತ್ತು ವರ್ಷದ ನೆನಪು ಒದ್ದಿಕೊಂಡು ಬರುತ್ತೆ. ಈಗ ಅದಕ್ಕೆ..

೧೯೫೬/೫೭ರಲ್ಲಿ ಅಂತ ಕಾಣುತ್ತೆ. ನಮ್ಮ ಸೋದರಮಾವನ ಮನೆಯ ಒಂದು ಸಮಾರಂಭ (ಬಹುಶಃ ಮಗನ ಮುಂಜಿ ಇರಬೇಕು) ತಿರುಪತಿಯಲ್ಲಿ ನಡೆಯಿತು. ನಮ್ಮ ಮನೆಯವರು ಎಲ್ಲರೂ ಅಲ್ಲಿಗೆ ಹೋಗಿದ್ದೆವು. ಯಾವುದೋ ಛತ್ರದಲ್ಲಿ ಈ ಸಮಾರಂಭ. ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿದ್ದರು. ನಾವು ಹುಡುಗರಿಗೆ ಅಲ್ಲೇನು ಕೆಲಸ. ಛತ್ರದಿಂದ ಆಚೆ ಬಂದೆವು. ರಸ್ತೆಯಲ್ಲಿ ವಿಚಿತ್ರ ಅನಿಸುವ ಪ್ರತಿಮೆಗಳು ಇರುವ ಕಟ್ಟಡದ ಒಳಗೆ ಹೋಗಿ ಅಲ್ಲಿ ದೇವರು ಇದೆಯಾ, ಯಾವ ದೇವರು ಎಂದು ನೋಡಿ ಆಚೆ ಬರುವುದು. ಮುಂದಿನ ಮನೆಗೆ ಹೋಗಿ ಇಣಕುವುದು ಹೀಗೆ ನಮ್ಮ ಸರ್ವೆ ನಡೆಯಿತು. ಒಂದು ಬಿಲ್ಡಿಂಗ್ ನೋಡಿದ ನಂತರ ಮುಂದಿನ ಕಟ್ಟಡ ಹೋದೆವು. ಒಂದು ದೇವರ ಬೊಂಬೆ ಅಂದರೆ ಪ್ರತಿಮೆ ಕಟ್ಟಡದ ಮುಂದೆ ಇತ್ತು. ಯಾವುದೋ ದೇವಸ್ಥಾನ ಅಂದುಕೊಂಡು ಒಳಗೆ ಹೋದೆವು. ಅಲ್ಲಿ ಗುಂಪು ಗುಂಪು ಜನ, ಎಂಟೂ ಹತ್ತು ಗುಂಪು. ಗುಂಪಿನ ನಡುವೆ ತೂರಿ ಒಳಗೆ ಹೋದೆವು. ಕೂದಲ ರಾಶಿ ರಾಶಿ ಕುಪ್ಪೆ ಹಾಕಿದ್ದರು. ಅದರ ಎದುರು ಕುರ್ಚಿ ಹಾಕಿಕೊಂಡು ಒಬ್ಬರು ಕೂತಿದ್ದರು. ಅವರೆದುರು ಟೇಬಲ್ ಮತ್ತು ಕೆಲವು ರಿಜಿಸ್ತರುಗಳು. ಸುತ್ತಲೂ ಇದ್ದವರಲ್ಲಿ ಕೆಲವರು ತೆಲುಗು ಭಾಷೆಯಲ್ಲಿ ಒಂದು ಎರಡು ಅಂತ ಕೂಗುತ್ತಿದ್ದರು. ಅಷ್ಟೊಂದು ಕೂದಲ ರಾಶಿ ಒಟ್ಟಿಗೆ ಅವತ್ತೇ ನಾನು ನೋಡಿದ್ದು ಮತ್ತು ನಂತರ ಎಲ್ಲೂ ಅಂತಹ ರಾಶಿ ನೋಡಿಯೇ ಇಲ್ಲ. ಅದರಿಂದ ಅದು ಹಾಗೇ ತಲೆಯಲ್ಲಿ ಕೂತು ಬಿಟ್ಟಿದೆ. ಒಂದು ಹತ್ತು ನಿಮಿಷ ಇದನ್ನು ನೋಡಿದೆವು. ಛತ್ರ ಸೇರಿದ ನಂತರ ಅಮ್ಮನಿಗೊ ಅಪ್ಪನಿಗೊ ಈ ವಿಷಯ ಹೇಳಿದೆ. ಕೂದಲು ಹರಾಜು ಹಾಕ್ತಾ ಇದ್ದರು ಅಂತ ಕಾಣ್ಸುತ್ತೆ. ಅಲ್ಯಾಕೆ ಹೋಗಿದ್ಯೋ ಮುಂಡೇದೆ ಅಂತ ಬೈದು ತಲೆ ಮೇಲೆ ಎರಡು ಬಿಂದಿಗೆ ನೀರು ಸುರಿದಿದ್ದರು. ಇದರ ನಂತರ ಯಾವುದೋ ದೊಡ್ಡ ಹಾಲ್‌ನಂತಹ ಇದ್ದ ಜಾಗಕ್ಕೆ ಕಿರಿಯ ಬಾಗಿಲ ಮೂಲಕ ನುಗ್ಗಿದ್ದೆವು.

ಅಲ್ಲಿ ಮೂರೋ ನಾಲ್ಕೋ ಮೆಟ್ಟಲು ಹತ್ತಿದರೆ ಒಂದು ವಿಶಾಲವಾದ ಸ್ಥಳ. ಅದರ ಮಧ್ಯೆ ಸಾವಿರಾರು ವೃತ್ತದ ಆಕಾರದ ಮೇಲ್ಮುಖದ ಗುಂಡಿಗಳು. ಪ್ರತಿ ಗುಂಡಿಯ ಪಕ್ಕ ಪಾದಗಳನ್ನು ಇಟ್ಟುಕೊಳ್ಳಲು ಒಂದೆರೆಡು ಇಂಚು ಎತ್ತರಿಸಿದ ಸಿಮೆಂಟ್ ಬ್ಲಾಕ್‌ಗಳು. ಎರಡು ಸಾಲು, ನಂತರ ಸ್ವಲ್ಪ ಗ್ಯಾಪು. ನಂತರ ಮತ್ತೆ ಎರಡು ಸಾಲು ಹೀಗೆ. ಆ ದೊಡ್ಡ ಜಾಗದಲ್ಲಿ ನೂರಕ್ಕೂ ಮೇಲೆ ಈ ಗುಂಡಿಗಳು ಇದ್ದವು. ಇವು ಈ ಗುಂಡಿಗಳು ಅಂದರೆ ಸಾರ್ವಜನಿಕ ಸಾಮೂಹಿಕ ಶೌಚಾಲಯ ಅದು. ಒಂದು ನಿಮಿಷ ನಿಂತು ನೋಡಿದೆವು ಮತ್ತು ಅಲ್ಲಿಂದ ಓಟ ಕಿತ್ತೆವು. ಇದನ್ನ ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಆದರೂ ಈ ನೆನಪು ಇನ್ನೂ ಹಸಿರು ಹಸಿರು ನನಗೆ. ಎಷ್ಟೋ ವರ್ಷದ ನಂತರ ಈ ನೆನಪು ಬಂದು ಅದರ ಅಂದರೆ ಮಲ ಹೇಗೆ ಹೊರ ತೆಗೆಯುತ್ತಿದ್ದರು ಎಂದು ಯೋಚಿಸಿದೆ. ನಮ್ಮೂರಿನ ಹಾಗೆಯೇ ಅಲ್ಲೂ ಸಹ ಮಲದ ಮಂಕರಿ ತೆಗೆಯಲು ಮತ್ತು ಇಡಲು ಸಾಲು ಸಾಲು ಗುಂಡಿಗಳು ಮಾಡಿರಬೇಕು ಎಂದು ಅರ್ಥ ಮಾಡಿಕೊಂಡೇ. ಬೆಂಗಳೂರಿನಲ್ಲಿ ಇಂತಹ ವ್ಯವಸ್ಥೆ ನೋಡಿದ್ದರಿಂದ ತಿರುಪತಿ ವ್ಯವಸ್ಥೆ ಕೂಡಲೇ ಮನಸಿಗೆ ನಾಟಿತು. ಆಮೇಲೆ ಒಂದು ಅರವತ್ತು ಅರವತ್ತೈದು ವರ್ಷ ನಾನು ತಿರುಪತಿ ನೋಡಲೇ ಇಲ್ಲ (ನನ್ನ ಬಂಧುಗಳು ಹಾಗೂ ಗೆಳೆಯರಲ್ಲಿ ಇದು ಒಂದು ರೆಕಾರ್ಡ್! ). ಮತ್ತೆ ನಾನು ಹೋದಾಗ ವ್ಯವಸ್ಥೆ ಸಂಪೂರ್ಣ ಮಾರ್ಡನೈಸ್ ಆಗಿತ್ತು. ಅಂದಿನ ಸಾಲುಗುಂಡಿ ವ್ಯವಸ್ಥೆ ಬದಲಾಗಿತ್ತು. ತಮಾಷೆ ಅಂದರೆ ಸುಮಾರು ಜನ ನನಗೆ ತಿಳಿದವರು ಐವತ್ತು ವರ್ಷದಿಂದ ವರ್ಷಕ್ಕೊಮ್ಮೆ ತಿರುಪತಿಗೆ ಹೋಗುತ್ತಾರೆ. ಅವರು ಯಾರೂ ಈ ಗುಂಡಿ ವ್ಯವಸ್ಥೆ ಕುರಿತು ಮಾತೇ ಆಡಿಲ್ಲ. ಬಹುಶಃ ನಾನು ಇಲ್ಲಿ ಹೇಳಿರುವ ಸಂಗತಿ ನಾನೇ ಮೊದಲು ಬರಹದಲ್ಲಿ ಇಳಿಸಿದವನು ಇರಬೇಕು! ತಿರುಪತಿ ಆಗ ಈಗಿನಷ್ಟು ಭಕ್ತರನ್ನು ಆಕರ್ಷಿಸುವ ಪುಣ್ಯ ಕ್ಷೇತ್ರ ಆಗಿರಲಿಲ್ಲ. ಆದರೂ ಜನ ಒಂದೆಡೆ ಸೇರಿದಾಗ ಕನಿಷ್ಠ ನಾಗರಿಕ ಸೌಲಭ್ಯವು ಬೇಕಾಗುತ್ತದೆ. ೧೯೮೩ರಲ್ಲಿ ಅಂತ ನೆನಪು. ಕರ್ನಾಟಕ ಸುತ್ತು ಹೊಡೆದು ಧರ್ಮ ಸ್ಥಳಕ್ಕೆ ಬಂದೆವು. ಅಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ. ಲಕ್ಷಾಂತರ ಜನ ಸೇರಿದ್ದಾರೆ. ಎರಡು ಮೂರು ಮೈಲಿ ದೂರದಿಂದಲೇ ಒಂದು ರೀತಿ ಕೆಟ್ಟ ವಾಸನೆ. ನಂತರ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ.

ಮತ್ತೂ ಒಂದು ನೆನಪು ಅಂದರೆ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರೊ ಎಂ ಡಿ ನಂಜುಂಡಸ್ವಾಮಿ ಒಂದು ರೈತ ಜಾಥಾ ಏರ್ಪಡಿಸಿದ್ದರು. ರಾಜ್ಯದ ಎಲ್ಲೆಡೆಯಿಂದ ರೈತರು ಬೆಂಗಳೂರಿಗೆ ಬಂದಿದ್ದರು. ಯಾರಿಗೂ ಶೌಚದ ವ್ಯವಸ್ಥೆ ಇರಲಿಲ್ಲ. ಡಿಸ್ಟ್ರಿಕ್ಟ್ ಆಫೀಸ್ ಕಚೇರಿ ಆವರಣ ದೊಡ್ಡದಿತ್ತು. ಇದೆಲ್ಲಾ ನಮ್ಮ ದುಡ್ಡಲ್ಲೆ ಕಟ್ಟಿರೋದು. ಈ ಜಾಗ ನಮ್ಮದೇ ಅಂತ ಹೇಳಿ ಪ್ರೊ. ಹಳ್ಳಿ ರೈತರಿಗೆ ಅಲ್ಲೇ ಬಯಲಲ್ಲಿ ತಮ್ಮ ದೈನಿಕ ಪ್ರಾತರ್ವಿಧಿಗೆ ಸೂಚಿಸಿದರು. ಒಂದು ವಾರ ಆ ರಸ್ತೆಯಲ್ಲಿ ಅಡ್ಡಾಡದ ಹಾಗಾಗಿತ್ತು.

ಕೆಲವು ಸಲ ಕೆಲವು ಸಲ ಏನು ಎಲ್ಲಾ ವಠಾರಗಳಲ್ಲೂ ಹೊಂದಾಣಿಕೆ ಸಾಮರಸ್ಯ ತಪ್ಪಿದ ಹಾಗೆ ಕಕ್ಕಸ್ ಮನೆ ಸರಿಯಾಗಿ ತೊಳೆದಿಲ್ಲ ಅವರು ಹಾಳು ಮಾಡಿದರು ಇವರು ಸರಿಯಾಗಿ ನೀರು ಹೊಯ್ದಿಲ್ಲ ಎನ್ನುವ ಆರೋಪ ಪ್ರತ್ಯಾರೋಪಗಳು ಹರಿದಾಡಿ ಒಬ್ಬ ಫಟಿಂಗ ಅದರ ಬಾಗಿಲು ಹಾಕಿ ಬೀಗ ಜಡಿಯುವುದು, ಅವನ ವಿರುದ್ಧ ಮಿಕ್ಕವರು ಸೇರಿ ಪೊಲೀಸರವರೆಗೆ ವಿಷಯ ಹೋಗುವುದು ಒಂದು ಸಾಮಾನ್ಯ ಸಂಗತಿ ಆಗಿತ್ತು.

ಕನ್ಸರ್ವೆನ್ಸಿ ರಸ್ತೆಬಗ್ಗೆ ಹೇಳುತ್ತಿದ್ದೆ. ಒಳಚರಂಡಿ ವ್ಯವಸ್ಥೆ ಬಂದ ನಂತರ ಈ ಕನ್ಸರ್ವೆನ್ಸಿ ರಸ್ತೆಗಳು ಮನೆಯವರ ಪಾಲಿಗೆ ಸೇರಿತು. ಮೈಸೂರಿನ ಕೆಲವು ಏರಿಯಾದಲ್ಲಿ ಈ ಕನ್ಸರ್ವೆನ್ಸಿ ರಸ್ತೆ ಅಕ್ಕ ಪಕ್ಕದ ಮನೆಗಳು ಮಹಡಿ ಮೇಲೆ ಮಹಡಿ ಬೆಳೆದು ಈ ರಸ್ತೆಗಳು ಆ ಮನೆಗಳಿಗೆ ಮುಂಭಾಗ ಆಗಿವೆ. ಆದರೆ ದೊಡ್ಡ ತೊಂದರೆ ಎಂದರೆ ರಸ್ತೆ ಅಗಲ ಚಿಕ್ಕದು ಮತ್ತು ಕಾರು ನಿಲ್ಲಿಸಲು ಆಗದು! ಬೆಂಗಳೂರಿನ ಚಾಮರಾಜ ಪೇಟೆಯಲ್ಲಿನ ಕೆಲವು ವಠಾರಗಳ ಆಗಿನ ಸ್ಥಿತಿ ಹೀಗೆಯೇ. ಚಾಮರಾಜ ಪೇಟೆಯಲ್ಲಿ ರೆಡ್ಡಿ ಹಾಸ್ಟೆಲ್ ಅಂತ ಒಂದು ಹಾಸ್ಟೆಲ್ ಇತ್ತು. ಈಗ ಅದು ಇದೆಯೋ ಇಲ್ಲವೋ ತಿಳಿಯದು. ಅದರ ಪಕ್ಕ ಒಂದು ವಠಾರ. ಅದರಲ್ಲಿ ನನ್ನ ದೊಡ್ಡ ಸೋದರ ಮಾವ ಇದ್ದರು. ಅದೇ ಸಮಯದಲ್ಲಿ ಕುಳ ಕುಂದ ಶಿವರಾವ್ ಹೆಸರಿನ ಒಬ್ಬರು ಆ ವಠಾರದಲ್ಲಿ ಇದ್ದರು. ಸದರಿ ವಠಾರದ ಕತೆಯನ್ನೂ ಒಳಗೊಂಡ ಕೆಲವು ಪ್ರಸಂಗಗಳು ರಂಗಮ್ಮನ ವಠಾರ ಎನ್ನುವ ಹೆಸರಿನಲ್ಲಿ ಒಂದು ಕಾದಂಬರಿ ಪ್ರಕಟ ಆಯಿತು ಮತ್ತು ಲೇಖಕರ ಹೆಸರು ನಿರಂಜನ ಎಂದಿತ್ತು! ನಿರಂಜನ ಅವರೇ ಕುಳಕುಂದ ಶಿವರಾವ್ ಅಂತ ಗೊತ್ತಾಯಿತು. ನನ್ನ ಅಮ್ಮ ಆಗಾಗ ರಂಗಮ್ಮನ ವಠಾರ ಮತ್ತು ನಿರಂಜನ ಅವರನ್ನು ನೆನೆಸಿಕೊಳ್ಳುತ್ತಾ ಇದ್ದಳು. ನನಗೆ ಡಿಗ್ರಿಯಲ್ಲಿ ನಿರಂಜನ ಅವರ ನಾಸ್ತಿಕ ಕೊಟ್ಟ ದೇವರು ಸಂಕಲನ ನಾನ್ ಡೀಟೇಲ್ ಆಗಿತ್ತು. ಹಂಪನಾ ಈ ಪಠ್ಯ ಪಾಠ ಮಾಡಿದ್ದರು. ನಿರಂಜನ ಅವರ ಸಂಪಾದಕತ್ವದಲ್ಲಿ ಜ್ಞಾನ ಗಂಗೋತ್ರಿ ಎನ್ನುವ ಕಿರಿಯರ ವಿಶ್ವಕೋಶ ಪ್ರಕಟವಾಯಿತು. ಆ ಎಲ್ಲಾ ವಾಲ್ಯೂಮ್‌ಗಳು ಈಗಲೂ ನಮ್ಮ ಮನೆ ಅಟ್ಟದ ಮೇಲೆ ಕೂತಿವೆ!

ನಿರಂಜನ ತಮ್ಮ ಆರಂಭದ ದಿನಗಳಲ್ಲಿ ಈ ವಠಾರದಲ್ಲಿ ಇದ್ದರು. ಡ್ರೈನೇಜ್ ಕತೆ ಬಂದಾಗ V ictor Hugo ಬರೆದ Le Miserables ಕಾದಂಬರಿ ನೆನಪಾಗಲೇ ಬೇಕು. ಅಲ್ಲಿನ ಒಂದು ಪಾತ್ರ (ಜೀನ್ ವಾಲ್ ಜೀನ್)ಪ್ರಜ್ಞೆ ತಪ್ಪಿದ್ದ ನಾಯಕನನ್ನು ಹೊತ್ತು ನಗರದ ಒಳಚರಂಡಿ ಮೂಲಕ ಸುಮಾರು ದೂರ ಸಾಗುತ್ತಾನೆ. ಈ ಕಾದಂಬರಿಯ abridge version (ಸಂಕ್ಷಿಪ್ತ ರೂಪ) ನೊಂದ ಜೀವಿ ಹೆಸರಿನಲ್ಲಿ ಶ್ರೀ ನಾ. ಕಸ್ತೂರಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮೂಲ ಕಾದಂಬರಿ ಗೊತ್ತಿಲ್ಲದವರು ಸಹ ಆಸ್ವಾದಿಸಿ ಖುಷಿ ಪಡಬಹುದು ಹಾಗಿದೆ ಅನುವಾದಿತ ನೊಂದಜೀವಿ. ಈ ಕಾದಂಬರಿಯಲ್ಲಿ ಜೀನ್ ವಾಲ್ ಜೀನ್ ಎನ್ನುವ ಹೆಸರಿನ ಒಂದು ಅಪರಾಧ ಹಿನ್ನೆಲೆಯ ಆದರೆ ಪ್ರಸ್ತುತ ಸಮಾಜ ಸೇವಕ ಆಗಿ ಪರಿವರ್ತನೆ ಆಗಿರುವ ವ್ಯಕ್ತಿ ಏಟುಬಿದ್ದು ಪ್ರಜ್ಞೆ ತಪ್ಪಿದ್ದ ಒಬ್ಬನನ್ನು ಹೆಗಲ ಮೇಲೆ ಹೊತ್ತು ಇಂತಹ ಒಂದು ಒಳಚರಂಡಿ ಒಳಗೆ ಸುಮಾರು ದೂರ ಸಾಗುತ್ತಾನೆ. ಅವನನ್ನು ಯಾವಾಗಲೂ ಸಂಶಯದಿಂದ ನೋಡುವ ಜೇವರ್ಟ್ ಎನ್ನುವ ಪೊಲೀಸ್ ಅಧಿಕಾರಿ ಇವನ ಚಲನವಲನದ ಮೇಲೆ ಕಣ್ಣಿಟ್ಟಿರುತ್ತಾನೆ.. ಕತೆ ಹೀಗೆ ಮುಂದುವರೆಯುತ್ತದೆ. ನೊಂದಜೀವಿ ಪುಸ್ತಕವನ್ನು ನಾನು ಅರವತ್ತರ ದಶಕದಲ್ಲಿ ಓದಿದ್ದೆ.

(ದೇವರಾಜ ಅರಸು)

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಚಿವ ಮಂಡಳಿಯಲ್ಲಿ ಬಸವ ಲಿಂಗಪ್ಪ ಅವರು ನಗರಾಡಳಿತ ಸಚಿವರು. ಅರಸು ಅವರ ಹಾಗೆಯೇ ಇವರದು ಸಹ ಕೆಲವು ಕ್ರಾಂತಿಕಾರಿ ಯೋಜನೆಗಳಿದ್ದವು. ಅವುಗಳಲ್ಲಿ ಒಂದು ಮಲ ಹೊರುವ ಪದ್ಧತಿಯನ್ನು ನಿಲ್ಲಿಸುವುದು. ಇವರ ಆಡಳಿತ ಅವಧಿಯಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಆಯಿತು. ನಿಷೇಧ ಆದನಂತರ ಒಳಚರಂಡಿ ವ್ಯವಸ್ಥೆ ಬಿರುಸಾಗಿ ನಡೆಯಿತು. ಒಂದೆರೆಡು ವರ್ಷದಲ್ಲಿ ಜಾಡಮಾಲಿ ಗುಂಪು ಮಾಯವಾಯಿತು. ಅಲ್ಲಿನ ಕೆಲಸಗಾರರಲ್ಲಿ ಕೆಲವರು ನಗರ ಸಭೆಯಲ್ಲಿ ಕೆಲಸದಲ್ಲಿ ಇದ್ದವರು. ಮಿಕ್ಕವರು ನೆರೆಯ ಆಂಧ್ರಪ್ರದೇಶದಿಂದ ಇಲ್ಲಿಗೆ ಬಂದವರು. ತೆಲುಗು ಅವರ ಭಾಷೆ. ಇವರೆಲ್ಲ ಎಲ್ಲಿ ಹೋದರೋ ಎಂದು ಆಶ್ಚರ್ಯ ಪಟ್ಟೆವು ಅಷ್ಟೇ. ಮೊದಮೊದಲು ಒಳಚರಂಡಿ ಪೈಪುಗಳು ಮಣ್ಣಿನಿಂದ ಮಾಡಿ ಈ ಕೆಲಸಕ್ಕೆ ಎಂದು ವಿಶೇಷವಾಗಿ ಡಿಸೈನ್ ಮಾಡಿದ್ದವು. ಇವನ್ನು ರಸ್ತೆಯ ಒಂದು ಅಂಚಿಗೆ ನೆಲದಡಿ ಹೂಳಿ ಅದಕ್ಕೆ ಮನೆಯಿಂದ ಇದೇ ತರಹ ಪೈಪ್ ಮೂಲಕ ಸಂಪರ್ಕ ಕೊಡಲಾಗಿತ್ತು. ನಂತರ ರಸ್ತೆಗೆ ದೊಡ್ಡ ವ್ಯಾಸದ ಉದ್ದನೆ ಪೈಪ್ ಅಳವಡಿಕೆ ಆಯ್ತು. ಕಾಲ ಕಳೆದ ಹಾಗೆ ಮಣ್ಣಿನ ಪೈಪ್ ಇಲಿ ಹೆಗ್ಗಣ ಕೊರೆದವು. ಈಗ ಪಿವಿಸಿ ಪೈಪ್‌ಗಳು ಬಂದಿವೆ. ಜತೆಗೆ ರಸ್ತೆಯ ಅಂಚಿನಲ್ಲಿನ ಪೈಪ್ ಈಗ ರಸ್ತೆ ಮಧ್ಯ ಇದೆ. ಹಳೇ ಪೈಪ್ ವ್ಯವಸ್ಥೆಗೆ ಪರ್ಯಾಯವಾಗಿ ಹೊಸ ಪೈಪ್ ಹಾಕುವಾಗ ಹಳೆಯದನ್ನು ತೆಗೆಯದೆ ಬಿಟ್ಟಿದ್ದು ಇದಕ್ಕೆ ಕಾರಣ. ಇದರಿಂದಾಗಿ ರಸ್ತೆ ಮಧ್ಯ ನಿಮಗೆ ಮ್ಯಾನ್ ಹೋಲ್ ಕಾಣುತ್ತವೆ. ಮುಂದೆ ಇದು ದೊಡ್ಡ ಸಮಸ್ಯೆ ಆಗಬಹುದು.

ಈಗೊಂದು ಮೂವತ್ತು ನಲವತ್ತು ವರ್ಷಗಳಿಂದ ಮಾನವ ತ್ಯಾಜ್ಯ ನಿರ್ವಹಣೆಗೆ STP ಗಳು ಕಾರ್ಯ ಮಾಡುತ್ತಿವೆ. ನಮ್ಮ ಮನೆ ಪಕ್ಕ ಇರುವ ನರಸೀಪುರ ಕೆರೆಯಲ್ಲಿ ಮೊದಲು ಒಂದು STP ಅಳವಡಿಕೆ ಆಗಿತ್ತು. ಆಗಿನ ಮುಖ್ಯ ಮಂತ್ರಿ ಪಟೇಲ್ ಹಾಗೂ ಸಚಿವ ಅನಂತ ನಾಗ್ ಇದರ ಉದ್ಘಾಟನೆಗೆ ಬಂದಿದ್ದರು. ಈ STP ಕತೆ ಮುಂದೆ ಹೇಳುತ್ತೇನೆ. STP ಅಂದರೆ sewerage treatment plant ಅಂತ. ಗೃಹ ಕಲ್ಮಶ ತ್ಯಾಜ್ಯ ನಿರ್ವಹಣೆ ಅಂತ ಯಾರೋ ಇದನ್ನು ತರ್ಜುಮೆ ಮಾಡಿದ್ದಾರೆ. ಇದರ ವ್ಯವಸ್ಥೆ ಹೇಗೆ ಅಂದರೆ ಮಾನವ ತ್ಯಾಜ್ಯ ಒಂದು ಕೆರೆಗೆ ಹರಿಸುತ್ತಾರೆ. ಅಲ್ಲಿ ಒಂದು STP plant ಶುರುಮಾಡುವ ವ್ಯವಸ್ಥೆ, ಯಂತ್ರ ಅಳವಡಿಸುವುದು. ಮೂರು ಹಂತದಲ್ಲಿ ನೀರು ಶುದ್ಧಗೊಳ್ಳುತ್ತದೆ. ಈ ನೀರನ್ನು ಗೃಹಉಪಯೋಗಿ ಕೆಲಸಗಳಿಗೆ ಉಪಯೋಗಿಸಬಹುದು. ಯಾವಾಗಲೂ ಬರ ಪರಿಸ್ಥಿತಿ ಇದ್ದ ಕೋಲಾರ ಜಿಲ್ಲೆಯ ಕೆರೆಗಳಿಗೆ ಹೀಗೆ ಬೆಂಗಳೂರಿನಲ್ಲಿ ಶುದ್ಧೀಕರಿಸಿದ ನೀರನ್ನು ಕಳೆದ ಎರಡೂವರೆ ವರ್ಷಗಳಿಂದ ಹರಿಸಲಾಗುತ್ತದೆ. ಮೊದಮೊದಲು ಇದಕ್ಕೆ ಪ್ರತಿರೋಧ ಕಂಡಿತು. ಈಗ ಜನ ಒಪ್ಪಿದ್ದಾರೆ. ಸಿಂಗಾಪುರದಲ್ಲಿ ಇದೇ ರೀತಿ ಸಂಸ್ಕರಿಸಿದ ನೀರನ್ನು ಕುಡಿಯಲು ಸಹ ಉಪಯೋಗಿಸುತ್ತಾರೆ ಎಂದು ಯಾರೋ ಪರಿಸರ ತಜ್ಞರು ಹೇಳಿದ್ದರು. ನನಗೆ ಅದು ತಿಳಿಯದು. ಈಗ ಜನ ಇದಕ್ಕೆ ಅಂದರೆ ರೀ ಸೈಕಲ್ಡ್ ನೀರಿಗೆ ಅಡ್ಜಸ್ಟ್ ಆಗಿದ್ದಾರೆ.

Bwssb ಅಂದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 1964 ರಲ್ಲಿ ಹುಟ್ಟಿತು. ಅದು ಈಗ ಬೆಂಗಳೂರಿನ ನೀರು ಮತ್ತು ಒಳಚರಂಡಿ ವ್ಯವಸ್ಥೆ ನೋಡಿಕೊಳ್ಳುತ್ತಿದೆ. ಒಳಚರಂಡಿ ವ್ಯವಸ್ಥೆ ಬಂದಮೇಲೆ ನಗರ ಜೀವನದಲ್ಲಿ ಯಾರೂ ಅಷ್ಟಾಗಿ ಊಹಿಸದ ಮತ್ತು ಗಮನಿಸದ ಒಂದು ಕ್ರಾಂತಿಕಾರಿ ಬದಲಾವಣೆ ಆಗಿದೆ. ಅದರಲ್ಲಿ ಅತ್ಯಂತ ಪ್ರಮುಖವಾದದ್ದು ಅಂದರೆ ನಮ್ಮ ಟಾಯ್ಲೆಟ್‌ಗಳು. ಐವತ್ತು ಅರವತ್ತು ವರ್ಷ ಹಿಂದೆ ಮನೆ ಎಷ್ಟೇ ದೊಡ್ಡದಾಗಿದ್ದರೂ ಒಂದು ಅಥವಾ ಎರಡು ಕಕ್ಕಸ್ ಮನೆ ಟಾಯ್ಲೆಟ್ ಇರುತ್ತಿತ್ತು. ಈಗ ಮನೆ ಎಷ್ಟೇ ಚಿಕ್ಕದಾಗಿದ್ದರೂ ಪ್ರತಿ ರೂಮಿಗೆ attached ಟಾಯ್ಲೆಟ್ ಇದೆ. ಮನೇಲಿ ನಾಲ್ಕು ಜನ ಇದ್ದರೂ ಐದು ಟಾಯ್ಲೆಟ್ ಇರತ್ತೆ. ಐದರಲ್ಲಿ ಮನೆಯ ಹಿರಿಯರಿಗೆ ಇಂಡಿಯನ್ ಟಾಯ್ಲೆಟ್; ಆದರೆ ಮಿಕ್ಕವು ವೆಸ್ಟರ್ನ್‌ ಟಾಯ್ಲೆಟ್‌ಗಳು. ಇಂಡಿಯನ್ ಟಾಯ್ಲೆಟ್ ಅಂದರೆ ಕುಕ್ಕರಗಾಲಿನಲ್ಲಿ ಕೂಡುವಂತಹುದು. ವೆಸ್ಟರ್ನ್‌ ಟಾಯ್ಲೆಟ್‌ಗಳು ಅಂದರೆ ಕುರ್ಚಿ ಮೇಲೆ ಕೂಡಬಹುದಾದ ಸೌಲಭ್ಯ ಇರುವುದು. ಈಗಿನ ನಮ್ಮ ಜೀವನ ಪದ್ಧತಿಯಂತೆ ಸುಮಾರು ಐವತ್ತು ವಯಸ್ಸು ದಾಟಿದವರಿಗೆ ಮಂಡಿ ನೋವು ಸಾಮಾನ್ಯ. ವೈದ್ಯರು ವೆಸ್ಟರ್ನ್‌ ಟಾಯ್ಲೆಟ್ ಉಪಯೋಗಿಸಲು ಸಲಹೆ ಕೊಡುತ್ತಾರೆ. ಇನ್ನೊಂದು ಇಪ್ಪತ್ತು ವರ್ಷಗಳ ನಂತರ ವೆಸ್ಟರ್ನ್‌ ಟಾಯ್ಲೆಟ್‌ಗಳು ಮಾತ್ರ ಇರಬಹುದು! ಸುಮಾರಾಗಿ ಐವತ್ತು ಅರವತ್ತು ವರ್ಷದ ಹಿಂದೆ ವೆಸ್ಟರ್ನ್‌ ಟಾಯ್ಲೆಟ್‌ಳು ನಮ್ಮ ಕಲ್ಪನೆಯಲ್ಲಿ ಇರಲಿಲ್ಲ!

ಮಲ್ಲೇಶ್ವರದಲ್ಲಿ ಒಂದು ಮನೆ ೧೯೩೦ರ ಸುಮಾರಿಗೆ ಕಟ್ಟಿದ್ದು ಅಲ್ಲಿ ಎರಡು ರೂಮು attached Toilet ಇದೆ. ಮನೆ ಓನರ್ ಅವರನ್ನ ಅಷ್ಟು ಹಳೆಮನೆ ಇದು. ಮಾನವ ತ್ಯಾಜ್ಯ ನಿರ್ವಹಣೆ ಹೇಗೆ ಅಂದೆ. ಮನೆ ಪಕ್ಕ pit ಮಾಡಿದ್ದೀವಿ ಅಂದರು. ಕನ್ಸರ್ವೆನ್ಸಿ ರಸ್ತೆ ಬಗ್ಗೆ ಮತ್ತೊಂದು ರೋಚಕ ಅನುಭವ ಬರೆಯಲೇ ಬೇಕು. ರಾಜಾಜಿನಗರದ ನಮ್ಮ ವಾಸದ ಬಗ್ಗೆ ಹೇಳಿದ್ದೆ. ರಾಜಾಜಿನಗರದಲ್ಲಿ ನಮ್ಮ ವಾಸ ಶುರು ಆಗುವ ವೇಳೆಗೆ ಆಗಲೇ ಅಲ್ಲಿ ಒಳಚರಂಡಿ ವ್ಯವಸ್ಥೆ ಅಳವಡಿಕೆ ಆಗಿತ್ತು. ನಮ್ಮದು ಪೂರ್ವ ದಿಕ್ಕಿಗೆ ಇದ್ದ ಮನೆ. ಉತ್ತರದಿಂದ ದಕ್ಷಿಣಕ್ಕೆ ಹೋಗುವ ರಸ್ತೆ. ದಕ್ಷಿಣದ ತುದಿಯಲ್ಲಿ ಸಿದ್ಧರಾಮನ ದಿನ್ನೆ. ಅದು ಎತ್ತರದಲ್ಲಿದ್ದು ಉತ್ತರಕ್ಕೆ ಬರುವಾಗ ಒಂದು ನಾಲ್ಕೈದು ಆಡಿ gradient (ವಾಟ, ತಗ್ಗು) ಇತ್ತು. ಈ ವಾಟ ಮುಂದುವರೆದು ನಮ್ಮ ಮನೆ ಹಾದು ಮುಂದಿನ ಎರಡು ಮನೆಗೆ ಹೋಗಿ ಮುಂದುವರೆಯುತ್ತಿತ್ತು. ಮೇಲಿನಿಂದ ಹರಿದು ಬರುತ್ತಾ ಇದ್ದ ಗಲೀಜು ಸೇರಿದ ನೀರು ನಮ್ಮ ಮನೆ ಹತ್ತಿರ ಕಟ್ಟುತ್ತಿತ್ತು. ಅಂದರೆ ಬ್ಲಾಕ್ ಆಗುತ್ತಿತ್ತು. ಅದರ ಮೊದಲ ಎಫೆಕ್ಟ್ ಅಂದರೆ ನಮ್ಮ ಕಕ್ಕಸು ಉಕ್ಕುತ್ತಿತ್ತು. ನಗರ ಸಭೆಯ ಜಾಡಮಾಲಿಗಳು ಸುಲಭಕ್ಕೆ ಸಿಕ್ಕುತ್ತಿರಲಿಲ್ಲ ಮತ್ತು ಹೊಸ ಬಡಾವಣೆ ಆಗಿದ್ದರಿಂದ ಯಾವ ಅಧಿಕಾರಿಯೂ ಅತ್ತ ತಲೆ ಹಾಕುವ ಪ್ರಮೇಯ ಇರಲಿಲ್ಲ. ಕಕ್ಕಸು ಕಟ್ಟಿದರೆ ಅದು ಯಾರಿಗೂ ಬರಬಾರದು ಅನಿಸುವ ಹಿಂಸೆ. ಮನೆಯಲ್ಲಿನ ಹೆಂಗಸರು ಮಕ್ಕಳು ಹೇಗೆ ತಡೆದುಕೊಂಡಾರು ಇಂತಹ ಹಿಂಸೆ?

ಅದಕ್ಕೆ ಪರ್ಯಾಯ ಪರಿಹಾರ ನಾನು ನಮ್ಮ ದೊಡ್ಡಣ್ಣ ಕಂಡುಕೊಂಡಿದ್ದೆವು. ನಾವೇ ಜಾಡಮಾಲಿ ಆಗುವುದು. ಮಹಾತ್ಮಾ ಗಾಂಧೀಜಿ ಅವರು ಅವರ ಟಾಯ್ಲೆಟ್ ಅವರೇ ತೊಳೆಯುತ್ತಾ ಇದ್ದದ್ದು ನಮಗೆ ಪ್ರೇರಣೆ. ಆಗಿನ್ನೂ ಮಧ್ಯಮ ವರ್ಗದ ಮನೆಗಳಿಗೆ ಇಂಗ್ಲೀಷ್ ಕಮೊಡು ಬಂದಿರಲಿಲ್ಲ. ಇಂಡಿಯನ್ ಕಮೊಡ್‌ಗಳು ಕಾಲಿಟ್ಟಿತ್ತು. ಅವುಗಳು ಕಟ್ಟಿಕೊಂಡಾಗ ಒತ್ತಡದಲ್ಲಿ ದಬ್ಬಿ ಕಲ್ಮಶ ನೂಕುವ ಒಂದು ಟೂಲ್ ಅನ್ನು ಜಾಡಮಾಲಿಗಳು ಉಪಯೋಗಿಸುತ್ತಿದ್ದರು. ಅದು ಒಂದು ನೇರವಾದ ಆರು ಅಡಿಯ ಗಟ್ಟಿ ಕೋಲು. ಅದರ ತಲೆಗೆ ರುಮಾಲಿನ ಹಾಗೆ ಗದೆಯ ಆಕಾರದಲ್ಲಿ ಗಟ್ಟಿಯಾಗಿ ಸುತ್ತಿ ಕಟ್ಟಿದ ಬಟ್ಟೆ. ಇದನ್ನು ಹೇಗೋ ನಾನೇ ತಯಾರಿಸಿದೆ. ಮನೆಯಲ್ಲಿದ್ದ ಹರಕು ಸೀರೆ ಪಂಚೆ ಇವುಗಳನ್ನು ಗಟ್ಟಿಯಾಗಿ ಸುತ್ತಿ ನಿಕ್ಕರ್ ಲಾಡಿಗಳನ್ನು ಅದರ ಸುತ್ತ ಗಟ್ಟಿಯಾಗಿ ಕಟ್ಟಿದೆ. ಈ ಗದೆ ರೀತಿಯ ಕೋಲಿನ ಭಾಗ ಎರಡೂ ಕೈಲಿ ಹಿಡಿದು ಗದೆ ಭಾಗವನ್ನು ಕಮೋಡ್ ಬಾಯಿಗೆ ಜೋರಾಗಿ ಒತ್ತುವುದು ಮುಂದಿನ ಕ್ರಿಯೆ. ಕೈಲಿ ಈ ಟೂಲ್ ಹಿಡಿದು ಕಕ್ಕಸು ಬಾಗಿಲು ತೆಗೆದು ಕೆಲಸ ಶುರು ಮಾಡಿದೆ. ಹತ್ತಿರದಲ್ಲೇ ನಿಂತು ದೊಡ್ಡ ಅಣ್ಣ ಗೈಡ್ ಮಾಡುತ್ತಿದ್ದ. ಹತ್ತು ನಿಮಿಷ ಕೆಲಸ ಮಾಡಿರಬಹುದು. ಕಟ್ಟಿಕೊಂಡಿದ್ದ ಕಲ್ಮಶ ಧಡ ದಕ್ ಶಬ್ದದೊಂದಿಗೆ ಕೊಚ್ಚಿತು. ಜಾಡಮಾಲಿ ಪ್ರಯೋಗ ಯಶಸ್ವಿ ಆಗಿತ್ತು. ಖುಷಿಯಿಂದ ಮತ್ತೆ ನಾಲ್ಕು ಬಕಿಟ್ ನೀರು ಸುರಿದೆ. ಸ್ನಾನ ಮುಗಿಸಬೇಕು ಅಂತ ಹೊರಟಾಗ ಈ ಟೂಲ್ ಎಲ್ಲಿಡುವುದು ಅನ್ನುವ ಸಮಸ್ಯೆ ಎದುರಾಯಿತು. ಮನೆ ಒಳಗೆ ಇಡುವ ಹಾಗಿಲ್ಲ, ಮನೆ ಮೇಲೆ ಇಡುವುದು ಅಂದರೆ ಮನೆ ಮಹಡಿಗೆ ಮೆಟ್ಟಲು ಇಲ್ಲ. ಬಚ್ಚಲು ಮನೆಯಲ್ಲಿ ಇಡುವ ಹಾಗಿಲ್ಲ. ಅಣ್ಣ ತಮ್ಮ ಕೂತೆವು. ಮತ್ತೆ ಈ ಕ್ಲೀನಿಂಗ್ ಕೆಲಸ ಅದೆಷ್ಟೋ ತಿಂಗಳು, ವರ್ಷದ ನಂತರ ಬರಬಹುದು. ಅಲ್ಲಿಯವರೆಗೆ ಇದನ್ನು ಸುಮ್ಮನೆ ಮನೆಯಲ್ಲಿ ಇಡುವುದು ಬೇಡ. ಯಾರಾದರೂ ಜಾಡಮಾಲಿಗೆ ಕೊಟ್ಟರೆ ಅಂತ ಮತ್ತೊಂದು ಯೋಚನೆ ಬಂತು. ಅವರನ್ನು ಹುಡುಕಿಕೊಂಡು ಹೋಗಬೇಕು, ಅದೂ ಬೇಡ. ಕೊನೆಗೆ ಆ ಗದೆಯನ್ನು ತೊಟ್ಟಿಗೆ ಬಿಸಾಡಿ ಕೈ ತೊಳೆಯುವುದು ಅಂತ ನಿರ್ಧಾರ ಮಾಡಿದೆವು. ಈಗ ತೊಟ್ಟಿ ವಿವರಣೆ. ಮೂವತ್ತು ಮೂವತ್ತೈದು ವರ್ಷಗಳಿಗೆ ಮೊದಲು ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಒಂದು ಅಥವಾ ಎರಡು ತೊಟ್ಟಿಗಳು ಇರುತ್ತಿತ್ತು. ಮೊದಮೊದಲು ವಿನ್ಯಾಸದ ಹಾಗೇ ಇವು ಇರುತ್ತಿತ್ತು. ನಾಲ್ಕು ಎರಡಡಿ, ಮೂರಡಿ ಚಪ್ಪಡಿ ಕಲ್ಲು ಚೌಕಾಕಾರದಲ್ಲಿ ಜೋಡಿಸಿ ಅದನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸುತ್ತಿದ್ದರು. ಅದಕ್ಕೆ ನಾವು ಕಸ ಬೇಡದ್ದು ಇತ್ಯಾದಿ ಹಾಕಬೇಕು. ಆಗಾಗ್ಗೆ ಮುನಿಸಿಪಾಲಿಟಿ ಅವರು ಇದನ್ನು ತುಂಬಿಕೊಂಡು ಹೋಗಬೇಕು. ಇದು ಸ್ಥೂಲವಾಗಿ ಅದರ ನಿರ್ವಹಣೆ. ನಿಧಾನಕ್ಕೆ ಕಲ್ಲು ಚಪ್ಪಡಿ ಬದಲು ಸಿಮೆಂಟು ತೊಟ್ಟಿಗಳು ಬಂದವು. ನಂತರ ಅದೂ ನಿಂತು ಮತ್ತೊಂದು ವ್ಯವಸ್ಥೆಗೆ ಹಾರಿದೆವು… ತೊಟ್ಟಿಗಳ ಕತೆ ಇನ್ನೊಮ್ಮೆ ವಿವರವಾಗಿ ಹೇಳುತ್ತೇನೆ.

ಈ ಗದೆ ಪ್ರಯೋಗ ವರ್ಷಕ್ಕೆ ಎರಡು ಬಾರಿ ನಡೆದ ನಂತರ ಈ ಪ್ರಯೋಗ ಸಹ ಸಖತ್ ಫೇಲ್ ಆಯಿತು. ಕಲ್ಮಶ ಚೇಂಬರ್ ಕಟ್ಟಿಕೊಂಡಿತು. ಅದನ್ನು ಹೇಗೆ ಕ್ಲೀನ್ ಮಾಡುವುದು ಎನ್ನುವ ಚಿಂತೆ ತಲೆ ತುಂಬಿತು. ಜಾಡಮಾಲಿಗಳು ಸೀಳಿದ ಬೊಂಬಿನ ಹತ್ತು ಹದಿನೈದು ಅಡಿ ಉದ್ದದ ಕೋಲು ಈ ಉದ್ದೇಶಕ್ಕೆ ಉಪಯೋಗಿಸುವುದು ನೋಡಿದ್ದೆ. ನಮ್ಮ ಮನೆಗೆ ಐದು ಹತ್ತು ನಿಮಿಷದಲ್ಲಿ ಜೂಗನಹಳ್ಳಿ. ಅಲ್ಲಿ ಬೊಂಬು ಮಾರುವ ಅಂಗಡಿ ಇತ್ತು. ಒಂದು ಉದ್ದನೆ ಬೊಂಬು ಕೊಂಡು ಅಲ್ಲೇ ಮಚ್ಚು ಕೇಳಿದೆ. ಕೊಟ್ಟರು. ಬೊಂಬು ಅಡ್ಡಡ್ಡ ಸಿಳಿದೆ, ನಂತರ ಅಡ್ಡಡ್ಡ ಸೀಳಿದ ಬೊಂಬು ಮತ್ತೆರೆಡು ಸೀಳು ಮಾಡಿದೆ. ಅಂಗಡಿಯವನು ಆಶ್ಚರ್ಯದಿಂದ ನನ್ನ ಕೆಲಸ ನೋಡುತ್ತಿದ್ದ. ಯಾಕೆ ಸಾರ್ ಇದು ಅಂದ. ಅವನಿಗೆ ಕಕ್ಕಸ್ ಚೇಂಬರ್ ಕ್ಲೀನ್ ಮಾಡಲು ಅಂತ ಹೇಳುಕ್ಕೆ ಆಗುತ್ಯೇ..? ಸೀಮೆ ಬದನೆ ಗಿಡ ಹಾಕಿದಿನಿ, ಅದಕ್ಕೆ ಚಪ್ಪರಕ್ಕೆ… ಅಂದೆ.

ಬೊಂಬು ಸೀಳಿ ಅದನ್ನು ಮನೆಗೆ ಹೊತ್ತು ತಂದೆ. ಮಾರನೇ ದಿವಸ ನನಗೆ ಫಸ್ಟ್ ಶಿಫ್ಟು. ನಮ್ಮ ಅಣ್ಣನಿಗೆ ಮಧ್ಯಾಹ್ನದ ಶೀಫ್ಟು. ಬೆಳಿಗ್ಗೆ ಮೂರು ಗಂಟೆಗೆ ಎದ್ದು ಬರೀ ನಿಕ್ಕರ್ ತೊಟ್ಟು ಕಂಸರ್ವೆನ್ಸ್ ಸೇರಿದೆ. ಚೇಂಬರ್ ಮುಚ್ಚಳ ತೆಗೆದು ಪಕ್ಕ ಇಟ್ಟೆ. ಸೀಳಿದ ಬಿದಿರು ಕೋಲು ತೆಗೆದುಕೊಂಡು ಕಟ್ಟಿರುವ ಪೈಪ್‌ಗೆ ಚುಚ್ಚಲು ಶುರು ಮಾಡಿದೆ. ಒಂದು ಅರ್ಧ ಗಂಟೆ ಹೀಗೆ ಚುಚ್ಚಿ ಚುಚ್ಚಿ ಬಿದಿರು ಒಳಗೆ ನೂಕಿದೆನಾ, ಕಟ್ಟಿದ್ದ ಕಕ್ಕ ಒಮ್ಮೆಲೇ ಪೈಪ್ ಮೂಲಕ ಹರಿಯಲು ಶುರು ಆಯಿತು ಮತ್ತು ಒಂದೆರೆಡು ನಿಮಿಷದಲ್ಲಿ ಅದರ ವೇಗ ರಭಸ ಹೆಚ್ಚಾಯಿತು. ದೂರ ನಿಂತು ನೋಡುತ್ತಿದ್ದ ನಮ್ಮ ಅಣ್ಣ ನಗ್ತಾ ತಲೆ ಆಡಿಸಿದ. ಉಪಯೋಗಿಸಿದ ಬೊಂಬು ಮುರಿದು ಸಣ್ಣ ಸಣ್ಣ ತುಂಡು ಮಾಡಿದೆ. ನಂತರ ಅದು ತೊಟ್ಟಿ ಸೇರಿತು ಮತ್ತು ಸ್ನಾನದ ನಂತರ ನಾನು ಕಾರ್ಖಾನೆ ಬಸ್ಸು ಏರಿದೆ. ಈ ಅನುಭವ ಮುಂದೆ ಹೇಗೆ ನೆರವಿಗೆ ಬಂತು ಅಂತ ಮುಂದೆ ಹೇಳುತ್ತೇನೆ. ಹೀಗೆ ವರ್ಷಕ್ಕೆ ಎರಡು ಬಾರಿ ಈ ಕ್ಲೀನಿಂಗ್ ಕಾರ್ಯಾಚರಣೆ ನಡೆಸಿಕೊಂಡು ಬಂದೆವು. ಸುಮಾರು ಬೆಳಗಿನ ಹೊತ್ತು ಈ ಕಾರ್ಯಾಚರಣೆ ಆಗುತ್ತಿದ್ದು ಹೆಚ್ಚಿನವರ ಗಮನಕ್ಕೆ ಬಂದಿರಲಿಲ್ಲ. ಮೊದಮೊದಲು ಅಪ್ಪ ಅಮ್ಮ ಈ ಕ್ಲೀನಿಂಗ್ ಕ್ರಿಯೆಗೆ ವಿರೋಧ ತೋರಿಸಿದರೂ ಬೇರೆ ದಾರಿ ಕಾಣದೇ ಒಪ್ಪಿದ್ದರು.

ನನ್ನ ಕಲ್ಯಾಣದ ನಂತರ ನನ್ನ ಚೆಲುವೆ ನಮ್ಮ ಒಟ್ಟು ಸಂಸಾರದ ಒಂದು ಪಾತ್ರ ಆದಳು. ನಂತರ ಆರು ತಿಂಗಳಿಗೋ ಎಂಟು ತಿಂಗಳಿಗೋ ಈ ಕಾರ್ಯಾಚರಣೆ ನಡೆಸುವ ಸಂದರ್ಭ ಒದ್ದುಕೊಂಡು ಬಂತು. ಬೆಳಗಿನ ಮೂರಕ್ಕೆ ಅಲಾರಂ ಇಟ್ಟುಕೊಂಡು ಎದ್ದೆ. ಏನು ಇಷ್ಟು ಬೇಗ.. ಅಂತ ಕೇಳಿದಳು.

ಸ್ವಲ್ಪ ಕೆಲಸ ಇದೆ, ಮುಗಿಸಿ ಬರ್ತೀನಿ ಮಲಕ್ಕೋ ಅಂತ ಆಚೆ ಬಂದು ಮಹಡಿ ಇಳಿದೆ. ಕಾರ್ಯಾಚರಣೆ ಶುರು ಆಯಿತು. ಐದಕ್ಕೆ ಮುಗೀತು. ಸರಿ ಕೆಲಸ ಆಯಿತು, ಇನ್ನೊಂದಾರು ತಿಂಗಳು ಪ್ರಾಬ್ಲಂ ಇರಲ್ಲ ಅಂತ ಅಣ್ಣನಿಗೆ ಹೇಳಿದೆ. ಅಲ್ಲೇ ಅತ್ತಿಗೆ ಜತೆ ನನ್ನಾಕೆ ಮುಖ ಸಿಂಡರಿಸಿಕೊಂಡು, ಮೂತಿ ಊದಿಸಿಕೊಂಡು ಕಾಳಿ ಹಾಗೆ ನಿಂತಿದ್ದಳು. ಸ್ನಾನ ಮುಗಿಸಿ ಆಚೆ ಬಂದೆ. ಒಂದುವಾರ ಮನೆ ನರಕ ಆಗಿಬಿಡ್ತು…

ಇದು ರಾಜಾಜಿನಗರದ ಆಗಿನ ಡ್ರೈನೇಜ್ ಕತೆ. ಒಂದೆರೆಡು ವರ್ಷದಲ್ಲಿ ದೊಡ್ಡ ಬೊಮ್ಮಸಂದ್ರದಲ್ಲಿ ಬಾಡಿಗೆ ಮನೆಗೆ ಬಂದೆವು. ಮಾಡಿ ಮೇಲಿನ ಮನೆ. ಕೆಳ ಸಾಲಿನಲ್ಲಿ ಎರಡು ಮೇಲಿನ ಸಾಲಿನಲ್ಲಿ ಎರಡು. ಮೇಲಿನ ಎರಡೂ ಮನೆಗೆ ಒಂದೇ ಟಾಯ್ಲೆಟ್. ಬಂದ ಎರಡು ತಿಂಗಳಿಗೆ ಟಾಯ್ಲೆಟ್ ಪ್ರಾಬ್ಲಂ ಶುರು. ಓನರ್ ಮನೆ ದೂರ. ಅರ್ಜೆಂಟ್ ರಿಪೇರಿ ಆಗಬೇಕು ಏನು ಮಾಡೋದು? ಅಲ್ಲೂ ಎರಡು ಮೂರು ಸಲ ಕಾರ್ಯಾಚರಣೆ ನಡೆಸಿದೆ!

ವಿದ್ಯಾರಣ್ಯಪುರದಲ್ಲಿ ಸ್ವಂತ ಗೂಡು ಮಾಡಿ ಸೇರಿದೆವು. ಅಲ್ಲಿ ಈ ವೇಳೆಗೆ ಒಳಚರಂಡಿ ವ್ಯವಸ್ಥೆ ಇತ್ತು. ನಾವು ಬರುವ ಮೊದಲು ಇಲ್ಲಿ ಪಿಟ್ ವ್ಯವಸ್ಥೆ. ಪಿಟ್ ವ್ಯವಸ್ಥೆ ಅಂದರೆ ಒಂದು ಗುಂಡಿಯಲ್ಲಿ ನಿಮ್ಮ ಟಾಯ್ಲೆಟ್ ತ್ಯಾಜ್ಯ ಸೇರಿಸುವುದು. Soak pit ಅಂತಲೂ ಇದನ್ನು ಕರೆಯುತ್ತಾರೆ. ಇದು ಹಳ್ಳಿಗಳ ಕಡೆ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕಡೆ ಮಾಡಿಕೊಂಡ ಅನುಕೂಲ. ಐದಾರು ಅಡಿ ಆಳದ ಗುಂಡಿ ತೋಡಿ ಅದರ ಸುತ್ತ ಕಟ್ಟೆ ಕಟ್ಟುವುದು ಮತ್ತು ಅದರ ಮೇಲೊಂದು ಮುಚ್ಚಳ ಇರಿಸುವುದು. ಟಾಯ್ಲೆಟ್ ತ್ಯಾಜ್ಯ ಇದಕ್ಕೆ ಪೈಪ್ ಮೂಲಕ ಹರಿಯುತ್ತೆ. ಒಂದು ಗುಂಡಿ ತುಂಬಿದರೆ ಮತ್ತೊಂದು ಗುಂಡಿ ರೆಡಿ ಇಡುವುದು. ಹೀಗೆ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಆಗುತ್ತೆ.

ಈಗ ಬೆಂಗಳೂರು ಮಿತಿ ಮೀರಿ ಬೆಳೆದಿದೆ ಮತ್ತು ಸಮಸ್ಯೆಗಳು ಸಹ ಹಾಗೇ ಬೆಳೆದಿವೆ. ಸದ್ಯದ ಬೆಂಗಳೂರಿನ ಜನಸಂಖ್ಯೆ ಹದಿಮೂರು ಮಿಲಿಯನ್ ಅಂದರೆ ಒಂದು ಕೋಟಿ ಮೂವತ್ತು ಲಕ್ಷಕ್ಕೂ ಮೀರಿದ್ದು. ಪ್ರತಿವರ್ಷ ಶೇಕಡಾ ೩.೫ ಹೆಚ್ಚು ಆಗ್ತಾ ಇದ್ದಾರೆ. ಇಷ್ಟು ಜನರ ತ್ಯಾಜ್ಯ ನಿರ್ವಹಣೆ ಯಾವುದೇ ಸರ್ಕಾರಕ್ಕೂ ಒಂದು ದೊಡ್ಡ ಸವಾಲು. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಸಹ ಬೃಹದಾಕಾರದ್ದು.

ಒಳ ಚರಂಡಿಗಳು ಒಡೆದು ರಸ್ತೆಗೆ ಕೊಚ್ಚೆ ನೀರು ಹರಿವುದು ಇಲ್ಲಿನ ಸಾಮಾನ್ಯ ಸಂಗತಿ. ಪ್ರತಿದಿನ ಪೈಪ್ ಒಡೆದು ರಸ್ತೆಯಲ್ಲಿ ಕೊಚ್ಚೆ ಹರಿತಿದೆ ಎನ್ನುವ ಕುಂದು ಕೊರತೆ ಇದ್ದೇ ಇರುತ್ತೆ. ಆದರೂ ನಮ್ಮ ಅರೆ ಸರ್ಕಾರಿ ವ್ಯವಸ್ಥೆ ಎನಿಸಿರುವ bwssb ಕಾರ್ಯವಿಧಾನ ಮೆಚ್ಚಲೇಬೇಕು. ಇಡೀ ಇಪ್ಪತ್ತು ನಾಲ್ಕು ಗಂಟೆ ಕಾರ್ಯ ನಿರ್ವಹಿಸುವ ಕೆಲವೇ ಇಲಾಖೆಗಳಲ್ಲಿ ಇದೂ ಒಂದೂ. ಇದು ಬೆಂಗಳೂರಿಗರ ಹೆಮ್ಮೆ. ನಮಗೆ ಹೆಮ್ಮೆ ಅನಿಸುವ ಸುಮಾರು ಇಲಾಖೆಗಳು ಸರ್ಕಾರದಲ್ಲಿ ಇವೆ. ಅವುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಮುಂದೆ ಬರಲಿದೆ. ಈಚೆಗೆ bwssb ಕೆಲವು ಲಾರಿಗಳನ್ನು ಕೊಂಡಿದೆ. ಅದರಲ್ಲಿ ನೀರು ತುಂಬಿ ಕಟ್ಟಿಕೊಂಡಿರುವ ಮ್ಯಾನ್ ಹೋಲ್‌ಗಳಿಗೆ ಒತ್ತಡದ ನೀರನ್ನು Pressure water ಪೈಪ್ ಮೂಲಕ ಹರಿಸಿ ಕೊಚ್ಚೆ ಸರಾಗವಾಗಿ ಹೋಗಲು ಅನುವು ಮಾಡಲಾಗುತ್ತದೆ. ನಿಮ್ಮೆದುರು ಯಾವುದಾದರು tank ಹೊತ್ತ ಲಾರಿ ಅದರ ಮೇಲೆ bwssb ಬೋರ್ಡು ಮತ್ತು ಹಿಂದೆ ಸುರುಳಿ ಸುರುಳಿ ಸುತ್ತಿದ ನೀರಿನ ರಬ್ಬರ್ ಕೊಳವೆ ಇದ್ದರೆ ಅದು ಈ ಲಾರಿಯೇ!

ಇನ್ನು ಬೆಂಗಳೂರಿನ ಅಂದಿನ ಮತ್ತು ಇಂದಿನ ನೀರಿನ ವ್ಯವಸ್ಥೆ ನೆನೆದರೆ ಅದೇ ಒಂದು ರೋಚಕ ಕತೆ. ಎಲ್ಲಾ ಅಡೆತಡೆ ಮತ್ತು ರಾಜಕೀಯ ದೊಂಬರಾಟದ ಮಧ್ಯೆ ಇವರ ಕಾರ್ಯ ಅಷ್ಟು ಗಮನ ಸೆಳೆದಿಲ್ಲ. ಇದರ ಕತೆ ಮುಂದೆ ಯಾವಾಗಲಾದರೂ ದಾಖಲಿಸುತ್ತೇನೆ.

ಇಡೀ ಬೆಂಗಳೂರು ಈಗ ಒಳಚರಂಡಿ ವ್ಯವಸ್ಥೆಗೆ ಒಳಪಟ್ಟಿದೆ ಎಂದು ನಾನು ತಿಳಿದಿದ್ದೆ. ಐ ಟಿ ಬಿಟಿ ನಗರ, ಇಡೀ ಪ್ರಪಂಚ ಇತ್ತ ನೋಡುತ್ತಿದೆ, ನಮ್ಮಲ್ಲಿನ ಎಲ್ಲವೂ ವರ್ಲ್ಡ್ ಕ್ಲಾಸ್ ಅಂತ ಬೀಗುತ್ತಿದ್ದೆ. ಈ ಬೆಲೂನ್‌ಗೆ ಒಂದು ಸೂಜಿ ಚುಚ್ಚಿದ ಅನುಭವ ಆಯ್ತು…. ಐ ಟಿ ಬಿಟಿ ಮಧ್ಯೆ ಇರುವ ಒಂದು ಪ್ರದೇಶಕ್ಕೆ ಹೋಗಿದ್ದೆ. ರಸ್ತೆ ಅಗೆದು ಗುಂಡಿ ತೋಡಿದ್ದರು. ಹತ್ತಿರ ಹೋಗಿ ನೋಡಿದರೆ ಅಲ್ಲಿ ಒಂದು pit ರಿಪೇರಿ ಕೆಲಸ!
ಬೆಂಗಳೂರಿನ ಹಲವು ಭಾಗದಲ್ಲಿ ಇನ್ನೂ ಈ pit ವ್ಯವಸ್ಥೆ ಇದೆ!

(ಮುಂದುವರಿಯುವುದು…)