ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.
ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

ಶ್ರಾವಣದಿಂದ ಕಾರ್ತೀಕದವರೆಗೆ ಹಬ್ಬಗಳ ಸಾಲುಸಾಲು. ಶ್ರಾವಣದಲ್ಲಿ ನಾಲ್ಕು ವಾರಗಳ ಮಂಗಳಗೌರಿ ಪೂಜೆ, ನಡುವೆ ಬರುವ ಭೀಮನ ಅಮಾವಾಸ್ಯೆ ಮತ್ತು ವರಮಹಾಲಕ್ಷ್ಮಿ ವ್ರತಗಳನ್ನು ಹಾದು ಗೌರಿ-ಗಣೇಶ ಹಬ್ಬ ಮುಗಿಸಿ ಸುಧಾರಿಸಿಕೊಳ್ಳುವ ಹೊತ್ತಿಗೆ ಮೈಸೂರು ದಸರಾ ಆರಂಭಗೊಳ್ಳುತ್ತದೆ. ಅದು ಮುಗಿಯುತ್ತಿದ್ದಂತೆ ದೀಪಾವಳಿ, ಕಾರ್ತೀಕ ಸೋಮವಾರಗಳು ಬರುತ್ತವೆ. ಈ ಹಬ್ಬಗಳ ಸಾಲು ಮುಗಿಯುವವರೆಗೆ ಮನೆಯಲ್ಲಿ ಏನಿಲ್ಲವೆಂದರೂ ಒಂದು ಪಿಂಡಿ ಬೆಲ್ಲ, ಇಪ್ಪತ್ತು ಇಪ್ಪತೈದು ತೆಂಗಿನಕಾಯಿ ಬೇಕೇಬೇಕು. ಈ ಎಲ್ಲ ಹಬ್ಬಗಳನ್ನ ತಾಯವ್ವ ವೈಭವದಿಂದ ಮಾಡದಿದ್ದರೂ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬಂದಿದ್ದಳು.

ತಾಯವ್ವ ಸತ್ತ ನಂತರ ಅವುಗಳನ್ನು ನಿಭಾಯಿಸುವ ಸರದಿ ಮನೆಯ ಸೊಸೆಯರದಾಗಿತ್ತು. ಅದರಲ್ಲೂ ಮನೆಯ ಹಿರಿಸೊಸೆಯಾದ ಪುಟ್ಟಮ್ಮ ಮನೆತನದ ಸಂಪ್ರದಾಯಕ್ಕೂ ಹೆಚ್ಚು ಭಾದ್ಯಳಾಗಿದ್ದಳು. ಅತ್ತೆಯೊಂದಿಗೆ ಎಂಟೊಂಬತ್ತು ವರ್ಷ ಪಳಗಿದ್ದ ಅವಳು ಸರಿಸುಮಾರು ಎಲ್ಲವನ್ನೂ ಕಲಿತಿದ್ದಳು ಸಹ.

ಸಣ್ಣವಯಸ್ಸಿನಿಂದಲೂ ಹೋಗಿ ಬಂದು ಮಾಡುತ್ತಿದ್ದ ದಾಕ್ಷಾಯಿಣಿಗೆ ಎಲ್ಲವೂ ತಿಳಿದಿತ್ತಾದರೂ ಅವಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವಳಲ್ಲ. ತಾಯವ್ವನಾದರೂ ಇರುವವರೆಗೂ ಅವಳನ್ನು ಅಣ್ಣನ ಮಗಳಾಗಿ ಕಂಡಳೇ ಹೊರತು ಸೊಸೆಯಾಗಿ ಅಲ್ಲ. ಮನೆತನದ ಸಂಪ್ರದಾಯ, ಆಚಾರ-ವಿಚಾರಗಳನ್ನೆಲ್ಲ ನಿಭಾಯಿಸುವ ಹೊಣೆ ಹಿರಿಯ ಸೊಸೆಯದು ಎಂದು ನಂಬಿದವಳು ಅವಳು. ಹಾಗಾಗಿ ಅವಳು ಪುಟ್ಟಮ್ಮನನ್ನು ತಿದ್ದಿತೀಡುವುದರಲ್ಲಿ ಹಾಕಿದ ಶ್ರಮವನ್ನು ದಾಕ್ಷಾಯಿಣಿಯ ಮೇಲೆ ಹಾಕಲಿಲ್ಲ. ಜೊತೆಗೆ ತಮ್ಮ ವಿಶು ಎಲ್ಲ ಕಹಿಯನ್ನೂ ಮರೆತು ಎರಡನೆ ಸಂಬಂಧಕ್ಕೆ ತನ್ನ ಚಂದದ ಮಗಳನ್ನು ಕೊಡಲೊಪ್ಪಿದ್ದರ ಬಗ್ಗೆಯೂ ಅವಳು ತುಸು ಹೆಚ್ಚೆನಿಸುವಷ್ಟೇ ಕೃತಜ್ಞರಾಗಿದ್ದಳು.

ತಾಯವ್ವ ಸತ್ತ ನಂತರ ಪುಟ್ಟಮ್ಮನು ಅತ್ತೆಯ ಸಂಪ್ರದಾಯವನ್ನು ಚ್ಯುತಿಯಾಗದಂತೆ ಮಾಡಿಕೊಂಡು ಬಂದಿದ್ದಳು. ಈ ವಿಚಾರದಲ್ಲಿ ಅವಳು ದಾಕ್ಷಾಯಿಣಿಯನ್ನು ನಚ್ಚುವಂತಿರಲಿಲ್ಲ. ಕೂಗಳೆತೆಯ ದೂರದಲ್ಲಿ ತಾಯಿ ಮನೆ ಇದ್ದುದರಿಂದ ಅವಳಿಗೆ ಯಾವಾಗ ಬೇಕಾದರೂ ಕರೆ ಬರುತ್ತಿತ್ತು. ರಾಜಶೇಖರನು ಸಣ್ಣಪುಟ್ಟ ಹಬ್ಬಗಳ ಹೆಸರೇಳಿ ತನ್ನ ಕೆಲಸವನ್ನು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ. ಅದರಲ್ಲೂ ದಸರೆಯ ಹೊತ್ತಿಗೆ ಯಾವುದಾದರೊಂದು ರಿಪೇರಿಯ ಗುತ್ತಿಗೆ ಸಿಗುವ ಸಾಧ್ಯತೆಯೂ ಇತ್ತು. ಹಾಗಾಗಿ ಅವನು ಹಬ್ಬಗಳನ್ನು ನೆಚ್ಚಿ ಮನೆಯಲ್ಲಿ ಕೂರುತ್ತಿರಲಿಲ್ಲ. ಇದರಿಂದಲೂ ದಾಕ್ಷಾಯಿಣಿಗೆ ತೌರಿಗೆ ಹೋಗುವುದು ಸಲೀಸಾಗುತ್ತಿತ್ತು…

(ಡಾ. ಎಂ. ಉಷಾ)

ಈ ಬಾರಿ ಕುಲಗಾಣದ ಮನೆಯಲ್ಲಿ ಸುಗುಣ ಮತ್ತು ಮೀನಾಕ್ಷಿಯರ ನಡುವಿನ ಕದ್ದು ಬೆಣ್ಣೆ ಮಾರಿಕೊಳ್ಳುವ ಜಗಳ ತಾರಕಕ್ಕೇರಿ ಮನೆಯ ವಾತಾವರಣ ಬಿಗಡಾಯಿಸಿತ್ತು. ವಾರಗಿತ್ತಿಯ ಮೇಲೆ ಮುನಿಸಿಕೊಂಡ ಮೀನಾಕ್ಷಿ ಮುಟ್ಟಿನ ನೆಪವೊಡ್ಡಿ ಆಚೆ ಕುಳಿತಿದ್ದಳು.

‘ಹುಸಿಮುಟ್ಟುʼ ಹೆಂಗಸರ ದೊಡ್ಡ ಆಯುಧ. ಮನೆಯಲ್ಲಿ ಕೆಲಸ ಹೆಚ್ಚಾದಾಗ, ಗಂಡ ಹತ್ತಿರ ಬರುವುದು ಬೇಡವೆನಿಸಿದಾಗ ಹೆಣ್ಣುಮಕ್ಕಳು ಇದನ್ನು ಪ್ರಯೋಗಿಸುತ್ತಾರೆ. ಅದರಂತೆ ಮೀನಾಕ್ಷಿ ಮನೆಯ ಜವಾಬ್ದಾರಿಯನ್ನೆಲ್ಲ ಹೊತ್ತು ನಡೆಸುವ ತನ್ನ ಬೆಲೆಯನ್ನು ವಾರಗಿತ್ತಿಗೆ ತೋರಿಸಲು ಈ ಆಯುಧ ಪ್ರಯೋಗಿಸಿದ್ದಳು.

ನಾಲ್ಕೈದು ದಿನಗಳ ಅಂತರದಲ್ಲಿ ನಡೆದ ಈ ವಿದ್ಯಮಾನದಿಂದಾಗಿ ಈ ಬಾರಿ ಗೌರಿ ಹಬ್ಬಕ್ಕೆ ದಾಕ್ಷಾಯಿಣಿ ಮನೆಯಲ್ಲಿಯೇ ಉಳಿಯುವಂತಾಗಿತ್ತು. ದಾಕ್ಷಾಯಿಣಿಗೆ ಅಲ್ಲಿಗೆ ಹೋಗಿ ನಡೆಯುತ್ತಿದ್ದುದನ್ನು ನೋಡಬೇಕೆಂಬ ಹಂಬಲವಿದ್ದರೂ, ರಾಜಶೇಖರ ಇಂತಹ ಪರಿಸ್ಥಿತಿಯಲ್ಲಿ ನಾವು ಅಲ್ಲಿರುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ನಿರಾಕರಿಸಿದ್ದ. ಹೆಂಡತಿಗೆ ಸ್ನೋಪೌಡರುಗಳ ಬಳಕೆಯವರೆಗೆ ಮಾತ್ರ ಅವನು ಸ್ವಾತಂತ್ರ‍್ಯ ಕೊಟ್ಟಿದ್ದ…

ಎಂದಿನಂತೆ ವಾರಗಿತ್ತಿಯರಿಬ್ಬರೂ ಬೆಳಕರಿಯುವ ಮೊದಲೇ ಎದ್ದು ತಲೆಗೆ ಎರೆದುಕೊಂಡರು. ಪುಟ್ಟಮ್ಮ ಸರೋಜಳನ್ನು ಎಬ್ಬಿಸಿ ಉಳಿದವರಿಗೆ ಎರೆಯುವ ಕೆಲಸ ವಹಿಸಿ ತಾನು ದೇವರ ಮನೆ ಹೊಕ್ಕಳು. ಮಾಡುವ ಕೆಲಸಕ್ಕೆ ಅಡ್ಡ ಬರುವರೆಂದು ಚಿಕ್ಕ ಮಕ್ಕಳನ್ನು ಅಮ್ಮಂದಿರಿಬ್ಬರೂ ತಟ್ಟಿ ಮಲಗಿಸಿದ್ದರು.

ನಿಜಗುಣ-ರಾಜಶೇಖರ ಪ್ರತ್ಯೇಕವಾಗಿ ತಮ್ಮ ಜೊತೆಗಾರರೊಂದಿಗೆ ಬಹಿರ್ದೆಸೆಗೆ ತೆರಳಿದ್ದರು. ದಾಕ್ಷಾಯಿಣಿ ಅಡುಗೆ ಕೆಲಸಕ್ಕೆ ನಿಂತಳು. ಪೂಜೆಯನ್ನು ನಿಜಗುಣ ಮಾಡಿಸುತ್ತಿದ್ದರಿಂದ, ಪುಟ್ಟಮ್ಮ ದೇವರ ಪೂಜೆಗೆ ಅಣಿಮಾಡುವ ಕೆಲಸ ಅವಳದಾಗಿತ್ತು. ಹರವೆಯ ಮೇದರ ನಿಂಗಜ್ಜನಿಂದ ತರಿಸಿದ್ದ ಹೊಸಮೊರಗಳಿಗೆ ಅಡ್ಡಡ್ಡವಾಗಿ ಅರಿಶಿನ ಬಳಿದು, ಮೊನೆಬಾಲೆ ಎಲೆ ಹರಡಿ ಅದರಲ್ಲಿ ಒಂಬತ್ತು ಬಗೆಯ ಧಾನ್ಯಗಳು, ಒಂದೆರಡು ತರಕಾರಿ, ಅಚ್ಚುಬೆಲ್ಲ, ವಿಳ್ಳೆದೆಲೆ, ತೆಂಗಿನಕಾಯಿ, ರವಿಕೆಕಣ, ಬಳೆಬಿಚ್ಚೋಲೆ, ಕರಿಮಣಿ, ಕನ್ನಡಿ, ಸಿಕ್ಕಟಿಕೆ, ಅರಿಶಿನ ಕುಂಕುಮ ಇತ್ಯಾದಿಗಳನ್ನೆಲ್ಲ ಇಟ್ಟು ಅರಿಶಿನ ದಾರ ಸುತ್ತಿ ಬಾಗಿನ ಸಿದ್ಧ ಮಾಡುವ ಹೊತ್ತಿಗೆ ಮಲಗಿದ್ದ ಮಲ್ಲಿಯ ‘ರಂಗಪ್ರವೇಶʼವಾಯಿತು.

ತಾಯಿ ಮಗ್ಗುಲಲ್ಲಿ ಇಲ್ಲದ್ದರಿಂದ ಅವನು ಬೇಗನೆ ಎದ್ದಿದ್ದ. ಸರೋಜ ಮುದ್ದುಗರೆದು ಹಿತ್ತಲಿಗೆ ಕರೆದೊಯ್ದು ‘ಉಮ್ಮʼ ಮಾಡಿಸಿ, ಮೈ ತೊಳೆಯುವಲ್ಲಿಗೆ ತನ್ನ ಬುದ್ದಿಯನ್ನೆಲ್ಲ ಖರ್ಚು ಮಾಡಿದ್ದಳು. ಅಕ್ಕನಿಗೆ ಹೊಡೆದು, ಪರಚಿ, ಅಳುತ್ತ ಎಲ್ಲ ಕೆಲಸ ಮುಗಿಸಿದ ಮಲ್ಲಿ ತಾಯಿಯನ್ನು ತಲುಪಿದ್ದ.

ಇದೀಗ ದೇವರ ಕೋಣೆಯಲ್ಲಿ ಕಂಡ ಸಮೃದ್ಧಿಯಿಂದ ಅವನ ಉತ್ಸಾಹ ಇಮ್ಮಡಿಯಾಯಿತು. ಲಗುಬಗೆಯಿಂದ ತಾಯಿಗೆ ನೆರವಿಗೆ ಮುಂದಾದ. ಪುಟ್ಟಮ್ಮ ಅದಕ್ಕೆ ಅವನಿಗೆ ಅವಕಾಶ ಕೊಡದೆ, ಏನು ಮುಟ್ಟಿದರೂ, ಅಬ್ಬು… ಆಯಿ… ಅತ್ತ… ಎಂದು ಹಿಮ್ಮೆಟ್ಟಿಸ ತೊಡಗಿದಳು. ದೇವರ ಸಾಮಗ್ರಿಯಾದ್ದರಿಂದ ಅವಳ ಕಣ್ಗಾವಲು ದಿನಕ್ಕಿಂತ ತುಸು ಅಧಿಕವಾಗಿಯೇ ಇತ್ತು.

ಇದರಿಂದ ಬೇಸತ್ತ ಮಲ್ಲಿ ಬೇರೇನು ಮಾಡಬಹುದು… ಎಂದು ಯೋಚಿಸಿದ. ಅಡುಗೆ ಮನೆ ಅವನ ಗಮನ ಸೆಳೆಯಿತು. ಚಿಕ್ಕಮ್ಮನಿಗೆ ನೆರವಾಗಲು ಅತ್ತ ದೌಡಾಯಿಸಿದ…

ಮೊಸರ ಗಡಿಗೆಯಲ್ಲಿ ಕಡೆಗೋಲು ಬಿಟ್ಟು, ಒಲೆಯ ಮುಂದೆ ಇಡ್ಲಿ ಚಿಬ್ಬಲಿಗೆ ಸಂಪಣ ಹುಯ್ಯುತ್ತಿದ್ದ ದಾಕ್ಷಾಯಿಣಿ ಮಲ್ಲಿ ಒಲೆಯ ಹತ್ತಿರ ಬರುತ್ತಿದ್ದುದು ಕಂಡದ್ದೇ ‘ಅಕ್ಕ ಮಲ್ಲಿನ್ ಕರ್ಕಂಬುಡಿ… ಆಮೇಲೆ ನನ್ ಮಗಂಗೆ ಅದು ಮಾಡಿದ್ರು… ಇದು ಮಾಡಿದ್ರು ಅಂತ ರಂಪ ಮಾಡಬೇಡಿʼ ಎಂದು ಕೂಗಿದಳು.

ದಾಕ್ಷಾಯಿಣಿಯ ಮಾತಿನ ವರಸೆಯಿಂದಲೇ ಪುಟ್ಟಮ್ಮನಿಗೆ ಅವಳು ಜಗಳಕ್ಕೆ ಕಾಲು ಕೆರೆಯುತ್ತಿರುವುದು ಮನದಟ್ಟಾಯಿತು. ಮಾತು ಮುಂದುವರಿಸದೆ ಮಲ್ಲಿಯನ್ನು ಕಂಕುಳಲ್ಲಿ ಹಾಕಿಕೊಂಡು ಸರೋಜಳನ್ನು ಹುಡುಕುತ್ತ ಹೊರಬಂದಳು. ಮೊಸರು ಗಡಿಗೆ ಕೈತಪ್ಪಿತೆಂದು ಮಲ್ಲಿ ಕೊಸರಾಡಿ ಅಳುತ್ತಿದ್ದ. ಹಠ ಮಾಡುತ್ತಿರುವ ಅವನನ್ನು ಸರೋಜ ಮಾತ್ರ ಸಂಭಾಳಿಸಲು ಸಾಧ್ಯವಿತ್ತು.

ಹಜಾರ, ನೀರಮನೆ… ಎಲ್ಲಿಯೂ ಕಾಣದ ಮಗಳನ್ನು ಹುಡುಕಿಕೊಂಡು ಪುಟ್ಟಮ್ಮ ತಮ್ಮ ಕೋಣೆ ತಲುಪಿದಳು…

ಅವಳ ನಿರೀಕ್ಷೆಯಂತೆ ಸರೋಜ ಅಲ್ಲಿದ್ದಳು ಮಾತ್ರವಲ್ಲ… ತನ್ನ ಅಲಂಕಾರವನ್ನು ಮುಗಿಸಿ ಪದ್ಮಳ ಮುಖಕ್ಕೆ ಪೌಡರ್ ಬಳಿಯುತ್ತಿದ್ದಳು. ಅದಾಗ ತಾನೇ ಸ್ನಾನ ಮುಗಿಸಿ ಬಂದಿದ್ದ ಮಂಗಳೆ ಅಕ್ಕಂದಿರ ಪಕ್ಕ ನಿಂತು ತನ್ನ ಸರದಿಗಾಗಿ ಕಾಯುತ್ತಿದ್ದಳು.

ಈಗ ತಾಯಿಯನ್ನು ನೋಡಿದ್ದೇ ಸರೋಜ ಕೈಯಲ್ಲಿದ್ದ ಪೌಡರಿನ ಡಬ್ಬಿಯನ್ನು ಮುಚ್ಚಿಟ್ಟುಕೊಂಡಳು. ಪದ್ಮ ತನ್ನ ಮುಖ ಮರೆಯಾಗಿಸಿಕೊಂಡಳು. ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು.

ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು. ತನ್ನ ಗುಟ್ಟು ರಟ್ಟಾಗದಿರಲೆಂದು ತಂಗಿಯರಿಂದ ಆಣೆ ಹಾಕಿಸಿಕೊಂಡು ಅವರಿಗೂ ಹಚ್ಚುತ್ತಿರುವಾಗ ಸಿಕ್ಕಿಬಿದ್ದಿದ್ದಳು.

ಹದಿನೆಂಟರ ಪ್ರಾಯದ ಸರೋಜಳಿಗೆ ತಾನು ಮಾಡುತ್ತಿರುವ ತಪ್ಪೇನು ಎಂಬುದು ಅರ್ಥವಾಗಲಿಲ್ಲ. ಮನೆಯಲ್ಲಿ ಚಿಕ್ಕಪ್ಪನೇ ತಂದುಕೊಡುತ್ತಿರುವಾಗ, ಮಕ್ಕಳ ತಾಯಿಯಾದ ಚಿಕ್ಕಮ್ಮನೇ ಹಚ್ಚಿಕೊಳ್ಳುವಾಗ, ತಾನು ಹುಡುಗಿ ಹಚ್ಚಿಕೊಂಡರೇನು…? ಎಂಬುದು ಅವಳ ಮನದ ಪ್ರಶ್ನೆ.

ತಾಯಿಯ ಹೊಡೆತದಿಂದ ತಪ್ಪಿಸಿಕೊಂಡು ಹಜಾರಕ್ಕೆ ಓಡಿಬಂದ ಸರೋಜ, ‘ಚಿಕ್ಕಮ್ಮ ಹಚ್ಕಳಲ್ಲವಾ? ನಾವ್ಚಕಂಡ್ರೆ ಏನ ತಪ್ಪು?ʼ ಎಂದು ಸೆಟೆದು ನಿಂತಳು.

ಮಗಳು ಎದುರು ಉತ್ತರ ನೀಡಿದ್ದು ಮತ್ತು ತನ್ನ ಸಮರ್ಥನೆಗಾಗಿ ದಾಕ್ಷಾಯಿಣಿಯ ಹೆಸರು ಹೇಳಿದ್ದು ಪುಟ್ಟಮ್ಮನನ್ನು ಇನ್ನೂ ಕೆರಳಿಸಿತು. ಹಿಂದೆ ಮುಂದೆ ನೋಡದೆ, ‘ಅವ್ಳು ತಿಂತಳೆ, ನೀನು ತಿಂತಿಯಾ?ʼ ಎಂದು ಕೇಳಿದಳು.

ಈ ಮಾತು ಅಡುಗೆ ಮನೆಯಲ್ಲಿದ್ದ ದಾಕ್ಷಾಯಿಣಿಗ ಕಿವಿಗೆ ಬಂದು ಅಪ್ಪಳಿಸಿತು. ಅವಳು ಕೈಲಿ ಹಿಡಿದಿದ್ದ ಸೌಟಿನೊಂದಿಗೆ ಹೊರಬಂದವಳೆ, ‘ನಾನೇನು ತಿಂತೀನಕ್ಕ? ನಾಲಗ್ನೆ ಬಿಗಿಹಿಡಿದು ಮಾತಾಡಿ… ನನ್ನ ಗಂಡ ತಂದ್ಕೊಡ್ತನೆ… ನಾನು ಆಕತೀನಿ. ನನ್ನ ಗಂಡನಿಗೆ ಇಲ್ಲದ ದರ್ದು ನಿಮಗೇನು? ನಾ ಏನು ನಿಮ್ ಮಗ್ಳಿಗೆ ಕೊಡಕ್ಕೋಗಿರಲಿಲ್ಲ… ಅವಳೆ ಬೇಡ್ಕಂಡ್ ಬಂದಿದ್ದೋಳು. ಅಷ್ಟು ಕಷ್ಟ ಆಗಿದ್ರೆ ನಿಮ್ಮ ಮಕ್ಕಳನ್ನ ನಿಮ್ಮ ಅಂಕೆಲಿ ಮಡಿಕ್ಕಳಿʼ ಎಂದು ಜಾಡಿಸಿದಳು.

‘ಹುಸಿಮುಟ್ಟುʼ ಹೆಂಗಸರ ದೊಡ್ಡ ಆಯುಧ. ಮನೆಯಲ್ಲಿ ಕೆಲಸ ಹೆಚ್ಚಾದಾಗ, ಗಂಡ ಹತ್ತಿರ ಬರುವುದು ಬೇಡವೆನಿಸಿದಾಗ ಹೆಣ್ಣುಮಕ್ಕಳು ಇದನ್ನು ಪ್ರಯೋಗಿಸುತ್ತಾರೆ. ಅದರಂತೆ ಮೀನಾಕ್ಷಿ ಮನೆಯ ಜವಾಬ್ದಾರಿಯನ್ನೆಲ್ಲ ಹೊತ್ತು ನಡೆಸುವ ತನ್ನ ಬೆಲೆಯನ್ನು ವಾರಗಿತ್ತಿಗೆ ತೋರಿಸಲು ಈ ಆಯುಧ ಪ್ರಯೋಗಿಸಿದ್ದಳು.

ಮಾತಿಗಿಳಿದರೆ ದಾಕ್ಷಾಯಿಣಿ ಮೀನಾಕ್ಷಿಯ ಮಗಳೆ ಸರಿ! ಯಾರನ್ನು ಬಿಟ್ಟುಕೊಡುವ ಮಾತೇ ಇಲ್ಲ.

ಆದರೀಗ ಪುಟ್ಟಮ್ಮನೂ ಸೋಲುವ ಸ್ಥಿತಿಯಲ್ಲಿರಲಿಲ್ಲ. ‘ದೊಡ್ಡವರು, ಬೆಳೆದ ಮಕ್ಕಳಿರುವ ಮನೇಲಿ ಹೆಂಗಿರಬೇಕೋ ಹಂಗಿದ್ದರೆ ಚನ್ನ… ಅವೆ ಚಂಗ್ಲು ಬಿದ್ದರೆ ನಾವ್ಯಾರಿಗೇಳದು?ʼ ಎಂದು ತಿರುಗಿಸಿಕೊಟ್ಟಳು. ಸೇರಿಗೆ ಸವ್ವಾಸೇರಾಗಿ ಮಾತು ಬೆಳೆಯಿತು.

ಅವರಿಬ್ಬರ ಜಗಳದ ನಡುವೆಯೇ ಸರೋಜ ನೀರಮನೆಗೆ ಹೋಗಿ ಮುಖ ತೊಳೆದು ಬಂದು ಮಕಾಡೆ ಮಲಗಿದಳು. ಅರೆಬರೆ ಹಚ್ಚಿಸಿಕೊಂಡಿದ್ದ ಪದ್ಮ ಲಂಗದಿಂದ ಮುಖ ಮುಚ್ಚಿಕೊಂಡಳು. ತಾನಿನ್ನೂ ಹಚ್ಚಿಸಿಕೊಂಡಿಲ್ಲವೆಂಬ ಧೈರ್ಯದಲ್ಲಿ ಮಂಗಳೆ ನಿಂತಿದ್ದಳು. ದೊಡ್ಡವರ ಕೂಗಾಟವನ್ನು ನೋಡಿ ಸದ್ದಡಗಿದ್ದ ಮಲ್ಲಿ ಮಂಗಳೆಯ ಆಸರೆ ಪಡೆದಿದ್ದ. ಆತಂಕ, ಭಯ, ಕುತೂಹಲಗಳ ಉದ್ರೇಕದಲ್ಲಿ ಅವನು ತನ್ನ ಕುಮಣ್ಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಅವನ ಚಡ್ಡಿ ಪೂರಾ ಒದ್ದೆಯಾಗಿತ್ತು…

ನಿಜಗುಣ-ರಾಜಶೇಖರ ಬರುವ ವೇಳೆಗೆ ಮನಸೋ ಇಚ್ಚೆ ಬೈದಾಡಿದ ವಾರಗಿತ್ತಿಯರು ಅಡುಗೆಮನೆ ದೇವರಮನೆ ಎರಡನ್ನೂ ಬಿಟ್ಟು ತಮ್ಮ ತಮ್ಮ ಕೋಣೆಗಳನ್ನು ಸೇರಿದ್ದರು. ಹಬ್ಬದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ನಂತರ ಪರಿಸ್ಥಿತಿಯನ್ನು ಸುಧಾರಿಸಿ ಗೌರಮ್ಮನ ತಲೆ ಮೇಲೆ ಹೂವು ಕಾಣಿಸಲು ಅಣ್ಣತಮ್ಮ ಇಬ್ಬರೂ ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಯಿತು. ಗಂಡನ ಮಾತಿಗಿಂತ ಮಿಗಿಲಾಗಿ ದೈವಕ್ಕೆ ಹೆದರಿ ಪುಟ್ಟಮ್ಮ ಬಂದಳಾಗಿ ರಾಜಶೇಖರ ದಾಕ್ಷಾಯಿಣಿಗೆ ದಮ್ಮಯ್ಯ ಅನ್ನುವ ಸ್ಥಿತಿ ಬರಲಿಲ್ಲ.

***

ಗೌರಿ ಹಬ್ಬದಲ್ಲಿ ಹತ್ತಿದ ಬೆಂಕಿ ನಂದಿದಂತೆ ಕಾಣುತ್ತಿದ್ದರೂ ಒಳಗೇ ಕವರುತ್ತಿತ್ತು. ವಾರಗಿತ್ತಿಯರಿಬ್ಬರು ಒಟ್ಟಿಗಿರಲು ಸಾಧ್ಯವಿಲ್ಲ ಎನ್ನುವ ಒಂದೇ ಮಂತ್ರ ಜಪಿಸುತ್ತಿದ್ದರು. ಪುಟ್ಟಮ್ಮ ಬೇರೆಯಾಗದಿದ್ದರೆ ಬಾವಿಗೆ ಬೀಳುವುದಾಗಿ ಹೆದರಿಸುತ್ತಿದ್ದರೆ, ದಾಕ್ಷಾಯಿಣಿ ಅಪ್ಪನ ಮನೆಗೆ ಹೋಗುವುದಾಗಿ ಬೆದರಿಸುತ್ತಿದ್ದಳು.

ಈ ಬಾರಿಯ ಕದನದ ವಿಶೇಷವೆಂದರೆ, ಮೊದಲ ಬಾರಿಗೆ ಇಬ್ಬರು ಗಂಡಸರಿಗೂ ತಮ್ಮ ತಮ್ಮ ಹೆಂಡತಿಯರು ಹೇಳುತ್ತಿರುವುದು ಸರಿ ಎನಿಸಿದ್ದು. ಇಬ್ಬರೂ ಈ ವಿಷಮ ಸ್ಥಿತಿಯಲ್ಲಿ ಶ್ರೀಕಂಠಯ್ಯ ಮತ್ತು ತಾಯವ್ವನನ್ನು ತುಂಬಾ ನೆನಪು ಮಾಡಿದರು. ಅಮ್ಮ ಮೂಲೆಯಲ್ಲಿ ಕೂತಿದ್ದರೂ ಸಾಕಿತ್ತು, ಸೊಸೆಯರನ್ನು ಹೇಗೋ ನಿಭಾಯಿಸುತ್ತಿದ್ದಳು ಎಂಬುದನ್ನು ಇಬ್ಬರೂ ಅರಿತವರಾಗಿದ್ದರು.

ಮನೆಯಲ್ಲಿ ಮುಸುಕಿನ ಗುದ್ದಾಟ ಹೆಚ್ಚಾದಂತೆ ತನಗೆ ತಾನು ನಿರ್ಧಾರಕ್ಕೆ ಬರಲಾರದೆ, ನಿಜಗುಣ ತಂದೆಯ ಆಪ್ತರಲ್ಲಿ ಒಬ್ಬರಾದ ಶಿವಪ್ಪನವರ ಬಳಿಗೆ ಸಮಾಲೋಚನೆಗೆ ತೆರಳಿದ. ಶಿವಪ್ಪನವರು ಅನುಭವಸ್ಥರು. ಮೂರು ಗಂಡು ಮಕ್ಕಳ ಸಂಸಾರವನ್ನೂ, ವಿಧವೆಯಾಗಿ ಮನೆಗೆ ಮರಳಿದ್ದ ಮಗಳ ಸಂಸಾರವನ್ನೂ ಒಟ್ಟಿಗೆ ತೂಗಿಸುತ್ತಿದ್ದ ಅರವತೈದು ವರ್ಷದ ಜೀವ ಅದು.

ಶಿವಪ್ಪನವರು ವಿಷಯವನ್ನೆಲ್ಲ ಸಾವಕಾಶವಾಗಿ ಕೇಳಿಸಿಕೊಂಡು ತಮಗೆ ತಿಳಿದ ಬುದ್ಧಿ ಮಾತನ್ನು ಹೇಳಿದರು. ‘ನಿಜಗುಣ, ಈ ಯಮಕಳ ಮಾತು ಕೇಳ್ಕಂಡು ಬ್ಯಾರೆ ಆಗಬ್ಯಾಡ. ರಾಜಪ್ಪಂಗೇನು ಕಂಟ್ರಾಕ್ಟ್ರ ಕೆಲಸ ಅದೆ, ನಾಕ್ ವರ್ಷ ಮಳೆಬೆಳೆ ಇಲ್ಲದಿದ್ದರೂ ಚಿಂತಿಲ್ಲ. ಅವನ ಬೆನ್ನಿಗೆ ವಿಶ್ವಪ್ಪನವರು ನಿಂತ್ಗತಾರೆ. ನಿಂಗ್ಯಾರಿದ್ದರು? ಒಂದಲ್ಲ ಎರಡಲ್ಲ ಮೂರು ಹೆಣ್ಣು ಮಕ್ಕಳು ಬೇರೆ. ಈಗ ಮಾಡ್ತೀನಿ ಅಂದ್ರೂ ಮೂವರಿಗೂ ಒಟ್ಟಿಗೆ ಚಪ್ಪರ ಹಾಕಬಹುದು… ಹಂಗ ಬೆಳೆದು ನಿಂತವೆ. ಇಂಥ ಹೊತ್ತಲ್ಲಿ ಬ್ಯಾರೆ ಹೋದ್ರೆ ಕಷ್ಟಕ್ಕ್ ಸಿಕ್ಕಾಕಳವ್ನು ನೀನೆ… ಯೋಚನೆ ಮಾಡು? ಇರದು ಹತ್ತು ಎಕರೆ ಹೊಲ… ಅದರಲ್ಲಿ ನಿನ್ನ ಪಾಲು ತಕಂಡ್ರೆ ಬೆಳೆಯದು ಮುವತ್ತು ಮೂಟೆ ರಾಗಿ… ನೀ ಹೇಳೋ ಶಾಸ್ತ್ರದಲ್ಲಿ ಸಿಗೋದು ಪುಡಿ ಕಾಸು… ಇಂಗಂತಿನಿ ಅಂತ ಬೇಜಾರು ಮಾಡ್ಕಬೇಡ… ನೀನು ನನ್ನ ಮಗನಿದ್ದಂಗೆ… ಅದಕ್ಕೆ ವಂಚನೆ ಇಲ್ಲದೆ ಹೇಳ್ತಾ ಇದೀನಿ. ನನ್ನ ಕೇಳಿದ್ರೆ ಮೂರು ಹೆಣ್ಣೈಕಳನ್ನು ಹಸೆ ಏರಿಸೋವರೆಗೆ ಬ್ಯಾರೆ ಹೋಗೊ ಮಾತ ನೀನು ಮರ‍್ತುಬುಡೋದೆ ಒಳ್ಳೇದುʼ ಎಂಬ ಸಲಹೆ ನೀಡಿದರು.

ಆ ಮಾತು ನಿಜಗುಣನಿಗೂ ಒಪ್ಪಿತವಾಯಿತಾಗಿ ಅವನು ಬೇರೆಯಾಗುವ ವಿಚಾರದಿಂದ ವಿಮುಖನಾದ.

ಇತ್ತ ರಾಜಶೇಖರನಿಗೆ ಮೊದಲಿಗೆ ವಿಶುಮಾವನಲ್ಲಿ ಚರ್ಚಿಸಬೇಕೆನಿಸಿದರು ನಂತರ ಬೇಡವೆನಿಸಿತು. ಇನ್ನು ಊರಿನಲ್ಲಿ ಮಾತನಾಡಲು ಅವನಿಗೆ ಆಪ್ತರಾರೂ ಇರಲಿಲ್ಲ. ಕೊನೆಗೆ ಅಳೆದು ಸುರಿದು ತನ್ನ ಹಿತೈಷಿಗಳಾದ ರಾಮಸ್ವಾಮಿ ಐಯ್ಯರ್ ಮನೆಗೆ ಹೋದ.

ಐಯ್ಯರ್ ಈಗ ತಮ್ಮ ಕಂಟ್ರಾಕ್ಟರಿಕೆಯನ್ನು ಮಗನಿಗೆ ವಹಿಸಿ ಬೇಕಾದಾಗ ಅವನಿಗೆ ಸಲಹೆ ಕೊಡುವ ಮಟ್ಟಿಗೆ ಕೆಲಸ ಮಾಡುತ್ತಿದ್ದರು. ಉಳಿದಂತೆ ಅವರದು ವಿಶ್ರಾಂತ ಜೀವನ.

ಅಪರೂಪಕ್ಕೆ ಬಂದ ಶಿಷ್ಯನಿಗೆ ಸೊಸೆಯಿಂದ ಕಾಫಿತಿಂಡಿ ಕೊಡಿಸಿ ಸತ್ಕರಿಸಿದರು. ಅವನ ಕಂಟ್ರಾಕ್ಟರಿಕೆಯ ಕಷ್ಟಸುಖ ವಿಚಾರಿಸಿದರು. ರಾಜಶೇಖರ ಎಲ್ಲಕ್ಕೂ ಸಮರ್ಪಕವಾದ ಉತ್ತರ ನೀಡಿ, ಅವರ ಸಹಾಯವನ್ನು ಮನಸಾರೆ ಕೊಂಡಾಡಿದ. ಉಪಕಾರ ಸ್ಮರಣೆ ಇಲ್ಲದ ಕೃತಘ್ಞರೇ ತುಂಬಿರುವ ಕಾಲದಲ್ಲಿ ಮುಕ್ತವಾಗಿ ತನ್ನನ್ನು ಸ್ಮರಿಸುತ್ತಿರುವ ರಾಜಶೇಖರನ ಮಾತಿಗೆ ಅವರು ಸಂತೃಪ್ತರಾದರು.

ಉಭಯ ಕುಶಲೋಪರಿಯ ನಂತರ ರಾಜಶೇಖರ ತನ್ನ ವೈಯಕ್ತಿಕ ಸಮಸ್ಯೆಯನ್ನು ಹೇಳಿಕೊಂಡ. ಐಯ್ಯರ್ರು ನಡುನಡುವೆ ಬಾಯಿ ಹಾಕಿ ಊರಲ್ಲಿ ಜಮೀನು ಎಷ್ಟಿದೆ? ಏನು ಬೆಳಿತೀರ? ಯಾರು ಮಾಡ್ತರೆ? ವರಮಾನ ಎಷ್ಟು? ಇತ್ಯಾದಿಗಳನ್ನು ಕೇಳಿಕೊಂಡರು.

ರಾಜಶೇಖರ ತಮಗೆ ಹತ್ತೆಕರೆ ಹೊಲವಿದೆ ಎಂಬುದರ ಹೊರತಾಗಿ ಉಳಿದ ವಿಷಯಗಳ ಬಗ್ಗೆ ‘ಅಷ್ಟೇನು ಗೊತ್ತಿಲ್ಲ… ಎಲ್ಲವನ್ನೂ ಅಣ್ಣನೇ ನೋಡಿಕೊಳ್ಳುವುದುʼ ಎಂದು ತಿಳಿಸಿದ.

ಇದೆಲ್ಲ ಮಾತುಕತೆ ನಡೆಯುತ್ತಿರುವಂತೆಯೇ ಸೊಸೆಯ ಕಡೆಯಿಂದ ಇನ್ನೊಮ್ಮೆ ಗಟ್ಟಿಕಾಫಿ ಸರಬರಾಜಾಯಿತು. ಕಾಫಿ ಗುಟುಕಿಸಿದ ಐಯ್ಯರ್ ‘ನನ್ನ ಸೊಸೆ ಸಾಕ್ಷಾತ್ ಅನ್ನಪೂರ್ಣೆʼ ಎಂದು ಹೊಗಳಿದರು.

ರಾಜಶೇಖರನಿಗೆ ಅವರ ಸೊಸೆಯನ್ನು ತಾನು ಹೊಗಳಬೇಕೋ ಬೇಡವೋ ತಿಳಿಯಲಿಲ್ಲವಾಗಿ ಸುಮ್ಮನೆ ತಲೆ ಕುಣಿಸಿದ.

ಕನ್ನಡ ಬರದ ‘ತಮಿಳುಸೊಸೆʼ ಕೂಡ ಬರಿದೆ ನಕ್ಕು ಒಳಸರಿದಳು.

ಕಾಫಿ ಹೀರಿ ಚುರುಕಾದ ಐಯ್ಯರ್ ಅವರು ತಮ್ಮ ಅಮೂಲ್ಯವಾದ ಸಲಹೆಯನ್ನು ಹೀಗೆ ನೀಡಿದರು: ‘ರಾಜಶೇಖರ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋ ಗಾದೆ ಕೇಳಿದ್ದೀಯಲ್ಲಪ್ಪ… ಹಾಗೆ ಇದು. ಹಿರಿಯರು ಕಟ್ಟಿದ ಮನೆಯನ್ನು ಮುರಿದು ಭಾಗ ಮಾಡ್ಕೊಳ್ಳೊದು ತುಂಬಾ ಸುಲಭದ ಕೆಲಸ. ಎಲ್ಲಿಂದಲೋ ಬಂದು ಸೇರಿಕೊಳ್ಳೋ ಹೆಣ್ಣುಮಕ್ಕಳಿಗೆ ನಿಮ್ಮ ಹಿರಿಯರ ಕಷ್ಟ ಹೇಗೆ ತಿಳೀಬೇಕು? ನೀವು ನೀವು ಅಣ್ಣತಮ್ಮಂದಿರ ಮಧ್ಯೆ ಹೊಂದಾಣಿಕೆ ಇರಬೇಕು ಅಷ್ಟೆ. ನೀನೀಗ ಹೆಂಡತಿ ಮಾತಿಗೆ ಬೆಲೆಕೊಟ್ಟು ಅಣ್ಣನ್ನ ಬಿಟ್ರೆ ಕಷ್ಟಕ್ಕೆ ಸಿಕ್ಕಾಕೋತೀಯ… ನಾನು ಜಮೀನಿನ ಕಡೆ ತಲೆನೇ ಹಾಕಲ್ಲ ಅಂತಿಯಲ್ಲ? ಮತ್ತೆ ಭಾಗ ತಗೊಂಡೇನು ಮಾಡ್ತೀಯ? ಈಗೇನೋ ಕಂಟ್ರಾಕ್ಟರ್ ಗುತ್ತಿಗೆ ಸಿಕ್ತಿದೆ. ಕೈಯಲ್ಲಿ ನಾಲ್ಕು ಕಾಸು ಓಡಾಡ್ತಾ ಇದೆ. ಆದರೆ ಹೀಗೆ ನಡಿಯುತ್ತೆ ಅಂತ ಹೇಳೊಕ್ ಬರಲ್ಲ… ನಾಳೆ ಇನ್ಯಾವನಾದ್ರೂ ನಿಂಗಿಂತ ಜಾಸ್ತಿ ಲಂಚ ಕೊಟ್ರೆ ಗುತ್ತಿಗೆ ಅವನಿಗೇ ಹೋಗುತ್ತೆ…ʼ ಎಂದವರೆ ಒಂದು ನಿಮಿಷ ತಡೆದು, ಮತ್ತೂ ಹತ್ತಿರ ಸರಿದು, ದನಿಯನ್ನು ಮತ್ತೂ ತಗ್ಗಿಸಿ ಹೀಗೆಂದರು: ‘ನನಗೆ ಬೇಕಾದವನು ಅಂತ ಇನ್ನು ಒಂದು ಮಾತು ಬಿಚ್ಚಿ ಹೇಳ್ತೀನಿ… ನಾನು ನೀನು ಚನ್ನಾಗಿದೀವಿ ಅಂತ ಎಲ್ಲ ಚನ್ನಾಗಿದೆ ಅಂದುಕೋ ಬೇಡ. ಕಾಮಗಾರಿ ಇಲಾಖೇಲಿ ನಮ್ಮವರೇ ಜಾಸ್ತಿ… ಅವರಿಗೆ ಹಿಂದೆ ನೀವೂ ಮಾಂಸಮಡ್ಡಿ ತಿನ್ನದೇ ಇರೋ ಜನ ಅಂತ ನಿಮ್ಮ ಬಗ್ಗೆ ಒಂಥರ ಅಭಿಮಾನ ಇತ್ತು. ಆದ್ರೆ ನಿಮ್ಮವರು ಮುಸಲ್ಮಾನರು ಮತ್ತು ಒಕ್ಕಲಿಗರ ಜೊತೆ ಸೇರಿಕೊಂಡು ನಮ್ಮವರ ಮೇಲೆ ಮಸಲತ್ತು ಮಾಡಿದಾಗಿನಿಂದ ವಿಷಯ ಬದಲಾಗಿದೆ ತಿಳಿತಾ!… ಯಾವಾಗ ಬೇಕಾದ್ರೂ ಈ ಗುತ್ತಿಗೆ ಕೆಲಸ ನಿನಗೆ ಕೈಕೊಡಬಹುದು. ಆಗ ಹೆಂಡತಿ ಸ್ನೋಪೌಡರ್ ಗತಿ ಏನು? ಇದೆಲ್ಲ ಹುಚ್ಚಾಟ ಬಿಡು. ಹೆಂಗಸ್ರು ಎಷ್ಟಾದ್ರೂ ಬಡಿದಾಡಲಿ… ಪ್ರಪಂಚಜ್ಞಾನ ಇಲ್ಲ ಅವಕ್ಕೆ… ನೀನು ಅವರ ತಾಳಕ್ಕೆ ಹೆಜ್ಜೆ ಹಾಕೊಕೋದ್ರೆ ನಡುಬೀದಿಗೆ ಬರ್ತೀಯ ಅಷ್ಟೇ…ʼ ಎಂದು ಉಂಡುಂಡೆಯಾಗಿ ಇಲಾಖೆಯಲ್ಲಿದ್ದ ಜಾತಿರಾಜಕಾರಣವನ್ನು ಬಿಚ್ಚಿಟ್ಟರು.

ಹೀಗೆ ಇಬ್ಬರ ಕಡೆಯ ಹಿತೈಷಿಗಳು ಪಾಲಾಗುವ ಪರ ಇಲ್ಲದ್ದರಿಂದ ಇಬ್ಬರೂ ತಮ್ಮ ಆಲೋಚನೆಯನ್ನು ಅಲ್ಲಿಗೇ ಕೈಬಿಟ್ಟರು. ತಮ್ಮತಮ್ಮ ಹೆಂಡಂದಿರ ಮಾತುಗಳಿಗೆ ಸೊಪ್ಪುಹಾಕದೆ ಉದಾಸೀನ ತೋರಿದರು. ನಿಜಗುಣನಂತೂ ನೇರವಾಗಿಯೇ ‘ಅದೆಲ್ಲ ಆಗದ ಮಾತು… ಇರೋದ್ರಲ್ಲಿ ಅನುಸರಿಸಿಕೊಂಡು ಬಾಳೋದು ಕಲ್ತುಕೊʼ ಎಂದು ಹೇಳಿ ಪುಟ್ಟಮ್ಮನ ಬಾಯಿ ಮುಚ್ಚಿಸಿದ. ಒಂದು ಬಾಯಿ ಮುಚ್ಚಿಸಿದ್ದರಿಂದ ಇನ್ನೊಂದು ತಂತಾನೆ ಸ್ವಲ್ಪ ನಿಯಂತ್ರಣಕ್ಕೆ ಬಂತು. ವಾರಗಿತ್ತಿಯರಿಬ್ಬರೂ ಬಿಗುಮಾನವಾಗಿಯೇ ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಸರೋಜ ಚಿಕ್ಕಮ್ಮ ಕೊಟ್ಟಿದ್ದ ಸ್ನೋಪೌಡರ್ ಡಬ್ಬಿಗಳನ್ನು ಅವರ ಕೋಣೆಯ ಬಾಗಿಲಲ್ಲಿಟ್ಟು ಹಿಂತಿರುಗಿದ್ದರೂ ಅಮ್ಮನೆಡೆಗಿನ ತನ್ನ ಮುನಿಸನ್ನು ಬಿಡಲಿಲ್ಲ. ಪದ್ಮ-ಮಂಗಳೆಯರು ಮಾತ್ರ ಎಲ್ಲ ಮರೆತು ಎಂದಿನಂತಾದರು.

(ಕೃತಿ: ಬಾಳ ಬಟ್ಟೆ (ಕಾದಂಬರಿ), ಲೇಖಕರು: ಡಾ. ಎಂ. ಉಷಾ, ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಬೆಲೆ: 330/-)