ಹತ್ತು ದಿನಗಳಿಂದ ಅವರು ಹೆಚ್ಚು ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ನಮ್ಮದೇ ರೀತಿಯಲ್ಲಿ ಅವಲೋಕಿಸುತ್ತಿದ್ದೆವು. ನಮಗೆ ಇಬ್ಬರು ಮಾತ್ರವೆ ಕೆ. ನಾಗಯ್ಯ ಅವರ ಈಗಿನ ಸ್ಥಿತಿಗೆ ಸಂಬಂಧ ಹೊಂದಿರಲು ಸಾಧ್ಯ ಎಂಬ ಸಂಶಯ ಮೂಡಿತು. ಇಬ್ಬರೂ ಕೂಡ ಇತ್ತೀಚೆಗೆ ಅವರು ತೊಡಗಿಸಿಕೊಂಡಿದ್ದ ಚಟುವಟಿಕೆಗೆ ಸಂಬಂಧ ಪಟ್ಟವರು: ಒಬ್ಬರು ನಾಗಯ್ಯ ಇತ್ತೀಚೆಗೆ ಬರೆದ ಕಾದಂಬರಿಯ ಪ್ರಕಾಶಕರು. ಮತ್ತೊಬ್ಬರು ಆ ಕಾದಂಬರಿ ಬರೆಯಲು ಅವರು ಅವಿರತವಾಗಿ ಸಂಪರ್ಕದಲ್ಲಿದ್ದ, ಅವರಿಗೆ ಮಾಹಿತಿ ಕೊಡುತ್ತಿದ್ದ ನೀವು. ವಿಚಾರಿಸಿದಾಗ, ನೀವು ಶಿಲ್ಲಾಂಗ್‍ಗೆ ವಿಜಿಟಿಂಗ್ ಪ್ರೊಫೆಸರ್ ಆಗಿ ಬಂದಿರುವ ಬಗ್ಗೆ ತಿಳಿಯಿತು.
ಡಾ. ಕೆ.‌ ಎನ್. ಗಣೇಶಯ್ಯ ಬರೆದ “ಕಾನನ ಜನಾರ್ದನ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

 

ಮುಂಜಾನೆ 10:00 ಗಂಟೆ
ಜುಲೈ, 18, 2021,
ಮೇಘಾಲಯ-ಇಂಫಾಲ್ ರಸ್ತೆಯ ಒಂದೆಡೆ
ಪರ್ವತ ಸಾಲುಗಳ ಮೇಲಿನ ಹುಲ್ಲುಗಾವಲು

ಶಿಲ್ಲಾಂಗ್‍ನಿಂದ ಜೆನ್ಶಿಯ ಹಿಲ್ಸ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 70-80 ಕಿ.ಮೀ.ನಷ್ಟು ದೂರ ಸಂಚರಿಸಿ ಮೇಘಾಲಯದ ಬೆಟ್ಟದ ಸಾಲುಗಳನ್ನು ಹತ್ತಿ ಮುಂದೆ ಸಾಗುತ್ತಿದ್ದಂತೆ, ಒಂದೆಡೆ ಐದಾರು ಚದರ ಕಿ.ಮೀ. ವಿಸ್ತೀರ್ಣದ ಬಯಲು ಪ್ರದೇಶ ಕಾಣಸಿಗುತ್ತದೆ. ದೊಡ್ಡ ಹುಲ್ಲುಗಾವಲಿನಂತೆ ಕಾಣುವ ಆ ಬಯಲಿನಲ್ಲಿ ರಸ್ತೆಯಿಂದ ಬಲಕ್ಕೆ ಸುಮಾರು 100 ಮೀ. ದೂರದಲ್ಲಿ, ಸಣ್ಣ ಗುಡ್ಡದಮೇಲೆ ಡಾ|| ಪಲ್ಲವಿ, 3 ಅಡಿ ಅಗಲ, 6 ಅಡಿ ಉದ್ದ ಮತ್ತು ಸುಮಾರು 1 ಅಡಿ ದಪ್ಪದ, ಪಾಚಿ ಬೆಳೆದು ಕಪ್ಪು ಬಣ್ಣಕ್ಕೆ ತಿರುಗಿದ್ದ, ಬಂಡೆಯಂತಹ ಒಂದು ಕಲ್ಲುಚಪ್ಪಡಿಯ ಮೇಲೆ ನಿಂತು ತನ್ನ ಮುಂದಿದ್ದ 14 ಮಂದಿ ಶಿಲ್ಲಾಂಗ್‍ನ ಎಂ.ಎ. ವಿದ್ಯಾರ್ಥಿಗಳಿಗೆ ಅಲ್ಲಿನ ವಿಶೇಷತೆಯ ಬಗ್ಗೆ ವಿವರಿಸುತ್ತಿದ್ದಳು.

“ನಾನು ನಿಂತಿರುವುದು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಮರಣ ಹೊಂದಿದ ವ್ಯಕ್ತಿಯೊಬ್ಬನಿಗೆ ಆತನ ಕುಟುಂಬದವರು, ಹಾಗೂ ಗುಂಪಿನವರು ಒಟ್ಟಿಗೆ ಸೇರಿ ನಿರ್ಮಿಸಿರುವ ಶಿಲಾಸಮಾಧಿಯ ಮೇಲೆ”. ಆಕೆ ಮಾತು ಮುಗಿಸುವ ಮುನ್ನವೆ ವಿದ್ಯಾರ್ಥಿನಿಯೊಬ್ಬಳು ಉದ್ವೇಗಗೊಂಡು,
“ಹೋ, ಮೇಡಮ್, ಇದು ಶಿಲಾಯುಗಕ್ಕೆ ಸೇರಿದ ಶಿಲೆಯೆ?” ಎಂದು ಕಣ್ಣರಳಿಸಿ, ಬಾಗಿ, ಪಲ್ಲವಿಯ ಕಾಲುಗಳ ಕೆಳಗಿನ ಆ ಬಂಡೆಯನ್ನು ದಿಟ್ಟಿಸಿ ನೋಡತೊಡಗಿದಳು.
ತಮ್ಮ ಜೊತೆಗಾರ್ತಿ ಹಾಗೆ ಹೇಳುವಷ್ಟರಲ್ಲಿ ಉಳಿದವರಲ್ಲೂ ಅಂತದೇ ಉತ್ಸಾಹ ಚಿಗುರಿ, ಒಬ್ಬ ಹುಡುಗ ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದ.
“Megalithic Stone? You are standing on a capstone of a dolmen of megalithic age?”
ಅವರ ಉತ್ಸಾಹ ಮತ್ತು ಕುತೂಹಲದಿಂದ ಸಂತೋಷಗೊಂಡ ಪಲ್ಲವಿ ನಗುತ್ತ ಹೇಳಿದಳು.

“ಹೌದು, ನಾನು ನಿಂತಿರುವುದು ಡಾಲ್ಮೆನ್ ಎಂದು ಕರೆಯಲ್ಪಡುವ ಶಿಲಾಯುಗದ ಸಮಾಧಿಯ ಮೇಲೆ ಮುಚ್ಚಲಾಗಿರುವ ಕ್ಯಾಪ್ ಸ್ಟೋನ್‍ನ ಮೇಲೆ. ನೆಲದಲ್ಲಿ ಸ್ವಸ್ತಿಕಾಕಾರದಲ್ಲಿ ನೆಟ್ಟ ನಾಲ್ಕು ಕಲ್ಲು ಚಪ್ಪಡಿಗಳ ತೊಟ್ಟಿಯಲ್ಲಿ ಸತ್ತವರನ್ನು ಮಲಗಿಸಿ, ಅಥವಾ ಅವರ ಮೂಳೆಗಳನ್ನಿಟ್ಟು, ಅವುಗಳ ಮೇಲೆ ಮುಚ್ಚುವ ಚಾವಣಿ ಬಂಡೆಯೇ ನಾನು ನಿಂತಿರುವ ಈ ಬಂಡೆಗಲ್ಲು-ಕ್ಯಾಪ್ ಸ್ಟೋನ್. ಅಂದರೆ ನನ್ನ ಪಾದದ ಕೆಳಗೆ ಶಿಲಾಯುಗದ ಮಹಾನ್ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಾಗಿದೆ. ಒಂದು ವೇಳೆ ಇದನ್ನು ರಚಿಸಿದ ಅಂದಿನ ಶಿಲಾಯುಗದ ಕುಟುಂಬದವರು ಈ ಕ್ಯಾಪ್ ಸ್ಟೋನ್ ಮೇಲೆ ನಾನು ನಿಂತಿರುವುದನ್ನು ಕಂಡರೆ ಏನಾಗಬಹುದೆಂದು ಊಹಿಸಬಲ್ಲಿರ?”

“ಅವರಿಗೆ ಕೋಪ ಬರಬಹುದು” ಪ್ರಶ್ನಿಸುವಂತೆ ಕೇಳಿದಳು ಒಬ್ಬ ಹುಡುಗಿ.

“ಕೋಪ?” ಎಂದು ಹುಸಿನಗೆ ತೋರಿದ ಪಲ್ಲವಿ ಮುಂದುವರಿಸಿದಳು.

(ಡಾ. ಕೆ.‌ ಎನ್. ಗಣೇಶಯ್ಯ)

“ಅವರು ತಮ್ಮ ಕವಣೆಯಿಂದ ಒಂದು ಬೀಸುಗುಂಡನ್ನು ನನ್ನತ್ತ ಎಸೆದು ನನ್ನ ತಲೆಯನ್ನು ಒಡೆದು ಚೂರು ಮಾಡಿದರೂ ಆಶ್ಚರ್ಯವಿಲ್ಲ” ಎಂದಳು ತನ್ನ ನಗುವಿನ ಜೊತೆಗೆ ಗಂಭೀರತೆ ತೋರಿ. ಬೀಸುಗುಂಡು ಪಲ್ಲವಿಯ ತಲೆಗೆ ಬೀಳುವ ಚಿತ್ರಣವನ್ನು ಊಹಿಸಿಕೊಂಡ ವಿದ್ಯಾರ್ಥಿಗಳು ದಂಗಾಗಿ ಆಕೆಯನ್ನೇ ನೋಡುತ್ತ ನಿಂತರು.

ಕೇವಲ ಎರಡು ತಿಂಗಳ ಹಿಂದೆ ಶಿಲ್ಲಾಂಗ್‍ನ North Eastern Hill University ವಿಶ್ವವಿದ್ಯಾಲಯಕ್ಕೆ ವಿಜಿಟಿಂಗ್ ಪ್ರೊಫೆಸರ್ ಆಗಿ ಬಂದಿದ್ದ ಬೆಂಗಳೂರಿನ ಡಾ|| ಪಲ್ಲವಿ, ಎಂ.ಎ ವಿದ್ಯಾರ್ಥಿಗಳಿಗೆ `ಇತಿಹಾಸ ಪೂರ್ವ ಮಾನವ ಚರಿತ್ರೆ’ ಎಂಬ ವಿಷಯದ ಬಗ್ಗೆ ಬೋಧಿಸುತ್ತಿದ್ದಳು. ಯಾವುದೇ ನಿಸ್ಸಾರ ವಿಷಯವನ್ನೂ ಜೀವಂತವಾಗಿಸಬಲ್ಲ ತನ್ನ ವಿಶಿಷ್ಟ ಬೋಧನೆಯ ಕ್ರಮದಿಂದ ಆಕೆ ಈಗಾಗಲೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದಳು. ಅವರೆಲ್ಲರಿಗೂ ಅದುವರೆಗೆ ಜಡವಾಗಿ ಕಂಡಿದ್ದ ಚರಿತ್ರೆಯ ಕೋರ್ಸ್ ಎಷ್ಟು ಆಕರ್ಷಕ ವಾಗಬಲ್ಲದು ಎಂಬ ಸತ್ಯ ಪಲ್ಲವಿಯ ಬೋಧನೆಯ ಮೂಲಕ ಅರಿವಾಗಿತ್ತು.

`ಡಾ|| ಪಲ್ಲವಿಯವರ ಪಾಠ ಕೇಳುತ್ತಿದ್ದರೆ, ಇತಿಹಾಸಪೂರ್ವ ಮಾನವನ ಬೆವರಿನ ವಾಸನೆಯೂ ಒಮ್ಮೊಮ್ಮೆ ನಮ್ಮ ಉಸಿರಾಟದಲ್ಲಿ ಕಾಣಸಿಗುತ್ತದೆ’ ಎಂದು ವಿದ್ಯಾರ್ಥಿಗಳು ತಮ್ಮಲ್ಲಿಯೇ ಮಾತನಾಡಿಕೊಂಡದ್ದುಂಟು.

ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಚರಿತ್ರೆಯನ್ನು ಬೋಧಿಸುತ್ತಿರುವ 38 ವರ್ಷದ ಡಾ|| ಪಲ್ಲವಿ, ತನ್ನ ವೈಜ್ಞಾನಿಕ ಪ್ರಕಟಣೆಗಳಿಂದಾಗಿ 33ನೇ ವರ್ಷಕ್ಕೇ ಪ್ರೊಫೆಸರ್ ಹುದ್ದೆ ಪಡೆದಿದ್ದಳು. ಇತಿಹಾಸ ಪೂರ್ವ ಮಾನವನ ಚರಿತ್ರೆಯ ಬಗೆಗಿನ ಆಕೆಯ ಸಂಶೋಧನೆಯ ಮೂಲಕ ಪರಿಚಯವಾಗಿದ್ದ ಮಾನವ ಶಾಸ್ತ್ರದ ಸಂಗಾತಿ ಡಾ|| ಮೋಹನ್ ಜೊತೆ 10 ವರ್ಷದ ಹಿಂದೆ ಮದುವೆ. ಎಂಟು ವರ್ಷದ ಮಗ. ಶಿಲ್ಲಾಂಗ್‍ನ NEHU ಯಿಂದ ಮೂರು ತಿಂಗಳ ವಿಜಿಟಿಂಗ್ ಪ್ರೊಫೆಸರ್‍ಗೆ ಆಹ್ವಾನ ಬಂದಾಗ ಗಂಡ ಮತ್ತು ಮಗನನ್ನು ಆ ಹುದ್ದೆಯ ಕೊನೆಯಲ್ಲಿ ಅಲ್ಲಿಗೆ ಕರೆಸಿಕೊಂಡು ಅಲ್ಲೆಲ್ಲ ಸುತ್ತಾಡುವ ಭರವಸೆ ಕೊಟ್ಟು ಬಂದಿದ್ದಳು.

ಮೇಘಾಲಯದಲ್ಲಿಯೇ ಹುಟ್ಟಿ ಬೆಳೆದಿದ್ದರೂ, ಚರಿತ್ರೆಯ ಕುರಿತು ಎಂ.ಎ ಓದುತ್ತಿದ್ದರೂ, ಅಲ್ಲಿನ ಇತಿಹಾಸ ಪೂರ್ವ ಮಾನವನ ಪಳೆಯುಳಿಕೆಗಳು ತಮ್ಮ ಸುತ್ತ ಎಲ್ಲೆಲ್ಲೂ ಹಾಸುಹೊಕ್ಕಾಗಿ ಹರಡಿಕೊಂಡಿರುವುದರ ಬಗ್ಗೆ ಅವರಿಗೆ ಅರಿವೆ ಇರಲಿಲ್ಲ. ಕಾರಣ ಕೇವಲ ಪಠ್ಯ ಪುಸ್ತಕದಲ್ಲಿದ್ದುದನ್ನು ಮಾತ್ರವೇ ಬೋಧಿಸುತ್ತಿದ್ದ ಅವರ ಉಪಾಧ್ಯಾಯರುಗಳು ಅಂತಹ ಪಳೆಯುಳಿಕೆಗಳ ಪರಿಚಯವನ್ನೇ ಮಾಡಿಕೊಟ್ಟಿರಲಿಲ್ಲ. ಆದರೆ ಎರಡೇ ತಿಂಗಳಲ್ಲಿ ಪಲ್ಲವಿಯ ಕೋರ್ಸ್ ಮೂಲಕ ಆ ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಬೇರೆಯದೇ ಕನ್ನಡಕದ ಮೂಲಕ ನೋಡುವ ಅಭ್ಯಾಸ ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದರು. ಅವರಿಗೀಗ ಮಾನವನ ಪೂರ್ವೇತಿಹಾಸದ ಕುರುಹುಗಳು ಎಲ್ಲೆಲ್ಲೂ ಕಾಣತೊಡಗಿದ್ದವು. ಪಲ್ಲವಿಯ ಪಾಠದ ರುಚಿ ಕಂಡ ಮೇಲೆ, ತಮಗೆ ಅದುವರೆಗೆ ಬೋಧಿಸಿದ ಬಹುಪಾಲು ಪ್ರಾಧ್ಯಾಪಕರನ್ನು ದೂಷಿಸಲು ಪ್ರಾರಂಭಿಸಿದ್ದರು- ಅವರಿಂದ ಪರೀಕ್ಷೆಗೆ ಉರು ಹೊಡೆಯುವುದರ ಹೊರತಾಗಿ ತಾವು ಏನನ್ನೂ ಕಲಿಯಲಿಲ್ಲ ಎಂದು. ಪಲ್ಲವಿಗೆ ಒಂದು ಉಪನಾಮವನ್ನೂ ಕೊಟ್ಟಿದ್ದರು- `ಕಳೆ ಇಲ್ಲದ ಕಲ್ಲಲ್ಲೂ ಕಲೆ ತೋರಿಸುವ ಮೇಡಂ’ ಎಂದು. ಹಾಗೆಂದೇ ಆಕೆ ಒಂದು ಫೀಲ್ಡ್ ಟ್ರಿಪ್‍ಗೆ ಕರೆದೊಯ್ಯುವ ಯೋಜನೆಯನ್ನು ಮುಂದಿಟ್ಟಾಗ ಎಲ್ಲರೂ ಉತ್ಸಾಹದಿಂದಲೆ ಹೊರಟುಬಂದಿದ್ದರು- ಕಲ್ಲುಗಳಲ್ಲಿ ಇತಿಹಾಸದ ಕಲೆಗಳನ್ನು ತೋರಿಸಿಕೊಟ್ಟಾರು ಎಂಬ ಭರವಸೆಯಿಂದ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ, ಇದುವರೆಗೆ ತಮಗಾರಿಗೂ ತಿಳಿಯದಿದ್ದ, ಶಿಲಾಯುಗದ ಒಂದು ಪಳೆಯುಳಿಕೆಯ ಮೇಲೆ ನಿಂತು ಅದರ ಮೂಲಕ ಮೇಘಾಲಯದ ಆದಿ ಮಾನವನ ಸಂಸ್ಕೃತಿ, ಮನಸ್ಸು ಮತ್ತು ಭಾವನೆಗಳನ್ನೂ ಬಿಚ್ಚಿಡುತ್ತಿದ್ದ ಪಲ್ಲವಿಯ ಮಾತುಗಳನ್ನು ಬೆರಗಾಗಿ ಕೇಳಿಸಿಕೊಳ್ಳುತ್ತಿದ್ದರು. ಆ ಸಮಾಧಿಯ ಮೇಲೆ ತಾನು ನಿಂತಿರುವುದನ್ನು ಅಂದಿನ ಮಾನವರು ಕ್ಷಮಿಸರು, ತನ್ನ ಪ್ರಾಣವನ್ನೇ ಬಲಿ ತೆಗೆದುಕೊಂಡಾರು ಎಂದು ಹೇಳುವ ಮೂಲಕ ಅಂದಿನ ಸಮುದಾಯಗಳ ನಂಬಿಕೆಗಳ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಆಕೆ ತಿಳಿಹೇಳುತ್ತಿದ್ದಂತೆ, ಒಬ್ಬ ಹುಡುಗ ಕೇಳಿದ:

“ಆದರೆ ಅದರ ಮೇಲೆ ನೀವು ನಿಂತಿರುವುದರಿಂದ ಅವರು ಅಷ್ಟೊಂದು ಕೋಪಗೊಳ್ಳಲು ಕಾರಣ ಮೇಡಮ್?”

“ಕಾರಣ, ಅತೀ ಸರಳ” ಎಂದು ಆ ಹುಡುಗನನ್ನೆ ನೋಡುತ್ತ ಕೇಳಿದಳು. “ನಿಮ್ಮ ತಂದೆ ಇದ್ದಾರೆಯೆ?”

“ಇಲ್ಲ ಮೇಡಮ್, ಎರಡು ವರ್ಷದ ಹಿಂದೆ ತೀರಿಕೊಂಡರು.”

“Ho I am sorry. . ಹಾಗಿದ್ದರೆ ಅವರಿಗೆ ನೀವು ಒಂದು ಸಮಾಧಿಯನ್ನು ನಿರ್ಮಿಸಿರಬೇಕಲ್ಲವೆ?”

“ಹೌದು ಮೇಡಂ. ನಮ್ಮೂರಿನಲ್ಲಿ, ನಮ್ಮ ಜಮೀನಿನಲ್ಲಿಯೆ ಇದೆ.”

“ನಾನು ಹೀಗೆ ಬೂಟುಕಾಲಿನಲ್ಲಿಯೇ ನಿಮ್ಮ ತಂದೆಯ ಸಮಾಧಿಯ ಮೇಲೆ ನಿಂತರೆ..” ಎನ್ನುವಷ್ಟರಲ್ಲಿ ಆ ಹುಡುಗ,

“No No Madam, Please” ಎಂದ- ಅದನ್ನುಊಹಿಸಿಕೊಳ್ಳಲೂ ಆಗದು, ಹಾಗೆ ಮಾತನಾಡಲೂ ಬೇಡಿ ಎಂಬರ್ಥದಲ್ಲಿ. ಡಾ|| ಪಲ್ಲವಿ ನಗುತ್ತ,
“I am sorry if I have hurt you. ಆದರೆ ನಿನ್ನ ಪ್ರಶ್ನೆಗೆ ಉತ್ತರ ನೀನೇ ಕಂಡುಕೊಂಡೆ ಅಲ್ಲವೆ?” ಎಂದಳು. ಆ ಹುಡುಗ ಹೌದೆನ್ನುವಂತೆ ತಲೆ ಆಡಿಸುತ್ತ ಮೌನವಾದ. ಡಾ|| ಪಲ್ಲವಿ ಆ ಹುಡುಗನನ್ನೇ ಉದ್ದೇಶಿಸಿ ಮಾತನಾಡುವಂತೆ ಮುಂದುವರಿಸಿದಳು.

“ಆದರೆ ನಿನ್ನದೆ ಪ್ರಶ್ನೆ ಮತ್ತು ನಿನ್ನದೆ ಉತ್ತರದಿಂದಾಗಿ, ನಮ್ಮೆಲ್ಲರಿಗೂ ಒಂದು ವಿಷಯ ಸ್ಪಷ್ಟವಾಗಿದೆ. ಮೂರು-ನಾಲ್ಕು ಸಾವಿರ ವರ್ಷಗಳ ಹಿಂದೆ ಮೇಘಾಲಯದ ಈ ಬೆಟ್ಟಗುಡ್ಡಗಳಲ್ಲಿ ಬೇಟೆ ಆಡಿ ಬದುಕುತ್ತಿದ್ದ ಮಾನವ, ನನ್ನನ್ನು ಈ ಸ್ಥಿತಿಯಲ್ಲಿ ನೋಡಿದರೆ ಹೇಗೆ ಸ್ಪಂದಿಸುತ್ತಿದ್ದನೋ, ಹಾಗೆಯೇ ನೀನೂ ಕೂಡ! ಅಂದರೆ, ನಾಲ್ಕು ಸಾವಿರ ವರ್ಷಗಳ ನಂತರದಲ್ಲಿ ಬದುಕಿರುವ ನೀನು, ಇತಿಹಾಸದಲ್ಲಿ ಎಂ.ಎ ಮಾಡು ತ್ತಿರುವ ನೀನು, ಚಂದ್ರನು ಭೂಮಿಯ ಉಪಗ್ರಹವಷ್ಟೆ, ಅದು ದೇವರಲ್ಲ ಎಂದು ಖಡಾಖಂಡಿತವಾಗಿ ತಿಳಿದುಕೊಂಡಿರುವ ನೀನು ಕೂಡಾ, ಅವರಂತೆಯೇ ಸ್ಪಂದಿಸುತ್ತೀಯ ಎಂದರೆ ಅದರರ್ಥ?” ಹಾಗೆ ಕೇಳುತ್ತ ಎಲ್ಲರ ಕಡೆ ತಿರುಗಿದಳು- ಯಾರೇ ಆಗಲಿ ಉತ್ತರಿಸಬಹುದು ಎನ್ನುವಂತೆ. ಒಬ್ಬ ಹುಡುಗಿ ಕೈ ಎತ್ತಿ ಹೇಳಿದಳು.

“ಅದರ ಅರ್ಥ, ಈ ಸಾವಿರಾರು ವರ್ಷಗಳಲ್ಲಿಯೂ ಸತ್ತುಹೋದ ಹಿರಿಯ ರನ್ನು ಗೌರವಿಸುವ ನಮ್ಮ ಕ್ರಮ ಬದಲಾಗಿಲ್ಲ ಎಂದು. ಸತ್ತಮೇಲೂ ಅವರು ಅಲ್ಲಿ ಆ ಸಮಾಧಿಯಲ್ಲಿ ಇದ್ದಾರೆ ಎಂಬ ಭಾವನೆ ನಮ್ಮಲ್ಲಿ ಇನ್ನೂ ಉಳಿದುಕೊಂಡಿದೆ ಎಂದು ಅಲ್ಲವೆ?”

“ಗುಡ್. ಅವರ ಮೇಲೆ ಗೌರವ ಇರುವುದು ಸಹಜ. ಆದರೆ ಸತ್ತ ಮೇಲೂ ಅವರು ಈ ಸಮಾಧಿಯಲ್ಲಿ ಇದ್ದಾರೆ ಎಂಬ ನಂಬಿಕೆ ಏನನ್ನು ಸೂಚಿಸುತ್ತದೆ? ನಾವು ಇಷ್ಟು ಜ್ಞಾನಭರಿತರು ಎನಿಸಿಕೊಂಡಿರುವ ಕಾಲದಲ್ಲಿಯೂ ಆ ನಂಬಿಕೆ ಹೋಗಿಲ್ಲ. ಏಕೆ?”

ಅದಕ್ಕೆ ಯಾರೂ ಉತ್ತರಿಸದಾದರು. ಅಲ್ಲಿ ಮೌನ ತುಂಬಿತ್ತು. ಡಾ|| ಪಲ್ಲವಿ ತಾನೇ ಹೇಳಿದಳು.

“ಸತ್ತವರು, ಸಮಾಧಿಯಲ್ಲಿ ಮಣ್ಣಾದವರು, ಇನ್ನೂ ಇದ್ದಾರೆ ಅಥವಾ ಇರಬಹುದು ಎಂದು ನಾವು ನಂಬುತ್ತೇವೆ ಎಂದಾದರೆ, ಸಂಪೂರ್ಣವಾಗಿ ಕೊಳೆತುಹೋಗಿ, ಅಣು ಅಣುವಾಗಿ ಮಣ್ಣಲ್ಲಿ ಸೇರಿಹೋಗಬಲ್ಲ, ನಮ್ಮ ಈ ದೇಹದ ಹೊರತಾಗಿಯೂ, ಅದರೊಳಗಿರಬಹುದಾದ, ನಮ್ಮ ಕಣ್ಣಿಗೆ ಕಾಣದ, ಜೀವವೊಂದು, ಅಥವಾ ಅದರ ಅಸ್ತಿತ್ವವೊಂದು ಇರಲು ಸಾಧ್ಯ ಎಂದು ನಂಬಿ, ಅದನ್ನು ಗೌರವಿಸುತ್ತೇವೆ ಎಂದರ್ಥ. ಸದಾ ಈ ದೇಹದಿಂದ ಸ್ವತಂತ್ರವಾಗಿಯೇ ಅಸ್ತಿತ್ವದಲ್ಲಿರಬಹುದಾದ, ಯಾವುದೋ ಒಂದು ಜೀವಶಕ್ತಿಯಲ್ಲಿ ಅಥವಾ ಆತ್ಮದಲ್ಲಿ, ನಮಗೆ ಇನ್ನೂ ನಂಬಿಕೆ ಇದೆ ಎಂದರ್ಥ. ವಿಜ್ಞಾನದ ಬೆಳವಣಿಗೆ ಮಾನವನ ಈ ನಂಬಿಕೆಯನ್ನು ತೊಡೆದುಹಾಕಲು ನಿಶ್ಶಕ್ತವಾಗಿದೆ. ಅಷ್ಟೇ ಅಲ್ಲ, ಸತ್ತ ನಂತರದ ಪ್ರಪಂಚ ನಮ್ಮೆಲ್ಲರಿಗೂ ಅಜ್ಞಾತವಾಗಿರುವುದರಿಂದ, ಮರಣೋತ್ತರದಲ್ಲಿ ಈ ಜೀವ ಏನಾಗುತ್ತದೆ ಎನ್ನುವುದರ ಬಗ್ಗೆ ಹಲವಾರು ಸಾಧ್ಯತೆಗಳನ್ನು ಮಾನವ ಸೂಚಿಸುತ್ತಲೇ ಬಂದಿದ್ದಾನೆ. ವಿಶೇಷವೆಂದರೆ, ಆ ಯಾವುದೇ ಸಾಧ್ಯತೆಯನ್ನು ಸ್ವೀಕರಿಸಲು ಪುರಾವೆಯೂ ಇಲ್ಲ ಅಥವಾ ತಿರಸ್ಕರಿಸಲು ಗಟ್ಟಿಯಾದ ತರ್ಕವೂ ಇಲ್ಲ. ಹಾಗಾಗಿ ನಮಗರಿವಿಲ್ಲದೆಯೆ, ಸಾವಿರಾರು ವರ್ಷಗಳಿಂದಲೂ ಆತ್ಮ ಎಂಬ ಪರಿಕಲ್ಪನೆಯನ್ನು ಸತ್ಯ ಎಂದು ನಂಬುತ್ತಲೇ ಬಂದಿದ್ದೇವೆ. ಇದರ ಬೆನ್ನಲ್ಲಿಯೆ, ಆ ಆತ್ಮ ಮತ್ತೊಂದು ದೇಹದಲ್ಲಿ ಅಥವಾ ಮತ್ತೊಂದು ಲೋಕದಲ್ಲಿ ಮರುಜನ್ಮ ಪಡೆಯಬಹುದು ಎಂಬ ನಂಬಿಕೆ ಗಾಢವಾಗಿ ಬೆಳೆದು, ಪ್ರಪಂಚದಾದ್ಯಂತ ಮಾನವ ಸಮುದಾಯಗಳಲ್ಲಿ ಅವ್ಯಾಹತವಾಗಿ ಬೇರೂರಿದೆ. ಈಜಿಪ್ತಿನ ಪಿರಮಿಡ್ಡುಗಳ ರಚನೆಯ ಮೂಲ ಉದ್ದೇಶವೂ, ನಿಮ್ಮ ಊರಿನ ಸಮಾಧಿಗಳನ್ನು ಪ್ರತಿವರ್ಷವೂ ಪೂಜಿಸುವ ಕ್ರಮವೂ ಈ ನಂಬಿಕೆಯನ್ನೇ ಆಧರಿಸಿವೆ. ಅದೇ ನಂಬಿಕೆ ಅಮೆರಿಕದ ಆದಿವಾಸಿಗಳಿಂದ ಮೇಘಾಲಯದ ಆಗಿನ ಹಾಗೂ ಇಂದಿನ ಕಾಲದ ಜನರವರೆಗೆ ಹಾಸುಹೊಕ್ಕಾಗಿ ಹರಡಿಕೊಂಡಿದೆ. ಎಲ್ಲೆಲ್ಲೂ, ಎಲ್ಲ ಕಾಲದಲ್ಲೂ, ಆಳವಾಗಿ ಬೇರು ಬಿಟ್ಟಿರುವ ಆ ನಂಬಿಕೆಗೆ ಪುರಾವೆಯನ್ನೂ ಇದೇ ಸಮಾಧಿಯಲ್ಲಿ ಕಾಣಬಹುದು.”

“ಅಂದರೆ ಪುನರ್ಜನ್ಮ ಅಥವಾ ಮರುಜನ್ಮದ ಬಗ್ಗೆ ಮೇಘಾಲಯದ ಆಗಿನ ಕಾಲದವರಿಗೂ ನಂಬಿಕೆ ಇತ್ತು ಎನ್ನುವಿರ? ಅದಕ್ಕೆ ಈ ಸಮಾಧಿಯಲ್ಲಿ ಪುರಾವೆ ಸಿಗುತ್ತದೆಯೆ?” ಕೇಳಿದ ಒಬ್ಬ ಹುಡುಗ.

“ಈ ಎರಡೂ ಪ್ರಶ್ನೆಗಳಿಗೆ ಉತ್ತರ- `ಹೌದು ಮತ್ತು ಹೌದು’. ಆತ್ಮಕ್ಕೆ ಮರುಜನ್ಮ ಇದೆ ಎಂದು ಅಂದಿನ ಕಾಲದ ಮಾನವನೂ ನಂಬಿದ್ದ. ಅದಕ್ಕೆ ಪುರಾವೆ ಇಂತಹ ಡಾಲ್ಮೆನ್‍ಗಳ ಒಳಗೆ ಇಂದು ಇದ್ದಿಲಂತೆ ಕಪ್ಪಗಾಗಿ ಹೋಗಿರಬಹುದಾದ ಕೆಲವು ವಸ್ತುಗಳ ರೂಪದಲ್ಲಿ ಹುದುಗಿ ಕೂತಿದೆ. ಅದನ್ನು ನೀವೂ ನೋಡಬಹುದು” ಎಂದು ಹೇಳುತ್ತಿದ್ದಂತೆ ಎಲ್ಲರೂ ಆಕೆಯತ್ತ ಬೆರಗುಗಣ್ಣಿನಿಂದ ನೋಡಿದರು.

ಅದೇ ಸಮಯಕ್ಕೆ ಡಾ|| ಪಲ್ಲವಿಯ ಫೋನ್ ರಿಂಗಾಯಿತು. ಪಕ್ಕಕ್ಕೆ ಸರಿದು ಅದಕ್ಕೆ ಉತ್ತರಿಸುತ್ತಿದ್ದಂತೆ, ಆಕೆಯ ಮುಖದಲ್ಲಿ ಇದುವರೆಗೆ ಇದ್ದ ಉತ್ಸಾಹದ ಚಹರೆ ಕ್ಷೀಣವಾಗತೊಡಗಿತ್ತು. ಆಶ್ಚರ್ಯ ಮತ್ತು ಗಾಬರಿ ಎದ್ದು ಕಾಣುತ್ತಿತ್ತು. ಸುಮಾರು ಮೂರು ನಿಮಿಷಗಳ ಮೆಲುದನಿಯ ಸಂಭಾಷಣೆಯ ನಂತರ, ಆಕೆ ಏನನ್ನೋ ಹುಡುಕುವಂತೆ ರಸ್ತೆಯತ್ತ ಕಣ್ಣು ಹಾಯಿಸಿ ನೋಡಿದಳು. ದೂರದಲ್ಲಿ ತಾವು ಬಂದ ಮಿನಿಬಸ್‍ನ ಪಕ್ಕದಲ್ಲಿ ಆಗತಾನೆ ಬಂದಿದ್ದ ಎರಡು ಕಾರುಗಳು ನಿಂತಿದ್ದವು. ಮೂರು ಜನ ಆ ಕಾರುಗಳಿಂದ ಹೊರಗಿಳಿದು ಇವರತ್ತಲೆ ನೋಡುತ್ತಿದ್ದರು. ಅವರಲ್ಲಿ ಒಬ್ಬಾತ, ಪಲ್ಲವಿಗೆ ಫೋನ್ ಮಾಡಿದ ವ್ಯಕ್ತಿ, ತನ್ನ ಮೊಬೈಲ್ ಇದ್ದ ಕೈ ಎತ್ತಿ ತಾನು ಅಲ್ಲಿರುವುದಾಗಿ ಸೂಚಿಸಿದ.

ಎರಡು ಕ್ಷಣ ಅವರತ್ತ ಮತ್ತು ವಿದ್ಯಾರ್ಥಿಗಳತ್ತ ಮತ್ತೆ ಮತ್ತೆ ನೋಡಿದ ಪಲ್ಲವಿ, ಕೊನೆಗೆ ಏನನ್ನೋ ತೀರ್ಮಾನಿಸಿ ವಿದ್ಯಾರ್ಥಿಗಳತ್ತ ತಿರುಗಿ ಗಂಭೀರವಾಗಿ ಹೇಳಿದಳು.

“I am sorry. I have to get back immediately. Something very unexpected demands that I get back soon” ಎಂದು ಸರಸರನೆ ಕೆಳಗಿಳಿದು, ರಸ್ತೆಯಲ್ಲಿರುವ ಕಾರಿನತ್ತ ಹೆಜ್ಜೆ ಹಾಕಿದಳು. ಎಲ್ಲರೂ ಆಶ್ಚರ್ಯ, ಕಾತರತೆ ಮತ್ತು ಬೇಸರದಿಂದ ಆಕೆಯ ಹಿಂದೆ ಹೊರಟರು. ಸುಮಾರು ಇಪ್ಪತ್ತು ಹೆಜ್ಜೆಗಳ ನಂತರ ಪಲ್ಲವಿ ಸರಕ್ಕನೆ ನಿಂತು, ವಿದ್ಯಾರ್ಥಿಗಳತ್ತ ತಿರುಗಿ ಹೇಳಿದಳು.

“ನೀವು ಯಾರೂ ನನ್ನ ಜೊತೆ ಬರಬೇಕಿಲ್ಲ. ನನಗಾಗಿ ಅಲ್ಲಿ ಕಾರು ಬಂದಿದೆ. ನಿಮಗೆ ಹೇಗೂ ಮಿನಿಬಸ್ ಇದೆ. ಇಲ್ಲಿಂದ ಹಿಂದಿರುಗುವ ಮುನ್ನ, ಆ ಡಾಲ್ಮೆನ್‍ನ ಸಂಪೂರ್ಣ ಚಿತ್ರಣವನ್ನು ಬಿಡಿಸಿ. ಅಲ್ಲದೆ ಅದರ ಪಕ್ಕದಲ್ಲಿಯೇ, ಕಂಬಗಳಂತೆ ನೆಟ್ಟಗೆ ನಿಲ್ಲಿಸಿರುವ ಮೂರು ಕಲ್ಲು ಬಂಡೆಗಳನ್ನೂ ಸೂಕ್ಷ್ಮವಾಗಿ ಗಮನಿಸಿ. ಅವನ್ನು ಮೆನ್ಹರ್ ಗಳೆಂದು ಕರೆಯುತ್ತಾರೆ. ಅವುಗಳ ಚಿತ್ರವನ್ನೂ ಬಿಡಿಸಿ.. ಈ ಎರಡೂ, ಡಾಲ್ಮೆನ್ ಮತ್ತು ಮೆನ್ಹರ್‍ಗಳು ಏಕೆ ಒಂದೇ ಕಡೆ ಇರಬಹುದು ಎಂದು ನಿಮ್ಮಲ್ಲಿಯೇ ಚರ್ಚಿಸಿ, ನಂತರ ಹಿಂದಿರುಗಿ ಬನ್ನಿ. ಮುಂದಿನ ಕ್ಲಾಸಿನಲ್ಲಿ ಅವುಗಳ ಬಗ್ಗೆ ಚರ್ಚಿಸೋಣ” ಎಂದು ಬಿರ ಬಿರನೆ ರಸ್ತೆಯತ್ತ ಹೆಜ್ಜೆ ಹಾಕಿದಳು. ಅವರೆಲ್ಲರೂ ಹಿಂದೆ ಉಳಿದರು.

ಅದೇ ಸಮಯದಲ್ಲಿ,
ನವದೆಹಲಿಯ NIA ಕಛೇರಿಯಲ್ಲಿ

ದೆಹಲಿಯ NIA ಕಛೇರಿಯ ಕೊಠಡಿಯಲ್ಲಿ ಕೂತಿದ್ದ ಮಿಶ್ರಾ ಅವರ ಮೊಬೈಲ್ ರಿಂಗಾಗುತ್ತಿದ್ದಂತೆ, ಅದಕ್ಕೆ ಉತ್ತರಿಸುತ್ತ “ಹಲೋ ಹಲೀಮ್ ಖಾನ್.. ಏನಾಯಿತು?” ಎಂದರು.

“ಆಕೆ ಸಿಕ್ಕಿದರು ಸರ್.”

“ಗ್ರೇಟ್. ತಕ್ಷಣ ದೆಹಲಿಗೆ ಕರೆತರಲು ಸಾಧ್ಯವೆ?”

“ಪ್ರಯತ್ನಿಸುತ್ತೇವೆ ಸರ್. ಇಲ್ಲಿನ ಪರ್ವತಗಳಲ್ಲಿ ಒಂದೆಡೆ ಗುಡ್ಡದ ಮೇಲೆ ಇದ್ದರು. ಸಂಪರ್ಕ ಬೆಳೆಸಿದ್ದೇವೆ. ಇನ್ನೆರಡು ಕ್ಷಣಗಳಲ್ಲಿ ನಮ್ಮ ಬಳಿ ಬರುತ್ತಾರೆ.”

“ನಮಗೆ ದೊರಕಿರುವ ಮಾಹಿತಿಯ ಪ್ರಕಾರ ಆಕೆ ಬಹಳ ದಿಟ್ಟ, ನೇರ ಹಾಗು ಪ್ರಾಮಾಣಿಕ ವ್ಯಕ್ತಿ. ಹಾಗಾಗಿ, ನಮ್ಮ ಸಹಾಯಕ್ಕೆ ಒಪ್ಪಿಸಬೇಕೆಂದರೆ ನೀವು ಅತೀ ಎಚ್ಚರಿಕೆಯಿಂದ ಪ್ರಯತ್ನಿಸಬೇಕು. ಒತ್ತಾಯ ಮಾಡಿದರೆ ಆಕೆ ನಿಷ್ಠುರವಾಗಿ ತಿರಸ್ಕರಿಸುವ ಸಾಧ್ಯತೆಗಳೇ ಹೆಚ್ಚು.”

“ಶೂರ್ ಸರ್. ಸಾಧ್ಯವಾದಷ್ಟು ಸತ್ಯ ಹೇಳುತ್ತೇನೆ. ಬಹುಶಃ ಅದನ್ನು ಆಕೆ ಗೌರವಿಸುವ ಸಾಧ್ಯತೆ ಹೆಚ್ಚು ಎಂದು ನನ್ನ ಅನಿಸಿಕೆ.”

“ಓ ಕೆ. ಗುಡ್ ಲಕ್. ನಾನು ಬೆಂಗಳೂರಿಗೆ ಫೋನ್ ಮಾಡಿ ಕೆ. ನಾಗಯ್ಯ ಅವರ ಬಗ್ಗೆ ಇತರೆ ವಿವರ ಕಲೆ ಹಾಕಲು ತಿಳಿಸುತ್ತೇನೆ. ನಿಮ್ಮ ಪ್ರಯತ್ನ ಕೈಗೂಡಿದ ತಕ್ಷಣವೆ ನನಗೆ ಕರೆ ಮಾಡಿ” ಎಂದು ತನ್ನ ಫೋನ್ ಕಟ್ ಮಾಡಿ, ಮತ್ತೊಂದು ಕಡೆಗೆ ಕರೆ ಮಾಡಿದರು. ಅತ್ತ ಕಡೆಯಿಂದ ಉತ್ತರ ಬಂದ ತಕ್ಷಣ ಹೇಳಿದರು.

“ಹಲೋ ಹರೀಶ್, ನಾಗಯ್ಯ ಅವರ ಬಗ್ಗೆ ಎಲ್ಲ ವಿವರಗಳನ್ನು ಕಲೆ ಹಾಕಲಾಗಿದೆಯೆ?”

“ಎಲ್ಲವನ್ನು ಕಲೆಹಾಕಿದ್ದೇವೆ ಎನ್ನಲಾರೆ ಸರ್. ಅವರ ಎಲ್ಲ ಕೃತಿಗಳ ಮತ್ತು ಅವುಗಳ ವಸ್ತುವಿನ ಬಗ್ಗೆ, ಅವರು ಕೊಟ್ಟಿರುವ ಸಂದರ್ಶನಗಳ ಬಗ್ಗೆ, ಅವರಿಗೆ ಸಂಬಂಧಿಸಿರಬಹುದಾದ, ಇತ್ತೀಚೆಗಿನ ಘಟನೆಗಳ ಬಗ್ಗೆ.. ಹೀಗೆ ಹಲವಾರು ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ.”

ನೆಲದಲ್ಲಿ ಸ್ವಸ್ತಿಕಾಕಾರದಲ್ಲಿ ನೆಟ್ಟ ನಾಲ್ಕು ಕಲ್ಲು ಚಪ್ಪಡಿಗಳ ತೊಟ್ಟಿಯಲ್ಲಿ ಸತ್ತವರನ್ನು ಮಲಗಿಸಿ, ಅಥವಾ ಅವರ ಮೂಳೆಗಳನ್ನಿಟ್ಟು, ಅವುಗಳ ಮೇಲೆ ಮುಚ್ಚುವ ಚಾವಣಿ ಬಂಡೆಯೇ ನಾನು ನಿಂತಿರುವ ಈ ಬಂಡೆಗಲ್ಲು-ಕ್ಯಾಪ್ ಸ್ಟೋನ್. ಅಂದರೆ ನನ್ನ ಪಾದದ ಕೆಳಗೆ ಶಿಲಾಯುಗದ ಮಹಾನ್ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಾಗಿದೆ. ‌

“ಸರಿ ಸಿದ್ಧವಾಗಿರಿ. ಬಹುಶಃ ನಾಳೆಯೇ ನಿಮ್ಮ ಕೆಲಸ ಪ್ರಾರಂಭವಾಗುವ ಸಾಧ್ಯತೆ ಇದೆ.”

“ಆದರೆ ನನಗೆ technical support?” ಎನ್ನುತ್ತಿದ್ದಂತೆ, ಮಿಶ್ರಾ ಹೇಳಿದರು.

“ಕೆ. ನಾಗಯ್ಯ ಅವರ ಇತ್ತೀಚಿನ ಆಸಕ್ತಿ ಇತಿಹಾಸಪೂರ್ವದ ಪ್ರಾಚ್ಯವಸ್ತು ಶಾಸ್ತ್ರ ಎಂದಿದ್ದಿರಿ ಅಲ್ಲವೆ?”

“ಹೌದು ಸರ್. ಹಾಗೆಂದು ಅವರ ಮಗಳೇ ಹೇಳಿದ್ದಳು. ತಮ್ಮ ಇತ್ತೀಚಿನ ಕೃತಿಯ ಬಗ್ಗೆ ಅತ್ಯಂತ ಗಂಭೀರವಾಗಿ ಕೆಲಸ ಮಾಡುತ್ತಿದ್ದರು ಎಂದೂ ತಿಳಿಸಿದಳು.”

“ಹಾಗೆಂದೇ ಹಲವಾರು ಸಾಧ್ಯತೆಗಳನ್ನು ಪರಿಗಣಿಸಿ, ಕೊನೆಗೆ ಬೆಂಗಳೂರಿನವರೆ ಆದ ಒಬ್ಬ ಚರಿತ್ರೆಯ ಪ್ರೊಫೆಸರ್ ಅನ್ನು ಈ ಆಪರೇಶನ್‍ಗೆ ಸೇರಿಸಿಕೊಳ್ಳಲು ತೀರ್ಮಾನಿ ಸಿದ್ದೇವೆ. ಅವರೇ ನಿಮಗೆ technical support. ನಮಗೆ ತಿಳಿದಂತೆ, ಇತ್ತೀಚೆಗೆ, ಕೆ. ನಾಗಯ್ಯನವರು ಈಕೆಯನ್ನು ಹಲವಾರು ವಿವರಗಳಿಗೆ ಸಂಪರ್ಕಿಸಿದ್ದಾರೆ.”

“ಹೋ! ಅವರು?”

“ಬಹುಪಾಲು ನಾಳೆ ನೀವೇ ನೋಡುತ್ತೀರಿ.”

“ಸರಿ ಸರ್. ಹಾಗೆಯೆ ಮತ್ತೊಂದು ವಿಷಯ.”

“ಎಸ್, ಹೇಳಿ”

“ಅವರ ಮಗಳನ್ನು ಕೂಡ ಈ ಆಪರೇಶನ್‍ನ ಹೊರವಲಯದಲ್ಲಿ ಸಹಾಯಕ ವ್ಯಕ್ತಿಯಾಗಿ ಪರಿಗಣಿಸಬೇಕು ಅನಿಸುತ್ತೆ.”

“ಯಾಕೆ?”

“ನಿನ್ನೆಯಿಂದ ನಾನು ಕಲೆಹಾಕಿರುವ ಮಾಹಿತಿಯ ಪ್ರಕಾರ, ಅವರು ಬಹುಪಾಲು ಎಲ್ಲ ವಿಷಯಗಳನ್ನೂ ಮಗಳೊಂದಿಗೆ ಹಂಚಿಕೊಳ್ಳುತ್ತಿದ್ದರೆಂದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಈ ಕೇಸ್‍ಗೆ ನಾವು ಊಹಿಸಲಾರದ ವಿವರಗಳೂ ಆಕೆಯಿಂದ ದೊರೆಯುವ ಸಾಧ್ಯತೆ ಇದೆ.”

ಇದನ್ನು ಕೇಳಿದ ಮಿಶ್ರಾ ಎರಡು ಕ್ಷಣ ಯೋಚಿಸಿ ಹೇಳಿದರು.

“ನೀವೇ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಯಾವುದಕ್ಕೂ ನನ್ನ ಕಡೆಯಿಂದ ಓಕೆ ಇದೆ. ಆದರೆ ಇಡೀ ಆಪರೇಶನ್ ನಾಲ್ಕೈದು ದಿನಗಳಲ್ಲಿಯೇ ಮುಗಿಯಬೇಕು. ಇಲ್ಲವಾದಲ್ಲಿ ಈ ಪಾಪಕೃತ್ಯದ ರಕ್ತ ಅಂಟಿಸಿಕೊಂಡವರು ತಪ್ಪಿಸಿಕೊಳ್ಳುತ್ತಾರೆ.”

“ಪ್ರಯತ್ನಿಸುತ್ತೇನೆ ಸರ್.”

“ಗುಡ್ ಲಕ್” ಎಂದು ತಮ್ಮ ಫೋನ್ ಕಟ್ ಮಾಡಿದರು.

ಮೇಘಾಲಯ-ಇಂಫಾಲ್ ರಸ್ತೆ

ಡಾ|| ಪಲ್ಲವಿ ಗುಡ್ಡ ಇಳಿದು, ರಸ್ತೆಯ ಬದಿಯಲ್ಲಿ ತನಗಾಗಿ ಕಾಯುತ್ತಿದ್ದ ಮೂವರು ವ್ಯಕ್ತಿಗಳ ಬಳಿ ಬರುತ್ತಿದ್ದಂತೆ, ಆಕೆಗೆ ಫೋನ್ ಮಾಡಿದ್ದ ವ್ಯಕ್ತಿ ತನ್ನನ್ನು ಹಲೀಮ್ ಖಾನ್ ಎಂದೂ, ದೆಹಲಿಯ NIA ಕಛೇರಿಯಿಂದ ಬಂದಿರುವುದಾಗಿಯೂ ಪರಿಚಯಿಸಿಕೊಂಡು, ಕೈ ಕುಲುಕಿ, ತನ್ನ ID card ತೋರಿಸುತ್ತ ಹೇಳಿದ.

“ಯಾವುದೇ ಸೂಚನೆ ಕೊಡದೆ ಇದ್ದಕ್ಕಿದ್ದಂತೆ ನುಗ್ಗಿ, ವಿದ್ಯಾರ್ಥಿಗಳಿಗೆ ನೀವು ನೀಡುತ್ತಿದ್ದ ಬೋಧನೆಗೆ ತಡೆ ಹಾಕಿದ್ದಕ್ಕೆ ಅತೀವ ಕ್ಷಮೆ ಕೋರುತ್ತೇವೆ ಮೇಡಮ್.”
ಆದರೆ ಅದಾವುದನ್ನೂ ಕೇಳಿಸಿಕೊಳ್ಳದೆ ಡಾ|| ಪಲ್ಲವಿ, ಆತನ À ID Card ಕೂಡ ವೀಕ್ಷಿಸಲು ಕಾತರ ತೋರದೆ ಕೇಳಿದಳು.

“ಫೋನ್‍ನಲ್ಲಿ ಮಾತನಾಡುತ್ತ, ಕೆ. ನಾಗಯ್ಯ ಅವರಿಗೆ ಏನೋ ಆಗಿದೆ ಎಂದಿರಿ. ಏನಾಗಿದೆ? ಎಲ್ಲಿದ್ದಾರೆ? ಹೇಗಿದ್ದಾರೆ?…” ಒಂದೇ ಸಮ ಪ್ರಶ್ನಿಸತೊಡಗಿದಳು. ಆಕೆಯನ್ನೇ ದಿಟ್ಟಿಸಿ ನೋಡುತ್ತ ಹಲೀಮ್ ಖಾನ್ ಹೇಳಿದ.

“ಅವರೀಗ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿದ್ದಾರೆ.”

“ಯಾಕೆ?”

“ಅವರಿಗೆ ಕೊಂಚ ಎಚ್ಚರ ತಪ್ಪಿದೆ.”
ಪಲ್ಲವಿ ದಂಗಾದಳು. ನಿಂತಲ್ಲಿಯೇ ನಿಂತುಬಿಟ್ಟಳು.

ಕೆಲವು ಕ್ಷಣಗಳವರೆಗೆ, ಆತನನ್ನೇ ನೋಡುತ್ತ, ಆತ ಹೇಳಿದ್ದನ್ನು ಜೀರ್ಣಿಸಿಕೊಳ್ಳುತ್ತ ಪಲ್ಲವಿ ನಿಧಾನವಾಗಿ ಕೇಳಿದಳು.

“ಆದರೆ, ಈ ಸುದ್ದಿಯನ್ನು ನನಗೆ ನೀವು ತರುವ ಕಾರಣ? ಅವರ ಮಗಳಿಂದ ಆಗಲಿ, ನನ್ನ ಸ್ನೇಹಿತರಿಂದ ಆಗಲಿ ನನಗೆ ಯಾವುದೇ ಸುದ್ದಿ ಬಂದಿಲ್ಲವಲ್ಲ?”

“ಅವರ ಸ್ಥಿತಿಯ ಬಗ್ಗೆ ಮಗಳು ನಿಮಗೆ ತಿಳಿಸಬೇಕಿರುವಷ್ಟು ನೀವು ಅವರ ನಿಕಟವರ್ತಿಯಾಗಿಲ್ಲ ಅಲ್ಲವೆ?” ಕೇಳಿದ ಹಲೀಮ್ ಖಾನ್.

ಆತನ ಪ್ರಶ್ನೆ ಕೇಳಿ ಕೊಂಚ ವಿಚಲಿತಗೊಂಡ ಪಲ್ಲವಿ, ಯೋಚಿಸುತ್ತ, ಹೌದು ಎನ್ನುವಂತೆ ತಲೆಯಾಡಿಸಿ, ನಂತರ ಕೇಳಿದಳು.

“ನೀವು ದೆಹಲಿಯ NIA ಕಛೇರಿಯಿಂದ ಎಂದಿರಿ. ನಿಮ್ಮ ಹಾಗೂ ಬೆಂಗಳೂರಿನ ಕೆ. ನಾಗಯ್ಯ ಅವರ ನಡುವೆ ಯಾವ ರೀತಿಯ ಸಂಬಂಧ? ಅಲ್ಲದೆ ಅವರಿಗಾಗಿ ನೀವು ನನ್ನನ್ನು ಹುಡುಕಿ ಬರುವಂತಹ ತುರ್ತು ಮತ್ತು ಕಾರಣ ಏನು?”

ಅದಕ್ಕೆ ಉತ್ತರಿಸುವ ಮುನ್ನ ಆತ ಸ್ವಲ್ಪ ಯೋಚನಾಮಗ್ನನಾಗಿ, ನಂತರ ಪಲ್ಲವಿಯ ಕಡೆ ತಿರುಗಿ, ಆಕೆಯನ್ನೆ ನೋಡುತ್ತ ಹೇಳಿದ.

“ಡಾ|| ಪಲ್ಲವಿ, ನಿಮ್ಮೊಂದಿಗೆ ಎಲ್ಲ ವಿವರಗಳನ್ನೂ ಚರ್ಚಿಸಲೆಂದೆ ಇಲ್ಲಿಯ ವರೆಗೂ ಬಂದಿದ್ದೇನೆ. ಮೊದಲಿಗೆ ನಾವು ಕಾರಿನಲ್ಲಿ ಕೂತು ಹೊರಡೋಣ. ದಾರಿಯಲ್ಲಿ ಹೋಗುತ್ತ ಮಾತನಾಡೋಣ- ನೀವು ಸಮ್ಮತಿಸುವುದಾದರೆ.”

ಆತನ ಮಾತಿಗೆ ತಲೆದೂಗುತ್ತ, ಆತ ತೋರಿದ ಕಾರಿನಲ್ಲಿ ಹಿಂದೆ ಕೂತಳು. ಆತ, ಉಳಿದ ಇಬ್ಬರಿಗೆ ಮತ್ತೊಂದು ಕಾರಿನಲ್ಲಿ ಬರಲು ಹೇಳಿ ತಾನೂ ಪಲ್ಲವಿಯ ಜೊತೆ ಹಿಂದೆ ಕುಳಿತು ಚಾಲಕನಿಗೆ ಶಿಲ್ಲಾಂಗ್‍ಗೆ ಹಿಂದಿರುಗಲು ಹೇಳಿದ.
ಕಾರು ಹೊರಟಿತು.

ಕಾರಿನಲ್ಲಿ ಸ್ವಲ್ಪ ಕಾಲ ಆವರಿಸಿದ್ದ ಮೌನದ ನಂತರ, ಆತ ಪಲ್ಲವಿಯ ಕಡೆ ತಿರುಗಿ ಹೇಳಿದ.

“ಮೊದಲಿಗೆ, ಅವರ ಮಗಳು ಕೂಡ ಯಾರಿಗೇ ಆಗಲಿ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದಾಳೆ. ಕಾರಣ ಆಕೆಗೂ ಕೆ. ನಾಗಯ್ಯ ಅವರ ಸ್ಥಿತಿಯ ಬಗ್ಗೆ ಯಾವುದೇ ಖಚಿತತೆ ಇಲ್ಲ.”
“ಅರ್ಥವಾಗಲಿಲ್ಲ”

“ಅವರು ದಿನನಿತ್ಯದಂತೆ ಮೊನ್ನೆಯ ಸಂಜೆಯೂ ಜಕ್ಕೂರಿನಲ್ಲಿ ತಮ್ಮ ವಿಶ್ವವಿದ್ಯಾಲಯದ ಆವರಣದೊಳಗೆ ಸೈಕ್ಲಿಂಗ್ ಹೊರಟಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ, ಅವರ ಮಗಳಿಗೆ ಯಾರೋ ವಿಶ್ವವಿದ್ಯಾಲಯದ ಸಿಬ್ಬಂದಿ ಸುದ್ದಿ ಕೊಟ್ಟಿದ್ದಾರೆ-ಅವರು ರಸ್ತೆಯ ಬದಿಯಲ್ಲಿ ಬಿದ್ದಿದ್ದರೆಂದೂ, ಮುಖದಲ್ಲಿ, ತಲೆಯಲ್ಲಿ ರಕ್ತಸ್ರಾವ ಆಗುತ್ತಿದ್ದುದರಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು.”

“My God! ರಕ್ತಸ್ರಾವ? ಕಾರಣ?”

“ಅವರ ತಲೆಗೆ ಬಡಿದಿರುವ ಒಂದು ಬುಲೆಟ್‍ನಿಂದಾಗಿ.”

“ವ್ಹಾಟ್?” ಪಲ್ಲವಿಗೆ ನಂಬಲಾಗಲಿಲ್ಲ.

“ಯಾರೋ ಅವರನ್ನು ಶೂಟ್ ಮಾಡಿದ್ದಾರೆ.”

“ಅವರಿಗೆ ಗುಂಡು ಹಾಕಿದ್ದಾರೆಯೇ?” ಗಾಬರಿಯಾಗಿ ಕೇಳಿದಳು.

“ಹೌದು, ಮೇಡಮ್. ಗುಂಡು ಹೊಡೆಯಲು ಪ್ರಯತ್ನಿಸಿದ್ದಾರೆ.”

“ಪ್ರಯತ್ನಿಸಿದ್ದಾರೆ?”

“ಹೌದು. ಆ ಗುಂಡು ಅವರ ತಲೆಯ ಎಡಗಡೆಯಲ್ಲಿ ತಗುಲಿದೆ. ಅದೃಷ್ಟವಶಾತ್ ಅದು ತಲೆಯ ಒಳಗೆ ಪ್ರವೇಶಿಸಿಲ್ಲ. ಬದಲಿಗೆ ಕಿವಿಯ ಮೇಲ್ಭಾಗದಲ್ಲಿ ಸುಮಾರು ಮೂರು ಸೆಂಟಿಮೀಟರ್ ಉದ್ದ ಹಾಗೂ ಎರಡು ಮಿ.ಮೀ ಆಳಕ್ಕೆ ಮೂಳೆಯನ್ನು ಸವರಿಕೊಂಡು ಹೋಗಿದೆ. ಇನ್ನು ಕೆಲವೆ ಮಿ.ಮೀ. ಒಳಗೆ ಹೋಗಿದ್ದರೂ ಗಂಭೀರವಾಗಿ ಗಾಯಗೊಂಡು ಅವರು ಉಳಿಯುತ್ತಿರಲಿಲ್ಲವೇನೋ.”

“ಈಗ ಹೇಗಿದ್ದಾರೆ?” ಗಾಬರಿಯಿಂದಲೇ ಕೇಳಿದಳು.

“ಪ್ರಜ್ಞೆ ತಪ್ಪಿದೆ. ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ಇನ್ನೂ ಎಚ್ಚರ ಬಂದಿಲ್ಲ. ಹಾಗಾಗಿ ಅವರ ಮಗಳು ಯಾರಿಗೂ ಏನೂ ಹೇಳಲಾಗದ ಸ್ಥಿತಿಯಲ್ಲಿದ್ದಾಳೆ.”

“ಆದರೆ ಅವರಿಗೆ ಗುಂಡು ಹೊಡೆದವರಾರು? ಯಾಕೆ?”

“ಅದನ್ನು ಕಂಡುಹಿಡಿಯಲೆಂದೇ ನಿಮ್ಮನ್ನು ಹುಡುಕಿ ಬಂದದ್ದು.”

“ಆದರೆ ನನ್ನನ್ನೇಕೆ?”

ಆಕೆಯ ಪ್ರಶ್ನೆಗೆ ಉತ್ತರಿಸುವ ಮುನ್ನ ಕೆಲವು ಕ್ಷಣ ಮೌನವಾದ ಹಲೀಮ್, ನಂತರ ಹೇಳಿದ.

“ಇತ್ತೀಚೆಗೆ ಅವರು ನಿಮ್ಮನ್ನು ಬಹಳಷ್ಟು ಬಾರಿ ಸಂಪರ್ಕಿಸಿದ್ದಾರಲ್ಲವೆ?”

“ಹೌದು. ಆದರೆ ಅವೆಲ್ಲವೂ ಹಲವಾರು ವಿವರಗಳನ್ನು ನನ್ನಿಂದ ಪಡೆಯಲೆಂದು ಅಷ್ಟೆ.”

“ಅವರು ಈಗಿರುವ ಸ್ಥಿತಿಯಲ್ಲಿ ಅವರಿಂದ ನಿಖರವಾಗಿ ಯಾವುದೇ ವಿವರ ಪಡೆಯಲು ಸಾಧ್ಯವಿಲ್ಲ. ಸತ್ಯವನ್ನು ಕಂಡುಹಿಡಿಯಲು ಹಲವಾರು ಹೊರಗಿನ ಮೂಲಗಳಿಂದ ಮಾಹಿತಿ ಕಲೆಹಾಕಿ ವಿಷಯಗಳನ್ನು ಜೋಡಿಸುವ ಅಗತ್ಯ ಇದೆ. ಹಾಗೆಂದೇ ನಿಮ್ಮ ಬಳಿ..” ಎನ್ನುತ್ತಿದ್ದಂತೆ ಡಾ|| ಪಲ್ಲವಿ ಹೇಳಿದಳು.

“ಆದರೆ ನನಗಿನ್ನೂ ಕೆಲವು ವಿಷಯಗಳು ಅರ್ಥವಾಗಿಲ್ಲ. ಅವರು ನನ್ನನ್ನು ಹಲವು ಬಾರಿ ಸಂಪರ್ಕಿಸಿರುವುದರ ಬಗ್ಗೆ ಯಾರು ಹೇಳಿದರು? ಅವರ ಮಗಳೆ? ನಾನು ಇಲ್ಲಿರುವ ಬಗ್ಗೆ ನಿಮಗೆ ಯಾರು ಹೇಳಿದರು? ನಾವು ಇಲ್ಲಿಯೇ ಇದೇ ಸ್ಥಳದಲ್ಲಿರುವುದನ್ನು ಹೇಗೆ ಕಂಡುಕೊಂಡಿರಿ? ದೆಹಲಿಯ ಸರಕಾರ ನಿಮ್ಮನ್ನು ಕಳುಹಿಸಿದೆ ಎಂದಿರಿ; NIA ನ ID card ತೋರಿಸುತ್ತಿದ್ದೀರಿ. ನನಗೆ ಏನೂ ಅರ್ಥವಾಗುತ್ತಿಲ್ಲ.”

“ಹೇಳುತ್ತೇನೆ. ಆದರೆ ನಾವು ನಡೆಸುತ್ತಿರುವ ಈ ಶೋಧದ ಬಗ್ಗೆ ಕೆ. ನಾಗಯ್ಯ ಅವರ ಮಗಳಿಗೂ ತಿಳಿಯದು.”

“ಮತ್ತೆ? ನನ್ನನ್ನು ಕೆ. ನಾಗಯ್ಯ ಹಲವು ಬಾರಿ ಸಂಪರ್ಕಿಸಿದ್ದರೆಂದು ಯಾರು ಹೇಳಿದರು?” ಪಲ್ಲವಿಯ ಪ್ರಶ್ನೆಯಲ್ಲಿ ಕೋಪದ ಛಾಯೆ ಎದ್ದು ಕಾಣುತ್ತಿತ್ತು. ಆದರೆ ಅದನ್ನು ಗಮನಿಸದಂತೆ ಹಲೀಮ್ ಹೇಳಿದರು.

“ನಿಮ್ಮಿಬ್ಬರ ನಡುವಿನ ಇತ್ತೀಚಿನ ಫೋನ್ ಕರೆಗಳಿಂದ.”

“ಅಂದರೆ ಅವರು ನನ್ನನ್ನು ಮಾತ್ರವೇ ಸಂಪರ್ಕಿಸಿದ್ದಾರೆ ಎನ್ನುತ್ತೀರ? ನಾನು ನಂಬಲಾರೆ.”

“ಇಲ್ಲ. ನಿಮ್ಮ ಹಾಗೆ ಇನ್ನೂ ಹಲವಾರು ಮಂದಿಯ ಜೊತೆ ಸಂಪರ್ಕ ಇರುವುದು ಕಂಡು ಬಂತು ನಿಜ. ಆದರೆ ನಿಮ್ಮ ಬಗ್ಗೆ ವಿಶೇಷವಾಗಿ ನಮ್ಮ ಗಮನ ಹರಿಯ ಬೇಕಾದರೆ ಕೆಲವು ಕಾರಣಗಳಿವೆ. ನಿಮಗೆ ಬೆಂಗಳೂರಿನಲ್ಲಿ ತಿಳಿಯುತ್ತದೆ.” ಅದನ್ನು ಕೇಳಿ ದಂಗಾದ ಡಾ|| ಪಲ್ಲವಿ ದಿಟ್ಟ ಸ್ವರದಲ್ಲಿ ಹೇಳಿದಳು.

“Excuse me. ಮಿಸ್ಟರ್ ಹಲೀಮ್, ಕೆ. ನಾಗಯ್ಯ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆ ಕಾರಣದಿಂದಲೆ ನಾನು ವಿದ್ಯಾರ್ಥಿಗಳ ಜೊತೆ ಇದ್ದಾಗ, ನೀವು ಅವರ ಸ್ಥಿತಿಯ ಬಗ್ಗೆ ತಿಳಿಸಿ ನನ್ನ ಸಹಾಯ ಬೇಕೆಂದು ಕೇಳಿದಾಗ ಮರು ಮಾತಿಲ್ಲದೆ ಕೆಲಸ ನಿಲ್ಲಿಸಿ ಬಂದೆ. ಹಾಗೆಂದಾಕ್ಷಣ ನಾನು ಎಲ್ಲವನ್ನೂ ಬಿಟ್ಟು ಬೆಂಗಳೂರಿಗೆ ಬರಲು ಸಿದ್ಧವಿದ್ದೇನೆ ಎಂದಲ್ಲ” ಎಂದಳು.

“ನಿಮ್ಮನ್ನು ಬಲವಂತಪಡಿಸುತ್ತಿಲ್ಲ ಡಾ|| ಪಲ್ಲವಿ. ಆದರೆ ನೀವಿಲ್ಲದೆ ಕೆ. ನಾಗಯ್ಯ ಅವರಿಗೆ ಗುಂಡು ಹಾಕಿದವರನ್ನು ಕಂಡುಹಿಡಿಯುವುದು ಕಷ್ಟ. ಹಾಗಾಗಿ ನೀವು ಬೆಂಗಳೂರಿಗೆ ಬಂದರೆ ಅನುಕೂಲ ಎಂದು ನಮ್ಮ ನಂಬಿಕೆ ಹಾಗೂ ಕೋರಿಕೆ.”

“ಅದೇ ನನಗೆ ಅರ್ಥವಾಗುತ್ತಿಲ್ಲ. ನಾನೇ ಏಕೆ? ವಿಶೇಷವಾಗಿ ನಾನೇ ಹೇಗೆ ಸಹಾಯ ಮಾಡಬಲ್ಲೆ”

“ಹತ್ತು ದಿನಗಳಿಂದ ಅವರು ಹೆಚ್ಚು ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ನಮ್ಮದೇ ರೀತಿಯಲ್ಲಿ ಅವಲೋಕಿಸುತ್ತಿದ್ದೆವು. ನಮಗೆ ಇಬ್ಬರು ಮಾತ್ರವೆ ಕೆ. ನಾಗಯ್ಯ ಅವರ ಈಗಿನ ಸ್ಥಿತಿಗೆ ಸಂಬಂಧ ಹೊಂದಿರಲು ಸಾಧ್ಯ ಎಂಬ ಸಂಶಯ ಮೂಡಿತು. ಇಬ್ಬರೂ ಕೂಡ ಇತ್ತೀಚೆಗೆ ಅವರು ತೊಡಗಿಸಿಕೊಂಡಿದ್ದ ಚಟುವಟಿಕೆಗೆ ಸಂಬಂಧ ಪಟ್ಟವರು: ಒಬ್ಬರು ನಾಗಯ್ಯ ಇತ್ತೀಚೆಗೆ ಬರೆದ ಕಾದಂಬರಿಯ ಪ್ರಕಾಶಕರು. ಮತ್ತೊಬ್ಬರು ಆ ಕಾದಂಬರಿ ಬರೆಯಲು ಅವರು ಅವಿರತವಾಗಿ ಸಂಪರ್ಕದಲ್ಲಿದ್ದ, ಅವರಿಗೆ ಮಾಹಿತಿ ಕೊಡುತ್ತಿದ್ದ ನೀವು. ವಿಚಾರಿಸಿದಾಗ, ನೀವು ಶಿಲ್ಲಾಂಗ್‍ಗೆ ವಿಜಿಟಿಂಗ್ ಪ್ರೊಫೆಸರ್ ಆಗಿ ಬಂದಿರುವ ಬಗ್ಗೆ ತಿಳಿಯಿತು. ಶಿಲ್ಲಾಂಗ್‍ನ ವಿಶ್ವವಿದ್ಯಾಲಯಕ್ಕೆ ಬಂದೆವು. ನೀವು ವಿದ್ಯಾರ್ಥಿಗಳ ಜೊತೆ ಇತ್ತ ಬಂದಿರುವುದು ತಿಳಿಯಿತು. ನಿಮ್ಮನ್ನು ಹುಡುಕಿ ಇತ್ತ ಹೊರಟಂತೆ, ಶಿಲ್ಲಾಂಗ್‍ನಲ್ಲಿರುವ ನಮ್ಮ ಮತ್ತೊಂದು ಟೀಮ್, ಮೊಬೈಲ್ ಟವರ್ ಗಳ ಮೂಲಕ ನಿಮ್ಮ ಮೊಬೈಲ್‍ನ ಲೊಕೇಶನ್ ಹುಡುಕಿ ನಮಗೆ ಕಳುಹಿಸತೊಡಗಿದರು. ಇಲ್ಲಿ ಹತ್ತಿರಕ್ಕೆ ಬಂದಾಗ, ರಸ್ತೆಯಲ್ಲಿಯೇ ಮಿನಿಬಸ್ ಮತ್ತು ದೂರದಲ್ಲಿ ವಿದ್ಯಾರ್ಥಿಗಳು ಕಂಡರು. ನೀವು ವಿದ್ಯಾರ್ಥಿಗಳ ಜೊತೆ ಇರಬಹುದೆಂದು ಕರೆಮಾಡಿದಾಗ ಅದನ್ನು ಸ್ವೀಕರಿಸಿ ಉತ್ತರಿಸಿದಿರಿ.”

ಎಲ್ಲವನ್ನೂ ಕೇಳಿದ ಡಾ|| ಪಲ್ಲವಿ ಎರಡು ವಿಷಯಗಳನ್ನು ಮನಸ್ಸಿನಲ್ಲಿಯೇ ತೀರ್ಮಾನಿಸಿಕೊಂಡಳು:
ಒಂದು, ತನಗಾಗಿ NIA ಇಷ್ಟು ಹುಡುಕಾಡಿದ್ದರೆ ಅದಕ್ಕೆ ಸೂಕ್ತ ಕಾರಣ ಇರಲೇಬೇಕು. ಹಾಗಾಗಿ ಅವರ ಕೋರಿಕೆಗೆ ವಿರೋಧ ವ್ಯಕ್ತಪಡಿಸಿದರೆ ಆಗ ತನ್ನ ಮೇಲೆ ಅನವಶ್ಯಕವಾಗಿ ಅನುಮಾನ ಬರುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಅವರೊಂದಿಗೆ ಸಹಕರಿಸುವುದು ಒಳಿತು ಎಂದು.

ಎರಡು. ಕೆ. ನಾಗಯ್ಯ ಅವರಿಗೆ ಬುಲೆಟ್‍ನ ಏಟು ಬಿದ್ದದ್ದು ಮೊನ್ನೆ ಸಂಜೆ ಎಂದರು. ಆದರೆ ಇದೀಗ ತಾನೆ ಹತ್ತು ದಿನಗಳಿಂದಲೆ ಕೆ. ನಾಗಯ್ಯ ಅವರ ಸಂಪರ್ಕಗಳ ಬಗ್ಗೆ ವಿಶ್ಲೇಷಿಸುತ್ತಿದ್ದೇವೆ ಎಂದರು. ಅದು ಹೇಗೆ ಸಾಧ್ಯ? ಯಾವುದೋ ಸತ್ಯವೊಂದನ್ನು ಇವರು ಬಚ್ಚಿಡುತ್ತಿರುವ ಹಾಗಿದೆ. ಏನಿರಬಹುದು ಎನ್ನುವುದನ್ನು ತಿಳಿಯಲೇಬೇಕು. ಇಲ್ಲವಾದಲ್ಲಿ ಸಂಶಯದ ಮುಳ್ಳು ತನ್ನತ್ತಲೇ ತಿರುಗುವ ಸಾಧ್ಯತೆ ಹೆಚ್ಚು, ಎಂದು ಕೊಂಡಳು.

ಹಾಗೆ ಯೋಚಿಸುತ್ತ, ಮುಂದೆ ಏನಾಗುತ್ತದೆ ಎಂದು ಹಲೀಮ್ ಅವರಿಡುವ ಹೆಜ್ಜೆಗಳ ಮೇಲೆಯೆ ತೀರ್ಮಾನಿಸುವುದೆಂದು ಯೋಚಿಸಿ ಮೌನವಾದಳು.

(ಕೃತಿ: ಕಾನನ ಜನಾರ್ದನ (ಕಾದಂಬರಿ), ಲೇಖಕರು: ಡಾ: ಕೆ.ಎನ್‌. ಗಣೇಶಯ್ಯ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 395/-)