“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”
ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ.

ಅಬ್ದುಲ್ ರಶೀದ್‌ರವರ ಈ ಕಾದಂಬರಿಯಲ್ಲಿನ ಮುಖ್ಯ ಪಾತ್ರವೇ ಅನ್ನಬಹುದಾದ ಹೂವಿನ ಕೊಲ್ಲಿ ಸಿದ್ದಾಪುರ ಅನ್ನುವ ಊರಿನ ಹತ್ತಿರವಿರುವ ಒಂದು ಕಾಫೀ ಎಸ್ಟೇಟ್ ಆಗಿದ್ದರೂ, ಸುತ್ತಮುತ್ತಲಿನ ಪ್ರತಿಯೊಂದರಿಂದ ಬೇಕಂತಲೇ ದೂರವನ್ನು ಕಾಪಾಡಿಕೊಂಡು, ರಶೀದರು ಪ್ರೀತಿಯಿಂದ ಕಾಲ ಕಳೆದು ಬಂದಿರುವ ಲಕ್ಷದ್ವೀಪದ ತರ ಒಂದು ದ್ವೀಪದಂತೆ ವರ್ತಿಸುತ್ತದೆ. “ಇಂದು ಯಾಕೆ ಎಲ್ಲ ಹೀಗೆ ಇಷ್ಟು ಚಂದವಾಗಿದೆʼʼ ಎಂದು ಹೂವಿನ ಕೊಲ್ಲಿಯ ಬಾಯಿಬಾರದ ಹಸುಕರುಗಳು ಬೆರಗುಗೊಳ್ಳುತ್ತವೆ. ಕಾದಂಬರಿ ಓದಿದಾಗ ಎಷ್ಟೆಲ್ಲಾ ಗೋಳುಗಳಿಂದ ಕೂಡಿರುವ ಜನರಿಂದ ತುಂಬಿರುವ ಈ ಹೂವಿನ ಕೊಲ್ಲಿ, ಇಷ್ಟು ಚಂದವಿರುವುದು ಹೇಗೆ ಅನ್ನುವ ಬೆರಗು ಮೂಡುತ್ತದೆ.

(ಅಬ್ದುಲ್ ರಶೀದ್)

ರಮಣೀಯತೆಯನ್ನೇ ಹಾಸಿಕೊಂಡು ಹೊದ್ದುಕೊಂಡು ಅಷ್ಟೇ ಸಾಕೆಂದು ತನ್ನಲ್ಲಿ ತಾನೇ ಮುಳುಗಿಹೋಗಿರುವಂತ ಈ ಹೂವಿನ ಕೊಲ್ಲಿಗೆ ಹೊರಗಿಂದ ಬಂದಂತವು ಸಾಕಷ್ಟಿವೆ. ‘ರೈಟರ್‌ʼ ಉಸ್ಮಾನ್‌ ಎಂದೋ ತಂದಿದ್ದ ಕ್ಯಾಲೆಂಡರ್‌ನಲ್ಲಿ ಕುಳಿತಿರುವ ಪರ್ಷಿಯನ್‌ ಬೆಕ್ಕು ತನ್ನ ಎದುರಿನ ಪಂಜರದಲ್ಲಿರುವ ‘ಜುಲೈಕಾʼ ಅನ್ನುವ ಗಿಳಿಯನ್ನೂ, ಆ ಜಾಗದಲ್ಲಿ ನಡೆಯುವ ಮನುಷ್ಯ ಪ್ರಪಂಚದ ಎಲ್ಲಾ ರಗಳೆ-ಸಂಭ್ರಮಗಳನ್ನೂ, ಕೀಟಳೆ ಮಾಡಿಕೊಂಡು ಏಳು-ಎಂಟು ವರ್ಷಗಳಿಂದ ನೋಡುತ್ತಲೇ ಇದೆ. ಈ ಎಸ್ಟೇಟಿಗೆ ಅಚಾನಕ್ಕಾಗಿಯೋ, ಬಯಸಿಯೋ ಬಂದು ಸೇರಿ ಬದುಕುತ್ತಿರುವ ಅನೇಕ ನರಮನುಷ್ಯರಂತೆಯೇ ಆ ಕ್ಯಾಲೆಂಡರ್ ಕೂಡಾ ತಾನು ಯಾಕೆ, ಯಾವ ಉದ್ದೇಶಕ್ಕೆ, ಯಾವ ಸಾಧನೆಗೆ ಇಲ್ಲಿಗೆ ಬಂದಿದ್ದೆ ಅನ್ನುವುದರ ಪರಿಗಣನೆಯೇ ಇಲ್ಲದಂತೆ ತನ್ನ ಪಾಡಿಗೆ ತಾನು ಗೋಡೆಯ ಮೇಲೆ ನೇತಾಡಿಕೊಂಡು ಇದೆ. ಕಾಲಗಣನೆಗೆಂದೇ ಇರುವ ಕ್ಯಾಲೆಂಡರ್‌ ಕೂಡ ಹೂವಿನ ಕೊಲ್ಲಿಯಲ್ಲಿ ಕಾಲಾತೀತವಾಗುತ್ತದೆ. ಹೀಗೆ ಹೂವಿನ ಕೊಲ್ಲಿಗೆ ಬಂದು ಇಲ್ಲೇ ಕಳೆದು ಹೋಗಿರುವ ಮನುಷ್ಯರಿಂದಲೇ ಈ ಎಸ್ಟೇಟ್‌ ತುಂಬಿ ತುಳುಕುತ್ತಿದೆ. ಘಟ್ಟದ ಕೆಳಗಿನಿಂದ ಬಂದಿರುವ ಐತಣ್ಣ, ಕೇರಳದ ಮಲ್ಲಪುರಮ್‌ ಜಿಲ್ಲೆಯಿಂದ ಬಂದಿರುವ ಮೂಸಕಾಕ, ಸಿಲೋನಿನಿಂದ ಬಂದಿರುವ ಸಿಲೋನ್‌ ಅಣ್ಣಾಚಿ, ಹೇಗೆ ಯಾವಾಗ ಎಲ್ಲಿಂದ ಬಂದ ಅನ್ನುವುದೇ ಯಾರಿಗೂ ಗೊತ್ತಿಲ್ಲದಿರುವ ಕುಟ್ಟಿಕಣ್ಣ, ಪಠಾಣರ ಕುಲಕ್ಕೆ ಸೇರಿದವಳು ಅನ್ನಲಾದ ಅಡುಗೆ ಕೆಲಸದ ಕಾದಿಮಾ ಅಜ್ಜಿ, ಅಸ್ಸಾಮಿನಿಂದ ಬಂದಿರುವ ದಾಸ, …….. ಎಲ್ಲಿಂದಲೋ ಬಂದು ಇಲ್ಲಿ ವಾಸ ಹೂಡಿ ತಮ್ಮ ಮೂಲಸ್ಥಾನಗಳ ನೆನಪಲ್ಲಿ ಕೊರಗಿಕೊಂಡು ಇಲ್ಲಿಯೇ ಮಣ್ಣಾಗುತ್ತಾರೆ.

ಈ ‘ಇಲ್ಲಿʼ ಅನ್ನುವುದು ಕರಾರುವಕ್ಕಾಗಿ ಎಲ್ಲಿದೆ, ಯಾವ ಕಾಲಮಾನದಲ್ಲಿದೆ ಅನ್ನುವುದನ್ನು ಬಿಡಿಸಿ ಹೇಳುವ ಆಸಕ್ತಿ ಈ ಕಾದಂಬರಿಗಿಲ್ಲ. ಈ ಕತೆ ಎಲ್ಲಿ, ಯಾವಾಗ ನಡೆಯುತ್ತದೆ ಅನ್ನುವುದನ್ನು ಕತೆಯಲ್ಲಿ ಬರುವ ಪ್ರಾಸಂಗಿಕ ವಿವರಗಳಿಂದಲೇ ಅಂದಾಜಿಸಬೇಕು. ಬಾಂಗ್ಲಾ ವಿಮೋಚನಾ ಯುದ್ಧ, ಇಂದಿರಾ ಗಾಂಧಿ, ಸಂಸ್ಥಾ ಕಾಂಗ್ರೆಸ್‌, ಕಮ್ಯುನಿಸ್ಟ್‌ ಹೋರಾಟಗಳ ಪ್ರಸ್ತಾಪ ಇದೆಯಾದರೂ ಹೂವಿನ ಕೊಲ್ಲಿಯ ಹೊರಗಿರುವ ವಿಶಾಲವಾದ ವಿಶ್ವದ, ದೇಶಗಳ, ರಾಜ್ಯಗಳ, ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಈ ಘಟನೆಗಳಿಗೆ ಹೂವಿನ ಕೊಲ್ಲಿಯ ಜನರು ಅನಾಸಕ್ತಿಯಿಂದಲೇ ಪ್ರತಿಕ್ರಿಯಿಸುತ್ತಾರೆ. ಉಸ್ಮಾನ್‌ ರೈಟರ್‌ ಪಾಪ ಹಾರೂನನಿಗೆ ನಕ್ಷೆ ಬರೆದು ‘ಯಾವುದೆಲ್ಲಾ ಭಾರತವೆಂದು, ಯಾವುದು ಪಾಕಿಸ್ತಾನವೆಂದು, ಬಾಂಗ್ಲಾದೇಶ ಎಲ್ಲಿ ಉದಯಿಸುವುದೆಂದುʼ ಹೇಳಿಕೊಡುತ್ತಾರೆ. ಆದರೆ ಅವರು ಆ ನಕ್ಷೆ ಬರೆಯುವುದೇ ನೀರಿನಲ್ಲಿ! ಮಗು ಹಾರೂನನಿಗೆ ಪಕ್ಕದ ಹಾರಂಗಿ ಅಣೆಕಟ್ಟಿಗೆ ಮಕ್ಕಳನ್ನು ಬಲಿಕೊಡುತ್ತಾರೆ ಅನ್ನುವ ಹೆದರಿಕೆಯೇ ತಲೆಯಲ್ಲಿ! ಸಿದ್ದಾಪುರದಲ್ಲಿ ಜಾಥಾ ತೆಗೆದು ಯಾಹ್ಯಾಖಾನನ ಹುಲ್ಲಿನ ಗೊಂಬೆಗೆ ಬೆಂಕಿ ಇಡಲು ತಯಾರಿ ನಡೆಯುವಾಗ ಅಲ್ಲಿಗೆ ಬರುವ ಹೂವಿನ ಕೊಲ್ಲಿಯ ಖಾನ್‌ ಸಾಹುಕಾರರು ಸುಮ್ಮನೇ ಆ ಗೊಂಬೆಯನ್ನು ನೋಡುತ್ತಾರೆ, ಹಾರೂನನ ಕಡೆ ಒಂದು ಮುಗುಳ್ನಗೆ ಬೀರಿ. ಮಕ್ಕಳೆಲ್ಲರೂ ಆ ಹುಲ್ಲಿನ ಬೊಂಬೆಯನ್ನು ಮುಗುಳ್ನಗುತ್ತಾ ನೋಡುತ್ತಿರುತ್ತಾರೆ. ಕಾದಂಬರಿ ‘ಆ ಎಳೆ ಬಿಸಿಲಿಗೆʼ ಹೊಳೆಯುತ್ತಿದ್ದ ‘ಎಣ್ಣೆ ಹಚ್ಚಿದ್ದ ಅವರ ತಲೆಗಳʼನ್ನು ನಮ್ಮ ಗಮನಕ್ಕೆ ತರುತ್ತದೆ!

ತಮ್ಮ ಮಗ ಕಮ್ಯುನಿಸ್ಟ್ ಅನ್ನುವ ಕಾರಣಕ್ಕೆ ಕೊಲೆಯಾಗಿದ್ದಾನೆ ಅಂದುಕೊಂಡಿರುವ ನಂಬಿಯಾರರೇ ಮೇ ದಿನದ ಕರಪತ್ರವನ್ನು ಇಸಿದುಕೊಂಡ ನಂತರ “ನಮಗೆಲ್ಲಾ ವಯಸ್ಸಾಯಿತು… ಇನ್ನು ನಾವೂ ಜಾಥಾ ಹೊರಡಬೇಕು. ಒಂದು ದೊಡ್ಡ ಜಾಥಾ, ಇಲ್ಲಿಂದ ಅಲ್ಲಿಯವರೆಗೆʼʼ ಎಂದು ವೇದಾಂತ ಹೇಳುತ್ತಾರೆ. ಕಾಂಗ್ರೆಸ್‌ ವಿರೋಧಿಯಾಗಿ ಸಂಸ್ಥಾಕಾಂಗ್ರೆಸ್‌ ಸೇರಿರುವ ಮೊಯಿದು ತನ್ನ ರಾಜಕೀಯ ನಿಷ್ಟೆ ಬದಲಿಸಿದ್ದು ಇಂದಿರಾ ಗಾಂಧಿಯವರ ಕಾರಿಗೆ ಹೋಗಲು ಅಡ್ಡಿಯಾಗಿ ನಿಂತಿದ್ದ ತನ್ನ ಕಾರನ್ನು ಪೋಲಿಸರು ಚರಂಡಿಗೆ ನೂಕಿದ್ದರು ಅನ್ನುವ ಸಿಟ್ಟಿನಿಂದ ಅಷ್ಟೇ. ಹೂವಿನ ಕೊಲ್ಲಿಯಲ್ಲಿರುವ ಜನರಿಗೆ “ಅನ್ನದ ಪಾತ್ರೆಯಲ್ಲಿ ಅಕ್ಕಿ ಅಗುಳಾಗಿದೆಯಾ, ಸಾರಿನ ಮಡಿಕೆಯಲ್ಲಿ ಮಾಂಸ ಕುದಿಯುತ್ತಿದೆಯಾ” ಅನ್ನುವುದರಲ್ಲಿರುವ ಆಸಕ್ತಿ ಯಾಹ್ಯಾಖಾನನಲ್ಲಿಯಾಗಲೀ, ಹೊಸ ದೇಶವೇ ಹುಟ್ಟುತ್ತಿರುವುದರಲ್ಲಾಗಲೀ ಇಲ್ಲ. ಕುಟ್ಟಿಕಣ್ಣ ಮೇ ದಿನದ ಕರಪತ್ರವನ್ನು ಮೆರವಣಿಗೆಕಾರರಿಂದ ಇಸಿದುಕೊಂಡು “ನೀವು ತೋಟದ ಒಳಗೆ ಕಾಲು ಹಾಕಲು ಸಾಹುಕಾರರ ಆರ್ಡರ್‌ ಇಲ್ಲ” ಎಂದು ಗೇಟಿಗೆ ಬೀಗ ಹಾಕುತ್ತಾನೆ; ತಮ್ಮದೇ ಸಾಕಷ್ಟು ನರಳಾಟಗಳಿರುವಾಗ ಈ ಯಾಹ್ಯಾಖಾನನದೇನು ಮಹಾ ಅನ್ನುವ ಹಾಗೆ. ಬಹುಷಃ ಈ ಕಾದಂಬರಿಯೂ ಕೂಡ ತನ್ನ ಪಾತ್ರಗಳ ಅಗಣಿತ ನರಳಾಟಗಳು ಮತ್ತು ದಿನನಿತ್ಯದ ಬದುಕಿನ ಸುಖ-ದುಃಖಗಳನ್ನು ಬಿಟ್ಟು ಉಳಿದಿದ್ದೆಲ್ಲವನ್ನೂ ತನ್ನ ಕಾದಂಬರಿ ಜಗತ್ತಿನ ಗೇಟಿನ ಹೊರಗೆ ಉಳಿಸಿಬಿಟ್ಟು ಬೀಗ ಹಾಕಲು ಬಯಸುತ್ತದೆ.

ಈ ಸುಂದರ ಪ್ರಕೃತಿಯ ಮಡಿಲಲ್ಲಿ ಬದುಕಿರುವವರ ಜೀವನದಲ್ಲಿ ನರಳಾಟಗಳಿಗೇನೂ ಕೊರತೆ ಇಲ್ಲ. ಉಸ್ಮಾನ್‌ ರೈಟರ್‌ಗೆ ವಾಸಿಯಾಗದ ‘ಮೂಲವ್ಯಾಧಿʼಯ ಕಾಯಿಲೆ. ಅವರ ಮೊದಲ ಹೆಂಡತಿ ಜುಲೈಕಾ ಮೂರು ಮಕ್ಕಳನ್ನು ಹಡೆದು ಕೊಟ್ಟು ತನ್ನ ಹುಚ್ಚಿನಲ್ಲಿ ಅಲ್ಲಿ ಇಲ್ಲಿ ಓಡಾಡಲು ಶುರು ಮಾಡಿ ನಂತರ ಹಾಗೇ ಕಾಣೆಯಾಗಿದ್ದಾಳೆ. ಮರಿಯಮ್ಮನ ಗಂಡ ಡ್ರೈವರ್‌ ಹಂಸಾಕ ಕಾರಿನಲ್ಲಿ ಬರುವಾಗ ಅಪಘಾತವಾಗಿ ಅವರ ದೊಡ್ಡ ಸಾಹುಕಾರರು ತೀರಿ ಹೋಗಿ ಹನ್ನೆರೆಡು ದಿನವಾದ ಮೇಲೆ ಸ್ವರ್ಗದಲ್ಲಿ ಅವರ ಕಾರು ನಡೆಸಲೇನೋ ಎಂಬಂತೆ ತೀರಿಹೋಗಿದ್ದಾನೆ. ಮೂಸಕಾಕನ ಹೆಂಡತಿ ಕುಂಞಿಪಾತಮ್ಮ ಪ್ರತಿ ಉಸಿರಿನಲ್ಲೂ ಇದೇ ತನ್ನ ಕೊನೆ ಉಸಿರಿರಬಹುದೆಂದು ಮರಣವನ್ನು ಎದುರು ನೋಡುತ್ತಾ ವರ್ಷಗಳಿಂದ ಮಲಗಿದ್ದಾಳೆ. “ಪುತ್ರಶೋಕವೆಂಬುದು ಎಲ್ಲಾ ಶೋಕಗಳಿಗಿಂತ ಅತಿದೊಡ್ಡ ಶೋಕʼʼ ಅನ್ನುವುದನ್ನ ಅನುಭವಿಸುತ್ತಾ ಸಾವಿಗೆ ಕಾಯುತ್ತಿದ್ದಾರೆ ನಂಬಿಯಾರರು. ಸಾವುಗಳು, ರೋಗಗಳು, ದುಃಖಗಳು, ಒಂಟಿತನಗಳು, ಈ ಹೂವಿನ ಕೊಲ್ಲಿಯ ಲೋಕದಲ್ಲಿ ದಂಡಿಯಾಗಿವೆ. ಕೆಲವೊಮ್ಮೆ “ಯಾರ ಮುಖದಲ್ಲೂ ಖುಷಿಯಿರುವ ಹಾಗೆ ಕಾಣಿಸುತ್ತಿಲ್ಲವಲ್ಲ” ಅನ್ನಿಸುತ್ತದೆ.

ಈ ಎಸ್ಟೇಟಿಗೆ ಅಚಾನಕ್ಕಾಗಿಯೋ, ಬಯಸಿಯೋ ಬಂದು ಸೇರಿ ಬದುಕುತ್ತಿರುವ ಅನೇಕ ನರಮನುಷ್ಯರಂತೆಯೇ ಆ ಕ್ಯಾಲೆಂಡರ್ ಕೂಡಾ ತಾನು ಯಾಕೆ, ಯಾವ ಉದ್ದೇಶಕ್ಕೆ, ಯಾವ ಸಾಧನೆಗೆ ಇಲ್ಲಿಗೆ ಬಂದಿದ್ದೆ ಅನ್ನುವುದರ ಪರಿಗಣನೆಯೇ ಇಲ್ಲದಂತೆ ತನ್ನ ಪಾಡಿಗೆ ತಾನು ಗೋಡೆಯ ಮೇಲೆ ನೇತಾಡಿಕೊಂಡು ಇದೆ. ಕಾಲಗಣನೆಗೆಂದೇ ಇರುವ ಕ್ಯಾಲೆಂಡರ್‌ ಕೂಡ ಹೂವಿನ ಕೊಲ್ಲಿಯಲ್ಲಿ ಕಾಲಾತೀತವಾಗುತ್ತದೆ. ಹೀಗೆ ಹೂವಿನ ಕೊಲ್ಲಿಗೆ ಬಂದು ಇಲ್ಲೇ ಕಳೆದು ಹೋಗಿರುವ ಮನುಷ್ಯರಿಂದಲೇ ಈ ಎಸ್ಟೇಟ್‌ ತುಂಬಿ ತುಳುಕುತ್ತಿದೆ.

ಬಾಂಗ್ಲಾದೇಶದ ಯುದ್ಧದ ಬಗ್ಗೆ, ಕಮ್ಯುನಿಸ್ಮ್‌ನ ಬಗ್ಗೆ ಎಂದೂ ಮಾತಾಡಿಕೊಳ್ಳದ ಈ ಕಾದಂಬರಿಯ ಪಾತ್ರಗಳು ಈ ತಮ್ಮ ಜೀವನದ ನರಳುವಿಕೆಯ, ಒಂಟಿತನದ ಹಿಂದೆ ಯಾವ ವ್ಯವಸ್ಥೆ ಕೆಲಸ ಮಾಡುತ್ತಿರಬಹುದು ಎಂದು ಕೇಳಿಕೊಳ್ಳುತ್ತಾರೆ. “ಇನ್ನೆಷ್ಟು ದಿನ ಈ ಸಂಕಟ” ಎಂದು ಭಗವತಿಗೋ, ಗುರುವಾಯೂರಪ್ಪನಿಗೋ, ಪಡೆದವನಿಗೋ, ಮೊಹಿಯುದ್ದೀನ್‌ ಶೇಖರಿಗೋ ಪ್ರಶ್ನೆ ಮಾಡುತ್ತಾರೆ. “ಈ ಭೂಲೋಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಜನರು ಎಲ್ಲಿಂದ ಎಲ್ಲಿಯವರೆಗೆ ಹೋಗಬೇಕಾಗುತ್ತಲ್ಲಾ ನಿನ್ನನ್ನು ನಂಬಿ” ಎಂದು ಅಚ್ಚರಿ ಪಡುತ್ತಾರೆ. “ಅಸತ್ಯವಿಶ್ವಾಸಿಗಳನ್ನು ತನ್ನ ನರಕದಲ್ಲಿ ಸುಡುವ ಆ ಪಡೆದವನು ಸತ್ಯವಿಶ್ವಾಸಿಗಳನ್ನು ಬದುಕಿರುವಾಗಲೇ ಯಾಕೆ ಹೀಗೆ ಶಿಕ್ಷೆಗೆ ಗುರಿಪಡಿಸುತ್ತಾನೆ” ಅನ್ನುವ ಪ್ರಶ್ನೆ ಉಸ್ಮಾನ್ ರೈಟರ್ ಅವರದ್ದು. ಆದರೆ ಅವರೇ ಒಮ್ಮೆ “ಇಲ್ಲಿ ಯಾವುದಕ್ಕೂ ಏನಕ್ಕೂ ಯಾವುದೇ ಕಾರಣಗಳಿರುವುದಿಲ್ಲ. ಜೀವಗಳು ಹೋಗುತ್ತವೆ ಬರುತ್ತವೆ. ಅದಕ್ಕೆಲ್ಲಾ ಕಾರಣಗಳನ್ನು ಹುಡುಕಲು ಹೋದರೆ ಹುಚ್ಚು ಹಿಡಿಯುತ್ತದೆ” ಅಂತಲೂ ಅಂದಿದ್ದಾರೆ. ಅದರ ಮಧ್ಯ ಫಾತುಮಾ “ಕಾಫಿಯಲ್ಲಿ ಇನ್ನೂ ಬೆಲ್ಲ ಕರಗಿಯೇ ಇಲ್ಲವಲ್ಲ ಪಡೆದವನೇ” ಎಂದು ರೋದಿಸುತ್ತಿದ್ದಾಳೆ.

ಜೀವನದ ಅರ್ಥ ಹೂವಿನ ಕೊಲ್ಲಿಯ ಪಾತ್ರಗಳಿಗೆ ಸಿಗುತ್ತದೋ ಇಲ್ಲವೋ, ಆದರೆ ಸಹಜೀವಿಗಳ ನೋವನ್ನು ಅವರು ಅರ್ಥ ಮಾಡಿಕೊಳ್ಳಬಲ್ಲರು. ಹಾಜಮ್ಮ ಮಾತು ಬಾರದ ಹುಂಜದ ಮನಸ್ಸಿನ ಅಕ್ಕಿ ತವುಡು ಬೇಕೆಂಬ ಆಸೆಯನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವವಳು. ಮುದಾರನಿಗೆ ನಂಬಿಯಾರರಿಗೆ ಅಡಿಕೆ ಸಿಗದೆ ದುಃಖವಾಗುತ್ತಿದೆ ಅನ್ನುವುದು ಅರ್ಥವಾಗುತ್ತದೆ. ಹೂವಿನ ಕೊಲ್ಲಿಯ ಎಲ್ಲರೂ ಬೆಳೆದ ಮಗನನ್ನು ಕಳೆದುಕೊಂಡಿರುವ ನಂಬಿಯಾರರ “ನೋವನ್ನು ಅರ್ಥ ಮಾಡಿಕೊಂಡು ಒಳಗೊಳಗೇ” ಸಂಕಟಪಡುತ್ತಿರುತ್ತಾರೆ. ಇದು ವೈಚಾರಿಕವಾಗಿಯೋ, ಸೈದ್ಧಾಂತಿಕವಾಗಿಯೋ, ಧಾರ‍್ಮಿಕ ಹಿನ್ನಲೆಯಿಂದಲೋ ಮಾಡಿಕೊಂಡಿರುವ ‘ಅರ್ಥʼ ಅಲ್ಲ; ಜೊತೆಗೆ ಬದುಕುತ್ತಿರುವ ಜೀವಿಯೊಂದರ ಬಗ್ಗೆ ಸಹಜವಾಗಿ ಮೂಡಿರುವ ‘ಸಹ ಅನುಭೂತಿʼ.

ಜೀವ ಇರುವ ಮಾನವರಿಗಾದರೆ ಅನುಭೂತಿ ಇರುತ್ತದೆ. ಆದರೆ ಪ್ರಕೃತಿಗೆ ಇರಬೇಕಲ್ಲಾ? ಇಷ್ಟೆಲ್ಲಾ ನೋವುಗಳಿಂದ ತುಂಬಿರುವ ಹುಲು ಮನುಷ್ಯರ ಜೀವನಕ್ಕೂ ತನಗೂ ಸಂಬಂಧವೇ ಇಲ್ಲ ಅಂದು ತನ್ನ ಪಾಡಿಗೆ ತಾನು ಮಾತ್ರ ರಮಣೀಯವಾಗಿ ಬೇರೆ ಬೇರೆ ತರದ ಬಿಸಿಲಿನಲ್ಲಿ, ಮಳೆಯಲ್ಲಿ, ಚಳಿಯಲ್ಲಿ, ಪ್ರಕೃತಿ ‘ನಗುತ್ತʼ ಮಲಗಿರುತ್ತದೆ. ‘ಮಲ್ಲಿಗೆಯ ಬಳ್ಳಿ, ಚೆಂಡು ಹೂವಿನ ಗಿಡ, ಬಸಳೆಯ ಚಪ್ಪರ, ಸಿಹಿಗೆಣಸಿನ ಪೊದೆ… ಬೆಳದಿಂಗಳಿನಲ್ಲಿ ಮಿಂದು ಗಾಳಿಗೆʼ ಅಲ್ಲಾಡುತ್ತಿರುತ್ತವೆ. ಕಳೆದು ಹೋಗಿರುವ ಮಗ ಹಾರೂನನನ್ನು ಗಾಬರಿಯಿಂದ ಹುಡುಕುತ್ತಿರುವವರ ಮೇಲೆ ‘ಇಳಿ ಮಧ್ಯಾಹ್ನದ ಸೂರ್ಯʼ ಬೆಳಕು ಚೆಲ್ಲುತ್ತಿರುತ್ತಾನೆ. ಯಾರ ಬದುಕೂ ಸರಿಯಾಗಿಲ್ಲ ಎಂದು ಉಸ್ಮಾನ್‌ ರೈಟರ್‌ ಬಾಗಿಲು ತೆಗೆದರೆ, ಹಜಾರದಲ್ಲಿ ಸಣ್ಣಗೆ ಬೆಳಕು ತುಂಬಿಕೊಳ್ಳುತ್ತಿರುತ್ತದೆ.

ಪ್ರಕೃತಿಯೇನೋ ಮಾನವರ ನರಳಾಟದ ಜೀವನಕ್ಕೆ ಮಿಡಿಯದ ಒಂದು ‘ತಟಸ್ಥʼ ಹಿನ್ನೆಲೆ. ಆದರೆ ಈ ಕಾದಂಬರಿಯ ನಿರೂಪಕನೂ ಹೀಗೆ ತನ್ನ ಪಾತ್ರಗಳಿಂದ ದೂರವಿದ್ದಾನೆಯೇ? ಈ ಕಾದಂಬರಿಯ ನಿರೂಪಣಾ ನೋಟ ಎಲ್ಲವನ್ನೂ ಕ್ಯಾಲೆಂಡರನಲ್ಲಿ ಕೂತು ನೋಡುವ ಪರ್ಷಿಯನ್‌ ಬೆಕ್ಕಿನದ್ದೋ, ನಡುನಡುವೆ ಬಾಯಿ ಹಾಕಿ ತುಂಟತನ ಮಾಡುವ ಜುಲೈಕಾ ಗಿಳಿಯದ್ದೋ, ಅಥವಾ ಪೇರಲೆಯ ಗೆಲ್ಲಲ್ಲಿ ಆಡುತ್ತಾ ಕೂತು ಅಲ್ಲಿಂದಲೇ ಎಲ್ಲವನ್ನೂ ನೋಡುವ ಮಗು ಹಾಜಿರಾಳದ್ದೋ? ಇದ್ಯಾವುದೇ ಇದ್ದರೂ ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ.

ಹೂವಿನಕೊಲ್ಲಿ ಕಾದಂಬರಿಯ ಸಂಕೀರ್ಣ ಸೌಂದರ್ಯವನ್ನು ಈ ಕೆಲವು ಪುಟಗಳ ಅವಲೋಕನದಲ್ಲಿ ಹಿಡಿದಿಡುವುದು ಅಸಾಧ್ಯ ಅನ್ನುವ ಅರಿವು ನನಗಿದೆ. ಹಾಗೆ ಮಾಡುವುದು ಸಾಧ್ಯವಿದ್ದಲ್ಲಿ ಯಾರಾದರೂ ಕತೆ, ಕಾದಂಬರಿಗಳನ್ನಾದರೂ ಯಾಕೆ ಬರೆಯಬೇಕು? ಜೀವನದ ‘ಕೊನೆಮಾಡಲಾಗದಿರುವಿಕೆʼಯನ್ನು ಕೊನೆಯೊಂದು ಇರಲೇ ಬೇಕಾದ ಕಾದಂಬರಿ ರೂಪದಲ್ಲಿ ಕಾಣಿಸುವುದು ಕತೆಗಾರನ ಮುಂದಿರುವ ಸವಾಲಾದರೆ, ಒಂದು ಇಷ್ಟವಾದ ಕಾದಂಬರಿಯು ನೀಡುವ ಅನುಭವವನ್ನು ಸರಳೀಕರಿಸದೆ ಮತ್ತು ಅತೀ ಬೌದ್ಧಿಕಗೊಳಿಸದೆ ಇತರರೊಡನೆ ಹಂಚಿಕೊಳ್ಳುವುದು ನನ್ನಂತಹ ಕತೆಪ್ರೇಮಿಗಳಿಗೆ ಇರುವ ಸವಾಲು. ಆದರೂ ನನ್ನ ಈ ಲೇಖನವನ್ನು ಅಂಜಿಕೆಯಿಂದಲೇ ಒಂದು ಪ್ರಶ್ನೆಯಿಂದ ಕೊನೆಮಾಡುತ್ತೇನೆ. ಯಾವ ಮನುಷ್ಯನೂ ಒಂದು ದ್ವೀಪವಲ್ಲವೆಂದಾದರೆ, ಯಾವ ಕಾದಂಬರಿಯಾದರೂ ಒಂದು ದ್ವೀಪವಾದೀತೆ? ಈ ಕಾದಂಬರಿ ಖಂಡಿತವಾಗಿಯೂ ಕುವೆಂಪು, ತೇಜಸ್ವಿ, ದೇವನೂರು ಮಹದೇವರನ್ನು ನೆನಪಿಸುತ್ತದೆ. ಆದರೆ ಈ ಪ್ರಭಾವಗಳು ದ್ವೀಪವೊಂದಕ್ಕೆ ಅಪ್ಪಿತಪ್ಪಿ ದಾರಿತಪ್ಪಿ, ಅಚಾನಕ್ಕಾಗಿ, ಇಷ್ಟವಿಲ್ಲದೇ ಬಂದಿರುವ ಹಡಗುಗಳಂತೆಯೋ, ಅಥವಾ ಅಪರೂಪಕ್ಕಾದರೂ ನಿಯಮಿತವಾಗಿ ಬರುವ ವ್ಯಾಪಾರಿ ಹಡಗುಗಳಂತೆಯೋ?

(ಕೃತಿ: ಹೂವಿನ ಕೊಲ್ಲಿ (ಕಾದಂಬರಿ), ಲೇಖಕರು: ಅಬ್ದುಲ್‌ ರಶೀದ್‌, ಪ್ರಕಾಶಲಕರು: ವೀರಲೋಕ ಬುಕ್ಸ್‌ (+91 7022122121), ಪುಟಗಳು:  228, ಬೆಲೆ: Rs. 270/- )