ಶನಿವಾರ ಶಾಲೆ ಬಿಟ್ಟಾಗಿನಿಂದ ಹಿಡಿದು ಸಂಜೆ 5;30 ವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳದೆ ಕ್ಲೀನ್ ಮಾಡಿದರೆ ಮಾತ್ರ ಎಲ್ಲಾ ತೊಟ್ಟಿಗಳು ಕ್ಲೀನ್ ಮಾಡೋಕೆ ಸಾಧ್ಯ ಆಗ್ತಾ ಇತ್ತು. ಆ ನಂತರ ಸ್ನಾನ ಮಾಡಿ ನಮಗೆ ಸಿಕ್ಕ ಮೆಸ್ಸಿನಲ್ಲಿ ರಾತ್ರಿ ಊಟ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ತಾ ಇದ್ವಿ!! ‘ಭೂತಯ್ಯನ ಮಗ ಅಯ್ಯ’ ಫಿಲಮ್ಮಿನಲ್ಲಿ ಬರೋ ಸೀನಿನ ತರಹ ಕೆಲವರು ಸಾಕಷ್ಟು ಬಡಿಸಿಕೊಂಡು ತಿನ್ತಾ ಇದ್ರು. ನಮಗೆ ತುಂಬಾ ಖುಷಿ ಆಗ್ತಾ ಇತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಎಂಟನೇ ತರಗತಿಯಲ್ಲಿ ರ್ಯಾಂಕ್ ಬಂದವರ ಪೈಕಿ ಮೊದಲ ರ್ಯಾಂಕನ್ನು ‘ಅನುಪಮ ಕಿತ್ತೂರ್’ ಎಂಬ ಹೆಸರಿನ ನಮ್ಮ ಕ್ಲಾಸ್ ಮೇಟ್ ಹುಡುಗಿ ತೆಗೆದುಕೊಂಡಿದ್ದಳು. ಎರಡನೇ ರ್ಯಾಂಕನ್ನು ‘ನಾಗೇಶ’ ಎಂಬ ಕನ್ನಡ ಮೀಡಿಯಂನ ನನ್ನ ಹಾಸ್ಟೆಲ್ ಗೆಳೆಯ ತೆಗೆದುಕೊಂಡಿದ್ದ. ಇವರಿಬ್ಬರೂ ಒಂಥರಾ ವಿಶೇಷ ಬುದ್ಧಿವಂತರಾಗಿದ್ದರು. ಕಾರಣ ಇಷ್ಟೇ ವರ್ಷವಿಡೀ ಅನುಪಮಾ ಶಾಲೆಗೆ ಬಂದಿದ್ದೇ ಕಡಿಮೆ. ಪದೇ ಪದೇ ಚಕ್ಕರ್ ಹಾಕ್ತಾ ಇದ್ದಳು. ನೋಡೋಕೆ ಕೆಂಪಗೆ ಇದ್ದಳು. ಒಮ್ಮೆ ಫಾರೀನರ್ ವೇಷ ಹಾಕಿ ನೋಡೋಕೆ ಥೇಟ್ ಫಾರಿನರ್ ಥರಾನೆ ಕಂಡಿದ್ದಳು. ಇವಳು ಮಿತಭಾಷಿ ಆಗಿದ್ದಳು. ಓದೋ ವಿಷಯ ಅಂತಾ ಬಂದಾಗ ಎಲೆ ಮರೆ ಕಾಯಿಯಂತೆ ಇದ್ದಳು. ಆದರೆ ಶಾಲಾ ಫಲಿತಾಂಶದಲ್ಲಿ ವಿಶೇಷ ಸಾಧನೆ ಮಾಡಿದ್ದಳು. ನಾಗೇಶನೂ ಅಷ್ಟೇ ಅಸಾಮಾನ್ಯ ಬುದ್ಧಿವಂತನಾಗಿದ್ದ. ಪಾಠ ಕೇಳಿಯೇ ಎಲ್ಲಾ ಅರ್ಥ ಮಾಡ್ಕೊಳ್ತಾ ಇದ್ದ. ಓದೋಕೆ ಅಂತಾ ಸ್ಟಡಿ ಅವಧಿ ಬಿಟ್ಟಾಗ ಶಾಲಾ ಪುಸ್ತಕ ಓದದೇ, ಮೇಷ್ಟ್ರಿಗೆ ಗೊತ್ತಾಗುತ್ತೆ ಅಂತಾ ಇವನು ಬುಕ್ಸ್ ಒಳಗೆ ಚಂದಮಾಮ, ಬಾಲಮಂಗಳ ಇಟ್ಕೊಂಡು ಓದ್ತಿದ್ದ. ನನಗೆ ಇವನನ್ನು ನೋಡಿ ತುಂಬಾನೆ ಆಶ್ಚರ್ಯ ಆಗ್ತಾ ಇತ್ತು. ಯಾಕೆಂದರೆ ಮನೇಲಿ ಓದೋಕೆ ಅಂತಾ ಕಳಿಸಿದ್ರೆ ಇರೋ ಪಠ್ಯಪುಸ್ತಕ ಓದೋದ್ ಬಿಟ್ಟು ಬೇರೆ ಬುಕ್ಸ್ ಓದುತ್ತಾನಲ್ಲಪ್ಪ ಎಂದು ಅಚ್ಚರಿ ಆಗ್ತಾ ಇತ್ತು. ಆದರೆ ಫಲಿತಾಂಶದಲ್ಲಿ ಇವನು ತನ್ನ ಸಾಮರ್ಥ್ಯವನ್ನು ತೋರಿಸಿದ್ದ. ಆದರೆ ಇಬ್ಬರೂ ಕೂಡ 9 ನೇ ತರಗತಿಗೆ ನಮ್ಮ ಶಾಲೆಗೆ ಸೇರಲಿಲ್ಲ. ನಾಗೇಶನಿಗೆ ಮನೆ ಕಡೆ ಹಣದ ಸಮಸ್ಯೆ ಅಂತಾ ಊರಿಗೆ ಹೋದ. ಆದರೆ ಅನುಪಮಾ ಮಾತ್ರ ಹಾಸ್ಟೆಲ್ ಊಟಕ್ಕೆ ಬೇಸತ್ತು ಹೋಗಿದ್ದಳು ಅಂತಾ ಅವರ ಜೊತೆ ಇದ್ದವರು ಹೇಳ್ದಾಗ ತಿಳೀತು.

ಆಗ ಶಾಲಾ ಸಮಯದಲ್ಲಿ ನಾನು ‘ಪಠ್ಯಪುಸ್ತಕ ಮಾತ್ರ ಓದಬೇಕು, ಬೇರೆ ಬುಕ್ಸ್ ಓದಬಾರದು, ಅದೇನಿದ್ರು ರಜಾದಲ್ಲಿ ಓದೋದು’ ಅಂತಾ ತಿಳ್ಕೊಂಡಿದ್ದೆ. ಅಪ್ಪಿತಪ್ಪಿ ಕೂಡ ಶಾಲಾ ಸಮಯದಲ್ಲಿ ಬೇರೆ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡ್ತಾ ಇರಲಿಲ್ಲ. ರಜಾದಲ್ಲಿ ಮಾತ್ರ ನಮ್ಮೂರಲ್ಲಿ ಇದ್ದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಾದಂಬರಿಗಳನ್ನು ಓದುತ್ತಾ ಇದ್ದೆ. ಆಗ ಪುಸ್ತಕಗಳನ್ನು ನಾನು ಹಾಗೂ ನನ್ನ ತಮ್ಮ ಕಾಂಪಿಟೇಷನ್ ಮೇಲೆ ಓದ್ತಾ ಇದ್ವಿ. ಇದಕ್ಕಾಗಿ ಲೈಬ್ರರಿಯಲ್ಲಿದ್ದ ವಿಜಯಣ್ಣ ನಮ್ಮನ್ನು ತುಂಬಾ ಇಷ್ಟಪಡ್ತಿದ್ದ. ರಜಾದಲ್ಲಿ ಎಮ್ಮೆ ಕಾಯೋಕೆ ಹೋದಾಗಲೂ ಪುಸ್ತಕ ಇಟ್ಕೊಂಡು ಹೋಗ್ತಾ ಇದ್ದೆ. ರಜಾದ ಸಮಯದಲ್ಲಿ ನಾನು ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ ಅವರ ಕಾದಂಬರಿಗಳನ್ನು ಓದ್ತಾ ಇದ್ದೆ. ಇವರ ಕೌಟುಂಬಿಕ, ಪ್ರೇಮ ಕಾದಂಬರಿಗಳನ್ನು ಓದುತ್ತಾ ನಾನು ತುಂಬಾ ಎಮೋಷನ್ನಿಗೆ ಒಳಗಾಗ್ತಾ ಇದ್ದೆ. ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಚಲನಚಿತ್ರಗಳನ್ನು ಬಿಡ್ತಾನೆ ಇರಲಿಲ್ಲ. ಒಂದೂ ಬಿಡದೇ ನೋಡ್ತಿದ್ದೆ. ರಜಾ ಅವಧಿಯಲ್ಲಿ ನಾನು ನನ್ನ ದೊಡ್ಡಮ್ಮನ ಮನೆಗೆ ಹೋಗ್ತಾ ಇದ್ದೆ. ಅಲ್ಲಿ ತೋಟದಲ್ಲಿ ಇದ್ದ ಮಾವಿನಮರ, ಹಲಸಿನ ಮರ ಸಿಗುತ್ತಿದ್ದ ಹಣ್ಣುಗಳನ್ನು ತಿನ್ನುವ ಆಸೆಗೆ ರಜಾದಲ್ಲಿ ನಾಲ್ಕು ದಿನ ಅಲ್ಲಿರುತ್ತಿದ್ದೆ.

ಹಾಸ್ಟೆಲ್ ಊಟವು ನಮಗೆ ಅಷ್ಟು ಇಷ್ಟ ಆಗ್ತಾ ಇರಲಿಲ್ಲ. ಒಮ್ಮೆ ಹೀಗೆ ಆಗಿತ್ತು: ಹಾಸ್ಟೆಲ್ಲಿನಲ್ಲಿ ಉಪ್ಪಿಟ್ಟು ಮಾಡಿದ್ದರು. ಎಲ್ಲರಿಗೂ ಬಡಿಸಿ ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಯಾರದ್ದೋ ತಟ್ಟೆಯಲ್ಲಿ ಉಪ್ಪಿಟ್ಟಿನಲ್ಲಿ ಬಿದ್ದಿದ್ದ ಬೆಂದ ಇಲಿ ಸಿಕ್ಕಿಬಿಟ್ಟಿದೆ!! ತಕ್ಷಣ ಅವರು ‘ಇಲಿ… ಇಲಿ…’ ಅಂಥಾ ಕೂಗಿದ್ದರಿಂದ ನಮ್ಮ ವಾರ್ಡನ್ ತಕ್ಷಣ ಎಚ್ಚೆತ್ತುಕೊಂಡು ಯಾರೂ ಅದನ್ನು ಯಾರೂ ತಿನ್ನದಂತೆ ತಿಳಿಸಿ ಎಲ್ಲರಿಂದಲೂ ಚೆಲ್ಲಿಸಿದರು. ನಮ್ಮ ಹಾಸ್ಟೆಲ್ಲಿನಲ್ಲಿ ಮಧ್ಯಾಹ್ನದ ಹೊತ್ತು ಟಿಫನ್ ಕೊಡ್ತಾ ಇದ್ರು. ಅದರಲ್ಲೂ ಅವಲಕ್ಕಿ ಇದ್ದಾಗಲಂತೂ ನಮ್ಮ ಕಥೆ ಮುಗಿದೇ ಹೋಗ್ತಾ ಇತ್ತು. ಯಾಕೆಂದರೆ ಅದರಲ್ಲಿ ಎಣ್ಣೆನೇ ಇರ್ತಾ ಇರಲಿಲ್ಲವಾದ್ದರಿಂದ ನಮಗೆ ಚೀವಿಂಗ್ ಗಮ್‌ನಂತೆ ಅದನ್ನು ಜಗಿದೂ ಜಗಿದೂ ಸಾಕಾಗಿ ಹೋಗೋದು! ಕೆಲವರು ನೀರು ಹಾಕಿಕೊಂಡು ಬೇಗನೇ ತಿಂದು ಬಿಡುತ್ತಿದ್ದರು! ಇನ್ನುಳಿದಂತೆ ಇದನ್ನು ಬಿಟ್ಟು ತಿಂಡಿಗೆ ಅಂತಾ ಚಿತ್ರಾನ್ನ, ಗಂಜಿ ಊಟ ಮಾಡೋವ್ರು. ಈ ಮೆನುವಿನಲ್ಲಿ ಇಡ್ಲಿ, ದೋಸೆ, ಪುಳಿಯೋಗರೆ, ಪಲಾವಿಗೆ ಜಾಗಾನೇ ಇರಲಿಲ್ಲ! ಅನ್ನ ಅಂದ್ರೆ ಹಪಾಹಪಿಸೋ ಕಾಲ ಆಗ ಇತ್ತು. ಹಾಸ್ಟೆಲ್ಲಿನಲ್ಲಿ ಬಡಿಸಬೇಕಾದರೆ ಉಳಿದ ಅನ್ನವನ್ನು ನಮ್ಮ ಪಂಕ್ತಿಗೆ ಬಡಿಸೋಕೆ ಬರಲಿಲ್ಲ ಅಂದರೆ ನಮಗೆ ಸಿಕ್ಕಾಪಟ್ಟೆ ಬೇಸರವಾಗ್ತಿತ್ತು.

ಮುದ್ದೆ ಎಷ್ಟು ಬೇಕಾದ್ರೂ ಉಣ್ಣಬಹುದಿತ್ತು. ಆದರೆ ಅನ್ನ ಮಾತ್ರ ಒಂದೇ ಚಮಚಾ! ಸಾಂಬಾರಿನ ರುಚಿಯೂ ಅಷ್ಟಕ್ಕಷ್ಟೇ ಇರುತ್ತಿತ್ತು. ಆದರೆ ಸಾಂಬಾರ್ ಶನಿವಾರ ಮಧ್ಯಾಹ್ನ ಮಾತ್ರ ಚೆನ್ನಾಗಿರೋದು. ಯಾಕೆಂದರೆ ಅಂದು ಸ್ವಾಮೀಜಿ ಅಂದು ನಮ್ಮ ಹಾಸ್ಟೆಲ್ಲಿನಲ್ಲಿ ಊಟ ಮಾಡುತ್ತಿದ್ದರು. ಇನ್ನು ಪ್ರತೀ ಭಾನುವಾರ ರಾತ್ರಿ ಸಾಂಬಾರ್‌ನ ರುಚಿ ಬಹಳ ಚೆನ್ನಾಗಿರೋದು. ಅಂದು ರಾಜ್ಯದೆಲ್ಲೆಡೆಯಿಂದ ನಮ್ಮ ಆಶ್ರಮಕ್ಕೆ ಔಷಧಿಗೆ ಅಂತಾ ರೋಗಿಗಳು ಬರ್ತಾ ಇದ್ರು. ನಮ್ಮ ಸ್ವಾಮೀಜಿ ಅವರಿಗೆ ಔಷಧಿ ಕೊಡ್ತಾ ಇದ್ದರು. ಅವರ ಕೈಗುಣ, ರೋಗಿಗಳನ್ನು ಉಪಚರಿಸೋ ರೀತಿ ಚೆನ್ನಾಗಿದ್ದುದರಿಂದ ಹಾಗೂ ಉಚಿತ ಔಷಧೋಪಚಾರ ಇದ್ದದ್ರಿಂದ ರೋಗಿಗಳ ಸಂಖ್ಯೆ ಹೆಚ್ಚೇ ಇರುತ್ತಿತ್ತು. ಅವರು ಊಟ ಮಾಡಿದ ತಟ್ಟೆಯನ್ನು ನಾವು ತೊಳೆಯಬೇಕಾಗಿತ್ತು. ಹುಡುಗ ಬುದ್ಧಿ ನಮಗೆ ಇದ್ದಿದ್ದುರಿಂದ ನಾವು ಅವರ ತಟ್ಟೆ ತೊಳೆಯೋಕೆ ತುಂಬಾ ಬೇಸರ ಮಾಡ್ಕೊಂಡು ವಾರ್ಡನ್‌ಗೆ ಬಯ್ಕೊಳ್ತಾ ತಟ್ಟೆ ತೊಳೀತಾ ಇದ್ವಿ! ತೊಳಿಯೋದು ಅಂದ್ರೆ ನಲ್ಲಿಯಲ್ಲಿ ನೀರನ್ನು ರಭಸವಾಗಿ ಬೀಳುವಂತೆ ಮಾಡಿ, ಆ ನೀರಿನ ರಭಸಕ್ಕೆ ತಟ್ಟೆ ಇಡ್ತಾ ಇದ್ವಿ. ನೀರಿನ ರಭಸಕ್ಕೆ ಅದು ತೊಳೆದಂತೆ ಅದರಲ್ಲಿನ ಎಂಜೆಲೆಲ್ಲಾ ಹೋಗಿ ಅದು ತೊಳೆದಂತೆ ಆಗೋದು!

ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಅಡುಗೆ ಭಟ್ಟರ ಜೊತೆ ಊಟ ಬಡಿಸೋಕೆ ಹೋಗ್ತಾ ಇದ್ರು. ಇವರು ಒಂಥರಾ ‘ಡಾನ್’ ಮಾಡಿದಂತೆ ಮಾಡ್ತಾ ಇದ್ರು. ಇವರ ಜೊತೆ ಕ್ಲೋಸ್ ಇದ್ದವರ ಪಂಕ್ತಿಗೆ ಏನಾದ್ರೂ ಅನ್ನ ಉಳಿದರೆ ಅದನ್ನು ಹಾಕೋಕೆ ಹೋಗ್ತಾ ಇದ್ದರು. ನಮ್ಮ ಹಾಸ್ಟೆಲ್ಲಿನಲ್ಲಿ ಒಂದು ನಿಯಮ ಇತ್ತು. ಯಾರೂ ಒಂದು ಅಗುಳೂ ಚೆಲ್ಲದೇ ಊಟ ಮಾಡಬೇಕಾಗಿತ್ತು. ಒಂದೊಮ್ಮೆ ಚೆಲ್ಲಿದರೆ ಆ ಎಂಜಲನ್ನು ಅವರೇ ಬಾಚಿಕೊಂಡು ಹೋಗಿ ತೊಟ್ಟಿಯಲ್ಲಿ ಹಾಕಬೇಕಾಗಿತ್ತು. ಒಂದೊಮ್ಮೆ ಹಾಗೆ ಮಾಡದೇ ಹೋದರೆ ವಾರ್ಡನ್‌ಗಳು ಹೊಡೆಯುತ್ತಿದ್ದರು. ಅದರಲ್ಲೂ ನಮ್ಮ ವಾರ್ಡನ್ ‘ಡಿಸಿ’ ಕೈಲಿ ಸಿಕ್ಕಿಬಿದ್ರೆ ಮುಗೀತು. ‘ಆ ಎಂಜಲನ್ನು ತಿನ್ನು’ ಎಂದು ಅವರೇ ಆ ಹುಡುಗನ ಮುಖವನ್ನು ನೆಲಕ್ಕೆ ಅದುಮುತ್ತಿದ್ದರು. ‘ಅನ್ನದಲ್ಲಿ ಹುಳ ಬಿದ್ದಿದೆ’ ಎಂದು ಯಾರಾದರೂ ತೋರಿಸಲು ಹೋದರೆ ‘ತೆಗೆದು ತಿನ್ನಿ’ ಎಂದು ಹೇಳುತ್ತಿದ್ದರು. ಊಟ ಮಾಡುವಾಗ ಮಾತಾಡಿದ್ರೆ ತಲೆ ಮೇಲೆ ತಟ್ಟೆಯನ್ನಿರಿಸಿ ಊಟ ಮಾಡಲು ಹೇಳ್ತಾ ಇದ್ರು! ಈ ಸಮಸ್ಯೆ ಇದ್ದಿದ್ದು ಹಾಸ್ಟೆಲ್ಲಿನಲ್ಲಿ ಊಟ ಮಾಡುವವರಿಗೆ ಮಾತ್ರ. ನಮ್ಮದೇ ಆಶ್ರಮದಲ್ಲಿದ್ದ ಮೆಸ್ಸಿನಲ್ಲಿ ಊಟ ಮಾಡುವ ಹುಡುಗರಿಗೆ ಈ ಸಮಸ್ಯೆ ಇರಲಿಲ್ಲ. ಮೆಸ್ಸಿನ ಸೌಲಭ್ಯ ಇದ್ದಿದ್ದು ಹುಡುಗರಿಗೆ ಮಾತ್ರ. ಆದರೆ ಹುಡುಗಿಯರಿಗೆ ಈ ಮೆಸ್ಸಿನ ಊಟದ ಸೌಲಭ್ಯ ಇರಲಿಲ್ಲ. ಅದಕ್ಕೆಂದೇ ಅವರು ಬೇಕರಿ ತಿಂಡಿ ತಿನಿಸುಗಳನ್ನು ಸಾಕಷ್ಟು ತಿನ್ನುತಿದ್ದರು. ಒಮ್ಮೆ ವಾರ್ಡನ್, ಅವರ ಟ್ರಂಕುಗಳನ್ನು ಚೆಕ್ ಮಾಡಿ ಅಲ್ಲಿ ಸಿಕ್ಕಿದ್ದ ಎಲ್ಲಾ ತಿಂಡಿ ತಿನಿಸುಗಳನ್ನು ನಮಗೆ ಹಂಚಿದ್ದರು!

ಬಡತನವಿದ್ದ ಹುಡುಗರು ಹಾಸ್ಟೆಲ್ಲಿನ ಊಟಕ್ಕೆ ಬೇಸತ್ತು ಮೆಸ್ಸಿನ ಊಟದ ಅವಕಾಶಕ್ಕಾಗಿ ಕಾಯ್ತಾ ಇದ್ರು. ಈ ಅವಕಾಶ ಸಿಗ್ತಾ ಇದ್ದದ್ದು ತಿಂಗಳಿಗೆ ಒಂದು ದಿನ ಮಾತ್ರ. ಅದೂ ಆಶ್ರಮದ ಎಲ್ಲಾ ತೊಟ್ಟಿ ಕ್ಲೀನಿಂಗ್ ಮಾಡೋ ದಿನ. ಇದಕ್ಕೆಂದು ನಮಗೆ ಬ್ಯಾಚ್ ಮಾಡಿದ್ರು. ಶನಿವಾರ ಶಾಲೆ ಬಿಟ್ಟಾಗಿನಿಂದ ಹಿಡಿದು ಸಂಜೆ 5;30 ವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳದೆ ಕ್ಲೀನ್ ಮಾಡಿದರೆ ಮಾತ್ರ ಎಲ್ಲಾ ತೊಟ್ಟಿಗಳು ಕ್ಲೀನ್ ಮಾಡೋಕೆ ಸಾಧ್ಯ ಆಗ್ತಾ ಇತ್ತು. ಆ ನಂತರ ಸ್ನಾನ ಮಾಡಿ ನಮಗೆ ಸಿಕ್ಕ ಮೆಸ್ಸಿನಲ್ಲಿ ರಾತ್ರಿ ಊಟ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ತಾ ಇದ್ವಿ!! ‘ಭೂತಯ್ಯನ ಮಗ ಅಯ್ಯ’ ಫಿಲಮ್ಮಿನಲ್ಲಿ ಬರೋ ಸೀನಿನ ತರಹ ಕೆಲವರು ಸಾಕಷ್ಟು ಬಡಿಸಿಕೊಂಡು ತಿನ್ತಾ ಇದ್ರು. ನಮಗೆ ತುಂಬಾ ಖುಷಿ ಆಗ್ತಾ ಇತ್ತು. ಅಪರೂಪಕ್ಕೊಮ್ಮೆ ಅಲ್ಲಿ ಊಟ ಮಾಡ್ತಿದ್ದೆವಾದ್ದರಿಂದ ಅನ್ನ ಸಾಂಬಾರಿನ ರುಚಿ ತುಂಬಾ ಚೆಂದವೆನಿಸಿ ಹೊಟ್ಟೆ ಬಿರಿಯುವಂತೆ ತಿನ್ತಾ ಇದ್ವಿ. ‘ತಿನ್ನೋಕಿಲ್ಲದವರಿಗೆ ತಿಗವೆಲ್ಲಾ ಬಾಯಿ’ ಎಂಬ ಮಾತು ಈಗ ನೆನಪಿಸಿಕೊಂಡರೆ ನಿಜ ಎನಿಸುತ್ತೆ. ಈಗ ಎಲ್ಲಾ ಇದ್ರೂ ಮೊದಲಿನಂತೆ ತಿನ್ನೋಕೆ ಆಗೋಲ್ಲ.

ನಾನು ಎನ್.ಸಿ.ಸಿ ಯನ್ನು 9ನೇ ತರಗತಿಯಲ್ಲಿ ಸೇರಿದ್ದರಿಂದ ಪ್ರತೀ ಶನಿವಾರ ನಮಗೆ ಎನ್.ಸಿ.ಸಿ ಮಾರ್ಚ್ ಫಾಸ್ಟ್ ಇರುತ್ತಿತ್ತು. ಭಾನುವಾರ ಸಂಜೆ ಆಟಕ್ಕೆ ಅವಕಾಶ ಇರುತ್ತಿತ್ತು. ನಾವು ಬೌಂಡರಿ ಮ್ಯಾಚ್ ಕ್ರಿಕೆಟ್ ಆಡ್ತಾ ಇದ್ವಿ. ಒಮ್ಮೆ ಹೀಗೆ ಆಡ್ತಾ ಇರಬೇಕಾದ್ರೆ ನಾನು ಜೋರಾಗಿ ಎಸೆದ ರಬ್ಬರ್ ಬಾಲ್ ಚೆಂಡು ‘ಧನಂಜಯ’ ಎಂಬ ನನ್ನ ಕ್ಲಾಸ್ ಮೇಟಿನ ಪೃಷ್ಠದ ಮುಂಭಾಗಕ್ಕೆ ಬಿದ್ದು ಕಣ್ಣು ಬೆಳ್ಳಗೆ ಮಾಡಿ ಬಿದ್ದಿದ್ದ. ಆಗ ನಾನು ‘ಏನಾಯ್ತೋ? ಏನೋ?’ ಎಂದು ತುಂಬಾ ಹೆದರಿಬಿಟ್ಟಿದ್ದೆ. ಆದರೆ ಅದೃಷ್ಟವಶಾತ್ ಅವನಿಗೆ ಅಷ್ಟೇನೂ ಸಮಸ್ಯೆ ಆಗಲಿಲ್ಲ. ಅಂದಿನಿಂದ ನಾನು ರಬ್ಬರ್ ಬಾಲಿನಲ್ಲಿ ಆಡೋದನ್ನು ಬಿಟ್ಟೆ. ಲೈಟ್ ವೆಯ್ಟ್ ಟೆನ್ನಿಸ್ ಬಾಲಿನಿಂದ ಆಡಲು ಪ್ರಾರಂಭಿಸಿದೆವು. ಎಲ್ಲಾ ಭಾನುವಾರ ಹೀಗೆ ಆಡೋಕೆ ಆಗ್ತಾ ಇರಲಿಲ್ಲ. ನಮ್ಮ ಬಟ್ಟೆ ತೊಳೆದುಕೊಳ್ಳುವ ದಿನ ನಾವು ಆಡ್ತಾ ಇರಲಿಲ್ಲ. 15 ದಿನಕ್ಕೊಮ್ಮೆ ಬಟ್ಟೆ ತೊಳೆದರೆ ಮುಗೀತು. ನಮಗೆ ಆರಾಮು ಎನಿಸೋದು! ಸ್ನಾನಾನೂ ಅಷ್ಟೇ. ನೀರಿನ ನಲ್ಲಿಯ ಸಮಸ್ಯೆ ಇರುತ್ತಿದ್ದರಿಂದ 3 ದಿನಕ್ಕೊಮ್ಮೆ… ಕೆಲವರಂತೂ ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ದೆವು!! ಸ್ವಚ್ಛತೆಯನ್ನು ಅಷ್ಟಾಗಿ ಕಾಪಾಡಿಕೊಳ್ಳದಿದ್ದ ಕಾರಣ ಹಾಸ್ಟೆಲ್ ಹುಡುಗರಿಗೆ ಕೆಲವೊಮ್ಮೆ ಕಜ್ಜಿ ಶುರು ಆಗೋದು. ಈ ರೀತಿ ಕಜ್ಜಿ ಸಮಸ್ಯೆ ಬಂದವರು ಪರರಿಗೂ ಥ್ಯಾಂಕ್ಸ್ ಕೊಟ್ಟು ಕಜ್ಜಿಯನ್ನು ಹಂಚಿ ತಾವು ಭಗ್ನ ಸಂತೋಷಿಗಳಾಗುತ್ತಿದ್ದರು! ಆಗ ಒಬ್ಬರಿಂದ ಒಬ್ಬರಿಗೆ ಹರಡಿ ಇಡೀ ರೂಮು ಕಜ್ಜಿಮಯವಾಗುತ್ತಿತ್ತು! ಆಗ ನಾವು ಅದೇ ಊರಲ್ಲಿದ್ದ ಪಾಟೀಲ್ ಡಾಕ್ಟ್ರು ಹತ್ತಿರ ಹೋಗ್ತಾ ಇದ್ದೆವು. ಅವರು ಪೆನ್ಸಿಲಿನ್ ಇಂಜೆಕ್ಷನ್ ಕೊಟ್ಟು ಮೈಗೆ ಹಚ್ಚಿಕೊಳ್ಳಲು ಹಾಲಿನ ಬಣ್ಣದ ಎಂಥೆದೋ ಔಷಧಿ ಕೊಡ್ತಾ ಇದ್ದರು. ಅದರ ವಾಸನೆ ಒಂಥರಾ ಇರ್ತಾ ಇತ್ತು. ರಾತ್ರಿ ಮಲಗಬೇಕಾದ್ರೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಬೇಕಿತ್ತು. ನಮ್ಮ ಹಾಸ್ಟೆಲ್ಲಿನಲ್ಲಿ 60 ವಿದ್ಯಾರ್ಥಿಗಳಿಗೆ ಇದ್ದಿದ್ದು ಬರೀ ನಾಲ್ಕೇ ನಲ್ಲಿಯಾದ್ದರಿಂದ ಸ್ನಾನ ಮಾಡೋಕೆ ಕಾಂಪಿಟೇಷನ್ ಆಗುತ್ತೆ ಅಂದ್ಕೊಂಡು ಕೆಲವರು ನಾಲ್ಕು ಘಂಟೆಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದರು. ನನಗೂ ಇದೇ ಪರಿಸ್ಥಿತಿ ಬಂದಾಗ ಸ್ನಾನ ಮಾಡೋಕೆ ‘ನಲ್ಲಿ’ ಸಿಗದೇ ಗೋಶಾಲೆ ಯಲ್ಲಿ ಹಸುಗಳು ಕುಡಿಯೋಕೆ ಅಂತಾ ಮಾಡಿದ್ದ ತೊಟ್ಟಿ ನೀರಲ್ಲಿ ಸ್ನಾನ ಮಾಡಿದ್ದೆ!! ಆಗ ನನಗೆ ಅನಿಸ್ತಿದ್ದುದು ಇನ್ನು ಮುಂದಾದ್ರೂ ಕ್ಲೀನಾಗಿ ಇರಬೇಕು ಅಂತಾ. ಆದರೆ ಕಜ್ಜಿ ವಾಸಿ ಆದ್ಮೇಲೆ ಮತ್ತೆ ಯಥಾ ಪ್ರಕಾರ ಇರ್ತಿದ್ದೆ!

ಈಗಿನ ಯಾವುದೇ ಹಾಸ್ಟೆಲ್ ನಲ್ಲಿ ಬಹುಷಃ ನಾವು ಅನುಭವಿಸಿದ್ದ ಈ ಸ್ಥಿತಿ ಇರುವುದಿಲ್ಲವೇನೋ. ಆ ಸಮಯದಲ್ಲಿ ನಾವು ಹಾಸ್ಟೆಲ್ಲಿನ ಬಗ್ಗೆ ಗೊಣಗಿಕೊಳ್ಳುತ್ತಾ ಇದ್ದುದ್ದುಂಟು. ಆದರೆ ಈಗ ನನಗೆ ನಮ್ಮ ಹಾಸ್ಟೆಲ್ಲಿನ ಬಗ್ಗೆ ಯಾವುದೇ ಬೇಸರ ಇಲ್ಲ. ಅದು ನಮಗೆ ಅರಿವಿಗೆ ಬರದೇ ಎಷ್ಟೊಂದನ್ನು ಕಲಿಸಿತು ಎಂದು ನಮಗೆ ನಮ್ಮ ಹಾಸ್ಟೆಲ್ಲಿನ ಬಗ್ಗೆ ಹೆಮ್ಮೆ ಮೂಡುತ್ತೆ. ಯಾವಾಗಲಾದರೂ ನಮ್ಮ ಹಾಸ್ಟೆಲನ್ನು ನೋಡಲು ಹೋದಾಗ ಅದೂ ಸಹ ಕಾಲದ ಚಕ್ರಕ್ಕೆ ಸಿಕ್ಕು ಬದಲಾಗಿದೆ ಎಂದು ಅದರ ಹೊರ ವಾತಾವರಣವನ್ನು ನೋಡಿ ತಿಳಿಯುತ್ತದೆ. ವಾರ್ಡನ್‌ಗಳೂ ಬದಲಾಗಿದ್ದಾರೆ. ‘ಕಾಲಾಯ ತಸ್ಮೈ ನಮಃ’ ‘ಬದಲಾವಣೆ ಜಗದ ನಿಯಮ’ ಎಂದುಕೊಂಡು, ಹಳೇ ಹಾಸ್ಟೆಲ್ ಕಲ್ಪಿಸಿಕೊಂಡು ವಾಪಾಸ್ಸಾಗುತ್ತೇನೆ. ನಮಗೆ ಜೀವನದಲ್ಲಿ ಬಂದಂತಹ ಕಷ್ಟ ಎದುರಿಸುವುದನ್ನು ಕಲಿತಿದ್ದು ಇದೇ ಹಾಸ್ಟೆಲ್ ಜೀವನ. ಸಾಮಾಜಿಕ ಹೊಂದಾಣಿಕೆ, ನೀರು ಮತ್ತು ಅನ್ನದ ಮಹತ್ವದ ಅರಿವನ್ನು ಇದು ಅಂದೇ ಮೂಡಿಸಿತ್ತು.ಇಂದೂ ಸಹ ಅನ್ನ,ನೀರು ಯಾವುದಾದರೂ ಫಂಕ್ಷನ್ ನಲ್ಲಿ ವೇಸ್ಟ್ ಆಗ್ತಾ ಇದೆ ಅಂದ್ರೆ ಮನಸ್ಸಿಗೆ ತುಂಬಾ ಬೇಸರವಾಗುತ್ತೆ. ‘ಹಸಿದವರು ಬಹಳ ಮಂದಿ ಇದ್ದಾರೆ. ದಯಮಾಡಿ ಅನ್ನ ಚೆಲ್ಲಬೇಡಿ’ ಎಂಬ ಫಲಕದಡಿಯಲ್ಲಿಯೇ ಅನ್ನ ವ್ಯರ್ಥ ಮಾಡುತ್ತಿರುವವರನ್ನು ನೋಡಿ ಮನದಲ್ಲಿ ಸಿಟ್ಟು ಮೂಡಿಸಿಕೊಂಡು ಅವರಿಗೆ ಹೇಳಿದರೆ ಎಲ್ಲಿ ನಮ್ಮ ಜೊತೆ ಜಗಳಕ್ಕೆ ಬರುತ್ತಾರೋ ಎಂದುಕೊಂಡು ಅಸಹಾಯಕನಾಗಿ ನಾನು ಮುಂದೆ ಸಾಗುತ್ತೇನೆ.