ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಈಗ ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ? ತನ್ನ ಪ್ರಾಣವನ್ನೇ ನಿಯಂತ್ರಣ ಮಾಡಲಾಗದ ನಾನು ಈಕೆಯನ್ನೇಕೆ ನಿಯಂತ್ರಿಸಬೇಕು ಅನಿಸುತ್ತಿರಲಿಲ್ಲವಾ?
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”
ಒಮ್ಮೊಮ್ಮೆ ನಾವು ಚಂದವಾಗಿ ತಯಾರಾಗಿ ಹೊರಗೆ ಹೊರಡಬೇಕು ಅನ್ನುವ ಹೊತ್ತಿಗೆ ಸರಿಯಾಗಿ ಧೋ ಎಂದು ಮಳೆ ಸುರಿಯುತ್ತದೆ. ಮಳೆಯನ್ನು ಬೈಯಬಹುದೆ ಹೊರತು ಅದನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸಲು ಸಾಧ್ಯವೇ? ರಾತ್ರಿಯೆಲ್ಲಾ ನಿದ್ದೆಗೆಟ್ಟು ಎಲ್ಲವನ್ನೂ ತಯಾರು ಮಾಡಿಕೊಂಡು ಹಪ್ಪಳ, ಸಂಡಿಗೆ ಮಾಡಿ ಮಹಡಿಯ ಮೇಲೆ ಒಣಗಲು ಬಿಟ್ಟ ದಿನವೇ ಬಿಸಿಲು ಇಣುಕುವುದಿಲ್ಲ. ಸೂರ್ಯನನ್ನೂ ಮೋಡದಿಂದ ಆಚೆಗೆಳೆದು ಬಿಸಿಲು ಚಲ್ಲುವಂತೆ ಮಾಡಲು ನಮ್ಮಿಂದ ಸಾಧ್ಯವೇ? ರೈತ ಭೂಮಿಯನ್ನು ಹದವಾಗಿ ಉತ್ತು, ಬೀಜ ಬಿತ್ತಿ ಮಳೆಗಾಗಿ ನಿರೀಕ್ಷಿಸುವ ಹೊತ್ತಿಗೆ ಮಳೆ ಮುನಿಸಿಕೊಂಡು ತಿಂಗಳುಗಟ್ಟಲೆ ಮಾತು ಬಿಟ್ಟು ಮರೆಯಾಗಿಬಿಡುತ್ತದೆ. ರೈತ ಕೂತಲ್ಲಿಂದಲೇ ಶಪಿಸಬಹುದೆ ಹೊರತು ಕೂತ ಜಾಗದಲ್ಲಿಂದ ಮಳೆ ಬರುವಂತೆ ಮಾಡಲು ಸಾಧ್ಯವೇ?
ಹಾಗಾದರೆ ಚಂದ್ರನನ್ನೂ ಮುಟ್ಟಿ ಬಂದ ಮನುಷ್ಯ, ತಾನಿರುವ ಜಾಗದಿಂದಲೇ ಸೌರಮಂಡಲದಲ್ಲಾಗುತ್ತಿರುವ ಪ್ರತಿ ಗ್ರಹಗಳ ಚಲನವಲನವನ್ನು ನೋಡಬಲ್ಲ ಮನುಷ್ಯ ಅವುಗಳು ಸುತ್ತುವ ದಿಕ್ಕನ್ನಾಗಲಿ, ವೇಗವನ್ನಾಗಲಿ ಬದಲಿಸಲು ಸಾಧ್ಯವೇ? ಮಕ್ಕಳು ಆಡುವ ಬೊಂಬೆಯಿಂದ ಹಿಡಿದು ಮನೆಗೆಲಸವನ್ನು ಮಾಡಬಲ್ಲ ರೋಬೋಗಳವರೆಗೂ ತಯಾರಿಸಬಲ್ಲ ಮನುಷ್ಯ ಇಂದಿಗೂ ಪ್ರಕೃತಿಯ ಯಾವ ಅಂಶವನ್ನಾದ್ರೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆಯೇ?
ನಿಯಂತ್ರಣ ಅನ್ನುವುದೇ ಹಾಗೆ. ನಾವು ನಮಗೆ ಅರಿವಿಲ್ಲದೆ ನಮ್ಮ ಸುತ್ತಲೂ ಇರುವ, ಬರುವ ಪ್ರತಿಯೊಂದನ್ನು ಪ್ರತಿಯೊಬ್ಬರನ್ನೂ ನಿಯಂತ್ರಿಸಲು ಹೆಣಗಾಡುತ್ತಲೇ ನಮ್ಮೆಲ್ಲಾ ಸಮಯ, ಶಕ್ತಿಗಳನ್ನ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಅಪ್ಪ ಅಮ್ಮನನ್ನ, ಅಮ್ಮ ಮಕ್ಕಳನ್ನ ಮತ್ತು ಮಕ್ಕಳು ಸ್ನೇಹಿತರನ್ನ ನಿಯಂತ್ರಿಸುವ ಹರಸಾಹಸದಲ್ಲಿ ಕಳೆದು ಹೋಗಿದ್ದೇವೆ.
ನಿಜಕ್ಕೂ ಅದು ಸಾಧ್ಯವೇ?
ಅದೊಂದು ದಿನ ಬೆಳಿಗ್ಗೆ ಐದು ಗಂಟೆ ಹೊತ್ತಿಗೆ ವಾಕಿಂಗ್ ಹೋಗಲೆಂದು ಎದ್ದು ತಯಾರಾದೆ. ಅಷ್ಟರಲ್ಲಿ ತುಂತುರು ಮಳೆ ಶುರುವಾಗಿಬಿಟ್ಟಿತು. ಅದನ್ನು ನಿಲ್ಲಿಸಲು ನನ್ನಿಂದ ಸಾಧ್ಯವೇ? ಒಂದು ಮಳೆಯಲ್ಲೇ ವಾಕಿಂಗ್ ಹೋಗಬೇಕು ಇಲ್ಲ ನಿಲ್ಲುವವರೆಗೂ ಕಾಯಬೇಕು ಅಥವಾ ವಾಕಿಂಗ್ ಹೋಗುವುದನ್ನು ಬಿಟ್ಟು ಬೇರೆ ಏನಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆದ್ದರಿಂದ ಮೂರನೇಯದನ್ನೇ ಆರಿಸಿಕೊಂಡು ಗುರುರಾಜ್ ಕರಜಗಿಯವರ “ಕರುಣಾಳು ಬಾ ಬೆಳಕೆ” ಪುಸ್ತಕ ಹಿಡಿದು ಕುಳಿತೆ. ಅದರಲ್ಲೊಂದು ಕತೆ ನನ್ನನ್ನ ತುಂಬಾ ಚಿಂತೆಗೀಡು ಮಾಡಿಬಿಟ್ಟಿತ್ತು. ಅದರ ಶೀರ್ಷಿಕೆ “ಪ್ರೀತಿಯನ್ನು ಇಂದೇ ಹಂಚಿಕೊಳ್ಳಿ” ಎಂದು. ಅದರಲ್ಲಿ ಕೆಲಸಕ್ಕೆ ಹೋದ ಮಗನೊಬ್ಬ ತಾಯಿಗೆ ಕರೆ ಮಾಡಿ “ನಾನು ಬರುವುದು ತಡವಾಗುತ್ತದೆ ನೀನು ಊಟ ಮಾಡಿ ಮಲಗಮ್ಮ ಎನ್ನುತ್ತಾ ಮತ್ತೆ ಮಾತು ಮುಂದುವರೆಸಿ ನಿನ್ನಂತ ಅಮ್ಮನನ್ನು ಪಡೆಯಲು ಪುಣ್ಯ ಮಾಡಿದ್ದೆ ಅಮ್ಮ” ಎಂದು ಹೇಳಿ ತಾಯಿಯ ಉತ್ತರವನ್ನು ಕೇಳಿಸಿಕೊಳ್ಳದೆ ಫೋನ್ ಕಟ್ ಮಾಡಿಬಿಡುತ್ತಾನೆ. ಅಮ್ಮನೂ “ನಿನ್ನಂತ ಮಗನನ್ನ ಪಡೆಯಲು ಪುಣ್ಯ ಮಾಡಿದ್ದೆ ಕಂದ” ಅನ್ನಬೇಕು ಅಂದುಕೊಂಡರು ಸಾಧ್ಯವಾಗುವುದಿಲ್ಲ. ಮರುದಿನ ಆಕ್ಸಿಡೆಂಟ್‌ನಲ್ಲಿ ಮೃತವಾದ ಮಗನ ದೇಹ ಮನೆಗೆ ಬರುತ್ತದೆ. ಮಗ ಹೇಳಿದ ಆ ಕೊನೆ ಮಾತಲ್ಲೇ ತಾಯಿ ಇಡೀ ಬದುಕ ಬದುಕುತ್ತಾಳೆ, ಹೇಳಲಾಗದ ತನ್ನಲ್ಲೇ ಉಳಿದು ಹೋದ ಮಾತನ್ನು ಬದುಕಿರುವವರೆಗೂ ಭಾರದಂತೆ ಹೊರುತ್ತಾಳೆ.
ಆದ್ದರಿಂದ ನಮ್ಮ ಪ್ರೀತಿ ಪಾತ್ರರಿಗೆ ಏನು ಹೇಳದಿದ್ದರೂ ಸರಿ ಪ್ರೀತಿಯನ್ನು ಹೇಳಲು ತಡ ಮಾಡಬೇಡಿ, ಮುಂದೂಡಬೇಡಿ ಅನ್ನುವ ಸಂದೇಶವೊಂದನ್ನು ಗುರುರಾಜ್ ಕರ್ಜಗಿ ಅವರು ಹೃದಯ ಸ್ಪರ್ಶಿಸುವಂತೆ ಬರೆದಿದ್ದಾರೆ.
ಓದುತ್ತಾ ಓದುತ್ತಾ ನನಗೆ ತಿಳಿಯದಂತೆ ಕಣ್ಣೀರು ಮೌನವಾಗಿ ಜಾರತೊಡಗಿತ್ತು. ಹೊಟ್ಟೆಯ ಕೆಳಭಾಗದಲ್ಲೊಂದು ಸಂಕಟ ಆವರಿಸಿಕೊಂಡಿತ್ತು.
ಸದಾ ಗಂಡನನ್ನು ಮಕ್ಕಳನ್ನು ಪ್ರೀತಿಸುವುದಕ್ಕಿಂತ ಹೆಚ್ಚು ನಿಯಂತ್ರಿಸುವುದರಲ್ಲೇ ಮಗ್ನಳಾಗಿರುವ ನನಗೆ ಇದ್ದಕ್ಕಿದ್ದ ಹಾಗೆ ಭಯಾನಕ ಗಾಬರಿಯೊಂದು ಬಂದು ಬೆನ್ನೇರಿ ಕೂತು ಸವಾರಿ ಮಾಡಲು ಆರಂಭಿಸಿಬಿಟ್ಟಿತ್ತು.
ಕಳೆದ ವಾರ ನನ್ನ ಸ್ನೇಹಿತೆಯೊಬ್ಬಳ ಸೋದರತ್ತೆ ಗಂಡ ತೀರಿಕೊಂಡರು. ನನ್ನ ಸ್ನೇಹಿತೆ ಒಂದೆರಡು ದಿನಗಳು ಆ ಗುಂಗಿನಿಂದ ಹೊರ ಬರಲೇ ಇಲ್ಲ. ಅವರ ಬಗ್ಗೆ ಏನಾದರೊಂದು ಹೇಳುತ್ತಲೇ ಇರುತ್ತಿದ್ದಳು. ಆಗ ಅವಳ ಸಮಾಧಾನಕ್ಕೆ ಅದನ್ನೆಲ್ಲಾ ಕೇಳಿಸಿಕೊಂಡಿದ್ದೆ. ಆದರೆ ಅದೆಲ್ಲವೂ ಈಗ ನನ್ನನ್ನ ಕಾಡಲು ಆರಂಭಿಸಿಬಿಟ್ಟವು. ಕಣ್ಮುಚ್ಚಿ ಕುಳಿತ ನನಗೆ ಸ್ನೇಹಿತೆ ಹೇಳಿದ್ದ ಪ್ರತಿ ಮಾತು ಚಿತ್ರಗಳಾಗಿ ಹರಿದಾಡಲು ಶುರುಮಾಡಿತ್ತು.
ಅವಳ ಮಾವನಿಗೆ ಹೆಂಡತಿ ಅಂದರೆ ಅತಿಯಾದ ಪ್ರೀತಿಯಂತೆ. ಉಸಿರುಗಟ್ಟಿಸುವಷ್ಟು. ಆಕೆ ಎಲ್ಲಿಗೆ ಹೋಗಬೇಕಾದರೂ ಈತನ ಅಪ್ಪಣೆ ಪಡೆದೆ ಹೋಗಬೇಕು. ಎಲ್ಲಾದಕ್ಕೂ ಅಪ್ಪಣೆಯೇನು ಸಿಕ್ಕಿಬಿಡುತ್ತಿರಲಿಲ್ಲವಂತೆ. ಹತ್ತರಲ್ಲಿ ಒಂದಕ್ಕೆ ಮಾತ್ರ ಆತ ಒಪ್ಪುತ್ತಿದ್ದದ್ದು. ಆಕೆ ತನ್ನ ತವರು ಮನೆಗೆ ಹೋಗಬೇಕಾದರೂ ಪತಿಯನ್ನ ಕೇಳಿಯೇ ಹೋಗಬೇಕಿತ್ತಂತೆ. ಅದರಲ್ಲೊಂದಷ್ಟು ಶರತ್ತಿನ ಮೇಲೆ. ಬೆಳಿಗ್ಗೆ ಹೋದರೆ ಸಂಜೆ ವಾಪಾಸ್ ಬರಲೇ ಬೇಕಿತ್ತು. ತವರು ಮನೆಯಲ್ಲೂ ಒಂದು ದಿನ ಉಳಿದುಕೊಳ್ಳುವಂತಿರಲಿಲ್ಲ.
ಈತ ಹೇಳಿದಂತೆ ಬಟ್ಟೆ ತೊಡಬೇಕು, ತುಂಬು ತೋಳಿನ ರವಿಕೆ, ಹಣೆ ತುಂಬಾ ಕುಂಕುಮ, ದಿನನಿತ್ಯ ಹೂ ಮುಡಿದು ನೋಡಿದವರಿಗೆ ಸಾಕ್ಷಾತ್ ಗೌರಿ ತಾಯಿಯಂತೆ ಮುತ್ತೈದೆಯಾಗಿ ಕಂಗೊಳಿಸುತ್ತಿರಬೇಕು, ಆಕೆ ತನ್ನ ಇಷ್ಟದಂತೆ ಏನೂ ಮಾಡುವಂತಿರಲಿಲ್ಲ. ಆಕೆಯ ಪ್ರತಿ ಹೆಜ್ಜೆಯು ಈತನ ನಿಯಂತ್ರಣದಲ್ಲಿತ್ತು. ಹೇಗೋ ಗಂಡನ ಆ ವರ್ತನೆಯನ್ನೇ ಅತಿಯಾದ ಪ್ರೀತಿ ಅಂದುಕೊಂಡು ಅದರಲ್ಲೇ ಇಡೀ ಲೋಕವನ್ನ ಕಾಣುತ್ತ ಬದುಕುತ್ತಿದ್ದರಂತೆ ನನ್ನ ಸ್ನೇಹಿತೆಯ ಅತ್ತೆ.
ಚಂದ್ರನನ್ನೂ ಮುಟ್ಟಿ ಬಂದ ಮನುಷ್ಯ, ತಾನಿರುವ ಜಾಗದಿಂದಲೇ ಸೌರಮಂಡಲದಲ್ಲಾಗುತ್ತಿರುವ ಪ್ರತಿ ಗ್ರಹಗಳ ಚಲನವಲನವನ್ನು ನೋಡಬಲ್ಲ ಮನುಷ್ಯ ಅವುಗಳು ಸುತ್ತುವ ದಿಕ್ಕನ್ನಾಗಲಿ, ವೇಗವನ್ನಾಗಲಿ ಬದಲಿಸಲು ಸಾಧ್ಯವೇ? ಮಕ್ಕಳು ಆಡುವ ಬೊಂಬೆಯಿಂದ ಹಿಡಿದು ಮನೆಗೆಲಸವನ್ನು ಮಾಡಬಲ್ಲ ರೋಬೋಗಳವರೆಗೂ ತಯಾರಿಸಬಲ್ಲ ಮನುಷ್ಯ ಇಂದಿಗೂ ಪ್ರಕೃತಿಯ ಯಾವ ಅಂಶವನ್ನಾದ್ರೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆಯೇ?
ಕಳೆದ ವಾರ ಇವಳ ಮಾವ ಬೆಳಿಗ್ಗೆ ತಿಂಡಿ ತಿಂದ ಮೇಲೆ ಯಾಕೋ ಹೊಟ್ಟೆ ನೋಯುತ್ತಿದೆ ಬಯಲಿನ ಕಡೆ ಶೌಚ ಮಾಡಿ ಬರುವುದಾಗಿ ಹೇಳಿ ಬೆಳಿಗ್ಗೆ 9:30 ರ ಹೊತ್ತಿಗೆ ಹೋದವರು ಮಧ್ಯಾಹ್ನ 2:30 ಆದರೂ ಮನೆಗೆ ಹಿಂದಿರುಗದೆ ಇದ್ದಾಗ ಹೆಂಡತಿ ಮತ್ತು ಮಗಳು ಗಾಬರಿಯಿಂದ ಎಲ್ಲಾ ಕಡೆ ಹುಡುಕಿ ಕೊನೆಗೆ ಬಯಲಲ್ಲೂ ಒಮ್ಮೆ ನೋಡಿಬಿಡುವ ಎಂದು ಹೋದರೆ ಆ ರಣ ಬಿಸಿಲಲ್ಲಿ ಆತ ಅನಾಥ ಹೆಣವಾಗಿ ಒಣಗುತ್ತಾ ಬಿದ್ದಿದ್ದರಂತೆ. ಶೌಚ ಮಾಡುವಾಗಲೇ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡಿದ್ದಾರೆ.
ನಂತರ ಊರ ಜನರೆಲ್ಲಾ ಸೇರಿ ಹೆಣವನ್ನು ಮನೆಗೆ ಸಾಗಿಸುವಷ್ಟರಲ್ಲಿ ಸಂಜೆ 5 ಗಂಟೆಯಾಗಿತ್ತಂತೆ. ಮಾರನೇ ದಿವಸ ಅಂತ್ಯ ಸಂಸ್ಕಾರ ಮುಗಿಸುವ ಹೊತ್ತಿಗೆ ಕಡ್ಡಿಯಂತಿದ್ದ ಆತನ ದೇಹ ಊದಿಕೊಂಡು ಗುರುತು ಸಿಗದಷ್ಟು ವಿಕಾರವಾಗಿ ವಾಸನೆ ಬರಲು ಶುರುವಾಗಿತ್ತಂತೆ.
ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಹಣೆ ಮೇಲೆ ಕುಂಕುಮವಿಲ್ಲ, ಮುಡಿಗೆ ಮಲ್ಲಿಗೆಯ ಮಾತಿಲ್ಲ, ಕೈಗಳಿಗೆ ಬಳೆಯ ಹಂಗಿಲ್ಲ, ಕಾಲುಂಗುರಗಳೂ ಇಲ್ಲ. ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ? ತನ್ನ ಪ್ರಾಣವನ್ನೇ ನಿಯಂತ್ರಣ ಮಾಡಲಾಗದ ನಾನು ಈಕೆಯನ್ನೇಕೆ ನಿಯಂತ್ರಿಸಬೇಕು ಅನಿಸುತ್ತಿರಲಿಲ್ಲವಾ?
ಈ ಘಟನೆ ಚಿತ್ರಣವಾಗಿ ನನ್ನ ತಲೆಯನ್ನ ಸಂಪೂರ್ಣವಾಗಿ ಆವರಿಸಿಕೊಂಡು ವಾರಗಟ್ಟಲೆ ವಿಚಿತ್ರವಾಗಿ ಕಾಡಿದ್ದು ಸುಳ್ಳಲ್ಲ. ನಿಯಂತ್ರಿಸಲು ಹೋಗಿ ಎಷ್ಟು ಜನರನ್ನ ದೂರ ಮಾಡಿಕೊಂಡೆ ಅನ್ನುವ ಅರಿವಿನ ಸಾಕ್ಷಾತ್ಕಾರವೊಂದು ಎದ್ದೆದ್ದು ಕುಣಿಯಲಾರಂಭಿಸಿಬಿಟ್ಟಿತ್ತು. ಪ್ರಾಣ ಸ್ನೇಹಿತರನ್ನ ಕಳೆದುಕೊಂಡದ್ದು ನೆನಪಾಗಿ ಅದೆಷ್ಟು ಪಾಪಪ್ರಜ್ಞೆ ಕಾಡಲು ಆರಂಭವಾಗಿತ್ತು. ತಕ್ಷಣ ಕರೆ ಮಾಡಿ ಮಾತಾಡಲು ಮುಖವಿಲ್ಲದ ನಾನು sorry ಸಾಧ್ಯ ಆದ್ರೆ ಕ್ಷಮಿಸಿ ಎಂದಷ್ಟೇ ಟೈಪಿಸಿ ಸಂದೇಶ ಕಳಿಸಿಬಿಟ್ಟೆ. ಅವರೆಲ್ಲರು ಕ್ಷಮಿಸಿರಬಹುದು… ಆದರೆ ನನ್ನ ನಿಯಂತ್ರಣಕ್ಕೆ ಹೆದರಿ ಹತ್ತಿರ ಬರಲು ಹಿಂಜರಿಯುತ್ತಿರಬಹುದು.
ನಮ್ಮ ಈ ಪುಟ್ಟ ಪಯಣದಲ್ಲಿ ಒಬ್ಬರನ್ನ ಮತ್ತೊಬ್ಬರು ಮುಷ್ಠಿಯಲ್ಲಿಡಲು ಹೋದಾಗ ಇದ್ದ ಕಿಂಚಿತ್ ನೆಮ್ಮದಿಗೂ ಕೊಡಲಿ ಬೀಳಬಹುದಲ್ಲವ? ಅಕಸ್ಮಾತ್ ನಾವು ಭೂಮಿ ಬಿಟ್ಟು ಹೊರಟು ಬಿಟ್ಟರೆ ನಮ್ಮವರ ಬಳಿಯಲ್ಲಿ ನಮ್ಮನ್ನು ನೆನೆಸಿಕೊಂಡು ಕಣ್ಣೀರಿಡಲು ಒಂದೊಳ್ಳೆ ನೆನಪಾದರೂ ಬೇಡವಾ?
ನಾವು ಇನ್ನೊಬ್ಬರ ಮನಸ್ಸನ್ನು ನಿಜಕ್ಕೂ ನಿಯಂತ್ರಿಸಬಹುದ? ಒಬ್ಬರ ದೇಹವನ್ನ ಮಾತ್ರ ನಿಯಂತ್ರಿಸಿ ಅವರ ಮನಸ್ಸು, ಯೋಚನೆ, ಗುರಿ ಎಲ್ಲವನ್ನು ನನ್ನ ಸುಪರ್ದಿಗೆ ತೆಗೆದುಕೊಂಡೆವೆಂದು ಜೀವನ ಸಾಗಿಸಿಬಿಡುತ್ತಿದ್ದೇವ? ಹಕ್ಕಿಯನ್ನು ಪಂಜರದಲ್ಲಿಟ್ಟು ಅದೆಷ್ಟೇ ಪೋಷಣೆ ಮಾಡಿದರು, ಪ್ರೀತಿ ಮಾಡಿದರೂ ಸ್ವಲ್ಪ ಅವಕಾಶ ಸಿಕ್ಕರು ಸಾಕು ಕೈಗೆ ಸಿಗದಷ್ಟು, ನಾವು ತಲುಪಲಾಗದಷ್ಟು ಎತ್ತರಕ್ಕೆ ಹಾರಿಬಿಡುವುದಿಲ್ಲವೇ ಅದು? ಇನ್ನು ಮನುಷ್ಯ?
ಯಾರು ಯಾರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಅನ್ನುವುದೊಂದೇ ಪರಮ ಸತ್ಯವೆಂದು ತಿಳಿದಿದ್ದರೂ ನಮ್ಮ ಸ್ವಂತ ಆಲೋಚನೆ, ಗುರಿ, ಭಾವನೆಗಳನ್ನ ಬಿಟ್ಟು ಇನ್ನೊಬ್ಬರ ಮುಂದಿನ ಹೆಜ್ಜೆಯನ್ನು ನಮಗೆ ಬೇಕಾದ ದಿಕ್ಕಿಗೆ ತಿರುಗಿಸಲು ಇಡೀ ಆಯಸ್ಸನ್ನೇ ಕಳೆವುದು ಒಂದು ಬಗೆಯ ಮಜವೋ ಅಥವಾ ಕಾಯಿಲೆಯೋ ಎಂಬುದಕ್ಕೆ ಉತ್ತರ ಇಂದಿಗೂ ಸಿಕ್ಕಿಲ್ಲ..
ಮಾಲತಿ ಶಶಿಧರ್ ಚಾಮರಾಜನಗರದವರು. ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು
ಮಾಲತಿ ಮೇಡಮ್, ಇದು ನಮ್ಮೆಲ್ಲರ ಕಣ್ಣು ತೆರೆಸುವ ಲೇಖನ ????????