ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ. ನೀರ ರಾಶಿಯ ಬಳಿಯೇ ಸಾಗದವ, ಸಲೀಸಾಗಿ ಈಜುತ್ತಾನೆ. ಅಸಂಖ್ಯ ಚಿತ್ರಗಳ ಬಿಡಿಸುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ನಿರ್ದೇಶನದ ’02’ ಸಿನಿಮಾದ ವಿಶ್ಲೇಷಣೆ

ನಿದ್ದೆಯೆಂಬುದು ಸಣ್ಣ ಮರಣ
ಮರಣವೆಂಬುದು ದೊಡ್ಡ ನಿದ್ದೆ

ಬದುಕೆಂಬುದು ಬಸ್ಸಿನ ಪಯಣ. ಕೆಲವರಿಗೆ ಆರಂಭದಲ್ಲಿಯೇ ನಿಲ್ದಾಣ ದೊರಕಿದರೆ, ಇನ್ನೂ ಕೆಲವರಿಗೆ ಅಲ್ಲೆಲ್ಲೋ ಮಧ್ಯದಲ್ಲಿ, ಮತ್ತೆ ಕೆಲವರಿಗೆ ದೀರ್ಘ ಯಾನ. ಇಲ್ಲಿ ಹತ್ತುವುದು ಆಕಸ್ಮಿಕವಾದರೂ ಇಳಿಯುವುದು ಅನಿವಾರ್ಯ, ನಿಶ್ಚಿತ. ಮುಂಜಾವು ಏಳುತ್ತಿದ್ದಂತೆಯೇ ಚಂದಿರ ಕಣ್ಮುಚ್ಚುವಂತೆಯೇ, ಜಾತ್ರೆ ಮುಗಿಯುತ್ತಿದ್ದಂತೆಯೇ ತೇರು ತೆರೆ ಮರೆಗೆ ಸರಿಯುವಂತೆಯೇ, ನಾಟಕ ಮುಗಿದ ನಂತರ ಅಂಕದ ಪರದೆ ಬೀಳುವಂತೆಯೇ ಉಸಿರು ಮಲಗುವುದೊಂದು ದಿನ. ಆದರೆ, ಇಲ್ಲಿ ದೇಹ ಬೂದಿಯಾಗಬಹುದು, ಮಣ್ಣಿನೊಂದಿಗೆ ಮಿಲನಗೊಳ್ಳಬಹುದು. ದೇಹಕ್ಕಷ್ಟೇ ಅಳಿವು. ಆತ್ಮ ಸದಾ ಚಿರಂತನ. ಅದು ದ್ರವ್ಯದಂತೆ. ತನ್ನ ಗುಣ ಲಕ್ಷಣಗಳು ಬದಲಾಗದೇ, ಹೊಸ ಆಕೃತಿಯ ರೂಪ ತಳೆಯುತ್ತದೆ. ಪಾತ್ರೆಯಲ್ಲಿದ್ದ ನೀರು ಲೋಟ ಸೇರುವ ಪರಿಯಂತೆಯೇ. ಇದು ಆಧ್ಯಾತ್ಮಿಕ ಕಲ್ಪನೆಯಾದರೆ, ವೈದ್ಯಕೀಯ ವಿಜ್ಞಾನದಲ್ಲಿ ಈ ಸಿದ್ಧಾಂತಕ್ಕೆ ಬೆಂಬಲವಿಲ್ಲ. ಹುಟ್ಟಿನಿಂದ ಮರಣ ಈ ನಡುವಿನ ದೇಹದ ಭಾವವಷ್ಟೇ ವಿಜ್ಞಾನಕ್ಕೆ ಪರಿಗಣನೆ. ಉಳಿದೆಲ್ಲವುಗಳಿಗೂ ಪ್ರವೇಶ ನಿಷಿದ್ಧ. ಆದರೆ ದೇಹವೊಂದು ಶಾಶ್ವತ ನಿದ್ದೆಗೆ ಜಾರಿದಾಗ ದೇಹದ ತೂಕದಲ್ಲಾಗುವ ಹಠಾತ್ 21 ಗ್ರಾಂ ಕುಸಿತಗೊಳ್ಳುವಿಕೆಯ ಬಗ್ಗೆ ಈ ವಿಜ್ಞಾನದಲ್ಲಿ ನಿಖರ ಉತ್ತರಗಳಿಲ್ಲ. ಅದೇ ಆತ್ಮದ ಇರುವಿಕೆಯ ಇಶಾರೆ ಎಂಬುದು ತಾತ್ವಿಕರ ಚಿಂತನೆ. ಈ ದೇಹ, ಆತ್ಮ, ಬದುಕು, ಮರಣ ಎಲ್ಲವನ್ನೂ ವೈದ್ಯಕೀಯ ವಿಜ್ಞಾನ ಮತ್ತು ಅಧ್ಯಾತ್ಮದ ವಾಹನದಲ್ಲಿ ಕುಳ್ಳಿರಿಸಿ ಹೊತ್ತೊಯ್ದು, ನಿನ್ನ ದಾರಿ ಎಲ್ಲಿ ಶುರು, ಎಲ್ಲಿ ಕೊನೆ, ಉತ್ತರವ ನೀ ಹುಡುಕು ಎಂದು ಚಿಂತನೆಯ ಚಕ್ರವ್ಯೂಹಕ್ಕೆ ರಹದಾರಿಯ ತೋರಿಸುವ ಚಿತ್ರವೇ ‘O2’.

O2 ಎಂದರೆ ಆಮ್ಲಜನಕ. ದೇಹ ದುಡಿಯಲು ಈ ಗಾಳಿಯೊಂದಿಗಿನ ಸಂಸಾರ ಅವಶ್ಯ. ಬಹುತೇಕ ಸಂದರ್ಭಗಳಲ್ಲಿ, ಇಲ್ಲಿ ಸಂಭವಿಸುವ ವಿಚ್ಛೇದನ ನಿಲುಕದೇ ಉಳಿವ ರಹಸ್ಯ. ಹಾಗಾದರೆ, ಮರಣವನ್ನು ಟ್ರಾಫಿಕ್ ಪೋಲಿಸು ವಾಹನಗಳ ನಿಲ್ಲಿಸಿದಂತೆ ನಿಲ್ಲಿಸಬಹುದೇ? ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದಂತೆ ಮುಂದೂಡಬಹುದೇ? ಕಲಿಯುಗದ ಈ ಕಾಲದಲ್ಲಿ ಸತ್ಯವಾನ್ ಸಾವಿತ್ರಿಯಂತಹ ಉಲ್ಲೇಖಗಳು ಮತ್ತೆ ಘಟಿಸಬಹುದೇ? ಇವೆಲ್ಲಾ ಕುತೂಹಲಗಳಿಗೆ ಕಂದೀಲು ಹುಡುಕುವ ಕೆಲಸವ ಮಾಡುವವಳೇ ವೈದ್ಯೆ ಶ್ರದ್ಧಾ. ಕಿರಿಯ ವಯಸ್ಸಿನಲ್ಲಿ, ಅಪಾರ ಹಿರಿಮೆ ಗಳಿಸಿದ ಆಕೆ, ವೈದ್ಯಕೀಯ ಅನುಭವಗಳಿಗೂ ಮಿಗಿಲಾದ ಬುದ್ಧಿವಂತೆ. ಆಸ್ಪತ್ರೆಗೆ ಬರುವ ನೋವಿನ ಕಾರಣವ ಕೆಲ ನಿಮಿಷಗಳ ತನಿಖೆಯಲ್ಲೇ ನಿಖರವಾಗಿ ಅರಿತುಕೊಳ್ಳುವ ಜಾಣೆ. ಅವಳಿಗೊಂದು ಕನಸು. ಅದೇ O2. ಏನಿದು O2? ವ್ಯಕ್ತಿಯೊಬ್ಬನ ಹೃದಯ ಬಡಿತ ನಿಂತಾಗ, ಕೃತಕವಾಗಿ ಹೃದಯ ಬಡಿತವನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಆ ಪ್ರಯತ್ನವೂ ಕೈಗೂಡದಾಗ, ಆಮ್ಲಜನಕ ಮೆದುಳಿಗೆ ತಲುಪದೆ ಜೀವ ಜಾರಿ ಹೋಗುತ್ತದೆ. ಈ O2 ಎಂಬ ಲಸಿಕೆಯು ದ್ರವ್ಯ ಆಮ್ಲಜನಕವನ್ನು ಹೊಂದಿರುತ್ತದೆ. ಇದನ್ನು, ಹೃದಯ ಮಾತು ನಿಲ್ಲಿಸ ಹೊರಡುವ ಸಮಯದಲ್ಲಿ ಮೆದುಳಿಗೆ ಕಳುಹಿಸಿದರೆ, ಮೆದುಳಿನ ಕೋಶಗಳು ಸಾಯದೆ, ಸಾವಿನ ಬಾಗಿಲ ಬಳಿ ನಿಂತ ಅಥವಾ ಕೆಲ ನಿಮಿಷಗಳ ಕಾಲ ಮರಣದ ಬಾಗಿಲು ತಟ್ಟುವ ವ್ಯಕ್ತಿಯನ್ನು ಪುನಃ ಹಿಂದಕ್ಕೆ ಕರೆಸಿಕೊಳ್ಳುವ ವೈದ್ಯಕೀಯ ವಿಸ್ಮಯವಿದು.

ಒಂಥರಾ ಸೃಷ್ಟಿ -ಸ್ಥಿತಿ-ಲಯ ಎಂಬ ತ್ರಿಮೂರ್ತಿ ಪರಿಕಲ್ಪನೆಗೆ ಒಂದು ಸವಾಲು. ಇಂತಹ ಒಂದು ಅಭೂತ ಸಂಶೋಧನೆಯ ಹಿಂದಿನ ಶಕ್ತಿಯೇ ಶ್ರದ್ಧಾ. ಅವಳಿಗೆ ಬೆಂಗಾವಲಾಗಿ ಒಂದಷ್ಟು ಸಮಾನ ಮನಸ್ಕರು. ಸಂಶೋಧನೆಯು ಮೂಷಿಕಗಳ ಮೇಲೆ ಫಲಿಸಿತು. ಆದರೆ, ಮಾನವರ ಮೇಲಿನ ಪ್ರಯೋಗಕ್ಕೆ ಹಲವು ಅಡರು ತೊಡರುಗಳು. ಅದು ಮಾನವ ಪ್ರೇರಿತವೂ ಹೌದು, ಸ್ಥಾಪಿತ ನಿಯಮಗಳ ಕಾರಣವೂ ಕೂಡ. ಆಗ, ಶ್ರದ್ಧಾಳ ಜೊತೆಯಾಗುವವನೇ ಡಾಕ್ಟರ್ ದೇವ್. ಸದ್ದಿಲ್ಲದೇ, ಜಗತ್ತಿಗೆ ಸಾರದೇ, ಬದುಕಲು ಅಸಾಧ್ಯವೆನ್ನಿಸುವ ರೋಗಿಗಳ ಜೀವ ಉಳಿಸಲು, O2 ಪ್ರಯೋಗಕ್ಕೆ ಒಳಪಡಿಸಲು ಮುಂದಾಗುತ್ತಾರೆ. ವಿಫಲಗೊಳ್ಳುತ್ತಾರೆ. ಮರಳಿ ಯತ್ನವ ಮಾಡುತ್ತಾರೆ. ಅಂದು ಸಾವಿನ ಅಂಚಿನಲ್ಲಿದ್ದ ಆ ವ್ಯಕ್ತಿ ಮತ್ತು ಶ್ರದ್ಧಾ ಈ ಹಿಂದೆ ಕಥೆಯೊಂದರ ಪಾತ್ರಗಳಾಗಿರುತ್ತಾರೆ. ಕೆಲ ಕಾಲಗಳ ಹಿಂದೆ, ಶ್ರದ್ಧಾ, ಕಡಲ ತೀರದಲ್ಲಿ ವೈದ್ಯಕೀಯ ಫೆಲ್ಲೋಶಿಪ್ ಮಾಡುತ್ತಿದ್ದಾಗ, ಆಘಾತಗೊಂಡಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸ ಬಂದ RJ ಓಶೋ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮದ ಬಾಗಿಲು ತಟ್ಟುತ್ತದೆ. ಆದರೆ, ಸಕಾರಣವೋ, ಅಕಾರಣವೋ ಉತ್ತರವಿಲ್ಲದ ಪ್ರಶ್ನೆಯಂತೆ ಆ ಪ್ರೀತಿ ಅರಳುವ ಮುನ್ನವೇ ಬಾಡಿ ಹೋಗುತ್ತದೆ. ಆದರೂ, ನೈಜ ಪ್ರೀತಿಗೆ ಅಂತ್ಯವಿಲ್ಲ ಎಂಬಂತೆ ಆ ಒಲವಿನ ಧಾರೆ ಶ್ರದ್ಧಾ ಮನದೊಳಗೆ ಹಾಗೆಯೇ ಅಂಟಿಕೊಂಡಿರುತ್ತದೆ.

ಈಗ ಎರಡನೇ ಪ್ರಯೋಗಕ್ಕೆ ಒಳಗಾಗುವ ಸಾವಿನ ಅಂಚಿನಲ್ಲಿರುವ ವ್ಯಕ್ತಿಯೇ ಆ ಓಶೋ. ಆದರೆ, ಶ್ರದ್ಧಾಳಿಗೆ ಆ ವಿಚಾರ ತಿಳಿಯದು. ಪ್ರಯೋಗಕ್ಕೆ ತೊಡಗಿದಾಗ, ಇನ್ನೇನು ಬದುಕು ಮತ್ತೆ ಶುರುವಾಗುತ್ತದೆ ಅನ್ನುವಾಗಲೇ, ಅಲ್ಲೊಂದು ಭೀಕರ ಬೆಂಕಿ ಅವಘಡ ನಡೆದು, ಓಶೋ ಉಸಿರು ಚೆಲ್ಲುತ್ತಾನೆ. ಅಲ್ಲೇ ಉಳಿದಿದ್ದ ದೇವ್, ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ. ನೀರ ರಾಶಿಯ ಬಳಿಯೇ ಸಾಗದವ, ಸಲೀಸಾಗಿ ಈಜುತ್ತಾನೆ. ಅಸಂಖ್ಯ ಚಿತ್ರಗಳ ಬಿಡಿಸುತ್ತಾನೆ. ಶ್ರದ್ಧಾಳ ಮೇಲಿನ ಒಲವನ್ನು ಯಾವ ತಡೆಯೂ ಇಲ್ಲದೆ ತೋರ್ಪಡಿಸಿಕೊಳ್ಳುತ್ತಾನೆ. ಈ ಬದಲಾದ ರೂಪದ ಹಿನ್ನೆಲೆ ಶ್ರದ್ಧಾಳಿಗೆ ಅರ್ಥವಾಗುವುದು ಓಶೋನ ಮನೆಗೆ ಭೇಟಿಯಿತ್ತಾಗಲೇ. ಓಶೋ ಅದ್ಭುತ ಈಜುಗಾರ. ಸೊಗಸಾದ ಚಿತ್ರ ಕಲಾವಿದ. ಮತ್ತದೇ ಅಧ್ಯಾತ್ಮ. ದೇಹ ಆಳಿದರೂ ಆತ್ಮವು ದ್ರವ್ಯದಂತೆ ಹೊಸ ದೇಹದೊಳಗೆ ಸೇರಿ ಕುಳಿತುಬಿಡುವ ಕಲ್ಪನೆಯ ಸಾದೃಶ್ಯ. ಮುಂದೆ 02 ಪ್ರಯೋಗ ಸಾಧ್ಯವಾಯಿತೇ? ಸಾವಿಗೆ ಸಣ್ಣ ವಿರಾಮವ ನೀಡುವ ಪ್ರಯತ್ನ ಯಶಸ್ವಿಯಾಯಿತೇ ಎನ್ನುವುದೇ ಚಿತ್ರದ ಅಂತಿಮ ನಿಲ್ದಾಣ.

ಇದು ಮೆಡಿಕಲ್ ಥ್ರಿಲ್ಲರ್ ವಿಭಾಗಕ್ಕೆ ಸೇರಿದ ಚಿತ್ರವಾದರೂ, ಅದಕ್ಕೂ ಮಿಗಿಲಾದ ವಿಷಯಗಳಿವೆ. ಹುಟ್ಟು ಮತ್ತು ಸಾವು ಎಂಬ ಅನೂಹ್ಯ ಸಂಗತಿಗಳು ಇಲ್ಲಿ ಪ್ರಧಾನ ಭೂಮಿಕೆಯಲ್ಲಿರುವುದರಿಂದ, ಕಥೆಯು ಜಿಜ್ಞಾಸೆಗೆ ಬೆಳಕು ಚೆಲ್ಲುತ್ತದೆ. ಭಾರತೀಯ ಪರಂಪರೆಯಲ್ಲಿ ಆತ್ಮವೇ ಪ್ರಾಧಾನ್ಯ. ಋಗ್ವೇದದಲ್ಲಿ ಬರುವ ‘ಆತ್ಮಾನೋ ಮೋಕ್ಷಾರ್ಥಂ ಜಗದ್ ಹಿತಾಯಚ’ದಿಂದ ಹಿಡಿದು ‘ಆತ್ಮ ವಂಚನೆಗಿಂತ ಮಿಗಿಲಾದ ಅಪರಾಧವಿಲ್ಲʼ ಎಂಬ ನಾಣ್ನುಡಿಯವರೆಗೆ, ಆತ್ಮ ಕಥೆ ಸಾಗುತ್ತದೆ. ಆತ್ಮ ಪರಮಾತ್ಮನ ನಂಟು, ಜನನ ಮರಣದ ಚಕ್ರದಿಂದ ಬಿಡುಗಡೆಗೊಳಿಸುವ ಮೋಕ್ಷ ಹೀಗೆ ಆತ್ಮದ ಪ್ರಸ್ತುತತೆ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಆದರೆ, ಸಾವೆಂಬ ಅಚ್ಚರಿ, ಅದರ ಉತ್ತರಾರ್ಧದ ನಿಗೂಢತೆಗಳಿಗೆ ವಿಜ್ಞಾನ ಉತ್ತರವಿಲ್ಲದೆ ಕುಳಿತಾಗ ನಂಬಿಕೆಗಳ ಮೇಲೆ ಕಟ್ಟಿದ ಈ ವಿಷಯಗಳು ಹತ್ತಿರವಾಗುತ್ತದೆ.

(ರಾಘವ್ ನಾಯಕ್)

‘ಹೇ ಇವತ್ತು ಬೆಳಿಗ್ಗೆ ಮಾತಾಡಿದ್ದೆ ಕಣೋ, ಈಗ ಹೋದ್ರು’ ‘ನಿನ್ನೆ ECG ಮಾಡ್ಸಿದ್ರಂತೆ, ಏನಿಲ್ಲ ಅಂದ್ರು ಡಾಕ್ಟ್ರು. ಇವತ್ತು ಹಾರ್ಟ್ ಅಟ್ಯಾಕಲ್ಲಿ ತೀರ್ಕೊಂಡಿದ್ದಾರೆʼ. ಇಂತಹ ಮಾತುಗಳು ಸಾಮಾನ್ಯವೆನ್ನುವಂತೆ ಕೇಳತೊಡಗಿದಾಗ ಅತ್ಯಾಧುನಿಕ ಬ್ರಹ್ಮಜ್ಞಾನಗಳೆಲ್ಲವೂ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ವ್ಯರ್ಥವೇನೋ ಎನ್ನುವಂತೆ ಭಾಸವಾಗುತ್ತದೆ. ಏನೇ ಪಯತ್ನ ಮಾಡಿದರೂ, ಕೊನೆಗೆ ಹಣೆಬರಹಕೆ ಹೊಣೆ ಯಾರೂ ಶಿವನೇ ಎಂದಾಗುವುದನ್ನು ಅನುಭವಿಸಿದಾಗ, ವಿಜ್ಞಾನ ಮಂದಗೊಂಡು ಆತ್ಮ-ಪರಮಾತ್ಮನ ಸಂಬಂಧ, ವಿಧಿ ಲಿಖಿತಗಳೆಲ್ಲವೂ ಮುನ್ನೆಲೆಗೆ ಬರುತ್ತವೆ. ಇಲ್ಲಿ ಓಶೋನ ಆತ್ಮ, ದೇವ್‌ನ ದೇಹದಲ್ಲಿ ಲೀನವಾಗಿ ತನ್ನ ಸ್ವಭಾವವನ್ನು ತೋರ್ಪಡಿಸಿದರೂ, ದೇವ್ ದೇಹ ಪ್ರಕೃತಿ ಮಾತ್ರ ಬದಲಾಗುವುದಿಲ್ಲ. ಆದರೆ, ಇದು ಹೀಗೆಯೇ ಸಾಧ್ಯ ಎಂದು ಭೌತಿಕ ಆಧಾರದ ಮೇಲೆ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಆಧ್ಯಾತ್ಮಿಕ ನೆಲೆಗಟ್ಟೆಂಬುದು ವಿಜ್ಞಾನದ ಕಣ್ಣುಗಳಲ್ಲಿ ಊಹೆಗಳಾಗಿಯೇ ಉಳಿಯುತ್ತದೆ ಮತ್ತು ಪರಿಗಣನೆಯ ಪರಿಧಿಗೆ ಸೇರುವುದಿಲ್ಲವಾದ್ದರಿಂದ, ಅನಂತ ಸಂಗತಿಗಳು ವಿವರಣೆಗಳಿಲ್ಲದೆ ಮೌನವಾಗಿವೆ. ಇಂತಹ ಒಂದು ಸಂಕೀರ್ಣ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ‘O2’.

(ಪ್ರಶಾಂತ್ ರಾಜ್)

ಮಾಸ್ ಮತ್ತು ಋಣಾತ್ಮಕ ಶೇಡ್‌ಗಳಿರುವ ಚಿತ್ರಗಳು ಟ್ರೆಂಡಿಂಗ್ ಆಗುತ್ತಿರುವ ಈ ಕಾಲಘಟ್ಟದಲ್ಲಿ, ಈ ಬದಲಾವಣೆಯ ಚಿಂತನೆಯನ್ನು ಬಿತ್ತಿದ ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ಪ್ರಯತ್ನ ಗಮನಾರ್ಹ. ಕಮರ್ಷಿಯಲ್ ಚಿತ್ರಗಳಲ್ಲಿ ಬೇಡಿಕೆಯ ನಟಿ ಎಂದು ಗುರುತಿಸಿಕೊಂಡಿದ್ದ ಆಶಿಕಾ ರಂಗನಾಥ್, ಈ ಚಿತ್ರದಲ್ಲಿ ನಟನೆಯ ಸಾರಥ್ಯ ವಹಿಸಿದ್ದಾರೆ. ಇಡೀ ಪರದೆಯ ಆಪೋಶನ ತೆಗೆದುಕೊಳ್ಳುವಂತಹ ಅದ್ಭುತ ನಟನೆ ಅವರದು. ಅವರ ಅಭಿನಯ, ಅವರ ಸಹೋದರಿ ಅನುಷಾ ರಂಗನಾಥ್ ‘10’ ಚಿತ್ರದಲ್ಲಿ ಮಾಡಿದ ಪಾತ್ರ ಪ್ರಸ್ತುತಿಯನ್ನು ನೆನಪಿಸಿತು. ದೇವ್ ಆಗಿ ಪ್ರವೀಣ್ ತೇಜ್ ಪಾತ್ರ ಪೋಷಣೆ ಇನ್ನೆಷ್ಟು ಕಾಲ ಬೇಕು ತನ್ನ ನಟನಾ ಸಾಮರ್ಥ್ಯವ ಗುರುತಿಸಲು ಎಂದು ಪ್ರಶ್ನೆ ಮಾಡುವಂತಿತ್ತು. ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಯಕ್ಷಗಾನದ ನೇಪಥ್ಯ ಕಲಾವಿದನಾಗಿ ಕಾಣಿಸುವ ಗೋಪಾಲಕೃಷ್ಣ ದೇಶಪಾಂಡೆ ಹೀಗೆ ಎಲ್ಲರ ಇರುವಿಕೆ ಚಿತ್ರಕ್ಕೆ ಸೊಬಗು. ನವೀನ್ ಕುಮಾರ್ ಕಣ್ಣುಗಳಲ್ಲಿ ಒಲವಿನ ಸಾಗುವಳಿ, ಅಲೆಗಳ ಕುಣಿತ ಅದ್ಭುತ ಮಾದರಿಯಲ್ಲಿ ಸೆರೆಯಾಗಿದೆ. ವಿವಾನ್ ರಾಧಾಕೃಷ್ಣ ಸಂಗೀತ ಉಲ್ಲೇಖಾರ್ಹ. PRK ಪ್ರೊಡಕ್ಷನ್‌ನ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ನಿರ್ಮಾಪಕರು.

ಮುಗಿಸುವ ಮುನ್ನ:
ಸಾಗರದ ನಕಲಿನಂತಿರುವ ಪ್ರೀತಿಗೆಂದಿಗೂ ಅಳಿವಿಲ್ಲವೋ, ಅದೇ ರೀತಿ ಆತ್ಮವೂ ಕೂಡ ಅಳಿಸಲಾಗದ ಆಸ್ತಿ. ದೇಹ ಹಳೆಯ ಕಟ್ಟಡದಂತೆ ಶಿಥಿಲಗೊಂಡು ಕುಸಿದು ಬೀಳಬಹುದು. ಹಳೆಯ ವಾಹನದಂತೆ ನಡಿಗೆ ನಿಲ್ಲಿಸಬಹುದು. ಆದರೆ, ಆತ್ಮವು ಅಳಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ, ಆತ್ಮವೆಂದರೆ ಅರಿಯಲು ಅಸಾಧ್ಯವೆನಿಸುವ ಸಂಕೀರ್ಣತೆ ಎಂದು ತಿಳಿಯಬೇಕಿಲ್ಲ. ಬದುಕು ಓಡುವಾಗ ಸಂಪಾದಿಸಿದ ಪ್ರೀತಿ, ತೊಡಗಿಸಿಕೊಂಡ ಒಳ್ಳೆಯ ಕೆಲಸಗಳೇ ಅಲ್ಲವೇ ಆತ್ಮವೆಂದರೆ………