ಮನೆ ನೆನೆದರೆ ಸಾಕು ಬಾಲ್ಯದ ಸಿಹಿ ಕಹಿ ಘಟನೆಗಳೆಲ್ಲ ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ. ನಮ್ಮದು ಹಳೆಯ ಕಾಲದ ನಮ್ಮ ತಾತ ಕಟ್ಟಿಸಿದ ಜಂತಿಮನೆ ಮೊದಮೊದಲು ಅದು ಸಗಣಿಯಿಂದ ಶೃಂಗಾರವಾಗುತ್ತಿದ್ದದ್ದು ಕ್ರಮೇಣ ಅದಕ್ಕೆ ಗಾರೆ ಹಾಕಲಾಯಿತು. ಮರಳು ಮತ್ತು ಸುಣ್ಣವನ್ನು ಒಟ್ಟಿಗೆ ಅರೆದು ಕಲಸಿ ಅದನ್ನು ಹಾಸುನೆಲಕ್ಕೆ ನುಣುಪಾದ ಕಲ್ಲಿನಿಂದ ಉಜ್ಜಿ ಉಜ್ಜಿ ನೆಲಕ್ಕೆ ಅಂಟುವಂತೆ ಮಾಡುತ್ತಿದ್ದರು. ಅಮ್ಮ ಒಂದೊಂದೆ ಕೆಲಸಗಳನ್ನು ಮಾಡುತ್ತ ಮನೆಯನ್ನು ಸಿಂಗರಿಸುತ್ತಲೆ ಹೋದಳು. ಎಲ್ಲಿಯೂ ಅದನ್ನು ಸಂಪೂರ್ಣವಾಗಿ ಬದಲಿಸಲು ಹೋಗಲಿಲ್ಲ. ಎಲ್ಲಾ ನೆನಪುಗಳನ್ನು ತನ್ನೊಳಗೆ ಕಾಪಿಟ್ಟ ಮನೆ ಯಾರ ಮೇಲು ದೂರನ್ನು ಹೇಳಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ನಾಲ್ಕನೆಯ ಕಂತು
ಮನೆ ಪ್ರತಿಯೊಬ್ಬ ಮನುಷ್ಯನ ಎಲ್ಲಾ ನೆನಪುಗಳ ಜೋಡಿಸಿಟ್ಟ ಮರೆಯಲಾಗದ ಜೀವಂತ ಪುಟಗಳ ಖಜಾನೆ. ಮನೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಮನೆ ನೆನೆದರೆ ಸಾಕು ಬಾಲ್ಯದ ಸಿಹಿ ಕಹಿ ಘಟನೆಗಳೆಲ್ಲ ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ. ನಮ್ಮದು ಹಳೆಯ ಕಾಲದ ನಮ್ಮ ತಾತ ಕಟ್ಟಿಸಿದ ಜಂತಿಮನೆ ಮೊದಮೊದಲು ಅದು ಸಗಣಿಯಿಂದ ಶೃಂಗಾರವಾಗುತ್ತಿದ್ದದ್ದು ಕ್ರಮೇಣ ಅದಕ್ಕೆ ಗಾರೆ ಹಾಕಲಾಯಿತು. ಮರಳು ಮತ್ತು ಸುಣ್ಣವನ್ನು ಒಟ್ಟಿಗೆ ಅರೆದು ಕಲಸಿ ಅದನ್ನು ಹಾಸುನೆಲಕ್ಕೆ ನುಣುಪಾದ ಕಲ್ಲಿನಿಂದ ಉಜ್ಜಿ ಉಜ್ಜಿ ನೆಲಕ್ಕೆ ಅಂಟುವಂತೆ ಮಾಡುತ್ತಿದ್ದರು. ಅದನ್ನು ಅಮ್ಮ ಬಹುಜಾಗರೂಕತೆಯಿಂದ ಮಾಡುತ್ತಿದ್ದಳು. ಕೆಲವೊಮ್ಮೆ ನಮಗೂ ಗಾರೆಕಲ್ಲುಗಳನ್ನು ಕೊಟ್ಟು ಉಜ್ಜಿಸುತ್ತಿದ್ದರು. ನಾವು ಖುಷಿಯಿಂದಲೆ ಆ ಕೆಲಸ ಮಾಡುತ್ತಿದ್ದೆವು. ಅಮ್ಮ ಒಂದೊಂದೆ ಕೆಲಸಗಳನ್ನು ಮಾಡುತ್ತ ಮನೆಯನ್ನು ಸಿಂಗರಿಸುತ್ತಲೆ ಹೋದಳು. ಎಲ್ಲಿಯೂ ಅದನ್ನು ಸಂಪೂರ್ಣವಾಗಿ ಬದಲಿಸಲು ಹೋಗಲಿಲ್ಲ. ಎಲ್ಲಾ ನೆನಪುಗಳನ್ನು ತನ್ನೊಳಗೆ ಕಾಪಿಟ್ಟ ಮನೆ ಯಾರ ಮೇಲು ದೂರನ್ನು ಹೇಳಲಿಲ್ಲ.
ನಮ್ಮ ಮನೆಯ ಮಧ್ಯದಲ್ಲಿ ಎರಡು ಮರದ ಕಂಬಗಳಿವೆ. ಇಡಿ ಮನೆಯ ಸಂಪೂರ್ಣ ಭಾರ ಆ ಕಂಬಗಳ ಮೇಲೆ ಬೀಳುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ. ನನ್ನ ಬಾಲ್ಯದ ದಿನದಿಂದಲೂ ಆ ಕಂಬಗಳ ಮಧ್ಯದ ಸ್ವಲ್ಪ ಜಾಗ ನನಗೆ ಪ್ರಿಯವಾದದ್ದು. ಅದ್ಯಾಕೆ ಎಂದು ನಾನು ಹೇಳಲಾರೆ ನನಗೂ ಅದಕ್ಕೆ ಉತ್ತರ ಗೊತ್ತಿಲ್ಲ. ನಾನು ಆ ಕಂಬಗಳನ್ನು ಹಿಡಿದು ಸುತ್ತುವಾಗೆಲ್ಲ ನನಗೆ ಹೆದರಿಸುತ್ತಿದ್ದರು. ಹಾಗೆಲ್ಲ ಸುತ್ತುವರಿಯಬಾರದು, ಅದು ಬೀಳುತ್ತದೆ ಎಂದರೂ ಅದನ್ನು ಸುತ್ತುತ್ತಿದ್ದದ್ದು ಉಂಟು. ನನಗೆ ಅದು ಆಟಿಕೆಯಂತೆ ಬಳಕೆಯಾಗುತ್ತಿತ್ತು. ಪಕ್ಕದ ಊರಿನಲ್ಲಿ ಇಂತಹದೆ ಮನೆ ಬಿದ್ದು ಒಂದಿಡಿ ಕುಟುಂಬವೆ ಜೀವ ಬಿಟ್ಟಿತ್ತು. ಅದನ್ನು ಕೇಳಿದ ಮೇಲೆ ತಲೆತುಂಬ ಏನೇನೊ ಯೋಚನೆ ಬಂದು ಮತ್ತೆ ಕಂಬ ಹಿಡಿಯುವ ಸಾಹಸ ಮಾಡಲಿಲ್ಲ. ಆದರೆ ಅದರ ಜೊತೆ ಇನ್ನೊಂದು ರೀತಿಯ ಅಭ್ಯಾಸ ಬೆಳೆದು ಬಿಟ್ಟಿತು. ಆ ಕಂಬಕ್ಕೆ ಕಾಲನ್ನು ಒದ್ದುಕೊಂಡು ಮಲಗುವ… ಇಲ್ಲವೆ ಕುಳಿತುಕೊಳ್ಳುವ ಅಭ್ಯಾಸ ಬೆಳೆದು ಬಿಟ್ಟಿತು. ನಾನು ಮನೆಕೆಲಸ ಮಾಡುವುದಾಗಲಿ, ಓದುವುದಾಗಲಿ, ಆ ಜಾಗ ಬಿಟ್ಟು ಬೇರೆ ಕಡೆ ಕುಳಿತುಕೊಳ್ಳುತ್ತಿರಲಿಲ್ಲ. ಆಗಾಗ ಯೋಚಿಸಿದ್ದು ಇದೆ. ಅದ್ಹೇಗೆ ನಾನು ಅದೆ ಸ್ಥಳದಲ್ಲಿ ಕುಳಿತುಕೊಳ್ಳುತ್ತೇನೆ ಎಂದುಕೊಂಡರು ಅದಕ್ಕೆ ಉತ್ತರವಂತೂ ಸಿಗಲಿಲ್ಲ.
ನನಗೆ ಬಾಲ್ಯದಿಂದಲೂ ಮನೆಯೊಂದಿಗೆ ಬಿಟ್ಟುಬಿಡದ ನಂಟಿದೆ. ಒಂದಿಷ್ಟು ದೊಡ್ಡವನಾದಂತೆಲ್ಲ ಹೊರಗಿನ ಆಟಗಳಲ್ಲಿ ಭಾಗವಹಿಸುತ್ತಿದ್ದದ್ದು ಸ್ವಲ್ಪ ಕಡಿಮೆಯೇ ಆಗಿತ್ತು. ಅದಕ್ಕೆ ಕಾರಣವೂ ಮನೆತುಂಬ ಬೀಡಿ ಸುತ್ತುವ ಕೆಲಸ ಎಲ್ಲರೂ ಮಾಡಬೇಕಾಗಿತ್ತು. ಹೊಟ್ಟೆ ಬಟ್ಟೆಯ ಸಮೃದ್ಧಿಗೆ ಅದು ಕಾರಣವಾಗಿತ್ತು. ಬಹುತೇಕ ಸಮಯವನ್ನು ಮನೆಯಲ್ಲಿಯೆ ಕಳೆಯುತ್ತಿದ್ದೆನಾದ್ದರಿಂದ ಮನೆಯ ಮೇಲೆ ವಿಶೇಷವಾದ ಒಲವು. ಬಹುಶಃ ಕುವೆಂಪು ಅವರಿಗೂ ಹೀಗೆ ಅನ್ನಿಸಿರಬಹುದು. ಅದಕ್ಕೆ ಮನೆ ಬಗ್ಗೆ ಒಂದು ಕವನವನ್ನೆ ಬರೆದು ಮನೆಯ ಮೇಲಿನ ಪ್ರೀತಿಯನ್ನು ಹಂಚಿಕೊಂಡರೆಂದು ಕಾಣುತ್ತದೆ.
ನನ್ನಲ್ಲಿ ಕೀಳರಿಮೆ ವಿಪರೀತವಾಗಿ ಮನೆ ಬಿಟ್ಟು ಹೊರಗೆ ಬರದೆ ಇದ್ದಾಗ ಈ ಮನೆ ನನಗೆ ಬದುಕುವ ಬೇರೆ ಬೇರೆ ಕನಸುಗಳನ್ನು ಹುಟ್ಟಿಹಾಕಿದೆ. ಪ್ರತಿ ತೊಲೆಗೂ ಕಲ್ಲಿನ ಕಂಬಗಳನ್ನು ಕೊಟ್ಟು ಭದ್ರವಾಗಿ ಕಟ್ಟಲಾಗಿದೆ. ನೂರು ವರ್ಷಕ್ಕೂ ಜಾಸ್ತಿಯಾದರೂ ಅದು ಹಾಗೆಯೆ ಇದೆ… ನೆನಪುಗಳನ್ನು ಜತನವಾಗಿರಿಸಿಕೊಂಡು ಬೆಚ್ಚನೆಯ ಹಕ್ಕಿಯ ಗೂಡಿನಂತೆ.
ನಮ್ಮ ಎಲ್ಲಾ ಸಂಭ್ರಮದಲ್ಲೂ ಅದು ಭಾಗಿಯಾಗಿದೆ. ಇವತ್ತಿಗೂ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನವೀಕರಣ ಮಾಡಿಸಿದರೂ ನೆನಪುಗಳು ಅಳಿದಿಲ್ಲ ಹಾಗೇ ಉಳಿದಿವೆ. ಅದಕ್ಕಿದ್ದ ಪ್ರವೇಶ ದ್ವಾರದ ಬಾಗಿಲು ಎಷ್ಟುಗಟ್ಟಿ. ಅದನ್ನು ಬದಲಾಯಿಸಬೇಕು ಎಂದುಕೊಂಡಾಗ ಅದು ನೊಂದುಕೊಂಡಿರಬಹುದಾ ಗೊತ್ತಿಲ್ಲ. ಅದನ್ನು ಕೊಯ್ಯಿಸಿ ಎರಡು ಬಾಗಿಲನ್ನು ಮಾಡಿಸಲಾಯಿತು. ಅದಕ್ಕಿದ್ದ ಅಗುಣಿ ಎಷ್ಟು ಚಂದವಿತ್ತು. ಕಳ್ಳರು ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದೆ ಅದರ ಮೇಲೆ ‘ನಾಳೆ ಬಾ’ ಎಂದು ಬರೆದು ನಿರಾಳವಾಗಿ ನಾವು ಮನೆಮಂದಿಯೆಲ್ಲ ಮಲಗುತ್ತಿದ್ದೆವು. ಹತ್ತಿರತ್ತಿರ ಪೂರ್ತಿ ಎರಡು ತಲೆಮಾರುಗಳನ್ನು ದಾಟಿ ಭದ್ರವಾಗಿ ನಿಂತುಕೊಂಡಿದೆ. ವಿಶಾಲವಾದ ಅಡುಗೆ ಮನೆ ಅದರ ಬಾಗಿಲಿಗೆದುರಾಗಿ ನನ್ನಜ್ಜ ಬಳಸುತ್ತಿದ್ದ ಬೃಹತ್ ಪೆಟ್ಟಿಗೆ ಅದರ ಮೇಲೆ ಮಾವ ಬಂದಾಗ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದ ಚಿತ್ರ ಕಣ್ಣಮುಂದೆ ಬಂದಂತಾಗುತ್ತದೆ. ನಮ್ಮೆಲ್ಲ ಸಂತಸದಲ್ಲೂ ಭಾಗಿಯಾಗಿದ್ದ ಮನೆ ಮತ್ತದರ ನೆನಪು ಮತ್ತೆ ಮತ್ತೆ ಕಾಡುತ್ತಲೆ ಇರುತ್ತದೆ.
ಒಂದು ಘಟನೆ ನೆನಪಿಗೆ ಬರುತ್ತದೆ. ಜಂತಿಮನೆಯಲ್ಲಿ ಸಾಮಾನ್ಯವಾಗಿ ಸಲೀಸಾಗಿ ಇಲಿಗಳು ಓಡಾಡುವಷ್ಟು ಸಂದುಗಳು ಇರುತ್ತವೆ. ಆದರೆ ಎಂದೂ ನಮಗೆ ಯಾವ ಸರಿಸೃಪಗಳೂ ಕಂಡಿರಲಿಲ್ಲ. ಆದರೂ ಮಲಗಿಕೊಂಡಿದ್ದಾಗ ಜಂತಿಯನ್ನು ಸೂಕ್ಷ್ಮವಾಗಿ ನೋಡುತ್ತಿದ್ದೆ. ಇದರಲ್ಲೇನಾದರೂ ಹಾವುಗಳು ಸೇರಿಕೊಂಡಿರಬಹುದಾ ಎಂದು ಯೋಚಿಸುತ್ತಲೆ ನಿದ್ದೆಹೋಗುತ್ತಿದ್ದೆ. ಒಮ್ಮೆ ಎಲ್ಲರೂ ಮಲಗಿಕೊಂಡಿರುವಾಗ ಇದ್ದಕ್ಕಿದ್ದಂತೆ ಜಂತಿಯಲ್ಲಿ ಏನೊ ಬೆಳ್ಳ ಬೆಳ್ಳಗೆ ಮಸುಕು ಮಸುಕಾಗಿ ಕಾಣಿಸಿತು. ನಾನು ಏನಿರಬಹುದೆಂದು ಅದನ್ನೆ ನೋಡುತ್ತಿದ್ದಾಗ ಹಾವೊಂದು ಹರಿದಾಡುತ್ತಿರುವುದು ಕಾಣಿಸಿತು. ನಂತರ ಅದನ್ನು ಕಷ್ಟು ಪಟ್ಟು ಹೊಡೆದು ಹಾಕಲಾಯಿತು. ಜಂತಿಮನೆಯಲ್ಲಿ ಇದೆಲ್ಲವೂ ಸಾಮಾನ್ಯವಾದುದು. ಆದರೂ ಅನೇಕ ನೆನಪುಗಳಲ್ಲಿ ಅಚ್ಚಳಿಯದೆ ಮನೆ ಉಳಿದಿದೆ.
ಈಗ ಊರಿಗೆ ಹೋದಾಗೆಲ್ಲಾ ಒಂದೆ ವರಾತ “ಮಗ ಊರಲ್ಲಿ ಯಾವ ಹಳೆಮನೆಯೂ ಉಳಿದಿಲ್ಲ ಎಲ್ಲವನ್ನು ಕೆಡವಿ ಹೊಸಮನೆಯನ್ನು ಕಟ್ಟಿಕೊಂಡಿದ್ದಾರೆ. ನಾವು ಮಾತ್ರ ಇದೇ ಹಳೆಮನೆಯಲ್ಲಿ ಬದುಕಬೇಕಾ? ನನಗೂ ಈ ಮನೆಯಲ್ಲಿ ಸಾಕಾಗಿದೆ. ಮಳೆ ಬಂದಾಗಲೆಲ್ಲಾ ಸೋರುತ್ತೆ ಎಷ್ಟು ಸರಿ ಮಾಡ್ಸಿದ್ರು ಮತ್ತೆ ಮತ್ತೆ ತೊಟ್ಟಿಕ್ಕುತ್ತೆ ಅದನ್ನೆಲ್ಲ ಕ್ಲೀನ್ ಮಾಡೋದಿಕ್ಕೆ ಸಾಕ್ ಸಾಕಾಗಿ ಹೋಗುತ್ತೆ. ನೀನು ದೊಡ್ಡದಾಗಿ ಕಟ್ಲಿಲ್ಲ ಅಂದ್ರು ಪರ್ವಾಗಿಲ್ಲ ಒಂದು ಸಣ್ಣ ಮನೇನಾದ್ರು ಕಟ್ಸು ಅಂದ್ರು. ನಿಜ ಅಮ್ಮ ಹೇಳಿದ್ರಲ್ಲಿ ತಪ್ಪಿಲ್ಲ. ಮನೆಗೂ ವಯಸ್ಸಾಗಿದೆ. ಎಷ್ಟೊ ಜೀವಗಳಿಗೆ ಆಶ್ರಯವಾಗಿ ಬದುಕು ಸವೆಸಿದ ಮನೆ ಈಗ ತುಕ್ಕು ಹಿಡಿದ ಕಬ್ಬಿಣದಂತೆ ತನ್ನ ಮೊದಲ ಮೊನಚನ್ನು ಕಳೆದುಕೊಂಡು ಕಳಾಹೀನವಾಗಿದೆ ಅನಿಸಿತು. ಮೊನ್ನೆ ನಾನು ಅಡುಗೆ ಮಾಡುತ್ತಿದ್ದಾಗಲೆ ಹಾವೊಂದು ಕಾಣಿಸಿಕೊಂಡು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ ಎಂಬ ಮಾತು ಕೇಳಿ ಇಲ್ಲ ಇದಕ್ಕೊಂದು ತೀರ್ಮಾನ ಮಾಡಲೇಬೇಕು ಎಂದುಕೊಂಡು ಅಮ್ಮನ ಮುಖವನ್ನೊಮ್ಮೆ ನೋಡಿದೆ. ಮಗ ಏನು ಹೇಳುತ್ತಾನೆ ಎಂದು ನನ್ನ ಮುಖಭಾವವನ್ನೆ ಅಳೆಯುವಂತಿತ್ತು ಅವರ ನೋಟ. ನಾನು ಒಂಟಿಯಾಗಿ ಕುಳಿತಿದ್ದ ಮನೆಯ ಆ ಜಾಗವನ್ನೊಮ್ಮೆ ನೋಡಿದೆ ಎಷ್ಟೊಂದು ನೆನಪುಗಳಿವೆಯಲ್ಲ ಅನಿಸಿತು. ಬೇರೆ ದಾರಿಯಿಲ್ಲ ಬದಲಾವಣೆ ಜಗದ ನಿಯಮ ಕಾಲಕ್ಕೆ ತಕ್ಕಂತೆ ಪ್ರತಿಯೊಂದು ಬದಲಾಗುತ್ತಲೆ ಇರುತ್ತದೆ ಎಂದೆನಿಸಿತು. ಆಯ್ತು ಈ ಬಾರಿ ಬೇಸಿಗೆಯಲ್ಲಿ ಮನೆಕೆಡವಿ ಮನೆಕಟ್ಟೋಣ ಅಂದಾಗ ಅಮ್ಮನ ಮುಖದಲ್ಲಿ ಸಂತಸ ಕಾಣಿಸಿತು. ಮನೆಯೊಂದಿಗಿನ ಎಲ್ಲಾ ನೆನಪುಗಳು ಚಕಚಕನೆ ಸ್ಮೃತಿಪಟಲದಲ್ಲಿ ಹಾದುಹೋದವು.