ಎಷ್ಟೋ ವರ್ಷ ಹಳೆಯದಾದ ಮರಗಳನ್ನು ತೋಟ ಮಾಡುವಾಗ ಕಡಿದು ಹಾಕುವವರನ್ನು ಕಾಣುತ್ತೇವೆ. ಆ ಮರಗಳು ಹಿಂದಿನವರು ಹಾಕಿ ಪೋಷಿಸಿದ್ದು. ಅವುಗಳು ಗಾಳಿ ತಡೆಗೆ, ನೀರು ಭೂಮಿಯೊಳಕ್ಕೆ ಇಂಗುವುದಕ್ಕೆ, ಮಣ್ಣಿನ ಸವೆತದ ತಡೆಗೆ, ಗೊಬ್ಬರಕ್ಕೆ ಹಾಗೂ ಮುಚ್ಚಿಗೆಗೆ ಎಷ್ಟೊಂದು ಸಹಾಯ ಮಾಡಬಲ್ಲವು. ಆದರೂ ಅರಿಯದೆಯೋ, ಅರಿತೋ ಅವುಗಳನ್ನು ಉಳಿಸಿಕೊಳ್ಳುವ ಜನರು ತುಂಬಾ ಕಡಿಮೆ. ಹೀಗಾಗಿ ಶಿವು ಅವರ ತೋಟದಲ್ಲಿ ಅಂತಹ ಕೆಲವು ಮತ್ತಿಯ ಮರಗಳನ್ನು ಉಳಿಸಿಕೊಂಡು ಅವುಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದು ವಿಶೇಷ ಅನಿಸಿತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

ಶ್ರೀ. ನರಸಿಂಹ ಹೆಗಡೆ ಅವರ ಜೊತೆಗಿನ ವಿಚಾರ ವಿನಿಮಯ ನನ್ನ ಬೆಳೆಸಿರಿ ಬಳಗದಲ್ಲಿ ತುಂಬಾ ಅದ್ಭುತವಾದ ಸಂಚಲನವನ್ನೇ ಸೃಷ್ಟಿಸಿತು. ಹಲವು ಶಿಷ್ಯರು ಕರೆ ಮಾಡಿ ಅದರ ಬಗ್ಗೆ ವಿಚಾರಿಸಿದರು. ಒಂದಿನ ಅಲ್ಲಿಗೆ ಹೋಗಿ ಬರೋಣ ಎಂಬ ಉತ್ಸಾಹ ತೋರಿದರು. ಕ್ರಮೇಣ ಆ ಉತ್ಸಾಹ ಕರಗಿ ಹೋಯಿತು ಕೂಡ! ಇರಲಿ ಈ ಒಂದು ಅದ್ಭುತ ಯೋಜನೆ ಮುಂದೊಂದು ದಿನ ಸಾಕಾರ ಆದೀತು ಎಂಬ ಆಶಾಭಾವನೆ ನನ್ನಲ್ಲಿ ಇನ್ನೂ ಜೀವಂತವಾಗಿತ್ತು.

ಈ ಸಲ ಮರಳಿ ಹಳ್ಳಿಗೆ ಪಯಣ ಮಾಡಿದಾಗ ಅಲ್ಲಿ ಶಿವು ಕೂಡ ಬಂದಿದ್ದರು. ಅವರೂ ಬೆಂಗಳೂರಿನಲ್ಲೇ ಇರುವ ಕಾರಣ ಅವರು ಹಳ್ಳಿಗೆ ಬಂದಾಗ ನಾನು ಕೂಡ ಅಲ್ಲಿಯೇ ಇರುವ ಸಂಭಾವ್ಯತೆಗಳು ತುಂಬಾ ವಿರಳ. ಹೀಗಾಗಿ ಸಿಕ್ಕಿದ್ದೆ ಅವಕಾಶ ಅಂತ, ಹೋದ ಕೂಡಲೇ ಅವರಿಗೆ ಕರೆ ಮಾಡಿ ಅವರ ತೋಟಕ್ಕೆ ಹೋದೆ. ಸುಮಾರು ಹನ್ನೊಂದು ಎಕರೆ ಹೊಲವನ್ನು ಹಂತ ಹಂತವಾಗಿ ತೋಟವನ್ನಾಗಿ ಪರಿವರ್ತಿಸುತ್ತಿದ್ದರು. ಈಗಾಗಲೇ ಮೂರು ಎಕರೆಯಷ್ಟು ಅಡಿಕೆ ತೋಟ ಫಲ ಕೊಡುವಷ್ಟು ತಯಾರಾಗಿತ್ತು. ಅಲ್ಲಲ್ಲಿ ಅಂತರ ಬೆಳೆಯಾಗಿ ಕಾಳು ಮೆಣಸು, ಬಾಳೆ, ಏಲಕ್ಕಿ ಬೆಳೆಸಿದ್ದರು. ತಾವು ಭೂಮಿಯನ್ನು ಕೊಂಡಾಗ ಅಲ್ಲಿದ್ದ ಕೆಲವು ಹಳೆಯ ಮರಗಳನ್ನು ಕೂಡ ಹಾಗೆಯೇ ಉಳಿಸಿಕೊಂಡಿದ್ದರು. ಎಷ್ಟೋ ವರ್ಷ ಹಳೆಯದಾದ ಮರಗಳನ್ನು ತೋಟ ಮಾಡುವಾಗ ಕಡಿದು ಹಾಕುವವರನ್ನು ಕಾಣುತ್ತೇವೆ. ಆ ಮರಗಳು ಹಿಂದಿನವರು ಹಾಕಿ ಪೋಷಿಸಿದ್ದು. ಅವುಗಳು ಗಾಳಿ ತಡೆಗೆ, ನೀರು ಭೂಮಿಯೊಳಕ್ಕೆ ಇಂಗುವುದಕ್ಕೆ, ಮಣ್ಣಿನ ಸವೆತದ ತಡೆಗೆ, ಗೊಬ್ಬರಕ್ಕೆ ಹಾಗೂ ಮುಚ್ಚಿಗೆಗೆ ಎಷ್ಟೊಂದು ಸಹಾಯ ಮಾಡಬಲ್ಲವು. ಆದರೂ ಅರಿಯದೆಯೋ, ಅರಿತೋ ಅವುಗಳನ್ನು ಉಳಿಸಿಕೊಳ್ಳುವ ಜನರು ತುಂಬಾ ಕಡಿಮೆ. ಹೀಗಾಗಿ ಶಿವು ಅವರ ತೋಟದಲ್ಲಿ ಅಂತಹ ಕೆಲವು ಮತ್ತಿಯ ಮರಗಳನ್ನು ಉಳಿಸಿಕೊಂಡು ಅವುಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದು ವಿಶೇಷ ಅನಿಸಿತು.

ಶಿವು ಅವರ ತೋಟದ ಇಷ್ಟೊಂದು ಒಳ್ಳೆಯ ಬೆಳವಣಿಗೆಗೆ ಅವರ ತಂದೆ ಶ್ರೀ. ಸಿದ್ದಪ್ಪ ಅವರೇ ಕಾರಣ ಅಂತ ಅವರು ಹೇಳಿದರು. ತಂದೆಯವರಿಗೆ 70 ರ ಹರೆಯ. ಆ ಹೊಲವನ್ನು ಕೊಂಡ ಮೇಲೆ ಅಲ್ಲಿಯೇ ಮನೆ ಕಟ್ಟಿಕೊಂಡು, ಉಳಿದು ಕೃಷಿ ಸಂಬಂಧಿತ ಎಲ್ಲ ಕೆಲಸಗಳನ್ನೂ ತಾವೇ ನೋಡಿಕೊಳ್ಳುತ್ತಾರಂತೆ. ಇಡೀ ತೋಟವನ್ನು ನಮಗೆ ಅವರು ತೋರಿಸುತ್ತಿದ್ದಾಗ ಅವರ ಮುಖದಲ್ಲಿ ಅದೊಂದು ಹೆಮ್ಮೆ ಇತ್ತಲ್ಲ, ಅದನ್ನು ವರ್ಣಿಸಲು ಅಸಾಧ್ಯ! ಅವರ ಉತ್ಸಾಹ ಕಂಡು ಬೆರಗಾದೆ. ಅಡಿಕೆ ಮುಖ್ಯ ಬೆಳೆ ಆದರೂ ತಮಗೆ ಬೇಕಾದ ವಿವಿಧ ಹಣ್ಣಿನ ಗಿಡಗಳನ್ನು ಕೂಡ ಹಾಕಿದ್ದಾರೆ. ಮನೆಗೆ ಬೇಕಾದ ಅಕ್ಕಿ, ಜೋಳ, ರಾಗಿಯನ್ನೂ ಕೂಡ ಯಾವುದೇ ರಾಸಾಯನಿಕ ಬಳಸದೆ ಬೆಳೆಯುತ್ತಾರೆ.

ಹಾಗೆಯೇ ಮಾತಾಡುತ್ತಾ ಅವರು ಮೂಲತಃ ಹಾವೇರಿಯವರೆಂದು ತಿಳಿಯಿತು. ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಅವರು ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಸುಮ್ಮನೆ ಕಳೆಯುವ ಮನಸ್ಸಿಲ್ಲದೆ ಕೃಷಿಗೆ ಧುಮುಕಿದರು. ಮಗ ಕೂಡ ಅವರ ಜೊತೆಗೆ ಕೈ ಜೋಡಿಸಿದರು. ಹಲವು ವರ್ಷಗಳ ಹಿಂದೆ ಈ ಜಮೀನು ಕೊಂಡು ತೋಟ ಮಾಡುವ ಕಾಯಕದಲ್ಲಿ ಸಾರ್ಥಕತೆಯನ್ನು ಕಂಡುಕೊಂಡರು. ಅವರ ಬಳಿ ಒಂದು ಸಣ್ಣ ಟ್ರ್ಯಾಕ್ಟರ್ ಕೂಡ ಇದೆ. ಅಳುಗಳ ಮೇಲೆ ಅವಲಂಬಿಸದೆ ಅದೇ ಟ್ರ್ಯಾಕ್ಟರ್ ಬಳಸಿ ತೋಟದಲ್ಲಿ ಹಲವಾರು ಕೆಲಸಗಳನ್ನು ಎಷ್ಟೋ ಸಲ ಅಪ್ಪ ಮಗ ಸೇರಿಯೇ ಮಾಡಿ ಮುಗಿಸಿಬಿಡುತ್ತಾರೆ. ಅವರಿಬ್ಬರದೂ ಒಂದು ಅಪರೂಪದ ಜೋಡಿ!

ನಾನು ಅವರ ತೋಟಕ್ಕೆ ಹೋಗಿದ್ದಾಗ ಇನ್ನೊಂದೆರಡು ಎಕರೆಯಲ್ಲಿ ಹೊಸತಾಗಿ ಅಡಿಕೆ ತೋಟ ಮಾಡುವ ಪ್ರಯತ್ನ ನಡೆದಿತ್ತು. ಅವರ ಎರಡನೇ ಹಂತದ ಅಡಿಕೆ ತೋಟದ ಸ್ಥಳದ ವೀಕ್ಷಣೆ ಮಾಡುವಾಗ ಇನ್ನೊಂದು ವಿಶೇಷವನ್ನು ಗಮನಿಸಿದೆ. ಸಾಮಾನ್ಯವಾಗಿ ಅಡಿಕೆಯ ಸಸಿಯನ್ನು ನೆಡುವಾಗ ಒಂದು ನಿರ್ದಿಷ್ಟ ಅಂತರದಲ್ಲಿ ಗುದ್ದುಗಳನ್ನು ಮಾಡಿ ನೆಡುತ್ತಾರೆ. 9 ಅಡಿ * 9 ಅಡಿ ಇಲ್ಲವೇ ಇನ್ನೂ ಹತ್ತಿರ ಕೂಡ ಕೆಲವರು ನೆಡುತ್ತಾರೆ. ಹಾಗೆ ಮಾಡಿ ಮಧ್ಯದಲ್ಲಿ trench ಅಥವಾ ಕಾಲುವೆಗಳನ್ನು ಮಾಡುತ್ತಾರೆ. ಕಾಲುವೆಗಳು ಕೂಡ ಎರಡು ತರಹ ಇರುತ್ತವೆ. ಮಲೆನಾಡಿನ ಕಡೆಯಾದರೆ ಕಾಲುವೆಗಳು ನೀರನ್ನು ಹೊರ ಹಾಕಲು ಇರುತ್ತವೆ. ಯಾಕಂದರೆ ಅಲ್ಲಿ ನೀರು ಹೆಚ್ಚಾಗಿ ಬೇರುಗಳಿಗೆ ತೊಂದರೆ ಆದೀತು ಎಂಬ ಕಾರಣಕ್ಕೆ. ಅದೇ ಒಣ ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಕಾಲುವೆ ಮಾಡುತ್ತಾರೆ. ಹಾಗೆ ನೀರನ್ನು ಹಿಡಿದಿಡಲು ಅಥವಾ ಇಂಗಿಸಲು ಸಹಾಯವಾಗುವ ಕಾಲುವೆಗಳು ಇಳಿಜಾರಿಗೆ ಅಥವಾ ನೀರಿನ ಹರಿವಿಗೆ ಅಡ್ಡಲಾಗಿ ಇರುತ್ತವೆ. ಹೇಗೆ ಮಾಡಿದಾಗ ನೀರು ಹಾಗೂ ಮಣ್ಣು ಪೋಲಾಗುವುದು ತಪ್ಪುತ್ತದೆ.

ಆದರೆ ಶಿವು ಅವರ ಈ ಹೊಸ ತೋಟದಲ್ಲಿ 9 ಅಡಿಗೆ ಒಂದರಂತೆ ಕಾಲುವೆ ತೆಗೆದಿದ್ದರು. ಪ್ರತಿ ಕಾಲುವೆ ಒಂದೂವರೆ ಅಡಿ ಅಗಲ ಹಾಗೂ ಒಂದೂವರೆ ಅಡಿ ಆಳ ಇತ್ತು. ಆ ಕಾಲುವೆಗಳ ಒಳಗೆ ಪ್ರತಿ 9 ಅಡಿಗೆ ಒಂದು ಅಡಿಕೆ ಸಸಿ ನೆಡುವುದು ಅವರ ಯೋಜನೆಯಾಗಿತ್ತು. ಮೊದಲ ಸಲ ಮಾಡಿದ ತೋಟ ಕೂಡ ಹೀಗೆಯೇ ಮಾಡಿದ್ದಂತೆ. ಅದರಲ್ಲಿ ಯಶಸ್ಸು ಕಂಡ ಮೇಲೆ ಇನ್ನೊಂದು ತೋಟದ ತಯಾರಿಗೆ ಕೈ ಹಾಕಿದ್ದರು. ಇದು ತುಂಬಾ ಮುಖ್ಯ. ಹೊಸದಾಗಿ ಮಾಡುವವರು ಇದರಿಂದ ಕಲಿಯಬೇಕು. ಒಬ್ಬರು ಯಾರೋ ಮಾಡಿದ್ದಾರೆ ಅಂತ ಸಿಕ್ಕಾಪಟ್ಟೆ ದುಡ್ಡು ಹಾಕಿ ಪೂರ್ತಿ ಜಮೀನಿನಲ್ಲಿ ಯಾವುದೋ ಒಂದು ಯೋಜನೆಯನ್ನು ಅಳವಡಿಸುವ ಬದಲು ಮೊದಲು ಚಿಕ್ಕದಾಗಿ ಒಂದು ಎಕರೆಯಷ್ಟು ಪ್ರಯೋಗ ಮಾಡಿ ಅದು ಯಶಸ್ವಿಯಾದರೆ ಮುಂದೆ ಹೋಗುವುದು ಒಳ್ಳೆಯದು.

ಹೀಗೆ ಕಾಲುವೆಗಳಲ್ಲಿ ಬೆಳೆಯುವುದರಿಂದ ಏನು ಪ್ರಯೋಜನ ಅಂತ ಕೇಳಿ ತಿಳಿದುಕೊಂಡೆ. ಅಡಿಕೆ ಗಿಡ ಚಿಕ್ಕದಿರುವಾಗ ಅದಕ್ಕೆ ಬೆಳಕು ಕಡಿಮೆ ಬೇಕು. ಅದಕ್ಕೆ ಆಂಗ್ಲ ಭಾಷೆಯಲ್ಲಿ photo sensitive ಅಂತಾರೆ. ಹೀಗೆ ಕಾಲುವೆಗಳಲ್ಲಿ ನೆಡುವುದರಿಂದ ಅದಕ್ಕೆ ಸೂರ್ಯನ ಬೆಳಕು ನೇರವಾಗಿ ಬೀಳದೆ ಸ್ವಲ್ಪ ನೆರಳು ಸಿಗುತ್ತದೆ. ಅದೂ ಅಲ್ಲದೆ ಜೊತೆಗೆ ಕಾಲುವೆ ತೆಗೆದಾಗ ಸಿಕ್ಕ ಮಣ್ಣು ಕೂಡ ಪಕ್ಕದಲ್ಲಿ ಲಭ್ಯ ಇರುತ್ತದೆ. ಗಿಡದ ಬೆಳವಣಿಗೆ ಆದಂತೆ ಪಕ್ಕದ ಮಣ್ಣನ್ನು ತೆಗೆದು ಬೇರುಗಳ ಬುಡಕ್ಕೆ ಹಾಕುತ್ತಾ ಹೋಗುತ್ತಾರೆ. ಈ ರೀತಿ ಮಾಡಿದಾಗ ಕಾಲುವೆಗಳಲ್ಲಿ ಗೊಬ್ಬರ ಹಾಕುವುದು ಕೂಡ ತುಂಬಾ ಸುಲಭ. ಕಡಿಮೆ ಕೆಲಸಗಾರರು ಇದ್ದರೂ ಸಾಕು. ಯಾಕೆಂದರೆ ಹೆಚ್ಚಿನ ಕೆಲಸವನ್ನು JCB ಯಂತ್ರ ಮಾಡಿರುತ್ತದೆ. ವರ್ಷವರ್ಷವೂ ನಿರ್ವಹಣೆ ಕೂಡ ಸುಲಭ. ಕೆಲಸಕ್ಕೆ ಯಾರೂ ಬರೋದಿಲ್ಲ ಅನ್ನುತ್ತ ಕೂತರೆ ಕೆಲಸ ಆಗುವುದು ಹೇಗೆ? ಹೀಗೆ ಯಂತ್ರಗಳನ್ನು ಬಳಸಿ ಹೊಸ ಹೊಸ ಉಪಾಯಗಳನ್ನು ಕಂಡುಕೊಳ್ಳಬೇಕು. ಅಲ್ಲಿಗೆ ಹೋಗಿ ನಾನೊಂದು ಹೊಸ ಸಂಗತಿಯನ್ನು ಕಲಿತಿದ್ದೆ. ಪ್ರತಿಯೊಬ್ಬರಿಂದಲೂ ಕಲಿಯುವುದು ಸಾಕಷ್ಟು ಇರುತ್ತದೆ. ನಮ್ಮ ಕಿವಿಗಳು ತೆರೆದಿರಬೇಕು ಅಷ್ಟೇ!

ಅಪ್ಪ ಮಕ್ಕಳ ಜೋಡಿಯನ್ನು ನೋಡಿದಾಗ ಇವರು ನಿಜವಾದ ಬಂಗಾರದ ಮನುಷ್ಯರು ಅಂತ ಅನಿಸಿತು. ಬೆಂಗಳೂರಿನಿಂದ ಆಗಾಗ ಬಂದು ತಂದೆಯ ಜೊತೆಗಿದ್ದು ಕೆಲವು ಕೆಲಸಗಳಲ್ಲಿ ಅವರಿಗೆ ಸಹಾಯ ಮಾಡುತ್ತಾ ಇಷ್ಟೆಲ್ಲಾ ಸಾಧನೆ ಮಾಡಿದ್ದು ನೋಡಿ ತುಂಬಾ ಖುಷಿಯಾಯಿತು. ನನ್ನ ಹಾಗೆಯೇ software ಉದ್ಯಮದಲ್ಲಿ ಕೆಲಸ ಮಾಡಿ ಅನುಭವ ಇರುವ ಶಿವು ಅವರು ಹೇಳಿದ ಕೆಲವು ಅನುಭವದ ಮಾತುಗಳು ಹೊಸಬರಿಗೆ ದಾರಿದೀಪ ಆಗಬಲ್ಲವು ಅನಿಸಿತು.

Software ನಲ್ಲಿ ಇರುವ ಎಷ್ಟೋ ಯುವಕರು ಹಾಗೂ ಮಧ್ಯ ವಯಸ್ಕರು ಒತ್ತಡದ ಜೀವನ ಬೇಡಾ ಅಂತ ಕೃಷಿಗೆ ಬರುತ್ತಾರೆ. ಆದರೆ ಕೃಷಿಯಲ್ಲಿ ಇರುವ ಒತ್ತಡಗಳನ್ನು ನಿರ್ವಹಣೆ ಮಾಡುವುದರಲ್ಲಿ ಸುಸ್ತಾಗಿ ಮೊದಲಿದ್ದ ಒತ್ತಡವೆ ಸೈ ಅಂತ ವಾಪಸ್ಸಾಗುತ್ತಾರೆ. Stress ಆಗಿದೆ ಅಂತ ಕೃಷಿಗೆ ಬರಬಾರದು ಅಂತ ಅವರು ಹೇಳಿದ್ದು ಕಟು ಸತ್ಯ ಆಗಿತ್ತು. ಮೊದಲೆಲ್ಲ ಏನೂ ಮಾಡಲು ಆಗೋಲ್ಲ ಅನ್ನುವವನಿಗೆ ಹೋಗು ಹೊಲ ಆದರೂ ಮಾಡು ಅಂತಿದ್ದರು, ಈಗ ಹಾಗಲ್ಲ. ವ್ಯವಸಾಯ ಮಾಡಲು ಗುಂಡಿಗೆ ಬೇಕು, ಶ್ರಮದ ಜೊತೆಗೆ ತಲೆಯನ್ನು ಕೂಡ ಉಪಯೋಗಿಸಬೇಕು.

ನಾವು ಅಂದುಕೊಂಡ ಹಾಗೆ ಏನೂ ಕೆಲಸಗಳು ಆಗೋಲ್ಲ. ಕೆಲಸಗಾರರು ಬರುತ್ತಾರೆ ಅಂತ ಕಾದರೂ ಅವರು ಬರೋದಿಲ್ಲ. ಬಂದರೂ ಅವರ ಹಿಂದೆ ಬಿದ್ದು ಕೆಲಸ ಮಾಡಿಸುವುದು ಅಷ್ಟು ಸುಲಭ ಅಲ್ಲ. ಅವರು ಬಂದಿಲ್ಲ ಅಂದರೂ ಯಂತ್ರಗಳ ಸಹಾಯದಿಂದ ಏನೇನು ಮಾಡಿಕೊಳ್ಳಬಹುದು ಎಂಬುದನ್ನು ನಾವು ಮೊದಲೇ ನಿರ್ಧರಿಸಿ ಇಟ್ಟುಕೊಳ್ಳಬೇಕು. ಒಂದು ಸಲ ಕಳೆಗಳು ಜಾಸ್ತಿಯಾಗಿ ಅದನ್ನು ಸವರಲು ಕೆಲಸಗಾರರಿಗೆ ಹೇಳಿದರೂ ಅವರು ಬರಲಿಲ್ಲವಂತೆ. ಮಿನಿ tractor ಇತ್ತಲ್ಲ! ಅದರಲ್ಲೇ ಕಳೆಯನ್ನೆಲ್ಲ ಅರ್ಧ ಗಂಟೆಯಲ್ಲಿ ಸವರಿದೆ ಅಂತ ಶಿವು ಹೇಳುತ್ತಿದ್ದರು. ಇದು ಒಂದು ಸಮಸ್ಯೆಯಾದರೆ ಎಷ್ಟೋ ಸಲ Power ಇರಲ್ಲ. ನೀರು ಬಿಡಲು ಸಾಧ್ಯವಾಗುವುದಿಲ್ಲ. Current ಇದ್ದರೂ ಪಂಪ್ ಚಾಲು ಆಗೋದಿಲ್ಲ. ಪಂಪ್ ಹಾಳಾಗಿ ನೀರು ಕೊಡುವುದು ಸಾಧ್ಯವೇ ಆಗೋದಿಲ್ಲ. ಒಂದೇ ಎರಡೇ?

ಯಾವುದೋ ಹುರುಪಿನಲ್ಲಿ ಏನೂ ವಿಚಾರಿಸದೆ ಜಮೀನು ಖರೀದಿ ಮಾಡುತ್ತೇವೆ. ಅದರ record ಸರಿ ಇರೋದಿಲ್ಲ. ಆ ಹೊಲಕ್ಕೆ ಒಂದು ಸರಿಯಾದ ಹಾದಿ ಕೂಡ ಇರೋದಿಲ್ಲ. ಪಕ್ಕದ ತೋಟದವರಿಂದ ಕಷ್ಟಗಳು ಬರಬಹುದು. Court ಕಚೇರಿಗೆ ಅಲೆದಾಡುವ ಭಾಗ್ಯವೂ ಸಿಗಬಹುದು! ಕೆಲಸ ಮಾಡುವ ಖುಷಿಗಿಂತ ಬೇರೆ ಕಿರಿಕಿರಿಗಳಲ್ಲೇ ಸಮಯ ವ್ಯರ್ಥ ಆಗುತ್ತದೆ. ಹೀಗಾಗಿ ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ, ಹಂತ ಹಂತವಾಗಿ ತೋಟವನ್ನು ನಿರ್ಮಾಣ ಮಾಡಬೇಕು. ನಮ್ಮ software ಉದ್ಯಮದಲ್ಲಿ ಅಥವಾ ಯಾವುದೇ project ಮಾಡುವಾಗ, ಮೊದಲು design ಮಾಡಿ ಆಮೇಲೆ execution ಮಾಡುತ್ತಾರೆ. ಹಾಗೆಯೇ ಇಲ್ಲಿ ಕೂಡ ನಮ್ಮ ಕನಸಿನ ತೋಟವನ್ನು ಮೊದಲು ಡಿಸೈನ್ ಮಾಡಬೇಕು.

ಶಿವು ಅವರನ್ನು ಸುನಿಲ ಅವರಿಗೂ ಪರಿಚಯ ಮಾಡಿಸಲು ಅವರಿಗೆ ಫೋನ್ ಮಾಡಿದೆ. ಅವರೂ ಭೇಟಿಯಾಗಲು ಉತ್ಸಾಹ ತೋರಿದರು. ನಾಳೆ ನಿಮ್ಮ ತೋಟದಲ್ಲಿ ಸಿಗೋಣ ಅಂತ ಅವರಿಗೆ ಹೇಳಿದೆ. ಬಂಗಾರದ ಮನುಷ್ಯರ ತೋಟದ ಗುಂಗಿನಲ್ಲಿ ಅಲ್ಲಿಂದ ದಾಸನಕೊಪ್ಪಕ್ಕೆ ಬಂದಾಗ ಏಳು ಗಂಟೆ. ಹಳ್ಳಿಗೆ ಬಂದಾಗ ಕನಿಷ್ಟ ಒಮ್ಮೆಯಾದರೂ ನನ್ನ ಮೆಚ್ಚಿನ ಮಿರ್ಚಿ ಮಂಡಕ್ಕಿ ತಿನ್ನದೇ ಇರಲಾರೆ. ನಮ್ಮ ಕಡೆ ಮಿರ್ಚಿ ಅಂದರೆ ಕಡಲೆ ಹಿಟ್ಟು ಕಲಸಿ ಮೆಣಸಿನಕಾಯಿಗೆ ಮೆತ್ತಿ ಎಣ್ಣೆಯಲ್ಲಿ ಕರಿದು ಕೊಡುತ್ತಾರೆ. ಮೆಣಸಿನಕಾಯಿ ತುಂಬಾ ಖಾರ ಇರುತ್ತದೆ. ರೂಡಿಯಿಲ್ಲದ ಕೆಲವರು ಬರಿ ಕರಿದ ಕಡಲೆ ಹಿಟ್ಟನ್ನು ಮಾತ್ರ ತಿನ್ನುತ್ತಾರೆ. ಆದರೆ ಮೆಣಸಿನಕಾಯಿಯ ಜೊತೆ ಜೊತೆಗೆ ತಿನ್ನುವ ಮಜವೆ ಬೇರೆ. ಆ ಖಾರಕ್ಕೆ ತಲೆ ಬಿಸಿಬಿಸಿಯಾಗಿ, ಬೆವರಿ, ಕಿವಿಗಳಲ್ಲಿ ಬಿಸಿ ಗಾಳಿ ಬರುವ ಕ್ರಿಯೆಯನ್ನು ಅನುಭವಿಸಿಯೇ ತಿಳಿಯಬೇಕು! ಮಿರ್ಚಿ ಜೊತೆಗೆ ಹಚ್ಚಿದ ಕೆಂಪು ಮಂಡಕ್ಕಿಯನ್ನೂ ಕೊಡುತ್ತಾರೆ. ಅದು ಉಚಿತವಾಗಿ ಕೊಡುವ sides! ಅಲ್ಲಿನ ಮಂಜುನಾಥ ಹೋಟೆಲಿನಲ್ಲಿ ಎರಡು ಬಿಸಿ ಬಿಸಿ ಮಿರ್ಚಿ ತಿಂದು ತೇಗಿ ಮನೆಗೆ ಬಂದು ಮಲಗಿದೆ…

(ಮುಂದುವರಿಯುವುದು..)