ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು.
ಎನ್.‌ ಸಂಧ್ಯಾರಾಣಿ ಅನುವಾದಿಸಿರುವ ರೆಬೆಲ್‌ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅವರ ಆತ್ಮಕಥನ “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

ಸರಿ, ನಾನು ನನ್ನ ಕಿರುಗುಡುತ್ತಿದ್ದ ಹಳೆಯ ಜೀಪಿನಲ್ಲಿ ರಾಜರ ಕಲ್ಲು-ಮರದ ಅರಮನೆಗೆ ಹೋದೆ. ಮನೆಯಲ್ಲಿ ಅವರೊಬ್ಬರೇ ಇದ್ದರು. ರಾಣಿಯವರು ಬೆಂಗಳೂರಿನಲ್ಲಿ ರಾಜ್ಯದ ಕಾರುಬಾರನ್ನು ನಿರ್ವಹಿಸುವ ಕರ್ತವ್ಯದಲ್ಲಿದ್ದರು. ಅವರ ಚಹಾದ ಆಹ್ವಾನವನ್ನು ನಯವಾಗಿ ನಿರಾಕರಿಸಿದ ನಾನು, ಬಂದ ಉದ್ದೇಶವನ್ನೂ, ಸಾಲ ಮರುಪಾವತಿ ಮಾಡದಿದ್ದರೆ ನಾನು ತೆಗೆದುಕೊಳ್ಳುವ ಕ್ರಮವನ್ನೂ ವಿವರಿಸಿದೆ. ನಾನು ಮಾಡುತ್ತಿರುವುದು ತಮಾಷೆಯಲ್ಲ ಎಂದು ಅರಿವಾದಾಗ ಅವರು ಇನ್ನೇನು ಪಕ್ಷವಾತ ಆಗುತ್ತದೇನೋ ಎನ್ನುವಷ್ಟು ಅಧೀರರಾದರು. ಆ ಕಾಲದಲ್ಲಿ ಮೊಬೈಲ್ ಫೋನ್‌ಗಳಂತೂ ಇರಲಿಲ್ಲ, ಇದ್ದ ಲ್ಯಾಂಡ್ ಲೈನ್ ಸಹ ಕೆಲಸ ಮಾಡುತ್ತಿರಲಿಲ್ಲ. ರಾಣಿಸಾಹೇಬ ಬೆಂಗಳೂರಿನಲ್ಲಿದ್ದಾರೆ, ನೀವು ದಯಮಾಡಿ ಅವರನ್ನೇ ಸಂಪರ್ಕಿಸುವಿರಾ ಎಂದು ಕೇಳಿದರು. ನಾನು ಅದನ್ನು ನಿರಾಕರಿಸಿದೆ. ನನ್ನ ತಂಡ ಜಪ್ತು ಮಾಡಬೇಕಿರುವ ಸಾಮಾನುಗಳ ಹುಡುಕಾಟಕ್ಕೆ ಕಾರ್ಯಪ್ರವೃತ್ತವಾಯಿತು. ಸುಮಾರು ಒಂದು ಗಂಟೆಯ ನಂತರ, ಅವೆಲ್ಲದರೊಡನೆ ನನ್ನ ಮೆರವಣಿಗೆ ಲಿಂಗಸುಗೂರಿನ ಕಡೆಗೆ ತೆರಳಿತು, ರಾಜಾ ಸಾಹೇಬ್ ದಿಗ್ಮೂಢರಾಗಿ, ಕುಸಿದು ಕುಳಿತಿದ್ದರು. ನಾನು ಹೊರಡುವುದಕ್ಕೂ ಮೊದಲು, ಕಂದಾಯ ಅಧಿಕಾರಿ ಪಂಚನಾಮೆ ಮಾಡಿ, ಕಾನೂನಿನ ಪ್ರಕಾರ ಅಸಿಸ್ಟೆಂಟ್ ಕಮಿಷನರ್ ಅವರು, ಟ್ರ್ಯಾಕ್ಟರ್ ಇತ್ಯಾದಿಗಳನ್ನು ಜಪ್ತು ಮಾಡಿದ್ದಾರೆ ಎಂದು ಬರೆದು, ಹಿಂಜರಿಯುತ್ತಿದ್ದ ಪಂಚರಿಂದ ಅದಕ್ಕೆ ಸಾಕ್ಷಿ ಹಾಕಿಸಿದ್ದರು. ಹಳ್ಳಿಯಲ್ಲಿನ ಅನೇಕ ಹಳ್ಳಿಗರು ಅವರ ಮಟ್ಟಿಗೆ ಅತ್ಯಪರೂಪದ ಈ ದೃಶ್ಯವನ್ನು ಕಿಕ್ಕಿರಿದು ನೋಡುತ್ತಿದ್ದರು. ನಾನು ಆಫೀಸ್ ತಲುಪುವಷ್ಟರಲ್ಲಿ ಮಧ್ಯಾಹ್ನವೇ ಆಗಿತ್ತು. ಏಕೆಂದರ ಜಾಫರ್‌ಗಾಗಲಿ, ಬರ್ಹಾನ್‌ಗಾಗಲಿ ಟ್ರಾಕ್ಟರ್ ಚಾಲನೆ ಸಲೀಸಾಗಿರಲಿಲ್ಲ. ಇನ್ನು ನಾನು, ಬಿಡಿಓ ರವರ, ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದ, ಮನಸುಖರಾಯನಂತಹ ಜೀಪನ್ನು ಹುಷಾರಾಗಿ ಓಡಿಸಬೇಕಿತ್ತು. 1965ರಲ್ಲಿ ಮಸ್ಸೂರಿಯಲ್ಲಿ ನಡೆದ ನಮ್ಮ ತರಬೇತಿಯ ಸಮಯದಲ್ಲಿ ನಮಗೆ ಮೊಂಡು ಕುದುರೆಗಳನ್ನು ಓಡಿಸುವುದನ್ನು ಕಲಿಸುತ್ತಿದ್ದರೇ ಹೊರತು, ಕಾರು ಚಾಲನೆಯನ್ನಲ್ಲ. ಅಂತೂ ಇಂತೂ ನನ್ನ ಆಫೀಸಿನ ಮುಂದೆ, ಅವಸರವಸರವಾಗಿ ‘ಸರಕಾರಿ ಸಾಲವನ್ನು ಹಿಂದಿರುಗಿಸದೆ ಇದ್ದ ಕಾರಣ ಜಪ್ತು ಮಾಡಲಾಗಿದೆ’ ಎಂದು ಬರೆದಿದ್ದ ಬೋರ್ಡಿನ ಕೆಳಗೆ ಆ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲಾಯಿತು. ಅಂದು ವಾರದ ಸಂತೆ ಬೇರೆ. ಸುತ್ತಮುತ್ತಲ ಹಳ್ಳಿಗಳಿಂದ ಬಂದ ಅನೇಕರು ಟ್ರ್ಯಾಕ್ಟರ್ ನೋಡಲು ಬರುತ್ತಿದ್ದರು.

(ಎನ್.‌ ಸಂಧ್ಯಾರಾಣಿ)

1857ರ ನಂತರ ಲಿಂಗಸುಗೂರು ಕೆಲವು ದಶಕಗಳ ಕಾಲ ಜಿಲ್ಲಾಕೇಂದ್ರವೂ ಆಗಿದ್ದರಿಂದ ಅಲ್ಲಿ ಭವ್ಯವಾದ ಸರಕಾರಿ ಕಟ್ಟಡ ಇದ್ದು, ನನ್ನ ಆಫೀಸು, ತಹಸಿಲ್ದಾರ್ ಕಛೇರಿ, ಟ್ರೆಷರಿ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲವೂ ಅದೇ ಕಟ್ಟಡದಲ್ಲಿತ್ತು. ಅಂತಹ ಭವ್ಯ ಕಟ್ಟಡದ ಮುಂದೆ ನಿಲ್ಲಿಸಿದ್ದ ಈ ಟ್ರ್ಯಾಕ್ಟರ್‌ಗಳು ಹಲವು ದಿನಗಳವರೆಗೂ ಊರಿನ ಪ್ರವಾಸಿ ಕೇಂದ್ರದಂತೆ ಆಗಿಹೋಗಿದ್ದವು!

ಎದುರು ನೋಡಿದಂತೆಯೇ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನನಗೆ ಕಂದಾಯ ಸಚಿವರಿಂದ ಕರೆ ಬಂತು. ಅದೊಂದು ಅಪರೂಪದ ಕರೆ, ಏಕೆಂದರೆ ಸಾಧಾರಣವಾಗಿ ಕಂದಾಯ ಸಚಿವರು ಜಿಲ್ಲಾಧಿಕಾರಿಗಳಿಗಿಂತ ಕೆಳಗಿನ ಮಟ್ಟದ ಅಧಿಕಾರಿಗಳಿಗೆ ಹಾಗೆ ಕರೆ ಮಾಡುತ್ತಿರಲಿಲ್ಲ. ಕಂದಾಯ ಸಚಿವರಾಗಿದ್ದ ಬಿ ರಾಚಯ್ಯನವರು ಸಂಭಾವಿತರು, ಮೈಸೂರು ಜಿಲ್ಲೆಯ ದಲಿತ ಕುಟುಂಬದಿಂದ ಬಂದವರು. ಜಮೀನ್ದಾರಿ ಮನೆತನದ ಈ ಲಿಂಗಾಯತ ಸಾಹುಕಾರರ ಮೇಲೆ, ಅದೂ ದೂರದ ಹೈದರಾಬಾದ್ ಕರ್ನಾಟಕಕ್ಕೆ ಸೇರಿದವರ ಮೇಲೆ ಅವರಿಗ್ಯಾವುದೇ ವಿಶೇಷ ಪ್ರೀತಿ ಇರಲಿಲ್ಲ. ಏನಾಯಿತೆಂದು ನನ್ನಿಂದ ತಿಳಿದುಕೊಂಡ ನಂತರ ಅವರು, ‘ರಾಜಾಸಾಹೇಬರಿಂದ ಸಾಲ ವಾಪಸ್ ಮಾಡುತ್ತೇವೆʼ ಎಂದು ಮುಚ್ಚಳಿಕೆ ಬರೆಸಿಕೊಂಡು ನೀವ್ಯಾಕೆ ಟ್ರ್ಯಾಕ್ಟರ್‌ಗಳನ್ನು ಹಿಂದಿರುಗಿಸಬಾರದು? ಮಂತ್ರಿಗಳಿಗೆ ಇದು ಪ್ರತಿಷ್ಟೆಯ ವಿಷಯವಾದಂತೆ ಕಾಣಿಸುತ್ತಿದೆ’ ಎಂದರು. ನಾನು ಸ್ವಲ್ಪ ದಾರ್ಷ್ಟ್ಯದಿಂದಲೇ, ‘ಸಾರ್ ಇದೊಂದು ಹಳೆಯ ಬಾಕಿ. ಈಗಲೂ ಖಚಿತವಾದ ನೆಲಕಂದಾಯ ಕಾಯ್ದೆಗೆ ಅನುಸಾರವಾಗಿಯೇ ಇದನ್ನು ಜಪ್ತು ಮಾಡಲಾಗಿದೆ. ಹಾಗೂ ಟ್ರ್ಯಾಕ್ಟರುಗಳನ್ನು ಬಿಟ್ಟುಕೊಡಬೇಕು ಎಂದರೆ ಮಾನ್ಯ ಕಂದಾಯ ಸೆಕ್ರೆಟರಿಗಳು ಒಂದು ಸರಕಾರಿ ಆದೇಶ ಕೊಡಬಹುದೆ?’ ಎಂದು ಕೇಳಿದೆ. ಕಂದಾಯ ಕಾಯ್ದೆಗಳ ಬಗ್ಗೆ ನನಗೆ ಖಚಿತವಾದ ತಿಳುವಳಿಕೆ ಇತ್ತು, ಒಮ್ಮೆ ಆದೇಶದ ಮೂಲಕ ಕಂದಾಯ ಅಧಿಕಾರಿ ಯಾವುದೇ ಅಡಮಾನದ ಆಸ್ತಿಯನ್ನು ಜಪ್ತು ಮಾಡಿದರೆ, ಅದಕ್ಕೆ ಸಂಬಂಧಿಸಿದ ಅಪೀಲನ್ನು ಕೇವಲ Mysore Revenue Appellate Tribunal ಗೆ ಮಾತ್ರ ಸಲ್ಲಿಸಬಹುದಾಗಿದ್ದು, ಸಾಲ ವಾಪಸಾತಿ ಆಗದೆ ಇದ್ದಲ್ಲಿ ಸರಕಾರ ಅದರ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಜೊತೆಗೆ ನಾನು ಟೆಲಿಫೋನ್ ಸಂಪರ್ಕ ಸರಿ ಇಲ್ಲದಂತೆ ನಟಿಸಿ, ರಿಸೀವರ್ ಕೆಳಗಿಟ್ಟಿದ್ದೆ.

ಇದಾದ ಮೇಲೆ ಕಂದಾಯ ಸಚಿವರು ನನ್ನ ಜಿಲ್ಲಾಧಿಕಾರಿಗಳ ಜೊತೆಗೆ ಕೂಡ ಮಾತನಾಡಿ, ಹೊಸ ಅಸಿಸ್ಟೆಂಟ್ ಕಮಿಷನರ್ ಸರಕಾರಿ ಆದೇಶ
ಹೊರಡಿಸಲು ಕೇಳುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆಯೇ, ದೊಡ್ಡಮೊತ್ತದ ಸಾಲ ಬಾಕಿ ಇರುವ ಸುಸ್ತಿದಾರರಿಂದ ಪ್ರಾರಂಭಿಸಿ, ಈ ಸಾಲ ವಸೂಲಾತಿಯನ್ನು ಪ್ರಾರಂಭಿಸಲಾಗಿದೆಯೇ ಎಂದೆಲ್ಲಾ ವಿಚಾರಿಸಿದರಂತೆ. ನನ್ನ ಮಾರ್ಗದರ್ಶಕರಾಗಿದ್ದ ಜಿಲ್ಲಾಧಿಕಾರಿಗಳು ನನ್ನನ್ನು ಸಮರ್ಥಿಸಿಕೊಂಡು, ಅಸಿಸ್ಟೆಂಟ್ ಕಮಿಷನರ್ ತಮ್ಮ ಆದೇಶದ ಕಾರಣದಿಂದಲೇ, ಕಾನೂನಿಗೆ ಅನುಸಾರವಾಗಿಯೇ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರಂತೆ. ಅಂತೂ ಟ್ರ್ಯಾಕ್ಟರ್‌ಗಳಿಗೆ ಸುಮಾರು ಹದಿನೈದು ದಿನಗಳು ಬಿಡುಗಡೆಯ ಭಾಗ್ಯ ಸಿಗಲಿಲ್ಲ! ಇದರ ನಡುವೆ ಇನ್ನೊಂದು ಕುತೂಹಲಕಾರಿ ಬೆಳವಣಿಗೆಯೂ ನಡೆಯಿತು. ರಾಣಿಸಾಹಿಬಾರವರು ತಾವು ಪ್ರಬಲ ಸಮರ್ಥಕರಾಗಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ದೂರನ್ನು ಒಯ್ದು, ಟ್ರ್ಯಾಕ್ಟರ್‌ಗಳನ್ನು ಕೂಡಲೇ ಬಿಡುಗಡೆ ಮಾಡಿ, ಆ ಅಸಿಸ್ಟೆಂಟ್ ಕಮಿಷನರ್‌ರನ್ನು ಅಲ್ಲಿಂದ ವರ್ಗಾವಣೆ ಮಾಡದಿದ್ದರೆ, ತಾವು ಲಿಂಗಸುಗೂರಿನಲ್ಲಿ ಮುಖ ತೋರಿಸುವಂತಿಲ್ಲ ಎಂದು ಅಲವತ್ತುಕೊಂಡರಂತೆ. ಆದರೆ ವಿಷಯವನ್ನು ಪರಾಮರ್ಶಿಸಿದ ಮುಖ್ಯಮಂತ್ರಿಗಳು, ಕಾನೂನಿನ ಪ್ರಕಾರವೇ ನಡೆದುಕೊಂಡ ನನ್ನನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರಂತೆ. ಕಡೆಗೆ ಈ ತೊಡಕಿನ ಸನ್ನಿವೇಶವನ್ನು ಸರಿದೂಗಿಸಲು ಚೀಪ್ ಸೆಕ್ರೆಟರಿ ಒಂದು ಪರಿಹಾರವನ್ನು ಸೂಚಿಸಿದರು. ಹೈದರಾಬಾದಿನಲ್ಲಿದ್ದ National Institute of Community Development ಗೆ ನನ್ನನ್ನು ಒಂದು ತಿಂಗಳ ತರಬೇತಿಗಾಗಿ ಕಳಿಸುವುದು, ರಾಯಚೂರಿನ ಅಸಿಸ್ಟೆಂಟ್ ಕಮಿಷನರ್ ಅವರನ್ನು ನನ್ನ ಅನುಪಸ್ಥಿತಿಯಲ್ಲಿ ಲಿಂಗಸುಗೂರಿಗೂ ಹೆಚ್ಚುವರಿ ಕಮಿಷನರ್ ಆಗಿ ಮಾಡುವುದು ಒಂದು ಕಡೆ. ಇನ್ನೊಂದು ಕಡೆ ಸಾಲದ ಮೊತ್ತ 72,000 ರೂಗಳನ್ನು ಮಂತ್ರಿಗಳು ಮೂರು ಕಂತಿನಲ್ಲಿ ತೀರಿಸುವುದು ಮತ್ತು ಮೊದಲ ಕಂತನ್ನು ತತ್‌ಕ್ಷಣವೇ ಕಟ್ಟಿದ ನಂತರ ಜಪ್ತು ಮಾಡಿದ ಟ್ರ್ಯಾಕ್ಟರ್‌ಗಳನ್ನು ಬಿಟ್ಟುಕೊಡುವದು. ಮುಖ್ಯಮಂತ್ರಿಗಳಿಗೆ ಸಹ ಇದು ಸಮಂಜಸವಾಗಿ ಕಂಡಿದೆ. ಅದರ ಪ್ರಕಾರವೇ ನಡೆದು, ನಾನು ತರಬೇತಿಗೆ ಹೋದ ಸಮಯದಲ್ಲಿ ಸಾಲದ ಕಂತನ್ನು ಕಟ್ಟಿ, ವಾಹನಗಳ ಬಿಡುಗಡೆ ಆಯಿತು. ಆದರೆ ನನ್ನನ್ನು ಅಲ್ಲಿಂದ ವರ್ಗ ಮಾಡಲಿಲ್ಲ. ಇದರ ಪರಿಣಾಮ ಏನಾಯಿತೆಂದರೆ ಗುಲ್ಬರ್ಗಾ ವಿಭಾಗದ ಅಧಿಕಾರಿಗಳ ವಲಯದಲ್ಲಿ ನಾನೊಬ್ಬ ಸೂಪರ್ ಹೀರೋ ಆಗಿಹೋಗಿದ್ದೆ. ವಿಐಪಿ ಟ್ರ್ಯಾಕ್ಟರ್ ಜಪ್ತು ಮಾಡಿದವರು ಎನ್ನುವ ವಿಷಯ ಎಲ್ಲಾ ಕಡೆ ಹರಡಿತ್ತು.

‘ಆ ಅರ್ಜಿಯ ಮೇಲೆ ಒತ್ತಿದ ಹೆಬ್ಬೆಟ್ಟು ಇದೇ ತಾನೆ?’ –
ಜಮೀನ್ದಾರನೊಬ್ಬನ ಕಡುಕೋಪ

1970ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರು ಇನ್ನೂ ಭಾರತದ ಸಿಲಿಕಾನ್ ವ್ಯಾಲಿ ಆಗಿರಲಿಲ್ಲ. ಆದರೆ ಅದಾಗಲೇ ಅದು ಮುಂಬೈ, ದೆಹಲಿ, ಕಲ್ಕತ್ತಾ ಮತ್ತು ಮದ್ರಾಸ್ ನಂತರ ಭಾರತದ ಅತಿದೊಡ್ಡ ಮೆಟ್ರೋಪಾಲಿಟನ್ ನಗರ ಆಗಿತ್ತು. ಅಷ್ಟರಲ್ಲಾಗಲೇ ಅಲ್ಲಿ ಅನೇಕ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್, ಭಾರತ್ ಅರ್ಥ್ ಮೂವರ್ಸ್, ಹಿಂದೂಸ್ಥಾನ್ ಮೆಶಿನ್ ಟೂಲ್ಸ್, ಜರ್ಮನ್ ಸಹಯೋಗದ ಮೈಕೋ-ಬೋಶ್ ಇದ್ದುವಲ್ಲದೆ, ಅನೇಕ ದೊಡ್ಡ ಬ್ಯಾಂಕ್ ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸ್ಥಳೀಯ ಕಛೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು. ಜೊತೆಗೆ ವೈದ್ಯಕೀಯ, ತಾಂತ್ರಿಕ ಮತ್ತು ಇನ್ನಿತರ ವೃತ್ತಿಪರ ಕೋರ್ಸ್ ಗಳ ‘ಡೊನೇಶನ್ ಕಾಲೇಜ್’ಗಳನ್ನು ಪ್ರಾರಂಭಿಸಿದ ಕೀರ್ತಿ ಸಹ ಕರ್ನಾಟಕಕ್ಕೇ ದಕ್ಕುತ್ತದೆ.

1960ರವರೆಗೂ ಭಾರತದಲ್ಲಿ ಸರ್ಕಾರಿ ವೃತ್ತಿಪರ ಕಾಲೇಜುಗಳು ಮಾತ್ರ ಇದ್ದವು. ಈ ಬಗ್ಗೆ ಸರಕಾರದ ಬದಲಾದ ನೀತಿಯ ಕಾರಣದಿಂದ ರಾಜ್ಯದಲ್ಲಿ ಮೆಡಿಕಲ್ ಮತ್ತು ಎಂಜನಿಯರಿಂಗ್ ಕಾಲೇಜುಗಳ ಮಹಾಸ್ಪೋಟವೇ ಆಯಿತು. ಅವುಗಳ ಪರವಾನಗಿ ಪಡೆಯಲು ದೊಡ್ಡ ಮೊತ್ತದ ಲಂಚ ಕೊಡಬೇಕಾಗುತ್ತಿತ್ತು ಎನ್ನುವ ಮಾತು ಬೇರೆ. ಹಾಗಾಗಿ ಬೇರೆ ರಾಜ್ಯದ ವಿದ್ಯಾರ್ಥಿಗಳು, ದೊಡ್ಡ ಮೊತ್ತದ ಡೊನೇಶನ್ ಸಲ್ಲಿಸಿ, ಕರ್ನಾಟಕದ ಈ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್ ಸೀಟು ಪಡೆಯುವುದು ಸಾಮಾನ್ಯವಾಗಿತ್ತು. ಬೆಂಗಳೂರಿನಲ್ಲಿ ಅನೇಕ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ, ಕೌಶಲ್ಯದೊಂದಿಗೆ ಸಿದ್ಧವಾಗಿದ್ದ ಈ ಮಾನವ ಸಂಪನ್ಮೂಲವೂ ಒಂದು ಕಾರಣ.

1960 ರ ಮಧ್ಯದ ನಂತರ ನಡೆದ ಈ ಕ್ಷಿಪ್ರ ಬೆಳವಣಿಗೆಗಳ ಕಾರಣದಿಂದ 1971 ರಲ್ಲಿ 17 ಲಕ್ಷ ಇದ್ದ ಇಲ್ಲಿನ ಜನಸಂಖ್ಯೆ, 1981 ರ ವೇಳೆಗೆ 30 ಲಕ್ಷ ಆಗಿತ್ತು. ಒಂದು ದಶಕದಲ್ಲಿ 76% ಹೆಚ್ಚು. ಇದರಿಂದ ಇಲ್ಲಿನ ಜಮೀನಿನ ಮೇಲೆ ಅನಿವಾರ್ಯ ಪರಿಣಾಮಗಳಾದವು. ಬೆಂಗಳೂರಿನ ಸುತ್ತಮುತ್ತ ಇದ್ದ ಗ್ರಾಮೀಣ ಪ್ರದೇಶಗಳಲ್ಲಿ ನೆಲದ ಮೌಲ್ಯ ಗಗನಕ್ಕೇರಿತು. ಇದರಿಂದ ಯಾರ ರೆಟ್ಟೆಗಳಲ್ಲಿ ಬಲವಿತ್ತೋ ಅವರು ನೆಲದ ಆಕ್ರಮಣ ಮತ್ತು ಅತಿಕ್ರಮಣ ಎರಡನ್ನೂ ಮಾಡತೊಡಗಿದರು. ತುರ್ತುಪರಿಸ್ಥಿತಿ ಘೋಷಣೆಯಾದ ಮೂರು ತಿಂಗಳಲ್ಲಿ ಇಂತಹ ಒಂದು ಅತಿರೇಕದ ಜಮೀನ್ದಾರಿ ನೆಲಗಳ್ಳತನ ನನ್ನ ಗಮನಕ್ಕೆ ಬಂದಿತು. ಒಂದು ದಿನ ಸುಮಾರು 10 ಜನ ದಲಿತರು ತಮ್ಮ ಹೃದಯ ವಿದ್ರಾವಕ ಕಥೆಯೊಂದಿಗೆ ನನ್ನ ಕಛೇರಿಗೆ ಬಂದರು. ಅವರಲ್ಲಿ ಐದು ಜನರ ಕೈಗಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಅವರು ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಗ್ರಾಮಕ್ಕೆ ಸೇರಿದವರು. ಮುನಿಪಾಪಣ್ಣ ಗೌಡ ಎನ್ನುವ ಜಮೀನುದಾರನೊಬ್ಬನ ಬಳಿ ಹೊಲದ ಕೆಲಸ ಮಾಡುತ್ತಿದ್ದರು. ಐದು ವರ್ಷಗಳ ಕೆಳಗೆ ಗೌಡ, ಸರಕಾರಕ್ಕೆ ಸೇರಿದ ಗೋಮಾಳ ಜಮೀನಿಗಾಗಿ ಒಬ್ಬೊಬ್ಬರಿಂದ ಐದು ಎಕರೆಗಳಿಗೆ ಅರ್ಜಿ ಹಾಕಿಸಿದ್ದ. ಭೂ ಕಾಯಿದೆಗನುಸಾರವಾಗಿ ಭೂರಹಿತ ಕೂಲಿಯಾಳುಗಳಿಗೆ ಕುಟುಂಬಕ್ಕೆ ಐದೆಕೆರೆಯಂತೆ ಒಣಜಮೀನು ಮಂಜೂರು ಮಾಡಬಹುದಾಗಿತ್ತು. ಮೊದಲ ಆದ್ಯತೆ ಆ ಹಳ್ಳಿಯ ಪರಿಶಿಷ್ಟ ಜಾತಿಯವರಿಗೆ ಸಿಗುತ್ತಿತ್ತು. ಹಾಗಾಗಿ ಮುನಿಪಾಪಣ್ಣ ಗೌಡ ಅವರ ಅರ್ಜಿಯನ್ನು ಕಂದಾಯ ಇಲಾಖೆಯ ಮುಂದೆ ತಳ್ಳಿ ಪ್ರತಿಯೊಬ್ಬರಿಗೂ ಐದೆಕೆರೆ ಗೋಮಾಳ ಜಮೀನು ಮಂಜೂರಾಗುವಂತೆ ನೋಡಿಕೊಂಡಿದ್ದ. (ಹಿಂದಿನ ಕಾಲದಿಂದಲೂ, ಪ್ರತಿ ಹಳ್ಳಿಯಲ್ಲಿಯೂ ಗೋಮಾಳಕ್ಕೆಂದು 100 ಹಸುಗಳಿಗೆ 30 ಎಕರೆಯಂತೆ ನೆಲವನ್ನು ಕಾಯ್ದಿರಿಸಲಾಗುತ್ತಿತ್ತು. ಆರು ಮೇಕೆಗಳು ಒಂದು ಹಸುವಿನ ಲೆಕ್ಕಕ್ಕೆ ಸಮ. ನಗರಗಳು ಬೆಳೆದಂತೆ ಬೆಂಗಳೂರಿನ ಹಳ್ಳಿಗಳಲ್ಲಿ ಪಶುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ ಗೋಮಾಳದ ಜಮೀನು ಹೆಚ್ಚುವರಿಯಾಗಿದ್ದು, ಅದರಿಂದ ಭೂವಿಹೀನರಿಗೆ ಭೂಮಿ ಮಂಜೂರು ಮಾಡಲಾಗುತ್ತಿತ್ತು) ಮಂಜೂರಾತಿ ಆದಮೇಲೆ, ಹತ್ತುಜನ ದಲಿತರ 50 ಎಕರೆ ಜಮೀನನ್ನು ಒಗ್ಗೂಡಿಸಿ ಗೌಡ ಒಂದು ಸಹಕಾರಿ ಸಂಘದ ಸ್ಥಾಪನೆ ಮಾಡಿ, ತಾನು ಅದರ ಅಧ್ಯಕ್ಷನಾದ. ಆಮೇಲೆ ದೇವನಹಳ್ಳಿಯಲ್ಲಿದ್ದ ಭೂ ಅಭಿವೃದ್ಧಿ ಸಹಕಾರ ಬ್ಯಾಂಕ್ ನಿಂದ ಎಕರೆಗೆ 5000 ದಂತೆ ಜಮೀನಿನ ಅಭಿವೃದ್ಧಿಗೆ ಸಾಲ ಪಡೆದ. 50 ಎಕರೆಗಳಿಗೆ ಒಟ್ಟು 2.5 ಲಕ್ಷಗಳನ್ನು ಪಡೆದ ಮೇಲೆ, ಅದನ್ನು ಉಪಯೋಗಿಸಿಕೊಂಡು ಬೇಗ ಇಳುವರಿ ಕೊಡುವ ನೀಲಗಿರಿ ಮತ್ತು ಸರ್ವೆಗಿಡಗಳನ್ನು ಅಷ್ಟೂ ಜಮೀನಿಗೆ ಹಾಕಿಸುತ್ತಾನೆ. ಅದು ಉರುವಲಿಗಷ್ಟೇ ಅಲ್ಲದೆ ಕಾಗದದ ಕಾರ್ಖಾನೆಗಳಲ್ಲೂ ಸಿದ್ಧ ಮಾರುಕಟ್ಟೆಯನ್ನು ಹೊಂದಿತ್ತು. ಎರಡೂ ಬೆಳೆಗಳಿಂದ ಪ್ರತಿ ಮೂರು ವರ್ಷಗಳಿಗೆ ಎಕರೆಗೆ 30 ಟನ್ ಇಳುವರಿ ಬಂದಿರುತ್ತದೆ. ಎರಡು ತಿಂಗಳ ಕೆಳಗೆ ಮೊದಲ ಬೆಳೆ ತೆಗೆದಿದ್ದ ಮುನಿಪಾಪಣ್ಣ ಗೌಡ ಹರಿಹರ ಪಾಲಿಫೈಬರ್ಸ್ ಕಾಗದ ಕಾರ್ಖಾನೆಗೆ ಅದನ್ನು 15 ಲಕ್ಷಗಳಿಗೆ (ಇಂದಿನ 135 ಲಕ್ಷಗಳಿಗೆ ಸಮ) ಮಾರಿದ್ದ.

ಆ 50 ಎಕರೆ ಜಮೀನಿನ ನಾಮ್ ಕೆ ವಾಸ್ತೆ ಮಾಲಿಕರಾಗಿದ್ದ ಆ ಹತ್ತು ಜನ ದಲಿತರು ಅದೇ ಜಮೀನಿನಲ್ಲಿ ಗೌಡನ ಕೂಲಿಯಾಳುಗಳಾಗಿ, ಗಂಡಾಳುಗಳಿಗೆ ವಾರಕ್ಕೆ 30ರೂ ಮತ್ತು ಹೆಣ್ಣಾಳುಗಳಿಗೆ ವಾರಕ್ಕೆ 20ರೂ ಕೂಲಿಗೆ ಕೆಲಸ ಮಾಡುತ್ತಿರುತ್ತಾರೆ. ಆ ಮಣ್ಣಿನಿಂದ ಇವರಿಗೆ ಒಂದು ರೂ ಆದಾಯ ಸಹ ಬಂದಿರುವುದಿಲ್ಲ. ಒಂದು ತಿಂಗಳ ಹಿಂದೆ ಸಹಕಾರಿ ಬ್ಯಾಂಕಿನ ರೆಜಿಸ್ಟ್ರಾರ್ ಅವರೆಲ್ಲರಿಗೂ ನೋಟೀಸು ಕಳಿಸಿ ರೂ 1500 ಸಾಲದ ಕಂತು ಮತ್ತು 8% ಲೆಕ್ಕದಲ್ಲಿ ಬಡ್ಡಿ ಪಾವತಿಸಲು ಹೇಳಿದ್ದಾರೆ. ಅವರು ಕಂಗಾಲಾಗಿದ್ದಾರೆ. ಅವರ್ಯಾರ ಕೈಗೂ ಸಾಲದ ರೂಪದಲ್ಲಾಗಲೀ, ಜಮೀನಿನ ಆದಾಯದ ರೂಪದಲ್ಲಾಗಲೀ ಒಂದು ರೂ ಸಹ ಬಂದಿಲ್ಲದ ಕಾರಣ ಅವರೊಬ್ಬ ದಲಿತ ನಾಯಕರನ್ನು ಸಂಪರ್ಕಿಸಿ, ಆತ ಅವರಿಗೆ ಜಿಲ್ಲಾಧಿಕಾರಿಗಳನ್ನು ನೋಡಲು ಹೇಳಿದ್ದಾರೆ. ಆತನಿಂದಲೇ ಒಂದು ಅರ್ಜಿ ಬರೆಸಿಕೊಂಡು, ಐದು ಜನ ದಲಿತರು(ಒಟ್ಟು ಹತ್ತರಲ್ಲಿ ಐದು) ಅದರ ಮೇಲೆ ತಮ್ಮ ಹೆಬ್ಬೆಟ್ಟು ಒತ್ತಿ, ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ನೆಲಮಹಡಿಯಲ್ಲಿದ್ದ ಕಾರಕೂನನಿಗೆ ಅರ್ಜಿ ಕೊಟ್ಟು, ಒಂದು ಕೆಂಪು ಬಣ್ಣದ ರಸೀತಿ ಪಡೆದುಕೊಂಡಿದ್ದಾರೆ. ಗಂಭೀರ ವಿಷಯಗಳಿಗಾಗಿ ನಾನು ನಿಗದಿಪಡಿಸಿದ್ದ ಬಣ್ಣದ ರಸೀತಿ ವ್ಯವಸ್ಥೆ ಅದು. ತಡಮಾಡದೆ ಆ ಅರ್ಜಿಯನ್ನು ದೇವನಹಳ್ಳಿಯಲ್ಲಿದ್ದ ತಹಸಿಲ್ದಾರರ ಕಛೇರಿಗೆ ಕಳಿಸಲಾಗಿತ್ತು. ಮೂರು ದಿನಗಳ ಕೆಳಗೆ ಚಿಕ್ಕಜಾಲಕ್ಕೆ ಸ್ಥಳಪರೀಕ್ಷೆಗೆಂದು ಹೋದ ಅವರು ಮೊದಲು ದಲಿತರನ್ನು, ನಂತರ ಗೌಡನನ್ನು ವಿಚಾರಣೆ ಮಾಡಿದ್ದಾರೆ.

ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು. ಮೊಂಡು ಬೆರಳಿನ ಮೇಲೆ ಇನ್ನೂ ರಕ್ತದ ಕಲೆ ಸಹ ಹಾಗೆಯೇ ಇತ್ತು. ನಾನು ಕೇಳಿದ ಕಥೆ ಮತ್ತು ಕಂಡ ದೃಶ್ಯದಿಂದ ಸುಧಾರಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು, ಅಷ್ಟರಲ್ಲಾಗಲೇ ನನ್ನ ಸಿಟ್ಟು ನೆತ್ತಿಗೇರುತ್ತಿತ್ತು. ಐಪಿಸಿ ಅಡಿಯಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಏಳರಿಂದ ಹತ್ತು ವರ್ಷಗಳ ಶಿಕ್ಷೆ ಆಗುತ್ತಿತ್ತು. ಅಲ್ಲದೆ ಬಲಿಪಶುಗಳು ದಲಿತರಾಗಿದ್ದ ಕಾರಣ, ಅದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ಅಟ್ರಾಸಿಟಿ ಕಾಯಿದೆಯಡಿಗೆ ಬರುತ್ತಿತ್ತು. ನಾನು ನನ್ನ ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ ಜೊತೆಯಲ್ಲಿ ಕೂಡಲೇ ಅವರನ್ನು ಸರಕಾರಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದೆ. ಆಸ್ಪತ್ರೆಯ ಸೂಪರಿಡೆಂಟರಿಗೆ ಕರೆ ಮಾಡಿ, ಆ ದಲಿತರನ್ನು ಪರೀಕ್ಷೆ ಮಾಡಿ, ಅವರ ಗಾಯದ ಕಾರಣವನ್ನು ಅವರ ವರದಿಯಲ್ಲಿ ನಮೂದಿಸಲು ಕೇಳಿದೆ. ಮಧ್ಯಾಹ್ನದ ವೇಳೆಗೆ ನನ್ನ ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ ಅವರೊಂದಿಗೆ, ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಹಿಂದಿರುಗಿದರು.

ಐಪಿಸಿ ಅಡಿಯಲ್ಲಿನ ವಿಚಾರಣೆಗಿಂತ ಹೆಚ್ಚಿನದೇನಾದರೂ ಮಾಡಬೇಕು ಎಂದು ಅಷ್ಟರಲ್ಲಾಗಲೇ ನಾನು ನಿರ್ಧರಿಸಿಯಾಗಿತ್ತು. ಅಲ್ಲದೆ ಅಂತಹ ಪ್ರಭಾವಶಾಲಿ ಸಮೂಹದ ಜಮೀನು ಒಡೆಯ ಗೌಡನನ್ನು ನಮ್ಮ ನ್ಯಾಯಾಲಯಗಳು ಶಿಕ್ಷೆಗೆ ಒಳಪಡಿಸುವುದನ್ನು ಕುರಿತು ನನಗೆ ಅನುಮಾನಗಳಿದ್ದವು. ಮೊದಲನೆಯದಾಗಿ ಅವನಿಗೆ ತಕ್ಷಣವೇ ಬೇಲ್ ಸಿಗುತ್ತದೆ, ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತದೆ, ಕೇಸು ವರ್ಷಾನುಗಟ್ಟಲೆ ನಡೆಯುತ್ತದೆ, ಆ ದಲಿತರನ್ನು ಗೋಳಾಡಿಸಲಾಗುತ್ತದೆ, ಪ್ರಾಸೆಕ್ಯೂಶನ್ ಪರ ಸಾಕ್ಷಿಗಳು ಉಲ್ಟಾ ಹೊಡೆಯುತಾರೆ, ಸರಕಾರಿ ವಕೀಲರಿಗೆ ‘ಮಾಮೂಲು’ ಸಹ ಸಂದಾಯವಾಗಬಹುದು ಮತ್ತು ಕಡೆಗೆ ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುನಿಪಾಪಣ್ಣ ಗೌಡ ಖುಲಾಸೆಯಾಗಿ, ಆ ಪಾಪದ ದಲಿತರು ಮತ್ತೂ ಹೀನಾಯದ ಅಧೋಗತಿಯ ಸ್ಥಿತಿಗೆ ನೂಕಲ್ಪಡಬಹುದು. ಹಾಗಾಗಿ ಪದ್ಧತಿಯ ಪ್ರಕಾರ ತನ್ನದೇ ಆಮೆ ವೇಗದಲ್ಲಿ ನಡೆಯುವ ನಿಷ್ಫಲ ಪೊಲೀಸ್ ವಿಚಾರಣೆಯ ಜೊತೆಯಲ್ಲಿ, ನಾನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಅಧಿಕಾರದಲ್ಲಿ, ಗುಲ್ಬರ್ಗಾದಲ್ಲಿ ಒಂದುಇರಾನಿ ಜಿಪ್ಸಿ ಗ್ಯಾಂಗ್ ಗೆ ವಿಧಿಸಿದ ಗಡಿಪಾರು ಆದೇಶವನ್ನು ಇಲ್ಲಿಯೂ ಪ್ರಯೋಗಿಸಲು ನಿರ್ಧರಿಸಿದೆ.

ಪೊಲೀಸ್ ಕಾಯಿದೆಯ ಪ್ರಕಾರ, ‘ಸಮುದಾಯಕ್ಕೆ ಅಪಾಯ ಅಥವಾ ಆತಂಕ ತಂದೊಡ್ಡಬಲ್ಲ’ ಯಾವುದೇ ವ್ಯಕ್ತಿಯನ್ನು ಆತನ ಜಿಲ್ಲೆಯಾಚೆಗೆ ಗಡಿಪಾರು ಮಾಡುವ ಅಧಿಕಾರ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಗೆ ಇರುತ್ತದೆ. ಬಹಳಷ್ಟು ಜನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಗಳಿಗೆ ಇದರ ಅರಿವು ಕೂಡಾ ಇರುವುದಿಲ್ಲ. ಡಿಎಂ ನೀಡಿದ ಗಡಿಪಾರು ಆದೇಶವನ್ನು ಹೈಕೋಟಿನಲ್ಲಿ ಚಾಲೆಂಜ್ ಮಾಡಬಹುದು. ಆದ್ದರಿಂದ ನಾನು ಚಾಚೂತಪ್ಪದೆ ಇತರ ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸುವುದರ ಮೂಲಕ ಪ್ರಭಾವಶಾಲಿ ಗೌಡ ನಾಳೆ ಹೈಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದರೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು.

(ಕೃತಿ: ಕಲ್ಯಾಣ ಕೆಡುವ ಹಾದಿ (ವಿ. ಬಾಲಸುಬ್ರಮಣಿಯನ್‌ ಆತ್ಮಕಥನ), ಅನುವಾದ: ಸಂಧ್ಯಾರಾಣಿ, ಪ್ರಕಾಶಕರು: ಲಡಾಯಿ ಪ್ರಕಾಶನ, ಬೆಲೆ: 600/-)