ಕೇವಲ ಕಾಲೇಜಿನಲ್ಲಿ ಪಾಠ ಮಾಡುತ್ತಾ ತನ್ನ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಿಕ ಚರ್ಚೆ ನಡೆಸುತ್ತಾ, ಅವರುಗಳ ಭವಿಷ್ಯ ರೂಪಿಸುವತ್ತ ಒತ್ತು ನೀಡುತ್ತಾ, ನೂರಾರು ವಿದ್ಯಾರ್ಥಿಗಳ ಪ್ರೀತಿಯ ಸರ್ ಆಗಿರುವುದರಲ್ಲೆ ತೃಪ್ತಿ ಕಂಡುಕೊಂಡಿದ್ದಾರೆ. ಅವರಿಗೊಂದು ರೀತಿಯ ದಿಟ್ಟ ಆತ್ಮವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರಿಗೂ ತಲೆ ಬಾಗಿದವರಲ್ಲ. ವ್ಯವಸ್ಥೆಯ ವಿರುದ್ಧ ಇವ ಮಾತನಾಡುತ್ತಿದ್ದರಿಂದ ವ್ಯವಸ್ಥೆಯ ಪರವಾಗಿದ್ದವರೆಲ್ಲಾ ಪಟ್ಟಾಭಿಯನ್ನು ದೂರವಿಡುತ್ತಿದ್ದರು. ಆದರೆ ಪಟ್ಟಾಭಿ ಯಾರನ್ನೂ ವ್ಯಕ್ತಿಗತವಾಗಿ ದ್ವೇಷಿಸುವುದಿಲ್ಲ. ಅಗತ್ಯ ಬಿದ್ದರೆ ಅಂತಹವರ ಸಹಾಯಕ್ಕೆ ಧಾವಿಸುತ್ತಾರೆ.
ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ ನಿಧನರಾಗಿದ್ದು, ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತೆ ಮೀನಾ ಮೈಸೂರು ಬರೆದಿದ್ದ ಬರಹವೊಂದು ಇಲ್ಲಿದೆ
ಪಟ್ಟಾಭಿ ಬಗ್ಗೆ ಬರೆಯಲು ಹೊರಟಾಗ ಏನು ಬರೆಯುವುದು? ಎಲ್ಲಿಂದ ಶುರು ಮಾಡುವುದು? ಅರ್ಥವಾಗುತ್ತಿಲ್ಲ. ಹಿಂದಕ್ಕೆ ಹೊರಳಿ ನೋಡಿದಾಗ ಗಂಗೋತ್ರಿ, ಪ್ರೆಸ್, ಯುಆರ್‍ಎ ಮನೆಯಲ್ಲಿದ್ದ ರುಜುವಾತು ಕಛೇರಿ, ಮಂಗಳಾ ಮನೆ… ಎಷ್ಟೆಲ್ಲಾ ನೆನಪುಗಳು. ನಾನು, ಸರ್ವಮಂಗಳಾ, ಪಟ್ಟಾಭಿ ಜೊತೆ ಜೊತೆಯಲ್ಲಿ ರುಜುವಾತುವಿಗಾಗಿ ಕೆಲಸ ಮಾಡಿದ್ದು, ಆ ಮೂಲಕ ನನಗೆ ಮಂಗಳಾ ಮತ್ತು ಪಟ್ಟಾಭಿಯ ಸ್ನೇಹ ಒದಗಿ ಬಂದಿತ್ತು. ಕೆಲಸ ಕೆಲಸ ಕೆಲಸ, ರುಜುವಾತು ಬಿಟ್ಟರೆ ನಮಗೆ ಅಂದು ಬೇರೆ ಪ್ರಪಂಚವೇ ಇರಲಿಲ್ಲವೇನೋ? ಒಟ್ಟಿಗೆ ಕೆಲಸ ಮಾಡಿದೆವು. ಒಳ್ಳೆಯ ಸ್ನೇಹಿತರಾಗಿದ್ದೆವು, ಪರಸ್ಪರ ಗೌರವಾದರಗಳಿಂದ ಕೆಲಸ ಮಾಡುತ್ತಿದ್ದೆವು. ಪಟ್ಟಾಭಿ ಸಜ್ಜನ, ಸಹೃದಯಿ, ತುಂಬಾ ಬುದ್ಧಿವಂತ ಹೌದು, ಆದರೆ ಆ ಬುದ್ಧಿವಂತಿಕೆಯನ್ನು ಸರಿಯಾಗಿ (ಮುಖ್ಯವಾಗಿ ಬದುಕಿಗೆ) ಎಂದೂ ಬಳಸಿಕೊಳ್ಳದೇ ಹೋದದ್ದು ಅವರ ಬದುಕಿನ ದುರಂತವೇ ಹೌದು. ನಾನು ಮಂಗಳಾ ಮತ್ತು ಪಟ್ಟಾಭಿ ನಮ್ಮ ಬಿಡುವಿನ ಒಂದೊಂದು ಕ್ಷಣವನ್ನೂ ರುಜುವಾತುವಿಗಾಗಿಯೇ ವಿನಿಯೋಗಿಸುತ್ತಿದ್ದೆವು.
ಅನಂತಮೂರ್ತಿಯವರ ಒಡನಾಟದಲ್ಲಿ ಅಷ್ಟು ವರ್ಷ ಕಳೆದರೂ ಮೇಸ್ಟ್ರಿಗಿದ್ದ ಡಿಪ್ಲೋಮ್ಯಾಟಿಕ್ ನಡಿಗೆಯನ್ನು ನಾವು ಮೂವರೂ ಕಲಿಯದೆ ಹೋದೆವು, ಅವರನ್ನು ನಾವು ಮೂವರೂ ನಮ್ಮ ಸ್ವಂತ ಕೆಲಸಗಳಿಗೆ ಎಂದೂ ಬಳಸಿಕೊಳ್ಳಲಿಲ್ಲ. ನಾನೇ ಅನೇಕರಿಗೆ ಮೇಸ್ಟ್ರು ಡಿಕ್ಟೇಷನ್ ಕೊಟ್ಟಿದ್ದನ್ನು ಬರೆದು ಕೊಟ್ಟಿದ್ದೇನೆ. ಯಾರೆಲ್ಲಾ ಅವರ ಪ್ರಭಾವ ಬಳಸಿಕೊಂಡರು. ಅವರು ಮನೆಯಲ್ಲೇ ಡಯಾಲಿಸೀಸ್ ಮಾಡಿಕೊಳ್ಳುವಾಗಲೂ ಪುಸ್ತಕಕ್ಕೆ ಮುನ್ನುಡಿ, ಬೆನ್ನುಡಿ ಅಥವಾ ಯಾರಿಗೊ ಪತ್ರ…… ಹೀಗೆ ಏನೆಲ್ಲಾ ಕೆಲಸಗಳನ್ನು ಮಾಡಿಕೊಂಡರು, ಅದಕ್ಕೆಲ್ಲಾ ನಾವು ಮೂಕ ಪ್ರೇಕ್ಷಕರಾಗಿದ್ದೆವೇ ಹೊರತು, ನಾವು ಮೂವರೂ ಏನನ್ನೂ ಅವರಿಂದ ನಿರೀಕ್ಷಿಸಲೂ ಇಲ್ಲ. ಅದರಲ್ಲೂ ಪಟ್ಟಾಭಿ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಬದುಕು ಬೀದಿಗೆ ಬಿದ್ದು ಮೂರಾಬಟ್ಟೆಯಾದಾಗಲೂ ತೀರಾ ಅಗತ್ಯ ಅನಿವಾರ್ಯಗಳಲ್ಲೂ ಕೂಡ ತಣ್ಣಗೆ ಅದನ್ನು ಸಹಿಸಿಕೊಂಡರೇ ಹೊರತು ಅನಂತಮೂರ್ತಿಯವರನ್ನು ಬಳಸಿಕೊಳ್ಳಲಿಲ್ಲ, ದೇಹಿ ಎಂದೂ ಯಾರ ಬಳಿಯೂ ಹೋಗಲಿಲ್ಲ. ಅವರೇ ಒಂದೆಡೆ ಹೇಳಿರುವಂತೆ, ಮಂಗಳಾ ಅವರನ್ನು ಅನೇಕ ವರ್ಷಗಳ ಕಾಲ ಪೊರೆದರು. ಒಂದರ್ಥದಲ್ಲಿ ತಾಯಿ ಆಸರೆಯನ್ನಿತ್ತರು. ಪಟ್ಟಾಭಿ ಚಂದ್ರಕೊಡರ್‌ರ ಮನೆಯಲ್ಲಿ ಬಾಡಿಗೆಗಿದ್ದರು. “ಪಟ್ಟಾಭಿಯಂತ ವಿದ್ಯಾರ್ಥಿಯನ್ನು ನಾನು ಮತ್ತೆ ನೋಡಲಿಲ್ಲ, ಸದಾ ಓದುತ್ತಿದ್ದ, ಗೆಳೆಯರು ಬಂದಾಗ ಕಾಡುಹರಟೆ ಹೊಡೆಯುತ್ತಾ ಕಾಲ ಕಳೆದದ್ದನ್ನು, ವೃಥಾ ಅಲ್ಲಿ ನಾನು ಕಾಣಲೇ ಇಲ್ಲ. ಅವನನ್ನು ಹುಡುಕಿಕೊಂಡು ಅದೆಷ್ಟು ಹುಡುಗಿಯರು ಬರುತ್ತಿದ್ದರು, ಆದರೆ ಅವನು ಅದೆಷ್ಟು ಸಭ್ಯತೆಯಿಂದ ಅವರನ್ನು ಸಂಭಾಳಿಸುತ್ತಿದ್ದ, ಎಂದೂ ಅನುಚಿತವಾಗಿ ವರ್ತಿಸಿದ್ದನ್ನು ನಾನು ಕಾಣಲಿಲ್ಲ. ನಿಜಕ್ಕೂ ಅವನೊಬ್ಬ ಒಳ್ಳೆಯ ಅಪರೂಪದ ಹುಡುಗ” ಎಂದು ಚಂದ್ರ ಈಗಲೂ ನೆನಪಿಸಿಕೊಳ್ಳುತ್ತಾರೆ.
ನಿಜ ಅರ್ಥದಲ್ಲಿ ಪಟ್ಟಾಭಿ ಪಕ್ಕಾ ಗಾಂಧಿವಾದಿ. ಗಾಂಧಿಯ ಹಾಗೆ ಸಪೂರ ಸಣಕಲ, ಸುಲೋಚನಾಧಾರಿ. ಇಂದಿಗೂ ಅವ ಬಳಸುವ ವಸ್ತುಗಳು, ಧರಿಸುವ ಸರಳವಾದ ದೇಸಿ ಉಡುಪು, ಸಾಮಾನ್ಯ ಜೀವನಶೈಲಿಯಲ್ಲಿ ಅವ ಗಾಂಧಿಯನ್. ಅಕ್ಷರಶಃ ಗಾಂಧಿಯಂತೆ ಕಡು ನಿಷ್ಠುರವಾದಿ, ಅಗತ್ಯ ಮೀರಿ ವಸ್ತು ವಿಶೇಷಗಳತ್ತ, ಐಭೋಗದ ಜೀವನದತ್ತ ಮುಖ ಮಾಡಿದವನಲ್ಲ, ಕೈ ತುಂಬಾ ಕಾಸು ಬಂದಾಗಲೂ!
ಪಟ್ಟಾಭಿಯದು ಹೋರಾಟದ ಬದುಕು. ಎಷ್ಟೆಲ್ಲಾ ಸಂಕಷ್ಟಗಳನ್ನು ತಾನಾಗೆ ಮೈಮೇಲೆ ಎಳೆದುಕೊಂಡರು, ಆದರೂ ಅವ ಬದುಕಿಗೆ ಬೇಕಾದ ಜಾಣ್ಮೆಯನ್ನು ಕಲಿಯಲೇ ಇಲ್ಲ. ಅದೆಷ್ಟು ಸಂಕಷ್ಟಗಳು ಎದುರಾದರೂ ಅವುಗಳಿಂದ ಅವ ಪಾಠ ಕಲಿಯಲಿಲ್ಲ. ನಕ್ಸಲೇಟ್‍ಗಳ ತ್ಯಾಗದ ಬಗ್ಗೆ ಅವರಿಗೆ ಮೆಚ್ಚುಗೆಯಿತ್ತೇ ಹೊರತು, ಅವರ ಹಿಂಸಾತ್ಮಕ ನಡೆಗಳ ಬಗ್ಗೆಯಲ್ಲ. ಆದರೂ ನಕ್ಸಲರನ್ನು ಬೆಂಬಲಿಸುತ್ತಾನೆಂದು, ನಕ್ಸಲ್‍ವಾದಿಯೆಂದು ವಿಚಾರವಾದಿಗಳು ವೃಥಾ ಗೂಬೆ ಕೂರಿಸಿದರು.
ಅಗಾಧ ಓದಿನ ಹರವು, ಗಾಂಧಿಯನ್ನು ಅರೆದು ಕುಡಿದಂತೆ, ಅದರಲ್ಲೂ ಹಿಂದ್ ಸ್ವರಾಜ್ ಬಗ್ಗೆ ಮಾತನಾಡುವುದು ಅವರ ಬಹಳ ಪ್ರಿಯವಾದ ಸಂಗತಿ. ಪಟ್ಟಾಭಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೇಸ್ಟ್ರಾಗಬೇಕಿತ್ತು. ಆದರೆ ದುರಾದೃಷ್ಟ, ಅವರ ಬೌದ್ಧಿಕ ಚಿಂತನೆಯ ಅಭಿವ್ಯಕ್ತಿಗೆ ಸರಿಯಾದ ವೇದಿಕೆ ಸಿಗದೇ ಹೋಯಿತು.
ಆತ ಪಠ್ಯವನ್ನು ಗ್ರಹಿಸುವ, ಅರ್ಥೈಸುವ, ಅಭಿವ್ಯಕ್ತಿಸುವ ಕ್ರಮದಲ್ಲಿ ಸ್ವಂತಿಕೆಯನ್ನು ಕಾಣಬಹುದು. “ಪಟ್ಟಾಭಿ ತುಂಬಾ ಸೂಕ್ಷ್ಮ ಮನಸ್ಸಿನವನು, ಎಷ್ಟೆಲ್ಲಾ ಓದಿಕೊಂಡಿದ್ದಾನೆ, ಅವನ ಇಂಗ್ಲೀಷ್ ಕೂಡ ತುಂಬಾ ಚೆನ್ನಾಗಿದೆ, ವಿಷಯ ಗ್ರಹಿಕೆಯಲ್ಲಿನ ಖಚಿತತೆ, ನಿಖರತೆಯಿಂದಾಗಿ, ಬೌದ್ಧಿಕವಾಗಿ ಸಾಕಷ್ಟು ಬೆಳೆದಿದ್ದಾನೆ, ನಿಜಕ್ಕೂ ಅವನು ನನ್ನ ಮಾನಸ ಪುತ್ರ. ನನಗೆ ಇನ್ನೊಬ್ಬ ಮಗಳಿದ್ದಿದ್ದರೆ ಅವನನ್ನು ನನ್ನ ಅಳಿಯನನ್ನಾಗಿ ಮಾಡಿಕೊಂಡು ಬಿಡುತ್ತಿದ್ದೆ” ಎನ್ನುತ್ತಿದ್ದರು, ಯುಆರ್‌ಎ. ಪಟ್ಟಾಭಿಯ ಪ್ರಾಮಾಣಿಕತೆ, ಆತ್ಮಗೌರವ, ಪ್ರತಿಭೆ, ಕ್ರಿಯಾಶೀಲತೆ, ಚಿಂತನಶೀಲತೆ, ವಿಮರ್ಶಾಗುಣ, ಮತ್ತು ಕೆಲಸದಲ್ಲಿನ ನಿಷ್ಠೆ ಯಾರನ್ನೂ ಸೆಳೆಯದೆ ಬಿಡುವುದಿಲ್ಲ.
ಪಟ್ಟಾಭಿ ಬಳಿ ಒಂದು ಸೈಕಲ್ ಇತ್ತು. ಆಗ ರಾಜಶೇಖರ ಕೋಟಿಯವರ ಪ್ರೆಸ್ ಒಂಟಿಕೊಪ್ಪಲಿನಲ್ಲಿತ್ತು. ರುಜುವಾತು ಮೊದಲ ಸಂಚಿಕೆ ಅಲ್ಲಿ ರೂಪ ತಾಳುತ್ತಿತ್ತು. ಅದರ ಸಲುವಾಗಿ ಪಟ್ಟಾಭಿ ಅಲ್ಲಿಗೆ ಹೋಗಿದ್ದಾಗ, ಕೋಟಿಯವರ ಮನೆಮುಂದೆ ನಿಲ್ಲಿಸಿದ್ದ ಸೈಕಲ್ ಕಳುವಾಯಿತು. ಆ ಕಾಲದಲ್ಲಿ ಸೈಕಲ್ ನಮಗೆಲ್ಲಾ ಐಭೋಗವೆ. ಆಗ ಪಟ್ಟಾಭಿ ಸ್ಥಿತಿ ಆಯ್ದುಕೊಂಡು ತಿನ್ನುವ ಕೋಳಿ ಕಾಲು ಮುರಿದಂತಾಯಿತು, ಆಮೇಲೆ ಲೂನ ಬಂತು. ಅವರು ಲೂನ ಓಡಿಸಲು ಕಲಿತಿರಲಿಲ್ಲ, ಒಂದು ದಿನ ಎಸ್ತರ್‌ರವರ ಗಾಡಿಯನ್ನು ತೆಗೆದುಕೊಂಡು ಟ್ರೈ ಮಾಡುವೆನೆಂದು ಹೊರಟರು, ನನಗೆ ಭಯವೋ ಭಯ. ಲೂನ ಓಡಿಸುವುದನ್ನು ಕಲಿಯದೆ, ಏಕಾಏಕಿ ಲೂನ ಹತ್ತಿ ಹೊರಟವ ಬಿದ್ದು ಬಿಟ್ಟರೆ, ಯಾರಿಗಾದರೂ ಗುದ್ದಿಸಿಬಿಟ್ಟರೆ ಹೆದರಿಕೊಂಡು ಗೇಟಿನ ಬಳಿಯೆ ನಿಂತಿದ್ದೆ, ಸದ್ಯ ಅವ ಆರಾಮಾಗಿ ಬಂದಾಗ ಸಮಾಧಾನವಾಯಿತು. “ಮೀನಾ ನಾನು ಲೂನ ಓಡಿಸುವುದನ್ನು ಕಲಿತುಬಿಟ್ಟೆ” ಎಂದು ಸಂಭ್ರಮಿಸಿದರು.
ಉಡುಪಿಯಲ್ಲಿ ಕಾರ್ಯಕ್ರಮವೊಂದಕ್ಕೆ ನಾನು ಮಂಗಳಾ ಹೋಗಿದ್ದೆವು. ಕಾರ್ಯಕ್ರಮದ ನಂತರ, ನಮ್ಮಿಬ್ಬರನ್ನು ಅವರ ಅಕ್ಕನ ಊರಿಗೆ ಕರೆದುಕೊಂಡು ಹೋಗಿದ್ದರು. ಅವರ ಅಕ್ಕನ ಮನೆಯವರ ಪ್ರೀತಿಯ ಉಪಚಾರದಲ್ಲಿ ನಾವಿಬ್ಬರು ಮಿಂದು ಪುಳಕಿತರಾದೆವು, ಮನೆಯ ಹಿಂದೆ ಹರಿವ ನೀರಿನಲ್ಲಿ ಒಂದಷ್ಟು ಹೊತ್ತು ಸುಖಿಸಿದೆವು. ಹಳ್ಳಿಯ ಸುಂದರ ವಾತಾವರಣ, ಭತ್ತವನ್ನು ಹೊಟ್ಟೆಯಲ್ಲಿ ತುಂಬಿಟ್ಟುಕೊಂಡಿದ್ದ ಈಚಲು ಬುಟ್ಟಿ, ಹೊರಗೆ ವಿಶಾಲವಾದ ಅಂಗಳ, ಅಂಗಳದಲ್ಲಿ ಅಲ್ಲಲ್ಲಿ ಹರಡಿದ್ದ ಕೃಷಿ ಪರಿಕರಗಳು… ಅವರ ಅಕ್ಕನ ಪುಟ್ಟ ಮಕ್ಕಳು ಗಲ ಗಲ ಸದ್ದು ಮಾಡುತ್ತಾ ಓಡಾಡುತ್ತಿದ್ದರು. ಅಲ್ಲಿ ಒಂದು ಇಡೀ ದಿನವನ್ನು ನಾವುಗಳು ಸಂತೋಷದಿಂದ ಕಳೆದೆವು. ಹೀಗೆ ನಾವು ಮೂವರು ಒಟ್ಟಿಗೆ ಪ್ರಯಾಣಿಸಿದ್ದು, ಖುಷಿಯಾಗಿ ಕಾಲ ಕಳೆದದ್ದು ಬಹುಶಃ ಅದೇ ಮೊದಲು ಮತ್ತು ಕೊನೆ.
“ಪಟ್ಟಾಭಿಯಂತ ವಿದ್ಯಾರ್ಥಿಯನ್ನು ನಾನು ಮತ್ತೆ ನೋಡಲಿಲ್ಲ, ಸದಾ ಓದುತ್ತಿದ್ದ, ಗೆಳೆಯರು ಬಂದಾಗ ಕಾಡುಹರಟೆ ಹೊಡೆಯುತ್ತಾ ಕಾಲ ಕಳೆದದ್ದನ್ನು, ವೃಥಾ ಅಲ್ಲಿ ನಾನು ಕಾಣಲೇ ಇಲ್ಲ. ಅವನನ್ನು ಹುಡುಕಿಕೊಂಡು ಅದೆಷ್ಟು ಹುಡುಗಿಯರು ಬರುತ್ತಿದ್ದರು, ಆದರೆ ಅವನು ಅದೆಷ್ಟು ಸಭ್ಯತೆಯಿಂದ ಅವರನ್ನು ಸಂಭಾಳಿಸುತ್ತಿದ್ದ, ಎಂದೂ ಅನುಚಿತವಾಗಿ ವರ್ತಿಸಿದ್ದನ್ನು ನಾನು ಕಾಣಲಿಲ್ಲ. ನಿಜಕ್ಕೂ ಅವನೊಬ್ಬ ಒಳ್ಳೆಯ ಅಪರೂಪದ ಹುಡುಗ” ಎಂದು ಚಂದ್ರ ಈಗಲೂ ನೆನಪಿಸಿಕೊಳ್ಳುತ್ತಾರೆ.
ಪಟ್ಟಾಭಿಗೆ ಪಿಹೆಚ್‍ಡಿ ಮಾಡಲು ಎಷ್ಟು ಒತ್ತಾಯಿಸಿದರೂ ಅವ ಜಗ್ಗಲೇ ಇಲ್ಲ. ಒಳ್ಳೆಯ ಭಾಷೆಯಿದ್ದೂ, ಜ್ಞಾನವಿದ್ದು, ಪಾಂಡಿತ್ಯವಿದ್ದೂ, ಬರೆಯಲು ಸೋಮಾರಿತನ ತೋರುತ್ತಾ ಅಕ್ಷರ ಲೋಕಕ್ಕೇ ಅವ ದ್ರೋಹ ಮಾಡುತ್ತಿದ್ದಾನೆಂದೇ ಬೈಯುತ್ತಿರುತ್ತೇನೆ. ಕಿಕ್ಕೇರಿ ನಾರಾಯಣ್ ಇರುವವರೆಗೂ ಆಗ-ಈಗ ಮೈಸೂರಿಗೆ ಬರುತ್ತಿದ್ದ ಪಟ್ಟಾಭಿ ಆ ನಂತರ ನಮ್ಮ ಆಹ್ವಾನಗಳನ್ನೆಲ್ಲಾ ದಿವ್ಯವಾಗಿ ಅಲಕ್ಷಿಸುತ್ತಾ, ತನ್ನ ಲೋಕದಲ್ಲಿ ತಾವಿದ್ದಾರೆನಿಸುತ್ತದೆ. ಕಿಕ್ಕೇರಿ ನಾರಾಯಣ್ ಮತ್ತು ನಾನು ಪಟ್ಟಾಭಿಗೆ ಮದುವೆ ಮಾಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದೆವು. ನಾರಾಯಣ್ ಪರಿಚಯದ ಹುಡುಗಿಯೊಬ್ಬಳು ಪಟ್ಟಾಭಿಯನ್ನು ಮದುವೆಯಾಗಲು ಸಿದ್ಧಳಿದ್ದಳು. ಅವಳನ್ನೊಮ್ಮೆ ನೋಡು ಎಂದರೆ ಬಿಲ್ಕುಲ್ ಒಪ್ಪುತ್ತಿರಲಿಲ್ಲ. ಒಮ್ಮೆ ನಾವು ಮೂವರು ಡ್ಯೂ ಡ್ರಾಪ್‌ನಲ್ಲಿ ಊಟ ಮುಗಿಸಿ ನಾರಾಯಣ್ ಆಫೀಸ್‍ಗೆ ಬಂದೆವು, ಆ ಹುಡುಗಿಗೆ ಅಲ್ಲಿಗೆ ಬರಲು ನಾರಾಯಣ್ ಹೇಳಿದ್ದರು. ಕಾರಿನಿಂದ ಇಳಿಯುವ ಮುನ್ನ ಪಟ್ಟಾಭಿಗೆ ವಿಷಯ ತಿಳಿಸಿದರು. ಅವ ಕಾರನ್ನು ಇಳಿದದ್ದೇ ಆಚೆ ಓಡೇ ಬಿಟ್ಟ. ನಾವೆಷ್ಟು ಗೋಗರೆದರೂ ಹಿಂತಿರುಗಿ ನೋಡಲಿಲ್ಲ. ಅಲ್ಲಿಗೆ ಅವರ ಮದುವೆ ಮಾಡಿಸುವ ನಮ್ಮ ಪ್ರಯತ್ನಗಳು ಕೊನೆಗೊಂಡವು. ಅವರ ಮದುವೆಗೆ ಒತ್ತಾಯಿಸಲು ಕಾರಣವೂ ಇತ್ತು. ಅದೇನೆಂದರೆ, ಒಮ್ಮೆ ಕಿಕ್ಕೇರಿ ನಾರಾಯಣ್ ಮನೆಗೆ ಪಟ್ಟಾಭಿಯ ಅಕ್ಕ ಬಂದಿದ್ದರು. ಅಕ್ಕನನ್ನು ನೋಡಲೆಂದು ನನ್ನ ಪುಟ್ಟ ಮಗನೊಂದಿಗೆ ಹೋಗಿದ್ದೆ, ನಾನು ಅಲ್ಲಿಂದ ಹೊರಡುವ ಮುನ್ನ ಅವರ ಅಕ್ಕ ‘ನೀನು ಮಾತ್ರ ಮದುವೆ ಮಾಡಿಕೊಂಡು ಸೆಟಲ್ ಆದೆ, ನನ್ನ ತಮ್ಮ ಹಾಗೇ ಇದ್ದಾನೆ, ಅವನಿಗೊಂದು ಮದುವೆ ಮಾಡಿಸಬೇಕು ಅಂತಾನ್ನಿಸುತ್ತಿಲ್ಲವಾ ನಿಮಗೆ’ ಎಂದರು. ಆದರೆ ಈ ಪಟ್ಟಾಭಿ ನಮ್ಮ ಮಾತನ್ನು ಎಲ್ಲಿ ಕೇಳುತ್ತಾರೆ?
ನನ್ನ ಮೊದಲ ಪುಸ್ತಕ ‘ಎತ್ತಣಿಂದೆತ್ತ’ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪುಸ್ತಕ ಕುರಿತು ಪಟ್ಟಾಭಿ ಅತ್ಯಂತ ಪ್ರೀತಿಯಿಂದ, ವಸ್ತುನಿಷ್ಠತೆಯಿಂದ ಮಾತನಾಡಿದರು. ನಂತರ ನನ್ನ ಕವನ ಸಂಕಲನ ‘ಮುತ್ತು ಮಾಣಿಕ್ಯ’ಕ್ಕೆ ಬೆನ್ನುಡಿ ಬರೆದರು. ಬರೆಯುವಲ್ಲಿನ ಸೋಮಾರಿತನ ಬಿಟ್ಟರೆ ಅವರು ಸಾಕಷ್ಟು ಬರೆಯಬಹುದು. ಅವರ ಚಿಂತನೆಯ ಅಭಿವ್ಯಕ್ತಿ ಕ್ರಮದಲ್ಲಿ ಹೊಸತನವಿದೆ, ಆಳವಾದ ಜ್ಞಾನ ಸಂಪತ್ತಿದೆ, ಅದನ್ನೆಲ್ಲಾ ಅವರು ಸರ್ವಮಂಗಳಾರವರಂತೆ ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಧಾರೆಯೆರೆಯುತ್ತಿರಬಹುದಾದರೂ ಅದೆಲ್ಲಾ ಬರಹ ರೂಪದಲ್ಲಿ ಬಂದಿದ್ದರೆ ಎಷ್ಟು ಒಳ್ಳೆಯದಿರುತ್ತಿತ್ತು… ಅಂತ ಈಗಲೂ ನಾನು ಹಳಹಳಿಸುತಿರುತ್ತೇನೆ.
ಬುದ್ಧಿಜೀವಿಗಳಲ್ಲಿನ ಗುಂಪುಗಾರಿಕೆ, ಪೂರ್ವಾಗ್ರಹಗಳು ಪಟ್ಟಾಭಿ ಬೆಳೆಯಬಹುದಾದ ಎತ್ತರಕ್ಕೆ ಬೆಳೆಯಗೊಡಲಿಲ್ಲ. ಯಾವ ರೀತಿಯ ಅವಕಾಶಗಳು ಅವರಿಗೆ ಸಿಗಲಿಲ್ಲ. ತಾನು ಕೂಡ ಅದಕ್ಕಾಗಿ ಪ್ರಯತ್ನಿಸಲಿಲ್ಲ. ಕೇವಲ ಕಾಲೇಜಿನಲ್ಲಿ ಪಾಠ ಮಾಡುತ್ತಾ ತನ್ನ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಿಕ ಚರ್ಚೆ ನಡೆಸುತ್ತಾ, ಅವರುಗಳ ಭವಿಷ್ಯ ರೂಪಿಸುವತ್ತ ಒತ್ತು ನೀಡುತ್ತಾ, ನೂರಾರು ವಿದ್ಯಾರ್ಥಿಗಳ ಪ್ರೀತಿಯ ಸರ್ ಆಗಿರುವುದರಲ್ಲೆ ತೃಪ್ತಿ ಕಂಡುಕೊಂಡಿದ್ದಾರೆ. ಅವರಿಗೊಂದು ರೀತಿಯ ದಿಟ್ಟ ಆತ್ಮವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರಿಗೂ ತಲೆ ಬಾಗಿದವರಲ್ಲ, ತನ್ನನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡದೆ, ಕೆಲವೊಮ್ಮೆ ವೃಥಾ ಬುಸ್ ಎನ್ನುತ್ತಿರುತ್ತಾರೆ. ವ್ಯವಸ್ಥೆಯ ವಿರುದ್ಧ ಇವ ಮಾತನಾಡುತ್ತಿದ್ದರಿಂದ ವ್ಯವಸ್ಥೆಯ ಪರವಾಗಿದ್ದವರೆಲ್ಲಾ ಪಟ್ಟಾಭಿಯನ್ನು ದೂರವಿಡುತ್ತಿದ್ದರು. ಆದರೆ ಪಟ್ಟಾಭಿ ಯಾರನ್ನೂ ವ್ಯಕ್ತಿಗತವಾಗಿ ದ್ವೇಷಿಸುವುದಿಲ್ಲ. ಅಗತ್ಯ ಬಿದ್ದರೆ ಅಂತಹವರ ಸಹಾಯಕ್ಕೆ ಧಾವಿಸುತ್ತಾರೆ.
ಅವರ ಅಗಾಧ ಪ್ರತಿಭೆ, ಪಾಂಡಿತ್ಯಗಳು ಬರೀ ಮಾತಾಡುತ್ತಾ ಸೋರಿ ಹೋಗುತ್ತಿದೆಯೇ ಹೊರತು, ಕೂತು ಬರೆಯುವ, ದಾಖಲಿಸುವ ತಾಳ್ಮೆ ತೋರುತ್ತಿಲ್ಲ, ಅಥವಾ ನಿರಾಸಕ್ತಿ, ಬೇಸರ, ದುಃಖ, ಒಂಟಿತನಗಳು ಅವರನ್ನು ಕಾಡುತ್ತಿರಬಹುದು. ಆದರೆ ಅವುಗಳನ್ನ ಮೀರಿ, ಜಿಗಿಯಬಲ್ಲ ಶಕ್ತಿ ಅವರಿಗಿದೆ, ಇನ್ನಾದರೂ ಅವರು ಹಾಗೆ ಮಾಡಲೆಂದು ಆಶಿಸೋಣವೇ?
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ