1985 ಕ್ಕಿಂತ ಮುಂಚೆಯೇ  ಇಡಗುಂಜಿ ಮೇಳ ವಿವಿಧ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಕಾಲಮಿತಿಯ ಯಕ್ಷಗಾನ  ಪ್ರದರ್ಶನವನ್ನು ಆರಂಭಿಸಿತ್ತು. 1968 ರಲ್ಲಿ ಮತ್ತು 1971ರಲ್ಲಿ ದೆಹಲಿಯಲ್ಲಿ ಜರಾಸಂಧವಧೆ, ಕರ್ಣಪರ್ವ ಮುಂತಾದ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಿತ್ತು. ಆ ಸಂದರ್ಭದಲ್ಲಿ ಜನರ ಮನಸ್ಸು ಇನ್ನು ಸಮಯಮಿತಿಗೆ ಒಗ್ಗಿಕೊಳ್ಳದ ಸಂದರ್ಭವಾದರೂ, ಸುಮಾರು 75ಕ್ಕೂ ಮಿಕ್ಕಿ ಪ್ರದರ್ಶನ ನಡೆಯಿತು.  ಅಲ್ಲಿಂದ ಆರಂಭವಾಗಿ ಇಂದಿನ ವರೆಗೆ ಅದಕ್ಕೆ ಬದ್ಧವಾಗಿದೆ ಮೇಳ. ಇದೀಗ ನೋಡಿದರೆ ಬಹುತೇಕ ಯಕ್ಷಗಾನ ಮೇಳಗಳು ಕಾಲಮಿತಿ ಪ್ರಯೋಗವನ್ನು ಸ್ವೀಕರಿಸುವ ಪ್ರಸ್ತಾಪವಿರಿಸಿವೆ. ಈ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಹಾಗೆ ನೋಡಿದರೆ ಜಗತ್ತಿನ ಯಾವ ರಂಗಭೂಮಿಗೊ, ನಾಟ್ಯಪ್ರಕಾರಕ್ಕೋ ʻಕಾಲಮಿತಿʼ ಎಂಬುದು ಒಂದು ಚರ್ಚಿಸಬೇಕಾದ ವಿಷಯವೇ ಅಲ್ಲ ಎನ್ನುವ  ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಮೇಳವನ್ನು ನಡೆಸುವವರೂ ಹೌದು. ಹಿರಿಯ ಕಲಾವಿದರೂ ಹೌದು. ಅವರು ಬರೆದ ಲೇಖನ ಇಂದಿನ ಓದಿಗಾಗಿ. 

‘ಸಮಯಮಿತಿ’ ಅಥವಾ ‘ಕಾಲಮಿತಿ’ ಯಕ್ಷಗಾನದ ಕುರಿತು ಚರ್ಚೆ ಇಂದು ಮತ್ತೆ ತೀವ್ರವಾಗಿ ಯಕ್ಷಗಾನ ವಲಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಚರ್ಚೆ ಮತ್ತು ಪ್ರಯತ್ನ ಆರಂಭವಾಗಿ ಬಹಳ ಕಾಲ ಸಂದಿದೆ.

ಅಂದರೆ 80ರ ದಶಕದಲ್ಲಿ ನಮ್ಮ ಇಡಗುಂಜಿ ಮೇಳ ‘ಕಾಲಮಿತಿ’ಗೆ ಗಟ್ಟಿಯಾಗಿ ಆಂಟಿಕೊಂಡು ಅದನ್ನು ಒಂದು ಹೋರಾಟವಾಗಿ ಸ್ವೀಕರಿಸಿ, ಆರ್ಥಿಕ ನಷ್ಟ ಹಾಗೂ ಕ್ಷುಲ್ಲಕ ಮಾತುಗಳನ್ನೆಲ್ಲ ನಿರ್ಲಕ್ಷಿಸಿ ನಿಂತಿದ್ದುದು ಅಳಿಸಲಾಗದ ದಾಖಲೆ. ಆಗೆಲ್ಲ ಈ ಸಮಯಮಿತಿಯ ಕುರಿತು ನನ್ನ ತಂದೆ ಕೆರೆಮನೆ ಶಂಭು ಹೆಗಡೆಯವರು ಸಮಯಮಿತಿ ಮೀರಿಯೇ ಮಾತಾಡಬೇಕಾಯಿತು! ಇಡೀ ರಾತ್ರಿಯ ವ್ಯವಸಾಯಿ ಮೇಳ 1973 ರಲ್ಲಿ ಆರಂಭವಾಗಿ 1983-84 ರಲ್ಲಿ ಕೊನೆಯ ತಿರುಗಾಟದ ನಂತರ ಸಮಯಮಿತಿಗೆ ಬದ್ಧವಾದ ಏಕೈಕ ಮಂಡಳಿ ಇಡಗುಂಜಿ ಮೇಳವಾಗಿತ್ತು.

ರಾತ್ರಿಯಿಡೀ ಪ್ರದರ್ಶನದಲ್ಲಿ ನಿತ್ಯ ತಿರುಗಾಟದ ಜಂಜಾಟ, ಕಲಾವಿದರಲ್ಲಿ ಮಾನಸಿಕ ಹೊಂದಾಣಿಕೆಯ ಕೊರತೆ, ಮೇಳಕ್ಕೆ ಆಗುವ ಆರ್ಥಿಕ ಹೊರೆ ಇವೆಲ್ಲವೂ ಆಟದ ಮೇಲೆ ಬೀರುವ ಪರಿಣಾಮದಿಂದಾಗಿ ಕೊನೆಗೆ ‘ಹೇಗಾದರು ಮಾಡಿ, ಆಟಮಾಡಿ’ ಎಂಬಲ್ಲಿಗೆ ತಿರುಗಾಟದ ಪರಿಸ್ಥಿತಿ ಆಗುವ ಸಂಭವವೇ ಹೆಚ್ಚು ಎಂಬುದು ಅವರ ಅನುಭವದ ಮಾತು.

ಇಂತಹ ಪ್ರಯತ್ನ ನೀವು ಮುಂದುವರೆಸಿದರೆ ‘ನೀವು Out dated ಆಗ್ತೀರಿʼ ಎಂದು ಕೆಲವರು ಶಂಭು ಹೆಗಡೆಯವರಿಗೆ ಎಚ್ಚರಿಕೆ ಹೇಳಿದ್ದರು. ಮೂರು ತಾಸಿನ ಪ್ರಯೋಗವನ್ನು ‘ಮೂರು ಕಾಸಿನ ಪ್ರಯೋಗ’ ಎಂಬ ಲೇವಡಿ ಕೂಡಾ ಶುರುವಾಯಿತು. ಆದರೆ ಶಂಭು ಹೆಗಡೆಯವರು ಇದಕ್ಕೆ ತಲೆಕೆಡಿಸಿಕೊಳ್ಳದೆ ಧೃಡವಾಗಿ ನಿಂತು ಈ ಯೋಜನೆಯನ್ನು ಒಂದು ಚಳವಳಿಯಂತೆ ಭಾವಿಸಿ ಮುನ್ನಡೆಸಿದ್ದು ಈಗ ಇತಿಹಾಸ. ಇದಕ್ಕೆ ಮುಖ್ಯ ಕಾರಣ ಕಲಾತ್ಮಕ ಶುದ್ಧ ಯಕ್ಷಗಾನ ಪ್ರಯೋಗಕ್ಕೆ ವ್ಯವಸಾಯ ಮೇಳದ ಬಂಧನ ತೊಡಕು ಎಂಬ ಅನುಭವ ಮತ್ತು ಚಿಂತನೆ -ಈ ಸಮಯಮಿತಿ ಯಕ್ಷಗಾನದ ಪ್ರಯೋಗ ಒಂದು ಪರ್ಯಾಯ ಮಾರ್ಗ ಎಂಬ ನಂಬಿಕೆಯೆ ಭದ್ರ ಬುನಾದಿಯಾಗಿತ್ತು. ಅಂತೂ, ಇವರೆದುರು ವಾದಗಳನ್ನ ಒಪ್ಪಿಕೊಂಡರೂ ಕೊನೆಗೆ, ಅರ್ಧರಾತ್ರಿ ಆಟ ಬಿಟ್ಟರೆ ಮನೆಗೆ ಹೋಗುವುದು ಹೇಗೆ? ಎಂಬ ಪ್ರಶ್ನೆಯನ್ನ ಮುಂದಿಟ್ಟು ಹಳೆಯ ವಾದಕ್ಕೆ ಹಿಂದಿರುಗುವವರೇ ಹೆಚ್ಚು ಇದ್ದರು. ಅದನ್ನ ಸರ್ವಸಮ್ಮತಗೊಳಿಸುವಲ್ಲಿ ಶಂಭು ಹೆಗಡೆಯವರು ಅವಿರತ ಪ್ರಯತ್ನ ನಡೆಸಿ ಕೊನೆಗೆ ಅದರಲ್ಲಿ ಸಫಲತೆಯನ್ನೇ ಪಡೆದರು ಎನ್ನಬೇಕು.

ಯಕ್ಷಗಾನ ಕಾಲಮಿತಿಗೆ ಒಳಪಡಿಸುವ ಕುರಿತು ನನ್ನ ದೊಡ್ಡಪ್ಪ ಡಾ. ಕೆರೆಮನೆ ಮಹಾಬಲ ಹೆಗಡೆ ಸುಮಾರು 50 ವರುಷಗಳ ಹಿಂದೆಯೇ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರಂತೆ, ಅವರು ಬೆಳಗಿನ ತನಕದ ಯಕ್ಷಗಾನವನ್ನು ‘ರಾಕ್ಷಿಸೀ ವ್ಯವಹಾರ’ ಎಂತಲೇ ಕರೆಯುತ್ತಿದ್ದರು. ಈ ಕಾರಣಕ್ಕಾಗಿಯೇ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಿ ಡಾ. ಮಹಾಬಲ ಹೆಗಡೆಯವರ ನಿರ್ದೇಶನದಲ್ಲಿ, ಭಟ್ಕಳದ ಶ್ರೀ ಚಂದ್ರಶೇಖರ ಅಡಿಗರ ಯಜಮಾನಿಕೆಯಲ್ಲಿ 1976-77ರಲ್ಲಿ ಕಮಲಶೀಲೆ ಮೇಳವನ್ನ ಕಾಲಮಿತಿಯ ಪ್ರದರ್ಶನಕ್ಕೆ ಒಳಪಡಿಸಿ ಹಲವಾರು ಪ್ರದರ್ಶನ ನೀಡಿತು. ಆರ್ಥಿಕವಾಗಿ ವಿಫಲವಾಗಬೇಕಾಯಿತಾದರೂ ಹೊಸ ಚಿಂತನೆಗೆ ಆಗಲೇ ವೇದಿಕೆ ಒದಗಿಸಿತು.

1985 ಕ್ಕಿಂತ ಮುಂಚೆಯೇ  ಇಡಗುಂಜಿ ಮೇಳ ವಿವಿಧ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಕಾಲಮಿತಿಯ ಪ್ರದರ್ಶನವನ್ನು ಆರಂಭಿಸಿತ್ತು. 1968 ರಲ್ಲಿ ಮತ್ತು 1971ರಲ್ಲಿ ದೆಹಲಿಯಲ್ಲಿ ಜರಾಸಂಧವಧೆ, ಕರ್ಣಪರ್ವ ಮುಂತಾದ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಿತ್ತು.

1985-86 ರಲ್ಲಿ ವಿವಿಧ ಕಡೆ ಹಲವಾರು ಪ್ರದರ್ಶನ ನೀಡಿದ ಮಂಡಳಿ ಆ ಸಂದರ್ಭದಲ್ಲಿ ಟೆಂಟು, ಖುರ್ಚಿ, ರಂಗಸ್ಥಳ ಸಹಿತ ಮೂರ್ನಾಲ್ಕು  ಗಂಟೆಗೆ ಪ್ರಸಂಗವನ್ನು ಪರಿಷ್ಕರಿಸಿ ತಿರುಗಾಟ ಆರಂಭಿಸಿತು. ಆದರೆ ಆ ಸಂದರ್ಭದಲ್ಲಿ ಜನರ ಮನಸ್ಸು ಇನ್ನು ಸಮಯಮಿತಿಗೆ ಒಗ್ಗಿಕೊಳ್ಳದ ಸಂದರ್ಭವಾದರೂ, ಸುಮಾರು 75ಕ್ಕೂ ಮಿಕ್ಕಿ ಪ್ರದರ್ಶನ ನಡೆಯಿತು. ಇದರಿಂದ ಇಂಥಹ ಆಟ ಮುಂದುವರೆಸಲು ನಮ್ಮ ಮಂಡಳಿಗೆ ಒಂದು ಆತ್ಮವಿಶ್ವಾಸ ಮೂಡಿತು. ಅಲ್ಲಿಂದ ಆರಂಭವಾಗಿ ಇಂದಿನ ವರೆಗೆ ಅದಕ್ಕೆ ಬದ್ಧವಾದ ಮಂಡಳಿ ಇದು ಸರಿಯಾದ ದಾರಿ ಎನ್ನುವುದಕ್ಕಿಂತ, ಇಂದು ‘ಇದೇ ಸರಿಯಾದ ದಾರಿ’ ಎಂಬಲ್ಲಿಗೆ ನಾವು ಬಂದು ನಿಂತಿದ್ದೇವೆ.

ಈ ಪರಿಷ್ಕೃತ ಯೋಚನೆಯ ರೂಪರೇಷೆ ಸ್ಥೂಲವಾಗಿ ಹೀಗಿತ್ತು; ಇಡೀ ರಾತ್ರಿಯ ಒಂದು ಪ್ರಸಂಗವನ್ನ ಪರಿಷ್ಕರಿಸಿ ಮೂರು ತಾಸಿನ ಅವಧಿಗೆ ಪೂರ್ಣವಾಗಿ ನೀಡುವುದು ಎಂದು. ಇದಕ್ಕಾಗಿ ನಾಲ್ಕು, ಐದು ತಾಸಿನ ಪ್ರಸಂಗದಲ್ಲಿ ಎಡಿಟ್ ಮಾಡಿ ಅದನ್ನ ಮೂರು ತಾಸಿಗೆ ಇಳಿಸುವ ಪ್ರಯತ್ನಕ್ಕೆ ಮಂಡಳಿ ಸಜ್ಜುಗೊಂಡಿತು.

ಕಲಾತ್ಮಕ ಶುದ್ಧ ಯಕ್ಷಗಾನ ಪ್ರಯೋಗಕ್ಕೆ ವ್ಯವಸಾಯ ಮೇಳದ ಬಂಧನ ತೊಡಕು ಎಂಬ ಅನುಭವ ಮತ್ತು ಚಿಂತನೆ -ಈ ಸಮಯಮಿತಿ ಯಕ್ಷಗಾನದ ಪ್ರಯೋಗ ಒಂದು ಪರ್ಯಾಯ ಮಾರ್ಗ ಎಂಬ ನಂಬಿಕೆಯೆ ಭದ್ರ ಬುನಾದಿಯಾಗಿತ್ತು. ಅಂತೂ, ಇವರೆದುರು ವಾದಗಳನ್ನ ಒಪ್ಪಿಕೊಂಡರೂ ಕೊನೆಗೆ, ಅರ್ಧರಾತ್ರಿ ಆಟ ಬಿಟ್ಟರೆ ಮನೆಗೆ ಹೋಗುವುದು ಹೇಗೆ? ಎಂಬ ಪ್ರಶ್ನೆಯನ್ನ ಮುಂದಿಟ್ಟು ಹಳೆಯ ವಾದಕ್ಕೆ ಹಿಂದಿರುಗುವವರೇ ಹೆಚ್ಚು ಇದ್ದರು.

ಯಕ್ಷಗಾನದ ವ್ಯವಸಾಯ ವಲಯದಲ್ಲಿ ಸಾಕಷ್ಟು ಪರ-ವಿರೋಧಗಳ ಚರ್ಚೆನಡೆಯುತ್ತಿದೆ. ಈ ಚರ್ಚೆಯ ಕಾವು ಏರಿರುವ   ಸಂದರ್ಭದಲ್ಲಿ ನಾವು ಈ ಕುರಿತು ಹೇರಳವಾಗಿ ಪುಟಗಟ್ಟಲೆ ವಾದ-ವಿವಾದ ಹುಟ್ಟುಹಾಕಬಹುದಾಗಿದೆ. ಈಗಾಗಲೇ ಕೆಲ ಮೇಳಗಳು ಇಡೀ ರಾತ್ರಿ ಪ್ರದರ್ಶನದಲ್ಲಿ ಮತ್ತೆ ಕೆಲವು ಸಮಯಮಿತಿ ಅಳವಡಿಸಿಕೊಂಡು ಮುಂದೆ ಸಾಗುತ್ತಿವೆ. ಮೇಳಗಳು ತೊಡಗಿಸುವ ಬಂಡವಾಳ ಗಾತ್ರ, ಕಲಾವಿದರ ಆರೋಗ್ಯ, ಪ್ರೇಕ್ಷಕರ ಮತ್ತು ಇಡೀ ಸಮಾಜದ ಬದಲಾದ ಸಮಯ ಪ್ರಜ್ಞೆ, ಯಕ್ಷಗಾನ ಪ್ರದರ್ಶನ ಗುಣಮಟ್ಟ, ಕಲಾವಿದರ ಲಭ್ಯತೆ ಇವೆಲ್ಲವನ್ನ ಗ್ರಹಿಸಿದಾಗ ಈಗ ಎಲ್ಲಾ ಮೇಳಗಳು ಕಾಲಮಿತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯತೆಯಾಗಿದೆ ಎಂದು ಎನಿಸುತ್ತಿದೆ. ಅಲ್ಲದೇ ಇಡೀ ರಾತ್ರಿ ಪ್ರದರ್ಶನವನ್ನು ನೋಡಲು  ಪ್ರೇಕ್ಷಕರಿಲ್ಲ. ಬಂದ ಪ್ರೇಕ್ಷಕರು ಮಧ್ಯರಾತ್ರಿಯಾಗುತ್ತಿದ್ದಂತೆ ಸಾವಕಾಶವಾಗಿ ನಾಳಿನ ಕೆಲಸಗಳ ನೆವದಲ್ಲಿ ಮನೆಸೇರುವುದು ಎಲ್ಲಾ ಕಡೆ ಒಂದು ಮಾಮೂಲಿ ಸಂಗತಿಯಾಗಿದೆ. ಕಲಾವಿದರು ಯಾರಿಗಾಗಿ ರಾತ್ರಿ ಇಡೀ ಕುಣಿದು ದಣಿಯಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಬಾಧಿಸುತ್ತಿದೆ. ಆದರೆ ಗತಾನುಗತಿಕ ಕ್ರಮವನ್ನ ಬಿಡಲೂ ಮನಸ್ಸಿಲ್ಲದ ಉಭಯ ಸಂಕಟಕ್ಕೆ ಕೆಲವರು ಸಿಲುಕಿದ್ದಾರೆ.

ಯಕ್ಷಗಾನ ರಂಗಭೂಮಿ ಕನಿಷ್ಠ 500/600 ವರುಷಗಳ ಇತಿಹಾಸವನ್ನು ಕಂಡಿದೆ. ಈ ಸುದೀರ್ಘ ಬದುಕಿನಲ್ಲಿ ನಮ್ಮ ರಂಗಭೂಮಿ ಹಲವು ಪರಿಷ್ಕರಣೆ, ಪ್ರಭಾವ, ಸಂಕಲನ, ಪರೀಕ್ಷೆ ಮುಂತಾದವುಗಳಿಗೆ ತನ್ನನ್ನ ಒಪ್ಪಿಸಿಕೊಳ್ಳುತ್ತಾ ಬೆಳೆದು ಬಂದಿದೆ ಎಂಬುದು ಸರ್ವವೇದ್ಯ. ಅಂತೆಯೇ ಈ ಕಾಲ ಘಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಪರಂಪರೆಯಿಂದ ಬಂದಂತೆ ಬೆಳಗಿನವರೆಗೆ ಸುದೀರ್ಘವಾದ ಆಟ ಆಗಬೇಕೆ ಬೇಡವೆ ಎಂಬ ಒಂದು ಸರಳ ಪ್ರಶ್ನೆ ಅಷ್ಟೇ ಜಟಿಲವೂ ಬಹು ಸಂಕೀರ್ಣವೂ ಆದ ಸಂಗತಿಗಳನ್ನ ತನ್ನಲ್ಲಿ ಹುದುಗಿಸಿಕೊಂಡಿದೆ. ಅಥವಾ ಇದನ್ನೇ ಒಂದು ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಜಗತ್ತಿನ ಯಾವ ರಂಗಭೂಮಿಗೊ, ನಾಟ್ಯಪ್ರಕಾರಕ್ಕೋ ʻಸಮಯಮಿತಿʼ ಎಂಬುದು ಒಂದು ಚರ್ಚಿಸಬೇಕಾದ ವಿಷಯವೇ ಅಲ್ಲ. ಅದೊಂದು ಗಂಭೀರ ಸಮಸ್ಯೆ ಅಲ್ಲವೇ ಅಲ್ಲ. ಕೊಟ್ಟ ಅಥವಾ ಇಂದಿನ ಕಾಲ, ದೇಶ, ಸಂದರ್ಭದಲ್ಲಿ ದೊರಕಿದ ಸಮಯವನ್ನ ಸಾರ್ಥಕವಾಗಿ ಬಳಸುವುದು ಹೇಗೆ, ತಮ್ಮ ತಮ್ಮ ಕಲೆಯ ಆಕರ್ಷಣಿಯ, ರಸಾತ್ಮಕ ಸನ್ನಿವೇಶವನ್ನ ಉಳಿಸಿಕೊಂಡು ಮಿತಕಾಲದಲ್ಲಿ ಪ್ರದರ್ಶನ ಕೊಡುವುದು ಹೇಗೆ ಎಂದು ಸಾಕಷ್ಟು ಚಿಂತನ, ಮಂಥನ ನಡೆಸುತ್ತಾರೆ. ಇದು ರಂಗಭೂಮಿ, ಕಲೆ ತನ್ನ ಅಸ್ಮಿತೆಯನ್ನ ಕಳೆಯದೆ, ಕಾಲದೊಟ್ಟಿಗೆ ಹೆಜ್ಜೆಹಾಕುವುದನ್ನ ಸವಾಲಾಗಿ ಸ್ವೀಕರಿಸುವ ಬಗೆಯಾಗಿದೆ. ಅದರೆ ಇಲ್ಲಿ ಹಾಗಲ್ಲ!

ಯಕ್ಷಗಾನ ಎಂದರೇನು, ಬಹುತೇಕ ನಮ್ಮ ಭಾರತದ ಯಾವುದೇ ರಂಗಭೂಮಿಯನ್ನ ತೆಗೆದುಕೊಂಡರೂ, ಬೆಳಗಿನವರೆಗೆ ಅಥವಾ ಅದಕ್ಕೂ ಹೆಚ್ಚು ಕಾಲ ತನ್ನ ಪ್ರದರ್ಶನವನ್ನ ಬೆಳೆಸಿಕೊಂಡಿದ್ದು ಕಾಣುತ್ತದೆ. ಕೇರಳದ ಕುಡಿಯಾಟ್ಟಂ ಜಗತ್ತಿನಲ್ಲೇ ಅತಿ ದೀರ್ಘವಾಗಿ ಪ್ರದರ್ಶನಗೊಳ್ಳುವ ರಂಗಭೂಮಿಯಾಗಿದೆ. ಬಹುತೇಕ ಜಾನಪದವಿರಲಿ, ಶಾಸ್ತ್ರೀಯ ಕಲೆ, ಸಂಗೀತಗಳಿಗೆ ಇಡೀ ರಾತ್ರಿಯನ್ನ ಪೂರ್ಣವಾಗಿ ಬಳಸಿಕೊಂಡ ಕಾಲಘಟ್ಟ ಒಂದಿತ್ತು. ಹೀಗಿರುವಾಗ ಯಕ್ಷಗಾನವೂ ಅದೇ ಮಾದರಿಯಲ್ಲಿ ಬೆಳೆದು ಬಂದದ್ದು ಹೊರತು ಬೆಳಗಿನ ತನಕದ ಪ್ರದರ್ಶನ ಯಕ್ಷಗಾನದ್ದು ಮಾತ್ರ ಎಂದು ಭಾವಿಸಿಕೊಳ್ಳಬೇಕಾಗಿಲ್ಲ! ಅದರಲ್ಲೂ ಈ ಸಮಸ್ಯೆ ಹರಕೆ ಮೇಳಕ್ಕೆ ಮಾತ್ರ ಭಾದಿಸುತ್ತಿದೆ.

ಡಾ. ಶಿವರಾಮ ಕಾರಂತರನ್ನ ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಯಕ್ಷಗಾನದ ಸಂದರ್ಭದಲ್ಲಿ ಕಾರಂತರ ಕೊಡುಗೆಯನ್ನ ಕಾರ್ನರ್ (ಬದಿಗೆ ತಳ್ಳಿ) ಮಾಡಿ ನಾವು ಮುಂದೆ ಸಾಗಲು ಸಾಧ್ಯವಿಲ್ಲ. ಡಾ. ಕಾರಂತರ ಚಿಂತನೆಯಲ್ಲಿ ಈ ಬೆಳಗಿನ ತನಕ ಯಕ್ಷಗಾನದ ಪ್ರಯೋಗದಲ್ಲಿ ಕಲೆಯ ಸೂಕ್ಷ್ಮತೆ, ನಾವೀನ್ಯತೆ, ನವುರುಗಳನ್ನು ಅಭಿವ್ಯಕ್ತಿಸುವುದು ಕಷ್ಟ ಸಾಧ್ಯ ಎಂಬುದಕ್ಕಾಗಿ ಯಕ್ಷಗಾನವನ್ನ ಸಮಯದ ಚೌಕಟ್ಟಿಗೆ ಅಳವಡಿಸಿದರು ಎಂಬುದು ನನ್ನ ಅಭಿಪ್ರಾಯ. ಅಥವಾ ಸಮಯ ಮಿತಿಯಲ್ಲಿ ಕಲಾತ್ಮಕ ಸಾಧನೆಗೆ ಹೆಚ್ಚಿನ ಸಾದ್ಯತೆಗಳನ್ನು ಕಾಣಿಸಬಹುದು ಎಂದೂ ಇರಬಹುದು. ಡಾ. ಕಾರಂತರ ಯಕ್ಷಗಾನದಲ್ಲಿ ವಸ್ತು, ವಿನ್ಯಾಸ, ಅಭಿವ್ಯಕ್ತಿ, ರಂಗ ನಿಯಂತ್ರಣ, ರಂಗಚಲನೆ, ತಾರ್ಕಿಕವಾದ ನಿರೂಪಣೆ, ಹೊಸ ದೃಷ್ಠಿ ಮುಂತಾದವುಗಳ ತೆರೆದುಕೊಳ್ಳುವುದಕ್ಕೆ ‘ಸಮಯ’ ಕೂಡ ಮಹತ್ವದ ಪಾತ್ರವಹಿಸಿದೆ.
ಡಾ. ಮಾಯಾರಾವ್ ಕೂಡಾ ಯಕ್ಷಗಾನಕ್ಕೆ ವ್ಯಾಪಕ ಮನ್ನಣೆ ದೊರಕುವಲ್ಲಿ ಸಮಯಮಿತಿಯನ್ನು ಅಳವಡಿಸಬೇಕೆಂದು ಆಗಾಗ ಪ್ರತಿಪಾದಿಸುತ್ತಿದ್ದರು.

ಯಕ್ಷಗಾನದ ಪರಿಪ್ರೇಕ್ಷ್ಯದಲ್ಲಿಯೇ ವಿಶ್ಲೇಷಣೆಗೆ ಒಳಪಡಿಸುವುದಾದರೆ, ಇದೊಂದು ಸಂಪ್ರದಾಯ, ಅಥವಾ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ ಎಂಬ ಕಾರಣಕ್ಕೆ ಮಾತ್ರ ಇಡೀ ರಾತ್ರಿ ಪ್ರದರ್ಶನವನ್ನ ಸಮರ್ಥಿಸಬಹುದು. ತಾತ್ವಿಕ, ವ್ಯಾವಹಾರಿಕ, ಮತ್ತು ಕಲಾತ್ಮಕ ದೃಷ್ಟಿಯಲ್ಲಿ ವಿವೇಚಿಸಿದರೆ ‘ಸಮಯಮಿತಿ’ಯ ಯಕ್ಷಗಾನ, ಯಕ್ಷಗಾನದಲ್ಲಿ ಧನಾತ್ಮಕ ಬದಲಾವಣೆಗೆ ಹೇತುವಾಗಬಲ್ಲದು ಹೊರತು ಋಣಾತ್ಮಕವಾಗಿ ಅಲ್ಲ.
ಯಾವುದೇ ಒಂದು ಕಾಲದ ಚಿಂತನೆಯಲ್ಲಿ, ಆಗುವ ಅನಿವಾರ್ಯ ಬದಲಾವಣೆಗಳು ಅಸ್ತಿತ್ವಕ್ಕೆ ದಾಂಗುಡಿ ಇಟ್ಟಾಗ ಅದರಿಂದ ತಪ್ಪಿಸಿಕೊಳ್ಳುವ ಬದಲು, ಮನಸ್ಸು ಒಪ್ಪಿಕೊಂಡು ಸೃಜನಾತ್ಮಕವಾಗಿ, ಧನಾತ್ಮಕವಾಗಿ ನಿಭಾಯಿಸುವುದು ಹೆಚ್ಚು ಮೌಲಿಕವಾದದ್ದು ಎಂದು ನನ್ನ ಅನಿಸಿಕೆ. ಯಕ್ಷಗಾನದ ಬಯಲಾಟದ ಪ್ರದರ್ಶನ ಇಡೀ ರಾತ್ರಿ ಆಡಬೇಕು ಅದೇ ಸಂಪ್ರದಾಯ ಎನ್ನುವಂತಿಲ್ಲ. ಯಾಕೆಂದರೆ-ಕಿ.ಪೂ 2 ನೇ ಶತಮಾನದ ನಾಟ್ಯ ಶಾಸ್ತ್ರವೂ ಸಮಯಮಿತಿಯನ್ನು ಒಪ್ಪಿಕೊಂಡು ಬಹಳ ಮಹತ್ವದ ವಿಶ್ಲೇಷಣೆಯನ್ನು ನಮ್ಮ ಮುಂದಿಟ್ಟಿದೆ.

ಯಾಮ ಮಾತ್ರ ಸಮಾಪ್ಯಂ ಯತ್ ನಾಟ್ಯಂ ರಾಗವರ್ಧನಂ.
ಧೀರ್ಘ ವಿರಾಗಜನಕಂ ಅತೋ ನಾಟ್ಯಂ ವಿವರ್ಜಯೇತ್.

ಬರಿ ಒಂದು ಜಾವದಲ್ಲಿ ಮುಗಿಯುವ ಪ್ರದರ್ಶನವನ್ನು ಪ್ರೇಕ್ಷಕರು ಹೆಚ್ಚಾಗಿ ಮೆಚ್ಚುತ್ತಾರೆ. ಅದಕ್ಕಿಂತ ದೀರ್ಘವಾದರೆ ಬೇಸರವನ್ನುಂಟುಮಾಡುತ್ತದೆ. ಆದ್ದರಿಂದ ದೀರ್ಘ ಪ್ರದರ್ಶನವನ್ನು ಬಿಟ್ಟು ಬೀಡಬೇಕು. ಹೀಗೆಂದು ನಾಟ್ಯ ಶಾಸ್ತ್ರಕಾರ ಹೇಳಿದ್ದನ್ನ ನಮ್ಮ ಯಕ್ಷಗಾನ ವ್ಯವಸಾಯೀ ವಲಯ ಅರ್ಥೈಸಿಕೊಳ್ಳಬಹುದು ಎನಿಸುತ್ತದೆ. ಸಮಯಮಿತಿಯ ಚರ್ಚೆ ಮಾಡುತ್ತಾ ಬೆಳಗಾದರೆ ಆಶ್ಚರ್ಯವಿಲ್ಲ. ಯಾಕೆಂದರೆ ಚರ್ಚೆಗೆ ಸಮಯಮಿತಿ ಇಲ್ಲವಲ್ಲ!


ಕಲಾತ್ಮಕವಾಗಿ ಪ್ರಾಯೋಗಿಸಲ್ಪಡುವ ಪ್ರದರ್ಶನದಲ್ಲಿ ಸಮಯಮಿತಿ ಅಥವಾ ದೀರ್ಘ ಸಮಯ ಇವೆರಡಕ್ಕೂ ಸಮಾನ ಮಾನ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಕಾದಂಬರಿ ಎಷ್ಟು ಪುಟದ್ದು ಎನ್ನುವುದಕ್ಕಿಂತ ಪುಟದಲ್ಲಿ ಏನಿದೆ ಎಂಬುದು ಮುಖ್ಯವಾದಂತೆ, ಅಥವಾ ದೀರ್ಘವಾದ ಮಹಾಕಾವ್ಯಗಳ ಜೊತೆ ಜೊತೆಗೇ ಚಿಕ್ಕ ಚೊಕ್ಕ ಸಂವೇದನಾಶೀಲ ಕೃತಿಗಳು ಉದ್ಭವಿಸುವಂತೆ ಯಕ್ಷಗಾನ ಪ್ರದರ್ಶನಕ್ಕೂ ಈ ನೆಲೆಯ ನೋಟ ಪ್ರಸ್ತುತವಾಗಬಹುದು. ಆದರೆ ಸದ್ಯದ ವ್ಯವಸಾಯೀ ಯಕ್ಷಗಾನ ಎಂದು ನಾವು ಕರೆಯುತ್ತಿರುವ ‘ಮೇಳ’ ಒಂದು ‘ಅವಸ್ಥೆ’ಯಾಗದೇ ‘ವ್ಯವಸ್ಥೆ’ಗೆ ಒಳಪಟ್ಟರೆ ಕಲೆಗೆ ಅದರ ಬೆಳವಣಿಗೆ ಪೂರಕ. ಬೆಳತನಕದ ಆಟವೇ ನಿಜವಾದ ಯಕ್ಷಗಾನ ಬಯಲಾಟ ಎಂಬ ಭ್ರಮೆ ಕಳಚಬೇಕಾದ ಸಂದರ್ಭ ಇದು ಎಂದು ನನ್ನ ಭಾವನೆ. ಕಲಾವಿದ ಅವನ ವ್ಯಾವಹಾರಿಕ ಪರಿಸ್ಥಿತಿ, ಸಾಮಾಚಿಕ ಬದಲಾವಣೆ, ಆರೋಗ್ಯ, ಚಿಂತನೆ, ಪ್ರಯೋಗಶೀಲತೆ, ಕ್ಷೇತ್ರ ವಿಸ್ತಾರ, ಇನ್ನನೇಕ ಶಾಖೋಪ ಶಾಖೆಯ ವಿಶ್ಲೇಷಣೇಯ ನಿಕಷದಲ್ಲಿ ‘ಸಮಯಮಿತಿ’ಯ ಯಕ್ಷಗಾನ ಬಯಲಾಟ ಪ್ರಯೋಗಗಳು ಅಗತ್ಯ ಮತ್ತು ಅನಿವಾರ್ಯ ಕೂಡಾ.

(ಕಣಿಪುರ ಪತ್ರಿಕೆಗೆ ಬರೆದ ಲೇಖನದ ಪರಿಷ್ಕೃತ ರೂಪ)