‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ. ಇದರಿಂದಾಗಿ ನನಗೆ ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗುವುದು ತುಂಬಾ ಕಷ್ಟಕರ ಎಂದೆನಿಸುತ್ತದೆ.
ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿಗೆ

ಇಷ್ಟು ವರ್ಷಗಳಿಂದ ನಾನು ಇಲ್ಲಿ (ಹಿಮಾಲಯದಲ್ಲಿ) ಇರುವೆ ಎಂಬುದನ್ನು ಊಹಿಸುವುದು ಕಷ್ಟ – ನಲುವತ್ತು ಬೇಸಿಗೆಗಳು ಮತ್ತು ಮಳೆಗಾಲ ಮತ್ತು ಚಳಿಗಾಲ ಅಲ್ಲದೆ ಹಿಮಾಲಯದ ವಸಂತ ಋತುಗಳು. ಯಾಕೆಂದರೆ, ನಾನು ನನ್ನ ಇಲ್ಲಿಯ ಪ್ರಥಮ ಭೇಟಿಯನ್ನು ನೆನೆಸುವಾಗ ಅದು ನಿನ್ನೆ, ಮೊನ್ನೆ ಎಂದೆನಿಸುತ್ತದೆ. ಅದು ಬಹು ಮಟ್ಟಿಗೆ ಎಲ್ಲವನ್ನು ಚುಟುಕಾಗಿ ತಿಳಿಸುತ್ತದೆ. ಸಮಯ ಮುಂದೆ ಹೋಗುತ್ತದೆ ಆದರೆ ಸಮಯ ಮುಗಿಯುವುದಿಲ್ಲ; ಜನರು ಬರುತ್ತಾರೆ, ಹೋಗುತ್ತಾರೆ. ಪರ್ವತಗಳು ಶಾಶ್ವತವಾಗಿ ಉಳಿಯುತ್ತವೆ. ಪರ್ವತಗಳು ಶಾಶ್ವತವಾಗಿ ಉಳಿಯುವಂತಹವುಗಳು. ಅವುಗಳು ಕದಲಲು ಒಲ್ಲದ ಸ್ಥಿರವಾದ ಪ್ರಾಕೃತಿಕ ಬಳುವಳಿಗಳು. ಅವುಗಳ ಗರ್ಭದಲ್ಲಿ ಹುದುಗಿರುವ ಖನಿಜ ಸಂಪತ್ತಿಗೋಸ್ಕರ ಜನ ಅವುಗಳನ್ನು ಅಗೆಯಬಹುದು; ಅವುಗಳಲ್ಲಿರುವ ಮರಗಳನ್ನು ಕಡಿಯಬಹುದು ಯಾ ಮರಗಳ ರೆಂಬೆಗಳನ್ನು, ಎಲೆಗಳನ್ನು ಬೋಳಿಸಬಹುದು ಯಾ ಅಲ್ಲಿ ಹರಿಯುವ ಸಣ್ಣ ತೊರೆಗಳ ನೀರನ್ನು ಅಣೆಕಟ್ಟಿನಿಂದ ತಡೆಯಬಹುದು ವಾ ತೊರೆಗಳು ಹರಿಯುವ ದಿಕ್ಕನ್ನು ಬದಲಿಸಬಹುದು, ಅಥವಾ ಸುರಂಗಗಳನ್ನು, ರಸ್ತೆಗಳನ್ನು ಮತ್ತು ಸೇತುವೆಗಳನ್ನು ರಚಿಸಬಹುದು. ಆದರೆ ಇದಾವುದರಿಂದಲೂ ಮಾನವನಿಗೆ ಪರ್ವತಗಳನ್ನು ಸಂಪೂರ್ಣವಾಗಿ ಅಳಿಸುವುದು ದುಸ್ತರ. ಇದು ನನಗೆ ಮನಸ್ಸಿಗೆ ಸಮಾಧಾನಕರವಾದ ವಿಷಯ; ಪರ್ವತಗಳು ಭೂಮಿಯಲ್ಲಿ ಸ್ಥಿರವಾಗಿವೆ.

ನನಗೆ ಒಮ್ಮೊಮ್ಮೆ ನಾನು ಈ ಬೆಟ್ಟದ ಒಂದು ಅಂಗವಾಗಿದ್ದೇನೆ ಎಂದು ಅನಿಸುತ್ತದೆ. ಇಷ್ಟು ಕಾಲದಿಂದ ಈ ಭಾಗದಲ್ಲಿ ನೆಲೆಸಿರುವುದರಿಂದ ಇಲ್ಲಿಯ ಗಿಡ ಮರಗಳು, ವನ್ಯ ಪುಷ್ಪಗಳು, ಕಲ್ಲು ಬಂಡೆಗಳು, ಇವುಗಳೆಲ್ಲದರ ಜೊತೆ ಒಂದು ತೆರನಾದ ಬಾಂಧವ್ಯ ಬೆಳೆದ ಅನುಭವವಾಗುತ್ತದೆ. ನಿನ್ನೆ ಮುಸ್ಸಂಜೆ ಯ ಸಮಯದಲ್ಲಿ ನಾನು ‘ಓಕ್’ ಮರಗಳ ಅಡಿಯಿಂದ ಸಾಗುವಾಗ ನನಗೆ ಈ ಕಾಡಿನೊಂದಿಗೆ ಆತ್ಮೀಯತೆ ಬಂದಂತೆ ಅನಿಸುತ್ತಿತ್ತು. ನಾನು ನನಗೆ ಅರಿವಿಲ್ಲದೇ ಒಂದು ಹಳೆಯದಾದ ವೃಕ್ಷವನ್ನುಕೈಯಿಂದ ಸ್ಪರ್ಶಿಸಿ ಮುಂದೆ ಸಾಗುತ್ತಿರುವಾಗ ಆ ವೃಕ್ಷದ ಎಲೆಗಳು ನನ್ನ ಮುಖವನ್ನು ಒರಸಿದಾಗ ಅವು ಕೃತಜ್ಞತಾ ಭಾವನೆಯಿಂದ ಸ್ಪರ್ಶಿಸಿದ ಅನುಭವವಾಯಿತು.

ನನಗೆ ಅನಿಸುತ್ತದೆ, ಮುಂದೆ ಒಂದು ದಿನ, ಪ್ರಕೃತಿಯನ್ನು ಹೆಚ್ಚಾಗಿ ಅವಮಾನಿಸಿದರೆ ಮತ್ತು ಮರಗಳನ್ನು ನಾಶ ಮಾಡುತ್ತಾ ಹೋದರೆ ಗಿಡ ಮರಗಳು ಒಂದೊಂದಾಗಿ ಕಳೆದುಹೋಗಿ ಸಂಪೂರ್ಣವಾಗಿ ಅಳಿದು ಹೋಗಿ ಮಾನವನಿಗೆ ಇಲ್ಲದೆ ಬರಿದಾಗಬಹುದು. ನಾನು ಹಲವಾರು ಕಾಡು ಪ್ರದೇಶಗಳ ಗಿಡ ಮರಗಳು ನಾಶವಾಗಿ ಕಾನನಗಳು ಬರಿದಾದುದನ್ನು ನೋಡಿರುವೆನು. ಈಗ ಎಲ್ಲಾಕಡೆ ಕೋಲಾಹಲದ ಪರಿಸ್ಥಿತಿ ಬಂದೊದಗಿದೆ. ದಿಢೀರನೆ ಪ್ರತಿಯೊಬ್ಬನೂ ಪರಿಸರವಾದಿ ಎಂದೆನಿಸಿಕೊಳ್ಳುವುದು ಸಾಮಾನ್ಯವಾಗಿದೆ. ಒಂದು ರೀತಿಯಲ್ಲಿ ಇದು ಒಳ್ಳೆಯದೇ, ಯಾಕೆಂದರೆ ಅಳಿದುಳಿದಿರುವ ವನ್ಯ ಸಂಪತ್ತನ್ನು ಕಾಪಾಡಬಹುದು. ಪರಿಸರವಾದಿಗಳು ಮೊದಲನೆಯದಾಗಿ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಹಾಗು ಇತರ ಪ್ರಾಕೃತಿಕ ಸಂಪತ್ತನ್ನು ಅಳಿಸುವವರನ್ನು ತಡೆಯಬೇಕು. ಯಾಕೆಂದರೆ ಅವರ ಕಾರ್ಯ ಕ್ಷೇತ್ರವು ಪರಿಸರವನ್ನು ನಿರ್ದಾಕ್ಷಿಣ್ಯವಾಗಿ ಹಾಳುಗೆಡಹುತ್ತಿದೆ.

ಸಮುದ್ರ, ಸಾಗರಗಳ ಕುರಿತಾಗಿ ಹಲಾವಾರು ಗಣ್ಯ ಲೇಖಕರು ಬರೆದಿರುತ್ತಾರೆ – ಕಾನ್ರಾಡ್, ಮೆಲ್ವಿಲ್ಲೆ, ಸ್ಟೀವನ್ಸನ್, ಮ್ಯಾಸೆಫಿಎಲ್ಡ್ ಇವರುಗಳು; ಆದರೆ ನನಗೆ ತಿಳಿದಂತೆ ಅಂತಹ ಉಲ್ಲೇಖಿಸಬಲ್ಲ ಬರಹಗಾರರಿಗೆ ಪರ್ವತಗಳು ವಿಷಯ ಆಗಲಿಲ್ಲ. ಪರ್ವತಗಳ ಕುರಿತಾಗಿ ಹೆಚ್ಚಿನ ಸರಿಯಾದ ಅನುಭವ/ಮಾಹಿತಿ ಬೇಕೆಂದಿದ್ದರೆ ನಾವು ಚೀನಾದ ಅನಾದಿ ತಾವೋಯಿಸ್ಟ್ ಕವಿಗಳ ಬರಹಗಳನ್ನು ಓದಬೇಕು. ಕೆಲವೊಮ್ಮೆ ಕಿಪ್ಲಿಂಗ್ ಬೆಟ್ಟಗಳ ಬಗ್ಗೆ ಬರೆದಿರುವನು. ಆದರೆ ಹಿಮಾಲಯದ ಕುರಿತು ಉಲ್ಲೇಖಿಸಬಲ್ಲ ಲೇಖನವು ಭಾರತೀಯ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ, ಸಮಕಾಲೀನ ಸಾಹಿತ್ಯದಲ್ಲಂತೂ ಇಲ್ಲ. ಸಾಮಾನ್ಯವಾಗಿ ಸಾಹಿತಿಗಳು ತಮ್ಮ ಜೀವನ ಮಾಡುವುದಕ್ಕೆ ಬಯಲು ಸೀಮೆಯ ತಪ್ಪಲು ಪ್ರದೇಶದಲ್ಲಿ ಇದ್ದುಕೊಳ್ಳುತ್ತಾರೆ. ಗುಡ್ಡಗಳಲ್ಲಿ ವಾಸಿಸುವ ಜನರು ತಾವು ಜೀವಿಸುವುದಕ್ಕೆ ಅಷ್ಟೇನೂ ಫಲವತ್ತಲ್ಲದ ಪರ್ವತದ ಮಣ್ಣಿನಲ್ಲಿ ಮಾಡುವ ಕೃಷಿಯನ್ನು ಅವಲಂಬಿಸಿರುತ್ತಾರೆ. ಇನ್ನುಳಿದ ಪರ್ವತಾರೋಹಿಗಳು ಪರ್ವತಶ್ರೇಣಿಯ ಬೇರೆ ಬೇರೆ ಶಿಖರಗಳನ್ನು ಅರಸಿಕೊಂಡು ಮುಂದುವರಿಯುತ್ತಾರೆ. ಆದರೆ ಅವರು ಪರ್ವತಗಳಲ್ಲಿ ಜೀವಿಸುವುದಿಲ್ಲ. ಆದರೆ ನನಗೆ ಅಂದರೆ ಒಬ್ಬ ಲೇಖಕನಿಗೆ ಪರ್ವತಗಳು ಅನುಕೂಲಕರವಾಗಿವೆ.

(ರಸ್ಕಿನ್‌ ಬಾಂಡ್‌)

ಪರ್ವತಗಳು ಮೊದಲಿನಿಂದಲೂ ನನಗೆ ಹಿತಕರವಾಗಿದ್ದವು. ಎಂದರೆ ದೆಹಲಿಯಲ್ಲಿ ನನ್ನ ಕೆಲಸವನ್ನು ತೊರೆದು ಗಿರಿ ಧಾಮದ ಹೊರವಲಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದಂದಿನಿಂದಲೂ.

ಪ್ರಸಕ್ತ ಪ್ರವಾಸಿ ತಾಣಗಳಾದ ಬೆಟ್ಟಗಳು ಶ್ರೀಮಂತರ ಆಟದ ಮೈದಾನಗಳಾಗುತ್ತಿವೆ. ಆದರೆ ೨೫ ವರ್ಷಗಳ ಹಿಂದೆ ಇವುಗಳಲ್ಲಿ ಕೆಲವೇ ಮೋಟಾರ್ ಕಾರುಗಳು ಇದ್ದವು ಮತ್ತು ಪ್ರತಿಯೊಬ್ಬರೂ ಕಾಲ್ನಡಿಗೆಯಲ್ಲೇ ಸುತ್ತಾಡುತ್ತಿದ್ದರು.

ನಾನಿದ್ದ ಆ ಸಣ್ಣ ಮನೆಯು (ಕಾಟೇಜ್) ಓಕ್ ಮತ್ತು ಮೇಪಲ್ ವೃಕ್ಷಗಳಿಂದ ಆವರಿಸಿದ ಕಾಡಿನ ಬದಿಯಲ್ಲಿತ್ತು ಹಾಗು ನಾನು ಸಾಧಾರಣ ೮-೯ ವರ್ಷಗಳನ್ನು ಆ ಮನೆಯಲ್ಲಿ ಕಳೆದೆ. ಹೆಚ್ಚಿನ ದಿನಗಳು ಸಂತೋಷದ ಸಮಯಗಳಾಗಿದ್ದವು. ಕಥೆ, ಪ್ರಬಂಧ, ಕವಿತೆಗಳನ್ನು ಬರೆಯುವುದು ಮತ್ತು ಮಕ್ಕಳಿಗಾಗಿ ಪುಸ್ತಕಗಳನ್ನು ಬರೆಯುವುದಾಗಿತ್ತು.

ನಾನು ಪರ್ವತಗಳಲ್ಲಿ ನೆಲೆಸಿದ ನಂತರವೇ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದೆ. ಇದಕ್ಕೆ ಒಂದು ಕಾರಣವೆಂದರೆ ನನ್ನೊಂದಿಗಿದ್ದು ನನ್ನ ಮನೆಯನ್ನು ನೋಡಿಕೊಳ್ಳುವ ಪ್ರೇಮ್‌ ನ ಮಕ್ಕಳಿರಬಹುದು. ಪ್ರೇಮ್ ಸಿಂಗ್ ಸಣ್ಣ ಹುಡುಗನಾಗಿದ್ದಾಗ, ರುದ್ರಪ್ರಯಾಗದ ಸಮೀಪ, ಪೌರಿ ಘರ್ವಾಲ್‌ನ ಅವನ ಹಳ್ಳಿಯಿಂದ ನನ್ನಲ್ಲಿ ಕೆಲಸಮಾಡಲು ಬಂದಿದ್ದ. ಅವನು ತನ್ನ ಸಮ ವಯಸ್ಕರಿಗಿಂತ ಉದ್ದವಾಗಿ ಹಾಗು ಕಂದು ಬಣ್ಣದಿಂದ ಕೂಡಿದ್ದನು. ಅವನು ಅವನ ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರೂ ಹೆಚ್ಚು ಕಲಿಯುವ ಬುದ್ಧಿಸಾಮರ್ಥ್ಯ ಇತ್ತು. ನನ್ನಲ್ಲಿ ಸೇರಿ ಒಂದೆರಡು ವರ್ಷಗಳಲ್ಲಿ ಅವನು ತನ್ನ ಮನೆಗೆ ತೆರಳಿ ಮದುವೆ ಮಾಡಿಕೊಂಡನು ಮತ್ತು ಆ ಮೇಲೆ ಅವನ ಹೆಂಡತಿ ಚಂದ್ರನ ಜೊತೆ ನನ್ನ ಮನೆಯ ದೈನಂದಿನ ಕೆಲಸವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿರುವನು.

ವಿದ್ಯುತ್ತಿನ ಫ್ಯೂಸ್ ಹೋಗುವುದು, ನೀರಿನ ಟ್ಯಾಂಕಿ, ಒಡೆದ ನೀರಿನ ಪೈಪ್, ಅಡುಗೆ ಅನಿಲ ಸಿಲಿಂಡರ್, ಜೋರಾದ ಗಾಳಿಗೆ ಹಾರಿ ಹೋಗುವ ಮನೆಯ ಛಾವಣಿ ಅಲ್ಲದೆ ಇನ್ನಿತರ ಮನೆಯಲ್ಲಿ ವಾಸಿಸುವವರೇ ಸ್ವತಃ ಮಾಡಬೇಕಾದಂತಹ ಸಮಯ ಬಂದಾಗ ನಾನು ಅಸಹಾಯಕನಾಗುತ್ತೇನೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ನನ್ನ ಆರೈಕೆ ಮಾಡಿದರು ಮತ್ತು ಒಂದೇ ಕುಟುಂಬದ ಸದಸ್ಯನಂತೆ ನೋಡಿಕೊಂಡರು; ನಾನು ಚಿಕ್ಕಂದಿನಿಂದಲೂ ಇಂತಹುದನ್ನು ತಿಳಿದಿರಲಿಲ್ಲ.

ನಿನ್ನೆ ಮುಸ್ಸಂಜೆ ಯ ಸಮಯದಲ್ಲಿ ನಾನು ‘ಓಕ್’ ಮರಗಳ ಅಡಿಯಿಂದ ಸಾಗುವಾಗ ನನಗೆ ಈ ಕಾಡಿನೊಂದಿಗೆ ಆತ್ಮೀಯತೆ ಬಂದಂತೆ ಅನಿಸುತ್ತಿತ್ತು. ನಾನು ನನಗೆ ಅರಿವಿಲ್ಲದೇ ಒಂದು ಹಳೆಯದಾದ ವೃಕ್ಷವನ್ನುಕೈಯಿಂದ ಸ್ಪರ್ಶಿಸಿ ಮುಂದೆ ಸಾಗುತ್ತಿರುವಾಗ ಆ ವೃಕ್ಷದ ಎಲೆಗಳು ನನ್ನ ಮುಖವನ್ನು ಒರಸಿದಾಗ ಅವು ಕೃತಜ್ಞತಾ ಭಾವನೆಯಿಂದ ಸ್ಪರ್ಶಿಸಿದ ಅನುಭವವಾಯಿತು.

ಪ್ರೇಮ್ ಮತ್ತು ಅವನ ಪತ್ನಿ ಇರುವುದರಿಂದ ಬರವಣಿಗೆಯನ್ನು ತಡೆಯಿಲ್ಲದೆ ಮಾಡುವುದು ಸಾಧ್ಯವಾಗುತ್ತದೆ. ಅವರ ಮಗಂದಿರಾದ ರಾಕೇಶ್ ಮತ್ತು ಮುಕೇಶ್ ಹಾಗು ಮಗಳು ಸಾವಿತ್ರಿ ಮೇಪಲ್ ವುಡ್ ಕಾಟೇಜ್‌ನಲ್ಲೆ ಬೆಳೆದವರು. ಇದಲ್ಲದೆ ಬೇರೆ ಮನೆಗಳಲ್ಲಿ ವಾಸ್ತವ್ಯ ಮಾಡಿದಾಗಲೂ ನನ್ನೊಂದಿಗೆ ಇದ್ದುದರಿಂದ ಸ್ವಾಭಾವಿಕವಾಗಿ ಈ ಮಕ್ಕಳು ನನಗೆ ಹತ್ತಿರವಾದರು, ಹಾಗೂ ನನ್ನ ಸಂಸಾರದ ಒಂದು ಭಾಗವಾದರು; ನಾನು ಅವರ ದತ್ತು ತಾತನಾದೆ. ರಾಕೇಶನಿಗಾಗಿ ನಾನು ಒಂದು ಚೆರಿ ಹಣ್ಣಿನ ಕಥೆಯನ್ನು ಬರೆದೆ; ಮುಕೇಶನಿಗೆ ಭೂಕಂಪದ ಕಥೆ ಬರೆದೆ, ಯಾಕೆಂದರೆ ಅವನಿಗೆ ಇಂತಹ ಭೌಗೋಳಿಕ ಅನಾಹುತ (ಏರು ಪೇರು)ಗಳ ಕುರಿತಾಗಿ ತಿಳಿಯುವುದರಲ್ಲಿ ಹೆಚ್ಚಿನ ಆಸಕ್ತಿ; ಮತ್ತು ಸಾವಿತ್ರಿಗೋಸ್ಕರ ಪ್ರಾಸ ಬರುವ ಪದ್ಯಗಳು (ರೈಮ್ಸ್) ಹಾಗೂ ಕವಿತೆಗಳನ್ನು ಬರೆದೆನು.

ಒಬ್ಬನಿಗೆ ಬರೆಯುವುದಕ್ಕೆ ವಿಷಯ ಸಿಗುವುದಿಲ್ಲ ಎಂದಾಗುವುದು ವಿರಳ. ಬೆಟ್ಟದ ಬುಡದಲ್ಲಿ ಒಂದು ತೊರೆಯು ಹರಿಯುವುದರಿಂದ ಅದರ ನೀರಿಗಾಗಿ ಬರುವ ಚಿಕ್ಕ, ಹಾಗೂ ಕೆಲವೊಮ್ಮೆ ದೊಡ್ಡ ಪ್ರಾಣಿಗಳು, ಹಕ್ಕಿಗಳು, ಕೀಟಗಳು, ಸಸ್ಯಗಳು, ಕಾಡು ಪುಷ್ಪಗಳು ಬರೆಯಲು ವಸ್ತುಗಳಾಗುತ್ತವೆ.

ಪಕ್ಕದ ಹಳ್ಳಿಗಳು ಮತ್ತು ಅಲ್ಲಿ ವಾಸಿಸುವ ಒಳ್ಳೆಯ ಜನರು ತುಂಬಾ ಆಸಕ್ತಿ, ಅಭಿರುಚಿಯನ್ನು ಹುಟ್ಟಿಸುವವರಾಗಿದ್ದಾರೆ. ಇದರಂತೆ ಲ್ಯಾಂಡೋರ್ ಮತ್ತು ಮಸ್ಸೂರಿಯಲ್ಲಿರುವ ಹಳೆಯದಾದ ಮನೆಗಳು ಹಾಗೂ ಅಲ್ಲಿ ವಾಸಿಸುವ ಹಳೆಯ ಕುಟುಂಬಗಳು ಕೂಡಾ. ಬೆಟ್ಟಗಳಲ್ಲಿ ಕಾಲ್ನಡಿಗೆಯಲ್ಲಿ ಅಡ್ಡಾಡುವುದು, ಹಾಗೂ ಪರ್ವತಗಳಲ್ಲಿ ಯಾತ್ರಿಕರ ಕಾಲು ದಾರಿಗಳಲ್ಲಿ ಸಾಗುವುದು. ಕೆಲವೊಮ್ಮೆ ನಾನು ರಸ್ತೆ ಬದಿಯಲ್ಲಿರುವ ಚಹಾ ಮಾಡುವ ಅಂಗಡಿ ಯಾ ಹಳ್ಳಿಯ ಶಾಲೆಯಲ್ಲಿ ನಿದ್ರಿಸುವ ಸಂದರ್ಭಗಳಿವೆ. ಬೇಜಾರಿನ ವಿಷಯ ಎಂದರೆ ಇಲ್ಲಿಯ ಹಲವಾರು ಹಳ್ಳಿಗಳಲ್ಲಿ ಇನ್ನು ಕೂಡ ಮೂಲಭೂತ ವೈದ್ಯಕೀಯ ಮತ್ತು ವಿದ್ಯಾಭ್ಯಾಸಗಳ ಸೌಲಭ್ಯಗಳನ್ನು ಲಘುವಾಗಿ ತೆಗೆದುಕೊಳ್ಳಲಾಗಿದೆ.

‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ. ಇದರಿಂದಾಗಿ ನನಗೆ ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗುವುದು ತುಂಬಾ ಕಷ್ಟಕರ ಎಂದೆನಿಸುತ್ತದೆ. ಒಂದೊಮ್ಮೆ ಬೆಟ್ಟಗಳು ನಿಮ್ಮ ರಕ್ತದಲ್ಲಿ ಸೇರಿದರೆ, ಅಲ್ಲಿಂದ ಬಿಡುಗಡೆ ಇರದು.(ಅಸಾಧ್ಯ)

ಯಾವಾಗಲೂ ಸಂತೋಷಕರವಾಗಿರುವುದು ಸುಲಭ ಎಂದಲ್ಲ. ಕೆಲವು ಸಂದರ್ಭಗಳಲ್ಲಿ ಕೈಯಲ್ಲಿ ಹಣದ ಕೊರತೆ ಬರುತ್ತದೆ. ಸ್ವತಂತ್ರ ಉದ್ಯೋಗವು ಕೆಲವು ಸಮಯಗಳಲ್ಲಿ ಎದೆಗುಂದಿಸುವ ಪರಿಸ್ಥಿತಿಯನ್ನು ಒಡ್ಡಬಹುದು ಮತ್ತು ಇತರರಂತೆ ನನಗೆ ನನ್ನದೇ ಆದ ಸ್ವಂತ ಮನೆಯನ್ನು ಖರೀದಿಸುವಷ್ಟು ಹಣವನ್ನು ಸಂಪಾದಿಸುವುದು ಆಗಲಿಲ್ಲ ಎಂಬುದನ್ನು ನಾನು ಅರಿತಿದ್ದೇನೆ. ಸಂಪಾದಕೀಯರ ಬಾಗಿಲುಗಳು ಕೆಲವು ಬಾರಿ ಮುಚ್ಚಿರುತ್ತದೆ; ಆದರೆ ಒಂದು ಬಾಗಿಲು ಮುಚ್ಚಿ ಇದ್ದರೆ ನನಗೆ, ಅದೇ ಸಮಯದಲ್ಲಿ ಇನ್ನೊಂದು ತೆರೆದಿರುವುದು ಪವಾಡ ಸದೃಶ.

ಪ್ರಾಯಶಃ ನಾನು ಲಂಡನ್ ಅಥವಾ ನನ್ನ ಸಹೋದರನಂತೆ ಕೆನಡಾದಲ್ಲಿ ಯಾ ಮುಂಬೈಯಂತಹ ದೊಡ್ಡ ನಗರದಲ್ಲಿ ತುಸು ಒಳ್ಳೆಯ ಜೀವನ ನಡೆಸಬಹುದಿತ್ತೇನೋ. ಆದರೆ ನನಗೆ ಆಯ್ಕೆಗೆ ಅವಕಾಶವಿದ್ದರೂ ನಾನು ಬೇರೆ ತರದ ಜೀವನ ನಡೆಸುತ್ತಿರಲಿಲ್ಲ.


ನೀವು ಯಾವಾಗ ಜನರ ಪ್ರೀತಿ, ವಾತ್ಸಲ್ಯ ಗಳಿಸಿದ್ದಿರೋ, ಪರ್ವತಗಳಲ್ಲಿ ಮಾತ್ರ ಲಭ್ಯವಿರುವ ಸ್ವಾತಂತ್ರ್ಯ ಸಿಕ್ಕಿರುವುದೋ ಆಗ ನೀವು ಸ್ವರ್ಗದ ಅತೀ ಸಮೀಪ ಬಂದಿರುವಿರಿ.

(Rain in the Mountains – Notes from the Himalayas, Published by the Penguin Group . First Published in 1993)