ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು. ಹಸಿವೆಂಬುದು ಬಹಳ ಕೆಟ್ಟದ್ದು. ಇದನ್ನು ಅನುಭವಿಸಿದವರಿಗೇ ಗೊತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ
ಬೆಂಗಳೂರಿನಲ್ಲಿ ನಾನು ಪಿ.ಯು.ಸಿ ಓದುತ್ತಿದ್ದಾಗ ನನ್ನ ಮಾವ ಬಿಟ್ಟಿದ್ದ ಅವರ ಗೆಳೆಯರ ರೂಮಿನಲ್ಲಿ ಅಲ್ಲಿದ್ದವರು ಕೆಲಸಕ್ಕೆ ಹೋಗುತ್ತಿದ್ದಾಗ ನನ್ನ ವ್ಯವಸ್ಥೆ ಚೆನ್ನಾಗಿತ್ತು. ಆದರೆ ಯಾವಾಗ ಅವರು ಕೆಲಸ ಕಳೆದುಕೊಂಡು ರೂಮಿನಲ್ಲಿ ಹಾಗೆಯೇ ಉಳಿದುಕೊಂಡರೋ ಆಗ ನನ್ನ ಸ್ಥಿತಿ ಕಷ್ಟವಾಗುತ್ತಾ ಹೋಯಿತು. ಅವರು ಬಹುಷಃ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಅನಿಸುತ್ತೆ. ಸಂಬಳವೂ ಅಷ್ಟಕ್ಕಷ್ಟೇ ಇತ್ತು. ಬರೋ ಕಡಿಮೆ ವೇತನದಲ್ಲಿಯೇ ಹಾಗೋ ಹೀಗೋ ಹೇಗೋ ಜೀವನದ ಬಂಡಿ ನೂಕುತ್ತಿದ್ದರು. ನನಗೂ ಸಹ ಇದರ ಪ್ರಭಾವ ಬೀರುತ್ತಾ ಹೋಯಿತು. ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ತೆಗೆದುಕೊಂಡಿದ್ದ ನನಗೆ ಇತ್ತ ಓದಿಗಿಂತ ಊಟ, ವಸತಿ ವ್ಯವಸ್ಥೆಯ ಸಮಸ್ಯೆ ‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ಆಗತೊಡಗಿತು. ಹಾಗಂತ ನನ್ನನ್ನು ರೂಮಿನಲ್ಲಿ ಇರಿಸಿಕೊಂಡವರು ಅವರ ಲಿಮಿಟ್ ಮೀರಿ ನನಗೆ ತಿಂಡಿ, ಊಟದ ಸಮಸ್ಯೆ ನೀಗಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಯಾವಾಗ ಅವರ ಸಮಸ್ಯೆಯೇ ಜಾಸ್ತಿಯಾಯಿತೋ ನನಗೂ ಇದರ ಅನುಭವವಾಗುತ್ತಾ ಹೋಯಿತು. ಮೊದ ಮೊದಲು ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಕಲಸಿಕೊಂಡು ತಿಂದು ಹೋಗುತ್ತಿದ್ದೆ. ಮಧ್ಯಾಹ್ನ ಖಾಲಿ ಹೊಟ್ಟೆ. ಸಂಜೆ ಬಂದಾಗಲೂ ಊಟ ಮಾಡುವಷ್ಟರಲ್ಲಿ ರಾತ್ರಿ 10:00 ಘಂಟೆ ಆಗೋದು. ಊಟದ ಸಮಸ್ಯೆ ಅನುಭವಿಸೋಕೆ ಶುರುವಾಗಿದ್ದು ನಾನು ಇಲ್ಲಿಯೇ. ಹೈಸ್ಕೂಲ್‌ನಲ್ಲಿ ಹಾಸ್ಟೆಲ್ಲಿನಲ್ಲಿ ತೀರಾ ರುಚಿಯಾದ ಊಟ ಅಲ್ಲದಿದ್ದರೂ ಕೂಡ ಕಡೇ ಪಕ್ಷ ಸರಿಯಾದ ಸಮಯಕ್ಕಾದ್ರೂ ಊಟ ಸಿಗೋದು. ಆದರೆ ಪಿಯುಸಿಯಲ್ಲಿ ತಿನ್ನೋ ಅನ್ನಕ್ಕೂ ತತ್ವಾರ ಉಂಟಾಗಿತ್ತು. ಎಷ್ಟೋ ವೇಳೆ ನಾನು ಬೆಂಗಳೂರಿಗೆ ಯಾಕಾದ್ರೂ ಸೇರಿದೆನೋ ಎಂದು ಒಬ್ಬನೇ ಕೂತು ಅತ್ತಿದ್ದಿದೆ. ಅಂದೇ ನಾನು ಮುಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವಂತಹ ಕೋರ್ಸ್‌ಗಳನ್ನು ಓದಬಾರದು ಅಂತಾ ತೀರ್ಮಾನ ಮಾಡಿದ್ದೆ!!
ಇತ್ತ ಕಾಲೇಜಿನ ಲೆಕ್ಚರರ್‌ಗಳು ಮಾಡುತ್ತಿದ್ದ ಮನೆ ಪಾಠದ ಹಾವಳಿಯಲ್ಲಿ ಕಾಲೇಜಿನಲ್ಲಿ ತೀರಾ ತಲೆಕೆಡಿಸಿಕೊಂಡು ಪಾಠ ಮಾಡುತ್ತಿರಲಿಲ್ಲದ್ದುದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು! ಊರಿಂದ ತುಂಬಾ ದೂರವಿರುವ ಕಾಲೇಜಿಗೆ ಸೇರಿ ಕಡೇ ಪಕ್ಷ ನಾನು ಹಿಂದೆ ಓದಿದ ಕಾಲೇಜಿಗಿಂತಲೂ ಚೆನ್ನಾಗಿ ಪಾಠ ಮಾಡದೇ ಇದ್ದುದು ನನ್ನ ಬೇಸರಕ್ಕೆ ಕಾರಣವಾಗಿತ್ತು. ಸೇರಿದ್ದು ಖಾಸಗಿ ಕಾಲೇಜು ಆಗಿದ್ರು ಕಾಟಾಚಾರಕ್ಕೆ ಎಂಬಂತೆ ಪಾಠ ಮಾಡುತ್ತಿದ್ದರು. ಇದರಿಂದ ಪಾಠವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಆಗುತ್ತಿರಲಿಲ್ಲ. ಈ ಕಾಲೇಜಿನಲ್ಲಿ ಆಗ ಮೊದಲನೇ ಅವಧಿ ಒಂದು ರೂಮಿನಲ್ಲಿ ನಡೆದರೆ ನಂತರದ ಅವಧಿಗಳು ಬೇರೆ ಬೇರೆ ರೂಮಿನಲ್ಲಿ ನಡೆಯುತ್ತಿದ್ದವು. ಒಂದು ರೂಮಿನಿಂದ ಮತ್ತೊಂದು ರೂಮಿಗೆ ಹೋಗುವುದೇ ಆಗುತ್ತಿತ್ತು. ಇನ್ನು ಹಳ್ಳಿಯಿಂದ ಹೋದ ನನಗೆ ಹುಡುಗರು ಹೇಳೋ ‘ಫ್ರಾಕ್ಸಿ’ ಅಟೆಂಡೆನ್ಸ್ ಬಗ್ಗೆ ಗೊತ್ತೇ ಇರಲಿಲ್ಲ. ಬಹಳ ವಿದ್ಯಾರ್ಥಿಗಳು ನಮ್ಮ ಸೆಕ್ಷನ್‌ನಲ್ಲಿ ಇದ್ದುದ್ದರಿಂದ ಕೆಲವರು ಹೀಗೆ ಫ್ರಾಕ್ಸಿ ಹಾಜರಾತಿ ಹೇಳ್ತಾ ಇದ್ರು! ನನ್ನ ಪಕ್ಕ ಕುಳಿತುಕೊಳ್ಳುತ್ತಿದ್ದವರು ಮೊದಲಿನಿಂದಲೂ ಇಲ್ಲಿಯೇ ಓದಿದ್ದರಿಂದ ಅದಾಗಲೇ ಬೆಂಗಳೂರಿನ ಜೀವನಕ್ಕೆ ಹೊಂದಿಕೊಂಡವರಂತಿದ್ದು ಬಹಳ ಚಾಲೂಕ್ ಎನಿಸುತ್ತಿದ್ದರು. ಇವರ ಮುಂದೆ ನಾನು ನಿಜಕ್ಕೂ ಹಳ್ಳಿ ಗಮ್ಮಾರನಂತಿದ್ದೆ. ಇದ್ದದ್ದು ಎರಡೇ ಪ್ಯಾಂಟು. ಕಡಿಮೆ ಬೆಲೆಯ ಶರ್ಟುಗಳು. ಪಟ್ಟಣದ ಹುಡುಗ/ಹುಡುಗಿಯರ ಡ್ರೆಸ್ ಸೆನ್ಸ್ ಮುಂದೆ ನಾನು ತೀರಾ ಕೀಳರಿಮೆ ಬೆಳೆಸಿಕೊಂಡು ಎಲ್ಲೋ ಮೂಲೆಯಲ್ಲಿ ಕುಳಿತುಕೊಂಡು ಬಿಡುತ್ತಿದ್ದೆ.
ಇನ್ನು ಮಧ್ಯಾಹ್ನದ ಲಂಚ್ ವೇಳೆಯಲ್ಲಿ ನೋಡೋಕೆ ಚಿಕ್ಕವರಂತೆ ಇದ್ದವರೂ ಸಹ ಸಿಗರೇಟು ಸೇದುತ್ತಿರುವುದನ್ನು ನೋಡಿ ಅವ್ರ ಬಳಿಯಲ್ಲಿ ನೇರವಾಗಿಯೇ ‘ನೀವು ಸಿಗರೇಟು ಸೇದುತ್ತೀರಾ?’ಎಂದು ಆಶ್ಚರ್ಯಚಕಿತವಾಗಿ ಕೇಳಿದ್ದೆ. ಅದಕ್ಕವರು ‘ಇದು ಇಲ್ಲಿ ನಾರ್ಮಲ್’, ಎಂದು ಉತ್ತರಿಸಿದಾಗ ನಿಜಕ್ಕೂ ನಾನು ಗಾಬರಿಯಾಗಿದ್ದೆ. ಇನ್ನು ಊಟಕ್ಕೆ ದುಡ್ಡು ಇರದೇ ಅಲ್ಲೇ ಸನಿಹದಲ್ಲಿದ್ದ ಒಂದು ಬೇಕರಿಯಲ್ಲಿ ಆಗ ಒಂದಕ್ಕೆ ಮೂರು ರೂಪಾಯಿಗೆ ಸಿಗುತ್ತಿದ್ದ ಕ್ರೀಮ್ ಬನ್ನು ತಿಂದು ಹೊಟ್ಟೆಯ ಹಸಿವಿನ ಬಾಧೆಯನ್ನು ತಕ್ಕ ಮಟ್ಟಿಗೆ ನೀಗಿಸಿಕೊಳ್ಳುತ್ತಿದ್ದೆ. ಹೈಸ್ಕೂಲಿನಲ್ಲಿ ಜೀನ್ಸ್ ಹಾಕಿದ ಹುಡುಗಿಯರನ್ನೇ ನೋಡದ ನಾನು, ಪಿಯುಸಿಯಲ್ಲಿ ಹುಡುಗರಂತೆ ಬಟ್ಟೆ ತೊಟ್ಟು ಕಾಲೇಜಿಗೆ ಬರುತ್ತಿದ್ದ ನಮ್ಮ ಕಾಲೇಜಿನ ಹುಡುಗಿಯರನ್ನು ನೋಡಿ ಮೊದ ಮೊದಲು ಅಚ್ಚರಿಪಟ್ಟಿದ್ದಂತೂ ಸುಳ್ಳಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ಬಿಎಂಟಿಸಿ ಬಸ್ಸಿನಲ್ಲಿ ಮೊದಲ ಸ್ಟಾಪಿನಿಂದ ಕಡೇ ಸ್ಟಾಪಿಗೆ ಬರೀ 1 ರೂ 75 ಪೈಸೆ ಇತ್ತು. ಎಷ್ಟೋ ವೇಳೆ ನಾನು 1 ರೂಪಾಯಿ ಕೊಟ್ಟಾಗ ಕಂಡಕ್ಟರ್ ಟಿಕೆಟ್ ಕೊಡದೇ ನನ್ನನ್ನು ಅಷ್ಟೇ ರೂಪಾಯಿನಲ್ಲೇ ಕರೆದುಕೊಂಡು ಹೋಗಿದ್ದೂ ಉಂಟು. ಆಗ ನಾನು 75 ಪೈಸೆ ನನಗೆ ಉಳೀತಲ್ಲ ಎಂದು ಖುಷಿಪಡುತ್ತಿದ್ದೆ. ಹೀಗೆ ಒಂದೆರಡು ದಿನ ಉಳಿಸಿದ್ರೆ ನಾನಿದ್ದ ರೂಮಿನಲ್ಲಿ ಸಂಜೆ ಟೀ ಮಾಡಿಕೊಂಡು ಕುಡಿಯಬಹುದಲ್ವಾ ಎಂದು ಯೋಚಿಸಿ ಅದೇ ರೀತಿ ಮಾಡಿಕೊಂಡು ಕುಡಿಯುತ್ತಿದ್ದೆ. ಅಪ್ಪಿ ತಪ್ಪಿ ಸಿಕ್ಕಿ ಹಾಕಿಕೊಂಡು ಬಿದ್ದರೆ ನನಗೂ ದಂಡ ಬೀಳುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯೂ ನನಗೆ ಆಗ ಇರಲಿಲ್ಲ. ಒಮ್ಮೆ ನನ್ನ ಕ್ಲಾಸ್ ಮೇಟ್‌ನ ಬಳಿ ಈ ವಿಷಯ ಹೇಳಿದಾಗ ಅವನು ‘ಸಿಕ್ಕಿ ಬಿದ್ದರೆ ನಿನಗೆ ದಂಡ ಹಾಕುತ್ತಾರೆ’ ಎಂದಾಗ ನಾನು ಅಂದಿನಿಂದ ಈ ರೀತಿ ಮಾಡಲು ಹೆದರುತ್ತಿದ್ದೆ.
‘ಉದರನಿಮಿತ್ಥಂ ಬಹುಕೃತ ವೇಷಂ’ ಎಂಬಂತೆ ರೂಮಿನಲ್ಲಿದ್ದ ಇತರರು ನಮ್ಮ ಊರಿನ ಪಕ್ಕದವರಾದರೂ ಮನೆಯ ಕಷ್ಟಕ್ಕೆ ಬೆಂಗಳೂರಿಗೆ ಬಂದವರಾಗಿದ್ದರು. ಓದೋ ವಿಷಯದಲ್ಲಿ ತುಂಬಾ ಸಪೋರ್ಟ್ ಮಾಡುತ್ತಿದ್ದರು. ಆದರೆ ಅವರ ಸ್ಥಿತಿಯೂ ಕಷ್ಟವಾದ್ದರಿಂದ ನನಗೆ ಹಾಸ್ಟೆಲ್ ಸೀಟು ಯಾವಾಗ ಸಿಗುತ್ತೋ ಎಂದು ದೇವರ ಬಳಿ ಬೇಡಿಕೊಳ್ತಾ ಇದ್ದೆ. ದೇವರಿಗೆ ನನ್ನ ಮೊರೆ ಕೇಳ್ತೋ ಏನೋ ಹಾಸ್ಟೆಲ್‌ಗೆ ನಾನು ಆಯ್ಕೆಯಾಗಿದ್ದೆ. ಅದು ಮೆಜಿಸ್ಟಿಕ್ ಬಳಿಯೇ ಇತ್ತು. ಖುಷಿಯಿಂದಲೇ ಹಾಸ್ಟೆಲ್ಲಿಗೆ ಹೋದೆ.
ಹಾಸ್ಟೆಲ್ಲಿನ ಬಗ್ಗೆ ಹೇಳಬೇಕೆಂದರೆ ಅದು ಬರೀ ಲಿಂಗಾಯಿತ ಹುಡುಗರಿಗೆಂದೇ ಮೀಸಲಾಗಿದ್ದ ಮಠವೊಂದರ ಹಾಸ್ಟೆಲ್. ಒಂದು ರೂಮಿನಲ್ಲಿ 3 ರಿಂದ 4 ಹುಡುಗರನ್ನು ಹಾಕುತ್ತಿದ್ದರು. ಊಟ ಬೆಳಗ್ಗೆ 7:30 ಕ್ಕೆ ಮುದ್ದೆ. ಮತ್ತೆರಾತ್ರಿ 7:30 ಕ್ಕೆ ಮುದ್ದೆ ಕೊಡ್ತಾ ಇದ್ರು. ಮಧ್ಯಾಹ್ನ ಏನೂ ಕೊಡುತ್ತಾ ಇರಲಿಲ್ಲ! ಭಾನುವಾರ ಮಾತ್ರ ಮೂರೂ ಹೊತ್ತು ಕೊಡುತ್ತಿದ್ದರು. ಬೆಳ್ಳಂಬೆಳಗ್ಗೆಯೇ ಬ್ರಷ್ ಮಾಡಿದ ಕೂಡಲೇ ಮುದ್ದೆ ಊಟ ಮಾಡಬೇಕಾಗಿದ್ದರಿಂದ ಮೊದಲು ಕಷ್ಟ ಎನಿಸುತ್ತಿತ್ತು. ಆದರೆ ಮತ್ತೂ ಮಧ್ಯಾಹ್ನದ ಹೊತ್ತಿನ ಊಟವಿಲ್ಲದ್ದು ಸಮಸ್ಯೆಯಾಗಿತ್ತು. ನನ್ನ ಮಾಮ ಹಣ ಕೇಳಿದ್ರೆ ಕೊಡುತ್ತಿದ್ದನಾದರೂ ನಾನು ಕೇಳ್ತಾ ಇರಲಿಲ್ಲ. ತಿಂಗಳಿಗೊಮ್ಮೆ 100 ರೂ ಕೊಟ್ಟಾಗ ಇದನ್ನೇ ಜೋಪಾನವಾಗಿರಿಸಿಕೊಂಡು ನನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದೆ. ನನಗೆ ಅಲ್ಲಿದ್ದಾಗ ಒಂದು ತುಂಬಾ ಸಮಸ್ಯೆ ಆಗಿದ್ದು ಶಬ್ದದ ಸಮಸ್ಯೆ. ರಾಜಧಾನಿಯ ಹೃದಯಭಾಗದಲ್ಲಿ ಹಾಸ್ಟೆಲ್ ಇದ್ದುದರಿಂದ ಯಾವಾಗ್ಲೂ ವಾಹನಗಳ ಶಬ್ದ ನನಗೆ ಓದಲು ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಹೈಸ್ಕೂಲಿನಲ್ಲಿ ಮಠದ ನಿಶ್ಯಬ್ಧದ ಪಾರ್ಕಿನಲ್ಲಿ ಓದಿದ ಹುಡುಗನೊಬ್ಬ ದಟ್ಟ ವಾಹನಗಳ ಶಬ್ದ, ಜನಜಂಗುಳಿಯ ಸದಾ ಕಿವಿಗಡಚಿಕ್ಕುವ ಗಲಾಟೆಯಲ್ಲಿ ಓದಬೇಕು ಅಂದ್ರೆ ತುಂಬಾ ಕಷ್ಟ ಆಗೋದು. ಇದಕ್ಕಾಗಿ ಅಲ್ಲೇ ಸಮೀಪವಿದ್ದ ಪಾರ್ಕಿಗೆ ಹೋಗಿ ಓದಿಕೊಳ್ಳಲು ಹೋಗುತ್ತಿದ್ದೆ. ಆದರೆ ಪಾರ್ಕಿನಲ್ಲಿ ಕಂಡುಬರುತ್ತಿದ್ದ ಪ್ರೇಮಿಗಳನ್ನು ಕಂಡು ಅಲ್ಲಿಗೂ ಹೋಗುವುದನ್ನು ನಿಲ್ಲಿಸಿದೆ. ಮಧ್ಯ ರಾತ್ರಿ 2 ಘಂಟೆಗೆ ಎದ್ದು ಓದಿದರೆ ಹೇಗೆ ಎಂಬ ವಿಚಾರ ತಲೆಯಲ್ಲಿ ಹೊಳೆದು ಮಧ್ಯರಾತ್ರಿಯೇ ಎದ್ದು ಓದಲು ಪ್ರಯತ್ನ ಪಟ್ಟೆ. ಆದರೆ ಆಗಲೂ ಸಹ ಶಬ್ಧ ಇರುತ್ತಿತ್ತು.
ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು. ಹಸಿವೆಂಬುದು ಬಹಳ ಕೆಟ್ಟದ್ದು. ಇದನ್ನು ಅನುಭವಿಸಿದವರಿಗೇ ಗೊತ್ತು.
ಒಮ್ಮೆಯುಂಡವ ತ್ಯಾಗಿ|
ಇನ್ನೊಮ್ಮೆಯುಂಡವ ಭೋಗಿ|
ಬಿಮ್ಮೆಗುಂಡವನು ನೆರೆಹೋಗಿ |ಯೋಗಿ ತಾ ಸುಮ್ಮನಿರುತಿ ಸರ್ವಜ್ಞ||
ಎಂಬ ಸರ್ವಜ್ಞನ ವಚನವು ಊಟ ಮಾಡುವವರ ಬಗ್ಗೆ ತಿಳಿಸುತ್ತದೆ. ಈ ವಚನದಂತೆ ನಾವು ಪಿಯುಸಿಯಲ್ಲಿ ಎರಡು ಹೊತ್ತು ಉಂಡು ಭೋಗಿಯಾಗಿದ್ದೆವು!!
ಇನ್ನೂ ಕೆಲವೊಮ್ಮೆ ಬೆಂಗಳೂರಿನಲ್ಲಿ ಸಿಗುವ ದೊಡ್ಡ ದೊಡ್ಡ ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಹಸಿವನ್ನು ನೀಗಿಸಿಕೊಳ್ಳುತ್ತಿದ್ದೆವು. ನಮ್ಮ ಹಾಸ್ಟೆಲ್ಲಿನಲ್ಲಿ ಊಟಕ್ಕೆ ಹೋಗುವ ಮುನ್ನ ವಿಭೂತಿ ಧರಿಸುವ ಹಾಗೂ ಕರಡಿಗೆ ( ಶಿವಲಿಂಗವನ್ನು ಇಟ್ಟುಕೊಳ್ಳುವ ಬೆಳ್ಳಿ ವಸ್ತು)ಕಡ್ಡಾಯವಾಗಿ ಹಾಕಬೇಕು ಎಂಬ ನಿಯಮ ಮಾಡಿದರು. ನಾವು ಧರಿಸದೇ ಹಾಗೆಯೇ ಹೋಗುತ್ತಿದ್ದೆವು. ಒಂದು ದಿನ ಹಾಸ್ಟೆಲ್ಲಿನ ಮುಖ್ಯಸ್ಥರು ರೂಮು ರೂಮಿಗೆ ಕರಡಿಗೆ ಚೆಕ್ ಮಾಡಲು ಬಂದರು. ವಿಷಯ ತಿಳಿದು ನನ್ನ ಬಳಿ ಕರಡಿಗೆ ಇಲ್ಲವಾದ್ದರಿಂದ ಅವರು ಬರುವ ಸೂಕ್ಷ್ಮ ತಿಳಿದು ಅವರು ಬಂದು ಹೋಗುವ ತನಕವೂ ಟಾಯ್ಲೆಟ್ ರೂಮಿನಲ್ಲಿ ಅಡಗಿ ಕುಳಿತಿದ್ದೆ. ಒಂದೊಮ್ಮೆ ಸಿಕ್ಕಿ ಹಾಕಿಕೊಂಡಿದ್ದರೆ ಹಾಸ್ಟೆಲ್ ಬಿಡಿಸುತ್ತಾರೇನೋ ಎಂಬ ಭಯದಿಂದ ಹೀಗೆ ಮಾಡಿದ್ದೆ! ಅವರು ವಾಪಸ್ ಹೋದಾಗ ಮನೆಗೆ ಒಂದು ಪತ್ರ ಬರೆದು ಕರಡಿಗೆ ಕಳಿಸುವಂತೆ ಕೋರಿದ್ದೆ. ನಮ್ಮ ಮನೆಯಲ್ಲಿ ಕರಡಿಗೆ ಇಲ್ಲವಾದ್ದರಿಂದ ನಮ್ಮ ಚಿಕ್ಕಮ್ಮನ ಕಡೆಯಿಂದ ತೆಗೆದುಕೊಂಡು ಅದನ್ನು ಕಳಿಸಿದ್ದರು. ನಾವು ಊಟ ಮಾಡೋ ಮುನ್ನ “ತಂದೆ ತಾಯಿ ದೇವರೆಂದು ನಂಬಿ ಪಾದ ಪೂಜೆ ಮಾಡೋ… ನೀತಿ ತಪ್ಪಿ ನಡೆದರೆ ನಿನಗೆ ನರಕ ತಪ್ಪದಯ್ಯಾ ಮನುಜ…” ಎಂಬ ಹಾಡನ್ನು ಹೇಳಿ ನಂತರ ಊಟ ಮಾಡಬೇಕಾಗಿತ್ತು.
ನಮ್ಮ ಹಾಸ್ಟೆಲ್ಲಿನಲ್ಲಿ ಬೇರೆ ಬೇರೆ ಕಡೆಯಿಂದ ಬಂದವರಿದ್ದರು. ನಾನು ಅಚಾನಕ್ ಆಗಿ ಬೆಂಗಳೂರಿಗೆ ಸೇರಿದ್ದೆನಾದರೂ ಕೆಲವರು ಇಲ್ಲಿಯೇ ಓದಬೇಕೆಂದು ನಿರ್ಧರಿಸಿ ಬಂದವರಿದ್ದರು. ಅದರಲ್ಲಿ ನನ್ನ ಪಕ್ಕದ ರೂಮಿನಲ್ಲಿದ್ದ ಬೆಳಗಾಂನಿಂದ ಬಂದಿದ್ದ ಪ್ರವೀಣ್ ಎಂಬ ಹುಡುಗ ಅವನು 10 ನೇತರಗತಿಯಲ್ಲಿ 90 ಕ್ಕೂ ಅಧಿಕ ಪರ್ಸೆಂಟ್ ಅಂಕ ಗಳಿಸಿಯೂ ಎಂ.ಇ.ಎಸ್ ಕಾಲೇಜಿನಲ್ಲಿಯೇ ಓದಬಯಸಿ ಅಲ್ಲಿ ಕಾಮರ್ಸ್ ಸೇರಿದ್ದ. ನಮ್ಮ ಹಾಸ್ಟೆಲ್ಲಿನಲ್ಲಿ ಡಿಪ್ಲೊಮೋ, ಸಿ.ಎ ಓದುವ ಹುಡುಗರಿದ್ದರು. ಕೆಲವೊಮ್ಮೆ ನಮ್ಮ ಹಾಸ್ಟೆಲ್ಲಿನಿಂದ ಪುಸ್ತಕಗಳು ಕಳುವಾಗುತ್ತಿದ್ದವು. ಅವು ಅಲ್ಲಿಯೇ ಸನಿಹದಲ್ಲಿದ ಅವೆನ್ಯೂ ರಸ್ತೆಯಲ್ಲಿ ಸೆಕೆಂಡ್ ಹ್ಯಾಂಡ್ ಬುಕ್ ಸೇಲ್ ಪುಸ್ತಕದಂಗಡಿಯವರಿಗೆ ಮಾರಾಟವಾಗುತ್ತಿದ್ದವು. ಹೀಗೆ ನನ್ನ ಪುಸ್ತಕಗಳೂ ಒಮ್ಮೆ ಕಳುವಾಗಿದ್ದವು. ನನಗೆ ಕ್ರಿಕೆಟ್ ಎಂದರೆ ತುಂಬಾ ಅಚ್ಚು ಮೆಚ್ಚಿನ ಕ್ರೀಡೆಯಾದ್ದರಿಂದ ನಾನು ಹಾಗೂ ನಮ್ಮ ರೂಮ್ ಪಕ್ಕದಲ್ಲಿದ್ದ ಸೀನಿಯರ್ ರಂಗನಾಥ್ ಜೊತೆಗೂಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ನಡೆದೇ ಹೋಗಿ ಅಲ್ಲಿ ಆಗ ‘ಭಾರತ ಎ’ ಹಾಗೂ ‘ವೆಸ್ಟ್ ಇಂಡೀಸ್ ಎ’ ತಂಡದ ಟೆಸ್ಟ್ ಮ್ಯಾಚ್ ನೋಡಲು ಆಗ ಹತ್ತು ರೂಪಾಯಿಯ ಟಿಕೆಟ್ ತೆಗೆದುಕೊಂಡು ಹೋಗಿದ್ದೆವು. ಇದರ ಜೊತೆಗೆ ಫಿಲಂ ನೋಡುವ ಆಸೆಯಿಂದ ಕೆಲವೊಮ್ಮೆ ಅದೇ ಹತ್ತು ರೂಪಾಯಿಯ ಟಿಕೆಟ್ ಕೊಂಡು ನೋಡಲು ಹೋದದ್ದಿದೆ. ಹೀಗೆ ಸಹವಾಸ ದೋಷ, ನಿರ್ದಿಷ್ಟ ಗುರಿಯಿಲ್ಲದಿರುವಿಕೆಯೂ ಸಹ ನನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ಸಾಧಿಸಲು ನಾನು ವಿಫಲವಾಗಿದ್ದೇನೆ ಎಂದು ಎಷ್ಟೋ ವೇಳೆ ಅನಿಸಿದ್ದಿದೆ. ಆದರೆ ಅದರ ಬಗ್ಗೆ ಕೊರಗಿದರೆ ಈಗ ಅದು ವ್ಯರ್ಥ.
ಕೆಲವೊಮ್ಮೆ ನಾವು ಅಂದುಕೊಳ್ಳೋದೇ ಒಂದು, ಆಗುವುದೇ ಮತ್ತೊಂದು. ಹೀಗಾದಾಗ ನಾವು ನಿರಾಸೆ ಹೊಂದಿ ಆಸೆಪಡುವುದನ್ನು ಬಿಡಬಾರದು. ಆ ಆಸೆಯನ್ನು ಬೆನ್ನಟ್ಟಬೇಕು. ಇರೋ ಅವಕಾಶಗಳನ್ನು ಬಳಸಿಕೊಂಡು ಅದ್ಭುತವಾದದ್ದನ್ನು ಸಾಧಿಸಬೇಕು. ಸಾಧಿಸಿದವರೆಲ್ಲಾ ಕಷ್ಟಗಳ ಕೂಪದಿಂದ ಮೇಲೆದ್ದು ಬಂದವರೇ. ಕಷ್ಟಗಳು ನಮ್ಮನ್ನು ತುಳಿಯಬಾರದು. ಕಷ್ಟಗಳು ನಮ್ಮ ಸಾಧನೆಯ ಮೆಟ್ಟಿಲುಗಳಾಗಬೇಕು. ಹಾಗಾದರೆ ಮಾತ್ರ ಸಾಧನೆ ಸಾಧ್ಯ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
👌👌👌
ಎಲ್ಲೂ ಕತ್ತರಿ ಪ್ರಯೋಗ editing ಮಾಡದೇ ತಮ್ಮ ಅನುಭವಗಳನ್ನು ಬರೆದಿದ್ದೀರಿ.
ಓದುಗರಿಗೆ ಅದುವೇ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಶಕ್ತಿ.
ಮುಂದುವರೆಸಿ ಸರ್
ಶುಭವಾಗಲಿ 💐💐👏
ಬದುಕು ಕುಲುಮೆ ಅತ್ಯದ್ಭುತ.ನಿಮ್ಮ ಜೀವನ,ಕುಲುಮೆಯಲ್ಲಿ ಕಬ್ಬಿಣ ಹೇಗೆ ಕಾದು ಒಂದು ಸರಳಾಗಿ ರೂಪುಗೊಂಡು ಮನೆ,ಸೇತುವೆ,ರಸ್ತೆ ಕಟ್ಟಲು ಉಪಯೋಗವಾಗುವುದೋ ಹಾಗೆ ಜೀವನದ ಕುಲುಮೆಯಲ್ಲಿ ಸಮಾಜಕ್ಕೆ ಉಪಯೋಗವಾಗುತ್ತಿರುವಿರಿ.
ಎಲ್ಲ ಕಷ್ಟಗಳನ್ನೂ ಸಹಿಸಿ ನಿಮ್ಮ ಗುರಿಯನ್ನು ತಲುಪಿದ ನಿಮ್ಮ ದೃಢತೆ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಸರ್.ಅಭಿನಂದನೆಗಳು.
ನಿಮ್ಮ ಲೇಖನ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.🙏🏽👏🏽👏🏽👏🏽
ನಿಮ್ಮ ಪಿಯುಸಿ ವಿದ್ಯಾರ್ಥಿ ಜೀವನದ ಅನುಭವಗಳು ನಮ್ಮ ಓದಿನ ಖುಷಿ ಹೆಚ್ಚಿಸಿವೆ.ವಿದ್ಯಾರ್ಥಿ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿದವರು ಖಂಡಿತ ಯಶಸ್ಸನು ಸಾಧಿಸುತ್ತಾರೆ ಎನ್ನುವದಕ್ಕೆ ನೀವು ಸಾಕ್ಷಿ ಸರ್.
Interesting