ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ. ಆಟಿಪಾಯಸ ಅಥವಾ ಮದ್ದುಪಾಯಸ ಈ ಹಬ್ಬದ ಕೇಂದ್ರ ಬಿಂದು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯಲ್ಲಿ ಆಟಿಮಾಸದ ಆಚರಣೆಯ ಕುರಿತ ಬರಹ ಇಲ್ಲಿದೆ

ಈ ವರ್ಷ ಮುಂಗಾರು ತಡವಾಗಿ ಆಗಮಿಸಿದರೂ ತನ್ನ ಅದೇ ವೈಭವವನ್ನು ಮುಂದುವರೆಸುತ್ತಿದೆ. ಜುಲೈ ಮೊದಲನೆಯ ವಾರ ನಾವು ಮಳೆಗಾಲದ ರಜೆಗಾಗಿ ಕಾಯುತ್ತಿದ್ದ ವಾರ. ಮಳೆ ಮಾರುತಗಳ ಅನಿಮಿಯತತೆಯಿಂದ ಮಾನ್ಸೂನ್ ಹಾಲಿಡೇಸ್ ಅನ್ನುವ ಮಾತು ಮರೆಯಾಗುತ್ತಿದೆ. ಹೆಚ್ಚು ಮಳೆ ಬಂದಾಗ ಪರಿಸ್ಥಿತಿಯನ್ನು ನೋಡಿಕೊಂಡು ರಜೆ ಕೊಡುತ್ತಾರೆ. ಮಡಿಕೇರಿ ಮಳೆಯ ಹೊರತಾಗಿಯೂ ಮತ್ತೆ ಸುದ್ದಿಯಲ್ಲಿದೆ, ಕಾರಣ ಗಾಜಿನ ಸೇತುವೆ.

ಕರ್ನಾಟಕದಲ್ಲಿಯೇ ಮೊದಲ 32 ಮೀಟರ್ ಇರುವ ಗಾಜಿನ ಸೇತುವೆ ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆ ಪಪ್ಪೀಸ್ ಪ್ಲಾಂಟೇಶನ್‌ನಲ್ಲಿ ನೆಲೆ ನಿಂತಿದೆ. 5 ಟನ್ ಭಾರ ಹೊರುವ 40-50 ಮಂದಿ ನಿಂತು ನೋಡಬಹುದಾದ ಸೇತುವೆ 2 ಮೀಟರ್ ಅಗಲ 78 ಅಡಿ ಎತ್ತರ ಗ್ಲಾಸ್‌ ಸ್ಕೈವಾಕ್ ಬ್ರಿಡ್ಜ್ ನೋಡ್ಲಿಕೆ ಚಂದ ಅಂತೆ, ಒಮ್ಮೆ ನೋಡಬೇಕು… ಅದರಲ್ಲಿ ಓಡಾಡಬೇಕು ಎನ್ನುವ ಬಯಕೆ ಪ್ರವಾಸ ಆಸಕ್ತರಲ್ಲಿ ಇರುತ್ತದೆ. ಆ ದಾಹವನ್ನು ತಣಿಯಲೆಂದೆ ಕರ್ನಾಟಕದಲ್ಲೂ ಗ್ಲಾಸ್ ಸ್ಕೈವಾಲ್ ಬ್ರಿಡ್ಜ್ ಇದೆ ಎಂದರೆ ಮೈಜುಮ್ಮೆನ್ನುತ್ತದೆ. ಪ್ರಕೃತಿಯ ಸೊಬಗನ್ನು ಇನ್ನೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಇದರಿಂದ.

ಎಲ್ಲಾ ಸರಿ ಈ ‘ಮೊಟ್ಟೆ’ ಪದ ಕುರಿತು ಕ್ಲಾರಿಫಿಕೇಶನ್ ಕೊಡಬೇಕು. ಮೊಟ್ಟೆ ಗೊತ್ತಿದೆ, ಪರೀಕ್ಷೆಯಲ್ಲಿ ಶೂನ್ಯ ತೆಗೆರೂ ಮೊಟ್ಟೆ ಅಂತಾರೆ ಕೋಳಿಯ ತತ್ತಿಗೂ ಮೊಟ್ಟೆ, ತೆಂಗಿನ ಕಾಯಿಯ ಹೊರ ಕವಚಕ್ಕೂ ಮೊಟ್ಟೆ, ಇಲ್ಲ ಮಟ್ಟೆ ಎಳೆ ಮಟ್ಟೆ ಗೊದಮಟ್ಟೆ ಎನ್ನುವರು, ತಲೆಯಲ್ಲಿ ಸಂಪೂರ್ಣ ಕೂದಲಿಲ್ಲ ಎಂದರೂ ಮೊಟ್ಟೆ, ಚಾಣೆ, ಬಾಂಡ್ಲಿ ಎನ್ನುತ್ತಾರೆ. ಆದರೆ ಕೊಡಗಿನ ಮೊಟ್ಟೆಗಳೆ ಬೇರೆ. ಇಲ್ಲಿ ಮೊಟ್ಟೆ ಎಂದರೆ ಬೆಟ್ಟ; ಇಲ್ಲವೆ ಬೆಟ್ಟದ ತುತ್ತತುದಿಯಲ್ಲಿರುವ ಸ್ವಲ್ಪ ವಿಶಾಲ ಪ್ರದೇಶ ಎನ್ನಬಹುದು. ಇಂಥ ಬೆಟ್ಟದ ಮೇಲಿನ ವಿಶಾಲ ಪ್ರದೇಶಗಳಿಗೆ ಬೇರೆ ಬೇರೆ ಹೆಸರುಗಳು; ‘ಬಾಣಿಮೊಟ್ಟೆ’, ‘ಕುಂದುರು ಮೊಟ್ಟೆ’, ‘ನಿಶಾನಿಮೊಟ್ಟೆ’, ‘ಕುರ ಮೊಟ್ಟೆ’, ‘ಹುಲಸ್ ಅರಮನೆ ಮೊಟ್ಟೆ’, ‘ಮಂಜ ಮೊಟ್ಟೆ’ ಇತ್ಯಾದಿ. ಇವೆಲ್ಲಾ ನೋಡಲು ಬಹಳ ಸುಂದರ. ಕೆಲವೊಮ್ಮೆ ಇಲ್ಲಿ ಶಕ್ತಿ ದೇವಸ್ಥಾನಗಳೂ ಇರುವುದಿದೆ. ಉದಾಹರಣೆಗೆ ಕುಂದೂರು ಮೊಟ್ಟೆ ರಾಜಾಸೀಟಿನ ಬಳಿ ಇರುವುದು. ಮಡಿಕೇರಿ ನಗರವನ್ನು ಕಾಯುವ ನಾಲ್ಕು ಶಕ್ತಿ ದೇವತಾ ಆಲಯಗಳಲ್ಲಿ ಇದೂ ಒಂದು. ‘ಬಾಣೆ’ ಎನ್ನುವ ಹೆಸರೂ ಇಲ್ಲಿ ಪ್ರಚಲಿತವೇ. ಗುಡ್ಡದ ಮೇಲಿನ ಸಮತಟ್ಟಾದ ಜಾಗ ಹಸುಕರುಗಳು ಮೇಯಲು ಅನುಕೂಲ ಇರುವ ಜಾಗ ಎಂದೂ ಕರೆಯಬಹುದು. ‘ಕನ್ನಂಡಬಾಣೆ’, ‘ಚೇರಂಬಾಣೆ’, ‘ಕಲ್ಲುಬಾಣೆʼ ಮುಂತಾದವನ್ನು ಇಲ್ಲಿ ಉದಾಹರಿಸಬಹುದು. ‘ಜಮ್ಮ ಬಾಣೆ’ ಎನ್ನುವ ಹೆಸರೂ ಇದೆ. ಇದನ್ನು ಅರಣ್ಯಪ್ರದೇಶ ಎಂದು ಅರ್ಥೈಸಿಕೊಳ್ಳಬೇಕು. ಒಂದೇ ಪದ ಪ್ರಾದೇಶಿಕವಾಗಿ ಎಷ್ಟೆಲ್ಲಾ ಅರ್ಥ ವೈವಿಧ್ಯತೆ ಹೊಂದಿರುತ್ತದೆ ಎನ್ನುವದಕ್ಕೆ ‘ಮೊಟ್ಟೆ’ ಒಳ್ಳೆಯ ಉದಾಹರಣೆ ಎನ್ನಬಹದು.

ಹೇಗೂ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಆಷಾಢದ ಅರ್ಧ ಭಾಗದಲ್ಲಿ ಹಳೆ ಮೈಸೂರಿಗರು ಇದ್ದರೆ ಕೊಡವರಿಗೆ ಈಗ ಆಷಾಢ ಪ್ರಾರಂಭವಾಗಿದೆ. ಕೊಡವರ ಆಷಾಢದ ವಿಶೇಷ ಹಬ್ಬ ಮತ್ತು ಮದ್ದುಪಾಯಸದ ಕುರಿತು ಒಂದಷ್ಟು ಹೇಳುವೆ. ಅದಕ್ಕೂ ಮೊದಲು ಕೊಡಗು ಪದದ ವಿಶ್ಲೇಷಣೆ. ‘ಕೊಡಗು’ ಪದ ‘ಕೊಡಿ’ ಎಂಬ ಪದದಿಂದ ಬಂದಿದೆ. ಇಂಗ್ಲೀಷಿನಲ್ಲಿ ಈ ಪದಕ್ಕೆ strength, strong, powerful hill country, forested high land country ಎಂಬ ಅರ್ಥವಿದೆ. ಕೊಡವ ಭಾಷೆಯಲ್ಲಿ ‘ಕೊಡಿ” ಎಂದರೆ ಎತ್ತರವಾದ ದಟ್ಟ ಪರ್ವತಗಳ ಸಾಲು ಎಂದರ್ಥ. ಪುರಾಣಗಳಲ್ಲಿ ಕ್ರೋಢ ದೇಶ, ಕೊಡಿಮಲೆನಾಡು ಎಂದು ಉಲ್ಲೇಖವಿದೆ. ಕೊಡವ ಭಾಷೆಯಲ್ಲಿ ಇಂದಿಗೂ ಕೊಡಗು ಪದ ಪ್ರಯೋಗವಿಲ್ಲ. ಬದಲಾಗಿ “ಕೊಡವನಾಡ್” ಪದ ಬಳಕೆಯಿದೆ. ಭತ್ತ, ಕಾಫಿ, ಸಾಂಬಾರು ಪದಾರ್ಥಗಳಿಗೆ, ಹೆಸರಾಗಿರುವ ಈ ಜಿಲ್ಲೆ ರಾಜ್ಯ ಹೊರರಾಜ್ಯಗಳ ಪ್ರವಾಸಿಗರ ನೆಚ್ಚಿನ ತಾಣ.

ಇಲ್ಲಿ ಆಡುವ ಭಾಷೆ, ತಿನ್ನುವ ತಿನಿಸು, ಉಡುವ ಉಡುಪು, ತೊಡುವ ಆಭರಣ, ಆಚರಿಸುವ ಸಂಪ್ರದಾಯಗಳು ಕರ್ನಾಟಕದ ಬೇರೆ ಊರುಗಳಿಗಿಂದ ವಿಭಿನ್ನ ಮತ್ತು ಆಕರ್ಷಣೀಯ. ಇಂತಹ ಜಾನಪದೀಯ ಆಚರಣೆ ಎಂದೇ ಕರೆಯಬಹುದಾದ ‘ಆಟಿ ಪದಿನೆಟ್ಟು’ ಕೊಡವರ ವಿಶೇಷವೆಂದೇ ಹೇಳಬಹುದು. ಚೈತ್ರ, ವೈಶಾಖ, ಜ್ಯೇಷ್ಠಾದಿಯಿಂದ ಫಾಲ್ಗುಣದವರೆಗೆ ಹನ್ನೆರಡು ಮಾಸಗಳನ್ನು ಹೇಳುವಂತೆ ಕೊಡವರೂ ಕೂಡ ಎಡಮೈರ್, ಕಡೈಯರ್, ಅಡರೈ, ಕಕ್ಕಡ, ಚಿನ್ಯಾರ್, ಕನ್ಯಾರ್, ತೋಲ್ಯಾರ್, ಬಿರ್ಚ್ಯಾರ್, ಡಲ್ಮ್ಯಾರ್, ಮಲ್ಯಾರ್, ಕುಂಬ್ಯಾರ್, ಮಿನ್ಯಾರ್ ಹೆಸರುಗಳಿಂದ ಹನ್ನೆರಡು ಮಾಸಗಳನ್ನು ಕರೆಯುತ್ತಾರೆ.

ಸೌರಮಾನ ಪದ್ಧತಿ ಆಚರಿಸುವ ಕೊಡವರಿಗೆ ಮಾಸಗಳಲ್ಲಿ ಕಕ್ಕಡ ಅಂದರೆ ಆಷಾಢ ಮಾಸದ ಆಚರಣೆ ವಿಶೇಷ ಎನ್ನಬಹುದು. ಕರ್ಕಾಟಕ ಮಾಸದ ಇನ್ನೊಂದು ಹೆಸರೇ ಕಕ್ಕಡ.. (ಕರ್ಕಾಟ>ಕರ್ಕಡ>ಕಕ್ಕಡ) ಜುಲೈ ತಿಂಗಳ ಮಧ್ಯ ಭಾಗದಿಂದ ಆಗಸ್ಟ್ ತಿಂಗಳ ಮಧ್ಯದವರೆಗೆ ಕಕ್ಕಡ ಮಾಸ ಚಾಲ್ತಿಯಲ್ಲಿರುತ್ತದೆ.

ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ. ಆಟಿಪಾಯಸ ಅಥವಾ ಮದ್ದುಪಾಯಸ ಈ ಹಬ್ಬದ ಕೇಂದ್ರ ಬಿಂದು. ಆಟಿಸೊಪ್ಪು, ಮಧುಬನ, ಮದ್ದುತೊ(ಸೊ)ಪ್ಪು, ಕರುಂಜಿತೊ(ಸೊ)ಪ್ಪು ಎಂದು ಕರೆಸಿಕೊಳ್ಳುವ ಸೊಪ್ಪಿನಿಂದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುತ್ತಾರೆ. ಕಕ್ಕಡ ಮಾಸ ಅಥವಾ ಆಷಾಢ ಮಾಸ ಪ್ರಾರಂಭವಾದಾಗಿನಿಂದ ಹದಿನೆಂಟನೆ ದಿನದವರೆಗೆ ತಲಾ ಒಂದೊಂದು ಔಷಧಿಯ ಗುಣ ಈ ಸೊಪ್ಪಿನಲ್ಲಿ ಸೇರುತ್ತಾ ಹೋಗುತ್ತದೆ, ಹದಿನೆಂಟನೆ ದಿನ ಈ ಸೊಪ್ಪನ್ನು ಬಳಸಿ ಮಾಡಿದ ಖಾದ್ಯಗಳನ್ನು ಸೇವಿಸಿರೆ ಜಡತ್ವ ನಿವಾರಣೆಯಾಗಿ ಹೊಸ ಚೈತನ್ಯ ಬರುತ್ತದೆ ಎಂಬ ನಂಬಿಕೆಯಿದೆ.

ಇಲ್ಲಿ ಆಡುವ ಭಾಷೆ, ತಿನ್ನುವ ತಿನಿಸು, ಉಡುವ ಉಡುಪು, ತೊಡುವ ಆಭರಣ, ಆಚರಿಸುವ ಸಂಪ್ರದಾಯಗಳು ಕರ್ನಾಟಕದ ಬೇರೆ ಊರುಗಳಿಗಿಂದ ವಿಭಿನ್ನ ಮತ್ತು ಆಕರ್ಷಣೀಯ. ಇಂತಹ ಜಾನಪದೀಯ ಆಚರಣೆ ಎಂದೇ ಕರೆಯಬಹುದಾದ ‘ಆಟಿ ಪದಿನೆಟ್ಟು’ ಕೊಡವರ ವಿಶೇಷವೆಂದೇ ಹೇಳಬಹುದು.

ಈಗಿನ ಹಾಗೆ ಹಿಂದೆ ಸಾರಿಗೆ ಸೌಲಭ್ಯಗಳು ಇಲ್ಲದೇ ಇದ್ದಾಗ ಕೃಷಿಕರು ಹೊರಗೆಲ್ಲೂ ಆಚೆ ಬರಲು ಆಗದೇ ಇದ್ದಾಗ, ಸುತ್ತ ಮುತ್ತಲು ಇದ್ದಂತಹ ಸಸ್ಯಗಳನ್ನೇ ಔಷಧಿಯಾಗಿ ಬಳಸಿದರು. ಅದೇ ಕ್ರಮೇಣ ಸಂಪ್ರದಾಯವಾಗಿದೆ. ಈ ಸೊಪ್ಪು ದೇಹದ ಉಷ್ಣಾಂಶವನ್ನು ಶೀತದಿಂದ ಕಾಪಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀವಕೋಶದ ಕೊಬ್ಬನ್ನು ಕರಗಿಸಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಹೆಸರಿನಲ್ಲೇ (ಮದ್ದುಸೊಪ್ಪು ಔಷಧಿ) ಎಂದು ಕರೆಸಿಕೊಂಡಿರುವ ಈ ಮದ್ದುಸೊಪ್ಪಿನ ವೈಜ್ಞಾನಿಕ ಹೆಸರು ಜೆಸ್ಸಿಕಾ ವೈನಾಡೆನ್ಸಿ.

ಚೂಪಾದ ಎಲೆಗಳುಳ್ಳ ಈ ಸೊಪ್ಪು ಎತ್ತರಕ್ಕೆ ಬೆಳೆಯುತ್ತದೆ. ಈ ಸೊಪ್ಪನ್ನು ತೊಳೆದು ಕಾಂಡ ಸಹಿತ ನೀರಿನಲ್ಲಿ ಬೇಯಿಸಿ ಸೋಸಿದ ನೀರನ್ನು ಬೇರೆ ಬೇರೆ ಖಾದ್ಯಗಳಿಗೆ ಬಳಸಲಾಗುತ್ತದೆ. ಹಾಗೆ ತೆಗೆದ ನೀರು ನೇರಳೆ ಬಣ್ಣಕ್ಕೆ ಇರುತ್ತದೆ. ಇದೇ ನೀರಿಗೆ ಅಕ್ಕಿ ಬೆಲ್ಲ ಕಾಯಿತುರಿ, ಏಲಕ್ಕಿ ಹಾಕಿದರೆ ಮದ್ದುಪಾಯಸ ಅಥವಾ ಮದ್ದುಕೂಳುಪಾಯಸ ಆಗುತ್ತದೆ. (ಕೂಳು ಎಂದರೆ ಹಳೆಗನ್ನಡದಲ್ಲಿ ಅನ್ನ ಎಂದೇ ಈಗಿನ ಸಂದರ್ಭಕ್ಕೆ ಹೀನಾರ್ಥ ಪಡೆದುಕೊಂಡಿದೆ ಆದರೆ ಕೊಡವರಲ್ಲಿ ಈಗಲೂ ಕೂಳು ಪದದ ಬಳಕೆಯಿದೆ). ಮಧುಬಾನ ಎಂಬ ಪದದ ಪ್ರಯೋಗವಿದೆ. ಇಲ್ಲಿಯೂ ಬಾನ ಎಂದರೆ ಅನ್ನ ಎಂಬ ಅರ್ಥವೇ ಬರುತ್ತದೆ. “ಹಂಗಿನಾ ಬಾನ ಉಣಲಾರೆ ಬಂಜೆಂಬ ಶಬುದ ಹೊರಲಾರೆ” ಎಂಬ ಜಾನಪದ ತ್ರಿಪದಿಯಲ್ಲಿಯೂ ಬಾನ ಪದವಿದೆ.

ಈ ಮದ್ದು ಸೊಪ್ಪನ್ನು ಬೇಯಿಸಿ ತೆಗೆದ ನೀರನ್ನು ಬಳಸಿ ಕೇಸರಿಭಾತ್, ಹಲ್ವ, ಬರ್ಫಿ, ಮುಂತಾದವುಗಳನ್ನು ಮಾಡುತ್ತಾರೆ. ಇವುಗಳನ್ನು ತುಪ್ಪ, ಹಾಗು ಜೇನಿನ ಜೊತೆ ಸೇವಿಸಿದರೆ ಅತ್ಯಂತ ಸ್ವಾದಿಷ್ಟವಾಗಿರುತ್ತದೆ. ಇವಿಷ್ಟಲ್ಲದೆ ಈ ಸೊಪ್ಪನ್ನು ಬಳಸಿಕೊಂಡು ಲಾಡು, ಜೆಲ್ಲಿ, ಕಾಯಿಗಿಣ್ಣು, ಪಡ್ಡು, ಜಾಮೂನು ಮುಂತಾದ ಖಾದ್ಯಗಳನ್ನು ಸಹ ಮಾಡುತ್ತಾರೆ. ಮದ್ದು ಸೊಪ್ಪನ್ನು ಬಳಸಿಕೊಂಡು ಬಗೆ ಬಗೆ ಖಾದ್ಯ ಮಾಡುವಲ್ಲಿ, ಗೋಡಂಬಿ, ದ್ರಾಕ್ಷಿ, ಮುಂತಾದ ಒಣ ಹಣ್ಣುಗಳಿಂದ ಅಲಂಕಾರ ಮಾಡುವಲ್ಲಿ ಹಾಗೆ ವಿವಿಧ ವಿನ್ಯಾಸದ ಪಾತ್ರೆಗಳಲ್ಲಿ ಆಕರ್ಷಕವಾಗಿ ಜೋಡಿಸಿ ಬಡಿಸುವಲ್ಲಿ ಹೆಣ್ಣುಮಕ್ಕಳ ಸೃಜನಶೀಲತೆಯನ್ನು ಕಾಣಬಹುದು.

(ಆಟಿಸೊಪ್ಪು)

ಮನೆಗಳಲ್ಲಿ ಹಬ್ಬದ ಆಚರಣೆಯಲ್ಲದೆ ಸಾಮೂಹಿಕವಾಗಿಯೂ ಕಕ್ಕಡಪದೆನಟ್ಟರ ಆಚರಣೆಯನ್ನು ಆಟಿತಿನಿ( ಆಟಿಊಟ)ಯ ಹೆಸರಿನಲ್ಲಿ ಆಚರಿಸುತ್ತಾರೆ. ಮದ್ದು ಸೊಪ್ಪನ ಖಾದ್ಯಗಳಲ್ಲದೆ ಮರಕೆಸುವಿನ ಎಲೆಯ ಪತ್ರೊಡೆ, ಅರಿಶಿನೆಲೆ ಹಿಟ್ಟು, ಬಾಳೆಹಣ್ಣು ಪುಟ್ಟು, ಕಣಿಲೆ(ಎಳೆಬಿದಿರು) ಪಲ್ಯ, ಹಲಸಿನ ಹಣ್ಣಿನಹಿಟ್ಟು, ಸುವರ್ಣಗೆಡ್ಡೆ ಪಲ್ಯ ಮುಂತಾದ ಖಾದ್ಯಗಳನ್ನು ತಯಾರಿಸಿ ಊಟ ಮಾಡುತ್ತಾರೆ. ಈ ಸಂದರ್ಭದಲ್ಲಿ ಆಯೋಜಿಸುವ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಆಟಿ ಹದಿನೆಂಟರ ದಿನದಂದು ಮನೆಮನೆಗಳಲ್ಲೂ ಮದ್ದುಸೊಪ್ಪಿನ ಖಾದ್ಯಗಳನ್ನು ತಪ್ಪದೆ ಮಾಡಿ ನೆರೆ ಹೊರೆಯವರಿಗೆ ಸಂಭ್ರಮದಿಂದ ಹಂಚುತ್ತಾರೆ. ಅಲ್ಲದೆ ಕೊಡಗಿನ ಹೊರಗೆ ಇರುವರಿಗೆ ಸೊಪ್ಪನ್ನು ಬೇಯಿಸಿ ತೆಗೆದ ನೀರನ್ನು ಕೊಟ್ಟು ಕಳುಹಿಸಿ ಹರ್ಷಿಸುತ್ತಾರೆ. ಆಟಿ ಅಥವಾ ಕಕ್ಕಡ ತಿಂಗಳು ಕಳೆಯುತ್ತಿದ್ದಂತೆ ಗ್ರಾಮಗ್ರಾಮಗಳಲ್ಲೂ ದೇವಸ್ಥಾನಗಳನ್ನು ಶುಚಿಗೊಳಿಸಿ, ರೈತರು ಮುಂದೆ ಬರುವ ಕೈರ್ಲ್‌ಮುಹೂರ್ತ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ.

ಆಟಿಪದಿನಟ್ಟು ಕೊಡವರಲ್ಲಿ ಮಾತ್ರವಲ್ಲ ತಮಿಳರಲ್ಲಿ ಕೂಡ “ಆಟಿಪದಿನೆಟ್ಟಾಂಪೆರುಕ್ಕುಂ” ಎಂಬ ಹೆಸರಿನ ಆಚರಣೆಯಿದೆ. ಆಟಿ ಎಂದರೆ ಆಷಾಢ, ಪದಿನಟ್ಟು ಎಂದರೆ ಹದಿನೆಂಟು, ಪೆರುಕ್ಕುಂ ಎಂದರೆ ಖಾದ್ಯಗಳು ಎಂದರ್ಥ. ಅಂದರೆ ಆಷಾಢ ಮಾಸದ ಹದಿನೆಂಟನೆ ದಿನ ಹದಿನೆಂಟು ರೀತಿಯ ಭಕ್ಷ್ಯಗಳನ್ನು (ಸಿಹಿಪೊಂಗಲ್, ಖಾರಾ ಪೊಂಗಲ್, ಚಿತ್ರಾನ್ನ, ಬೆಲ್ಲದನ್ನ, ಮೊಸರನ್ನ…..) ಮಾಡಿ ದೇವಿಯ ಆರಾಧನೆ ಮಾಡುವುದು. ಇಲ್ಲೊಂದು ಸಾಮ್ಯವಿದೆ ಅದೇನೆಂದರೆ ಕೊಡವರು ಹಾಗು ತಮಿಳರು ಜೀವನದಿ ಕಾವೇರಿಯ ಆರಾಧಕರಾಗಿರುವುದು. ತಮಿಳುನಾಡಿನ ಕಡಲ ತೀರದ ಜಿಲ್ಲೆಗಳಲ್ಲಿ ಹಾಗು ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಆಟಿ ಹದಿನೆಂಟರ ದಿನದಂದು ಕಾವೇರಿ ನದಿಗೆ ಆರತಿ ಮಾಡುವ ರೂಢಿಯಿದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ವಿಶೇಷವಾಗಿ ಉಡಿ ತುಂಬುವ, ಉಡುಗೊರೆ ಕೊಡುವ ಪದ್ಧತಿಯೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಆಟಿ ಕಳೆಂಜ ಆಚರಣೆ ಅರ್ಥಾತ್ ಆಟಿಅಮವಾಸ್ಯೆ ಹೇಗೆ ಮಹತ್ವ ಪಡೆದಿದೆಯೋ ಹಾಗೆ ಕೊಡಗಿನ ಆಟಿ ಪದಿನಟ್ಟು.

ಕಾಫಿನಾಡು, ಭತ್ತದನಾಡು ಕೊಡಗಿನ ಬತ್ತದ ಸೌಂದರ್ಯವೇ ಮನಸ್ಸಿಗೆ ಚೇತೋಹಾರಿಯಾದಂತೆ, ಕೊಡವ ನಾಡಿನಾದ್ಯಂತ ವಿಶೇಷವಾಗಿ ಆಚರಿಸಲ್ಪಡುವ ಕಕ್ಕಡ ಪದಿನಟ್ಟ್ ಅರ್ಥಾತ್ ಆಟಿ ಹದಿನೆಂಟು ದೇಹಕ್ಕೆ, ಚೇತೋಹಾರಿಯಾದದ್ದು.