ಹತ್ತು ಜನರ ನಡುವಿದ್ದೂ ಅವರಿವರಂತಾಗದೆ, ತಮ್ಮ ಮಿತಿಯಲ್ಲಿ ಆಗುವ ಸಕಲವನ್ನೂ ಸಂತೋಷ, ಸಮಾಧಾನದಿಂದ ಮಾಡುತ್ತಾ, ಮೆಚ್ಚುಗೆಗೂ ಹಾತೊರೆಯದೆ, ಯಾರನ್ನೂ ದೂರದೆ ಸಂತರಂತೆ ಬದುಕಿದವರಿದ್ದಾರೆ. ಮನೆಮನೆಗಳಲ್ಲಿ ಅಂತಹವರನ್ನು ಕಂಡಿರುತ್ತೇವೆ. ಸದಾ ಗಿಜಿಗುಡುವ ಮನೆ, ಬಂದು ಹೋಗುವವರು, ಓದಲೆಂದು, ಕೆಲಸಕ್ಕೆಂದು ಬಂದು ಉಳಿದ ಬಂಧುಗಳ ಮಕ್ಕಳು, ದೇವಸ್ಥಾನದ ಪ್ರಸಾದ, ಚರಪು ಮಾಡುವ ಜವಾಬ್ದಾರಿ, ರೋಗಿಗಳ ಆರೈಕೆ, ಹಿರಿಯರ ಕಾಳಜಿ, ದಿನಂಪ್ರತಿ ಹದಿನೈದು ಇಪ್ಪತ್ತು ಜನರಿಗೆ ಕಡಿಮೆಯಿಲ್ಲದಂತೆ ಊಟೋಪಚಾರ… ಇವೆಲ್ಲವನ್ನೂ ಯಾರ ಸಹಾಯ, ಮೆಚ್ಚುಗೆಯ ಅಪೇಕ್ಷೆಯಿಲ್ಲದೆ ನಾಲ್ಕು ದಶಕಗಳ ಕಾಲ ಏಕಾಂಗಿಯಾಗಿ ನಡೆಸಿದ ನನ್ನ ಅಜ್ಜಿ ಒಮ್ಮೆ ಸಿಕ್ಕಾಗ ಕಿವಿಮಾತು ಹೇಳಿದ್ದರು.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

“ಕೆಲವೊಮ್ಮೆ ಮರೆತ ಹಾಗೆ ನಟಿಸಬೇಕು. ಇನ್ನು ಕೆಲವು ಸಲ ಜಾಣಕಿವುಡು, ಜಾಣಕುರುಡು ರೂಢಿಸಿಕೊಳ್ಳದಿದ್ದರೆ ಈ ಜಗತ್ತಿನಲ್ಲಿ ಬದುಕಿದ ಹಾಗೆ ತೊಗೋ… ಪ್ರತಿಸಲ ನಮ್ಮ ಅಭಿಪ್ರಾಯ, ಆದರ್ಶ, ವ್ಯಕ್ತಿತ್ವ ಅಂತ ಉದ್ದುದ್ದ ಭಾಷಣ ಬಿಗಿದರೆ ಕೇಳುವವರಿರಲಿ, ಆಡುವ ನಮಗೇ ಬೇಸರ. ಆದರೆ ಕೆಲವು ಪರಿಸ್ಥಿತಿಗಳಿರತ್ತೆ. ಅಲ್ಲಿ ನಯನಾಜೂಕಿನ ಮಾತು ಮೂರುಕಾಸಿನ ಪ್ರಯೋಜನಕ್ಕೆ ಬರುವುದಿಲ್ಲ. ಕಡ್ಡಿಮುರಿದಂತೆ ಹೇಳುವ ದಾರ್ಷ್ಟ್ಯ, ನಮಗಾಗಿ ನಾವು ಗಟ್ಟಿಯಾಗಿ ನಿಂತು ಹೋರಾಡುವ ಕಿಚ್ಚು ಬೇಕು. ಯಾವಾಗ, ಎಲ್ಲಿ, ಹೇಗೆ ಎನ್ನುವ ಪ್ರಶ್ನೆಗಳು ಸಾರ್ವತ್ರಿಕವಾದರೂ, ಉತ್ತರ ವೈಯಕ್ತಿಕ.” ಅವರು ತನ್ನಷ್ಟಕ್ಕೆ ಎಂಬಂತೆ ಮಾತನಾಡುತ್ತಾ ಹೋದರು.

ಕೊಂಕಿದ ತುಟಿ, ಚೂರು ಗಂಟಾದ ಹುಬ್ಬು, ಕಿರಿದಾದ ಕಣ್ಣು, ಮಾತಿನಲ್ಲಿ ಇಣುಕಿದ ಅಸಡ್ಡೆ, ಬೇಕೆಂದೇ ಮುಖ ತಪ್ಪಿಸಿದರು ಎನ್ನಿಸಿದ ಭಾವ… ಹೀಗೆ ಸಣ್ಣಪುಟ್ಟ ಇಷಾರೆಗಳನ್ನು ಗಮನಿಸಿ ಒಬ್ಬೊಬ್ಬರಿಂದಲೇ ದೂರವುಳಿಯುತ್ತಾ, ಆಡಬೇಕಾದ ಮಾತುಗಳನ್ನು ಅದುಮಿಟ್ಟು ನಗು ನಟಿಸುತ್ತಾ ಸಾಗಿದ ಹಲವರು ದ್ವೀಪವಾಗಿದ್ದಾರೆ. ಅವರು ಬಹಳ ಸೂಕ್ಷ್ಮ ಪ್ರವೃತ್ತಿಯವರು ಎಂದು ಅರ್ಥಮಾಡಿಕೊಳ್ಳುವ ವ್ಯವಧಾನ ಎಲ್ಲರಿಗೂ ಇರಬೇಕೆಂದಿಲ್ಲವಲ್ಲ. ಅರ್ಥವಾದವರಲ್ಲಿ ಎಷ್ಟು ಮಂದಿಗೆ ಅಷ್ಟೇ ನಾಜೂಕಾಗಿ ವ್ಯವಹರಿಸುವ ಮನಸ್ಸು, ಕೌಶಲ್ಯವಿರುತ್ತದೆ? ಈ ಲೋಕದ ತಂಟೆಯೇ ಬೇಡವೆಂದು ಚಿಪ್ಪಿನೊಳಗೆ ಹುದುಗಿ, ತಮ್ಮಷ್ಟಕ್ಕೆ ಬದುಕುವವರ ಏಕಾಂತ ಹೇಗಿರಬಹುದು? ಲೋಕಾಂತ ಸೋಕಿಸಕೊಳ್ಳದೆ ರೂಢಿಸಿಕೊಂಡ ಏಕಾಂತ ಹಿತವಾಗಿರಬಹುದೆ? ಸಿಹಿಯಾಗಿರಬಹುದೆ?

ಚಿರ ಏಕಾಂಗಿಗಳನ್ನು ಕೇಳಿದರೆ, “ನಾವು ಯಾರಿಲ್ಲದೆಯೂ ಸುಖವಾಗಿ ಬದುಕಬಲ್ಲೆವು. ಅವಲಂಬನೆಯಿಲ್ಲದ ಸ್ವತಂತ್ರ ಬದುಕಿನ ರುಚಿ ಕಾಣದ ನಿಮಗೆ ಇದು ವಿಚಿತ್ರವೋ, ಕಷ್ಟವೋ ಆಗಿ ಕಂಡುಬಂದರೆ ಆಶ್ಚರ್ಯವಿಲ್ಲ. ಆದರೆ ಒಬ್ಬೊಬ್ಬರಿಂದ ದೂರವಾದಾಗಲೂ ಅದೊಂದು ಬಿಡುಗಡೆಯೆನಿಸಿದೆ. ಅಷ್ಟಕ್ಕೂ ಯಾರಿಗೂ ಏನನ್ನಾದರೂ ಅರ್ಥಮಾಡಿಸಿ, ನಮಗೇನಾಗಬೇಕಿದೆ? ಕಲಿಯುವುದಾದರೆ ಅವರೇ ಗಮನಿಸಿ, ಯೋಚಿಸಿ, ಸರಿತಪ್ಪು ತೂಗಿ ಕಲಿಯುತ್ತಾರಲ್ಲವೆ? ಕಲಿಸಬೇಕೆಂಬ ಹಠವಾಗಲಿ, ಅರ್ಥ ಮಾಡಿಸಬೇಕೆನ್ನುವ ಆವೇಶವಾಗಲಿ ನಮಗಿಲ್ಲ. ಇರುವುದೊಂದು ಬದುಕನ್ನು ಮಂದ್ರದಲ್ಲಿ ಲೀನವಾಗಿ ಆಸ್ವಾದಿಸುವುದಷ್ಟೇ.” ಎನ್ನಬಹುದು. ಇದು ಒಂದು ಬದಿಯ ಕಡಲು. ಆಚೆ ಬದಿಯಲ್ಲಿ ನಿಂತವರ ನಿಲುವು ಬೇರೆಯೇ.

ಹತ್ತು ಜನರ ನಡುವಿದ್ದೂ ಅವರಿವರಂತಾಗದೆ, ತಮ್ಮ ಮಿತಿಯಲ್ಲಿ ಆಗುವ ಸಕಲವನ್ನೂ ಸಂತೋಷ, ಸಮಾಧಾನದಿಂದ ಮಾಡುತ್ತಾ, ಮೆಚ್ಚುಗೆಗೂ ಹಾತೊರೆಯದೆ, ಯಾರನ್ನೂ ದೂರದೆ ಸಂತರಂತೆ ಬದುಕಿದವರಿದ್ದಾರೆ. ಮನೆಮನೆಗಳಲ್ಲಿ ಅಂತಹವರನ್ನು ಕಂಡಿರುತ್ತೇವೆ. ಸದಾ ಗಿಜಿಗುಡುವ ಮನೆ, ಬಂದು ಹೋಗುವವರು, ಓದಲೆಂದು, ಕೆಲಸಕ್ಕೆಂದು ಬಂದು ಉಳಿದ ಬಂಧುಗಳ ಮಕ್ಕಳು, ದೇವಸ್ಥಾನದ ಪ್ರಸಾದ, ಚರಪು ಮಾಡುವ ಜವಾಬ್ದಾರಿ, ರೋಗಿಗಳ ಆರೈಕೆ, ಹಿರಿಯರ ಕಾಳಜಿ, ದಿನಂಪ್ರತಿ ಹದಿನೈದು ಇಪ್ಪತ್ತು ಜನರಿಗೆ ಕಡಿಮೆಯಿಲ್ಲದಂತೆ ಊಟೋಪಚಾರ… ಇವೆಲ್ಲವನ್ನೂ ಯಾರ ಸಹಾಯ, ಮೆಚ್ಚುಗೆಯ ಅಪೇಕ್ಷೆಯಿಲ್ಲದೆ ನಾಲ್ಕು ದಶಕಗಳ ಕಾಲ ಏಕಾಂಗಿಯಾಗಿ ನಡೆಸಿದ ನನ್ನ ಅಜ್ಜಿ ಒಮ್ಮೆ ಸಿಕ್ಕಾಗ ಕಿವಿಮಾತು ಹೇಳಿದ್ದರು. “ಇನ್ನೇನು ಮದುವೆಯಾಗಿ ಅತ್ತೆ ಮನೆಗೆ ಹೋಗುವ ಹುಡುಗಿ ನೀನು. ನಮ್ಮ ಮನೆ ಮಗು ಎನ್ನುವ ಸದರ ತೊಗೊಂಡು ಹೇಳ್ತಿದ್ದೀನಿ. ನಿನ್ನ ಓದು, ಕೆಲಸ, ಹವ್ಯಾಸ ಏನಿದ್ದರೂ ಮುಂದುವರೆಸಿಕೊಂಡು ಹೋಗು. ಅಮ್ಮನ ಮನೆಯ ಹಾಗೆ ಅಲ್ಲಿ ಸಹಕಾರ ಸಿಗದಿರಬಹುದು. ಯಾವುದಕ್ಕೂ ದೂರಬೇಡ. ಕೊರಗಬೇಡ. ನಿನ್ನ ಕೈಲಾದಷ್ಟನ್ನು ನಿರ್ವಂಚನೆಯಿಂದ ಮಾಡಿ ಕೃಷ್ಣಾರ್ಪಣ ಎಂದುಬಿಡು. ನೀನು ಯಾರಿಗೂ ಹೀಗೆ ಮಾಡಿ, ಹಾಗೆ ಮಾಡಿ ಅಂತ ಕೆಲಸ ಹೇಳೋಕೆ ಹೋಗಬೇಡ. ಅವರಾಗಿಯೇ ಮುನ್ನುಗ್ಗಿ ಮಾಡುವಾಗ, ಮಧ್ಯೆ ನುಗ್ಗಿ ನಾನೇ ಮಾಡ್ತೀನಿ ಅಂತ ಎಬ್ಬುಬ್ಬಲಾಡಬೇಡ. ಮಾಡುವದನ್ನು ಅಚ್ಚುಕಟ್ಟಾಗಿ, ಸರಳವಾಗಿ ಮಾಡು. ಆಡಂಬರಕ್ಕೆ ಅಂಟಿಕೊಂಡರೆ ಒಂದಕ್ಕೆ ನಾಲ್ಕು ಕಷ್ಟ. ಚಾಡಿ ಹೇಳಬೇಡ. ಚಾಡಿ ಮಾತಿಗೆ ಕಿವಿಗೊಡಲೂ ಬೇಡ. ಅಷ್ಟೇ.” ಎಂದಿದ್ದರು. ಅದು ನನಗೆ ಹೇಳಿದ ಕಿವಿಮಾತು ಎನ್ನುವುದಕ್ಕಿಂತ ಅವರ ಬದುಕಿನ ದಾರಿ ಅದಾಗಿತ್ತು. ಅವರ ಏರಿಳಿತದ ಬದುಕಿನಲ್ಲಿ ಕಂಡುಕೊಂಡ ನಿರುಮ್ಮಳತೆಯ ಗುಟ್ಟು ಬಹುಶಃ ಇದೇ ಇರಬೇಕು.

ದೂರುಗಳಿಲ್ಲದೆ ಬದುಕಲು, ನೆಮ್ಮದಿಯ ಹೃದಯ, ಪ್ರಶಾಂತ ಪರಿಸರ ಪಡೆಯಲು ಏಕಾಂತವೋ, ಲೋಕಾಂತವೋ ಅಂತೂ ಇಂತಹದ್ದೊಂದು ದಾರಿ ನಾವು ಹುಡುಕಲೇಬೇಕು. ಈ ಮಧ್ಯೆ ನಮ್ಮತನವನ್ನು ಬಿಟ್ಟುಕೊಡದ ಗಟ್ಟಿತನ, ದಾಷ್ಟ್ಯವೂ ಅವಶ್ಯಕವೇ. ಇದು ಮುಗಿಯದ ಪಯಣ. ತಿರುವು ಹಾದಿಗಳಲ್ಲಿ ಹೂವರಳಿ, ತೆರಳೋಣ.