ಮಾವನ ಎಲ್ಲಾ ಕೆಲಸಗಳಲ್ಲಿಯೂ ಅಪ್ಪ ಮುಂದಿರುತ್ತಿದ್ದ. ಕೊನೆಗೊಂದು ದಿನ ಮದುವೆಯ ಹೆಣ್ಣು ಗೊತ್ತಾಗಿ ಮದುವೆಯೂ ನಡೆದು ಹೋಯಿತು. ಮದುವೆಯಲ್ಲಿಯಂತೂ ಅಪ್ಪ ನಿರಂತರವಾಗಿ ಓಡಾಡಿದ್ದ. ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಮುಂದೆ ನಿಂತು ಮದುವೆ ಮಾಡಿದ್ದ. ನಾವಿನ್ನೂ ಚಿಕ್ಕ ಹುಡುಗರಾದ್ದರಿಂದ ಮದುವೆಯಲ್ಲಿ ನಮ್ಮನ್ನು ಜೊತೆಗಿರಿಸಿಕೊಂಡೆ ಫೋಟೊ ತೆಗಿಸಿಕೊಂಡಿದ್ದ ನಮ್ಮಾವನಿಗೆ ನಮ್ಮ ಮೇಲೆ ಬಹಳ ಅಕ್ಕರೆ ಇದೆ ಎಂದುಕೊಂಡೆವು. ಅವನು ತರುತ್ತಿದ್ದ ಬಾಳೆಹಣ್ಣುಗಳು ಇತರೆ ತಿನಿಸುಗಳು ಅಕ್ಕರೆ ಪ್ರತೀಕವೆಂದು ಭಾವಿಸಿದ್ದೆವು. ದೊಡ್ಡವರಾದ ಮೇಲೆಯೆ ನಮಗೂ ತಿಳಿದದ್ದು, ನಡತೆಗು ಮನಸ್ಸಿನ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯೆಂದು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ

ಅಮ್ಮನ ಕುಟುಂಬದಲ್ಲಿ ಅಮ್ಮನೆ ಕೊನೆಯವಳು. ಇಬ್ಬರು ಅಣ್ಣಂದಿರು ಒಬ್ಬಳು ಅಕ್ಕ ಅಂತಹ ಸ್ಥಿತಿವಂತ ಕುಟುಂಬವೇನು ಅಲ್ಲ. ನಾವು ನಮ್ಮಜ್ಜನನ್ನು ನೋಡಿಯೆ ಇಲ್ಲ. ಅವರದು ಒಂದು ಫೋಟೊ ಸಹ ಮನೆಯಲ್ಲಿ ಇಲ್ಲ. ನಮ್ಮಮ್ಮನ ಅಮ್ಮ ಅಜ್ಜಿ ಕರಿಯಮ್ಮ ನಮಗೆಲ್ಲಾ ಕರಿಯಜ್ಜಿಯಾಗಿದ್ದಳು. ಬಾಲ್ಯದಲ್ಲಿ ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅದೊಂದು ಬಾಲ್ಯದ ಒಡನಾಟ ಮರೆಯಲು ಸಾಧ್ಯವೆ ಇಲ್ಲ. ಪ್ರತಿ ಬೇಸಿಗೆಗೆ ನಾವೆಲ್ಲ ಅಜ್ಜಿಯ ಊರಿಗೆ ಹೋಗುತ್ತಿದ್ದೆವು. ಏನಾದರೊಂದು ವಿಶೇಷ ಅಡುಗೆ ನಮಗೆಲ್ಲಾ ಇದ್ದೆ ಇರುತ್ತಿತ್ತು. ಅದು ನಮಗೂ ಖುಷಿಯೆ ನೀಡುತ್ತಿತ್ತು.

ಬಡತನವಿದ್ದರೂ ಇದ್ದುದರಲ್ಲಿಯೆ ನಮ್ಮನ್ನು ಯಾವುದು ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ನಮ್ಮ ಮಾವನಿಗೂ ಕೊನೆಯ ತಂಗಿ ಎಂದು ನಮ್ಮಮ್ಮನ ಬಗ್ಗೆ ವಿಶೇಷ ಅಕ್ಕರೆ ಇತ್ತು. ಆಗಿನ ಕುಟುಂಬಗಳಲ್ಲಿ ಬಿಟ್ಟು ಬಿಡಲಾಗದ ಬಾಂಧವ್ಯವಿರುತ್ತಿತ್ತು ಎಂದೆ ನನ್ನ ಭಾವನೆ. ನಮ್ಮಮ್ಮನ ಹಿರಿಯಣ್ಣ ನಮ್ಮೊಂದಿಗೆ ಸಲಿಗೆಯಿಂದಲೆ ಇದ್ದರು. ಇನ್ನೊಬ್ಬ ಮಾವನನ್ನು ಕಂಡರೆ ಒಂದಿಷ್ಟು ನಮಗೆಲ್ಲ ಒಳಗೊಳಗೆ ಭಯ. ಅವರೊಂದಿಗೆ ಅಷ್ಟೇನು ಬೆರೆಯುತ್ತಿರಲಿಲ್ಲ. ಏಕೆಂದರೆ ನಮಗೆಲ್ಲ ಬುದ್ಧಿ ಬರುವಷ್ಟರಲ್ಲಿ ನಮ್ಮ ಮಾವ ಕೆಲಸಕ್ಕೆ ಸೇರಿದ್ದ. ಅದು ಕೃಷಿ ಇಲಾಖೆಯಲ್ಲಿ. ಮೊದಲು ತೀರ್ಥಹಳ್ಳಿಗೆ ಕೃಷಿ ಸಹಾಯಕನಾಗಿ ಸೇರಿದ್ದ ಎಂದು ನಮ್ಮಪ್ಪ ಆಗಾಗ ಹೇಳುತ್ತಿದ್ದ. ಬಾಲ್ಯದಲ್ಲಿ ನಮಗೆಲ್ಲ ಇದು ಗೊತ್ತೂ ಇರಲಿಲ್ಲ. ಯಾವಾಗಲೂ ರಜಾ ದಿನಗಳಲ್ಲಿ ಊರಿಗೆ ಬರುತ್ತಿದ್ದ ಅವನ ಕೈಯಲ್ಲಿ ಒಂದು ಬ್ಯಾಗು ಇರುತ್ತಿತ್ತು. ನಾವು ನಮ್‌ಮಾವ ಅದರಲ್ಲಿ ಏನು ತಂದಿರಬಹುದು ಎಂದು ಇಣುಕಿಣುಕಿ ನೋಡಿದರೆ ಸತಾಯಿಸಿ ಬಾಳೆಹಣ್ಣು ಕೊಡುತ್ತಿದ್ದ. ಆತ ನಮ್ಮೂರಿಗೆ ಬಂದರೆ ಏನೊ ವಿಶೇಷವಾದದ್ದು ಮನೆಯಲ್ಲಿ ಸಿದ್ಧವಾಗುತ್ತಿತ್ತು. ಆದ್ದರಿಂದ ಈ ಮಾವ ಅವಾಗವಾಗ ಬಂದರೆ ಚೆನ್ನ ಎಂದೆ ನಾನು ಅಕ್ಕ ಎಲ್ಲರೂ ಅಂದುಕೊಳ್ಳುತ್ತಿದ್ದೆವು.

ಆದರೆ ಮಲೆನಾಡಿನ ತೀರ್ಥಹಳ್ಳಿ ಎಲ್ಲಿತ್ತು ಎಂಬುದು ಸಹ ನಮಗಾಗ ತಿಳಿಯದ ವಿಷಯವಾಗಿತ್ತು. ಅಲ್ಲಿ ಯಾವಾಗಲೂ ಮಳೆ ಬರುತ್ತಂತೆ. ಆರು ತಿಂಗಳು ಮನೆಯಿಂದ ಹೊರಗಡೆಯೆ ಬರುವುದಕ್ಕಾಗುವುದಿಲ್ಲವಂತೆ. ಹೀಗೆ ಏನೇನೊ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳುತ್ತಿದ್ದೆವು ಅಷ್ಟೆ. ಅದೆಲ್ಲ ತಿಳಿಯದ ಬಾಲ್ಯ ನಮ್ಮದು. ಮಾವನಿಗಿಂತ ಮಾವ ತರುವ ಬಾಳೆಹಣ್ಣುಗಳ ಮೇಲೆ ನಮ್ಮ ಕಣ್ಣಿರುತಿತ್ತು.

ಆತ ಕೆಲಸದಿಂದ ರಜೆಯ ಮೇಲೆ ಸೀದಾ ನಮ್ಮೂರಿಗೆ ಬರುತ್ತಿದ್ದ. ವಿಶೇಷವೆಂದರೆ ಅವರ ಊರಿಗೆ ಬಸ್ಸು ಬರುತ್ತಿತ್ತು. ತಮ್ಮ ಮನೆಗೆ ಹೋಗದೆ ನೇರವಾಗಿ ತಂಗಿಯ ಮೇಲೆ ಇರುವ ಪ್ರೀತಿಗೊ ಅಥವಾ ನಮ್ಮಪ್ಪ ಆತ ಒಂದೆ ತರಗತಿಯಲ್ಲಿ ಓದಿದ್ದರಿಂದ ಸಲುಗೆ ಹೆಚ್ಚಿರುವ ಕಾರಣ ಬರುತ್ತಿದ್ದ ಎಂದು ನಂತರದ ದಿನಗಳಲ್ಲಿ ಮನೆಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿದ್ದೇನೆ. ನಮ್ಮಪ್ಪ ಮತ್ತು ಮಾವ ಎಂದೂ ಬೇರೆಯವರಂತೆ ಕಾಣುತ್ತಿರಲಿಲ್ಲ. ಭಾವ ಬಾಮೈದ ಎಂಬ ಸಂಬಂಧವನ್ನು ಮೀರಿದ ಆತ್ಮೀಯ ಸಂಬಂಧ ಅವರದಾಗಿತ್ತು. ಒಡಹುಟ್ಟಿದವರಂತೆ ಇರುತ್ತಿದ್ದರು. ಸಂಬಂಧಗಳ ಮೌಲ್ಯ ನಮಗೇನು ಅಷ್ಟು ಅರ್ಥವಾಗುತ್ತಿರಲಿಲ್ಲ. ನಮ್ಮದು ಒಳಿತು ಕೆಡುಕುಗಳ ಸೋಗಿಲ್ಲದೆ ಬದುಕುವ ದೇವರ ಮನಸ್ಸಿನಂಥ ಬಾಲ್ಯವಲ್ಲವೆ. ಅವರು ಬಂದಾಗ ಅವರ ಹತ್ತಿರ ಅಷ್ಟೇನು ಸಲಿಗೆಯಿಂದಿರುತ್ತಿರಲಿಲ್ಲ. ಅವರು ಉದ್ಯೋಗದಲ್ಲಿದ್ದರು ಅನ್ನುವುದಕ್ಕಿಂತ ಅವರ ಟಾಕು ಟೀಕು ದಿರಿಸು ನಮ್ಮನ್ನು ಒಂದಿಷ್ಟು ದೂರವಿರಿಸಿತ್ತು ಎಂಬುದೆ ಸತ್ಯವಾದುದು. ಅವರೂ ಅಷ್ಟೆ ಎಂದೂ ನಮ್ಮೊಂದಿಗೆ ಸಲಿಗೆ ಬೆಳೆಸಿಕೊಳ್ಳಲಿಲ್ಲ. ನಮ್ಮ ಮನೆಯು ಅಂತಹ ಸ್ಥಿತಿವಂತರ ಮನೆಯಲ್ಲ. ಅವರು ಬಂದಾಗ ಕುಳಿತುಕೊಳ್ಳಲು ಯಾವ ಕುರ್ಚಿಯೂ ಇರಲಿಲ್ಲ. ನಮ್ಮ ಮನೆಯಲ್ಲಲ್ಲ ಯಾವ ಮನೆಯಲ್ಲು ಖುರ್ಚಿಯ ಸಂಸ್ಕೃತಿ ಇರಲಿಲ್ಲ. ಆದರೆ ನಮ್ಮಾವನಿಗೆ ಕೆಲಸದಲ್ಲಿದ್ದೇನೆಂಬ ಅಘೋಷಿತ ಅಹಂ ಇತ್ತೆಂದೆ ತೋರುತ್ತದೆ. ನೆಲದ ಮೇಲೆ ಕುಳಿತುಕೊಳ್ಳುತ್ತಿರಲಿಲ್ಲ. ನಮ್ಮಜ್ಜನ ಕಾಲದ ಮರದಿಂದ ಮಾಡಿಸಿದ ದೊಡ್ಡದೊಂದು ಪೆಟ್ಟಿಗೆ ಇತ್ತು. ಬಹಳ ವರ್ಷಗಳವರೆಗೆ ನಮ್ಮ ಬಟ್ಟೆಗಳನ್ನು ಕಾಪಾಡಿದ್ದು ಅದೆ ಪೆಟ್ಟಿಗೆ. ಅದನ್ನು ಅಡುಗೆ ಮನೆಯ ಮೂಲೆಯೊಂದರಲ್ಲಿ ಇಡಲಾಗಿತ್ತು. ಅವರು ಬಂದಾಗ ಅದರ ಮೇಲೆಯೇ ಕುಳಿತುಕೊಳ್ಳುತ್ತಿದ್ದರು. ಒಂದೆರಡು ದಿನ ಇರುತ್ತಿದ್ದರು. ಅವರು ಇರೋವರೆಗೂ ನಮ್ಮ ತುಂಟಾಟಗಳಿಗೆ ಬ್ರೇಕ್. ಅವರೆಂದರೆ ನಮಗೊಂದು ಭಯ ಅನಾಯಾಸವಾಗಿ ನಮ್ಮನ್ನು ಆವರಿಸುತ್ತಿತ್ತು. ಆದರೆ ನಮ್ಮಪ್ಪನ ಜೊತೆಗೆ ಅವರ ಭಾಂದವ್ಯ ಗಟ್ಟಿತನದ್ದು. ಎಂದೂ ಇಬ್ಬರು ಜಗಳವಾಡಿದ್ದು ಕಂಡಿಲ್ಲ. ಎಲ್ಲ ವ್ಯವಹಾರಕ್ಕು ಚರ್ಚಿಸಿ ತೀರ್ಮಾನಿಸುತ್ತಿದ್ದರು. ಅವರು ನಮ್ಮ ಮನೆಯಲ್ಲಿರುವವರೆಗೂ ಏನಾದರೊಂದು ವಿಶೇಷ ಅಡುಗೆ ಇರುತ್ತಿತ್ತು. ಆ ಕಾರಣಕ್ಕಾಗಿಯೆ ಮಾವನೊಂದಿಗೆ ನಮ್ಮ ತಕರಾರಿರಲಿಲ್ಲ.

ಬಿತ್ತನೆ ಕಾಲದಲ್ಲಿ ನಮ್ಮಪ್ಪನಿಗೆ ಹಣದ ವಿಚಾರವಾಗಿ ಕೊಡುಕೊಳ್ಳುವಿಕೆ ನಡೆದೆ ಇತ್ತು. ಎಂದೂ ಅದರ ವಿಚಾರವಾಗಿ ಜಗಳವಾಡಿದ್ದು ನೋಡಿರಲಿಲ್ಲ. ಜಗಳವಾಡುವ ಮನಸ್ಸು ಇಬ್ಬರಿಗೂ ಇರಲಿಲ್ಲ. ನಮ್ಮಮ್ಮನ ಕುಟುಂಬದಲ್ಲಿ ಅವರೊಬ್ಬರೆ ಸರ್ಕಾರಿ ಉದ್ಯೋಗ ಪಡೆದವರಾದ್ದರಿಂದ ಬಹುತೇಕ ನಮ್ಮ ಕುಟುಂಬದಲ್ಲಿ ಗೌರವಾದರಗಳು ಅವರಿಗೆ ಹೆಚ್ಚೆ ಇದ್ದವು.

ಯಾವಾಗಲೂ ರಜಾ ದಿನಗಳಲ್ಲಿ ಊರಿಗೆ ಬರುತ್ತಿದ್ದ ಅವನ ಕೈಯಲ್ಲಿ ಒಂದು ಬ್ಯಾಗು ಇರುತ್ತಿತ್ತು. ನಾವು ನಮ್‌ಮಾವ ಅದರಲ್ಲಿ ಏನು ತಂದಿರಬಹುದು ಎಂದು ಇಣುಕಿಣುಕಿ ನೋಡಿದರೆ ಸತಾಯಿಸಿ ಬಾಳೆಹಣ್ಣು ಕೊಡುತ್ತಿದ್ದ. ಆತ ನಮ್ಮೂರಿಗೆ ಬಂದರೆ ಏನೊ ವಿಶೇಷವಾದದ್ದು ಮನೆಯಲ್ಲಿ ಸಿದ್ಧವಾಗುತ್ತಿತ್ತು. ಆದ್ದರಿಂದ ಈ ಮಾವ ಅವಾಗವಾಗ ಬಂದರೆ ಚೆನ್ನ ಎಂದೆ ನಾನು ಅಕ್ಕ ಎಲ್ಲರೂ ಅಂದುಕೊಳ್ಳುತ್ತಿದ್ದೆವು.

ಅವರಿಗೂ ಮನೆಯ ಕಡೆ ಸಾಕಷ್ಟು ಜವಾಬ್ದಾರಿಗಳು ಇದ್ದವು. ಹಾಗಾಗಿ ಹಣದ ವಿಷಯವಾಗಿ ಕಟ್ಟುನಿಟ್ಟಿನ ಶಿಸ್ತು ಇದ್ದಿರಬೇಕು. ನಮ್ಮಪ್ಪನು ಅವರೊಂದಿಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿದ್ದರು. ಎಷ್ಟು ಆತ್ಮೀಯವಾಗಿದ್ದರೆಂದರೆ ಅವರ ಯಾವ ತೀರ್ಮಾನಗಳಾದರೂ ನಮ್ಮಪ್ಪನ ಅಣತಿಯಂತೆ ನಡೆಯುತ್ತಿದ್ದವು ಎಂಬಷ್ಟರಮಟ್ಟಿಗೆ ಅನ್ಯೋನ್ಯತೆ ಅವರಿಬ್ಬರಲ್ಲಿ ಇತ್ತು.

ಕೆಲಸ ದೊರೆತು ನಾಲ್ಕೈದು ವರ್ಷಗಳವರೆಗೆ ಇದೆ ರೀತಿ ನಮ್ಮ ಮಾವ ಇದ್ದರು. ನಮ್ಮಪ್ಪನು ಒಂದು ಕಿರಾಣಿ ಅಂಗಡಿಯಿಟ್ಟುಕೊಂಡು ಒಂದಿಷ್ಟು ಸ್ಥಿತಿವಂತನಾಗುವಷ್ಟರ ಮಟ್ಟಿಗೆ ಬದುಕು ನಡೆಸಿಕೊಂಡು ಹೋಗುತ್ತಿದ್ದರು. ಅದೊಂದು ದಿನ ಮನೆಯಲ್ಲಿ ಗಹನವಾದ ಚರ್ಚೆಯಾಗುತ್ತಿತ್ತು. ನನಗೂ ವಯಸ್ಸಾಗುತ್ತ ಬಂತು ಮದುವೆಯಾಗಬೇಕು. ಹೆಣ್ಣು ನೋಡಬೇಕು ಎಂದು ನಮ್ಮಾವ ಹೇಳುತ್ತಿದ್ದ. ನಮ್ಮಪ್ಪನು ಆಯ್ತು ಎಂದು ಅಲ್ಲಿ ಹೆಣ್ಣಿವೆ ಇಲ್ಲಿವೆ ಎಂದು ಏನೇನೊ ಚರ್ಚೆ ಮಾಡುತ್ತಿದ್ದರು. ಅದಾಗಲೆ ಬಿತ್ತನೆ ಕಾರ್ಯ ಬಂದಿತ್ತು. ಬಿತ್ತನೆಗೆ ಈ ಬಾರಿಯೂ ನಮ್ಮಾವನೆ ಹಣಕೊಟ್ಟಿದ್ದ. ಆ ವರ್ಷ ಬಹಳ ಚೆನ್ನಾಗಿ ಮಳೆ ಬಂದು ಶೇಂಗಾ ಬೆಳೆಯು ಉತ್ತಮ ಫಸಲನ್ನೆ ನೀಡಿತ್ತು. ಸುಗ್ಗಿಯ ಕಾಲದ ಮುಗಿದ ಮೇಲೆ ಹೆಣ್ಣು ನೋಡುವ ಕಾರ್ಯ ಮಾಡೋಣ ಎಂದುಕೊಂಡಿದ್ದರು. ನಾಲ್ಕೈದು ಕಡೆ ನೋಡಿಯೂ ಬಂದಿದ್ದರು. ವಯಸ್ಸು ಸ್ವಲ್ಪ ದಾಟಿದ್ದರಿಂದ ನೋಡಿದ ಹೆಣ್ಣುಗಳು ನನಗೆ ತೀರ ಚಿಕ್ಕರಾಗುತ್ತಾರೆ ಎಂದು ನಮ್ಮಾವನೆ ತಿರಸ್ಕರಿಸಿದ್ದ. ಒಂದಿಷ್ಟು ದಿನ ಸುಮ್ಮನಾಗಿದ್ದರು. ಈ ನಡುವೆ ನಮ್ಮಾವನದೊಂದು ಹಳೆಯ ಎಕ್ಸೆಲ್ ಸ್ಕೂಟರ್‌ ಇತ್ತು. ಅದನ್ನು ಆತ ತೀರ್ಥಹಳ್ಳಿಯಲ್ಲಿ ಇದ್ದಾಗಲೆ ತೆಗೆದುಕೊಂಡಿದ್ದ. ಹೆಣ್ಣು ಹುಡುಕುವ ಶಾಸ್ತ್ರಕ್ಕೆ ಉಪಯೋಗವಾಗಬಹುದು ಎಂಬುದು ಅವರ ಎಣಿಕೆಯಾಗಿತ್ತು ಎಂದೆ ತೋರುತ್ತದೆ. ರಜೆಯಿದ್ದಾಗಲೆಲ್ಲಾ ಬರುತ್ತಿದ್ದರು. ಹೀಗೆ ಬಂದು ಹೋಗುವುದು ಜಾಸ್ತಿಯಾಗಿತ್ತು. ಎಲ್ಲಾ ವ್ಯವಹಾರಗಳು ಅವರಿಬ್ಬರ ಮಧ್ಯೆಯೆ ನಡೆಯುತ್ತಿದ್ದವು. ನಮ್ಮಮ್ಮನಿಗೆ ಇದು ಯಾವುದು ಅರ್ಥವು ಆಗುತ್ತಿರಲಿಲ್ಲ. ಬಂದಾಗ ಅಣ್ಣನಿಗೆ ರುಚಿರುಚಿಯಾಗಿ ಅಡುಗೆ ಮಾಡುವುದಷ್ಟೆ ಅವರಿಗೆ ಗೊತ್ತಿತ್ತು. ಇಂತಹ ಭಾಂಧವ್ಯ ಇತ್ತು ಅವರೆಲ್ಲರ ನಡುವೆ.

ಮಾವನ ಎಲ್ಲಾ ಕೆಲಸಗಳಲ್ಲಿಯೂ ಅಪ್ಪ ಮುಂದಿರುತ್ತಿದ್ದ. ಕೊನೆಗೊಂದು ದಿನ ಮದುವೆಯ ಹೆಣ್ಣು ಗೊತ್ತಾಗಿ ಮದುವೆಯೂ ನಡೆದು ಹೋಯಿತು. ಮದುವೆಯಲ್ಲಿಯಂತೂ ಅಪ್ಪ ನಿರಂತರವಾಗಿ ಓಡಾಡಿದ್ದ. ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಮುಂದೆ ನಿಂತು ಮದುವೆ ಮಾಡಿದ್ದ. ನಾವಿನ್ನೂ ಚಿಕ್ಕ ಹುಡುಗರಾದ್ದರಿಂದ ಮದುವೆಯಲ್ಲಿ ನಮ್ಮನ್ನು ಜೊತೆಗಿರಿಸಿಕೊಂಡೆ ಫೋಟೊ ತೆಗಿಸಿಕೊಂಡಿದ್ದ ನಮ್ಮಾವನಿಗೆ ನಮ್ಮ ಮೇಲೆ ಬಹಳ ಅಕ್ಕರೆ ಇದೆ ಎಂದುಕೊಂಡೆವು. ಅವನು ತರುತ್ತಿದ್ದ ಬಾಳೆಹಣ್ಣುಗಳು ಇತರೆ ತಿನಿಸುಗಳು ಅಕ್ಕರೆ ಪ್ರತೀಕವೆಂದು ಭಾವಿಸಿದ್ದೆವು. ದೊಡ್ಡವರಾದ ಮೇಲೆಯೆ ನಮಗೂ ತಿಳಿದದ್ದು, ನಡತೆಗು ಮನಸ್ಸಿನ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯೆಂದು. ಕೆಲವು ತೋರಿಕೆಗಷ್ಟೆ ಸೀಮಿತವಾಗಿರುತ್ತವೆಯೆಂದು. ಯಾವುದು ಕ್ಷಣಿಕ ಕೋಪದಲ್ಲಿ ಮಾಡಿದ ಅವಾಂತರಗಳು ಇಡಿ ಬದುಕಿನ ಕೊಂಡಿಯನ್ನೆ ಕಳಚಿಬಿಡುತ್ತವೆಯೆಂದು ರಕ್ತಗತ ಭಾಂಧವ್ಯಕ್ಕು ಮುಳ್ಳಾಗುತ್ತವೆ ಎಂದು ನಂತರವಷ್ಟೇ ತಿಳಿಯಿತು.

ನಡೆದದ್ದು ಇಷ್ಟೆ; ನಮ್ಮ ಮಾವನ ಹತ್ತಿರ ಇದ್ದ ಹಳೆಯ ಸ್ಕೂಟರ್ ನಿನಗಿರಲಿ ಎಂದು ಅಪ್ಪನ ಬಳಿ ಬಿಟ್ಟಿದ್ದ. ಅದಕ್ಕೆ ವ್ಯವಹಾರದ ಮಾತಾಡಿರಲಿಲ್ಲ. ಅದಕ್ಕೇನು ಹಣ ಬೇಡವೆಂದು ಮಾತುಕತೆಯಾಗಿತ್ತೆಂತು, ಬಿತ್ತನೆ ಕಾರ್ಯಕ್ಕೆ ಕೊಟ್ಟ ಹಣ ಮಾತ್ರ ವಾಪಸ್ ಕೊಡುವುದೆಂದು ಮಾತುಕತೆಯಾಗಿತ್ತು. ಅದರಂತೆ ಮದುವೆ ಖರ್ಚಿಗೆ ಬೇಕು ಎಂದು ಬೆಳೆದ ಶೇಂಗಾವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಮದುವೆ ಕೆಲಸಕ್ಕೆ ಅಪ್ಪ ಹಣ ಕೊಟ್ಟಿದ್ದ. ಮದುವೆಯಾಗಿ ಹದಿನೈದು ದಿನ ಕಳೆದಿರಬೇಕು, ಇದ್ದಕ್ಕಿದ್ದಂತೆ ಮಾವ ನಮ್ಮನೆಗೆ ಬಂದಿದ್ದ. ಹಣದ ಲೆಕ್ಕಚಾರದಂತೆ ನನಗೆ ನೀನು ಇಂತಿಷ್ಟು ಹಣ ನಾಡಿದ್ದೆ ಕೊಡಬೇಕು ಹಾಗೇ ನನಗೆ ಬಹಳ ಖರ್ಚಿದೆ, ಹಾಗಾಗಿ ಸ್ಕೂಟರಿನ ಬಾಬ್ತು ಇಂತಿಷ್ಟು ಬರಬೇಕು ಎಂದು ಲೆಕ್ಕವನ್ನು ಸೇರಿಸಿ ಕಾಫಿಯನ್ನು ಕುಡಿಯದೆ ಅಲ್ಲಿಂದ ಹೊರಟು ಹೋದ. ಅಪ್ಪ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೇಳುತ್ತಲೆ ಇದ್ದ.. ನಾವೆಲ್ಲ ಅವರಿಬ್ಬರನ್ನೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆವು. ಇಷ್ಟು ದಿನ ಅವರಿಬ್ಬರೂ ಆತ್ಮೀಯರಾಗಿದ್ದದ್ದು ನಿಜವಾ ಸುಳ್ಳಾ ಅನಿಸುವಷ್ಟು ಅವರಿಬ್ಬರ ಮಧ್ಯೆ ಬಿರುಕು ಬಿಟ್ಟಿತ್ತು. ಅದರಲ್ಲಿ ಒಂದಿಷ್ಟು ಹಣವನ್ನು ವಾಪಸ್ ಕೊಟ್ಟರು. ಮತ್ತೆಂದೂ ಮಾವ ನಮ್ಮನೆಗೆ ಬರಲೇ ಇಲ್ಲ. ಯಾಕೆಂದು ಇವತ್ತಿನವರೆಗೂ ನಮಗೂ ತಿಳಿದಿಲ್ಲ. ಯಾಕೀಗಾಯಿತು ಎಂದು ನಮ್ಮಪ್ಪನನ್ನು ಕೇಳಿದರೆ ನನಗೂ ಗೊತ್ತಿಲ್ಲ ಕೊನೆಗೆ ಇನ್ನೊಂದು ನೂರೊ ನೂರೈವತ್ತು ಕೊಡಬೇಕಾಗಿತ್ತು. ಅವನೆ ಬಂದು ಕೇಳಲಿ ಕೊಡುವೆ ಎಂಬ ಅಪ್ಪನ ಹಠ ನಾನೇಕೆ ಕೇಳಬೇಕು ಎಂಬ ಮಾವನ ಹಠ ಇಬ್ಬರನ್ನು ಶಾಶ್ವತವನ್ನಾಗಿ ದೂರ ಮಾಡಿದ್ದವು. ಅಮ್ಮನ ತವರುಮನೆಯ ಸುಖ ದೂರವಾಯಿತು. ಅವರಿವರು ಒಂದೊಂದು ಮಾತು ಎರಡುಕಡೆಯೂ ಹೇಳುತ್ತಿದ್ದರಿಂದ ಮತ್ತೆಂದೂ ಮಾವನನ್ನು ನಾವು ನೋಡಲೆ ಇಲ್ಲ. ಅಮ್ಮ ತವರಿನ ಸುಖದಿಂದ ವಂಚಿತಳಾದಳು. ಬೇಕಾದಷ್ಟು ಕಷ್ಟಗಳು ಎರಡು ಕುಟುಂಬಗಳಲ್ಲಿಯೂ ಬಂದಿವೆ. ಅವುಗಳು ಬಂದಾಗಲೆಲ್ಲಾ ನೀವಿರಲಿಲ್ಲ ಎಂಬ ಮಾತುಗಳೆ ಇಬ್ಬರನ್ನು ಇನ್ನಷ್ಟು ದೂರ ಮಾಡಿದ್ದವು. ಸಂಬಂಧಕ್ಕಿಂತ ಯಕಃಶ್ಚಿತ್ ಹಣವೆ ಮುಖ್ಯವಾಯಿತಲ್ಲ ಎಂಬುದು ಇವತ್ತಿಗೂ ನನ್ನನ್ನ ಕಾಡುತ್ತಿದೆ.

ನಾವೆಲ್ಲರೂ ಈಗ ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇವೆ. ಸಣ್ಣ ಪುಟ್ಟ ಸಾಮಾಜಿಕ ಸೇವೆಯನ್ನು ನಾನು ಮಾಡುವೆ. ಹಣಕ್ಕಾಗಿ ಒಂದಿಡಿ ತಲೆಮಾರಿನ ಭಾಂಧವ್ಯವನ್ನು, ಭಾವನೆಗಳನ್ನು, ಅಕ್ಕರೆಯನ್ನು, ನೆನಪುಗಳೆ ಇಲ್ಲದೆ ಬದುಕುವ ಸಂಕಟವನ್ನು ನಾನ್ಯಾವತ್ತು ತಂದುಕೊಳ್ಳಬಾರದೆಂದು ಸಂಬಂಧಿಗಳಿಗೆ ಕೊಟ್ಟ ಹಣವನ್ನು ತಿರುಗಿ ಯಾವತ್ತು ಕೇಳುವುದಕ್ಕೆ ಹೋಗಲ್ಲ. ಹಣ ಬದುಕಿನ ಅವಶ್ಯಕತೆಯನ್ನಷ್ಟೆ ಪೂರೈಸಬೇಕು. ಸಂಬಂಧಗಳನ್ನು ಕಳೆದುಕೊಂಡು ಕೂಡಿಡುವ ಹಣ, ಯಾವತ್ತೂ ಬದುಕಿಗೆ ಹರಣ ಎಂಬುದೆ ನನ್ನ ಭಾವನೆ. ದೂರವಾದ ಸಂಬಂಧದ ಬಗ್ಗೆ ಮಾತನಾಡುವಾಗ ಅಮ್ಮ ಕಣ್ಣೀರಾಗುತ್ತಾಳೆ. ಅಪ್ಪನ ಮುಖದಲ್ಲಿ ತಪ್ಪಿತಸ್ಥ ಭಾವನೆ ಕಾಣುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಎದುರು ಸಿಕ್ಕಾಗ ಪರಕೀಯರಂತೆ ಹಾದುಹೋಗುವ ಮಾವ, ಎಲ್ಲವು ಪದೆಪದೆ ಕಾಡುತ್ತವೆ. ಜೇಬಿನಲ್ಲಿದ್ದ ನೂರರ ನೋಟುಗಳು ಮಾತ್ರ ನಕ್ಕಂತಾಗುತ್ತದೆ.

(ಮುಂದುವರಿಯುವುದು)