ಇಲ್ಲಿ ಕೇಶವನ ಗುಡಿಯನ್ನು ಕಟ್ಟಿಸಿ ದತ್ತಿ ಒದಗಿಸಿದವನು ಒಂದನೇ ನರಸಿಂಹನ ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ. ದೇವಾಲಯದ ಹೊರಭಾಗದಲ್ಲಿ ಇರಿಸಿರುವ ಶಾಸನದಲ್ಲಿ ದೇವಾಲಯ ನಿರ್ಮಾಣ ಮತ್ತು ಅದರ ನಿರ್ವಹಣೆಗೆಂದು ಭೂಮಿಯನ್ನು ದಾನನೀಡಿದ ವಿವರಣೆಯಿದೆ. ಒಕ್ಕಣೆಗೆ ಸಾಕ್ಷೀಭೂತನಾಗಿ ಶಾಸನದ ಮೇಲುಭಾಗದಲ್ಲಿ ಕಾಮಧೇನು, ಸೂರ್ಯ,ಚಂದ್ರ, ಪರಿವಾರದೊಡನೆ ಸ್ವಯಂ ಕೇಶವನೇ ನಿಂತಿದ್ದಾನೆ. ಮುಖ್ಯದ್ವಾರಪಟ್ಟಕದಲ್ಲೂ ಒಳಗುಡಿಯ ಬಾಗಿಲ ಮೇಲೂ ಲಕ್ಷ್ಮಿಯ ಬಿಂಬವಿದ್ದು ಅದರ ಅಕ್ಕಪಕ್ಕಗಳಲ್ಲಿ ಆನೆಗಳೂ ಚಾಮರಧಾರಿಣಿಯರೂ ಕಾಣಿಸುತ್ತಾರೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತಾರನೆಯ ಕಂತು
ಒಂದನೇ ನರಸಿಂಹ ಯಾರು ಗೊತ್ತೇ? ಹೊಯ್ಸಳ ರಾಜ ವಿಷ್ಣುವರ್ಧನನ ಮಗ. ತಂದೆ ತೀರಿಕೊಂಡಾಗ ನರಸಿಂಹನಿಗೆ ಇನ್ನೂ ಚಿಕ್ಕ ವಯಸ್ಸು. ಕಿಂಚಿತ್ತೂ ಅನುಭವವಿಲ್ಲದವನನ್ನು ಸಿಂಹಾಸನದಲ್ಲಿ ಕೂರಿಸಿದ ಮಂತ್ರಿಸೇನಾನಿಗಳಿಗೆ ಒಂದೆಡೆ ಆಡಳಿತ , ಇನ್ನೊಂದೆಡೆ ಶತ್ರುಗಳನ್ನು ತಡೆಯುವುದು, ಮತ್ತೊಂದೆಡೆ ವಿಷ್ಣುವರ್ಧನನ ಯಶೋಗಾಥೆಗೆ ತಕ್ಕಂತೆ ಹೊಯ್ಸಳ ಸಾಮ್ರಾಜ್ಯದ ಹಿರಿಮೆಯನ್ನು ಉಳಿಸಿಕೊಂಡು ಹೋಗುವುದು- ಇವೆಲ್ಲ ಹೊಣೆಗಾರಿಕೆಗಳೂ ಹೆಗಲಿಗೇರಿದವು. ಹೊಯ್ಸಳ ಸಾಮ್ರಾಜ್ಯದ ಪ್ರಧಾನರ ಹಾಗೂ ಸೇನಾನಾಯಕರ ಕರ್ತವ್ಯಪರತೆ ಮತ್ತು ರಾಜನಿಷ್ಠೆಗಳಿಂದಾಗಿ ಹೊಯ್ಸಳರಾಜ್ಯ ಸುರಕ್ಷಿತವಾಗಿ ಉಳಿದುಕೊಂಡಿದ್ದು ಮಾತ್ರವಲ್ಲ, ಮುಂದಿನ ಒಂದೆರಡು ಶತಮಾನಗಳವರೆಗೂ ಸುಸ್ಥಿತಿಯಲ್ಲಿ ಮುಂದುವರೆದುಕೊಂಡು ಹೋಗುವುದಕ್ಕೂ ಅವಕಾಶವಾಯಿತು.
ಒಂದನೇ ನರಸಿಂಹ ಮಾತ್ರ ಇದ್ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ರಾಜಭೋಗಗಳಲ್ಲಿ ಮಗ್ನನಾಗಿದ್ದನಂತೆ. ಕಲೆ, ಸಂಸ್ಕೃತಿಗಳನ್ನು ಪೋಷಿಸುವ ಹೊಯ್ಸಳ ಪರಂಪರೆಯನ್ನು ಮುಂದುವರೆಸಿದ ಪ್ರಧಾನರೂ ಸೇನಾನಿಗಳೂ ರಾಜನಿಂದ ಜಹಗೀರುಪಡೆದ ಊರುಗ್ರಾಮಗಳನ್ನು ಅಭಿವೃದ್ಧಿಪಡಿಸಿದರು. ಹೊಯ್ಸಳ ಶಿಲ್ಪಕಲೆಯ ಉತ್ತಮ ಮಾದರಿಗಳನ್ನು ಬಿಂಬಿಸುವ ದೇಗುಲಗಳನ್ನು ಕಟ್ಟಿಸಿದರು. ವಿಶಾಲ ಕೆರೆಗಳನ್ನು ಮಾಡಿಸಿದರು. ದೇಗುಲಗಳಿಗೆ ನಿತ್ಯಪೂಜೆ ಮತ್ತಿತರ ನಿರ್ವಹಣೆಗೆ ಒದಗುವಷ್ಟು ಬೆಳೆ ತೆಗೆಯಲು ಭೂಮಿಯನ್ನು ದತ್ತಿಯಾಗಿ ನೀಡಿ ಶಾಸನ ಬರೆಯಿಸಿದರು. ಹೀಗೆ ನಿರ್ಮಾಣವಾದ ದೇಗುಲಗಳಲ್ಲಿ ಹಾಸನಜಿಲ್ಲೆಯ ಹೊನ್ನಾವರದ ಕೇಶವನ ಗುಡಿಯೂ ಒಂದು (1150).
ಇಲ್ಲಿ ಪ್ರಸ್ತಾಪಿಸಲಾಗಿರುವ ಹೊನ್ನಾವರ ಹಾಸನ ಜಿಲ್ಲೆಯ ದುದ್ದ ಹೋಬಳಿಯ ಒಂದು ಚಿಕ್ಕ ಗ್ರಾಮ. ಇಲ್ಲಿ ಕೇಶವನ ಗುಡಿಯನ್ನು ಕಟ್ಟಿಸಿ ದತ್ತಿ ಒದಗಿಸಿದವನು ಒಂದನೇ ನರಸಿಂಹನ ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ. ದೇವಾಲಯದ ಹೊರಭಾಗದಲ್ಲಿ ಇರಿಸಿರುವ ಶಾಸನದಲ್ಲಿ ದೇವಾಲಯ ನಿರ್ಮಾಣ ಮತ್ತು ಅದರ ನಿರ್ವಹಣೆಗೆಂದು ಭೂಮಿಯನ್ನು ದಾನನೀಡಿದ ವಿವರಣೆಯಿದೆ. ಒಕ್ಕಣೆಗೆ ಸಾಕ್ಷೀಭೂತನಾಗಿ ಶಾಸನದ ಮೇಲುಭಾಗದಲ್ಲಿ ಕಾಮಧೇನು, ಸೂರ್ಯ,ಚಂದ್ರ, ಪರಿವಾರದೊಡನೆ ಸ್ವಯಂ ಕೇಶವನೇ ನಿಂತಿದ್ದಾನೆ.
ಮುಖ್ಯದ್ವಾರಪಟ್ಟಕದಲ್ಲೂ ಒಳಗುಡಿಯ ಬಾಗಿಲ ಮೇಲೂ ಲಕ್ಷ್ಮಿಯ ಬಿಂಬವಿದ್ದು ಅದರ ಅಕ್ಕಪಕ್ಕಗಳಲ್ಲಿ ಆನೆಗಳೂ ಚಾಮರಧಾರಿಣಿಯರೂ ಕಾಣಿಸುತ್ತಾರೆ. ದೇಗುಲದೊಳಕ್ಕೆ ಕಾಲಿರಿಸುತ್ತಿದ್ದಂತೆ ಕಾಣುವ ನವರಂಗದ ಭುವನೇಶ್ವರಿ(ಒಳಛಾವಣಿ)ಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆಯಿದೆ. ಗರ್ಭಗುಡಿಯಲ್ಲಿ ಅಪ್ಪಟಹೊಯ್ಸಳ ಶೈಲಿಯ ಚನ್ನಕೇಶವನ ಮನೋಹರವಾದ ಮೂರ್ತಿಯಿದೆ. ದೇಗುಲದ ಜೀರ್ಣೋದ್ಧಾರವಾದ ನಂತರ ಇನ್ನೂ ನಿತ್ಯಪೂಜಾವಿಧಿಗಳು ಪ್ರಾರಂಭವಾಗಿಲ್ಲದಿರುವುದರಿಂದ ಸದ್ಯದಲ್ಲೇ ನೀವು ಹೊನ್ನಾವರಕ್ಕೆ ಹೋದಲ್ಲಿ ಹೂ-ಹೊದಿಕೆಗಳಿಲ್ಲದ ಚನ್ನಕೇಶವನ ಶಿಲ್ಪದ ಭವ್ಯತೆಯನ್ನು ಸಮಗ್ರವಾಗಿ ಕಣ್ತುಂಬಿಕೊಳ್ಳಬಹುದು.
ಹೊರಗೋಡೆಯ ತಳದಿಂದ ನಾಲ್ಕು ಅಡಿ ಎತ್ತರಕ್ಕೆ ಒಳಹೊರಗಿನ ಪದರಗಳ ವಿನ್ಯಾಸದಿಂದ ಶೋಭಿಸುವ ಜಗತಿ (ಜಗಲಿ); ಅಲ್ಲಿಂದ ಮೇಲುಛಾವಣಿಯವರೆಗೆ ನಿಂತ ಕಂಬಗಳು. ಕಂಬಗಳ ನಡುವಣ ಅಂತರವನ್ನೇ ವಿಭಾಗದಂತೆ ಪರಿಗಣಿಸಿ ನಡುನಡುವೆ ಕೀರ್ತಿಮುಖಗಳನ್ನೋ ಕಿರುಗೋಪುರಗಳನ್ನೋ ಬಳ್ಳಿಗಳ ಚಿತ್ತಾರವನ್ನೋ ಬಿಡಿಸಿ ಅವುಗಳ ಕೆಳಭಾಗದಲ್ಲಿ ನಿಲ್ಲಿಸಿರುವ ವಿವಿಧ ಶಿಲ್ಪಗಳನ್ನು ಕಾಣಬಹುದು.
ದೇವತಾಮೂರ್ತಿಗಳನ್ನು ಅಲಂಕೃತ ಗೋಪುರಗಳ ಕೆಳಗೆ ಸ್ಥಾಪಿಸಿದ್ದರೆ, ಶಿಲಾಬಾಲಿಕೆಯರ ಶಿಲ್ಪದ ಮೇಲಿನ ಅವಕಾಶದಲ್ಲಿ ಬಳ್ಳಿಗಳ ಚಿತ್ತಾರವಿದೆ. ಕಟ್ಟಡದ ನಡುನಡುವೆ ಆಸರೆಯಾಗಿರುವ ದೊಡ್ಡಕಂಬಗಳ ಮೇಲೂ ಚಿತ್ತಾರದ ಅಲಂಕಾರವಿದೆ. ಇದರಿಂದಾಗಿ ಒಟ್ಟು ಶಿಲ್ಪಸಮೂಹ ವಿರಳವಾಗಿದ್ದರೂ ಇಡಿಯ ಗೋಡೆ ಶಿಲ್ಪಕಲಾವಿನ್ಯಾಸದಿಂದ ತುಂಬಿರುವಂತೆ ಭಾಸವಾಗುತ್ತದೆ. ಹೊರಗೋಡೆಗಳ ಮೇಲೆ ಕಾಣುವ ಶಿಲ್ಪಗಳಲ್ಲಿ ಮುಖ್ಯವಾಗಿ ಮಹಾವಿಷ್ಣುವಿನ ಚತುರ್ವಿಂಶತಿ ರೂಪಗಳು, ನಿಂತಿರುವ ನರಸಿಂಹ, ಮತ್ಸ್ಯಯಂತ್ರವನ್ನು ಭೇದಿಸುತ್ತಿರುವ ಅರ್ಜುನ, ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹ, ಭೂದೇವಿಯನ್ನು ಹೊತ್ತ ವರಾಹಾವತಾರಿ ವಿಷ್ಣು. ಇನ್ನುಳಿದಂತೆ ದರ್ಪಣ ಸುಂದರಿ, ಒರೆಗತ್ತಿಯ ವೀರ, ವಿಷಕನ್ಯೆ ಮತ್ತವಳ ಸಂಗಾತಿ, ವಾದ್ಯ ನುಡಿಸುವವರು, ಕಳಶ ಹೊತ್ತ ದೇವತೆಯರು ಇದ್ದಾರೆ.
ಏಕಕೂಟಾಚಲ ಮಾದರಿಯ ಗೋಪುರದ ಮೇಲೆ ನಾಲ್ಕು ಸ್ತರಗಳ ಹರವು. ಅನೇಕ ಹೊಯ್ಸಳ ದೇಗುಲಗಳಲ್ಲಿ ಕಾಣಬಹುದಾದ ಸಿಂಹಮುಖಗಳ ಚಿತ್ರವಿನ್ಯಾಸ. ಅವುಗಳೊಳಗೆ ಅಲ್ಲಲ್ಲಿ ದೇವತಾಮೂರ್ತಿಗಳು.
ಕೆಲವು ತಿಂಗಳುಗಳ ಮೊದಲಿಗೆ ಈ ಗ್ರಾಮಕ್ಕೆ ನೀವು ಬಂದಿದ್ದರೆ ಕೇಶವನ ಗುಡಿಯ ಬಗೆಗೆ ನಾನು ಬರೆದಿರುವ ಹೆಚ್ಚಿನ ಯಾವ ವಿವರಣೆಯನ್ನೂ ಗುರುತಿಸುವುದಕ್ಕೂ ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯರಾದ ಶ್ರೀ ಸ್ವಾಮಿಗೌಡರ ನೇತೃತ್ವದಲ್ಲಿ ಗ್ರಾಮಮುಖಂಡರೂ, ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕ ವೇದಿಕೆಯೆಂಬ ಸ್ವಯಂಸೇವಾ ಸಂಘಟನೆಯ ಶ್ರೀ ನಟರಾಜ ಪಂಡಿತ್ ಮತ್ತವರ ಗೆಳೆಯರೂ ಆಸ್ಥೆವಹಿಸಿ ದೇಗುಲದ ಜೀರ್ಣೋದ್ಧಾರಕ್ಕೆ ಉತ್ಸಾಹದಿಂದ ತೊಡಗಿಕೊಂಡರು. ಪುರಾತತ್ತ್ವ ಇಲಾಖೆ ಶ್ರಮವಹಿಸಿ ಕೇಶವ ದೇವಾಲಯವನ್ನು ಸಮಗ್ರವಾಗಿ ಮೂಲರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಅಭಿನಂದನೆಗೆ ಅರ್ಹವಾಗಿರುವ ಇಂತಹುದೇ ಶ್ರದ್ಧೆ, ಆಸಕ್ತಿಯನ್ನು ಇತರರೂ ಪ್ರದರ್ಶಿಸಿದಲ್ಲಿ ಅಳಿವಿನಂಚಿನಲ್ಲಿರುವ ನಾಡಿನ ಹಲವು ಸ್ಮಾರಕಗಳನ್ನು ಸಂರಕ್ಷಿಸಲು ಇನ್ನೂ ಕಾಲ ಮಿಂಚಿಲ್ಲ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.