ಹೌದಲ್ಲ. ಇವಳು ಎಲ್ಲಿಂದ ಬಂದಳು ಎಲ್ಲಿಗೆ ಹೋದಳು? ಸಂಜಯ್ ಲೀಲಾ ಬನ್ಸಾಲಿಯ ವೈಭವಪರದೆಯಲ್ಲಿ ದೀಪಿಕಾಳ ಮೂಲಕ ಅನಾವರಣಗೊಂಡವಳು.. ಕೊಟ್ಟಿಗೆಯಂತಾಗಿದ್ದ ಮನದ ನಡುವಿನಲ್ಲಿ ನೊರೆ ಹಾಲ್ಗರೆದುಕೊಟ್ಟ, ಬಾಜಿರಾಯನ ‘ಮಸ್ತಾನಿ’ಯನ್ನು ಹುಡುಕಿ ನಾನು ಹೊರಟೆ. ಹಾಡುತ್ತಿದ್ದೆ ನಾನೂ “ಕಹತೆ ಹೆ ಯೇ ದಿವಾನಿ ಮಸ್ತಾನೀ ಹೋಗಯೀ…” ಅವಳು ಇರಲೇ ಇಲ್ಲ, ಅವಳು ಮುಸ್ಲಿಂ ಆಗಿರಲಿಲ್ಲ, ಅವಳು ಬಾಜಿರಾಯನಿಗಿಂತ ಮೊದಲೇ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳು ವಗೈರೆ ವಗೈರೆ ಎಂದು ಮಾಧ್ಯಮಗಳು ಟಿಆರ್‌ಪಿ ಸಂಕಷ್ಟದಲ್ಲಿ ಹೊರಳಿ ಧುಮ್ಮಿಕ್ಕುತ್ತಿರುವಾಗ ನಾನು ಹಾಡುತ್ತಿದ್ದೆ “ಜ಼್ಅಖಮ್ ಐಸ ತೂನೇ ಲಗಾಯಾ… ಮರ್ಹಮ್ ಐಸ ತೂನೇ ಲಗಾಯಾ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ”
ಅಂಜಲಿ ರಾಮಣ್ಣ ಬರೆಯುವ `ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಹೊಸ ಬರಹ

ಅವನು ನನ್ನನ್ನು ಎಷ್ಟು ಪ್ರೀತಿ ಮಾಡಬೇಕು ಎಂದರೆ ಅವನಿಗೆ ನಾನು ಅನಿವಾರ್ಯ ಆಗಿಬಿಡಬೇಕು. ಅವನಲ್ಲಿ ನನ್ನ ಬಿಟ್ಟು ಮತ್ತೇನೂ ಉಳಿಯದಷ್ಟು..- ಹೀಗೆ ಒಂದು ಆಸೆ ಇತ್ತು. ಕಾಲನ ಮೈದಾನದಲ್ಲಿ ಒಂದರ ನಂತರ ಮತ್ತೊಂದು ಆಸೆ ಪೆರೇಡ್ ಮಾಡುತ್ತಾ ಮಾಡುತ್ತಾ, ಪ್ರೀತಿ ಎಂದರೆ ಅವನಲ್ಲ ʻನಾನುʼ ಎಂದು ಅರ್ಥ ಮಾಡಿಕೊಳ್ಳುವ ವೇಳೆಗೆ ಅವನೂ ಇರಲಿಲ್ಲ ನಾನೂ ಉಳಿದುಕೊಳ್ಳಲಿಲ್ಲ. ಅರಗಿಸಿಕೊಂಡ ಸತ್ಯ ರಕ್ತಗತವಾದಷ್ಟೂ ಚುಚ್ಚುತ್ತಿರುವಾಗಲೇ ಬಂದಳು ನೋಡಿ ಅವಳು ಹಾಡುತ್ತಾ “ನಜ಼್ಅರ್ ಜೊ ತೇರಿ ಲಾಗಿ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ.”

ಅವನ ಕಣ್ಣಲ್ಲಿ ಹೃದಯವಾಗುತ್ತಾ, ದೃಷ್ಟಿಗೆ ಮಿಡಿತವಾಗುತ್ತಾ “ಮಷ್ಹೂರ್ ಮೇರೆ ಇಷ್ಕ್ ಕಿ ಕಹಾನೀ ಹೋಗಯೀ…” ಎಂದವಳು ಅದೆಷ್ಟು ಪ್ರೀತಿ ಮಾಡಿಬಿಟ್ಟಳು ಅವನನ್ನು. ಮೊದಲ ಬಾರಿಗೆ ಅದೇ ಸತ್ಯದ ಚುಂಗಿನಂತಹ ವಿಷಯ ಕೂಡ ಅರಿವಿಗೆ ಬರಿಸಿದಳು ಅವಳು. ಅದೆಂದರೆ “ಅವನನ್ನು ನಾನು ಅವಳಷ್ಟು ಪ್ರೀತಿ ಮಾಡಲೇ ಇಲ್ಲ, ಅದಕ್ಕೇ ಅವನಿಗೆ ನಾನು ಅನಿವಾರ್ಯ ಎನಿಸಲಿಲ್ಲ” ಮತ್ತೆ ಅವಳು ಹಾಡಾಗುತ್ತಿದ್ದಳು “ಜೋ ಜಗ್ ನೆ ನ ಮಾನಿ ತೊ ಮೇನೇ ಭೀ ಠಾನಿ… ಕಹಾ ಥಿ ಮೆ ದೇಖೋ ಕಹಾ ಚಲಿ ಆಯೀ…”

ಹೌದಲ್ಲ ಇವಳು ಎಲ್ಲಿಂದ ಬಂದಳು ಎಲ್ಲಿಗೆ ಹೋದಳು? ಸಂಜಯ್ ಲೀಲಾ ಬನ್ಸಾಲಿಯ ವೈಭವಪರದೆಯಲ್ಲಿ ದೀಪಿಕಾಳ ಮೂಲಕ, ಕೊಟ್ಟಿಗೆಯಂತಾಗಿದ್ದ ಮನದ ನಡುವಿನಲ್ಲಿ ನೊರೆ ಹಾಲ್ಗರೆದುಕೊಟ್ಟ ಬಾಜಿರಾಯನ ‘ಮಸ್ತಾನಿ’ಯನ್ನು ಹುಡುಕಿ ಹೊರಟೆ. ಹಾಡುತ್ತಿದ್ದೆ ನಾನೂ “ಕಹತೆ ಹೆ ಯೇ ದಿವಾನಿ ಮಸ್ತಾನೀ ಹೋಗಯೀ…” ಅವಳು ಇರಲೇ ಇಲ್ಲ, ಅವಳು ಮುಸ್ಲಿಂ ಆಗಿರಲಿಲ್ಲ, ಅವಳು ಬಾಜಿರಾಯನಿಗಿಂತ ಮೊದಲೇ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳು… ವಗೈರೆ ವಗೈರೆ ಎಂದು ಮಾಧ್ಯಮಗಳು ಟಿಆರ್‌ಪಿ ಸಂಕಷ್ಟದಲ್ಲಿ ಹೊರಳಿ ಧುಮ್ಮಿಕ್ಕುತ್ತಿರುವಾಗ ನಾನು ಹಾಡುತ್ತಿದ್ದೆ “ಜ಼್ಅಖಮ್ ಐಸ ತೂನೇ ಲಗಾಯಾ… ಮರ್ಹಮ್ ಐಸ ತೂನೇ ಲಗಾಯಾ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ”

1699 ಆಗಸ್ಟ್ 29ರಂದು ಬುಂದೇಲ್ಖಂಡದ ರಾಜ ಛತ್ರಸಾಲ ಬುಂದೇಲನಿಗೆ, ರುಹಾನಿ ಬಾಯಿ ಬೇಗಮ್ ಎನ್ನುವ ಉಪರಾಣಿಯಲ್ಲಿ ಹುಟ್ಟಿದವಳು ಮಸ್ತಾನಿ. ಛತ್ರಸಾಲ ಬುಂದೇಲ ಮಹಾರಾಜ ಪ್ರಣಾಮಿ ಪರಂಪರೆಯ ಮೂಲಕ ಹಿಂದು ಮತ್ತು ಮುಸ್ಲಿಮ್ ಮತಗಳನ್ನು ಒಂದು ಮಾಡಲು ಸಾಕಷ್ಟು ಕೆಲಸ ಮಾಡಿದ್ದನಂತೆ. ಆತನ ಮಗಳು, ರಾಜಕುಮಾರಿ ಮಸ್ತಾನಿ ಆ ಕಾಲಕ್ಕೆ ಅಪ್ರತಿಮ ಸುಂದರಿ ಆಗಿದ್ದಳಂತೆ. ಮಸ್ತಾನಿ ಎಂದರೆ ದೀಪಿಕಾಳೇ ಕಣ್ಮುಂದೆ ಬರುವ ಚಟ ತಾಗಿಸಿಕೊಂಡವರಿಗೆ ಗೂಗಲ್‌ನಲ್ಲಿ ನಿಜದ ಮಸ್ತಾನಿಯ ಚಿತ್ರಪಟ ನೋಡಿದರೆ “ಏನು? ಇದು ಸೌಂದರ್ಯವೇ?!” ಎನಿಸಿಬಿಡುತ್ತೆ.

ಕುಸುಮ್ ಚೋಪ್ರ ಎಂಬಾಕೆ ಮಸ್ತಾನಿಯ ಬಗ್ಗೆ ವರ್ಷಾನುಕಾಲ ಸಂಶೋಧನೆ ಮಾಡಿ ಬರೆದಿರುವ ಪುಸ್ತಕದಲ್ಲಿ ಹೇಳುತ್ತಾರೆ “ಮಸ್ತಾನಿ ಅತ್ಯಂತ ಸುಂದರಿ, ವಿಪರೀತ ಬುದ್ಧಿವಂತೆಯಾಗಿದ್ದ ಕ್ಷತ್ರಿಯಳು. ಅವಳು ಕೃಷ್ಣನನ್ನು ಆರಾಧಿಸುತ್ತಿದ್ದಳು. ಪಾಕಶಾಸ್ತ್ರ, ಚಿತ್ರಕಲೆ, ನೃತ್ಯ, ಸಂಗೀತದಲ್ಲಿ ಪ್ರವೀಣೆ ಮಾತ್ರವಲ್ಲ, ಕುದುರೆ ಸವಾರಿ, ಯುದ್ಧ ನೀತಿ ಮತ್ತು ರಾಯಭಾರ ತಂತ್ರಗಳಲ್ಲಿ ಜಗತ್ತನ್ನು ಬೆರಗಾಗಿಸುತ್ತಿದ್ದಳು. ಅವಳು ಎಂದೂ ಇಸ್ಲಾಂ ಧರ್ಮದ ಪದ್ಧತಿಯನ್ನು ಅನುಸರಿಸಲೇ ಇಲ್ಲ ಆದರೆ ಶತ್ರುಗಳು ಅವಳಿಗೆ ಮುಸ್ಲಿಮ್ ಎನ್ನುವ ಹಣೆಪಟ್ಟಿ ಕಟ್ಟಿ ಅವಳನ್ನು ಎಲ್ಲರಿಂದ, ಎಲ್ಲದರಿಂದ ದೂರ ಇರುವಂತೆ ನೋಡಿಕೊಳ್ಳುತ್ತಿದ್ದರು.” ಹೂಂ, ನನಗೆ ಈ ಯಾವ ಮಾಹಿತಿಯೂ ಬೇಕಿರಲಿಲ್ಲ, “ಪೆಹ್ಚಾನ್ ಮೆರೆ ಇಷ್ಕ್ ಕಿ ಅಬ್ ತೋ… ರವಾನಿ ರವಾನಿ ರವಾನಿ ಹೋಗಯೀ…” ಹಾಡಿಕೊಳ್ಳುತ್ತಲೇ ಹುಡುಕಾಟ ಮುಂದುವರೆಸಿದ್ದೆ.

ಮಹಾರಾಷ್ಟ್ರ ರಾಜ್ಯದ ಪೂನ ಜಿಲ್ಲೆಯಿಂದ 60 ಕಿಲೋಮೀಟರ್ ದೂರದಲ್ಲಿ ಇರುವ ಶಿರೂರು ತಾಲೂಕಿನ ಗ್ರಾಮ ಪಾಬಲ್‌ಗೆ ಬಂದು ನಿಂತೆ. ಬೆಳಗ್ಗೆ 6.30 ಆಗಿತ್ತು. ತಲೆ ಮೇಲೆ ಸೆರಗು ಹೊದ್ದ ಒಂದಿಬ್ಬರು ಹೆಂಗಸರು ಪಂಚಾಯ್ತಿ ಕಟ್ಟೆಯನ್ನು ಮಟ್ಠಾಳೆ ಪರಕೆಯಲ್ಲಿ ಗುಡಿಸುತ್ತಿದ್ದರು. ಬಿಳಿ ಟೊಪ್ಪಿಗೆ, ಧೋತಿ ಧರಿಸಿದ ಒಬ್ಬಿಬ್ಬರು ಗಂಡಸರು ಅತ್ತಿಂದ ಇತ್ತ ಕಾಣುತ್ತಿದ್ದರಷ್ಟೇ. ಎಮ್ಮೆ ಗೊರಸು ನೆಕ್ಕುತ್ತಿತ್ತು, ಸೂರ್ಯ ಇನ್ನೂ ಪೂರ್ತಿ ಎದ್ದಿರಲಿಲ್ಲ. ಮಸ್ತಾನಿಯ ನೆನಪಿನಲ್ಲಿ ಎದ್ದಿದ್ದ ಧೂಳು, ಸಗಣಿಯ ಘಮ ಎಲ್ಲವೂ ಹಿತವೇ ಎನಿಸುತ್ತಿತ್ತು. ಕಪ್ಪು ಮಣ್ಣಿನಲ್ಲಿ ಅಲ್ಲಲ್ಲಿ ಬಿದ್ದಿದ್ದ ಕೊಚ್ಚೆ ಕೂಡ “ಸಬ್ ನೂರ್ ನೂರ್ ಸಾ ಬಿಖ್ರಾ ಹೇ… ಏಕ್ ತೂ ಹೀ ಖಯಾಲೋಮೆ ಉತ್ರಾ ಹೇ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ”

“ಮಸ್ತಾನಿ ಸಮಾಧಿ ಎಲ್ಲಿದೆ?” ಎಂದು ಕೇಳಿದೆ ಒಂದೇ ಪೆಡಲ್‌ನಲ್ಲಿ ಸೈಕಲ್ ಹೊಡೆಯುತ್ತಿದ್ದ ಆ ಹುಡುಗನನ್ನು. ತುಂಬಾ ದೊಡ್ಡ ಮೈದಾನ ಅದಕ್ಕೊಂದು ಅತಿದೊಡ್ಡ ಮರದ ಕಮಾನು ಬಾಗಿಲು ಅದನ್ನು ತೋರಿಸಿ ಅದರ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದರೆ ಕಾಣುತ್ತದೆ ಎಂದ. ಹಾಗೆ ಮಾಡಿದಾಗ ಕಂಡಿದ್ದು, ಹಿರಿಯ ಮುಸ್ಲಿಮ್ ಒಬ್ಬರು ಹಸಿರು ಚಾರದ ಹೊದ್ದ ದರ್ಗಾದ ಸುತ್ತಲು ಗುಡಿಸುತ್ತಿದ್ದರು. ಅವರನ್ನು ಮಾತನಾಡಿಸುತ್ತಲೇ ಒಳ ಹೊಕ್ಕೆ. ಅಲ್ಲಿ ಮಲಗಿದ್ದಳು ಬಾಜಿರಾಯನಿಗಾಗಿ ದಿವಾನಿ ಆಗಿದ್ದ ಮಸ್ತಾನಿ. ಅದೆಷ್ಟು ಮೌನ. ಸದ್ದು ಕೂಡ ತನ್ನ ಮೌನವನ್ನು ಇಲ್ಲಿ ಅನುಭವಿಸುವಷ್ಟು ನಿಶಬ್ಧ.

ಮೊದಲ ಬಾರಿಗೆ ಅದೇ ಸತ್ಯದ ಚುಂಗಿನಂತಹ ವಿಷಯ ಕೂಡ ಅರಿವಿಗೆ ಬರಿಸಿದಳು ಅವಳು. ಅದೆಂದರೆ “ಅವನನ್ನು ನಾನು ಅವಳಷ್ಟು ಪ್ರೀತಿ ಮಾಡಲೇ ಇಲ್ಲ, ಅದಕ್ಕೇ ಅವನಿಗೆ ನಾನು ಅನಿವಾರ್ಯ ಎನಿಸಲಿಲ್ಲ” ಮತ್ತೆ ಅವಳು ಹಾಡಾಗುತ್ತಿದ್ದಳು “ಜೋ ಜಗ್ ನೆ ನ ಮಾನಿ ತೊ ಮೇನೇ ಭೀ ಠಾನಿ… ಕಹಾ ಥಿ ಮೆ ದೇಖೋ ಕಹಾ ಚಲಿ ಆಯೀ…”

1740 ಏಪ್ರಿಲ್ 28ರಂದು ತೀರಿಕೊಂಡ ಮಸ್ತಾನಿಯನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಅವಳು ಶನಿವಾರ ವಾಡಕ್ಕೆ ಬಂದಾಗಿನಿಂದ ಗುರು ಎಂದು ಪೂಜಿಸುತ್ತಿದ್ದ ಬಾಬುರಾವ್ ಅವರ ಸಮಾಧಿಯ ಪಕ್ಕದಲ್ಲಿ ಮಸ್ತಾನಿ ಮಲಗಿದ್ದಾಳೆ ಗೋರಿಯ ಒಳಗೆ. ಬಣ್ಣಗೆಟ್ಟ ಬೋರ್ಡ್ ಒಂದು ಆ ಜಾಗವನ್ನು ‘ಪಕೀಜ ಬಾಬ ದರ್ಗ’ ಎಂದು ಗುರುತಿಸಿತ್ತು. 2000 ಚದರ ಅಡಿ ಜಾಗದಲ್ಲಿ ಬಾಬು ರಾವ್ ಅವರ ಪರಂಪರೆಯ ಎಲ್ಲಾ ಶಿಷ್ಯರನ್ನು ಕಳೆದ 400 – 500 ವರ್ಷಗಳಿಂದ ಇಲ್ಲಿ ಮಣ್ಣು ಮಾಡಲಾಗಿದೆ. ಮೂರು ಮರದ ಬಾಗಿಲುಗಳು ಇರುವ ಅಂಗಳದ ಮತ್ತೊಂದು ಕಡೆ ನಮಾಜ಼್ ಮಾಡಲು ಅನುಕೂಲವಾಗುವಂತೆ, ಮರದ ದಿಮ್ಮಿಗಳನ್ನು ನಿಲ್ಲಿಸಿ, ಸ್ವಲ್ಪ ಎತ್ತರದ ಒಂದು ಹಜಾರ ಇದೆ. ಕಾಲಾನುಕಾಲದಲ್ಲಿ ಪೂರ್ತಿ ಜಾಗಕ್ಕೆ ಚೌಕವಾಗಿ ಕಟ್ಟಿದ ಗೋಡೆಗಳಿಂದ ರಕ್ಷಣೆ ನೀಡಲಾಗಿದೆ. ಮಸ್ತಾನಿ ಸಮಾಧಿಯ ಮೇಲೆ ಹುಲುಸಾಗಿ ತುಳಸಿ ಗಿಡ ಬೆಳೆಸಲಾಗಿತ್ತು. ಮೂಲ ಗುರುವಿನ ಸಮಾಧಿಗೆ ಮಾತ್ರ ಹಸಿರು ಚಾದರ ಹೊದಿಸಲಾಗಿತ್ತು. ಅಲ್ಲೊಂದು ದೀಪದ ಗೂಡು. ಈಗಲೂ ಕತ್ತಲು ಕಳೆಯಲು ನನ್ನೊಡನೆ ಮಾತನಾಡಿದ ಮೊಹಮ್ಮದ್ ಇನಾಮ್ದಾರ್ (ಬಾಬು ರಾವ್ ಪರಂಪರೆಗೆ ಸೇರಿದ ಶಿಷ್ಯ) ಅಲ್ಲಿ ದೀಪ ಬೆಳಗುತ್ತಾರೆ.

ಮಸ್ತಾನಿ ಯಾಕೆ ಸತ್ತಳು, ಹೇಗೆ ಸತ್ತಳು ಯಾರಿಗೂ ಗೊತ್ತಿಲ್ಲ ಎಂದ ಮೊಹಮ್ಮದ್ ಕಾಂಪೌಂಡ್‌ನ ಸಣ್ಣ ಮರದ ಗೇಟ್‌ಗೆ ಚಿಲಕ ಹಾಕಿಕೊಂಡು ನನ್ನೊಬ್ಬಳನ್ನೇ ಕುಳಿತಿರಲು ಹೇಳಿ ಎಲ್ಲಿಯೋ ಹೋದರು. ಮಸ್ತಾನಿ ತನ್ನ ಬೆರಳಿನಲ್ಲಿ ಇದ್ದ ವಜ್ರದ ಉಂಗುರ ತಿಂದು ಸತ್ತಳು ಎನ್ನುವ ಗಾಳಿ ಮಾತೊಂದನ್ನು ನಂಬಿ ಪುಂಡರ ಗುಂಪೊಂದು 2009ರಲ್ಲಿ ಮಸ್ತಾನಿಯ ಗೋರಿಯನ್ನು ಪಿಕಾಸಿ ಗಾರೆಗಳಿಂದ ಕೆದಕಿ ಓಡಿದ್ದರಂತೆ. ಪಾಬಲ್ ಹಳ್ಳಿಯ ಹಿಂದು ಮತ್ತು ಮುಸ್ಲಿಮ್ ನಿವಾಸಿಗಳ ಒತ್ತಡಕ್ಕೆ ಮಣಿದು ಒಂದು ತಿಂಗಳ ಅವಧಿಯಲ್ಲಿ ಪುರಾತತ್ವ ಇಲಾಖೆ ಅದನ್ನು ರಿಪೇರಿ ಮಾಡಿಸಿತಂತೆ. ಇವರಿಗೆ ಸಮಾಧಿ ಅವರಿಗೆ ಮಜ಼್ಅರ್ ಆಗಿರುವ ಈ ಜಾಗದ ಉಸ್ತುವಾರಿಯನ್ನು ಬಾಜಿರಾವ್ ಮಸ್ತಾನಿ ಟ್ರಸ್ಟ್ ಈಗ ವಹಿಸಿಕೊಂಡಿದೆಯಂತೆ.

ಮಸ್ತಾನಿಯ ಮತ್ತಷ್ಟು ಕುರುಹುಗಳನ್ನು ಹುಡುಕಿ ಶನಿವಾರ ವಾಡೆಕ್ಕೂ ಮೂರನೆಯ ಬಾರಿ ಹೋಗಿದ್ದೆ. ಅಲ್ಲಿ ಅವಳ ಮಹಲ್ ಎಂದೂ ಇರಲಿಲ್ಲ. ಪುನೆಯ ಬಳಿ ಕೊತ್ರೂಡ್ ಎನ್ನುವ ಜಾಗದಲ್ಲಿ ಪೇಶ್ವೆ ಬಾಜಿರಾಯ ಮಸ್ತಾನಿಗಾಗಿ ಮಹಲನ್ನು ಕಟ್ಟಿಸಿದ್ದನಂತೆ. ಆದರೆ ಈಗ ಅದೂ ಅಲ್ಲಿಲ್ಲ. ಅಲ್ಲಿಯ ಬಾಗಿಲು ಕಿಟಕಿಗಳನ್ನು ತಂದು ಪುನೆಯ ರಾಜ ದಿನಕರ್ ಖೇಲ್ಕರ್ ಸಂಗ್ರಹಾಲಯದಲ್ಲಿ ಅದರ ನಮೂನೆಯನ್ನು ಡಾ.ಡಿ ಜಿ ಖೇಲ್ಕರ್ (ಸಂಗ್ರಹಾಲಯದ ಸಂಸ್ಥಾಪಕ) ಅವರು ತಯಾರು ಮಾಡಿ ನಮ್ಮಂತಹ ಪಾಗಲ್ ಪ್ರೇಮಿಗಳಿಗೆ ನೋಡಲು ಇಟ್ಟಿದ್ದಾರೆ.

“ಜೋ ಜಗ್ ನೆ ನ ಮಾನಿ ತೊ ಮೇನೇ ಭೀ ಠಾನಿ… ಕಹಾ ಥಿ ಮೆ ದೇಖೋ ಕಹಾ ಚಲಿ ಆಯೀ…” ಗುಣುಗುಣಿಸುತ್ತಾ ಪಾಬಲ್ ಹಳ್ಳಿಯಿಂದ ಹೊರಟು ಶಿರೂರು ದಾರಿಯಲ್ಲಿ ಸಿಕ್ಕ ಜನಗಳನ್ನು ಮಾತನಾಡಿಸುತ್ತಾ ಮಳ್‌ಠಣ್ ವಾಡ (ಇದು ಪವಾರ್ ವಂಶಸ್ಥರ ಕೋಟೆ) ನೋಡಿಕೊಂಡು ಮುಂದಿನ ಹಳ್ಳಿಗೆ ಹೊರಟೆ.


ಹಾಂ, ಮೊಹಮ್ಮದ್ ಹಾಗೆ ನನ್ನೊಬ್ಬಳನ್ನೇ, ಭೀಮಾ ನದಿಯ ದಂಡೆಯ ಬಳಿ ಇರುವ ಮಸ್ತಾನಿ ಸಮಾಧಿಯ ಬಳಿ ಕೂರಿಸಿ ಹೋದವರು ಹಿಂದಿರುಗಿದ್ದು ಒಂದೂವರೆ ಗಂಟೆಯ ನಂತರ. ಅಲ್ಲಿಯವರೆಗೂ ತಂಪುಗಾಳಿಯಲ್ಲಿ ಮಸ್ತಾನಿಯ ಬೇಗುದಿಗೆ ಮನಸ್ಸು ನೀಡಿದ್ದೆ. ಅವಳು ನಕ್ಕಳು, ಕಣ್ಣೀರಾದಳು, ಅಟ್ಟಹಾಸವಿತ್ತಳು, ಸುಮ್ಮನಾದಳು, ಅಮ್ಮನಂತೆ ಮರುಗಿದಳು, ಗೆಜ್ಜೆಯಂತೆ ಸದ್ದಾದಳು, ಝುಳುಝುಳು ಹರಿದುಬಿಟ್ಟಳು, ಧ್ವನಿಯಲ್ಲಿ ಪ್ರತಿಧ್ವನಿಸಿದಳು, ಶೂರತ್ವ ತೋರಿ ನನ್ನೊಳಗಿನ ಮಾತುಗಳನ್ನು ಕಿತ್ತು ಕೆದರಿದಳು. ಬಿಸಿಲು ಏರುತ್ತಿತ್ತು. ಬಿಟ್ಟು ಹೋಗಿದ್ದವರ ನೆರಳು ಕೊನೆಗಣ್ಣಿಗೆ ಕಂಡು ಎಚ್ಚೆತ್ತೆ. ಒಂದು ಇಷ್ಕ್‌ನ ಕಹಾನಿ ಮಷ್ಹೂರ್ ಆಗಿ ಥಣ್ಣಗೆ ಮಣ್ಣಲ್ಲಿ ಮಣ್ಣಾಗಿದ್ದನ್ನು ಅನುಭವಿಸಿದ್ದೆ. “ನಜ಼್ಅರ್ ಜೊ ತೇರಿ ಲಾಗಿ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ” ಎಂದು ಮತ್ತೆ ಮತ್ತೆ ಹಾಡಿಕೊಳ್ಳುತ್ತಾ ಹಿಂತಿರುಗುತ್ತಿದ್ದವಳನ್ನು ಪೂರ್ತಿ ಪ್ರಯಾಣದಲ್ಲಿ ಕಾಡಿದ್ದು ಕುಸುಮ್ ಚೋಪ್ರ ಅವರ ಮಾತು “ಮಸ್ತಾನಿ ಅತಿಲೋಕ ಸುಂದರಿ ಆಗಿದಿದ್ದೇ ಅವಳಿಗೆ ಮುಳುವಾಯಿತು”. ಮಸ್ತಾನಿಗಳನ್ನು ದಿವಾನಿಗಳನ್ನಾಗಿ ಮಾಡುವ ಪೇಶ್ವೇಗಳಿಗೆ ಪ್ರೀತಿ ಎನ್ನುವ ಹೆಸರೇನು?!