ಕನ್ನಡ ಸಿನೆಮಾ ಪುರಂದರದಾಸ ಮತ್ತು ಕನಕದಾಸರನ್ನು ಅರಿವಿಗೆ ದಕ್ಕಿಸಿಕೊಂಡ ರೀತಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದೇ ಇರುವುದು ಕಷ್ಟ. ಎರಡೂ ಕಥಾನಕಗಳಲ್ಲಿ ಸಾಮಾನ್ಯ ಅಂಶಗಳಿರುವುದೂ ಸರಿಯೆ. ಉದಾಹರಣೆಗೆ ಬ್ರಾಹ್ಮಣ, ಬ್ರಾಹ್ಮಣೀಯತೆ, ಬ್ರಾಹ್ಮಣಿಕೆ ಮುಂತಾದ ಪರಿಕಲ್ಪನೆಗಳು ಎರಡರಲ್ಲೂ ಸಾಕಷ್ಟು ಲೇವಡಿಗೆ ಒಳಗಾಗುತ್ತವೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನಂಶ ಎಲ್ಲ ಸಂತಚರಿತೆಗಳಲ್ಲಿ ಅದು ಸಾಮಾನ್ಯವೇ. ಕನಕ ಒಬ್ಬ ಅಬ್ರಾಹ್ಮಣ. ಕ್ಷತ್ರಿಯನೊ ಕುರುಬನೋ ಆಗಿದ್ದಿರಬೇಕು. ಚಿತ್ರದ ಹೆಚ್ಚಿನಂಶ ಅವನು ಬ್ರಾಹ್ಮಣ ವಿರೋಧವನ್ನು ನಿಭಾಯಿಸುವುದಕ್ಕೇ ಮೀಸಲಾಗುತ್ತದೆ. ಅವರಿಗಿಂತ ಅವನು ಹೇಗೆ ‘ಹೆಚ್ಚು’ ಬುದ್ಧಿವಂತ, ವಿವೇಕಿ, ಮತ್ತು ಅವನೂ ಸಹ ತನ್ನ ಪರಮಭಕ್ತಿಯ ಕಾರಣದಿಂದ ಮೋಕ್ಷಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸಲು ಚಿತ್ರ ಉದ್ದಕ್ಕೂ ಹೆಣಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನಾರನೆಯ ಬರಹ
ಮೊನ್ನೆ ಒಬ್ಬ ಮನಶಾಸ್ತ್ರಜ್ಞ-ಪ್ರಾಧ್ಯಾಪಕ-ಸ್ನೇಹಿತರು ದಾಸಸಾಹಿತ್ಯದ ಮೇಲೆ ಪುಂಖಾನುಪುಂಖವಾಗಿ ಭಾಷಣ ಬಿಗಿದ ಅವರ ಸ್ನೇಹಿತರು ಕನ್ನಡದ ಎಲ್ಲ ದಾಸರನ್ನು ಉಲ್ಲೇಖಿಸಿದರೂ ಸಹ ಕನಕದಾಸರನ್ನು ಪಟ್ಟಿಯಿಂದ ಬಿಟ್ಟ ಬಗ್ಗೆ ಹೇಳಿದರು. ಭಾಷಣ ಮುಗಿದ ಮೇಲೆ ‘ಹೇಗಿತ್ತು?’ ಎಂದು ಕೇಳಿದರಂತೆ. ಇವರು ಅವರ ಉದ್ದೇಶಿತ-ಅಲಕ್ಷ್ಯದ ಬಗ್ಗೆ ಹೇಳಿದ ಮೇಲೆ ವ್ಯಂಗ್ಯವಾಗಿ ‘ಪುರಂದರದಾಸರಿಗಿಂತಲೂ ಹಿಂದಿನ adidas (ಆದಿದಾಸರು!) ಬಿಟ್ರಲ್ಲಾ ಸಾರ್!’ ಎಂದಾಗ ಆತನಿಗೆ ವ್ಯಂಗ್ಯ ತಿಳಿಯಿತೋ ಇಲ್ಲವೋ!
ಈ ಅಲಕ್ಷ್ಯ ಕನ್ನಡ ಸಿನಿಮಾದಲ್ಲಿ ಇನ್ನೊಂದು ರೂಪವನ್ನು ಪಡೆದುಕೊಳ್ಳುತ್ತದೆ.
ಎಲ್ಲರಿಗೆ ತಿಳಿದಿರುವಂತೆ ಕರ್ನಾಟಕದ ವಿಷಯದಲ್ಲಿ ‘ರಾಷ್ಟ್ರ-ಪ್ರಾಂತ್ಯ’ಗಳ ಸಂಬಂಧ ತಾಯಿ ಮಗಳ ಸಂಬಂಧದ ರೀತಿಯಲ್ಲಿ ಪರಿಕಲ್ಪಿಸಲಾಗಿತ್ತು (‘ಜೈಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!’) ಪೌರಾಣಿಕ ಸಿನಿಮಾದಲ್ಲಿ ಸಹ ಕನ್ನಡಪ್ರಜ್ಞೆ ಕಾಣಿಸಿಕೊಂಡಿದ್ದುಂಟು. ಉದಾಹರಣೆಗೆ ‘ಭೂಕೈಲಾಸ’ (1958) ರಲ್ಲಿ ರಾಮಾಯಣದ ಹನುಮಂತನನ್ನು ‘ಕನ್ನಡ ಕವಿಪುಂಗವ’ ಎಂದು ಆರಾಧಿಸಲಾಗಿತ್ತು.
ಉಪರಾಷ್ಟ್ರೀಯ ಪ್ರಜ್ಞೆ, ಪ್ರಾಂತೀಯ ಪ್ರಜ್ಞೆ, ಕನ್ನಡ ಪ್ರಜ್ಞೆ ಇತ್ಯಾದಿ ಯಾವ ಹೆಸರಿನಿಂದ ಕರೆದರೂ ಸರಿಯೆ, ಅವೆಲ್ಲ ಹೊಮ್ಮಿದ್ದು ರಾಜವಂಶ ಕೇಂದ್ರಿತ ಐತಿಹಾಸಕಗಳಲ್ಲಷ್ಟೇ ಅಲ್ಲ, ಚರಿತ್ರೆಯಲ್ಲಿ ಕಾಣಿಸಿಕೊಂಡ ವ್ಯಕ್ತಿಗಳ ಸುತ್ತ ಹೆಣೆದ ಭಕ್ತಿಪ್ರಧಾನಕಗಳಲ್ಲಿ ಸಹ ಅವನ್ನು ಕಾಣಬಹುದು.
‘ಜಗಜ್ಯೋತಿ ಬಸವೇಶ್ವರ’ (1959); ‘ಶ್ರೀ ಪುರಂದರ ದಾಸರು’ (1963); ‘ಸರ್ವಜ್ಞಮೂರ್ತಿ’ (1965) ಅವುಗಳಲ್ಲಿ ಕೆಲವು. ಮರಾಠಿ ಪ್ರಾಂತ್ಯದ ‘ಸಂತ ಸಕ್ಕೂ’ ಬಿಟ್ಟರೆ ಕನ್ನಡ ನಾಡಿನಿಂದಲೇ ಹೊಮ್ಮಿದ ಅಕ್ಕಮಹಾದೇವಿಯಂಥ ವಚನಕಾರ್ತಿಯೂ ಸಹ ಕನ್ನಡ ಭಕ್ತಿಪ್ರಧಾನಕಗಳಲ್ಲಿ ಕೇಂದ್ರವಾಗಿ ಕಾಣಿಸಿಕೊಳ್ಳುವುದಿಲ್ಲ.
ಜಾನ್ ಸ್ಟ್ರಾಟನ್ ಹಾಲಿ (John Stratton Hawley) ಎಂಬ ಚಿಂತಕನ ಸಂಪಾದಿತ ಕೃತಿ Bhakti Movement — Says Who? ನ ಪ್ರವೇಶಿಕೆಯಲ್ಲಿ ಪರಸ್ಪರ ತಳುಕು ಹಾಕಲ್ಪಟ್ಟ ಭಾರತೀಯ ರಾಷ್ಟ್ರೀಯತೆ ಮತ್ತು ಭಕ್ತಿ ಚಳುವಳಿಗೆ ಸಂಬಂಧಪಟ್ಟಂತೆ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಎತ್ತುತ್ತದೆ.
ಆ ಪ್ರಕಾರ ಸಾಮಾಜಿಕವಾಗಿ ಪ್ರಗತಿಪರ ಎಂದು ಕರೆಯಬಹುದಾದ ಚಳುವಳಿಯೊಂದು ಸುಸಂಬದ್ಧವಾಗಿ ರೇಖಾತ್ಮಕವಾಗಿ ಸಾಗಿತು ಎನ್ನುವ ಪರಿಕಲ್ಪನೆ ಭಾರತೀಯ ರಾಷ್ಟ್ರೀಯತಾ ಕಾರ್ಯಸೂಚಿಯ ಒಂದು ಭಾಗ ಅಷ್ಟೇ. ಹಿಂದೊಮ್ಮೆ ರಾಷ್ಟ್ರದಾದ್ಯಂತ ಹೀಗೊಂದು ‘ಆಂದೋಲನ’ ನಡೆದಿತ್ತು ಎಂದು ಪರಿಭಾವಿಸುವುದು ಸಧ್ಯಕ್ಕೆ ರಾಷ್ಟ್ರವಾಗಿ ತಮ್ಮ ಅಸ್ಮಿತೆ ಕಂಡುಕೊಳ್ಳಲು ಚರಿತ್ರೆಯನ್ನು ಕಟ್ಟುವ ಅನಿವಾರ್ಯದ ಭಾಗ.
ಹಾಲಿಯ ಅಭಿಪ್ರಾಯದ ಸಾರಾಂಶ ಹೀಗಿದೆ: ಹಿಂದಿ (ಉದಾಹರಣೆಗೆ ‘ಅಂದೋಲನ್’) ಪದಗಳನ್ನು ಮತ್ತು ಪರಿಕಲ್ಪನೆಗಳನ್ನು ಇಂಗ್ಲೀಷಿಗೂ ಸಲೀಸಾಗಿ ಜಾರಿಸುತ್ತಾ ಭಾರತದ ಧಾರ್ಮಿಕ ಚರಿತ್ರೆಯನ್ನು ಈ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದ್ದು ಈ ಭಕ್ತಿ ಚರಿತ್ರೆ ರಾಷ್ಟ್ರೀಯ ಕಥಾನಕದ ರೂಪವನ್ನು ಪಡೆದಿದೆ. ಇದು ಪ್ರಸ್ತುತ ಕಾಲದ ರಾಜಕೀಯ ಯೋಜನೆಗಳನ್ನು ಎಷ್ಟು ಮಹತ್ತರವಾಗಿ ಪ್ರಭಾವಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಪರಿಸ್ಥಿತಿಯಲ್ಲಿ ‘ರಾಷ್ಟ್ರರೂಪಿ ಭಕ್ತಿ ಚಳುವಳಿ’ ಎನ್ನುವ ಪರಿಕಲ್ಪನೆಯನ್ನು ಮರು ವಿಮರ್ಶೆಗೆ ಒಳಪಡಿಸುವುದು ಅತ್ಯಗತ್ಯ.
ಆಗ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಭಾರತೀಯ ಧಾರ್ಮಿಕ ಚರಿತ್ರೆಯಲ್ಲಿ ‘ಭಕ್ತಿ ಚಳುವಳಿ’ ನಿಜವಾಗಿಯೂ ಅಷ್ಟೊಂದು ಮಹತ್ವದ್ದೆ? ಇಷ್ಟಕ್ಕೂ ಇದು ಭಾರತದ ಉದ್ದಗಲಕ್ಕೂ ನಡೆದ ಒಂದು ಬೃಹತ್ ಚಳುವಳಿಯೆ? ಸಾರಾಂಶೀಕರಿಸಿ ಹೇಳುವುದಾದರೆ ಯಾರ ಪ್ರಕಾರ ಇದು ‘ಭಕ್ತಿ ಚಳುವಳಿ’? ಯಾವಾಗಿನಿಂದ?
ಶಂತನು ಫುಕನ್ ಎಂಬ ಚಿಂತಕ ಸ್ಪಷ್ಟಪಡಿಸುವಂತೆ ‘ಭಕ್ತಿ’ ಎಂಬುದನ್ನು ಭಕ್ತಿ-ಸಾಹಿತ್ಯ, ಅಥವಾ ಸ್ತುತ್ಯಾತ್ಮಕ ಜೀವನಕಥೆಗಳಲ್ಲಿರುವ ಒಂದು ಪ್ರತ್ಯೇಕ ತತ್ವವಾಗಿ ಅಥವಾ ಸಿದ್ಧಾಂತವಾಗಿ ನೋಡದೆ ಭಕ್ತಿಯ ಹಲವಾರು ಕಲಾರೂಪಗಳನ್ನು ಅಂತರಪಠ್ಯೀಯ ನೆಲೆಯಲ್ಲಿ ಒಂದು ಪ್ರವಾಚಿಕೆಯಾಗಿ ಗ್ರಹಿಸುವ ಅಗತ್ಯವಿದೆ. ಹಾಗಾದರೆ ಎಲ್ಲವೂ ಸುಸ್ಪಷ್ಟವಾಗುತ್ತದೆ ಎಂದಲ್ಲ. ಭಕ್ತಿ ಮತ್ತು ಸಾಮಾಜಿಕ ಶಕ್ತಿಗಳ ನಡುವಿನ ಸಂಧಾನ ಚರಿತ್ರೆಯುದ್ದಕ್ಕೂ ಗ್ರಹಿಕೆಗೆ ಮತ್ತು ಅಭಿವ್ಯಕ್ತಿಗೆ ಸುಲಭವಾಗಿ ಸಿಗದಂತಾದ್ದು. ಅಲ್ಲಿ ತಾತ್ವಿಕವಾಗಿ ಪ್ರಗತಿಪರ ಆಶಯ ಇರಬಹುದಾದರೂ ಸಾಮಾಜಿಕ ಬದುಕಿನಲ್ಲಿ ಮರೆಯಾಗಿರುವುದೇ ಹೆಚ್ಚು.
ಇದಕ್ಕೆ ಪೂರಕವಾಗಿ ಆದಿತ್ಯ ಬೇಲ್ ತಮ್ಮ Presence and Absence in Bhakti ಎಂಬ ಲೇಖನದಲ್ಲಿ ಭಕ್ತಿ ಎಂಬ ವಿದ್ಯಮಾನ ತನ್ನಿಂತಾನೇ ಉದಯವಾದದ್ದಲ್ಲ. ಅದನ್ನೊಂದು ಕರೆ-ಪ್ರತಿಕ್ರಿಯೆಗಳ ಚಾರಿತ್ರಿಕ ಅನುಸಂಧಾನವನ್ನಾಗಿ ಗ್ರಹಿಸಬೇಕು ಎನ್ನುತ್ತಾರೆ. ಅಲ್ಲಿ ಭಕ್ತಿಯ ಸಾಕಾರವೊಂದು ಇದೆ, ಅದಕ್ಕೆ ನಾವು ಎದಿರಾಗುತ್ತಿದ್ದೇವೆ ಎಂದು ಭಾವಿಸುವುದಕ್ಕಿಂತ ಎದುರುಬದುರಾಗಿರುವ ಕನ್ನಡಿಗಳಿಂದ ತುಂಬಿದ (hall of mirrors) ಅಥವಾ ಧ್ವನಿ-ಪ್ರತಿಧ್ವನಿಗಳ ಕೋಣೆಯಾಗಿ (echo chamber) ಪರಿಕಲ್ಪಿಸಿಕೊಳ್ಳಬೇಕು. ಇಲ್ಲದಿದ್ದರೆ ಇರುವ ಒಂದೇ ಗೋಡೆಯನ್ನು ಕೋಣೆ ಎಂದು ಗ್ರಹಿಸುವ ಆಭಾಸವಾಗುತ್ತದೆ.

ಇದೇ ಕೃತಿಯಲ್ಲಿ ಕ್ರಿಶ್ಚಿಯನ್ ಲೀ ನೊವೆಟ್ಸ್ಕಿ ಅಭಿಪ್ರಾಯಿಸುವಂತೆ ಪರಸ್ಪರ ಉಲ್ಲೇಖದಂಥ ಪದ್ಧತಿ ಇದೊಂದು ಚಳುವಳಿಯಾಗಿತ್ತು ಎನ್ನುವ ಭ್ರಮೆ ಹುಟ್ಟಿಸುತ್ತದೆ. ಇದನ್ನು ಕನ್ನಡ ಸಿನೆಮಾದಲ್ಲಿ ಸಾಕಷ್ಟು ನೋಡಬಹುದು. ಉದಾಹರಣೆಗೆ ಶ್ರೀ ಪುರಂದರದಾಸರು (1963) ಚಿತ್ರ ವ್ಯಾಸಕೂಟದಲ್ಲಿ ಕನಕದಾಸರು ಇದ್ದದ್ದನ್ನು ಚಿತ್ರಿಸುತ್ತದೆ.
ಗಿರೀಶ್ ಕಾರ್ನಾಡರು ನಿರ್ದೇಶಿಸಿದ ‘ಕನಕ-ಪುರಂದರ’ (1988) ಎಂಬ ಸಾಕ್ಷ್ಯಚಿತ್ರವೂ ಅದನ್ನೇ ಹೇಳುತ್ತದೆ. ಜೊತೆಗೆ ಕಾರ್ನಾಡರು ಚಿತ್ರದ ಕೊನೆಗೆ ಉಪಖಂಡದುದ್ದಕ್ಕೂ ಭಕ್ತಿ ಚಳುವಳಿ ಹಬ್ಬಿದ್ದನ್ನು ದೃಶ್ಯರೂಪದಲ್ಲಿ ನಿರೂಪಿಸುತ್ತಾರೆ. ದೈವಭಕ್ತಿ ಹುಟ್ಟು ಹಾಕಿದ ಸಾರ್ವಜನಿಕ ವಲಯಗಳಲ್ಲಿ ‘ದೇಶಭಕ್ತಿ’ಯನ್ನು ತರುವುದು ಸುಲಭವೇ.
ಕನ್ನಡ ಸಿನೆಮಾ ಪ್ರಾಂತೀಯ-ರಾಷ್ಟ್ರೀಯತೆಯನ್ನು ಪೋಷಿಸಲು ತನ್ನ ನೆಲದ ಭಕ್ತಿಪ್ರಧಾನ ವ್ಯಕ್ತಿಗಳನ್ನು ಸಮರ್ಥವಾಗಿ ಹೆಕ್ಕಿ ತೆಗೆಯಿತು. ಜೊತೆಗೆ ದೃಶ್ಯಮಾಧ್ಯಮಕ್ಕೆ ದೃಶ್ಯವೈಭವ ಒಂದು ಅನಿವಾರ್ಯ ಅಂಶ. ನೋವೆಟ್ಸ್ಕಿ ಎಂಬ ಚಿಂತಕ ಹೇಳುವಂತೆ ಭಾರತೀಯ ಭಕ್ತಿಪ್ರಧಾನ ಚಿತ್ರಗಳು ಸಮುದಾಯಗಳ ದೃಶ್ಯಗಳನ್ನು ಹೆಚ್ಚು ಒಳಗೊಂಡಿರುತ್ತವೆ. ಸಂತನ ಸುತ್ತ ನೆರೆದ ಮಂದಿ ರೂಪಕಾರ್ಥದಲ್ಲಿ ರಾಷ್ಟ್ರದ ಪ್ರಜೆಗಳು.
ಉದಾಹರಣೆಗೆ ದಾಮ್ಲೆ ಮತ್ತು ಫತೇಲಾಲ್ ಚಿತ್ರಗಳನ್ನೇ ತೆಗೆದುಕೊಳ್ಳಿ. ‘ತುಕಾರಾಂ’ (1936), ‘ಜ್ಞಾನೇಶ್ವರ್’ (1940) ಚಿತ್ರಗಳಲ್ಲಿ ನಾವು ಹೆಚ್ಚಿನಂಶ ಭಕ್ತರ ಸಮುದಾಯವನ್ನೇ ಕಾಣುತ್ತಿರುತ್ತೇವೆ. ಭಕ್ತರೆದುರು ನಡೆಸುವ ಸಂವಾದ, ಚಟುವಟಿಕೆಗಳನ್ನು ಜನ (ಭಕ್ತರು) ನೋಡುತ್ತಿರುತ್ತಾರೆ. ನಾವು ವೀಕ್ಷಕರು ಅದನ್ನು ನೋಡನೋಡುತ್ತಲೇ ತೆರೆಯ ಮೇಲಿನ ಮತ್ತು ತೆರೆಯ ಮುಂದಿನ ಮಂದಿಯ ನಡುವಿನ ಅಂತರವಳಿದು ರಾಷ್ಟ್ರೀಯ ಸಮುದಾಯವೊಂದು ಮನಸ್ಸಿನಲ್ಲಿ ರೂಪುಗೊಳ್ಳುತ್ತಿರುತ್ತದೆ.
ಚರಿತ್ರೆ ಪುರಾಣಗಳು ಕಲೆಸಿಹೋಗುವುದು ಅರೆ-ಚಾರಿತ್ರಿಕ ಮತ್ತು ಅರೆ-ಪೌರಾಣಿಕ ಚಿತ್ರಗಳಲ್ಲಿ. ಭಕ್ತಿಪ್ರಧಾನತೆ ಈ ಕಲಸುಮೇಲೋಗರವನ್ನು ನಿರ್ವಹಿಸುವ ಅಂಶ. ಕನ್ನಡ ಸಿನೆಮಾ ಹನ್ನೆರಡನೆಯ ಶತಮಾನದ ಬಸವಣ್ಣನನ್ನು ಮತ್ತು ಹದಿನಾರನೆಯ ಶತಮಾನದ ಪುರಂದರದಾಸ ಮತ್ತು ಕನಕದಾಸ (ಮತ್ತು ಸರ್ವಜ್ಞನನ್ನ) ಆರಿಸಿಕೊಂಡ ಉದಾಹರಣೆಗಳನ್ನು ಗಮನಿಸಬಹುದು.
‘ಪುರಂದರದಾಸ’ ಬಿಡುಗಡೆಯಾಗಿದ್ದು 1947ರಲ್ಲಿ. ಮತ್ತೆ 1963ರಲ್ಲಿ ‘ಶ್ರೀ ಪುರಂದರದಾಸರು’ ಎಂಬ ಶೀರ್ಷಿಕೆಯನ್ನು ಹೊತ್ತು ಇನ್ನೊಂದು ಚಿತ್ರ ಬಿಡುಗಡೆಯಾಯಿತು. ಈ ಮರು ಅವತರಣಿಕೆ ‘ಕನ್ನಡ ರಾಜ್ಯೋತ್ಸವದ ಶುಭದಿನದಲ್ಲಿ ಕನ್ನಡ ಜನತೆಗೆ’ ಕಲಾಕಾಣಿಕೆಯಾಗಿ ಅರ್ಪಿತವಾಗಿತ್ತು. ‘ಕನ್ನಡಮಾತೆಯ ಪುತ್ರ’ ಪುರಂದರದಾಸರಿಂದ ರಚಿಸಲ್ಪಟ್ಟ ‘ಸಿರಿಗನ್ನಡ ಸಾಹಿತ್ಯ’ ಸಂಸ್ಕೃತದ ಬದಲು ದಿನನಿತ್ಯದ ಕನ್ನಡವನ್ನು ಬಳಸಿದ್ದು ಪ್ರಶಂಸನೀಯವಾಗಿತ್ತು. ಚಿತ್ರದುದ್ದಕ್ಕೂ ‘ಕನ್ನಡ’, ‘ಕನ್ನಡಿಗ’, ‘ಕನ್ನಡಪ್ರಜ್ಞೆ’ ಇತ್ಯಾದಿ ಪದಗಳು ಹೇರಳವಾಗಿದ್ದವು.
ಮರುವರ್ಷವೇ ಪುರಂದರದಾಸರ ಸುತ್ತಲೇ ಹೆಣೆದಿದ್ದ ‘ನವಕೋಟಿ ನಾರಾಯಣ’ (1964) ಬಿಡುಗಡೆಯಾಯಿತು. ಹಿಂದಿನದರಲ್ಲಿ ಅಶ್ವತ್ಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರೆ, ನವಕೋಟಿಯಲ್ಲಿ ರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪುರಂದರದಾಸರ ಸ್ಥಾಪಕಾರ್ಥ ಕೊಡುಗೆಯ ಸುತ್ತ ಹೆಣೆಯಲಾಗಿತ್ತು.
ಇಷ್ಟಾದರೂ ಕನ್ನಡ ಸಿನೆಮಾ ಪುರಂದರದಾಸ ಮತ್ತು ಕನಕದಾಸರನ್ನು ಅರಿವಿಗೆ ದಕ್ಕಿಸಿಕೊಂಡ ರೀತಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದೇ ಇರುವುದು ಕಷ್ಟ. ಎರಡೂ ಕಥಾನಕಗಳಲ್ಲಿ ಸಾಮಾನ್ಯ ಅಂಶಗಳಿರುವುದೂ ಸರಿಯೆ. ಉದಾಹರಣೆಗೆ ಬ್ರಾಹ್ಮಣ, ಬ್ರಾಹ್ಮಣೀಯತೆ, ಬ್ರಾಹ್ಮಣಿಕೆ ಮುಂತಾದ ಪರಿಕಲ್ಪನೆಗಳು ಎರಡರಲ್ಲೂ ಸಾಕಷ್ಟು ಲೇವಡಿಗೆ ಒಳಗಾಗುತ್ತವೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನಂಶ ಎಲ್ಲ ಸಂತಚರಿತೆಗಳಲ್ಲಿ ಅದು ಸಾಮಾನ್ಯವೇ.
ಕನಕ ಒಬ್ಬ ಅಬ್ರಾಹ್ಮಣ. ಕ್ಷತ್ರಿಯನೊ ಕುರುಬನೋ ಆಗಿದ್ದಿರಬೇಕು. ಚಿತ್ರದ ಹೆಚ್ಚಿನಂಶ ಅವನು ಬ್ರಾಹ್ಮಣ ವಿರೋಧವನ್ನು ನಿಭಾಯಿಸುವುದಕ್ಕೇ ಮೀಸಲಾಗುತ್ತದೆ. ಅವರಿಗಿಂತ ಅವನು ಹೇಗೆ ‘ಹೆಚ್ಚು’ ಬುದ್ಧಿವಂತ, ವಿವೇಕಿ, ಮತ್ತು ಅವನೂ ಸಹ ತನ್ನ ಪರಮಭಕ್ತಿಯ ಕಾರಣದಿಂದ (ಶೀರ್ಷಿಕೆಯೇ ‘ಭಕ್ತ ಕನಕದಾಸ’) ಮೋಕ್ಷಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸಲು ಚಿತ್ರ ಉದ್ದಕ್ಕೂ ಹೆಣಗುತ್ತದೆ. ಕೊನೆಯ ಕೆಲವೇ ನಿಮಿಷಗಳಲ್ಲಿ ಮಾತ್ರ ಮಧುರವಾದ ‘ಸಿಂಗಾರಶೀಲಾ… ಸಂಗೀತಲೋಲಾ…’ ಹಾಡಿನೊಂದಿಗೆ ಪ್ರಾರಂಭವಾಗಿ ಕನಕದಾಸರ ಕೃತಿಗಳ ಪ್ರಸ್ತಾಪ (‘ಹರಿಭಕ್ತಿಸಾರ’, ‘ನಳಚರಿತ್ರೆ’, ‘ರಾಮಧ್ಯಾನಚರಿತೆ’, ‘ಮೋಹನ ತರಂಗಿಣೀ’)ಪ್ರಾಸಂಗಿಕವಾಗಿ ಬರುತ್ತದೆ. ಕೊನೆಯಲ್ಲಿ ಚಿತ್ರದ ಹಿನ್ನೆಲೆಯಿಂದ ಗಂಭೀರ ಧ್ವನಿ ಮೊಳಗುತ್ತದೆ.
ಹೀಗೆ ಸಾಹಿತ್ಯವನ್ನೂ ಸಮಾಜವನ್ನೂ ಉದ್ಧಾರ ಮಾಡುತ್ತಾ ತೊಂಬತ್ತೊಂಬತ್ತು ವರ್ಷಗಳ ತುಂಬು ಜೀವನ ನಡೆಸಿ ಕೊನೆಗೆ ಪರಮಾತ್ಮನ ಸಾಯುಜ್ಯಪಡೆದರು ಕನಕದಾಸರು! ಇಂಥ ಮಹಾತ್ಮನನ್ನು ಕಣ್ಣಾರೆ ಕಂಡವರೇ ಧನ್ಯರು! ಸಹವಾಸ ಮಾಡಿದವರೇ ಪುಣ್ಯವಂತರು! ಜೈ ಕನಕದಾಸ!
ತನ್ನ ‘Bhakti Rhetoric in the Hagiography of “Untouchable Saints”’ ಎಂಬ ಲೇಖನದಲ್ಲಿ ಪ್ಯಾಟನ್ ಬರ್ಚಿಟ್ (Patton Burchett) ಮೋಕ್ಷದ ಬಾಗಿಲು ಎಲ್ಲರಿಗೂ ತೆರೆದಿದೆ ಎಂದು ಸಿನೀಮಯವಾಗಿ ಸಾರುತ್ತಲೇ ಈ ಚಿತ್ರಗಳು ದಿನನಿತ್ಯದ ಜಾತಿ-ಮಡಿ ಸಂಪ್ರದಾಯಗಳನ್ನು ದೃಢೀಕರಿಸುವತ್ತ ಸಾಗುತ್ತವೆ ಎಂದು ಅಭಿಪ್ರಾಯಿಸುತ್ತಾರೆ.
ಬರ್ಚಿಟ್ಟನ ಪ್ರಕಾರ ಅವು ‘ಮಿಶ್ರ ಸಂದೇಶ’ವನ್ನು ಹೊತ್ತ ಕಥಾನಕಗಳು. ಬ್ರಾಹ್ಮಣನ ಬಗ್ಗೆ ಅಲ್ಲಿ ಮಹಾ ಸಾಂಸ್ಕೃತಿಕ ದ್ವಂದ್ವವಿದೆ. ಒಂದು ಕಡೆ ಅವನೊಬ್ಬ ಆಧ್ಯಾತ್ಮಿಕ ಆದರ್ಶವಾದರೆ ಇನ್ನೊಂದು ಕಡೆ ಸಾಮಾಜಿಕ ಸವಲತ್ತನ್ನು ದತ್ತವಾಗಿ ಪಡೆದುಕೊಂಡಿರುವ ವರ್ಗದ ಪ್ರತಿನಿಧಿಯೂ ಹೌದು.

ಇನ್ನೊಂದು ರೀತಿ ಹೇಳಬೇಕೆಂದರೆ ‘ಕೀಳುಜಾತಿಯ’ ಭಕ್ತನೊಬ್ಬನ ಮೋಕ್ಷದ ಹಕ್ಕನ್ನು ಉದಾರವಾಗಿ ಬೆಂಬಲಿಸುತ್ತಲೇ ಸಮಾನತೆ ಎನ್ನುವುದು ಆಧ್ಯಾತ್ಮಿಕವಾಗಿ ಇರಬಹುದೇನೊ, ಸಾಮಾಜಿಕವಾಗಿ ಇರಲಂತೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಿರುತ್ತದೆ. ಆದ್ದರಿಂದಲೇ ಪುರಂದರ ದಾಸರು ಕನ್ನಡಮಾತೆಯ ಸುಪುತ್ರರಾಗಬಹುದು, ಕನಕದಾಸರಿಗೆ ಆ ಭಾಗ್ಯವಿಲ್ಲ!
(ಲೇಖಕಿಯ ಸಧ್ಯದಲ್ಲೇ ಬಿಡುಗಡೆಯಾಗಲಿರುವ ‘ಕನ್ನಡ ಸಿನಿಮಾದಲ್ಲಿ ರಾಷ್ಟ್ರ-ಜೆಂಡರ್’ ಕೃತಿಯಿಂದ ಆಯ್ದ ಭಾಗ)

