Advertisement
ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಎಂಟನೆಯ ಕಂತು

ಒಮ್ಮೆ ಫೇಸ್ಬುಕ್ marketplace ನಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ತಡಕುತ್ತಿದ್ದೆ. ಆಗ ಸಾರಾ ಟ್ರೇಸ್ ಎನ್ನುವವರು ನೂರಾರು ಪುಸ್ತಕಗಳನ್ನು ಮಾರಾಟಕ್ಕಿಟ್ಟಿರುವುದು ಕಂಡಿತು. ಒಮ್ಮೆ ಅವುಗಳ ಮೇಲೆ ಕಣ್ಣಾಡಿಸಿದರೆ ಅಲ್ಲಿ ಎಲ್ಲ ಬಗೆಯ ಪುಸ್ತಕಗಳಿದ್ದವು. ಮಕ್ಕಳು ಓದುವ ಚಂದಮಾಮದಂತಹಾ ಇಂಗ್ಲೀಷಿನ ಪುಸ್ತಕಗಳಿಂದ ಅಮೇರಿಕನ್ ಕ್ರಾಂತಿಯವರೆಗೆ!

ಆದರೆ ಅವುಗಳಿಗೆ ನಮೂದಿಸಿದ್ದ ಬೆಲೆ ಮಾತ್ರ ತುಂಬಾ ಅಂದರೆ, ತುಂಬಾ ಕಡಿಮೆಯಿತ್ತು.
ಬಹುಶಃ ಮನೆಯಲ್ಲಿ ಜಾಗವಿಲ್ಲದೆ ಎಲ್ಲವನ್ನೂ ಕೊಡುತ್ತಿರಬೇಕು ಎಂದುಕೊಂಡು ನನಗೆ ಬೇಕಾದ ಪುಸ್ತಕಗಳ ಪಟ್ಟಿ ಮಾಡತೊಡಗಿದೆ. ಕಳೆದು ಕೂಡಿ ಯೋಚಿಸಿ ಕಡೆಗೆ ಒಂದು ಇಪ್ಪತ್ತು ಪುಸ್ತಕಗಳ ಪಟ್ಟಿಮಾಡಿ ಅವರಿಗೆ ಕಳುಹಿಸಿದೆ. ಅವರು ಅವಕ್ಕೆಲ್ಲ ಒಟ್ಟಾರೆ ಹಣದ ಬೆಲೆ ಹೇಳಿ, ನಾನು ಬರುವ ದಿನ ಸಮಯ ಖಾತ್ರಿ ಪಡಿಸಿಕೊಂಡರು. ಅಂತೆಯೇ ಒಂದು ದಿನ ನಾನು ಕೆಲಸ ಮುಗಿದೊಡನೆ ಅವರು ಕೊಟ್ಟಿದ್ದ location ಗೆ ಹೋದೆ.

ಅದು saudi aramco ಕಂಪನಿಯ ಸ್ಟಾಫ್ ಕ್ವಾರ್ಟರ್ಸ್. ಇದು ಸೌದಿಯ ಬಹು ದೊಡ್ಡ ತೈಲ ಕಂಪನಿ, ದೇಶದ ಎಲ್ಲ ತೈಲ ನಿಕ್ಷೇಪಗಳ ಮೇಲೂ ಇದರದ್ದೇ ಒಡೆತನ. ಜಗತ್ತಿನ ಕಂಪನಿಗಳ ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ. ಒಂದು ಅಮೆಜಾನ್, ಮೈಕ್ರೋಸಾಫ್ಟ್, ಫೇಸ್ಬುಕ್, ಗೂಗಲ್ ಸೇರಿದರೆ ಒಂದು saudi aramco. ಕಾರಣ ಇದರ ಒಡೆತನದ ತೈಲ ನಿಕ್ಷೇಪ ಮತ್ತು ನೂರಾರು ಸಹೋದರ – ಸಹೋದರಿ ಕಂಪನಿಗಳು!

ಸರಿ, ಅಲ್ಲಿ ಹೋದಮೇಲೆ ಅವರಿಗೆ ಫೋನಾಯಿಸಿದೆ. ಅವರು ಬಂದು ಒಂದು ಬ್ಯಾಗಿನಲ್ಲಿ ನಾನು ಹೇಳಿದಷ್ಟು ಪುಸ್ತಕಗಳನ್ನು ಕೊಟ್ಟು ಹಣ ಪಡೆದು, ತಮ್ಮಲ್ಲಿ ಮತ್ತೂ ಒಳ್ಳೆಯ ಪುಸ್ತಕಗಳಿರುವುದಾಗಿ ಹೇಳಿ ಬೇಕಿದ್ದರೆ ಅವನ್ನೂ ಕೊಳ್ಳಬೇಕೆಂದು ಹೇಳಿದರು. ನಾನು ಆಗಲೆಂದೆ. ಇಬ್ಬರೂ ಒಬ್ಬರಿಗೊಬ್ಬರು ಬೀಳ್ಕೊಟ್ಟು ಬಂದೆವು.

ಇದಾದ ಹಲವು ದಿನಗಳ ಮೇಲೆ ಸಾರ ಟ್ರೇಸ್ ರವರು ಮತ್ತಷ್ಟು ಪುಸ್ತಕಗಳ ಪಟ್ಟಿ ಕಳುಹಿಸಿದರು. ಇವು ಇನ್ನಷ್ಟು ಹಿಡಿಸಿದವು. ಆದರೆ ಕೊಂಡು ಓದುವುದು ಯಾವಾಗ? ಆದರೂ ಮನಸ್ಸು ತಡೆಯದೆ ಅದರಲ್ಲಿ ಒಂದಷ್ಟನ್ನು ಹೆಕ್ಕಿ ಮತ್ತೊಂದು ಪಟ್ಟಿ ಕಳಿಸಿದೆ. ಈ ಬಾರಿಯೂ ಹಾಗೆಯೇ ಅವರನ್ನು ಭೇಟಿ ಮಾಡಿದೆ. ಆಗ ನನಗೊಂದು ಆಶ್ಚರ್ಯ ಕಾದಿತ್ತು!

ಸಾರಾ ಟ್ರೇಸ್ ರವರ ಜೊತೆ ಮತ್ತೊಬ್ಬರು ಬಂದಿದ್ದರು. ಸುಮಾರು ಐವತ್ತರ ಆಸುಪಾಸಿನ ವ್ಯಕ್ತಿ. ನಾನು ಪುಸ್ತಕ ಪಡೆದು ಅವನ್ನು ಕಾರಿನ ಡಿಕ್ಕಿಯಲ್ಲಿಡಲು ಅವರು ಸಹಾಯ ಮಾಡಿದ್ದಲ್ಲದೆ ನನ್ನ ಜೊತೆಗೆ ಮಾತಿಗೆ ನಿಂತರು. ಅವರ ಹೆಸರು ಆಲ್ವಿನ್ ಡಿಸೋಜಾ, ಮಂಗಳೂರಿನವರು. ಅವರು ಸಾರಾ ಅವರ ಹಸ್ಬಂಡ್ ಮತ್ತು ಅವರು ಇಂಜಿನಿಯರಿಂಗ್ ಮಾಡಿದ್ದು ತುಮಕೂರಿನ SIT ಯಲ್ಲಿ, ಅದರಿಂದಾಗಿ ಅವರು ನನ್ನ ಮೇಲೆ ವಿಶೇಷ ಕಾಳಜಿಯಿಂದ ನಾನು ಕೊಂಡ ಪುಸ್ತಕಗಳ ಪಟ್ಟಿ ಮತ್ತು ನನ್ನ ಫೇಸ್ಬುಕ್ ಪ್ರೊಫೈಲನ್ನು ನೋಡಿದ್ದಾರೆ. ಅದರಿಂದ ನನ್ನ ಬಗ್ಗೆ ಅವರಿಗೆ ಸ್ವಲ್ಪ ತಿಳಿದಿದೆ. ನಮ್ಮೂರಲ್ಲಿ ಓದಿದ್ದರಿಂದ ನನ್ನ ಜೊತೆ ಮಾತನಾಡಬೇಕೆಂದು ಬಂದಿದ್ದಾರೆ.

ಆಗ ತಿಳಿದದ್ದೇನೆಂದರೆ ಮೂಲತಃ ಮಂಗಳೂರಿನವರಾದ ಅವರು ಕಳೆದ ಹತ್ತು ವರ್ಷಗಳಿಂದ ಸೌದಿ aramco ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರಾ ಅವರು ಟೀಚರ್ ಆಗಿ ಅಲ್ಲಿನ ಸ್ಕೂಲ್ ಒಂದರಲ್ಲಿ ಕಲಿಸುವುದರಿಂದ ಮಕ್ಕಳ ಸಾಹಿತ್ಯ ಓದಿಕೊಳ್ಳುತ್ತಾರೆ. ಆಲ್ವಿನ್‌ರವರು ಹತ್ತಾರು ವರ್ಷಗಳು ಕೆನಡಾದಲ್ಲಿದ್ದು ಅವರು ಅಲ್ಲಿನ ಪ್ರಜೆಯಾಗಿದ್ದಾರೆ. ಮಕ್ಕಳೂ ಅಲ್ಲಿಯೇ ಹುಟ್ಟಿದ್ದರಿಂದ ಸ್ವಾಭಾವಿಕವಾಗಿ ಅವರೂ ಅಲ್ಲಿನ ಪ್ರಜೆಗಳೇ. ಅಪ್ಪ ಮತ್ತು ಮಕ್ಕಳು ಪ್ರಪಂಚದ ಎಲ್ಲ ವಿಷಯಗಳ ಬಗ್ಗೆ ಓದುವುದರಿಂದ, ಅವರ ಓದಿನ ಹರಿವು, ವಿಸ್ತಾರ ಹೀಗೆ ಹರಡಿ ಇಷ್ಟು ರಾಶಿ ಮತ್ತು ವೈವಿಧ್ಯ ಪುಸ್ತಕಗಳಾಗಿವೆ.

ಅವರು ನನ್ನ ಬಳಿ ತುಮಕೂರಿನ ಬಗ್ಗೆ ಬಹಳಷ್ಟು ಮಾತನಾಡಿದರು. ನನಗೂ ಖುಷಿಯಾಯಿತು. ಈಗ ಪುನಃ ವಾಪಸ್ ಕೆನಡಾಗೆ ಹೋಗುತ್ತಿರುವುದಾಗಿಯೂ ಅಲ್ಲಿ ತಮ್ಮ ಮಕ್ಕಳು ಯೂನಿವರ್ಸಿಟಿಗೆ ಸೇರಿರುವುದಾಗಿಯೂ ಹೇಳಿದರು. ಅದೇ ಕಾರಣದಿಂದ ತಮ್ಮಲ್ಲಿರುವ ಎಲ್ಲ ಪುಸ್ತಕಗಳನ್ನು ಕೊಟ್ಟು ಹೋಗಲು ನಿರ್ಧರಿಸಿದ್ದೇವೆಂದರು. ಇವನ್ನೆಲ್ಲಾ ಅಲ್ಲಿಗೆ ಒಯ್ಯಲು ಬಹಳ ಖರ್ಚಾಗುವುದಲ್ಲದೆ ಇನ್ನೂ ಓದದೇ ಇರದ ಸಾಕಷ್ಟು ಪುಸ್ತಕಗಳಿರುವುದರಿಂದಾ, ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ. ಕಡೆಗೆ ಆಲ್ವಿನ್- ಸಾರಾ ದಂಪತಿಗಳನ್ನು ಮನಪೂರ್ವಕ ಬೀಳ್ಕೊಟ್ಟು “bon voyage” ಹೇಳಿ ಒಂದು ಸೆಲ್ಫಿ ತೆಗೆದುಕೊಂಡು ಹಿಂದಿರುಗಿದೆ.

ಸೌದಿಯ ಟೂ ಬೆಡ್ರೂಮ್ ಮನೆಯಲ್ಲಿ ಇವನೆಲ್ಲಾ ಇಡಲಾಗದೆ ಶಿಪ್ ಟ್ರಾನ್ಸ್ಪೋರ್ಟ್ ಮೂಲಕ ಬೆಂಗಳೂರಿನ ನನ್ನಕ್ಕನ ಮನೆಗೆ ಕಳುಹಿಸಿದೆ. ಈಗ ಅವಳೂ ಮನೆಯನ್ನು ಅಲ್ಟ್ರೇಷನ್ ಮಾಡಿಸುತ್ತಿದ್ದಾಳೆ, ಮುಂದೆ ಈ ಪುಸ್ತಕಗಳ ವಾಸ ಇನ್ನೆಲ್ಲೋ ಕಾದು ನೋಡಬೇಕು. ಆದರೆ ಒಂದಂತೂ ಸತ್ಯ, ಸಾರಾ- ಅಲ್ವಿನ್ ದಂಪತಿಗಳು ಪ್ರೀತಿಯಿಂದ ಕೊಟ್ಟ ಪುಸ್ತಕಗಳ ರಾಶಿಯನ್ನು ನಾನು ಕಾಪಾಡುವುದಂತೂ ಶತಸಿದ್ಧ.

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್‌ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ