Advertisement
ಪೂರ್ಣಸುಂದರಿ ಅನುವಾದಿಸಿದ ಕಮಲಾದಾಸ್ ಕವಿತೆ.

ಪೂರ್ಣಸುಂದರಿ ಅನುವಾದಿಸಿದ ಕಮಲಾದಾಸ್ ಕವಿತೆ.

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ದಿನಕ್ಕೊಂದು ಕವಿತೆಯಲ್ಲಿ ಈ ದಿನ ಕವಯತ್ರಿ ಕಮಲಾ ದಾಸ್ ಬರೆದ ಕವಿತೆಯೊಂದನ್ನು ಪ್ರಕಟಿಸುತ್ತಿದ್ದೇವೆ. ಕನ್ನಡಕ್ಕೆ ಅನುವಾದಿಸಿದ್ದಾರೆ ಪೂರ್ಣಸುಂದರಿ.

ಮಲಬಾರಿನಲ್ಲೊಂದು ಬಿರು ಬಿಸಿಲಿನ ಮಧ್ಯಾಹ್ನ

ಈ ಮಧ್ಯಾಹ್ನ
ಭಿಕ್ಷುಕರ ಗೋಗರೆಯುವ ದನಿಗಳು
ಸಮೀಪಿಸುವ ಸಮಯ
ಪಂಜರದಲ್ಲಿ ಗಿಣಿಗಳನ್ನೂ,
ಕಾಲದ ಹಚ್ಚೆ ಹೊತ್ತ ಭಾಗ್ಯದೆಲೆಗಳನ್ನೂ
ಕೈಯ್ಯಲ್ಲಿ ಹಿಡಿದ ಗಂಡಸರು ಗುಡ್ಡ ಇಳಿದು ಬರುವ ಸಮಯ
ಈ ಮಧ್ಯಾಹ್ನ
ವೃದ್ಧ ಕಣ್ಣುಗಳ ಕಂದು ಮೈಬಣ್ಣದ
ಕುರುವ ಹುಡುಗಿಯರು ಕೈ ನೋಡಿ
ರಾಗರಾಗವಾಗಿ ತಮ್ಮ ಹಗುರ ದನಿಗಳಲ್ಲಿ
ಭವಿಷ್ಯ ಹೇಳುವ ಸಮಯ.
ತಣ್ಣನೆಯ ಕಪ್ಪು ನೆಲದ ಮೇಲೆ ಕೆಂಪು ನೀಲಿ ಹಸಿರು
ಬಳೆಗಳನ್ನು ಹರಡುವ ಬಳೆಗಾರರು
ನಮ್ಮ ಕೈಸಾಲೆಗೆ ನಡೆದು ಬರುವಾಗ
ಮೈಲುಗಟ್ಟಲೆ ಸವೆಸಿ ಬಿರಿದು ಒರಟಾಗಿ
ಧೂಳು ತುಂಬಿದ ಅವರ ಪಾದಗಳು
ನೆಲಕ್ಕೆ ಉಜ್ಜಿ ಸದ್ದು ಮಾಡುತ್ತವೆ.
ವಿಚಿತ್ರ ಈ ಮಧ್ಯಾಹ್ನ
ಅಪರಿಚಿತರು
ಕಿಟಕಿಗಳ ಪರದೆ ಒಂದಷ್ಟು ಸರಿಸಿ
ಬಿಸಿಲು ತುಂಬಿದ ಕಣ್ಣುಗಳನ್ನು
ಒಳ ತೂರಿಸಿ ಇಣುಕಿದಾಗ
ನಸುಗತ್ತಲು ತುಂಬಿದ ಕೋಣೆಗಳಲ್ಲಿ ಏನೂ ಕಾಣದೆ
ಬೇರೆಲ್ಲೋ ತಿರುಗಿ ಎದುರಿನ ಇಟ್ಟಿಗೆಯ ಗೋಡೆ ಗಳನ್ನು
ಅಸ್ಥೆಯಿಂದ ದಿಟ್ಟಿಸುತ್ತಾರೆ.
ಈ ಮಧ್ಯಾಹ್ನ
ಕಣ್ತುಂಬಾ ಅಪನಂಬಿಕೆ ಹೊತ್ತ,
ಹೆಚ್ಚು ಮಾತೇ ಆಡದ ಕಪ್ಪು ಯುವಕರು
ಬಾಯ್ತೆರೆದಾಗ ಅವರ ದನಿಗಳು
ಗೊಗ್ಗರಾಗಿ ಅಡವಿಯ ಕೂಗಿನಂತೆ ಕೇಳಿಸುತ್ತವೆ.

ಹೌದು, ಈ ಮಧ್ಯಾಹ್ನ
ಉನ್ಮತ್ತ ಗಂಡಸರ,
ಹುಚ್ಚು ಲಹರಿಗಳ, ಉತ್ಕಟ ಮೈಥುನಗಳ ಸಮಯ.
ಈಗ ಇಷ್ಟು ದೂರ, ಇಲ್ಲಿರುವುದು, ಬಲು ಹಿಂಸೆ.
ಮಲಬಾರಿನ ನನ್ನ ಮನೆಯಲ್ಲಿ
ಈ ಬಿರುಬಿಸಿಲಿನ ಮಧ್ಯಾಹ್ನ
ಒರಟು ಪಾದಗಳು ಧೂಳೆಬ್ಬಿಸುತ್ತಿರುವಾಗ
ನಾನೋ ಇಷ್ಟು ದೂರ

 

(ಮುಖಪುಟ ಚಿತ್ರ: ರೂಪಶ್ರೀ ಕಲ್ಲಿಗನೂರ್)

About The Author

ಪೂರ್ಣ ಸುಂದರಿ

ಅನಾಮಿಕಳಾಗಿ ಉಳಿಯ ಬಯಸಿರುವ ಕನ್ನಡದ ಅಪೂರ್ವ ಬರಹಗಾತಿ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ