ಗೀಳು
ಅವರು ಅನ್ನುತ್ತಾರೆ:
ನಿನಗೆ ಗೀಳು ರೋಗ
ನನ್ನದು ಅಮಾಯಕತೆಯ ಪ್ರಶ್ನೆ:
ಹಾಗೆಂದರೇನು?
ಬಾಗಿಲು ಮುಚ್ಚಿ ಚಿಲಕ ಭದ್ರ
ಅರೇ, ಯಾರಾದರೂ ಒಳ ಬಂದರೇ..
ಬಂದಾರೇ..
ಮತ್ತೆ ಮತ್ತೆ ಚಿಲಕ ತೆಗೆದು ಹಾಕಿ ಮತ್ತೆ
ತೆಗೆದು ಕಣ್ಣರಳಿಸಿ, ಒಳಗೊಳಗೆ ಗೊಣಗುತ್ತೇನೆ:
ಬಾಗಿಲು ಹಾಕಿದೆ. ಯಾರೂ ಬರುವವರಿಲ್ಲ. ಏನೂ ಲೂಟಿಯಾಗದು
ಸುರಕ್ಷಿತಳಾಗಿದ್ದೇನೆ.
ಹೆಬ್ಬಾವಿನಂತೆ ಬಿದ್ದಿರುವ ಬದುಕು.
ಬಾಗಿಲಿನತ್ತ ತೆವಳಲಾಗದ ಭಾರ
ನಡು ದಾಟಿದ ನಡೆ ಕದವಿನ್ನೆಷ್ಟು ದೂರ!
ಭದ್ರವಾಗಿದೆ ಬಾಗಿಲು
ಯಾರೂ ಬರುವುದಿಲ್ಲ
ಬಾಗಿಲು ಚಿಲಕ ಮತ್ತೆ
ಮತ್ತೆ ಮುಟ್ಟಿ ಮುಟ್ಟಿ
ನೋಡುವ
ಗೀಳು.
ನಿನ್ನೆ ಬಾಗಿಲು ಹಾಕಿರಲಿಲ್ಲವೇ,
ಚಿಲಕ ಸಡಿಲವಾಯಿತೇ,
ಅಯ್ಯೋ, ಯಾರೋ..
ಇರಿ. ಬಾಗಿಲು ಭದ್ರಪಡಿಸಬೇಕು.
ತೆರೆದ ಬಾಗಿಲು
ಯಾರಾದರೂ..
ಹೊರ ಹೋದರೇ..
ತಿಳಿಯದು
ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು
ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ