ಮಾರೋನು ವಾರಕ್ಕೊಂದು ದಪ ಇಸ್ಕೂಲ್ ತಾವ ಬತ್ತಿದ್ದ. ಅದು ಎಲ್ಡು ತರ ಇರ್ತಿತ್ತು. ಒಂದು ಈಗ್ಲೂ ಸಿಗ್ತೈತೆ. ಅದೇ ಮೊಳಕೈ ಉದ್ದುದ್ದು ಕಡ್ಡೀಗೆ ರೋಜಾ(ಗುಲಾಬಿ) ಬಣ್ಣುದ್ದು ಹತ್ತಿ ತರ ಸುತ್ತಿರ್ತಾರಲ್ಲ. ಕೈಗೂ ಬಾಯ್ಗೂ ಅಂಟ್ರುಸ್ತೈತಲ್ಲ ಅದು. ಇನ್ನೊಂದು ರಬ್ಬ್ರು(ರಬ್ಬರ್) ತರ ನಾರಿನಂಗೆ ಇರ್ತಿತ್ತು. ಎಳುದ್ರೆ ಸಾಗ್ತಾನೆ(ಹಿಗ್ಗುವ) ಇರಾ ದಾರ. ಅದುನ್ನ ಕೈಗೆ ವಾಚೋ, ಇಮಾನವೋ, ಸೈಕಲ್ಲೋ, ಕಾರೋ ಮಾಡಿ ಹಾಕೋನು. ಬೇಸಾಗಿ ಮಾಡ್ತಿದ್ದ. ಕಾಸು ಕಮ್ಮಿ ಇದ್ರೆ ಬೆಟ್ಟಿಗೆ ಉಂಗುರ ಮಾತ್ರ ಸಿಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಲೇಖಕಿಯ ಬಾಲ್ಯಕಾಲದಲ್ಲಿ ಸಿಗುತ್ತಿದ್ದ ಅಂಗಡಿಯ ತಿನಿಸುಗಳ ಕುರಿತ ಬರಹ ನಿಮ್ಮ ಓದಿಗೆ

ನಮ್ತಾವ ಕಾಸು ಇರ್ತಿದ್ದಿದ್ದು ಸ್ಯಾನೇ ಕಮ್ಮೀನೇಯಾ. ಎಂಗೂ ಬಾಯಾಡಾಕೆ ಸುತ್ತ ಮುತ್ತಲ ಹಣ್ಣು ಕಾಯಿ ಎಲೆ ಪಲೆ ಸಿಗ್ತಿತ್ತು. ಅಂಗೇ ಮನ್ಯಾಗೂ ಹಾಳೂಮೂಳೂ ಅಂಬ್ತ ಯಾತ್ಯಾತರದೋ ವಸಿ ಸಿಗ್ತಿತ್ತಲ್ಲ ಅಂಗಾಗಿ ಕಾಸೇನೂ ಕೊಡ್ತಿರ್ಲಿಲ್ಲ‌. ಸಣ್ಣೈಕ್ಳು. ನಮ್ಗೂ ಅಂಗ್ಡಿ ತಿಂಡಿ ಕಂಡ್ರೆ ಆಸೇನೆ.‌ ಪೈಸಾ ಪೈಸಾ ಕೂಡಿಟ್ಟು ತಕಂತಿದ್ವಿ. ಆಗೆಲ್ಲಾ ಐದು ಪೈಸಾ ಹತ್ತು ಪೈಸಾ ಅಂದ್ರೇನೇ ದೊಡ್ಡದು. ನಾಕಾಣೆ ಸಿಕ್ರಂತೂ ಭೂಮ್ಯಾಗ್ಳಿಂದ‌ ಮ್ಯಾಕೇ ಇರಂಗಾಗ್ತಿತ್ತು. ಅಮಾಸೇಗೋ ಪೌರ್ಣೋಮಿಗೋ ಎಂಟಾಣೆ ಏನಾರಾ ಸಿಕ್ರೆ ಆಕಾಸ್ವೇ ಇಳಿದು‌ ಬಂದಂಗೆ ಲೆಕ್ಕ.

ನಮ್ಮಪ್ಪ ಊರ್ನಾಗೆ ದೊಡ್ಡ ‌ಮನುಸ್ಯರು ಅಂತ ಅನ್ನುಸ್ ಕಂಡಿದ್ರು. ಆದ್ರೂ ಕೈಯಾಗೆ ಕಾಸಿರ್ತಿರ್ಲಿಲ್ಲ. ಬಂದ್ ಬಂದುದ್ದ ಎಲ್ಲಾನೂವೆ ರಾಜ್ಕೀಯಕ್ಕೇ, ಜನುಗೋಳ್ಗೇ, ಊರುದ್ಧಾರುಕ್ಕೇ ಆಯ್ತಿತ್ತು. ಯಾವಾಗ್ಲೂ ಹಿಂದ್ ಮುಂದ್ಕೆ ನಾಕೈದು ಆಳು ಇರ್ತಿದ್ರು. ಅವುರ್ಗೆ ಬೀಡಿ ಕಾಸಾಕೆ, ಹೊಗೆಸೊಪ್ಪಿಗೆ ಚಿಲ್ರೆ ಪಲ್ರೆ ಕೊಡ್ಬೇಕಿತ್ತು. ಇದ್ದ ಬದ್ದಿದ್ದೂ ಅಲ್ಲೇ ಕರ್ಚಾಗ್ತಿತ್ತು. ಚಿಲ್ರೆ ಕಾಸೂ ಮಿಗಿಲುತ್ತಿದ್ದಿದ್ದೂ ದೂರವೇ. ಯಾವಾಗಾನಾ ನಮ್ ಕೈಯಾಗೆ ಐದು ಪೈಸೆ ಸಿಕ್ರೆ ಪ್ರಾಣೇಶಪ್ಪನ ಅಂಗಡೀಗೋ, ಆದಿನಾರಾಯಣಪ್ಪನ ಅಂಗಡೀಗೋ ತಗುಲ್ಕಂತಿದ್ವಿ.

ಪೈಸಾ ಲೆಕ್ಕ

ಐದು ಪೈಸಾಕ್ಕೆ ಹತ್ತು ತೌಡು ಬಿಸ್ಕತ್ತು ಬರ್ತಿತ್ತು. ಇವು ನೋಡಾಕೆ ಶಲ್ಟಿನ ಗುಂಡೀ ಅಂಗೇ ಇದ್ವು. ವಸಿ ದೊಡ್ಡ್ವೇನೋ ಆಟೇಯಾ. ಬಿಸ್ಕತ್ತಿನ್ ಬಣ್ಣವೇಯಾ. ಶುಂಠಿ ಪೆಪ್ಪುರ್ ಮೆಂಟು, ನಿಂಬೆ ಹುಳಿ, ಕಿತ್ತಲೆ ಪೆಪ್ಪುರ್ ಮೆಂಟು, ಜೀರಿಗೆ ಪೆಪ್ಪುರ್ ಮೆಂಟು ಇದ್ವು.

ಹತ್ತು ಪೈಸಾ ಇದ್ರೆ ಕಡ್ಡಿ ಪೆಪ್ಪುರ್ ಮೆಂಟು ತಕಂತಿದ್ವಿ. ಒಂದು ಬೆಳ್ಳು(ಬೆರಳು)ಉದ್ದುದ್ದು ಪ್ಲಾಸ್ಟಿಕ್ ಕಡ್ಡೀಗೆ ಸಣ್ಣ ಚೆಂಡಿನ ಗಾತ್ರದ್ದು ಪೆಪ್ಪುರ್ ಮೆಂಟು ಸಿಗ್ಸಿರ್ತಿದ್ರು.‌ ಕಾಮನಬಿಲ್ಲಿನ ಬಣ್ಣಗ್ಳು ಸೇರಿ ಬಣ್ಣ ಬಣ್ಣವಾಗಿರ್ತಿತ್ತು. ಸ್ಯಾನೆ ಹೊತ್ತು ನೆಕ್ಕುದ್ರೂ ಖಾಲಿ ಆಗ್ತಿರ್ಲಿಲ್ಲ.

ಬಾಂಬೆ ಮಿಠಾಯಿ

ಮಾರೋನು ವಾರಕ್ಕೊಂದು ದಪ ಇಸ್ಕೂಲ್ ತಾವ ಬತ್ತಿದ್ದ. ಅದು ಎಲ್ಡು ತರ ಇರ್ತಿತ್ತು. ಒಂದು ಈಗ್ಲೂ ಸಿಗ್ತೈತೆ. ಅದೇ ಮೊಳಕೈ ಉದ್ದುದ್ದು ಕಡ್ಡೀಗೆ ರೋಜಾ(ಗುಲಾಬಿ) ಬಣ್ಣುದ್ದು ಹತ್ತಿ ತರ ಸುತ್ತಿರ್ತಾರಲ್ಲ. ಕೈಗೂ ಬಾಯ್ಗೂ ಅಂಟ್ರುಸ್ತೈತಲ್ಲ ಅದು. ಇನ್ನೊಂದು ರಬ್ಬ್ರು(ರಬ್ಬರ್) ತರ ನಾರಿನಂಗೆ ಇರ್ತಿತ್ತು. ಎಳುದ್ರೆ ಸಾಗ್ತಾನೆ(ಹಿಗ್ಗುವ) ಇರಾ ದಾರ. ಅದುನ್ನ ಕೈಗೆ ವಾಚೋ, ಇಮಾನವೋ, ಸೈಕಲ್ಲೋ, ಕಾರೋ ಮಾಡಿ ಹಾಕೋನು. ಬೇಸಾಗಿ ಮಾಡ್ತಿದ್ದ. ಕಾಸು ಕಮ್ಮಿ ಇದ್ರೆ ಬೆಟ್ಟಿಗೆ ಉಂಗುರ ಮಾತ್ರ ಸಿಗ್ತಿತ್ತು. ಕೈಗೆಲ್ಲಾ ಬಂಕೆ ಆಗ್ತೈತೆ ಅಂತ ಕೈಗಾಕಾದು ಬ್ಯಾಡಾಂದ್ರೆ ಕಡ್ಡೀಗೆ ಹುಡುಗ ಹುಡಿಗೀ ಬೊಂಬೆ ಮಾಡಿ ಸಿಕ್ಕಿಸಿ ಕೊಡ್ತಿದ್ದ.

ಸೈಕಲ್ ಮ್ಯಾಗೆ ಗಾಜಿನ ಡಬ್ಬ ಮಡುಕ್ಕೊಂಡು ಒಬ್ಬ ಗಂಟೆ ಅಲ್ಲಾಡುಸ್ಕಂಡು ಬತ್ತಿದ್ದ. ಅದ್ರಾಗೆ ಬಿಳೇ ಬಣ್ಣುದ್ದು ಅಜ್ಜಿ ಕೂರ್ಲು(ಕೂದಲು- ಸೋನ್ ಪಾಪಡಿ)ಇರ್ತಿತ್ತು. ಅದೂಂದ್ರೆ ಪ್ರಾಣ್ವಾಗಿತ್ತು. ಆದ್ರೆ ಐವತ್ತು ಪೈಸಾ ಕೊಡ್ಬೇಕಿತ್ತು. ಕಾಸಿಲ್ದೆ ಸುಮ್ಕಾಗ್ತಿದ್ವಿ. ನಾಕಾಣೆ ಕೊಟ್ರೆ ಟ್ಯೂಬೈಸು(ಟ್ಯೂಬ್ ಐಸ್). ಕಿತ್ತಳೆ, ಅರಿಸಿಣ, ಕೆಂಪು ಬಣ್ಣದಾಗಿರ್ತಿತ್ತು. ಹತ್ತು ಪೈಸಾ ಕೊಟ್ರೆ ಕೆಂಪುದು ಐಸ್ ಕ್ಯಾಂಡಿ ಬರ್ತಿತ್ತು. ಹಾಲೈಸು ಅಂದ್ರೆ ಐವತ್ತು ಪೈಸಾ. ಅದ್ರಾಗೆ ಶ್ಯಾವಿಗೆ ಹಾಕಿರ್ತಿದ್ರು. ಅದ್ಕೇಯಾ ಪೆಸಲ್ (ಸ್ಪೆಷಲ್) ಅಂತ ರೈಟ್ ಜಾಸ್ತಿ. ಬ್ಲೂಕೋಸ್ (ಗ್ಲೂಕೋಸ್) ಬಿಸ್ಕತ್ತು ಐವತ್ತೊ ಅರವತ್ತೋ ಪೈಸಾ ಕೊಟ್ರೆ ಒಂದು ಪಾಕೀಟು(ಪ್ಯಾಕೆಟ್). ಅದ್ರಾಗೆ ಹನ್ನೆಲ್ಡೋ ಹದ್ಮೂರೋ ಇರ್ತಿತ್ತು. ಹತ್ತು ಪೈಸಾ ಕೊಟ್ರೂ ಲೂಜ಼ು(ಲೂಸ್) ಕೊಡ್ತಿದ್ರು.

ಸಾಟೆ ಬಿಸ್ಕತ್ತು ದೊಡ್ಡ ಟಿನ್ನುಗಳಾಗೆ ಬತ್ತಿದ್ವು. ಗುಂಡಗೆ ಇರ್ತಿದ್ವು. ಉಪ್ಪು ಬಿಸ್ಕತ್ತು ಸಣ್ಣವು ಆರು ಮೂಲೆ ಇರೋವು. ಐದು ಪೈಸಾಗೆ ಇಷ್ಟು ಅಂಬ್ತ ಕೊಡಾರು. ಹಾಳೇನಾಗೂ ಕಟ್ಟಿಕೊಡ್ತಿರ್ಲಿಲ್ಲ. ಕೈಯಾಗೆ ತುರುಕೋರು. ಹುಡುಗ್ರಾದ್ರೆ ಪಟಾಪಟಿ ಚಡ್ಡಿ ಜೋಬ್ಯಾಗೆ ತುರುಕ್ಕಂತಿದ್ರು. ನಮ್ಗೇ ಲಂಗ್ದಾಗೆ ಜೋಬಿಕ್ಕುತ್ತಿರಲಿಲ್ಲ. ಇಸ್ಕೂಲ್ ಬ್ಯಾಗಾಗೆ ತುರುಕ್ಕಂಡು ಹೋಗ್ತಿದ್ವಿ.

ಕಮ್ಮರ್ ಕಟ್ಟು

ಕಮ್ಮುರು ಕಟ್ಟು ಅಂತ ಬತ್ತಿತ್ತು. ದೊಡ್ಡ ಬೊಂಬಿನ ಗಳುಕ್ಕೆ ಸಿಗಿಸ್ಕೊಂಡು ಬರೋನು. ಸಿಲ್ವಾರ್‌ದು‌ ಮಿಣ್ ಮಿಣಾ ಅನ್ನೋ ಚುನ್ನಾರಿ(ಸುನೇರಿ) ಪೇಪರ್ನಾಗೆ ಸುತ್ತಿರಾ ಗುಂಡಗಿರಾ ಮಿಠಾಯಿ. ಜೋನಿ ಬೆಲ್ಲದಾಗೆ ಮಾಡ್ತಿದ್ರು. ಅದೇ ಬಣ್ಣ. ಗಟ್ಟಿ ಗುಂಡು ಕಲ್ಲಿದ್ದಂಗಿತ್ತು. ಇನ್ನೊಂದು ಎಸ್ರು ಮರ್ತೋಗೈತೆ. ಕಾಪಿ ಕಲರ್ದು(ಬ್ರೌನ್) ಮಿಠಾಯಿನೂ ಚುನ್ನಾರಿ ಪೇಪರ್ನಾಗೆ ಸುತ್ತಿ ಮಾರ್ತಿದ್ರು. ಇದೂ ಗಟ್ಟಿಗೇ ಇರ್ತಿತ್ತು.

ಗಾಜಿನ ಡಬ್ಬಗ್ಳು

ಅಂಗ್ಡೀಗ್ಳಾಗೆ ಸಾಲೂಕೆ ಗಾಜಿನ್ ಡಬ್ಬ ಇಕ್ಕಿರ್ತಿದ್ರು. ಅದ್ರಾಗೆ ತಿಂಡಿ ಇಕ್ಕೀರೆ ಸಣ್ಣೈಕ್ಳು ನೋಡ್ಕಂತಾ ಬಾಯಾಗೆ ನೀರೂರುಸ್ಕಂಡು ಎಂಗಾನ‌ ಮಾಡಿ ಕೊಂಡ್ಕಾಬೇಕು ಅಂಬ್ತ ಕಷ್ಟ ಬೀಳೋರು.

ಬೆಣ್ಣೆ ಬಿಸ್ಕತ್ತು

ಗಾಜಿನ ಡಬ್ಬದಾಗೆ ನಗ್ತಾ ಇದ್ವು. ಚೌಕಾಕಾರುದ್ದು, ಗುಂಡಗಿರಾದು ಬತ್ತಿತ್ತು. ಇನ್ನಾ ಈ ಡಬ್ಬದಾಗೆ‌ ಕಾರುದ್ದೂ ಪದಾರ್ಥ ಇದ್ವು. ಉಪ್ಪು ಕಳ್ಳೆ (ಉಪ್ಪು ಕಡಲೆ), ಕಾರ ಬಟಾಣಿ, ಕಾರಸೇವು ಇರ್ತಿತ್ತು. ಉಪ್ಪು ಕಳ್ಳೆ, ಬಟಾಣಿ ಐದು ಪೈಸಾ ಕೊಟ್ರೆ ಕೈಯಾಗೆ ವಸಿ ಹಾಕೋರು. ಅದ್ನ‌ ಅಂಗೇ ಕಟುಂ ಕುಟುಂ ಅಂಬ್ತ ಬಾಯಾಡುಸ್ಕಂಡು ಇಸ್ಕೂಲ್ ವರ್ಗೂ ಹೋಗಾದು. ಬ್ಯಾಗ್ನೇ ತಿಂತಿರ್ಲಿಲ್ಲ. ಒಂದು ಹಿಡಿ ಇರ್ತಿತ್ತು. ಅದ್ನ ಅಂಗೈಯಾಗೆ ಭದ್ರವಾಗಿ ಇಕ್ಕಂಡು, ಕಾಲಿ ಆಗೋದ್ರೆ ಅಂಬ್ತ, ಒನ್ನೊಂದೇ ಕಾಳ್ನ ಬಾಯಾಗೆ ಎಸ್ಕಂತಾ ಒಂದು ಗಂಟೆ ಚಪ್ಪರ್ಸಿ, ನಮುಲಿ ನಿಧಾನುಕ್ಕೆ ತಿಂತಿದ್ವಿ. ಇನ್ನಾ ನಾಕೋ ಐದೋ ಮಿಗಿಲಿರ್ತಿತ್ತಲ್ಲ. ಅದ್ನ ಬ್ಯಾಗಾಗೋ, ಜಾಮಿಟ್ರಿ ಬಾಕ್ಸಾಗೋ ಹಾಕ್ಕಣಾದು. ಆಟೊತ್ಗೇ ಉಪ್ಪು ಕಳ್ಳೆಗೆ ಅಂಗೈಯಾಗಿನ್ ಬೆವ್ರೂ ಸೇರ್ಕಂಡು ಇನ್ನೊಸಿ ಉಪ್ಪುಪ್ಪಾಗ್ತಿತ್ತು. ಬೋ ರುಚಿ ಏರ್ತಿತ್ತು.

ಒಂದು ಪಿರ್ಡು(ಪೀರಿಯಡ್) ಮುಗ್ದ್ ಮ್ಯಾಗೆ‌ ಇನ್ನೊಬ್ಬ ಮೇಷ್ಟ್ರು ಬರಾ ಮುಂದೆ ಒಂದು ಬಾಯಾಗಾಕ್ಕಂಡು ಸದ್ದಿಲ್ದಂಗೆ ಚಪ್ಪರಿಸಾದು. ಅದು ಮೆತ್ತಗಾಗಿ ಕಡಿದ್ರೂ ಕಟುಂ ಅಂಬ್ತ ಸದ್ದು ಬರ್ದಿರಾಗಂಟ ಚಪ್ಪರ್ಸಿ ಆಮ್ಯಾಕೆ ನಮುಲೋದು.

ಸಾಬಣ್ಣದೀರು

ಆವಾಗೆಲ್ಲಾ ಇವೆಲ್ಲಾ ಮಾರಾಕೆ ಸೈಕಲ್ ಮ್ಯಾಗೋ, ಬಿದಿರಿನ ಬೊಂಬಿನ ಗಳುಕ್ಕೆ ಸಿಗುಸ್ಕಂಡೋ ಬರಾರು ಸಾಬಣ್ಣದೀರೇ. ಮಕ್ಕಳ್ಗೆ ಸಿನೇಹಿತ್ರು ಇವ್ರು. ಸಾಮನ್ಯುಕ್ಕೆ ಬ್ಯಾರೆ ಗಂಡಸ್ರು ಊರ್ನಾಗೇ‌ ಬ್ಯಾಸಾಯ ಮಾಡ್ಕಂಡೋ, ಜೀವ ದನಾ ಕಾಯ್ಕಂಡೋ, ಕೂಲಿ ನಾಲಿ ಮಾಡ್ಕಂಡೋ ಊರಾಗೇ ಇರ್ತಿದ್ರು. ಈ ಸಾಬಣ್ಣದೀರು ಇಂಗೇ ಊರೂರ್ ಮ್ಯಾಗೆ ತಿರುಕ್ಕೊಂತಾ ಯಾಪಾರ ಮಾಡಾರು. ಒಂದು ಸೈಕಲ್ ಮ್ಯಾಗೆ ಹತ್ತು ಹದಿನೈದು ಬ್ಯಾಗುಗ್ಳ ಕಟ್ಟಿಕೊಂಡು ಬತ್ತಿದ್ರು. ಒನ್ನೊಂದರಾಗೆ ಒನ್ನೊಂದು ತಿಂಡಿ. ಬನ್ನು, ಬೋಟಿ, ಮಿಠಾಯಿ, ಬಾಯಿ ಬಣ್ಣ, ಉಪ್ಪು ಕಳ್ಳೆ, ಬಟಾಣಿ ಅದೂ ಇದೂ.‌ ಅದೆಂಗೇ ಒಂದೇ ಸೈಕಲ್ನಾಗೆ‌ ಓಸೂ(ಅಷ್ಟೂ) ತರ್ತಿದ್ರೋ ನಾಕಾಣೆ. ಪಾಪ ಊರಿಂದೂರ್ಗೆ ಸೈಕಲ್ಲು ತುಳ್ದೂ ತುಳ್ದೂ ಎಕ್ಕಾಸ(ಸುಸ್ತು) ಬೀಳ್ತಿದ್ರು.

ಬೋಟಿ

ಇದ್ರು ರುಚೀನ ನಮ್ ನಾಲ್ಗೆ ಇವತ್ಗೂ ಮರ್ತಿಲ್ಲ. ನಮ್‌ ಬೆಳ್ಳಿಗಿಂತಾ ಉದ್ದ ಇರೋವೂ ಅಂಗೇ‌ ಅದ್ರಾಗೆ ಅರ್ಧ ಇರಾವು ಎಲ್ಡು ತರ ಇದ್ವು. ಸಣ್ಣವು ಬಣ್ಣ ಬಣ್ಣದಾಗಿರ್ತಿತ್ತು. ದೊಡ್ಡದು ಅರಿಸಿನ ಬಣ್ಣ ಮಾತ್ರ. ಐದು ತಕಂಡು ಐದೂ ಬೆಳ್ಳಿಗೆ ತಗ್ಲಾಕ್ಕಂಡು ಒನ್ನೊಂದೇ ಬೆಟ್ನ ಚೀಪೋದು. ಅದು ಮೆತ್ತಗಾದ ಮ್ಯಾಗೆ ಕರಕರಾಂತ ನಮುಲೋದು(ಅಗಿಯೋದು). ಆಮ್ಯಾಗೆ ಇನ್ನೊಂದು ಬೆಟ್ಟಿಂದು. ಇಬ್ರೂ ಮೂರು ಜನ ಒಟ್ಟಿಗೇ ತಕಣಾದು. ಯಾರ್ ನಿಧಾನುಕ್ಕೆ ತಿಂಬ್ತಾರೋ ಅವ್ರು ಗೆದ್ದಂಗೆ. ಪೈಪೋಟಿ ಮ್ಯಾಗೆ ಮೆಲ್ಲುಕೆ ತಿನ್ನಾದು. ಅವ್ರುಗೆ ಕಾಣ್ದಂಗೆ ಒಂದು ಬಚ್ಚಿಕ್ಕಣಾದು. ಎಲ್ಲಾರ್ದೂ ಮುಗುದ್ ಮ್ಯಾಕೆ ಅದ್ನ ತೋರ್ಸಿ, ನಾನೇ ಗೆದ್ದೆ ಅಂಬ್ತ ಬೆಳ್ಳು ತೋರ್ಸಿ ಅಣಕಿಸೋದು. ಅವ್ರು ಆಸೆಯಿಂದ ನೋಡ್ತಿದ್ರೆ ನಾವು ಕುಸೀಲಿ ಸದ್ದು ಮಾಡ್ಕಂತಾ ತಿಂದು ಅವುರ್ ಹೊಟ್ಟೆ ಉರ್ಸೋದು.

ದಿಲ್ ಕುಶ್ ಅಂತ ಸೀ ಬ್ರೆಡ್ಡು ಮಾರ್ತಿದ್ರು. ಜಾಮೂನು ಅಂತ ಕಿತ್ತಲೆ ಬಣ್ಣುದ್ದು ಸಣ್ಣ ಸೀ ಉಂಡೆ ಸಿಗ್ತಿತ್ತು. ಅದು ಟೊಳ್ಳು ಟೊಳ್ಳಾಗಿರ್ತಿತ್ತು. ಸಕ್ರೆ ಪಾಕ್ದಾಗೆ ಅದ್ದಿರ್ತಿದ್ರು. ಒಂದೇ ಸತಿ ಬಾಯಾಗಾಕ್ಕಣಾ ತರುಕ್ಕಿತ್ತು. ಹಾಲ್ ಕವಾ ಐವತ್ತು ಪೈಸಾ. ಕಳ್ಳೆಮಿಠಾಯಿ ನಾಕಾಣೆ. ಬಾಯಿ ಬಣ್ಣ ಅಂತ ಬತ್ತಿತ್ತು. ಅದು ನೋಡಾಕೆ ಲಿಪ್ ಟಿಕ್ಕು ಟೂಬಿದ್ದಂಗೇ ಇರ್ತಿತ್ತು(ಲಿಪ್ ಸ್ಟಿಕ್ ಟ್ಯೂಬ್). ಕನಕಾಂಬ್ರದ ಬಣ್ಣ, ಕುಂಕುಮ್ದ ಬಣ್ಣ‌ ಇದ್ವು. ಚಪ್ಪರಿಸೀರೆ ನಾಲ್ಗೇ ಎಲ್ಲಾ ಕೆಂಪೋ ಕೆಂಪು. ಬಾಯೆಲ್ಲಾ ಕೆಂಪು. ಹತ್ತು ಪೈಸಾಗೆ ಕೊಬ್ರಿ ಚಾಕ್ಲೇಟು. ನೂಟ್ರಿನ್ ಚಾಕ್ಲೇಟೋ, ಪ್ಯಾರಿಸ್ ಚಾಕ್ಲೇಟೋ ಎಂತದೋ ಇರ್ಬೇಕು.

ಇವುನ್ನ ಬಿಟ್ರೆ ಪ್ರಾಣೇಶಪ್ಪನ ಅಂಗಡ್ಯಾಗೆ ಸಂಜೀ ಹೊತ್ನಾಗೆ ಬೋಂಡಾ ಹಾಕೋರು. ಪಕೋಡ ಐದು ಪೈಸಾಗೊಂದು. ಮೆಣಸಿನಕಾಯಿ ‌ಬೋಂಡಾ ಆದ್ರೆ ಹತ್ತು ಪೈಸಾಗೊಂದು. ಅದ್ನ ತಕಂಡ್ ಬಂದು ಅದ್ರ ಜೊತೆ ಬುರುಗು (ಕಳ್ಳೆಪುರಿ) ನಂಚಿಕಂಡು ತಿಂದ್ರೆ ಬೋ ಪಸಂದಾಗಿರ್ತಿತ್ತು. ಯಾವಾಗ್ಲಾನಾ ಜಡಿ ಮಳೆ ಹಿಡ್ದು ಶಬ್ಬಿ(ಮಳೆಗೆ ಬಿಡುಗಡೆ) ಆದೇಟ್ಗೆ ಅಮ್ಮುನ್ನ‌ ಕಾಡಿ ಬೇಡಿ ಕಾಸು ಈಸ್ಕಂಡು ಕಾರ ಕಾರವಾಗಿ, ಬಿಸ್ ಬಿಸ್ಯಾಗಿ ಇರಾ ಬೋಂಡಾ ತಕಾ ಬರೀವೆ (ಬರ್ತಿದ್ದೆ).

ಪೆನ್ನು ಪೆನ್ಸಿಲ್ಲು

ಇವೆಲ್ಲಾ ತಿನ್ನಾ ಪದಾರ್ಥ್ವಾದ್ರೆ ಲೆಡ್ ಪೆನ್ನು ಎಂಟಾಣೆ. ಬರೇ ಲೆಡ್ಡು ಹತ್ತು ಪೈಸಾ. ನಟ್ರಾಜ ಪೆನ್ಸಿಲ್ಲು, ರಬ್ರು ಇವೇ ನಮ್ ಜಾಮಿಟ್ರಿ ಬಾಕ್ಸಾಗಿರಾ ಸಾಮಾನು. ಮೆಂಡ್ರು ತಕಂತಿರ್ಲಿಲ್ಲ. ಸುಮ್ಕೆ ಕಾಸು ದಂಡ ಅಂತಾವಾ. ಬಿಲೇಡ್ನ( ಬ್ಲೇಡ್) ಅರ್ಧ ತುಂಡು ಮಾಡಿ ಮಡಿಕ್ಕಂತಿದ್ವಿ.‌ ಅದ್ರಾಗೆ ಪೆನ್ಸಿಲ್‌ನ ಚೂಪುಕ್ಕೆ ಜೀವ್ತಿದ್ವಿ (ಎರೆಯೋದು). ಜೀವಿ ಜೀವಿ ಒಂದು ಅಂಗುಲ ಆಗಿರಾ ಮೋಟು ಪೆನ್ಸಿಲ್‌ನ ಸತ ಬಿಸಾಕ್ದೆ ಹಳೆದಾಗಿರಾ ಲೆಡ್ ಪೆನ್ನಿಗೆ ಸಿಕ್ಕಿಸಿ ಉದ್ದ ಮಾಡ್ಕಂಡು ಬರ್ಯಾ ಆಟ ನಮ್ದು. ಎಲ್ಲಾರ್ ತಾವ್ಕೂ ಒಂದೇ ನಮೂನಿ ಪೆನ್ಸಿಲ್ಲು. ಬಿಲೇಡು ತಕ್ಕಂಡು ಅದ್ರಾಗೆ ನಮ್‌ನಮ್ದು ಗುರ್ತು ಹಿಡಿಯಾಕೆ ಏನಾರಾ ಕೆತ್ತಿ ಇಡ್ತಿದ್ವಿ. ಮರದ(ವುಡ್) ಸ್ಕೇಲಿನ ಮ್ಯಾಗೂ ಹೆಸ್ರು ಕೆತ್ತುತ್ತಿದ್ವಿ.

ಇಂಕ್ ಪೆನ್ನು ನಮ್‌ ಮೇಷ್ಟ್ರು ಐದ್ನೇ ಕ್ಲಾಸ್ಗೆ ಬಂದ್ ಮ್ಯಾಗೆ ಪರೀಕ್ಷೆ ಬರ್ಯಾವಾಗ ಇಂಕ್ ಪೆನ್ನೇ ಬೇಕೂ ಅಂಬೋರು. ಅದು ರೂಡಿ ಆಗಾಕೆ ಮದ್ಲಿಂದ್ಲೇ ಬರ್ಯಾದು. ಆವಾಗ ಮರ್ಚೆಂಟ್ ಇಲ್ಲಾಂದ್ರೆ ಪ್ಲಾಟೊ ಅಂತ್ಲೇನೋ ಬರ್ತಿದ್ವಪ್ಪ. ಇಂಕ್ ಪೆನ್ನಿನ್ ಕಾಟ್ದಾಗೆ ನಮ್ ಅವಸ್ಥೆ ಬ್ಯಾಡಾ. ಇಂಕ್ ಬಾಟ್ಲ್ ತಕಾಣಾಕೆ ಕಾಸೂ?? ಅದ್ಕೇಯಾ ಐದೋ ಹತ್ತೋ ಪೈಸಾ ಕೊಟ್ಟು ಅಂಗಡ್ಯಾಗೆ‌ ಪೆನ್ನು ತುಂಬುಸ್ಕಂಡು ಬತ್ತಿದ್ವು. ಮರ್ತು ಗಿರ್ತು ಹೋದ್ವೋ ಸಾಲಾ ತಕಂತಿದ್ವಿ. ತೊಟ್ಟು ಲೆಕ್ಕದಾಗೆ ಯವಾರಾ ನಡೀತಿತ್ತು. ಪೆನ್ನು ತಿರುಪು ಸೊಲ್ಪ ಲೂಜ಼ು ಮಾಡೀರೆ ನಿಬ್ಬಿನಾಗಿಂದ ತೊಟ ತೊಟಾಂತ ಒನ್ನೊಂದೆ ತೊಟ್ಟು ಬೀಳ್ತಿತ್ತು‌. ಐದೋ ಹತ್ತೋ ತೊಟ್ಟೂಂತ ಲೆಕ್ಕ ಮಡ್ಗಿ ವಾಪ್ಸು ಕೊಡ್ತಿದ್ವಿ. ಇದ್ರ ಗಲಾಟೇನಾಗೆ ಹೆಬ್ಬೆಟ್ಟು, ಮೊದುಲ್ನೇ ಬೆಟ್ಟು ಮಧ್ಯುದ್ ಬೆಟ್ಟು ನೀಲಿ ಬಣ್ಣುದ್ ಮಸಿ ಮೆತ್ತಿರ್ತಿತ್ತು. ಅದ್ನ ತೆಗ್ಯಾಕೆ ರಪರಪನೆ ತಲೇಗಾಕಿ ಉಜ್ಜಾದು. ಚೆಂದಾಕಿ ದಿನಾ ಕೊಬ್ರಿ ಎಣ್ಣೆ ಹಾಕಿ ಬಾಚ್ಕಂಡು ಬತ್ತಿದ್ವಲ್ಲ, ಅದ್ರಾಗೆ ಕೈ ಮಸಿ ಹೋಗ್ಲಿ ಅಂತ ಉಜ್ಜಿ ಕೂದ್ಲು ಎಲ್ಲಾ ಕೆದ್ರುಕಂತಿತ್ತು. ಹಳೇ ಪೇಪ್ರು, ಅಂಗೈಯಗ್ಲ ಹಳೇ ಬಟ್ಟೆ ಅದೂಕ್ಕೇಂತ್ಲೇ ಬ್ಯಾಗಿನ್ ಸಂದೀಲಿ ಇರ್ತಿದ್ವು. ಬ್ಯಾಗಿನ್ ಸಂದ್ಯಾಗೆ ಅದ್ರು ಜೊತ್ಯಾಗೆ ಕುಂಟಾ ಬಿಲ್ಲೇ ಬಚ್ಚಾ, ಗುಂಡಗಿರಾ ಕಲ್ಲು (ಅಕ್ಷಂತೆ ಕಲ್ಲು ಆಡಾಕೆ ಅಂಬ್ತ ಹೋಗ್ತಾ ಬರ್ತ ದಾರ್ಯಾಗೆ ಸಣ್ಣಕೆ ಗುಂಡಗಿರಾ ಕಲ್ಲು ಆರ್ಸಿ ಬ್ಯಾಗಾಗೆ ತುರುಕ್ಕಣಾದು), ಪೆಪ್ಪುರ್ ಮೆಂಟು ಬಾಯಾಗಾಕ್ಕಂಡು ಚೀಪಾವಾಗ ಮೇಷ್ಟ್ರು ಬಂದ್ರೂಂತ ಗಾಬ್ರೀಗೆ ಉಳಿದಿದ್ ಪಳಿದಿದ್ನ ಅಂಗೇ ಬ್ಯಾಗಾಗೆ ಹಾಕ್ಕಣಾದು. ಇಂಗೇ ಮಣ್ಣು ಮಸಿ ಅಂಬ್ತಾವಾ ಯಾತ್ಯಾತರದೋ ಸಾಮಾನು. ಒಂತರುಕ್ಕೆ ಬ್ಯಾಗು ಗೋಣೀ ಚೀರ್ಲ್ವಾಗಿರ್ತಿತ್ತು. ಕೈಯಾಕೀರೆ ಸಾಕು ನಿಧಿ ತರುಕ್ಕೆ ಒನ್ನೊಂದೇ ಸಾಮಾನು ಈಚಿಕ್ ಬರ್ತಿತ್ತು. ಅವೂ ಮಸೀ ಮೆತ್ತ್ಕಂಡು ಬ್ಯಾಗೆಲ್ಲಾ ಮಸಿಯೇ. ರಬ್ರು ತಕಂಡು ಉಜ್ಜುತಿದ್ವಿ. ರಬ್ರೆಲ್ಲಾ ನೀಲಿ ಆಗ್ತಿತ್ತು. ಪೆನ್ನಿನ್ ನಿಬ್ಬು, ತಿರುಪು ಬಿಗ್ಯಾಗಿ ತಿರುವ್ತಿದ್ವಿ. ಇಂಕು ಸೋರ್ ಬಾರ್ದು ಅಂತ. ಕೊನೇಗೇ ತಿರುಪು ತೆಗ್ಯಾಕೇ ಆಗ್ದೇ ಬಾಯಾಗಿಕ್ಕಿ ಹಲ್ಲಾಗೆ ಕಚ್ಚಿ ತೆಗ್ಯಾ ಆಟ್ದಾಗೆ ಹಲ್ಲು, ನಾಲ್ಗೇ ಎಲ್ಲಾ ಇಂಕೋ ಇಂಕು.‌ ಮಕ ಮೂತಿ ಎಲ್ಲಾ ಮಾಡ್ಕಂಡು, ಅದ್ನ ಒರ್ಸಾಟದಾಗೆ ಒನ್ನೊಂದ್ ಕಿತ ಗೆಬುರ್ ಕೊಂಡು ಗೀರು ಬಿದ್ದು, ಮೇಷ್ಟ್ರು ತಾವ ಉಗ್ಸಿಕೊಂಡು ಬಟ್ಟೆ ಗಲೀಜಾಯ್ತು ಅಂತ ಅಮ್ಮುನ್ ತಾವ ಬಯ್ಸಿಕೊಂಡು ಬ್ಯಾಡಾ ನಮ್ ಪಾಡು ನಾಯಿ ಪಾಡು.

ಎಕ್ಸರ್ ಸೈಜು ಬುಕ್ಕು

ಲೇಖಕ್ ಬುಕ್ಕು ಬತ್ತಿತ್ತು. ನಲವತ್ತು, ಅರವತ್ತು ಹಾಳೇದು. ತೊಂಬತ್ತಾರು ಹಾಳೇದು. ಇನ್ನೂರು ಹಾಳೇದು. ರೂಲ್ಡು ಅನ್ರೂಲ್ಡು. ಗಟ್ಟಿ ರೊಟ್ಟು, ಮೆತ್ತಗಿರಾ ರೊಟ್ಟು ಅಂಬ್ತ ಇದ್ವು. ಅಕ್ಷರ ಗುಂಡಗೆ ಬರ್ಯಾಕೆ ಅಂತ ಕಾಪಿ ಪುಸ್ತ್ಕ ಬತ್ತಿತ್ತು. ಕನ್ನಡಕ್ಕೆ ಎಲ್ಡು ಲೈನು, ಇಂಗ್ಲೀಷಿಗೆ ನಾಕು ಲೈನು ಇರ್ತಿತ್ತು. ಗಣಿತುಕ್ಕೆ ಮಧ್ಯದಾಗೆ ಲೈನ್ ಹಾಕಿರ್ತಿದ್ರು. ಪಕ್ಕದಾಗೆ ಬಾಯಿ ಲೆಕ್ಕ ಹಾಕ್ಕಣಾಕೆ ಅಂತ ರೂಲೀಸ್(ರೂಲ್ಸ್) ಮಾಡಿದ್ರು. ರೇಖಾ ಗಣಿತುಕ್ಕೆ ಗ್ರಾಫ಼್ ಬುಕ್ಕು ಇದ್ವು. ಇವೆಲ್ಲಾ ನಾಕಾಣೆ ಎಂಟಾಣೆ ತೀರಾ ಅಂದ್ರೆ ರೂಪಾಯಿ ಆಚೀಚೆ ಇರ್ತಿತ್ತೇನೋ.

ಹೊಸ್ದೇ ಬೇಕೂಂತೇನೂ ಇರ್ಲಿಲ್ಲ. ವರ್ಸ ಮುಗುದ್ ಮ್ಯಾಗೆ ಎಲ್ಲಾ ಬುಕ್ಕುಗಳಾಗೂ ಉಳಿದಿರಾ ಹಾಳೆ ಕಿತ್ತು, ನಾವೇ‌ ಬುಕ್ಕು ಹೊಲ್ಕಂತಿದ್ವಿ. ಹಳೆ ಕ್ಯಾಲೆಂಡ್ರು ತಕಂಡು ಮರಾಳಿ(ಬೈಂಡ್) ಹಾಕ್ಕಂತಿದ್ವು. ಬೇಸ್ಗೆ ರಜ್ದಾಗೆ ಇದೇ ಕೇಮೆ ನಮ್ದು. ದಬ್ಬಣದಾಗೆ ತೂತು ಕೊರ್ದು, ಬಿಳೇ ದಪ್ಪ ಟೈನ್(ಟ್ವೈನ್) ದಾರದಾಗೆ ಹೊಲೀತಿದ್ವಿ.

ಹಳೇ ಪಾಠದ ಪುಸ್ತಕಗುಳ್ನ ದೊಡ್ಡ ಕ್ಲಾಸಿನೋರ ತಾವ ಮದ್ಲೇ ಮಾತಾಡ್ಕಂಡು ಪುಸ್ತಕ ನೋಡಾಕೆ ಚೆಂದಾಗಿರೋರ ತಾವ ಅರ್ಧ ರೈಟಿಗೆ ತಕಂತಿದ್ವಿ. ಎಲ್ಲಾ ಪೈಸಾ ಲೆಕ್ಕಾದಾಗೇ ಮುಗೀತಿತ್ತು. ನಾವೂ ನಮ್ ಪುಸ್ತಕ ಮಾರ್ತಿದ್ವಿ.

ನಮ್ ಕಾಲ್ದಾಗೂ ಇತ್ತಪ್ಪ ಕಿಂಡರ್ ಜಾಯ್ಸು ತರುದ್ದು ನನ್ ಮಗುನ್ ಕಾಲ್ದಾಗೆ ಈ ಕಿಂಡರ್ಜಾಯ್ಸು ಅಂದ್ರೆ ಬೋ ಇಷ್ಟ. ಆಟವೂ ಆಡಬೌದು, ತಿನ್ನಾಕೂ ಸಿಗ್ತೈತೆ ಅಂತಾವಾ. ಆದ್ರೂ ಯಾಪಾಟಿ ರೈಟಪ್ಪ ಅದು.

ನಮ್ ಕಾಲ್ದಾಗೆ ಹತ್ತು ಪೈಸಾ ಕೊಟ್ರೆ ಒಂದು ಪೆಪ್ಪುರ್ ಮೆಂಟ್ ಬತ್ತಿತ್ತು. ಅದ್ರ ನಡೂ ಮಧ್ಯೆ ತೂತಿರ್ತಿತ್ತು. ಆಕಡೆ ಈ ಕಡೆ ದಾರ ಕಟ್ಟಿರ್ತಿತ್ತು. ನಾವೂ ಅದ್ರಾಗೆ ಎಲ್ಡೂ ಕೈಗ್ಳಾವು ಮೊದುಲ್ನೇ ಬೆಟ್ಟು ತೂರ್ಸಿ ಗಿರಗಿಟ್ಳೆ ತರ ಗಿರ್ ಅಂಬುಸ್ತಿದ್ವಿ. ಆಟಾಡಿ ಬ್ಯಾಸ್ರ ಆದಾಗ ಅಂಗೇ ಪೆಪ್ಪುರ್ ಮೆಂಟ್ ನೆಕ್ಕಾದು. ತಿರ್ಗಾ ದಾರ ಗಿರ್ ಅಂಬ್ಸಾದು. ಇಂಗೇ ಒಂದು ಕಿತ ತಂದ್ರೆ ಎಲ್ಡು ದಿನ ಆಟಾಡಿ ಆಮ್ಯಾಕೆ ಕಟುಂ ಕುಟುಂ ಅಂಬ್ತ ಕಡ್ದು ಕಾಲಿ ಮಾಡ್ತಿದ್ವಿ. ಅದ್ರಾಗೆ ನೀಲಿ, ರೋಜಾ, ಬಿಳೇ ಬಣ್ಣದ ಗೆರಿಗ್ಳು ಇರ್ತಿದ್ವು. ಜೋರಾಗಿ ತಿರುಗ್ಸಿದ್ರೆ ಬಣ್ಣ ಬಣ್ಣ ಕಾಣ್ತಿತ್ತು.

ಯಪ್ಪಾ‌ ಸಿವ್ನೇ ಯೋಳ್ತಾ ಹೋದ್ರೆ ನಮ್ಕಡೀಕ್ಕೆ ಒಂದು ಗಾದೇ ಮಾತೈತೆ “ತೆಗೆಲ್ಲೆ ತೆಲವಾರೆಲ್ಲೆ” ಅಂಬ್ತ. ತೆಲುಗು ಸೀಮೆ ಅಲ್ವೇ. ತೆಲುಗಿನ್ ಮಾತಿದು. ಮುಗಿಯಿದಿರಾ ಕೆಲಸ ಅಂಬ್ತ. ಒಂತರುಕ್ಕೆ ಇದೂ ಅಂಗೇಯಾ. ಬರೀತಿದ್ರೆ ಈಗ್ ಅನ್ಸುತೈತೆ, ಅಲ್ಲ ಯಾಪಾಟಿ ಪದಾರ್ಥಗೋಳು ನಮ್ಗೂ ಸಿಗ್ತಿದ್ವಲ್ಲ. ಸುಮ್ ಸುಮ್ಕೆ ನಮ್‌ ಕಾಲ್ದಾಗೆ ಯೋನೂ ಇರ್ಲಿಲ್ಲ ಅಂಬ್ತ ನಮ್ ಮಕ್ಕುಳ್ಗೆ ಯೋಳ್ಕಂಡೇ ಬಂದ್ವಲ್ಲ ಅಂಬ್ತ. ಇದ್ಕಿಂತ ಸಾವ್ರ ಪದಾರ್ಥ ಈಗ ಸಿಗಬೈದು, ಆದ್ರೆ ಇದ್ರಾಗೆ ಹತ್ತು ಪೈಸಾ ಭಾಗ ಈಗಿನ್ ಮಕ್ಳು ಮಜಾ ಮಾಡಿಲ್ಲ. ಐದು ಪೈಸಾ ಕುಸೀ ಪಟ್ಟಿಲ್ಲ ಕಣೇಳಿ. ಯೋಸು ಕೊಟ್ರೂ ಈಗ ಕುಸೀನೆ ಕಾಣವಲ್ದು. ನಮ್ಗಂಗಲ್ಲ ಬುಡಿ ಒಂದು ಸಣ್ಣ ತೌಡು ಬಿಸ್ಕತ್ತು ಸಿಕ್ರೂ ದಿನ್ವೆಲ್ಲಾ ಕುಸೀನೋ ಕುಸಿ ಇರ್ತಿತ್ತು.