Advertisement
ಪ್ರಕಾಂಡ ಪಾಂಡಿತ್ಯದ ಬಿ. ಎಚ್. ಶ್ರೀಧರರು: ಗೀತಾ ಹೆಗಡೆ, ದೊಡ್ಮನೆ ಬರಹ

ಪ್ರಕಾಂಡ ಪಾಂಡಿತ್ಯದ ಬಿ. ಎಚ್. ಶ್ರೀಧರರು: ಗೀತಾ ಹೆಗಡೆ, ದೊಡ್ಮನೆ ಬರಹ

‘ಸರ್, ಧ್ವಜಾರೋಹಣ ಮಾಡುವಾಗ ಹಾಗೇ ಮಾಡುವದಕ್ಕಿಂತ ತಲೆಯ ಮೇಲೆ ಏನಾದರೂ ಧರಿಸಬೇಕುʼ ಎಂದಾಗ ಅವರಿಗೂ ಅದು ಸರಿಯೆನಿಸಿತು. ಅವರ ಮನೆಯೇನೋ ಸಮೀಪದಲ್ಲೇ ಇದ್ದಿತ್ತಾದರೂ, ಹೋಗಿ ಅಲ್ಲಿಂದ ತರೋಣವೆಂದರೆ ಧ್ವಜಾರೋಹಣದ ಸಮಯಪಾಲನೆ ತಪ್ಪಿಸುವಂತಿಲ್ಲ! ‘ಹೌದಲ್ಲ, ಈಗೇನು ಮಾಡೋದು?ʼ ಎಂದರಂತೆ. “ಈ ಖಾದೀ ಟೋಪಿ ಹಾಕಿಕೊಳ್ಳಿ ಸರ್ʼ ಎಂದಾಗ ‘ಸರಿʼ ಎಂದು ಆ ಖಾದೀ ಟೋಪಿ ಧರಿಸಿ ಧ್ವಜಾರೋಹಣ ಮಾಡಿದರಂತೆ.. ಅಷ್ಟು ದೊಡ್ಡ ವಿದ್ವಾಂಸರಾಗಿದ್ದರೂ ಹೀಗೆ ಕಿರಿಯರನ್ನು ಆಲಿಸುವ, ಯಥೋಚಿತ ಸಂಗತಿಗಳಿಗೆ ತೆರೆದ ಮನವಿರುವ ನಿರಹಂಕಾರ, ನಿಜಕ್ಕೂ ಅಪರೂಪದ ಗುಣ!
ಹಿರಿಯ ಸಾಹಿತಿ ಬಿ. ಎಚ್.‌ ಶ್ರೀಧರರ ಬದುಕು ಮತ್ತು ಬರಹದ ಕುರಿತು ಗೀತಾ ಹೆಗಡೆ, ದೊಡ್ಮನೆ ಬರಹ

ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ಘನವಿದ್ವಾಂಸರನ್ನು ಉಲ್ಲೇಖಿಸುವಾಗ ನಿಃಸ್ಸಂಶಯವಾಗಿ ಬಿ.ಎಚ್. ಶ್ರೀಧರರ ಹೆಸರು ಬಂದೇ ಬರುತ್ತದೆ. ಎತ್ತರದ ನಿಲುವು, ಕನ್ನಡಕದ ಗಾಜಿನ ಹಿಂದೆ ವಿಚಾರ-ನಿಮಗ್ನ ತೀಕ್ಷ್ಣ ಕಣ್ಣುಗಳು, ಕ್ಲೋಸ್ ಕಾಲರ್‌ನ ಕಪ್ಪು ಕೋಟು, ಅದೇ ಬಣ್ಣದ ಪ್ಯಾಂಟು, ಕೊರಳನ್ನು ಸುತ್ತುವರೆದ ಒಂದು ಪುಟ್ಟ ಶಾಲು, ಇದು ಅವರ ಸಾದಾ ಸೀದಾತನದ ವೇಷ-ಭೂಷಣ. ಅವರ ಬಹುಮುಖ ಪಾಂಡಿತ್ಯದ ಕೃತಿಗಳನ್ನು, ವಿಸ್ತೃತ ಅಧ್ಯಯನಶೀಲ ಸಾಹಿತ್ಯ-ಪ್ರಕಾರಗಳನ್ನು, ಒಮ್ಮೆ ಕಣ್ಣಾಡಿಸಿದರೆ ಸಾಕು; ಎಂಥ ಗಾಢವಾದ ಚಿಂತನ-ಮಂಥನದಿಂದ ಈ ಕೃತಿಗಳು ಮೂಡಿರಬಹುದು ಎಂದು ಬೆರಗು, ಗೌರವ ಮೂಡದಿರದು. ಸಾಹಿತ್ಯದಲ್ಲಿ ಬಹುತೇಕ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ಕಾವ್ಯ, ಗ್ರಂಥವಿಮರ್ಶೆ, ಜಾನಪದ, ಯಕ್ಷಗಾನ, ಐತಿಹಾಸಿಕ, ಅಧ್ಯಾತ್ಮಿಕ, ಕಾದಂಬರಿಗಳು, ರಾಜಕೀಯಶಾಸ್ತ್ರ, ವಿಡಂಬನೆಗಳು.. ಮುಂತಾಗಿ ಕನ್ನಡ, ಆಂಗ್ಲ ಮತ್ತು ಸಂಸ್ಕೃತಭಾಷೆಗಳಲ್ಲಿ ಓತಪ್ರೋತವಾಗಿ ವಿಹರಿಸುವ ನಿಶಿತಮತಿ! ವಾಸ್ತವವಾಗಿ, ಅವರ ಕೃತಿಗಳೆಲ್ಲ ಪ್ರಬುದ್ಧ ಮಟ್ಟದವೇ! ಅವುಗಳ ಪ್ರವೇಶಿಕೆಗೂ, ಗ್ರಹಿಕೆಗೂ, ಒಂದು ರೀತಿಯ ಬೌದ್ಧಿಕ ಗಾಂಭೀರ್ಯದ ನೆಲೆಗಟ್ಟಿನ ಅಗತ್ಯ ಬೇಕಾಗಬಹುದು ಎಂದರೆ ಅನುಚಿತವಾಗದೇನೋ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ಏಪ್ರಿಲ್‌ ಇಪ್ಪತನಾಲ್ಕು, ೧೯೧೮ ರಲ್ಲಿ ಜನಿಸಿದ ಶ್ರೀಧರರ ತಂದೆ ಸೀತಾರಾಮ ಹೆಬ್ಬಾರ ಹಾಗೂ ತಾಯಿ ನಾಗಮ್ಮ. ಬಿಜೂರು ಸೊರಬ ಮತ್ತು ಸಾಗರ ಪಟ್ಟಣಗಳಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿದ ನಂತರ ಮೈಸೂರಿನ ಮಹಾರಾಜ ಮಹಾವಿದ್ಯಾಲಯದಲ್ಲಿ ರಾಜ್ಯಕ್ಕೇ ಮೊದಲಿಗರಾಗಿ (೧೯೪೧) ಚಿನ್ನದ ಪದಕ ಗಳಿಸಿ ಬಿ ಎ. ಪದವಿ ಪೂರೈಸಿದರು. ಮುಂದಿನ ಎಮ್.ಎ. ಪದವಿ ಪಡೆದಿದ್ದು ಕೂಡಾ ಎರಡು ಚಿನ್ನದ ಪದಕಗಳೊಂದಿಗೆ! ಒಂದು, ಪೂರ್ಣಂ‌ ಕೃಷ್ಣರಾವ್ ಚಿನ್ನದ ಪದಕ, ಇನ್ನೊಂದು, ನವೀನಂ ರಾಮಾನುಜಾರ್ಯಂ ಸ್ವರ್ಣಪದಕ. ಮತ್ತೆ ಅದೇ ಸಮಯಕ್ಕೆ ಅವರು ಬರೆದ ‘ಕವಿಯೂ, ವಿಜ್ಞಾನಿಯೂʼ ಪ್ರಬಂಧಕ್ಕೆ ಹೊನ್ನಸೆಟ್ಟಿ ಪದಕ!

(ಕುಮಟಾ ಕಾಲೇಜಿನಲ್ಲಿ, ಗೋಪಾಲಕೃಷ್ಣ ಅಡಿಗ ಮತ್ತು ಮಿತ್ರರೊಂದಿಗೆ)

೧೯೪೬ರಲ್ಲಿ ರಮಾದೇವಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ೧೯೪೭ರಿಂದ ೧೯೫೧ರವರೆಗೆ ಹುಬ್ಬಳ್ಳಿಯಲ್ಲಿ ಕರ್ಮವೀರ ವಾರಪತ್ರಿಕೆಯ ಸಂಪಾದಕರಾಗಿ ಪತ್ರಕರ್ತ ವೃತ್ತಿಯಲ್ಲಿ ನಿರತರಾದರು. ಮುಂದೆ ಹನ್ನೊಂದು ವರ್ಷ ಕುಮಟಾದ ಕೆನರಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ನಂತರದ ದಿನಗಳಲ್ಲಿ ಸಿರಸಿಯ ಎಮ್. ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪಪ್ರಾಚಾರ್ಯರಾಗಿ (೧೯೬೨-೧೯೬೯), ಹಾಗೂ ಸಿದ್ದಾಪುರದ ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ (೧೯೬೯-೧೯೭೬) ಸೇವೆ ಸಲ್ಲಿಸಿದರು.

ಬಿ ಎಚ್. ಶ್ರೀಧರರ ಕೃತಿಗಳ ಬಗ್ಗೆ ಸ್ಥೂಲವಾಗಿ ಹೇಳಿದರೂ ಅದೇ ಒಂದು ದೀರ್ಘ ಲೇಖನವಾದೀತು! ಮೇಘನಾದ(೧೯೪೫), ಕಿನ್ನರಗೀತ(೧೯೪೭), ಅಮೃತಬಿಂದು(೧೯೪೯), ಮಹೀಗೀತ(೧೯೫೮), ರಸಯಜ್ಞ(೧೯೬೪) ಪಂಚರಾತ್ರ ಎಂಬ ಯಕ್ಷಗಾನ(೧೯೯೩), ಮಯೂರಶರ್ಮ, ಸೋಮಾರಿ ಕ್ಲಬ್‌ ಎಂಬ ನಾಟಕಗಳು, ಜೀವಯಾನ (ಆತ್ಮಕಥೆ- ೧೯೯೪), ಕಾವ್ಯಸೂತ್ರ, ಕವೀಂದ್ರ ರವೀಂದ್ರ, ಜನ್ನ, ಪಸರಿಪ ಕನ್ನಡಕ್ಕೊಡೆಯನೀಗ ದರಾಂಕಿತ ಬೇಂದ್ರೆ… ಮುಂತಾದವು ಅವರ ವಿಶಿಷ್ಟ ಕೊಡುಗೆಗಳಲ್ಲಿ ಉದಹರಿಸಬಹುದಾದ ಕೆಲವು. ಬನವಾಸಿಯ ಕದಂಬರು, ಬನವಾಸಿಯ ಕೈಪಿಡಿ, ಕದಂಬ ಇತಿಹಾಸ ಅವರ ಐತಿಹಾಸಿಕ ಕೃತಿಗಳಾಗಿದ್ದರೆ, ಜ್ಞಾನಸೂತ್ರ, ರಾಷ್ಟ್ರಸೂತ್ರ,,

ಭಾವನಾ ಸಮನ್ವಯ, ಭಾರತೀಯ ನಾಗರಿಕತೆಗೆ ಮನುವಿನ ಕೊಡುಗೆ, ಕಾಳಿದಾಸನ ಕಾವ್ಯಸೌರಭ, ಕುಂದಮಾಲೆ, ರಾಜಧರ್ಮ, ಶಿವಪುರಾಣ ಮುಂತಾದ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗಳು ಅವರ ಪ್ರಖರ ವೈಚಾರಿಕ ಮೂಸೆಯಲ್ಲಿ ಮೂಡಿಬಂದ ಸೆಳಕುಗಳು. ಬೇತಾಳ ಕುಣಿತ, ಭಾಷಣ ಭೈರವರ ಒಡ್ಡೋಲಗ ಮೊದಲಾದ ಕೃತಿಗಳು ಅವರ ವಿಡಂಬನಾ ಚಾತುರ್ಯ, ಹಾಸ್ಯಪ್ರಜ್ಞೆಗೆ ದ್ಯೋತಕ. ಅವರು ಸಂಸ್ಕೃತ ಮತ್ತು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಗ್ರಂಥಗಳೂ ಹಲವು! ಭಾರತೀಯ ರಾಜಧರ್ಮದ ಸತ್ವ ಮತ್ತು ಸ್ವರೂಪ- ಭಾಗ ೧ (ಅರವಿಂದರ The Foundation of Indian Culture- part-1) ೧೯೫೫) ವೇದರಹಸ್ಯ (ಅರವಿಂದರ The secret of the Veda-೨೦೧೭), ಮಾತೃಶ್ರೀ (ಪಶುಪತಿ ಭಟ್ಟಾಚಾರ್ಯರ On the Mother Devine ೧೯೭೫), ಶ್ರೀ ರಮಣಮಾರ್ಗ ಭಾಗ-1 ಮತ್ತು 2 (ಶ್ರೀ ಸಾಧು ಓಮ್‌ ಅವರ The path of Shri Ramana: part- 1 & part- 2 ಮುಂತಾದವು.

ಬಿ.ಎಚ್. ಶ್ರೀಧರರದು ಸುಸಂಸ್ಕೃತ ಪರಿವಾರ. ಮಡದಿ ರಮಾದೇವಿ. ರುಕ್ಮಿಣಿ, ಸುಶೀಲ ಮತ್ತು ರಮಾ ಅವರ ಸಹೋದರಿಯರು. ಸುಮಾ, ಪ್ರತಿಭಾ, ವಿಜಯಾ, ರಾಜಶೇಖರ ಮತ್ತು ರಾಜೇಶ್ವರಿ ಶ್ರೀಧರರ ಮಕ್ಕಳು.

ಶ್ರೀಧರರ ಬಹುಶ್ರುತ ಪಾಂಡಿತ್ಯವನ್ನು ಗೌರವಿಸುವ ನಿಟ್ಟಿನಲ್ಲಿ, ಅನೇಕ ಮೌಲಿಕ ಪ್ರಶಸ್ತಿ, ಪುರಸ್ಕಾರಗಳು ಬಿ. ಎಚ್. ಶ್ರೀಧರರನ್ನು ಅರಸಿ ಬಂದವು. ಅವರ ಪುತ್ರ ಶ್ರೀ ರಾಜಶೇಖರ ಹೆಬ್ಬಾರರಿಂದ ೧೯೯೧ರಲ್ಲಿ ಸಿರಸಿಯಲ್ಲಿ ಸ್ಥಾಪನೆಗೊಂಡ ಬಿ.ಎಚ್. ಶ್ರೀಧರರ ಸಾಹಿತ್ಯ ಪ್ರಶಸ್ತಿ ಸಮಿತಿಯು ಕನ್ನಡದ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ, ಅವರ ಅತ್ಯುತ್ತಮ ಕೃತಿ ಮತ್ತು ಜೀವಮಾನದ ಸಾಧನೆಗಳನ್ನು ಪ್ರಶಸ್ತಿಪೂರ್ವಕ ಪುರಸ್ಕರಿಸುತ್ತ ಬಂದಿದೆ. ಇತೀಚೆಗಷ್ಟೇ ಎಲ್‌. ಎಸ್ಸ್. ಶಾಸ್ತ್ರಿ ಅವರು ಬರೆದ, ಬಿ.ಎಚ್‌ ಶ್ರೀಧರರ ಕುರಿತ ಗ್ರಂಥವನ್ನು ದೆಹಲಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದುದು ಬಿಡುಗಡೆಗೊಂಡಿದೆ ಎಂಬುದು ಹರ್ಷದ ಸಂಗತಿ! ಅವರ ಸಮಗ್ರ ಕನ್ನಡ ಸಾಹಿತ್ಯದ ಗಣಕೀಕೃತ ಕನ್ನಡ ಐವತ್ತಾರು ಪುಸ್ತಕಗಳು- ಪ್ರಸಿದ್ಧ ಸಂಚಯ ಸಂಸ್ಥೆ(ಸಂಚಿ ಫೌಂಡೇಷನ್)ಯ ಮಹತ್ಕಾರ್ಯಗಳಲ್ಲಿ ಒಂದು. ಶ್ರೀಧರರ ಕುರಿತ ಅನೇಕ ಮಹನೀಯರು ಬರೆದ ಮಹತ್ವದ ಪುಸ್ತಕಗಳಲ್ಲಿ ೧೯೯೯ರಲ್ಲಿ ಡಾ. ಎಮ್. ಜಿ. ಹೆಗಡೆ ಅವರು ಶ್ರೀಧರರ ಕುರಿತ ಸ್ಮರಣಸಂಚಿಕೆ ಕೂಡ ಒಂದು.

ಹಾಗೆ ನೋಡಿದರೆ, ಶ್ರೀಧರರ ವ್ಯಕ್ತಿತ್ವದ ಅಥವಾ ಅವರ ಕೃತಿಗಳ ಆಳ-ಎತ್ತರಗಳನ್ನು ವಿವರಿಸುವಷ್ಟು ಒಡನಾಟ ಕಿರಿಯಳಾದ ನನ್ನದಲ್ಲ. ನಮ್ಮೂರಿನಲ್ಲೇ, ನಮ್ಮ ಮಹಾವಿದ್ಯಾಲಯದಲ್ಲೇ ಅವರು ಪ್ರಾಂಶುಪಾಲರಾಗಿದ್ದಾಗ, ಆಗಷ್ಟೇ ನನ್ನ ಪಿ.ಯು.ಸಿ. ಪ್ರವೇಶಕ್ಕಾಗಿ ನಮ್ಮಣ್ಣ ಚೈತನ್ಯ ಕರೆದುಕೊಂಡು ಹೋಗಿದ್ದೇ ಅವರ ಬಳಿ! (ಅಣ್ಣ ಸಿರಸಿಯಲ್ಲಿ ಮತ್ತು ಸಿದ್ದಾಪುರದಲ್ಲೂ ಕೆಲಸಮಯ ಶ್ರೀಧರರ ವಿದ್ಯಾರ್ಥಿಯಾಗಿದ್ದವನು) ನನ್ನ ಆ ಹೊತ್ತಿನ ಕೌತುಕದ ಮನಃಸ್ಥಿತಿ ಇನ್ನೂ ನೆನಪಿದೆ.

(ಸಿದ್ದಾಪುರದ ಮಹಾವಿದ್ಯಾಲಯದಲ್ಲಿ. ಎಚ್. ಶ್ರೀಧರ ದಂಪತಿಗೆ, ವರಕವಿ ಬೇಂದ್ರೆ ಅವರಿಂದ ಸನ್ಮಾನ. (೧೧/೧೦/೧೯೭೧). ಪತ್ನಿ ರಮಾದೇವಿ ಅವರ ಪಕ್ಕದಲ್ಲಿ ಇರುವವರು ಮಗಳು ಪ್ರತಿಭಾ)

ಆಗಿನ ದಿನಗಳಲ್ಲಿ ನಿಸಾರ್ ಅಹಮದರ ‘ಕುರಿಗಳು ಸಾರ್.. ಕುರಿಗಳು..ʼ ಇನ್ನೂ ಅಷ್ಟೊಂದು ಪ್ರಚುರವಾಗಿರದಿದ್ದ ಕಾಲ; ಆದರೆ ಶ್ರೀಧರರಿಗೆ ಅದಾಗಲೇ ಆ ಕವಿತೆ ಎಷ್ಟು ಹಿಡಿಸಿತ್ತೆಂದರೆ, ‘ಕುರಿಗಳು ಸಾರ್‌… ಕುರಿಗಳು..ʼ ಸಾಲುಗಳನ್ನು ಪದೇ ಪದೇ ಗುನುಗುತ್ತಿದ್ದರು ಎಂದು ನೆನಪಿಸುತ್ತಾನೆ. ಶ್ರೀಧರರ ಮಗು-ಸಹಜ ಸರಳಸ್ವಭಾವ ಕುರಿತಂತೆ ಅವನ ನೆನಪಿನ ಬುತ್ತಿಯಲ್ಲಿರುವ ಒಂದು ಘಟನೆ ಕೂಡ, ಈ ಲೇಖನ ಬರೆಯುವ ಹೊತ್ತಿಗೆ ನನಗೆ ಸಿಕ್ಕಿತು. ಅದೆಂದರೆ, ಸಿದ್ದಾಪುರದ ನೆಹರೂ ಮೈದಾನದಲ್ಲಿ, ಅಗಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜವಂದನೆಯ ಸಂದರ್ಭ. ಬಿ.ಎ. ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಅಣ್ಣ (ಈಗವರು ಉಚ್ಚ ನ್ಯಾಯಾಲಯದ ವಕೀಲರು) ಮನೆಯಿಂದ ಹೊರಡುವಾಗ ಸದಾ ಖಾದಿಧಾರಿಯಾಗಿದ್ದ ನಮ್ಮ ತಂದೆಯವರ ಖಾದೀ ಟೋಪಿಯನ್ನು ಧರಿಸಿ ಹಾಜರಾಗಿದ್ದ. ಪ್ರಾಂಶುಪಾಲ ಶ್ರೀಧರರು ಧ್ವಜಾರೋಹಣಕ್ಕೆ ಸಿದ್ಧರಾದರು. ಆಗ ಇವನು, ‘ಸರ್, ಸರ್ ʼ ಎಂದಾಗ ಏನು? ಎಂದು ಕೇಳಿದರಂತೆ. ‘ಸರ್, ಧ್ವಜಾರೋಹಣ ಮಾಡುವಾಗ ಹಾಗೇ ಮಾಡುವದಕ್ಕಿಂತ ತಲೆಯ ಮೇಲೆ ಏನಾದರೂ ಧರಿಸಬೇಕುʼ ಎಂದಾಗ ಅವರಿಗೂ ಅದು ಸರಿಯೆನಿಸಿತು. ಅವರ ಮನೆಯೇನೋ ಸಮೀಪದಲ್ಲೇ ಇದ್ದಿತ್ತಾದರೂ, ಹೋಗಿ ಅಲ್ಲಿಂದ ತರೋಣವೆಂದರೆ ಧ್ವಜಾರೋಹಣದ ಸಮಯಪಾಲನೆ ತಪ್ಪಿಸುವಂತಿಲ್ಲ! ‘ಹೌದಲ್ಲ, ಈಗೇನು ಮಾಡೋದು?ʼ ಎಂದರಂತೆ. “ಈ ಖಾದೀ ಟೋಪಿ ಹಾಕಿಕೊಳ್ಳಿ ಸರ್ʼ ಎಂದಾಗ ‘ಸರಿʼ ಎಂದು ಆ ಖಾದೀ ಟೋಪಿ ಧರಿಸಿ ಧ್ವಜಾರೋಹಣ ಮಾಡಿದರಂತೆ.. ಅಷ್ಟು ದೊಡ್ಡ ವಿದ್ವಾಂಸರಾಗಿದ್ದರೂ ಹೀಗೆ ಕಿರಿಯರನ್ನು ಆಲಿಸುವ, ಯಥೋಚಿತ ಸಂಗತಿಗಳಿಗೆ ತೆರೆದ ಮನವಿರುವ ನಿರಹಂಕಾರ, ನಿಜಕ್ಕೂ ಅಪರೂಪದ ಗುಣ!

ದೇವಧರ್ಮವಿಚಾರ, ಸತ್ಯತೆ, ಸದಾಚಾರ
ಯಾವುದಿದ್ದರೂ ಉಂಡ ಹೊಟ್ಟೆಗೆಲ್ಲ
ಕಾವರಿಲ್ಲದ ಕರುಣ ನಂದನರ ಬಾಳಿನಲಿ
ಯಾವುದೂ ನೆರವಿಲ್ಲ; ಇದ್ದೂ ಇಲ್ಲ..

ಈ ಕವಿತೆಯನ್ನು ನಾನು ಕಲಿತಿದ್ದುದು ಎಂಟನೇ ತರಗತಿಯಲ್ಲಿ. ಅಬ್ಬಾ! ಬದುಕಿನ ಎಂಥ ಕಟುವಾಸ್ತವವನ್ನು ಸಾರುತ್ತವೆ- ಈ ಸಾಲುಗಳು! ಇದನ್ನು ಬರೆದವರು ಮತ್ತಾರೂ ಅಲ್ಲ; ಬಿ.ಎಚ್. ಶ್ರೀಧರರೇ! ಯೋಗಾಯೋಗಾದಿಂದ ನಮಗೆ ಈ ಹಾಡನ್ನು ಕಲಿಸಿದವರು ಸ್ವತಃ ಶ್ರೀಮತಿ ಪ್ರತಿಭಾ ಟೀಚರ್.. ಬಿ.ಎಚ್. ಶ್ರೀಧರರ ಮಗಳು! ಅವರು ಎಂಟನೇ ತರಗತಿಗೆ ಸಂಗೀತಪಾಠದ ಸಮಯದಲ್ಲಿ ಕಲಿಸಿದ್ದುದು, ಇನ್ನೂ ನನ್ನ ಬಳಿಯಿದೆ. ಇನ್ನೂ ಬಹಳ ಮೊದಲು- ಅಂದರೆ ತುಂಬ ಚಿಕ್ಕವಳಿದ್ದಾಗ, ಸಾಕ್ಷಿಯಾದ ಘಟನೆ ಎಂದರೆ, ಸಿದ್ದಾಪುರದಲ್ಲಿ ಶ್ರೀಧರ ದಂಪತಿಗಳಿಗೆ ಒಂದು ಸನ್ಮಾನ ಸಮಾರಂಭದ! ಸನ್ಮಾನ ಯಾರಿಂದ ಗೊತ್ತೇ? ವರಕವಿ ಬೇಂದ್ರೆ ಅವರಿಂದ! ಕಾಲೇಜು ಎಲ್ಲಿದೆ ಎಂದೂ ಗೊತ್ತಿರದಿದ್ದರೂ, ಸಾಹಿತ್ಯಲೋಕದ ಹುಚ್ಚಿನ ನಾನು ಮತ್ತು ಗೆಳತಿ ಪ್ರೇಮಾವತಿ ಆ ಕಿಕ್ಕಿರಿದ ಸಭಾಂಗಣದಲ್ಲಿ ಹೇಗೊ ನುಸುಳಿ, ತುದಿಗಾಲಲ್ಲಿ ನಿಂತು, ಕುತ್ತಿಗೆ ಎತ್ತರಿಸಿ ಅಂತೂ ಈ ಮಹಾನುಭಾವರ ಸ್ಮರಣೀಯ ಸಂಗಮವನ್ನು ಕಣ್ಣು, ಕಿವಿ, ಮನದಲ್ಲಿ ತುಂಬಿಕೊಂಡು ಸಂಭ್ರಮಿಸಿದ್ದು ಮನಃಪಟಲದಲ್ಲಿ ಅಚ್ಚೊತ್ತಿದಂತಿದೆ. ಬೇಂದ್ರೆಯವರು ತಮ್ಮ ಈ ಸನ್ಮಿತ್ರರನ್ನು ಸಮ್ಮಾನಿಸುವಾಗ ಅಕ್ಕರೆಯಿಂದ ಶ್ರೀಮತಿ ರಮಾದೇವಿಯವರನ್ನು ‘ಪುಟ್ಟ ಮುತ್ತೈದೆʼ ಎಂದು ಬಣ್ಣಿಸಿದ್ದುದು ಎಂಥ ರೋಮಾಂಚನದ ಕ್ಷಣ!

ಬಿ. ಎಚ್. ಶ್ರೀಧರರು ಯುಗಪ್ರವರ್ತಕ ಕವಿ ಗೋಪಾಲಕೃಷ್ಣ ಅಡಿಗರ ಸಮಕಾಲೀನರು.. ಬಹುಶ್ರುತ ಮೇಧಾಶಕ್ತಿಯ ಪ್ರಖರತೆ, ಭಾಷಾಸೌಂದರ್ಯ, ವೈಚಾರಿಕತೆ ಮತ್ತು ಭಾವ-ಶ್ರದ್ಧೆಯ ಸೊಗಡನ್ನು ಬಿಂಬಿಸುವ ಶ್ರೀಧರರ ಕೃತಿಗಳ ಕುರಿತ ಗಾಢ ಚಿಂತನ-ಮಂಥನ ಸಾಕಷ್ಟು ನಡೆದಿಲ್ಲ ಎಂದು ಸಾಹಿತ್ಯಪ್ರಿಯರು ಅಭಿಪ್ರಾಯಪಟ್ಟರೆ ಅದು ನಿಜಸಂಗತಿ ಕೂಡ! ಏಪ್ರಿಲ್ ಇಪ್ಪತ್ನಾಲ್ಕನೇ ದಿನಾಂಕ ಬಿ.ಎಚ್. ಶ್ರೀಧರರ ಸ್ನೃತಿದಿನ. ಅವರು ಪಂಚಭೂತಾತ್ಮಕವಾಗಿ ಜನ್ಮ ತಳೆದಿದ್ದುದೂ, ಪಂಚಭೂತಗಳಲ್ಲಿ ಲೀನರಾಗಿದ್ದುದೂ ಏಪ್ರಿಲ್ ತಿಂಗಳ ಇಪ್ಪತ್ನಾಲ್ಕು(೧೯೯೦)ರಂದೇ! ಅವರ ಸಮಗ್ರ ಸಾಹಿತ್ಯಕೃತಿಗಳನ್ನು ಸಾಹಿತ್ಯಾಭ್ಯಾಸಿಗಳು ಮನನಕ್ಕೆ ದಕ್ಕಿಸಿಕೊಂಡರೆ, ಅರಿವಿಗೊಂದು ವಿಸ್ತಾರ ದೊರೆಯುವುದು ನಿರ್ವಿವಾದ!

ಉಪಕೃತ: ವಿವಿಧ ಮೂಲಗಳು.

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ