ಹೆಯ್ಕೊನೆನ್ ಅವರ ಕಾವ್ಯದಲ್ಲಿ ಪ್ರಕೃತಿಯು ಜೀವದಿಂದ ತುಂಬಿದೆ; ಅದಕ್ಕೆ ಕಣ್ಣುಗಳಿವೆ, ಮೂಗುಗಳಿವೆ (‘ಮಾನವ ತವಕದ ವಾಸನೆ ಬರುತಿದೆ’), ಆದರೆ ಅದೇ ಸಮಯದಲ್ಲಿ ಪ್ರಕೃತಿಯು ಮನುಷ್ಯರಿಂದ ಅಪಾಯಕ್ಕೊಳಗಾಗುತ್ತದೆ. ಅಂತರಿಕ್ಷವೂ ಸುರಕ್ಷಿತವಾಗಿಲ್ಲ; ಸ್ಪುಟ್ನಿಕ್ ಮತ್ತು ಕೀಲು ಸಡಿಲವಾಗಿಹೋದ ಉಪಗ್ರಹಗಳ ಜತೆಗೆ ನಾಯಿ ಲಾಯ್ಕಾ ಒಂದು ಜೀವಂತ ಕಾವಲುನಾಯಿಯಂತೆ ಮುಂದಿನ ಶತಮಾನಗಳವರೆಗೆ ಅಂತರಿಕ್ಷದಲ್ಲಿ ತೇಲುತ್ತಲಿರುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಫಿನ್‌ಲೆಂಡ್ ದೇಶದ ಕವಿ ಒಲಿ ಹೆಯ್ಕೊನೆನ್-ರವರ
(Olli Heikkonen) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಫಿನ್‌ಲೆಂಡ್ ದೇಶದ ಪೂರ್ವ ಭಾಗದಲ್ಲಿರುವ ಕರೆಲಿಯಾ (Karelia) ಪ್ರಾಂತದ ಕೊಂತಿಯೊಲೊಹತಿ (Kontiolahti) ನಗರದಲ್ಲಿ 1965-ರಲ್ಲಿ ಒಲಿ ಹೆಯ್ಕೊನೆನ್-ರ ಜನ್ಮವಾಯಿತು. ಹಲವು ವರ್ಷಗಳಿಂದ ಈ ಪ್ರಾಂತದ ಜನರು ತಮ್ಮ ಹಸಿರಾದ ಗ್ರಾಮಾಂತರವನ್ನು ಬಿಟ್ಟು ನಗರದ ಕಡೆ ವಲಸೆ ಹೋಗುತ್ತಿದ್ದಾಗ್ಯೂ, ಹೆಯ್ಕೊನೆನ್ ಕೂಡ ಫಿನ್‌ಲೆಂಡ್ ದೇಶದ ರಾಜಧಾನಿ ಹೆಲ್ಸಿಂಕಿ ನಗರದಲ್ಲಿ ಸಾಹಿತ್ಯದ ಅಧ್ಯಯನ ಮಾಡಲು ಹೋದರು. ನಗರದ ಲಯ ಮತ್ತು ಚಡಪಡಿಕೆಗೆ ಒಗ್ಗಿಕೊಳ್ಳಲು ಅವರಿಗೆ ಅರ್ಧ ವರ್ಷವೇ ಹಿಡಿಯಿತು.

ಹೆಯ್ಕೊನೆನ್ ಅವರ ಕಾವ್ಯವನ್ನು ಓದುವಾಗ, ಅವರ ಒಂದು ಪಾದ ಇನ್ನೂ ಅವರ ಸ್ಥಳೀಯ ಗ್ರಾಮಾಂತರ ಪ್ರದೇಶದಲ್ಲೇ ಊರಿದೆ ಎಂಬ ಭಾವನೆ ಬರುತ್ತದೆ. ನಾಗರೀಕತೆ ಮತ್ತು ಪ್ರಕೃತಿಯ ನಡುವೆ ಇರುವ ವಿರೋಧ ಅವರ ಕಾವ್ಯದಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಅವರ ಕಾವ್ಯದಲ್ಲಿ ನಗರ ಹೆಚ್ಚಾಗಿ ಕಂಡುಬರುವುದಿಲ್ಲ; ಆದರೆ ನಗರದ ಹೊರವಲಯಗಳು ಕೆಲವೊಮ್ಮೆ ಅವರ ಕಾವ್ಯದೊಳಗೆ ನುಸುಳಿ ಬರುತ್ತದೆ. ಹೆಯ್ಕೊನೆನ್ ತಮ್ಮ ಕವನಗಳನ್ನು ಪ್ರಕೃತಿಯ ದೃಷ್ಟಿಕೋನದಿಂದ ಬರೆಯುತ್ತಾರೆ:

ನನ್ನ ಹೆಸರನ್ನು ಅನಗತ್ಯವಾಗಿ ಬಳಸಬೇಡ,
ಏಕೆಂದರೆ ನಾ ಬಂದುಬಿಡುವೆ ನೀ ಕರೆದಾಗ

… ಎಂದು ಆಜ್ಞಾಪಿಸುವ ಒಂದು ಕಡವೆ-ರೂಪದ ಪ್ರಕೃತಿ ದೇವರ ಕಣ್ಣುಗಳ ಮೂಲಕ ಕವಿಯು ಜಗತ್ತನ್ನು ಗಮನಿಸುತ್ತಾನೆ.

ಹೆಯ್ಕೊನೆನ್ ಅವರ ಕಾವ್ಯದಲ್ಲಿ ಪ್ರಕೃತಿಯು ಜೀವದಿಂದ ತುಂಬಿದೆ; ಅದಕ್ಕೆ ಕಣ್ಣುಗಳಿವೆ, ಮೂಗುಗಳಿವೆ (‘ಮಾನವ ತವಕದ ವಾಸನೆ ಬರುತಿದೆ’), ಆದರೆ ಅದೇ ಸಮಯದಲ್ಲಿ ಪ್ರಕೃತಿಯು ಮನುಷ್ಯರಿಂದ ಅಪಾಯಕ್ಕೊಳಗಾಗುತ್ತದೆ (‘ಹಿಮಗಟ್ಟಿದ ನೆಲ ಬಿರಿಯುತ್ತೆ, ಹೆದ್ದಾರಿಯಾಗುತ್ತೆ’). ಅಂತರಿಕ್ಷವೂ ಸುರಕ್ಷಿತವಾಗಿಲ್ಲ; ಸ್ಪುಟ್ನಿಕ್ ಮತ್ತು ಕೀಲು ಸಡಿಲವಾಗಿಹೋದ ಉಪಗ್ರಹಗಳ ಜತೆಗೆ ನಾಯಿ ಲಾಯ್ಕಾ ಒಂದು ಜೀವಂತ ಕಾವಲುನಾಯಿಯಂತೆ ಮುಂದಿನ ಶತಮಾನಗಳವರೆಗೆ ಅಂತರಿಕ್ಷದಲ್ಲಿ ತೇಲುತ್ತಲಿರುತ್ತವೆ.

ಹೆಯ್ಕೊನೆನ್ ಪರಿಸರ ಕಾವ್ಯವನ್ನು ಬರೆಯುತ್ತಿದ್ದಾರೆ ಎಂದು ನಾವು ಭಾವಿಸಬಹುದು – ಮಾನವ ಕುಲ ಪರಿಸರವನ್ನು ನಾಶಪಡಿಸುತ್ತಿದೆ ಮತ್ತು ಕವಿಯೂ ಇದರ ವಿರುದ್ಧ ಎದ್ದು ನಿಲ್ಲಬೇಕು ಎಂಬ ಮನೋಧರ್ಮ. ಆದಾಗ್ಯೂ, ಇಲ್ಲಿ ಕವಿಯ ಸಂದರ್ಭ ಅಷ್ಟು ಸರಳವಾದುದ್ದಲ್ಲ; ಅವರ ಕಾವ್ಯದಲ್ಲಿ ಪ್ರಕೃತಿಯು ಪ್ರತಿ ಸಲವೂ ಸೋಲುವುದಿಲ್ಲ (‘ಭೂಮಿಯ ಮಡಿಲಲ್ಲಿ ಎಲುಬುಗಳು ಕಪ್ಪಾಗುತ್ತವೆ / ಬೆನ್ನೆಲುಬುಗಳ ನಡುವೆ ಗಿಡಗಳು ಮೊಳೆಯುತ್ತವೆ’). ಇಲ್ಲಿ ಸಾವು ಸಾರ್ವಭೌಮ; ಹಾಗೂ ಪ್ರಕೃತಿ ಸಾವಿನ ಮೂಲಕ ತನ್ನನ್ನು ತಾನು ಪೋಷಿಸಿಕೊಳ್ಳುತ್ತದೆ. ಹೆಯ್ಕೊನೆನ್-ರ ‘ಮುಕುಟಧಾರಿ ಕಡವೆ’ ತನ್ನ ಘರ್ಜನೆಯಿಂದ ಸರೋವರಗಳನ್ನು ಹೆಪ್ಪುಗಟ್ಟಿಸಲು ಮತ್ತು ಕಾಡುಗಳನ್ನು ಕಲ್ಲಾಗಿಸಲು ಸಮರ್ಥವಾಗಿದೆ. ಆ ಕಡವೆ ಮಾನವ ಧ್ವನಿಯಲ್ಲಿ ಕೂಡ ಮಾತನಾಡಬಲ್ಲುದು. ವಾಸ್ತವವಾಗಿ, ಕಡವೆಯು ಯಾವಾಗಲೂ ಮಾನವ ಧ್ವನಿಯಲ್ಲೆ ಮಾತನಾಡುತ್ತದೆ – ಕವಿಯ ಧ್ವನಿಯಲ್ಲಿ, ದಾರ್ಶನಿಕನಂತಿರುವ ಕವಿಯ ಧ್ವನಿಯಲ್ಲಿ. ಕಡವೆಯು ಮಾನವ ಮತ್ತು ನೈಸರ್ಗಿಕ ಲೋಕಗಳ ನಡುವಿನ ಮಧ್ಯವರ್ತಿಯ ಹಾಗೆ, ಅದು ಅಲೌಕಿಕ ಲೋಕವೂ ಆಗಿದೆ.

ಹೆಯ್ಕೊನೆನ್ ಇಲ್ಲಿ ಮಾಂತ್ರಿಕ ಸಂಸ್ಕೃತಿಯ (ಶೇಮನಿಸಂ) ಜತೆ ತಮ್ಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ. ಫಿನ್‌ಲೆಂಡ್-ನಲ್ಲಿ ಅತ್ಯಂತ ದೀರ್ಘ ಮತ್ತು ಶಕ್ತಿಯುತ ಸಂಪ್ರದಾಯವನ್ನು ‘ಶೇಮನಿಸಂ’ ಹೊಂದಿದೆ. ಒಬ್ಬ ‘ಶಾಮನ್’ (ಮಾಂತ್ರಿಕ) ಬದುಕು ಮತ್ತು ಸಾವಿನ ನಡುವಿನ ಗಡಿಗಳನ್ನು ದಾಟಲು ಮತ್ತು ಹಿಂತಿರುಗಲು ಸಮರ್ಥನಾಗಿರುತ್ತಾನೆ. ತಾನು ಹೀಗೆ ಪಡೆದ ತಿಳುವಳಿಕೆ ಮತ್ತು ಜ್ಞಾನವನ್ನು ಪ್ರಕೃತಿಯ ಪ್ರಬಲವಾದ ಆ್ಯನಿಮಿಸ್ಟಿಕ್ (ಸರ್ವಜಚೇತನ) ಶಕ್ತಿಯೊಂದಿಗೆ ಮಾನವರ ನಿರಂತರ ವಹಿವಾಟುಗಳಲ್ಲಿ ಸಹಾಯ ಮಾಡಲು ಅವನು ಬಳಸಬಹುದು. ಪಾತ್ರಗಳು ಈಗ ಬದಲಾದಂತೆ ಕಂಡುಬರುತ್ತವೆ ಮತ್ತು ಪ್ರಕೃತಿಯು ‘ಮುಕುಟಧಾರಿಯ’ ಕಣ್ಣುಗಳ ಮೂಲಕ ಮನುಷ್ಯರನ್ನು ನೋಡುತ್ತದೆ, ತೀವ್ರವಾದ ಸ್ವಗತಗಳಲ್ಲಿ ಮನುಷ್ಯರಿಗೆ ಎಚ್ಚರಿಕೆ ನೀಡುತ್ತದೆ. ಈ ರೀತಿಯಾಗಿ, ಕವಿಯು ಪ್ರಕೃತಿಯ ಪರವಾಗಿ ನಿಲ್ಲುತ್ತಾನೆ, ಆದರೆ ಮಾನವ ಕುಲದ ಹಿತಾಸಕ್ತಿಗಾಗಿ ಹಾಗೆ ಮಾಡುತ್ತಾನೆ; ‘ಜವುಗು ಮತ್ತು ಕೆಸರಿನ ಆಳದಲ್ಲಿ / ಒಂದು ಮೃದುವಾದ ಬೆಳಕು ಬೇರೂರುತ್ತಿದೆ‘ ಎಂಬುದನ್ನು ಮಾನವ ಕುಲ ಮರೆತಂತಿದೆ.

ಇಲ್ಲಿಯವರೆಗೆ ನೀವು ಓದಿದ ಒಲಿ ಹೆಯ್ಕೊನೆನ್-ರ ಬದುಕು-ಬರಹಗಳ ವಿವರಗಳು ಹಾಗೂ ಕಾವ್ಯವಿಮರ್ಶೆಯನ್ನು ಏಡ್ರಿಯಾನ್ ಫಾನ್ ಡರ್ ಹೂವನ್-ರು (Adriaan van der Hoeven) ಹೆಯ್ಕೊನೆನ್-ರ ಬಗ್ಗೆ ಬರೆದ ಪರಿಚಯಾತ್ಮಕ ಲೇಖನದಿಂದ ಆಯ್ದು ಕನ್ನಡಕ್ಕೆ ಅನುವಾದ ಮಾಡಿರುವೆ.

“ಹೆಯ್ಕೊನೆನ್-ರ ಮೊದಲ ಕವನ ಸಂಕಲನ Jakutian Aurinko (Sun of Yakutia, 2000) ಅವರು ರಷ್ಯಾ ದೇಶದಾದ್ಯಂತ, ಪೂರ್ವದ ವ್ಲಾಡಿವೊಸ್ಟೊಕ್‌ ನಗರದವರೆಗೆ ಕೈಗೊಂಡ ರೈಲು ಪ್ರಯಾಣದ ಅನುಭವಗಳ ಮೇಲೆ ರಚಿತವಾಗಿದೆ. ಹೆಯ್ಕೊನೆನ್ ಅವರು ಕಂಡ ರಷ್ಯಾ ಒಂದು ಕೊಳಕಾದ, ಕುಸಿಯುತ್ತಿರುವ ಪ್ರಣಯದ ಆಕರ್ಷಣೆಯನ್ನು ಹೊಂದಿದೆ. ಇದು ಸಮಕಾಲೀನ ರಷ್ಯಾಕ್ಕಿಂತ ಹೆಚ್ಚಾಗಿ ಹಳೆಯ ಸೋವಿಯತ್ ಒಕ್ಕೂಟದ ರಷ್ಯಾದ ದೃಶ್ಯಗಳಾಗಿವೆ, ಆದರೆ ಯಾವುದೇ ರಾಜಕೀಯ ಅರ್ಥದಲ್ಲಿ ಅಲ್ಲ. ಇಲ್ಲಿರುವ ಕವಿತೆಗಳು ಸೋವಿಯತ್ ವಿರೋಧಿ ಅಲ್ಲ, ಏಕೆಂದರೆ ಅವುಗಳಲ್ಲಿ ಚಿತ್ರಿಸಲಾದ ನಾಡು ಒಂದು ಅದರ್ಶಲೋಕ. ಈ ವಿಶಾಲ ಚೌಕಟ್ಟಿನಲ್ಲಿ ಕವಿಯು ಪ್ರೀತಿ, ಜನರ ನಡುವಿನ ಅಂತರ, ಅನ್ಯೋನ್ಯತೆಗೆ ಅಡ್ಡಿಬರುವ ಕಷ್ಟಗಳು, ಹಾಗೂ ಪ್ರಕೃತಿಯ ದರ್ಶನಗಳನ್ನು ಹೊಂದಿಸುತ್ತಾನೆ. ಹೆಯ್ಕೊನೆನ್ ಅವರ ಕವಿತೆಗಳು ಪ್ರಬಲವಾಗಿ ಚಿತ್ರಿಸಿದ ರೂಪಕಗಳು ಮತ್ತು ಮೂರ್ತ ವಿವರಗಳ ಮೂಲಕ ಯಶಸ್ವಿಯಾಗುತ್ತವೆ. ಇದು ಆರಂಭಿಕ ಆಧುನಿಕತಾವಾದದ ಶ್ರೇಷ್ಠ ಬರಹಗಾರರಾದ ಲೋರ್ಕಾ, ಪೌಂಡ್, ಹಾಗೂ ಎಲಿಯಟ್ ತೋರಿಸಿದ ರೀತಿಯಲ್ಲಿ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ.” ಈ ಸಂಕಲನದ ಬಗ್ಗೆ ಸಮೀಕ್ಷೆ ಬರೆದ ಕಾರಿ ಸಾಲ್ಲಮಾ (Kari Sallamaa) ಅಭಿಪ್ರಾಯಪಡುತ್ತಾರೆ.

ಇದುವರೆಗೆ ಪ್ರಕಟವಾದ ಹೆಯ್ಕೊನೆನ್-ರ ನಾಲ್ಕು ಕವನ ಸಂಕಲನಗಳಲ್ಲಿ ಅವರ ಮೊದಲ ಸಂಕಲನ Jakutian Aurinko (The Sun of Yakutia) 2000-ನೆಯ ವರ್ಷದ ಅತ್ಯುತ್ತಮ ಮೊದಲ ಪುಸ್ತಕಕ್ಕಾಗಿ ‘ಹೆಲ್ಸಿಂಗಿನ್ ಸನೋಮತ್’ ಸಾಹಿತ್ಯ ಪ್ರಶಸ್ತಿಯನ್ನು (Helsingin Sanomat Literary Prize) ಗೆದ್ದುಕೊಂಡಿತು. ಅವರ ನಾಲ್ಕನೆಯ ಕವನ ಸಂಕಲನ Teoria kaikkien pienimmistä ಸಂಕಲನವು 2017-ನೆಯ ವರ್ಷದ ‘ಎಯ್ನಾರಿ ವ್ಯುವೊರೆಲಾ’ ಪ್ರಶಸ್ತಿಯನ್ನು (Einari Vuorela Prize) ಗೆದ್ದಿತು.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಒಲಿ ಹೆಯ್ಕೊನೆನ್-ರ ಏಳು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಮರಿಯಾ ಲ್ಯುಟಿನೆನ್ (Maria Lyytinen) ಹಾಗೂ ನಂತರದ ನಾಲ್ಕು ಕವನಗಳನ್ನು ಆನ್ಸೆಮ್ ಹೋಲ್ಲೊ-ರವರು (Anselm Hollo) ಮೂಲ ಫಿನ್ನಿಷ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ಮುಟ್ಟಬೇಡ
ಮೂಲ: Don’t Touch

ಮುಟ್ಟಬೇಡ, ಈ ಜ್ವಾಲೆ ನಿನ್ನ ಬೆರಳ್ತುದಿಗಳನ್ನ
ಸುಡುವುದು.
ತುರುಕು ನಿನ್ನ ಇಡೀ ಅಂಗೈಯನ್ನು ಬೆಂಕಿಯೊಳಗೆ,
ತುರುಕು ಅದನ್ನು ನನ್ನ ತಣ್ಣನೆಯ ತುಪ್ಪಳದೊಳಗೆ,
ನಾನು ದೂರದ ಕಾಡುಗಳನ್ನ, ಜೌಗುನೆಲಗಳನ್ನ
ದಾಟಿ ಬಂದಿರುವೆ.
ಒಂದು ಕಾಲದಲ್ಲಿ ನನ್ನ ಪುಪ್ಪುಸಗಳಲ್ಲಿ ಶೀತಲ ಮಂಜು
ತುಂಬಿದ್ದವು,
ಹಿಮ ಹರಳುಗಳು ನನ್ನ ಕೊಂಬುಗಳನ್ನು
ತರಚುತ್ತಿದ್ದವು.
ಹಿಮಬಯಲುಗಳು ಸರಿದವು. ನಾನು ನರದನಿಯಲಿ
ಮಾತನಾಡುತ್ತಿದ್ದೆ.
ಎಂತಹ ಸುಂದರ ಪದಗಳು, ಎಂತಹ ಆಳದ ಸಾಲುಗಳು.
ನನ್ನ ದನಿ ಪ್ರತಿಧ್ವಿನಿಸುತ್ತಿತು ಅಡವಿ ತುಂಬ.
ಮರಗಳು ಕದರಿದವು, ಹುಲ್ಲಂಗಳ ಸಣ್ಣಗಾಯಿತು.
ಮತ್ತೂ ಹತ್ತಿರ ಬಂದೆ ನಾನು,
ಮೊದಲ ಪೊದೆಗಳ ದಾಟಿದೆ,
ಮೊದಲ ಬೆಳಗಿದ ಮನೆಗಳ ದಾಟಿದೆ,
ಇವುಗಳಲ್ಲಿ ಯಾವುದೋ ಒಂದು ನಿನ್ನ ಮನೆ.
ಮುಟ್ಟಬೇಡ,
ಹಿಮನದಿಯ ಅಂಚು ನಿನ್ನ ಉಗುರುಗಳಿಗೆ
ಅಂಟಿಕೊಳ್ಳುವುದು.


ನನ್ನ ಹೆಸರನ್ನು ಅನಗತ್ಯವಾಗಿ ಬಳಸಬೇಡ
ಮೂಲ: Don’t take my name in vain

ನನ್ನ ಹೆಸರನ್ನು ಅನಗತ್ಯವಾಗಿ ಬಳಸಬೇಡ,
ಏಕೆಂದರೆ ನಾ ಬಂದುಬಿಡುವೆ ನೀ ಕರೆದಾಗ.
ಕಾಡುಗಳೊಳಗಿನಿಂದ ಬರುವೆ ನಾನು,
ನನ್ನ ಕವಲುಕೊಂಬುಗಳಿಂದ ಪಾಚಿಗಳನ್ನ,
ತೊಗಟೆಗಳನ್ನ ಕೆರೆಯುತ್ತಾ ಬರುವೆ,
ನನ್ನ ಉಸಿರಿನಿಂದ ಹಕ್ಕಿಹಾಡನ್ನು ಅಡಗಿಸುವೆ,
ತೊಯ್ದ ಎಲಗಳನ್ನ, ಪೈನ್ ಮರದ
ಕೊಳೆತ ಸೂಜಿಯೆಲೆಗಳನ್ನ ಊದಿ ಹಾರಿಸುವೆ.
ನನ್ನ ಮೂಗಿನ ಹೊಳ್ಳೆಗಳನ್ನ ಗಾಳಿಗೆ ಏರಿಸುವೆ,
ರಾಳಗಳ, ಬೆಟ್ಟದ ಆ್ಯಷ್ ಮರದ ಬೆರಿ-ಹಣ್ಣುಗಳ
ವಾಸನೆ ಹಿಡಿಯುವೆ,
ಮಾನವ ತವಕದ ವಾಸನೆ ಬರುತಿದೆ.
ಯಾಕೆ ತವಕಿಸುವರು ನನಗಾಗಿ,
ನನ್ನ ಸಣಕಲು ಕೊಂಬುಗಳು
ನೋವಲ್ಲದೇ ಬೇರೇನನ್ನೂ ಕೊಡದು.
ಯಾಕೆ ವಿದ್ಯುತ್ ಕಂಬಗಳನ್ನು ಏರಿಸುತ್ತಾರೆ,
ಯಾಕೆ ಕಾಡುದಾರಿಗಳಿಗೆ ಡಾಂಬರು ಹಾಕಿಸುತ್ತಾರೆ.
ನನ್ನ ಗೊರಸುಪಾದಗಳು ಡಾಂಬರು ರಸ್ತೆಯನ್ನು ಒಡೆವುದು,
ನನ್ನ ಕಣ್ಣುಗಳು ಬೆಳಕನ್ನು ಹೀರಿಕೊಳ್ಳುವುದು.
ನಿನ್ನ ಸೇಬುಮರಗಳ ನೆರಳಿಗೆ ನನ್ನನ್ನು ಕರೆಯಬೇಡ.
ಬರಬೇಡ ನೀನು ನನ್ನ ಕಾಡಿನ ಕತ್ತಲೆಗೆ.
ಬರಬೇಡ ನೀನು,
ನಿನ್ನ ಪಾದಗಳಿಗೆ ಬೇರುಗಳು ಅಂಟಿಕೊಳ್ಳುವುದು,
ನಿನ್ನ ಚರ್ಮವನ್ನು ಮುಳ್ಳುಪೊದೆಗಳು ಸಿಗಿವುದು.


ನಿನ್ನ ಕಣ್ಣುಗಳನ್ನು ಮುಚ್ಚಲಾರೆಯಾ?
ಮೂಲ: Won’t you close your eyes

ನಿನ್ನ ಕಣ್ಣುಗಳನ್ನು ಮುಚ್ಚಲಾರೆಯಾ?
ಅವರ ಬೆಳಕು ಇತರ ಬೆಳಕುಗಳಿಗಿಂತ ಉಜ್ವಲವಾಗಿದೆ.
ಕಣ್ಣುಗಳನ್ನು ನೋಯಿಸುತ್ತದೆ, ಕುತ್ತಿಗೆಯನ್ನು ಸುಡುತ್ತದೆ.
ಅದು ಮರಗಳ ಆಚೆಯಿಂದ ಬರುವುದು,
ಮಾನವ ಬೆಳಕು ಅದು,
ನನ್ನನ್ನು ಓಡಿಸುತ್ತೆ ಅದು
ಪೊದೆಗಳ ಕಡೆ, ಎತ್ತರದ ಹುಲ್ಲುಗಳ ಕಡೆ,
ಕಾಡಿನ ಹಿಮಗರ್ಭದ ಒಳಗೆ.

ಕಾಲುಗಳು ಸೆಟೆದಿವೆ,
ಗೊರಸುಗಳು ಸೀಸದಷ್ಟು ಭಾರವಾಗಿವೆ,
ಹೇಗನಿಸಬೇಕು
ಇವುಗಳನ್ನಿಟ್ಟುಕೊಂಡು
ಕೆಸರಿನೊಳಗೆ ಮುಳುಗುವಾಗ.

ಕೂದಲುಗಳು ನೆಲದೊಳಗೆ ಅದುಮಿಹೋಗುವುದು,
ಪ್ರತಿಯೊಂದು ಸೂಕ್ಷ್ಮರಂಧ್ರ ಸಿಡಿದೊಡೆಯುವುದು.

ಸಿಡಿದೊಡೆಯುವುದು
ಏಕೆಂದರೆ ಜವುಗು ಮತ್ತು ಕೆಸರಿನ ಆಳದಲ್ಲಿ
ಒಂದು ಮೃದುವಾದ ಬೆಳಕು ಬೇರೂರುತ್ತಿದೆ,
ಒಂದು ಸರಳವಾದ ಬೆಳಕು ಬೇರೂರುತ್ತಿದೆ.


ತಲೆಬಾಗು ನೀನು ಬೆಟ್ಟದ ಆ್ಯಷ್ ಮರದ ಮುಂದೆ
ಮೂಲ: Bow before the mountain ash

ತಲೆಬಾಗು ನೀನು ಬೆಟ್ಟದ ಆ್ಯಷ್ ಮರದ ಮುಂದೆ.
ಅಂಗಾತ ಮಲಗಿದ್ದಾನೆ ಅದರಡಿಯಲ್ಲಿ ನಿನ್ನ ಸೋದರ.
ಭೂಮಿಯ ಮಡಿಲಲ್ಲಿ ಎಲುಬುಗಳು ಕಪ್ಪಾಗುತ್ತವೆ,
ಬೆನ್ನೆಲುಬುಗಳ ನಡುವೆ ಗಿಡಗಳು ಮೊಳೆಯುತ್ತವೆ.
ತಲೆಬಾಗು ನೀನು ಬೆಟ್ಟದ ಆ್ಯಷ್ ಮರದ ಮುಂದೆ,
ಅದರ ಚರ್ಮದಂತಹ ತೊಗಟೆ,
ಅದರ ಕವಲು ಕೊಂಬೆಯಲ್ಲಿ ನೇತಾಡುತ್ತಿರುವ ಹಾರ.
ತಲೆಬಾಗು ಮರಶಿರದ ಜ್ವಾಲೆಯ ಮುಂದೆ.
ಅದರ ಬೇರುಗಳು ನಿನ್ನ ಸೋದರನ
ಎದೆಯನ್ನಿರಿಯುತ್ತವೆ.
ಅದರ ಬೇರುಗಳು ನಿನ್ನ ಸೋದರನ
ಹಣೆಯನ್ನಿರಿಯುತ್ತವೆ.
ಬೆಟ್ಟದ ಆ್ಯಷ್ ಮರ ಸ್ವರಗಳಿಂದ ತುಂಬಿದೆ,
ವಸಂತ ಮಾಸ ಬಂದಾಗ, ಅವು
ಎಲೆಗಳಾಗಿ ಸಿಡಿದೊಡೆಯುತ್ತವೆ.


ಅಂತರೀಕ್ಷದಲ್ಲಿ ಕೈಬಿಡಲಾದ ಲಾಯ್ಕಾ* ಬೊಗಳಿದಾಗ
ಮೂಲ: When Laika, abandoned in space, barks

ಅಂತರೀಕ್ಷದಲ್ಲಿ ಕೈಬಿಡಲಾದ ಲಾಯ್ಕಾ ಬೊಗಳಿದಾಗ
ಗುಡಿಸಲುಗಳಲ್ಲಿ ಬೆಳಕು ಹೊತ್ತಿಕೊಳ್ಳುವುದು, ಒಂದೊಂದರಂತೆ.
ಆಗಲೇ ಏಳು ಗಂಟೆಯಾಗಿರಬಹುದು,
ಆಕಾಶದಿಂದ ಕಬ್ಬಿಣ ಬೀಳಬಹುದು,
ಆದರೆ ಕಲ್ಲಿನ ಮೇಲೆ ಹಾಗೂ ಬಸವನಹುಳುವಿನ
ಚಿಪ್ಪಿನ ಮೇಲೆ ಕೆತ್ತಿದ ಭೌತಶಾಸ್ತ್ರದ ನಿಯಮ
ಈಗಲೂ ಈ ನೀಲಿ ಬಣ್ಣದ ಹಳ್ಳಿಯನ್ನು ನಡೆಸುತ್ತಿದೆ.

ಹಾಗೆಯೇ ಹರಕೆಯ ದೀಪವನ್ನು ಹೊತ್ತಿಸಲಾಗುತ್ತದೆ,
ಹಾಗೆಯೇ ಅದರ ತೈಲಮಯ ಹೃದಯ ಬೆಚ್ಚಗಾಗುತ್ತದೆ
ಮತ್ತೆ ಗೋಡೆಗಳ ಮೇಲೆ ಸ್ವಪ್ನಛಾಯೆಗಳು ನಲಿಯುತ್ತವೆ.
ಎಲ್ಲೋ ಒಂದು ಏಕಾಂಗಿ ನಾಯಿ ಭೂಮಿಯ ಕಡೆ ಇಣುಕಿ ನೋಡುತ್ತಿದೆ.
ನಾನು ಈ ಗ್ರಹವನ್ನು ಕಾಯುತ್ತಿರುವೆನು,
ಎಂದು ಹೇಳುತ್ತಿರಬಹುದು ಅದು, ಅದು ಬೊಗಳುವಾಗ,
ಆದರೆ, ಗೊತ್ತಲ್ಲ ನಿನಗೆ, ಆ ರೇಡಿಯೋ ಸ್ಟೇಷನ್‌-ಗಳು,
ಈ ಸಂಚರಿಸುತ್ತಿರುವ ಸಂದೇಶಗಳು,
ಆಕಾಶ ಇವುಗಳಿಂದ ತುಂಬಿದೆ,
ಉಪಗ್ರಹಗಳ ಗದ್ದಲ ಹಾಗೂ ಮರ್ಮರಗಳಿಂದ ತುಂಬಿದೆ.

*Laika: ಸೋವಿಯತ್ ಯೂನಿಯನ್ ಅಂತರೀಕ್ಷಕ್ಕೆ ಕಳಿಸಿದ ನಾಯಿಯ ಹೆಸರು; ಪೃಥ್ವಿಯಿಂದ ಅಂತರೀಕ್ಷಕ್ಕೆ ಕಳಿಸಲಾದ ಹಾಗೂ ಅಂತರೀಕ್ಷದಲ್ಲಿ ಭೂಮಿಯನ್ನು ಸುತ್ತಿದ ಮೊದಲ ಪ್ರಾಣಿ. ಲಾಯ್ಕಾ ಹೆಸರಿನ ಹೆಣ್ಣು ನಾಯಿಯನ್ನು 1957-ರ ನವೆಂಬರ್ 3-ರಂದು ಸ್ಪುಟ್ನಿಕ್-2 ಬಾಹ್ಯಾಕಾಶ ನೌಕೆಯಲ್ಲಿ ಅಂತರೀಕ್ಷಕ್ಕೆ ಕಳಿಸಲಾಯಿತು. ಬಾಹ್ಯಾಕಾಶ ನೌಕೆಯ ನಾಲ್ಕನೇ ಸುತ್ತಿನ ಹಾರಾಟದ ಸಮಯದಲ್ಲಿ ನೌಕೆಯೊಳಗೆ ಬಿಸಿ ಹೆಚ್ಚಾದ ಕಾರಣ ಲಾಯ್ಕಾ ಸಾವನ್ನಪ್ಪಬೇಕಾಯಿತು. ಈ ನಾಯಿ ಇನ್ನೂ ಬದುಕಿದೆ, ಅಂತರೀಕ್ಷದಿಂದ ಭೂಮಿಯನ್ನು ನೋಡುತ್ತಿದೆ, ಕಾವಲು ಕಾಯುತ್ತಿದೆ ಎಂದು ಕವಿ ಕಲ್ಪಿಸಿಕೊಂಡು ಬರೆದ ಕವನವಿದು.


ಆ ಮುಕುಟಧಾರಿ ತಲೆ ಜಗತ್ತನ್ನು ನೋಡುತ್ತೆ
ಮೂಲ: The crowned head looks at the world

ಆ ಮುಕುಟಧಾರಿ ತಲೆ ಜಗತ್ತನ್ನು ನೋಡುತ್ತೆ.
ಹುಲ್ಲುಗಾವಲಿನ ಹಿಂದಿರುವ ಈ ಕಾಡು, ಇದು ನನ್ನದು
ಎಂದು ಅದರ ಘರ್ಜನೆ ಹೇಳುತ್ತಿರಬಹುದು,
ಹೊಗೆ ಮೇಲಕ್ಕೆ ಏರುತ್ತಿದ್ದಂತೆ, ಬಾನಂಚು ತಿಳಿಯಾಗುತ್ತಿದ್ದಂತೆ.
ಆ ಮುಕುಟಧಾರಿ ತಲೆ ಯಂತ್ರಗಳ ಗುಡುಗಾಟ ಕೇಳಿಸಿಕೊಳ್ಳುತ್ತೆ,
ನದಿಗಳಿಗೆ ಅಡ್ದಲಾಗಿ ಕಬ್ಬಿಣ ಬಾಗುವುದನ್ನು,
ಕಂಬಗಳು ಒಂದರ ನಂತರ ಒಂದು ಸಾಗುವುದನ್ನು ಕೇಳಿಸಿಕೊಳ್ಳುತ್ತೆ.
ಯಾರಿಂದಲೂ ಇವುಗಳನ್ನು ತಡೆಯಲಿಕ್ಕಾಗಲ್ಲ:
ಓಬ್, ಲೆನಾ, ಯೆನಿಸೇಯ್* ನದಿಗಳಿಂದಲೂ ಸಹ ಸಾಧ್ಯವಾಗಲ್ಲ.
ಹಿಮಗಡ್ಡೆ ಒಡೆಯುತ್ತೆ ಮೊಟ್ಟೆಯ ಚಿಪ್ಪಿನ ಹಾಗೆ.
ಹಿಮಗಟ್ಟಿದ ನೆಲ ಬಿರಿಯುತ್ತೆ, ಹೆದ್ದಾರಿಯಾಗುತ್ತೆ.
ಆ ಮುಕುಟಧಾರಿ ತಲೆ ಜಗತ್ತನ್ನು ನೋಡುತ್ತೆ,
ತನ್ನ ಪಕ್ಕೆಗಳಿಂದ ಕಪ್ಪುರಾಳವನ್ನು ಕೊಡವಿಕೊಳ್ಳುತ್ತೆ.
ಮತ್ತೆ ಆ ಮಹಾಮಹಿಮ ಮಹಾರಾಜರ ಪರಿವೀಕ್ಷಣೆಯಲ್ಲಿ
ಕಂಬಗಳು ಏರುತ್ತಲೇ ಇರುತ್ತವೆ.

* Ob, Lena, Yenisei: ಸೈಬೀರಿಯಾ ಪ್ರದೇಶದ ಮೂರು ಪ್ರಮುಖ ನದಿಗಳು


ಪರದೆಯನ್ನು ತೆರೆ
ಮೂಲ: Open the curtain

ಪರದೆಯನ್ನು ತೆರೆ.
ಒಂದು ಕಡೆದುಬಿದ್ದ ಕಾಡಿನ ದೃಶ್ಯವ ತೆರೆಯುವೆ.
ಒಂದು ಕಡವೆ ಬಯಲಿನುದ್ದಕ್ಕೂ ಓಡುತ್ತಿದೆ ಆವೇಶದಿಂದ,
ಹಲ್ಲುಗಳ ನಡುವೆ ಚಂದ್ರನನ್ನು ಕಚ್ಚಿಕೊಂಡು,
ಅದರ ಸೀಳು-ಗೊರಸುಗಳಡಿಯಲ್ಲಿ ಹಿಮ ಚೀರುತಿದೆ.
ಮರಗಳ ಹಿಂದೆ ಓಡಿ ಹೋಗುತ್ತೆ.
ಆಗ ಕೇಳಿಸುತ್ತೆ ನಿನಗೆ ಖಣಖಣ ಏಕತಾನ ಬಡಿತ,
ಒಂದು ರೈಲುಗಾಡಿಯ ಸದ್ದು.
ಈ ಸಹಸ್ರಮಾನ ಗದ್ದಲದ ಮಧ್ಯೆ ಓಡುತ್ತದೆ ಆ ಕಡವೆ
ಮುಂಬರುವ ಶೂನ್ಯಗಳ ಕಡೆಗೆ,
ಬ್ರೇಕುಗಳು ಚೀರುತ್ತವೆ, ರೈಲುಗಾಡಿ ನಿಲ್ಲುತ್ತೆ ಅಲ್ಲಿ.
ತನ್ನ ಕವಲ್ಗೊಂಬುಗಳ ನಡುವೆ
ಒಂದು ಸ್ಫಟಿಕದ ಬೋಗುಣಿಯನ್ನು ಹೊತ್ತಿದೆ ಅದು,
ಅದರೊಳಗೆ ಹಿಮಚೂರುಗಳು
ಹಾಗೂ ಬುದ್ಬುದಿಸುವ ಪಾನೀಯ ತುಂಬಿದೆ.
ಒಂದು ಗ್ಲಾಸು ತೆಗೆದುಕೊ, ಒಂದು ಚಮಚ ತೆಗೆದುಕೊ,
ಆ ಬುದ್ಬುದಗಳ ಉತ್ಸಾಹವನ್ನು ಕಲಕಿ ಹೊರ ತೆಗೆ.
ಆದರೆ, ಮರಶಿರಗಳ ಹಿಂದೆ, ಮೇಘಮಲೆಗಳ ಆಚೆ
ಆ ಕಡವೆ ತನ್ನ ಸಂಪತ್ತನ್ನು ಎಳೆದುಕೊಂಡು ಹೋಗುತ್ತೆ.
ಅಲ್ಲಿ ಆ ಬಳಲಿದ ಸಂದೇಶವಾಹಕ ತನ್ನ ತಲೆ ಇಳಿಸುತ್ತಾನೆ,
ಮೂಗಿನ ಹೊಳ್ಳೆಗಳಲ್ಲಿ ಹೆಪ್ಪುಗಟ್ಟುತ್ತಿರುವ ಹಿಮವನ್ನು ಘೂಂಕರಿಸುತ್ತಾನೆ.