Advertisement
ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ

ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ

ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ದೇವರ ಹರಕೆ ಸಲ್ಲಿಸುವುದರ ಕುರಿತ ಬರಹ ನಿಮ್ಮ ಓದಿಗೆ

ಮನೆಯಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ವಾತಾವರಣ. ದೂರದಿಂದ ಬಂಧು-ಬಳಗದವರೆಲ್ಲಾ ತಮ್ಮ ಆದಿಊರಿಗೆ ಬಂದು ನೆರೆದಿದ್ದಾರೆ. ಅಂಗಳದಲ್ಲಿ ಕೋಳಿ, ಕುರಿಗಳ ಕಲರವ. ಕೆಲವರು ಕಡುಬು ಮಾಡುವ ಸಾಮಗ್ರಿಗಳನ್ನು, ಇನ್ನೂ ಕೆಲವರು ಮಾಂಸದಡುಗೆಯ ಪರಿಕರಗಳನ್ನು ಹಿಡಿದು ದೇವರ ಬನಕ್ಕೆ ಹೋಗಲು ಅನುವಾಗಿದ್ದಾರೆ. ಹೌದು ಇದು ಮಲೆನಾಡಿನ ಹಬ್ಬ. ಅದುವೇ ದೇವರ ಹರಕೆ. ಮಲೆನಾಡಿಗರ ಭಾಷೆಯಲ್ಲಿ ದೈಯ್ಯದ ಹರಕೆ. ಮನೆಯ ಪಕ್ಕದ ಹಡ್ಡೆಯಲ್ಲಿ ಇರುವ ಮರಗಳ ಕೆಳಗೆ ನಿರಾಕಾರವಾದ ಕಲ್ಲುಗಳಿರುತ್ತವೆ. ಇವೇ ಮಲೆನಾಡಿನ ಕುಟುಂಬಗಳ ಜನರ ಆರೋಗ್ಯ ಕಾಪಾಡುವ, ಜಾನುವಾರಗಳ ಸಂರಕ್ಷಣೆ ‌ಮಾಡುವ, ಜಮೀನು, ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಕಾಯುವ ದೈಯ್ಯಗಳು. ಭೂತ, ಚೌಡಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ದೈಯ್ಯಗಳಿಗೆ ವರ್ಷಕ್ಕೊಮ್ಮೆ ಸಲ್ಲುವ ಹರಕೆ ಪೂಜೆಯಿದು.

ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.

ದೇವರ ಹರಕೆಯ ಮೊದಲ ದಿನ ಬನವನ್ನೆಲ್ಲಾ ಶುಚಿಗೊಳಿಸಲಾಗುತ್ತದೆ. ಹರಕೆಯ ದಿನ ಬೆಳಿಗ್ಗೆ ಪುರೋಹಿತರು ಬಂದು ದೇವರ ಬನದ ಎಲ್ಲಾ ದೇವರಿಗೂ ಪೂಜೆ ಸಲ್ಲಿಸುತ್ತಾರೆ. ನಂತರ ಬನದ ಕುಟುಂಬಸ್ಥರು ತಾವು ದೈವಕ್ಕೆ ಬಲಿಕೊಡಲು ತಂದ ಕೋಳಿ, ಕುರಿಗಳನ್ನು ಬನದೊಳಗೆ ತರುತ್ತಾರೆ. ಕುಟುಂಬದಲ್ಲಿ ಒಬ್ಬರು ಬೆಳಗ್ಗಿನಿಂದ ಉಪವಾಸವಿರುತ್ತಾರೆ. ಇದನ್ನು ಚೌತಿ ಇರುವುದು ಎನ್ನುತ್ತಾರೆ. ದೈವಕ್ಕೆ ಬಲಿ ಕೊಡುವುದು, ಎಡೆ ಇಡುವುದು ಇವೆಲ್ಲವೂ ಈ ಚೌತಿಗಿರುವವರೇ ಮುಂದೆ ನಿಂತು ಮಾಡಿಕೊಡುತ್ತಾರೆ. ಈ ದೈವಗಳೆಲ್ಲವೂ ಮಾಂಸಾಹಾರವನ್ನೇ ಬಯಸುತ್ತವೆ ಎಂಬ ಮೂಲ ನಂಬಿಕೆ ಇರುವುದರಿಂದ ಮೊದಲಿನಿಂದಲೂ ಬಲಿ ಕೊಡುವ ಪದ್ಧತಿ ನಡೆದು ಬಂದಿದೆ. ಇಲ್ಲಿ ಬಲಿ ಕೊಟ್ಟ ಕೋಳಿ, ಕುರಿಗಳ ಮಾಂಸದಿಂದ ಬನದ ಹತ್ತಿರದಲ್ಲಿ ಅಡುಗೆ ಮಾಡಲಾಗುತ್ತದೆ. ಕಡುಬು, ಅನ್ನ ಕೂಡ ಮಾಡುತ್ತಾರೆ. ಇದನ್ನು ಅಟ್ಟಡಿಗೆ ಎನ್ನುತ್ತಾರೆ. ಕೆಲವು ಸಾರಿ ಪ್ರಾಣಿಯ ಮಂಡೆಯ ಸಾರನ್ನಷ್ಟೇ ಬನದಲ್ಲಿ ಮಾಡಿ, ಉಳಿದ ಮಾಂಸವನ್ನು ಮನೆಗೆ ಒಯ್ದು ಅಡುಗೆ ಮಾಡುತ್ತಾರೆ. ಈ ಮಂಡೆಸಾರು, ಕಡುಬು, ಅನ್ನವನ್ನು ದೈಯ್ಯಕ್ಕೆ ಎಡೆ ಮಾಡಿ, ನಂತರ ಪೂಜೆಗೆ ಬಂದವರೆಲ್ಲರೂ ಬನದಲ್ಲಿ ಕುಳಿತು ಊಟ ಮಾಡುತ್ತಾರೆ. ಮನೆಯಲ್ಲಿ ಎಷ್ಟೇ ರುಚಿಕರ ಪದಾರ್ಥಗಳನ್ನು ಹಾಕಿ ಸಾರು ಮಾಡಿದರೂ ಬನದಲ್ಲಿ ಮಾಡಿದ ಮಂಡೆಸಾರಿನ ರುಚಿ ಬರುವುದಿಲ್ಲ ಎಂದು ಎಲ್ಲರೂ ಬಣ್ಣಿಸುತ್ತ ಊಟವನ್ನು ಸವಿಯುತ್ತಾರೆ. ಮಾಂಸಾಹಾರ ಸ್ವೀಕರಿಸದ ದೈವಗಳಿಗೆ ಸಸ್ಯಾಹಾರವನ್ನೇ ಎಡೆ ಮಾಡುವ ಪದ್ಧತಿ ಇದೆ.

ದೇವರ ಹರಕೆಯ ಸಂಜೆ ಮನೆಯಲ್ಲಿ ಎಲ್ಲರೂ ಸೇರಿ ಮಾಂಸದ ಅಡುಗೆ, ಕಡುಬು ಮಾಡಿ ಔತಣ ಕೂಟ ನಡೆಸುತ್ತಾರೆ. ಊಟಕ್ಕೆ ಮೊದಲು ಮಣೆಗಳನ್ನಿಟ್ಟು, ಬಾಳೆಲೆ ಹಾಕಿ, ಮಣೆಯ ಮೇಲೆ ದೀಪ ಹಚ್ಚಿಟ್ಟು, ಮಾಡಿದ ಖಾದ್ಯಗಳನ್ನು ಬಾಳೆಲೆಗಳಿಗೆ ಬಡಿಸಿ ಎಡೆ ಮಾಡುತ್ತಾರೆ. ನಮ್ಮ ಪೂರ್ವಜರನ್ನು ಆಹ್ವಾನಿಸಿ ಊಟ ಹಾಕುವ ಪದ್ಧತಿಯಿದು. ಇದನ್ನು ಜಕಣಿಗೆ ಹಾಕುವುದು ಎನ್ನಲಾಗುತ್ತದೆ. ನಂತರ ಬಂಧುಗಳ ಮಾತುಕತೆ, ಹರಟೆ, ನಗುವಿನೊಂದಿಗೆ ಊಟ ನೆರವೇರುತ್ತದೆ.

ಬಹಳ ಹಿಂದಿನಿಂದ ಇಂದಿನವರೆಗೂ ಮಲೆನಾಡಿನ ಮನೆ ಮನೆಗಳಲ್ಲಿ ದೇವರ ಹರಕೆ ಕುಂದಿಲ್ಲದೆ ನಡೆದು ಬರುತ್ತಿದೆ. ಮೊದಲೆಲ್ಲಾ ದೇವರಿಗೆ ಬಲಿ ಕೊಡಲೆಂದೇ ನಾಟಿ ಕೋಳಿಗಳನ್ನು ಸಾಕುತ್ತಿದ್ದರು‌. ಈಗೀಗ ನಾಟಿ ಕೋಳಿಗಳ ಸಂಖ್ಯೆ ಕ್ಷೀಣಿಸಿದೆ. ಮನೆಯ ಮಕ್ಕಳಿಗೆ ಕಾಯಿಲೆ ಬಂದರೆ, ಜಾನುವಾರುಗಳು ಕಳೆದು ಹೋದರೆ ಅಥವಾ ರೋಗಕ್ಕೆ ತುತ್ತಾದರೆ, ತೋಟಗದ್ದೆಗಳಿಗೆ ಹಾನಿಯಾದರೆ ದೈವಕ್ಕೆ ಬಲಿ ಕೊಡುವ ಹರಕೆ ಹೊತ್ತು, ನೆರವೇರಿಸುತ್ತಾರೆ.

ಪ್ರಕೃತಿ ಮಲೆನಾಡಿನ ಜೀವನಾಡಿ. ಜನಜೀವನದ ಸಂಸ್ಕೃತಿಯೂ ಪ್ರಕೃತಿ ಆಧಾರಿತವಾಗಿರುವುದಕ್ಕೆ ದೈಯ್ಯದ ಬನ, ದೈಯ್ಯದ ಹರಕೆಗಳೇ ಸಾಕ್ಷಿ. ಮೌಢ್ಯತೆ ಎನಿಸಿದರೂ ಇಲ್ಲಿ ಎಲ್ಲರೂ ಒಂದಾಗಿ ಶ್ರದ್ಧೆ, ಭಕ್ತಿಯಿಂದ ನಡೆಸುವ ಆಚರಣೆ ಎಂಬುದು ಬಹಳ ಮುಖ್ಯವೆನಿಸುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿರುವ ಬಾಂಧವ್ಯಗಳ ಪುನಶ್ಚೇತನ, ಹಸಿರಲ್ಲಿ ದೇವರನ್ನರಸುವ ಅನನ್ಯತೆ ಹೊತ್ತಿರುವ ಇಂತಹ ಆಚರಣೆಗಳು ಅಳಿಯದೇ ಬೆಳೆಯಲಿ ಎಂಬುದೇ ಆಶಯ.

About The Author

ಭವ್ಯ ಟಿ.ಎಸ್.

ಭವ್ಯ ಟಿ.ಎಸ್. ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಾನುಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಹಲವು ಪ್ರಮುಖ ಪತ್ರಿಕೆಗಳು ಹಾಗೂ ವೆಬ್ ಮ್ಯಾಗಜೀನ್‌ಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ವಸುಂಧರೆ" ಇವರ ಪ್ರಕಟಿತ ಚೊಚ್ಚಲ ಕವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ