ಯುಗಧರ್ಮದ ಮನಸ್ಥಿತಿಯು ಆ ಸಮಾಜ ಸೃಷ್ಟಿಸಿದ ಘಟಕಗಳಲ್ಲಿ ಅಂತರ್ಗತವಾಗಿಯೆ ಇರುತ್ತದೆ. ಉದಾಹರಣೆಯಾಗಿ ಯಕ್ಷಗಾನವನ್ನೆ ತೆಗೆದುಕೊಂಡರೆ, ಅದರ ಎಲ್ಲ ಅಂಗಗಳಲ್ಲಿ, ರೂಪ-ಸ್ವರೂಪ, ಹಿಮ್ಮೇಳ-ಮುಮ್ಮೇಳ, ಮೌಲ್ಯ-ಔಚಿತ್ಯ, ರಸ-ರುಚಿ, ಪಠ್ಯ-ಸಂಕಲನ, ಅಥವಾ ತಾಳಮದ್ದಲೆಯಲ್ಲಿ ಬೆಳೆದು ಬಂದ ವಾಗ್ವಾದದ, ತರ್ಕದ ಪರಂಪರೆ ಇವೆಲ್ಲದರಲ್ಲೂ ನಾವು ಈ ಆಲೋಚನೆಯ ಒಂದು ಎಳೆಯು ನಿರಂತರವಾಗಿರುವುದನ್ನು ಕಾಣಬಹುದು.
ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನದ ಕುರಿತು ‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಲೇಖನ
ಕಳೆದ ವಾರ ಮಹಿಳೆ ಮತ್ತು ಯಕ್ಷಗಾನ ವಿಷಯದ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಲು ಕರೆದಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಇನ್ನೂ ಸಮಪಾಲು ಇಲ್ಲ ಎನ್ನುವುದನ್ನು ತೋರಿಸಲು, ಮುಖ್ಯ ವಿಷಯದ ಜೊತೆ ಮಹಿಳೆಯನ್ನು ಸೇರಿಸಿ ಒಂದು ಪ್ರತ್ಯೇಕ ಆದ ಸಮಯ ಕೊಡುವ ವಾತಾವಾರಣವಿದೆ ಅನ್ನುವುದಷ್ಟೇ ಸಾಕು.
ಅದೇನೇ ಇರಲಿ. ಹೀಗೆ ಕರೆದಿದ್ದು, ಒಮ್ಮೆ ಗಂಡಾಳ್ವಿಕೆಯಲ್ಲಿ ಕಟ್ಟಿದ ಪಾರಂಪರಿಕ ಕಲೆಗಳ ಮಿತಿ ಏನು ಎಂಬುದನ್ನು ಪರೀಕ್ಷಿಸಲು ಎಡೆ ಮಾಡಿಕೊಟ್ಟಿತು.
ಪಾರಂಪರಿಕವಾಗಿ ಗಂಡಸರಷ್ಟೆ ಭಾಗವಹಿಸುತ್ತಿದ್ದ ಯಕ್ಷಗಾನದಂತಹ ಕಲೆಯ ಮೊದಲ ಮಿತಿಯೇ 50 ಪ್ರತಿಶತ ಜನ ಸಮುದಾಯವನ್ನು ಬಿಟ್ಟಿರುವುದು. ಯಾವುದೇ ಪ್ರದೇಶದಲ್ಲಿ ಅರ್ಧದಷ್ಟಿರುವ ಅದೇ ಪ್ರಾಣಿ ಪ್ರಭೇದವನ್ನು ಬಿಟ್ಟು ಒಂದು ಸಾಮಾಜಿಕ ಘಟಕ ಹುಟ್ಟಿಕೊಂಡಿರುವುದು ಯಾವ ರೀತಿಯ ಸಮಾಜದ ಉತ್ಪನ್ನ? ಅಲ್ಲಿಯ ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ಕಲ್ಪನೆ ಏನು? ಈ ಲೇಖನದಲ್ಲಿ ಎಲ್ಲವನ್ನೂ ಚಾರಿತ್ರಿಕವಾಗಿ ಪರೀಕ್ಷಿಸಲಾಗದಿದ್ದರೂ, ಒಂದಂತೂ ನಿಜ. ಹಾಗೆ ಬಿಟ್ಟು ಮಾಡುವುದು ಸಹಜವಾದದ್ದು, ಸರಿಯಾದದ್ದು ಅನ್ನುವುದು ಆ ಸಮಾಜದ ಯುಗಧರ್ಮವಾಗಿರುವುದು.
ಇದು ಅಂದರೆ ಯುಗಧರ್ಮದ ಈ ಮನಸ್ಥಿತಿ, ಆ ಸಮಾಜ ಸೃಷ್ಟಿಸಿದ ಘಟಕಗಳಲ್ಲಿ ಅಂತರ್ಗತವಾಗಿಯೆ ಇರುತ್ತದೆ. ಉದಾಹರಣೆಯಾಗಿ ಯಕ್ಷಗಾನವನ್ನೆ ತೆಗೆದುಕೊಂಡರೆ, ಅದರ ಎಲ್ಲ ಅಂಗಗಳಲ್ಲಿ, ರೂಪ-ಸ್ವರೂಪ, ಹಿಮ್ಮೇಳ-ಮುಮ್ಮೇಳ, ಮೌಲ್ಯ-ಔಚಿತ್ಯ, ರಸ-ರುಚಿ, ಪಠ್ಯ-ಸಂಕಲನ, ಅಥವಾ ತಾಳಮದ್ದಲೆಯಲ್ಲಿ ಬೆಳೆದು ಬಂದ ವಾಗ್ವಾದದ, ತರ್ಕದ ಪರಂಪರೆ ಇವೆಲ್ಲದರಲ್ಲೂ ನಾವು ಈ ಆಲೋಚನೆಯ ಒಂದು ಎಳೆಯು ನಿರಂತರವಾಗಿರುವುದನ್ನು ಕಾಣಬಹುದು. ಅಂತಹುದೇ ಸಮಾಜದ ಉತ್ಪನ್ನವಾದ ನಾಟ್ಯಶಾಸ್ತ್ರದ ಭಾಷೆಯನ್ನು ಸ್ವಲ್ಪ ಹಿಗ್ಗಿಸಿ ಹೇಳಬೇಕೆಂದರೆ ಇದರ ಸ್ಥಾಯಿ ಭಾವವೇ ಈ ಮನಸ್ಥಿತಿ, ಸಂಚಾರಿಯಾಗಿ ಅಲ್ಲಲ್ಲಿ ಆ ಅಲೋಚನೆಗೆ ಸಮರ್ಥನೆ ಕೊಟ್ಟು ಅದನ್ನು ಇನ್ನಷ್ಟು ಸಹಜವೆನಿಸುವಂತೆ ಮಾಡುವ ಕೆಲವು ಭಾಗಗಳು.
ಹಾಗಾದರೆ, ಹೆಂಗಸರಿಗೆ ಇಂತಹ ಸಮಾಜದಲ್ಲಿ ಜಾಗವೇ ಇರಲಿಲ್ಲವೇ ಎಂಬ ಪ್ರಶ್ನೆ ಎಳುತ್ತದೆ. ಹೆಂಗಸರಿಗೆ ಪ್ರದರ್ಶನ ಕಲೆಗಳಲ್ಲಿ ತೊಡಗಿಕೊಳ್ಳಲು ಎಲ್ಲಿ ಜಾಗವಿತ್ತು ಎಂದು ನೋಡಿದರೆ ನಮಗೆ ಸ್ಥೂಲವಾಗಿ ಎರಡು ರೀತಿಯ ಸ್ಥಳಗಳು ಕಾಣುತ್ತವೆ. ದೇವದಾಸಿ ಮತ್ತು ಮುತ್ತೈದೆಯರು ತೊಡಗಿಕೊಂಡಿದ್ದ ಕಲೆಗಳು. ಇದು ಹೆಣ್ಣಿಗೆ ಕೊಟ್ಟ ಎರಡು ಸ್ಥಾನಗಳನ್ನೂ ಸೂಚಿಸುತ್ತಾ ಇದೆ. ಮುತ್ತೈದೆಯಾಗಿ ಹೆಣ್ಣು, ಆಯಾ ಜಾತಿಗೆ ಸೇರಿದ ಕೆಲಸಗಳನ್ನು ಮಾಡುತ್ತಾ ಮನೆಯ ಪರಿಸರದಲ್ಲಿ ಹೇಳುತಿದ್ದ ಹಾಡುಗಳು, ಭತ್ತ ಕುಟ್ಟೊ ಹಾಡು, ಅಕ್ಕಿ ಬೀಸೊ ಹಾಡು, ನೆಟ್ಟಿ ಹಾಡು, ಮಗಳನ್ನು ಕಳಿಸೊ ಹಾಡು, ಒಟ್ಟಿನಲ್ಲಿ ‘ಕಳ್ಳು ಬಳ್ಳಿ’ ಯ ಕಲೆಗಳು. ಇನ್ನೊಂದು ತುದಿಯಲ್ಲಿ ದೇವದಾಸಿಯಾಗಿ ರಂಗದಲ್ಲಿ, ಗಂಡಿನ ಸೌಕರ್ಯಕ್ಕಾಗಿ, ಅವನ ರುಚಿಗಾಗಿ, ಅವನ ಕಣ್ಣಿಗಾಗಿ ಅನುವಾಗಿದ್ದ ಕಲೆಗಳು. ಗಂಡಾಳ್ವಿಕೆ ಅಂದರೆ ಮತ್ತೇನಲ್ಲ. ಇಷ್ಟೆ. ಎಲ್ಲಾ ಸಾಮಾಜಿಕ ಕ್ರಿಯೆಗಳಲ್ಲೂ ಅವನು ಕೇಂದ್ರ. ಈ ಪರಂಪರೆಗಳಿಗೆ ಎಕ್ಸೆಪ್ಶನ್ ಇಲ್ಲವೆಂದೆಲ್ಲ. ಅವು ಎಕ್ಸೆಪ್ಶನ್ ಮಾತ್ರ ಅಷ್ಟೆ, ಸಾಮಾನ್ಯವಾದುದಲ್ಲ.
ನಮಗೆ ಅಂದರೆ ಹೆಂಗಸರಿಗೆ ಮತ್ತು ಕೆಲವು ಸಮುದಾಯಗಳಿಗೆ ಕಳೆದ ಶತಮಾನದಲ್ಲಿ ಸಾರ್ವಜನಿಕ ಪ್ರದರ್ಶನ ಕಲೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿದ್ದು ನಮ್ಮ ಸಂವಿಧಾನ ನಮಗೆ ಸಮಾನ ಪ್ರಜೆಗಳಾಗಿರುವ ಹಕ್ಕನ್ನು ಕೊಟ್ಟಿರುವುದರಿಂದ. ಪ್ರಜಾಪ್ರಭುತ್ವ ಮತ್ತು ಅದರಿಂದ ಸಾಧ್ಯವಾಗಿರುವ ಶಿಕ್ಷಣ ಹೆಂಗಸರಿಗೆ ಸ್ವಲ್ಪವಾದರೂ ಸಾರ್ವಜನಿಕ ಸ್ಥಳಗಳನ್ನು ತೆರೆದಿದೆ. ಹಾಗಾಗಿಯೆ ಕಳೆದ ಶತಮಾನದಲ್ಲಿ ನಾವು ಈ ಮೇಲಿನ ಎರಡು ರೀತಿಯ ಪ್ರದರ್ಶನ ಕಲೆಗಳಲ್ಲಿ ಹೊಸ ದಾರಿಗಳನ್ನು, ಪ್ರತಿಕ್ರಿಯೆಯನ್ನು ಕಾಣುತ್ತಿದ್ದೇವೆ. ಮೊದಲನೆಯದು ಮುತ್ತೈದೆಯ, ದೇವದಾಸಿಗಳ ಕಲಾ ಪ್ರಕಾರಗಳನ್ನು ಹೊರಗೆ ತರುವ ಪ್ರಯತ್ನ. ಉದಾಹರಣೆಗೆ ಸಾಧೀರ್ ಎನ್ನುವ ಕಲಾಪ್ರಕಾರ ಈಗ ಭರತನಾಟ್ಯವೆಂಬ ಅವತಾರವೆತ್ತಿದೆ. ಮತ್ತೊಂದು ಗಂಡಾಳ್ವಿಕೆಯ ಪಾರಂಪರಿಕ ಕಲೆಗಳಿಗೆ ಹೆಂಗಸರು ಮತ್ತು ಅದರಿಂದ ಹೊರಗಿದ್ದ ಜಾತಿ ಸಮುದಾಯಗಳು ಪ್ರವೇಶಿಸುತ್ತಿರುವುದು.
ಯಾವುದೇ ಪ್ರದೇಶದಲ್ಲಿ ಅರ್ಧದಷ್ಟಿರುವ ಅದೇ ಪ್ರಾಣಿ ಪ್ರಭೇದವನ್ನು ಬಿಟ್ಟು ಒಂದು ಸಾಮಾಜಿಕ ಘಟಕ ಹುಟ್ಟಿಕೊಂಡಿರುವುದು ಯಾವ ರೀತಿಯ ಸಮಾಜದ ಉತ್ಪನ್ನ?
ಯಕ್ಷಗಾನದಲ್ಲೂ ನಾವು ಹೆಂಗಸರ ಪ್ರವೇಶವನ್ನು ಕಳೆದ ಶತಮಾನದಿಂದ ನೊಡುತ್ತಿದ್ದೇವೆ. ಆದರೆ ಮೊದಲೇ ಹೇಳಿದ ಅರ್ಧ ಸಮುದಾಯವನ್ನು ಬಿಟ್ಟು ಕಟ್ಟಿರುವ ಮನಸ್ಥಿತಿ, ಕಲೆಯ ಎಲ್ಲಾ ಸೃಜನಶೀಲ ಪ್ರಕ್ರಿಯೆಯಲ್ಲಿ ಸಂಕೀರ್ಣವಾಗಿ ಅಂತರ್ಗತವಾಗಿ ಇದೆ ಅಂದಾಗ, ಅದನ್ನು ಬದಲಿಸುವುದಕ್ಕೆ ತಯಾರಾಗಿರುವುದು, ಅದನ್ನು ಸ್ವಾಗತಿಸುವುದು ಎಲ್ಲರನ್ನೂ ಒಳಗೊಳ್ಳುವ ಆರೋಗ್ಯಕರ ಸಮಾಜ, ಕಲೆಯನ್ನು ಕಟ್ಟುವ ಆಶಯವಿರುವ ಎಲ್ಲರ ಮೊದಲ ಆದ್ಯತೆಯಾಗಬೇಕಾಗುತ್ತದೆ. ಬರೀ ಅರ್ಧ ಸಮುದಾಯ ತೊಡಗಿಕೊಂಡ ಕಲೆ, ನದಿಯಲ್ಲಿ ಮೀನು ಹಿಡಿದಂತಾದರೆ, ಎಲ್ಲರನ್ನೂ ಒಳಗೊಂಡಾಗ ಹೊಸ ಆಯಾಮಗಳು, ಸಂವೇದನೆಗಳಿರುವ ಸಮುದ್ರದಲ್ಲಿ ಮೀನು ಹಿಡಿಯುವಂತಾಗುತ್ತದೆ.
ಅಷ್ಟಾದರೂ ರಂಗೋಲಿಯ ಕೆಳಗೆ ತೂರುವ ಈ ಮನಸ್ಥಿತಿಯ ಪ್ರಕಟ ಜಾಗಗಳನ್ನು ಹುಡುಕುವುದು ಸುಲಭವಲ್ಲ. ಹಾಗಾಗಿಯೆ ಅದನ್ನು ಮೊದಲು ಬಹಿರಂಗಗೊಳಿಸಬೇಕಾಗುತ್ತದೆ. ಅಂತಹ ಜಾಗಗಳಿಗೆ ಕನ್ನಡಿ ಹಿಡಿದು, ಬೆಳಕು ಬಿಟ್ಟು ನೋಡಬೇಕಾಗುತ್ತದೆ. ಯಕ್ಷಗಾನದ ಯಾವುದೆ ಅಂಗಗಳಲ್ಲಿ ತೊಡಗಿಸಿಕೊಳ್ಳುವಾಗ ಒಮ್ಮೆ ಪ್ರಜ್ಞಾಪೂರ್ವಕವಾಗಿ ನಿಂತು ಯಾಕೆ ಈ ರೀತಿಯ ಪಾತ್ರ, ಭಾಗವತಿಕೆ, ಸಂಘಟನೆ ಮಾಡುತ್ತಿದ್ದೇವೆ ಎಂದು ಯೋಚಿಸಿಕೊಳ್ಳುತ್ತಾ ಹೋಗುತ್ತಿದ್ದರೆ ಅದು ತಂತಾನೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ಯೋಚಿಸುವಾಗ ಒಳಗೊಳ್ಳುವಿಕೆಯ ಆಶಯವನ್ನು ನೆನಪಿಟ್ಟುಕೊಳ್ಳಬೇಕಾದ್ದು ಮಾತ್ರ ಅಗತ್ಯವಾದದ್ದು. ಆ ಮನಸ್ಥಿತಿ ಅಲ್ಲಿರುವ ಅರಿವು ಮೂಡುವುದೇ ಮೊದಲ ಹೆಜ್ಜೆ. ಈ ಅರಿವೇ ನಮಗೆ ಮುಂದಿನ ದಾರಿಯನ್ನು ತೋರಿಸುತ್ತಾ ಹೋಗುತ್ತದೆ. ನಮ್ಮ ತಾಳಮದ್ದಲೆಯ ತಂಡದಲ್ಲೂ ಅಂತದ್ದನ್ನು ಮಾಡಿಕೊಳ್ಳುತ್ತಾ ಹೋಗುತ್ತಿದ್ದೇವೆ.
ಕಲೆಯು, ಒಂದು ಕಡೆ, ಸಮಾಜದ ಯಥಾಸ್ಥಿತಿಗೆ ಸಮರ್ಥನೆಯನ್ನು ಕೊಡುತ್ತಿದ್ದಂತೆಯೇ ಮತ್ತೊಂದು ಕಡೆ ಆ ಯಥಾಸ್ಥಿತಿಯನ್ನು ದೂರ ನಿಂತು ವಿಮರ್ಶಿಸುವ ಕೆಲಸವನ್ನೂ ಮಾಡುತ್ತದೆ. ಆ ಕಲೆ ರಾಜಾಶ್ರಯದಲ್ಲಿರಲಿ, ಅಥವಾ ದೇವಸ್ಥಾನದ ಆಶ್ರಯದಲ್ಲಿರಲಿ, ಅದರ ಆಶಯದಂತೆ ನಡೆಯುತ್ತಾ ಇರುವಂತೆ ತೋರುತ್ತಿದ್ದರೂ ಅದರೊಳಗೆ ಪ್ರತಿರೋಧದ ಹೊಳಹುಗಳು ಇದ್ದೇ ಇರುತ್ತವೆ. ಸ್ವತಂತ್ರ ಜ್ಞಾನಶಾಖೆಯಾಗಿ ಬೆಳೆದ ಸಾಹಿತ್ಯದ ವಿಮರ್ಶಾ ಕ್ಷೇತ್ರ, ಪಂಪನಿಂದ ಆಧುನಿಕ ಸಾಹಿತ್ಯದ ತನಕ ಇಂತಹ ನೆಲೆಗಳನ್ನು ತೋರಿಸಿಕೊಟ್ಟಿದೆ. ಕಲೆಯ ಪರಂಪರೆಗಳು ಇವತ್ತಿನ ಕಾಲದ ಐದನೇ ವೇದವಾಗುವುದೆಂದರೆ ಹೀಗೆಯೆ.
ಅದಕ್ಕೇ ಯಕ್ಷಗಾನದಂತಹ ಕಲಾ ಪರಂಪರೆಗಳಲ್ಲಿ ಅಡಗಿರುವ ಅಂತಹ ತಾಣಗಳನ್ನೇ ಅನ್ವೇಷಿಸಿದರೆ ಅದರಲ್ಲಿಯೇ ನಮಗೆ ಹಲವು ಮಾರ್ಗಗಳು ಸಿಗಬಹುದು. ಉದಾಹರಣೆಗೆ ಯಕ್ಷಗಾನದಲ್ಲಿ ಬರುವ ಹಾಸ್ಯ ಪಾತ್ರದ ಮಹತ್ವವೇನೆಂದು ಸುಮ್ಮನೆ ಪ್ರಶ್ನೆ ಮಾಡಿಕೊಂಡರೂ ಸಾಕು ನಮಗೆ ಹಲವು ಕಾರಣಗಳು ಕಾಣುತ್ತವೆ. ಚೌಕಿಯಲ್ಲಿ ದೇವರ ಎದುರು ಹಾಸ್ಯಗಾರ ಕೂರುವುದು ಯಾಕೆ? ಅವನು ಬೇಗನೆ ಎದ್ದು ರಂಗಸ್ಥಳಕ್ಕೆ ಹೋಗುವುದಕ್ಕೆ ಎನ್ನುವುದು ಪ್ರಾಕ್ಟಿಕಲ್ ಉತ್ತರವಾದರೂ, ಅವನು ದೇವರನ್ನೂ ಎದುರಿಸಬಲ್ಲವನು ಅಥವಾ ಅವನಿಗೂ ಕನ್ನಡಿಯಾಗಬಲ್ಲವನು ಎಂದಿರಬಹುದೆ? ಹಲವು ಕಡೆ ಅವನು ಮುಖ್ಯ ಪಾತ್ರಗಳ ಜೊತೆಗಿರುತ್ತಾನೆ. ಮುಖ್ಯಪಾತ್ರ ಆ ಪ್ರಸಂಗದ ಆಶಯದ ಕಡೆ ಹೋಗುತ್ತಿದ್ದರೆ, ಹಾಸ್ಯಗಾರ ಅವನನ್ನು, ಅಥವಾ ಪ್ರಸಂಗದ ಆಶಯವನ್ನು ಲೇವಡಿ ಮಾಡುತ್ತಿರುತ್ತಾನೆ. ಒಂದು ಪಾತ್ರದ ಕಲ್ಯಾಣವೆ ಮುಖ್ಯವಾದ ಪ್ರಸಂಗಗಳಲ್ಲಿ ಮದುವೆಯಂತಹ ಸಾಂಸ್ಥಿಕ ವ್ಯವಸ್ಥೆಯನ್ನೇ ತಮಾಷೆ ಮಾಡುತ್ತಿದ್ದರೆ, ನಕ್ಷತ್ರಿಕನಂತಹ ಪಾತ್ರ, ಸತ್ಯ ಹರಿಶ್ಚಂದ್ರನ ಸತ್ಯ ಹುಡುಕುವ ಮಾರ್ಗವನ್ನೆ ಪರೀಕ್ಷಿಸುತ್ತಾ ಇರುತ್ತದೆ. ಪ್ರಸಂಗವನ್ನು ವರ್ತಮಾನಕ್ಕೆ ತರುವವನೂ ಅವನೇ, ಅವನು ರಾಜನೊ, ದೇವರೊ ಆಗದಿರುವುದಕ್ಕಾಗಿಯೆ ಇರುವ ಸ್ವಾತಂತ್ರವೇ ಅವನಿಗೆ, ಸಮಾಜ ಇನ್ನೂ ಒಪ್ಪದ ಸತ್ಯಗಳನ್ನು ಹೇಳುವುದಕ್ಕಾಗಿರಬಹುದೆ?. ಇದು ಒಂದು ಉದಾಹರಣೆ ಮಾತ್ರ. ಇಂತಹ ಸ್ಥಳಗಳು ಗಂಡಾಳ್ವಿಕೆಯ ಪರಂಪರೆಯಲ್ಲಿಯೇ ಅಂಚಿಗೆ ನಿಂತ ಇತರೆ ಅಂಗಗಳಲ್ಲಿ ನಮಗೆ ಸಿಗುತ್ತವೆ. ಇದರಿಂದಲೂ ನಮಗೆ ಸಹಾಯವಾಗಬಹುದು.
ಅದಕ್ಕಾಗಿಯೆ ಹೆಂಗಸರು ರಂಗಸ್ಥಳದಲ್ಲಿ ಬಂದಾಗ ಕಾಣುವ ಶೃತಿಯ ಅಂತರದ ಸಮಸ್ಯೆಯಾಗಲಿ, ದೇಹ ಆಕಾರದ ಸಮಸ್ಯೆಯಾಗಲಿ, ಪರಿಹಾರ ಸಿಗದಂತದ್ದೇನಲ್ಲ. ಯಕ್ಷಗಾನದ ಗಂಡಸರ ಪರಂಪರೆಯೊಳಗೆ ಹಲವು ರೀತಿಯ ಧ್ವನಿ ಇರುವವರು, ದೇಹದ ಆಕಾರ ಇರುವವರು ನಮಗೆ ಸಿಗುತ್ತಾರೆ. ಅಲ್ಲೆಲ್ಲ ಅವರು ಅದನ್ನು ಸರಿಪಡಿಸಿಕೊಳ್ಳಲು ಅಥವಾ ಅವರ ಧ್ವನಿಯನ್ನೊ, ಆಕಾರವನ್ನೊ ಪಾತ್ರಕ್ಕೆ ಹೊಸ ಆಯಾಮವನ್ನು ಕೊಡಲೊ ಬಳಸಿಕೊಂಡು ಬಂದಿದ್ದನ್ನು ನಾವು ನೋಡುತ್ತಲೆ ಬಂದಿದ್ದೇವೆ.
ಯಕ್ಷಗಾನದಂತಹ ಹಲವು ಕಲೆಗಳಲ್ಲಿ ಇನ್ನು ಹೆಂಗಸರ ಪ್ರಾತಿನಿಧ್ಯ ಸಣ್ಣ ಮಟ್ಟದಲ್ಲಿದೆ. ಆದ್ದರಿಂದ ನಮ್ಮ ಹೊಸ ಹುಡುಕಾಟದ ಪ್ರಯೋಗಗಳಿಗೆ ತಪ್ಪು ಮಾಡುವ ಅವಕಾಶವನ್ನು ನಾವು ಕೊಟ್ಟು ಕೊಳ್ಳಬೇಕಾಗುತ್ತದೆ.
ಇದು ಬಹಳ ಕಷ್ಟಕರವಾದದ್ದೂ ಹೌದು, ಗಂಡು ಕೇಂದ್ರಿತ ಸಮಾಜಕ್ಕೆ ಸರಿಸಮವಾಗಿ ಪ್ರದರ್ಶನ ಕೊಡುವುದೆಂದರೆ ಮತ್ತೆ ಅವರದೇ ಶ್ರೇಷ್ಠತೆಯ, ಸರಿ ತಪ್ಪುಗಳ ಮಾನದಂಡಗಳಿಗೆ ಸರಿಯಾದುದನ್ನು ಕೊಡಲು ಅಪ್ರಯತ್ನಪೂರ್ವಕವಾಗಿ ಹೆಂಗಸರ ಪ್ರದರ್ಶನಗಳು ನಡೆಯುತ್ತಾ ಇರುತ್ತವೆ. ಹೆಂಗಸರು ರಂಗದಲ್ಲಿ ಕಡಿಮೆ ಇರುವುದರಿಂದಲೆ ಹೆಂಗಸರು ಹೇಗೆ ಮಾಡುತ್ತಾರೆಂಬ ‘ವಿಚಿತ್ರ’ ವನ್ನು ನೊಡಲೆಂದೆ ಸಮಾಜ ಕಾದು ಕುಳಿತಿರುವಂತಿರುತ್ತದೆ. ಈ ಕೊರೊನ ಕಾಲದಲ್ಲಿ ವೈರಲ್ ಆಗುವ ಹೆಂಗಸರ ಪ್ರದರ್ಶನದ ವಿಡಿಯೋಗಳು ಅದರದೇ ಒಂದು ಭಾಗವಾಗಿದೆ. ಹಿಂದಿನಿಂದ ಯಕ್ಷಗಾನ ಮಾಡುತ್ತಾ ಬಂದ ಗಂಡಸರೆಲ್ಲರನ್ನೂ ಒಂದೇ ಮಾನದಂಡದಲ್ಲಿ ಹೇಗೆ ಅಳೆಯಲು ಬರುವುದಿಲ್ಲವೊ ಹಾಗೆಯೇ ಇದು ಅನ್ನುವುದನ್ನು ಯಕ್ಷಗಾನದ ಸಮುದಾಯ ಅರ್ಥ ಮಾಡಿಕೊಂಡರೆ, ನಾವು ಗಂಡಾಳ್ವಿಕೆಯ ಸಮಾಜವನ್ನು ಮೆಚ್ಚಿಸುವ ಒತ್ತಡವನ್ನು ಬಿಟ್ಟು, ಪ್ರತಿಕ್ರಿಯೆಯ ಸ್ತರದಲ್ಲಿರುವ ನಮ್ಮ ಹುಡುಕಾಟದಿಂದ ಸೃಜನಶೀಲವಾಗಿರುವುದರ ಕಡೆಗೆ ಹೊರಳುವುದಕ್ಕೂ ನಾಂದಿಯಾಗುತ್ತದೆ.
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.