ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಈ ನಡುವೆ ಕನ್ನಡ ರಾಜ್ಯವನ್ನು ಸ್ವತಂತ್ರಗೊಳಿಸಲು ಕನ್ನಡ ಜಿಲ್ಲೆಯ ಸಮಸ್ತ ಪ್ರಜೆಗಳು ಆಯುಧ ಸಮೇತರಾಗಿ ಕಲ್ಯಾಣಸ್ವಾಮಿ ಪರವಾಗಿ ಬರಬೇಕೆಂದು ಇಸ್ತಿಹಾರು ಹೊರಡಿಸಲಾಯಿತು. ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು. ನಮ್ಮ ರಾಜ್ಯ ಸ್ವತಂತ್ರವಾಗುತ್ತದೆ ಎಂದಾಗ ಖುಷಿ ಪಡದೇ ಇರುತ್ತಾರೆಯೇ? ಹುಚ್ಚೆದ್ದು ಕುಣಿಯುವುದೊಂದೆ ಬಾಕಿ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹನ್ನೆರಡನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ.

ಪುತ್ತೂರಿನಲ್ಲಿ ಶಿರಸ್ತೆದಾರನಾಗಿದ್ದ ಕರಣಿಕ ದೇವಪ್ಪಯ್ಯ ಒಂದು ಸಣ್ಣ ಸೈನ್ಯವನ್ನು ಇಟ್ಟುಕೊಂಡು ತನ್ನ ಮರ್ಜಿಗನುಸಾರವಾಗಿ ಪರಂಗಿಗಳ ದರ್ಬಾರು ನಡೆಸುತ್ತಿದ್ದ. ಸ್ವಲ್ಪ ದುಷ್ಟ ಕೂಡ. ಕಂಪೆನಿ ಕಾಯ್ದೆ ಜಾರಿ ಮಾಡುವುದರಲ್ಲಿ ಮಹಾಗಟ್ಟಿಗ. ಏನಾದರೂ ಹೆಚ್ಚು ಕಡಿಮೆಯಾಯಿತೇ, ರಂಪ ಮಾಡುತ್ತಿದ್ದ ನೀಚ ಆತ.

ದೇವಪ್ಪಯ್ಯ ಶಿಸ್ತಿನವನು. ಪರಂಗಿಗಳನ್ನು ಇನ್ನು ಯಾರೂ ಅಡಿಮೇಲು ಮಾಡಲು ಸಾಧ್ಯವಿಲ್ಲ ಎನ್ನುವುದು ಆತನ ಭಾವನೆ. ಹಾಗಾಗಿ ತಾನು ಮಾಡಿದ್ದೇ ಸರಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದ. ಏನಾದರೂ ಹೆಚ್ಚು ಕಡಿಮೆಯಾಯಿತೋ ವಿನಾ ಕಾರಣ ದಂಡಿಸುತ್ತಿದ್ದ. ಹಾಗಾಗಿ ದೇವಪ್ಪಯ್ಯನನ್ನು ಕಂಡರೆ ಜನರಿಗೆ ಭಯ. ಹಿಂದಿನಿಂದ ಈ ಮಾರಿ ಯಾವಾಗ ಮಣ್ಣು ತಿನ್ನುತ್ತಾನೋ ಎಂದು ಶಾಪ ಹಾಕುತ್ತಿದ್ದರು.

ದೇವಪ್ಪಯ್ಯ ಕೊಡಗಿನಲ್ಲಿ ಜನ ಸ್ವಾತಂತ್ರ್ಯಕ್ಕಾಗಿ ಆಗಾಗ್ಗೆ ಸಂಘಟನೆಯಾಗುತ್ತಿರುವುದು, ಮುಖಂಡರಾದ ಅಪರಂಪಾರ, ಕಲ್ಯಾಣಸ್ವಾಮಿಯನ್ನು ಪರೆಂಗಿಗಳು ಹಿಡಿದು ಹಾಕಿದ ವಿಚಾರ ಅರಿತಿದ್ದ. ಕನ್ನಡ ಜಿಲ್ಲೆಯಲ್ಲಿ ಬೀರಣ್ಣ ಬಂಟನ ಉಪಟಳ ಬಿಟ್ಟರೆ ಸಣ್ಣ ಪುಟ್ಟ ಚಿಲ್ಲರೆ ರಗಳೆ ನಡೆದಿದೆ ಹೊರತು ಪರೆಂಗಿಗಳ ಹುಟ್ಟಡಗಿಸುವ ಯಾವ ಸಂಗತಿಯೂ ಗಮನಕ್ಕೆ ಬಾರದೆ ನಿರಾತಂಕವಾಗಿದ್ದ. ಆದರೆ ಒಮ್ಮಿಂದೊಮ್ಮೆಲೇ ಅಟ್ಲೂರು ರಾಮಪ್ಪಯ್ಯನ ಹತ್ಯೆ ದಿಗಿಲೆಬ್ಬಿಸಿತು. ಅಟ್ಲೂರು ರಾಮಪ್ಪಯ್ಯ ಹಾಗೂ ಈತ ಖಾಸ ದೋಸ್ತು ಕೂಡ. ಪರೆಂಗಿಗಳಿಗೆ ನೀರು ಚಿಮುಕಿಸಿ ಗಂಧ ಅರೆದು ಕೊಡುವವರು ಇವರಿಬ್ಬರು. ಒಮ್ಮಿಂದೊಮ್ಮೆಲೇ ರಾಮಪ್ಪಯ್ಯನ ಹತ್ಯೆ ತಿಳಿದ ಮೇಲೆ ಈತ ಭಯದಿಂದ ಕಂಪಿಸಿದ. ಮುಂದಕ್ಕೆ ತನ್ನ ಸರದಿಯೋ ಎನ್ನುವ ಭಯ ಎದುರಾಯಿತು. ಆದರೂ ಧೈರ್ಯ ಕೆಡಲಿಲ್ಲ. ಕೂಡಲೇ ಕಲೆಕ್ಟರ್ ಲೆವಿನ್ಗೆ ಖುದ್ದಾಗಿ ಸುದ್ದಿ ಮುಟ್ಟಿಸಿದ. ಲೆವಿನ್ ಅದೊಂದು ಚಿಲ್ಲರೆ ಸಂಗತಿ ಎಂದು ಮೂಲೆಗೆ ಸರಿಸಿದ್ದ. ‘ದೇವಪ್ಪಯ್ಯ, ಬ್ರಿಟಿಷ್ ಕೋಟೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ, ಭಯಪಡಬೇಡ’ ಎಂದು ಧೈರ್ಯ ನೀಡಿದಾಗ ತುಸು ಸಮಾಧಾನದಿಂದ ಪುತ್ತೂರಿಗೆ ಬಂದ.

ಮರುದಿನ ಮಧ್ಯಾಹ್ನವೇರಿದಾಗ ಮತ್ತೊಂದು ಅಘಾತಕಾರಿ ಸುದ್ದಿ ಅವನ ಜಂಘಾಬಲವನ್ನು ನಡುಗಿಸಿತು. ಅಮರ ಸುಳಿಯ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಸ್ವತಂತ್ರಗೊಂಡಿದೆ ಎಂದು ಘೋಷಣೆ ಮಾಡಿರುವ ವಿಚಾರ ಕೇಳಿದಾಗ ನುಣ್ಣಗೆ ಬೆವರಿದ ದೇವಪ್ಪಯ್ಯ, ಜಿಲ್ಲಾ ಕಲೆಕ್ಟರ್ಗೆ ತನ್ನ ಬಾಡಿಗೆ ಬಂಟರ ಮೂಲಕ ಸುದ್ದಿ ಮುಟ್ಟಿಸಿದ. ಸಾಯಂಕಾಲ ಮತ್ತೊಂದು ಕಳವಳಕಾರಿ ಸುದ್ದಿ ಬಂದಾಗ ದೇವಪ್ಪಯ್ಯ ಮತ್ತಷ್ಟು ಇಳಿದು ಹೋದ. ಸ್ವಾತಂತ್ರ ಹೋರಾಟಗಾರರು ಬೆಳ್ಳಾರೆ ಕೋಟೆಯನ್ನು ಆಕ್ರಮಿಸಿ ವಶಪಡಿಸಿಕೊಂಡಿರುವ ವಿಚಾರ ಅವನ ತಲೆ ಕೆಡಿಸಿತು. ಈ ಬಾರಿ ಮಂಗಳೂರಿಗೆ ಬಾಡಿಗೆ ಬಂಟರನ್ನು ಕಳುಹಿಸುವ ಗೋಜಿಗೆ ಹೋಗಲಿಲ್ಲ. ಸ್ವತಃ ತಾನೇ ಕುದುರೆಯೇರಿ ಮಂಗಳೂರಿಗೆ ದೌಡಾಯಿಸಿದ.

ಕಲೆಕ್ಟರ್ ಲೆವಿನ್ ತುಸು ಮೋಜುಗಾರ. ಗುಂಡು ಹಾಕಿದರೆ ಅವನನ್ನು ಮಾತನಾಡಿಸುವವರಿಲ್ಲ. ಗುಂಡಿನ ಗಮ್ಮತ್ತಿನಲ್ಲಿ ಏನು ಮಾಡುತ್ತಾನೆಂದು ಎಂದು ಅವನಿಗೇ ಅರಿವಿರುವುದಿಲ್ಲ. ದೇವಪ್ಪಯ್ಯ ಮಂಗಳೂರು ಸೇರಿದಾಗ ನಟ್ಟ ನಡುರಾತ್ರಿ. ನಿತ್ಯ ನೀರವವಾಗಿ, ಪ್ರಶಾಂತವಾಗಿದ್ದ ಅರಬ್ಬಿ ಸಮುದ್ರವು ಕೋಲಾಹಲದಿಂದ ಅರ್ಭಟಿಸಲು ಆರಂಭಿಸಿತ್ತು. ಅದನ್ನು ಗಮನಿಸಿದ ಜನ ಮಳೆಯಾಗಬಹುದೋ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಕಲೆಕ್ಟರನನ್ನು ತುರ್ತಾಗಿ ಕಾಣಬೇಕೆಂದು ಚಾಕರಿದಾರರಲ್ಲಿ ಹೇಳಿದಾಗ ಕಲೆಕ್ಟರ್ ಎಲ್ಲಿ ಅಷ್ಟು ಸುಲಭವಾಗಿ ಸಿಗುತ್ತಾನೆ? ಪಾನಮತ್ತನಾಗಿ ಮಾನಿನಿಯರ ಸೇವೆ ಮಾಡುವ ಸಂದರ್ಭದಲ್ಲಿ ದೇವಪ್ಪಯ್ಯನಿಗೆ ಸುದ್ದಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಛೇ ತಾನು ರಾತೋರಾತ್ರಿ ಕೋಟೆಯನ್ನು ಬಿಟ್ಟು ಬರಬಾರದಿತ್ತು ಎನ್ನುವ ಆತಂಕ ಕಾಡಿತ್ತು. ಬಿಟ್ಟು ಇರುವಂತೆಯೂ ಇಲ್ಲ, ಹೋಗುವಂತೆಯೂ ಇಲ್ಲ ಎನ್ನುವ ತಾಕಲಾಟದಲ್ಲಿ ಮುಳುಗಿದ. ಕಡೆಗೆ ಕಲೆಕ್ಟರ್ ಸುದ್ದಿ ಮುಟ್ಟಿಸಲು ಅವನ ಪರಿಚಾರಕರಿಗೆ ಹೇಳಿ ತರಾತುರಿಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆಂದು ದೇವಪ್ಪಯ್ಯ ಮತ್ತೆ ಪುತ್ತೂರಿಗೆ ಹೊರಟ. ಮರುದಿನ ಬೆಳಿಗ್ಗೆ ಲೆವಿನ್ ನ ಚಾಕರಿಯವರು ಆತನಿಗೆ ರಾತ್ರಿ ದೇವಪ್ಪಯ್ಯ ಹೇಳಿದ ಸುದ್ದಿ ಮುಟ್ಟಿಸಿದರು. ಅದನ್ನು ಕೇಳಿದ ಲೆವಿನ್ ಕೂಡ ಹೌಹಾರಿದ.

ದೇವಪ್ಪಯ್ಯ ಕೊಡಗಿನಲ್ಲಿ ಜನ ಸ್ವಾತಂತ್ರ್ಯಕ್ಕಾಗಿ ಆಗಾಗ್ಗೆ ಸಂಘಟನೆಯಾಗುತ್ತಿರುವುದು, ಮುಖಂಡರಾದ ಅಪರಂಪಾರ, ಕಲ್ಯಾಣಸ್ವಾಮಿಯನ್ನು ಪರೆಂಗಿಗಳು ಹಿಡಿದು ಹಾಕಿದ ವಿಚಾರ ಅರಿತಿದ್ದ. ಕನ್ನಡ ಜಿಲ್ಲೆಯಲ್ಲಿ ಬೀರಣ್ಣ ಬಂಟನ ಉಪಟಳ ಬಿಟ್ಟರೆ ಸಣ್ಣ ಪುಟ್ಟ ಚಿಲ್ಲರೆ ರಗಳೆ ನಡೆದಿದೆ ಹೊರತು ಪರೆಂಗಿಗಳ ಹುಟ್ಟಡಗಿಸುವ ಯಾವ ಸಂಗತಿಯೂ ಗಮನಕ್ಕೆ ಬಾರದೆ ನಿರಾತಂಕವಾಗಿದ್ದ.

‘ಅಷ್ಟು ಆಹಂಕಾರವೇ ಕಲ್ಯಾಣಪ್ಪನಿಗೆ’ ಎಂದು ಬೈಯ್ದಾಡಿದ, ರೇಗಿದ. ಕೂಡಲೇ ತುಕಡಿ ಸಿದ್ಧ ಮಾಡಿಕೊಂಡು ಪುತ್ತೂರಿನ ರಕ್ಷಣೆಗೆ ಹೊರಡಲು ಸಿದ್ಧತೆ ಮಾಡಿದ. ಈ ನಡುವೆ ಪುತ್ತೂರಿಗೆ ಜನ ಕಳುಹಿಸಿ, ದೇವಪ್ಪಯ್ಯನಿಗೆ ಯಾವುದೇ ಗಳಿಗೆಯಲ್ಲೂ ಸೈನ್ಯ ಬರಬಹುದು, ಎಚ್ಚರದಿಂದಿರು ಎಂದು ಧೈರ್ಯದಿಂದ ಇರಲು ಸುದ್ದಿ ಕಳುಹಿಸಿದ. ಆದರೆ ಲೆವಿನ್ನ ದುರಾದೃಷ್ಟಕ್ಕೆ ಸಾಕಷ್ಟು ಸೈನಿಕರ ಕೊರತೆಯಿತ್ತು. ಒಂದು ವಾರದ ಮುಂಚೆ ಕೇರಳದ ಕಣ್ಣೂರಿನಲ್ಲಿ ನಡೆದ ಹಿಂಸಾಚಾರವನ್ನು ಬಗ್ಗು ಬಡಿಯಲು ಒಂದು ತುಕಡಿ ಹೋಗಿತ್ತು. ಆದರೆ ಮದ್ದು ಗುಂಡುಗಳು, ಫಿರಂಗಿಗಳಿಗೆ ಕೊರತೆಯಿರಲಿಲ್ಲ. ಕೊರತೆಯಿದ್ದದ್ದು ಕಾಲಾಳುಗಳು ಹಾಗೂ ಹೋರಾಡುವ ಸೈನಿಕರದು. ಆದರೂ ಇದ್ದುದ್ದನ್ನು ಒಟ್ಟುಗೂಡಿಸಿ ಹೊರಡುವಾಗ ಮಧ್ಯಾಹ್ನವಾಯಿತು. ಮತ್ತೆ ಪುತ್ತೂರಿಗೆ ಮುಟ್ಟುವಾಗ ರಾತ್ರಿ ವೇಳೆಯಾಯಿತು.
ಮಂಗಳೂರಿನಿಂದ ಹೊರಟ ಪರೆಂಗಿ ಸೈನ್ಯದ ಬಲಾಬಲ ತಿಳಿದುಕೊಂಡ ಮಂಗಳೂರಿನ ಸುಬ್ರಾಯ ಶಾನುಭೋಗರು ದೂತರ ಮೂಲಕ ಕಲ್ಯಾಣಸ್ವಾಮಿಗೆ ವರದಿ ಕಳುಹಿಸಿದರು. ಅದು ಕಲ್ಯಾಣಸ್ವಾಮಿಗೆ ಮುಟ್ಟುವಾಗಲೂ ರಾತ್ರಿ ವೇಳೆಯಾಗಿತ್ತು. ಹಾಗಾಗಿ ಕಲ್ಯಾಣಸ್ವಾಮಿಗೆ ಪರೆಂಗಿಗಳ ಬಲವನ್ನು ಅಳೆಯಲು ಸುಲಭವಾಯಿತು.
‘ರಾಮೇಗೌಡರೇ, ಪರೆಂಗಿಗಳ ಸೈನ್ಯದ ವಿರುದ್ಧ ಹೋರಾಡಲು ನಮ್ಮ ಒಂದು ತುಕಡಿ ಸಾಕು. ಆದ್ದರಿಂದ ನಾವು ಹಿಮ್ಮೆಟ್ಟುವುದು ಬೇಡ. ಸ್ವಲ್ಪ ಎದುರಾಳಿಯನ್ನು ಮೋಸಗೊಳಿಸಿ ತಂತ್ರಗಾರಿಕೆ ಮಾಡೋಣವೇ?’ ಎಂದು ನಕ್ಕ ಕಲ್ಯಾಣಪ್ಪ.
‘ನೀವು ಬಹಳ ಜಾಣರಪ್ಪ. ನಾನು ಏನೋ ಅಂದ್ಕೊಂಡಿದ್ದೆ, ಪರವಾಗಿಲ್ಲ. ಒಳ್ಳೆಯ ತಂತ್ರಗಾರಿಕೆ ತಿಳಿದವರು ನೀವು’ ಎಂದು ಹೊಗಳಿದ. ರಾಮೇಗೌಡ ಈ ನಡುವೆ ಪುತ್ತೂರಿನಲ್ಲಿ ಬೀಡು ಬಿಟ್ಟಿದ್ದ ಕಲೆಕ್ಟರ್ ಸೈನ್ಯದ ಬಲಾಬಲವನ್ನು ತಿಳಿದು ಕಲ್ಯಾಣಪ್ಪನಿಗೆ ವರದಿ ಮಾಡಿದ.
ಈ ಬಾರಿ ಕಲ್ಯಾಣಸ್ವಾಮಿಯ ಆತ್ಮವಿಶ್ವಾಸ ಬಹಳ ಎತ್ತರಕ್ಕೆ ಏರಿತ್ತು. ರಾತ್ರಿ ಹೊತ್ತು ಪರೆಂಗಿಗಳ ತುಕಡಿಗೆ ದಾಳಿ ಮಾಡಿ ಅವರನ್ನು ಗಲಿಬಿಲಿಗೊಳಿಸಬೇಕೆಂದು ಆತನ ನಿರ್ಧಾರಕ್ಕೆ ರಾಮೇಗೌಡ, ನಂಜಯ್ಯ ಸಹಮತ ವ್ಯಕ್ತಪಡಿಸಿದರು. ಬೆಳಕು ಹರಿವ ಮೊದಲು ರಾಮೇಗೌಡನ ನೇತೃತ್ವದಲ್ಲಿ ಲೆವಿನ್ನ ಸೇನೆಯ ಮೇಲೆ ದಾಳಿಮಾಡಬೇಕೆಂದು ಮಾತುಕತೆಯಾಯಿತು.
ರಾತ್ರಿ ವೇಳೆಯೇ ಸದ್ದಿಲ್ಲದೆ ಬೆಳ್ಳಾರೆಯಿಂದ ಪುತ್ತೂರಿಗೆ ಸೇನೆ ಬಂದಿಳಿಯಿತು. ಸೈ£ಕರಿಗೆ ತುಸು ವಿಶ್ರಾಂತಿ ಪಡೆಯಲು ಹೇಳಿ ರಾಮೇಗೌಡ ದಾಳಿ ಹೇಗೆ ಮಾಡಬೇಕೆಂದು ಮುನ್ಸೂಚನೆ ನೀಡಿದ.
ಆದರೆ ಕಲ್ಯಾಣಸ್ವಾಮಿಯ ಸೈನ್ಯ ಪುತ್ತೂರಿಗೆ ಬಂದಾಗ ಅಲ್ಲಿ ಸ್ವಾಗತಿಸಲು ಪರೆಂಗಿಗಳ ಸೇನೆಯಿರಲಿಲ್ಲ. ಅರೇ ಇದೇನು ಕತೆ? ಎಂದು ರಾಮೇಗೌಡ ಬೆರಗಾದ. ಇದರಲ್ಲಿ ಪರೆಂಗಿಗಳ ಪಿತೂರಿಯೇನಾದರೂ ಇದೆಯೇ ಎಂದು ಕಲ್ಯಾಣಸ್ವಾಮಿ ದಂಗಾದ. ನಮ್ಮ ಗೂಢಚಾರರೆಲ್ಲಿ? ಎಂದು ಪ್ರಶ್ನಿಸಿದ ಕಲ್ಯಾಣಸ್ವಾಮಿ.
ಬಹುಶಃ ನಿದ್ದೆ ಹೋಗಿರಬೇಕು ಎಂಬ ಉತ್ತರ ಬಂತು. ‘ಎಷ್ಟೊಂದು ನಿರ್ಲಕ್ಷ್ಯ….!
ಇಂತಹ ಪರಿಸ್ಥಿತಿಯಲ್ಲಿ ಅಂತಹ ಪ್ರಾಣ ಹೋಗುವ ನಿದ್ದೆಯೇ?’ ಎಂದು ಗುಡುಗಿದ ಕುಕನೂರು ಚೆನ್ನಯ್ಯ. ಅಂತೂ ಬೆಳಗಿನ ಜಾವ ಚುಮು ಚುಮು ಚಳಿಯಲ್ಲಿ ಹೋರಾಟಕ್ಕೆ ಸಿದ್ಧವಾದ ಕಲ್ಯಾಣಪ್ಪನ ಸೇನೆಗೆ ನಿರಾಸೆ ಕಾದಿತ್ತು. ಹಾಗೆಯೇ ಆತಂಕ ಮುಂದುವರಿದಿತ್ತು.
ಅಷ್ಟರಲ್ಲಿ ಸೈನಿಕರ ಸದ್ದು ಕೇಳಿ ಗೂಢಚಾರನೊಬ್ಬ ಓಡಿ ಬಂದ.
‘ಎಲ್ಲಿ ಹೋಗಿದ್ದೀಯಾ? ನಾವು ನಿನಗಾಗಿ ಕಾಯಬೇಕಿತ್ತಾ?’ ಗುಡುಗಿದ ರಾಮೇಗೌಡ.
‘ಅಲ್ಲ ಸ್ವಾಮಿ ತಾವು ಬೆಳಗಾದ ಮೇಲೆ ಬರುವಿರೆಂದು ಸುದ್ದಿ ಕಳುಹಿಸಿದ್ದೀರಿ. ಈಗ ನೋಡುವಾಗ ಬೆಳಗ್ಗಿನ ಜಾವವೇ ಬಂದಿದ್ದೀರಿ. ಹಾಗೆ ನಾವು ಆಯಾಸಗೊಂಡಿದ್ದರಿಂದ ನಿದ್ದೆಗೆ ಶರಣಾಗಬೇಕಾಯಿತು. ನಮ್ಮನ್ನು ಕ್ಷಮಿಸಬೇಕು.’ ಎಂದು ತಪ್ಪೊಪ್ಪಿಕೊಂಡ. ನಿಜವಾಗಿಯೂ ತಪ್ಪು ಇವರದೇ ಆಗಿತ್ತು. ಪುತ್ತೂರಿಗೆ ಬೆಳಿಗ್ಗೆ ಆಕ್ರಮಣ ಮಾಡುವುದೆಂದು ನಿರ್ಣಯವಾಗಿತ್ತು. ಆದರೆ ಪರೆಂಗಿಗಳ ಯುದ್ಧ ಕೌಶಲ್ಯವರಿತ ರಾಮೇಗೌಡ ಬೆಳಗ್ಗಿನ ಜಾವದಲ್ಲಿ ಆಕ್ರಮಣ ಮಾಡುವುದೆಂದು ಕೊನೆಯ ಕ್ಷಣದಲ್ಲಿ ಯೋಜನೆ ಬದಲಿಸಿದ್ದ. ಆ ಸುದ್ದಿ ಗೂಢಚಾರರಿಗೆ ಮುಟ್ಟಿಸಿರಲಿಲ್ಲ.
‘ಅದೆಲ್ಲಾ ಸರಿ…. ಈಗ ಪರೆಂಗಿಗಳ ಸೇನೆಯೆಲ್ಲಿ? ಕಲೆಕ್ಟರ್ ಲೆವಿನ್ ಎಲ್ಲಿ ಉಳಕೊಂಡಿದ್ದಾನೆ?’ ಎಂದು ಪ್ರಶ್ನಿಸಿದಾಗ ಗೂಢಚಾರ ಮುಗುಳುನಕ್ಕ.
‘ಸ್ವಾಮಿ ಆತ ಬಂದ ದಾರಿಗೆ ಸುಂಕವಿಲ್ಲವೆಂದು ನಿನ್ನೆಯೇ ವಾಪಾಸು ಹೊರಟು ಹೋದ’ ಎಂದಾಗ ಕಲ್ಯಾಣಪ್ಪನಿಗೆ ಅಚ್ಚರಿ.

‘ನಮ್ಮ ಸೈನ್ಯದ ಅಂದಾಜು ನೋಡಿ ಇನ್ನು ಬೇಳೆ ಬೇಯುವುದಿಲ್ಲವೆಂದು ಪ್ರಾಣಭಯದಿಂದ ಹಿಂದೆ ಓಡಿರಬೇಕು’ ಎಂದು ಹೇಳಿದಾಗ ಈಗ ನಗುವ ಸರದಿ ಕಲ್ಯಾಣಸ್ವಾಮಿ ಹಾಗೂ ರಾಮೇಗೌಡನದು.
‘ಅಂದರೆ ಇಲ್ಲಿಯೂ ನಮಗೆ ಕೆಲಸವಿಲ್ಲ. ಛೇ ಏನೆಲ್ಲಾ ಆಲೋಚನೆ ಮಾಡಿಕೊಂಡು ಬಂದಿದ್ದೆವು. ಎಲ್ಲಾ ಹಾಳಾಯಿತು’ ಎಂದು ಹಲ್ಲುಕಡಿದವರು ಕರ್ತು ಹಾಗು ಚೆಟ್ಟಿ ಕುಡಿಯ ಸಹೋದರರು.
‘ಒಳ್ಳೆಯದೇ ಆಯಿತು. ಅಂದರೆ ನಮ್ಮ ತಾಕತ್ತು ಯುದ್ಧ ಮಾಡುವ ಮೊದಲೇ ಅವರಿಗೆ ತಿಳಿಯಿತು ಎಂದಾಯಿತು. ನಮ್ಮ ಶ್ರಮ ಉಳಿಯಿತು. ಪಾಪ ನಮ್ಮ ಸೈನಿಕರ ನಿದ್ದೆ ಹಾಳಾಯಿತು’ ಎಂದ ರಾಮೇಗೌಡ.
‘ಆತ ಮಂಗಳೂರಿಬಿಂದ ಎಷ್ಟುದೂರ ಓಡಲಿಕ್ಕೆ ಸಾಧ್ಯ? ಹೇಗಿದ್ದರೂ ಮಂಗಳೂರಿನಲ್ಲಿ ಕಾದಾಡಬೇಕಲ್ಲ’ ಎಂದು ನಕ್ಕ ಕಲ್ಯಾಣಪ್ಪ.
‘ಇರಲಿ, ಪರೆಂಗಿಗಳ ಪ್ರತಿನಿಧಿಗಳು ಯಾರಾದರೂ ಇದ್ದಾರೆಯೇ ನೋಡಿ, ಹಿಡಿದುಕೊಂಡು ಬನ್ನಿ’ ಎಂದು ಕಲ್ಯಾಣಪ್ಪ ಸೂಚನೆ ನೀಡಿದ ಕೂಡಲೇ ನಂಜಯ್ಯ, ಕುಡಿಯ ಸಹೋದರರು ಗೂಢಚಾರನೊಂದಿಗೆ ಬಿರುಸಿನಿಂದ ಪುತ್ತೂರಿನ ಕೋಟೆಗೆ ಹೊರಟರು. ಚಳಿಗೆ ಬಸವಳಿದಿದ್ದ ಸೈನಿಕರಿಗೆ ವಿಶ್ರಾಂತಿ ಪಡೆಯಲು ಹೇಳಿದ ರಾಮೇಗೌಡ, ಕಲ್ಯಾಣಸ್ವಾಮಿಯೊಂದಿಗೆ ಮುಂದಿನ ಯೋಜನೆಯ ಮಾತುಕತೆ ಆರಂಭಿಸಿದ.
ಕಚೇರಿಗೆ ನುಗ್ಗಿದ ಸೇನೆ, ಆತಂಕದಿಂದ ಎದುರು ನೋಡುತ್ತಿದ್ದ ದೇವಪ್ಪಯ್ಯ ಹಾಗೂ ಕೆಲವು ಮಂದಿ ಕಾವಲುಗಾರರನ್ನು ಹಿಡಿದು ಬಂಧಿಸಿತು. ಕಚೇರಿಯ ಎದುರು ವಿಕ್ಟೋರಿಯಾ ರಾಣಿಯ ಭಾವಚಿತ್ರವನ್ನು ತೂಗುಹಾಕಿ ‘ಈಸ್ಟ್ ಇಂಡಿಯಾ ಕಂಪೆನಿ’ ಎಂದು ಬರೆದಿತ್ತು. ಅದರ ಮುಂದೆ ಸಿಂಹಾಸನದ ರೀತಿಯ ಒಂದು ಭವ್ಯವಾದ ಆಸನವಿತ್ತು. ಅದು ಕಲೆಕ್ಟರ್ ಸಾಹೇಬ ಕುಳಿತುಕೊಳ್ಳುವ ಆಸನವಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ ಅಂತಹ ಪ್ರಾಣ ಹೋಗುವ ನಿದ್ದೆಯೇ?’ ಎಂದು ಗುಡುಗಿದ ಕುಕನೂರು ಚೆನ್ನಯ್ಯ. ಅಂತೂ ಬೆಳಗಿನ ಜಾವ ಚುಮು ಚುಮು ಚಳಿಯಲ್ಲಿ ಹೋರಾಟಕ್ಕೆ ಸಿದ್ಧವಾದ ಕಲ್ಯಾಣಪ್ಪನ ಸೇನೆಗೆ ನಿರಾಸೆ ಕಾದಿತ್ತು. ಹಾಗೆಯೇ ಆತಂಕ ಮುಂದುವರಿದಿತ್ತು. ಅಷ್ಟರಲ್ಲಿ ಸೈನಿಕರ ಸದ್ದು ಕೇಳಿ ಗೂಢಚಾರನೊಬ್ಬ ಓಡಿ ಬಂದ.

‘ಅಂಗ್ರೇಜಿಗಳು ಕುಳಿತುಕೊಳ್ಳುವ ಭಾಗ್ಯ ಕಳೆದುಕೊಂಡರು. ಈ ಪೀಠದಲ್ಲಿ ತಾವೇ ಕುಳಿತುಕೊಂಡು ಇಂಗ್ಲಿಷ್ ಕೈದಿಗಳನ್ನು ವಿಚಾರಣೆ ನಡೆಸಬೇಕು’ ಎಂದು ನಂಜಯ್ಯ ಬೇಡಿದಾಗ ರಾಮೇಗೌಡ ಕಲ್ಯಾಣಸ್ವಾಮಿಯ ಕೈ ಹಿಡಿದು ತಂದು ಆ ಪೀಠದಲ್ಲಿ ಕುಳ್ಳಿರಿಸಿದ.
‘ಎಲ್ಲಿ ಆ ದೇವಪ್ಪಯ್ಯ…. ಎಳೆದುಕೊಂಡು ಬನ್ನಿ’ ನಂಜಯ್ಯ ಕೂಗಿದ.
‘ಸ್ವಲ್ಪ ಒರಟು, ಪರೆಂಗಿಗಳೆಂದರೆ ಅದೇನೋ ಭಕ್ತಿ. ಎಂಜಲು ತಿನ್ನುವ ನಾಯಿ ಆತ’ ಚೆಟ್ಟಿ ಕುಡಿಯ ಉತ್ತರಿಸಿದ.
ಕತ್ತಿ ಕೋವಿ ದೊಣ್ಣೆಗಳನ್ನು ಹಿಡಿದ ಭಟರು ಹಗ್ಗದಿಂದ ಕೈಗಳನ್ನು ಬಿಗಿದು ಕಟ್ಟಿದ ದೇವಪ್ಪಯ್ಯನನ್ನು ತಂದು ಎದುರು ನಿಲ್ಲಿಸಿದರು.
‘ದೇವಪ್ಪಯ್ಯ ಅಂದರೆ ನೀನೇನೋ?’ ಕಲ್ಯಾಣಪ್ಪ ಪ್ರಶ್ನಿಸಿದಾಗ ಉತ್ತರ ಬರಲಿಲ್ಲ. ಆಜಾನುಬಾಹು, ಗಿರಿಜಾಮೀಸೆ, ಆಗಲವಾದ ಕಣ್ಣುಗಳು. ಅದರಲ್ಲಿ ಆಹಂಕಾರ ನರ್ತಿಸುತ್ತಿತ್ತು. ಸೆರೆಯಾಗಿದ್ದೇನೆ ಎಂಬ ಎಳ್ಳಷ್ಟು ಪಶ್ಚಾತ್ತಾಪ ದೇವಪ್ಪಯ್ಯನ ಮುಖದಲ್ಲಿ ಕಾಣುತ್ತಿರಲಿಲ್ಲ.
‘ಹೇಳೋ, ಬಾಯಿ ಬಿಡೋ…. ಆಂಗ್ರೇಜಿಗಳು ಎಂದರೆ ಅವರ ಪಾದಸೇವೆ ಮಾಡುತ್ತಿದ್ದೆ?’ ಎಂದು ಚೆನ್ನಯ್ಯ ಗರ್ಜಿಸಿದ.
‘ಏನು ಬಹಳ ಹಾರಾಡುತ್ತಿದ್ದಿಯಂತೆ. ನಮ್ಮ ಸೈನ್ಯ ಕಪಿ ಸೈನ್ಯ ಅಂತ ಹಂಗಿಸುತ್ತಿದ್ದಿಯಂತೆ. ಎಲ್ಲಿ ಹೋಯಿತೋ ನಿನ್ನ ಅಂಗ್ರೇಜಿ ಸೈನ್ಯ. ಈ ದೇಶದಲ್ಲಿ ಹುಟ್ಟಿ ಪರಕೀಯರಿಗೆ ಮಣೆ ಹಾಕುತ್ತಿದ್ದಿಯಲ್ಲಾ?’ ಎಂದು ಗದರಿಸಿದ ರಾಮೇಗೌಡ.
‘ದೇವಪ್ಪಯ್ಯ ತಿಳಿದೋ ತಿಳಿಯದೆಯೋ ಏನೋ ತಪ್ಪು ಮಾಡಿದೆ. ಈಗ ನಿನ್ನ ಆಂಗ್ರೇಜಿಗಳ ದರ್ಬಾರು ಮುಗಿಯಿತು. ತಪ್ಪೊಪ್ಪಿಕೊಂಡು ನಮ್ಮೊಂದಿಗೆ ಇರುತ್ತೀಯಾ’ ಎಂದ ಕಲ್ಯಾಣಸ್ವಾಮಿ ಪ್ರಶ್ನಿಸಿದಾಗ
‘ಇಲ್ಲಾ … ಖಂಡಿತ ಸಾಧ್ಯವಿಲ್ಲ…. ನಾನು ನಿಮ್ಮಂತಹ ದರೋಡೆಕೋರರೊಂದಿಗೆ ನನ್ನ ಪ್ರಾಣ ಹೋದರೂ ಇರಲಾರೆ’ ಎಂದು ನಿಷ್ಠುರವಾಗಿ ನುಡಿದ.
ಅಷ್ಟರಲ್ಲಿ ಕುಕನೂರು ಚೆನ್ನಯ್ಯ ಆವೇಶಭರಿತನ ಹಾಗೆ ಕತ್ತಿ ಹಿಡಿದು ಅವನ ಮೇಲೆ ಏರಿ ಬಂದ.
‘ಏಷ್ಟು ದರ್ಪವೊ ನಿನಗೆ? ನಮ್ಮ ಸ್ವಾಮಿಗಳ ಎದುರು ನಿನ್ನ ಉದ್ದಟತನವೇ? ನೀನು ಯಾರ ಜತೆಯಲ್ಲಿ ಮಾತನಾಡುತ್ತಿ ಎಂಬ ಯೋಚನೆಯಿದೆಯೇನೋ?’ ಎಂದು ರೇಗಾಡಿದಾಗ ಆತನನ್ನು ಸಮಾಧಾನ ಮಾಡಲು ಸಾಕು ಸಾಕಾಯಿತು.
‘ಈತನನ್ನು ಬಂಧಿಯಾಗಿ ಇಟ್ಟುಕೊಳ್ಳಿ. ಜತೆಯಲ್ಲಿ ಈ ಪ್ರಾಣಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗೋಣ. ಪರೆಂಗಿಗಳ ಸ್ನೇಹ ಮಾಡಿದವರಿಗೆ ಇವನೊಂದು ಪಾಠವಾಗಲಿ’ ಎಂದು ಕಲ್ಯಾಣಸ್ವಾಮಿ ಆದೇಶಿಸಿದಾಗ ಎಲ್ಲರೂ ಸುಮ್ಮನಾದರು.
ಪುತ್ತೂರಿನಲ್ಲಿ ಪರೆಂಗಿಗಳ ಕಚೇರಿಯನ್ನು ಜಪ್ತಿ ಮಾಡಿದಾಗ ಖಜಾನೆ ದೊರಕಿತು. ಆದರೆ ಬೆಳ್ಳಾರೆಯಲ್ಲಿ ಸಿಕ್ಕಿದ ಹಾಗೆ ದೊಡ್ಡ ಮೊತ್ತ ಉಳಿದಿರಲಿಲ್ಲ. ಸೈನಿಕರ ಉಗ್ರಾಣದಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಸಿಕ್ಕಿದವು. ದೇವಪ್ಪಯ್ಯನನ್ನು ಹೊರತು ಪಡಿಸಿ ಉಳಿದ ನೌಕರರನ್ನು ಸೈನ್ಯಕ್ಕೆ ಸೇರಿಸಲಾಯಿತು. ಅಂತೂ ಬೆವರು ಸುರಿಸದೆ, ರಕ್ತ ಹರಿಯದೆ ಪುತ್ತೂರು ಕೈ ವಶವಾಯಿತು.

ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.
ಈ ನಡುವೆ ಕನ್ನಡ ರಾಜ್ಯವನ್ನು ಸ್ವತಂತ್ರಗೊಳಿಸಲು ಕನ್ನಡ ಜಿಲ್ಲೆಯ ಸಮಸ್ತ ಪ್ರಜೆಗಳು ಆಯುಧ ಸಮೇತರಾಗಿ ಕಲ್ಯಾಣಸ್ವಾಮಿ ಪರವಾಗಿ ಬರಬೇಕೆಂದು ಇಸ್ತಿಹಾರು ಹೊರಡಿಸಲಾಯಿತು. ಅದನ್ನು ಸುಬ್ಬಯ್ಯ ಕರಣಿಕನ ಮೂಲಕ ಬರೆಯಿಸಿ ಸಶಸ್ತ್ರ ಓಲೆಕಾರರು, ಡಂಗುರ ಹೊರಡಿಸುವ ಮೂಲಕ ಜನರಿಗೆ ತಿಳಿಸಲು ಕಲ್ಯಾಣಪ್ಪ ಆದೇಶಿಸಿದ. ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು. ನಮ್ಮ ರಾಜ್ಯ ಸ್ವತಂತ್ರವಾಗುತ್ತದೆ ಎಂದಾಗ ಖುಷಿ ಪಡದೇ ಇರುತ್ತಾರೆಯೇ? ಹುಚ್ಚೆದ್ದು ಕುಣಿಯುವುದೊಂದೆ ಬಾಕಿ.
ಆದರೆ ಅಂಗ್ರೇಜಿಗಳನ್ನು ಬೆಂಬಲಿಸುತ್ತಿದ್ದ ಚಾಕರಿದಾರರಿಗೆ, ಅನ್ಯ ಧರ್ಮೀಯರಿಗೆ ಮಾತ್ರ ಆತಂಕವಾಯಿತು. ಅದಕ್ಕೂ ರಾಮೇಗೌಡ ಪರಿಹಾರ ಸೂಚಿಸಿದ. ‘ಯಾರೂ ಆತಂಕ ಪಡಬೇಕಾಗಿಲ್ಲ. ಸ್ವತಂತ್ರ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ದೊರಕುತ್ತದೆ’ ಎಂದು ಆಶ್ವಾಸನೆ ಹೊರಡಿಸಿದ.


ಅಂದು ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೈನ್ಯ ತಂಗಿತ್ತು. ದೇವಸ್ಥಾನದ ಅರ್ಚಕರು ಮೊದಲು ವಿಷಯ ತಿಳಿಯದೆ ಆಕ್ಷೇಪ ಮಾಡಿದರು. ಚೆನ್ನಯ್ಯ, ನಂಜಯ್ಯ, ಕರ್ತು ಸಹೋದರರು ದೇವಸ್ಥಾನದಲ್ಲಿ ಅವಕಾಶ ನೀಡದಿದ್ದರೆ ದೇವಸ್ಥಾನವನ್ನು ಕೊಳ್ಳೆ ಹೊಡೆಯುತ್ತೇವೆ ಎಂದು ಬೆದರಿಸಿದಾಗ ಅರ್ಚಕರು ತಣ್ಣಗಾದರು. ಭಯಭಕ್ತಿಯಿಂದ ಕಲ್ಯಾಣಸ್ವಾಮಿಯನ್ನು ಸ್ವಾಗತಿಸಿದ ಅರ್ಚಕರು ದೇವಸ್ಥಾನದಲ್ಲಿ ದೇವರಿಗೆ ಕೈಗೊಂಡ ಧರ್ಮಯುದ್ಧಕ್ಕೆ ಜಯಸಿಗಲಿ ಎಂದು ವಿಶೇಷ ಪೂಜೆಗೆ ಏರ್ಪಾಡು ಮಾಡಿದರು. ಕಲ್ಯಾಣಸ್ವಾಮಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಯಿತು. ದೇವಸ್ಥಾನದ ಬಯಲಲ್ಲಿ ಸೈನ್ಯದ ಶಿಬಿರ ಹಾಕಿದ ಡೇರೆಯಲ್ಲಿ ಸೈನಿಕರು ಉಳಿಕೊಂಡರೆ ನಾಯಕರುಗಳಿಗೆ ದೇವಸ್ಥಾನದ ಪೌಳಿಯಲ್ಲಿ ವಿಶ್ರಾಂತಿಗಾಗಿ ಏರ್ಪಾಡಾಯಿತು.
ಕಲ್ಯಾಣಸ್ವಾಮಿ ಮಹಾಲಿಂಗೇಶ್ವರ ದೇವಸ್ಥಾನದ ಕೊಳದಲ್ಲಿ ಮಿಂದು ಮಡಿಯುಟ್ಟು ಭಕ್ತಿಭಾವದಿಂದ ಪೂಜೆಯನ್ನು ಅರ್ಪಿಸಿದ. ನಮ್ಮ ಸೈನ್ಯ ಹೋದೆಡೆಯಲ್ಲಿ ವಿಜಯ ದುಂಧುಬಿ ಮೊಳಗಲಿ ಎಂದು ಪ್ರಾರ್ಥಿಸಿದ.
ಅರ್ಚಕರಿಗೆ ಕಲ್ಯಾಣಸ್ವಾಮಿ ಬಗ್ಗೆ ತಿಳಿದುಕೊಳ್ಳುವ ಆಸೆ. ಕಲ್ಯಾಣ ಸ್ವಾಮಿಯ ಬಂಧನವಾಗಿದೆ ಎಂಬ ಗುಸುಗುಸು ಸುದ್ದಿ ಹರಡಿತ್ತು. ಈಗ ಎದುರಿಗೆ ಇರುವವನು ಕಲ್ಯಾಣಸ್ವಾಮಿಯೇ ಎಂಬ ಅನುಮಾನ. ಆದರೆ ಕಲ್ಯಾಣಸ್ವಾಮಿಯನ್ನು ನೋಡಿದಾಗ ಅಂತಹ ಸಂಶಯ ಉಂಟಾಗಲಿಲ್ಲ. ಆತನ ಗತ್ತು ದೌಲತ್ತು, ಮಾತಿನ ಮೋಡಿ ಅರ್ಚಕರನ್ನು ಮಂತ್ರ ಮುಗ್ಧಗೊಳಿಸಿತ್ತು.

ಪುತ್ತೂರಿನಲ್ಲಿ ಪರೆಂಗಿಗಳ ಕಚೇರಿಯನ್ನು ಜಪ್ತಿ ಮಾಡಿದಾಗ ಖಜಾನೆ ದೊರಕಿತು. ಆದರೆ ಬೆಳ್ಳಾರೆಯಲ್ಲಿ ಸಿಕ್ಕಿದ ಹಾಗೆ ದೊಡ್ಡ ಮೊತ್ತ ಉಳಿದಿರಲಿಲ್ಲ. ಸೈನಿಕರ ಉಗ್ರಾಣದಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಸಿಕ್ಕಿದವು. ದೇವಪ್ಪಯ್ಯನನ್ನು ಹೊರತು ಪಡಿಸಿ ಉಳಿದ ನೌಕರರನ್ನು ಸೈನ್ಯಕ್ಕೆ ಸೇರಿಸಲಾಯಿತು. ಅಂತೂ ಬೆವರು ಸುರಿಸದೆ, ರಕ್ತ ಹರಿಯದೆ ಪುತ್ತೂರು ಕೈ ವಶವಾಯಿತು.

‘ಏನು ಅರ್ಚಕರು ನಮ್ಮನ್ನೇ ಎವೆಯಿಕ್ಕಿ ನೋಡುತ್ತಿದ್ದೀರಿ…..?’ ಎಂದು ಅರ್ಚಕರನ್ನು ಪ್ರಶ್ನಿಸಿದಾಗ ಅರ್ಚಕರು ಬೆವರಿ ಹೋದರು.
‘ಏನಿಲ್ಲ ತಮ್ಮ ಶೌರ್ಯ, ಪರಾಕ್ರಮವನ್ನು ಕೇಳಿದ್ದೆ. ಈಗ ತಮ್ಮನ್ನು ಕಣ್ಣಾರೆ ಕಂಡು ಕೃತಾರ್ಥನಾದೆ…..’ ಎಂದು ಕೈ ಮುಗಿದರು ಅರ್ಚಕರು.
‘ಎಂದರೆ ನಿಮಗೆ ನಮ್ಮ ಮೇಲೆ ಅನುಮಾನವೇ?’ ಮುಗುಳುನಕ್ಕು ರಾಮೇಗೌಡನ ಮುಖ ನೋಡಿ ಕಣ್ಣು ಮಿಟುಕಿಸಿದ.
‘ಛೇ…. ದೊರೆಗಳು ಹಾಗೆ ಅನ್ನಬಾರದು, ನಮ್ಮಿಂದ ಅಪರಾಧವಾಗಿದ್ದರೆ ಉಡಿಯಲ್ಲಿ ಹಾಕಿಕೊಂಡು ಕ್ಷಮಿಸಬೇಕು’ ಎಂದು ಕೈ ಮುಗಿದರು ಅರ್ಚಕರು.
‘ನಾನು ಈ ರಾಜ್ಯವನ್ನು ಸ್ವತಂತ್ರಗೊಳಿಸಲು, ಪರಕೀಯರ ಕಪಿಮುಷ್ಟಿಯಿಂದ ಬಿಡಿಸಲು ಬಂದವನು, ನನಗೆ ರಾಜಕೀಯ ಮಹತ್ವಾಕಾಂಕ್ಷೆಯಾಗಲಿ, ಧನಕನಕದ ಆಸೆಯಾಗಲಿ ಇಲ್ಲ. ಈ ರಾಜ್ಯವನ್ನು ಸ್ವತಂತ್ರಗೊಳಿಸಿ ಯೋಗ್ಯರ ಕೈಗೆ ಒಪ್ಪಿಸುವುದೊಂದೇ ನನ್ನ ಕರ್ತವ್ಯ. ತಾವು ಈ ಕೈಂಕರ್ಯಕ್ಕೆ ಸಹಾಯ ಮಾಡಬೇಕು’ ಎಂದು ಕಲ್ಯಾಣಪ್ಪ ಬೇಡಿಕೊಂಡ.
‘ಅವಶ್ಯವಾಗಿ, ಆ ಮಹಾಮಹಿಮ ಮಹಾಲಿಂಗೇಶ್ವರನ ಕೃಪಕಟಾಕ್ಷದಿಂದ ಎಲ್ಲವೂ ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ಭರವಸೆ ನಮಗಿದೆ’ ಎಂದು ಹರಸಿದರು ಅರ್ಚಕರು.
ಸೇನೆ ಪುತ್ತೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಮತ್ತೊಂದು ಆತಂಕ ಎದುರಾಯಿತು. ಎಲ್ಲರಿಗೂ ಎದೆ ಡವಡವವಾಯಿತು. ನಾಗಾಲೋಟದಿಂದ ಧೂಳೆಬ್ಬಿಸಿ ಬರುತ್ತಿರುವ ಕಟ್ಟಾಳುಗಳ ಸೈನ್ಯವನ್ನು ಕಂಡು ರಾಮೇಗೌಡನಂತೂ ಬೆವರಿಬಿಟ್ಟ. ಕಲ್ಯಾಣಪ್ಪನು ತುಸು ಹೆದರಿದ. ಪರೆಂಗಿಗಳು ಮೋಸದಿಂದ ತಮ್ಮ ಮೇಲೆ ಆಕ್ರಮಣ ಮಾಡುತ್ತಾರೋ ಎಂಬ ಭಯ ಕಾಡಿತು. ಆರಾಮದಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸೈನಿಕರು ಅವಸರ ಅವಸರದಿಂದ ತಮ್ಮ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡರು.
ಆದರೆ ಕವಿದಿದ್ದ ಆತಂಕ ಕ್ಷಣಾರ್ಧದಲ್ಲಿ ಮರೆಯಾಯಿತು. ಬಂದವರು ಬೇರಾರೂ ಅಲ್ಲ, ಪುತ್ತೂರು ಸೀಮೆಯ ಮೋರಜರು ಎಂಬ ಸಿರಿವಂತ ಜಮೀನ್ದಾರರು. ಅಪ್ರತಿಮ ದೇಶಪ್ರೇಮಿಗಳು. ಕರಣಿಕ ಸುಬ್ಬಯ್ಯನ ಸಮೀಪದ ಬಂಧುಗಳು. ನೀರ್ ಮಾರ್ಗದ ಸುಬ್ರಾಯ ಶಾನುಭೋಗರ ದೂರದ ಸಂಬಂಧಿಕರು ಆಗಿದ್ದರು. ಪರೆಂಗಿಗಳ ದೌಲತ್ತಿಗೆ ಹೆದರಿ ಕಲ್ಯಾಣಸ್ವಾಮಿಗೆ ಬಹಿರಂಗವಾಗಿ ಬೆಂಬಲ ಘೋಷಿಸಲು ಹೆದರಿಕೊಂಡರೂ, ಗುಟ್ಟಾಗಿ ತಮ್ಮ ಸೀಮೆಯಲ್ಲಿ ಜಾತಿ ಬಂಧುಗಳನ್ನು, ಕಟ್ಟಾಳು ಯುವಕರನ್ನು ಸೇರಿಸಿ ಪುಟ್ಟ ಸೈನ್ಯವೊಂದನ್ನು ಸಜ್ಜುಗೊಳಿಸಿದ್ದರು. ಸೈನ್ಯದ ತರಬೇತಿಗಾಗಿ, ಆಯುಧ ಹಾಗೂ ಇನ್ನಿತರ ಕೆಲಸಗಳಿಗಾಗಿ ಸಾಕಷ್ಟು ಖರ್ಚು ಮಾಡಿದ್ದರು. ಈ ಪುತ್ತೂರು ಸೀಮೆಯ ಮೋರಜರು ತಮ್ಮ ಪುಟ್ಟ ಕಾಣಿಕೆಯಾಗಿ ದಂಡಿನೊಂದಿಗೆ ಸಾಕಷ್ಟು ಧವಸಧಾನ್ಯಗಳನ್ನು ಹೇರಿಕೊಂಡು, ಕಲ್ಯಾಣಸ್ವಾಮಿಗೆ ಅರ್ಪಿಸಲು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಸೇರಿದರು.

ಮೋರಜರ ಕಾರುಬಾರು, ದೇಶಭಕ್ತಿ ನೋಡಿ ಕಲ್ಯಾಣಪ್ಪನಿಗೆ ದಂಗಾಯಿತು. ‘ಪರವಾಗಿಲ್ಲ ಮೋರಜರೇ….. ನಿಮ್ಮ ಈ ಪುಣ್ಯದ ಕೆಲಸವನ್ನು ಹೇಗೆ ಹೊಗಳಬೇಕೆಂದು ತಿಳಿಯುತ್ತಿಲ್ಲ. ನಿಮ್ಮಂತಹ ವಿಶಾಲ ಹೃದಯದವರ ಸಹಾಯದಿಂದ ನಾವು ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಬಿಗಿದಪ್ಪಿಕೊಂಡ.
‘ಕಲ್ಯಾಣಪ್ಪನವರೇ, ನಮ್ಮದೇನು ಹೇಳಿಕೊಳ್ಳುವ ಮಹಾಕಾರ್ಯವಲ್ಲ. ಒಂದು ಚಿಕ್ಕ ಕಾಣಿಕೆ. ಒಟ್ಟಿನಲ್ಲಿ ನಮ್ಮ ಹೃದಯಪೂರ್ವಕ ಬೆಂಬಲ ನಿಮಗಿದೆ’ ಎಂದು ಹರಸಿದರು.
ಸೀಮೆಯ ಗೌರವಾನ್ವಿತ ವ್ಯಕ್ತಿಯಾದ ಮೋರಜರು ದೇವಾಲಯದ ಹಿಂಭಾಗದಲ್ಲಿದ್ದ ತಮ್ಮ ಆಪ್ತರಲ್ಲಿ ಒಬ್ಬರಾದ ನಟ್ಟೋಜ-ಶ್ಯಾರ ಮನೆಗೆ ಜನ ಕಳುಹಿಸಿ ಕಲ್ಯಾಣಸ್ವಾಮಿ ಹಾಗೂ ಪರಿವಾರದವರಿಗೆ ಎಳನೀರು ಕಳುಹಿಸಿಕೊಡಲು ಆಜ್ಞಾಪಿಸಿದರು. ಸೀಮೆಯ ಗುರಿಕಾರ ಎಂದ ಮೇಲೆ ನಟ್ಟೋಜಶ್ಯಾರು ಕೂಡಲೇ ನೂರು ಸೀಯಾಳಗಳನ್ನು ಹಿಡಿದುಕೊಂಡು ಆಳುಗಳೊಂದಿಗೆ ಬಂದರು.

‘ನಟ್ಟೋಜ-ಶ್ಯಾರ ನಿನ್ನ ಕಾಣಿಕೆಯೂ ಈ ಎಳನೀರಿನ ರೂಪದಲ್ಲಿ ಇರಲಿ, ಕಲ್ಯಾಣಸ್ವಾಮಿ ಹಾಗೂ ಪರಿವಾರದವರ ಮನಸ್ಸು ತಂಪು ಮಾಡಿದ ಹಾಗೆ ಹೊಟ್ಟೆಯನ್ನು ತಂಪಾಗಿಸು’ ಎಂದಾಗ ಸ್ವತಹ ನಟ್ಟೋಜಶ್ಯಾರೇ ಎಳನೀರನ್ನು ಕೆತ್ತಿ ಕಲ್ಯಾಣಸ್ವಾಮಿಗೆ ಅರ್ಪಿಸಿದರು. ಬಹಳ ಸಂತಸದಿಂದ ಸೀಯಾಳವನ್ನು ಕುಡಿದ ಕಲ್ಯಾಣಸ್ವಾಮಿ. ಆತನಿಗೆ ಸೀಯಾಳದಲ್ಲಿರುವ ಸಿಹಿಯಾದ ತಿರುಳು ಸವಿಯಬೇಕೆನ್ನುವ ಬಯಕೆಯಾಯಿತು. ತುಸು ಸಂಕೋಚವಾದರೂ ಬಾಯಿ ಬಿಟ್ಟು ಕೇಳಿದ.
‘ನನಗೆ ಸೀಯಾಳದೊಳಗಿನ ಸಿಹಿಯಾದ ತಿರುಳು ಸವಿಯುವ ಆಸೆ’ ಎಂದು ತನ್ನ ಮನದಾಳದ ಆಸೆಯನ್ನು ನಿಗ್ರಹಿಸಲು ಆಗದೆ ಹೊರಗೆ ಹಾಕಿದ.
ಸೀಯಾಳ ಕೆತ್ತಿ ಕೊಡುವ ನಟ್ಟೋಜ-ಶ್ಯಾರವರಿಗೆ ಮುಖಕ್ಕೆ ಹೊಡೆದಂತಹ ಅನುಭವ. ದಿಗಿಲಾಯಿತು. ಒಂದು ಗಳಿಗೆ ಕಲ್ಯಾಣಸ್ವಾಮಿಯ ಮುಖವನ್ನು ದಿಟ್ಟಿಸಿದರು, ತುಸು ವಿಚಲಿತರಾಗಿ ಕಂಡು ಬಂದರೂ ಅದನ್ನು ತೋರಿಸಿಕೊಡಲಿಲ್ಲ. ಸೀಯಾಳವನ್ನು ಹದವಾಗಿ ಕೆತ್ತಿ ಅದರ ತಿರುಳನ್ನು ಸವರಿ ಕಲ್ಯಾಣಸ್ವಾಮಿಗೆ ನೀಡಿದರು.
‘ಬಹಳ ಉಪಕಾರವಾಯಿತು ನಟ್ಟೋಜ-ಶ್ಯಾರವರೇ’ ಎಂದಾಗ ಆ ಮಾತು ಮುಖ ಕೆಂಪಗಾಗಿದ್ದವರಿಗೆ ಕೇಳಿರಲಿಕ್ಕಿಲ್ಲ ಕಾಣಬೇಕು. ಅಲ್ಲಿ ಸೇರಿದ್ದ ಎಲ್ಲಾ ಮಹನೀಯರು ಎಳನೀರು ಸವಿದರು. ಕೆಲವರು ನೀರು ಮಾತ್ರ ಕುಡಿದರು. ಇನ್ನು ಕೆಲವರು ನೀರನೊಂದಿಗೆ ತಿರುಳನ್ನು ಸವಿದರು.

ಕೈ ತೊಳೆದು ನಟ್ಟೋಜ-ಶ್ಯಾರವರು ಮೋರಜರನ್ನು ಹತ್ತಿರಕ್ಕೆ ಕರೆದು ಪಿಸುಮಾತಿನಲ್ಲಿ ತಿವಿದರು.
‘ಅಲ್ಲಾ ಮೋರಜರೇ, ಆತ ಕಲ್ಯಾಣಸ್ವಾಮಿ ಅಂತ ನಂಬಿದ್ದೀರಾ…..? ಖಂಡಿತಾ ಇಲ್ಲ. ಆತ ದೀಕ್ಷೆ ತೊಟ್ಟವನಾಗಿದ್ದರೆ ಸೀಯಾಳದ ತಿರುಳಿಗೆ ಏಕೆ ಆಸೆ ಪಡುತ್ತಿದ್ದ? ಆತನ ಚರ್ಯೆ ನೋಡುವಾಗ ಒಂದು ಚೂರು ಗಾಂಭಿರ್ಯವಿಲ್ಲ. ನೀವು ಇಲ್ಲಿ ಆತನಿಗೆ ಆರತಿ ಎತ್ತುತ್ತಿದ್ದೀರಿ!’ ಎಂದು ರೇಗಿದಾಗ, ಮೋರೆಜರರಿಗೆ ಅವನನ್ನು ಸುಮ್ಮನಿರಿಸಲು ಸಾಕುಸಾಕಾಯಿತು.
‘ನೀನು ಸ್ವಲ್ಪ ಸುಮ್ಮನಿರು. ಅದೊಂದು ದೊಡ್ಡ ಕಥೆ. ಅದೆಲ್ಲಾ ಈಗ ಮಾತನಾಡುವ ವಿಚಾರವಲ್ಲ. ಒಟ್ಟಿನಲ್ಲಿ ಪರೆಂಗಿಯವರನ್ನು ಈ ದೇಶದಿಂದ ಓಡಿಸಿದರೆ ಸಾಕಪ್ಪ’ ಎಂದು ಪಿಸು ಧ್ವನಿಯಲ್ಲೇ ಉತ್ತರಿಸಿದರು.
ಆ ದಿನ ರಾತ್ರಿ ಸೈನಿಕರ ಸಂತೋಷಕ್ಕೆಂದು ಪುತ್ತೂರಿನಲ್ಲಿನ ಪರಿಚಿತ ಯಕ್ಷಗಾನ ವೇಷದಾರಿಗಳು ಯಕ್ಷಗಾನ ಕೂಟವನ್ನು ಏರ್ಪಡಿಸಿ ರಂಜಿಸಿದರು. ಕಲ್ಯಾಣಸ್ವಾಮಿಗೆ, ಕುಕನೂರು ಚೆನ್ನಯ್ಯ, ನಂಜಯ್ಯನವರಿಗೆಲ್ಲಾ ಅಂತಹ ಯಕ್ಷಗಾನ ಕೂಟ ನೋಡಿ ಅಭ್ಯಾಸವಿರಲಿಲ್ಲ. ಆದರೂ ಅರ್ಥದಾರಿಗಳ ವಾಗ್ವಾದ, ನೃತ್ಯ, ಎಲ್ಲವನ್ನು ಸಂತೋಷದಿಂದ ಸವಿದ.

ಈ ನಡುವೆ ತೆಂಕುಂಬಳೆಯ ಪಾಳೆಯಗಾರ ಸುಬ್ರಾಯ ಹೆಗ್ಗಡೆ ಕಳುಹಿಸಿದ ದೂತನೊಬ್ಬ ಕಲ್ಯಾಣಸ್ವಾಮಿಗೆ ನೀಡಿದ ಓಲೆಯ ಒಕ್ಕಣೆ ಓದಿ ಸಂತಸವಾಯಿತು.
‘ಹೆಗ್ಗಡೆಯವರಿಗೆ ನಮ್ಮ ಸ್ವಾಗತವಿದೆ. ಆದರೆ ಮಂಗಳೂರಿನಲ್ಲಿ ನಡೆಯುವ ಮಹಾಯುದ್ಧಕ್ಕೆ ಅವರ ಸಹಾಯ ಅಗತ್ಯ ಬೇಕು. ಅವರು ಸಿದ್ಧರಾಗಿ ನಮ್ಮನ್ನು ಮಂಗಳೂರಿನಲ್ಲಿ ಕೂಡಿಕೊಳ್ಳಲಿ. ನಾವು ನಂದಾವರ ಪಾಣೆಮಂಗಳೂರಿನಿಂದ ಹೊರಟಾಗ ಅವರು ಸೋಮೇಶ್ವರದ ನೇತ್ರಾವತಿ ನದಿ ದಂಡೆಯಲ್ಲಿ ನಮಗಾಗಿ ಕಾದು ಕುಳಿತುಕೊಳ್ಳಲಿ’ ಎಂದು ಕರಣಿಕ ಸುಬ್ಬಯ್ಯ ಒಕ್ಕಣೆ ಬರೆದು ಕಳುಹಿಸಿದ.
ಅಂತೂ ಕಲ್ಯಾಣಸ್ವಾಮಿಗೆ ಖುಷಿಯ ಮೇಲೆ ಖುಷಿ. ಸಾಗರದಂತೆ ದಿನೇ ದಿನೇ ಬೆಳೆಯುವ ಸೈನ್ಯ. ಹೋದೆಡೆಯಲ್ಲಿ ಸಿಗುವ ಜಯಬೇರಿ, ಸ್ವಾಗತ, ಜನರ ಹುರುಪು ಎಲ್ಲಾ ನಿರೀಕ್ಷಿಸಿದಕ್ಕಿಂತ ಹೆಚ್ಚಾಗಿತ್ತು. ಮುಂದಿನದು ನಂದಾವರ, ಮತ್ತೆ ಬಂಟ್ವಾಳ, ಕೊನೆಯದು ಮಂಗಳೂರು. ಮಂಗಳೂರಿನಲ್ಲಿನ ಬೇಹುಗಾರ ಬಂದು ಮಂಗಳೂರಿನಲ್ಲಿ ಎಲ್ಲಾ ನಿಶ್ಯಬ್ದವಾಗಿದೆ. ಎಲ್ಲೂ ಅಂಗ್ರೇಜಿಗಳ ಮುಖ ಕಾಣಿಸುತ್ತಿಲ್ಲ. ಅವರ ಸೈನ್ಯದ ಚಲನವಲನಗಳು ಗೋಚರಿಸುತ್ತಿಲ್ಲ ಎಂದಾಗ ಎದೆ ಧಸಕ್ಕಿಂದಿತು. ಇದರಲ್ಲಿ ಏನಾದರೂ ಕುತಂತ್ರವಿರಬಹುದೇ ಎಂಬ ಅನುಮಾನ ಮೂಡಿತು. ಆದರೂ ಕಲ್ಯಾಣಸ್ವಾಮಿಯ ದಂಡಿನಲ್ಲಿರುವ ಸಂಖ್ಯೆಗೂ, ಪರೆಂಗಿಗಳ ದಂಡಿನಲ್ಲಿರುವ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ. ಬಹುಶಃ ತಲಚೇರಿ, ಮುಂಬೈನಿಂದ ಹೆಚ್ಚಿನ ಸೈನ್ಯವನ್ನು ತರಿಸಲು ಹವಣಿಸುತ್ತಾರೆ ಎಂಬ ಅನುಮಾನ ಉಂಟಾಯಿತು. ಇನ್ನು ತಡಮಾಡಬಾರದು ಸಾಧ್ಯವಾದಷ್ಟು ಬೇಗ ಮಂಗಳೂರನ್ನು ಆಕ್ರಮಿಸಬೇಕೆಂದು ನಿರ್ಧರಿಸಿದ ಕಲ್ಯಾಣಸ್ವಾಮಿ.

 

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಸಚಿವರಾಗಿರುವ ಪ್ರಭಾಕರ ನೀರ್ ಮಾರ್ಗ ಪ್ರಾದೇಶಿಕತೆಗೆ ಒತ್ತುಕೊಡುವ ಇಪ್ಪತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ‘ಮಂಗಳೂರ ಕ್ರಾಂತಿ’ (2006) ಕಾದಂಬರಿಯಿಂದ ಆರಿಸಿದ ಅಧ್ಯಾಯ ಇದು. ಈ ಕಾದಂಬರಿಯ ಶೀರ್ಷಿಕೆಯಿಂದ ತಿಳಿದುಬರುವಂತೆ ಇದು ಕಲ್ಯಾಣಪ್ಪನ ಕ್ರಾಂತಿಯನ್ನು ಮಂಗಳೂರು ಕೇಂದ್ರಿತವಾಗಿ ನೋಡುವ ಕೃತಿ. ಸ್ವಾತಂತ್ರೋತ್ತರವಾಗಿ ಜನಿಸಿದ (1959) ಪ್ರಭಾಕರ ನೀರ್ ಮಾರ್ಗ ಅವರು ಈ ಕ್ರಾಂತಿಯಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ ಇದೇ ವಿಷಯವನ್ನು ವಸ್ತುವಾಗಿ ಉಳ್ಳ ‘ಭೀಕರನ್ಯಾಯ ಕಟ್ಟೆ’ ಎಂಬ ತುಳುನಾಟಕವನ್ನು ಬರೆದಿದ್ದಾರೆ. ಈ ವಿಷಯದ ಕುರಿತಾಗಿ ಮಾಹಿತಿ ಸಂಗ್ರಹಿಸಲು ಮದ್ರಾಸಿನ ಪತ್ರಾಗಾರಗಳಲ್ಲಿ ಹುಡುಕಾಡಿದ್ದಾರೆ. ಸದ್ಯ ಇದೇ ವಿಷಯದ ಮೇಲೆ ಪಿಎಚ್.ಡಿ. ಅಧ್ಯಯನವನ್ನೂ ಮಾಡುತ್ತಿದ್ದಾರೆ. ಈ ಬಗ್ಗೆ ಹೊಸಬೆಳಕನ್ನು ಈ ಸಂಶೋಧನೆ ಚೆಲ್ಲುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ.
ಈ ಹಿಂದಿನ ‘ಕರಣಿಕ ದೇವಪ್ಪಯ್ಯ’ ಎಂಬ ಕತೆಯಲ್ಲಿ ಬೇಕಲ ರಾಮನಾಯಕರು ಕಲ್ಯಾಣಪ್ಪನ ಕ್ರಾಂತಿಯ ಸಂದರ್ಭದಲ್ಲಿ ದೇವಪ್ಪಯ್ಯ ಎಂಬ ಬ್ರಿಟಿಷರಿಗೆ ನಿಷ್ಠನಾಗಿದ್ದ ಕರಣಿಕ ಉಪಾಯದಿಂದ ಕಲ್ಯಾಣಪ್ಪನ ಸೋಲಿಗೆ ಕಾರಣನಾದ ವಿವರಗಳನ್ನು ನೀಡಿರುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಈ ಕಾದಂಬರಿಯ ಭಾಗದಲ್ಲಿ ದೇವಪ್ಪಯ್ಯನನ್ನು ಇನ್ನೊಂದು ಕೋನದಿಂದ ನೋಡಲಾಗಿದೆ. ಎರಡನ್ನೂ ಹೋಲಿಸಿದರೆ ವ್ಯತ್ಯಾಸವು ಸ್ಪಷ್ಟವಾಗಿ ಗೋಚರವಾಗುವುದು.