‘ಒಂದೊಂದು ಸಲ ನಿನ್ನ ತರಹವೇ ಇರುವ ಇನ್ನೊಂದು ದೇಹ ನೀನು ತಲುಪಬೇಕಾದ ಜಾಗಕ್ಕೆ ನೀನು ತಲುಪುವ ಮೊದಲೇ ತಲುಪಿ ಬಿಡುತ್ತದೆ. ನೀನು ತಡವಾಗಿ ತಲುಪುವ ಹೊತ್ತಲ್ಲಿ ನಿನ್ನನ್ನು ಎಲ್ಲರೂ ಮರೆತು ಬಿಟ್ಟಿರುತ್ತಾರೆ. ಅವನು ನಿನ್ನಂತೆ ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಬದುಕುತ್ತಿರುತ್ತಾನೆ. ಆಗ ನೀನು ಎಷ್ಟು ಅತ್ತು ಕರೆದರೂ ಯಾರೂ ನಂಬುವುದಿಲ್ಲ. ಪ್ರಯಾಣದಲ್ಲಿ ಬಳಲಿ ನಿನ್ನ ಮುಖ ಚಹರೆಯೂ ದೇಹದ ಆಕಾರವೂ ಬದಲಾಗಿ ಎಲ್ಲರೂ ನಿನ್ನನ್ನೇ ನಕಲಿ ಎಂದು ಸಂಶಯಿಸುತ್ತಾರೆ. ಹಾಗಾಗಿ ನಿನ್ನದೇ ಹಾಗಿರುವ ಸಾಮಾನುಗಳನ್ನು ಉಳ್ಳ ಅನ್ಯರನ್ನು ಸಂಶಯದಿಂದ ನೋಡಬೇಕು’ ಎಂದು ಮಹಾನುಭಾವರು ಹೇಳಿದ್ದರು.
ಅಬ್ದುಲ್ ರಶೀದ್ ಬರೆಯುವ ‘ಲಕ್ಷದ್ವೀಪ ಡೈರಿ’ಯ ಹನ್ನೊಂದನೆಯ ಕಂತು
ಅಗತ್ತಿ ದ್ವೀಪದಿಂದ ದಿನಾ ತೆರಳುವ ಪುಟ್ಟ ವಿಮಾನ ಹತ್ತಿ ಅಧಿಕೃತ ಕೆಲಸವೊಂದಕ್ಕೆ ಕೇರಳದ ಕೊಚ್ಚಿಗೆ ಹೋಗಿದ್ದವನು ವಾಪಾಸು ಬರುವಾಗ ವಿಮಾನ ಏರಲು ಮನಸು ಬಾರದೆ ಹಡಗೊಂದರಲ್ಲಿ ಸೀಟು ಖರೀದಿಸಿ ಕೊಚ್ಚಿಯ ವೆಲ್ಲಿಂಗ್ಟನ್ ದ್ವೀಪದಲ್ಲಿ ಆ ಹಡಗಿಗೆ ಕಾಯುತ್ತಾ ಮಂಗನಂತೆ ಸುತ್ತಾಡುತ್ತಿದ್ದೆ. ಎಂಬತ್ತೈದು ವರ್ಷಗಳ ಹಿಂದೆ ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ಪಡೆಗಳ ಮೇಲೆ ಮುಗಿಬೀಳಲು ಬ್ರಿಟಿಷರು ನಡೆಸಿದ ನಾನಾ ಕಸರತ್ತುಗಳಲ್ಲಿ ವೆಲ್ಲಿಂಗ್ಟನ್ ಎಂಬ ಈ ಕೃತಕ ದ್ವೀಪ ನಿರ್ಮಾಣವೂ ಒಂದು.
ಹತ್ತಿರದ ವೇಂಬನಾಡ್ ಹಿನ್ನೀರ ಸರೋವರದ ಹೂಳೆತ್ತಿ ಅದರಿಂದ ದೊರೆತ ಮಣ್ಣನ್ನು ಅರಬಿ ಕಡಲಿನ ಒಂದೆಡೆ ಸುರಿದು ಕೃತಕ ದ್ವೀಪವೊಂದನ್ನು ಸೃಷ್ಟಿಸಿ, ಅಲ್ಲೊಂದು ಬಂದರನ್ನೂ, ಯುದ್ಧವಿಮಾನಗಳು ಬಂದಿಳಿದು ವಾಪಾಸು ಆಕಾಶಕ್ಕೆ ನೆಗೆಯಬಲ್ಲ ಮಿಲಿಟರಿ ವಾಯುನೆಲೆಯನ್ನೂ ಸ್ಥಾಪಿಸಿ ಹಿಟ್ಲರನ ಸಹವರ್ತಿಗಳಾಗಿದ್ದ ಜಪಾನಿನ ಮೇಲೆ ಆಕ್ರಮಣ ನಡೆಸಲು ತಯಾರಾಗಿದ್ದ ಬ್ರಿಟಿಷರು ಆನಂತರದ ಕಾಲನ ಲೀಲೆಗಳಿಗೆ ಸಿಲುಕಿ ಭಾರತವನ್ನೇ ಬಿಟ್ಟು ಹೋದ ಕತೆ ನಿಮಗೆಲ್ಲಾ ಗೊತ್ತೇ ಇದೆ. ಸ್ವಾತಂತ್ರ್ಯಾ ನಂತರ ಇಲ್ಲಿ ಭಾರತದ ನೌಕಾನೆಲೆಯೂ, ಹಡಗು ನಿರ್ಮಾಣ ಕೇಂದ್ರವೂ ಶುರುವಾಯಿತು. ಜೊತೆಗೆ ಲಕ್ಷದೀಪಕ್ಕೆ ತೆರಳುವ ಪ್ರಯಾಣಿಕರ ಹಡಗುಗಳೂ, ಸರಕು ನೌಕೆಗಳೂ ಇಲ್ಲಿಂದಲೇ ಹೋಗಿ ಇಲ್ಲಿಗೇ ಹಿಂತಿರುಗುವುದು.
ಕಡಲು, ಹಿನ್ನೀರು, ಹಳೆಯ ಸೇತುವೆಗಳು, ವಸಾಹತುಷಾಹಿಗಳ ಕಾಲದ ಪಳೆಯ ಕಟ್ಟಡಗಳು, ಎಲ್ಲಿಂದಲೋ ತಂದು ನೆಟ್ಟು ಈಗ ಹೆಮ್ಮರವಾಗಿ ಬೆಳೆದಿರುವ ಅಪರಿಚಿತ ಮರಗಿಡಗಳು, ಅವುಗಳ ನಡುವೆ ಹಡಗು ಸಿಗುವ ಜಾಗ ತಡಕುತ್ತಾ ಓಡಾಡುವ ಹೊಸ ಪ್ರವಾಸಿಗರು, ಕಾಯಿಲೆ ಕಸಾಲೆ ಆಸ್ಪತ್ರೆ, ಮದುವೆ ಸ್ವರ್ಣಖರೀದಿ, ಮಕ್ಕಳ ಕಾಲೇಜು, ಮದರಸ ವಿದ್ಯಾಭ್ಯಾಸ, ಹಾಸ್ಟೇಲು ಇತ್ಯಾದಿಗಳಿಗೆ ಕೊಚ್ಚಿಗೆ ಬಂದು ಹಿಂದೆರಳುತ್ತಿರುವ ದ್ವೀಪವಾಸಿಗಳು. ಈ ಸಲ ಇವರೆಲ್ಲರ ಜೊತೆಗೆ ಪವಿತ್ರ ಪವಿತ್ರ ಮಕ್ಕಾದ ಹಜ್ ಯಾತ್ರೆಯನ್ನು ಮುಗಿಸಿ ದ್ವೀಪಕ್ಕೆ ವಾಪಸಾಗುತ್ತಿರುವ ಹಾಜ್ ಯಾತ್ರಿಗಳೂ ಇದ್ದರು. ಅವರ ಮುಖದಲ್ಲಿದ್ದ ಒಂದು ತರಹದ ಪಾವನ ಚಹರೆಯನ್ನೂ ಅವರ ನಡಿಗೆಯಲ್ಲಿ ವ್ಯಕ್ತವಾಗುತ್ತಿದ್ದ ಪ್ರಯಾಣದ ಆಯಾಸವನ್ನೂ ಗಮನಿಸುತ್ತಾ ನಾನು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದೆ. ಇನ್ನೆರೆಡು ಹಗಲು, ಎರಡು ರಾತ್ರಿ ಕಡಲ ನಡುವೆ ಹಡಗಲ್ಲೇ ಕಳೆಯಬೇಕಾಗಿರುವುದರಿಂದ ಬಿಸ್ಕತ್ತು ಸಿಗರೇಟು ನೀರಿನ ಬಾಟಲು ಹುಡುಕುತ್ತ ಪುಟ್ಟ ಅಂಗಡಿಗಳಿಗೆ ಎಡತಾಕಿ ಹಡಗು ಹತ್ತುವ ಜಾಗಕ್ಕೆ ಕೊನೆಗೂ ಬಂದು ತಲುಪಿದ್ದೆ.
ಹಡಗಿನ ಟಿಕೇಟು ತೋರಿದರೆ ನಿಂತಿರುವ ಬಸ್ಸೊಂದಕ್ಕೆ ಹತ್ತಿಸಿದರು. ಒಳಗೆ ಅಸಹನೀಯ ಬಿಸಿಲತೇವದಲ್ಲಿ ಬೆವರುತ್ತಾ ಕುಳಿತ ದ್ವೀಪವಾಸಿಗಳು. ಹಡಗು ಹತ್ತಲು ಬಂದವನನ್ನು ಬಸ್ಸೊಳಗೆ ಯಾಕೆ ಹತ್ತಿಸಬೇಕು?
‘ದೂರ ಪ್ರಯಾಣದ ಹೊತ್ತಲ್ಲಿ ಹೆಜ್ಜೆಗೊಂದು ಸಲ ನಮ್ಮ ಮೈಯನ್ನು ನಾವೇ ಜಿಗುಟಿಕೊಂಡು ಎಚ್ಚರದಲ್ಲಿರಬೇಕು’ ಎಂದು ಬಾಲ್ಯಕಾಲದ ಮಹಾನುಭಾವರು ಎಚ್ಚರಿಸಿದ್ದು ಯಾಕೋ ನೆನಪಾಯಿತು.
‘ದೂರದ ಪ್ರಯಾಣ ಹೊರಟವನ ದಾರಿ ತಪ್ಪಿಸಲು ಸೈತಾನುಗಳೂ, ಇಬಿಲೀಸುಗಳೂ, ಜಿನ್ನುಗಳೂ, ಶಂಖಿಣಿ, ಡಾಕಿಣಿ, ಯಕ್ಷಿಣಿಯರೂ ಆಕಾಶದಲ್ಲೆಲ್ಲ ಹಾರಾಡುತ್ತಿರುವರು ಅವಕ್ಕೆಲ್ಲ ಬಲಿಯಾಗದ ಹಾಗೆ ಹೆಜ್ಜೆಗೊಮ್ಮೆ ನಿಂತು ನಿಮ್ಮ ಮೈಯನ್ನು ನೀವೇ ಜಿಗುಟಿ ಎಲ್ಲಿ ಬಂದಿರುವೆನೆಂದೂ ಇನ್ನೆಲ್ಲಿಗೆ ಹೋಗಲಿಕ್ಕಿದೆಯೆಂದೂ ಖಚಿತಪಡಿಸಿಕೊಂಡು ಮುಂದುವರಿಯಬೇಕು’ ಎಂದು ಅವರು ಖುರಾನು ಕಲಿಸುವ ನಡುವೆ ನಮಗೆ ಹೇಳಿದ್ದರು.
‘ದಾರಿಯಲ್ಲಿ ನಾನಾ ಪರೀಕ್ಷೆಗಳೂ ಬರುವುದು, ದಾರಿ ತಪ್ಪಿಸಲು ಸೈತಾನರೂ ಇರುವರು. ಹಾಗಾಗಿ ಯಾರಲ್ಲೂ ದಾರಿ ಕೇಳಬಾರದು. ಪಡೆದವನ ಮುಖವನ್ನು ಕಣ್ಣೆದುರು ತಂದುಕೊಂಡು ನಡೆಯುತ್ತಲೇ ಇರಬೇಕು. ಎಲ್ಲವನ್ನೂ ಅರಿತವನೂ ಕಾಣುವವನೂ ಕೇಳುವವನೂ ಆದ ಆ ಸರ್ವಶಕ್ತನು ನಿಮ್ಮನ್ನು ಆವರಿಕೊಂಡು ಹೋಗಬೇಕಾದಲ್ಲಿ ತಲುಪಿಸುವನು’ ಎಂದೂ ಅವರು ಹೇಳಿದ್ದರು.
‘ಸಂಶಯ ಎಂಬುದು ನಿಮ್ಮ ಮನಸನ್ನು ಯಾಮಾರಿಸುವ ಸೈತಾನನ ಆಯುಧ. ಅದಕ್ಕೆ ಎಂದೂ ಬಲಿಯಾಗಬಾರದು’ ಎಂದೂ ಅವರು ಎಚ್ಚರಿಸಿದ್ದರು.
ಆದರೆ ಹುಟ್ಟುವಾಗಲೇ ಸಂಶಯ ಪಿಶಾಚಿಯೊಂದನ್ನು ಹೊಟ್ಟೆಯೊಳಕ್ಕಿಟ್ಟುಕೊಂಡು ಹೊರ ಬಂದಿರುವ ನಾನು ಅದರ ಫಲವಾಗಿ ನಾನಾ ಫಜೀತಿಗಳಿಗೆ ಬಲಿಯಾಗಿ, ಶಂಖಿಣಿ ಡಾಕಿಣಿಯರಿಗೆ ಯಾಮಾರಿ ಆಹಾರವಾಗಿ, ಎಲ್ಲೋ ಹೊರಟಿದ್ದವನು ಇನ್ನೆಲ್ಲೋ ಹಾಳಾಗಿ ಹೋಗಿ ಅದರಿಂದ ಸಿಗುವ ಒಂದು ತರಹದ ಸುಖವನ್ನೂ ಸಂಕಟವನ್ನೂ ಅನುಭವಿಸಿ ಜೀವಿತದ ಮುಕ್ಕಾಲು ಪಾಲು ಈ ವ್ಯಸನಗಳಲ್ಲೇ ಮುಳುಗಿ ಬಿಟ್ಟಿದ್ದೆ. ಜೀವನದಲ್ಲಿ ಇನ್ನು ಯಾವತ್ತೂ ಯಾಮಾರಬಾರದೆಂದು ದ್ವೀಪದಲ್ಲಿ ಹೊಸಬದುಕನ್ನೂ, ಮಹಾನುಭಾವರ ಪಿಂಗಾಣಿ ತಟ್ಟೆಯನ್ನೂ ಅನ್ವೇಷಿಸಿ ಹೊರಟಿದ್ದೆ.
ಈಗ ನೋಡಿದರೆ ಹಡಗು ಹತ್ತಲು ಹೋದವನನ್ನು ಬಸ್ಸು ಹತ್ತಲು ಹೇಳಿದ್ದರು. ಕೊಚ್ಚಿಯಲ್ಲೂ ನನ್ನನ್ನು ಯಾಮಾರಿಸಲು ನೋಡುತ್ತಿರುವ ಇಬಿಲೀಸನ ಕರಾಮತ್ತುಗಳಿರಬಹುದು ಎಂದು ಅನಿಸಲು ತೊಡಗಿತು.
‘ಹಡಗು ಹತ್ತಲು ಬಂದವನನ್ನು ಯಾಕೆ ಬಸ್ಸು ಹತ್ತಿಸಿದ್ದೀರಿ?’ ಎಂದು ಜೋರಾಗಿಯೇ ಕೂಗಿಕೊಂಡೆ.
ಅಸಾಧ್ಯ ಬೆವರಲ್ಲಿ ಮುಳುಗಿದ್ದ ಬಸ್ಸಿನೊಳಗಿನ ದ್ವೀಪವಾಸಿಗಳು ಅವರವರದೇ ಆತಂಕಗಳಲ್ಲಿ ಕೂತಿದ್ದರು. ಹಾಗಾಗಿ ಬಹುಶಃ ಅವರಿಗೆ ನನ್ನ ಕೂಗು ಕೇಳಿರಕ್ಕಿಲ್ಲ ಎಂದು ಇನ್ನೊಮ್ಮೆ ಕೂಗಿಕೊಂಡೆ. ಆಗ ಒಂದಿಷ್ಟು ಜನರು ತಮ್ಮೊಳಗೇ ಕುಲುಕುಲು ನಗಲು ಶುರುಮಾಡಿದರು. ಆ ಬೆವರಿನ ಸಂಕಷ್ಟದಲ್ಲಿ ನನ್ನ ಕೂಗು ಅವರಿಗೆ ಮನರಂಜನೆಯಂತೆ ಕೇಳಿಸಿರಬೇಕು.
‘ಹಡಗು ನೆಲದ ಮೇಲೆ ತೇಲುವುದಿಲ್ಲ ಮನುಷ್ಯಾ. ಅದಕ್ಕೆ ನಾವು ಜೆಟ್ಟಿಗೆ ಹೋಗಬೇಕು. ಈ ಬಸ್ಸು ನಮ್ಮನ್ನು ಅಲ್ಲಿಗೆ ಒಯ್ಯುವುದು’ ಎಂದು ಪಕ್ಕದಲ್ಲಿ ಕುಳಿತಿದ್ದ ವೃದ್ದರೊಬ್ಬರು ನನ್ನನ್ನು ಸಂತೈಸಿದರು. ಅದನ್ನು ಕೇಳಿ ಉಳಿದವರು ಇನ್ನಷ್ಟು ನಗಲು ಶುರುಮಾಡಿದರು ‘ಓ ಹಾಗಾ’ ಎಂದು ನಾನು ಒಲ್ಲದ ಮನಸಿನಿಂದಲೇ ಸಮಾಧಾನ ನಟಿಸಿದೆ.
‘ನೀನೊಬ್ಬ ತಮಾಷೆಗಾರನಂತೆ ಕಾಣಿಸುತ್ತೀಯಾ, ಯಾವ ನಾಡಿನವನು ನೀನು?’ ಅವರು ಕೇಳಿದರು. ಊರು ಮೈಸೂರು. ಹುಟ್ಟಿದ್ದು ಕೊಡಗು ದೇಶ. ಈಗ ನಾನೂ ನಿಮ್ಮ ಹಾಗೆ ದ್ವೀಪವಾಸಿ. ಮೊದಲ ಸಲ ಹಡಗು ಹತ್ತಲು ಹೊರಟಿರುವೆ’ ಎಂದು ಉತ್ತರಿಸಿದೆ.
‘ಯಾವ ದ್ವೀಪ’ ಎಂದು ಕೇಳಿದರು.
ಉತ್ತರಿಸಿದೆ.
‘ಓ ನನ್ನದೂ ಅದೇ ದ್ವೀಪ. ಅಲ್ಲಿ ಎಲ್ಲಾಯಿತು?’ ಎಂದು ಕೇಳಿದರು. ಹೇಳಿದೆ.
‘ಓ ನಾನೂ ಅಲ್ಲೇ ಇರುವುದು. ಮೂರು ದಾರಿಗಳು ಕೂಡುವಲ್ಲಿ ಬಾಡಿಗೆಗೆ ಕೊಡುವ ದೊಡ್ಡ ಬಿಲ್ಡಿಂಗು ಇದೆಯಲ್ಲಾ.. ಅದು ನನ್ನದೇ’ ಎಂದು ಹೇಳಿದರು.
“ನಾನು ಅಲ್ಲಿ ಎರಡು ತಿಂಗಳುಗಳಿಂದ ಇರುವೆ. ಆದರೆ ಒಂದು ಬಾರಿಯೂ ನೋಡಲಿಲ್ಲವಲ್ಲ ನಿಮ್ಮನ್ನ’ ಅಂದೆ.
ದಾರಿಯಲ್ಲಿ ನಾನಾ ಪರೀಕ್ಷೆಗಳೂ ಬರುವುದು, ದಾರಿ ತಪ್ಪಿಸಲು ಸೈತಾನರೂ ಇರುವರು. ಹಾಗಾಗಿ ಯಾರಲ್ಲೂ ದಾರಿ ಕೇಳಬಾರದು. ಪಡೆದವನ ಮುಖವನ್ನು ಕಣ್ಣೆದುರು ತಂದುಕೊಂಡು ನಡೆಯುತ್ತಲೇ ಇರಬೇಕು.
ಅಪರಿಚಿತರು ಮಾತನಾಡಲು ಬಂದರೆ ಮುನ್ನೂರು ಬಾರಿ ಪ್ರಶ್ನೆಗಳನ್ನು ಕೇಳಿ ಅವರು ಇಬಿಲೀಸನ ಧೂತರಲ್ಲವೆಂದು ಖಚಿತಪಡಿಸಿಕೊಳ್ಳಬೇಕು ಎಂದು ಮಹಾನುಭಾವರು ಹೇಳಿದ್ದರು. ಇನ್ನೂ ಒಂದೆರೆಡು ಪ್ರಶ್ನೆಗಳನ್ನು ಕೇಳಿದೆ. ಅವರು ಉತ್ತರಿಸಿದರು. ಬಸ್ಸು ಹೊರಟಿತು.
ಅವರ ಉತ್ತರಗಳಿಂದ ಗೊತ್ತಾದ ವಿಷಯವೆಂದರೆ ಅವರು ಇಬಿಲೀಸನ ಧೂತರಲ್ಲ. ಬದಲಾಗಿ ಪಡೆದ ಅಲ್ಲಾಹುವಿನ ಪರಮ ವಿಶ್ವಾಸಿ. ಕಳೆದ ಎರಡು ತಿಂಗಳುಗಳಿಂದ ಹಜ್ ಪ್ರವಾಸದಲ್ಲಿದ್ದಾರೆ. ಮಕ್ಕಾಗೆ ತೆರಳಿ ಪವಿತ್ರ ಕಹಬಾವನ್ನು ಸಂದರ್ಶಿಸಿ ಹಜ್ ವಿಧಿವಿಧಾನಗಳನ್ನು ಪೂರೈಸಿ, ಅಲ್ಲಿಂದ ಯಮನ್ ದೇಶಕ್ಕೆ ತೆರಳಿ ಅಲ್ಲಿ ಮಲಗಿರುವ ಚೇರಮಾನ್ ರಾಜನ ಪವಿತ್ರ ಸಮಾಧಿಗೂ ವಂದಿಸಿ, ವಾಪಾಸು ಲಕ್ಷದ್ವೀಪಕ್ಕೆ ಮರಳುತ್ತಿದ್ದಾರೆ. ಅವರ ಕೈಯಲ್ಲಿ ತಿಳಿ ನೀಲಿ ಬಣ್ಣದ ಜಪಮಾಲೆ ಇದೆ. ಮಾತಿನ ನಡುವೆ ಅವರು ಮೌನವಾಗಿ ಸಲಾತ್ ಹೇಳುತ್ತಾ, ತಸ್ಬಿ ಪಠಿಸುತ್ತಾ ನನ್ನ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ.
ಬಹುಶಃ ಅವರ ಮನಸಿನಲ್ಲಿಯೂ ನನ್ನ ಕುರಿತು ಇಂತಹದೇ ಸಂದೇಹಗಳಿರಬಹುದು. ಹಾಗಾಗಿ ಅವರೂ ನನ್ನ ಕುರಿತು ಹಲವು ಪ್ರಶ್ನೆಗಳನ್ನು ಕೇಳಿ ನಾನು ಇಬಿಲೀಸನ ಧೂತನಲ್ಲವೆಂದು ಖಚಿತ ಪಡಿಸುತ್ತಿದ್ದಾರೆ ಅನಿಸಿ ನಗು ಬಂತು.
ಬಸ್ಸು ನಿಧಾನವಾಗಿ ಜೆಟ್ಟಿಯ ಕಡೆ ಚಲಿಸುತ್ತಿತ್ತು. ದೊಡ್ಡದಾಗಿ ನಿಂತಿರುವ ಹಡಗಿನ ಮೂತಿ ದೂರದಿಂದಲೇ ಕಾಣಿಸತೊಡಗಿತು.
‘ನೀವು ನನಗೆ ಒಂದು ಉಪಕಾರ ಮಾಡಬಹುದೇ’ ಎಂದು ಅವರು ಬಸ್ಸು ಇಳಿಯುವಾಗ ಕೇಳಿದರು.
‘ಆಯಿತು’ ಅಂದೆ.
‘ಹಿಂದಿನಿಂದ ಬರುತ್ತಿರುವ ಲಗೇಜು ವಾಹನದಲ್ಲಿ ನನ್ನದೊಂದು ಪ್ರಯಾಣದ ಪೆಟ್ಟಿಗೆಯೊಂದಿದೆ. ಅದನ್ನು ಹಡಗಿಗೆ ಹತ್ತಿಸಲು ಸಹಾಯ ಮಾಡಬಹುದೇ?’ ಎಂದು ಕೇಳಿದರು.
ನನಗೆ ಒಂದು ಅಳುಕು ಕಾಡಿತು.
‘ದೂರ ಪ್ರಯಾಣದಲ್ಲಿ ಬೇರೆಯವರ ಸಾಮಾನುಗಳನ್ನು ಮುಟ್ಟಬಾರದು. ಚೋರನೆಂಬ ಅಪವಾದಕ್ಕೆ ಗುರಿಯಾಗಿ ತಲುಪುವ ಜಾಗ ತಲುಪುವ ಬದಲು ಕಾರಾಗೃಹವಾಸಿಯಾಗಬೇಕಾಗಬಹುದು’ ಎಂದು ಮಹಾನುಭಾವರು ಹಿಂದೆಯೇ ಎಚ್ಚರಿಸಿದ್ದರು.
‘ಆದರೆ ಸತ್ಯವಿಶ್ವಾಸಿಗಳ ಸತ್ಯ ಅವರ ಮುಖದಲ್ಲೂ ಹಣೆಯಲ್ಲೂ ಕಾಣಿಸುತ್ತದೆ. ಅಂತಹವರನ್ನು ವಿಶ್ವಾಸಿಸಬಹುದು’ ಎಂದು ಅದಕ್ಕೆ ಪರಿಹಾರವನ್ನೂ ಹೇಳಿದ್ದರು.
ಹಾಗಾಗಿ ಬಸ್ಸು ಇಳಿದು ಅವರ ಮುಖವನ್ನೂ ಹಣೆಯನ್ನೂ ಗಮನಿಸಿದೆ. ಮುಖದಲ್ಲಿ ಎದ್ದು ಕಾಣುವ ಸತ್ಯ ವಿಶ್ವಾಸ. ಹಣೆಯಲ್ಲಿ ಅವಿರತವಾಗಿ ಹಲವು ವರ್ಷಗಳಿಂದ ದಿನಕ್ಕೆ ಐದುಬಾರಿ ಮಂಡಿಯೂರಿ ನೆಲಕ್ಕೆ ಹಣೆತಾಗಿಸಿ ಉಂಟಾಗಿರುವ ಕಪ್ಪನೆಯ ಉಬ್ಬು. ನಂಬಬಹುದು ಅನಿಸಿತು.
‘ಆಯಿತು ಸಹಾಯ ಮಾಡುವೆನು’ ಅಂದೆ.
‘ಅಲ್ ಹಮ್ದುಲಿಲ್ಲಾ. ರಬ್ಬಿಲ್ ಖೈರ್’ ಎಂದು ಅವರು ಕೃತಜ್ಞತೆಯಲ್ಲಿ ನಕ್ಕರು.
ಅಮಿತ ವಿಶ್ವಾಸಿಯೊಬ್ಬನ ನಿಷ್ಕಳಂಕ ನಗು.
ಲಗೇಜು ಲಾರಿಯಿಂದ ಅವರ ಬೃಹತ್ತಾದ ಪೆಟ್ಟಿಗೆಯನ್ನು ಇಳಿಸಲು ಸಹಾಯ ಮಾಡಿದೆ. ಬೃಹತ್ತಾದ ಕಬ್ಬಿಣದ ಪೆಟ್ಟಿಗೆ. ನನ್ನ ಬಳಿಯೂ ಅಂತಹದೊಂದು ಕಬ್ಬಿಣದ ಬೃಹತ್ ಪೆಟ್ಟಿಗೆ ಇದೆ. ನನ್ನದು ಅನ್ನುವ ಎಲ್ಲವನ್ನೂ ತುಂಬಿಕೊಳ್ಳಲು ಸಾಕಾಗುವಷ್ಟು ದೊಡ್ಡ ಪೆಟ್ಟಿಗೆ. ಕಾಲಾನುಕಾಲದಿಂದ ಹೋಗುವಲ್ಲೆಲ್ಲ ನನ್ನನ್ನು ಹಿಂಬಾಲಿಸಿ ಬರುವ ಪೆಟ್ಟಿಗೆ.
‘ನೂಹ್ ಪ್ರವಾದಿಯ ಮರದ ಸಂದೂಕದಂತಿದೆ ನಿನ್ನ ಕಬ್ಬಿಣದ ಪೆಟಾರಿ’ ಎಂದು ನನ್ನ ಉಮ್ಮ ತಮಾಷೆ ಮಾಡುತ್ತಾಳೆ.
ಲೋಕ ಪ್ರಳಯದ ಹೊತ್ತಲ್ಲಿ ನೂಹ್ ಪ್ರವಾದಿ ಲೋಕ ಮರುಸ್ಥಾಪಿಸಲು ಬೇಕಾದ ಅಳಿದುಳಿದ ಸಂಗತಿಗಳನ್ನೂ ಪ್ರಾಣಿ ಪಕ್ಷಿಗಳನ್ನೂ ಇಂತಹದೊಂದು ಪೆಟಾರಿಗೆ ತುಂಬಿಸಿ ತನ್ನ ದೋಣಿಯಲ್ಲಿಟ್ಟುಕೊಂಡು ಪ್ರಳಯ ಮುಗಿಯುವ ತನಕ ನೀರಿನಲ್ಲಿ ತೇಲುತ್ತಿದ್ದನಂತೆ.
ನೋಡಿದರೆ ಅಂತಹದೊಂದು ಪೆಟಾರಿ ಈ ಮಹಾನುಭಾವರ ಬಳಿಯೂ ಇದೆ. ಅಂತಹದೊಂದು ನನ್ನ ಬಳಿಯೂ ಇದೆ. ಮತ್ತೆ ಒಂದು ಅಳುಕು ಶುರುವಾಯಿತು.
‘ಒಂದೊಂದು ಸಲ ನಿನ್ನ ತರಹವೇ ಇರುವ ಇನ್ನೊಂದು ದೇಹ ನೀನು ತಲುಪಬೇಕಾದ ಜಾಗಕ್ಕೆ ನೀನು ತಲುಪುವ ಮೊದಲೇ ತಲುಪಿ ಬಿಡುತ್ತದೆ. ನೀನು ತಡವಾಗಿ ತಲುಪುವ ಹೊತ್ತಲ್ಲಿ ನಿನ್ನನ್ನು ಎಲ್ಲರೂ ಮರೆತು ಬಿಟ್ಟಿರುತ್ತಾರೆ. ಅವನು ನಿನ್ನಂತೆ ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಬದುಕುತ್ತಿರುತ್ತಾನೆ. ಆಗ ನೀನು ಎಷ್ಟು ಅತ್ತು ಕರೆದರೂ ಯಾರೂ ನಂಬುವುದಿಲ್ಲ. ಪ್ರಯಾಣದಲ್ಲಿ ಬಳಲಿ ನಿನ್ನ ಮುಖ ಚಹರೆಯೂ ದೇಹದ ಆಕಾರವೂ ಬದಲಾಗಿ ಎಲ್ಲರೂ ನಿನ್ನನ್ನೇ ನಕಲಿ ಎಂದು ಸಂಶಯಿಸುತ್ತಾರೆ. ಹಾಗಾಗಿ ನಿನ್ನದೇ ಹಾಗಿರುವ ಸಾಮಾನುಗಳನ್ನು ಉಳ್ಳ ಅನ್ಯರನ್ನು ಸಂಶಯದಿಂದ ನೋಡಬೇಕು’ ಎಂದು ಮಹಾನುಭಾವರು ಹೇಳಿದ್ದರು.
ಬೃಹತ್ತಾದ ಅವರ ಕಬ್ಬಿಣದ ಪೆಟ್ಟಿಗೆ ತೂಕದಲ್ಲಿ ಮಾತ್ರ ಹಗುರವಾಗಿತ್ತು.
‘ಇದೇನು ಇಷ್ಟು ಹಗುರವಾಗಿದೆ?’ ಎಂದು ಕೇಳಿದೆ.
ಅವರು ನಕ್ಕಿದ್ದರು.
‘ಹೋಗುವಾಗ ಮಕ್ಕಾದ ದಾರಿಯುದ್ದಕ್ಕೂ ಹಸಿದವರಿಗೆ ಹಂಚಲು ಕೊಬ್ಬರಿಯ ತುಂಡುಗಳನ್ನೂ, ನೀರಾ ಸಕ್ಕರೆಯ ಚಕ್ಕರೆ ಉಂಡೆಗಳನ್ನೂ ತುಂಬಿಕೊಂಡು ಹೋಗಿದ್ದೆ. ಅಲ್ಲಿ ಹಸಿದವರಿಗೆ ಒಂದು ಕೊಬ್ಬರಿ ತುಂಡು ಕೊಟ್ಟರೆ ಎಪ್ಪತ್ತು ತುಂಡುಗಳನ್ನು ಕೊಟ್ಟ ಪುಣ್ಯ ಬರುವುದು. ಒಂದು ಚಕ್ಕರೆ ಉಂಡೆ ಕೊಟ್ಟರೆ ಎಪ್ಪತ್ತು ಉಂಡೆಗಳ ಪುಣ್ಯ ಸಿಗುವುದು. ಹಾಗಾಗಿ ಪೆಟ್ಟಿಗೆಯನ್ನು ಹಸಿದವರಿಗಾಗಿ ಖಾಲಿ ಮಾಡಿ ಅದರ ಬದಲು ಪೆಟ್ಟಿಗೆಯ ತುಂಬಾ ಪುಣ್ಯ ಸಂಪಾದಿಸಿಕೊಂಡು ಬಂದಿರುವೆ. ಎಷ್ಟು ಲಾಭವಲ್ಲವಾ’ ಎಂದು ಅವರು ಮತ್ತೆ ನಕ್ಕರು.
ದೇವರ ಬಳಿಗೂ ಲಾಭ ಮಾಡಲು ಹೋಗಿರುವ ಮುದುಕ!
ಸ್ವಲ್ಪ ಸಂಶಯ ಬಂತು.
‘ಆದರೆ ಪೆಟ್ಟಿಗೆಯೊಳಗಿಂದ ಏನೋ ಠಣಠಣ ಸದ್ದು ಕೇಳಿಸುತ್ತದೆಯಲ್ಲವಾ?’ ಎಂದು ಸಂಶಯ ವ್ಯಕ್ತಪಡಿಸಿದೆ.
‘ಅದು ಮಕ್ಕಾದ ಪವಿತ್ರ ಝಂಝಂ ನೀರಿನ ಬಾಟಲುಗಳು ಮತ್ತು ಮಕ್ಕಳಿಗೆ ಕೊಡಲು ಖರ್ಜೂರ ಹಣ್ಣಿನ ಪೊಟ್ಟಣಗಳು’ ಎಂದು ಅವರು ವಿಶಾಲವಾಗಿ ನಕ್ಕರು.
ಸರಿ ಹಾಗಾದರೆ ಪೆಟ್ಟಿಗೆಯೊಳಗೇನೂ ಮೋಸವಿರಲಾರದು ಎಂದು ಆ ಬೃಹತ್ ಪೆಟ್ಟಿಗೆಯನ್ನು ಹಡಗಿನೊಳಗೆ ಸಾಗಿಸಲು ಸಹಾಯ ಮಾಡಿದೆ. ಅವರು ನನ್ನ ಎರಡೂ ಕೈಗಳನ್ನು ತಮ್ಮ ಎರಡೂ ಕೈಗಳೊಳಗೆ ತೆಗೆದುಕೊಂಡು ಕಣ್ಮುಚ್ಚಿ ಪ್ರಾರ್ಥಿಸಿ ನನ್ನ ಹಣೆಗೆ ಊದಿದರು. ನಡುಗುತ್ತಿರುವ ಅವರ ಕೈಗಳು ಮತ್ತು ಹಣೆಗೆ ಬಿಸಿಯಾಗಿ ತಾಗಿದ ಅವರ ಉಸಿರು. ಇವರು ಮಂತ್ರವಾದಿಯಾಗಿರಬಹುದೇ ಎಂದು ಮತ್ತೆ ಭಯವಾಯಿತು. ನಾನು ಹತ್ತಿರುವುದು ಹೋಗಬೇಕಾದ ಹಡಗಿಗೆ ತಾನೇ ಎಂದು ಕಣ್ಮುಚ್ಚಿ ಯೋಚಿಸಿ ನನ್ನನ್ನೇ ನಾನೊಮ್ಮೆ ಮೆಲ್ಲಗೆ ಜಿಗುಟಿಕೊಂಡೆ. ಅವರು ನನ್ನ ತಳಮಳವನ್ನು ಗಮನಿಸುತ್ತಿರುವ ಹಾಗೆ ಅನಿಸಿತು.
‘ಭಯ ಪಡಬೇಡ ಮೊದಲ ಬಾರಿಗೆ ಹಡಗು ಹತ್ತಿದವರಿಗೆ ಪಿತ್ತ ವಿಕಾರಗಳೂ, ಮನೋಕ್ಲೇಷಗಳೂ ಆಗುವುದು. ಹೆಚ್ಚು ತಿನ್ನಬೇಡ. ನಿದ್ರಿಸು. ನನಗೆ ನಮಾಜಿನ ಸಮಯವಾಯಿತು’ ಎಂದು ಹಡಗಿನೊಳಗಿನ ಪ್ರಾರ್ಥನಾಲದ ಕಡೆ ಹೊರಟರು. ಪ್ರಾರ್ಥನಾಲವೂ, ಶುಷ್ರೂಶಾಲಯವೂ, ಉಪಾಹಾರಗೃಹಗಳೂ, ಪುಟ್ಟ ಅಂಗಡಿಯೂ ಇರುವ ಬೃಹತ್ ಹಡಗು. ಅವರು ಹೊರಟವರು ನಿಂತು ತಿರುಗಿ ನಕ್ಕರು. ‘ನಿದ್ದೆ ಮುಗಿಸಿ ಸಂಜೆ ಅಸರ್ ನಮಾಜಿನ ನಂತರ ಇಲ್ಲೇ ಬರುವೆ. ನೀನೂ ಬಾ. ಪ್ರಯಾಣದ ಕ್ಲೇಷ ಕಳೆಯಲು ಜೊತೆಗೆ ಮಾತುಗಾರರೊಬ್ಬರು ಇರಬೇಕು. ಇದು ನನ್ನ ಒಂಬತ್ತನೇ ಮಕ್ಕಾ ಪ್ರಯಾಣ. ತುಂಬ ಕಥೆಗಳಿವೆ ಹೇಳಲಿಕ್ಕೆ’ ಎಂದು ಮತ್ತೆ ಹಡಗಿನ ಡೆಕ್ಕಿನ ಕಡೆ ಹೋಗುವ ಮೆಟ್ಟಲುಗಳನ್ನು ಇಳಿದು ಮರೆಯಾದರು.
ಪ್ರಿಯ ಓದುಗರೇ, ನಾನು ಈ ಹಿಂದೆ ಬರೆದಿದ್ದ ಆಡು ಕೊಯ್ಯುವ ಮುದುಕ ಇವರೇ. ಇವರೇ ನಾನು ಹುಡುಕುತ್ತಿರುವ ಪಿಂಗಾಣಿ ಬಟ್ಟಲನ್ನು ಇಟ್ಟುಕೊಂಡಿರುವ ಮನೆತನದ ಕಥೆಯನ್ನು ಹೇಳಿದವರು.
ಜೊತೆಗೆ ನಾನು ಬರೆಯುತ್ತಾ ಬರುತ್ತಿರುವ ಖುರಾನು ಕಲಿಸುವ ಮಹಾನುಭಾವರ ಜೀವಿತದ ಹಲವು ರಹಸ್ಯ ತಿರುವುಗಳನ್ನು ಹಡಗಿನ ಪಯಣದ ಉದ್ದಕ್ಕೂ ನನ್ನಲ್ಲಿ ಹೇಳಿಕೊಂಡವರು ಇವರೇ.
ನಾನು ಈ ಪಿಂಗಾಣಿ ಬಟ್ಟಲನ್ನು ಕಳೆದ ಗುರುವಾರ ಕಣ್ಣಾರೆ ಕಂಡೆ. ಮುನ್ನೂರು ವರ್ಷಗಳಿಂದಲೂ ಈ ಮನೆತನದ ವಶದಲ್ಲಿರುವ ಪಿಂಗಾಣಿ ತಟ್ಟೆ ಇನ್ನೂ ಹಾಗೆಯೇ ಇದೆ. ಆದರೆ ದೈವಿಕವಾದ ಅವಘಡವೊಂದಕ್ಕೆ ಸಿಲುಕಿ ಉದ್ದಕ್ಕೆ ಬಿರುಕುಬಿಟ್ಟಿದೆ. ಕೋಳಿಮೊಟ್ಟೆಯ ಲೋಳೆಯನ್ನೂ ಸಮುದ್ರ ಹವಳದ ಪುಡಿಯನ್ನೂ ಬೆರೆಸಿ ಮಾಡಿದ ಅಂಟಿನಿಂದ ಬಟ್ಟಲಿನ ಈ ಬಿರುಕನ್ನು ನಾಜೂಕಾಗಿ ಮುಚ್ಚಲಾಗಿದೆ. ಆದರೆ ದೈವಿಕವಾದ ಅವಘಡವೊಂದರಿಂದುಂಟಾದ ಆ ಬಿರುಕಿನ ಹಿಂದಿನ ಕಾರಣಗಳು ಇನ್ನೂ ನಿಗೂಢವಾಗಿದೆ. ಆ ಬಿರುಕಿಗೂ, ಆಡು ಕೊಯ್ಯುವ ಮುದುಕನ ಮೊದಲ ವಿವಾಹ ನೈರಾಶ್ಯಕ್ಕೂ, ಮತ್ತು ಮಹಾನುಭಾವರು ಕೊಡಗಿನ ಕಡೆ ಪಲಾಯನಗೈದಿದ್ದಕ್ಕೂ ಒಂದಕ್ಕೊಂದು ಬಲವಾದ ಸಂಬಂಧವಿದೆ ಎಂಬುದು ಅವರು ಹಡಗು ಪ್ರಯಾಣದ ವೇಳೆ ಹೇಳಿದ ಕಥೆಗಳನ್ನೆಲ್ಲ ಕೇಳಿದ ಮೇಲಿನ ನನ್ನ ಈ ಹೊತ್ತಿನ ಸಂಶಯ.
ಅವನ್ನೆಲ್ಲ ನಿವಾರಿಸಿಕೊಂಡು ಮುಂದಿನವಾರ ಬರೆಯುವೆ.
ದೇವರು ನಮ್ಮೆಲ್ಲರನ್ನೂ ಆಕಸ್ಮಿಕಗಳಿಂದಲೂ ಅವಘಡಗಳಿಂದಲೂ ಕಾಪಾಡಲಿ.
(ಮುಂದಿನ ವಾರ: ಸಣ್ಣದೊಂದು ವಿರಾಮದಲ್ಲಿ ಕೆಲವು ಅರೆಬರೆ ಖಾಸಗಿ ಸಂಗತಿಗಳು)
(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಪರಿಷ್ಕೃತ ರೂಪ)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.