“ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ…. ಕತ್ತಲು ಮುಚ್ಚಿಕೊಳ್ಳುತ್ತಿದ್ದರೂ ನವಿಲೊಂದು ತನ್ನ ಸಂಗಾತಿಯನ್ನು ಇಲ್ಲಿ ಕೂಗಿ ಕೂಗಿ ಕರೆಯುತ್ತಿದೆ. ಇದಕ್ಕೆ ಮಾರುತ್ತರ ದೂರದಿಂದೆಲ್ಲೋ ಬರುತ್ತಿದೆ. ನಾನಿಲ್ಲಿ, ನಾನಿಲ್ಲಿ ಎಂದು ಪರಸ್ಪರ ಹೇಳಿಕೊಳ್ಳುತ್ತಿವೆ”
ಲೇಖಕಿ, ಅಂಕಣಗಾರ್ತಿ ಸುಜಾತಾ ಎಚ್.ಆರ್. ಬರೆಯುವ ತಿರುಗಾಟದ ಕಥಾನಕ ಇಂದಿನಿಂದ ಶುರು.

 

ಪ್ರವಾಸವೆನ್ನುವುದು ಹಕ್ಕಿಯೊಂದು ಬಯಲಿಗೆ ತೆರೆದುಕೊಂಡಂತೆ…. ಒಂದು ನಿರಾಳತೆಯನ್ನೂ, ಮೋಜನ್ನೂ, ಹೊಸ ಹೊಳಪನ್ನೂ ಕೊಟ್ಟು ಮೈ ಮನಸ್ಸನ್ನು ತುಂಬುವುದರಲ್ಲಿ ಸಂಶಯವಿಲ್ಲ. ಚಲನೆಯೆಂಬುದು ಪ್ರಾಣಿಪಕ್ಷಿಯ ಸಹಜ ಗುಣ. ನೀರಿದ್ದೆಡೆ ಬೀಡು. ಮೇವಿದ್ದಿಡೆ ತಾವು ಎನ್ನುವುದು ಇಂದಿಗೂ ಕುರಿಮಂದೆಯ ಚಲನೆಯಲ್ಲಿ, ಮೀನುಮಿಡಿಚೆಗಳಲ್ಲಿ, ಕಾಡುಪ್ರಾಣಿಗಳಲ್ಲಿ, ಬೀದಿನಾಯಿಗಳಲ್ಲಿ , ಹಕ್ಕಿಪಕ್ಷಿಗಳಲ್ಲಿ ಉಳಿದಿರುವ ರಕ್ತ ಗುಣ.

ತನ್ನ ಹೊಟ್ಟೆಯನ್ನು, ವಂಶಾವಳಿಯನ್ನು ಪೊರೆಯಲು ಹೊರಟ ಇಂಥ ಪಲ್ಲಟ, ಮನುಷ್ಯನ ಬುದ್ಧಿ ಬೆಳವಣಿಗೆಯ ಹಾಗೂ ನಾಗರೀಕತೆಯ ಹೊರಳಿನಲ್ಲಿ ಕುತೂಹಲಕ್ಕೆ ಒಳಗಾಗಿ ಹೊಸ ಹೊಸ ಜಾಗಗಳಿಗೆ ಸಾಗುತ್ತ, ನೋಡುತ್ತ, ಅದರ ಮೋಹಕ್ಕೊಳಗಾಗಿದ್ದೇ, ಅಲ್ಲೇ ಉಳಿಯಬೇಕೆಂದು ಅವನು ಹೋರಾಡುತ್ತಾ, ಸಾಹಸ ಯುದ್ಧಗಳನ್ನು ಸಾರುತ್ತಾ, ಆ ಜಾಗಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಹೋಗುವುದು ಚರಿತ್ರೆಯಲ್ಲಿ ದಾಖಲಾಗಿದೆ. ಇದು ಮಾನವನ ಇತಿಹಾಸವನ್ನು, ಸಂಸ್ಕೃತಿಯನ್ನು, ಬದಲಾವಣೆಯ ನಡೆಯನ್ನು ತಿಳಿಯಲು ಸಹಕಾರಿಯಾಗಿದೆ.

(ಚಿತ್ರ:ಜಯಶಂಕರ ಹಲಗೂರು)

ಅನಾದಿ ಕಾಲದಿಂದಲೂ ಕಲ್ಲಿನ ಮೇಲೆ ಕೆತ್ತಿದ ಚಿತ್ರಗಳು, ಬರೆದ ಚಿತ್ರಗಳು, ಅಕ್ಷರ ಲೋಕದಲ್ಲಿ ದಾಖಲಾದ ಕಥನಗಳು, ಅಲ್ಲಿನ ವಿಶೇಷತೆಯನ್ನು, ರೋಚಕ ಕಥೆಗಳನ್ನು ಮನಸ್ಸಿಗೆ ತಂದು ಬಿಡುವುದಲ್ಲದೆ ಅದನ್ನು ಕಣ್ಣಲ್ಲಿ ಕಾಣುವ ಕನಸೊಂದನ್ನು ತಲೆಯಲ್ಲಿ ಹುಟ್ಟು ಹಾಕುತ್ತವೆ. ಇಂತು ಹುಟ್ಟು ಹಾಕಿದ ಕನಸೇ ಭಕ್ತಿಯ ಯಾತ್ರೆಯನ್ನು, ನಿಸರ್ಗದ ರಮ್ಯತೆಯನ್ನು ದಾಟುವ ಪಯಣವನ್ನು, ಪರಿಸರದ ಚೆಲುವನ್ನು ಆಸ್ವಾದಿಸುತ್ತ ಸಾಗುವ ಅಹ್ಲಾದಕರವನ್ನು ತಂದುಕೊಡುವುದಲ್ಲದೇ, ಹಿಂಸೆಯ ಕಥೆಯನ್ನು, ಅಹಿಂಸೆಯ ಸಾರವನ್ನು ಹೇಳುತ್ತ ಕರುಣಾರಸವನ್ನು ಸಾರುತ್ತವೆ.

ಆದರೆ ನಾವು ನೋಡುತ್ತಿರುವುದೆಲ್ಲವೂ ಅಂದಿನಿಂದ ಇಂದಿಗೂ ಮನುಷ್ಯನ ಉಳಿವಿನ ಹೋರಾಟವೇ ಆಗಿರುತ್ತದೆ. ಅಲ್ಲಿ ಅವನೇ ಕಟ್ಟಿಕೊಂಡ ಜನಜೀವನವಿರುತ್ತದೆ. ಸಾಧನೆಯಿರುತ್ತದೆ. ಒಲವಿರುತ್ತದೆ. ಕಲೆಯಿರುತ್ತದೆ. ಇಂದಿನ ಈ ಗೋಳಾಕಾರದ ಜಗತ್ತು ಮಂತ್ರದ ಮಾಯಕದಂತೆ ಮೊಬೈಲ್ ರೂಪದಲ್ಲಿ ಬಂದು ನಮ್ಮ ಅಂಗೈ ಮೇಲೆ ಕೂತಿದೆ. ಸುದ್ದಿ ಸಮಾಚಾರಗಳು, ಹೊಡೆದಾಟಗಳು, ನೋವು ನಲಿವುಗಳು ಜಗತ್ತಿನ ಮೂಲೆ ಮೂಲೆಗೂ ಇಂದು ಕುಳಿತ ಕಡೆಗೆ ತಲುಪುತ್ತಿವೆ.

ಹಾಗಾಗಿ ಪ್ರವಾಸೋದ್ಯಮ ಅನ್ನುವುದು ಹಲವು ದೇಶದಲ್ಲಿ ಜನಜೀವನವೇ ಆಗಿಹೋಗಿದೆ. ಎಲ್ಲ ದೇಶಗಳು ಜಗತ್ತನ್ನು ಬನ್ನಿ ಬನ್ನಿ, ಇಂದೇ ನೋಡಿರಿ ಎಂದು ಕೈ ಬೀಸಿ ಕರೆಯುತ್ತಿವೆ. ಹಣವೊಂದಿದ್ದರೆ ಸಾಕು, ಕೈ ಹಿಡಿದು ಕರೆದೊಯ್ಯುತ್ತವೆ. ಉದ್ಯಮಗಳು ಜಾಹೀರಾತಿನ ಬೆನ್ನಾಗಿವೆ. ಪ್ರವಾಸ ಜನಸಾಮಾನ್ಯರಿಗೂ ಎಟುಕುವಂತಾಗಿವೆ. ವಿದ್ಯೆ ಬುದ್ಧಿ ಕಲಿತ ಮಕ್ಕಳು ಹಿಂದೆ ನೆಂಟರ ಮನೆಗೂ ವರುಷಕ್ಕೊಮ್ಮೆ ದಾಟಾಡುತ್ತಿದ್ದ ಕಾಲ ಮರೆತು ಈಗ ಪ್ರಪಂಚವನ್ನು ಸುತ್ತುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನೂ ಸುತ್ತಿಸುತ್ತಿದ್ದಾರೆ.

ನಗರದ ಮಕ್ಕಳು ವೀಕೆಂಡಿಗೆ ಹಸಿರಿನ ಕಡೆಗೆ ನುಗ್ಗುವುದು ಸಾಮಾನ್ಯವಾದರೆ, ಹಳ್ಳಿಯ ಮಕ್ಕಳು ನಗರದ ಮಾಲುಗಳ ಶಾಪಿಂಗಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹಳ್ಳಿಯ ಜನಜೀವನವು ಈಗ ಕಂಟ್ರಿ ಸೈಡ್ ವಸ್ತುಗಳಾಗಿ ಅವರ ಹಾಡು ಹಸೆಗಳು ಟ್ರೈಬಲ್ ಕಲ್ಚರ್ ನ ಭಾಗವಾಗಿ ಮ್ಯೂಸಿಯಂ ಆಗುತ್ತಿವೆ. ಇಡೀ ಮಲೆನಾಡಿನ ಜನ ಹೋಮ್ ಸ್ಟೇ ಉದ್ಯಮಕ್ಕೆ ಕನವರಿಸುತ್ತ ಅಥಿತಿಗಳ ಉಪಚಾರಕ್ಕೆ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ. ನಾನು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವ ಜಾಯಮಾನದವಳಾದ್ದರಿಂದ ನನ್ನ ತಲೆಯೊಳಗೆ ದಾಖಲಾದದ್ದನ್ನ ತಮಗೂ “ಕೆಂಡಸಂಪಿಗೆಯಲ್ಲಿ ಅಂಕಣ”ವನ್ನು ಬರೆಯುವ ಮೂಲಕ ದಾಟಿಸುತ್ತಿದ್ದೇನೆ.

ತನ್ನ ಹೊಟ್ಟೆಯನ್ನು, ವಂಶಾವಳಿಯನ್ನು ಪೊರೆಯಲು ಹೊರಟ ಇಂಥ ಪಲ್ಲಟ, ಮನುಷ್ಯನ ಬುದ್ಧಿ ಬೆಳವಣಿಗೆಯ ಹಾಗೂ ನಾಗರೀಕತೆಯ ಹೊರಳಿನಲ್ಲಿ ಕುತೂಹಲಕ್ಕೆ ಒಳಗಾಗಿ ಹೊಸ ಹೊಸ ಜಾಗಗಳಿಗೆ ಸಾಗುತ್ತ, ನೋಡುತ್ತ, ಅದರ ಮೋಹಕ್ಕೊಳಗಾಗಿದ್ದೇ, ಅಲ್ಲೇ ಉಳಿಯಬೇಕೆಂದು ಅವನು ಹೋರಾಡುತ್ತಾ, ಸಾಹಸ ಯುದ್ಧಗಳನ್ನು ಸಾರುತ್ತಾ, ಆ ಜಾಗಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಹೋಗುವುದು ಚರಿತ್ರೆಯಲ್ಲಿ ದಾಖಲಾಗಿದೆ.

ಚೆಲುವನ್ನು ಆಸ್ವಾದಿಸುತ್ತ, ತನ್ನದಲ್ಲದ ಒಂದು ಪರಿಸರವನ್ನು ತನ್ನಲ್ಲಿ ಕಟ್ಟಿಕೊಳ್ಳುತ್ತ ನಡೆಯುವ ಪ್ರವಾಸವು ಇದ್ದಕ್ಕಿದ್ದಂತೆ ನಮ್ಮೊಳಗಿನ ಒಂದು ನೆನಪನ್ನು ಕೆದಕುತ್ತದೆ. ಇದ್ದಕ್ಕಿದ್ದಂತೆ ಒಂದು ದರ್ಶನವನ್ನೂ ಕಟ್ಟಿಕೊಟ್ಟುಬಿಡುತ್ತದೆ. ನಾನು ಸುತ್ತಿದ ಕಡೆಯೆಲ್ಲ ಬಿಚ್ಚಿದ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಪಕ್ಕದ ಹಳ್ಳಿಯದ್ದು ಆಗಿರಬಹುದು. ಇಲ್ಲ ಸಾಗರ ದಾಟಿದ ಕಥೆಯೂ ಆಗಿರಬಹುದು. ಹೇಳುವ ಅನುಭವ ನನ್ನದು. ಓದುವ ಅನುಭವ ನಿಮ್ಮದು.

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ…. ಕತ್ತಲು ಮುಚ್ಚಿಕೊಳ್ಳುತ್ತಿದ್ದರೂ ನವಿಲೊಂದು ತನ್ನ ಸಂಗಾತಿಯನ್ನು ಇಲ್ಲಿ ಕೂಗಿ ಕೂಗಿ ಕರೆಯುತ್ತಿದೆ. ಇದಕ್ಕೆ ಮಾರುತ್ತರ ದೂರದಿಂದೆಲ್ಲೋ ಬರುತ್ತಿದೆ. ನಾನಿಲ್ಲಿ, ನಾನಿಲ್ಲಿ ಎಂದು ಪರಸ್ಪರ ಹೇಳಿಕೊಳ್ಳುತ್ತಿವೆ.

ಇದು ಕುವೆಂಪುರವರ ಊರು. ಅವರೇ ಹೇಳುವಂತೆ ಊರಲ್ಲ. ಇದು ಅವರ ಮನೆ. ಕುಪ್ಪಳಿಯ ಅವರ ಮನೆಯನ್ನು ಜಗುಲಿ ತೊಟ್ಟಿಯನ್ನು ಇಟ್ಟು ಮರುಕಟ್ಟಡವನ್ನು ಕಟ್ಟಲಾಗಿದೆ. ಅವರ ಹಾಗೂ ಅವರ ಕುಟುಂಬದವರ ವಸ್ತುಗಳನ್ನಿಟ್ಟು ಮ್ಯೂಸಿಯಂ ಮಾಡಲಾಗಿದೆ. ಮ್ಯೂಸಿಯಂನಲ್ಲಿ ಅವರ ವಸ್ತುಗಳು, ಬಟ್ಟೆಬರೆಗಳು, ಪ್ರಶಸ್ತಿಗಳು, ಫಲಕಗಳು, ಫೋಟೋಗಳು, ಹೇಮಾವತಿಯವರನ್ನು ಮದುವೆ ಮಾಡಿಕೊಂಡ ಮದುವೆ ಮಂಟಪ, ಕುಪ್ಪಳ್ಳಿ ಮನೆಯಲ್ಲಿ ಉಪಯೋಗಿಸುತ್ತಿದ್ದಂಥ ಅಡುಗೆಯ ಸಾಮಾನು, ಮಲೆನಾಡಿನ ಮಡಿಕೆ ಕುಡಿಕೆಗಳು, ಮರದ ಮರಿಗೆ, ಕೈ ಬಟ್ಟಲು, ಪರಿಕರಗಳು, ಜಗುಲಿ ಮೇಲಿನ ಹಜಾರದಲ್ಲಿ ಸಾಲಾಗಿ ಕುಳಿತಿವೆ. ಅಂದಿನಂತೆ ಮುಂಡಿಗೆಗಳು ಮಾಡನ್ನು ಹೊತ್ತು ನಿಂತು, ಉಪ್ಪರಿಗೆ ಹತ್ತಿಸಿ, ಇಳಿವ ಮೆಟ್ಟಲಿಳಿದು ಬಂದರೆ, ಅಡಿಕೆ ತೋಟ, ಹರಿವ ಹಳ್ಳದ ಸಣ್ಣ ಸದ್ದು, ನೋಡುತ್ತಾ ಹೋದಂತೆ ಮಲೆಗಳಲ್ಲಿ ಮದುಮಗಳು ಕಾದಂಬರಿಯ ದೃಶ್ಯ ರೂಪವನ್ನು ತೆರೆಯುತ್ತಾ ಸಾಗುತ್ತವೆ. ಮನೆ ನೋಡಲು ಬಂದವರಿಗೆ ರಿಯಾಯಿತಿ ದರದಲ್ಲಿ ಕುವೆಂಪುರವರ ಸಮಗ್ರ ಹಾಗೂ ಎಲ್ಲ ಪುಸ್ತಕಗಳು ದೊರೆಯುವ ಒಂದು ಅಂಗಡಿ ಮಳಿಗೆಯಿದೆ. ತೇಜಸ್ವಿಯರ ಪುಸ್ತಕಗಳೂ ದೊರೆಯುತ್ತವೆ.

ಮನೆ, ಮನೆ, ಮುದ್ದು ಮನೆ ಎಂದು ಬರೆಯುತ್ತ ಅದು ಹೋಳಾದಾಗ ಬೇರೆಯಾದ ದಾಯಾದಿ ಮನೆಗಳು ಹತ್ತಿರದಲ್ಲಿವೆ. ತಾಯಿ ತುಂಗೆಯ ದಾಟಿ ಕುಪ್ಪಳಿಯ ದಾರಿ ಹಿಡಿವಾಗ ಕಲ್ಲುಸಾರವನ್ನು ಮರೆವುದುಂಟೇ? ಕುಪ್ಪಳಿಯಲ್ಲಿ ಕಟ್ಟಿರುವ ಕವಿಮನೆಗೆ ಬಂದು ಇದ್ದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಯನ್ನು ಕಮ್ಮಟಗಳನ್ನು ನಡೆಸಿಕೊಂಡು ಹೋಗುವವರು ಈಗ ಹೆಚ್ಚಾಗಿದ್ದಾರೆ. ಒಂದು ಸಣ್ಣ ಥಿಯೇಟರ್ ಕೂಡಾ ಇಲ್ಲಿದೆ. ಹಿರಿಯ ಕವಿ ಹೊತ್ತ ಹಿರಿಯ ಆಶಯದ ದೋಣಿ ಸಾಗಲಿ ಮುಂದೆ ಹೋಗಲಿ…. ಕುವೆಂಪು ಟ್ರಸ್ಟ್ ಸರಕಾರದ ಜೊತೆಗೂಡಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಹಾಗೇ ಕವಿಶೈಲದಲ್ಲಿ ತಣ್ಣಗೆ ಮಲಗಿರುವ ಆ ಹಿರಿಯ ಜೀವದ ಸಮಾಧಿ ಹಾಗೂ ಅಂಬರಕ್ಕೆ ತಡೆ ಇಲ್ಲದಂತೆ ಸಮಾಧಿಯನ್ನಲಂಕರಿಸಿದ ಕಲ್ಲಿನ ವಿನ್ಯಾಸ ಕಲಾವಿದ ಕೆ. ಟಿ. ಶಿವಪ್ರಸಾದ್ ಅವರದ್ದು. ಆದರೆ ಬಿ.ಎಂ. ಶ್ರೀ, ಟಿ. ಎಸ್. ವೆಂಕಣ್ಣಯ್ಯ ಅವರ ಜೊತೆ ಕುವೆಂಪು ಹೆಸರನ್ನು ಅವರೇ ಕೆತ್ತಿದ್ದು, ಕಲ್ಲರೆಯ ಮೇಲೆ ಹಾಗೇ ಉಳಿದಿವೆ. ಅಲ್ಲಿ ಕುಳಿತು ಹಿಂದೆ ಇದ್ದ ಘನಘೋರ ಕಾಡನ್ನು ನೋಡುತ್ತಾ ಮೈ ಮರೆಯುತ್ತಿದ್ದ ತನ್ನ ಕವಿಶಿಶುವಿನ ನೆನಪಿಗಾಗಿ ಕಲ್ಲು ಅದನ್ನು ಕಾಪಿಟ್ಟಂತಿದೆ. ಈಗ ಉಳಿದಿರುವ ಕಾಡನ್ನು ಸರಕಾರ ರಿಸರ್ವ್ ಫಾರೆಸ್ಟ್ ಎಂದು ಘೋಷಿಸಿದೆ. ಹಿಂದೆ ಮಾಯವಾಗಿದ್ದ ಹುಲಿ ಹಾಗು ಚಿರತೆ ಮತ್ತೆ ಬಂದು ಸೇರಿವೆ ಎಂಬ ಎಚ್ಚರಿಕೆಯಿದೆ. ಇದನ್ನು ಕಂಡಾಗ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಸುಬ್ಬಣ್ಣ ಹೆಗ್ಗಡೆಯವರು ಹುಲಿಕಲ್ಲ ನೆತ್ತಿಯ ಮೇಲೆ ಹತ್ತಿ ಮಸೆಕಲ್ಲನ್ನು ತಬ್ಬಿ ತಮ್ಮ ಕಳೆದುಹೋದ ಮಗನನ್ನು ನೆನೆದ ನೆನಪು ನಿಮಗೆ ಬರದಿದ್ದರೆ ಅವರ ಕೃತಿಯಾಣೆ ಎನ್ನಬಲ್ಲೆ. ಪ್ರಕೃತಿಯ ದಾರಿಯೆನ್ನುವುದು ತೋಳು ತೆರೆದ ಹೆದ್ದಾರಿಯಂತೆ ದೀರ್ಘ ಪಯಣದಲ್ಲಿರುತ್ತದೆ. ನಾವು ಕೇವಲ ಅದರ ಮೇಲೆ ಹರಿವ ಇರುವೆ ತಾನೇ… ಅನ್ನಿಸದೆ ಇರದು.

ಕೆಳಗಿಳಿದಿರಾ? ಅಪ್ಪನ ಪಾದದ ಸುತ್ತ ಆಡುವ ಮಗನಂತೆ ಕ್ರಿಯಾಶೀಲ ಅಪ್ಪನಿಗೆ ತಕ್ಕ ಮಗನಾಗಿ ಬೆಳೆದ ಅಗಾಧ ಪ್ರತಿಭೆ ನಮ್ಮ ತೇಜಸ್ವಿಯವರ ಸಮಾಧಿಯಿದೆ. ಅಸಾಮಾನ್ಯ ಪ್ರತಿಭೆಗಳೆಂದೂ ಮಿನುಗುವವರೇ…. ಎಲ್ಲ ಕಾಲಕ್ಕೂ ಅವರ ನಡೆ ದಂತಕಥೆಯಂತೆ ನಮ್ಮೊಂದಿಗೆ ಸಾಗುತ್ತಾ ಮುಂದುವರೆಯುತ್ತಲೆ ಇರುತ್ತದೆ. ಇಂದಿಗೂ ಈ ಅಪ್ಪ-ಮಗನ ಬರಹಗಳನ್ನು ಓದದ ಸಾಹಿತಿಗಳಿಲ್ಲ ನಮ್ಮ ಕರ್ನಾಟಕದಲ್ಲಿ. ಆನೆ ಇದ್ದರೂ ಬೆಲೆ. ಸತ್ತರೂ ಬೆಲೆ ಎಂದು ಇಂಥವರನ್ನು ನೋಡಿಯೇ ಗಾದೆ ಹುಟ್ಟಿರಬಹುದು. ಕುಪ್ಪಳ್ಳಿಗೆ ಯುವಜನರ ಆಕರ್ಷಣೆ ಇಂದಿಗೂ ಹೆಚ್ಚಿದೆ.

ಕುಪ್ಪಳಿಯಿಂದ ಅವರ ದೇವಂಗಿ ಮಾವನ ಮನೆ ದಾಟಿ “ದೇವರು ರುಜು ಮಾಡಿದನು” ಎಂದು ಪರವಶರಾಗಿ ರಸಋಷಿ ಕುಳಿತುಕೊಳ್ಳುತ್ತಿದ್ದ ನದಿ ತೀರದಲ್ಲಿ ನೀವೊಮ್ಮೆ ಕುಳಿತು ನೋಡಿ. ದೇವರು ರುಜು ಹಾಕುವ ಹಕ್ಕಿಗಳ ಜೊತೆಗೆ ಮೀನು ಗುಂಪುಗುಂಪಾಗಿ ಪುರಿ ಎರಚಿದ ಕಡೆ ನೆಗೆದು ನೀರನ್ನು ಹಾರಿಸುತ್ತಾ ಬಂದು ನೀರ ತೆರೆಗೆ ಹೆದರಿಕೆ ಹುಟ್ಟಿಸುತ್ತವೆ. ಹರಿವ ನೀರು ಗದರಿದ ನಂತರ ಒಳಗೆ ನೆರಳಂತೆ ನಿಧಾನ ತಿರುಗುತ್ತಿರುತ್ತವೆ. ಬಿಸಿಲು ಬರಲಿ ಇರಿ, ಮಿಂಚುತ್ತೇವೆ ನಾವೂ ಎನ್ನುತ್ತ. ಹಾಗೇ ಮುಂದೆ ಹೋಗಿ. ಅಲ್ಲೇ ನವಲ್ ಕಲ್ ಗುಡ್ಡ ಇದೆ. ಬೆಳ್ ಬೆಳಗ್ಗೆಯೇ ಸೂರ್ಯ ಹುಟ್ಟುವ ಮುನ್ನ ಗೊತ್ತಿರುವ ಸ್ಥಳೀಕರ ಜೊತೆಯಲ್ಲಿ ಗುಡ್ಡ ಹತ್ತಿ. ಮುಂಜಾವಿನ ಸಮಯಕ್ಕೆ ಸರಿಯಾಗಿ ನೀವಲ್ಲಿದ್ದರೆ, ಸೂರ್ಯೋದಯವನ್ನು ಕಾಣಬಹುದು. ನಿಜ ಹೇಳಬೇಕೆಂದರೆ ಅದೊಂದು ಮುಂಜಾವಿನ ದಿಗ್ಧರ್ಶನವೇ!

ಮುಂಜಾವಿನ ಮಂಜು ದಟ್ಟೈಸಿ, ಬೆಟ್ಟಗಳನ್ನು ಹೊಟ್ಟೆಯೊಳಗಿಟ್ಟುಕೊಂಡು ಕಾಣದಂತೆ ಮಂಜನ್ನೇ ಹೊದ್ದು ಮಲಗಿರುವ ಭೂಮಿತಾಯಿ! ಆಹಾ! ಸೂರ್ಯನನ್ನು ಲಾಲಿಸಿ ಲಾಲಿಸಿ ಮೋಡದ ಕಡಲಲ್ಲಿ ತೇಲಿಬಿಡುತ್ತಾಳೆ ನೋಡಿ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ತಿಮ್ಮಿ, ಗುತ್ತಿಗೆ ಮಾವ ಇಲ್ನೋಡು….ಇಲ್ನೋಡು….. ಎಂದು ತಾನು ಅವನ ಹಿಂದೆ ಮನೆ ಬಿಟ್ಟು ಓಡಿ ಬಂದಿದ್ದು, ಇಲ್ಲಿ ರಾತ್ರಿ ಅಡಗಿ ಕುಳಿತದ್ದನ್ನು ಮರೆತು…. ಬೆಳಗೆದ್ದು, ಬೆಟ್ಟದ ಮೇಲೆ ನಿಂತು, ಕಾಲ ಕೆಳಗಿನ ಮಂಜಿನ ಕಡಲಾಗಿದ್ದ ಬೆಳಗನ್ನು ಗುತ್ತಿಗೆ ತೋರಿ ಸಂಭ್ರಮಿಸಿದ್ದು ಇದೇ ರೀತಿಯಲ್ಲವೇ ..…

ಮನೆ, ಮನೆ, ಮುದ್ದು ಮನೆ ಎಂದು ಬರೆಯುತ್ತ ಅದು ಹೋಳಾದಾಗ ಬೇರೆಯಾದ ದಾಯಾದಿ ಮನೆಗಳು ಹತ್ತಿರದಲ್ಲಿವೆ. ತಾಯಿ ತುಂಗೆಯ ದಾಟಿ ಕುಪ್ಪಳಿಯ ದಾರಿ ಹಿಡಿವಾಗ ಕಲ್ಲುಸಾರವನ್ನು ಮರೆವುದುಂಟೇ? ಕುಪ್ಪಳಿಯಲ್ಲಿ ಕಟ್ಟಿರುವ ಕವಿಮನೆಗೆ ಬಂದು ಇದ್ದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಯನ್ನು ಕಮ್ಮಟಗಳನ್ನು ನಡೆಸಿಕೊಂಡು ಹೋಗುವವರು ಈಗ ಹೆಚ್ಚಾಗಿದ್ದಾರೆ.

ತಿಮ್ಮಿಯ ಬೆಳಗು ಕವಿಕಣ್ಣಿನ ಬೆಳಗಲ್ಲವೇ? ದಿಟ. ದಿಟ. ಮನಸ್ಸು ಮೆಲುಕು ಹಾಕುತ್ತ ಮುಗುಳ್ನಗುತ್ತದೆ. ಕವಿ ಹೇಮಾವತಿಯವರಿಗೆ ಒಮ್ಮೆಯಾದರೂ ಹೀಗೇ ತೋರಿಸಿರಬಹುದಲ್ಲವೇ? ತಿಮ್ಮಿಯ ಅಚ್ಚರಿಯ ಉದ್ಗಾರ ಹೇಮಾವತಿಯವರದೇ… ಕವಿಯದ್ದೇ…. ಯೋಚನೆ ಬಿಡೋಣ. ಈಗ ನೋಡಿ. ಗಳಿಗೆ ಅಲ್ಲಾಡಿದರೂ ಸೂರ್ಯಾಸ್ತ ಆಗಿಹೋಗಿಬಿಡುತ್ತದೆ. ಅಲ್ಲಾಡದೆ ನಿಂತು ನೆಟ್ಟ ನೋಟದಲ್ಲಿ ದೇವರ ಹುಟ್ಟನ್ನು ಕಣ್ತುಂಬಿಕೊಳ್ಳೋಣ.

ಕೆಂಪು ಗೆರೆ ಅರಳುತ್ತಾ ಅರಳುತ್ತಾ ಚಿನ್ನದ ಬೋಗುಣಿ ಹೊಳೆಹೊಳೆಯುತ್ತಾ, ದೊಡ್ಡದಾಗುತ್ತಾ ಆಗುತ್ತಾ… ಆಗತಾನೇ ಹೊಕ್ಕುಳು ಹರಿದ ದುಂಡಗಿನ ಮಗುವಂತೆ ಮಂಜಿನ ತೆರೆಯ ಮೇಲೆ ಸೂರ್ಯ ದೇವರು ತೇಲುವ ಪರಿಗೆ ಸುಬ್ಬಲಕ್ಶ್ಮಿಯವರ “ಆಡಿಸಿದಳ್ ಯಶೋದೆ ಜಗದೋದ್ಧಾರನ….” ಹಾಡು ಆ ಮಂಜಿನ ತೋಳುಗಳಲ್ಲಿ ಹಗುರವಾಗಿ ಲಲ್ಲೆಗರೆಯುತ್ತಿರುತ್ತದೆ. ಅಲ್ಲಿಯವರೆಗೂ ಕಲ್ಲ ಅರೆಯ ಮೇಲೆ ಒಣ ಕಾಷ್ಟದಂತೆ ನಿಂತಿದ್ದ ಸಣ್ಣಾಕಾರದ ಮರಗಳಲ್ಲಿ ಕಣ್ಣು ಹಾಯಿಸಿದರೆ ಸೀತೆ ದಂಡೆಯ ಸಣ್ಣ ಸಣ್ಣ ಗೊಂಚಲು ಅರಳಿದ್ದು ಕಾಣಸಿಗುತ್ತದೆ. ಓ…ಇದುವರೆಗೂ ಮೂಗರಳಿಸಿದ ನವಿರು ಪರಿಮಳ ಇದರದ್ದೋ?… ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಹೋದರೆ ಮಾತ್ರ …. ಈ ಬೋನಸ್.

ಈ ಸೂರ್ಯೋದಯ ಥೇಟ್! ದೇವರ ದಯೆ ಕಾಣೋ…. ಆನಂದಮಯ…. ಈ ಜಗ ಹೃದಯ…. ಹಾಡುತ್ತಾ ಹಕ್ಕಿಗಳು ಸೂರ್ಯನೆದುರು ಚಿತ್ರ ಬಿಡಿಸುತ್ತಾ ಸಾಗಿ ಹೋಗುತ್ತವೆ. ಸುತ್ತ ಬೆಟ್ಟ ಸಾಲು ಆಕಳಿಸುತ್ತಾ… ಬಾಯಲ್ಲಿ ಹಬೆಯ ಹೊಗೆಯನ್ನು ಬಿಡುತ್ತ ಹೊದ್ದ ಮಂಜಿನ ಹೊದಿಕೆಯನ್ನು ನಿಧಾನಕ್ಕೆ ಇಳಿಸುತ್ತಿರುತ್ತವೆ. ಕೆಲವು ಮರಿಗುಡ್ಡಗಳು ನಿದ್ದೆ ಸಾಲದೆಂದು ಮಂಜಿನ ಹೊದಿಕೆಯನ್ನು ಮತ್ತೆ ಮೇಲಕ್ಕೆ ಎಳೆದುಕೊಳ್ಳುತ್ತಿರುತ್ತವೆ, ಇನ್ನಷ್ಟು ಹೊತ್ತು ಮಲಗುತ್ತೇವೆಂದು. ಆಯ್ತು. ಸೂರ್ಯನ ಕಣ್ಣಿಗೆ ಹೆದರಿ ಮಂಜಿನ ಪರದೆ ಅತ್ತಿತ್ತ ನೋಡಿ ಸರಿದಾಡಿ ಬೆಟ್ಟದ ಅಟ್ಟ ಸೇರುವಾಗಲೇ ದೂರದಲೊಂದು ಮನೆಯ ಹೆಂಚು ಕಾಣುತ್ತದೆ. ಓ… ಅಲ್ಲೊಂದು ಹೊಗೆ ಸುರುಳಿ ಕಂಡೀತು. ಈ ಬೆಟ್ಟದಲ್ಲೂ ಮನೆಗಳಿವೆಯಲ್ಲ! ಮತ್ತೆ, ಇಲ್ಲಿರುವವರೆಲ್ಲ ಎಲ್ಲಿಗೆ ಹೋಗುವುದಪ್ಪಾ?

ಹಾಂ! ಇಂದಿಗೂ, ಸಾಹಿತ್ಯಲೋಕದ ಜನ ಇಲ್ಲಿಗೆ ಮುತ್ತಿ ಮುಕ್ಕುರಿಯುತ್ತದೆ. ಕುಪ್ಪಳಿಯ ಕುವೆಂಪು ಮನೆಗೆ ಹಾಗೂ ತೇಜಸ್ವಿಯವರ ಮೂಡಿಗೆರೆಯ ಮನೆಗಳಿಗೆ. ಇದು ಸಾಹಿತಿಗಳಿಗೆ ಸಿಕ್ಕಿದ ದೊಡ್ಡ ಮನ್ನಣೆಯೇನೋ ಹೌದು. ದಟ್ಟ ಕಾಡಿನ ದಟ್ಟ ಪ್ರೀತಿಯ ದಟ್ಟ ಅನುಭವವನ್ನು ಬಿಸಿಲಲ್ಲಿ ಹೊಳೆಯುವ ಹೊಳೆಯಂತೆ, ಮಳೆಯಲ್ಲಿ ನೆನೆಯುವ ದಟ್ಟ ಹಸಿರಿನಂತೆ ಹೆಮ್ಮೆಯಿಂದ ಅಕ್ಷರ ಲೋಕದಲ್ಲಿ ಕಟ್ಟಿಕೊಡಲು ಪ್ರೇರಣೆಯಾದ ಈ ಮಲೆನಾಡಿನ ಸಿರಿಯನ್ನು ಎಲ್ಲಿಯೂ ಚಿತ್ ಮಾಡದೆ ಕಣ್ತುಂಬಿಕೊಂಡು ಬನ್ನಿ.

ಆದರೆ ಆ ಮೌನಕ್ಕೆ ನೂರಾರು ಹಕ್ಕಿಗಳ, ಕ್ರಿಮಿಕೀಟಗಳ ಜೀವಂತಿಕೆಯ ಬದುಕಿದೆ. ಅರ್ಥವಾಗದ ಪ್ರಶ್ನೆ ಉತ್ತರವಿರುತ್ತದೆ. ಅದನ್ನು ಕಲಕದೆ ನೋಡಿ ಆನಂದಿಸಿ, ತಿರುಗಿ ಬನ್ನಿ. ಒಂದು ಹಕ್ಕಿ ಫೋಟೋ ತೆಗೆಯಲು ಗಂಟೆಗಟ್ಟಳೆ ಮೌನವಾಗಿ ಕಾದುಕೂರುತ್ತಿದ್ದ, ಮೀನು ಹಿಡಿಯಲು ಮೈಲುಗಟ್ಟಳೆ ನಡೆಯುತ್ತಿದ್ದ ತೇಜಸ್ವಿಯ ಪರಿಸರದ ಕಥೆಗಳು ನಿಮಗೆ ನೆನಪಿರಲಿ. ಹಾಗೆಯೇ ಕುಪ್ಪಳ್ಳಿಯಲ್ಲಿ ಕಾಡು ಉಳಿಸಲೆಂದೇ ಅವರು ಯಾವಾಗಲೂ ಜಾಗರೂಕರಾಗಿರುತ್ತಿದ್ದರು.

ಇಲ್ಲಿ ಒಂದು ನೆನಪನ್ನು ನಿಮಗೆ ಹೇಳಲೇಬೇಕು. ನಮ್ಮ ದೂರದ ಬಂಧು ಹಾಗೂ ಸ್ನೇಹಿತರಾದ ದಿವಾಕರ್ ಹೆಗ್ಗಡೆಯೆಂಬುವರು ಇವತ್ತಿಗೂ ಕಮ್ಮಟಗಳಿಗೆ ಕುಪ್ಪಳಿಗೆ ಬರುತ್ತಿರುತ್ತಾರೆ. ಅವರಿಗೆ ತೇಜಸ್ವಿಯವರ ಒಡನಾಟವಿತ್ತು. ಅವರ ತಾಯಿ ಕುವೆಂಪುರವರ ಕುಟುಂಬದವರು. ಅಜ್ಜಿ ಬಹಳ ಲವಲವಿಕೆಯವರಾಗಿದ್ದರು. ನಾವು ಚಿಕ್ಕವರಿದ್ದಾಗ ಅವರು ಸಿಕ್ಕರೆ ಸಾಕು. ಕೇಳುತ್ತಿದ್ದೆವು.

“ಕುವೆಂಪು ಊರಿಗೆ ಬಂದಾಗ ಏನ್ ಮಾಡ್ತಿದ್ರು?” ಅವರ ಉತ್ತರ.
“ಎಂಥದ್ದೋ ಏನಪ್ಪಾ? ಯಾವಾಗ ನೋಡಿದ್ರೂ ಪುಟ್ಟಣ್ಣಯ್ಯ…. ಅವರದ್ದೇ ಒಂದು ಲೋಕದಲ್ಲಿರುತ್ತಿದ್ರು. ಆಕಾಸ ನೋಡಕಂತ”. ಒಂದು ಹೊಳವಿಗಾಗಿ ನಿಸರ್ಗ ಧ್ಯಾನದಲ್ಲಿ ಮೈಮರೆತು ಮೌನದಲ್ಲಿ ಕೂರುತ್ತಿದ್ದ ಕುವೆಂಪುರವರನ್ನು ಓದಿಕೊಂಡ ನಾವು ನಿಸರ್ಗ ಸಹಜತೆಗೆ ಧಕ್ಕೆ ತರದಂತೆ ಇದ್ದು ಬದ್ಧರಾಗಿರೋಣ.

 

(ಚಿತ್ರಗಳು: ಲೀಲಾ ಅಪ್ಪಾಜಿ, ಮುಖಪುಟ: ಪ್ರವರ ಕೊಟ್ಟೂರು)