ರೈಲು ಅಥವಾ ಬಸ್ಸು ಹತ್ತಿ ದಿನದ ಪ್ರಯಾಣ ಪ್ರಾರಂಭಿಸಿ ನಗರ ಪ್ರದೇಶವನ್ನು ದಾಟಿದರೆ ಕಣ್ಣು ಹಾಯಿಸುವಷ್ಟು ದೂರಕ್ಕೂ ಕಿತ್ತಳೆ ಅಥವಾ ನಿಂಬೆಯ ತೋಟಗಳು! ಕಾಪುವಿನ ಲೈಟ್ ಹೌಸ್ ಹತ್ತಿ ಸಮುದ್ರದ ವಿರುದ್ಧದ ದಿಕ್ಕಿಗೆ ನೋಡಿದರೆ ತೆಂಗಿನ ತೋಟ ಹೇಗೆ ಕಾಣುತ್ತದೆಯೋ ಹಾಗೆ! ಇದು ಹೊಸದಾಗಿ ಕಂಡಿದ್ದರಿಂದ ನಮಗೆ ಆಶ್ಚರ್ಯ. ಇವರು ಇಷ್ಟು ನಿಂಬೆ ಬೆಳೆದು ಏನು ಮಾಡುತ್ತಾರೆ? ಕಿತ್ತಳೆಯನ್ನು ಲೋಡುಗಟ್ಟಲೆ ಗೂಡ್ಸ್ ರೈಲಿನಲ್ಲಿ ತುಂಬಿ ಕಳಿಸಿದರೂ ಉಳಿಯುವಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.
‘ದೂರದ ಹಸಿರು’ ಅಂಕಣದಲ್ಲಿ ಸಿಸಿಲಿಯನ್‌ ಓಡಾಟದಲ್ಲಿ ಸವಿದ ಹಲವು ಖಾದ್ಯಗಳ ಜೊತೆಗೆ ಅಲ್ಲಿನ ವಿಶೇಷ ಹಣ್ಣುಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

ಸಸ್ಯಾಹಾರಿಗಳಿಗೆ ಹೊರದೇಶಗಳಲ್ಲಿ ಆಗುವ ಅನನುಕೂಲಗಳಲ್ಲಿ ಮೊದಲ ಸ್ಥಾನವನ್ನು “ಆಹಾರ ಪದ್ಧತಿ” ಆವರಿಸಿಕೊಂಡುಬಿಟ್ಟಿದೆ. ಅದೊಂದು ದೊಡ್ಡ ಆತಂಕದ ವಿಷಯ. ಏನು ತಿನ್ನಬೇಕಾದರೂ ನೂರು ಬಾರಿ ಪ್ರಮಾಣಿಸಿ ನೋಡುವ ಅನುಮಾನ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಇತ್ತೀಚಿಗೆ ಸ್ಮಾರ್ಟ್ ಫೋನ್, ಗೂಗಲ್ ಎಲ್ಲ ಬಂದಿರುವುದು ದೊಡ್ಡ ಸಮಾಧಾನದ ವಿಷಯ. ಹೇಗೋ ಕಷ್ಟ ಪಟ್ಟಾದರೂ ಅಡಕವಾಗಿರುವ ಪದಾರ್ಥಗಳನ್ನು ತಿಳಿಯಬಹುದು. ಇಲ್ಲಿನವರಿಗೆ ಒಂದು ದೊಡ್ಡ ಗೊಂದಲವೆಂದರೆ ಸಸ್ಯಾಹಾರಿಗಳಿಗೂ ಹಾಗೂ ವೇಗನ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವುದು. ಅದನ್ನು ಬಿಡಿಸಿ ಹೇಳುವುದರೊಳಗೆ ಸಾಕಾಗಿಹೋಗುತ್ತದೆ. ಕೊನೆಗೂ ಅವರಿಗೆ ಅದು ಅರ್ಥವಾಗುವುದು ಕಷ್ಟ.

ನೆಟ್ ಫ್ಲಿಕ್ಸ್ ನಲ್ಲಿ ಇರುವ ವೆಬ್ ಸೀರೀಸ್ “Game Changers” ನಿಜವಾಗಿಯೂ ಒಂದು ಪರಿವರ್ತನೆಯ ಪರ್ವವನ್ನು ತರುತ್ತಿದೆ. ವೇಗನಿಸಂ ಒಂದು ಫ್ಯಾಷನ್ ಆಗಿ ಬೆಳೆಯುತ್ತಿದೆ. ಹಾಗಾಗಿ ಎಲ್ಲ ಸೂಪರ್ ಮಾರ್ಕೆಟ್ ಗಳಲ್ಲಿಯೂ ವೇಗನ್ ವಿಭಾಗದಲ್ಲಿ ಹೆಚ್ಚೆಚ್ಚು ಪದಾರ್ಥಗಳು ಕಂಡು ಬರುತ್ತಿವೆ. ಅದರಲ್ಲಿಯೂ ಎಂಥದೋ ವಿಚಿತ್ರ ಸಂಶೋಧನೆ ನಡೆಸಿ, ಸೋಯಾದಿಂದ ಮಾಡಿದ “ವೇಗನ್ ಚಿಕನ್”, “ವೇಗನ್ ಬೀಫ್” ಇನ್ನಿತರೆ ತಿನಿಸುಗಳನ್ನು ನೋಡಿದರೆ ಮನಕ್ಕೆ ಮಂಕು ಬಡಿದಂತಾಗುತ್ತದೆ. ಅವೆಲ್ಲ ನೋಡಲು ಥೇಟ್ ಚಿಕನ್, ಬೀಫ್ ಇದ್ದ ಹಾಗೆಯೇ ಇರುತ್ತದೆ. ಇದನ್ನೆಲ್ಲಾ ನೋಡಿ ನನ್ನ ಮನಸ್ಸಿನಲ್ಲಿ ಕಾಡುವ ಕಟ್ಟ ಕಡೆಯ ಪ್ರಶ್ನೆ: “ಹೀಗೂ ಉಂಟೆ?”!

ಸಿಸಿಲಿಯ ಪ್ರವಾಸದ ಸಂದರ್ಭದಲ್ಲಿಯೂ ನಮಗೆ ದೊಡ್ಡ ಆತಂಕವಾಗಿದ್ದು ಅಲ್ಲಿನ ಖಾದ್ಯಗಳು. ಸಮುದ್ರ ಕಿನಾರೆಯಾದ್ದರಿಂದ ಕಡಲ ಆಹಾರಗಳೇ ಜಾಸ್ತಿ. ಅಂತರ್ಜಾಲದಲ್ಲಿ ಯಾವ ಮಾಹಿತಿ ತೆಗೆದರೂ ವಿಧವಿಧವಾದ ಮೀನುಗಳು, ಅಷ್ಟಪಾದಿ (octopus), ಏಡಿ ಇತ್ಯಾದಿಗಳ ಭರಪೂರ ವಿಡಿಯೋಗಳು ಕಾಣುತ್ತಿದ್ದವು. ಸಾಮಾನ್ಯವಾಗಿ ಈ ಖಾದ್ಯಗಳ ವಾಸನೆ ಸಹ ಸಸ್ಯಾಹಾರಿಗಳಿಗೆ ತಡೆಯಲು ಆಗುವುದಿಲ್ಲ. ಆದರೆ ಅಲ್ಲಿ ತಲುಪಿದ ಮೇಲೆ ಅನಿರೀಕ್ಷಿತವಾಗಿ ನಮಗೆ ಆಶ್ಚರ್ಯ ಕಾದಿತ್ತು. ಈಗ ಒಂದೊಂದಾಗಿ ನಿಮ್ಮ ಮುಂದೆ..

ಕನೋಲಿ (cannolli) :

ಸಿಸಿಲಿಯಲ್ಲಿ ಚೀಸ್ ತಯಾರಿಸುವಾಗ (ಬಹುತೇಕ ಪನೀರ್ ಥರವೇ) ಉಳಿಯುವ ಪದಾರ್ಥದಲ್ಲಿ ಒಂದು ಕ್ರೀಮ್ ರೀತಿಯ ವಸ್ತುವನ್ನು ತಯಾರಿಸಲಾಗುತ್ತದೆ. ಕುರಿಯ ಹಾಲಿನಲ್ಲಿ ಚೀಸ್ ತಯಾರಿಸುವಾಗ ಈ ರೀತಿಯ ಕ್ರೀಮ್ ಜಾಸ್ತಿ ದೊರೆಯುತ್ತದಂತೆ. ಇದನ್ನು “ರಿಕೋಟಾ”(ricotta) ಎಂದು ಕರೆಯುತ್ತಾರೆ. ಇದು ಇಟಲಿಯ ವಿಶೇಷ.

ಸಿಸಿಲಿಯಲ್ಲಿ ತಲೆತಲಾಂತರದಿಂದ ಈ ರಿಕೋಟಾದಿಂದ ಒಂದು ಸಿಹಿ ತಿಂಡಿಯನ್ನು ಮಾಡಲಾಗುತ್ತದೆ. ರಿಕೋಟಾಗೆ ಸಕ್ಕರೆ ಸೇರಿಸಿ ಒಂದು ಸಿಹಿಯಾದ ಕ್ರೀಮ್ ತಯಾರಿಸುತ್ತಾರೆ. ಇದೇ ಕನೋಲಿಯ ಹೂರಣ. ಮೈದಾ ಹಿಟ್ಟನ್ನು ಕಲೆಸಿ ತೆಳ್ಳನೆಯ ಪದರವನ್ನಾಗಿ ಮಾಡಿ, ಎಣ್ಣೆಯಲ್ಲಿ ಕರೆದು ಹೊರಪದರವನ್ನು ತಯಾರಿಸಲಾಗುತ್ತದೆ. ಅದರೊಳಗೆ ಆಗಿನ್ನೂ ತಯಾರಿಸಿದ ರಿಕೋಟಾ ಕ್ರೀಮ್ ಹಾಕಿ ಮೇಲೆ ಪಿಸ್ತಾ ಉದುರಿಸಿ ಕೊಟ್ಟರೆ – ಆಹಾ, ಬಣ್ಣಿಸಲಸದಳ! ಮುಖಕ್ಕೆ ಹಾಕಿ ತೀಡುವಷ್ಟು ಸಿಹಿ ಇಲ್ಲದಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಈಗೀಗ ಪ್ರವಾಸಿಗರ ಆಕರ್ಷಣೆಗೆ ಅದರಲ್ಲಿಯೇ ಹಲವಾರು ವಿವಿಧ ಸ್ವಾದವುಳ್ಳ ರಿಕೋಟಾ ಹೂರಣವನ್ನು ತಯಾರಿಸುತ್ತಿದ್ದಾರೆ. ಉದಾಹರಣೆಗೆ ಪಿಸ್ತಾ, ಚಾಕಲೇಟ್, ಮಾವು ಇತ್ಯಾದಿ. ನಾವಂತೂ ನಮ್ಮ ಪ್ರವಾಸದಲ್ಲಿ ಒಂದು ದಿನವೂ ಬಿಡದಂತೆ ನುಂಗಿದ ಏಕೈಕ ಖಾದ್ಯ – ಕನೋಲಿ. ಇದರ ಪ್ರಭಾವ ಎಷ್ಟಿದೆಯೆಂದರೆ ಇಲ್ಲಿ ಸಿಗುವ ನೆನಪಿನ ಕಾಣಿಕೆಯಲ್ಲಿ ಕನೋಲಿ ಕೂಡ ಒಂದು.

ಕೆಂಪು ಕಿತ್ತಳೆ (Blood Orange)

ಸಾಮಾನ್ಯವಾಗಿ ಮದ್ಯಪಾನ ಮಾಡುವವರಿಗೆ ಜ್ಯೂಸು ಕುಡಿಯುವವರನ್ನು ಕಂಡರೆ ಅಸಡ್ಡೆ. ಬಾರಿಗೆ ಹೋಗಿ ಜ್ಯೂಸು ಕೇಳಿದರೆ ನಿಮ್ಮನ್ನು ಹೇಗೆಲ್ಲಾ ನೋಡಬಹುದು! ಆದರೆ ಸಿಸಿಲಿಯಲ್ಲಿ ಇದಕ್ಕೊಂದು ಅಪವಾದವಿದೆ. ಇಲ್ಲಿ ಬಾರ್, ರೆಸ್ಟೋರೆಂಟ್, ಕಾಫಿ ಶಾಪ್ ಸೇರಿ ಎಲ್ಲೆಡೆಯೂ ಸಿಗುವ ಒಂದು ಹಣ್ಣಿನ ರಸವೆಂದರೆ “ಬ್ಲಡ್ ಆರೆಂಜ್ ಜ್ಯೂಸು”. ಇದಕ್ಕೆ ಕಾರಣ ಏನೆಂದರೆ, ರಕ್ತ ವರ್ಣದ ಕಿತ್ತಳೆ ಇಲ್ಲಿನ ಹೆಮ್ಮೆಯ ಸಂಕೇತ. ಇದನ್ನು ಸಿಸಿಲಿಯ ಸಂಕೇತ ಎಂದರೂ ತಪ್ಪಾಗಲಾರದು. ಪ್ರಪಂಚದ ಕೆಲವೇ ಸೂಕ್ಷ್ಮ ವಲಯಗಳಲ್ಲಿ ಬೆಳೆಯುವ ಈ ಕಿತ್ತಳೆ ಹಣ್ಣಿನ ತಿರುಳು ರಕ್ತವರ್ಣದ್ದಾಗಿರುತ್ತದೆ. ಈ ಹಣ್ಣಿನ ರಸ ನೋಡಲು ಬಹಳಷ್ಟು ದಾಳಿಂಬೆ ಹಣ್ಣಿನ ರಸದ ಬಣ್ಣದಂತೆಯೇ ಕಾಣುತ್ತದೆ. ಆದರೆ ರುಚಿ ಮಾತ್ರ ಕಿತ್ತಳೆಯದು. ಬಿಸಿಲಿನ ಝಳಕ್ಕೆ ಗಂಟಲು ಒಣಗಿದಾಗ, ಹಣ್ಣಿನ ರಸಕ್ಕಾಗಿ ಹುಡುಕುವ ಅಗತ್ಯವಿಲ್ಲ. ಸಿಸಿಲಿಯಲ್ಲಿ ಸರ್ವಾಂತರ್ಯಾಮಿಯಾಗಿ ಸಿಗುತ್ತದೆ. ಪ್ರವಾಸದುದ್ದಕ್ಕೂ ನಮ್ಮ ದಾಹವನ್ನು ಇಂಗಿಸಿದ ಪುಣ್ಯ ಈ ಹಣ್ಣಿಗಿದೆ.

ನೋಡಿದ ಮೊದಲು ವಿಚಿತ್ರ ಎನಿಸಿ ಇದನ್ನು ಪುಟ್ಟ ಚಕ್ಕೋತ ಹಣ್ಣು ಎಂದು ಭಾವಿಸಿದ್ದೆವು. ಆದರೆ ಆಮೇಲೆ ಇದರ ವಿವರ ತಿಳಿಯಿತು. ಮೌಂಟ್ ಎಟ್ನಾ ಪರ್ವತದ ಕೆಳ ಭಾಗದಲ್ಲಿ ಬೆಳೆಯುವ ರಕ್ತ ವರ್ಣದ ಕಿತ್ತಳೆಗೆ ಪ್ರಪಂಚದಾದ್ಯಂತ ಮಾನ್ಯತೆಯಿದೆ. ಈ ಹಣ್ಣನ್ನು ಬಿಡಿಸಿ ಸ್ವಲ್ಪ ಉಪ್ಪು-ಮೆಣಸು, ಬಾಸಿಲ್ (ಬಾಸಿಲ್ ಎಂದರೆ ತುಳಸಿ ಅಲ್ಲ. ಅದೊಂದು ಗಿಡದ ಎಲೆ. ನೋಡಲು ತುಳಸಿಯ ರೀತಿಯೇ ಇರುತ್ತದೆ. ತುಳಸಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ “ಹೋಲಿ ಬಾಸಿಲ್” ಎನ್ನುತ್ತಾರೆ) ಸೇರಿಸಿ ಸಲಾಡ್ ಮಾಡಿ ತಿನ್ನಬಹುದು. ಸಿಸಿಲಿಯ ಸಣ್ಣ ಗಲ್ಲಿಯ ಅಂಗಡಿಯಿಂದ ಹಿಡಿದು ಪಂಚತಾರಾ ಹೋಟೆಲ್ ವರೆಗೂ ಈ ಸಲಾಡ್ ಬೆಳಗಿನ ತಿಂಡಿಯಾಗಿ ಸಿಗುತ್ತದೆ.

ನಿಂಬೆ ಸೋಡಾ (Lemonade)

ಸಿಸಿಲಿಯ ಮತ್ತೊಂದು ಬೆಳೆ ಎಂದರೆ ನಿಂಬೆ. ವಿವಿಧ ರೀತಿಯ ನಿಂಬೆ ಬೆಳೆಯುವ ಇಲ್ಲಿ ಪ್ರವಾಸಿಗರಿಗೆ ಗಜ ನಿಂಬೆಯ ರಸಕ್ಕೆ ಸ್ವಲ್ಪ ಉಪ್ಪು, ಸೋಡಾ ಸೇರಿಸಿ ತಯಾರಿಸುವ “ಸಾಲೇ” ನೆಚ್ಚಿನ ಪೇಯ. ಬೇಸಿಗೆಯ ಶಾಖಕ್ಕೆ ಇದೊಂದು ರಾಮಬಾಣ. ಇದನ್ನು ಇಂಗ್ಲಿಷಿನಲ್ಲಿ ಲೇಮನೆಡ್ ಎನ್ನುತ್ತೇವೆ. ಒಂದು ಮುಷ್ಟಿಯಷ್ಟಿರಬಹುದಾದ ಗಜ ನಿಂಬೆಯನ್ನು ನೋಡಿದ್ದ ನನಗೆ ಇಲ್ಲೊಂದು ಆಶ್ಚರ್ಯ ಕಾದಿತ್ತು. ಒಂದು ಗಜ ನಿಂಬೆಯ ತಳಿ ಅನಾನಸ್ ಗಾತ್ರದಷ್ಟು ದೊಡ್ಡದಾಗಿ ಬೆಳೆಯುತ್ತದೆ! ಹೋಲಿಕೆ ಮಾಡಿ ಇದನ್ನು ಫೋಟೋ ತೆಗೆಯಲು ಒಂದು ಅಂಗಡಿಯಲ್ಲಿ, ಅನಾನಸ್ ಗಾತ್ರದ ನಿಂಬೆಯನ್ನು ಪಡೆದು ಫೋಟೋ ತೆಗೆದದನ್ನು ನೋಡಿ ಅವರು ನಗುತ್ತಿದ್ದರು. ಭಾರತದಲ್ಲಿ ಹೊರ ದೇಶದ ಜನ ರಸ್ತೆಯಲ್ಲಿ ಓಡಾಡುವ ಹಸುವಿನ ಫೋಟೋ ತೆಗೆದರೆ, ನಾವು ಹೇಗೆ ನಗುತ್ತೇವೋ ಹಾಗೆ. ಒಂದು ಪ್ರದೇಶದ ಜನಕ್ಕೆ ಸಾಮಾನ್ಯವಾಗಿ ಕಾಣುವ ಅನುಭವಗಳು ಹೊರಗಿನ ಪ್ರಪಂಚಕ್ಕೆ ಅಸಾಮಾನ್ಯವಾಗಿ ಕಾಣುತ್ತದೆ!

ಕಸ್ಸಾಟ(Cassatta)

ನಿಮಗೆ ಅಮುಲ್, ನಂದಿನಿ ಇತ್ಯಾದಿ ಐಸ್ ಕ್ರೀಮ್ ಕಂಪೆನಿಗಳಲ್ಲಿ ಒಂದು ವಿಶೇಷ ಐಸ್ ಕ್ರೀಮ್ ದೊರೆಯುತ್ತದೆ. ಅದರ ಹೆಸರು “ಕಸ್ಸಾಟ”. ಇದರ ಮೂಲ ಇಟಲಿ. ಸಿಸಿಲಿಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಇದು ಅಚ್ಚುಮೆಚ್ಚು. ಅಲ್ಲಿಯ ಉಷ್ಣ ವಾತಾವರಣಕ್ಕೆ ಹೇಳಿ ಮಾಡಿಸಿದಂತಿದೆ.

ಇದರ ವಿಶೇಷ ಎಂದರೆ ಇದರ ಹಲವಾರು ಪದರಗಳು. ಮೊದಲ ಪದರ ಕೇಕ್. ನಂತರದ ಒಂದು ಪದರ ರಿಕೋಟಾ ಕ್ರೀಮ್. ಮತ್ತದರ ಮೇಲೆ ಒಂದು ದೊಡ್ಡ ಪದರ ಐಸ್ ಕ್ರೀಮ್. ಅದರ ಮೇಲೆ ವಿಧ ವಿಧವಾದ ಐಸಿಂಗ್! ಅಲ್ಲಿ ಪಿಸ್ತಾ ಹೆಚ್ಚು ಹೆಸರುವಾಸಿಯಾಗಿರುವುದರಿಂದ ನಾವು ಪಿಸ್ತಾ ಕಸ್ಸಾಟ ತಿಂದು ಆನಂದಿಸಿದೆವು. ಒಂದು ನವ್ಯ ಗಾದೆಯಿದೆ: “ಹೊಟ್ಟೆ ತುಂಬಾ ತಿಂದು, ಮತ್ತೆ ತಿನ್ನಲು ಹೊಟ್ಟೆಯಲ್ಲಿ ಜಾಗವಿಲ್ಲದಿದ್ದರೂ, ಐಸ್ ಕ್ರೀಮ್ ಎಂದಾಕ್ಷಣ ಹೊಟ್ಟೆಯೊಳಗೆ ಒಂದಿಷ್ಟು ಖಾಲಿ ಜಾಗ ಹುಟ್ಟುತ್ತದೆಯಂತೆ”. ಅಕ್ಷರಶಃ ನಾವು ಕಸ್ಸಾಟವನ್ನು ಹೀಗೆಯೇ ತಿಂದಿದ್ದು! ಸಿಹಿ ಕಹಿ ಚಂದ್ರು ಅವರನ್ನು ಇಲ್ಲಿಗೆ ಒಮ್ಮೆ ಕರೆಸಬೇಕು. ಅವರಾದರೆ ಕೊನೆಯಲ್ಲಿ ತಮ್ಮ ಅಭಿಪ್ರಾಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಾರೆ. ಅದನ್ನು ಬರೆಯಲು ಪದಗಳು ಸಿಗುತ್ತಿಲ್ಲ.

ಪಾಸ್ತಾ

ಪಿಸ್ತಾ ಮತ್ತು ಬಾದಾಮಿ ಸಿಸಿಲಿಯ ಎರಡನೇ ಎತ್ತರದ ವಲಯದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು. ಯಾವುದೇ ಒಂದು ಬೆಳೆಯನ್ನು ಯಥೇಚ್ಛವಾಗಿ ಬೆಳೆದು ಅದರಲ್ಲಿ ವಿವಿಧತೆಯ ಅಡುಗೆ ಮಾಡದಿದ್ದರೆ ಆ ಬೆಳೆಗೆ ಒಂದು ಅವಮಾನವಿದ್ದಂತೆ. ನಮ್ಮ ಕರಾವಳಿ ಭಾಗದಲ್ಲಿ ತೆಂಗನ್ನು ಬಹುತೇಕ ಎಲ್ಲ ಅಡುಗೆಯಲ್ಲಿಯೂ ಬಳಸುವಂತೆ ಇಲ್ಲಿ ಪಿಸ್ತಾ, ಬಾದಾಮಿ ಬಳಸುತ್ತಾರೆ. ಅದರಲ್ಲಿಯೂ ಪಿಸ್ತಾದಲ್ಲಿ ತಯಾರಿಸಿದ ಪಾಸ್ತಾ ಇಲ್ಲಿನ ವಿಶೇಷ. ಮೌಂಟ್ ಎಟ್ನಾ ಚಾರಣದ ನಂತರ ಬೆಟ್ಟದ ತಪ್ಪಲಿನ ಹೋಟೆಲ್ ಒಂದರಲ್ಲಿ ತಿಂದ ಪಾಸ್ತಾ ಅದ್ಭುತವಾಗಿತ್ತು. ಅದನ್ನು ಪಿಸ್ತಾ ಸಾಸ್ (ಅಚ್ಚ ಕನ್ನಡದಲ್ಲಿ ಪಿಸ್ತಾ ಗೊಜ್ಜು ಅಂತಲೂ ಅನ್ನಬಹುದು. ಆದರೆ ಮನಸಿನಲ್ಲಿ ಮೂಡುವ ಛಾಯೆ ಅದರ ಮೂಲ ರೂಪವನ್ನು ಕೆಡಿಸಿಬಿಡುತ್ತದೇನೋ ಎನ್ನುವ ಅಂಜಿಕೆಯಿಂದ ಆಂಗ್ಲ ಪದವನ್ನೇ ಬಳಸಿದ್ದೇನೆ) ಉಪಯೋಗಿಸಿ ತಯಾರಿಸಿದ್ದರು. ಬೆಂಗಳೂರಿನಲ್ಲಿ ಹೋಟೆಲ್ಲಿಗೆ ಹೋಗಿ ಶಾವಿಗೆ ಉಪ್ಪಿಟ್ಟು ತಿನ್ನುವಾಗ ಗೋಡಂಬಿ ಸಿಕ್ಕರೆ, ಕೊಟ್ಟ ದುಡ್ಡಿಗೆ ಮನಸ್ಸಿನಲ್ಲಿ ಒಂದು ಸಮಾಧಾನ ಅನ್ನಿಸುವುದು ಸುಳ್ಳಲ್ಲ. ಹಾಗೆಯೇ ಇಲ್ಲಿ ಪಾಸ್ತಾ ತಿನ್ನುವಾಗ ಪಿಸ್ತಾದ ತುಣುಕುಗಳು ಸಿಗುತ್ತಿದ್ದುದು, ಹದಿನೈದು ಯೂರೋ ಕೊಟ್ಟ ನಂತರವೂ ಮನಸ್ಸಿಗೆ ಒಂದು ಸಮಾಧಾನ ಎನ್ನಿಸಿತು. ಹೊಟ್ಟೆ ಹಸಿದಾಗ ಪಾಸ್ತಾ ಕೂಡ ಅಮೃತದಂತೆ ಅನ್ನಿಸಿತು.

ಪಿಜ್ಜಾ

ನನಗೆ ಗೊತ್ತಿರುವ ಹಾಗೆ ಪ್ರಪಂಚದಾದ್ಯಂತ ಆವರಿಸಿರುವ ಏಕೈಕ ಖಾದ್ಯ ಎಂದರೆ “ಪಿಜ್ಜಾ”. ಅದರ ಮೂಲ ಇಟಲಿಯ ನಪೋಲಿ(Naples). ಇಟಲಿಯ ಪ್ರವಾಸದಲ್ಲಿ ಪಿಜ್ಜಾ ತಿನ್ನದಿದ್ದರೆ ನನ್ನಊರು ದಾವಣಗೆರೆಗೆ ಹೋಗಿ ಬೆಣ್ಣೆ ದೋಸೆ ತಿನ್ನದೇ ವಾಪಾಸಾದಂತೆ. ಸಿಸಿಲಿಯ ಪ್ರವಾಸದಲ್ಲಿಯೂ ನಮಗೆ ಹೊಟ್ಟೆ ತುಂಬಿಸಿದ್ದು ವಿವಿಧ ರೀತಿಯ ಪಿಜ್ಜಾ. ಇಲ್ಲಿ ಪಿಜ್ಜಾ ಮಾಡಲು ವಿದ್ಯುತ್ ಚಾಲಿತ ಉಪಕರಣ ಉಪಯೋಗಿಸಿದರೆ ಆ ಹೋಟೆಲಿಗೆ ಅದೊಂದು ರೀತಿಯ ಅವಮಾನ. ಬಹುತೇಕ ಎಲ್ಲೆಡೆಯೂ ಬೆಂಕಿಯ ಕುಲುಮೆಯ ಶಾಖದಲ್ಲಿ ತಯಾರಿಸಿವ ಪಾರಂಪರಿಕ ಪಿಜ್ಜಾ ಇಲ್ಲಿನ ವಿಶೇಷ. ಈ ಭಾಗದ ವೈವಿಧ್ಯಮಯ ಚೀಸ್, ಚೆರ್ರಿ ಟೊಮೇಟೊ, ಬದನೇಕಾಯಿ, ಜುಕಿನಿ (ನೋಡುವುದಕ್ಕೆ ಸೌತೆಕಾಯಿ ರೀತಿಯ ಆದರೆ ಸೀಗುಂಬಳ ಕಾಯಿ ಜಾತಿಯ ಒಂದು ತರಕಾರಿ), ಈರುಳ್ಳಿ, ದಪ್ಪಮೆಣಸಿನಕಾಯಿ ಇತ್ಯಾದಿಗಳನ್ನು ಉಪಯೋಗಿಸಿ ಪಿಜ್ಜಾ ತಯಾರಿಸುತ್ತಾರೆ. ಸಿರಾಕೂಸಾದಲ್ಲಿ ತಿಂದ ಪಿಜ್ಜಾ ಬಹಳ ರುಚಿಯಾಗಿತ್ತು. ನಿಮ್ಮ ಹೊಟ್ಟೆ ಉರಿಸಲು ಇಗೋ ಇದೊಂದು ಫೋಟೋ:

ನನಗೆ ಇನ್ನೂ ನೆನಪಿದೆ. ಬೆಂಗಳೂರಿನ ಬಾಷ್ ಕಂಪನಿಯಲ್ಲಿ ಕೆಲಸ ಮಾಡುವಾಗ ಒಮ್ಮೆ ನಮ್ಮ ತಂಡ ಕೊಡಗಿಗೆ ಪ್ರವಾಸ ಹೋಗಿದ್ದೆವು. ಅದು ಮಾರ್ಚ್ ಸಮಯ. ಕಾಫಿ ತೋಟದ ಮಧ್ಯದಲ್ಲಿ ಒಂದು ಹೋಂ ಸ್ಟೇ. ಕಾಫಿ ತೋಟದ ತುಂಬೆಲ್ಲ ಹೂವು ಬಿಟ್ಟಿದ್ದವು. ಎಲ್ಲಿ ಓಡಾಡಿದರೂ ಹೂವಿನ ಘಮ ನಮ್ಮನ್ನೆಲ್ಲ ಆವರಿಸಿಬಿಟ್ಟಿತ್ತು. ಮತ್ತೆ ನನಗೆ ಅದೇ ಅನುಭವ ಆಗಿದ್ದು ಸಿಸಿಲಿಯ ಪ್ರವಾಸದಲ್ಲಿ. ಏಪ್ರಿಲ್ ಇಲ್ಲಿ ವಸಂತ ಕಾಲ. ಮೊದಲ ದಿನದ ದೂರ ಪ್ರಯಾಣದ ನಂತರ ರೈಲು ಇಳಿದು ನಮ್ಮ ಉಳಿಯುವ ಅಪಾರ್ಟ್ಮೆಂಟ್ ಕಡೆ ಗೂಗಲ್ ಅಣ್ಣನ ಸಹಾಯದಿಂದ ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಆವರಿಸಿದ ಘಾಢವಾದ ಹೂವಿನ ಪರಿಮಳ. ಕಿತ್ತಳೆ ಮತ್ತು ನಿಂಬೆ ಮರಗಳನ್ನು ಇಲ್ಲಿ ಹೇರಳವಾಗಿ ಅಲಂಕಾರಿಕವಾಗಿ ರಸ್ತೆ ಬದಿಗಳಲ್ಲಿ ಬೆಳೆಯುತ್ತಾರೆ. ಚೈತ್ರ ಮಾಸವಾಗಿದ್ದರಿಂದ ಅದರ ತುಂಬೆಲ್ಲ ಹೂವು ಬಿಟ್ಟು ಸುಂದರ ಪರಿಮಳ ಸೂಸುತ್ತಿದ್ದವು. ಆಮೇಲೆ ನಮ್ಮ ಅಪಾರ್ಟ್ಮೆಂಟ್ ಒಡೆಯ ನಾವು ಬಂದಿದ್ದು ಬಳಸು ದಾರಿ ಎಂದು ಹೇಳಿದರೂ, ನಾವಂತೂ ಅದೇ ದಾರಿಯಲ್ಲಿ ಓಡಾಡಿದೆವು. ಮನಸ್ಸು ಅರಳಲು ಪ್ರಕೃತಿಯ ಪರಿಮಳದ ಮುಂದೆ ಸಾಟಿಯಿಲ್ಲ.

ರೈಲು ಅಥವಾ ಬಸ್ಸು ಹತ್ತಿ ದಿನದ ಪ್ರಯಾಣ ಪ್ರಾರಂಭಿಸಿ ನಗರ ಪ್ರದೇಶವನ್ನು ದಾಟಿದರೆ ಕಣ್ಣು ಹಾಯಿಸುವಷ್ಟು ದೂರಕ್ಕೂ ಕಿತ್ತಳೆ ಅಥವಾ ನಿಂಬೆಯ ತೋಟಗಳು! ಕಾಪುವಿನ ಲೈಟ್ ಹೌಸ್ ಹತ್ತಿ ಸಮುದ್ರದ ವಿರುದ್ಧದ ದಿಕ್ಕಿಗೆ ನೋಡಿದರೆ ತೆಂಗಿನ ತೋಟ ಹೇಗೆ ಕಾಣುತ್ತದೆಯೋ ಹಾಗೆ! ಇದು ಹೊಸದಾಗಿ ಕಂಡಿದ್ದರಿಂದ ನಮಗೆ ಆಶ್ಚರ್ಯ. ಇವರು ಇಷ್ಟು ನಿಂಬೆ ಬೆಳೆದು ಏನು ಮಾಡುತ್ತಾರೆ? ಕಿತ್ತಳೆಯನ್ನು ಲೋಡುಗಟ್ಟಲೆ ಗೂಡ್ಸ್ ರೈಲಿನಲ್ಲಿ ತುಂಬಿ ಕಳಿಸಿದರೂ ಉಳಿಯುವಷ್ಟು ಪ್ರಮಾದಲ್ಲಿ ಬೆಳೆಯುತ್ತಾರೆ. ಇವೆರಡು ಬೆಳೆಗಳು ಇಲ್ಲಿನ ಜನಗಳಿಗೆ ಅನ್ನ ಕೊಡುತ್ತಿದೆ.

ಸಿಸಿಲಿಯ ಪ್ರವಾಸದ ಪ್ರತಿಯೊಂದು ದಿನವೂ ಒಂದಲ್ಲೊಂದು ಸಮಯದಲ್ಲಿ ಕಿತ್ತಳೆ-ನಿಂಬೆ ಹೂವಿನ ಪರಿಮಳವನ್ನು ಅನುಭವಿಸಿದ್ದೇವೆ. ದೇಶ ಸುತ್ತಬೇಕು ಎಂದು ಏಕೆ ಹೇಳುತ್ತಾರೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ: ಈಗ ನಾನು ಕಣ್ಣು ಮುಚ್ಚಿ ಸಿಸಿಲಿಯಲ್ಲಿ ಕಿತ್ತಳೆ-ನಿಂಬೆ ಮರಗಳ ಸಮೀಪ ಸುತ್ತಾಡಿದ ಕ್ಷಣಗಳನ್ನು ನೆನಸಿಕೊಂಡರೆ, ಅದರ ಚಿತ್ರಗಳು ಕಣ್ಣಿನ ಮುಂದೆ ಬರುವುದರ ಜೊತೆಗೆ ಹೂವಿನ ಸುವಾಸನೆಯೂ ಕೂಡ ನಾಸಿಕದ ರೋಮಗಳ ಮೇಲೆ ಒಮ್ಮೆ ಹರಿದಾಡಿದ ಅನುಭವವಾಗುತ್ತದೆ!

ಮುಂದಿನ ಸಂಚಿಕೆಯಲ್ಲಿ ದೇವಾಲಯಗಳ ಕಣಿವೆಯ (Valley of temples) ಸುತ್ತ ಅಲೆದಾಡಿದ ಅನುಭವದೊಂದಿಗೆ ಬರುತ್ತೇನೆ.

( ಮುಂದುವರೆಯುತ್ತದೆ…)