ಕನ್ನಡದ ಈ ವಿಶಿಷ್ಟಬಗೆಯ ಸ್ಪಂದನೆಯ ಬರಹಗಾರ, ಚಿಂತಕ, ಇತಿಹಾಸಕಾರ ಇಲ್ಲದ ನೋವು ಕನ್ನಡದ ಮನಸುಗಳಿಗೆ ನಿಜಕ್ಕೂ ತಡೆದುಕೊಳ್ಳಲಾರದಂತಹ ದುಃಖ. ಇವರ ಜೊತೆ ಎರಡು ದಿನಗಳನ್ನು ಕೊಡಗಿನ ದೇವರಕಾಡುಗಳಲ್ಲಿ ಕಳೆದ ನೆನಪುಗಳು ನನ್ನ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿದೆ. ಅಭಿನವ ರವಿಕುಮಾರ್ ಅವರು ಒಂದು ದಿನ ಫೋನ್ ಮಾಡಿ ರಮೇಶ್ ಶೆಟ್ಟರ್ ಅವರು ಕೊಡಗಿನ ದೇವರ ಕಾಡುಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದಾರೆ, ಒಂದೆರಡು ದಿನ ಅವರಿಗೆ ಕಂಪನಿ ಕೊಡಿ’ ಎಂದರು. ನನಗೆ ಇದನ್ನು ಕೇಳಿ ಆದ ಸಂತೋಷ ಅಷ್ಟಿಷ್ಟಲ್ಲ.
ಇಂದು ನಿಧನಹೊಂದಿದ ಹಿರಿಯ ವಿದ್ವಾಂಸರು, ಸಂಶೋಧಕರಾದ ಪ್ರೊ. ಷ. ಶೆಟ್ಟರ್ ಅವರ ಕುರಿತು ಎಚ್. ಆರ್. ರಮೇಶ್ ಬರೆದ ಲೇಖನ

 

ಷ.ಶೆಟ್ಟರ್ ಕನ್ನಡದ ಹೆಮ್ಮೆ. ಇತಿಹಾಸಕ್ಕೆ ಸಾಹಿತ್ಯದಲ್ಲಿ ಕಾಣಬಹುದಾದ ಸೌಂದರ್ಯಪ್ರಜ್ಞೆ, ಮನುಷ್ಯತ್ವದ ಹುಡುಕಾಟ, ಎಲೆಮರೆಯಲ್ಲಿ ಅವಿತಿರುವ ಹಣ್ಣುಗಳಂತೆ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಸಮುದಾಯಗಳ ಮೇಲೆ ಬೆಳಕ ಚೆಲ್ಲುವಿಕೆ ಮತ್ತು ಭಿನ್ನ ಬಗೆಯ ನಿರೂಪಣಾ ಶೈಲಿಗಳನ್ನು ಕೊಟ್ಟವರು. ಅವರ ಪ್ರತಿ ಬರಹದ ಹಿಂದೆ ಕವಿ ಮನಸ್ಸು, ತತ್ವಜ್ಞಾನಿಯ ನೋಟಗಳನ್ನು ಕಾಣುವುದೇ ಒಂದು ಸೊಗಸು. ವಸಾಹತೋತ್ತರ ಸಂದರ್ಭದಲ್ಲಿ ಅಲಕ್ಷಿತ ಸಮುದಾಯ ಮತ್ತು ಸಂಗತಿಗಳ ಮೇಲೆ ಹೆಚ್ಚಿನ ಚರ್ಚೆಗಳನ್ನು ಕಾಣುತ್ತೇವೆಯೋ ಅಂತಹ ಪ್ರಯತ್ನವನ್ನು ಶೆಟ್ಟರ್ ಅವರು ತಮ್ಮ ಪ್ರತಿ ಬರಹದ ಉದ್ದಕ್ಕೂ ಮಾಡುತ್ತ ಬಂದಿದ್ದಾರೆ.

ಒಂದು ಊರಿನ ಬಗ್ಗೆ ಬರೆಯುವಾಗಲೂ ಅವರು ಅದರ ಐತಿಹಾಸಿಕ, ಪೌರಾಣಿಕ ಮತ್ತು ಜಾನಪದೀಯ ಹಿನ್ನಲೆಯಲ್ಲಿ ತಮ್ಮ ಹೊಸ ನೋಟಗಳ ಮೂಲಕ ತಲಃಸ್ಪರ್ಶಿಯಾಗಿ ಬರೆಯುವುದು ಅವರ ವಿಶಿಷ್ಟ ಶೈಲಿ. ಕನ್ನಡ ಭಾಷೆಯ ಮೇಲಿನ ಅವರ ಬದ್ಧತೆಯಲ್ಲಿ ಅಂತರ್ಗತವಾಗಿ ಧರ್ಮನಿರಪೇಕ್ಷತೆ ಮತ್ತು ಜಾತ್ಯಾತೀತತೆಗಳನ್ನು ನಿಚ್ಚಳವಾಗಿ ಕಾಣಬಹುದು. ಅವರು ಎಲ್ಲೂ ಸೆಂಟಿಮೆಂಟಲ್ಲಾಗಿ ನೋಡದೆ ತಮ್ಮ ಬರಹದ ಉದ್ದಕ್ಕೂ ಕನ್ನಡ ಭಾಷೆಯ ವಿಕಸನವನ್ನು ಕಾಣಬಹುದು. ಜಗತ್ತಿನ ಯಾವ ಚಿಂತಕರಿಗೂ ಕಡಿಮೆ ಇಲ್ಲದಂತೆ ಕನ್ನಡದ ವೈಶಿಷ್ಟ್ಯತೆಗಳನ್ನು ಸಂಸ್ಕೃತಿ-ಸಾಹಿತ್ಯಗಳಲ್ಲಿ ಮಿಳಿತಗೊಳಿಸಿಕೊಂಡು ಚರ್ಚಿಸುತ್ತಾರೆ. ಅಂತಹ ಬರಹಗಾರ ಈಗ ಇನ್ನಿಲ ಎಂದು ನೆನೆದರೆ ಕ್ಷಣ ಮನಸ್ಸಿನೊಳಗೆ ಶೂನ್ಯವು ಆವರಿಸಿಕೊಳ್ಳುತ್ತದೆ.

ಕನ್ನಡದ ಈ ವಿಶಿಷ್ಟಬಗೆಯ ಸ್ಪಂದನೆಯ ಬರಹಗಾರ, ಚಿಂತಕ, ಇತಿಹಾಸಕಾರ ಇಲ್ಲದ ನೋವು ಕನ್ನಡದ ಮನಸುಗಳಿಗೆ ನಿಜಕ್ಕೂ ತಡೆದುಕೊಳ್ಳಲಾರದಂತಹ ದುಃಖ. ಇವರ ಜೊತೆ ಎರಡು ದಿನಗಳನ್ನು ಕೊಡಗಿನ ದೇವರಕಾಡುಗಳಲ್ಲಿ ಕಳೆದ ನೆನಪುಗಳು ನನ್ನ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿದೆ. ಅಭಿನವ ರವಿಕುಮಾರ್ ಅವರು ಒಂದು ದಿನ ಫೋನ್ ಮಾಡಿ ರಮೇಶ್ ಶೆಟ್ಟರ್ ಅವರು ಕೊಡಗಿನ ದೇವರ ಕಾಡುಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದಾರೆ, ಒಂದೆರಡು ದಿನ ಅವರಿಗೆ ಕಂಪನಿ ಕೊಡಿ’ ಎಂದರು. ನನಗೆ ಇದನ್ನು ಕೇಳಿ ಆದ ಸಂತೋಷ ಅಷ್ಟಿಷ್ಟಲ್ಲ. ನನ್ನ ಸ್ನೇಹಿತರ ಮೂಲಕ ಮಡಿಕೇರಿ ಸಮೀಪದ ಮಂಗಳೂರು ರಸ್ತೆಯಲ್ಲಿರುವ ಮದೆನಾಡು ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಿರುವ ದೇವರ ಕಾಡಿನಲ್ಲಿ ಎರಡು ದಿನಗಳ ಕಾಲ ಸುತ್ತಾಡಿದೆವು. ಅಲ್ಲಿತನಕ ಕೊಡಗಿಗೆ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ದೇವರಕಾಡುಗಳನ್ನು ಕೇವಲ ದೂರದಿಂದ ಅಷ್ಟೇ ನೋಡಿದ್ದ ನನಗೆ ಅವರ ಮೂಲಕ ಅವುಳಗ ಒಳಗನ್ನು ನೋಡುವ ಒಂದು ಅಪೂರ್ವ ಅವಕಾಶ ಸಿಕ್ಕಿತು. ಅದಕ್ಕೆ ನಾನು ಶೆಟ್ಟರ್ ಅವರಿಗೆ ಆಭಾರಿ ಯಾವತ್ತಿಗೂ…

ದೇವರ ಕಾಡುಗಳಲ್ಲಿ ಮನುಷ್ಯರ ಓಡಾಟ ತುಂಬಾ ವಿರಳವಾಗಿರುತ್ತದೆ. ಅದರೊಳಗೆ ದಿವ್ಯವಾದಂತಹ ಮೌನ, ಕ್ರಿಮಿಕೀಟ ಮತ್ತಿತರ ಜೀವಚರಗಳ ಲಯಬದ್ಧವಾದ ಸದ್ದು, ಆವರಿಸಿಕೊಂಡಿರುವ ನಿಗೂಢತೆ, ಅನೇಕ ಬಗೆಯ ಸಸ್ಯರಾಶಿ, ಮರ, ಗಿಡ, ಹೂವುಗಳ ನೋಡುವುದೇ ಒಂದು ಅಲೌಕಿಕ ಅನುಭವ. ಅದೊಂದು ನಿಜಕ್ಕೂ ಪುಳಕ. ದೇವರ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ನನಗೆ ಮಲೆಗಳಲ್ಲಿ ಮದುಮಗಳೇ ನೆನಪಾಗುತ್ತಿತ್ತು. ಈ ಅನುಭವವನ್ನು ಅವರ ಜೊತೆ ಹಂಚಿಕೊಂಡಿದ್ದೆ ಕೂಡ. ಅವರು ಇನ್ನೂ ಅನೇಕ ವಿಷಯಗಳನ್ನು ನನ್ನ ಜೊತೆ ಚಿರ್ಚಿಸಿದರು. ಮುಖ್ಯವಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಹಳೆಗನ್ನಡ ಇತ್ತಿತರೆ ವಿಷಯಗಳು. ಸಾವಿನ ಬಗ್ಗೆ ಎರಡು ಘನಕೃತಿಗಳನ್ನು ಜೈನ ಸಂಪ್ರದಾಯ ಮತ್ತು ಆಚರಣೆಗಳ ಹಿನ್ನಲೆಯಲ್ಲಿ ಬರೆದಿರುವ ಶೆಟ್ಟರ್, (ಕನ್ನಡಕ್ಕೆ ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ್ದಾರೆ) ಈಗ ಅವರು ಇಲ್ಲದಿರುವುದನ್ನು ಅವರ ಆ ಎರಡು ಕೃತಿಗಳಲ್ಲಿ ಚಿತ್ರಿಸಿರುವಂತೆ ಸಾವೆಂಬುದು ಪ್ರಕೃತಿಯಲ್ಲಿನ ಸಹಜ ಪ್ರಕ್ರಿಯೆ. ಮತ್ತು ಅದೊಂದು ಬದುಕಿನ ಸೃಷ್ಟಿಶೀಲತೆಯ ಸೊಬಗು.

ಸಾವೆಂಬುದು ಆಸೆಗಳು ತುಂಬಿರುವ ಮನುಷ್ಯಲೋಕದಲ್ಲಿ ವಿಚಿತ್ರ ತಲ್ಲಣಗಳನ್ನು ಉಂಟುಮಾಡುತ್ತದೆ, ಆದರೆ ಅದೊಂದು ಒಪ್ಪಿಕೊಳ್ಳಲೇ ಬೇಕಾಗಿರುವ ವಾಸ್ತವ ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳಬೇಕಷ್ಟೆ. ಅವರ ಚಿಂತನೆಗಳು ಮುಂಚಿನ ಜನಾಂಗಕ್ಕೆ ಯಾವತ್ತಿಗೂ ಸ್ಫೂರ್ತಿಯ ಚಿಲುಮೆಯಂತಿರುತ್ತವೆ. ಕನ್ನಡ ಭಾಷೆ ಇರುವ ತನಕ ಅವರ ಬರಹಗಳು ಕನ್ನಡದ ಮಣ್ಣಿನಲ್ಲಿ ಸ್ಥಾಯಿಯಾಗಿ ಉಳಿಯುತ್ತವೆ. ಕನ್ನಡತನವನ್ನು ಜಾಗತಿಕ ಮಟ್ಟದಲ್ಲಿ ಚಿರ್ಚಿಸುಂತೆ ಮಾಡಿದ ಇವರು ಕನ್ನಡ ಭಾಷೆಯ ನಿಜ ಅಭಿಮಾನಿ.

ಕನ್ನಡದ ಆಳ, ವಿಸ್ತಾರ, ಹರಹುಗಳನ್ನು ಅರಿಯಲು ಅವರು ಕ್ರಮಿಸಿದ ಹಾದಿ ಸುಗಮವಾದುದ್ದೇನಾಗಿರಲಿಲ್ಲ, ಈಗ ಅವರು ಆ ಹಾದಿಯನ್ನು ಸುಗಮಮಾಡಿ ಕೊಟ್ಟು ಹೋಗಿದ್ದಾರೆ. ನಾವು ಆ ಹಾದಿಯಲ್ಲಿ ಕ್ರಮಿಸಿ, ಅವರು ಇದ್ದಿದ್ದರೆ ಇನ್ನೂ ಏನೇನನ್ನೂ ಶೋಧಿಸುತ್ತಿದ್ದರೋ ಅಥವಾ ನಾವು ಇನ್ನು ಹೊಸ ಸಾಧ್ಯತೆಗಳನ್ನು ಕಾಣಬೇಕೋ ಅದನ್ನು ಮಾಡಬೇಕಿದೆ.

ಶೆಟ್ಟರ್ ಅವರಿಗೆ ಒಂದು ಪ್ರೀತಿಯ ವಿದಾಯ. ಭಾಷಾ ಪರಂಪರೆಯೆಂಬ ಹೆಮ್ಮರದಲ್ಲಿ ಕನ್ನಡದ ಬೇರುಗಳನ್ನು ಹುಡುಕಿ ಜಗತ್ತಿಗೆ ಕನ್ನಡದ ಹೂವುಗಳನ್ನು ಚೆಲ್ಲಿದ ಶೆಟ್ಟರ್ ಅವರ ಚೇತನ ಯಾವತ್ತಿಗೂ ಸ್ಫೂರ್ತಿಯ ಚಿಲುಮೆ.