ಪುಟಾಣಿ ಹೆಜ್ಜೆ ಕಳೆದುಹೋದದ್ದೆಲ್ಲಿ?

ಮಗಳು ಮಗ್ಗುಲಾಗುವಾಗ
ಬರಸೆಳೆದು ಅಪ್ಪಿಕೊಳ್ಳುತ್ತೇನೆ
ನಿದ್ದೆಯಲ್ಲೇ ‘ಉಮ್ಮಾ’ ಎನ್ನುತ್ತಾಳೆ
ನಸು ನಗುತ್ತೇನೆ, ಮತ್ತೆ ಬೆಚ್ಚುತ್ತೇನೆ

ಹೀಗೊಂದು ನನ್ನ ಪುಟಾಣಿ ಹೆಜ್ಜೆ
ಕಳೆದುಹೋದದ್ದೆಲ್ಲಿ?
ಜಾತ್ರೆಯ ಜನಜಂಗುಳಿಯಲ್ಲಾ?
ಊರ ಉರೂಸಿನ ಸಂತೆಯಲ್ಲಾ?
ಅಥವಾ
ಅಲ್ಲಿಗೆಲ್ಲಾ ‘ಹೆಂಗಸು’ ಹೋಗಬಾರದು
ಎಂಬ ನಿಷೇಧಾಜ್ಞೆಯಲ್ಲಾ?

ಕೆಂಡದಲ್ಲಿ ಸುಟ್ಟು ಸಿಪ್ಪೆ ಸುಲಿದು
ಅರ್ಧ ತಿಂದು
ಮತ್ತರ್ಧ ನಾಳೆಗೆಂದು ತೆಗೆದಿಟ್ಟ
ಹುಣಸೆ ಬೀಜವನ್ನು
ಈಗೆಲ್ಲಿ ಹುಡುಕಲಿ?

ಮರಿ ಹಾಕದ ನವಿಲುಗರಿ
ಗುಡ್ಡವಿಳಿಯದ ಭೂತ
ಮತ್ತೆ ಮತ್ತೆ ದಾರಿ ತಪ್ಪುವ ಗಲಿವರ್
ಜೋರು ಮಳೆಗೆ ಜರಿದು ಬೀಳದ
ನಮ್ಮ ಸರ್ಕಾರಿ ಶಾಲೆ
ಎಷ್ಟು ನಿರ್ವಾಜ್ಯ ದುಃಖಗಳಿದ್ದವು ಬದುಕಲಿ!

ವರ್ಷಕ್ಕೊಮ್ಮೆ ಮಾತ್ರ ಕಾಣಸಿಗುತ್ತಿದ್ದ ಅಗಾಧ ಕಡಲು
ತೀರದಲ್ಲಿ ಗೀಚುತ್ತಿದ್ದ ‘ಯಾ ಅಲ್ಲಾಹ್’, ‘ಜೈ ಶ್ರೀ ರಾಂ’
ಅಯೋಧ್ಯೆ, ಬಾಬರಿಗಳಿಗೆಲ್ಲಾ
ನಡುಮನೆಯ ಸೋಫಾದಲ್ಲಿ
ವೀರಾಜಮಾನವಾಗುವ ಹಕ್ಕೇ ಇರಲಿಲ್ಲ

ಇಷ್ಟೇ ಇದ್ದ ಬದುಕಲಿ
ಚಹಾ ಕಪ್ಪಿನ‌ ಬಿರುಗಾಳಿ ಎದ್ದದ್ದಾದರೂ ಯಾವಾಗ?
ಹದಿನೈದು ತುಂಬಿದಾಗಲೋ
‘ಅವಳು ಮುಟ್ಟಾದಳು’ ಎಂದು ಜಗತ್ತು ಘೋಷಿಸಿದಾಗಲೋ
ಅಥವಾ
ನಾವು-ಅವರೆಂಬ ಗೋಡೆ ಎದ್ದಾಗಲೋ?